ಆ ತನಕ ತನಗೆ ಗೊತ್ತಿಲ್ಲದೇ ಇದ್ದ ಹೊಸ ಅಥವ ಅಪೂರ್ವ ಸಾಹಿತ್ಯ, ಸಂಗೀತ, ವಸ್ತು, ಚಿಂತನೆ ಇವೇಮೊದಲಾದವನ್ನು ಸೃಷ್ಟಿಸಲು ವ್ಯಕ್ತಿಗೆ ಇರುವ ಸಾಮರ್ಥ್ಯವೇ ಸೃಜಾನಾತ್ಮಕತೆ. ಕೇವಲ ಸಂಕಲನವಲ್ಲದ ಸಂಶ್ಲೇಷಣೆ, ಹಳೆಯ ‘ಬಿಡಿ’ಗಳಿಂದ ಹೊಸದೊಂದು ‘ಇಡಿ’ಯ ನಿರ್ಮಾಣ, ಹೊಸ ಸಂಬಂಧಗಳ ಶೋಧನೆ, ಈಗಾಗಲೇ ತಿಳಿದಿರುವ ಜ್ಞಾನವನ್ನು ಹೊಸ ಸನ್ನಿವೇಶಗಳಲ್ಲಿ ಉಪಯೋಗಿಸುವುದು ಇವೇ ಮೊದಲಾದವುಗಳೆಲ್ಲವೂ ಸೃಜನಾತ್ಮಕತೆಯ ಪರಿಧಿಯೊಳಗೇ ಸೇರಿಕೊಳ್ಳುತ್ತವೆ. ಸೃಜನಾತ್ಮಕತೆಯ ಉತ್ಪನ್ನಗಳೆಲ್ಲವೂ ಮಾನವನಿಗೆ ಉಪಯುಕ್ತವಾಗಿರಲೇ ಬೇಕೆಂಬ ನಿಯಮವಿಲ್ಲ. ಕಲೆ, ಸಾಹಿತ್ಯ, ಕೃಷಿ, ವಿಜ್ಞಾನ, ದೈನಂದಿನ ಜೀವನದ ಸಮಸ್ಯೆಗಳನ್ನು ಪರಿಹರಿಸುವಿಕೆ, ಇವೇ ಮೊದಲಾದ ಅಸಂಖ್ಯ ಕ್ಷೇತ್ರಗಳಲ್ಲಿ ಸೃಜನಾತ್ಮಕತೆ ಪ್ರಕಟವಾಗಬಹುದು. ಸೃಜನಾತ್ಮಕ ಸಾಮರ್ಥ್ಯ ಪ್ರತಿಯೊಬ್ಬನಲ್ಲೂ ಇದೆ. ಸೃಜನಾತ್ಮಕ ಸಾಮರ್ಥ್ಯದ ಪರಿಮಾಣದಲ್ಲಿ ವ್ಯಕ್ತಿಗಳ ನಡುವೆ ವ್ಯತ್ಯಾಸ ಇರುತ್ತದಾದರೂ ಒಂದಿನಿತೂ ಸೃಜನಾತ್ಮಕ ಸಾಮರ್ಥ್ಯ ಇಲ್ಲದವ ಇರುವುದು ಅಸಂಭವ. ಎಂದೇ, ಈ ಸಾಮರ್ಥ್ಯ ವರ್ಧನೆಗೆ ಪೂರಕವಾಗುವ ಕಸರತ್ತುಗಳನ್ನು ಚಿಕ್ಕಂದಿನಿಂದಲೇ ಮಾಡಿಸಬೇಕು.
ಪ್ರಖ್ಯಾತ ಸೃಜನಾತ್ಮಕ ವ್ಯಕ್ತಿಗಳಲ್ಲಿ ಏಕಮುಖೀ ಪರ್ಯಾಲೋಚನೆಯ (ಕನ್ವರ್ ಜೆಂಟ್ ತಿಂಕಿಂಗ್ - ಯಾವುದೇ ಸಮಸ್ಯೆಗೆ ಒಂದು ‘ಸರಿ’ ಉತ್ತರವನ್ನು ಪತ್ತೆಹಚ್ಚಲೋಸುಗ ಅತ್ಯಂತ ತರ್ಕಬದ್ಧವಾಗಿ ಪರ್ಯಾಲೋಚಿಸುವ ಪ್ರವೃತ್ತಿ ) ಸಾಮರ್ಥ್ಯಕ್ಕಿಂತ ಬಹುಮುಖೀ ಪರ್ಯಾಲೋಚನೆಯ (ಡೈವರ್ ಜೆಂಟ್ ತಿಂಕಿಂಗ್ - ಯಾವುದೇ ಸಮಸ್ಯೆಗೆ ಇರಬಹುದಾದ ಎಲ್ಲ ಬಗೆಯ ಪರಿಹಾರಗಳನ್ನು ಪತ್ತೆಹಚ್ಚಲೋಸುಗ ಪರ್ಯಾಲೋಚಿಸುವ ಪ್ರವೃತ್ತಿ) ಸಾಮರ್ಥ್ಯ ಹೆಚ್ಚು ಇರುವುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಸಮಸ್ಯೆಗಳನ್ನು ಪರಿಹರಿಸುವ ಸಾಂಪ್ರದಾಯಿಕ ವಿಧಾನಗಳನ್ನು ಸಂದರ್ಭೋಚಿತವಾಗಿ ಯುಕ್ತ ರೀತಿಯಲ್ಲಿ ಬದಲಿಸುವುದು, ಅಸಾಮಾನ್ಯ ಸುಸಂಬದ್ಧ ಅಭಿಪ್ರಾಯಗಳೊಡನೆ ಹೆಣಗಾಡುವುದು, ಅಗತ್ಯವಾದಾಗ ಸಮಸ್ಯೆಯ ಕೆಲವು ಭಾಗಗಳನ್ನು ವಿಭಿನ್ನ ರೀತಿಯಲ್ಲಿ ಪುನಃ ನಿರೂಪಿಸುವುದು ಇವೇ ಮೊದಲಾದವು ಬಹುಮುಖೀ ಪರ್ಯಾಲೋಚನೆಯ ಸಾಮರ್ಥ್ಯ ಉಳ್ಳವರ ಲಕ್ಷಣಗಳು. ಎಂದೇ, ಅಲೋಚಿಸುವಿಕೆಯಲ್ಲಿ ನಮ್ಯತೆ (ಫ್ಲೆಕ್ಸಿಬಿಲಿಟಿ ಇನ್ ತಿಂಕಿಂಗ್) ಮತ್ತು ನಿರರ್ಗಳತೆ (ಫ್ಲೂಅನ್ಸಿ), ಸ್ವತಂತ್ರವಾಗಿ ಅಪೂರ್ವವಾದದ್ದನ್ನು (ಇತರರಿಗೆ ಹೊಳೆಯದ್ದು) ಉತ್ಪಾದಿಸುವ ಸಾಮರ್ಥ್ಯಗಳನ್ನು ಪೋಷಿಸುವ ಗುರಿ ಈ ಕಸರತ್ತುಗಳದ್ದು. ಮುಂದೆ ತಿಳಿಸಿರುವ ಕಸರತ್ತುಗಳನ್ನು ಉದಾಹರಣೆಗಳೆಂದು ಪರಿಗಣಿಸಿ ಅಂತಹುದೇ ಕಸರತ್ತುಗಳನ್ನು ನೀವೂ ಸೃಷ್ಟಿಸಬಹುದು. ಯಾವುದೇ ಕಸರತ್ತನ್ನು ಮಾಡುವಾತನ ಪ್ರಯತ್ನದ ಫಲಿತಾಂಶದ ಗುಣದೋಷವನ್ನು ಯಾವುದೇ ಕಾರಣಕ್ಕೂ ವಿಮರ್ಶಿಸಕೂಡದು. ಋಣಾತ್ಮಕ ಟೀಕೆಯ ಭಯದಿಂದಾಗಿ ಇತರರ ಮೆಚ್ಚುಗೆ ಗಳಿಸಬಲ್ಲದ್ದನ್ನೇ ಉತ್ಪಾದಿಸಬೇಕೆಂಬ ಬಯಕೆ ಸೃಜಾನಾತ್ಮಕತೆಯನ್ನು ನಾಶ ಮಾಡುತ್ತದೆ. ಸೃಜನಾತ್ಮಕತೆಗೆ ಒಂದು ನಿರ್ದಿಷ್ಟ ಪರಿಮಾಣಕ್ಕಿಂತ (ಬುದ್ಧಿಲಬ್ಧ/ಐ ಕ್ಯು ೧೨೦) ಹೆಚ್ಚಿನ ಬುದ್ಧಿಶಕ್ತಿ, ಅರ್ಥಾತ್ ಮೇಧಾವೀತನ ಅಗತ್ಯವಿಲ್ಲ ಎಂದು ಎಲ್ಲ ಅಧ್ಯಯನಗಳೂ ಸೂಚಿಸಿರುವುದರಿಂದ ಈ ಕಸರತ್ತುಗಳು ಹೆಚ್ಚುಕಮ್ಮಿ ಎಲ್ಲರಿಗೂ ಉಪಯುಕ್ತ. ಪ್ರತೀ ಕಸರತ್ತಿನಲ್ಲಿ ನಮೂದಿಸಿರುವ ಚಟುವಟಿಕೆಯಂಥದ್ದೇ ಚಟುವಟಿಕೆಗಳನ್ನು ನೀವೇ ರೂಪಿಸಿಕೊಳ್ಳಬಹುದು.
ಕಸರತ್ತು ೧.
ಪೂರ್ವಸಿದ್ಧತೆ: ಒಂದು ಕಾಗದದ ಹಾಳೆಯಲ್ಲಿ ಕೆಲವು ವೃತ್ತಗಳನ್ನು ಬರೆಯಿರಿ. ಇಂಥ ಅನೇಕ ಹಾಳೆಗಳನ್ನು ತಯಾರಿಸಿ ಇಟ್ಟುಕೊಳ್ಳಿ.
ಮಾಡಬೇಕಾದದ್ದು: ವೃತ್ತದ ಒಳಗೆ ಅಥವ ಹೊರಗೆ, ಒಳಗೆ ಮತ್ತು ಹೊರಗೆ ರೇಖೆಗಳನ್ನು ಸೇರಿಸುವುದರ ಮೂಲಕ ನಿಮ್ಮಿಂದ ಸಾಧ್ಯ ಇರುವಷ್ಟು ವಿಭಿನ್ನ ವಸ್ತುಗಳ ಚಿತ್ರಗಳನ್ನು ನಿರ್ಮಿಸಿ. ಸೌಂದರ್ಯದ ಬಗ್ಗೆ ಚಿಂತಿಸಬೇಡಿ. (ಇತರ ಉದಾ: ಒಂದು ಜೋಡಿ ಸಮಾಂತರ ರೇಖೆಗಳು, ಆಯಾಕೃತಿ)
ಕಸರತ್ತು ೨.
ನಿಮಗೆ ಪ್ರಿಯವಾದ ಯಾವುದಾದರೂ ವಸ್ತುವನ್ನು ತೆಗೆದುಕೊಳ್ಳಿ. (ಉದಾ: ಬಾಲ್ ಪಾಇಂಟ್ ಪೆನ್, ಕ್ಯಾಲೆಂಡರ್) ಅದು ಇನ್ನೂ ಚೆನ್ನಾಗಿರಬೇಕಾದರೆ ಅದರಲ್ಲಿ ಏನೇನು ಬದಲಾವಣೆಗಳನ್ನು ಮಾಡಬೇಕು? ಪಟ್ಟಿ ಮಾಡಿ. ಅಪೇಕ್ಷಿತ ಬದಲಾವಣೆ ಮಾಡಲು ಸಾಧ್ಯವೇ ಎಂಬುದರ ಕುರಿತಾಗಲಿ ಮಾಡಲು ಆಗಬಹುದಾದ ವೆಚ್ಚದ ಕುರಿತಾಗಲೀ ಚಿಂತಿಸಬೇಡಿ. ಕಾಗುಣಿತದ ಕುರಿತಾಗಲೀ ವ್ಯಾಕರಣ ದೋಷಗಳ ಕುರಿತಾಗಲೀ ಚಿಂತಿಸಬೇಡಿ.
ಕಸರತ್ತು ೩.
ಗೋಡೆಗೆ ಮೊಳೆ ಹೊಡೆಯಲು ಉಪಯೋಗಿಸ ಬಹುದಾದ ವಸ್ತುಗಳ ಪಟ್ಟಿ ಮಾಡಿ. ಪಟ್ಟಿ ಉದ್ದವಾದಷ್ಟೂ ಒಳ್ಳೆಯದು. ಕಾಗುಣಿತದ ಕುರಿತು ಚಿಂತಿಸಬೇಡಿ. (ಇತರ ಉದಾ: ಬೀಸಣಿಗೆಯಂತೆ ---)
ಕಸರತ್ತು ೪.
ಈ ಕೆಳಗಿನಂತಾದರೆ ಏನಾಗುತ್ತದೆ? ನೀವು ಊಹಿಸುವ ಪರಿಣಾಮಗಳ ಸಂಖ್ಯೆ ಹೆಚ್ಚಿದ್ದಷ್ಟೂ ಒಳ್ಳೆಯದು. ಕಾಗುಣಿತದ ಕುರಿತಾಗಲೀ ವ್ಯಾಕರಣ ದೋಷಗಳ ಕುರಿತಾಗಲೀ ಚಿಂತಿಸಬೇಡಿ.
ಸಮುದ್ರ ಬತ್ತಿ ಹೋದರೆ -----
ನಮ್ಮ ಕೈಗಳಲ್ಲಿ ಹೆಬ್ಬೆರಳು ಮತ್ತು ಕಿರುಬೆರಳು ಇಲ್ಲದೇ ಇರುತ್ತಿದ್ದರೆ ----
ನಾವು ಯಾವಾಗ ಸಾಯುತ್ತೇವೆ ಎಂಬುದು ನಮಗೆ ತಿಳಿದಿರುತ್ತಿದ್ದರೆ -----
ಮೇಲಕ್ಕೆಸೆದ ವಸ್ತುಗಳು ಕೆಳಗೆ ಬೀಳದೇ ಇರುತ್ತಿದ್ದರೆ -----
ಕಸರತ್ತು ೪.
ಒಂದು ದಪ್ಪ ರಟ್ಟಿನ ಪೆಟ್ಟಿಗೆಯನ್ನು ಯಾವುದಕ್ಕೆಲ್ಲ/ಹೇಗೆಲ್ಲ ಉಪಯೋಗಿಸಬಹುದು. ಸಾಂಪ್ರದಾಯಿಕವಲ್ಲದ ುಪಯೋಗಗಳನ್ನೂ ಬರೆಯಬಹುದು. ನೀವು ಊಹಿಸುವ ಉಪಯೋಗಗಳ ಸಂಖ್ಯೆ ಹೆಚ್ಚಿದ್ದಷ್ಟೂ ಒಳ್ಳೆಯದು. ಕಾಗುಣಿತದ ಕುರಿತಾಗಲೀ ವ್ಯಾಕರಣ ದೋಷಗಳ ಕುರಿತಾಗಲೀ ಚಿಂತಿಸಬೇಡಿ. (ಇತರ ಉದಾ: ಚಮಚೆ, ಸೀಮೆಸುಣ್ಣ, ಇಟ್ಟಿಗೆ)
ಕಸರತ್ತು ೫.
ನೀವು ಒಬ್ಬ ಶಾಲಾ ಮಕ್ಕಳಿಗೆ ಅಗತ್ಯವಾದ ಪುಸ್ತಕಗಳ ಮತ್ತು ಲೇಖನ ಸಾಮಗ್ರಿಗಳ ವ್ಯಾಪಾರಿ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ಊರಿನ/ಬಡಾವಣೆಯಲ್ಲಿ ಇರುವ ಎಲ್ಲ ಶಾಲಾ ಮಕ್ಕಳು ನಿಮ್ಮ ಹತ್ತಿರವೇ ತಮಗೆ ಬೇಕಾದ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ಖರೀದಿಸುವಂತೆ ಮಾಡಲು ಏನೇನು ಮಾಡಲು ಸಾಧ್ಯ? ಎಲ್ಲ ಆಲೋಚನೆಗಳನ್ನೂ ಬರೆಯಿರಿ. ಸಂಖ್ಯೆ ಹೆಚ್ಚಿದ್ದಷ್ಟೂ ಒಳ್ಳೆಯದು. . ಕಾಗುಣಿತದ ಕುರಿತಾಗಲೀ ವ್ಯಾಕರಣ ದೋಷಗಳ ಕುರಿತಾಗಲೀ ಚಿಂತಿಸಬೇಡಿ. (ಇತರ ಉದಾ: ನೀವು ಒಬ್ಬ ನಾನಾ ಬಗೆಯ ತಿಂಡಿ ತಿನಿಸುಗಳ ವ್ಯಾಪಾರಿ ಎಂದು ------, ನೀವು ನಿಮ್ಮ ಶಾಲಾ ನಾಯಕ/ಗ್ರಾಮ ಪಂಚಾಯಿತಿಯ ಸದಸ್ಯ ಆಗಲು ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸ ಬೇಕೆಂದುಕೊಂಡಿದ್ದೀರಿ. ಬಹುಮತಗಳಿಸಲು ಅನುಸರಿಸಬೇಕಾದ ತಂತ್ರಗಳನ್ನು ----)
ಕಸರತ್ತು ೬.
ನಿಮಗೆ ಇಷ್ಟವಾದವುಗಳ ಚಿತ್ರಗಳನ್ನು ನಿಮಗೆ ತೋಚಿದಂತೆ ಬರೆಯಿರಿ. ಅವುಗಳ ಅಂದದ ಕುರಿತು ಚಿಂತಿಸಬೇಡಿ.
ಕಸರತ್ತು ೭.
ನಿಮ್ಮ ಮನಸಿಗೆ ಹೊಳೆದದ್ದನ್ನೆಲ್ಲ ೨೦ ನಿಮಿಷಗಳ ಅವಧಿಯಲ್ಲಿ ಬರೆಯಿರಿ. ಅವು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದವುಗಳೂ ಆಗಿರಬಹುದು. . ಕಾಗುಣಿತದ ಕುರಿತಾಗಲೀ ವ್ಯಾಕರಣ ದೋಷಗಳ ಕುರಿತಾಗಲೀ ಚಿಂತಿಸಬೇಡಿ.
ಕಸರತ್ತು ೮.
ನೀವು ಒಂದು ದಿನದ ವಿಹಾರಪ್ರವಾಸ (ಪಿಕ್ನಿಕ್)ಕ್ಕೆಂದು ಸಮೀಪದ ಸ್ಥಳಕ್ಕೆ ಹೋಗುತ್ತೀರಿ. ಅಲ್ಲಿಯೇ ಅಡುಗೆ ಮಾಡುವ ಯೋಜನೆ ನಿಮ್ಮದಾಗಿತ್ತು ಎಂದು ಕಲ್ಪಿಸಿಕೊಳ್ಳಿ. ಹೋದಬಳಿಕ ಅಡುಗೆ ಮಾಡಲು ಬೇಕಾದ ಪಾತ್ರೆಗಳ ವಿನಾ ಉಳಿದ ಎಲ್ಲವನ್ನೂ ತಂದಿರುವುದು ಗಮನಕ್ಕೆ ಬರುತ್ತದೆ. ಹಸಿವು ವಿಪರೀತ. ಏನೇನು ಮಾಡಲು ಸಾಧ್ಯ?
ಕಸರತ್ತು ೯.
ನಿಮಗೆ ಇಷ್ಟವಾದ ದಂತಕಥಯೊಂದನ್ನು ಪುನಃ ಓದಿ. ಅದೇ ತೆರನಾದ ಅಥವ ಬೇರೆ ಕಥೆ ಬರೆಯಿರಿ.
ಕಸರತ್ತು ೧೦.
ಈ ಮುಂದೆ ಕೊಟ್ಟಿರುವ ಶೀರ್ಷಿಕೆ ಉಳ್ಳ ಕಥೆಗಳನ್ನು ಬರೆಯಿರಿ
ಪಕ್ಷಿಯಂತೆ ಹಾರಬಲ್ಲ ಕಪಿ.
ಮಾತಾಡಲಾಗದ ಶಿಕ್ಷಕ
ಬೇಕೆಂದಾಗ ಕತ್ತೆಯಂತೆ ಅರಚಬಲ್ಲ ಹಸು
No comments:
Post a Comment