ಮನೆಯಲ್ಲಿಯೇ ಆಗಲಿ ಮದುವೆ ಮುಂಜಿ ಮುಂತಾದ ಸಮಾರಂಭಗಳಿಗೆ ಹೋದಾಗಲೇ ಆಗಲಿ ಸಾಮಾನ್ಯವಾಗಿ ನಾನು ಊಟ ಮುಗಿಸಿ ಏಳುವಾಗ ಎಲೆ/ತಟ್ಟೆ ಸಂಪೂರ್ಣವಾಗಿ ಖಾಲಿ ಇರುತ್ತದೆ, ಕೆಲವೊಮ್ಮೆ ಈ ಸಂದರ್ಭದಲ್ಲಿ ನೋಡಿದವರು ‘ಏಕೆ? ಏನೂ ತಿಂದ ಹಾಗೆ ಕಾಣುತ್ತಿಲ್ಲವಲ್ಲ? ಅಡುಗೆ ಚೆನ್ನಾಗಿತ್ತು ತಾನೇ?’ ಎಂದು ಕೇಳಿದ್ದೂ ಉಂಟು.‘ಆಹಾರ ವ್ಯರ್ಥವಾಗಬಾರದು’ ಎಂಬುದು ನನ್ನ ನಿಲುವು.
ಈ ಮುಂದೆ ಉಲ್ಲೇಖಿಸಿರುವ ಉಕ್ತಿಗಳನ್ನು ಪರಿಶೀಲಿಸಿ.
‘ಅನ್ನಂ (ಆಹಾರವನ್ನು) ನ ನಿಂದ್ಯಾತ್ (ನಿಂದಿಸಬೇಡ) ತದ್ ವ್ರತಮ್ -----’ [ತೈತ್ತರೀಯ ಉಪನಿಷತ್: ಭೃಗುವಲ್ಲಿ ೭]
‘ಅನ್ನಂ (ಆಹಾರವನ್ನು) ನ ಪರಿಚಕ್ಷೀತ (ನಿರಾಕರಿಸಬೇಡ) ತದ್ ವ್ರತಮ್ -----’ [ತೈತ್ತರೀಯ ಉಪನಿಷತ್: ಭೃಗುವಲ್ಲಿ ೮]
‘ಅನ್ನಂ (ಆಹಾರವನ್ನು) ಬಹುಕುರ್ವೀತ (ಬಹುವಾಗಿ ಮಾಬೇಕು - ಹೆಚ್ಚು ಉತ್ಪಾದಿಸಬೇಕು) ತದ್ ವ್ರತಮ್ -----’ [ತೈತ್ತರೀಯ ಉಪನಿಷತ್: ಭೃಗುವಲ್ಲಿ ೯]
ನಮ್ಮ ಪೂರ್ವಿಕರು ಆಹಾರಕ್ಕೆ ನೀಡುತ್ತಿದ್ದ ಗೌರವ ಎಂತಹುದೆಂಬುದನ್ನು ತಿಳಿಯಲು ಈ ಉಕ್ತಿಗಳ ಪೂರ್ಣಪಾಠವನ್ನು ಓದಬೇಕು.
ಆಹಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಇಷ್ಟ-ಅಇಷ್ಟಗಳು ಇರುವುದು ಸ್ವಾಭಾವಿಕ. ಈ ಇಷ್ಟ-ಅಇಷ್ಟಗಳಿಗೆ ತಕ್ಕುದಾದ ರೀತಿಯಲ್ಲಿ ಆಹಾರ ಸಿದ್ಧಪಡಿಸಿ ಸೇವಿಸುವುದು ಅವರವರ ಮನೆಯಲ್ಲಿ ಸಾಧ್ಯ. ಅವರ ನಿಯಂತ್ರಣದಲ್ಲಿ ಇಲ್ಲದ ಸನ್ನಿವೇಶಗಳಲ್ಲಿ, ಸಮಾರಂಭಗಳಲ್ಲಿ ಇದು ಸಾಧ್ಯವಿಲ್ಲ. ಇಂತಿರುವಾಗ ವಿಶೇಷತಃ ಮೊದಲಿನ ಎರಡು ಸೂಚನೆಗಳನ್ನು ಪಾಲಿಸುವುದು ಹೇಗೆ?
ನಾನು ಮಾಡುವುದು ಇಷ್ಟೇ: ಯಾವುದನ್ನೇ ಆಗಲಿ ಮೊದಲನೇ ಬಾರಿ ಬಡಿಸುವಾಗ ಬಡಿಸುವವರಿಗೆ ‘ಸ್ಯಾಂಪಲ್’ ಮಾತ್ರ ಬಡಿಸುವಂತೆ ವಿನಂತಿಸಿಕೊಳ್ಳುತ್ತೇನೆ. ಎಲ್ಲವನ್ನೂ ತಿನ್ನುತ್ತೇನೆ. ನನಗೆ ಇಷ್ಟವಾದವನ್ನು ಮಾತ್ರ ಎರಡನೆಯ ಬಾರಿ ನನ್ನಿಂದ ಎಷ್ಟು ತಿನ್ನಲು ಸಾಧ್ಯವೋ ಅಷ್ಟಕ್ಕಿಂತ ತುಸು ಕಮ್ಮಿ ಹಾಕಿಸಿಕೊಳ್ಳುತ್ತೇನೆ. ಊಟವಾದ ನಂತರವೂ ಇನ್ನೊಂದೆರಡು ತುತ್ತು ತಿನ್ನುವಷ್ಟು ಸಾಮರ್ಥ್ಯ ಉಳಿಸಿಕೊಂಡಿರುತ್ತೇನೆ. ತತ್ಪರಿಣಾಮವಾಗಿ, ಆಹಾರವನ್ನು ತಿನ್ನದೇ ಬಿಡುವ ಸನ್ನಿವೇಶ ಈ ತನಕ ಉಂಟಾಗಿಲ್ಲ. ಹೊಟ್ಟೆಬಿರಿಯುವಷ್ಟು ಉಂಡು ಆರೋಗ್ಯವನ್ನೂ ಕೆಡಿಸಿಕೊಂಡಿಲ್ಲ.
ನಾನು ನಗರವಾಸಿಯಾಗಿದ್ದರೂ ಮನೆಯಲ್ಲೊಂದು ನಿಂಬೆ ಗಿಡ ಇದೆ. ದೊಡ್ಡಪತ್ರೆ ಇದೆ. ಅಪರೂಪಕ್ಕೊಮ್ಮೆ ೧-೨ ಟೊಮ್ಯಾಟೋ ಗಿಡ ಹುಟ್ಟುವುದೂ ಉಂಟು. ಬಲು ಹಿಂದೆ ಬದನೆ, ಮೂಲಂಗಿ, ಟೊಮ್ಯಾಟೋ, ಹಸಿಮೆಣಸು, ಕೊತ್ತಂಬರಿ ಇತ್ಯಾದಿಗಳನ್ನಿ ಇರುವ ಸ್ಥಳದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಬೆಳೆಯುತ್ತಿದ್ದದ್ದೂ ಉಂಟು.
ಅಂದ ಹಾಗೆ, ಉಲ್ಲೇಖಿತ ಉಕ್ತಿಗಳಲ್ಲಿ ಜಾತಿ ಮತಗಳ ಉಲ್ಲೇಖ ಇಲ್ಲ ಎಂಬುದನ್ನು ಗಮನಿಸಿ.
ಕೊನೆಯದಾಗಿ, ಆಹಾರದ ಕುರಿತಂತೆ ನನ್ನನ್ನೊಂದು ಸಮಸ್ಯೆ ಇಂದಿಗೂ ಕಾಡುತ್ತಿದೆ - ನಿಸರ್ಗದಲ್ಲಿ ಪ್ರತೀ ಜೀವಿಗೂ ಅದರದ್ದೇ ಆದ ‘ಸ್ವಾಭಾವಿಕ ಆಹಾರ’ ಇದೆ. ಮಾನವನಿಗೆ ಮಾತ್ರ ಏಕಿಲ್ಲ? ತನಗೆ ಬೇಕಾದದ್ದನ್ನು ಖಾದ್ಯವಾಗಿ ಪರಿವರ್ತಿಸಿ ಭಕ್ಷಿಸುವ ಸಾಮರ್ಥ್ಯ ಮಾನವನಿಗೆ ಮಾತ್ರ ಏಕಿದೆ?
No comments:
Post a Comment