Pages

19 April 2013

ನಾನೂ ನೀವೂ ನಟಶಿರೋಮಣಿಗಳು ಎಂಬ ತಥ್ಯ ನಿಮಗೆ ಗೊತ್ತೇ?

‘ಇಡೀ ಜಗತ್ತು ಒಂದು ರಂಗಭೂಮಿ, ಇಲ್ಲಿ ಎಲ್ಲ ಸ್ತ್ರೀಪುರುಷರು ಕೇವಲ ನಟರು, ಅವರಿಗೆ ಅವರದೇ ಆದ ಪ್ರವೇಶಗಳೂ ನಿಷ್ಕ್ರಮಣಗಳೂ ಇವೆ, ಒಬ್ಬ ವ್ಯಕ್ತಿ ರಂಗಭೂಮಿಯ ಮೇಲಿರುವಾಗ ಅನೇಕ ಪಾತ್ರಗಳನ್ನು ಅಭಿನಯಿಸುತ್ತಾನೆ----’ ಇಂತು ಷೇಕ್ಸ್ಪಿಯರ್ ಏನನ್ನು ಆಧರಿಸಿ ಹೇಳಿದನೋ ನನಗೆ ತಿಳಿಯದು (ಏಸ್ ಯು ಲೈಕ್ ಇಟ್ - ಅಂಕ ೨, ದೃಶ್ಯ ೭). ಈ ಉಕ್ತಿಯಲ್ಲಿ ಆತ ಪ್ರಯೋಗಿಸಿರುವ ‘ಕೇವಲ’ ಅನ್ನುವ ಪದಕ್ಕೆ ಬದಲಾಗಿ ‘ಸ್ವರಚಿತ ನಾಟಕದ’ ಎಂಬ ಪದಪುಂಜ ಪ್ರಯೋಗಿಸುವುದು ಯುಕ್ತ ಅನ್ನುವುದು ನನ್ನ ಅಂಬೋಣ. ಏಕೆ? ಮುಂದೆ ಓದಿ, ನೀವೂ ನನ್ನ ಅಂಬೋಣವನ್ನು ಒಪ್ಪುತ್ತೀರಿ. ಓದಿದ ಬಳಿಕ ನಿಮ್ಮ ಪೈಕಿ ಬಹುಮಂದಿ ‘ಇದರಲ್ಲೇನು ವಿಶೇಷ? ಎಲ್ಲರೂ ಮಾಡುವುದು ಇದನ್ನೇ. ಇದು ಪ್ರಸಾಮಾನ್ಯ (ನಾರ್ಮಲ್)’ ಅನ್ನಬಹುದು. ಇಂತಿರುವುದನ್ನು ಸಮರ್ಥಿಸಿಕೊಳ್ಳಲು ತರ್ಕಸಮ್ಮತವಾದ ಅಸಂಖ್ಯ ‘ನಿಜವಾದ’ ಕಾರಣಗಳನ್ನು ಕೊಡಲೂಬಹುದು. ಆದರೂ ನನ್ನ ಅಂಬೋಣವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಈ ಮುಂದೆ ಹೇಳಿರುವುದು ನಿಮ್ಮಗೆ ಅನ್ವಯಿಸುತ್ತದೆಯೇ ಎಂಬುದನ್ನು ಅಂತಃವೀಕ್ಷಣೆ ಮಾಡಿಕೊಂಡು ನೀವೇ ತೀರ್ಮಾನಿಸಿ. ಅನ್ವಯಿಸುತ್ತದೆ ಎಂದಾದರೆ ನೀವೂ ನಟಶಿರೋಮಣಿಗಳು. ಅನ್ವಯಿಸುವುದಿಲ್ಲ ಎಂದಾದರೆ ನೀವು ಪ್ರಸಾಮಾನ್ಯರಲ್ಲ, ಅಪಸಾಮಾನ್ಯರು ಅಥವ ಅಸಾಮಾನ್ಯರು! (ನೋಡಿ: ಪ್ರಸಾಮಾನ್ಯ ಜೀವನ (ನಾರ್ಮಲ್ ಲೈಫ್) – ಒಂದು ಕಾಲ್ಪನಿಕ ಕಥೆ (ಮಿತ್) ಮತ್ತು ನನ್ನ ಜೀವನ ದರ್ಶನ – ೧೦)

೧. ನಿಮ್ಮ ಪ್ರೀತಿಪಾತ್ರರಿಗೆ (ತಂದೆ/ತಾಯಿ/ಗಂಡ/ಹೆಂಡತಿ/ಮಗ/ಮಗಳು ----) ಬೇಸರವಾದೀತು ಎಂದು ನಿಮ್ಮ ನಿಜವಾದ ಭಾವನೆ/ಅಭಿಪ್ರಾಯಗಳನ್ನು ಮನಸ್ಸಿನಲ್ಲಿಯೇ ಹುದುಗಿಸಿಟ್ಟು ಅವರಿಗೆ ಇಷ್ಟವಾಗುವಂತೆ ವರ್ತಿಸುವುದು.

೨. ನಿಮ್ಮ ಪ್ರೀತಿಪಾತ್ರರ ಮನ್ನಣೆ/ಮೆಚ್ಚುಗೆ ಗಳಿಸಲೋಸುಗ ನಿಮ್ಮ ನಿಜವಾದ ಭಾವನೆ/ಅಭಿಪ್ರಾಯಗಳನ್ನು ಮನಸ್ಸಿನಲ್ಲಿಯೇ ಹುದುಗಿಸಿಟ್ಟು ಅವರಿಗೆ ಇಷ್ಟವಾಗುವಂತೆ ವರ್ತಿಸುವುದು.

೩. ನಿಮ್ಮ ಮೇಲಧಿಕಾರಿಗಳಿಗೆ/ಸಹೋದ್ಯೋಗಿಗಳಿಗೆ (ವಿದ್ಯಾರ್ಥಿಗಳಾಗಿದ್ದರೆ ಶಿಕ್ಷಕರಿಗೆ/ಸಹಪಾಠಿಗಳಿಗೆ) ಬೇಸರವಾದೀತು ಎಂದು ನಿಮ್ಮ ನಿಜವಾದ ಭಾವನೆ/ಅಭಿಪ್ರಾಯಗಳನ್ನು ಮನಸ್ಸಿನಲ್ಲಿಯೇ ಹುದುಗಿಸಿಟ್ಟು ಅವರಿಗೆ ಇಷ್ಟವಾಗುವಂತೆ ವರ್ತಿಸುವುದು.

೪. ನಿಮ್ಮ ಮೇಲಧಿಕಾರಿಗಳ/ಸಹೋದ್ಯೋಗಿಗಳ (ವಿದ್ಯಾರ್ಥಿಗಳಾಗಿದ್ದರೆ ಶಿಕ್ಷಕರ/ಸಹಪಾಠಿಗಳ)  ಮನ್ನಣೆ/ಮೆಚ್ಚುಗೆ ಗಳಿಸಲೋಸುಗ ನಿಮ್ಮ ನಿಜವಾದ ಭಾವನೆ/ಅಭಿಪ್ರಾಯಗಳನ್ನು ಮನಸ್ಸಿನಲ್ಲಿಯೇ ಹುದುಗಿಸಿಟ್ಟು ಅವರಿಗೆ ಇಷ್ಟವಾಗುವಂತೆ ವರ್ತಿಸುವುದು.

೫. ‘ಎಲ್ಲರಂತೆ’ ಅಥವ ‘ಹತ್ತು ಜನರಂತೆ’ ನಾವಿರಬೇಕು ಎಂಬ ಬಯಕೆಯಿಂದ ನಿಮಗಿಷ್ಟವಿಲ್ಲದಿದ್ದರೂ ‘ಎಲ್ಲರೊಡನೆ’ ಇರುವಾಗ ಅಥವ ಅವರ ಮನ್ನಣೆ ಪಡೆಯಲೋಸುಗ ಆ ‘ಎಲ್ಲರಂತೆ’ ವರ್ತಿಸುವುದು.

೬. ‘ಆವಶ್ಯಕತೆ’ಗಳನ್ನು ಪೂರೈಸಿಕೊಳ್ಳಲೋಸುಗ (ನೋಡಿ: ಆವಶ್ಯಕತೆಗಳು) ಅಥವ‘ಗುರಿ ಸಾಧನೆ’ಗೋಸ್ಕರ ತಕ್ಕುದಾದ ರೀತಿಯಲ್ಲಿ ಇಷ್ಟವಿಲ್ಲದಿದ್ದರೂ ವರ್ತಿಸುವುದು.

ಈ ಎಲ್ಲವಕ್ಕೂ ಅನೇಕ ಯುಕ್ತ ಉದಾಹರಣೆಗಳನ್ನು ನಿಮ್ಮ ಜೀವನದಿಂದ ಆಯ್ದು ಉಲ್ಲೇಖಿಸುವ ಸಾಮರ್ಥ್ಯ ನಿಮಗೇ ಇದೆ ಎಂಬ ನಂಬಿಕೆ ನನ್ನದು. ಎಂದೇ, ಕಾಲ್ಪನಿಕ ಉದಾಹರಣೆಗಳನ್ನು ಕೊಡುವ ತೊಂದರೆ ನಾನು ತೆಗೆದುಕೊಂಡಿಲ್ಲ.

ಈಗ ನೀವೇ ಹೇಳಿ - ನಾವು ನಾಟಕವಾಡದೆಯೇ ಇದ್ದ ದಿನ ಇದೆಯೇ? ಅಂದ ಮೇಲೆ ನಾವು ಪ್ರಾಮಾಣಿಕ ಜೀವನ ನಡೆಸುತ್ತಿದ್ದೇವೆಯೇ? ಇಲ್ಲ ಎಂದಾದರೆ, ಕರ್ಮ ಬಂಧನದಿಂದ ಕಳಚಿಕೊಳ್ಳುವುದೆಂತು? ಷರತ್ತುರಹಿತ ಪ್ರೀತಿಯುಕ್ತ ಸಂಬಂಧಗಳನ್ನು (ಗಂಡ-ಹೆಂಡತಿ, ತಂದೆ/ತಾಯಿ-ಮಕ್ಕಳು -----) ಸ್ಥಾಪಿಸಿಕೊಳ್ಳುವುದರಲ್ಲಿ ನಾವು ಏಕೆ ಅಯಶಸ್ವಿಗಳಾಗಿದ್ದೇವೆ ಅಥವ ನಮ್ಮ ಎಲ್ಲ ಸಂಬಂಧಗಳು ನೈಜತೆಯ ಮುಖವಾಡ ಧರಿಸಿರುವ ಕೃತಕ ಸಂಬಂಧಗಳಾಗಿವೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲವೇ? ಇಲ್ಲ ಎಂದಾದರೆ ಗುಂಡಿಗೆ ಗಟ್ಟಿ ಮಾಡಿಕೊಂಡು ಕೇಳಿ - ನಾವು ನಡೆಸುತ್ತಿರುವುದು ಅರ್ಥವಿಹೀನ ಕೃತಕ ಜೀವನ. ನಾನೂ ನೀವು ಆಷಾಢಭೂತಿಗಳು, ಢೋಂಗಿಗಳು. ಕೃತಕ ಜೀವನವನ್ನೇ ನೈಜ ಜೀವನ ಎಂಬ ಭ್ರಮೆಯಿಂದ ಬದುಕುತ್ತಿರುವವರು.

ಇದು ನಿಜವಾಗಿದ್ದರೆ ನೈಜಜೀವನ ಯಾವುದು ಮತ್ತು ಅದನ್ನು ಸಾಗಿಸುವುದೆಂತು? - ಈ ಪ್ರಶ್ನೆಗೆ ಆತ್ಮವಿಶ್ವಾಸದಿಂದ ‘ಗುರು’ ಸ್ಥಾನದಲ್ಲಿ ನಿಂತು ಉತ್ತರ ನೀಡುವ ಸಾಮರ್ಥ್ಯ ಈಗ ನನಗಿಲ್ಲವಾದ್ದರಿಂದ ವಿರಮಿಸುತ್ತೇನೆ. (ಓದಿ ತಿಳಿದ ಉತ್ತರ ನೀಡುವುದು ನನ್ನ ಸೈದ್ಧಾಂತಿಕ ಜ್ಞಾನದ ಪ್ರದರ್ಶನವಾದೀತು. ನನಗಾಗಲೀ ನಿಮಗಾಗಲೀ ಅದರಿಂದ ವಿಶೇಷ ಲಾಭವೇನೂ ಆಗುವುದಿಲ್ಲ)

1 comment:

ಜಿ.ಎನ್.ಅಶೋಕವರ್ಧನ said...

ಬದುಕು ಮಾತ್ರ ಸತ್ಯ, ಜೀವನ ಎನ್ನುವುದೇ ನಾಟಕ. ಕೃತಕ, ಸಾಮಾನ್ಯ ಇತ್ಯಾದಿ `ಅಭಿನಯ' ಸಾಮರ್ಥ್ಯದ ವಿಮರ್ಶೆಗಳು ಮಾತ್ರ. ಇಲ್ಲಿ ಪ್ರವೇಶ, ನಿಷ್ಕ್ರಮಣ ಮಾತ್ರ ಒಂದೇ ಬಾರಿ.