Pages

12 May 2013

ಕಾಡುಹರಟೆ (ಗಾಸಿಪ್)

ಇಬ್ಬರು ಅಥವ ಹೆಚ್ಚು ವ್ಯಕ್ತಿಗಳು ಕಾಲಕಳೆಯಲೋಸುಗ ಕಾಡುಹರಟೆ ಅಥವ ಗೊಡ್ಡುಹರಟೆಯಲ್ಲಿ ನಿರತರಾಗುವುದು ನಿರುಪದ್ರವಿ ಎಂದು ತಿಳಿದಿರುವ ಹರಟಾಳಿ (ಗಾಸಿಪರ್ಸ್)ಗಳಿಗೆ ಒಂದು ಹಿತನುಡಿ: ನಿಮ್ಮ ಹಿತದೃಷ್ಟಿಯಿಂದ ಕಾಡುಹರಟೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಾಗ ಬಲು ಜಾಗರೂಕರಾಗಿರಿ. ಏಕೆ? ಮುಂದೆ ಓದಿ.

ಕಾಡುಹರಟೆಯ ವಿಷಯ ಪ್ರಸಾಮಾನ್ಯವಾಗಿ ಯಾವುದು ಆಗಿರುತ್ತದೆ ಎಂಬುದರ ಕುರಿತು ತುಸು ಆಲೋಚಿಸಿ -  ಅದು ಆ ಸ್ಥಳದಲ್ಲಿ ಇಲ್ಲದಿರುವವರ ಖಾಸಗಿ ಬದುಕಿಗೆ ಸಂಬಂಧಿಸಿರುವುದು ಸರಿಯಷ್ಟೆ?

ಆ ಕುರಿತು ಏನನ್ನು ಪ್ರಸಾರ ಮಾಡಲಾಗುತ್ತಿದೆ ಎಂಬುದರ ಕುರಿತೂ ತುಸು ಆಲೋಚಿಸಿ - ತಥ್ಯಗಳಿಗೆ ನಾವು ಅಥವ ಬೇರೆ ಯಾರೋ ನೀಡಿದ ಋಣಾತ್ಮಕ ಅರ್ಥಗಳೋ ಮೂಲ ಆಕರ ಯಾವುದೆಂದು ತಿಳಿಯದಿರುವ ಗಾಳಿಮಾತುಗಳೋ ಎಂಬುದೂ ನಿಜವಷ್ಟೆ?.

ತತ್ಪರಿಣಾಮವಾಗಿ, ಯಾರ ಕುರಿತು ಹರಟಲಾಗುತ್ತಿದೆಯೋ ಅವರ

  • ಹೆಸರು (ರೆಪ್ಯುಟೇಷನ್) ಕೆಡುತ್ತದೆ

  • ತೇಜೋವಧೆ ಆಗುತ್ತದೆ

  • ವಿಸ್ವಾಸಾರ್ಹತೆಯ ಕುರಿತು ಸಂಶಯಗಳನ್ನು ಹುಟ್ಟುಹಾಕುತ್ತದೆ

  • ಮತ್ತು ನಿಮ್ಮ ನಡುವಣ ಬಾಂಧವ್ಯವನ್ನು ಹಾಳುಮಾಡುತ್ತದೆ

  • ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುತ್ತದೆ (ಇದರಿಂದಾಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡದ್ದೂ ಉಂಟು)

  • ಕುರಿತು ಇತರರಿಗೆ ಇರುವ ಗೌರವವನ್ನು ಕಮ್ಮಿ ಮಾಡುತ್ತದೆ

  • ಖಾಸಗಿ ಜೀವನದ ಗೌಪ್ಯವಾಗಿರಬೇಕಾಗಿದ್ದ ಅಂಶಗಳನ್ನೂ ಬಹಿರಂಗಪಡಿಸುತ್ತದೆ

ಯಾರ ಕುರಿತು ಹರಟಾಳಿಗಳು ಹರಟುತ್ತಿದ್ದಾರೋ ಅವರಿಗಿಂತ ತಾವು ಉತ್ತಮರು ಎಂಬ ಅಭಿಪ್ರಾಯವನ್ನು ಕೇಳುಗರಲ್ಲಿ ಮೂಡಿಸಿವುದು ಅವರ ಗುಪ್ತ ಧ್ಯೇಯವಾಗಿದ್ದರೂ ಅದು ಈಡೇರುವುದಿಲ್ಲ ಎಂಬ ಅರಿವೂ ಕಾಡುಹರಟೆ ತಮಗೇ ಉಂಟುಮಾಡುತ್ತಿರುವ ಹಾನಿಯ ಅರಿವೂ ಅವರಿಗೆ ಇರುವುದಿಲ್ಲ. ಕಾಡುಹರಟೆಯಲ್ಲಿ ತೊಡಗಿಸಿಕೊಳ್ಳುವ ಹರಟಾಳಿಗಳಿಗೆ ಆಗುವ ಹಾನಿ ಏನು?

  • ಗೌಪ್ಯತೆಯನ್ನು ಕಾಯ್ದುಕೊಳ್ಳದಿರುವುದರಿಂದ ಯಾರೂ ಅವರನ್ನು ವಿಶ್ವಾಸಾರ್ಹ ಎಂದು ಪರಿಗಣಿಸುವುದಿಲ್ಲ.

  • ಅವರು ಮಿತ್ರರನ್ನು ಕಳೆದುಕೊಳ್ಳುತ್ತಾರೆ

  • ಅವರನ್ನು ಒಂಟಿತನ ಕಾಡತೊಡುಗುತ್ತದೆ

  • ಅವರನ್ನು ಪ್ರಾಮಾಣಿಕರು ಎಂದು ಇತರರು ಪರಿಗಣಿಸುವ ಸಾಧ್ಯತೆ ಕ್ಷೀಣಿಸುತ್ತದೆ.

  • ಇತರರ ಮನೋವೇದನೆಗೆ ಕಾರಣರಾಗುವುದರಿಂದ ಎಲ್ಲರ ಅವಕೃಪೆಗೆ ಪಾತ್ರರಾಗುತ್ತಾರೆ. (ಮಾಡಿದ್ದುಣ್ಣೋ ಮಹರಾಯ ನಿಯಮಗಳ ಪ್ರಕಾರ ಅವರಿಗೆ ಒಳಿತಾಗಲು ಸಾಧ್ಯವಿಲ್ಲ)

ಅಂದಮಾತ್ರಕ್ಕೆ ಕಾಡುಹರಟೆಯಲ್ಲಿ ತೊಡಗಿಸಿಕೊಳ್ಳುವುದೇ ಅಪರಾಧ ಅಥವ ಪಾಪಕಾರ್ಯ ಎಂದು ಅರ್ಥೈಸಕೂಡದು. ಧನಾತ್ಮಕ ಅಭಿಪ್ರಾಯಗಳನ್ನು ಕಾಡುಹರಟೆಯ ಮುಖೇನ ಇತರರಿಗೆ ತಲುಪಿಸುವುದರಿಂದ ಒಳಿತೇ ಆಗುತ್ತದೆ. ತಮಗೆ ತಿಳಿದಿರುವ ತಥ್ಯಗಳನ್ನು ಮಾತ್ರ (ಅದಕ್ಕೆ ತಾವು ನೀಡುವ ಅರ್ಥಗಳನ್ನಲ್ಲ) ಕಾಡುಹರಟೆಯ ಮುಖೇನ ಇತರರೊಂದಿಗೆ ಹಂಚಿಕೊಳ್ಳುವುದೂ ತಪ್ಪಲ್ಲ.

ನೆನಪಿಡಿ - ಕಾಡುಹರಟೆಯಲ್ಲಿ ನೀವು ಹರಟುತ್ತಿರುವ ವಿಷಯದ ಸ್ವರೂಪ ನಿಮ್ಮ ಚಾರಿತ್ರ್ಯವನ್ನು ಬಿಂಬಿಸುತ್ತದೆ

2 comments:

ಜಿ.ಎನ್.ಅಶೋಕವರ್ಧನ said...

ಕಾಡುಹರಟೆ ಬಿಡಿ, ಕಾಡಿನ ಬಗ್ಗೆ ಹರಟೆ (ಭಕ್ಷಣೆ ಮಾಡುವವರ ವಿರುದ್ಧ) ಹೆಚ್ಚು ಮಾಡಿ :-)
ಮುಖಪುಸ್ತಕದಲ್ಲಿ, ಹಲವು ಟೀವೀ ಧಾರಾವಾಹಿಗಳಲ್ಲಿ ಬಹುತೇಕ ನಡೆಯುವುದು ಕಾಡುಹರಟೆಯೇ; ಗಂಭೀರವಾದದ್ದು ಏನಿದ್ದರೂ ಬೋರು - ಯಾಕೆ ಹೀಗೆ?

raoavg said...

'ಧರ್ಮೋ ರಕ್ಷತಿ----' ಎಂಬ ಉವಾಚ ಗೊತ್ತಿದೆಯಲ್ಲವೇ? ಅದೇ ರೀತಿ 'ನಿಸರ್ಗೋ ರಕ್ಷತಿ---' ಅನ್ನಬಹುದಲ್ಲವೇ? ನಿಸರ್ಗದ ಅವಿಭಾಜ್ಯ ಘಟಕವಾದ ಕಾಡನ್ನು ಭಕ್ಷಣೆ ಮಾಡುವವರನ್ನು (ಅದನ್ನು ನೋಡಿಯೂ ಸುಮ್ಮನೆ ಇರುವವರ ಸಹಿತ) ನಿಸರ್ಗವೇ ಭಕ್ಷಿಸುತ್ತದೆ ಎಂಬ ನಂಬಿಕೆ ನನ್ನದು. ಅಂದ ಹಾಗೆ ಕಾಡಿನ ಮಹತ್ವದ ಕುರಿತು ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಿಂದ ಮಾಡಿದ್ದೇನೆ. ಭಾಗವಹಿಸಿದವರು 'ಕಾರ್ಯಕ್ರಮ ಚೆನ್ನಾಗಿತ್ತು', 'ತುಂಬಾ ವಿಷಯ ತಿಳಿಯಿತು' --- ಅಂದರೇ ವಿನಾ ಬೇರೇನೂ ಮಾಡಲಿಲ್ಲ. ಮುಂದೆ ಅವರೂ 'ಭಕ್ಷಣೆ' ಮಾಡುವವರ ಪೈಕಿ ಒಬ್ಬರಾಗಿರದೇ ಇದ್ದರೆ ನಾನು ಸಂತೋಷಿಸುತ್ತೇನೆ.