Pages

6 January 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೧೩

ಗಾಳಿ ಬೀಸುವಿಕೆ ಮತ್ತು ಒತ್ತಡ

೧. ಸಾಧಾರಣ ಕಾಗದದ ಒಂದು ಚಿಕ್ಕ ಪಟ್ಟಿ ತಯಾರಿಸಿ. ಚಿತ್ರದಲ್ಲಿ ತೋರಿಸಿದಂತೆ ಒಂದು ಗಟ್ಟಿಯಾದ ರಟ್ಟು ಇರುವ ಪುಸ್ತಕವನ್ನು ಕೈನಲ್ಲಿ ಹಿಡಿದುಕೊಂಡು ಮೇಲಿನ ರಟ್ಟಿನ ಮತ್ತು ಮೊದಲನೇ ಪುಟದ ನಡುವೆ ಅದು ಜೋತು ಬೀಳುವಂತೆ ಸಿಕ್ಕಿಸಿ. ಒಂದು ಊದುಗೊಳವೆಯ (ಎರಡೂ ಕಡೆ ತೆರೆದಿರುವ ಖಾಲಿ ಬಾಲ್ ಪಾಇಂಟ್ ಪೆನ್) ನೆರವಿನಿಂದ ಜೋತುಬಿದ್ದಿರುವ ಕಾಗದದ ಪಟ್ಟಿಯ ಮೇಲ್ಮೈಗೆ ಸಮಾಂತರವಾಗಿ ರಟ್ಟಿನಗುಂಟ ಜೋರಾಗಿ ಗಾಳಿ ಊದಿ. ಪಟ್ಟಿಯ ಜೋತುಬಿದ್ದ ತುದಿ ಮೇಲೇರುವ ವಿಚಿತ್ರ ವೀಕ್ಷಿಸಿ. ಗಾಳಿ ಬೀಸುವ ದಿಕ್ಕಿಗೆ ಲಂಬವಾಗಿರುವ ದಿಕ್ಕುಗಳತ್ತ ವಾಯುವಿನ ಒತ್ತಡ ಕಮ್ಮಿ ಆದ್ದರಿಂದ ಹೀಗಾಗಿರಬಹುದೇ? ಆಲೋಚಿಸಿ.

೨. ಗಾಳಿ ತುಂಬಿಸಿದ ಎರಡು ಚಿಕ್ಕ ಬೆಲೂನ್ ಗಳನ್ನು ಅಥವ ಅತೀ ಹಗುರವಾಗಿರುವ ೨ ಚಿಕ್ಕ ಪ್ಲಾಸ್ಟಿಕ್-ಚೆಂಡುಗಳನ್ನು (ಟೇಬಲ್ ಟೆನ್ನಿಸ್ ಬಾಲ್ ಆದೀತು) ಸುಮಾರು ೫ ಸೆಂಮೀ ಅಂತರದಲ್ಲಿ ನೇತುಹಾಕಿ. ಊದುಗೊಳವೆಯ ನೆರವಿನಿಂದ ಅವುಗಳ ನಡುವೆ ಭೂತಲಕ್ಕೆ ಸಮಾಂತರವಾಗಿ ಗಾಳಿ ಊದಿ. ನೀವು ಊದುವ ಗಾಳಿ ಅವಕ್ಕೆ ತಗುಲಕೂಡದು. ಚೆಂಡು/ಬೆಲೂನ್ ಗಳು ಒಂದರಿಂದ ಇನ್ನೊಂದು ದೂರ ಚಲಿಸುವ ಬದಲು ಒಂದನ್ನೊಂದು ಸಮೀಪಿಸುವ ವೈಚಿತ್ರ್ಯ ವೀಕ್ಷಿಸಿ. ಈಗಾಗಾಲೇ ಸೂಚಿಸಿದ ಕಾರಣವೇ ಈ ವೈಚಿತ್ರ್ಯಕ್ಕೂ ಕಾರಣವಾಗಿರಬಹುದೇ? ಆಲೋಚಿಸಿ.

ಅಂದ ಹಾಗೆ, ಚೆಂಡು ಅಥವ ಬೆಲೂನ್ ಲಭ್ಯವಿಲ್ಲದಿದ್ದರೆ ಚಿಂತೆ ಬೇಡ. ಒಂದು ದಪ್ಪನೆಯ ಪುಸ್ತಕದ ನೆರವಿನಿಂದ ಕಾಗದದ ಎರಡು ಪಟ್ಟಿಗಳನ್ನು (ಇವು ಸ್ವಲ್ಪ ಅಗಲವಾಗಿರಲಿ) ಚಿತ್ರದಲ್ಲಿ ತೋರಿಸಿದಂತೆ ನೇತಾಡಿಸಿ ಹಿಡಿದುಕೊಳ್ಳುವಂತೆ ನಿಮ್ಮ ಮಿತ್ರನಿಗೆ ಹೇಳಿ. ಹಾಳೆಗಳ ನಡುವೆ ಈ ಮೊದಲೇ ತಿಳಿಸಿದಂತೆ ಗಾಳಿ ಊದಿ, ಪರಿಣಾಮ ವೀಕ್ಷಿಸಿ.

೩. ಚಿತ್ರದಲ್ಲಿ ತೋರಿಸಿದ ಆಕಾರದ ಬಳುಕದ ಕೊಳವೆಯೊಂದನ್ನು ಸಂಗ್ರಹಿಸಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ‘ಜೆಲ್’ ಬಾಲ್ ಪಾಇಂಟ್ ಪೆನ್ ಗಳ ರೀಫಿಲ್ ಗಳ ವ್ಯಾಸ ಸಾಪೇಕ್ಷವಾಗಿ ದೊಡ್ಡದು. ಎಂದೇ, ಈ ಖಾಲಿ ರೀಫಿಲ್ಲಿನಿಂದಲೂ ಇಂಥ ಕೊಳವೆ ನೀವೇ ತಯಾರಿಸಬಹುದು. ರೀಫಿಲ್ಲಿನೊಳಕ್ಕೆ ಲೋಹದ ಬಳುಕುವ ತಂತಿಯೊಂದನ್ನು ತೂರಿಸಿ, ಅಪೇಕ್ಷಿತ ಭಾಗವನ್ನು ತುಸು ಬಿಸಿಮಾಡಿ ಅಪೇಕ್ಷಿತ ಆಕಾರಕ್ಕೆ ಬಾಗಿಸಿ. ತಣಿದ ಬಳಿಕ ಲೋಹದ ತಂತಿಯನ್ನು ಹೊರತೆಗೆಯಿರಿ. ‘ತರ್ಮೋಕೋಲ್’ನಿಂದ (ಅಥವ ಅಷ್ಟೇ ಹಗುರವಾದ ಯಾವುದೇ ಬೆಂಡಿನಿಂದ) ಕೊಳವೆಯ ವ್ಯಾಸಕ್ಕೆ ಸಮನಾದ ವ್ಯಾಸ ಉಳ್ಳ ಪುಟಾಣಿ ಚೆಂಡೊಂದನ್ನು ತಯಾರಿಸಿ. ಚಿತ್ರದಲ್ಲಿ ತೋರಿಸಿದಂತೆ ಕೊಳವೆಯನ್ನು ಹಿಡಿದು ಮೇಲ್ತುದಿಯಲ್ಲಿ ಪುಟಾಣಿ ಚೆಂಡನ್ನು ಇಟ್ಟು ಕೆಳತುದಿಯ ಮೂಲಕ ನಿಧಾನವಾಗಿ ಗಾಳಿ ಊದಿ. ಚೆಂಡು ಕೊಳವೆಯ ತುದಿಯಿಂದ ತುಸು ಮೇಲೆ ಗಾಳಿಯಲ್ಲಿ ಒಂದೇ ಸ್ಥಳದಲ್ಲಿ ತೇಲುವುದನ್ನು ವೀಕ್ಷಿಸಿ. ಹಿಂದಿನ ಪ್ರಯೋಗಗಳಲ್ಲಿ ಕಲಿತ ತತ್ವದ ನೆರವಿನಿಂದ ಈ ವಿದ್ಯಮಾನವನ್ನು ವಿವರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ.

೪. ಸುಮಾರು ೬ ಸೆಂಮೀ ವ್ಯಾಸದ ವೃತ್ತಾಕಾರದ ಎರಡು ರಟ್ಟಿನಬಿಲ್ಲೆಗಳನ್ನು ತಯಾರಿಸಿ. ಬಾಲ್ ಪಾಇಂಟ್ ಪೆನ್ನಿನ ಎರಡೂ ತುದಿಗಳು ತೆರೆದಿರುವ ಒಂದು ಕೊಳವೆ ಸಂಗ್ರಹಿಸಿ. ಅದನ್ನು ಒಂದು ರಟ್ಟಿನ ಬಿಲ್ಲೆಯ ಮಧ್ಯದಲ್ಲಿ ತೂತು ಮಾಡಿ ಸಿಕ್ಕಿಸಿ. ಇನ್ನೊಂದು ಬಿಲ್ಲೆಯನ್ನು ಪೂರ್ತಿಯಾಗಿ ದಾಟುವಂತೆ ಗುಂಡುಪಿನ್ನೊಂದನ್ನು ಬಿಲ್ಲೆಯ ಕೇಂದ್ರದಲ್ಲಿ ಲಂಬವಾಗಿ ಚುಚ್ಚಿ ನಿಲ್ಲಿಸಿ. ಬಿಲ್ಲೆ ಭೂತಲಕ್ಕೆ ಸಮಾಂತರವಾಗಿರುವಂತೆ ಕೊಳವೆಯುತ ಬಿಲ್ಲೆಯನ್ನು ಹಿಡಿದುಕೊಳ್ಳಿ. ಗುಂಡುಪಿನ್ನುಯುತ ಬಿಲ್ಲೆಯ ಗುಂಡುಪಿನ್ನು ಕೊಳವೆಯೊಳಗೆ ಇರುವಂತೆ ಕೊಳವೆಯುತ ಬಿಲ್ಲೆಗೆ ಮಿದುವಾಗಿ ಒತ್ತಿಹಿಡಿದು ಕೈ ತೆಗೆಯಿರಿ. ಅದು ನಿಮ್ಮ ಊಹೆಯಂತೆ ಕೆಳಕ್ಕೆ ಬೀಳುತ್ತದೆ. ಇದರಲ್ಲೇನೂ ವಿಶೇಷವಿಲ್ಲ. ಪುನಃ ಮೊದಲಿನಂತೆಯೇ ಬಿಲ್ಲೆಗಳನ್ನು ಹಿಡಿದುಕೊಂಡು ಕೊಳವೆಯ ಮೇಲ್ತುದಿಯಿಂದ ನಿಧಾನವಾಗಿ ಗಾಳಿ ಊದುತ್ತಾ ಗುಂಡುಪಿನ್ನುಯುತ ಬಿಲ್ಲೆಯನ್ನು ಬಿಡಿ. ಗಾಳಿ ಊದುತ್ತಿರುವಷ್ಟು ಸಮಯ ಅದು ಕೆಳಕ್ಕೆ ಬೀಳದಿರುವ ವೈಚಿತ್ರ್ಯ ವೀಕ್ಷಿಸಿ.

ಮೇಲಿನಿಂದ ಊದಿದ ಗಾಳಿಯು ಕೆಳಗಿನಿಂದ ಒತ್ತಿಹಿಡಿದ ಬಿಲ್ಲೆಯನ್ನು ತಲುಪಿದ ಕೂಡಲೇ ಅದರ ಚಲನೆಯ ದಿಕ್ಕು ಎತ್ತ ಕಡೆಗೆ ಬದಲಿಸಿರಬೇಕು ಮತ್ತು ಇದರ ಪರಿಣಾಮ ಏನಾಗಿರಬೇಕು ಎಂಬುದನ್ನು ತರ್ಕಿಸಿ.

೫. ಗಾಳಿ ಬೀಸುವಿಕೆಗೂ ವಾಯುವಿನ ಒತ್ತಡಕ್ಕೂ ಇರುವ ಸಂಬಂಧವನ್ನು ಪ್ರಯೋಗಮುಖೇನ ಅರ್ಥ ಮಾಡಿಕೊಂಡಿರುವ ನೀವು ನಿಮ್ಮ ಮಿತ್ರರಿಗೆ ಈ ಮುಂದಿನ ಸವಾಲುಗಳನ್ನು ಹಾಕಿ.

ಸವಾಲೆಸೆಯುವ ಮುನ್ನ ನೀವು ಸಂಗ್ರಹಿಸಬೇಕಾದ ಸಾಮಗ್ರಿಗಳು ಇಂತಿವೆ: ಪ್ಲಾಸ್ಟಿಕ್ ನ ಒಂದು ಚಿಕ್ಕ ಆಲಿಕೆ, ಒಂದು ಟೇಬಲ್ ಟೆನ್ನಿಸ್ ಚೆಂಡು (ಸರಿಸುಮಾರಾಗಿ ಅದೇ ಗಾತ್ರ ಮತ್ತು ತೂಕದ ಪ್ಲಾಸ್ಟಿಕ್ ಚೆಂಡೂ ಆದೀತು)

ಸವಾಲು ೧. ಆಲಿಕೆಯೊಳಗೆ ಚೆಂಡನ್ನು ಇಟ್ಟು ಮೇಲ್ಮುಖವಾಗಿ ಹಿಡಿದುಕೊಂಡು ಕೆಳಗಿನಿಂದ ಗಾಳಿ ಊದಿ ಚೆಂಡನ್ನು ಆಲಿಕೆಯಿಂದ ಹೊರಹಾಕಬೇಕು. (ನಿಮ್ಮ ಮಿತ್ರ ಎಷ್ಟೇ ಜೋರಾಗಿ ಗಾಳಿ ಊದಿದರೂ ಚೆಂಡು ಹೊಹೋಗದಿರಲು ಕಾರಣ ೇನೆಂಬುದು ನಿಮಗೆ ತಿಳಿದಿದೆಯಲ್ಲವೇ?)

ಸವಾಲು ೨. ಒಂದು ಕೈನಲ್ಲಿ ಆಲಿಕೆಯನ್ನು ಕೆಳಮುಖವಾಗಿ ಹಿಟಿದುಕೊಂಡು ಇನ್ನೊಂದು ಕೈನಿಂದ ಚೆಂಡನ್ನು ಅದರೊಳಗೆ ಒತ್ತಿ ಹಿಡಿದು ಮೇಲಿನಿಂದ ಜೋರಾಗಿ ಗಾಳಿ ಊದುತ್ತಾ ಕೈಬಿಟ್ಟರೆ ಏನಾಗುತ್ತದೆ ಎಂದು ಕೇಳಿ. ಉತ್ತರ ಹೇಳಿದ ಬಳಿಕ ಅದನ್ನು ಪ್ರಯೋಗ ಮುಖೇನ ಸಾಬೀತು ಪಡಿಸುವಂತೆ ಸವಾಲೆಸೆಯಿರಿ. ಪ್ರಶ್ನೆಗೆ ವಿವರಣೆ ಸಹಿತವಾದ ಸರಿ ಉತ್ತರ ಏನೆಂಬುದೂ ಅದನ್ನು ಸಾಬೀತು ಪಡಿಸುವ ವಿಧಾನವೂ ನಿಮಗೆ ಗೊತ್ತಿರುವದರಿಂದ ನೀವು ಸೋಲಲು ಸಾಧ್ಯವಿಲ್ಲ.

ಸವಾಲು ೩. ಮೇಜಿನ ಮೇಲೆ ಚೆಂಡನ್ನು ಇಡಿ. ಅದರ ಮೇಲೆ ಆಲಿಕೆಯನ್ನು ಕವುಚಿ ಇಡಿ. ಆಲಿಕೆಯನ್ನು ಹಾಗೆಯೇ ನೇರವಾಗಿ ಎತ್ತಿ ಬೇರೆಡೆ ಇಡವುದರ ಮೂಲಕ ಅದರ ಅಡಿಯಲ್ಲಿ ಇರುವ ಚೆಂಡನ್ನೂ ಎತ್ತಿ ಬೇರೆಡಗೆ ಒಯ್ಯಲು ಹೇಳಿ. ವಾಯುವಿನ ವಿನಾ ಬೇರೇನನ್ನು ಉಪಯೋಗಿಸಕೂಡದು ಎಂದೂ ಹೇಳಿ. (ಮೊದಲೇ ನೀವು ಸಾಕಷ್ಟು ಸಲ ಹೀಗೆ ಮಾಡುವುದನ್ನು ಅಭ್ಯಾಸ ಮಾಡಿದ್ದರೆ ಉತ್ತಮ)

ಗಾಳಿ ಬೀಸುವ ದಿಕ್ಕಿಗೂ ವಾಯುವಿನ ಒತ್ತಡಕ್ಕೂಇರುವ ಸಂಬಂಧವನ್ನು ಇತರ ದ್ರವಗಳಿಗೆ (ಉದಾ: ನೀರು) ಅನ್ವಯಿಸಬಹುದೇ? ನೀವೇ ಆವಿಷ್ಕರಿಸಿ.

ಒಂದೇ ದಿಕ್ಕಿನಲ್ಲಿ ಸಮಾಂತರ ಕಾಯ್ದುಕೊಂಡು ಸಮುದ್ರದಲ್ಲಿ ಎರಡು ಹಡಗುಗಳು ಜೊತೆಯಾಗಿ ಸಾಗುವಾಗ ಅವುಗಳ ನಡುವಿನ ಅಂತರ ಹೆಚ್ಚು ಇರದೇ ಇದ್ದರೆ ಏನಾಗಬಹುದು? ನೀವೇ ಊಹಿಸಿ.

No comments: