Pages

Showing posts with label ನೆನಪಿನ ದೋಣಿಯಲಿ. Show all posts
Showing posts with label ನೆನಪಿನ ದೋಣಿಯಲಿ. Show all posts

14 June 2012

ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೫

ಈ ಕೊನೆಯ ಕಂತಿನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ನೆನಪುಗಳು ವಿವಿಧ ಸ್ತರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿದ್ದಾಗ ಅಥವ ವಿಶ್ವವಿದ್ಯಾನಿಲಯದ ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯ ಮೇಲುಸ್ತುವಾರಿ ಮಾಡುತ್ತಿದ್ದಾಗಿನವು. ‘ಇಂಥ ಶಿಕ್ಷಕರೂ ಇರುತ್ತಾರೆಯೇ’ ಎಂದು ಅಚ್ಚರಿ ಮೂಡಿಸುವಂಥವು.

೧. ವಿಶ್ವವಿದ್ಯಾನಿಲಯದ ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯ ಮೇಲುಸ್ತುವಾರಿ ಕಾರ್ಯನಿರ್ವಹಿಸುತ್ತಿದ್ದ ಒಂದು ಸಂದರ್ಭದಲ್ಲಿ ನಡೆದದ್ದು ಇದು. ನಿವೃತ್ತಿಯ ಅಂಚಿನಲ್ಲಿ ಇದ್ದ ಬಲು ಹಿರಿಯ ಪ್ರಾಧ್ಯಪಕರೊಬ್ಬರು ಅಸಹಜ ಅನ್ನಿಸುವಷ್ಟು ಪದೇಪದೇ ಇತರ ಮೌಲ್ಯಮಾಪಕರ ಬಳಿ ಹೋಗಿ ಮಾತನಾಡುತ್ತಿದ್ದರು.

ರಹಸ್ಯವಾಗಿ ವಿಚಾರಿಸಿದಾಗ ತಿಳಿದದ್ದು - ಶ್ರೀಯುತರು ತಮ್ಮ ಬಳಿ ಇದ್ದ ಪುಟ್ಟ ಡೈರಿಯಲ್ಲಿ ಕೆಲವು ರಿಜಿಸ್ಟರ್ ನಂಬರುಗಳನ್ನು ದಾಖಲಿಸಿ ಇಟ್ಟುಕೊಂಡಿದ್ದರು. ಆ ರಿಜಿಸ್ಟರ್ ನಂಬರಿನ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು. ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದಾಗ ಆ ಅಭ್ಯರ್ಥಿ ತಮ್ಮ ನಿಕಟ ಸಂಬಂಧಿ ಎಂದೋ ತಮ್ಮ ಆಪ್ತರೊಬ್ಬರ ಕುಟುಂಬದವರೆಂದೋ ಹೇಳಿ ತುಸು ಅಧಿಕ ಅಂಕ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರಲ್ಲದೆ ತಮ್ಮ ಮನವಿಯಂತೆ ಅಧಿಕ ಅಂಕ ನೀಡಿರುವುದನ್ನು ಖಾತರಿ ಪಡಿಸಿಕೊಳ್ಳುತ್ತಿದ್ದರು. ಹಣ ಅಥವ ಬೇರೆ ಆಮಿಷದ ವ್ಯವಹಾರ ಇರಲಿಲ್ಲ.

ಈ ಆಕ್ಷೇಪಾರ್ಹ, ಶಿಕ್ಷಾರ್ಹ ವರ್ತನೆಯನ್ನು ಪರೀಕ್ಷಾಂಗದ ಕುಲಸಚಿವರಿಗೆ ವರದಿ ಮಾಡಿ ಶ್ರೀಯುತರಿಗೆ ಶಿಕ್ಷೆ ಕೊಡಿಸುವುದು ಬಲು ಸುಲಭದ ಕೆಲಸವಾಗಿತ್ತಾದರೂ ಅವರ ವಯಸ್ಸು, ಸೇವಾಹಿರಿತನ, ಉತ್ತಮ ಶಿಕ್ಷಕರು ಎಂದು ಗಳಿಸಿದ್ದ ಹೆಸರನ್ನು ನಿವೃತ್ತಿಯ ಅಂಚಿನಲ್ಲಿದ್ದಾಗ ಕಳೆದುಕೊಳ್ಳುತ್ತಾರಲ್ಲ ಎಂಬ ತಥ್ಯ ಮುಂತಾದವನ್ನು ಪರಿಗಣಿಸಿದಾಗ ವರದಿ ನೀಡಲು ಮನಸ್ಸೊಪ್ಪಲಿಲ್ಲ. ಕುಲಸಚಿವರೊಂದಿಗೆ ಅನೌಪಚಾರಿಕವಾಗಿ ಈ ಕುರಿತು ಚರ್ಚಿಸಿದಾಗ ನಾನೇ ಅವರಿಗೆ ಮೌಖಿಕವಾಗಿ ಎಚ್ಚರಿಕೆ ನೀಡುವಂತೆಯೂ ಅದನ್ನವರು ನಿರ್ಲಕ್ಷಿಸಿದರೆ ಲಿಖಿತ ವರದಿ ನೀಡುವಂತೆಯೂ ಸೂಚಿಸಿದರು. ವಯಸ್ಸು, ಸೇವಾಹಿರಿತನ ಈ ಎರಡರಲ್ಲೂ ನನಗಿಂತ ಅನೇಕಪಟ್ಟು ದೊಡ್ಡವರಿಗೆ ಮೌಖಿಕ ಎಚ್ಚರಿಕೆ ನೀಡಲೂ ಮುಜುಗರವಾದ್ದರಿಂದ ಅವರ ಆಪ್ತಮಿತ್ರರೊಬ್ಬರ ಮೂಲಕ ಸಂದೇಶ ರವಾನಿಸಿದೆ. ತತ್ಪರಿಣಾಮವಾಗಿ ಅವರ ಆಕ್ಷೇಪಾರ್ಹ ವರ್ತನೆ ಮಾಯವಾಯಿತು. ನಾನು ಅವರನ್ನು ರಕ್ಷಿಸಿದ್ದಾಕ್ಕಾಗಿ ಒಂದು ‘ತ್ಯಾಂಕ್ಸ್’ ಮತ್ತು ಒಂದು ‘ಬೈ ಟೂ’ ಕಾಫಿಯ ಉಡುಗೊರೆ ದೊರೆಯಿತು.

೨. ಕೇಂದ್ರೀಕೃತ ಮೌಲ್ಯಮಾಪನದ ಅವಧಿಯಲ್ಲಿ ಇನ್ನೊಬ್ಬ ಹಿರಿಯ ಪ್ರಾಧ್ಯಪಕರು ಸುಲಭದಲ್ಲಿ ಅಲ್ಪ ಪ್ರಮಾಣದ ಹಣ (ಕಾಫಿ ಖರ್ಚಿಗೆ) ಸಂಪಾದಿಸುತ್ತಿದ್ದ ವಿಧಾನ ಇಂತಿತ್ತು. ಶ್ರೀಯುತರು ಉತ್ತಮ ವಾಗ್ಮಿಗಳೂ ಕೆಲವು ಸ್ವಯಂಸೇವಾ ಸಂಘಟನೆಗಳ ಜನಪ್ರಿಯ ಕಾರ್ಯಕರ್ತರೂ ಆಗಿದ್ದರು. ಮೌಲ್ಯಮಾಪನ ನಡೆಯುತ್ತಿರುವಾಗ ಆಗೊಮ್ಮೆ ಈಗೊಮ್ಮೆ ಶ್ರೀಯುತರು ಕಾಫಿ ಕುಡಿಯಲು ಮೌಲ್ಯಮಾಪನ ಕೇಂದ್ರದಿಂದ ಅನತಿ ದೂರದಲ್ಲಿ ಇದ್ದ ‘ಕ್ಯಾಂಟೀನ್’ಗೆ ಹೋಗಿ ಬರುತ್ತಿದ್ದರು. ಅವರೊಂದಿಗೆ ನಾನೂ ಒಮ್ಮೆ ಹೊರಹೋದಾಗ ಅಲ್ಲಿಯೇ ಟಳಾಯಿಸುತ್ತಿದ್ದ ಶ್ರೀಯುತರ ಶಿಷ್ಯನೊಬ್ಬ ಅವರನ್ನು ಕಂಡೊಡನೆ ಓಡಿಬಂದ. “ಏನಯ್ಯಾ ಇಲ್ಲಿ” “ನಿಮ್ಮನ್ನೇ ನೋಡೋಕ್ಕೆ ಅಂತಲೇ ಬಂದಿದ್ದೆ” “ಏನು ವಿಷಯ?” “ನನಗೆಷ್ಟು ಅಂಕ ಬಂದಿದೆ ಅಂತ ನೋಡಿ ಹೇಳೋಕಾಗುತ್ತಾ ಸರ್?” “ಅದೇನು ಅಷ್ಟು ಸುಲಭವೇನಯ್ಯಾ? ಗೊತ್ತಾದರೆ ಮಾರ್ಕ್ಸ್ ಲೀಕ್ ಮಾಡಿದವರೆಲ್ಲರಿಗೂ ಶಿಕ್ಷೆ ಆಗುತ್ತೆ ಗೊತ್ತಾ? ಯಾಕೆ ನೀನು ಪರೀಕ್ಷೇಲಿ ಚೆನ್ನಾಗಿ ಬರೆದಿಲ್ವಾ?” “ಸರ್ ಸರ್ ಸ್ವಲ್ಪ ನೋಡಿ ಸರ್. ಚೆನ್ನಾಗೇ ಬರ್ದಿದ್ದೇನೆ, ಆದರೂ ಯಾಕೋ ಭಯ ಆಗ್ತಾ ಇದೆ ಸರ್” ಆತ ಹೀಗೆ ಹಲವು ಬಾರಿ ಅಂಗಲಾಚಿದ ಬಳಿಕ “ಆಯ್ತು ಟ್ರೈ ಮಾಡ್ತೇನೆ. ಬಟ್ ನಿನ್ ಪೇಪರ್ ಯಾರು ವ್ಯಾಲ್ಯುಯೇಶನ್ ಮಾಡ್ತಾ ಇದ್ದಾರೇಂತ ಪತ್ತೆ ಹಚ್ಚಿ ಅವರನ್ನ ಸುಮ್ನೇ ಕೇಳೋಕಾಗೋತ್ತಾ? ಒಂದು ಕಾಫಿನಾದ್ರೂ ಕೊಡಿಸಬೇಕಲ್ಲ. ಎಷ್ಟಿದೆ ಜೇಬಲ್ಲಿ ದುಡ್ಡು?” ಅವನ ಹತ್ತಿರ ಇದ್ದ ೫ ರೂಪಾಯಿ ಕಸಿದು ಜೇಬಿಗಿಳಿಸಿದರು. ಮುಂದೇನಾಯಿತು ಎಂಬುದನ್ನು ಪತ್ತೆಹಚ್ಚಲು ನಾನು ಪ್ರಯತ್ನಿಸಲಿಲ್ಲ.

ತದನಂತರ ಇತರ ಮಿತ್ರರಿಂದ ತಿಳಿದದ್ದು - ಅವರು ಮಾರ್ಕ್ಸ್ ಪತ್ತೆಹಚ್ಚಲು ಅತೀ ಶ್ರಮ ಪಡುತ್ತಿರಲಿಲ್ಲ. ತಮ್ಮ ಪರಿಚಯದವರನ್ನು ವಿಚಾರಿಸಿ ಅವರ ಪೈಕಿ ಯಾರಾದರೂ ಆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡುತ್ತಿದ್ದರೆ ಎಷ್ಟು ಅಂಕ ಬಂದಿದೆಯೆಂದು ತಿಳಿದುಕೊಂಡು ಶಿಷ್ಯನಿಗೆ ತಿಳಿಸುತ್ತಿದ್ದರು. ಸಾಧ್ಯವಾಗದಿದ್ದರೆ ಕಸಿದುಕೊಂಡಿದ್ದ ಹಣ ಹಿಂದಿರುಗಿಸುತ್ತಿದ್ದರು! ಇಷ್ಟು ಅಂಕ ಹಾಕಿ ಎಂಬುದಾಗಿ  ಮನವಿ ಎಂದೂ ಮಾಡುತ್ತಿರಲಿಲ್ಲವಂತೆ. ಆ ಶಿಷ್ಯ ತಾನಾಗಿಯೇ ಕನಿಷ್ಠ ಅಂಕ ಗಳಿಸಿದ್ದರೆ ಅಥವ ದ್ವಿತೀಯ/ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಲು ಬೇಕಾಗುವ ಕನಿಷ್ಠ ಅಂಕ ಗಳಿಸಿದ್ದರೆ “೧ ಮಾರ್ಕ್ ಕಮ್ಮಿ ಇತ್ತಯ್ಯಾ. ನಾನು ರಿಕ್ವೆಸ್ಟ್ ಮಾಡಿ ಕೊಡಿಸಿದ್ದೇನೆ” ಅಂದು ಇನ್ನೂ ಐದೋ ಹತ್ತೋ ರೂಪಾಯಿ ಗಿಟ್ಟಿಸುತ್ತಿದ್ದರಂತೆ!!

೩. ಬಿ ಎಡ್ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುತ್ತಿದ್ದಾಗ ನಡೆದದದ್ದು - ಒಂದು ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿ ನೀಡಿದ ಎಲ್ಲ ಉದಾಹರಣೆಗಳಲ್ಲಿ ಒಂದೇ ಹೆಸರು ಇದ್ದದ್ದು ನನ್ನ ಗಮನ ಸೆಳೆಯಿತು. ಬಿ ಎಡ್ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ನಮೂದಿಸುವುದು ಶಿಕ್ಷಾರ್ಹ ಅಪರಾಧ. ಈ ಉತ್ತರ  ಪತ್ರಿಕೆಯಲ್ಲಿ ಇದ್ದದ್ದು ಕಾಲ್ಪನಿಕ ಹೆಸರೋ ಅಭ್ಯರ್ಥಿಯ ನಿಜವಾದ ಹೆಸರೋ ಎಂಬುದನ್ನು ಪತ್ತೆಹಚ್ಚುವುದು ಹೇಗೆ? ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಗಳನ್ನು ಕೊಡುವ ಮುನ್ನ ಅಭ್ಯರ್ಥಿಗಳು ನಮೂದಿಸಿದ್ದ ರಿಜಿಸ್ಟರ್ ನಂಬರಿನ ಭಾಗ ಹರಿದು ಅದಕ್ಕೆ ಬದಲಾಗಿ ಬೇರೊಂದು ಸಂಖ್ಯೆಯನ್ನು ಅದರ ಮೇಲೆ ಬರೆಯಲಾಗುತ್ತಿತ್ತು. ಮೌಲ್ಯಮಾಪನ ಮಾಡುವವರಿಗೆ ತಾವು ಯಾವ ಕಾಲೇಜಿನಿಂದ ಬಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿದ್ದೇವೆ ಎಂಬುದು ತಿಳಿಯದಂತೆ ಮಾಡುವ ತಂತ್ರ ಇದಾಗಿತ್ತು. ಈ ತಂತ್ರಕ್ಕೆ ಪ್ರತಿತಂತ್ರವಾಗಿ ಈ ರೀತಿ ಹೆಸರು ಬರೆಯಲು ಕಾಲೇಜಿನವರೇ ಮಾರ್ಗದರ್ಶನ ನೀಡಿರಬೇಕು ಎಂಬುದು ನನ್ನ ಗುಮಾನಿ. ನನ್ನ ಗುಮಾನಿ ಸರಿಯೇ ಎಂಬುದನ್ನು ಪತ್ತೆಹಚ್ಚಲೋಸುಗ “---- ಹೆಸರಿನ ಹುಡುಗಿ ಯಾವ ಕಾಲೇಜಿನ ವಿದ್ಯಾರ್ಥಿ?” ಎಂಬುದಾಗಿ ಮೌಲ್ಯಮಾಪನ ನಡೆಯುತ್ತಿದ್ದ ಕೊಠಡಿಯಲ್ಲಿ ಇರುವವರೆಲ್ಲರಿಗೂ ಕೇಳುವಂತೆ ಪ್ರಶ್ನೆ ಹಾಕಿದೆ. ಕೊಠಡಿಯನ್ನು ದಿವ್ಯಮೌನ ಆವರಿಸಿತು. ಇಬ್ಬರು ಮೌಲ್ಯಮಾಪಕರು ಒಬ್ಬರತ್ತ ಇನ್ನೊಬ್ಬರು ಕಳ್ಳನೋಟ ಬೀರಿದ್ದನ್ನು ಗಮನಿಸಿದರೂ ಏನೂ ತಿಳಿಯದವನಂತೆ ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಿದೆ. ಆ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಿ ಮುಗಿಸುವ ಸಮಯಕ್ಕೆ ಸರಿಯಾಗಿ ಕಳ್ಳನೋಟ ಬೀರುತ್ತಿದ್ದವರ ಪೈಕಿ ಒಬ್ಬರು ಬಂದು ನನ್ನ ಸಮೀಪದ ಖಾಲಿ ಕುರ್ಚಿಯಲ್ಲಿ ಆಸೀನರಾಗಿ ಲೋಕಾಭಿರಾಮವಾಗಿ ಮಾತನಾಡಲಾರಂಭಿಸಿದರು. ಆ ಉತ್ತರಪತ್ರಿಕೆಗೆ ನಾನು ನೀಡಿದ್ದ ಒಟ್ಟು ಅಂಕ ತಿಳಿಯಲೋಸುಗ ಬಂದಿದ್ದಾರೆಂಬುದನ್ನು ಅವರ ದೇಹಭಾಷೆಯಿಂದ ಯಾರು ಬೇಕಾದರೂ ಊಹಿಸಬಹುದಿತ್ತು. ನಾನು ಏನೂ ತಿಳಿಯದವನಂತೆ “ಈ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಲು ತುಂಬಾ ಸಮಯ ತೆಗೆದುಕೊಂಡಿತು. ಏನೇನೂ ಚೆನ್ನಾಗಿ ಉತ್ತರಿಸಿಲ್ಲ. ಪಾಸಾಗುವಷ್ಟು ಅಂಕ ನೀಡಲು ಸಾಧ್ಯವೇ ಎಂದು ಎರಡೆರಡು ಬಾರಿ ಪರಿಶಿಲಿಸಿದೆ. ಸಾಧ್ಯವೇ ಇಲ್ಲ. ಇನ್ನೊಂದು ಬಾರಿಯಾದರೂ ಈ ಅಭ್ಯರ್ಥಿ ಪರೀಕ್ಷೆ ತೆಗೆದುಕೊಳ್ಳಲೇ ಬೇಕು” ಎಂದು ತುಸು ಜೋರಾಗಿಯೇ ಘೋಷಿಸಿದೆ. ಶ್ರೀಯುತರು ಏನೂ ಮಾತನಾಡದೆ ನಿರ್ಗಮಿಸಿದರು.

೪. ವಿಶ್ವವಿದ್ಯಾನಿಲಯದ ಬಿ ಕಾಮ್ ಪರೀಕ್ಷೆಯ ಮೌಲ್ಯಮಾಪನ ಕೇಂದ್ರದ ಮೇಲುಸ್ತುವಾರಿಯ ಜವಾಬ್ದಾರಿ ನನ್ನದಾಗಿದ್ದಾಗಿನ ಘಟನೆ ಇದು. ನಮ್ಮ ಕಾಲೇಜೇ ಮೌಲ್ಯಮಾಪನ ಕೇಂದ್ರ. ಆ ದಿನಗಳಲ್ಲಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲ ಪರೀಕ್ಷಾಕೇಂದ್ರಗಳಿಂದ (ಆಗಿನ್ನೂ ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಸ್ಥಾಪನೆ ಆಗಿರಲಿಲ್ಲ) ಉತ್ತರ ಪತ್ರಿಕೆಗಳ ಕಟ್ಟುಗಳು ‘ನೋಂದಾಯಿತ’ ಅಂಚೆ ಮೂಲಕ ನನ್ನ ವೈಯಕ್ತಿಕ ಹೆಸರು ನಮೂದಿಸಿದ ಕಾಲೇಜು ವಿಳಾಸಕ್ಕೆ ಬರುತ್ತಿದ್ದವು. ಅವನ್ನು ವಿಷಯವಾರು ವರ್ಷವಾರು ವರ್ಗೀಕರಿಸಿ ಮೌಲ್ಯಮಾಪನಕ್ಕೆ ವಿತರಿಸಲು ತಕ್ಕುದಾದ ರೀತಿಯಲ್ಲಿ ಇಟ್ಟುಕೊಂಡಿರ ಬೇಕಿತ್ತು. ಮೌಲ್ಯಮಾಪನದ ಅವಧಿಯಲ್ಲಿ ಪ್ರತೀದಿನ ಅವನ್ನು ನಿಗದಿತ ಸಂಖ್ಯೆಯ ಉತ್ತರ ಪತ್ರಿಕೆಗಳಿರುವ ಪುಟ್ಟಪುಟ್ಟ ಕಂತೆ ಮಾಡಿ ಮೌಲ್ಯಮಾಪನ ಮಾಡುವವರಿಗೆ ವಿತರಿಸಿ, ಮೌಲ್ಯಮಾಪನವಾದ ಬಳಿಕ ಹಿಂದಕ್ಕೆ ಪಡೆದು ಪುನಃ ಮೊದಲಿನಂತೆ ಪಿಂಡಿ ಮಾಡಬೇಕಿತ್ತು. ಅಂಕಪಟ್ಟಿಗಳನ್ನು ಮೌಲ್ಯಮಾಪಕರಿಂದ ಪಡೆದು ಸುರಕ್ಷಿತವಾಗಿ ಇಟ್ಟುಕೊಂಡಿದ್ದು ನಿಗದಿತ ದಿನಾಂಕದಂದು ವಿಶ್ವವಿದ್ಯಾನಿಲಯಕ್ಕೆ ತಲುಪಿಸಬೇಕಿತ್ತು.

ಈ ಸಂದರ್ಭದಲ್ಲೊಂದು ದಿನ ನನಗೆ ಬಹಳ ಪರಿಚಿತರಾಗಿದ್ದ ಉಪ ನೋಂದಣಾಧಿಕಾರಿಯೊಬ್ಬರು (ಸಬ್ ರಿಜಿಸ್ಟ್ರಾರ್) ಹುಡುಗನೊಬ್ಬನನ್ನು ಕರೆದುಕೊಂಡು ಮನೆಗೆ ಬಂದರು. ಉಭಯಕುಶಲೋಪರಿ ಆದ ಬಳಿಕ - “ಈ ಹುಡುಗ ನಮ್ಮ ಊರಿನವನು. ತುಂಬಾ ಬಡವ. ಹೇಗೋ ಕಷ್ಟಪಟ್ಟು ಕಾಲೇಜಿಗೆ ಸೇರಿ ಓದುತ್ತಿದ್ದಾನೆ. ಈ ಬಾರಿಯ ಪರೀಕ್ಷೆಯಲ್ಲಿ ದುರದೃಷ್ಟವಶಾತ್ ಒಂದು ವಿಷಯದಲ್ಲಿ ಚೆನ್ನಾಗಿ ಮಾಡಿಲ್ಲವಂತೆ. ವಿಶ್ವವಿದ್ಯಾನಿಲಯದಲ್ಲಿ ನೀವು ಮೌಲ್ಯಮಾಪನದ ಮೇಲುಸ್ತುವಾರಿ ಮಾಡುತ್ತಿರುವರೆಂದು ತಿಳಿಯಿತು (ವಿಶ್ವವಿದ್ಯಾನಿಲಯದವರು ಇದನ್ನು ತಿಳಿಸಿದ್ದು ತಪ್ಪು). ಏನಾದರೂ ಮಾಡಿ ಪಾಸು ಮಾಡಿಸಲು ಸಾಧ್ಯವೇ” “ಖಂಡಿತ ಸಾಧ್ಯ. ಏಕೆಂದರೆ, ಎಲ್ಲ ಉತ್ತರಪತ್ರಿಕೆಗಳೂ ನನ್ನ ಸುಪರ್ದಿನಲ್ಲಿವೆ. ಈತನ ಉತ್ತರಪತ್ರಿಕೆಯನ್ನು ಅರ್ಧಗಂಟೆಯೊಳಗೆ ಹುಡುಕಿ ತೆಗೆಯಬಲ್ಲೆ. ಅದನ್ನು ಮನೆಗೆ ತಂದು ಸ್ಥಳಾವಕಾಶವಿದ್ದರೆ ಸರಿ ಉತ್ತರ ಬರೆಯಿಸಿ ಹಿಂದಕ್ಕೆ ಸೇರಿಸಲೂ ಸಾಧ್ಯ” “ಸರ್, ಉತ್ತರಪತ್ರಿಕೆಯಲ್ಲಿ ೩-೪ ಪುಟ ಖಾಲಿ ಬಿಟ್ಟಿದ್ದೇನೆ ಸರ್” - ಹುಡುಗನ ಅಂಬೋಣ. “ಅದೆಲ್ಲ ಸರಿ. ನಾನು ಹಾಗೆ ಮಾಡುವುದು ಸರಿ ಎಂದು ನಿಮಗನ್ನಿಸುತ್ತದೆಯೇ? ವಿಶ್ವವಿದ್ಯಾನಿಲಯ ನನ್ನನ್ನು ನಂಬಿ ಈ ಜವಾಬ್ದಾರಿಯನ್ನು ಕೊಟ್ಟಿದೆ. ಹೀಗೆ ಮಾಡುವುದು ವಿಶ್ವಾಸದ್ರೋಹವಾಗುವುದಿಲ್ಲವೇ?” “ಮೌಲ್ಯಮಾಪಕರಿಗೆ ಸ್ವಲ್ಪ ಹೇಳಿ ------” “ಸ್ವಾಮೀ, ಅದೂ ಸಾದ್ಯವಿಲ್ಲದ ಮಾತು. ಏಕೆಂದರೆ, ಅದರಿಂದ ನನ್ನ ಕುರಿತು ಕೆಟ್ಟ ಅಭಿಪ್ರಾಯ ಮೂಡುವುದಷ್ಟೇ ಅಲ್ಲ, ನಾನು ಹಾಗೆ ಪ್ರಭಾವ ಬೀರಲು ಯತ್ನಿಸುವುದೂ ಅಪರಾಧ. ಈ ಹುಡುಗ ಹೇಳುವುದನ್ನು ಕೇಳಿದರೆ ಆತ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಅನ್ನುವುದರಲ್ಲಿ ಸಂಶಯವಿಲ್ಲ. ಬರೆದಿರುವುದರಲ್ಲಿ ಎಷ್ಟು ತಪ್ಪಿದೆಯೋ. ಹೀಗಿರುವಾಗ ಎಷ್ಟೇ ‘ಲಿಬರಲ್’ ಆಗಿ ‘ವ್ಯಾಲ್ಯೂ’ ಮಾಡಿದರೂ ಇವ ಪಾಸಾಗಲಾರ. ಬರೆಯದಿರುವುದಕ್ಕೆ ‘ಮಾರ್ಕ್ಸ್’ ಹಾಕಿದರೆ ಮಾತ್ರ ಸಾಧ್ಯವಾಗಬಹುದೇನೋ” ನನ್ನ ಮಾತುಗಳಿಂದ ಈ ಮನುಷ್ಯನ ಹತ್ತಿರ ಈ ಕುರಿತು ಮಾತನಾಡುವುದು ವ್ಯರ್ಥ ಅಂದು ಅವರಿಗನ್ನಿಸಿರ ಬೇಕು. “ಸಾರಿ ಸರ್. ನಿಮಗೆ ತೊಂದರೆ ಕೊಟ್ಟೆ” “ತೊಂದರೆ ಏನಿಲ್ಲ. ನಿಮ್ಮನ್ನು ನೋಡದೆ ಬಹಳ ದಿನಗಳಾಗಿದ್ದವು. ಈ ನೆಪದಲ್ಲಿಯಾದರೂ ಮಾತಾಡುವ ಅವಕಾಶ ಸಿಕ್ಕಿತಲ್ಲ” ಅಂದು ನಮಸ್ಕಾರ ಹೇಳಿ ಹೋದವರನ್ನು ತದನಂತರ ನೋಡಲೇ ಇಲ್ಲ.

[ ಇದಕ್ಕೇ ಏನೋ “ಎ ವಿ ಜಿನಾ. ಅವರ ಹತ್ತಿರ ಹೋಗಬೇಡಿ. ಅವರೊಂಥರಾ ಜನ” ಅಂದು ಬೆನ್ನಹಿಂದೆ ಕೆಲವರು ಆಡಿಕೊಳ್ಳುತ್ತಿದ್ದದ್ದೂ ನನ್ನ ಗಮನಕ್ಕೆ ಬಂದಿದೆ. ಆದರೇನು ಮಾಡುವುದು? “ನೋಡಿ ಸ್ವಾಮೀ, ನಾನಿರೋದೇ ಹೀಗೆ”]

11 June 2012

ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೪

ಪರೀಕ್ಷಾ ಕೊಠಡಿಗಳಲ್ಲಿ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುವಾಗ ನಾನು ಪತ್ತೆಹಚ್ಚಿದ, ನೋಡಿದ ‘ನಕಲು ಮಾಡುವಿಕೆ’ಗಳ ಪೈಕಿ ಅದ್ವಿತೀಯವಾದವುಗಳನ್ನು ಈ ಕಂತಿನಲ್ಲಿ ಮೆಲುಕು ಹಾಕುತ್ತಿದ್ದೇನೆ. ಇಲ್ಲಿ ಒಂದು ಅಂಶ ಸ್ಪಷ್ಟಪಡಿಸ ಬಯಸುತ್ತೇನೆ. ‘ನಕಲು ಮಾಡುವಿಕೆಯನ್ನು ಉತ್ತೇಜಿಸುವ ಪರಿಸರ ಒದಗಿಸದೇ ಇರುವುದಕ್ಕೆ ಒತ್ತು ಕೊಡಬೇಕೇ ವಿನಾ ನಕಲು ಮಾಡುವವರನ್ನು ಪತ್ತೆ ಹಚ್ಚಿ ಶಿಕ್ಷಿಸುವುದಕ್ಕಲ್ಲ’ ಎಂಬುದು ನನ್ನ ನಿಲುವು. ನನ್ನ ವೃತ್ತಿ ಜೀವನದಲ್ಲಿ ನಕಲು ಮಾಡುತ್ತಿದ್ದ ಅಸಂಖ್ಯ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿದ್ದೇನೆ. ಇವರ ಪೈಕಿ ೯೯.೯೯% ವಿದ್ಯಾರ್ಥಿಗಳ ಕುರಿತು ವರದಿ ಮಾಡಿ ಅವರು ಅದೆಷ್ಠೋ ಪರೀಕ್ಷೆಗಳನ್ನು ತೆಗೆದುಕೊಳ್ಳದಂತೆ ಮಾಡುವ ಶಿಕ್ಷೆಗೆ ಒಳಪಡಿಸಿಲ್ಲ. ಇದಕ್ಕೆ ಬದಲಾಗಿ ನಾನು ಈ ಮುಂದಿನಂತೆ ಏರುಧ್ವನಿಯಲ್ಲಿ ಒಂದು ಪುಟ್ಟ ಭಾಷಣ ಬಿಗಿಯುತ್ತಿದ್ದೆ - “ನೋಡಪ್ಪಾ/ನೋಡಮ್ಮಾ ನೀನು ಮಾಡುತ್ತಿರುವುದು ತಪ್ಪು. ಈಗ ಮಾಡಿರುವ ತಪ್ಪನ್ನು ನನ್ನ ಹತ್ತಿರ ಮೌಖಿಕವಾಗಿ ಒಪ್ಪಿಕೊಂಡು ನಕಲು ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನೂ ಉತ್ತರ ಪತ್ರಿಕೆಯನ್ನೂ ನನಗೆ ಒಪ್ಪಿಸಿ ಪರೀಕ್ಷಾಕೊಠಡಿಯಿಂದ ಹೊರನಡೆ. ಈ ಬಾರಿ ಉಳಿದಿರುವ ಪರೀಕ್ಷೆಗಳಿಗೆ ‘ಸ್ವ-ಇಚ್ಛೆಯಿಂದ’ ಗೈರುಹಾಜರಾಗು. ತತ್ಪರಿಣಾಮವಾಗಿ ಈ ಬಾರಿ ನೀನು ನಪಾಸಗುತ್ತೀ. ಇದಕ್ಕೆ ಒಪ್ಪದೇ ಹೋದರೆ ನಾನು ಕಾನೂನು ರೀತ್ಯಾ ಮುಖ್ಯಸ್ಥರಿಗೆ ವರದಿ ನೀಡುತ್ತೇನೆ. ಆಗ ಪರೀಕ್ಷಾಮಂಡಲಿ ವಿಚಾರಣೆ ನಡೆಸಿ ಇನ್ನು ೨-೪ ಪರೀಕ್ಷೆಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸುತ್ತಾರೆ. ಒಂದು ವೇಳೆ ನನಗೆ ಬೆದರಿಕೆ ಹಾಕುವುದು ಅಥವ ಜಗಳವಾಡುವುದು ಮಾಡಿದರೆ ಅದರಿಂದ ನನ್ನ ಮೇಲಾಗುವ ಪರಿಣಾಮ ಏನೇ ಆಗಿದ್ದರೂ ನಾನು ಕಾನೂನು ರೀತ್ಯಾ ಮುಖ್ಯಸ್ಥರಿಗೆ ವರದಿ ನೀಡುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಆಯ್ಕೆ ನಿನ್ನದು.” ನನ್ನ  ವೃತ್ತಿಜೀವನದಲ್ಲಿ ಎಲ್ಲರೂ ನನ್ನ ‘ಉಪದೇಶ’ದಂತೆಯೇ ನಡೆದುಕೊಂಡಿದ್ದಾರೆ. ನಕಲು ಮಾಡುವಿಕೆಯ ಪರಿಣಾಮದ ಕುರಿತಂತೆ ನನ್ನ ಅನುಭವಾಧಾರಿತ ತೀರ್ಮಾನಗಳು ಇಂತಿವೆ - ಒಂದು ಬಾರಿಯೂನಕಲು ಮಾಡುವಿಕೆಯನ್ನೇ ನಂಬಿದವರು ಮೇಲ್ವಿಚಾರಕರ ನೆರವಿಲ್ಲದಿದ್ದರೆ ಉತ್ತೀರ್ಣರಾಗುವುದೇ ಅಪರೂಪ. ಶಾಸ್ರೋಕ್ತವಾಗಿ ಅಧ್ಯಯಿಸದವರಿಗೆ ನಕಲು ಮಾಡುವ ಅವಕಾಶ ಸಿಕ್ಕರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದು ಅಪರೂಪ. ಉತ್ತಮ ಶ್ರೇಣಿಯಲ್ಲಿ ಸ್ವಸಾಮರ್ಥ್ಯದಿಂದ ಉತ್ತೀರ್ಣರಾಗಬಲ್ಲವರಿಗೆ ಅವರಿಗೆ ಗೊತ್ತಿಲ್ಲದೇ ಇದ್ದ ಅಂಶಗಳನ್ನು ನಕಲು ಮಾಡುವ ಅವಕಾಶ ಸಿಕ್ಕರೆ ಅವರು ಮತ್ತಷ್ಟು ಹೆಚ್ಚು ಅಂಕ ಗಳಿಸಬಲ್ಲರಾದರೂ ನನ್ನ ಅನುಭವದಲ್ಲಿ ಅವರು ನಕಲು ಮಾಡುವ ಸಂಭವನೀಯತೆ ಬಲು ಕಮ್ಮಿ. ‘ಸಾಮೂಹಿಕ ನಕಲು ಮಾಡುವಿಕೆ’ ವಿದ್ಯಮಾನ ಜರಗುವ ಕೇಂದ್ರಗಳಲ್ಲಿ ಶೇಕಡಾವಾರು ಫಲಿತಾಂಶ ಚೆನ್ನಾಗಿರುತ್ತದೆಯಾದರೂ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಉತ್ತಮ ಅಂಕ ಗಳಿಸುವ ಸಂಭವನೀಯತೆ ಬಲು ಕಮ್ಮಿ.

೧. ಎಸ್ ಎಸ್ ಎಲ್ ಸಿ ಪರೀಕ್ಷಾಕೇಂದ್ರವೊಂದರಲ್ಲಿ ಆದ ವಿಶಿಷ್ಟ ಅನುಭವ ಇದು. ಒಂದು ಅಥವ ಹೆಚ್ಚು ಬಾರಿ ನಪಾಸಾದವರೇ ಇದ್ದ ಕೊಠಡಿಯೊಂದರ ಉಸ್ತುವಾಯ ಜವಾಬ್ದಾರಿ ನನ್ನದು. ಅಭ್ಯರ್ಥಿಗಳು ನಕಲು ಮಾಡುವುದಕ್ಕೆ ಅಡ್ಡಿ ಪಡಿಸಿದರೆ ಗೂಂಡಾಗಿರಿಗೆ ಹಿಂಜರಿಯದವರೆಂಬ ಮಾಹಿತಿಯನ್ನು ಮಿತ್ರರು ಮೊದಲೇ ತಿಳಿಸಿದ್ದರು. ಅಭ್ಯರ್ಥಿಗಳು ನಿಗದಿತ ಸ್ಥಳಗಳಲ್ಲಿ ಆಸೀನರಾಗಿ ಉತ್ತರ ಪತ್ರಿಕೆಯಲ್ಲಿ ತಮ್ಮ ರಿಜಿಸ್ಟರ್ ನಂಬರ್ ಮೊದಲಾದ ಮಾಹಿತಿ ಬರೆದ ನಂತರ ಪ್ರಶ್ನೆ ಪತ್ರಿಕೆ ವಿತರಿಸುವುದಕ್ಕೆ ಮುನ್ನ ‘ನಕಲು ಮಾಡುವುದನ್ನು ನಾನು ವಿರೋಧಿಸುವುವನಾದ್ದರಿಂದ ನಕಲು ಮಾಡುವವರು ನನ್ನಕೈಗೆ ಸಿಕ್ಕಿ ಬಿದ್ದರೆ ಏನು ಮಾಡುತ್ತೇನೆ ಎಂಬುದನ್ನು ಬಲು ಸ್ಪಷ್ಟವಾಗಿ ವಿವರಿಸಿ ಇದಕ್ಕೆ ಯಾರದಾದರೂ ಅಭ್ಯಂತರವಿದ್ದರೆ ಈಗಲೇ ತಿಳಿಸುವುದು ಉತ್ತಮವೆಂದೂ ಇದರಿಂದ ಮುಂದೆ ಅಹಿತಕರ ಘಟನೆಗಳು ಆಗುವುದನ್ನೂ ಪೋಲೀಸರ ಮಧ್ಯಪ್ರವೇಶವನ್ನು ತಪ್ಪಿಸಬಹುದೆಂದೂ ನನ್ನದೇ ಆದ ಶೈಲಿಯಲ್ಲಿ ಪುಟ್ಟ ಭಾಷಣ ಮಾಡಿದ್ದಾಯಿತು. ನಕಲು ಮಾಡಲು ಸಿದ್ಧರಾಗಿ ಬಂದಿದ್ದವರು ತಂದಿರುವ ಸಾಮಗ್ರಿಗಳನ್ನು ತಾವಾಗಿಯೇ ಅಗಲೇ ನನಗೊಪ್ಪಿಸಿದರೆ ಯಾವ ತೊಂದರೆಯೂ ಆಗುವುದಿಲ್ಲವೆಂಬ ಭರವಸೆಯನ್ನು ನೀಡಿದ್ದೂ ಆಯಿತು. ತತ್ಪರಿಣಾಮವಾಗಿ ಕೆಲವರು ತಾವು ತಂದಿದ್ದ ಸಾಮಗ್ರಿಗಳನ್ನು ಒಪ್ಪಿಸಿದ್ದೂ ಆಯಿತು. ನಕಲು ಮಾಡಬೇಕೆಂದು ದೃಢನಿಶ್ಚಯ ಮಾಡಿದವರಿದ್ದರೆ ನನ್ನ ಕಣ್ಣು ತಪ್ಪಿಸಿ ನಕಲು ಮಾಡಲು ಪ್ರಯತ್ನಿಸುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲವೆಂದೂ, ಅಂಥವರು ನನ್ನ ಕೈಗೆ ಅಕಸ್ಮಾತ್ ಸಿಕ್ಕಿಬಿದ್ದರೆ ಸದ್ದಿಲ್ಲದೇ ಆ ಸಾಮಗ್ರಿಯನ್ನು ನನ್ನ ಕೈಗೊಪ್ಪಿಸಿದರೆ ಏನೂ ಕ್ರಮ ಕೈಗೊಳ್ಳುವುದಿಲ್ಲವೆಂಬ ಭರವಸೆ ನೀಡಿ, ಹಾಗೆ ಮಾಡದಿದ್ದರೆ ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮ ಖಂಡಿತವಾಗಿಯೂ ಕೈಗೊಳ್ಳುತ್ತೇನೆ ಎಂದೂ ತಿಳಿಸಿದ್ದಾಯಿತು. ತತ್ಪರಿಣಾಮವಾಗಿ ಪರೀಕ್ಷಾವಧಿ ಕಳ್ಳ-ಪೋಲೀಸ್ ಆಟದ ಅವಧಿಯಾಗಿತ್ತು. ಅಚ್ಚರಿಯಾಗುವಷ್ಟು ಪರಿಮಾಣದಲ್ಲಿ ಬರೆದುಕೊಂಡು ಬಂದಿದ್ದ ನಾನಾ ಗಾತ್ರದ ಕಾಗದದ ಹಾಳೆಗಳು ನನ್ನ ಕೈ ಸೇರಿದವು. ವಶಪಡಿಸಿಕೊಂಡಿದ್ದ ಕಾಗದಗಳನ್ನು ತುಂಬಿಸಲು ಕೊಠಡಿಯ ಹೊರಗೆ ಒಂದು ದೊಡ್ಡ ಬುಟ್ಟಿಯನ್ನು ಇಡಬೇಕಾಯಿತು. ಮರುದಿನ ಆ ಕೊಠಡಿಯಲ್ಲಿ ಹಿಂದಿನ ದಿನ ಇಲ್ಲದೇ ಇದ್ದ ಕುರ್ಚಿಯೊಂದು ಪ್ರತ್ಯಕ್ಷವಾಗಿತ್ತು. ಪರೀಕ್ಷೆ ಆರಂಭವಾಗಿ ೧೦-೧೫ ನಿಮಿಷಗಳು ಕಳೆಯವಷ್ಟರಲ್ಲಿ ಕೆಲವು ಅಭ್ಯರ್ಥಿಗಳು “ಈ ದಿನ ಯಾರೂ ಏನೂ ತಂದಿಲ್ಲ, ನೀವು ಸುಮ್ಮನೆ ಯಾಕೆ ಓಡಾಡುತ್ತೀರಿ, ಸ್ವಲ್ಪ ಹೊತ್ತು ಕುಳಿತುಕೊಂಡೇ ನೋಡಬಹುದಲ್ಲಾ” ಎಂಬ ಸಲಹೆ ನೀಡಿದರು. ಇದು ಅಸಹಜ ವರ್ತನೆಯಾದ್ದರಿಂದ ತರಗತಿಯಲ್ಲಿ ಕುಳಿತು ಪಾಠಮಾಡುವ ಮತ್ತು ಪರೀಕ್ಷಾ ಕೊಠಡಿಯಲ್ಲಿ ಕುಳಿತು ವೀಕ್ಷಿಸುವ ಅಭ್ಯಾಸ ನನಗೆ ಇಲ್ಲವಾದ್ದರಿಂದ ನನಗೆ ಆಯಾಸವಾಗುವ ಕುರಿತು ಚಿಂತಿಸದೆ ತಮ್ಮ ಗಮನವನ್ನು ಉತ್ತರ ಬರೆಯುವತ್ತ ಕೇಂದ್ರೀಕರಿಸುವುದೇ ಉತ್ತಮ ಎಂಬ ಸಲಹೆ ನೀಡಿ ನನ್ನ ‘ಕಾವಲುಗಾರಿಕೆ’ ಕಾಯಕ ಮುಂದುವರಿಸಿದೆ. ತುಸು ಸಮಯದ ಬಳಿಕ ಕುರ್ಚಿಗೆ ಹೆಚ್ಚುಕಮ್ಮಿ ತಾಗುವಷ್ಟು ಸಮೀಪದಲ್ಲಿದ್ದ ಬೆಂಚಿನಲ್ಲಿ ಕುಳಿತಿದ್ದ ಅಭ್ಯರ್ಥಿ ತನ್ನ ಕೈಯನ್ನು ಪದೇಪದೇ ತುರಿಸಿಕೊಳ್ಳುತ್ತಿದ್ದದ್ದೂ ತದನಂತರ ಕಾಲು ತುರಿಸಿಕೊಳ್ಳುತ್ತಿದ್ದದ್ದೂ ನನ್ನ ಗಮನಕ್ಕೆ ಬಂದಿತು. ಏಕೆಂದು ವಿಚಾರಿಸಿದಾಗ ‘ಯಾಕೋ ವಿಪರೀತ ತುರಿಸ್ತಾ ಇದೆ’ ಅಂದು ತುರಿಸುವಿಕೆ ಬರೆಯುವಿಕೆಗಳನ್ನು ಮುಂದುವರಿಸಿದ. ಉಳಿದವರ ಪೈಕಿ ಕೆಲವರು ನಗುತ್ತಿದ್ದದ್ದನ್ನೂ ಗಮನಿಸಿದೆ. ಪರೀಕ್ಷಾನಂತರ ವಿಚಾರಿಸಿದಾಗ ತಿಳಿಯಿತು - ಮುಟ್ಟಿದರೆ ನವೆ ಉಂಟುಮಾಡುವ ಯಾವುದೋ ಎಲೆಯ ರಸವನ್ನು ಕುರ್ಚಿಗೆ ಆ ಮಕ್ಕಳು ಉಜ್ಜಿದ್ದರು. ಕುರ್ಚಿಯ ಪಕ್ಕದಲ್ಲಿ ಕುಳಿತಿದ್ದವನ ಕೈಕಾಲು ಆಕಸ್ಮಿಕವಾಗಿ ಕುರ್ಚಿಗೆ ತುಸು ಕಾಲ ತಗುಲಿಕೊಂಡಿತ್ತು.

ಆ ಮಕ್ಕಳನ್ನು ಕರೆಸಿ ‘ಪರರಿಗೆ ಕೇಡು ಬಯಸಿದರೆ -----’ ಉಕ್ತಿಯನ್ನು ನಗುತ್ತಾ ಹೇಳಿದೆ.

೨. ಇದು ನಡೆದದ್ದು ನಾನು ಮೈಸೂರು ವಿಶ್ವವಿದ್ಯಾನಿಲಯವು ಅಂಚೆ ಮತ್ತು ತೆರಪಿನ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗಾಗಿ ತೆರೆದಿದ್ದ ಪರೀಕ್ಷಾಕೇಂದ್ರವೊಂದರಲ್ಲಿ ‘ಡೆಪ್ಯುಟಿ ಚೀಫ್’ ಕಾರ್ಯ ನಿಭಾಯಿಸುತ್ತಿದ್ದಾಗ. ಎರಡನೇ ದಿನ ಪರೀಕ್ಷೆ ಮುಗಿದ ಬಳಿಕ ಉತ್ತರಪತ್ರಿಕೆಗಳನ್ನು ಶಾಸ್ತ್ರೋಕ್ತವಾಗಿ ಪಿಂಡಿ ಕಟ್ಟಿಸುತ್ತಿದ್ದಾಗ ಒಂದು ಉತ್ತರಪತ್ರಿಕೆಯ ಹಾಳೆಗಳು ಅಸಹಜ ಅನ್ನಬಹುದಾದ ರೀತಿಯಲ್ಲಿ ಸಡಿಲವಾಗಿದ್ದವು. ಆ ಉತ್ತರಪತ್ರಿಕೆಯನ್ನು ಪರಿಶೀಲಿಸಿದಾಗ ಹಾಳೆಗಳಿಗೆ ಮುದ್ರಣಾಲಯದಲ್ಲಿ ಹಾಕಿದ್ದ ಪಿನ್ನುಗಳನ್ನು ಯಾರೋ ಬಿಡಿಸಿ ಪುನಃ ಹಾಕಿದಂತಿತ್ತು. ಹಾಳೆಗಳ ಸಂಖ್ಯೆ, ಗಾತ್ರ, ಗುಣಮಟ್ಟದಲ್ಲಿ ವ್ಯತ್ಯಾಸ ಇಲ್ಲದ್ದರಿಂದ ಏನಾಗಿರಬಹುದೆಂದು ಊಹಿಸಲೂ ಆಗಲಿಲ್ಲ. ಆ ಉತ್ತರ ಪತ್ರಿಕೆಯಲ್ಲಿ ನಮೂದಾಗಿದ್ದ ರಿಜಿಸ್ಟರ್ ನಂಬರ್ ಯಾರದ್ದು, ಆ ವ್ಯಕ್ತಿಗೆ ಮುಂದಿನ ಪರೀಕ್ಷೆ ಯಾವ ದಿನದಂದು ಇದೆ, ಯಾವ ಕೊಠಡಿಯಲ್ಲಿ ಆ ವ್ಯಕ್ತಿ ಇರುತ್ತಾನೆ ಎಂಬ ಮಾಹಿತಿ ಸಂಗ್ರಹಿಸಿದೆ. ಆ ದಿನದಂದು ಆ ವ್ಯಕ್ತಿ ಗೆ ತಿಳಿಯದಂತೆ ವಿಕ್ಷಿಸಲಾರಂಭಿಸಿದೆ. ಸುಮಾರು ೧/೨ ತಾಸು ಕಳೆದ ಬಳಿಕ ಆತ ತನಗೆ ಆ ದಿನ ಸಿಕ್ಕಿದ್ದ ಉತ್ತರಪತ್ರಿಕೆಯ ಪಿನ್ನುಗಳನ್ನು ತುಸು ಬಿಡಿಸಿ ಮಧ್ಯದ ೨ ಹಾಳೆಗಳನ್ನು ತೆಗೆದು ಬನಿಯನ್ ಒಳಕ್ಕೆ ಸೇರಿಸಿದ. ಬನಿಯನ್ ಒಳಗಿನಿಂದ ಎರಡು ಹಾಳೆಗಳನ್ನು ತೆಗೆದು ಉತ್ತರ ಪತ್ರಿಕೆಗೆ ಜೋಡಿಸಿ ಪಿನ್ನುಗಳನ್ನು ಮೊದಲಿನಂತೆ ಬಾಗಿಸಿದ. ಆ ಸಂದರ್ಭದಲ್ಲಿ ಆತನನ್ನು ಹಿಡಿದು ಮುಖ್ಯಸ್ಥರ ಕೊಠಡಿಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತಿಳಿದದ್ದು ಇಷ್ಟು - ಆತ ಆ ಊರಿನ ರಾಷ್ಟ್ರೀಕೃತ ಬ್ಯಾಕೊಂದರ ಉದ್ಯೋಗಿ. ಈ ಪರೀಕ್ಷೆ ಪಾಸಾದರೆ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇತ್ತು. ಪರೀಕ್ಷೆ ಆರಂಭವಾಗುವ ದಿನದ ಹಿಂದಿನ ದಿನದಂದು ಕೇಂದ್ರದ ಪರಿಚಿತ ಉದ್ಯೋಗಿಯೊಬ್ಬನನ್ನು ಮಾತನಾಡಿಸುವ ನೆಪದಲ್ಲಿ ಉತ್ತರ ಪತ್ರಿಕೆಗಳನ್ನು ಕೊಠಡಿವಾರು ಪಿಂಡಿ ಕಟ್ಟುತ್ತಿದ್ದ ಕೊಠಡಿಯ ಒಳಹೊಕ್ಕು ಅಲ್ಲಿಂದ ಒಂದು ಉತ್ತರ ಪತ್ರಿಕೆಯನ್ನು ಕದ್ದೊಯ್ದು ಅದರ ಮಧ್ಯದ ಎರಡು ಹಾಳೆಗಳನ್ನು ಕಿತ್ತು ಉತ್ತರಪತ್ರಿಕೆಯನ್ನು ಪುನಃ ಸ್ವಸ್ಥಾನಕ್ಕೆ ಸೇರಿಸಿದ್ದ. ಈ ಬಾರಿ ಖಂಡಿತ ಕೇಳುತ್ತಾರೆ ಎಂದು ಆತ ಭಾವಿಸಿದ್ದ ಕೆಲವು ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳನ್ನು ಬರೆದು ತರುತ್ತಿದ್ದ. ಪರೀಕ್ಷೆಯ ದಿನ ಸಿಕ್ಕುವ ಉತ್ತರ ಪತ್ರಿಕೆಯ ಮಧ್ಯದ ಎರಡು ಹಾಳೆಗಳನ್ನು ಉತ್ತರಗಳಿದ್ದ ಹಾಳೆಗಳನ್ನು ಸೇರಿಸಿದ್ದ. ಬರೆದು ತಂದಿದ್ದ ಉತ್ತರಗಳನ್ನು ಹೊಡೆದು ಹಾಕಿ ಬೇಕಾದದ್ದು ಇದ್ದರೆ ಅದನ್ನು ಲಂಬಿಸಿ ಬರೆಯುವ ಯೋಜನೆ ಅವನದ್ದು. ಅರ್ಥಾತ್, ಪ್ರತೀ ಪರೀಕ್ಷೆಗೂ ಮುನ್ನವೇ ಆತನ ಹತ್ತಿರ ಉತ್ತರಪತ್ರಿಕೆಯ ಎರಡು ಖಾಲಿ ಹಾಳೆಗಳಿರುತ್ತಿದ್ದವು.

ಈತನನ್ನೇನು ಮಾಡುವುದು ಎಂಬ ಸಮಸ್ಯೆ ನಮ್ಮನ್ನು ಕಾಡತೊಡಗಿತು. ಕಾನೂನು ರೀತ್ಯಾ ಕ್ರಮ ಕೈಗೊಂಡರೆ, ಆತನನ್ನು ಪೋಲೀಸರಿಗೆ ಒಪ್ಪಿಸುವ ಸಾಧ್ಯತೆಯೂ ತತ್ಪರಿಣಾಮವಾಗಿ ಆತ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯೂ ಇತ್ತು. ಆತನಿದ್ದ ಬ್ಯಾಂಕಿನ ಮ್ಯಾನೇಜರರನ್ನೂ ಕರೆಸಿ ಸುದೀರ್ಘಚರ್ಚೆಯ ಬಳಿಕ ಆತನಿಂದ ವಿವರವಾದ ಕ್ಷಮಾಯಾಚನೆ ಪತ್ರ ಬರೆಯಿಸಿಕೊಂಡು ಮಿಕ್ಕುಳಿದ ಪರೀಕ್ಷೆಗಳಿಗೆ ಗೈರುಹಾಜರಾಗುವಂತೆ ಸೂಚಿಸಿ ಬಿಟ್ಟುಬಿಟ್ಟೆವು.

೩. ಇದು ನಡೆದದ್ದು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಪರೀಕ್ಷಾಕೇಂದ್ರವೊಂದರಲ್ಲಿ ಬಿ ಎಡ್ ಪರೀಕ್ಷೆ ನಡೆಯುತ್ತಿದ್ದಾಗ. ಒಬ್ಬ ಅಭ್ಯರ್ಥಿ ಪದೇಪದೇ ಮಡಚಿದ್ದ ಅಚ್ಚ ಬಿಳಿಬಣ್ಣದ ಹೊಚ್ಚಹೊಸ ಕರವಸ್ತ್ರವನ್ನು ಬಿಡಿಸಿ ಮುಖ ಒರೆಸಿಕೊಳ್ಳುವುದು, ತದನಂತರ ಅದನ್ನು ಬಲು ಜಾಗರೂಕತೆಯಿಂದ ಮಡಚಿ ಇಡುವುದು ನನ್ನ ಗಮನ ಸೆಳೆಯಿತು. ಸುದೀರ್ಘ ಕಾಲ ದೂರದಿಂದ ಈ ಅಸ್ವಾಭಾವಿಕ ವರ್ತನೆ ಗಮನಿಸಿದ ಬಳಿಕ ಕರವಸ್ತ್ರದಲ್ಲಿ ಏನೋ ಮರ್ಮವಿದೆ ಅಂದನ್ನಿಸಿತು. ಅಭ್ಯರ್ಥಿಯ ಬಳಿ ಹೋಗಿ ಕರವಸ್ತ್ರ ನೀಡುವಂತೆ ಕೇಳಿದೆ, ವ್ಯಕ್ತಿ ಆಗ ನಿಜವಾಗಿಯೂ ಬೆವರಿದ್ದನ್ನು ಗಮನಿಸಿದೆ. ಕರವಸ್ತ್ರ ಬಿಡಿಸಿ ನೋಡಿದಾಗ ಅಚ್ಚರಿಯೊಂದು ಕಾದಿತ್ತು. ಅಂದಿನ ದಿನಗಳಲ್ಲಿ ‘ಕಾಪೀಯಿಂಗ್ ಪೆನ್ಸಿಲ್’ ಎಂಬ ವಿಶಿಷ್ಟ ಪೆನ್ಸಿಲ್ ಲಭ್ಯವಿತ್ತು. ಸಾಮಾನ್ಯವಾಗಿ ಅದನ್ನು ಕಾರ್ಬನ್ ಪ್ರತಿಗಳನ್ನು ಪಡೆಯಲು ಬರೆಯುವಾಗ ಉಪಯೋಗಿಸುತ್ತಿದ್ದರು. ಆ ಪೆನ್ಸಿಲ್ ನಲ್ಲಿ ಬರೆದದ್ದು ಇಂದಿನ ಎಚ್ ಬಿ ಪೆನ್ಸಿಲಿನಲ್ಲಿ ಬರೆದಂತೆ ಗೋಚರಿಸುತ್ತಿದ್ದರೂ ತುಸು ನೀರಿನ ಪಸೆ ತಗುಲಿದಾಕ್ಷಣ ನೇರಳೆ ಬಣ್ಣಕ್ಕೆ ತಿರುಗುತ್ತಿತ್ತು. ಆ ಅಭ್ಯರ್ಥಿ ತನಗೆ ಬೇಕಾದದ್ದೆಲ್ಲವನ್ನೂ ಆ ಪೆನ್ಸಿಲ್ ಉಪಯೋಗಿಸಿ ಬಿಳಿ ಕರವಸ್ತ್ರದಲ್ಲಿ ಬರೆದುಕೊಂಡು ಬಂದಿದ್ದ. ಮುಖ ಒರೆಸಿದಾಗ ತುಸು ಬೆವರು ತಗುಲಿ ಬರೆದದ್ದು ಗೋಚರಿಸುತ್ತಿತ್ತು!

೪. ಇದೂ ನಡೆದದ್ದು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಪರೀಕ್ಷಾಕೇಂದ್ರವೊಂದರಲ್ಲಿ ನಾನು ‘ಡೆಪ್ಯುಟಿ ಚೀಫ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ. ಅದೇ ಕೇಂದ್ರದಲ್ಲಿ ಪಿ ಯು ಸಿ ಅಂತಿಮ ಪರೀಕ್ಷೆಯೂ ನಡೆಯುತ್ತಿತ್ತು. ಪಿ ಯು ಸಿ ಪರೀಕ್ಷೆಗೂ ನನಗೂ ಸಂಬಂಧವಿಲ್ಲದಿದ್ದರೂ ಅದು ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯುವ ಕುತೂಹಲದಿಂದ ಒಂದು ಕೊಠಡಿಯ ಹೊರಗೆ ನಿಂತಿದ್ದೆ. ಒಳಗೆ ಅಭ್ಯರ್ಥಿಗಳಿಗೂ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇತಿಹಾಸ ಉಪನ್ಯಾಸಕರಿಗೂ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. “ಸರ್ ನೀವೇ ನಮಗೆ ಇತಿಹಾಸ ಪಾಠ ಮಾಡುತ್ತಿದ್ದವರು. ಪ್ರಶ್ನೆ ಪತ್ರಿಕೆಯಲ್ಲಿ ‘ಕೊಟ್ಟಿರುವ ಭಾರತದ ಭೂಪಟದಲ್ಲಿ ತಾಳಿಕೋಟೆ ಗುರುತಿಸಿ’ ಎಂಬ ಪ್ರಶ್ನೆ ಇದೆ. ಇದನ್ನೆಲ್ಲ ನೀವು ನಮಗೆ ಹೇಳಿಯೇ ಕೊಟ್ಟಿಲ್ಲ. ಉತ್ತರ ಹೇಗೆ ಬರೆಯುವುದು?” ಎಂಬುದು ಅಭ್ಯರ್ಥಿಗಳ ಪ್ರಮುಖ ಪ್ರಶ್ನೆಯಾಗಿತ್ತು. ಅವರ ಗಲಾಟೆ ತಡೆಯಲಾಗದೆ ಮೇಲ್ವಿಚಾರಕರು ಹೊರಬಂದು ಬಾಗಿಲಿನ ಬಳಿ ವಿದ್ಯಾರ್ಥಿಗಳು ಇಟ್ಟಿದ್ದ ಪುಸ್ತಕಗಳ ರಾಶಿಯಲ್ಲಿ ಇತಿಹಾಸ ಪಠ್ಯಪುಸ್ತಕ ಹುಡುಕಿ ತಗೆದರು. ಪುಸ್ತಕದಲ್ಲಿ ಸಂಬಂಧಿತ ಪಾಠ ಇರುವ ಪುಟಗಳಲ್ಲಿ ಒಂದೆಡೆ ತಾಳಿಕೋಟೆ ಇರುವ ತಾಣ ಗುರುತಿಸಿದ್ದ ಭೂಪಟ ಹುಡುಕಿ, ತಾಳಿಕೋಟೆ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿದರು. ಬಲು ಸಂತೋಷದಿಂದ ಒಳಕ್ಕೆ ಧಾವಿಸಿ, ಪಠ್ಯಪುಸ್ತಕದಲ್ಲಿದ್ದ ಭೂಪಟ ಪ್ರದರ್ಶಿಸುತ್ತಾ ಹೇಳಿದರು “ತಾಳಿಕೋಟೆ ಇಲ್ಲಿದೆ ನೋಡಿ. ನಿಮ್ಮ ಭೂಪಟದಲ್ಲಿ ಬೇಗ ಗುರುತಿಸಿಕೊಳ್ಳಿ” (!!!)

೫. ಇದು ನಡೆದದ್ದು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಪರೀಕ್ಷಾಕೇಂದ್ರವೊಂದರಲ್ಲಿ ಬಿ ಎಡ್ ಪರೀಕ್ಷೆ ನಡೆಯುತ್ತಿದ್ದಾಗ. ಒಬ್ಬ ಮಧ್ಯವಯಸ್ಸಿನ ಮಹಿಳಾ ಅಭ್ಯರ್ಥಿ ನಕಲು ಮಾಡಲು ಬರೆದು ತಂದಿದ್ದ ಹಾಳೆಯ ಮೇಲೆ ಕುಳಿತು, ಯಾರೂ ನೋಡುತ್ತಿಲ್ಲವೆಂದು ತಾನು ನಂಬಿದಾಗ ತುಸು ಜರುಗಿ ಹಾಳೆಯನ್ನು ನೋಡಿ ಬರೆಯತ್ತಿದ್ದದ್ದು ನನ್ನ ಕಣ್ಣಿಗೆ ಬಿತ್ತು. ಆಕೆಯನ್ನು ಎಬ್ಬಿಸಿ ಹಾಳೆಯನ್ನು ವಶಪಡಿಸಿಕೊಂಡು ಕೇಳಿದೆ “ನಿಮಗೆಷ್ಟು ಮಕ್ಕಳಿದ್ದಾರಮ್ಮ”  “ಇಬ್ಬರು” “ಅವರಿಗೆ ಈ ನಕಲು ಮಾಡುವ ವಿದ್ಯೆಯನ್ನು ಚೆನ್ನಾಗಿ ಕಲಿಸುತ್ತಿದ್ದೀರಿ ತಾನೆ?” ಆಕೆ ತಲೆತಗ್ಗಿಸಿ ಹೊರನಡೆದವರು ಮುಂದಿನ ಪರೀಕ್ಷೆಗಳಿಗೆ ಹಾಜರಾಗಲಿಲ್ಲ.

8 June 2012

ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೩

ಮೊದಲನೇ ಕಂತಿನಲ್ಲಿ ಪ್ರೌಢಶಾಲೆಯ ಶಿಕ್ಷಕನಾಗಿದ್ದಾಗಿನ ನೆನಪುಗಳನ್ನೂ ಎರಡನೇ ಕಂತಿನಲ್ಲಿ ಬಿ ಎಡ್ ಕಾಲೇಜಿನ ಸೇವಾವಧಿಯಲ್ಲಿನ ಕೆಲವು ಸ್ವಾರಸ್ಯಕರ ನೆನಪುಗಳನ್ನೂ ಹಂಚಿಕೊಂಡಿದ್ದೆ. ಈ ಕಂತಿನಲ್ಲಿ ಒಂದು ಖಾಸಗಿ ಅನುದಾನಿತ ಬಿ ಎಡ್ ಕಾಲೇಜಿನ ಪ್ರಾಂಶುಪಾಲನಾಗಿ ಕಾಲೇಜಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡುವ ಸಂದರ್ಭದಲ್ಲಿ ಆದ ಅನುಭವಗಳ ಪೈಕಿ ಕೆಲವನ್ನು ಹಂಚಿಕೊಳ್ಳುತ್ತೇನೆ. ನನ್ನ ಸೇವಾವಧಿಯ ಕೊನೆಯ ೩ ವರ್ಷಗಳಲ್ಲಿ ಕೇಂದ್ರೀಕೃತ ಪ್ರವೇಶ ಕೊಡುವ ಪದ್ಧತಿ ಬಂದ ನಂತರ ಇದರಿಂದ ಮುಕ್ತಿ ದೊರೆಯಿತು.

೧. ನಾನು ಪ್ರಾಂಶುಪಾಲನಾಗಿ ಬಡ್ತಿ ಪಡೆದಿದ್ದ ಮೊದಲನೇ ವರ್ಷ. ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದೆ. ಇಬ್ಬರು ಯುವಕರು ನನ್ನ ಕೊಠಡಿಗೆ ಬಂದರು. “ನಮಸ್ಕಾರ ಸರ್” “ನಮಸ್ಕಾರ, ಕುಳಿತುಕೊಳ್ಳಿ. ನನ್ನಿಂದ ಏನಾಗಬೇಕಿತ್ತು?” “ನೀವು ನಮ್ಮ ಕಡೆಯವರು ಅಂತ ಗೊತ್ತಾಯಿತು. ಆದ್ದರಿಂದ ಸಹಾಯ ಮಾಡಬಹುದು ಅಂತ ಬಂದೆವು” “ನೀವು ಯಾವ ಕಡೆಯವರು?” “ದಕ್ಷಿಣ ಕನ್ನಡ, ಪುತ್ತೂರು. ಈರೆಗು ತುಳು ಬರ್ಪುಂಡಾ?” “ಕ್ಷಮಿಸಿ. ನಾನು ಹುಟ್ಟಿ ಬೆಳೆದಿದ್ದೆಲ್ಲ ಕೊಡಗಿನಲ್ಲಿ. ದಕ್ಷಿಣ ಕನ್ನಡದಲ್ಲಿ ಬಂಧುಗಳಿದ್ದಾರೆ, ಅಷ್ಟೆ. ತುಳು ಸುಮಾರಾಗಿ ಅರ್ಥ ಆಗುತ್ತೆ, ಮಾತನಾಡಲು ಬರುವುದಿಲ್ಲ. ಈಗ ಹೇಳಿ ನನ್ನಿಂದ ಏನಾಗಬೇಕಿತ್ತು?” “ಏನಿಲ್ಲ, ನಮ್ಮ ಹುಡುಗನೊಬ್ಬ ನಿಮ್ಮಲ್ಲಿ ಬಿ ಎಡ್ ಗೆ ಅಪ್ಲೈ ಮಾಡಿದ್ದಾನೆ” “ಅವನ ಫೈನಲ್ ಇಯರ್ ಮಾರ್ಕ್ಸ್ ಎಷ್ಟು?” “೪೯.೯%” “ಮೂರೂ ವರ್ಷದ್ದು ಸೇರಿಸಿದರೆ?” “೪೫%” “ಎಸ್ ಸಿ, ಎಸ್ ಟಿ ವರ್ಗದವನೋ?” “ಅಲ್ಲ, ಜನರಲ್ ಮೆರಿಟ್” “ಸರಿ ಬಿಡಿ, ಮುಂದೇನೂ ಹೇಳೋದೇ ಬೇಡ. ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯದ ಬಿ ಎಡ್ ಕಾಲೇಜಿನಲ್ಲಿ ಅವನಿಗೆ ಸೀಟ್ ಸಿಕ್ಕೋದಿಲ್ಲ. ಎಸ್ ಸಿ, ಎಸ್ ಟಿ ವರ್ಗದವರಿಗೆ ೪೫%, ಇತರರಿಗೆ ೫೦% ಮಾರ್ಕ್ಸ್ ಇರಲೇಬೇಕು” “ಅದು ಗೊತ್ತಿತ್ತು. ನೀವು ನಮ್ಮ ಕಡೆಯವರಲ್ಲವಾ. ಏನಾದರೂ ಉಪಾಯ ಮಾದಬಹುದೇನೋ ಅಂತ” “ನನ್ನ ಕಡೆಯವರಲ್ಲ, ನನ್ನ ಮಗನೇ ಆದರೂ ಸೀಟು ಕೊಡಿಸಲು ಸಾಧ್ಯವಿಲ್ಲ” “ಏನೂ ಮಾಡೋದಿಕ್ಕೆ ಆಗೋದಿಲ್ವ? ಸ್ವಲ್ಪ ಜಾಸ್ತಿ ಡೊನೇಷನ್ ಕೊಟ್ರೆ?” “ನೀವು ಎಷ್ಟೇ ಲಕ್ಷ ಯಾರಿಗೇ ಕೊಟ್ಟರೂ ಆಗೋದಿಲ್ಲ. ಬೇರೆ ಕಡೆ ಹೋಗಿ ಯಾರಿಗಾದರೂ ಹಣ ಕೊಟ್ಟರೆ ಕಳೆದುಕೊಳ್ಳುವುದು ಗ್ಯಾರಂಟಿ” “ಸರಿ ಹಾಗಾದ್ರೆ ಬರ್ತೇವೆ” ನಮಸ್ಕಾರ ಹೇಳದೆಯೇ ತೆರಳಿದರು

[ನನ್ನ ಸೇವಾವಧಿಯಲ್ಲಿ ನೀವು ನಮ್ಮವರು, ನಮ್ಮ ಊರಿನವರು ಇತ್ಯಾದಿ ಪರಿಚಯದೊಂದಿಗೆ ಬಂದವರ ಪೈಕಿ ೯೯% ಮಂದಿ ಪ್ರವೇಶ ಪಡೆಯಲು ಅನರ್ಹರಾಗಿದ್ದವರೇ ಆಗಿದ್ದರು]

೨. ಪ್ರವೇಶ ಪ್ರಕ್ರಿಯೆಯ ಸಂದರ್ಭದಲ್ಲೊಂದು ದಿನ ೩-೪ ಜನ ಹಿಂಬಾಲಕರೊಂದಿಗೆ ಸ್ಥಳೀಯ ಶಾಸಕರೊಬ್ಬರ ಆಗಮನವಾಯಿತು. ಅನುಮತಿ ಕೋರಿ ಬಳಿಕ ಒಳಬರುವ ಪದ್ಧತಿ ಅನೇಕ ಜನಪ್ರತಿನಿಧಿಗಳಿಗೆ ತಿಳಿದೇ ಇರುವುದಿಲ್ಲ. ಜನಪ್ರತಿನಿಧಿಯಾದ್ದರಿಂದ ಎದ್ದು ನಿಂತು ನಮಸ್ಕರಿಸಿ ಅವರಿಗೆ ಕುಳಿತುಕೊಳ್ಳುವಂತೆ ಹೇಳಿ ಅವರು ಕುಳಿತ ನಂತರ ನಾನೂ ಕುಳಿತುಕೊಳ್ಳುವ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಪಾಲಿಸಿದ್ದಾಯಿತು (ಇದರಲ್ಲಿ ಲೋಪವಾದರೆ ಅಧಿಕಾರಿಗಳಿಗೆ ತೊಂದರೆ ಆಗುತ್ತದೆ). “ನೊಡಿ ಪ್ರಿನ್ಸಿಪಾಲರೆ, ನಮ್ಮ ಹುಡುಗ ಒಬ್ಬ ನಿಮ್ಮ ಕಾಲೇಜಿಗೆ ಸೀಟಿಗೆ ಅಪ್ಲೈ ಮಾಡಿದ್ದಾನೆ. ನಿಮಗೆ ಹೇಳ್ಬಿಟ್ಟು ಅವನಿಗೆ ಸೀಟು ಗ್ಯಾರಂಟಿ ಮಾಡ್ಕೊಂಡು ಹೋಗೋಣ ಅಂತ ಬಂದೆ” “ಕ್ಷಮಿಸಿ, ಈಗಲೇ ಸೀಟು ಸಿಕ್ಕುತ್ತೆ ಅಂತ ಗ್ಯಾರಂಟಿ ಕೊಡೋದು ಕಷ್ಟ. ೧೦೦ ಸೀಟಿಗೆ ಸುಮಾರು ೨೦೦೦ ಅಪ್ಲಿಕೇಶನ್ ಬಂದಿದೆ. ಆದ್ದರಿಂದ ನಾವು ಮೆರಿಟ್ ಲಿಸ್ಟ್ ತಯಾರಿಸಿ ಮೇಲಿನ ೫೦೦ ಮಂದಿಯದ್ದನ್ನು ನೋಟೀಸ್ ಬೋರ್ಡ್ ನಲ್ಲಿ ಹಾಕ್ತೇವೆ. ತದನಂತರ ಮಿಸಲಾತಿ ನಿಯಮಾವಳಿ ಉಲ್ಲಂಘನೆ ಆಗದಂತೆ ಮೆರಿಟ್ ಪ್ರಕಾರ ಕೊಡ್ತಾ ಹೋಗ್ತೇವೆ” “ಅದೆಲ್ಲ ಗೊತ್ತು. ನೀವು ಈ ಹುಡುಗನಿಗೆ ಸೀಟ್ ಕೊಡ್ಲೇಬೇಕು” “ಹೇಗೆ ಕೊಡೋದು? ಈ ಕಾನೂನು ಮಾಡಿದ್ದು ನಾನಲ್ಲ ನೀವೇ, ಅಂದರೆ ಶಾಸಕಾಂಗದವರು. ಅದರಂತೆ ನಡ್ಕೊಳ್ಳೋದು ಮಾತ್ರ ನನ್ನ ಕೆಲ್ಸ” “ಹಾಗಾದ್ರೆ ನಮ್ಮ ಹುಡುಗನಿಗೆ ಸೀಟು ಕೊಡೋಲ್ಲ ಅನ್ನಿ. ಪಾಪ ಬಡವ, ಬ್ರಾಹ್ಮಣ ಅಂತ ಬಂದೆ. ನೋಡಿ ನಾನು ಒಕ್ಕಲಿಗನಾದ್ರೂ ಎಲ್ರನ್ನೂ ಸಮಾನವಾಗಿ ಕಾಣ್ತೇನೆ” “ನಿಮ್ಮ ಬಗ್ಗೆ ತುಂಬಾ ಕೇಳಿದ್ದೇನೆ. ನಿಮ್ಮಂಥವರು ಅಪರೂಪ ಬಿಡಿ. ಆದ್ರೇನು ಮಾಡೋದು ಈ ಕೇಸಲ್ಲಿ ನಾನು ಏನೂ ಸಹಾಯ ಮಾಡೋಕ್ಕಗಲ್ವಲ್ಲ ಅಂತ ಬೇಸರ ಆಗ್ತಾ ಇದೆ” “ಮ್ಯನೇಜ್ ಮೆಂಟ್ ಕೋಟಾದಲ್ಲಿ ಕೊಡಿ” “ಅದು ನೀವು ಅವರನ್ನೇ ಕೇಳ್ಬೇಕು. ಅವರು ಕಳುಹಿಸುವ ಅಭ್ಯರ್ಥಿಗೆ ಪ್ರವೇಶ ಪಡೆಯಲು ಕನಿಷ್ಠ ಅರ್ಹತೆ ಇದೆಯೋ ಅಂತ ನೋಡೋದು ಮಾತ್ರ ನನ್ನ ಕೆಲಸ. ಇದ್ದರೆ, ಪ್ರವೇಶ ಕೊಡೋದು ಬಿಡೋದು ಅವರಿಷ್ಟ” ಶಾಶಕರು ‘ಬನ್ರೋ, ಈವಯ್ಯನ ತಾವ ಮಾತಾಡಿ ಪ್ರಯೋಜನ ಇಲ್ಲ, ಅಧ್ಯಕ್ಷರನ್ನೇ ನೋಡೋಣ’ ಅನ್ನುತ್ತಾ ಹಿಂಬಾಲಕರೊಡನೆ ಹೊರನಡೆದರು. ನಾನೂ ನಿಟ್ಟುಸಿರು ಬಿಟ್ಟೆ.

೩. ಅದೇ ಶಾಸಕರು ಇನ್ನೊಂದು ವರ್ಷ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದಾಗ ಪ್ರತ್ಯಕ್ಷರಾದರು. ಯಥಾ ಪ್ರಕಾರ ಹುಡುಗಿಯೊಬ್ಬಳಿಗೆ ಪ್ರವೇಶ ನೀಡುವಂತೆ ಒತ್ತಾಯಿಸಲು ಅವರು ಬಂದಿದ್ದರು. “ಸರ್, ಈ ಅಭ್ಯರ್ಥಿಗೆ  ಅರ್ಹತೆಯೇ ಇಲ್ಲವಲ್ಲ?” “ಯಾಕೆ, ೬೨% ಮಾರ್ಕ್ಸ್ ಇದೆಯಲ್ಲ” “ಅದಿದೆ. ಆದರೆ ಪ್ರವೇಶ ಪಡೆಯ ಬೇಕಾದರೆ ಪದವಿ ತರಗತಿಯಲ್ಲಿ ಕಡ್ಡಾಯವಾಗಿ ಓದಿರಲೇ ಬೇಕಾದ ಐಚ್ಛಿಕ ವಿಷಯಗಳ ಪೈಕಿ ಒಂದನ್ನೂ ಓದಿಲ್ಲವಲ್ಲ ಸರ್” “ ಯಾಕೆ ಓದಿದ್ದಾಳಲ್ಲ. ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ” “ಅದು ನಿಜ, ಆದರೆ ಮೈಕ್ರೋಬಯಾಲಜಿ ಓದಿದರೆ ಬಯಾಲಜಿ ಓದಿದ್ದಾರೆ ಅಂತ, ಬಯೋಕೆಮಿಸ್ಟ್ರಿ ಓದಿದರೆ ಕೆಮಿಸ್ಟ್ರಿ ಓದಿದ್ದಾರೆ ಅಂತ ಪರಿಗಣಿಸೋದಕ್ಕೆ ಆಗೋದಿಲ್ವಲ್ಲ” “ಏನು ಪ್ರಿನ್ಸಿಪಾಲ್ರೇ, ನಿಯಮಕ್ಕೆ ನೀವು ನಿಮ್ಮದೇ ಆದ ಇಂಟರ್ಪ್ರಿಟೇಷನ್ ಕೊಡ್ತಾ ಇದ್ದೀರಲ್ಲ?” “ಛೇ ಛೆ. ನಿಮ್ಹತ್ರ ಹಾಗೆಲ್ಲ ಮಾಡೋ ಧೈರ್ಯ ನನಗೆಲ್ಲಿದೆ. ಈಗ ಒಂದು ಕೆಲ್ಸ ಮಾಡಿ. ನಾನು ಮಾಡೋ ಅಡ್ಮಿಶನ್ ಗಳನ್ನು ಅಪ್ರೂವ್ ಮಾಡುವವರು ವಿಶ್ವವಿದ್ಯಾನಿಲಯದ ಕುಲಸಚಿವರು. ನಾನು ಈಗಲೇ ಅವರಿಂದ ಈ ಕುರಿತು ಸ್ಪಷ್ಟೀಕರಣ ಕೇಳಿ ಒಂದು ಪತ್ರ ಬರೀತೇನೆ. ಅವರು ಸಮ್ಮತಿಸಿದರೆ ನನ್ನದೇನೂ ಅಭ್ಯಂತರ ಇಲ್ಲ. ನೀವು ವಿಶ್ವವಿದ್ಯಾನಿಲಯದಲ್ಲಿ ಈ ಕುರಿತು ಕುಸಚಿವರ ಹತ್ತಿರ ಮಾತಾಡಿ” “ಸರಿ, ಅದೇನು ಲೆಟರ್ ಕೊಡ್ತೀರೋ ಕೊಡಿ. ನಾನೇ ತಗೊಂಡು ಹೋಗ್ತೇನೆ” ತಕ್ಷಣ ಕುಲಸಚಿವರಿಂದ ಸ್ಪಷ್ಟೀಕರಣ ಕೋರುವ ಪತ್ರ ಸಿದ್ಧಪಡಿಸಿ ಕೊಟ್ಟೆ. ಈ ನಿಯಮವನ್ನು ಬದಲಿಸುವ ಅಧಿಕಾರ ಕುಲಸಚಿವರಿಗೆ ಇಲ್ಲ ಎಂಬುದು ನನಗೆ ತಿಳಿದಿತ್ತು. ಆದರೂ ಶಾಶಕರಿಂದ ತಪ್ಪಿಸಿಕೊಳ್ಳುವ ಬೇರೆ ದಾರಿ ನನಗೆ ಹೊಳೆಯಲಿಲ್ಲ. ಿದಾಗಿ ೧-೨ ತಾಸಿನಲ್ಲಿ ಶಾಸಕರು ಪುನಃ ಪ್ರತ್ಯಕ್ಷರಾದರು. “ತಗೊಳ್ಳಿ ಪ್ರಿನ್ಸಿಪಾಲರೆ. ನೀವು ಕೇಳಿದ ಸ್ಪಷ್ಟೀಕರಣ ತಂದಿದ್ದೇನೆ” ಅಂದು ಪತ್ರವೊಂದನ್ನು ಕೊಟ್ಟರು. ಅದು ವಿಶ್ವವಿದ್ಯಾನಿಲಯ ಹೊರಡಿಸಿದ ಆದೇಶ. ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ ಪದವೀಧರರೂ ಬಿ ಎಡ್ ಪ್ರವೇಶ ಪಡೆಯಲು ಅರ್ಹರು ಎಂಬುದು ಅದರ ತಿರುಳು. ಈ ಪವಾಡ ಹೇಗಾಯಿತೆಂಬುದು ನನಗೆ ತಿಳಿಯದಿದ್ದರೂ “ಈ ಆದೇಶ ಬಂದ ಮೇಲೆ ನಿಮ್ಮ ಅಭ್ಯರ್ಥಿಗೆ ಪ್ರವೇಶ ನೀಡಲು ನನ್ನದೇನೂ ಅಭ್ಯಂತರವಿಲ್ಲ. ನನ್ನ ಪ್ರಕಾರ ಇದೊಂದು ಪವಾಡ. ಇರಲಿ. ನೀವು ಕೋಪಿಸಿಕೊಳ್ಳುವುದಿಲ್ಲ ಅನ್ನುವುದಾದರೆ ನನ್ನದೊಂದು ಹಿತನುಡಿ ಇದೆ, ಹೇಳಬಹುದೇ?” “ಹೇಳಿ, ಹೇಳಿ ನಿಮ್ಮಂಥ ಹಿರಿಯರ ಹಿತನುಡಿ ಕೇಳಲು ಏನೂ ತೊಂದರೆ ಇಲ್ಲ” “ನೀವು ಇಷ್ಟೆಲ್ಲ ಶ್ರಮವಹಿಸಿದ್ದರಿಂದ ಾ ಹುಡುಗಿಗೆ ಬಿ ಎಡ್ ಪ್ರವೇಶ ದೊರೆಯಿತು. ಆಕೆ ಬಿ ಎಡ್ ಪದವೀಧರಳೂ ಆಗುತ್ತಾಳೆ. ಆದರೂ, ತದನಂತರ ಯಾವುದೇ ಸರ್ಕಾರೀ ಶಾಲೆಯಲ್ಲಿ ಅಥವ ಅನುದಾನಿತ ಖಾಸಗಿ ಶಾಲೆಯಲ್ಲಿ ಆಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ ಸಂದರ್ಶನದ ಕರೆಯೂ ಬರುವುದಿಲ್ಲ” “ಏಕೆ” “ಸರ್ಕಾರೀ ನೇಮಕಾತಿ ನಿಯಮಗಳ ಪ್ರಕಾರ ಈ ವಿಷಯಗಳ ಪದವೀಧರರನ್ನು ಬಯಾಲಜಿ ಅಥವ ಕೆಮಿಸ್ಟ್ರಿ ಶಿಕ್ಷಕರಾಗಿ ನೇಮಕ ಮಾಡಕೂಡದು. ಅಂದ ಮೇಲೆ ಈ ಅಭ್ಯರ್ಥಿ ನಿರುದ್ಯೋಗೀ ಬಿ ಎಡ್ ಪದವೀಧರಳಾಗಿಯೇ ಉಳಿಯಬೇಕು, ಅಥವ ಯಾವುದಾದರೂ ಅನುದಾನರಹಿತ ಶಾಲೆಯಲ್ಲಿ ಶಾಶ್ವತವಾಗಿ ತಾತ್ಕಾಲಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಬೇಕು. ಆದ್ದರಿಂದ ಇಷ್ಟೊಂದು ವೆಚ್ಚ ಮಾಡಿ ಬಿ ಎಡ್ ಪದವಿ ಗಳಿಸಬೇಕೇ ಎಂಬುದರ ಕುರಿತು ಆಲೋಚಿಸುವುದು ಒಳ್ಳೆಯದು” “ಅದರ ಯೋಚನೆ ನಮಗ್ಯಾಕೆ. ಬಿ ಎಡ್ ಸೇರಲು ನೆರವು ನೀಡಿ ಅಂತ ಬಂದಿದ್ದಾರೆ, ಅಡ್ಮಿಶನ್ ಮಾಡಿಸಿ ಕೊಟ್ಟಿದ್ದೇನೆ” ಅಮದು ತೆರಳಿದರು. ಮುಂದೆ ಆಕೆಯ ಭವಿಷ್ಯದ ಕುರಿತು ಅಂದಿದ್ದು ಅಕ್ಷರಶಃ ನಿಜವಾಗಿದೆ. ಆಕೆಗ ಪ್ರವೇಶ ನೀಡಿ ಸುಮಾರು ೧ ತಿಂಗಳಾಗುವಷ್ಟರಲ್ಲಿ ವಿಶ್ವವಿದ್ಯಾನಿಲಯದಿಂದ ಒಂದು ಪತ್ರ ಬಂದಿತು. ಅದರ ತಿರುಳು - ಈ ಹಿಂದೆ ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ ಪದವೀಧರರೂ ಬಿ ಎಡ್ ಪ್ರವೇಶ ಪಡೆಯಲು ಅರ್ಹರು ಎಂದು ವಿಶ್ವವಿದ್ಯಾನಿಲಯ ಹೊರಡಿಸಿದ್ದ ಆದೇಶ ಈ ಶೈಕ್ಷಣಿಕ ವರ್ಷ ಮಾತ್ರ ಜಾರಿಯಲ್ಲಿರುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಈ ಆದೇಶವನ್ನು ರದ್ದುಗೊಳಿಸಲಾಗಿದೆ! ಜೈ ಶಾಶಕ ಶಕ್ತಿ ಅನ್ನೋಣವೇ?

೪. ಒಂದು ದಿನ ಹಿರಿಯರೊಬ್ಬರು ಬಾಗಿಲು ತಟ್ಟಿ ಅತೀ ವಿನಯದಿಂದ  ಒಳಬರಲು ಅನುಮತಿ ಕೋರಿ ಅನುಮತಿ ನೀಡುವ ಮುನ್ನವೇ ಒಳಬಂದು ತಾವಾಗಿಯೇ ಆಸೀನರಾದರು. “ನನ್ನ ಮೊಮ್ಮಗನಿಗೆ ಬಿ ಎಡ್ ಗೆ ಪ್ರವೇಶ ಬೇಕಿತ್ತು. ವಿಶ್ವವಿದ್ಯಾನಿಲಯದ ಕುಲಪತಿಗಳ ಪರಿಚಯಸ್ಥರಾದ್ದರಿಂದ ಅವರ ಬಳಿ ಹೋದೆ. ಅವರು  ಒಂದು ಪತ್ರ ಕೊಟ್ಟು ನಿಮ್ಮನ್ನು ಕಾಣಲು ಹೇಳಿದರು” ಎಂದು ಒಂದು ಪತ್ರ ಮತ್ತು ಒಂದು ನಿಂಬೆಹಣ್ಣು ನೀಡಿದರು. ನಾನು ಅವರನ್ನು ದಿಟ್ಟಿಸಿ ನೋಡಿದಾಗ “ಅದು ನಾವು ನಿಮ್ಮಲ್ಲಿಟ್ಟಿರುವ ಗೌರವ ಸೂಚಕ ಅಷ್ಟೇ” ಅಂದರು. ತಮ್ಮ ಅಧಿಕೃತ ಲೆಟರ್ ಹೆಡ್ ನಲ್ಲಿ  ಕುಲಪತಿಗಳು ನನ್ನ ಕಾಲೇಜಿನ ಪ್ರಾಶುಪಾಲರಿಗೆ ನೀಡಿದ್ದ  ಪತ್ರ ಅದಾಗಿತ್ತು. ಅದರ ತಿರುಳು - ಈ ಪತ್ರ ತರುವ ಅಭ್ಯರ್ಥಿ ಬಲು ಬಡವನಾಗಿರುವುದರಿಂದ ಕಾನೂನಿನನ್ವಯ ಅವನಿಗೆ ಪ್ರವೇಶ ನೀಡುವ ಕುರಿತು ಪರಿಶೀಲಿಸಿ. ಬಲು ಜವಾಬ್ದರೀಯುತ ಸ್ಥಾನಗಳನ್ನಲಂಕರಿಸಿದವರು ತಮ್ಮ ಹತ್ತಿರ ಇಂಥ ಬೇಡಿಕೆಗಳೊಂದಿಗೆ ಬರುವವರನ್ನು ತಮ್ಮ ಕೊಠಡಿಯಿಂದ ಗೌರವಯುತವಾಗಿ ‘ಓಡಿಸುವ’ ತಂತ್ರ ಇದು. ಆ ಅಭ್ಯರ್ಥಿಗೆ ಪ್ರವೇಶ ಪಡೆಉಲು ಇರಬೇಕಾದ ಕನಿಷ್ಠ ಅರ್ಹತೆಯೂ ಇರಲಿಲ್ಲ. ಇದನ್ನು ಆ ಹಿರಿಯರಿಗೆ ವಿವರಿಸಿದಾಗ ಅವರು “ಏನೋ ನೋಡಿ. ನೀವು ದೊಡ್ಡಮನಸ್ಸು ಮಾಡಬೇಕು. ನಿಮ್ಮ ಉಪಕಾರಕ್ಕೆ ಕೃತಜ್ಞತೆಯನ್ನು ನಮ್ಮ ಶಕ್ತ್ಯಾನುಸಾರ ತೋರಿಸುತ್ತೇವೆ (?!)” ಅಂದರು. “ನನ್ನ ಮನಸ್ಸು ಯಾವಾಗಲೂ ದೊಡ್ಡದೇ. ಆದರೆ ಈ ವಿಷಯದಲ್ಲಿ ನಾನು ನಿಸ್ಸಹಾಯಕ” “ಏನೂ ಮಾಡೋಕಾಗೋಲ್ಲ ಅನ್ನಿ” “ಯಾರಿಂದಲೂ ಏನೂ ಮಾಡೋದಕ್ಕಾಗೋದಿಲ್ಲ” “ಸರಿ ಹಾಗಾದರೆ ನಾನಿನ್ನು ಹೊರಡ್ತೇನೆ” “ಆಯಿತು. ಕ್ಷಮಿಸಿ, ನಿಮಗೆ ಸಹಾಯ ಮಾಡೋದಕ್ಕೆ ಆಗಲಿಲ್ಲ. ಅಂದಹಾಗೆ ಈ ನಿಂಬೆಹಣ್ಣು ಯಾಕೆ ವೇಸ್ಟ್ ಮಾಡ್ಬೇಕು. ತಗೊಂಡುಹೋಗಿ” ಮರುಮಾತನಾಡದೇ ನಿಂಬೆಹಣ್ಣು ತೆಗೆದುಕೊಂಡು ಹೊರನಡೆದರು.

೫. ಅದೊಂದು ದಿನ. ದೂರವಾಣಿ ರಿಂಗಣಿಸಿತು. “ಹಲೋ, ನಮಸ್ಕಾರ. ಸೋಮಾನಿ ಬಿಎಡ್ ಕಾಲೇಜಿನ ಪ್ರಿನ್ಸಿಪಾಲ್ ಮಾತಾಡ್ತಾ ಇದ್ದೇನೆ” “ಪ್ರಿನ್ಸಿಪಾಲ್ರೇ, ನಾನೊಬ್ಬ ಹುಡುಗನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೇನೆ. ಅವನಿಗೆ ನಿಮ್ಮ ಕಾಲೇಜಲ್ಲಿ  ಬಿ ಎಡ್ ಗೆ ಅಡ್ಮಿಟ್ ಆಗ್ಬೇಕಂತೆ” “ ತಮ್ಮ ಪರಿಚಯ ---?” “ನಾನಪ್ಪ, ---- ಮಿನಿಸ್ಟರು” “ಕ್ಷಮಿಸಿ, ಗೊತ್ತಾಗಲಿಲ್ಲ. ಅಭ್ಯರ್ಥಿಯನ್ನ ಮೂಲ ದಾಖಲೆಗಳ ಸಹಿತ ನನ್ನ ಕಾಣೋದಕ್ಕೆ ಹೇಳಿ. ಅವನ್ನ ನೋಡಿ ಸೀಟು ಕೊಡೋಕಾಗುತ್ತೋ ಇಲ್ವೋ ಅಂತ ಅವನಿಗೇ ಹೇಳ್ತೇನೆ” “ ಏ ಹಾಗೆ ಹೇಳಿದರೆ ಆಗೋದಿಲ್ಲ. ಅವನಿಗೊಂದು ಸೀಟು ಕೊಡ್ಲೇಬೇಕು” “ಕಾನೂನು ನಿಮಗೇ ಗೊತ್ತಿದೆಯಲ್ಲ ಸರ್” ‘ಅದೆಲ್ಲ ನನಗೂ ಗೊತ್ತು, ಅವನ್ನ ಕಳಿಸ್ತೇನೆ, ನೋಡಿ” ದೂರವಾಣಿಯ ಸಂಪರ್ಕ ಕಡಿತಗೊಳಿಸುವ ಮುನ್ನ ಅವರು ಬೇರೆ ಯಾರಿಗೋ ಹೇಳಿದ್ದು ಕೇಳಿಸಿತು “ ನಾನ್ಹೇಳ್ಲಿಲ್ವೇನಪ್ಪಾ, ಹಾಗೆಲ್ಲ ಈಗ ಕೊಡ್ಸೋಕಾಗೋಲ್ಲ ಅಂತ. ಈಗ ಅವರು ಮೆರಿಟ್ ಪ್ರಕಾರನೇ ಕೊಡ್ಬೇಕು. ಸುಮ್ಮನೆ ನನ್ನ ತಲೆ ತಿನ್ಬೇಡ ಹೋಗು. ನಮ್ಮ ಸೆಕ್ರೆಟರಿ ಒಂದು ಕಾಗದ ಕೊಡ್ತಾನೆ. ತಗೊಂಡು ಹೋಗಿ ನೋಡು” ಆತ ಬಂದಿದ್ದ, ಆತನಿಗೆ ಸೀಟು ಸಿಕ್ಕಲಿಲ್ಲ.

೬. ಒಬ್ಬ ವ್ಯಕ್ತಿ ಒಳ ಬಂದವರೇ “ನೀವು ಸೋಮವಾರಪೇಟೆ ಹೈಸ್ಕೂಲಿನಲ್ಲಂತೆ ಓದಿದ್ದು?” “ಹೌದು, ಸುಮಾರು ೨೫ ವರ್ಷಗಳ ಹಿಂದೆ” “ಹಾಗಾದರೆ ನಿಮಗೆ ---- ಅವರು, ಅದೇ  --- ಮಿನಿಸ್ಟರು ಗೊತ್ತಿರಬೇಕಲ್ಲ” “ಇಲ್ಲ, ಗೊತ್ತಿಲ್ಲ. ಅವರು ನನಗಿಂತ ಸೀನಿಯರ್. ಅದ್ಉ ಸರಿ. ಈಗ ನಿಮಗೆ ನನ್ನಿಂದ ಏನಾಗ ಬೇಕಿತ್ತು?” “ ಒಂದು ಸಣ್ಣ ಸಹಾಯ ಅಷ್ಟೆ. ನಮ್ಮ ಹುಡುಗಿಗೆ ಒಂದು ಸೀಟ್ ಬೇಕಿತ್ತು” “ಅಷ್ಟೇನಾ? ಮಾರ್ಕ್ಸ್ ಕಾರ್ಡ್ ತಂದಿದ್ದೀರಾ?” ಕೊಟ್ಟರು, ನೋಡಿದೆ, ಕನಿಷ್ಠ ಅರ್ಹತೆಯೇ ಇರಲಿಲ್ಲ. (ಅರ್ಹತೆ ಇದ್ದಿದ್ದರೆ ನನ್ನನ್ನು ಕಾಣಬೇಕಾಗಿರಲಿಲ್ಲ!) ವಿಷಯ ತಿಳಿಸಿದೆ. ಮಾತನಾಡದೇ ಹೊರಟು ಹೋದದ್ದು ನೋಡಿ ನನಗೆ ಬಹಳ ಆಶ್ಚರ್ಯ ಆಯಿತು. ಅದಾಗಿ ಎರಡು ದಿನಗಳ ನಂತರ ಾಸಾಮಿ ಪುನಃ ಪ್ರತ್ಯಕ್ಷರಾದರು. ಈ ಬಾರಿ ಅವರ ಬಳಿ ಸೀಟು ಗಿಟ್ಟಿಸಿಕೊಳ್ಳಲು ವಿಶೇಷ ಸಾಧನವೊಂದಿತ್ತು - ಅವರು ಈ ಹಿಂದೆಯೇ ಉಲ್ಲೇಖಿಸಿದ್ದ ಮಂತ್ರಿಗಳ ಆಪ್ತ ಸಹಾಯಕನಿಂದ ಒಂದು ಪತ್ರ. ಪತ್ರವನ್ನೋದಿ ಹಿಂದಿರುಗಿಸಿ ಹೇಳಿದೆ “ಈ ಪತ್ರದ ಆಧಾರದ ಮೇಲೆ ಸೀಟು ಕೊಡಲು ಸಾಧ್ಯವಿಲ್ಲ” “ಮಿನಿಸ್ಟ್ರು ಹೇಳಿದ್ರೂ ಕೊಡೋದಿಲ್ಲವ?” “ಮಿನಿಸ್ಟ್ರು ಲಿಖಿತ ಆದೇಶ ಕೊಟ್ಟರೆ ಖಂಡಿತಾ ಕೊಡ್ತೇನೆ” ಪುನ: ಮರುಮಾತನಾಡದೇ ಆತ ಹೊರನಡೆದರು. ಅದೇ ದಿನ ರಾತ್ರಿ ಸುಮಾರು ೧೧ ಗಂಟೆಗೆ ನನ್ನ ಮನೆಯಲ್ಲಿದ್ದ ಪ್ರಿನ್ಸಿಪಾಲರ ಅಧಿಕೃತ ದೂರವಾಣಿ ರಿಂಗಣಿಸಿತು “ಹಲೋ” “ಹಲೋ, ನಾನು -----ಮಿನಿಸ್ಟರ್ ಅವರ ಪರ್ಸನಲ್ ಅಸಿಸ್ಟೆಂಟ್ ಮಾತಾಡ್ತಾ ಇದ್ದೇನೆ” “ನಮಸ್ಕಾರ, ಹೇಳಿ ಏನಾಗ್ಬೇಕಿತ್ತು?” “ಅದೇ, ಮಿನಿಸ್ಟರ್ ಹೇಳಿದಂತೆ ಒಂದು ಲೆಟರ್ ಕೊಟ್ಟು ಒಬ್ರನ್ನ ನಿಮ್ಹತ್ರ ಕಳ್ಸಿದ್ದೆ. ಆಗೋಲ್ಲಾಂತ ಹಿಂದಕ್ಕೆ ಕಳ್ಸಿದ್ದೀರಿ” “ಹೌದು. ಅವನಿಗೆ ಕನಿಷ್ಠ ಅರ್ಹತೆಯೂ ಇಲ್ಲ” “ಮ್ಯಾನೇಜ್ಮೆಂಟ್ ಕೋಟಾದಲ್ಲಿ ಕೊಡಿ” “ಮೊದಲನೇದಾಗಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಕೊಡುವ ಅಧಿಕಾರ ನನಗಿಲ್ಲ. ಎರಡನೇದಾಗಿ, ಕನಿಷ್ಠ ಅರ್ಹತೆಯೂ ಇಲ್ಲದವರಿಗೆ ಮ್ಯಾನೇಜ್ಮೆಂಟೂ ತಮ್ಮ ಕೋಟದಲ್ಲಿ ಸೀಟು ಕೊಡೋಹಾಗಿಲ್ಲ” “ಇದು ಮಿನಿಸ್ಟರ್ ಗೆ ಬಹಳ ಬೇಕಾಗಿರೋ ಜನದ ಕ್ಯಾಂಡಿಡೇಟು. ಏನಾದ್ರೂ ಮಾಡ್ಬೇಕಲ್ಲ” “ಖಂಡಿತ ಮಾಡ್ಬಹುದು. ‘ಈ ವ್ಯಕ್ತಿ ಕಳೆದ ೩ ವರ್ಷಗಳಿಂದ ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರಿಗೆ ಬಿ ಎಡ್ ವ್ಯಾಸಂಗ ಮಾಡಲು ಒಂದು ವರ್ಷದ ವೇತನರಹಿತ ರಜೆ ಕೊಡಲೂ ಬಿ ಎಡ್ ಅಧ್ಯಯನಾವಧಿ ಮುಗಿದ ಬಳಿಕ ನಮ್ಮ ಶಾಲೆಯಲ್ಲಿಯೇ ಶಿಕ್ಷಕರಾಗಿ ಮುಂದುವರಿಸುವುದಾಗಿಯೂ ಒಂದು ಪ್ರಮಾಣಪತ್ರವನ್ನು ಸರ್ಕಾರೀ ಮಾನ್ಯತೆ ಇರುವ ಶಾಲೆಯಿಂದ ಪಡೆದು ಅದನ್ನು ಸಂಬಂಧಿಸಿದ ಡಿ ಡಿ ಪಿ ಐ ದೃಢೀಕರಿಸುವ ಸಹಿ ಮಾಡಿಸಿ ತಂದರೆ ಕೊಡಬಹುದು. ಏಕೆಂದರೆ ‘ಇನ್ ಸರ್ವೀಸ್’ ಕೋಟಾದಲ್ಲಿ ನಾವು ಕೆಲವು ಅಭ್ಯರ್ಥಿಗಳನ್ನು ಕನಿಷ್ಠ ಅರ್ಹತೆ ಇಲ್ಲದಿದ್ದರೂ ಅಡ್ಮಿಟ್ ಮಾಡಬಹುದು ಅಂತ ನಿಯಮ ಇದೆ” “ಹೌದಾ, ಹಾಗಾದರೆ ಆ ಕೋಟಾದಲ್ಲಿ ಇವನ್ನ ಅಡ್ಮಿಟ್ ಮಾಡಿಕೊಂಡ್ಬಿಡಿ. ಸಧ್ಯದಲ್ಲೇ ನೀವು ಹೇಳಿದ ಸರ್ಟಿಫಿಕೇಟ್ ಕಳ್ಸಿಕೊಡ್ತೇನೆ” “ಕ್ಷಮಿಸಿ. ಹಾಗೆ ಮಾಡೋದು ತಪ್ಪಾಗುತ್ತೆ. ನಾನು ಸರ್ಟೀಫಿಕೇಟ್ ನೋಡದೆಯೇ ಅಡ್ಮಿಟ್ ಮಾಡಿದ ನಂತರ ಸರ್ಟಿಫಿಕೇಟ್ ಸಮಯಕ್ಕೆ ಸರಿಯಾಗಿ ನನ್ನ ಕೈ ಸೇರದೇ ಹೋದರೆ ನನಗೆ ತೊಂದರೆ ಆಗುತ್ತೆ. ಆದ್ದರಿಂದ, ಸರ್ಟಿಫಿಕೇಟ್ ಸಹಿತವೇ ಅಭ್ಯರ್ಥಿಯನ್ನು ಕಳುಹಿಸಿ. ಅರ್ಜೆಂಟ್ ಏನಿಲ್ಲ. ಇನ್ನೂ ೨೦ ದಿವಸ ಸಮಯ ಇದೆ ಅಡ್ಮಿಷನ್ ಕ್ಲೋಸ್ ಆಗೋದಕ್ಕೆ” “ಸರಿ ಹಾಗಾದರೆ, ಹಾಗೇ ಮಾಡ್ತೇನೆ” ಆ ನಂತರ ಅಭ್ಯರ್ಥಿ ಬರಲೇ ಇಲ್ಲ. ಏಕೆಂದರೆ ನಾನು ಹೇಳಿದ ರೀತಿಯಲ್ಲಿ ಸುಳ್ಳು ಸರ್ಟಿಫಿಕೇಟ್ ತರುವುದು ಬಲು ಕಷ್ಟದ ಕೆಲಸ. ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶ ಇದೆ - ಮಿನಿಸ್ಟರ್ ನೇರವಾಗಿ ಆಗಲೀ ಪತ್ರ ಮುಖೇನ ಆಗಲೀ ನನ್ನನ್ನು ಸಂಪರ್ಕಿಸಿರಲಿಲ್ಲ.

6 June 2012

ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೨

ಮೊದಲನೇ ಕಂತಿನಲ್ಲಿ ಪ್ರೌಢಶಾಲೆಯ ಶಿಕ್ಷಕನಾಗಿದ್ದಾಗಿನ ನೆನಪುಗಳನ್ನು ಹಂಚಿಕೊಂಡಿದ್ದೆ. ಈ ಕಂತಿನಲ್ಲಿ ಬಿ ಎಡ್ ಕಾಲೇಜಿನ ಸೇವಾವಧಿಯಲ್ಲಿನ ಕೆಲವು ಸ್ವಾರಸ್ಯಕರ ನೆನಪುಗಳನ್ನು ಹಂಚಿಕೊಳ್ಳುತ್ತೇನೆ. ಬಿ ಎಡ್ ತರಬೇತಿಯ ಭಾಗವಾಗಿ ವಿದ್ಯಾರ್ಥಿ-ಶಿಕ್ಷಕರು ಪ್ರಾಯೋಗಿಕ ಅನುಭವ ಪಡೆಯಲೋಸುಗ ನಿಗದಿತ ಸಂಖ್ಯೆಯ ಪಾಠಗಳನ್ನು ನಿಗದಿತ ಪ್ರೌಢಶಾಲೆಗಳಲ್ಲಿ ಬೋಧಿಸಿಬೇಕು. ಅವನ್ನು ಬಿ ಎಡ್ ಕಾಲೇಜಿನ ಸಂಬಂಧಿತ ಉಪನ್ಯಾಸಕರು ವೀಕ್ಷಿಸಿ ಒಪ್ಪುತಪ್ಪುಗಳನ್ನು ವಿಮರ್ಶಿಸಬೇಕು. ಇಲ್ಲಿ ಉಲ್ಲೇಖಿಸಿದ ಅನುಭವಗಳು ಇಂಥ ವೀಕ್ಷಣಾವಧಿಯಲ್ಲಿ ಆದವುಗಳು. ಶಿಕ್ಷಣಶಾಸ್ತ್ರದ ತತ್ವಗಳನ್ನು ಮನೋಗತ ಮಾಡಿಕೊಳ್ಳದೆಯೆ ಬೋಧಿಸಿದರೆ ಏನಾದೀತು ಎಂಬುದನ್ನು ಇವು ಸೂಚಿಸುತ್ತವೆ. ಇಂದಿನ ಶಿಕ್ಷಕರಲ್ಲಿ ಬಹುಮಂದಿ ಇಂಥವರೇ ಆಗಿರುವುದು ವಿಷಾದನೀಯ. (ಯಾವುದೇ ವೃತ್ತಿಪರ ಕಾಲೇಜುಗಳಿಗೆ ಹೇಗಾದರೂ ಪ್ರವೇಶ ಪಡೆದರೆ ಸಾಕು ಉನ್ನತ ದರ್ಜೆಯಲ್ಲಿ ತೇರ್ಗಡೆ ಆಗುವುದು ಖಾತರಿ ಅನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತಿರುವಂತೆ ತೋರುತ್ತಿದೆ). ಪ್ರತೀ ಅನುಭವದಲ್ಲಿ ಹುದುಗಿರುವ ಸ್ವಾರಸ್ಯ ಏನು ಎಂಬುದು ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಅವಶ್ಯವಿದ್ದೆಡೆ ತುಸು ವಿವರಣೆ ನೀಡಿದ್ದೇನೆ.

೧. ಯಾವುದೇ ಪಾಠ ಆರಂಭಿಸುವ ಮುನ್ನ ಒಂದು ಪೀಠಿಕೆ ಹಾಕಬೇಕು ಅನ್ನುತ್ತದೆ ಶಾಸ್ತ್ರ. ಅಂದು ಏನನ್ನು ಕಲಿಯಬೇಕೋ ಅದನ್ನು ಗ್ರಹಿಸಲು ಅಗತ್ಯವಾದ ಜ್ಞಾನ ಕೌಶಲಗಳು ವಿದ್ಯಾರ್ಥಿಗಳಲ್ಲಿ ಇದೆಯೇ ಎಂಬುದನ್ನು ಪತ್ತೆಹಚ್ಚುವುದೂ ಅಂದು ಕಲಿಯಬೇಕಾದ್ದನ್ನು ಕಲಿಯುವುದರ ಉಪಯುಕ್ತತೆಯನ್ನು ಮನವರಿಕೆ ಮಾಡುವುದರ ಮುಖೇನ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದೂ ಈ ಹಂತದಲ್ಲಿ ಆಗಬೇಕಾದ ಕಾರ್ಯಗಳು. ಇದು ಜರಗಿದ್ದು ವಿದ್ಯಾರ್ಥಿ-ಶಿಕ್ಷಕಿಯೊಬ್ಬಳು ಮೈಸೂರಿನ ಒಂದು ಬಾಲಕಿಯರ ಪ್ರೌಢಶಾಲೆಯಲ್ಲಿ ಪಾಠ ಆರಂಭಿಸುವ ಮುನ್ನ ಹಾಕಿದ ಪೀಠಿಕೆಯ ಸಂಭಾಷಣೆಯ ತಿರುಳಿನ ಭಾಗ ಮಾತ್ರ ಒದಗಿಸಿದ್ದೇನೆ, ಉಳಿದದ್ದನ್ನು ನೀವೇ ಕಲ್ಪಿಸಿಕೊಳ್ಳಿ

“ಮಕ್ಕಳೇ, ನಾವು ಬದುಕಲು ಆಹಾರ ಸೇವಿಸಲೇ ಬೇಕು ಎಂಬುದು ನಿಮಗೆ ತಿಳಿದಿದೆ. ಸಾಮಾನ್ಯವಾಗಿ ಆಹಾರ ರೂಪದಲ್ಲಿ ಏನನ್ನು ಸೇವಿಸುತ್ತೇವೆ?” “ಅನ್ನ” “ಗುಡ್, ಮತ್ತೆ?” “ಸಾರು, ಸಾಂಬಾರು” “ಕರೆಕ್ಟ್. ಸಾಂಬಾರ್ ಮಾಡಲು ಮುಖ್ಯವಾಗಿ ಏನು ಬೇಕು?” “ತರಕಾರಿ” “ಗುಡ್. ಮತ್ತೆ ಇನ್ನೇನು ಸೇವಿಸುತ್ತೇವೆ?” “ಹಾಲು, ಮಜ್ಜಿಗೆ”,“ಹೌದು, ಮತ್ತೆ?” “ಹಣ್ಣುಗಳು” “ವೆರಿ ಗುಡ್. (ಶಿಕ್ಷಕಿಗೆ ಪರಮಾನಂದವಾದಂತಿತ್ತು) ಸಾಮಾನ್ಯವಾಗಿ ನಾವು ಯಾವ ಯಾವ ಹಣ್ಣುಗಳನ್ನು ತಿನ್ನುತ್ತೇವೆ?”

(ವಿದ್ಯಾರ್ಥಿನಿಯರು ತಮಗೆ ತಿಳಿದಿದ್ದ ಹಣ್ಣುಗಳ ಹೆಸರುಗಳನ್ನು ಹೇಳ ತೋಡಗಿದರು)

“ಬಾಳೆಹಣ್ಣು, ಕಿತ್ತಲೆಹಣ್ಣು, ದ್ರಾಕ್ಷಿ, ಸೇಬು, ಮಾವಿನ ಹಣ್ಣು---“ (ಮಾವಿನ ಹಣ್ಣಿನ ಹೆಸರು ಕೇಳಿದೊಡನೆ ಶಿಕ್ಷಕಿಯ ಮುಖದಲ್ಲಿ ಗೆಲುವಿನ ಸಂಭ್ರಮ ಕಾಣಿಸಿತು) “ವೆರಿ ಗುಡ್. ನಾವು ಮಾವಿನ ಹಣ್ಣನ್ನು ಆಹಾರವಾಗಿ ಸೇವಿಸುತ್ತೇವೆ. ಮಾವಿನ ಹಣ್ಣನ್ನು ನಾವು ಹೇಗೆ ತಿನ್ನುತ್ತೇವೆ?” (ಈ ಪ್ರಶ್ನೆಗೆ ಏನು ಉತ್ತರ ಕೊಡಬೇಕೆಂದು ವಿದ್ಯಾರ್ಥಿನಿಯರಿಗೆ ತಿಳಿಯಲಿಲ್ಲ) “ಹೀಗೆ ಮಿಸ್” ಅಂದ ಒಬ್ಬ ವಿದ್ಯಾರ್ಥಿನಿ ಮಾವಿನ ಹಣ್ಣಿನ ಸಿಪ್ಪೆಯನ್ನು ಹಲ್ಲಿನಿಂದ ಕಚ್ಚಿ ಸುಲಿದು ಹಣ್ಣು ತಿನ್ನುವುದನ್ನು ಅಭಿನಯಿಸಿ ತೋರಿಸಿದಳು “ಹೌದು. ಸಿಪ್ಪೆ ತೆಗೆದು ತಿರುಳನ್ನು ತಿನ್ನುತ್ತೇವೆ. ತಿರುಳು ತಿಂದ ಮೇಲೆ ಉಳಿಯುವುದೇನು?” “ಗೊರಟು” “ಕರೆಕ್ಟ್. ಗೊರಟನ್ನು ಏನು ಮಾಡುತ್ತೇವೆ?” “ಬಿಸಾಡುತ್ತೇವೆ” (ಶಿಕ್ಷಕಿಯ ಮುಖದಲ್ಲಿ ಒಂದು ಮಹಾಯುದ್ಧ ಗೆದ್ದ ಸಂಭ್ರಮ) “ವೆರಿ ಗುಡ್. ಈ ದಿನ ನಾವು ಸಸ್ಯಗಳಲ್ಲಿ ಹೇಗೆಲ್ಲ ಬೀಜ ಪ್ರಸಾರವಾಗುತ್ತದೆ ಎಂಬುದನ್ನು ತಿಳಿಯೋಣ”

ವೀಕ್ಷಕನಾಗಿದ್ದ ನನಗೆ ದಿಗ್ಭ್ರಮೆ. ಆಲ್ ಫ್ರೆಡ್ ಹಿಚ್ ಕಾಕ್ ಸಿನೆಮಗಳಲ್ಲಿ ಇರುವಂತೆ, ಪೀಠಿಕೆ ಮುಗಿಯುವ ತನಕ ಪಾಠ ಎತ್ತ ಸಾಗುತ್ತಿದೆ ಎಂಬ ಸುಳಿವೇ ಸಿಕ್ಕಿರಲಿಲ್ಲ. ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದಕ್ಕೆ ಅತ್ಯುತ್ತಮ ಉದಾಹರಣೆ ಆಗಬಹುದೇನೋ?. ಅಂದಹಾಗೆ ಈ ಪೀಠಿಕೆ ಸಾಧಿಸಿದ್ದೇನು, ನೀವೇ ಆಲೋಚಿಸಿ. ಉದ್ದೇಶಿತ ಕಾರ್ಯಗಳು ಜರಗಿದವೇ ಎಂಬುದನ್ನು ನೀವೇ ನಿರ್ಧರಿಸಿ.

೨. ಈ ಮುಂದೆ ಉದಾಹರಿಸಿರುವ ಪೀಠಿಕೆಗಳನ್ನು ಗಮನಿಸಿ. ಇವು ನಾನು ವೀಕ್ಷಿಸಿದ ಸಾವಿರಾರು ಪಾಠಗಳಲ್ಲಿ ವಿದ್ಯಾರ್ಥಿ-ಶಿಕ್ಷಕರು ಹಾಕಿದ ಪೀಠಿಕೆಗಳ ಪ್ರಾತಿನಿಧಿಕ ನಮೂನೆಗಳು.

(ಅ) ಕನ್ನಡ ಭಾಷಾ ಪಾಠ: “ಮಕ್ಕಳೇ, ಭಾರತಕ್ಕೆ ಸ್ವಾತಂತ್ರ್ಯ ದೊರೆತದ್ದು ಯಾವಾಗ?” “ಆಗಸ್ಟ್ ೧೫, ೧೯೪೭” “ಗುಡ್, ಈ ಸ್ವಾತಂತ್ರ್ಯ ನಮಗೆ ದೊರೆಯುವಂತೆ ಮಾಡಲು ಹೋರಾಡಿದವರ ಪೈಕಿ ನಿಮಗೆ ತಿಳಿದಿರುವವರನ್ನು ಹೆಸರಿಸಿ” “ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರ ಲಾಲ್ ನೆಹರು” “ಗುಡ್, ಗಾಂಧಿಯವರ ಪೂರ್ಣ ಹೆಸರೇನು?” “ -----“ “ಯಾರಿಗೂ ಗೊತ್ತಿಲ್ವ. ಪರವಾಗಿಲ್ಲ, ನಾನೇ ಹೇಳ್ತೇನೆ. ಅವರ ಪೂರ್ಣ ಹೆಸರು ಮೋಹನ್ ದಾಸ್ ಕರಮಚಂದ್ ಗಾಂಧಿ ಅಂತ. ಅವರ ಪೂರ್ಣ ಹೆಸರೇನು?” “ಮೋಹನ್ ದಾಸ್ ಕರಮಚಂದ್ ಗಾಂಧಿ” “ಸರಿ. ಇವತ್ತು ನಾವು ಅವರ ಬಾಲ್ಯ ಹೇಗಿತ್ತು ಎಂಬುದನ್ನು ‘ನನ್ನ ಬಾಲ್ಯ’ ಎಂಬ ಪಾಠದಿಂದ ತಿಳಿಯೋಣ

(ಆ) ವಿಜ್ಞಾನ ಪಾಠ: “ಮಾನವ ದೇಹದಲ್ಲಿ ಇರುವ ಜ್ಞಾನೇಂದ್ರಿಯಗಳು ಯಾವುವು?” “ಕಣ್ಣು, ಕಿವಿ, ಮೂಗು, ಚರ್ಮ, ನಾಲಗೆ” “ಗುಡ್. ಇವುಗಳ ಪ್ರಧಾನ ಕಾರ್ಯಗಳೇನು?” “ನೋಡಲು ಕಣ್ಣು, ಕೇಳಲು ಕಿವಿ, ------“ “ವೆರಿ ಗುಡ್. ಇವತ್ತು ನಾವು ಕಣ್ಣಿನ ರಚನೆ ಹೇಗಿದೆ, ಭಾಗಗಳು ಯಾವುವು ಎಂಬುದನ್ನು ತಿಳಿಯೋಣ”

(ಇ) ಇತಿಹಾಸ ಪಾಠ: “ದಕ್ಷಿಣ ಭಾರತವನ್ನು ಹಿಂದೆ ಆಳಿದ ರಾಜವಂಶಗಳ ಪೈಕಿ ನಿಮಗೆ ತಿಳಿದವನ್ನು ಹೆಸರಿಸಿ” “ ಪಾಂಡ್ಯರು” “ಗುಡ್. ಮತ್ತೆ?” “ಚೋಳರು” “ಸರಿ. ಮತ್ತೆ?” ‘ಹೊಯ್ಸಳರು” “ಸರಿ. ಮತ್ತೆ?” “ಚೇರರು” “ ಸರಿ. ಮತ್ತೆ, ಕರ್ನಾಟಕದಲ್ಲಿ?” “ಕದಂಬರು” “ ಸರಿ. ಮತ್ತೆ” “ಚಾಲುಕ್ಯರು” “ವೆರಿ ಗುಡ್. ಈ ದಿನ ನಾವು ಚಾಲುಕ್ಯರ --------“

(ಈ) ಗಣಿತ ಪಾಠ: “ನಾವು ನಮ್ಮ ಉಳಿತಾಯದ ಹಣವನ್ನು ಸಾಮಾನ್ಯವಾಗಿ ಎಲ್ಲಿ ಇಡುತ್ತೇವೆ?” “ಬ್ಯಾಂಕಿನಲ್ಲಿ” “ಗುಡ್. ಬ್ಯಾಂಕಿನಲ್ಲಿ ಹಣ ಇಟ್ಟದ್ದರಿಂದ ನಮಗೇನು ಲಾಭವಾಗುತ್ತದೆ?” “ಕಳ್ಳರು ಕದಿಯುವುದಿಲ್ಲ” “ ಹೌದು. ನಮ್ಮ ಹಣ ಭದ್ರವಾಗಿರುತ್ತದೆ. ಅದು ಬಿಟ್ಟು, ಬೇರೇನು ಲಾಭ?” “ಬಡ್ಡಿ ಸಿಕ್ಕುತ್ತದೆ” “ವೆರಿ ಗುಡ್. ಈ ದಿನ ನಾವು ಸರಳ ಬಡ್ಡಿ ಅಂದರೇನು -------“

ಈ ಪೀಠಿಕೆಗಳನ್ನು ನೋಡಿದಾಗ ಇವು ಕಾಟಾಚಾರಕ್ಕೆ ಪೀಠಿಕೆ ಹಾಕಿದ ಶಾಸ್ತ್ರ ಮಾಡಲೋಸುಗ ಹಾಕಿದವು ಅನ್ನಿಸುವುದಿಲ್ಲವೇ? ಹೇಗಾದರೂ ಮಾಡಿ ಪಾಠದ ಹೆಸರನ್ನು ಹೇಳಿಸುವುದೇ ಪೀಠಿಕೆಯ ಉದ್ದೇಶವಾಗಿತ್ತು ಅನ್ನಿಸುವುದಿಲ್ಲವೇ? ಇಲ್ಲಿ ನಮೂದಿಸಿದ ಎಲ್ಲ ಉದಾಹರಣೆಗಳಲ್ಲಿ ಪಾಠದ ಹೇಳಿಸಿದ್ದನ್ನು ಬಿಟ್ಟರೆ ಬೇರೇನನ್ನೂ ಸಾಧಿಸಿಲ್ಲ. ಇಂಥ ಪೀಠಿಕೆಗಳು ನಿಷ್ಪ್ರಯೋಜಕ ಅನ್ನುವುದು ಶಿಕ್ಷಕರಿಗೂ ತಿಳಿದಿದೆ. ದುರದೃಷ್ಟವಶಾತ್ ಉತ್ತಮ ಪೀಠಿಕೆ ಹೇಗೆ ಹಾಕಬೇಕೆಂಬುದು ಅವರಿಗೆ ತಿಳಿದಿಲ್ಲ ಅಥವ ಅದಕ್ಕೆ ಬೇಕಾದ ಸಾಮರ್ಥ್ಯ ಅವರಲ್ಲಿ ಇಲ್ಲ. ಎಂದೇ, ತನಿಖೆಯ ಸನ್ನಿವೇಶ ಬಿಟ್ಟರೆ ಬೇರೆ ಸಮಯದಲ್ಲಿ ಪೀಠಿಕೆ ಹಾಕುವ ಗೋಜಿಗೇ ಹೋಗುವುದಿಲ್ಲ. ಬಹುಮಂದಿ ಶಿಕ್ಷಕರು ಶಾಸ್ತ್ರೋಕ್ತವಾಗಿ ಪಾಠ ಆರಂಭಿಸುವುದು ಹೇಗೆಂಬುದನ್ನು ಅರ್ಥಮಾಡಿಕೊಂಡೇ ಇಲ್ಲ. ತತ್ಪರಿಣಾಮವಾಗಿ ಅವರು ಶಾಸ್ತ್ರೋಕ್ತವಾಗಿ ಪಾಠ ಆರಂಭಿಸುವುದೇ ಇಲ್ಲ. ಪರಿವೀಕ್ಷಕರು ಅಥವ ಇತರ ಮೇಲಧಿಕಾರಿಗಳು ಪಾಠವೀಕ್ಷಣೆಗೆ ಬಂದಂದು ಮಾತ್ರ ಕಾಟಾಚಾರಕ್ಕೆ ಪೀಠಿಕೆ ಹಾಕಿದ ಶಾಸ್ತ್ರ ಮಾಡುತ್ತಾರೆ. ಅವರ ಪೈಕಿ ಬಹುಮಂದಿ ಅದನ್ನು ಆಕ್ಷೇಪಿಸುವುದೂ ಇಲ್ಲ.

೩. ವಿದ್ಯಾರ್ಥಿ-ಶಿಕ್ಷಕನೊಬ್ಬ ಮಾಡುತ್ತಿದ್ದ ಇತಿಹಾಸ ಪಾಠದಲ್ಲಿ ಪಾಟಲೀಪುತ್ರದ ಉಲ್ಲೇಖವಿತ್ತು. ಆ ಸಂದರ್ಭ ಬಂದಾಗ ಆತ ತಾನು ತಂದಿದ್ದ ಭಾರತ ಭೂಪಟವನ್ನು ಕಪ್ಪುಹಲಗೆಯ ಪಕ್ಕದಲ್ಲಿದ್ದ ಮೊಳೆಗೆ ನೇತು ಹಾಕಿದ. “ನೀನು ಬಾಪ್ಪ. ಭೂಪಟದಲ್ಲಿ ಪಾಟಲೀಪುತ್ರ ಎಲ್ಲಿದೆ ಎಂಬುದನ್ನು ತೋರಿಸು” ಆ ವಿದ್ಯಾರ್ಥಿ ಭೂಪಟದಲ್ಲಿ ಕನ್ಯಾಕುಮಾರಿಯಿಂದ ಆರಂಭಿಸಿ ಎಲ್ಲ ಮುದ್ರಿತ ಹೆಸರುಗಳ ನಡುವೆ ಪಾಟಲೀಪುತ್ರ ಹುಡುಕಲಾರಂಭಿಸಿದ, ಸಿಕ್ಕಲಿಲ್ಲ. “ಸಿಕ್ಕಲಿಲ್ವೇನೋ. ನೀನು ಬಾರೋ. ತೋರಿಸು ಪಾಟಲೀಪುತ್ರ ಭೂಪಟದಲ್ಲಿ ಎಲ್ಲಿದೆ ಅಂತ” ಅವನೂ ಮೊದಲಿನವನಂತೆಯೇ ಹುಡುಕಿದ, ಸಿಕ್ಕಲಿಲ್ಲ. “ಇಬ್ರಿಗೂ ಗೊತ್ತಾಗ್ಲಿಲ್ವ. ಸರಿ ಬಿಡಿ, ನಾನೇ ತೋರಿಸ್ತೇನೆ. ಸರಿಯಾಗಿ ನೋಡ್ಕೊಳ್ಳಿ”. ಭೂಪಟದಲ್ಲಿ ಪಾಟಲೀಪುತ್ರ ಇರಬೇಕಾದ ಸ್ಥಳದಲ್ಲಿ ಇರಲೇ ಇಲ್ಲ. ದಿಗ್ಭ್ರಾಂತನಾಗಿ ಭೂಪಟವನ್ನೇ ದುರುಗುಟ್ಟಿ ನೋಡಿ “ಓ ರಾಂಗ್ ಮ್ಯಾಪ್ ತಂದ್ಬಿಟ್ಟಿದ್ದೇನೆ. ಇದರಲ್ಲಿ ಪಾಟಲೀಪುತ್ರ ಗುರುತಿಸಿಲ್ಲ. ಪಾಟಲೀಪುತ್ರ ಸುಮಾರಾಗಿ ಇಲ್ಲಿ ಬರುತ್ತೆ ನೋಡಿ” ಅಂದು ತನ್ನ ಅಂಗೈಯನ್ನು ಭೂಪಟದ ಮೇಲೆ ಒಂದೆಡೆ ಇಟ್ಟ.

ಇದಕ್ಕೆ ಪ್ರತಿಕ್ರಿಯೆಯಾಗಿ ನನ್ನದು ಮೂರು ಪ್ರಶ್ನೆಗಳಿವೆ. ತರಬೇಕಾಗಿದ್ದ ಭೂಪಟಕ್ಕೆ ಬದಲಾಗಿ ಯಾವುದೋ ಭೂಪಟ ತರುವವ ಎಂಥ ಶಿಕ್ಷಕ? ಭೂಪಟದಲ್ಲಿ ಮುದ್ರಿಸಿರುವ ಹೆಸರುಗಳ ಪೈಕಿ ಅಪೇಕ್ಷಿತ  ಸ್ಥಳ ತೋರಿಸುವುದಕ್ಕೆ ಬದಲಾಗಿ ಒಂದಷ್ಟಗಲದ ಕ್ಷೇತ್ರ ತೋರಿಸಿ ‘ಸುಮಾರಾಗಿ ಇಲ್ಲಿದೆ’ ಅಂದದ್ದರಿಂದ ಏನು ಕಲಿಸಿದಂತಾಯಿತು? ಭೂಪಟದಲ್ಲಿ ಮುದ್ರಿಸಿರುವ ಹೆಸರುಗಳ ಪೈಕಿ ಅಪೇಕ್ಷಿತ ಹೆಸರು ಹುಡುಕಿಸುವುದರ ಉದ್ದೇಶ ಏನು?

ಇನ್ನೊಂದು ಅನುಭವ: ವಿದ್ಯಾರ್ಥಿ-ಶಿಕ್ಷಕನೊಬ್ಬ ಮಾಡುತ್ತಿದ್ದ ಭೂಗೋಲಶಾಸ್ತ್ರ ಪಾಠದಲ್ಲಿ ನರ್ಮದಾ ನದಿಯ ಉಲ್ಲೇಖವಿತ್ತು. ಆ ಸಂದರ್ಭ ಬಂದಾಗ ಆತ ತಾನು ತಂದಿದ್ದ ಭಾರತದ ರಾಜಕೀಯ ಭೂಪಟವನ್ನು ಕಪ್ಪುಹಲಗೆಯ ಪಕ್ಕದಲ್ಲಿದ್ದ ಮೊಳೆಗೆ ನೇತು ಹಾಕಿದ. “ನೀನು ಬಾಪ್ಪ. ಭೂಪಟದಲ್ಲಿ ನರ್ಮದಾ ನದಿ ಎಲ್ಲಿದೆ ಎಂಬುದನ್ನು ತೋರಿಸು” ಆ ವಿದ್ಯಾರ್ಥಿ ಭೂಪಟದಲ್ಲಿ ಕನ್ಯಾಕುಮಾರಿಯಿಂದ ಆರಂಭಿಸಿ ಎಲ್ಲ ಮುದ್ರಿತ ಹೆಸರುಗಳ ನಡುವೆ ನರ್ಮದಾ ನದಿ ಎಂದು ಮುದ್ರಿಸಿದ್ದನ್ನು ಹುಡುಕಿ ಬಲು ಖುಷಿಯಿಂದ “ಇಲ್ಲಿದೆ ಸಾರ್” ಅನ್ನುತ್ತಾ ತೋರಿಸಿಯೇ ಬಿಟ್ಟ, ವಿದ್ಯಾರ್ಥಿ-ಶಿಕ್ಷಕನೂ ಸಂತೋಷದಿಂದ “ವೆರಿ ಗುಡ್. ಎಲ್ಲರೂ ನೋಡಿದಿರಿ ತಾನೆ? ನರ್ಮದಾ ನದಿ ಎಲ್ಲಿದೆಯೆಂದು” ಅನ್ನುತ್ತಾ ತಾನೂ ನರ್ಮದಾ ನದಿ ಎಂಬ ಅಕ್ಷರಗಳನ್ನು ತೋರಿಸಿ ಪಾಠ ಮುಂದುವರಿಸಿದ.

ಪುನಃ ಇದಕ್ಕೆ ಪ್ರತಿಕ್ರಿಯೆಯಾಗಿ ನನ್ನದು ಕೆಲವು ಪ್ರಶ್ನೆಗಳಿವೆ. ಭೂಪಟದಲ್ಲಿ ಮುದ್ರಿಸಿರುವ ಹೆಸರುಗಳ ಪೈಕಿ ಅಪೇಕ್ಷಿತ ಹೆಸರು ಹುಡುಕಿಸುವುದರ ಉದ್ದೇಶ ಏನು? ನದಿಯ ಪಥವನ್ನು ಗರುತಿಸುವುದಕ್ಕೆ ಬದಲಾಗಿ ಅದರ ಮುದ್ರಿತ ಹೆಸರನ್ನು ತೋರಿಸಿದರೆ ಏನು ಪ್ರಯೋಜನ? ಭೂಗೋಲಶಾಸ್ತ್ರದ ಪಾಠ ಮಾಡುವಾಗ ರಾಜಕೀಯ ಭೂಪಟವನ್ನು ಪ್ರದರ್ಶಿಸುವುದು ಸರಿಯೇ?

ಭೂಪಟ ಓದುವ ಕೌಶಲ ಬೆಳೆಸುವುದು ಇತಿಹಾಸ ಮತ್ತು ಭೂಗೋಲಶಾಸ್ತ್ರ ಬೋಧನೆಯ ಉದ್ದೇಶೀತ ಗುರಿಗಳ ಪೈಕಿ ಒಂದು. ಈ ಗುರಿ ಸಾಧನೆಗಾಗಿ ನಾನು ನೋಡಿದ ಬಹುಮಂದಿ ಶಿಕ್ಷಕರು ಅನುಸರಿಸುತ್ತಿರುವ ಈ ಕ್ರಮ ಸರಿಯೇ? ನಾನು ಓದುತ್ತಿರುವಾಗ ಪರಿಸ್ಥಿತಿ ಇಂತಿರಲಿಲ್ಲ. ನಿಗದಿತ ದಿನಗಳಂದು ನಾವು ಒಳ್ಳೆಯ ‘ಅಟ್ಲಾಸ್’ ಒಂದನ್ನು ಸಮಾಜಶಾಸ್ತ್ರ ಪಾಠ ಇರುವ ದಿನಗಳಂದು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಿತ್ತು. ‘ಅಟ್ಲಾಸ್’ ನೆರವಿನಿಂದ ಅಪೇಕ್ಷಿತ ಸ್ಥಳವನ್ನು ಗುರುತಿಸುವುದು ಹೇಗೆಂಬುದನ್ನು ಅಂದು ಕಲಿತದ್ದು ಇಂದೂ ನೆನಪಿದೆ.

೪. ಭೌತಶಾಸ್ತ್ರದ ವಿದ್ಯಾರ್ಥಿ-ಶಿಕ್ಷಕನೊಬ್ಬ ಮಾಡಿದ ಕಸರತ್ತು ಇಂತಿತ್ತು:

“(ಲಾಳಾಕೃತಿಯ ಕಾಂತ ತೋರಿಸಿ) ಈ ಕಾಂತ ಯಾವ ಆಕಾರದಲ್ಲಿದೆ?” “ಕುದುರೆ ಲಾಳದ ಹಾಗಿದೆ ಸಾರ್” “ಗುಡ್. ಇದು ನೋಡಲು ಲಾಳದಂತಿದೆ. ಹಾಗಾದರೆ ಇದನ್ನು ಏನಂತ ಕರೀಬಹುದು?” “ಲಾಳದಂತಿರುವ ಕಾಂತ” “ಲಾಳಕಾಂತ ಅಂತ ಕರಿಬಹುದಲ್ವ?” ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು. “(ಆಯತಾಕಾರದ ಪಟ್ಟಿಯಂತಿದ್ದ ಕಾಂತ ತೋರಿಸಿ) ಈ ಕಾಂತ ಯಾವ ಆಕಾರದಲ್ಲಿದೆ?” “ಮರದ ಪಟ್ಟಿಯ ಆಕಾರದಲ್ಲಿದೆ” “ಪಟ್ಟಿಯ ಹಾಗಿದೆಯಾ? ಇನ್ಯಾರಾದರೂ ಹೇಳ್ತೀರಾ” “ಕೋಲಿನ ಹಾಗಿದೆ ಸಾರ್” “ಸರಿ. ಕೋಲಿಗೆ ಇನ್ನೊಂದು ಹೆಸರಿದೆ. ಯಾರಿಗೆ ಗೊತ್ತಿದೆ?” ತರಗತಿಯಲ್ಲಿ ದಿವ್ಯಮೌನ. “ಯಾರಿಗೂ ಗೊತ್ತಿಲ್ವ? ಸರಿ ಹಾಗಾದರೆ ನಾನೇ ಹೇಳ್ತೇನೆ. ಕೋಲಿಗೆ ದಂಡ ಅಂತಲೂ ಹೇಳ್ತಾರೆ. ಹಾಗಾದರೆ ಈ ಕಾಂತವನ್ನು ಏನಂತ ಕರೀಬಹುದು?” ಇಡೀ ತರಗತಿ ಕಿರುಚಿತು “ದಂಡಕಾಂತ (ಬಾರ್ ಮ್ಯಾಗ್ನೆಟ್)” ವಿದ್ಯಾರ್ಥಿ-ಶಿಕ್ಷಕ ವಿಜಯದ ನಗೆಯೊಂದಿಗೆ ನನ್ನತ್ತ ನೋಡಿ ಪಾಠ ಮುಂದುವರಿಸಿದ.

ನನ್ನ ಪ್ರತಿಕ್ರಿಯೆ: ಕ್ಷುಲ್ಲಕವೂ ಅಮುಖ್ಯವೂ ಆದ ಅಂಶಗಳಿಗೆ ಅತೀ ಪ್ರಾಮುಖ್ಯ ನೀಡಲಾಗಿದೆ. ಹೆಸರು ಹೇಳಿಸುವುದಕ್ಕೆ ಕಸರತ್ತು ಮಾಡುವುದಕ್ಕೆ ಬದಲಾಗಿ “ವಸ್ತುವಿನ ಆಕಾರವನ್ನು ಆಧರಿಸಿ ಅದಕ್ಕೆ ನಾಮಕರಣ ಮಾಡುವ ಸಂಪ್ರದಾಯವೂ ವಿಜ್ಞಾನದಲ್ಲಿ ಇದೆ” ಎಂಬುದನ್ನು ವಿದ್ಯಾರ್ಥಿಗಳಿಂದ ಹೇಳಿಸಿದ್ದರೆ ಪಾಠ ಅರ್ಥಪೂರ್ಣವಾಗುತ್ತಿತ್ತು.

೫. ರಸಾಯನ ವಿಜ್ಞಾನದ ವಿದ್ಯಾರ್ಥಿ-ಶಿಕ್ಷಕಿಯೊಬ್ಬಳ ಫಜೀತಿ ಮತ್ತು ಆಕೆ ಅದನ್ನು ನಿಭಾಯಿಸಿದ ರೀತಿ ಇಂತಿತ್ತು:

ಪಾಠ: ಪ್ರಯೋಗಶಾಲೆಯಲ್ಲಿ ಕ್ಲೋರಿನ್ ಅನಿಲ ತಯಾರಿಸುವ ವಿಧಾನ. ಕಾಟಾಚಾರದ ಪೀಠಿಕೆ ಹಾಕಿದ ನಂತರ ಹೆಚ್ಚುಕಮ್ಮಿ ಶಾಸ್ತ್ರೋಕ್ತ ವಿಧಾನದಲ್ಲಿ ಪಾಠ ಮಾಡುತ್ತಾ ಕ್ಲೋರಿನ್ ತಯಾರಿಸಿ ತೋರಿಸುವ ಹಂತಕ್ಕೆ ತಲುಪಿದ ಬಳಿಕ ನಡೆದ ವಿದ್ಯಮಾನ ಇದು.

“(ಸ್ಪಿರಿಟ್ ದೀಪ ಹೊತ್ತಿಸಿ) ಈಗ ನಾನೇನು ಮಾಡಿದೆ?” “ಸ್ಪಿರಿಟ್ ದೀಪ ಹೊತ್ತಿಸಿದಿರಿ ಟೀಚರ್” “ಏಕೆ?” ಪ್ಲಾಸ್ಕ್ ನಲ್ಲಿರುವ ರಾಸಾಯನಿಕಗಳನ್ನು ಕಾಯಿಸಲು” “ಫ್ಲಾಸ್ಕ್ ಒಳಗೆ ಏನಾಗುತ್ತಿದೆ ಎಂಬುದನ್ನೂ ಅನಿಲದ ಜಾಡಿಯ ಒಳಗೆ ಬಣ್ಣದಲ್ಲಿ ಆಗುವ ವ್ಯತ್ಯಾಸವನ್ನೂ ಗಮನವಿಟ್ಟು ನೋಡುತ್ತಿರಿ” ಮಕ್ಕಳು ಕುತೂಹಲದಿಂದ ನೋಡುತ್ತಿರುತ್ತಾರೆ. ೫-೬ ನಿಮಿಷಗಳ ಬಳಿಕ “ ಫ್ಲಾಸ್ಕಿನೊಳಗೆ ಏನಾಗುತ್ತಿದೆ?” “ಗುಳ್ಳೆಗಳು ಉಂಟಾಗುತ್ತಿವೆ” “ಅಂದರೆ ಕ್ಲೋರಿನ್ ಅನಿಲ ಉತ್ಪತ್ತಿ ಆಗುತ್ತಿದೆ. ಈಗ ಅನಿಲದ ಜಾಡಿಯನ್ನು ನೋಡುತ್ತಿರಿ. ಅದರೊಳಗೆ ಬಣ್ಣದಲ್ಲಿ ಏನಾದರೂ ಬದಲಾವಣೆ ಆಗತ್ತದೆಯೇ ಎಂಬುದನ್ನು ಗಮನಿಸುತ್ತಿರಿ” ವಿದ್ಯಾರ್ಥಿಗಳೂ ನಾನೂ ವಿದ್ಯಾರ್ಥಿ-ಶಿಕ್ಷಕಿಯೂ ಬಲು ಕುತೂಹಲದಿಂದ ಎಷ್ಟು ಸಮಯ ನೋಡಿದರೂ ಏನೂ ಆಗಲಿಲ್ಲ. ವಿದ್ಯಾರ್ಥಿ-ಶಿಕ್ಷಕಿ ನಸು ಹಸಿರು ಬಣ್ಣದ ಕ್ಲೋರಿನ್ ಅನಿಲದ ಜಾಡಿಯಲ್ಲಿ ಏಕೆ ಸಂಗ್ರಹವಾಗುತ್ತಿಲ್ಲ ಎಂದು ಚಿಂತಿತಳಾದಂತಿತ್ತು. ವಿದ್ಯಾರ್ಥಿಗಳು ತಮ್ಮತಮ್ಮಲ್ಲಿ ಮಾತನಾಡ ತೊಡಗಿದರು. ಪ್ರಯೋಗ ಏಕೆ ವಿಫಲವಾಯಿತೆಂಬುದು ವಿದ್ಯಾರ್ಥಿ-ಶಿಕ್ಷಕಿಗೆ ಹೊಳೆಯಲೇ ಇಲ್ಲ. “ಮಕ್ಕಳೇ, ಇಷ್ಟು ಹೊತ್ತಿಗೆ ಕ್ಲೋರಿನ್ ಅನಿಲದ ಜಾಡಿಯಲ್ಲಿ ಸಂಗ್ರಹವಾಗ ಬೇಕಿತ್ತು. ಈ ರಾಸಾಯನಿಕಗಳು ಬಹಳ ಹಳೆಯವಾಗಿರಬೇಕು. ಅವು ಸತ್ವಹೀನವಾಗಿರುವುದರಿಂದ ಅನಿಲ ಉತ್ಪತ್ತಿ ಆಗುತ್ತಿಲ್ಲ” ಎಂದು ತೇಪೆ ಹಾಕಿ ಪಾಠ ಮುಂದುವರಿಸಿದಳು.

ಫ್ಲಾಸ್ಕಿನಲ್ಲಿ ಅನಿಲ ಉತ್ಪತ್ತಿಯಾಗುತ್ತಿದ್ದರೂ ಅದು ಅನಿಲದ ಜಾಡಿಯನ್ನು ತಲುಪುತ್ತಿಲ್ಲ ಅಂದ ಮೇಲೆ ಅದು ಮಧ್ಯದಲ್ಲಿ ಎಲ್ಲಿಯೋ ಸೋರಿ ಹೋಗುತ್ತಿರ ಬೇಕು ಎಂಬ ಸರಳ ಅಂಶ ಆಕೆಗೆ ಹೊಳೆಯಲೇ ಇಲ್ಲ. ವಾಸ್ತವವಾಗಿ ಆಕೆ ಉಪಕರಣದ ಜೋಡಣೆಯಲ್ಲಿ ಎಡವಿದ್ದಳು. ತಿಸೆಲ್ ಆಲಿಕೆಯ ಕೆಳತುದಿ ರಾಸಾಯನಿಕಗಳ ದ್ರವೀಯ ಮಿಶ್ರಣದಲ್ಲಿ ಮುಳುಗಿರಲಿಲ್ಲ. ಆದ್ದರಿಂದ ಉತ್ಪತ್ತಿಯಾದ ಅನಿಲ ತಿಸಲ್ ಆಲಿಕೆಯ ಮೂಲಕವೇ ವಾತಾವರಣಕ್ಕೆ ಸೇರುತ್ತಿತ್ತು. ಅಜಾಗರೂಕತೆಯೋ ಅಜ್ಞಾನವೋ ಪಾಠವನ್ನು ಕುಲಗೆಡಿಸಿತ್ತು. ಇಂಥ ಸನ್ನಿವೇಶದಲ್ಲಿ ಪರಿಪೂರ್ಣ ಕಲಿಕೆ ಜರಗಲು ಸಾಧ್ಯವೇ ಇಲ್ಲ.

2 June 2012

ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೧

ಒಂದು ವರ್ಷ ಪಾಲಿಟೆಕ್ನಿಕ್ ನಲ್ಲಿ ‘ಡೆಮಾನಸ್ಟ್ರೇಟರ್ ಇನ್ ಫಿಸಿಕ್ಸ್’, ೫ ವರ್ಷ ಪ್ರೌಢಶಾಲಾ ಶಿಕ್ಷಕ, ೨೯ ವರ್ಷ ಬಿ ಎಡ್ ಕಾಲೇಜಿನಲ್ಲಿ ಉಪನ್ಯಾಸಕ-ಪ್ರವಾಚಕ-ಪ್ರಾಧ್ಯಾಪಕ-ಪ್ರಾಂಶುಪಾಲ, ನಿವೃತ್ತಿ ನಂತರದ ೩ ವರ್ಷ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ -ಇಂತು ಒಟ್ಟು ೩೮ ವರ್ಷಕಾಲ ನಾನಾ ಸ್ತರಗಳಲ್ಲಿ ಅಧ್ಯಾಪನ ವೃತ್ತಿಯಲ್ಲಿದ್ದ ನಾನು ನನ್ನ ವೃತ್ತಿಜೀವನದ ಸಿಂಹಾವಲೋಕನ ಮಾಡಿದಾಗ ಮನಃಪಟಲದಲ್ಲಿ ಮೂಡಿದ ಸ್ವಾರಸ್ಯಕರ ಅನುಭವಗಳ ಪೈಕಿ ಕೆಲವನ್ನು ಕಂತುಗಳಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಮೊದಲನೇ ಕಂತಿನಲ್ಲಿ ಪ್ರೌಢಶಾಲಾ ಶಿಕ್ಷಕನಾಗಿದ್ದಾಗಿನ ಅನುಭವಗಳನ್ನು ಮೆಲುಕು ಹಾಕುತ್ತಿದ್ದೇನೆ. ಶಿಕ್ಷಕ ವೃತ್ತಿಯಲ್ಲಿ ಇರುವವರು ಇವುಗಳಿಂದ ತುಸು ಲಾಭ ಪಡೆಯಬಹುದು. ಇತರರಿಗೆ ತುಸು ಮನರಂಜನೆ ಆದೀತು ಎಂದು ಆಶಿಸುತ್ತೇನೆ. ಮೊದಲನೇ ಕಂತಿನ

೧. ೧೯೬೭-೭೦ ರ ಅವಧಿ. ಮಂಡ್ಯ ಜಿಲ್ಲೆಯ ಹಳ್ಳಿಯಂದರ ಪ್ರೌಢಶಾಲೆಯ ಶಿಕ್ಷಕ ನಾನು. ಇಂದಿನಂತೆ ಅಂದು ಕೂಡ ಪ್ರಾಥಮಿಕಶಾಲಾ ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಪ್ರೌಢಶಾಲಾ ಶಿಕ್ಷಕರೂ, ನಮಗಿಂತ ಜಾಸ್ತಿ ಕಲಿತಿದ್ದೇವೆ ಎಂಬ ಕೊಬ್ಬು ಪ್ರೌಢಶಾಲಾ ಶಿಕ್ಷಕರಿಗೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರು ಖಾಸಗಿಯಾಗಿ ದೂರುತ್ತಿದ್ದರು. ಈ ಎರಡು ಶಿಕ್ಷಕ ವರ್ಗದ ನಡುವಿನ ಕಂದಕ ಮುಚ್ಚಿ ತನ್ಮೂಲಕ ಶಿಕ್ಷಣ ವ್ಯವಸ್ಥೆಯ ಉದ್ಧಾರ ಮಾಡಲೋಸುಗ ‘ಶಾಲಾ ಸಂಕೀರ್ಣ (ಸ್ಕೂಲ್ ಕಾಂಪ್ಲೆಕ್ಸ್)’ ಎಂಬ ಸರ್ಕಾರೀ ಪ್ರಾಯೋಜಿತ ಶೂನ್ಯ ವೆಚ್ಚದ ಕಾರ್ಯಕ್ರಮವೊಂದು ಅನುಷ್ಠಾನಗೊಂಡಿತು. ಈ ಕಾರ್ಯಕ್ರಮದನ್ವಯ ಪ್ರತೀ ಪ್ರೌಢಶಾಲೆಯ ಶಿಕ್ಷಕರು ಆ ಶಾಲೆಯ ಆಸುಪಾಸಿನ ಪ್ರಾಥಮಿಕ ಶಾಲೆಗಳ ಶಿಕ್ಷಕರೂ ತಿಂಗಳಿಗೊಂದಾವರ್ತಿ ಸಭೆ ಸೇರಿ ವಿಚಾರವಿನಿಮಯ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಕೌಶಲಾಭಿವೃದ್ಧಿಗೆ ಪೂರಕವಾಗಬಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೇ ಬೇಕಿತ್ತು. ಅಂಥ ಒಂದು ಸಭೇಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಇಂತೆಂದರು: “ನಿಮ್ಮ ವಿದ್ಯಾರ್ಥಿಗಳು ನಮ್ಮವರಿಗಿಂತ ದೊಡ್ಡವರು. ತಮ್ಮ ಜವಾಬ್ದಾರಿಯನ್ನು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಂಡವರು. ಅವರಿಗೆ ಪಾಠ ಮಾಡುವುದು ಸುಲಭ. ನಮ್ಮ ವಿದ್ಯಾರ್ಥಿಗಳು ಹಾಗಲ್ಲ. ಅವರಿಗೆ ಪಾಠ ಮಾಡುವುದು ಕಷ್ಟ. ಪ್ರಾಥಮಿಕ ಶಾಲೆಯಲ್ಲಿ ಬೋಧನಾನುಭವ ಇಲ್ಲದ ನಿಮಗೆ ಇದು ಅರ್ಥವಾಗುವುದಿಲ್ಲ. ನಮ್ಮ ಮಕ್ಕಳಿಗೆ ನೀವು ಒಂದು ಪೀರಿಯಡ್ ಪಾಠ ಮಾಡಿ ಸಾಕು. ನಮ್ಮ ಕಷ್ಟ ಏನೆಂಬುದು ನಿಮಗೇ ತಿಳಿಯುತ್ತದೆ”. ಅದಕ್ಕೆ ನನ್ನ ಪ್ರತಿಕ್ರಿಯೆ ಇಂತಿತ್ತು: ‘ಆ ಮಕ್ಕಳಿಗೆ ಪಾಠ ಮಾಡಲು ಅನುಸರಿಸ ಬೇಕಾದ ಶಾಸ್ತ್ರೋಕ್ತ ವಿಧಾನದಲ್ಲಿ ಪಾಠ ಮಾಡಿದರೆ ಕಷ್ಟವಾಗುವುದಿಲ್ಲ. ಇನ್ನು ತರಗತಿಯಲ್ಲಿ ಶಿಸ್ತಿನ ವಿಷಯ. ಆ ವಯಸ್ಸಿನ ಮಕ್ಕಳು ನಿಶ್ಶಬ್ದವಾಗಿ ೪೦-೪೫ ನಿಮಿಷ ಕುಳಿತು ಏಕಾಗ್ರತೆಯಿಂದ ಪಾಠ ಕೇಳಬೇಕೆಂದು ನಿರೀಕ್ಷಿಸುವುದೇ ತಪ್ಪು. ಕಲಿಕೆಯಲ್ಲಿ ಅಂತ್ಯಗೊಳ್ಳುವ ತುಂಟಾಟ ಅಶಿಸ್ತು ಅಲ್ಲ. ತುಂಟಾಟಕ್ಕೆ ತುಸು ಅವಕಾಶ ಒದಗಿಸುವ ಬೋಧನ ವಿಧಾನ ಅಳವಡಿಸಿಕೊಳ್ಳ ಬೇಕು”. ಅವರಂದರು: “ಭಾಷಣ ಮಾಡುವುದು ಸುಲಭ”. “ಅದು ನಿಮ್ಮ ಅಭಿಪ್ರಾಯ. ನನಗೇನೋ ನಿಮ್ಮನ್ನು ಉದ್ದೇಶಿಸಿ ಭಾಷಣ ಮಾಡುವುದಕ್ಕಿಂತ ಮಕ್ಕಳಿಗೆ ಪಾಠ ಮಾಡುವದೇ ಸುಲಭ ಅನ್ನಿಸುತ್ತದೆ. ಈ ವಾದ ಪ್ರತಿವಾದ ಮುಂದುವರಿಸುವ ಬದಲು ಒಂದು ಕೆಲಸ ಮಾಡೋಣ. ಮುಂದಿನ ಸಭೆಗೆ ಬರುವಾಗ ನಿಮ್ಮ ಶಾಲೆಯ ೩ ನೇ ತರಗತಿಯ ಮಕ್ಕಳನ್ನು ಕರೆತನ್ನಿ. ೮ ನೇ ತರಗತಿಯ ವಿಜ್ಞಾನ ಪುಸ್ತಕದಲ್ಲಿ ಇರುವ ‘ಕಾಂತಗಳು’ ಪಾಠದಲ್ಲಿರುವ ಕೆಲವು ಪರಿಕಲ್ಪನೆಗಳನ್ನು ನಾನು ಅವರಿಗೆ ಕಲಿಸುತ್ತೇನೆ. ಆದೀತೋ?” “೩ ನೇ ತರಗತಿಯ ಮಕ್ಕಳೇ ಯಾಕಾಗ ಬೇಕು?” “ನಾನು ಹೇಳಿಕೊಡಬೇಕೆಂದಿರುವ ಪರಿಕಲ್ಪನೆಗಳನ್ನು ಮನೋಗತ ಮಾಡಿಕೊಳ್ಳುವ ಸಾಮರ್ಥ್ಯ ಆ ವಯಸ್ಸಿನವರಿಗೆ ಇರುತ್ತದೆ ಎಂದು ನಾನು ತಿಳಿದಿರುವುದರಿಂದ”

ಮುಂದಿನ ಸಭೆಯಲ್ಲಿ ನಾನೇನು ಅಂದುಕೊಂಡಿದ್ದೆನೋ ಅದನ್ನು ಮಾಡಿ ತೋರಿಸಿದೆ (ಆ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಚಟುವಟಿಕೆಗಳ ಮುಖೇನ ಕಲಿಯುವುದಕ್ಕೆ ಒತ್ತು ಕೊಡಬೇಕು ಅನ್ನುತ್ತದೆ ಶಾಸ್ತ್ರ). ಪಾಠ ಆರಂಭಿಸಿ ೫ ನಿಮಿಷ ಆಗುವ ಹೊತ್ತಿಗೆ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಕೆಲವು ಶಿಕ್ಷಕರು ಡೆಸ್ಕ್ ಮೇಲೇರಿ ಕುಳಿತದ್ದನ್ನೂ ಗಮನಿಸಿದ್ದೆ. ಪಾಠ ಮುಗಿದ ನಂತರ ನಾನು ಮಾಡಿದ್ದರ ಗುಣಾವಗುಣಗಳ ವಿಮರ್ಶೆ ಮಾಡುವಂತೆ ಆಹ್ವಾನಿಸಿದೆ. ಅವರ ಪ್ರತಿಕ್ರಿಯೆ; “ ಐ-- ಬುಡಿ ಸಾ. ಒಳ್ಳೇ ಸಿನಿಮಾ ನೋಡಿದಂಗಾತು. ಈ ತರ ಪಾಠ ಮಾಡೋಕೆ ಎಲ್ಲರ್ಗೂ ಆಯ್ತದಾ”. ನನ್ನ ಪ್ರಶ್ನೆ - ‘ಇದೇನೂ ಕಲಿಯಲು ಬಲು ಕಷ್ಟವಾದ ಬ್ರಹ್ಮವಿದ್ಯೆಯಲ್ಲ. ಹುಟ್ಟಿನಿಂದಲೇ ಬರುವ ಕೌಶಲವೂ ಅಲ್ಲ. ಅಂದ ಮೇಲೆ ವೃತ್ತಿನಿಷ್ಠೆ ಮತ್ತು ಕಲಿಸಲೇ ಬೇಕೆಂಬ ತವಕ ಇರುವ ಯಾರಾದರೂ ಕಲಿಯಬಹುದಾದ್ದಲ್ಲವೇ?’ ನೀವೇ ಆಲೋಚಿಸಿ.

೨. ಅದೇ ಅವಧಿಯಲ್ಲಿ ಒಮ್ಮೆ ಶಿಕ್ಷಣ ಇಲಾಖೆಯ ‘ವಿಷಯ ಪರಿವೀಕ್ಷಕರ (ಸಬ್ಜೆಕ್ಟ್ ಇನ್ಸ್ ಪೆಕ್ಟರ್ಸ್)’ ತಂಡವೊಂದು ಶಾಲೆಗೆ ಭೇಟಿ ನೀಡಿತು. ಅಂದಿನ ೮ ನೇ ತರಗತಿಯ ವಿಜ್ಞಾನದಲ್ಲಿ ‘ಸಸ್ಯದ ಭಾಗಗಳು (ಪಾರ್ಟ್ಸ್ ಆಫ್ ಎ ಪ್ಲಾಂಟ್)’ ಎಂಬ ಪಾಠವೊಂದಿತ್ತು. ಅಂದಿನ ದಿನ ಆ ಪಾಠ ಮಾಡಬೇಕಿತ್ತು. ಹಳ್ಳಿ ಶಾಲೆಯಾದ್ದರಿಂದ ಹೊರಗಿನ ಬಯಲಿನಲ್ಲಿ ಸಸ್ಯಗಳಿಗೇನೂ ಕೊರತೆ ಇರಲಿಲ್ಲ. ತರಗತಿಗೆ ನಾನು ಪ್ರವೇಶಿಸುವ ಮುನ್ನವೇ ವಿಜ್ಞಾನ ಪರಿವೀಕ್ಷಕರು ಉಪಸ್ಥಿತರಿದ್ದರು. ತರಗತಿಯೊಳಕ್ಕೆ ಹೋದ ನಾನು ಅಂದು ಮಾಡುವ ಪಾಠದ ಶೀರ್ಷಿಕೆ ಹೇಳಿ, ಅದನ್ನು ಕಲಿಯಬೇಕಾದ ಆವಶ್ಯಕತೆಯ ಕುರಿತು ಕಿರುಚರ್ಚೆ ನಡೆಸಿ, ಎಲ್ಲರೂ ತಮ್ಮತಮ್ಮ ನೋಟ್ ಬುಕ್, ಪೆನ್ಸಿಲ್ ಮತ್ತು ರಬ್ಬರ್ (ಅರ್ಥಾತ್ ಇರೇಸರ್) ತೆಗೆದುಕೊಂಡು ನನ್ನೊಡನೆ ಬಯಲಿಗೆ ಬರುವಂತೆ ಹೇಳಿದೆ. ತುಸು ಗದ್ದಲ ಮಾಡುತ್ತಾ ಎಲ್ಲರೂ ಹೊರಬಂದರು. ಬಯಲು ತಲುಪಿದ ಬಳಿಕ ನನ್ನ ಸೂಚನೆ ಇಂತಿತ್ತು: ‘ಈಗ ಪ್ರತಿಯೊಬ್ಬರೂ ಸುಲಭವಾಗಿ ಬೇರುಸಹಿತ ಕೀಳಬಹುದಾದ ಪುಟ್ಟಪುಟ್ಟ ಸಸಿಗಳನ್ನು ಕಿತ್ತು ಬೇರಿಗೆ ಅಂಟಿಕೊಂಡಿರುವ ಮಣ್ಣನ್ನು ಜಾಗರೂಕತೆಯಿಂದ ತೆಗೆದು, ಆ ಸಸ್ಯದ ಸಾಧ್ಯವಿರುವಷ್ಟು ದೊಡ್ಡ ಚಿತ್ರವನ್ನು ನೋಟ್ ಬುಕ್ ಹಾಳೆಯಲ್ಲಿ ಬರೆಯಿರಿ. ಸುಂದರವಾಗಿಲ್ಲದಿದ್ದರೂ ತೊಂದರೆ ಇಲ್ಲ. ಆದರೆ ಎಲ್ಲ ಬಾಗಗಳನ್ನೂ ಗುರುತಿಸುವಂತಿರ ಬೇಕು’. ಗಿಡ ಕೀಳುವ, ಇನ್ನೊಬ್ಬ ಕಿತ್ತ ಗಿಡದೊಂದಿಗೆ ತನ್ನ ಗಿಡ ಹೋಲಿಸಿ ನೋಡುವ, ತಾನು ಕಿತ್ತ ಗಿಡ ‘ಸಾಕೇ ಸಾ’ ಎಂದು ನನ್ನನ್ನು ಕೇಳುವ, ಕುಳಿತು ಚಿತ್ರ ಬಿಡಿಸಲು ತಮಗೆ ಪ್ರಶಸ್ಥವಾದ ಸ್ಥಳ ಆಯ್ಕೆ ಮಾಡುವ ಸಂಭ್ರಮ ಮುಗಿದು ಚಿತ್ರ ಬಿಡಿಸಲಾರಂಭಿಸಿದರು. ಬಹುತೇಕ ಮಂದಿ ಚಿತ್ರ ಬಿಡಿಸಿ ಆದ ಬಳಿಕ ಆ ಚಿತ್ರದಲ್ಲಿ ತಮಗೆ ತಿಳಿದಿರುವ ಭಾಗಗಳನ್ನು ಗುರುತಿಸಿ ಹೆಸರಿಸುವಂತೆ ಹೇಳಿದೆ. ಪಠ್ಯಪುಸ್ತಕದ ಚಿತ್ರದಲ್ಲಿ ನಮೂದಿಸಿದ್ದ ಬಹತೇಕ ಭಾಗಗಳನ್ನು ಅವರೇ ಗುರುತಿಸಿ ಹೆಸರಿಸಿದರು. ಅವರಿಗೆ ತಿಳಿದಿರದಿದ್ದ ‘ಅಂತರ್ ಗಿಣ್ಣು, ತುದಿಮೊಗ್ಗು ಮುಂತಾದ ಭಾಗಗಳನ್ನು ಅವರ ಬಳಿ ಇದ್ದ ಗಿಡಗಳ ನೆರವಿನಿಂದ ತೋರಿಸಿ ಅವನ್ನೂ ಗುರುತಿಸಿ ಬರೆದುಕೊಳ್ಳುವಂತೆ ಹೇಳಿದೆ. ಮುಂದಿನ ತರಗತಿಗೆ ಬರುವಾಗ ತುಸು ಅಂದವಾದ ಚಿತ್ರ ಬರೆದು ಬಾಗಗಳನ್ನು ಗುರುತಿಸಲು ಅಭ್ಯಾಸ ಮಾಡಿಕೊಂಡು ಬರಬೇಕೆಂದೂ ಅಭ್ಯಾಸ ಮಾಡಲೋಸುಗ ಪಠ್ಯಪುಸ್ತಕದಲ್ಲಿ ಇರುವ ಚಿತ್ರವನ್ನು ನೋಡಬಹುದೆಂದೂ ತಿಳಿಸುವುದರೊಂದಿಗೆ ಪಾಠ ಮುಗಿಯಿತು. ಪಾಠದ ಸಮರ್ಪಕತೆಯ ಕುರಿತಾಗಿ ವಿಷಯ ಪರಿವೀಕ್ಷಕರ ಅನಿಸಿಕೆ - “ಗೋವಿಂದ ರಾವ್, ಮುಂದಿನ ಸಲ ನಾವು ಬಂದಾಗ ಒಂದು ನಾರ್ಮಲ್ ಪಾಠ ಮಾಡಿ” “ಸರಿ ಸಾರ್, ಹಾಗೆಯೇ ಮಾಡುತ್ತೇನೆ” ತಲೆ ಅಲ್ಲಾಡಿಸಿದೆ. (ಅಂಥವರೊಂದಿಗೆ ವಾದ ಮಾಡುವುದು ವ್ಯರ್ಥ ಎಂಬುದು ನನ್ನ ಅಭಿಮತವಾದ್ದರಿಂದ)

೩. ಇನ್ನೊಮ್ಮೆ ಒಬ್ಬರು ಗಣಿತ ಪರಿವೀಕ್ಷಕರು ನನ್ನ ಪಾಠ ವೀಕ್ಷಿಸಿದರು. ಮಾಡಿದ್ದು ರೇಖಾಗಣಿತದ ಒಂದು ಪಾಠ. ಸಮಯದ ಅಭಾವವಿರುವುದರಿಂದ ವರದಿಯಲ್ಲಿ ತನ್ನ ವಿಮರ್ಶೆ ದಾಖಲಿಸುವುದಾಗಿ ತಿಳಿಸಿ ನಿರಗಮಿಸಿದರು. ಕೆಲ ದಿನಗಳ ನಂತರ ವರದಿ ಬಂತು. ನಾನು ಮಾಡದೇ ಇದ್ದ ಪಾಠವೊಂದರ ಶೀರ್ಷಿಕೆ ನಮೂದಿಸಿ ಪಾಠವನ್ನು ಅದ್ಭುತವಾಗಿ ಮಾಡಿರುವುದಾಗಿ ಉದಾಹರಣೆ ಸಹಿತ ದಾಖಲಿಸಿದ್ದರು! ಮಾನ್ಯ ತರಗತಿಯ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಪರಿವೀಕ್ಷಕರು ಪೀರಿಯಡ್ ಪೂರ್ತಿ ಯಾವುದೋ ಪುಸ್ತಕ ಓದುತ್ತಿದ್ದರೆಂದು ವಿದ್ಯಾರ್ಥಿಗಳ ಮುಖೇನ ನನಗೆ ತಿಳಿದಿತ್ತು.

೪. ಅಪರೂಪಕ್ಕೊಮ್ಮೆ ಸ್ನಾನ ಮಾಡುವ ಅಭ್ಯಾಸವಿದ್ದ ವಿದ್ಯಾರ್ಥಿಗಳೇ ಹೆಚ್ಚು ಸಂಖ್ಯೆಯಲ್ಲಿ ಇದ್ದ ಸಹ-ಶಿಕ್ಷಣ ಶಾಲೆ ಅದು.  ಹುಡುಗರಿಗೆ  ವಸತಿ ಸೌಕರ್ಯವೂ ಇತ್ತು. ವಸತಿನಿಲಯವಾಸಿಗಳನ್ನು ಬೆಳಗ್ಗೆ ೬ ಗಂಟೆಗೆ ಎಬ್ಬಿಸಿ ನಿತ್ಯಕರ್ಮಗಳಿಗೆ ಸಮಯಾವಕಾಶ ನೀಡಿ ಪ್ರಾರ್ಥನೆಯ ಬಳಿಕ ಎಲ್ಲರನ್ನೂ ಅಟ್ಟಿಕೊಂಡು ಪಕ್ಕದಲ್ಲಿದ್ದ ನದಿಗೆ ‘ಅಟ್ಟಿಕೊಂಡು ಹೋಗಿ’ ಪ್ರತೀ ದಿನ ಸ್ನಾನ ಮಾಡುವ ಅಭ್ಯಾಸ ಬೇರೂರುವಂತೆ ಮಾಡಲು ಹೆಣಗಾಡುತ್ತಿದ್ದದ್ದೂ, ಶಾಲಾ ಪ್ರಾರ್ಥನಾ ಸಭೆಯಲ್ಲಿ ಯಾರು ತಲೆಗೆ ಬಹುದಿನಗಳಿಂದ ನೀರೇ ಮುಟ್ಟಿಸಿಲ್ಲ ಎಂಬುದನ್ನು ಪತ್ತೆಹಚ್ಚಿ ಹುಡುಗರಾಗಿದ್ದರೆ ಒಬ್ಬ ಜವಾನನ ಮೇಲುಸ್ತುವಾರಿಯಲ್ಲಿ ಸ್ನಾನ ಮಾಡಿಕೊಂಡು ಬರುವಂತೆ ನದಿಗೆ ಅಟ್ಟುತ್ತಿದ್ದದ್ದು ಹುಡುಗಿಯರಾಗಿದ್ದರೆ ಮಾರನೇ ದಿನ ತಲೆಗೆ ಸ್ನಾನ ಮಾಡಿಕೊಂಡು ಬರದಿದ್ದರೆ ಶಾಲೆಯಿಂದಲೇ ಓಡಿಸುವುದಾಗಿ ಗದರಿಸುತ್ತಿದ್ದದ್ದು ಮರೆಯುವಂತಿಲ್ಲ.

೫. ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ೮ ಮತ್ತು ೯ ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ತಾನು ೧೦ ನೇ ತರಗತಿಯಲ್ಲಿಯೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಶಾಲಾ ದಾಖಲೆ ನಿರ್ಮಿಸುವ ಭರವಸೆ ತೋರಿದ್ದ. ೧೦ ನೇ ತರಗತಿ ತಲುಪಿದೊಡನೆ, ಪಾಠದಲ್ಲಿ ನಿರಾಸಕ್ತಿ, ಪದೇ ಪದೇ ಗೈರುಹಾಜರಾಗುವಿಕೆ ಇವು ಅವನ ಲಕ್ಷಣಗಳಾದವು. ಮಾಮೂಲಿ ತಂತ್ರಗಳು ಅತನನ್ನು ಸುಧಾರಿಸಲು ವಿಫಲವಾದ್ದರಿಂದ ತುಸು ಸಂಶೋಧನೆ ಮಾಡಬೇಕಾಯಿತು. ತಂದೆ ಇಲ್ಲದ, ಸ್ಥಿತಿವಂತ ಮನೆತನದ ಒಬ್ಬನೇ ಹುಡುಗ ಆತ. ಗೈರುಹಾಜರಾದಾಗಲೆಲ್ಲ ಆ ಹಳ್ಳಿಯಲ್ಲಿ ಬೀಡುಬಿಟ್ಟಿದ್ದ ನಾಟಕ ತಂಡದವರೊಡನೆ ಕಾಲಕಳೆಯುತ್ತಿರುವ ವಿಷಯ ತಿಳಿಯಿತು. ಇನ್ನೂ ಕೆದಕಿದಾಗ ಆತ ಆ ತಂಡದಲ್ಲಿದ್ದ ಹದಿಹರೆಯದ ಇಬ್ಬರು ನಟೀಮಣಿಯರ ಮೋಹಪಾಶದಲ್ಲಿ ಸಿಲುಕಿರುವ ವಿಷಯವೂ ತಿಳಿಯಿತು. ಮತ್ತೂ ಕೆದಕಿದಾಗ ಈತ ತಕ್ಕಮಟ್ಟಿಗೆ ಶ್ರೀಮಂತ ಕುಟುಂಬದವನು ಎಂಬುದನ್ನರಿತಿದ್ದ ಅವರು ಇವನ ಸೌಂದರ್ಯ, ನಟನಕೌಶಲ ಇತ್ಯಾದಿಗಳನ್ನು ಬಹುವಾಗಿ ಹೊಗಳಿ ಸಾಧ್ಯವಿರುವಷ್ಟು ಹಣ ಕೀಳುವ ಹುನ್ನಾರ ಮಾಡಿದ್ದರು ಎಂಬುದೂ ಅರ್ಥವಾಯಿತು. ‘ಹದಿಹರೆಯ ಒಂದು ಅಪಾಯಕಾರೀ ಅವಧಿ’ ಎಂಬ ಶಾಸ್ತ್ರೋಕ್ತಿ ಅಕ್ಷರಶಃ ಸಾಬೀತಾಗಿತ್ತು. ಅವನು ಎಲ್ಲಿ ಎಡವುತ್ತಿದ್ದಾನೆ ಎಂಬುದನ್ನು ಅವನಿಗೆ ಮನವರಿಕೆ ಮಾಡಿಕೊಡಲು ನನಗೆ ತಿಳಿದಿದ್ದ ಎಲ್ಲ ‘ಆಪ್ತಸಮಾಲೋಚನಾ’ ಕುಶಲತೆಗಳನ್ನು ಉಪಯೋಗಿಸಬೇಕಾಯಿತು. ಇವೆಲ್ಲದರ ಪರಿಣಾಮವಾಗಿ ಆತ ಮುಂದೆ ನಮ್ಮ ನಂಬಿಕೆಯಂತೆ ಪ್ರಥಮದರ್ಜೆಯಲ್ಲಿ ಅಲ್ಲದಿದ್ದರೂ ದ್ವಿತೀಯ ದರ್ಜೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾದ.

೬. ಅದೇ ಶಾಲೆಯಲ್ಲಿ ೯ನೇ ತರಗತಿಯಲ್ಲ ಒಬ್ಬಳು ವಿದ್ಯಾರ್ಥಿನಿ. ಗಣಿತ ತರಗತಿಯಲ್ಲಿ ಬಲು ಸುಲಭವಾಗಿ ಹೇಳಿದ್ದನ್ನು ಗ್ರಹಿಸುತ್ತಿದ್ದಾಕೆ. ಗಣಿತ ಪರೀಕ್ಷೆಯಲ್ಲಿ ಶೇ ೭೦-೮೦ ರಷ್ಟು ಅಂಕ ಗಳಿಸುವ ಸಾಮರ್ಥ್ಯ ಇದೆ ಎಂದು ನಾನು ಅಂದಾಜಿಸಿದ್ದೆ. ಯಾವುದೇ ಪರೀಕ್ಷೆಯಲ್ಲಿ ಶೇ ೪೦-೪೫ ಕ್ಕಿಂತ ಹೆಚ್ಚು ಅಂಕ ಗಳಿಸುತ್ತಿರಲಿಲ್ಲ. ಉತ್ತರ ಪತ್ರಿಕೆಗಳ ಪರಿಶೀಲನೆಯಿಂದ ತಿಳಿದದ್ದು ಇಷ್ಟು - ಆಕೆ ಶೇ ೪೦-೪೫ ಅಂಕ ಪಡೆಯಲು ಎಷ್ಟು ಪ್ರಶ್ನೆಗಳನ್ನು ಉತ್ತರಿಸಬೇಕೋ ಅಷ್ಟನ್ನು ಮಾತ್ರ ಉತ್ತರಿಸಿ ಉಳಿದವುಗಳನ್ನು ಮಾಡುವ ಗೊಡವೆಗೇ ಹೋಗುತ್ತಿರಲಿಲ್ಲ. ಕರೆದು ಏಕೆಂದು ಕೇಳಿದಾಗ ಆಕೆಯ ಉತ್ತರ - ‘ಎಸ್ ಎಸ್ ಎಲ್ ಸಿ ಪರೀಕ್ಷೆ ಆದ ತಕ್ಷಣ ಮದುವೆ ಮಾಡಲು ಅಪ್ಪ ಅಮ್ಮ ತೀರ್ಮಾನಿಸಿದ್ದಾರೆ. ಸುಮ್ಮನೆ ಶ್ರಮ ಪಟ್ಟು ಹೆಚ್ಚು ಅಂಕ ಗಳಿಸಿ ಏನು ಪ್ರಯೋಜನ? ಶಾಲೆಗೆ ಬಂದದ್ದಕ್ಕೆ ಪಾಸಾದರೆ ಸಾಕು ಎಂದು ತೀರ್ಮಾನಿಸಿದ್ದೇನೆ’ (!).

೭. ಆ ಶಾಲೆಗೆ ಶಿಕ್ಷಕನಾಗಿ ನೇಮಕಗೊಂಡ ಮೊದಲನೇ ವರ್ಷ. ಅಂದಿನ ದಿನಗಳಲ್ಲಿ ಎಸ್ ಎಸ್ ಎಲ್ ಸಿ ತರಗತಿಯ ಗಣಿತದಲ್ಲಿ ಇದ್ದ ಮೊದಲನೇ ಪಾಠ ‘ಸರಾಸರಿ’ ( ಈಗ ಇದು ಪ್ರಾಥಮಿಕ ಶಾಲೆಯ ಯಾವುದೋ ತರಗತಿಯಲ್ಲಿ ಇದೆ). ಆಗ ತಾನೇ ‘ಯೂನಿವರ್ಸಿಟಿ rank ಸ್ಟೂಡೆಂಟ್’ ಎಂಬ ಗರಿಮೆಯೊಂದಿಗೆ ಬಿ ಎಡ್ ಪದವಿಭೂಷಿತನಾದ ನಾನು ಈ ಪಾಠದ ಎಲ್ಲ ಧರ್ಮಸೂಕ್ಷ್ಮಗಳು ವಿದ್ಯಾರ್ಥಿಗಳಿಗೂ ಮನೋಗತವಾಗ ಬೇಕು  ಎಂಬ ಮಹದಾಕಾಂಕ್ಷೆಯಿಂದ ಸುಮಾರು ೧ ತಿಂಗಳ ಕಾಲ ಬೋಧಿಸಿದ್ದಾಯಿತು. ಅಂತ್ಯದಲ್ಲಿ ನೀಡಿದ ಕಿರುಪರೀಕ್ಷೆಯಲ್ಲಿ ಶೇ ೮೦ ರಷ್ಟು ಮಂದಿ ಅನುತ್ತೀರ್ಣರಾಗಿದ್ದರು!. ತದನಂತರ ಉತ್ತರ ಪತ್ರಿಕೆಗಳನ್ನು ವಿಶ್ಲೇಷಿಸಿದಾಗ ತಿಳಿಯಿತು - ಆ ಮಕ್ಕಳಿಗೆ ದಶಮಾಂಶ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಗಣಿತದ ಮೂಲಭೂತ ಪರಿಕರ್ಮಗಳನ್ನು ಮಾಡಲು ಬರುತ್ತಿರಲಿಲ್ಲ. ‘ಅಪೇಕ್ಷಿತ ಕಲಿಕೆ ಯಶಸ್ವಿಯಾಗಿ ಜರಗಬೇಕಾದರೆ ಅದಕ್ಕೆ ವಿದ್ಯಾರ್ಥಿಯನ್ನು ಸಿದ್ಧಪಡಿಸಿದ ಬಳಿಕವೇ ಕಲಿಸಲಾರಂಭಿಸ ಬೇಕು’ ಎಂಬ ಶಿಕ್ಷಣಸಾಸ್ತ್ರೋಕ್ತಿಯನ್ನು ಕಡೆಗಣಿಸಿದ್ದರ ಪರಿಣಾಮ ಿದು ಎಂಬುದು ಆಗ ನನಗೆ ಹೊಳೆಯಿತು. (ತದನಂತರ ಯುಕ್ತ ಪರಿಹಾರೋಪಾಯ ರೂಪಿಸಿ ಅನುಷ್ಠಾನಗೊಳಿಸಲು ಇನ್ನೊಂದು ತಿಂಗಳು ವ್ಯರ್ಥವಾಯಿತು ‘ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳ ಬೇಕಾದದ್ದು ಅನಿವಾರ್ಯವಾಯಿತು)

೮. ಒಂದು ದಿನ ೯ ನೇ ತರಗತಿಯ ಹಿಂದಿನ ಬೆಂಚಿನ ವಿದ್ಯಾರ್ಥಿಯೊಬ್ಬ ನಾನು ಪಾಠ ಮಾಡುತ್ತಿರುವಾಗ ಅಕ್ಕಪಕ್ಕದವರಿಗೆ ಕೀಟಲೆ ಮಾಡುತ್ತಿದ್ದದ್ದು ನನ್ನ ಗಮನಕ್ಕೆ ಬಂದಿತು. ಅವನನ್ನು ಗದರಿಸಿ ‘ಕಲಿಯಲು ಇಷ್ಟ ಇಲ್ಲ ಎಂದಾದರೆ ಶಾಲೆಗೇಕೆ ಬರ್ತೀಯ. ಇಷ್ಟ ಇಲ್ಲಾಂದ್ರೆ ನಾಳೆಯಿಂದ ಬರಬೇಡ’ ಅಂದೆ. ಮಾರನೇ ದಿನದಿಂದ ಆತ ನಾಪತ್ತೆ. ಒಂದೆರಡು ದಿನ ಕಳೆದ ಬಳಿಕ ಸಂಜೆಯ ವೇಳೆ  ಆತನ ಮನೆಗೆ ಹೋಗಿ ವಿಚಾರಿಸಿದರೆ ‘ಇಷ್ಟ ಇಲ್ಲಾಂದ್ರೆ ಶಾಲೆಗೆ ಬರಬ್ಯಾಡ ಅಂತ ಎ ವಿ ಜಿ ಸರ್ ಅಂದವ್ರೆ. ನಂಗೆ ಮ್ಯಾತ್ಸ್ ತಲೆಗೆ ಹತ್ತಾಕಿಲ್ಲ. ನಾನು ಸಾಲೆಗೆ ಹೋಗಾಕಿಲ್ಲ’ ಅಂತ ಹಠ ಹಿಡಿದು ತಮ್ಮ ಜಮೀನಿನ ಕೆಲಸಕ್ಕೆ ಹೋಗತೊಡಗಿದ್ದ. (ಅವನನ್ನು ಪುನಃ ಶಾಲೆಗೆ ಕರೆತರಬೇಕಾದರೆ ನನ್ನೆಲ್ಲ ಬುದ್ಧಿಸಾಮರ್ಥ್ಯ ಉಪಯೋಗಿಸ ಬೇಕಾಯಿತು)

೯. ಸಮೀಪದ ಹಳ್ಳಿಯ ಹೆಂಡದಂಗಡಿಯ ಮಾಲೀಕನ ಮಗ ಆ ಶಾಲೆಗೆ ಬರುತ್ತಿದ್ದ. ಸೀಲ್ ಆಗಿಬರುತ್ತಿದ್ದ ಹೆಂಡದ ಪೀಪಾಯಿಗೆ ಸೀಲ್ ತೆಗೆಯದೆ ನೀರು ಬೆರೆಸುವುದು ಹೇಗೆಂಬುದನ್ನು ತಂದೆಯಿಂದ ಕಲಿತಿದ್ದ ಪ್ರಭೃತಿ ಆತ. ಪದೇಪದೇ ಗೈರುಹಾಜರಾಗುತ್ತಿದ್ದ ಆತನನ್ನು ಹಿಡಿದು ಬಯ್ದು ‘ನಾಳೆ ಬರುವಾಗ ನಿನ್ನ ತಂದೆಯನ್ನು ಕರೆದುಕೊಂಡು ಬಾ’ ಅಂದರೆ ‘ಆಗಲ್ಲ ಸಾ. ಅವ ಕುಡ್ದು ಮನಗ್ಬಿಟ್ಟಿರ್ತಾನೆ’ ಅನ್ನುವದೇ!

29 May 2012

ಜಿ ಟಿ ಎನ್ - ಇನ್ನೂ ಕೆಲವು ನೆನಪುಗಳು

ಜಿ ಟಿ ಎನ್ – ಕೆಲವು ನೆನಪುಗಳು ಲೇಖನದಲ್ಲಿ ೧೨ ನೆನನಪುಗಳನ್ನು ಹಂಚಿಕೊಂಡಿದ್ದೆ. ನನ್ನ ನೆನಪುಗಳ ಸಂಚಿಯಲ್ಲಿ ಬಾಕಿ ಉಳಿದಿದ್ದ ಇನ್ನೂ ಕೆಲವನ್ನು ಹಂಚಿಕೊಳ್ಳುತ್ತಿದ್ದೇನೆ, ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಅವು ನೆರವಾದೀತು ಎಂಬ ನಂಬಿಕೆಯಿಂದ.  (ಇದನ್ನು ಬರೆಯಲು ಕಾರಣ - ರಾಜಕಾರಣಿಗಳ ಪರಿಭಾಷೆಯಲ್ಲಿ ‘ಬಹುಮಂದಿಯ’ ಕೋರಿಕೆಯಂತೆ. ೩ ಮಂದಿಯನ್ನು ಬಹುಮಂದಿ ಎಂದು ಪರಿಗಣಿಸಬಹುದಾದರೆ!).

ನೆನಪು ೧೩. ೮೦ರ ದಶಕದಲ್ಲಿ ನಡೆದದ್ದು. ಶ್ರೀಯುತರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ ವಿಭಾಗದಲ್ಲಿ ಸಂಪಾದನಾ ವಿಭಾಗದ ಮುಖ್ಯಸ್ತರಾಗಿದ್ದ ಅವಧಿಯಲ್ಲಿ ಒಂದು ದಿನ (ನಿಖರವಾದ ಇಸವಿ ನೆನಪಿಲ್ಲ) ಬೆಳಗ್ಗೆ ಸುಮಾರು ೯-೯.೩೦  ಗಂಟೆಗೆ ನಾನು ಕಾಲೇಜಿಗೆ ಹೋಗಲು ಸ್ಕೂಟರ್ ಹೊರತೆಗೆಯುತ್ತಿದ್ದೆ. “ಕಾಲೇಜಿಗೆ ಹೊರಟೆಯೋ? ಒಂದೈದು ನಿಮಿಷ ಮಾತನಾಡುವುದಿದೆ, ತೊಂದರೆ ಇಲ್ಲ ತಾನೇ” ಅನ್ನುತ್ತಲೇ ಗೇಟ್ ಒಳಗೆ ಬಂದರು ಜಿ ಟಿ ಎನ್. ಮನೆಯೊಳಕ್ಕೆ ಬಂದು ಮುಂದಿನ ವರಾಂಡದಲ್ಲಿದ್ದ  ಕುರ್ಚಿಯಲ್ಲಿ ಕುಳಿತವರೇ ಕೈನಲ್ಲಿದ್ದ ಬ್ಯಾಗಿನಿಂದ ಕೆಲವು ಕಾಗದದ ಹಾಳೆಗಳನ್ನು ತೆಗೆದು ನನ್ನ ಕೈಯಲ್ಲಿಟ್ಟು, “ ಇದನ್ನು ಓದಿ ಏನಾದರೂ ಅರ್ಥವಾಗುತ್ತದೆಯೋ ನೋಡು. ನನಗೇನೂ ಅರ್ಥವಾಗಲಿಲ್ಲ. ನಿನಗೇನಾದರೂ ಅರ್ಥವಾದರೆ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಬರೆದು ಕೊಡಲು ಸಾಧ್ಯವೇ” ಅಂದರು. ಅಂದಿನ ಕಾಲದಲ್ಲಿ ‘ಮನೋವಿಜ್ಞಾನಿ’ ಎಂದು ಖ್ಯಾತನಾಮರಾಗಿದ್ದವರೊಬ್ಬರು ಕನ್ನಡ ವಿಶ್ವಕೋಶಕ್ಕಾಗಿ ಬರೆದಿದ್ದ ‘ಮನೋವಿಜ್ಞಾದ ಇತಿಹಾಸ’ ಎಂಬ ಲೇಖನವಾಗಿತ್ತು. ಏನು ಹೇಳುವುದೆಂದು ಆಲೋಚಿಸಲು ಸಮಯಾವಕಾಶ ನೀಡದೆಯೇ ‘ಅರ್ಜೆಂಟ್ ಏನಿಲ್ಲ. ನಿಧಾನವಾಗಿ ಓದಿ ಅಭಿಪ್ರಾಯ ತಿಳಿಸು. ನಾಳೆ ಇದೇ ಹೊತ್ತಿಗೆ ತಿಳಿಸಿದರೆ ಸಾಕು (!)” ಅಂದರು. “ನಾಳೆಯೇ” ನಾನು ರಾಗ ಎಳೆದೆ.  “ಬೇಡ, ನಾಡಿದ್ದು ಬರುತ್ತೇನೆ” ಅಂದು ಎದ್ದು ಹೊರಟೇಹೋದರು. ಆ ಲೇಖನವೋ ೧೯೩೩ ರಲ್ಲಿ ಪ್ರಕಟವಾಗಿದ್ದ ‘ಎ ಹಂಡ್ರಡ್ ಇಯರ್ಸ್ ಆಫ್ ಸೈಕಾಲಜಿ ೧೮೩೩-೧೯೩೩’ ಎಂಬ ಪುಸ್ತಕದಲ್ಲಿ ಇದ್ದ ಮಾಹಿತಿಯನ್ನು ಬೇಕಾಬಿಟ್ಟಿ ಸಂಕ್ಷೇಪಿಸಿ ಮಾಡಿದ ಕೆಟ್ಟ ಭಾಷಾಂತರವಾಗಿತ್ತು. ತದನಂತರ ತೀವ್ರಗತಿಯಲ್ಲಿ ಆಗಿದ್ದ ಬೆಳೆವಣಿಗೆಗಳ ಉಲ್ಲೇಖವೇ ಇರಲಿಲ್ಲ. ಪೂರ್ವನಿಗದಿತ ದಿನದಂದು ಬಂದ ಜಿ ಟಿ ಎನ್ ಅವರಿಗೆ ನನ್ನ ಅಭಿಪ್ರಾಯ ತಿಳಿಸಿ, ಆ ಲೇಖನವನ್ನು ಸರಿಪಡಿಸುವ ಬದಲು ಹೊಸದಾಗಿ ಬರೆಯುವುದೇ ಸುಲಭವೆಂದು ಹೇಳಿದೆ. “ಆಯಿತು, ಹಾಗೆಯೇ ಮಾಡು. ಒಂದು ತಿಂಗಳು ಸಮಯ ಕೊಡುತ್ತೇನೆ” ಅಂದು ಹೊರಟೇ ಹೋದರು. ನೀನು ಬರೆದುಕೊಡಬಲ್ಲೆಯಾ ಅಂದೇನಾದರೂ ಕೇಳಿದ್ದರೆ ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಇರಾದೆ ನನ್ನದಾಗಿತ್ತು. ಏಕೆಂದರೆ ಆ ಶೀರ್ಷಿಕೆಯಲ್ಲಿ ಲೇಖನ ಬರೆಯುವುದು ಸುಲಭದ ವಿಷಯವಲ್ಲ. ಅಂತೂ ಇಂತೂ ಲೇಖನ ಸಿದ್ಧಪಡಿಸಿ ನಿಗದಿತ ಸಮಯದ ಒಳಗೆ ಅವರ ಕಛೇರಿಗೆ ಹೋಗಿ ತಲುಪಿಸಿದೆ. ಅವರು ತಕ್ಷಣವೇ ಅದನ್ನು ಸಂಬಂಧಿತ ಸಂಪಾದಕರಿಗೆ ರವಾನಿಸಿ ನನಗೆ ಧನ್ಯವಾದ ಹೇಳಿ ಕಳುಹಿಸಿದರು. ತದನಂತರ ಅದೇನಾಯಿತೆಂದು ನಾನೂ ಕೇಳಲಿಲ್ಲ, ಅವರೂ ಹೇಳಲಿಲ್ಲ. ಅದೆಷ್ಟೋ ವರ್ಷ ಕಳೆದ ಬಳಿಕ (ಅವರು ಸೇವೆಯಿಂದ ನಿವೃತ್ತರಾಗಿದ್ದರು, ನಾನು ನಿವೃತ್ತಿಯ ಅಂಚಿನಲ್ಲಿದ್ದೆ), ಒಂದು ದಿನ ವಿಶ್ವವಿದ್ಯಾನಿಲಯದಿಂದ ರಿಜಿಸ್ಟರ್ಡ್ ಅಂಚೆಯಲ್ಲಿ ಲಕೋಟೆಯೊಂದು ಬಂದಿತು. ಒಡೆದು ನೋಡಿದರೆ ಇದ್ದದ್ದೇನು? ವಿಶ್ವಕೋಶದಲ್ಲಿ ನನ್ನ ಹೆಸರಿನಲ್ಲಿಯೇ ಪ್ರಕಟವಾಗಿದ್ದ ‘ಮನೊವಿಜ್ಞಾನದ ಇತಿಹಾಸ’ ಲೇಖನದ ಕ್ಸಿರಾಕ್ಸ್ ಪ್ರತಿ, ರೂ ೬೨೫ ಗೌ ಸಂಭಾವನೆಯ ಚೆಕ್, ಒಂದು ಧನ್ಯವಾದ ಅರ್ಪಿಸುವ ಪತ್ರ. ಅಂದಮೇಲೆ, ಮೊದಲೇ ಉಲ್ಲೇಖಿಸಿದ್ದ ‘ಖ್ಯಾತನಾಮರ’ ಲೇಖನ ತಿರಸ್ಕೃತವಾಗಿ ( ಹೀಗೆ ಮಾಡಲು ಸಾಮಾನ್ಯರಿಂದ ಸಾಧ್ಯವಿಲ್ಲ) ಖ್ಯಾತನಾಮನಲ್ಲದ ನನ್ನ ಲೇಖನ ಸ್ವೀಕೃತವಾಗಿದ್ದಿರಬೇಕಲ್ಲವೇ?

ನೆನಪು ೧೪. ಶ್ರೀಯುತರು ಜಾತಕ, ಫಲಜ್ಯೋತಿಷ್ಯ, ಸಾಂಪ್ರದಾಯಿಕ ಮತೀಯಾಚರಣೆಗಳನ್ನು ಕಟುವಾಗಿ ಟೀಕಿಸುತ್ತಿದ್ದದ್ದರಿಂದಲೋ ಏನೋ ಸಂಪ್ರದಾಯವಾದಿಗಳು ‘ಮಹಾನಾಸ್ತಿಕ’ ಎಂದೇ ಅವರನ್ನು (ಅವರ ಬೆನ್ನ ಹಿಂದೆ ತಗ್ಗಿದ ದನಿಯಲ್ಲಿ) ಉಲ್ಲೇಖಿಸುತ್ತಿದ್ದರು. ಅವರು ನಿಜವಾಗಿಯೂ ನಾಸ್ತಿಕರೇ?

ನಮ್ಮಿಬ್ಬರಿಗೂ ಪರಿಚಯವಿದ್ದವರೊಬ್ಬರು ಧರ್ಮ, ಆಧ್ಯಾತ್ಮ ಮುಂತಾದವುಗಳ ಕುರಿತಾಗಿ ಅವರ ಪ್ರಾಮಾಣಿಕ ಅಭಿಪ್ರಾಯ ತಿಳಿಯಬಯಸಿದರು (ಬಹುಮಂದಿ ‘ವಿಚಾರವಾದಿಗಳು’ ತಮ್ಮ ಸಾರ್ವಜನಿಕ ಜೀವನದಲ್ಲಿ ಮಾತ್ರ ವಿಚಾರವಾದಿಗಳಾಗಿರುವುದರಿಂದ ಜಿ ಟಿ ಎನ್ ಅವರ ಕುರಿತೂ ಆ ಪರಿಚಯಸ್ಥರಿಗೆ ಸಂಶಯ ಇದ್ದಿರಬೇಕು). ಅವರಿಗೆ ಜಿ ಟಿ ಎನ್ ಉತ್ತರ - “ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳನ್ನೂ ಓದಿ. ನನ್ನ ಪ್ರಾಮಾಣಿಕ ಅಭಿಪ್ರಾಯ ಏನೆಂಬುದು ನಿಮಗೇ ತಿಳಿಯುತ್ತದೆ”. ಈ ಉತ್ತರದ ಅರ್ಥ ನಿಮಗಾಗ ಬೇಕಾದರೆ ನೀವೂ ಅಂತೆಯೇ ಮಾಡಬೇಕು! ಜೊತೆಯಲ್ಲಿ ಡಿ ವಿ ಜಿ ಯವರ ‘ಮಂಕು ತಿಮ್ಮನ ಕಗ್ಗವನ್ನೂ ಅರಗಿಸಿಕೊಳ್ಳಿ!!.

ಅವರು ನಿಜವಾಗಿಯೂ ನಾಸ್ತಿಕರಾಗಿದ್ದರೇ?

ಅಂದಹಾಗೆ. ದೇವರ ಅಸ್ತಿತ್ವದ ಕುರಿತಾದ ಚರ್ಚೆಗಳಲ್ಲಿ ಶ್ರೀಯುತರು ಭಾಗವಹಿಸಿದ್ದನ್ನು ನಾನು ಗಮನಿಸಿಲ್ಲ.

ನೆನಪು ೧೫.

ಯಾವುದೇ ಮತೀಯಾಚರಣೆಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಅಂದಮಾತ್ರಕ್ಕೆ (ತೋರಿಕೆಗಾಗಿಯೋ, ಪಾಪಪ್ರಜ್ಞೆ ಕಾಡುತ್ತಿರುವುದರಿಂದಲೋ ಅಂಧಶ್ರದ್ಧೇಯಿಂದಲೋ ನಿಜವಾದ ಭಕ್ತಿಯಿಂದಲೋ) ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸುವವರನ್ನು ವೈಯಕ್ತಿಕವಾಗಿ ಹೀಗಳೆದಿದ್ದಾಗಲೀ  ಬೇರೆಯವರು ತಮ್ಮ ಮನೆಯಲ್ಲಿ ಮಾಡುತ್ತಿದ್ದ ಮತೀಯಾಚರಣೆಗಳ ಸಂದರ್ಭದಲ್ಲಿ ಆಹ್ವಾನಿಸಿದಾಗ ಅವರನ್ನು ಅಪಹಾಸ್ಯ ಮಾಡಿದ್ದಾಗಲೀ ನನ್ನ ಗಮನಕ್ಕೆ ಬಂದಿಲ್ಲ. ಅಂಥ ಸನ್ನಿವೇಶಗಳಲ್ಲಿ ಅತಿಥೇಯರ ಮನನೋಯುವಂಥದ್ದೇನನ್ನೂ ಮಾಡುತ್ತಲೂ ಇರಲಿಲ್ಲ.

ಉದಾ: ನನ್ನ ತಮ್ಮನ ಮನೆಯಲ್ಲಿ ಪ್ರತೀ ವರ್ಷ ನವರಾತ್ರಿಯ ಅವಧಿಯಲ್ಲಿ ಅದ್ದೂರಿಯಾಗಿ (ಮಾಡಿಸುವ ಪುರೋಹಿತರ ಪ್ರಕಾರ) ಶಾಸ್ತ್ರೋಕ್ತವಾಗಿ ದುರ್ಗಾಪೂಜೆ ಮಾಡಿಸುವ ಸಂಪ್ರದಾಯ ಇತ್ತೀಚಿನ ಕೆಲವು ವರ್ಷಗಳಿಂದ ರೂಢಿಯಲ್ಲಿದೆ. ಅಂಥದ್ದೊಂದು ಸಂದರ್ಭದಲ್ಲಿ ನಾನು ಗಮನಿಸಿದ್ದು - ಪೂಜೆ, ಮಹಾಮಂಗಳಾರತಿ ಇತ್ಯಾದಿಗಳೆಲ್ಲವೂ ಸಾಂಗವಾಗಿ ನಡೆಯಿತು. ಮನೆಯ ಹೊರಗೆ ಕುಳಿತಿದ್ದ ಜಿ ಟಿ ಎನ್, ನಾನು ಹಾಗೂ ಇತರ ೪-೫ ಮಂದಿಗೆ ಇದು ತಿಳಿದದ್ದು ಶಂಖ ಜಾಗಟೆಗಳ ಅಬ್ಬರದ ಘೋಷದಿಂದಾಗಿ. ಒಂದೆರಡು ನಿಮಿಷದ ಬಳಿಕ ಜಿ ಟಿ ಎನ್ ಎದ್ದು ಮನೆಯೊಳಕ್ಕೆ ಹೊರಟರು. ‘ಒಳಗೆ ತೀರ್ಥ ಪ್ರಸಾದ ವಿನಿಯೋಗಿಸುತ್ತಿರುವುದರಿಂದ ಜನದಟ್ಟಣೆ ಇದೆ. ಈಗೇಕೆ ಹೋಗುತ್ತೀರಿ” ಅಂದೆ ನಾನು. “ಪೂಜೆಗೆ ಬಂದು ತೀರ್ಥ ಪ್ರಸಾದ ತೆಗೆದುಕೊಳ್ಳದೇ ಇರುವುದು ಹೇಗಯ್ಯಾ?” ಅಂದು ಒಳನುಗ್ಗಿದರು.

ನೆನಪು ೧೬. ಅವರು ಸೇವೆಯಿಂದ ನಿವೃತ್ತರಾದ ಬಳಿಕ ಒಂದು ಬಾರಿ ನಾನು ಸೇವೆಯಲ್ಲಿ ಇದ್ದ ಕಾಲೇಜಿಗೆ ‘ಅತಿಥಿ-ಉಪನ್ಯಾಸ’ ನೀಡಲು ಅವರನ್ನು ಆಹ್ವಾನಿಸಿದ್ದೆ. ವಿಷಯ - ‘ಶಿಕ್ಷಕರಾಗಲಿರುವವರಿಗೆ ನಿವೃತ್ತ ಶಿಕ್ಷಕನ ಸ್ವಾನುಭವದಿಂದ ಮೂಡಿಬಂದ ಕಿವಿಮಾತು’. ಕಾರ್ಯಕ್ರಮ ಮುಗಿದ ಬಳಿಕ ಆಡಳಿತ ಮಂಡಲಿಯವರ ಕಛೇರಿಯಲ್ಲಿ ಅನೌಪಚಾರಿಕ ಹರಟೆ ಹೊಡೆಯುತ್ತಾ ಕಾಫಿ ಕುಡಿದಿದ್ದಾಯಿತು. ಕಛೇರಿಯ ಗುಮಾಸ್ತರು ‘ಸಾರ್, ಇದನ್ನು ಸ್ವೀಕರಿಸ ಬೇಕು’ ಅಂದು ಒಂದು ಲಕೋಟೆಯನ್ನು ಅವರಿಗಿತ್ತು, ‘ಇಲ್ಲೊಂದು ಸಹಿ ಹಾಕಿ ಸಾರ್’ ಅಂದು ಕಾಗದವೊಂದನ್ನು ಇಟ್ಟರು. ಏನಪ್ಪಾ ಇದು ಅನ್ನುತ್ತಾ ಕಾಗದ ಓದಿ, “ ಓಹೋ ಈ ಘನಕಾರ್ಯಕ್ಕೆ ಗೌರವ ಸಂಭಾವನೆ ಬೇರೆ ಇದೆಯೋ” ಅಂದು ಸಹಿ ಹಾಕಿದರು. “ಇದು ಅನಿರೀಕ್ಷಿತವಾಗಿ ಅಯಾಚಿತವಾಗಿ ಬಂದ ಧನ. ನೇರ ಅಂಗಡಿಗೆ ಹೋಗಿ ಒಂದು ಒಳ್ಳೆಯ ಪುಸ್ತಕ ಖರೀದಿಸುತ್ತೇನೆ” ಅನ್ನುತ್ತಾ ಹೊರನಡೆದರು.

ನಾವು ಅಂದು ಕೊಟ್ಟದ್ದು ರೂ ೧೦೦ (ಅಂದಿನ ದಿನಗಳಲ್ಲಿ ಅದನ್ನು ಅತೀ ಕಮ್ಮಿ ಎಂದಾಗಲೀ ಅತೀ ಹೆಚ್ಚು ಎಂದಾಗಲೀ ಅನ್ನುವಂತಿರಲಿಲ್ಲ). ಮೊಬಲಗು ಎಷ್ಟು ಅನ್ನುವುದಕ್ಕಿಂತ ಅದನ್ನು ಸ್ವೀಕರಿಸುವಾಗ ಶ್ರೀಯುತರು ಅಭಿವ್ಯಕ್ತಿಸಿದ ಭಾವನೆ ಪ್ರಶಂಶಾರ್ಹ.

ನೆನಪು ೧೭. ಇದೂ ಜಿ ಟಿ ಎನ್ ಸೇವೆಯಿಂದ ನಿವೃತ್ತರಾದ ನಂತರ ನಡೆದದ್ದು. ಇಸವಿ ನೆನಪಿಲ್ಲ. ಬೆಳಗ್ಗೆ ಬೆಳಗ್ಗೆ ಸುಮಾರು ೯-೯.೩೦  ಗಂಟೆಗೆ ಮನೆಗೆ ಬಂದವರೇ “ನಿನ್ನಿಂದ ಒಂದು ಉಪಕಾರ ಆಗಬೇಕಲ್ಲ” ಅಂದರು. “ಹೇಳಿ, ನನ್ನಿಂದ ಆಗುವಂತಿದ್ದರೆ ಮಾಡುತ್ತೇನ”. “ಆಗುತ್ತೆ ಅಂತ ನನ್ಗೊತ್ತು. ಆದ್ದರಿಂದಲೇ ನಿನ್ನ ಪರವಾಗಿ ನಾನೇ ಸಮ್ಮತಿ ಸೂಚಿಸಿದ್ದಾಗಿದೆ”. ಸಂಗತಿ ಇಂತಿತ್ತು: ಸರ್ಕಾರೀ ಇಲಾಖೆಯೊಂದು ಧಾರವಾಡದಲ್ಲಿ ಶಾಲಾ ಮಕ್ಕಳಿಗಾಗಿ ‘ಬೇಸಿಗೆ ಶಿಬಿರ’ ಸಂಘಟಿಸಿದ್ದರು. ಅದರ ಒಂದು ಕಾರ್ಯಕ್ರಮಕ್ಕೆ ಶ್ರೀಯುತರನ್ನು ಆಹ್ವಾನಿಸಿದ್ದರು - ರಾತ್ರಿಯ ವೇಳೆ ನಕ್ಷತ್ರ ವೀಕ್ಷಣೆಗೆ ಮಾರ್ಗದರ್ಶನ ಯಾವುದೋ ಕ್ರೀಡಾಂಗಣದಲ್ಲಿ. ಈ ಕಾರ್ಯಕ್ರಮದಲ್ಲಿ ಮಾತ್ರ ಸಾರ್ವಜನಿಕರೂ ಭಾಗವಹಿಸಬಹುದಿತ್ತು.  ಶ್ರೀಯುತರಿಗೆ ಹೋಗಲು ಇಷ್ಟವಿರಲಿಲ್ಲ. ಬಲು ಒತ್ತಾಯ ಮಾಡಿದಾಗ “ನೋಡಿ, ಅಷ್ಟು ದೂರ ಬಸ್ಸು ರೈಲು ಪ್ರಯಾಣ ನನ್ನಿಂದ ಸಾಧ್ಯವಿಲ್ಲ. ನೀವು ಮೈಸೂರಿನಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಹಿಂದಕ್ಕೆ ಕರೆದುಕೊಂಡು ಬಂದು ಬಿಡಬೇಕು. ಅಲ್ಲಿ ಊಟ ವಸತಿಯ ವ್ಯವಸ್ಥೆ ನೀವೇ ಮಾಡಬೇಕು” ಅಂದರಂತೆ, ಸರ್ಕಾರೀ ಇಲಾಖೆಯಾದ್ದರಿಂದ ಅಷ್ಟೆಲ್ಲ ಮಾಡಲು ಅವರ ಕೆಂಪುಪಟ್ಟಿ ಅಡ್ಡಿಯುಂಟು ಮಾಡುತ್ತದೆ ಎಂಬ ನಂಬಿಕೆಯಿಂದ.  ಜಿ ಟಿ ಎನ್ ರವರ ದುರದೃಷ್ಟ, ಇಲಾಖೆಯವರು ಒಪ್ಪಿ “ಹಾಗಾದರೆ ಸಾರ್, ನೀವು ಅಲ್ಲಿಂದಲೇ ಟ್ಯಾಕ್ಸಿ ಮಾಡಿಕೊಂಡು ಬನ್ನಿ, ವೆಚ್ಚ ನಾವು ಭರಿಸುತ್ತೇವೆ. ಒಳ್ಳೆಯ ಹೋಟೆಲಿನಲ್ಲಿ ಊಟ ವಸತಿ ವ್ಯವಸ್ಥೆಯನ್ನೂ ಮಾಡುತ್ತೇವೆ” ಅಂದರಂತೆ. ಶ್ರೀಯುತರು ಈ ಸಂಕಟದಿಂದ ಪಾರಾಗಲು ಇನ್ನೊಂದು ಬಾಣ ಪ್ರಯೋಗಿಸಿದರಂತೆ - “ನೋಡಿ. ನಾನು ಒಬ್ಬನೇ ಬರುವುದು ಕಷ್ಟ. ಜೊತೆಗೆ ಒಬ್ಬರು ಬೇಕಾಗುತ್ತದೆ”. “ಅದೇನೂ ತೊಂದರೆ ಇಲ್ಲ ಸಾರ್. ಮಾರನೇ ದಿನ ಪೂರ್ವಾಹ್ನ ವಿಜ್ಞಾನ ಕುರಿತಾದ ಸಂವಾದ ಆಯೋಜಿಸೋಣ. ಅದರಲ್ಲಿ ಭಾಗವಹಿಸಬಲ್ಲ ಗಣ್ಯರೊಬ್ಬರನ್ನು ನೀವೇ ಮೈಸೂರಿನಿಂದಲೇ ಕರೆತನ್ನಿ. ನೀವೂ ಭಾಗವಹಿಸಿ. ಅವರ ಊಟ ವಸತಿ ವ್ಯವಸ್ಥೆಯನ್ನೂ ಮಾಡುವುದಲ್ಲದೆ ಗೌರವ ಸಂಭಾವನೆಯನ್ನೂ ಕೊಡೋಣ” ಎಂದುತ್ತರಿಸಬೇಕೇ ಇಲಾಖೆಯವರು. ಪ್ರಯೋಗಿಸಿದ ಎಲ್ಲ ಬಾಣಗಳೂ ಗುರಿ ತಲುಪದಿದ್ದ ಮೇಲೆ ಮಾಡುವುದೇನು? “ಸರಿ, ನನ್ನ ಜೊತೆ ಬರುವವರು ಯಾರು ಎಂಬುದನ್ನು ನಿಗದಿ ಪಡಿಸಿ ನಿಮಗೆ ತಿಳಿಸುತ್ತೇನೆ. ಅವರಿಗೆ ಸಾಂಪ್ರದಾಯಿಕ ಆಹ್ವಾನ ನೀಡುವ ಜವಾಬ್ದಾರಿ ನಿಮ್ಮದು” ಅಂದು ನನ್ನ ಹತ್ತಿರ ಬಂದಿದ್ದರು. “ಆಕಾಶ ವೀಕ್ಷಣೆಯ ಭಾಗ, ಸಂವಾದದಲ್ಲಿ ಖಗೋಲ ಶಾಸ್ತ್ರ ಮತ್ತು ಗಣಿತ ಸಂಬಂಧಿತ ಪ್ರಶ್ನೆಗಳು ಬಂದರೆ ನಾನು ನೋಡಿಕೊಳ್ಳುತ್ತೇನೆ, ಉಳಿದವನ್ನು ನೀನು ನಿಭಾಯಿಸು” ಅಂದಾಗ ಅರೆಮನಸ್ಸಿನಿಂದ ಒಪ್ಪಿದೆ. ನಿಗದಿತ ದಿನದಂದು ಸಂಜೆ ಸುಮಾರು ೫.೩೦ರ ವೇಳೆಗೆ ದಾರವಾಡದಲ್ಲಿ ನಮಗೆಂದು ಕೊಠಡಿ ಕಾಯ್ದಿರಿಸದ್ದ ಹೋಟೆಲ್ ತಲುಪಿದೆವು. ಅಂದು ನನಗೇನೂ ಕೇಲಸವಿರಲಿಲ್ಲ.

ಆಕಾಶ ವಿಕ್ಷಣೆಗೆ ಸಂಘಟಕರು ಆಯ್ಕೆ ಮಾಡಿದ್ದ ಸ್ಥಳ ಯಾವುದೋ ದೊಡ್ಡ ಕ್ರೀಡಾಂಗಣ. ಪೂರ್ವನಿಗದಿತ ಸಮಯಕ್ಕೆ ನಾವು ಅಲ್ಲಿಗೆ ತಲುಪಿದಾಗ ಸಾವಿರಾರು ಜನ ಅಲ್ಲಿ ಜಮಾಯಿಸಿದ್ದರು. ಕ್ರೀಡಾಂಗಣದ ಒಂದು ತುದಿಯಲ್ಲಿ ಇದ್ದ ವೇದಿಕೆಯೊಂದರ ಮೇಲೆ ನಿಂತ ಜಿ ಟಿ ಎನ್ ಅವರ ಮಾಮೂಲೀ ಶೈಲಿಯಲ್ಲಿ ಕೈನಲ್ಲಿದ್ದ ಟಾರ್ಚ್ ನೆರವಿನಿಂದ ತಮ್ಮ ವಿವರಣೆ ಕೊಡಲಾರಂಬಿಸಿದರು. ಧ್ವನಿವರ್ಧಕ ವ್ಯವಸ್ಥೆ ಇದ್ದದ್ದರಿಂದ ಅವರ ವಿವರಣೆ ಸೂಚನೆ ಎಲ್ಲರಿಗೂ ಕೇಳುತ್ತಿತ್ತು. ತಾವು ಹೇಳಿದ್ದು ಕೇಳುಗರಿಗೆ ಅರ್ಥವಾಯಿತೇ ಅಥವ ತಮ್ಮ ಸೂಚನೆಗಳನ್ನು ಕೇಳಿ ಅದರಂತೆ ಜನ ತಾರೆಗಳನ್ನು ವೀಕ್ಷಿಸಿದರೇ ಇಲ್ಲವೇ ಎಂಬುದನ್ನು ತಿಳಿಯುವ ಅವಕಾಶ ಇಲ್ಲದ ವ್ಯವಸ್ಥೆ ಅದಾಗಿದ್ದರಿಂದ ‘ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು’ ಎಂದು ಸಂಘಟಕರು ವರದಿ ಮಾಡಲು ಅಡ್ಡಿ ಇರಲಿಲ್ಲ. ನನ್ನ ಪ್ರಕಾರ ಶ್ರೀಯುತರ ಸೂಚನೆಗಳನ್ನು ಗ್ರಹಿಸಿ ಎಲ್ಲವನ್ನೂ ವೀಕ್ಷಣೆ ಮಾಡಿದವರ ಸಂಖ್ಯೆ ಶೇ ೧ ರಷ್ಟು ಇದ್ದಿರ ಬಹುದೋ ಏನೋ.

ಇದರಿಂದ ನಮಗೆ ಅರ್ಥವಾದದ್ದು ಇಷ್ಟು: ೧. ಶಿಬಿರ ಯಶಸ್ವಿಯಾಯಿತು ಎಂದು ಬಿಂಬಿಸಲು ಜಿ ಟಿ ಎನ್ ಅವರಿಗಿದ್ದ ‘ತಾರಾ ಮೌಲ್ಯ (ಸ್ಟಾರ್ ವ್ಯಾಲ್ಯೂ)’ದ ಲಾಭ ಪಡೆಯುವುದೇ ಕಾರ್ಯಕ್ರಮದ ಉದ್ದೇಶ. ೨. ಈ ಉದ್ದೇಶ ಈಡೇರಬೇಕಾದರೆ ‘ಜನಸಾಮಾನ್ಯರಲ್ಲಿ ವೈಜ್ಞಾನಿಕತೆ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವವರೂ, ಜನಪ್ರಿಯ ಶಿಕ್ಷಕರೂ ಉತ್ತಮ ವಾಗ್ಮಿಗಳೂ’ (ಇದು ಸಂಘಟಕರು ನನ್ನನ್ನು ಪರಿಚಯಿಸಿದ ರೀತಿ) ಆಗಿರುವ ಎ ವಿ ಜಿ ಗೂ ಅನಿವಾರ್ಯವಾಗಿ ಒಂದು ವೇದಿಕೆ ಸೃಷ್ಟಿಸಬೇಕಾದ್ದರಿಂದ ‘ವಿಜ್ಞಾನಿಗಳೊಡನೆ ಸಂವಾದ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ತತ್ಪರಿಣಾಮವಾಗಿ ನಮ್ಮಿಬ್ಬರಿಗೂ ‘ವಿಜ್ಞಾನಿ’ ಎಂಬ ಬಿರುದು ದೊರೆತಿತ್ತು. ಅದೇನೇ ಇರಲಿ, ಶಿಬಿರದಲ್ಲಿದ್ದ ಮಕ್ಕಳು ಮುಗ್ಧರಾಗಿದ್ದರಿಂದ ‘ಸಂವಾದ’ ಕಾರ್ಯಕ್ರಮ ನಿಜವಾಗಿಯೂ ಬಲು ಸೊಗಸಾಗಿತ್ತು. [ಮಂಡ್ಯದವರು ಯಾರೋ ಜಿ ಟಿ ಎನ್ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದಾಗ ತಪ್ಪಿಸಿಕೊಳ್ಳಲು ಇದೇ ತಂತ್ರ ಪ್ರಯೋಗಿಸಿ ಅಯಶಸ್ವಿಗಳಾದ ನಂತರ ಈ ತಂತ್ರ ಪ್ರಯೋಗ ನಿಲ್ಲಿಸಿದರು]

ನೆನಪು೧೮. ನಾನು ಮೈಸೂರಿನಲ್ಲಿ ಕ ರಾ ವಿ ಪ ಘಟಕದ ಸಕ್ರಿಯ ಕಾರ್ಯಕರ್ತನಾಗಿದ್ದ ದಿನಗಳ ನೆನಪಿದು. ಬಾಲವಿಜ್ಞಾನದ ಸಂಪಾದಕ ಮಂಡಲಿಯ ಸದಸ್ಯನೂ ಆಗಿದ್ದೆ. ಕ ರಾ ವಿ ಪ ದಲ್ಲಿ ನಾನೊಂದು ಸಂಗತಿ ಗಮನಿಸಿದ್ದೆ - ಜಿ ಟಿ ಎನ್ ಅವರನ್ನು ಕ ರಾ ವಿ ಪ ದ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸುತ್ತಿರಲಿಲ್ಲ. ಕಾರಣ ತಿಳಿಯಲು ಪ್ರಯತ್ನಿಸಿದಾಗ ಯಾರಿಂದಲೂ ಖಚಿತ ಉತ್ತರ ದೊರೆಯದೇ ಇದ್ದರೂ ನಾನು ಅಂದಾಜಿಸಿದ ಕಾರಣ - ಆಡಳಿತ ಮಂಡಲಿಯ ಸೂತ್ರದಾರರಿಗೆ ಜಿ ಟಿ ಎನ್ ಕುರಿತಾಗಿ ಇದ್ದ ವೈಯಕ್ತಿಕ ಅಸಮಾಧಾನ.

ಜನಪ್ರಿಯ ವಿಜ್ಞಾನ ಸಾಹಿತ್ಯದ ಯುವ ಬರೆಹಗಾರರಿಗೆಂದು ತೀರ್ಥಹಳ್ಳಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ತರಬೇತಿ ಶಿಬಿರವೊಂದನ್ನು ಆಯೋಜಿಸಿತ್ತು (ಇಸವಿ ನೆನಪಿಲ್ಲ). ಶ್ರೀ ಜೆ ಆರ್ ಲಕ್ಷ್ಮಣರಾವ್ ಅವರ ನೇತೃತ್ವದಲ್ಲಿ  ಶ್ರೀ ಅಡ್ಯನಡ್ಕ ಕೃಷ್ಣಭಟ್ಟರು ಮತ್ತು ನಾನು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸುವ ಆಡಳಿತ ಮಂಡಲಿಯ ನಿರ್ಧಾರ ತಿಳಿಸುವ/ಒಪ್ಪಿಗೆ ಸೂಚಿಸ ಬೇಕೆಂಬ ಕೋರಿಕೆಯ ಪತ್ರ ನನ್ನ ಕೈಸೇರಿದಾಗ ಒಪ್ಪಿಗೆ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ನೀಡಿದ ಬಳಿಕ ‘ಈ ಬಾರಿ ವಿಶೇಷ ಉಪನ್ಯಾಸಕ್ಕೆಂದು ಜಿ ಟಿ ಎನ್ ಅವರನ್ನು ೧-೨ ದಿನಗಳ ಮಟ್ಟಿಗೆ ಏಕೆ ಆಹ್ವಾನಿಸಬಾರದು?’ ಎಂದು ಶಿಬಿರದ ಸೂತ್ರಧಾರಿಗಳನ್ನು ಕೇಳಿದೆ. ಅವರು ಉತ್ತರ ಕೊಡುವ ಮೊದಲೇ ‘ಶ್ರೀಯುತರ ಕುರಿತಾಗಿ, ಅವರ ಆಚಾರವಿಚಾರಗಳ ಕುರಿತಾಗಿ. ಅವರ ಬರೆವಣಿಗೆಯ ಶೈಲಿ ಭಾಷೆಗಳ ಕುರಿತಾಗಿ ನಮ್ಮ ಅಭಿಪ್ರಾಯ ಏನೇ ಇರಲಿ ಅವರೊಂದಿಗಿನ ವೈಯಕ್ತಿಕ ಸಂಬಂಧದಲ್ಲಿ ಆದ ಅನುಭವಗಳು ಏನೇ ಇರಲಿ ಅವರ ಅನುಭವದ ಲಾಭ ಇತರರಿಗೆ ಆಗಲು ವೇದಿಕೆ ಒದಗಿಸಬೇಕಾದದ್ದು ಕ ರಾ ವಿ ಪದ ಕರ್ತವ್ಯ ಎಂಬುದು ನನ್ನ ಅಭಿಮತ’ ಅಂದು ಅಲ್ಲಿಂದ ಹೊರಟೆ. ತದನಂತರ ಏನು ನಡೆಯಿತೋ ನನಗೆ ಗೊತ್ತಿಲ್ಲ. ಒಂದೆರಡು ದಿನಗಳ ಬಳಿಕ ದಾರಿಯಲ್ಲಿ ಸಿಕ್ಕ ಜಿ ಟಿ ಎನ್ ‘ಏನಯ್ಯಾ ಇದು ಪವಾಡ’ ಅನ್ನುವ ಮುನ್ನುಡಿಯೊಡನೆ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಲು ಕ ರಾ ವಿ ಪ ದವರು ಆಹ್ವಾನಿಸಿದ ವಿಷಯ ತಿಳಿಸಿದರು, ‘ಇದರಲ್ಲಿ ನಿನ್ನ ಕೈವಾಡ ಏನೂ ಇಲ್ಲ ತಾನೆ?’ ಎಂಬ ಒಗ್ಗರಣೆಯೊಂದಿಗೆ. ಯುಕ್ತ ಪೂರ್ವಸಿದ್ಧತೆಯೊಂದಿಗೆ ಅವರು ಅಲ್ಲಿ ಮಾಡಿದ ವಿಶೇಷ ಉಪನ್ಯಾಸಕ್ಕೆ ಶಿಬಿರವಾಸಿಗಳಷ್ಟೇ ಮಂದಿ ಅಲ್ಲದೆ, ಸ್ಥಳೀಯ ಆಸಕ್ತ ಮಂದಿ ಆಹ್ವಾನ ಇಲ್ಲದೇ ಇದ್ದರೂ ಬಹುಸಂಕ್ಯೆಯಲ್ಲಿ ಆಗಮಿಸಿ ಸುಮಾರು ೧.೩೦ ಗಂಟೆ ಅವಧಿಯ ಉಪನ್ಯಾಸವನ್ನು ತದೇಕಚಿತ್ತದಿಂದ ಕೇಳಿದ್ದನ್ನು ಮರೆಯುವಂತಿಲ್ಲ.

ನೆನಪು೧೯. ಮೈಸೂರಿನ ಗಾನ ಭಾರತೀ ಸಂಸ್ಥೆಯ ಕಾರ್ಯದರ್ಶಿಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದ ಅವಧಿ. ಸಂಸ್ಥಗೆ ಮಂಜೂರಾಗಿದ್ದ ನಿವೇಶನದಲ್ಲಿ ಸಭಾಂಗಣ ನಿರ್ಮಿಸಲೋಸುಗ ಹಣ ಸಂಗ್ರಹಿಸಲು ಆಡಳಿತ ಮಂಡಲಿಯ ಸದಸ್ಯರು ಹೆಣಾಗಾಡುತ್ತಿದ್ದಾಗ ಒಮ್ಮೆ ನೋಡಿದ್ದು. ಆಗ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಜಿ ಟಿ ಎನ್ ರಸ್ತೆಯಲ್ಲಿ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದರು. ನಾನೂ ಅವರೊಂದಿಗಿದ್ದದ್ದು ಆಕಸ್ಮಿಕ. ಪರಿಚಯಸ್ಥರೊಬ್ಬರು ದಾರಿಯಲ್ಲಿ ಸಿಕ್ಕರು. ಬಹು ದಿನಗಳ ನಂತರ ಆದ ಆಕಸ್ಮಿಕ ಭೇಟಿ ಅದು. ಉಭಯ ಕುಶಲೋಪರಿ ಆದ ಬಳಿಕ ಅವರು ಜಿ ಟಿ ಎನ್ ಅವರ ಆಕಾಶವೀಕ್ಷಣೆ ಕಾರ್ಯಕ್ರಮಗಳ ಕುರಿತು ತುಸು ಹೆಚ್ಚೇ ಹೊಗಳಿದರು. ಅದನ್ನೆಲ್ಲ ಮೌನವಾಗಿ ಕೇಳಿಸಿಕೊಂಡ ಜಿ ಟಿ ಎನ್ ಗಾನ ಭಾರತೀ ಕರಪತ್ರವನ್ನು ಅವರಿಗೆ ಕೊಟ್ಟು ಸಂಕ್ಷಿಪ್ತವಾಗಿ ಉದ್ದೇಶ ವಿವರಿಸಿ ‘ನಿಮ್ಮಿಂದ ನಾವು ಎಷ್ಟು ಧನಸಹಾಯ ನಿರೀಕ್ಷಿಸಬಹುದು’ ಎಂದು ಯಾವ ಸಂಕೋಚವೂ ಇಲ್ಲದೆ ಕೇಳಿಯೇಬಿಟ್ಟರು. ಈ ಅನಿರೀಕ್ಷಿತ ಕೋರಿಕೆಯಿಂದ ಆ ಪರಿಚಿತರಿಗೂ ಆಘಾತವಾಗಿತ್ತು ಎಂಬುದನ್ನು ಅವರ ಮುಖಭಾವವೇ ಸಾರುತ್ತಿತ್ತು. ಏನು ಉತ್ತರ ಕೊಡಬೇಕೆಂದು ಅವರು ತೊಳಲಾಡುತ್ತಿದ್ದಾಗ ‘ವಿ ರಿಸೀವ್ ವಿತ್ ಗ್ರ್ಯಾಟಿಟ್ಯೂಡ್ ಈವನ್ ಸ್ಮಾಲ್ ಅಮೌಂಟ್ಸ್. ಈವನ್ ೫೦ ಪೈಸ’ ಅಂದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಜಿ ಟಿ ಎನ್ ಅವರಿಂದ ತಪ್ಪಿಸಿಕೊಳ್ಳುವ ಅನ್ಯಮಾರ್ಗ ಕಾಣದೆ ರೂ ೧೦೦ ಅನ್ನು ತೆತ್ತು ರಸೀತಿ ಪಡೆದು ಕಾಲ್ಕಿತ್ತರು. ಅವರು ಹೋದ ಬಳಿಕ ಜಿ ಟಿ ಎನ್ ಉವಾಚ - ‘ಭಿಕ್ಷೆ ಬೇಡಲು ಹೊರಟವನಿಗೆ ಸಂಕೋಚ ಯಾಕೆ? ಅಷ್ಟಕ್ಕೂ ಈ ಭಿಕ್ಷಾಟನೆ ಮಾಡುತ್ತಿರುವುದು ಸದುದ್ದೇಶಕ್ಕೆ ತಾನೇ?’ (ಜಿ ಟಿ ಎನ್ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿದವರಲ್ಲಿ ಒಬ್ಬರು)

ನೆನಪು೨೦. ಇದು ನನ್ನ ಇನ್ನೊಬ್ಬ ಹಿರಿಯ ಮಿತ್ರರು ಹೇಳಿದ್ದು. ಅವರು ಶಿವರಾಮ ಕಾರಂತರ ಕುರಿತು ಲೇಖನವೊಂದನ್ನು ಬರೆಯಬೇಕಾಗಿತ್ತಂತೆ. ಅದಕ್ಕಾಗಿ ಅಗತ್ಯವಿರುವ ಸಾಮಗ್ರಿ ಸಂಗ್ರಹಿಸುತ್ತಿದ್ದ ವಿಷಯ ಜಿ ಟಿ ಎನ್ ಅವರಿಗೆ ಹೇಗೋ ತಿಳಿದು ಅವರ ಮನೆಗೇ ಹೋಗಿ ‘ನೀವು ಮಾಡುತ್ತಿರುವ ಕಾರ್ಯದ ಬಗ್ಗೆ ತಿಳಿಯಿತು. ನಿಮಗೆ ಬಲು ಉಪಯುಕ್ತವಾಗ ಬಹುದಾದ ಮಾಹಿತಿ ಕೊಡಬಲ್ಲವರು ಕೊಡಗಿನ ಸುಂಟಿಕೊಪ್ಪದಲ್ಲಿ ಜಿ ಎಮ್ ಮಂಜನಾಥಯ್ಯ (ಇವರು ನನಗೆ ಸಂಬಂಧದಲ್ಲಿ ಅಜ್ಜ. ಅವರ ಪತ್ನಿ ನನ್ನ ತಂದೆಯ ತಾಯಿಯ ತಂಗಿ. ಕಾರಂತರು ಇವರ ಮನೆಯಲ್ಲಿ ತಿಂಗಳುಗಟ್ಟಲೆ ಇದ್ದು ಕಾದಂಬರಿಗಳನ್ನು ಬರೆಯುತ್ತಿದ್ದದ್ದನ್ನು ನಾನು ನೋಡಿದ್ದೇನೆ) ಎಂಬ ಕಾಫಿ ಎಸ್ಟೇಟ್ ಮಾಲೀಕರೊಬ್ಬರಿದ್ದಾರೆ. ನನಗೆ ಅವರ ಪರಿಚಯ ಚೆನ್ನಾಗಿದೆ. ಬನ್ನಿ ನಾನು ಕರೆದುಕೊಂಡು ಹೋಗುತ್ತೇನೆ’ ಅಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದರಂತೆ.

ಇದರಲ್ಲಿ ಒಂದು ವಿಶೀಷ್ಟತೆಯೂ ಇರುವುದರಿಂದ ನನ್ನ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಆ ಹಿರಿಯ ಮಿತ್ರರಿಗೆ ಜಿ ಟಿ ಎನ್ ಕುರಿತಂತೆ ವೈಯಕ್ತಿಕವಾಗಿ ಬಹಳ ಅಸಮಾಧಾನ ಇತ್ತು. ಅದನ್ನವರು ತಮ್ಮ ಆಪ್ತರೊಂದಿಗೆ ಹೇಳುತ್ತಲೂ ಇದ್ದರು. ಜಿ ಟಿ ಎನ್ ಅವರು ನನಗೆ ಬಂಧುಗಳು ಎಂಬುದು ತಿಳಿದಿದ್ದರೂ ಅನೇಕ ಬಾರಿ ನನ್ನೊಂದಿಗೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಜಿ ಟಿ ಎನ್ ಅವರಿಗೆ ತಿಳಿದೂ ಇತ್ತು. ಆದರೆ ಎಂದೂ ಜಿ ಟಿ ಎನ್ ಅವರ ಕುರಿತಾಗಿ ‘ಹೇಗಿದ್ದಾರಪ್ಪಾ ಗುರುಗಳು. ಈಗ ಏನು ಕೆಲಸ ಮಾಡ್ತಾ ಇದ್ದಾರೆ’ ಎಂದು ಕೇಳುವುದನ್ನು ಬಿಟ್ಟರೆ ಬೇರೇನೂ ಟೀಕೆ ಮಾಡುತ್ತಿರಲಿಲ್ಲ.

ನೆನಪು೨೧. ಅದೊಂದು ದಿನ, ಅನಿರೀಕ್ಷಿತವಾಗಿ ಜಿ ಟಿ ಎನ್ ಅವರಿಂದ ದೂರವಾಣಿ ಕರೆ ಬಂದಿತು. ಮಾರನೇ ದಿನ ಬೆಳಗ್ಗೆ ೧೦.೩೦ ರ ನಂತರ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತಮ್ಮನ್ನು ಕಾಣಬೇಕೆಂಬುದು ಕರೆಯ ತಿರುಳು. ಏತಕ್ಕೆಂದು ಕೆದಕಿದಾಗ ನನಗೆ ಅರ್ಥವಾದದ್ದು ಇಷ್ಟು: ಕನ್ನಡ ವಿಶ್ವಕೋಶವನ್ನು ಪರಿಷ್ಕರಿಸಿ ಡಿಜಿಟಲ್ ರೂಪು ಕೊಡಲು ವಿಶ್ವವಿದ್ಯಾಲಯ ನಿರ್ಧರಿಸಿದ್ದನ್ನು ತಿಳಿದ ಜಿ ಟಿ ಎನ್ ಯಾವುದೇ ಸಂಭಾವನೆ ಪಡೆಯದೇ ಪರಿಷ್ಕರಣಾ ಕಾರ್ಯದಲ್ಲಿ ನೆರವು ನೀಡುವುದಾಗಿ ಸ್ವಯಂಪ್ರೇರಿತ ಭರವಸೆ ನೀಡಿದ್ದರು. ‘ಈ ಕನ್ನಡದ ಕೆಲಸ’ದಲ್ಲಿ ನೆರವು ನೀಡಲು ನನ್ನಿಂದ ಸಾಧ್ಯವೇ ಎಂಬುದನ್ನು ತಿಳಿಯಬೇಕಿತ್ತು. ಅಡ್ಯನಡ್ಕ ಕೃಷ್ಣಭಟ್ಟರ ನೆರವು ಕೋರಿರುವ ವಿಷಯವನ್ನೂ ತಿಳಿಸಿದರು. ಮರುದಿನ ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಅವರನ್ನು ಹುಡುಕಿದೆ. ಎಲ್ಲಿಯೂ ಗೋಚರಿಸಲಿಲ್ಲ. ನನಗೆ ಪರಿಚಯವಿದ್ದ ಪ್ರಾಧ್ಯಾಪಕರೊಬ್ಬರನ್ನು ಹಿಡಿದು ವಿಚಾರಿಸಿದೆ. ‘ಜಿ ಟಿ ಎನ್ನಾ, ಓ ಅಲ್ಲಿ ಸೆಲ್ಲಾರ್ ನಲ್ಲಿ ಇದ್ದಾರೆ ನೋಡಿ’ ಅಂದರು. ಅವರ ಮಾತಿನ ಧಾಟಿ, ದೇಹಭಾಷೆ ಇವೆರಡೂ ‘ಇಲ್ಲೇನೋ ತಪ್ಪಾಗಿದೆ’ ಅನ್ನುವುದನ್ನು ಸಾರುತ್ತಿದ್ದವು. ಅಲ್ಲೊಂದು ಸೆಲ್ಲಾರ್ ಇರುವ ವಿಷಯವೇ ನನಗೆ ಗೊತ್ತಿರಲಿಲ್ಲ. ಸೆಲ್ಲಾರ್ ಗೆ ಹೋದೆ. ಬಲು ದೊಡ್ಡ ನೆಲಮಾಳಿಗೆ ಅದು. ಸುಮಾರು ೧೦-೧೫ ಪುಟ್ಟಪುಟ್ಟ ಮರದ ಮೇಜುಗಳು (ಶಾಲಾ ತರಗತಿಗಳಲ್ಲಿ ಅಂಥ ಮೇಜುಗಳು ಈಗಲೂ ಇವೆ), ಪ್ರತೀ ಮೇಜಿಗೊಂದು ಕಬ್ಬಿಣದ ಮಡಚುವ ಕುರ್ಚಿ, ಪ್ರತೀ ಮೇಜಿನ ಮೇಲೂ ಮುದ್ರಿತ ಹಾಳೆಗಳನ್ನು ಜೋಡಿಸುತ್ತಲೋ, ಮಡಚುತ್ತಲೋ ಇದ್ದ ಯುವಕರು. ವಿದ್ಯತ್ಪಂಖದ ಸೌಲಭ್ಯವೂ ಇಲ್ಲ. ಆ ಕೊಠಡಿಯ ಒಂದು ಕೊನೆಯಲ್ಲಿ ಒಂದು ಅಂಥದ್ದೇ ಕುರ್ಚಿ-ಮೇಜು ಶ್ರೀಯುತರ ಕಾರ್ಯಾಲಯ. ಇದನ್ನು ನೋಡಿದ ತಕ್ಷಣ ನನಗನ್ನಿಸಿದ್ದು - ಛೆ ಇದೆಂಥ ವಿಶ್ವವಿದ್ಯಾನಿಲಯ. ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ಅನೇಕ ಅಯಾಚಿತ ಪ್ರಶಸ್ತಿಗಳನ್ನು ಪಡೆದ ಹಿರಿಯರೊಬ್ಬರು ಸ್ವಪ್ರೇರಣೆಯಿಂದ ನರವು ನೀಡಲು ಬಂದಾಗ ಅವರೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ನನ್ನನ್ನು ಕಂಡೊಡನೆ ಜಿ ಟಿ ಎನ್ ‘ಬಂದದ್ದು ಒಳ್ಳೇದಾಯಿತು’ ಅಂದು ಆಗಬೇಕಾದ ಕಾರ್ಯ ವಿವರಿಸಿದ್ದಲ್ಲದೆ ಇದಕ್ಕೆ ಯಾವುದೇ ಸಂಭಾವನೆ ದೊರೆಯುವುದಿಲ್ಲವೆಂದೂ ‘ಇಷ್ಟವಿದ್ದರೆ ಒಪ್ಪಿಕೋ. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಆಗುವುದಿಲ್ಲ ಅಂದರೆ ನನಗೇನೂ ಬೇಸರವಿಲ್ಲ’ ಅಂದರು. ಒಟ್ಟಾರೆ ಸನ್ನಿವೇಶದಿಂದ ನಾನು ಊಹಿಸಿದ್ದು - ವಿಶ್ವವಿದ್ಯಾನಿಲಯಕ್ಕೆ ಶ್ರೀಯುತರ ಸೇವೆಯನ್ನು ಪಡೆಯುವ ಯಾವುದೇ ಉದ್ದೇಶವು ಇರಲಿಲ್ಲವಾದರೂ ‘ಸ್ವಪ್ರೇರಣೆಯಿಂದ ಉಚಿತ ಸೇವೆ ಸಲ್ಲಿಸುತ್ತೇನೆಂದು ಬಂದವರನ್ನು ಬೇಡ ಅಂದು ಹಿಂದಕ್ಕೆ ಕಳುಹಿಸುವುದು ಹೇಗೆ. ವಿಶೇಷ ಮರ್ಯಾದೆ ಕೊಡದೇ ಇದ್ದರೆ ಅವರಾಗಿಯೇ ಬಿಟ್ಟು ಹೋದಾರು’ ಎಂಬುದು ವಿಶ್ವವಿದ್ಯಾನಿಲಯದ ಧೋರಣೆ ಆಗಿರಬೇಕು. ನಾನೇನೋ ನಯವಾಗಿ ‘ಇದಕ್ಕೆ ನಾನು ಸಿದ್ಧನಿಲ್ಲ’ ಎಂದು ಹೇಳಿ ಹೊರಬಂದೆ. ಜಿ ಟಿ ಎನ್ ಅವರೂ ವಿಶ್ವವಿದ್ಯಾನಿಲಯಕ್ಕೆ ಕೈಮುಗಿದು ಹೊರಬರುವಂತೆ ಮಾಡುವುದು ಹೇಗೆ? ಎಂಬ ಚಿಂತೆ ನನ್ನನ್ನು ಕಾಡತೊಡಗಿತು. ಅದೃಷ್ಟವಶಾತ್, ಯಾವುದೋ ಸಮಾರಂಭದಲ್ಲಿ ಶ್ರೀ ಅಡ್ಯನಡ್ಕ ಕೃಷ್ಣಭಟ್ಟರ ಭೇಟಿ ಆಯಿತು. ಅವರಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ತಿಳಿಸಿದೆ. ಬೇಸರವಾದರೂ ನೇರವಾಗಿ ಅವರೇನನ್ನೂ ಮಾಡುವಂತಿರಲಿಲ್ಲ. ಜಿ ಟಿ ಎನ್ ಕೃಷ್ಣಭಟ್ಟರ ನೆರವನ್ನೂ ಕೋರಿದ್ದ ವಿಷಯ ಈ ಮೊದಲೇ ಹೇಳಿದ್ದೇನಲ್ಲವೇ? ಆ ವಿಷಯದ ಕುರಿತು ವಿಚಾರಿಸುವ ನೆಪದಲ್ಲಿ ಕೃಷ್ಣಭಟ್ಟರು ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಜಿ ಟಿ ಎನ್ ಕಾರ್ಯನಿರ್ವಹಿಸುತ್ತಿದ್ದ ಸನ್ನಿವೇಶ ಮತ್ತು ಕಾರ್ಯದ ಅಗಾಧತೆಯನ್ನು ಅರ್ಥಮಾಡಿಕೊಂಡು ಬಲು ಜಾಣತನದಿಂದ ಈ ಕಾರ್ಯಕ್ಕೆ ಕೈಹಾಕದೇ ಇರುವುದೇ ಲೇಸೆಂದು ಅವರಿಗೆ ತಿಳಿಸಿದರಂತೆ. ಕೆಲ ದಿನಗಳ ಬಳಿಕ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಸಿಕ್ಕ ಜಿ ಟಿ ಎನ್ ‘ಯೂನಿವರ್ಸಿಟಿ ಕೆಲಸ ನನ್ನ ಕೈಲಿ ಆಗುವುದಿಲ್ಲ ಎಂದು ಬಿಟ್ಟು ಬಂದೆ. ನನಗೂ ವಯಸ್ಸಾಯಿತು ನೋಡು (ಸಧ್ಯ, ಈಗಲಾದರೂ ತಿಳಿಯಿತಲ್ಲ - ಇದು ನನ್ನ ಸ್ವಗತ)’ ಅಂದರು. ನೆರವು ನೀಡಲು ನಾನು ನಿರಾಕರಿಸಿದ್ದು ಮತ್ತು ಕೃಷ್ಣಭಟ್ಟರ ಕಿವಿಮಾತು ನಾವು ಅಪೇಕ್ಷಿಸಿದ ಪರಿಣಾಮ ಉಂಟುಮಾಡಿತ್ತು.

ನೆನಪು೨೨. ಒಂದು ದಿನ ನನ್ನ ಮನೆಗೆ ಬಂದವರೇ ಕೇಳಿದರು “ಈ ರಸ್ತೆಯಲ್ಲಿ ಒಬ್ಬರು ನಿವೃತ್ತ ಫಿಸಿಕ್ಸ್ ಪ್ರೊಫೆಸರ್ ಇದ್ದಾರಂತಲ್ಲ. ಯಾವುದು ಅವರ ಮನೆ?”. “ಎಸ್ ಎನ್ ಪ್ರಸಾದ್ ಮನೆಯೇ?” “ಅಲ್ಲ, ಇನ್ನೊಬ್ಬರು ಇದ್ದಾರಂತೆ, ಅವರದ್ದು ಪುಸ್ತಕ ಪ್ರಕಾಶನವೂ ಇದೆ” ನಮ್ಮ ಮನೆಯ ಎದುರಿನ ರಸ್ತೆಯಲ್ಲಿ ಸವಂತ ನಿವಾಸದಲ್ಲಿ ಇರುವ ಶ್ರೀ ಶಿವಾನಂದ ಅನ್ನುವವರ ಮನೆ ಹುಡುಕುತ್ತಿದ್ದಾರೆಂದು ತಿಳಿದು, ಮನೆ ತೋರಿಸಿದೆ. ನೇರವಾಗಿ ಅಲ್ಲಿಗೆ ಹೋದರು. ಅಂದು ಸಂಜೆಯ ವಾಕಿಂಗ್  ವೇಳೆಯಲ್ಲಿ ಶ್ರೀ ಶಿವಾನಂದ ಅವರು “ಜಿ ಟಿ ಎನ್ ನಮ್ಮ ಮನೆಗೆ ಬಂದಿದ್ದರು. ನೀವು ಮನೆ ತೋರಿಸಿದರಂತೆ’ ಅಂದರು. ನಾನು ಕೇಳಿದೆ “ತೋರಿಸಿದ್ದು ನಿಜ. ವಿಷಯ ಏನು?”. ನಮ್ಮ ಪ್ರಕಾಶನದ ಪುಸ್ತಕವೊಂದನ್ನು ಓದಿದಾಗ ಅದು ಅವರಿಗೆ ಬಹಳ ಮೆಚ್ಚುಗೆಯಾಯಿತಂತೆ. ‘ಇಂಥ ಒಳ್ಳೆಯ ಪುಸ್ತಕ ಪ್ರಕಾಶನ ಮಾಡಿದ್ದಕ್ಕೆ ಅಭಿನಂದನೆ’ ಸಲ್ಲಿಸಲು ಬಂದಿದ್ದರು ಅಂದು ಜಿ ಟಿ ಎನ್ ರ ‘ದೊಡ್ಡತನ’ವನ್ನು  ಶ್ಲಾಘಿಸಿದರು. ಮೆಚ್ಚಿದ್ದನ್ನು ನೇರವಾಗಿ (ಕೆಲವೊಮ್ಮೆ ಅತಿಯಾಗಿ) ಹೊಗಳುವುದೂ, ಮೆಚ್ಚದ್ದನ್ನು ನೇರವಾಗಿ ಖಂಡಿಸುವುದೂ ಅವರ ಜಾಯಮಾನ. ಎರಡನೆಯದ್ದು ಅವರಿಗೆ ಕೆಲವು ವೈರಿಗಳನ್ನೂ ಸೃಷ್ಟಿಸಿತ್ತು.

ನೆನಪು೨೩. ಅವರ ಜೀವನಪಯಣದ ಕೊನೆಯ ವರ್ಷದಲ್ಲಿ ನಡೆದದ್ದು. ‘ಮನೆಯಲ್ಲಿಯೇ ಇದ್ದೀಯಲ್ಲ. ೧೦ ನಿಮಿಷ ಮಾತನಾಡುವುದಿತ್ತು, ಈಗ ಬಂದರೆ ಏನೂ ತೊಂದರೆ ಇಲ್ಲ ತಾನೇ’ ಎಂದು ದೂರವಾಣಿ ಮುಖೇನ ಕೇಳಿ ಮಾಮೂಲಿನಂತೆ ಬೆಳಗ್ಗೆ ಸುಮಾರು ೯.೩೦ ಕ್ಕೆ ಬಂದರು. ಬಂದವರು ಹೇಳಿದ್ದರ ತಿರುಳು ಇಂತಿದೆ: ‘ಅಶೋಕ ಹೇಳಿದ. ನಕ್ಷತ್ರ ವೀಕ್ಷಣೆಗೆ ಸಂಬಂಧಿಸಿದಂತೆ ನಾನು ಬರೆದ ಪುಸ್ತಕಗಳ ಪ್ರತಿಗಳು ಮುಗಿದು ಹೋಗಿವೆಯಂತೆ. ಪರಿಷ್ಕರಣೆ ಮಾಡುವಂತಿದ್ದರೆ ಮಾಡಿ ಕೊಟ್ಟರೆ ಪುನಃ ಮುದ್ರಿಸುತ್ತಾನಂತೆ. ನನಗೆ ವಯಸ್ಸಾಯಿತು. ಮೊದಲಿನಂತೆ ಕೆಲಸ ಮಾಡಲಾಗುತ್ತಿಲ್ಲ. ನಾನು ಬರೆದ ಅಷ್ಟೂ ಸಂಬಂಧಿತ ಪುಸ್ತಕಗಳ ಪ್ರತಿಗಳನ್ನು ನಿನಗೆ ಕೊಡುತ್ತೇನೆ. ಅದನ್ನು ಪರಿಷ್ಕರಿಸಿ ಬರೆದರೂ ಸರಿ, ಭಾಗಶಃ ಅಥವ ಪೂರ್ಣವಾಗಿ ಬದಲಿಸಿದರೂ ಸರಿ. ಸೀ ವಾಟ್ ಬೆಸ್ಟ್ ಕ್ಯಾನ್ ಬಿ ಡನ್. ಡೂ ಇಟ್. ಯೂ ಆರ್ ಫ್ರೀ ಟು ಟೇಕ್ ಎನಿ ಡೆಸಿಷನ್’. ನನ್ನ ಶೈಲಿಯೇ ಬೇರೆ, ಅವರ ಶೈಲಿಯೇ ಬೇರೆ. ಅವರ ಕಾರ್ಯವೈಖರಿಯೇ ಬೇರೆ, ಅವರದ್ದೇ ಬೇರೆ. ಏನು ಮಾಡುವುದೆಂದು ತಿಳಿಯಲಿಲ್ಲ, “ಈ ಕ್ಷೇತ್ರದಲ್ಲಿ ನಿಮ್ಮಲ್ಲಿರುವಷ್ಟು ಸರಕು ನನ್ನಲ್ಲಿ ಇಲ್ಲ. ಬಹುಶಃ ಈ ಕಾರ್ಯ ನನ್ನಿಂದ ಾಗಲಾರದು” ಅಂದೆ. “ವಿಷಯ ಗೊತ್ತಿಲ್ಲ ಅನ್ನುವುದು ಸುಳ್ಳು ಅನ್ನುವುದು ನಿನಗೂ ಗೊತ್ತು ನನಗೂ ಗೊತ್ತು. ನಿನ್ನಿಂದ ಸಾಧ್ಯ ಎಂದು ನನಗೆ ಖಾತರಿ ಇರುವುದರಿಂದ ಬಂದೆ” ಹೀಗೆ ತುಸು ಸಮಯ ವಾದ ಪ್ರತಿವಾದಗಳಾಯಿತು. ಕೊನೆಗೆ “ಆಯಿತು ಮಾಡುತ್ತೇನೆ. ಆದರೆ ನನ್ದು ಕೆಲವು ಷರತ್ತುಗಳಿಗೆ ನೀವು ಒಪ್ಪಿದರೆ” ಅಂದೆ. “ಏನವು?” “ ಮೊದಲನೆಯದು, ಪುಸ್ತಕ ಇಬ್ಬರ ಹೆಸರಿನಲ್ಲಿಯೂ ಪ್ರಕಟವಾಗಬೇಕು. ಮೊದಲನೆಯದ್ದು ನಿಮ್ಮದಾಗಿರಬೇಕು. ಎರಡನೆಯದು, ನನಗೆ ಸರಿ ಎಂದು ಅನ್ನಿಸಿದ ರೀತಿಯಲ್ಲಿ ಯಾವ ಅಧ್ಯಾಯದಲ್ಲಿ ಏನಿರಬೇಕು, ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸಿ ನನ್ನದೇ ಶೈಲಿಯಲ್ಲಿ ಬರೆದು ಕೊಡುವ ಕೆಲಸ ನನ್ನದು, ಅದನ್ನು ಓದಿ ಅಗತ್ಯವಿದ್ದೆಡೆ ಪರಿಷ್ಕರಿಸಿ, ಮಾರ್ಪಡಿಸಿ ಮುದ್ರಣಕ್ಕೆ ಸಿದ್ಧಪಡಿಸುವ ಕೆಲಸ ನಿಮ್ಮದು. ಬೆರಳಚಿಚಿಸುವ ಕಾರ್ಯ ನಾನೇ ಮಾಡುತ್ತೇನೆ” “ಒಪ್ಪಿದೆ. ನಾಳೆ ಮನೆಗೆ ಬಾ, ಕೆಲವು ಆಕರ ಗ್ರಂಥಗಳನ್ನೂ ನಾನು ಬರೆದವುಗಳನ್ನೂ ಕೊಡುತ್ತೇನೆ. ತ್ಯಾಂಕ್ಸ್ ಫಾರ್ ಅಗ್ರೀಯಿಂಗ್” ಅಂದು ಹಿಂದಿರುಗಿದರು. ಮಾರನೇ ದಿನ ಅವರ ಮನೆಗೆ ಹೋಗಿ ಅಗತ್ಯವಿದ್ದ ಪುಸ್ತಕಗಳನ್ನು ತಂದು ಕಾರ್ಯಾರಂಭಿಸಿದೆ. ಇಷ್ಟಾಗಿ ೧ ವಾರವೂ ಆಗಿರಲಾರದು. ಒಂದು ದಿನ ಬೆಳಗ್ಗೆ ಸುಮಾರು ೭ ಗಂಟೆಗೆ ದೂರವಾಣಿ ಮುಖೇನ ‘ ಏನಿಲ್ಲ. ಕೆಲಸ ಶುರುಮಾಡಿದ್ದೀ ತಾನೆ. ಎಲ್ಲಿಯ ವರೆಗೆ ಬಂತು?” ವಿಚಾರಿಸಿದರು. “(ಮನಸ್ಸಿನಲ್ಲಿಯೇ ಅಂದುಕೊಡದ್ದು - ಕುತ್ತಿಗೆಗೆ ಬಂದಿದೆ) ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿರ ಬೇಕು, ಯಾವ ಅಧ್ಯಾಯದಲ್ಲಿ ಏನಿರಬೇಕು ಇವೇ ಮೊದಲಾದವಕ್ಕೆ ಸಂಬಂಧಿಸಿದಂತೆ ರೂಪುರೇಷೆಯೊಂದನ್ನು ಸಿದ್ಧಪಡಿಸಿದ್ದೇನೆ. ನಿಮ್ಮೊಂದಿಗೆ ಚರ್ಚಿಸಿದ ನಂತರ ಮುಂದುವರಿಯುತ್ತೇನೆ” “ಚರ್ಚಿಸುವದಕ್ಕೇನಿದೆ. ನಿನಗೇ ಆ ಸ್ವಾತಂತ್ರ್ಯ ಕೊಟ್ಟಿದ್ದೆನಲ್ಲ. ಬರೆಯಲು ಶುರು ಮಾಡು, ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ’ ಎಂದು ಅಪ್ಣೆಯಾಯಿತು. ಅದಾಗಿ ಒಂದೆರಡು ದಿನಗಳಲ್ಲಿ ಎಂದಿನಂತೆ ತಿಳಿಸಿ ಬರುವುದಕ್ಕೆ ಬದಲಾಗಿ ತೀಳಿಸದೆಯೇ ಮನೆಗೆ ಬಂದು “ಕೆಲಸ ಮುಂದುವರಿಯುತ್ತಿದೆ ತಾನೆ?. ಈಗ ನಾನು ಬಂದದ್ದು  ನನ್ನ ಸಹಾಯ ಇದ್ದರೂ ಪುಸ್ತಕ ನಿನ್ನೊಬ್ಬನ ಹೆಸರಿನಲ್ಲಿಯೇ ಬರಲಿ ಎಂದು ಹೇಳುವುದಕ್ಕೆ. ಮೊದಲಿನಷ್ಟು ಕೆಲಸ ಮಾಡಲು ಆಗುತ್ತಿಲ್ಲ. ನಿನಗೆ ಎಷ್ಟು ಸಹಾಯ ಮಾಡುತ್ತೇನೋ ಅದೂ ಗೊತ್ತಿಲ್ಲ” ಅಂದು ನನಗೆ ಮಾತನಾಡಲು ಅವಕಾಶ ಕೊಡದೆಯೇ ತೆರಳಿದರು. ಆನಂತರ ನಾನು ಅವರನ್ನು ಜೀವಂತವಾಗಿ ನೋಡಲೇ ಇಲ್ಲ. (ಅವರಿಂದ ಪ್ರೇರಿತನಾಗಿ ಬರೆದು ಅವರಿಗೇ ಅರ್ಪಿಸಿದ ‘ತಾರಾವಲೋಕನ’ ಪುಸ್ತಕವನ್ನು ಅವರ ಮರಣಾನಂತರ ಅಶೋಕವರ್ಧನ ಪ್ರಕಟಿಸಿದ. ಶ್ರೀಯುತರು ಇದ್ದಿದ್ದರೆ ಪುಸ್ತಕ ಇನ್ನೂ ಸುಂದರವಾಗಿರುತ್ತಿತ್ತು ಅನ್ನುವುದರಲ್ಲಿ ಸಂಶಯವಿಲ್ಲ)

[ವಿ ಸೂ: ಈ ಕುರಿತಾದ ಕೊನೆಯ ಲೇಖನ ಇದು]

21 May 2012

ಜಿ ಟಿ ಎನ್ - ಕೆಲವು ನೆನಪುಗಳು

ಅದೇಕೋ ಗೊತ್ತಿಲ್ಲ. ಜೀವನ ಪಯಣದಲ್ಲಿ ನಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪೈಕಿ ಕೆಲವರ ನೆನಪುಗಳು ಪದೇಪದೇ ಅಗುತ್ತಲೇ ಇರುತ್ತದೆ. ಅಂಥವರಲ್ಲಿ ಒಬ್ಬರು ಜಿ ಟಿ ಎನ್ ಎಂದೇ ಪರಿಚಿತರು ಉಲ್ಲೇಖಿಸುತ್ತಿದ್ದ ದಿವಂಗತ ಜಿ ಟಿ ನಾರಾಯಣ ರಾವ್. ಸಂಬಂಧದಲ್ಲಿ ಅವರು ನನಗೆ ಭಾವ. ಸ್ನಾತಕ ಪದವಿ ತರಗತಿಯಲ್ಲಿ ಗಣಿತದ ಉಪನ್ಯಾಸಕ. ನಾನು ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭಿಸಿದ್ದು ೧೯೭೦ ರಲ್ಲಿ. ೧೯೭೬ ರಲ್ಲಿ  ಬರೆದ ‘ಶೈಕ್ಷಣಿಕ ಮನೋವಿಜ್ಞಾನ’ ಪುಸ್ತಕದ ಮೊದಲ ಅಧ್ಯಾಯ ಓದಿ ಯುಕ್ತ ಸಲಹೆ ಮುಖೇನ ನನ್ನ ಬರವಣಿಗೆಯನ್ನು ಪ್ರಭಾವಿಸಿದ ಮಾರ್ಗದರ್ಶಿ. ಮೈಸೂರಿನ ಗಾನಭಾರತೀ ಸಂಗೀತಸಭೆಯ ಆಡಳಿತ ಮಂಡಲಿಯಲ್ಲಿ ನಾನು ಸಕ್ರಿಯ ಸದಸ್ಯನಾಗಿದ್ದಾಗ ಸಹವರ್ತಿ.  ನಾವೀರ್ವರೂ ನಮ್ಮ ನಮ್ಮ ವೃತ್ತಿಯಿಂದ ನಿವೃತ್ತರಾದ ಬಳಿಕ ೭ ತಿಂಗಳ ಕಾಲ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ಕನ್ನಡ ವಿಶ್ವಕೋಶದ ಕೊನೆಯ ಸಂಪುಟದ ವಿಜ್ಞಾನ ವಿಭಾಗದ ಗೌರವ ಸಂಪಾದಕರಾಗಿ ಸಹೋದ್ಯೋಗಿ. ಅಂದ ಮೇಲೆ ನೆನಪುಗಳು ಇರಲೇ ಬೇಕಲ್ಲವೇ? ಇವುಗಳ ಪೈಕಿ ಆಯ್ದ ಕೆಲವನ್ನು ಪುನಃ ಮೆಲುಕು ಹಾಕಲು ಪ್ರಚೋದಿಸಿದ್ದು ಅವರ ಸೊಸೆಯ ಬ್ಲಾಗ್ ತಾಣದಲ್ಲಿ (ಮಾಲಾ ಲಹರಿ) ಪ್ರಕಟವಾಗಿರುವ ಮೊಮ್ಮಗಳು ಅಕ್ಷರಿ ಮಹೇಶ್ ಅವಳ ‘ಅಜ್ಜನ ನೆನಪುಗಳು’ ಲೇಖನ.

ನೆನಪು ೧: ನನ್ನ ನೆನಪಿನಲ್ಲಿ ಇರುವಂತೆ ಜಿ ಟಿ ಎನ್ ಅವರನ್ನು ನಾನು ಮೊದಲಸಲ ನೋಡಿದ್ದು ಕೊಡಗಿನ ಸುಂಟಿಕೊಪ್ಪದಲ್ಲಿ. ನನ್ನ ತಂದೆಯವರು ಸರ್ಕಾರೀ ಆಸ್ಪತ್ರೆಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಊರು. ನನಗಾಗ ೯-೧೦ ವರ್ಷ ವಯಸ್ಸು. ಆಗ ತಾನೇ ವಿವಾಹವಾಗಿದ್ದ ಜಿ ಟಿ ಎನ್ ದಂಪತಿಗಳನ್ನು ನಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದರು. ಭೋಜನಾನಂತರ ಒಂದು ಕೋಣೆಯಲ್ಲಿ ನಮ್ಮ ತಂದೆ ಮತ್ತು ಜಿ ಟಿ ಎನ್ ಅವರ ಇನ್ನೊಂದು ಕೋಣೆಯಲ್ಲಿ ನನ್ನ ಚಿಕ್ಕಮ್ಮ (ಮಲತಾಯಿ, ದಿ ಗೌರಮ್ಮ) ಮತ್ತು ಶ್ರೀಮತಿ ಜಿ ಟಿ ಎನ್ (ಲಕ್ಷ್ಮೀದೇವಿ, ಅರ್ಥಾತ್ ಲಕ್ಷ್ಮಿ ಅಕ್ಕ) ಅವರ ಲೋಕಾಭಿರಾಮವಾದ ಮಾತುಕತೆ ನಡೆದಿತ್ತು. ನನ್ನದು ಮೂಕಪ್ರೇಕ್ಷಕನ ಪಾತ್ರ. ಸುಮಾರು ೧ ತಾಸು ಸಮಯವಾದ ಬಳಿಕ ಜಿ ಟಿ ಎನ್ ಅವರು ಹೆಂಗಸರು ಮಾತನಾಡುತ್ತಿದ್ದಲ್ಲಿಗೆ ಬಂದು  ಎದುರಿನ ಗೋಡೆಗೆ ‘ನಾವಿನ್ನು ಹೊರಡೋಣವೇ’ ಎಂದು ಕೇಳಿದ್ದು ‘ಹೇಳಬೇಕಾದವರಿಗೆ ಮುಖನೋಡಿ ಹೇಳದೆಯೇ ಗೋಡೆಗೆ ಹೇಳಿದರೆ ಅದು ಅವರ ಪರವಾಗಿ ಉತ್ತರಿಸುತ್ತದೆಯೇ’ ಎಂದು ನನ್ನ ಚಿಕ್ಕಮ್ಮ ತಮಾಷೆ ಮಾಡಿದ್ದು ಅದೇಕೋ ಇನ್ನೂ ನೆನಪಿನಿಂದ ಮಾಸಿಲ್ಲ. ಅಂದಹಾಗೆ ಶ್ರೀಯುತರು ಮಾತನಾಡುವಾಗ ಪತ್ನಿಯ ಹೆಸರು ಹೇಳಿದ್ದನ್ನು ನಾನು ಕೇಳಿಯೇ ಇಲ್ಲ.

ನೆನಪು ೨: ಪ್ರೌಢಶಾಲಾ ವ್ಯಾಸಂಗಕ್ಕಾಗಿ ನಾನು ಮಡಿಕೇರಿಯಲ್ಲಿ ಇದ್ದ ದೊಡ್ಡಪ್ಪ ದಿ ಎ ಪಿ ಶ್ರೀನಿವಾಸ ರಾವ್ ಅವರ ಮನೆಯಲ್ಲಿ ಠಿಕಾಣಿ ಹೂಡಿದ್ದೆ. ಪ್ರೌಢಶಾಲೆಯ ಮೊದಲನೆಯ ವರ್ಷಕ್ಕೆ ಜಿ ಟಿ ಎನ್ ಬರೆದಿದ್ದ ಪುಟ್ಟಪುಟ್ಟ ಕಥೆಗಳ ಸಂಗ್ರಹ ‘ವನಸುಮ’ ಎಂಬ ಪುಸ್ತಕ ‘ನಾನ್ ಡಿಟೇಲ್ಡ್ ಟೆಕ್ಸ್ಟ್’ ಆಗಿತ್ತು. ಅದೊಂದು ದಿನ ದೊಡ್ಡಪ್ಪನ ಮಗ ಲಲಿತಮೋಹನ ‘ನೋಡೋ ನೋಡೋ ನಿನ್ನ ‘ನಾನ್ ಡಿಟೇಲ್ಡ್ ಟೆಕ್ಸ್ಟ್’ ಬೆರದವರು ಹೋಗ್ತಾ ಇದ್ದಾರೆ’ ಎಂದು ಬೊಬ್ಬೆ ಹೊಡೆದ. ನಾನೂ ಈ ಅದ್ಭುತ ವ್ಯಕ್ತಿಯನ್ನು ನೋಡಲೋಸುಗ ಗೇಟಿನ ಬಳಿ ಓಡಿದೆ. ಕಂಡದ್ದೇನು? ಬಿಳಿ ಪ್ಯಾಂಟ್ ಮತ್ತು ಬಿಳಿ ಷರ್ಟು ಧರಿಸಿ ಎದೆಗೆ ತಗಲುವಂತೆ ಮಡಚಿದ ಬಲಗೈನಲ್ಲಿ ಕೆಲವು ಪುಸ್ತಕಗಳನ್ನು ಹಿಡಿದುಕೊಂಡು ಸೈನಿಕನೋರ್ವನ ಶಿಸ್ತಿನ ನಡಿಗೆಯನ್ನು ನೆನಪಿಸುವ ನಡಿಗೆಯಲ್ಲಿ ಹೋಗುತ್ತಿದ್ದ, ಗೇಟಿನ ಬಳಿ ನನ್ನನ್ನು ಕಂಡಾಗ ‘ಹೈಸ್ಕೂಲಿಗೆ ಬಂದಾಯಿತೋ’ ಅನ್ನುತ್ತಾ ಮುಂದೆ ಸಾಗಿದ ಜಿ ಟಿ ಎನ್. ಉಡುಗೆ ಮತ್ತು ನಡಿಗೆಯಲ್ಲಿನ ವಿಶಿಷ್ಟತೆಯನ್ನು ಹೊರತುಪಡಿಸಿದರೆ ಅವರು ಇತರ ಮನುಷ್ಯರಂತೆಯೇ ಇದ್ದರೇ ವಿನಾ ‘ಇವರು ವನಸುಮ ಪುಸ್ತಕ ಬರೆದವರು’ ಎಂದು ಘೋಷಿಸುವ ಯಾವ ವಿಶಿಷ್ಟ ಲಕ್ಷಣವೂ ನನಗೆ ಆಗ ಗೋಚರಿಸಲಿಲ್ಲ.

[ಶ್ರೀಯುತರೊಡನೆ ನಿಕಟ ಸಂಪರ್ಕ ಏರ್ಪಟ್ಟದ್ದು ನಾನು ಕಾಲೇಜು ಮೆಟ್ಟಿಲು ಹತ್ತಿದ ಮೇಲೆಯೇ. ಮಡಿಕೇರಿಯ ಸರ್ಕಾರೀ ಕಾಲೇಜಿನಲ್ಲಿ ಪಿ ಯು ಸಿ ತರಗತಿಯಿಂದ ಮೊದಲ್ಗೊಂಡು ಸ್ನಾತಕ ಪದವಿ ಮುಗಿಸುವ ತನಕ ಕಾಲೇಜಿನ ವಿದ್ಯಾರ್ಥಿನಿಲಯವಾಸಿಯಾಗಿದ್ದ ನನಗೆ ಶ್ರೀಯುತರು ಸ್ಥಳೀಯ ರಕ್ಷಕರು. ನಾನು ಎನ್ ಸಿ ಸಿ ಕೆಡೆಟ್, ಶ್ರೀಯುತರು ಎನ್ ಸಿ ಸಿ ಕ್ಯಾಪ್ಟನ್. ಗಣಿತ ನನ್ನ ಐಚ್ಛಿಕ ವಿಷಯಗಳ ಪೈಕಿ ಒಂದು, ಶ್ರೀಯುತರು ಗಣಿತದ ಉಪನ್ಯಾಸಕರು. ಮಡಿಕೇರಿ ಕಾಲೇಜಿನ ಏಕಮೇವಾದ್ವಿತೀಯ ಸಹಕಕಾರೀ ಮಳಿಗೆಯ ಸೂತ್ರಧಾರಿ ಅವರು, ನನಗೆ ಅಗತ್ಯವಿದ್ದ ಪದಾರ್ಥಗಳನ್ನು ಅಲ್ಲಿಂದಲೇ ಖರೀದಿಸಬೇಕೆಂಬುದು ನನ್ನ ತಂದೆಯವರ ಕಟ್ಟಾಜ್ಞೆ. ಅದಕ್ಕೆ ಅಗತ್ಯವಿರುವ ಹಣವನ್ನು ತಂದೆಯವರು ಜಿಟಿಎನ್ ಅವರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಇತ್ತು, ಹುಡುಗನ ಕೈಗೆ ಹಣ ಕೊಟ್ಟರೆ ಈ ಸತ್ಪುತ್ರ ದುಂದುವೆಚ್ಚ ಮಾಡಿಯಾನು ಎಂಬ ಭಯ ಅವರಿಗಿದ್ದದ್ದರಿಂದ. ಎಂದೇ, ಪದೇಪದೇ ಅವರನ್ನು ಭೇಟಿಯಾಗಲೇ ಬೇಕಾದ ಅನಿವಾರ್ಯತೆಯೂ ಇತ್ತು]

ನೆನಪು ೩: ತರಗತಿಗೆ ೧/೨ ನಿಮಿಷ ತಡವಾಗಿ ಬಂದದ್ದೇ ಆಗಲಿ ತರಗತಿಯನ್ನು ೧/೨ ನಿಮಿಷ ತಡವಾಗಿ ಬಿಟ್ಟದ್ದೇ ಆಗಲಿ ನನಗೆ ನೆನಪಿಲ್ಲ. ತರಗತಿಯ ಒಳಕ್ಕೆ ಶ್ರೀಯತರ ಪ್ರವೇಶಿದ ತಕ್ಷಣ ಎದ್ದು ನಿಲ್ಲುತ್ತಿದ್ದ ನಮ್ಮನ್ನು ಉದ್ದೇಶಿಸಿ ತಕ್ಷಣವೇ ‘ಸಿಟ್ ಡೌನ್’ ಹೇಳಿ ತಮ್ಮ ಟೇಬಲ್ ಬಳಿ ಬರುವ ಮುನ್ನವೇ ಪಾಠ ಆರಂಭಿಸುತ್ತಿದ್ದದ್ದನ್ನೂ ‘ಬೆಲ್’ ಆದ ತಕ್ಷಣ ಪಾಠದ ಮುಕ್ತಾಯದ ವಾಕ್ಯ ಉದ್ಗರಿಸುತ್ತಲೇ ಬಾಗಿಲಿನಿಂದ ಹೊರನಡೆಯತ್ತಿದ್ದದ್ದನ್ನೂ ಮರೆಯಲು ಸಾಧ್ಯವೇ ಇಲ್ಲ. ಅಂತೆಯೇ, ಪಾಠ ಮಾಡುತ್ತಲೇ ಒಳಬಂದವರು ಮೊದಲು ಕಪ್ಪುಹಲಗೆಯನ್ನು ಸ್ವಚ್ಛಗೊಳಿಸುತ್ತಿದ್ದದ್ದನ್ನೂ ಪಾಠ ಮಾಡುತ್ತಲೇ ಹೊರನಡೆಯುವ ಮುನ್ನ ಕಪ್ಪುಹಲಗೆಯನ್ನು ಸ್ವಚ್ಛಗೊಳಿಸುತ್ತಿದ್ದದ್ದನ್ನೂ ಮರೆಯಲು ಸಾಧ್ಯವಿಲ್ಲ.

ನೆನಪು ೪: ನಾನು ಪಿ ಯು ಸಿ ವಿದ್ಯಾರ್ಥಿ ಆಗಿದ್ದಾಗಿನ ಒಂದು ಮರೆಯಲಾಗದ ಅನುಭವ - ಕಾಲೇಜಿನಿಂದ ಬೆಳಗ್ಗೆ ನಡಿಗೆ ಆರಂಭಿಸಿ ನಿಶಾನಿಮೊಟ್ಟೆ ಎಂಬ ಬೆಟ್ಟವೇರಿ ಏರಿದ್ದಕ್ಕೆ ವಿರುದ್ಧ ದಿಕ್ಕಿನಲ್ಲಿ ಇಳಿದು ಮಡಿಕೇರಿ-ಅಂಪಾಜೆ ರಸ್ತೆಯ ಜೋಡುಪಾಲ ಎಂಬ ಸ್ಥಳ ತಲುಪಿ ತದನಂತರ ರಸ್ತೆಯಲ್ಲೇ ನಡೆದು ‘ರಾಜಾ ಸೀಟ್’ ಮೂಲಕವಾಗಿ ಕಾಲೇಜೆಗೆ ಬಂದು ಸೇರುವ ‘ರೂಟ್ ಮಾರ್ಚ್’ ಎಂಬ ಎನ್ ಸಿ ಸಿ ಕಾರ್ಯಕ್ರಮ. ಒಬ್ಬರ ಹಿಂದೆ ಒಬ್ಬರಂತೆಯೇ ಸಾಗಬೇಕಿದ್ದ ಅಗಲಕಿರಿದಾದ ಕಾಲು ಹಾದಿ (ಯಾವ ಮಹಾನುಭಾವರು ಇಲ್ಲಿ ಓಡಾಡಿ ಈ ಹಾದಿ ಉಂಟಾಗಿತ್ತೋ ಗೊತ್ತಿಲ್ಲ). ಸುಮಾರು ೩೫-೪೦ ಕಿಮೀ ದೂರವನ್ನು ಎನ್ ಸಿ ಸಿ ಬೂಟು ಧರಿಸಿ ಕ್ರಮಿಸಲು ನಮಗಿದ್ದ ವಿಶೇಷ ಸೌಲಭ್ಯ - ೧ ಮಿಲಿಟರಿ ಬಾಟಲ್ ನೀರು ಮತ್ತು ಜೋಡುಪಾಲದಲ್ಲಿ ಕೊಟ್ಟ ‘ಪ್ಯಾಕೆಟ್ ಮೀಲ್ಸ್’. ಮಾರ್ಗ ಮಧ್ಯದಲ್ಲೆಲ್ಲೂ ಬಾಟಲ್ ಮರುಭರ್ತಿ ಮಾಡವಂತಿಲ್ಲ ಎಂದು ತಿಳಿದಿದ್ದರೂ ೧/೨ ಕ್ಕಿಂತಲೂ ಕಮ್ಮಿ ದೂರ ಕ್ರಮಿಸುವಷ್ಟರಲ್ಲಿಯೇ ಅನೇಕರ ನೀರು ಖಾಲಿಯಾಗಿತ್ತು. ಇದ್ದವರ ಕೈನಿಂದ ಬೇಡಿ ಗುಟುಕು ನೀರು ಕುಡಿಯುವ ಪರಿಸ್ಥಿತಿ ಅವರದ್ದು. ಅನತಿ ದೂರ ಕ್ರಮಿಸುವಷ್ಟರಲ್ಲಿಯೇ (ನಾನೂ ಸೇರಿದಂತೆ) ಅನೇಕರಿಗೆ ‘ಶೂ ಕಡಿತ’ವಾಗಿದ್ದರಿಂದ ಅವನ್ನು ಕಳಚಿ ‘ಲೇಸ್’ನ ನೆರವಿನಿಂದ ಎರಡನ್ನೂ ಜೋಡಿಸಿ ಮಾಲೆಯಂತೆ ಧರಿಸಿ ಬರಿಗಾಲಿನಲ್ಲಿಯೇ ಪಯಣದ ಮುಂದುವರಿಕೆ. ನಮ್ಮ ಈ ಮೆರವಣಿಗೆಯ ಅಗ್ರಸ್ಥಾನದಲ್ಲಿ ಜಿ ಟಿ ಎನ್, ಕೊನೆಯಲ್ಲಿ ಭಾರತದ ಭೂಸೈನ್ಯದಿಂದ ನಿಯೋಜಿತರಾಗಿದ್ದ ಕ್ಯಾಪ್ಟನ್. ಇವರೀರ್ವರು ಮಹನೀಯರ ಆದಿಯಿಂದ ಅಂತ್ಯದ ತನಕವೂ ನಡೆದ ಹೆಚ್ಚುಕಮ್ಮಿ ಸಮವೇಗದ ಮಿಲಟರಿ ನಡಿಗೆಯನ್ನೇ ಆಗಲಿ, ಪಯಣದ ಅಂತ್ಯದಲ್ಲಿ ತಮ್ಮ ಬಾಟಲ್ ಗಳಲ್ಲಿ ೧/೨ ಕ್ಕಿಂತ ತುಸು ಹೆಚ್ಚು ನೀರು ಉಳಿದಿದ್ದನ್ನು ತೋರಿಸಿದ್ದನ್ನೇ ಆಗಲಿ ಮರೆಯುವುದು ಹೇಗೆ?

ನೆನಪು ೫: ಸ್ನಾತಕ ಪದವಿ ವಿದ್ಯಾರ್ಥಿಯಾಗಿದ್ದಾಗಿನ ಅವಧಿಯಲ್ಲಿ ನಾನು ಪ್ರಾಧಾನ್ಯ ನೀಡುತ್ತಿದ್ದದ್ದು ಇವಕ್ಕೆ: ಚರ್ಚಾ ಸ್ಪರ್ಧೆಗಳು, ಭಾಷಣ ಸ್ಪರ್ಧೆಗಳು, ನಾಟಕಗಳಲ್ಲಿ ಅಭಿನಯಿಸುವುದು ಮತ್ತು ಟೇಬಲ್ ಟೆನ್ನಿಸ್, ಕನ್ನಡ ಕಾದಂಬರಿಗಳನ್ನು ಓದುವುದು. ಇವುಗಳ ನಡುವೆ ಬಿಡುವಾದಾಗ ತರಗತಿ. (ಈ ಅವಧಿಯಲ್ಲಿ ಕಾಲೇಜು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ಗಳಿಸಿದ ಪ್ರಥಮ/ದ್ವಿತೀಯ ಬಹುಮಾನಗಳ ಮತ್ತು ಪ್ರಶಸ್ತಿ ಪತ್ರಗಳ ಪೈಕಿ ಕೆಲವು ಇಂದೂ ನನ್ನ ಮನೆಯಲ್ಲಿ ಎಲ್ಲಿಯೋ ಇರಬೇಕು) ಅಂದ ಮೇಲೆ ತರಗತಿಯ ಪರೀಕ್ಷೆಗಳಲ್ಲಿ ‘ಜೀವನಾಂಶ’ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಂಗತಿಯಾಗಿತ್ತು. ಒಂದು ಬಾರಿ ಒಂದೂ ಪೀರಿಯಡ್ ತಪ್ಪಿಸಿಕೊಳ್ಳದೆಯೇ ೧-೨ ತಿಂಗಳು ತರಗತಿಗೆ ಹಾಜರಾಗಿದ್ದೆ (ಬೇರೆ ಯಾವ ಸ್ಪರ್ಧೆಗಳೂ ಇರಲಿಲ್ಲವಾದ್ದರಿಂದ). ಆ ಬಾರಿಯ ತರಗತಿ ಮಟ್ಟದ ಕಿರು ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಂದಿದ್ದವು. ಅದನ್ನು ನೋಡಿದ ಜಿ ಟಿ ಎನ್ ಉವಾಚ - “ನೀನು ತರಗತಿಗೆ ತಪ್ಪಿಸಿಕೊಳ್ಳದೆ ಹಾಜರಾಗುತ್ತಿದ್ದರೆ ಸಾಕಲ್ಲ ಮಾರಾಯ.ಒಳ್ಳೇ ‘ಮಾರ್ಕ್ಸ್’ ಬರುತ್ತದಲ್ಲ”. ಆಗ ಪ್ರಾಶುಪಾಲರಾಗಿದ್ದ ಎಮ್ ಎ ರಾಮಚಂದ್ರ ರಾವ್ ಉವಾಚ - “ಗೋವಿಂದ ನಿನ್ನ ಭಾಷಣ ಸಾಮರ್ಥ್ಯ ಇತ್ಯಾದಿ ಇತ್ಯಾದಿಗಳು ಈಗ ಕೀರ್ತಿ ತಂದುಕೊಟ್ಟಂತೆ ತೋರಿದರೂ ಮುಂದೆ ಅನ್ನ ನೀಡಲಾರವು”. ಆಗ ಇವಕ್ಕೆಲ್ಲ ಮಾನ್ಯತೆ ನೀಡವ ಮನಃಸ್ಥಿತಿಯಲ್ಲಿ ನಾನಿಲ್ಲದಿದ್ದರೂ ಮುಂದಿನ ಜೀವನಾನುಭವಗಳು ಇವನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಷ್ಟೇ ಅಲ್ಲ ಈಗಲೂ ಇವು ಮನಃಪಟಲದ ಮುಂದೆ ಹಾದುಹೋಗುತ್ತಿರುತ್ತವೆ.

ನೆನಪು ೬: ಒಂದು ವರ್ಷ ಎನ್ ಸಿ ಸಿ ಯ ವಾರ್ಷಿಕ ಕ್ಯಾಂಪ್  ಉಪ್ಪಿನಂಗಡಿಯ ನೇತ್ರಾವತೀ ನದಿಗೆ ತಾಗಿಕೊಂಡಿದ್ದ ಬಯಲೊಂದರಲ್ಲಿ ಎಂದು ತೀರ್ಮಾನಿಸಿದ್ದರು. ನಿಗದಿತ ದಿನದಂದು ನಮ್ಮ ಎನ್ ಸಿ ಸಿ ದಳ ಬಸ್ಸೊಂದರಲ್ಲಿ ಉಪ್ಪಿನಂಗಡಿಯತ್ತ ಜಯಘೋಷ ---- ಇತ್ಯಾದಿ ಇತ್ಯಾದಿಗಳೊಂದಿಗೆ ಪಯಣಿಸುತ್ತಿತ್ತು. ಅಧಿಕಾರೀ ವರ್ಗದವರು ಪೂರ್ವಸಿದ್ಧತೆ ಮಾಡಲೋಸುಗ ಮುಂದಾಗಿಯೇ ಉಪ್ಪಿನಂಗಡಿ ತಲುಪಿದ್ದರು. ನಮ್ಮ ಬಸ್ಸು ಘಾಟಿ ರಸ್ತೆಯಲ್ಲಿ ಜೋಡುಪಾಲಕ್ಕೂ ಮುನ್ನ ಇರುವ ರಬ್ಬರ್ ತೋಟದ ಸಮೀಪದಲ್ಲಿ ಬಸ್ಸಿನ ಬ್ರೇಕ್ ಕೆಟ್ಟು ಪಕ್ಕದ ಬರೆಗೆ ಢಿಕ್ಕಿ ಹೊಡೆದು ನಿಂತಿತು. ಬಸ್ಸಿನ ನಿರ್ವಾಹಕನಿಗೆ ಮಾತ್ರ ಬಲು ಪೆಟ್ಟಾಗಿತ್ತು, ಬೇರೆಯವರಿಗೆ ಯಾರಿಗೂ ಏನೂ ಆಗಿರಲಿಲ್ಲ. ಅಪಘಾತ ಸುದ್ದಿ ಬೇರೆ ಬಸ್ಸಿನವರ ಮೂಲಕ ಮಡಿಕೇರಿಗೂ ಉಪ್ಪಿನಂಗಡಿಗೂ ಸುದ್ದಿ ತಲುಪಿ ಇನ್ನೊಂದು ಬಸ್ ಬರುವ ತನಕ ಅಲ್ಲಿಯೇ ಇದ್ದೆವು (ಕೆಲವರು ರಬ್ಬರ್ ತೋಟದೊಳಗೆ ನುಸುಳಿ ಒಂದಷ್ಟು ರಬ್ಬರ್ ಹಾಲು ಕದ್ದು ತಂದು ಅದರಿಂದ ಚೆಂಡು ಮಾಡಲು ಸಾಧ್ಯವೇ ಎಂಬ ಸಂಶೋಧನೆಯಲ್ಲಿ ಮಗ್ನರಾಗಿದ್ದರು). ಏತನ್ಮಧ್ಯೆ, ಕೆಲವರು ಆಘಾತಕ್ಕೊಳಗಾದವರಂತೆಯೂ ಕೆಲವರು ಮೈಕೈ ನೋವಿನಂದ ನರಳುತ್ತಿರುವಂತೆಯೂ ನಟಿಸಿ ಕ್ಯಾಂಪಿನ ಚಟುವಟಿಕೆಗಳಿಂದ ಒಂದು ದಿನದ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಯೋಜನೆ ರೂಪಿಸಿದ್ದೆವು. ಶಿಬಿರಕ್ಕೆಂದು ನಿಗದಿಯಾಗಿದ್ದ ಸ್ಥಳ ತಲುಪಿದ್ಧಾಯಿತು. ಸ್ವಾಗತಿಸಲು ಜಿ ಟಿ ಎನ್ ಸ್ವತಃ ಹಾಜರಾಗಿದ್ದರು. ನಾವೆಲ್ಲ ಯೋಜನೆಯನ್ವಯ ನಟಿಸುತ್ತಾ ಬಸ್ಸಿನಿಂದ ಕೆಳಗಿಳಿದೆವು. ಎಲ್ಲರ ಮೇಲೆ ಒಮ್ಮೆ ಕಣ್ಣು ಹಾಯಿಸಿದ ಜಿ ಟಿ ಎನ್ ಘರ್ಜಿಸಿದರು - ‘ಯೆಸ್. ಆಲ್ ಆಫ್ ಯು ಫಾಲ್ ಇನ್ ಎ ಲೈನ್. ಕ್ವಿಕ್. ವಿ ಆರ್ ಅಲ್ರೆಡಿ ಲೇಟ್’ ನಮ್ಮ ನಟನೆ ಎಲ್ಲವೂ ಮಾಯವಾಗಿ ದಡದಡನೆ ‘ಫೆಲ್ ಇನ್ ಎ ಲೈನ್’.  ಪುನಃ ಮೊಳಗಿತು ಜಿ ಟಿ ಎನ್ ವಾಣಿ - ‘ನೌ ದ ಟೈಮ್ ಈಸ್ ಎಲೆವೆನ್ ತರ್ಟಿಫೈವ್ ಅವರ್ಸ್. ಲಂಚ್ ಈಸ್ ಎಟ್ ೧೩೦೦ ಅವರ್ಸ್. ಬೈ ದೆಟ್ ಟೈಮ್ ಯು ಶುಡ್ ಹ್ಯಾವ್ ಕಂಪ್ಲೀಟೆಡ್ ದ ಟಾಸ್ಕ್ ಆಫ್ ಪಿಚ್ಚಿಂಗ್ ಯುವರ್ ಟೆಂಟ್ಸ್. ಅಫ್ ಕೋರ್ಸ್ ಆಫ್ಟರ್ ಹ್ಯಾಂಡಿಂಗ್ ಓವರ್ ಯುವರ್ ರೈಫಲ್ಸ್ ಎಟ್ ದ ಸ್ಟೋರ್ಸ್. ಅದರ್ ವೈಸ್ ಯು ಮೇ ಹ್ಯಾವ್ ಟು ಸ್ಲೀಪ್ ಇನ್ ದ ಓಪನ್ ಫೀಲ್ಡ್. ಡಿಸ್ಸಮಿಸ್ಡ್’ ಅವರು ಅದೆಲಿಗೋ ಹೋದರು, ನಾವು ಅವರನ್ನೂ ಇಂಥ ನಿಷ್ಕರುಣಿ ಆಫಿಸರ್ ಅನ್ನು ಪಡೆಯುವಂತೆ ಮಾಡಿದ ನಮ್ಮ ಹಣೆಬರೆಹವನ್ನೂ ಶಪಿಸುತ್ತ ಕಾರ್ಯೋನ್ಮುಖರಾದೆವು.

ನೆನಪು ೭: ಅದೇ ಅವಧಿಯಲ್ಲಿ ಯಾವುದೋ ಸಂದರ್ಭದಲ್ಲಿ  ೨-೩ ಬಹುಮಾನಗಳು ಏಕಕಾಲದಲ್ಲಿ ಲಭಿಸಿದವು. ಕಾಲೇಜಿನಲ್ಲಿ ಕೊಡುತ್ತಿದ್ದ ಬಹುಮಾನಗಳು ಪೂರೈಕೆ ಆಗುತ್ತಿದ್ದದ್ದು ಜಿ ಟಿ ಎನ್ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಸಹಕಾರೀ ಮಳಿಗೆಯಿಂದ. ಎಂದೇ, ನನ್ನನ್ನು ಕರೆಸಿ “ನಿನಗೆ ಬಂದಿರುವ ಬಹುಮಾನಗಳ  ಮೌಲ್ಯ ಗಣನೀಯವಾಗಿದೆ. ಈ ಹಣದಿಂದ ಒಳ್ಳೆಯ ಪುಸ್ತಕಗಳನ್ನು ಪಡೆಯಬಹುದು. ನಮ್ಮಲ್ಲಿ ಇರುವ ಪುಸ್ತಕಗಳ ಪೈಕಿ ನಿನಗೆ ಇಷ್ಟವಾದವನ್ನು ಆಯ್ಕೆ ಮಾಡಿಕೊಟ್ಟರೆ ಅವುಗಳ ಪೈಕಿ ಬಹುಮಾನದ ಮೊಬಲಗಿಗೆ ಸರಿದೂಗುವ ಪುಸ್ತಕಗಳನ್ನು ಬಹುಮಾನವಾಗಿ ಕೊಡಿಸುತ್ತೇನೆ” ಅಂದದ್ದನ್ನೂ ಮರೆಯುವಂತಿಲ್ಲ.

ನೆನಪು ೮: ಜಿ ಟಿ ಎನ್ ಅವರ ಸಹೋದರ ಜಿ ಟಿ ರಾಘವೇಂದ್ರನ ಮದುವೆಯ ಅಥವ ತತ್ಸಂಬಂಧಿತ ವಧೂಗೃಹ ಪ್ರವೇಶದ ಸಮಾರಂಭ (ಯಾವುದೆಂಬುದು ಸರಿಯಾಗಿ ನೆನಪಿಲ್ಲ), ಮೋದೂರಿನ ಮನೆಯಲ್ಲಿ. ಆ ದಿನಗಳಲ್ಲಿ ಇಂಥ ಸಮಾರಂಭಗಳಲ್ಲಿ ಇಂದಿನಂತೆ ಜಾತ್ರೆಯೋಪಾದಿಯಲ್ಲಿ ಜನಜಂಗುಳಿ ಇರುತ್ತಿರಲಿಲ್ಲ. ಆಪ್ತೇಷ್ಟರನ್ನು ಮಾತ್ರ ಆಹ್ವಾನಿಸುತ್ತಿದ್ದ ದಿನಗಳವು. ವಧೂವರರಿಗೆ ಆಹ್ವಾನಿತರು ಮಂತ್ರಾಕ್ಷತೆ ಹಾಕಿ ಉಡುಗೊರೆ ನೀಡಿ ಆಶೀರ್ವದಿಸುವುದು ಕೊನೆಯ ಕಾರ್ಯಕ್ರಮ. ಮೊದಲು ಹಿರಿಯರು ಒಬ್ಬೊಬ್ಬರಾಗಿ ಹೋಗಿ (ಸರತಿ ಸಾಲಿನಲ್ಲಿ ನಿಂತು ಹೋಗುವ ಕ್ರಮ ಇರಲಿಲ್ಲ) ಆಶೀರ್ವದಿಸಿ ಹಿಂದಿರುಗುವಾಗ ಪುರೋಹಿತರು ‘ಏನಯ್ಯಾ, ---- ಅವರೇ, ನೀವು ನಮ್ಮ ಆಹ್ವಾನವನ್ನು ಮನ್ನಿಸಿ ಸಮರಾಂಭಕ್ಕೆ ಆಗಮಿಸಿ ವಧೂವರರನ್ನು ಆಶೀರ್ವದಿಸಿ ಉಡುಗೊರೆ ನೀಡಿದ್ದೀರಿ. ಇದರಿಂದ ನಮಗೆ ಮಹದಾನಂದವಾಗಿದೆ. ನಮ್ಮ ಆತಿಥ್ಯದಲ್ಲಿ ಯಾವ ಕೊರತೆಯೂ ಆಗಿಲ್ಲವೆಂದು ನಂಬಿದ್ದೇನೆ. ಅಕಸ್ಮಾತ್ ಏನಾದರೂ ಅಪಚಾರವಾಗಿದ್ದರೆ ಸಹೃದಯಿಗಳಾದ ತಾವು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆಯೇ ಮನ್ನಿಸಿದ್ದೇರೆಂದು ನಂಬುತ್ತೇವೆ. ತಮ್ಮ ಆಗಮನಕ್ಕೆ ನಾನೂ ನನ್ನ ಕುಟುಂಬದವರೂ ಋಣಿಗಳಾಗಿದ್ದೇವೆ ಎಂಬುದಾಗಿ ಯಜಮಾನರು ಹೇಳುತ್ತಾರೆ’ ಎಂದು ಹೇಳುವ ವಾಡಿಕೆ ಇತ್ತು. ಅವರ ಹೇಳಿಕೆ ಮುಗಿದಾಗ ತಮ್ಮ ಎದುರು ಮನೆಯವರು ಹಿಡಿಯುತ್ತಿದ್ದ ತಾಂಬೂಲದ ತಟ್ಟೆಯನ್ನು ಸ್ಪರ್ಶಿಸಿ ಆ ಹಿರಿಯರು ಸ್ವಸ್ಥಾನ ಸೇರುತ್ತಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ಪುರೋಹಿತರ ಹೇಳಿಕೆ ಬಲು ಕೃತಕವಾಗಿಯೂ ವ್ಯಾಕರಣ ದೋಷಯುಕ್ತ ವಾಕ್ಯಗಳಿಂದ ಮುಜುಗರವಾಗುವಷ್ಟು ಉದ್ದವಾಗಿಯೂ  ಇರುತ್ತಿತ್ತು,  ಇದನ್ನು ಕೇಳಿ ಕೇಳಿ ಜಿ ಟಿ ಎನ್ ಅವರಿಗೆ ರೋಸಿಹೋಯಿತೋ ಏನೋ. ಇದ್ದಕ್ಕಿದ್ದಂತೆ ರಂಗಪ್ರವೇಶ ಮಾಡಿ ತಮ್ಮ ವಿಶಿಷ್ಟ ಭಾಷಾಶೈಲಿಯಲ್ಲಿ ಪುರೋಹಿತರನ್ನು ಅನುಕರಿಸುವ ಧ್ವನಿಯಲ್ಲಿ ‘---ಆಭಾರಿಯಾಗಿದ್ದೇವೆ’ ಹೇಳಿಕೆ ನೀಡತೊಡಗಿದರು. ಆ ಸನ್ನಿವೇಶದಲ್ಲಿ ಪುರೋಹಿತರ ಮತ್ತು ಅಲ್ಲಿದ್ದವರ ಮುಖಭಾವ ಮರೆಯಲು ಸಾಧ್ಯವೇ ಇಲ್ಲ.

ನೆನಪು ೯: ಗೃಹಶಾಂತಿ ಕಾಯ್ದುಕೊಳ್ಳಲೋಸುಗವೋ ಏನೋ, ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲು (!) ಜಿ ಟಿ ಎನ್ ಅನುಮತಿ ನೀಡಿದ್ದರು (ಇಸವಿ ಮರೆತು ಹೋಗಿದೆ)! ನಮಗೆ (ನನಗೂ ನನ್ನ ಹೆಂಡತಿಗೂ) ಶ್ರೀಯುತರೇ ಖುದ್ದಾಗಿ ಬಂದು ಮೌಕಿಖ ಆಹ್ವಾನ ನೀಡಿ, ‘ಬೆಳಿಗ್ಗೆ ೮ ಗಂಟೆಗೇ ಪೂಜೆ ಆರಂಭ, ಮಧ್ಯಾಹ್ನ ೧೨.೩೦ ಕ್ಕೆ ಭೋಜನ. ತಪ್ದೇ ಬನ್ನಿ ಎರಡನೆಯದಕ್ಕೆ’ ಅಂದಿದ್ದರು. ಜಿ ಟಿ ಎನ್ ಅವರ ಸಮಯನಿಷ್ಠೆಯ ಪರಿಚಯವಿದ್ದದ್ದರಿಂದ ನಿಗದಿತ ದಿನದಂದು ಮಧ್ಯಾಹ್ನ ಸುಮಾರು ೧೨ ಗಂಟೆಯ ಹೊತ್ತಿಗೆ ಅವರ ಮನೆಗೆ ಹೋಗೋಣ ಎಂದು ನನ್ನ ಹೆಂಡತಿಗೆ ಹೇಳಿದ್ದೆ. ಅವಳು ೧೨.೩೦ ಕ್ಕೆ ಊಟಕ್ಕೆ ಬಡಿಸಲಾರರು, ಅಷ್ಟು ಬೇಗನೆ ಯಾರು ತಾನೇ ಊಟ ಮಾಡುತ್ತಾರೆ ಅಂದಿದ್ದಳು. ಅಂತೂ ಇಂತೂ ನಾವು ಅವರ ಮನೆ ತಲುಪಿದಾಗ ಗಂಟೆ ೧೨.೪೦. ಮನೆಯ ಗೇಟಿನ ಬಳಿಯೇ ಇದ್ದ ಜಿ ಟಿ ಎನ್ ಸ್ವಾಗತಿಸಿದ್ದು ಹೀಗೆ: ‘ಬರಬೇಕು ಬರಬೇಕು. ಬಲು ದೂರದಿಂದ ಬಂದಿದ್ದೀರಿ (ನಮ್ಮ ಮನೆಯಿಂದ ಅವರ ಮನೆಗೆ ನಡೆಯಲು ೫ ನಿಮಿಷ ಧಾರಾಳ ಸಾಕು), ಸುಖಪ್ರಯಾಣವಾಯಿತೇ? ಪ್ರಯಾಣದ ದಣಿವಾರಿಸಿಕೊಳ್ಳಿ. ಅಷ್ಟು ಹೊತ್ತಿಗೆ ಈಗಾಗಲೇ ಶುರುವಾಗಿರುವ ಮೊದಲನೇ ಪಂಕ್ತಿಯ ಭೋಜನ ಮುಗಿದಿರುತ್ತದೆ’ ಶ್ರೀಯುತರ ಸ್ವಭಾವದ ಪರಿಚಯವಿದ್ದ ನನಗೇನೂ ಅನ್ನಿಸಲೇ ಇಲ್ಲ. ನನ್ನ ಹೆಂಡತಿಗಾದರೋ -------.

ನೆನಪು ೧೦: ನನ್ನ ತಂದೆಯವರ ಮರಣಾನಂತರ ನನ್ನ ತಮ್ಮನ ಮನೆಯಲ್ಲಿ ವಾರ್ಷಿಕ ಶ್ರಾದ್ಧಾವಿಧಿಗಳನ್ನು ಶಾಸ್ತ್ರೋಕ್ತವಾಗಿ ಮಾಡುತ್ತಿದ್ದಾಗ ನಡೆದ ಘಟನೆ ಇದು. ಒಂದು ಬಾರಿ ಅಡುಗೆಯವರು ಮಾಡಿದ್ದ ಶುಂಠಿ ತಂಬುಳಿ ಬಲು ಸಿಹಿಯಾಗಿತ್ತು! ಜಿ ಟಿ ಎನ್ ಅವರಿಗೆ ಅದು ಬಹಳ ರುಚಿಸಿರಬೇಕು. ಎಂದೇ,  ಊಟ ಮಾಡುವಾಗ ‘ತಂಬುಳಿ ಅಂಬೋ ಪಾಯಸ ಬರಲಿ’ ಅಂದು ೨-೩ ಬಾರಿ ಜೋರಾಗಿಯೇ ಕೇಳಿ ಹಾಕಿಸಿಕೊಂಡು ಖುಷಿ ಪಟ್ಟದ್ದನು ಮರೆಯಲು ಸಾಧ್ಯವೇ?

ನೆನಪು ೧೧: ನನ್ನ ಚಿಕ್ಕಮ್ಮ (ಮಲತಾಯಿ) ವಿಧಿವಶರಾದಾಗ ುತ್ತರಕ್ರಿಯೆಗಳನ್ನು ಮಾಡಿದ್ದು ಗೋಕರ್ಣದಲ್ಲಿ. ತದಂಗವಾಗಿ ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಅಪ್ತೇಷ್ಟರಿಗೆ ಭೋಜನಕೂಟದ ವ್ಯವಸ್ಥೆ ಮಾಡಿದ್ದೆವು. ಅಲ್ಲಿ ಮಧ್ಯಾಹ್ನದ ಮಹಾಮಂಗಳಾರತಿ ಆಗುವ ಮುನ್ನ ಭೋಜನಾರಂಭಿಸುವಂತಿಲ್ಲ. ಾ ದಿನ ಅದೇನೋ ಕಾರಣಕ್ಕಾಗಿ ಅಪರಾಹ್ನ ೧ ಗಂಟೆಯಾದರೂ ಮಹಾಮಂಗಳಾರತಿ ಜರಗುವ ಸೂಚನೆಯೇ ಇರಲಿಲ್ಲ. ೧೨.೩೦ ರಿಂದಲೇ ಚಡಪಡಿಸುತ್ತಿದ್ದ ಜಿ ಟಿ ಎನ್ ‘ಸರಿ, ಮಧ್ಯಾಹ್ನ ನಿಗದಿತ ಸಮಯದಲ್ಲಿ ಊಟ ಮಾಡದೇ ಇದ್ದರೆ ನನಗೆ ತೊಂದರೆ ಆಗುತ್ತದೆ, ಮನೆಯಲ್ಲಿ ಅನ್ನ ಮೊಸರು ಇದ್ದೇ ಇರುತ್ತದೆ. ನಿಮಗೆ ಶುಭವಾಗಲಿ’ ಎಂದು ಹೇಳಿ ನಡೆದೇ ಬಿಟ್ಟರು. ಅವರ ಈ ಕಠಿನ ನಿಲುವಿಗೆ ಕಾರಣ ಅವರ ಆರೋಗ್ಯಸ್ಥಿತಿಯೇ ಆಗಿದ್ದರೂ ಅಲ್ಲಿ ಸೇರಿದ್ದ ಮಂದಿಗೆ ಮುಜಗರವಾದದ್ದಂತೂ ನಿಜ.

ನೆನಪು ೧೨: ನಾವೀರ್ವರೂ ನಿವೃತ್ತರಾದ ಬಳಿಕದ ಘಟನೆ ಇದು. ಒಂದು ಸಂಜೆ ಏನನ್ನೋ ಆಲೋಚಿಸುತ್ತಾ ತಲೆ ಬಾಗಿಸಿಕೊಂಡು ನಿಧಾನವಾಗಿ ಸರಸ್ವತೀಪುರಂನ ಪಾರ್ಕ್ ಬಳಿ ‘ವಾಕಿಂಗ್’ ಹೋಗುತ್ತಿದ್ದೆ. ‘ಏನಾಗಿದೆ? ಆರೋಗ್ಯ ಕೆಟ್ಟಿದೆಯೇ?’ ಎಂಬ ಜಿ ಟಿ ಎನ್ ತನ್ನದೇ ಆಧ ಶೈಲಿಯಲ್ಲಿ ಕೇಳಿದ್ದು ನನ್ನ ಕಿವಿಗಪ್ಪಳಿಸಿದಾಗ ತಬ್ಬಿಬ್ಬಾಗಿ ತಲೆ ಎತ್ತಿ ನೋಡಿದೆ. ಮಾಮೂಲಿನ ಬಿಳಿ ದಿರಿಸಿನಲ್ಲಿ ‘ಮಂಕಿಕ್ಯಾಪ್’ ಮತ್ತು ‘ವಾಕಿಂಗ್ ಸ್ಟಿಕ್’ಧಾರೀ ಜಿ ಟಿ ಎನ್ ದರ್ಶನವಾಯಿತು (ಆಗ ಅವರ ವಯಸ್ಸು ೮೦ ರ ಆಸುಪಾಸಿನಲ್ಲಿ, ನನ್ನದು ೬೦ ರ ಆಸುಪಾಸಿನಲ್ಲಿ). ‘ಏನೂ ಆಗಿಲ್ಲ, ಚೆನ್ನಾಗಿಯೇ ಇದ್ದೇನೆ’ ಅಂದೆ. ‘ಮತ್ತೇಕೆ ಹೀಗೆ ರೋಗಗ್ರಸ್ತನ ನಡಿಗೆ? ಕೊಡಗಿನಲ್ಲಿ ಹುಟ್ಟಿಬೆಳೆದವರು, ಎನ್ ಸಿ ಸಿ ತರಬೇತಿ ಪಡೆದವರು ಸುಮ್ಮಸುಮ್ಮನೆ ಹೀಗೆ ನಡೆಯುವುದುಂಟೇ?’ ಅಂದು ಮುಂದೆ ನಡೆದರು. ಅಂದಿನಿಂದ ಆ ರಸ್ತೆಗಳಲ್ಲಿ ‘ವಾಕಿಂಗ್’ ಹೋಗುವುದೇ ಅಪಾಯ ಅಂದುಕೊಂಡು ಬೇರೆ ರಸ್ತೆಗಳನ್ನು ಆಯ್ಕೆ ಮಾಡಿಕೊಂಡೆ. ಆ ರಸ್ತೆಯಲ್ಲಿ ಹೋಗುವಾಗ ಎಲ್ಲಾದರೂ ಜಿ ಟಿ ಎನ್ ಕಾಣಿಸುತ್ತಾರೋ ಎಂಬುದರ ಕಡೆ ಗಮನವಿಟ್ಟಿರುತ್ತಿದ್ದೆ.

ನೆನಪುಗಳು ಇನ್ನೂ ಇವೆ. ಅವೆಲ್ಲವನ್ನೂ ಹೇಳಹೊರಟರೆ ವಾಚಿಸುತ್ತಿರುವ ನೀವು ನಿದ್ರಾವಸ್ಥಗೆ ಜಾರುವ ಸಾಧ್ಯತೆ ಇರುವುದರಿಂದ ಮುಂದುವರಿಸುವುದಿಲ್ಲ.

10 February 2011

‘ಜಾತಿ ಪದ್ಧತಿ’ ಎಂಬ ಅನಿಷ್ಟದ ಅನುಭವಗಳು

ಅನುಭವ ೧: ನನಗಾಗ ೬-೭ ವರ್ಷ ವಯಸ್ಸು (೧೯೪೮-೪೯). ನನ್ನ ತಂದೆಯವರು ಶನಿವಾರಸಂತೆಯ ಸರ್ಕಾರೀ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಮ್ಮ ಮನೆಯ ಎಡ ಪಾರ್ಶ್ವದಲ್ಲಿ ಬರೆ ಮತ್ತು ಅದರ ಮೇಲೊಂದು ಮಣ್ಣಿನ ಮಾರ್ಗ, ಬಲ ಪಾರ್ಶ್ವದಲ್ಲಿ ಒಂದು ದರಿ ಮತ್ತು ಅಲ್ಲೊಂದು ಡಾಂಬರಿನ ಮಾರ್ಗ. ಮುಂಭಾಗದಲ್ಲಿ ಬಲು ವಿಶಾಲವಾದ ಅಂಗಳ. ಅಂಗಳದ ಕೊನೆಯಲ್ಲಿ ಈಗಾಗಲೇ ಉಲ್ಲೇಖಿಸಿದ ಎರಡು ಮಾರ್ಗಗಳು ಸಂಗಮಿಸಿ ಮುಂದುವರಿಯುವ ಸ್ಥಳ. ಮನೆಯ ಹಿತ್ತಿಲಿನಾಚೆ ಕಾಡು. ಬರೆಯ ಮೇಲಿನ ಮಾರ್ಗದಾಚೆ ಇದ್ದ ೨-೩ ಕಚ್ಚಾ ಮನೆಗಳ ಸಮುಚ್ಚಯ ಬಿಟ್ಟರೆ ಕೂಗಳತೆಯಲ್ಲಿ ಯಾವ ಮನೆಗಳೂ ಇರಲಿಲ್ಲ. ಪಕ್ಕದಲ್ಲಿದ್ದ ಮನೆಗಳ ಸಮುಚ್ಚಯದಲ್ಲಿ ಹೆಚ್ಚುಕಮ್ಮಿ ನನ್ನ ವಯಸ್ಸಿನ ಹುಡುಗಿಯೊಬ್ಬಳನ್ನು ಬಿಟ್ಟರೆ ಆಟವಾಡಲು ಯಾರೂ ಇರಲಿಲ್ಲ. ಆ ಹುಡುಗಿ ದೂರ ನಿಂತು ನಾನು ಆಟವಾಡುವುದನ್ನು ನೋಡುತ್ತಿದ್ದಳೇ ವಿನಾ ಕರೆದರೂ ನನ್ನೊಂದಿಗೆ ಆಟವಾಡಲು ಬರುತ್ತಿರಲಿಲ್ಲ. ಒಂದು ದಿನ, ತಮ್ಮ ಮನೆಯ ಹೊರಗೆ ಯಾರೂ ಇಲ್ಲದಿದ್ದಾಗ ಆಟವಾಡಲು ಬಂದಳು. ನಮ್ಮ ಗಲಾಟೆ ಕೇಳಿ ನನ್ನ ಚಿಕ್ಕಮ್ಮ ಇಣುಕಿ ನೋಡಿ ಏನೂ ಹೇಳದೆಯೇ ಒಳಗೆ ಹೋದರು. ೫-೧೦ ನಿಮಿಷ ಆಟವಾಡಿರಬಹುದೇನೋ? ಅವರ ಮನೆಯಿಂದ ಮಹಿಳೆಯೊಬ್ಬರು ಹೊರಬಂದು ‘ಅಲ್ಲೇನು ಮಾಡುತ್ತಿದ್ದಿಯಾ? ಬಾ ಇತ್ತ’ ಎಂದು ಬೊಬ್ಬೆ ಹೊಡೆದದ್ದರಿಂದ ಅವಳು ಓಡಿ ಹೋದಳು. ಅವಳು ಬರದಿದದ್ದರೇನಂತೆ, ನಾನೇ ಅವರ ಮನೆಯಂಗಳಕ್ಕೆ ಹೋಗಿ ಆಟಬಹುದಲ್ಲವೇ? ಒಂದು ದಿನ ಅವರ ಮನೆಯಂಗಳಕ್ಕೆ ಕಾಲಿಟ್ಟೊಡನೆಯೇ, ಈ ಮೊದಲೇ ಉಲ್ಲೇಖಿಸಿದ ಮಹಿಳೆ ಬೊಬ್ಬೆ ಹೊಡೆದಳು-“ಬುದ್ಯೋರೆ, ನೀವ್ಯಾಕೆ ಇಲ್ಲಿಗೆ ಬಂದಿರಿ? ನೀವೆಲ್ಲ ಇಲ್ಲಿಗೆ ಬರ್ಬಾರ್ದು”

“ಯಾಕೆ? ನಾನು ಆಟ ಅಡಕ್ಕೆ ಬಂದದ್ದು”

“ಐ ಅದೆಲ್ಲ ನಿಮಗೆ ಗೊತ್ತಾಗಕ್ಕಿಲ್ಲ. ನೀವು ಬ್ರಾಂಬ್ರು ನಮ್ಮಂಥವರ ಮನೆ ತಾಕೆ ಬರ್ಬಾರ್ದು. ಹೋಗಿ ಹೋಗಿ” ಎಂದು ಓಡಿಸಿಯೇ ಬಿಟ್ಟಳು. ಏಕೆಂದು ನನಗೆ ಅಂದು ಅರ್ಥವಾಗದಿದ್ದರೂ ತಿಳಿದದ್ದು ಇಷ್ಟು - ‘ಅವರು ಹೊಲೆಯರು, ಅವರೊಂದಿಗೆ ನಾನು ಆಡುವಂತಿಲ್ಲ’

ಅನುಭವ ೨: ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಇರುವ ಸರ್ಕಾರೀ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ (೧೯೫೪-೫೬) ಆದ ಅನುಭವ ಇದು. ನಾನು ಮತ್ತು ಸೋದರಸಂಬಂಧಿ ಮೋಹನ (ದೊಡ್ಡಪ್ಪ ದಿ ಎ ಪಿ ಶ್ರೀನಿವಾಸ ರಾವ್ ಅವರ ಮೂರನೇ ಮಗ, ಹಾಲಿ ಯು ಎಸ್ ಎ ವಾಸಿ ಡಾ ಲಲಿತಮೋಹನ) ಇಬ್ಬರೂ ಊರಿನಿಂದ ಸುಮಾರು ೯-೧೦ ಕಿಮೀ ದೂರದಲ್ಲಿದ್ದ ಪ್ರೇಕ್ಷಣೀಯ ಬೃಹತ್ ಕೆರೆಯೊಂದನನ್ನು ನೋಡಲು ಪಾದಯಾತ್ರೆ ಮಾಡಿ ಹಿಂದಿರುಗುತ್ತಿದ್ದೆವು. ಬಾಯಾರಿಕೆ ಆಯಿತೆಂದು ದಾರಿಯಲ್ಲಿ ಸಿಕ್ಕ ಮನೆಯೊಂದಕ್ಕೆ ಹೋಗಿ ಜಗುಲಿಯ ಮೇಲೆ ಕುಳಿತಿದ್ದ ಮಹಿಳೆಯ ಹತ್ತಿರ ಕುಡಿಯಲು ನೀರು ಕೇಳಿದೆವು.

ಆಕೆ: “ನೀವು ಯಾವ ಜನ?”

“ಸೋಮವಾರಪೇಟೆ ಹೈಸ್ಕೂಲ್ ಹೆಡ್ ಮಾಸ್ಟರ್ ಮನೆಯವರು”

“ನಾನು ಕೇಳಿದ್ದು ನೀವು ಯಾವ ಜಾತಿ ಅಂತ?”

“ಬ್ರಾಹ್ಮಣರು”

“ನಿಮಗೆ ನಾನು ನೀರು ಕೊಡೋಕಾಗಲ್ಲ”

“ಯಾಕೆ?”

“ನಾವು ಲಿಂಗಾಯತರು. ಅದಕ್ಕೆ”

“ಕೊಟ್ಟರೆ ಏನಾಗುತ್ತೇ?”

“ಕಾಲ ಕೆಟ್ಟೋಯ್ತು. ಈ ಮಕ್ಕಳಿಗೆ ಮನೇಲಿ ಏನು ಹೇಳಿಕೊಡ್ತಾರೋ? ಲಿಂಗಾಯ್ತ್ರು ಬ್ರಾಂಬ್ರಿಗೆ ನೀರುಗೀರು ಏನಾದ್ರೂ ಕೊಟ್ರೆ ಇಬ್ರಿಗೂ ಪಾಪ ಅಂಟ್ಕೊಳತ್ತೆ”

ಅನುಭವ ೩: ಮಂಡ್ಯ ಜಿಲ್ಲೆಯ ಹೇಮಗಿರಿಯಲ್ಲಿರುವ ಪ್ರೌಢಶಾಲೆಯಲ್ಲಿ ೧೯೬೭-೭೦ರ ಅವಧಿಯಲ್ಲಿ ನಾನು ವಿಜ್ಞಾನ ಶಿಕ್ಷಕನಾಗಿದ್ದೆ. ಶಾಲೆಯ ಒಂದು ಕೊಠಡಿಯಲ್ಲಿ ನಾನೂ ಸೇರಿದಂತೆ ೩ ಮಂದಿ ಬ್ರಹ್ಮಚಾರಿ ಶಿಕ್ಷಕರು ವಾಸವಾಗಿದ್ದೆವು. ೩ ಮಂದಿಯೂ ಬ್ರಾಹ್ಮಣರು. ಶಾಲೆ ಇದ್ದದ್ದು ನಿರ್ಜನ ಪ್ರದೇಶದಲ್ಲಿ. ಶಾಲೆಯಿಂದ ಸುಮಾರು ೧-೨ ಕಿಮೀ ದೂರದಲ್ಲಿ ಕುಪ್ಪಳ್ಳಿ ಮತ್ತು ಬಂಡಿಹೊಳೆ ಎಂಬ ಹಳ್ಳಿಗಳಿದ್ದವು. ಕುಪ್ಪಳ್ಳಿಯಲ್ಲಿ ಬ್ರಾಹ್ಮಣ ಸಮುದಾಯದವರು ಬಹುಸಂಖ್ಯಾತರು, ಬಂಡಿಹೊಳೆಯಲ್ಲಿ ಒಕ್ಕಲಿಗ ಸಮುದಾಯದವರು ಬಹುಸಂಖ್ಯಾತರು. ಕುಪ್ಪಳ್ಳಿಯ ಬ್ರಾಹ್ಮಣ ಸಮುದಾಯದ ಕೆಲವು ಪ್ರಮುಖರು ಹಬ್ಬಹರಿದಿನಗಳಲ್ಲಿ ನಮ್ಮನ್ನು ಮಧ್ಯಾಹ್ನ ಭೋಜನಕ್ಕೋ ಸಂಜೆಯ ಉಪಾಹಾರಕ್ಕೋ ಆಹ್ವಾನಿಸುತ್ತದ್ದರು. ಪುಸ್ತಕಗಳ ನೆರವಿನಿಂದ ಅಡುಗೆ ಮಾಡಿಕೊಳ್ಳುತ್ತಿದ್ದ ನಾವು ಈ ಆಹ್ವಾನವನ್ನು ತಿರಸ್ಕರಿಸುವುದುಂಟೇ? “ಅದೇನು, ಈ ಮೇಷ್ಟ್ರುಗಳು ಕುಪ್ಪಳ್ಳಿಗೆ ಮಾತ್ರ ಹೋಗುತ್ತಾರೆ, ನಮ್ಮ ಊರಿಗೇಕಂತೆ ಬರುವುದಿಲ್ಲ?” ಎಂಬ ಪ್ರಶ್ನೆಯೊಂದು ಜವಾನರ ಮುಖೇನ ಬಂಡಿಹೊಳೆಯಿಂದ ನಮಗೆ ರವಾನೆಯಾಯಿತು. “ಆಹ್ವಾನಿಸಿದರೆ, ಅಲ್ಲಿಗೂ ಬರುತ್ತೇವೆ” ಎಂಬ ಉತ್ತರ ರವಾನಿಸಿದ್ದಾಯಿತು. ಮುಂದೊಂದು ದಿನ ಹಳ್ಳಿಯ ಪಂಚಾಯತ್ ಅಧ್ಯಕ್ಷರಿಂದ ಸಂಜೆಯ ಚಹಾಕ್ಕೆ ಬರುವಂತೆ ಕರೆ ಬಂತು. ಅವರು ಒಕ್ಕಲಿಗ ಸಮುದಾಯದವರು. ಸಮಯಕ್ಕೆ ಸರಿಯಾಗಿ ನಾವು ಅವರ ಮನೆಯಲ್ಲಿ ಹಾಜರಾದೆವು. ಮನೆಯ ಹೊರಗಿನ ಜಗುಲಿಯಲ್ಲಿ ಮೇಷ್ಟ್ರುಗಳಿಗೆಂದು ವಿಶೇಷವಾಗಿ ಹಾಕಿದ್ದ ಚಾಪೆಯಲ್ಲಿ ಆಸೀನರಾಗಿ ಉಭಯ ಕುಶಲೋಪರಿ ನಡೆಸಿದ್ದಾಯಿತು.

“ಮೇಷ್ಟ್ರು ಏನು ತಗೊಳ್ತೀರಿ?”

“ಮಾಂಸಾಹಾರ ಒಂದು ಬಿಟ್ಟು ನೀವೇನು ಕೊಡ್ತಿರೋ ಅದು”

“ನಾವು ಒಕ್ಕಲಿಗರು, ನೀವು ಬ್ರಾಹ್ಮಣರು”

“ನಮಗೇನೂ ತೊಂದರೆ ಇಲ್ಲ, ನಾವು ನೋಡೋದು ನೈರ್ಮಲ್ಯ, ಜಾತಿ ಅಲ್ಲ”

“ಹ್ಹ ಹ್ಹ ಹ್ಹ ನಿಮಗೆ ಜಾತಿ ಇಲ್ಲ ಅನ್ನಿ”

“ಹ್ಹ ಹ್ಹ ಹ್ಹ ತಿನ್ನುವ ವಿಷಯದಲ್ಲಿ ಖಂಡಿತ ಇಲ್ಲ”

“ಮೇಷ್ಟ್ರುಗಳಿಗೆ ಏನಾರೂ ತಗೊಂಬನ್ರೋ” ಮನೆಯೊಳಗಿನವರಿಗೆ ಆಜ್ಞೆ ಹೋಯಿತು.

ಒಳಗಿನಿಂದ ಬಂದಿತು - ಮೂವರಿಗೂ ಒಂದೊಂದು ಲೋಟ ಹಾಲು, ಎರಡೆರಡು ಬಾಳೆಯ ಹಣ್ಣು”

ಅದನ್ನೇ ಗಂಭೀರವಾಗಿ ಸ್ವೀಕರಿಸಿ ರಾತ್ರಿಯ ಅಡುಗೆ ಮಾಡಲೇಬೇಕಾದ ಅನಿವಾರ್ಯತೆಯಿಂದ ಚಿಂತಿತರಾಗಿ ಹೀಂದಕ್ಕೆ ಧಾವಿಸಿದೆವು. ನಾವು ಊಟ ಮಾಡಲು ತಯಾರಿದ್ದರೂ ಅವರು ನೀಡಲು ಸಿದ್ಧರಿರಲಿಲ್ಲ. ಆಮೇಲೆ ತಿಳಿದಿದ್ದಿಷ್ಟು: ಹಾಲು ಮತ್ತು ಹಣ್ಣು ಕೊಡುವುದೂ ತಸ್ವೀಕರಿಸುವುದರಿಂದ ‘ಜಾತಿ ಕೆಡುವುದಿಲ್ಲ’.

ಅನುಭವ ೪: ಇನ್ನೊಂದು ದಿನ ಬಂಡಿಹೊಳೆವಾಸಿ ಒಕ್ಕಲಿಗ ಸಮುದಾಯದ ಅನುಕೂಲಸ್ಥ ಮುಖಂಡರ ಮಗಳ ಮದುವೆಗೆ ಬರಲೇಬೇಕೆಂಬ ಒತ್ತಾಯಪೂರ್ವಕ ಅಮಂತ್ರಣ ತಲುಪಿತು. ಅಂದು ರಜಾದಿನವಾದ್ದರಿಂದ ನನ್ನ ಇಬ್ಬರು ಸಹೋದ್ಯೋಗಿ ಮಿತ್ರರು ತಮ್ಮತಮ್ಮ ೂರಿಗೆ ಹೋಗಿದ್ದರಿಂದ ನಾನೊಬ್ಬನೇ ಹೋಗಬೇಕಾಯಿತು. ಅನುಕೂಲಸ್ಥರ ಮನೆಯ ಮದುವೆಯ ಸಮಾರಂಭವಾದ್ದರಿಂದ ಭೋಜನಕ್ಕೆ ನನ್ನಂಥ ಅನ್ಯ ‘ಮೇಲ್ಜಾತಿಯವರಿಗೂ’ ಏನಾದರೂ ವ್ಯವಸ್ಥೆ ಮಾಡಿರುತ್ತಾರೆಂದು ಭಾವಿಸಿ ಹೋಗಿದ್ದ ನನಗೆ ನಿರಾಸೆ ಕಾದಿತ್ತು. ಏಕೆ ಗೊತ್ತೇ? ಒಂದು ಮೊರದಲ್ಲಿ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ೧ ರೂಪಾಯಿ ನಾಣ್ಯ ಇಟ್ಟು “ನೀವು ಬಂದದ್ದು ನಮ್ಮ ಸೌಭಾಗ್ಯ. ಇದನ್ನು ಒಪ್ಪಿಸಿಕೊಳ್ಳಬೇಕು” ಅನ್ನುತ್ತಾ ಅದನ್ನು ನನ್ನ ಕೈಗೆ ಕೊಟ್ಟು ನಮಸ್ಕರಿಸಿದರು. ಬಲು ಗಂಭೀರವದನದಿಂದ ಅದನ್ನು ಸ್ವೀಕರಿಸಿ “ವಧೂವರರಿಗೆ ಶುಭವಾಗಲಿ” ಎಂದು ಆಶೀರ್ವದಿಸಿ, ಮನಸ್ಸಿನಲ್ಲಿಯೇ ರೂಮಿಗೆ ಹೋಗಿ ಅಡುಗೆ ಮಾಡಲು ಕಾರಣವಾದ ಜಾತಿ ಸಂಪ್ರದಾಯಕ್ಕೆ ಶಪಿಸುತ್ತಾ ಆ ಮೊರ ಸಮೇತ ಹಿಂದಿರುಗಿದೆ.

ಅನುಭವ ೫: ಆ ಶಾಲೆಯಲ್ಲಿ ಇದ್ದಾಗಲೇ ಆದ ಇನ್ನೊಂದು ಅನುಭವವೂ ಉಲ್ಲೇಖಾರ್ಹ. ಪ್ರತೀದಿನ ತೊಳೆಯಬೇಕಾದ ಪಾತ್ರೆಗಳನ್ನೆಲ್ಲ ಒಂದು ದೊಡ್ಡ ಬಕೆಟ್ಟಿನಲ್ಲಿ ತುಂಬಿ ಪಕ್ಕದಲ್ಲಿ ಇದ್ದ ಕಾಲುವೆಗೆ ಅಥವ ಹೊಳೆಗೆ (ಶಾಲೆಯಿಂದ ಅನತಿ ದೂರದಲ್ಲಿ ಹೇಮಾವತಿ ಹೊಳೆ ಮತ್ತು ಒಂದು ಕಾಲುವೆ ಎರಡೂ ಹರಿಯುತ್ತಿದ್ದವು) ಕೊಂಡೊಯ್ದು ತೊಳೆದು ತರುತ್ತಿದ್ದೆವು. ಬಹುತೇಕ ಸಂದರ್ಭಗಳಲ್ಲಿ ಯಾರಾದರೂ ವಿದ್ಯಾರ್ಥಿಗಳು ನಮ್ಮ ಕೈನಿಂದ ಬಕೆಟ್ ಕಿತ್ತೊಯ್ದು ಪಾತ್ರೆ ತೊಳೆದು ತರುತ್ತಿದ್ದರು. ಅದೊಂದು ದಿನ, ಪಾತ್ರೆ ತೆಗೆದುಕೊಂಡು ಹೊರಟಿದ್ದ ನನ್ನ ಕೈನಿಂದ  ಹುಡುಗನೊಬ್ಬ ಬಕೆಟ್ ಕಿತ್ತುಕೊಂಡು ಕಾಲುವೆಯತ್ತ ಓಡಿದ. (ರೋಗಿ ಬಯಸಿದ್ದೂ ಹಾಲು ಅನ್ನ ------). ಆತ ಪಾತ್ರೆಗಳನ್ನು ತೊಳೆದು ರೂಮಿನಲ್ಲಿ ತಂದಿಟ್ಟು ಓಡಿದ. ಅವನು ಹೋದ ತಕ್ಷಣ ಜವಾನನೊಬ್ಬ ಬಂದು ಪುನಃ ಆ ಬಕೆಟ್ಟನ್ನು ಕೊಂಡೊಯ್ದು ಪಾತ್ರೆಗಳನ್ನು ಕಾಲುವೆ ನೀರಿನಲ್ಲಿ ಮುಳುಗಿಸಿ ತೆಗೆದು ತಂದಿಟ್ಟ.

“ಯಾಕಪ್ಪ, ಆ ಹುಡುಗ ಈಗ ತಾನೇ ತೊಳೆದಿಟ್ಟ ಪಾತ್ರೆಗಳನ್ನು ಪುನಃ ತೊಳೆದೆ”

“ನಿಮಗೆ ಗೊತ್ತಿಲ್ಲಾಂತ ಕಾಣತ್ತೆ ಅವ ಯಾರೂಂತ”

“ಅವನು ಯಾರು, ನಮ್ಮ ಸ್ಕೂಲಿನ ಹುಡುಗ ತಾನೆ?’

“ ಐ--. ನಿಮಗೆ ಗೊತ್ತಿಲ್ಲ. ಅವನು, ಹರಿಜನರ ಹುಡುಗ

11 January 2011

ನಾನು ‘ಮನೆಯಿಂದ ಓಡಿ ಹೋದ’ ಪ್ರಸಂಗ

ವಿದ್ಯಾರ್ಥಿ ದೆಸೆಯಲ್ಲಿ ರಜಾದಿನಗಳಲ್ಲಿ ನಾನು ಸಾಮಾನ್ಯವಾಗಿ ಇರುತ್ತಿದ್ದದ್ದು ಕೊಡಗಿನ ಸುಂಟಿಕೊಪ್ಪದ ಸಮೀಪ ಇದ್ದ ದಿ.ಜಿ ಎಮ್ ಮಂಜನಾಥಯ್ಯನವರ ಮನೆಯಲ್ಲಿ.  ಶ್ರೀಮತಿ ಮೀನಾಕ್ಷಮ್ಮ ಮಂಜನಾಥಯ್ಯನವರು ನನ್ನ ತಂದೆಯವರ ಚಿಕ್ಕಮ್ಮ. ಎಂದೇ, ಇವರು ನನ್ನ ಅಜ್ಜ ಅಜ್ಜಿಯರು. ಈ ಅಜ್ಜಿಯನ್ನು ನಾನು ಆಗ ಕರೆಯುತ್ತಿದ್ದದ್ದು ಚಿಕ್ಕಮ್ಮ ಎಂದು. ನನ್ನ ತಾಯಿ ನನಗೆ ಸುಮಾರು ೧ ವರ್ಷ ವಯಸ್ಸು ಆಗುವಷ್ಟರಲ್ಲೇ ಬೆಂಕಿ ಆಕಸ್ಮಿಕದಿಂದ ಗತಿಸಿದ ಬಳಿಕ ನನ್ನ ತಂದೆ ಪುನಃವಿವಾಹವಾಗುವ ತನಕ, ಅಂದರೆ, ಸುಮಾರು ೩-೪ ವರ್ಷ ಕಾಲ  ನನ್ನನ್ನು ಪೋಷಿಸಿದವರು ಎಂಬ ಕಾರಣಕ್ಕಾಗಿ.

ಶೀರ್ಷಿಕೆಯಲ್ಲಿ ಉಲ್ಲೇಖಿಸಿದ ಪ್ರಸಂಗ ನಡೆದಾಗ ನನ್ನ ವಯಸ್ಸು ಬಹುಶಃ ೯-೧೦ ವರ್ಷ ಇದ್ದಿರಬಹುದು. ಆಗ ನನ್ನ ತಂದೆ ಸುಂಟಿಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು. ನಾನು ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇರುತ್ತಿತ್ತು. ಆ ರಜಾ ದಿನಗಳಲ್ಲಿಯೂ ನನ್ನ ವಾಸ್ತವ್ಯ ‘ಅಜ್ಜ-ಚಿಕ್ಕಮ್ಮ’ರ ಮನೆಯಲ್ಲಿ. ಶುಕ್ರವಾರ ಸಂಜೆ ನನ್ನ ತಂದೆ ಸಕುಟುಂಬ ಸಮೇತ (ಅರ್ಥಾತ್, ನಾನು, ತಂದೆ ಮತ್ತು ಚಿಕ್ಕಮ್ಮ ) ಅವರ ಮನೆಗೆ ಹೋಗಿ ರಾತ್ರಿಯ ಊಟ ಮುಗಿಸಿ ನನ್ನನ್ನು ಅಲ್ಲಿಯೇ ಬಿಟ್ಟು ಹಿಂದಿರುಗುತ್ತಿದ್ದರು. ಭಾನುವಾರ ಸಂಜೆ ಪುನಃ ಒಬ್ಬರೇ ಬಂದು ನನ್ನನ್ನು ಕರೆದೊಯ್ಯತ್ತಿದ್ದರು. ಇಂಥ ಒಂದು ಸಂದರ್ಭದಲ್ಲಿ ----

ಆ ಮನೆಯಲ್ಲಿ ಪ್ರತೀ ದಿನ ರಾತ್ರಿ ೮ ಗಂಟೆಗೆ ಸರಿಯಾಗಿ ಊಟ. ನಡುಮನೆಯಲ್ಲಿದ್ದ ಗೋಡೆ ಗಡಿಯಾರ ೮ ಹೊಡೆದು ೧-೨ ನಿಮಿಷಗಳಲ್ಲಿ ಭೋಜನಾರಂಭ. ರಾತ್ರಿ ಊಟದ ಸಮಯ ನಿರ್ಧರಿಸುತ್ತಿದ್ದದ್ದೇ ಈ ಗಡಿಯಾರ ಎಂದು ನಾನು ತಿಳಿದಿದ್ದೆ. ಎಂದೇ, ಭೋಜನಾರಂಭಕ್ಕೆ ಮುನ್ನ ಗಂಟೆ ಬಾರಿಸುವಾಗ ಗಡಿಯಾರದ ಸಣ್ಣ ಮುಳ್ಳು ಮತ್ತು ದೊಡ್ಡ ಮುಳ್ಳು ಇರುತ್ತಿದ್ದ ಸ್ಥಾನ ಸರಿಯಾಗಿ ಗಮನಿಸಿದ್ದೆ.  ಆ ಗಡಿಯಾರದ ಪಕ್ಕದಲ್ಲಿ ಇದ್ದ ಕಿಟಕಿಯನ್ನು ಹತ್ತಿ ಕಸರತ್ತು ಮಾಡಿದರೆ ಗಡಿಯಾರದ ಒಂದು ಮುಳ್ಳು ಕೈಗೆಟುಕುತ್ತಿತ್ತು. ಒಂದು ದಿನ ಗಡಿಯಾರದ ಮುಳ್ಳುಗಳು ನಾನು ಗಮನಿಸಿದ್ದ ಸ್ಥಾನ ತಲಪುವ ಮೊದಲೇ ಕಸರತ್ತು ಮಾಡಿ ಕೈಗೆಟುಕಿದ ಒಂದು ಮುಳ್ಳನ್ನು ತುಸು ಮುಂದು ಸರಿಸಿ ಆ ಸ್ಥಾನ ತಲಪುವಂತೆ ಮಾಡಿದೆ. ತತ್ಪರಿಣಾಮವಾಗಿ ನಿಜವಾಗಿ ೭ ಗಂಟೆಯಾದಾಗ ಗಡಿಯಾರ ೮ ಗಂಟೆ ತೋರಿಸುತ್ತಿತ್ತು. ಗಡಿಯಾರ ಊಟ ಮಾಡಬೇಕಾದ ಸಮಯ ಸೂಚಿಸುತ್ತಿದ್ದರೂ ಊಟ ಸುರು ಮಾಡುವ ಬದಲು ಎಂದೂ ತಪ್ಪಾಗಿ ಸಮಯ ತೋರದಿದ್ದ ಗಡಿಯಾರ ಅಂದೇಕೆ ತಪ್ಪು ಸಮಯ ತೋರುತ್ತಿದೆ ಎಂಬುದನ್ನು ಪತ್ತೆಹಚ್ಚಲೋಸುಗ ಮನೆಯವರೆಲ್ಲರೂ (ಅಜ್ಜ, ಅಜ್ಜಿ ಉರುಫ್ ಚಿಕ್ಕಮ್ಮ, ಮತ್ತು ಅವರ ಮೂರು ಮಕ್ಕಳು) ಗಡಿಯಾರ ಇದ್ದ ಕೊಠಡಿಯಲ್ಲಿ ಸಭೆ ಸೇರಿದರು. ಎಲ್ಲರಿಗೂ ಈ ವಿದ್ಯಮಾನದಲ್ಲಿ ನನ್ನದೇನೋ ಕೈವಾಡ ಇದೆ ಎಂಬ ಗುಮಾನಿ ಏಕೆ ಬಂತೋ ತಿಳಿಯದು. ‘ಗಡಿಯಾರ ನನ್ನ ಕೈಗೆಟುಕುವುದಿಲ್ಲ’ ಎಂದು ನಾನು ಗಡಿಯಾರದ ಕೆಳಗೆ ನಿಂತು ಸಾಬೀತು ಪಡಿಸಿದರೂ ಎಲ್ಲರದೂ ಒಂದೇ ಅಭಿಪ್ರಾಯ -‘ಇದು ಗೋವಿಂದನದೇ ಕೆಲಸ’. “ಒಂದೊಂದು ಚೀಟಿಯಲ್ಲಿ ಒಬ್ಬೊಬ್ಬರ ಹೆಸರು ಬರೆದು ಆ ಚೀಟಿಗಳನ್ನು ದೇವರ ಮುಂದಿಟ್ಟು ಈ ಕೃತ್ಯವೆಸಗಿದವನನ್ನು ಪತ್ತೆಹಚ್ಚುವಂತೆ ಪ್ರಾರ್ಥಿಸಿ, ಒಂದು ಚೀಟಿ ಎತ್ತುವುದು. ಅದರಲ್ಲಿ ಯಾರ ಹೆಸರು ಇರುತ್ತದೋ ಅವರೇ ಅಪರಾಧಿ ಎಂದು ತೀರ್ಮಾನಿಸೋಣ” ಅಪರಾಧಿಯನ್ನು ಪತ್ತೆಹಚ್ಚಲು ಅಜ್ಜ ಸೂಚಿಸಿದ ತಂತ್ರ ಇದು. ಇದನ್ನು ನಾನು ಒಪ್ಪಿಕೊಳ್ಳದೇ ಇರುವಂತಿಲ್ಲ. ಒಪ್ಪಿಕೊಳ್ಳದಿದದ್ದರೆ ನಾನೇ ಅಪರಾಧಿ ಎಂಬುದನ್ನು ಒಪ್ಪಿಕೊಂಡಂತಾಗುತ್ತದ್ದಲ್ಲ. ಅಜ್ಜ ಚೀಟಿಗಳನ್ನು ಸಿದ್ಧಪಡಿಸಿದರು, ಪ್ರತಿಯೊಂದನ್ನೂ ಮುದ್ದೆಮಾಡಿ ನನ್ನ ಕೈನಲ್ಲಿಟ್ಟರು. ಅವನ್ನು ದೇವರ ಮುಂದಿಟ್ಟು ಅಪರಾಧಿಯನ್ನು ಹಿಡಿದುಕೊಡುವಂತೆ ಪ್ರಾರ್ಥಿಸುವ ಕಾರ್ಯ ನಾನು ನಿಭಾಯಿಸ ಬೇಕಾಯಿತು. ‘ದೇವರೇ ನನ್ನನ್ನು ಕಾಪಾಡಪ್ಪ’ ಎಂದು ಮನಸ್ಸಿನಲ್ಲಿಯೇ ಪ್ರಾರ್ಥಿಸಿದ್ದೂ ಆಯಿತು. ಆ ಚೀಟಿಗಳ ಪೈಕಿ ಒಂದನ್ನು ಎತ್ತುವವನೂ ನಾನೇ ಎಂಬುದು ಉಳಿದವರ ಸರ್ವಾನುಮತದ ತೀರ್ಮಾನ. ಅಂತೆಯೇ, ಒಂದು ಚೀಟಿ ಎತ್ತಿದೆ. ಬಿಡಿಸಿ ನಾನೇ ಓದಿದೆ- ‘ಗೋವಿಂದ’. ದೇವರೇ ಹೇಳಿದ ಮೇಲೆ ಒಪ್ಪಿಕೊಳ್ಳದೇ ಇರುವುದು ಹೇಗೆ? ಮುಳ್ಳು ತಿರುಗಿಸಿದ್ದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ನೀಡಿದ್ದೂ ಆಯಿತು. ಎಲ್ಲರೂ, ನಕ್ಕಿದ್ದೇ ನಕ್ಕಿದ್ದು. ಬೈಗುಳ ಸುರಿಮಳೆ ನಿರೀಕ್ಷಿಸುತ್ತಿದ್ದ ನನಗೆ ಅವರು ನಕ್ಕದ್ದು ಏಕೆಂದು ಅರ್ಥವಾಗಲೇ ಇಲ್ಲ. (ಮುಂದೆ ಎಷ್ಟೋ ವರ್ಷಗಳ ಬಳಿಕ ತಿಳಿಯಿತು, ಎಲ್ಲ ಚೀಟಿಗಳಲ್ಲಿಯು ನನ್ನ ಹೆಸರನ್ನೇ ಬರೆದಿದ್ದರೆಂದು!). ಸಧ್ಯಕ್ಕೆ ಬೈಸಿಕೊಳ್ಳದಿದದ್ದರೂ ಪೆಟ್ಟು ಬೀಳದಿದ್ದರೂ ಮಾರನೆಯ ದಿನ ಅಪ್ಪನಿಗೆ ಹೇಳುತ್ತಾರೆ. ಮನೆಗೆ ಕರೆದೊಯ್ದ ಬಳಿಕ ಚಿಕ್ಕಮ್ಮನಿಗೆ ಹೇಳುತ್ತಾರೆ. ಅವರು ಸುಮ್ಮನಿರುತ್ತಾರೆಯೇ? ಖಂಡಿತ ಇಲ್ಲ. (ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ, ಆ ದಿನದ ತಪ್ಪುಗಳ ಪಟ್ಟಿ ಮಾಡಿ ಅವೆಲ್ಲವಕ್ಕೂ ಒಂದೇ ಕಂತಿನಲ್ಲಿ ಪೆಟ್ಟು ಕೊಡುವುದೂ, ಆ ಕುರಿತಾಗಿ ಅಪ್ಪನಿಗೆ ಹೇಳಿದರೆ ಮರುದಿನ ಅದಕ್ಕೆ ವಿಶೇಷವಾಗಿ ಹೆಚ್ಚುವರಿ ಪೆಟ್ಟು ಕೊಡುವುದೂ ಅವರ ಕ್ರಮವಾಗಿತ್ತು). ಮರು ದಿನ ಸಂಜೆಯ ತನಕವೂ ಮುಂಬರಲಿರುವ ಗಂಡಾತರದಿಂದ ತಪ್ಪಿಸಿಕೊಳ್ಳುವುದು ಹೇಗೆಂಬುದೇ ಬಲು ದೊಡ್ಡ ಚಿಂತೆಯಾಗಿತ್ತು. ಮರು ದಿನ ಸಂಜೆ ಅಪ್ಪನ ಕಾರಿ ಸದ್ದು ಕೇಳುತ್ತಿದ್ದಂತೆಯೇ (ಆಗ ಅಪ್ಪನ ಹತ್ತಿರ ಒಂದು ‘ವಾಕ್ಸಾಲ್’ ಎಂಬ ಬ್ರ್ಯಾಡಿನ ಪುಟ್ಟ ಕಾರೊಂದಿತ್ತು) ಗಂಡಾಂತರದಿಂದ ಪಾರಾಗಲು ಉಪಾಯವೊಂದು ಇದ್ದಕಿದ್ದಂತೆಯೇ ಹೊಳೆಯಿತು (ಆರ್ಕಿಮಿಡೀಸ್!). ಅಪ್ಪ ಹೋಗುವ ತನಕ ಯಾರಿಗೂ ಸಿಕ್ಕದಂತೆ ಅಡಗಿ ಕುಳಿತುಕೊಳ್ಳುವುದೇ ಸರ ಎಂದು. ತಡ ಮಾಡದೆ ಯೋಜನೆಯಂತೆ ಮಾಡಿದ್ದೂ ಆಯಿತು. ಮನೆಯ ಸುತ್ತಲೂ ಕಾಫಿತೋಟ, ಆಸುಪಾಸಿನ ತೋಟದ ಪ್ರತೀ ಅಂಗುಲ ಜಾಗೆಯೂ ನನಗೆ ಸುಪರಿಚಿತ. ಅಂದ ಮೇಲೆ ನನ್ನನ್ನು ಹುಡುಕಿ ಹಿಡಿಯಲು ಸಾಧ್ಯವೇ? ಕತ್ತಲಾಗುವ ತನಕ ಆಳುಗಳ ಗುಂಪು ನನ್ನನ್ನು ಹುಡುಕುವ ನಿರರ್ಥಕ ಪ್ರಯತ್ನ ಮಾಡಿದರು. ಮನೆಯ ಹಿಂಭಾಗದಲ್ಲಿದ್ದ ಕಾಫಿತೋಟದ ನನ್ನ ಅಡಗುದಾಣದಿಂದ ಅವರ ಓಡಾಟವನ್ನು ನೋಡಬಲ್ಲವನಾಗಿದ್ದೆ. ಕತ್ತಲಾಯಿತು. ನನ್ನ ಅಪ್ಪನ ಕಾರು ಹೋದದ್ದೂ ತಿಳಿಯಿತು. ಒಂದು ಗಂಡಾಂತರದಿಂದ ಬಚಾವಾದೆ ಅಂದುಕೊಂಡು ಮನೆಗೆ ಹಿಂದಿರುಗುವ ತಯಾರಿಯಲ್ಲಿದ್ದಾಗ ಇನ್ನೊಂದು ಆಲೋಚನೆ ಕಾಡತೊಡಗಿತು. ಈಗಲೇ ಮನೆಯೊಳಕ್ಕೆ ಹೋದರೆ ಅಜ್ಜ ತಮ್ಮ ಕಾರಿನಲ್ಲಿ ನನ್ನನ್ನು ಕರೆದೊಯ್ಯ ಬಹುದಲ್ಲವೇ? ಇನ್ನೂ ಸ್ವಲ್ಪ ಹೊತ್ತು ಅಡಗಿರುವುದೇ ಒಳ್ಳೆಯದು ಎಂದು ತೀರ್ಮಾನಿಸಿದೆ. ಅಂದಿನ ದಿನಗಳಲ್ಲಿ ಮಡಿಕೇರಿಯಲ್ಲಿ ಮಾತ್ರ ಬೃಹದಾಕಾರದ ಜನರೇಟರ್ ನೆರವಿನಿಂದ ಸಂಜೆ ೬-೭ ಗಂಟೆಯ ನಂತರ ರಾತ್ರಿ ಕಾಲ ವಿದ್ಯುತ್ ಪೂರೈಕೆ ಮಾಡುತ್ತಿದ್ದರು. ಉಳಿದೆಡೆ ಸೀಮೆ ಎಣ್ಣೆ ದೀಪಗಳದ್ದೇ ಕಾರುಬಾರು. ತಮ್ಮದೇ ಆದ ಜನರೇಟರ್ ಇಟ್ಟುಕೊಂಡಿದ್ದ ಕಾರಣ ನನ್ನ ಈ ಅಜ್ಜ ಮನೆಯಲ್ಲೂ ರಾತ್ರಿ ವೇಳೆ ವಿದ್ಯದ್ದೀಪಗಳು ಬೆಳಗುತ್ತಿದ್ದವಾದರೂ ಮನೆಯ ಹೊರಾಂಗಣ ಕತ್ತಲಲ್ಲಿ ಮುಳುಗಿರುತ್ತಿತ್ತು.  ಆದ್ದರಿಂದ ಯಾರ ಕಣ್ಣಿಗೂ ಬೀಳದೆಯೆ ಮನೆಯ ಸುತ್ತಮುತ್ತಲೇ ಓಡಾಡಬಹುದಿತ್ತು. ಗಂಟೆ ಎಂಟಾಯಿತು. ಮನೆಯವರು ಎಂದಿನಂತೆ ಊಟಕ್ಕೆ ಕುಳಿತರು. ಕಿಟಕಿಯಿಂದ ಇದನ್ನು ಖಾತರಿ ಪಡಿಸಿಕೊಂಡೆ. ನನ್ನ ಹಸಿವು? ತೋಟದ ಮನೆಯಲ್ಲವೇ? ಹಣ್ಣುಗಳಿಗೇನೂ ಬರವಿರಲಿಲ್ಲ. ಮನೆಯ ಜಗಲಿಯ ಒಂದು ಮೂಲೆಯಲ್ಲಿ ಇಟ್ಟಿದ್ದ ಮರದ ಕಪಾಟಿನಲ್ಲಿ ಬಾಳೆಹಣ್ಣಿನ ರಾಶಿ ಯಾವಾಗಲೂ ಇರುತ್ತಿತ್ತು. ಅದರಿಂದಲೇ, ಹಸಿವು ಇಂಗಿಸಿಕೊಂಡೆ. ಊಟ ಮುಗಿಸಿದ ಅಜ್ಜ ಒಂದಷ್ಟು ಆಳುಗಳನ್ನು ಕರೆದು ತಂಡಗಳಾಗಿ ಮಾಡಿ ತೋಟದ ದಶದಿಕ್ಕುಗಳಲ್ಲಿ ನನ್ನನ್ನು ಹುಡುಕಲು ಸೂಚನೆ ಕೊಟ್ಟಿದ್ದು ಕೇಳಿಸಿತು. ಲಾಟೀನು ಬೆಳಕಿನಲ್ಲಿ ಅಲ್ಲಿಯೇ ಅನತಿ ದೂರದಲ್ಲಿ ಇದ್ದ ನನ್ನನ್ನು ಪತ್ತೆಹಚ್ಚಲಾಗದವರ ಕುರಿತು ಚಿಂತೆ ಮಾಡುವುದೇಕೆ? ಹೇಗೂ ಇಷ್ಟು ಹೊತ್ತು ಅಡಗಿದ್ದಾಗಿದೆ, ಇಡೀ ರಾತ್ರಿ  ಹೀಗೆಯೇ ಇದ್ದುಬಿಡಲು ತೀರ್ಮಾನಿಸಿದೆ. ಮನೆಯ ಹಿಂದಿದ್ದ ದನಗಳ ಕೊಟ್ಟಿಗೆಗೆ (ಇದನ್ನು ಕೊಟ್ಟಿಗೆ ಅನ್ನುವುದಕ್ಕಿಂತ ದನಗಳ ಮನೆ ಅನ್ನಬಹುದಾದಷ್ಟು ವಿಶಾಲವಾಗಿಯೂ ಸಿಮೆಂಟ್ ನೆಲದಿಂದಲೂ  ಈ ಕೊಟ್ಟಿಗೆ ಯಾವಾಗಲೂ ಚೊಕ್ಕಟವಾಗಿರುತ್ತಿತ್ತು) ಸೇರಿದಂತೆ ವಿಶಾಲವಾದ ಉಗ್ರಾಣವೊಂದಿತ್ತು. ಅದಕ್ಕೆ ಬೀಗ ಹಾಕುವ ಪದ್ಧತಿ ಇರಲಿಲ್ಲ. ಅದರೊಳಕ್ಕೆ ನುಸುಳಿದೆ. ರಾತ್ರಿಯ ತೀರ ಮಬ್ಬಾದ ಬೆಳಕಿನಲ್ಲಿ ಒಂದು ಮೂಲೆಯಲ್ಲಿ ಗೋಣಿಚೀಲಗಳಲ್ಲಿ ಎನನ್ನೋ ತುಂಬಿಸಿಟ್ಟಿರುವುದು ಗೋಚರಿಸಿತು. ಅವುಗಳ ಎಡೆಯಲ್ಲಿ ಒಂದು ಖಾಲಿ ಗೋಣಿಚೀಲದ ಮೇಲೆ ಪವಡಿಸಿದೆ. ಇನ್ನೊಂದು ಖಾಲಿ ಗೋಣಿಚೀಲವೇ ಹೊದಿಕೆ. ರಾತ್ರಿ ಮುಂದೇನಾಯಿತೋ ಗೊತ್ತಿಲ್ಲ. (ಇಡೀ ರಾತ್ರಿ ತೋಟದ ಸಂದುಗೊಂದುಗಳಲ್ಲಿ ನನ್ನ ಹುಡುಕಾಟ ನಡೆದಿತ್ತಂತೆ) ಮಾರನೇ ದಿನ ಬೆಳಿಗ್ಗೆ ಯಾರೋ ಹಿಡಿದು ‘ಗೋವಿಂದ ಸಾಮಿ ಇಲ್ಲಿದ್ದಾರೆ’ ಎಂದು ಬೊಬ್ಬೆ ಹಡೆದಾಗ ಎಚ್ಚರವಾಯಿತು. ಕಣ್ಣು ತೆರೆದಾಗ ಕಂಡಿದ್ದೇನು? ನನಗೆ ಬಲು ಪ್ರಿಯನಾಗಿದ್ದ ರಾಮಣ್ಣ ೆಂಬ ಮನೆಯಾಳು ನಗುತ್ತಾ ನಿಂತದ್ದು. ಪ್ರತೀದಿನ ಬೆಳಗ್ಗೆ ದನಗಳಿಗೆ ಹಿಂಡಿ ಇತ್ಯಾದಿ ಹಾಕುವುದು ಅವನ ಕೆಲಸಗಳಲ್ಲಿ ಒಂದು. ಎಂದಿನಂತೆ ಉಗ್ರಾಣದಿಂದ ಹಿಂಡಿ ತೆಗೆದುಕೊಳ್ಳಲು ಬಂದ ಅವನಿಗೆ ಗೋಣಿಚೀಲ ಹೊದ್ದು ಮಲಗಿದ್ದ ನನ್ನ ತಲೆಯ ತುದಿ ಕಂಡಿತಂತೆ. ಯಾರೆಂದು ಊಹಿಸಲು ಅವನಿಗೆ ಕಷ್ಟವೇನೂ ಆಗಲಿಲ್ಲವಂತೆ.

ಮನೆಯವರೂ ಆಳುಗಳೂ ನನ್ನ ದರ್ಶನಕ್ಕೆ ಹಿತ್ತಲ ಭಾಗದಲ್ಲಿ ಜಮಾಯಿಸಿದರು. ನನ್ನನ್ನು ಕಂಡ ತಕ್ಷಣ ಎಲ್ಲರೂ ನಗತೊಡಗಿದರು. ಬೈಗಳ ಅರ್ಚನೆ ಆಗುವುದರ ಬದಲು ಹೀಗೇಕೆ ಆಗುತ್ತಿದೆ ಎಂದು ಪಿಳಿಪಿಳಿ ನೋಡುತ್ತಿದ್ದ ನನ್ನ ಮುಂದೆ ಅದಾರೋ ಕನ್ನಡಿ ಹಿಡಿದರು. ನನ್ನ ಗುರುತು ನನಗೇ ಸಿಕ್ಕಲಿಲ್ಲ, ಅಷ್ಟು ಕಪ್ಪಾಗಿದ್ದೆ. ನಾನು ಮಲಗಿದ್ದೂ ಹೊದ್ದದ್ದೂ ಇದ್ದಿಲು ತುಂಬಿಟ್ಟಿದ್ದ ಚೀಲಗಳನ್ನು! ಎಂದೇ ಹೆಚ್ಚು ಕಮ್ಮಿ ಮೊಹರಮ್ ಹಬ್ಬದ ವೇಷಧಾರಿಯಂತಾಗಿದ್ದೆ. ಅಲ್ಲಿಂದ ನೇರ ಕರೆದೊಯ್ದದ್ದೇ ಬಚ್ಚಲು ಮನೆಗೆ. ಸ್ನಾನ, ತಿಂಡಿ ಇತ್ಯಾದಿಗಳ ಸೇವೆ ಆಯಿತೇ ವಿನಾ ಯಾರೂ ಬಯ್ಯಲಿಲ್ಲ, ಬದಲಾಗಿ ಇದ್ದಿಲು ಮೂಟೆಯಲ್ಲಿ ಇನ್ನು ಯಾವಾಗ ಮಲಗುವುದೆಂದು ಪದೇಪದೇ ಕೇಳಿ ತಮಾಷೆ ಮಾಡುತ್ತಿದ್ದರು (ಬಹುಶಃ ನಾನು ಹೀಗೇಕೆ ಮಾಡಿದ್ದೆಂದು ಎಲ್ಲರೂ ಊಹಿಸಿದ್ದಿರಬೇಕು). ತದನಂತರ, ಸುಂಟಿಕೊಪ್ಪಕ್ಕೆ ಏನೋ ಸಾಮಾನು ತರಲು ಹೋಗುವ ತೋಟದಾಳುಗಳ ಕಾವಲಿನಲ್ಲಿ ಜೋಡೆತ್ತಿನ ಗಾಡಿಯಲ್ಲಿ ಮುಂದಿನ ‘ಫ್ರಂಟ್ ಸೀಟಿನಲ್ಲಿ’ ಕಾಲು ಕೆಳಗೆ ಇಳಿಬಿಟ್ಟು ಅಪ್ಪನ ಮನೆಗೆ ಹೋಗುವ ಸುವರ್ಣಾವಕಾಶವೂ ಲಭಿಸಿತು. ಅದೇಕೋ, ಮನೆಯಲ್ಲಿಯೂ ಅಪ್ಪನಿಂದಾಗಲೀ ಚಿಕ್ಕಮ್ಮನಿಂದಾಗಲೀ  ಬೈಗುಳ ಸಿಕ್ಕಲಿಲ್ಲ. ನಾನು ಸಿಕ್ಕಿದ ಪರಿಯನ್ನು ಅವರಿಗೆ ರಸವತ್ತಾಗಿ ಆಳುಗಳು ವರ್ಣಿಸುವಾಗ ಅವರು ನಗಲೂ ಇಲ್ಲ (ಏಕೆಂದು ಆಗ ತಿಳಿಯದಿದ್ದರೂ ಈಗ ಊಹಿಸುವುದು ನಿಮಗೂ ಕಷ್ಟವಾಗಲಾರದು)

ಹೀಗೆ ಸುಖಾಂತ್ಯವಾಯಿತು ‘ಮನೆಯಿಂದ ನಾನು ಓಡಿ ಹೋದ’ ಪ್ರಸಂಗ. ಮುಂದೆ ಅನೇಕ ವರ್ಷಗಳ ಕಾಲ ತೋಟದ ಆಳುಗಳು ನನ್ನನ್ನು ಕಂಡಾಗಲೆಲ್ಲ ಈ ಪ್ರಸಂಗವನ್ನು ಮೊದಲಿನಷ್ಟೇ ರಸವತ್ತಾಗಿ ವರ್ಣಿಸಿ ನಗುತ್ತಿದ್ದರು.