ಸುಳ್ಳು ಹೇಳುವುದನ್ನು ಸಮರ್ಥಿಸಿಕೊಳ್ಳಲು ಮನುಸ್ಮೃತಿಯಲ್ಲಿ ಇರುವ ‘ನಬ್ರೂಯಾತ್ ಸತ್ಯಮ್ ಅಪ್ರಿಯಮ್ (ಅಪ್ರಿಯವಾದ ಸತ್ಯವನ್ನು ಹೇಳಬೇಡ)’ ಎಂಬ ಉಕ್ತಿಯನ್ನು ಉಲ್ಲೇಖಿಸುವುದುಂಟು. ತಮ್ಮ ಕುಕೃತ್ಯವನ್ನು ಸಮರ್ಥಿಸಿಕೊಳ್ಳಲು ಶಾಸ್ತ್ರಗ್ರಂಥದ ಸೂಕ್ತಿಯನ್ನು ಭಾಗಶಃ ಉಲ್ಲೇಖಿಸಿ ಶಾಸ್ತ್ರಜ್ಞಾನವಿಲ್ಲದವರನ್ನು ವಂಚಿಸಲಾಗುತ್ತಿದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.
ಸೂಕ್ತಿಯ ಪೂರ್ಣಪಾಠ ಇಂತಿದೆ:
ಸತ್ಯಮ್ ಬ್ರೂಯಾತ್ ಪ್ರಿಯಮ್ ಬ್ರೂಯಾತ್ ನ ಬ್ರೂಯಾತ್ ಸತ್ಯಮ್ ಅಪ್ರಿಯಮ್।
ಪ್ರಿಯಂ ಚ ನ ಅನೃತಂ ಬ್ರೂಯಾತ್ ಏಷ ಧರ್ಮಃ ಸನಾತನಃ ॥ (ಮನುಸ್ಮೃತಿ ೪-೧೩೮)
(ಸತ್ಯವಾದದ್ದನ್ನು ಹೇಳಬೇಕು ಪ್ರಿಯವಾದದ್ದನ್ನು ಹೇಳಬೇಕು ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾದ ಸುಳ್ಳನ್ನೂ ಹೇಳಬಾರದು. ಇದು ಸನಾತನ ಧರ್ಮ)
ಯಾವಾಗಲೂ ಕೇಳುಗನಿಗೆ ಪ್ರಿಯವಾಗುವ ರೀತಿಯಲ್ಲಿ ಸತ್ಯವನ್ನೇ ಹೇಳಬೇಕು ಎಂಬುದು ಈ ಸೂಕ್ತಿಯ ತಿರುಳೇ ವಿನಾ ಅಪ್ರಿಯವಾದ ಸತ್ಯವನ್ನು ಹೇಳಬಾರದು ಎಂದಾಗಲೀ ಅಪ್ರಿಯವಾದ ಸತ್ಯದ ಬದಲಿಗೆ ಪ್ರಿಯವಾದ ಸುಳ್ಳನ್ನು ಹೇಳಿ ಎಂದಾಗಲೀ ಅಲ್ಲ.
ಇದನ್ನು ಪರಿಪಾಲಿಸಿದರೆ ಮಾನವ ಸಂಬಂಧಗಳು ಅಕೃತ್ರಿಮವಾದವು ಆಗುತ್ತವೆ. ಇದಕ್ಕೆ ಬದಲಾಗಿ ಪ್ರಿಯವಾದ ಸುಳ್ಳನ್ನು ಹೇಳಿದರೆ ಅಥವ ಸತ್ಯವನ್ನು ಪ್ರಿಯವಾಗುವ ರೀತಿಯಲ್ಲಿ ಹೇಳುವುದು ಹೇಗೆ ಎಂಬುದು ತಿಳಿಯದೇ ಇದ್ದಾಗ ಅದನ್ನು ಹೇಳದಿದ್ದರೆ ಅಥವ ಪ್ರಿಯವಾದ ಸುಳ್ಳನ್ನು ಹೇಳಿದರೆ ಸಂಬಂಧಗಳು ಕೃತ್ರಿಮವಾದವುಗಳಾಗುತ್ತವೆ.
ಉದಾಹರಣೆಗೆ ಗಂಡ ಹೆಂಡಿರ ಸಂಬಂಧವನ್ನೇ ಗಮನಿಸಿ. ಹೆಂಡತಿಗೆ ಬೇಸರವಾದೀತು ಎಂಬ ಕಾರಣದಿಂದ ಗಂಡ ಆಕೆಯ ಕುರಿತಾಗಿರುವ ತನ್ನ ನಿಜವಾದ ಅನಿಸಿಕೆಯನ್ನು ಹೇಳದೆಯೇ ನಾಟಕವಾಡತೊಡಗಿದರೆ ಅಥವ ಗಂಡನಿಗೆ ಬೇಸರವಾದೀತು ಎಂದು ಹೆಂಡತಿ ಆತನ ಕುರಿತಾಗಿರುವ ತನ್ನ ನಿಜವಾದ ಅನಿಸಿಕೆಯನ್ನು ಹೇಳದೆಯೇ ನಾಟಕವಾಡತೊಡಗಿದರೆ ಅವರ ಜೀವನ ಒಂದು ಮಧುರವಾದ ಅನುಭವ ಆಗಲು ಸಾಧ್ಯವೇ?
ಇಂದು ಜನ್ಮದಾತೃಗಳು-ಮಕ್ಕಳು, ಸಹೋದರ ಸಹೋದರಿಯರು, ಮಿತ್ರರು ಇವೇ ಮೊದಲಾದ ಸಂಬಂಧಗಳ ಪೈಕಿ ಹೆಚ್ಚುಕಮ್ಮಿ ಎಲ್ಲವೂ ಪ್ರಿಯವಾದ ಸುಳ್ಳುಗಳ ತಳಹದಿಯ ಮೇಲೆ ನಿರ್ಮಾಣ ಆಗಿರುವುದರಿಂದ ಅವುಗಳಲ್ಲಿ ನಿಜವಾದ ಆತ್ಮೀಯತೆ ಕಾಣಸಿಕ್ಕುವುದಿಲ್ಲ. ತತ್ಪರಿಣಾಮವಾಗಿ ಈ ಸಂಬಂಧಗಳಿಂದ ಬಂಧಿತರಾದವರು ‘ಹೇಗೋ ಹೊಂದಾಣಿಕೆ ಮಾಡಿಕೊಂಡು’ ಜೀವನವಿಡೀ ಆತ್ಮೀಯತೆಯ ನಾಟಕವಾಡುತ್ತಾ ಜೀವನವನ್ನು ಸವೆಸುತ್ತಾರೆ.
ಇದಕ್ಕೆ ಬದಲಾಗಿ, ಪ್ರಿಯವಾಗುವ ರೀತಿಯಲ್ಲಿ ಸತ್ಯವನ್ನು ಹೇಳುವುದನ್ನು ರೂಢಿಸಿಕೊಂಡು ನೋಡಿ, ನಿಮ್ಮ ಸಂಬಂಧಗಳು ಎಷ್ಟು ಸುಂದರವಾದವು ಆಗುತ್ತವೆ ಎಂಬುದನ್ನು.
ಅಂದಹಾಗೆ ನನಗೆ ಇದರ ಅರಿವಾದದ್ದೂ ಇತ್ತೀಚೆಗೆ. ತದನಂತರ ನನ್ನ ಮತ್ತು ನನ್ನ ಹೆಂಡತಿಯ ಜೀವನದ ಸಂಧ್ಯಾಕಾಲದಲ್ಲಿ ನಮ್ಮ ಕೌಟುಂಬಿಕ ಸಂಬಂಧಗಳು ತಮ್ಮ ಮುಖವಾಡಗಳನ್ನು ಕಳಚಿಕೊಂಡು ತುಯ್ತರಹಿತ ಮಧುರಾನುಭವಗಳಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
No comments:
Post a Comment