ಭಗವದ್ಗೀತೆಯಲ್ಲಿ ಇರುವ ಪರಿಕಲ್ಪನೆಗಳ ಪೈಕಿ ನನ್ನನ್ನು ಆಕರ್ಷಿಸಿದ ಒಂದು ಪರಿಕಲ್ಪನೆ: ‘ಸ್ಥಿತಪ್ರಜ್ಞ’. ಆಧುನಿಕ ಮನೋವಿಜ್ಞಾದಲ್ಲಿ ಇರುವ ‘ಸುಸಮಾಯೋಜಿತ ವ್ಯಕ್ತಿ (ವೆಲ್ ಅಡ್ಜಸ್ಟೆಡ್ ಪರ್ಸನ್)’ ಅಥವ ‘ಪರಿಪೂರ್ಣ ಮಾನಸಿಕ ಆರೋಗ್ಯವಂತ’ ಪರಿಕಲ್ಪನೆಗೂ ಇದಕ್ಕೂ ಗಮನಾರ್ಹ ವ್ಯತ್ಯಾಸವೇನೂ ಇಲ್ಲ ಎಂಬುದು ನನ್ನ ಅಭಿಮತ.
ಭಗವದ್ಗೀತೆಯಲ್ಲಿ ಸರಿಸುಮಾರು ೫೩ ಶ್ಲೋಕಗಳಲ್ಲಿ (೨: ೫೪-೭೨, ೫: ೧೮-೨೧, ೨೪-೨೬, ೬: ೨೯-೩೨, ೧೨: ೧೩-೨೦, ೧೪: ೨೨-೨೬) ಸ್ಥಿತಪ್ರಜ್ಞನ ಲಕ್ಷಣಗಳ ವರ್ಣನೆ ಇದೆ. ಉದಾಹರಣೆಯಾಗಿ ೧೨ ನೇ ಅಧ್ಯಾಯದಲ್ಲಿ ೧೩-೨೦ ಶ್ಲೋಕಗಳ ಸಂಕ್ಷಿಪ್ತ ತಿರುಳನ್ನು ನೀಡುತ್ತಿದ್ದೇನೆ, ಪರಿಶೀಲಿಸಿ:
ಆತ ‘ಯಾವ ಜೀವಿಗಳನ್ನೂ ದ್ವೇಷಿಸುದಿರುವವನೂ ಎಲ್ಲ ಜೀವಿಗಳೊಂದಿಗೆ ಮಿತ್ರಭಾವ ಮತ್ತು ಕರುಣೆಯುಳ್ಳವನೂ ಮಮಕಾರ ಮತ್ತು ಅಹಂಕಾರರಹಿತನೂ ಸುಖ-ದುಃಖಗಳನ್ನು ಶತ್ರು-ಮಿತ್ರರನ್ನು ಸನ್ಮಾನ-ಅಪಮಾನಗಳನ್ನು ಸ್ತುತಿ-ನಿಂದೆಗಳನ್ನು ನೋವು-ನಲಿವುಗಳನ್ನು ಸಮಚಿತ್ತದಿಂದ ಸ್ವೀಕರಿಸುವವನೂ ಸದಾ ಸಂತುಷ್ಟನೂ ಕ್ಷಮಾಶೀಲನೂ ಯಾರನ್ನೂ ಉದ್ರೇಕಿಸದವನೂ ಮತ್ತು ಯಾರಿಂದಲೂ ಉದ್ರೇಕಗೊಳ್ಳದವನೂ ಕೋಪ-ಭಯ-ವ್ಯಾಕುಲತೆಗಳಿಂದ ಮುಕ್ತನೂ ಯಾವ ಅಪೇಕ್ಷಾಶೂನ್ಯನಾದ್ದರಿಂದ ನಿರಾತಂಕನೂ ಕಾರ್ಯ ನಿರ್ವಹಣೆಯಲ್ಲಿ ವಿಳಂಬ ಮಾಡದವನೂ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸ್ವಾರ್ಥರಹಿತನೂ ಹರ್ಷ-ಶೋಕ-ದ್ವೇಷ-ಆಸೆ ರಹಿತನೂ, ದೊರೆತದ್ದರಿಂದ ತೃಪ್ತಿ ಪಡುವವನೂ’ ಆಗಿರುತ್ತಾನೆ.
ಅಂದ ಮಾತ್ರಕ್ಕೆ ಆತ ಭಾವರಹಿತ (ಇಮೋಶನ್ ಲೆಸ್) ವ್ಯಕ್ತಿ ಎಂದು ಅರ್ಥೈಸಕೂಡದು. ಬಲು ಬೇಗ ಭಾವಗಳ ಮೇಲೆ ನಿಯಂತ್ರಣ ಸಾಧಿಸಿ ಅವು ತನ್ನ ಕಾರ್ಯಚಟುವಟಿಕೆಗಳ ಮೇಲೆ ಅನಪೇಕ್ಷಿತ ಪ್ರಭಾವ ಬೀರದಂತೆ ನೋಡಿಕೊಳ್ಳಬಲ್ಲ ಎಂದು ಅರ್ಥೈಸಬೇಕು.
ಇಂತಿರುವವರು ನಾವಾದರೆ ಏನು ಲಾಭ?
ಲೌಕಿಕರಿಗೆ ತಕ್ಕುದಾದ ಉತ್ತರ ಆಧುನಿಕ ಮನೋವಿಜ್ಞಾನದಲ್ಲಿದೆ, ಪರಿಶೀಲಿಸಿ: ‘ಸುಸಮಾಯೋಜಿತನು ಅಥವ ಪರಿಪೂರ್ಣ ಮಾನಸಿಕ ಆರೋಗ್ಯ ಉಳ್ಳವನು ಪರಿಸರದ ಮೇಲೆ ಪ್ರಭುತ್ವ ಉಳ್ಳವನಾಗಿರುತ್ತಾನೆ’
ಅಂದಮೇಲೆ ಇಂತಿರುವವರು ನಾವಾಗುವುದು ಸಾಧ್ಯವಿಲ್ಲ ಎಂದು ಸುಮ್ಮನಾಗುವುದಕ್ಕಿಂತ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬಹುದಲ್ಲವೇ?
No comments:
Post a Comment