ವಿದ್ಯಾರ್ಥಿ ದೆಸೆಯಲ್ಲಿ ರಜಾದಿನಗಳಲ್ಲಿ ನಾನು ಸಾಮಾನ್ಯವಾಗಿ ಇರುತ್ತಿದ್ದದ್ದು ಕೊಡಗಿನ ಸುಂಟಿಕೊಪ್ಪದ ಸಮೀಪ ಇದ್ದ ದಿ.ಜಿ ಎಮ್ ಮಂಜನಾಥಯ್ಯನವರ ಮನೆಯಲ್ಲಿ. ಶ್ರೀಮತಿ ಮೀನಾಕ್ಷಮ್ಮ ಮಂಜನಾಥಯ್ಯನವರು ನನ್ನ ತಂದೆಯವರ ಚಿಕ್ಕಮ್ಮ. ಎಂದೇ, ಇವರು ನನ್ನ ಅಜ್ಜ ಅಜ್ಜಿಯರು. ಈ ಅಜ್ಜಿಯನ್ನು ನಾನು ಆಗ ಕರೆಯುತ್ತಿದ್ದದ್ದು ಚಿಕ್ಕಮ್ಮ ಎಂದು. ನನ್ನ ತಾಯಿ ನನಗೆ ಸುಮಾರು ೧ ವರ್ಷ ವಯಸ್ಸು ಆಗುವಷ್ಟರಲ್ಲೇ ಬೆಂಕಿ ಆಕಸ್ಮಿಕದಿಂದ ಗತಿಸಿದ ಬಳಿಕ ನನ್ನ ತಂದೆ ಪುನಃವಿವಾಹವಾಗುವ ತನಕ, ಅಂದರೆ, ಸುಮಾರು ೩-೪ ವರ್ಷ ಕಾಲ ನನ್ನನ್ನು ಪೋಷಿಸಿದವರು ಎಂಬ ಕಾರಣಕ್ಕಾಗಿ.
ಶೀರ್ಷಿಕೆಯಲ್ಲಿ ಉಲ್ಲೇಖಿಸಿದ ಪ್ರಸಂಗ ನಡೆದಾಗ ನನ್ನ ವಯಸ್ಸು ಬಹುಶಃ ೯-೧೦ ವರ್ಷ ಇದ್ದಿರಬಹುದು. ಆಗ ನನ್ನ ತಂದೆ ಸುಂಟಿಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು. ನಾನು ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇರುತ್ತಿತ್ತು. ಆ ರಜಾ ದಿನಗಳಲ್ಲಿಯೂ ನನ್ನ ವಾಸ್ತವ್ಯ ‘ಅಜ್ಜ-ಚಿಕ್ಕಮ್ಮ’ರ ಮನೆಯಲ್ಲಿ. ಶುಕ್ರವಾರ ಸಂಜೆ ನನ್ನ ತಂದೆ ಸಕುಟುಂಬ ಸಮೇತ (ಅರ್ಥಾತ್, ನಾನು, ತಂದೆ ಮತ್ತು ಚಿಕ್ಕಮ್ಮ ) ಅವರ ಮನೆಗೆ ಹೋಗಿ ರಾತ್ರಿಯ ಊಟ ಮುಗಿಸಿ ನನ್ನನ್ನು ಅಲ್ಲಿಯೇ ಬಿಟ್ಟು ಹಿಂದಿರುಗುತ್ತಿದ್ದರು. ಭಾನುವಾರ ಸಂಜೆ ಪುನಃ ಒಬ್ಬರೇ ಬಂದು ನನ್ನನ್ನು ಕರೆದೊಯ್ಯತ್ತಿದ್ದರು. ಇಂಥ ಒಂದು ಸಂದರ್ಭದಲ್ಲಿ ----
ಆ ಮನೆಯಲ್ಲಿ ಪ್ರತೀ ದಿನ ರಾತ್ರಿ ೮ ಗಂಟೆಗೆ ಸರಿಯಾಗಿ ಊಟ. ನಡುಮನೆಯಲ್ಲಿದ್ದ ಗೋಡೆ ಗಡಿಯಾರ ೮ ಹೊಡೆದು ೧-೨ ನಿಮಿಷಗಳಲ್ಲಿ ಭೋಜನಾರಂಭ. ರಾತ್ರಿ ಊಟದ ಸಮಯ ನಿರ್ಧರಿಸುತ್ತಿದ್ದದ್ದೇ ಈ ಗಡಿಯಾರ ಎಂದು ನಾನು ತಿಳಿದಿದ್ದೆ. ಎಂದೇ, ಭೋಜನಾರಂಭಕ್ಕೆ ಮುನ್ನ ಗಂಟೆ ಬಾರಿಸುವಾಗ ಗಡಿಯಾರದ ಸಣ್ಣ ಮುಳ್ಳು ಮತ್ತು ದೊಡ್ಡ ಮುಳ್ಳು ಇರುತ್ತಿದ್ದ ಸ್ಥಾನ ಸರಿಯಾಗಿ ಗಮನಿಸಿದ್ದೆ. ಆ ಗಡಿಯಾರದ ಪಕ್ಕದಲ್ಲಿ ಇದ್ದ ಕಿಟಕಿಯನ್ನು ಹತ್ತಿ ಕಸರತ್ತು ಮಾಡಿದರೆ ಗಡಿಯಾರದ ಒಂದು ಮುಳ್ಳು ಕೈಗೆಟುಕುತ್ತಿತ್ತು. ಒಂದು ದಿನ ಗಡಿಯಾರದ ಮುಳ್ಳುಗಳು ನಾನು ಗಮನಿಸಿದ್ದ ಸ್ಥಾನ ತಲಪುವ ಮೊದಲೇ ಕಸರತ್ತು ಮಾಡಿ ಕೈಗೆಟುಕಿದ ಒಂದು ಮುಳ್ಳನ್ನು ತುಸು ಮುಂದು ಸರಿಸಿ ಆ ಸ್ಥಾನ ತಲಪುವಂತೆ ಮಾಡಿದೆ. ತತ್ಪರಿಣಾಮವಾಗಿ ನಿಜವಾಗಿ ೭ ಗಂಟೆಯಾದಾಗ ಗಡಿಯಾರ ೮ ಗಂಟೆ ತೋರಿಸುತ್ತಿತ್ತು. ಗಡಿಯಾರ ಊಟ ಮಾಡಬೇಕಾದ ಸಮಯ ಸೂಚಿಸುತ್ತಿದ್ದರೂ ಊಟ ಸುರು ಮಾಡುವ ಬದಲು ಎಂದೂ ತಪ್ಪಾಗಿ ಸಮಯ ತೋರದಿದ್ದ ಗಡಿಯಾರ ಅಂದೇಕೆ ತಪ್ಪು ಸಮಯ ತೋರುತ್ತಿದೆ ಎಂಬುದನ್ನು ಪತ್ತೆಹಚ್ಚಲೋಸುಗ ಮನೆಯವರೆಲ್ಲರೂ (ಅಜ್ಜ, ಅಜ್ಜಿ ಉರುಫ್ ಚಿಕ್ಕಮ್ಮ, ಮತ್ತು ಅವರ ಮೂರು ಮಕ್ಕಳು) ಗಡಿಯಾರ ಇದ್ದ ಕೊಠಡಿಯಲ್ಲಿ ಸಭೆ ಸೇರಿದರು. ಎಲ್ಲರಿಗೂ ಈ ವಿದ್ಯಮಾನದಲ್ಲಿ ನನ್ನದೇನೋ ಕೈವಾಡ ಇದೆ ಎಂಬ ಗುಮಾನಿ ಏಕೆ ಬಂತೋ ತಿಳಿಯದು. ‘ಗಡಿಯಾರ ನನ್ನ ಕೈಗೆಟುಕುವುದಿಲ್ಲ’ ಎಂದು ನಾನು ಗಡಿಯಾರದ ಕೆಳಗೆ ನಿಂತು ಸಾಬೀತು ಪಡಿಸಿದರೂ ಎಲ್ಲರದೂ ಒಂದೇ ಅಭಿಪ್ರಾಯ -‘ಇದು ಗೋವಿಂದನದೇ ಕೆಲಸ’. “ಒಂದೊಂದು ಚೀಟಿಯಲ್ಲಿ ಒಬ್ಬೊಬ್ಬರ ಹೆಸರು ಬರೆದು ಆ ಚೀಟಿಗಳನ್ನು ದೇವರ ಮುಂದಿಟ್ಟು ಈ ಕೃತ್ಯವೆಸಗಿದವನನ್ನು ಪತ್ತೆಹಚ್ಚುವಂತೆ ಪ್ರಾರ್ಥಿಸಿ, ಒಂದು ಚೀಟಿ ಎತ್ತುವುದು. ಅದರಲ್ಲಿ ಯಾರ ಹೆಸರು ಇರುತ್ತದೋ ಅವರೇ ಅಪರಾಧಿ ಎಂದು ತೀರ್ಮಾನಿಸೋಣ” ಅಪರಾಧಿಯನ್ನು ಪತ್ತೆಹಚ್ಚಲು ಅಜ್ಜ ಸೂಚಿಸಿದ ತಂತ್ರ ಇದು. ಇದನ್ನು ನಾನು ಒಪ್ಪಿಕೊಳ್ಳದೇ ಇರುವಂತಿಲ್ಲ. ಒಪ್ಪಿಕೊಳ್ಳದಿದದ್ದರೆ ನಾನೇ ಅಪರಾಧಿ ಎಂಬುದನ್ನು ಒಪ್ಪಿಕೊಂಡಂತಾಗುತ್ತದ್ದಲ್ಲ. ಅಜ್ಜ ಚೀಟಿಗಳನ್ನು ಸಿದ್ಧಪಡಿಸಿದರು, ಪ್ರತಿಯೊಂದನ್ನೂ ಮುದ್ದೆಮಾಡಿ ನನ್ನ ಕೈನಲ್ಲಿಟ್ಟರು. ಅವನ್ನು ದೇವರ ಮುಂದಿಟ್ಟು ಅಪರಾಧಿಯನ್ನು ಹಿಡಿದುಕೊಡುವಂತೆ ಪ್ರಾರ್ಥಿಸುವ ಕಾರ್ಯ ನಾನು ನಿಭಾಯಿಸ ಬೇಕಾಯಿತು. ‘ದೇವರೇ ನನ್ನನ್ನು ಕಾಪಾಡಪ್ಪ’ ಎಂದು ಮನಸ್ಸಿನಲ್ಲಿಯೇ ಪ್ರಾರ್ಥಿಸಿದ್ದೂ ಆಯಿತು. ಆ ಚೀಟಿಗಳ ಪೈಕಿ ಒಂದನ್ನು ಎತ್ತುವವನೂ ನಾನೇ ಎಂಬುದು ಉಳಿದವರ ಸರ್ವಾನುಮತದ ತೀರ್ಮಾನ. ಅಂತೆಯೇ, ಒಂದು ಚೀಟಿ ಎತ್ತಿದೆ. ಬಿಡಿಸಿ ನಾನೇ ಓದಿದೆ- ‘ಗೋವಿಂದ’. ದೇವರೇ ಹೇಳಿದ ಮೇಲೆ ಒಪ್ಪಿಕೊಳ್ಳದೇ ಇರುವುದು ಹೇಗೆ? ಮುಳ್ಳು ತಿರುಗಿಸಿದ್ದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ನೀಡಿದ್ದೂ ಆಯಿತು. ಎಲ್ಲರೂ, ನಕ್ಕಿದ್ದೇ ನಕ್ಕಿದ್ದು. ಬೈಗುಳ ಸುರಿಮಳೆ ನಿರೀಕ್ಷಿಸುತ್ತಿದ್ದ ನನಗೆ ಅವರು ನಕ್ಕದ್ದು ಏಕೆಂದು ಅರ್ಥವಾಗಲೇ ಇಲ್ಲ. (ಮುಂದೆ ಎಷ್ಟೋ ವರ್ಷಗಳ ಬಳಿಕ ತಿಳಿಯಿತು, ಎಲ್ಲ ಚೀಟಿಗಳಲ್ಲಿಯು ನನ್ನ ಹೆಸರನ್ನೇ ಬರೆದಿದ್ದರೆಂದು!). ಸಧ್ಯಕ್ಕೆ ಬೈಸಿಕೊಳ್ಳದಿದದ್ದರೂ ಪೆಟ್ಟು ಬೀಳದಿದ್ದರೂ ಮಾರನೆಯ ದಿನ ಅಪ್ಪನಿಗೆ ಹೇಳುತ್ತಾರೆ. ಮನೆಗೆ ಕರೆದೊಯ್ದ ಬಳಿಕ ಚಿಕ್ಕಮ್ಮನಿಗೆ ಹೇಳುತ್ತಾರೆ. ಅವರು ಸುಮ್ಮನಿರುತ್ತಾರೆಯೇ? ಖಂಡಿತ ಇಲ್ಲ. (ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ, ಆ ದಿನದ ತಪ್ಪುಗಳ ಪಟ್ಟಿ ಮಾಡಿ ಅವೆಲ್ಲವಕ್ಕೂ ಒಂದೇ ಕಂತಿನಲ್ಲಿ ಪೆಟ್ಟು ಕೊಡುವುದೂ, ಆ ಕುರಿತಾಗಿ ಅಪ್ಪನಿಗೆ ಹೇಳಿದರೆ ಮರುದಿನ ಅದಕ್ಕೆ ವಿಶೇಷವಾಗಿ ಹೆಚ್ಚುವರಿ ಪೆಟ್ಟು ಕೊಡುವುದೂ ಅವರ ಕ್ರಮವಾಗಿತ್ತು). ಮರು ದಿನ ಸಂಜೆಯ ತನಕವೂ ಮುಂಬರಲಿರುವ ಗಂಡಾತರದಿಂದ ತಪ್ಪಿಸಿಕೊಳ್ಳುವುದು ಹೇಗೆಂಬುದೇ ಬಲು ದೊಡ್ಡ ಚಿಂತೆಯಾಗಿತ್ತು. ಮರು ದಿನ ಸಂಜೆ ಅಪ್ಪನ ಕಾರಿ ಸದ್ದು ಕೇಳುತ್ತಿದ್ದಂತೆಯೇ (ಆಗ ಅಪ್ಪನ ಹತ್ತಿರ ಒಂದು ‘ವಾಕ್ಸಾಲ್’ ಎಂಬ ಬ್ರ್ಯಾಡಿನ ಪುಟ್ಟ ಕಾರೊಂದಿತ್ತು) ಗಂಡಾಂತರದಿಂದ ಪಾರಾಗಲು ಉಪಾಯವೊಂದು ಇದ್ದಕಿದ್ದಂತೆಯೇ ಹೊಳೆಯಿತು (ಆರ್ಕಿಮಿಡೀಸ್!). ಅಪ್ಪ ಹೋಗುವ ತನಕ ಯಾರಿಗೂ ಸಿಕ್ಕದಂತೆ ಅಡಗಿ ಕುಳಿತುಕೊಳ್ಳುವುದೇ ಸರ ಎಂದು. ತಡ ಮಾಡದೆ ಯೋಜನೆಯಂತೆ ಮಾಡಿದ್ದೂ ಆಯಿತು. ಮನೆಯ ಸುತ್ತಲೂ ಕಾಫಿತೋಟ, ಆಸುಪಾಸಿನ ತೋಟದ ಪ್ರತೀ ಅಂಗುಲ ಜಾಗೆಯೂ ನನಗೆ ಸುಪರಿಚಿತ. ಅಂದ ಮೇಲೆ ನನ್ನನ್ನು ಹುಡುಕಿ ಹಿಡಿಯಲು ಸಾಧ್ಯವೇ? ಕತ್ತಲಾಗುವ ತನಕ ಆಳುಗಳ ಗುಂಪು ನನ್ನನ್ನು ಹುಡುಕುವ ನಿರರ್ಥಕ ಪ್ರಯತ್ನ ಮಾಡಿದರು. ಮನೆಯ ಹಿಂಭಾಗದಲ್ಲಿದ್ದ ಕಾಫಿತೋಟದ ನನ್ನ ಅಡಗುದಾಣದಿಂದ ಅವರ ಓಡಾಟವನ್ನು ನೋಡಬಲ್ಲವನಾಗಿದ್ದೆ. ಕತ್ತಲಾಯಿತು. ನನ್ನ ಅಪ್ಪನ ಕಾರು ಹೋದದ್ದೂ ತಿಳಿಯಿತು. ಒಂದು ಗಂಡಾಂತರದಿಂದ ಬಚಾವಾದೆ ಅಂದುಕೊಂಡು ಮನೆಗೆ ಹಿಂದಿರುಗುವ ತಯಾರಿಯಲ್ಲಿದ್ದಾಗ ಇನ್ನೊಂದು ಆಲೋಚನೆ ಕಾಡತೊಡಗಿತು. ಈಗಲೇ ಮನೆಯೊಳಕ್ಕೆ ಹೋದರೆ ಅಜ್ಜ ತಮ್ಮ ಕಾರಿನಲ್ಲಿ ನನ್ನನ್ನು ಕರೆದೊಯ್ಯ ಬಹುದಲ್ಲವೇ? ಇನ್ನೂ ಸ್ವಲ್ಪ ಹೊತ್ತು ಅಡಗಿರುವುದೇ ಒಳ್ಳೆಯದು ಎಂದು ತೀರ್ಮಾನಿಸಿದೆ. ಅಂದಿನ ದಿನಗಳಲ್ಲಿ ಮಡಿಕೇರಿಯಲ್ಲಿ ಮಾತ್ರ ಬೃಹದಾಕಾರದ ಜನರೇಟರ್ ನೆರವಿನಿಂದ ಸಂಜೆ ೬-೭ ಗಂಟೆಯ ನಂತರ ರಾತ್ರಿ ಕಾಲ ವಿದ್ಯುತ್ ಪೂರೈಕೆ ಮಾಡುತ್ತಿದ್ದರು. ಉಳಿದೆಡೆ ಸೀಮೆ ಎಣ್ಣೆ ದೀಪಗಳದ್ದೇ ಕಾರುಬಾರು. ತಮ್ಮದೇ ಆದ ಜನರೇಟರ್ ಇಟ್ಟುಕೊಂಡಿದ್ದ ಕಾರಣ ನನ್ನ ಈ ಅಜ್ಜ ಮನೆಯಲ್ಲೂ ರಾತ್ರಿ ವೇಳೆ ವಿದ್ಯದ್ದೀಪಗಳು ಬೆಳಗುತ್ತಿದ್ದವಾದರೂ ಮನೆಯ ಹೊರಾಂಗಣ ಕತ್ತಲಲ್ಲಿ ಮುಳುಗಿರುತ್ತಿತ್ತು. ಆದ್ದರಿಂದ ಯಾರ ಕಣ್ಣಿಗೂ ಬೀಳದೆಯೆ ಮನೆಯ ಸುತ್ತಮುತ್ತಲೇ ಓಡಾಡಬಹುದಿತ್ತು. ಗಂಟೆ ಎಂಟಾಯಿತು. ಮನೆಯವರು ಎಂದಿನಂತೆ ಊಟಕ್ಕೆ ಕುಳಿತರು. ಕಿಟಕಿಯಿಂದ ಇದನ್ನು ಖಾತರಿ ಪಡಿಸಿಕೊಂಡೆ. ನನ್ನ ಹಸಿವು? ತೋಟದ ಮನೆಯಲ್ಲವೇ? ಹಣ್ಣುಗಳಿಗೇನೂ ಬರವಿರಲಿಲ್ಲ. ಮನೆಯ ಜಗಲಿಯ ಒಂದು ಮೂಲೆಯಲ್ಲಿ ಇಟ್ಟಿದ್ದ ಮರದ ಕಪಾಟಿನಲ್ಲಿ ಬಾಳೆಹಣ್ಣಿನ ರಾಶಿ ಯಾವಾಗಲೂ ಇರುತ್ತಿತ್ತು. ಅದರಿಂದಲೇ, ಹಸಿವು ಇಂಗಿಸಿಕೊಂಡೆ. ಊಟ ಮುಗಿಸಿದ ಅಜ್ಜ ಒಂದಷ್ಟು ಆಳುಗಳನ್ನು ಕರೆದು ತಂಡಗಳಾಗಿ ಮಾಡಿ ತೋಟದ ದಶದಿಕ್ಕುಗಳಲ್ಲಿ ನನ್ನನ್ನು ಹುಡುಕಲು ಸೂಚನೆ ಕೊಟ್ಟಿದ್ದು ಕೇಳಿಸಿತು. ಲಾಟೀನು ಬೆಳಕಿನಲ್ಲಿ ಅಲ್ಲಿಯೇ ಅನತಿ ದೂರದಲ್ಲಿ ಇದ್ದ ನನ್ನನ್ನು ಪತ್ತೆಹಚ್ಚಲಾಗದವರ ಕುರಿತು ಚಿಂತೆ ಮಾಡುವುದೇಕೆ? ಹೇಗೂ ಇಷ್ಟು ಹೊತ್ತು ಅಡಗಿದ್ದಾಗಿದೆ, ಇಡೀ ರಾತ್ರಿ ಹೀಗೆಯೇ ಇದ್ದುಬಿಡಲು ತೀರ್ಮಾನಿಸಿದೆ. ಮನೆಯ ಹಿಂದಿದ್ದ ದನಗಳ ಕೊಟ್ಟಿಗೆಗೆ (ಇದನ್ನು ಕೊಟ್ಟಿಗೆ ಅನ್ನುವುದಕ್ಕಿಂತ ದನಗಳ ಮನೆ ಅನ್ನಬಹುದಾದಷ್ಟು ವಿಶಾಲವಾಗಿಯೂ ಸಿಮೆಂಟ್ ನೆಲದಿಂದಲೂ ಈ ಕೊಟ್ಟಿಗೆ ಯಾವಾಗಲೂ ಚೊಕ್ಕಟವಾಗಿರುತ್ತಿತ್ತು) ಸೇರಿದಂತೆ ವಿಶಾಲವಾದ ಉಗ್ರಾಣವೊಂದಿತ್ತು. ಅದಕ್ಕೆ ಬೀಗ ಹಾಕುವ ಪದ್ಧತಿ ಇರಲಿಲ್ಲ. ಅದರೊಳಕ್ಕೆ ನುಸುಳಿದೆ. ರಾತ್ರಿಯ ತೀರ ಮಬ್ಬಾದ ಬೆಳಕಿನಲ್ಲಿ ಒಂದು ಮೂಲೆಯಲ್ಲಿ ಗೋಣಿಚೀಲಗಳಲ್ಲಿ ಎನನ್ನೋ ತುಂಬಿಸಿಟ್ಟಿರುವುದು ಗೋಚರಿಸಿತು. ಅವುಗಳ ಎಡೆಯಲ್ಲಿ ಒಂದು ಖಾಲಿ ಗೋಣಿಚೀಲದ ಮೇಲೆ ಪವಡಿಸಿದೆ. ಇನ್ನೊಂದು ಖಾಲಿ ಗೋಣಿಚೀಲವೇ ಹೊದಿಕೆ. ರಾತ್ರಿ ಮುಂದೇನಾಯಿತೋ ಗೊತ್ತಿಲ್ಲ. (ಇಡೀ ರಾತ್ರಿ ತೋಟದ ಸಂದುಗೊಂದುಗಳಲ್ಲಿ ನನ್ನ ಹುಡುಕಾಟ ನಡೆದಿತ್ತಂತೆ) ಮಾರನೇ ದಿನ ಬೆಳಿಗ್ಗೆ ಯಾರೋ ಹಿಡಿದು ‘ಗೋವಿಂದ ಸಾಮಿ ಇಲ್ಲಿದ್ದಾರೆ’ ಎಂದು ಬೊಬ್ಬೆ ಹಡೆದಾಗ ಎಚ್ಚರವಾಯಿತು. ಕಣ್ಣು ತೆರೆದಾಗ ಕಂಡಿದ್ದೇನು? ನನಗೆ ಬಲು ಪ್ರಿಯನಾಗಿದ್ದ ರಾಮಣ್ಣ ೆಂಬ ಮನೆಯಾಳು ನಗುತ್ತಾ ನಿಂತದ್ದು. ಪ್ರತೀದಿನ ಬೆಳಗ್ಗೆ ದನಗಳಿಗೆ ಹಿಂಡಿ ಇತ್ಯಾದಿ ಹಾಕುವುದು ಅವನ ಕೆಲಸಗಳಲ್ಲಿ ಒಂದು. ಎಂದಿನಂತೆ ಉಗ್ರಾಣದಿಂದ ಹಿಂಡಿ ತೆಗೆದುಕೊಳ್ಳಲು ಬಂದ ಅವನಿಗೆ ಗೋಣಿಚೀಲ ಹೊದ್ದು ಮಲಗಿದ್ದ ನನ್ನ ತಲೆಯ ತುದಿ ಕಂಡಿತಂತೆ. ಯಾರೆಂದು ಊಹಿಸಲು ಅವನಿಗೆ ಕಷ್ಟವೇನೂ ಆಗಲಿಲ್ಲವಂತೆ.
ಮನೆಯವರೂ ಆಳುಗಳೂ ನನ್ನ ದರ್ಶನಕ್ಕೆ ಹಿತ್ತಲ ಭಾಗದಲ್ಲಿ ಜಮಾಯಿಸಿದರು. ನನ್ನನ್ನು ಕಂಡ ತಕ್ಷಣ ಎಲ್ಲರೂ ನಗತೊಡಗಿದರು. ಬೈಗಳ ಅರ್ಚನೆ ಆಗುವುದರ ಬದಲು ಹೀಗೇಕೆ ಆಗುತ್ತಿದೆ ಎಂದು ಪಿಳಿಪಿಳಿ ನೋಡುತ್ತಿದ್ದ ನನ್ನ ಮುಂದೆ ಅದಾರೋ ಕನ್ನಡಿ ಹಿಡಿದರು. ನನ್ನ ಗುರುತು ನನಗೇ ಸಿಕ್ಕಲಿಲ್ಲ, ಅಷ್ಟು ಕಪ್ಪಾಗಿದ್ದೆ. ನಾನು ಮಲಗಿದ್ದೂ ಹೊದ್ದದ್ದೂ ಇದ್ದಿಲು ತುಂಬಿಟ್ಟಿದ್ದ ಚೀಲಗಳನ್ನು! ಎಂದೇ ಹೆಚ್ಚು ಕಮ್ಮಿ ಮೊಹರಮ್ ಹಬ್ಬದ ವೇಷಧಾರಿಯಂತಾಗಿದ್ದೆ. ಅಲ್ಲಿಂದ ನೇರ ಕರೆದೊಯ್ದದ್ದೇ ಬಚ್ಚಲು ಮನೆಗೆ. ಸ್ನಾನ, ತಿಂಡಿ ಇತ್ಯಾದಿಗಳ ಸೇವೆ ಆಯಿತೇ ವಿನಾ ಯಾರೂ ಬಯ್ಯಲಿಲ್ಲ, ಬದಲಾಗಿ ಇದ್ದಿಲು ಮೂಟೆಯಲ್ಲಿ ಇನ್ನು ಯಾವಾಗ ಮಲಗುವುದೆಂದು ಪದೇಪದೇ ಕೇಳಿ ತಮಾಷೆ ಮಾಡುತ್ತಿದ್ದರು (ಬಹುಶಃ ನಾನು ಹೀಗೇಕೆ ಮಾಡಿದ್ದೆಂದು ಎಲ್ಲರೂ ಊಹಿಸಿದ್ದಿರಬೇಕು). ತದನಂತರ, ಸುಂಟಿಕೊಪ್ಪಕ್ಕೆ ಏನೋ ಸಾಮಾನು ತರಲು ಹೋಗುವ ತೋಟದಾಳುಗಳ ಕಾವಲಿನಲ್ಲಿ ಜೋಡೆತ್ತಿನ ಗಾಡಿಯಲ್ಲಿ ಮುಂದಿನ ‘ಫ್ರಂಟ್ ಸೀಟಿನಲ್ಲಿ’ ಕಾಲು ಕೆಳಗೆ ಇಳಿಬಿಟ್ಟು ಅಪ್ಪನ ಮನೆಗೆ ಹೋಗುವ ಸುವರ್ಣಾವಕಾಶವೂ ಲಭಿಸಿತು. ಅದೇಕೋ, ಮನೆಯಲ್ಲಿಯೂ ಅಪ್ಪನಿಂದಾಗಲೀ ಚಿಕ್ಕಮ್ಮನಿಂದಾಗಲೀ ಬೈಗುಳ ಸಿಕ್ಕಲಿಲ್ಲ. ನಾನು ಸಿಕ್ಕಿದ ಪರಿಯನ್ನು ಅವರಿಗೆ ರಸವತ್ತಾಗಿ ಆಳುಗಳು ವರ್ಣಿಸುವಾಗ ಅವರು ನಗಲೂ ಇಲ್ಲ (ಏಕೆಂದು ಆಗ ತಿಳಿಯದಿದ್ದರೂ ಈಗ ಊಹಿಸುವುದು ನಿಮಗೂ ಕಷ್ಟವಾಗಲಾರದು)
ಹೀಗೆ ಸುಖಾಂತ್ಯವಾಯಿತು ‘ಮನೆಯಿಂದ ನಾನು ಓಡಿ ಹೋದ’ ಪ್ರಸಂಗ. ಮುಂದೆ ಅನೇಕ ವರ್ಷಗಳ ಕಾಲ ತೋಟದ ಆಳುಗಳು ನನ್ನನ್ನು ಕಂಡಾಗಲೆಲ್ಲ ಈ ಪ್ರಸಂಗವನ್ನು ಮೊದಲಿನಷ್ಟೇ ರಸವತ್ತಾಗಿ ವರ್ಣಿಸಿ ನಗುತ್ತಿದ್ದರು.
2 comments:
ಓಡಿ ಹೋದ ಪ್ರಸಂಗ ಚೆನ್ನಾಗಿತ್ತು.
Govinda chikkappa,
ನಿಮ್ಮ ಮನೆಯಿಂದ ಓಡಿ ಹೋದ ಪ್ರಸಂಗ ಬಹಳ ರಸವತ್ತಾಗಿದೆ, ಆ ಘಟನೆ ನಿಮ್ಮ ವರ್ಣನೆಯನ್ನೂ ಮೀರಿಸಿರಬಹುದೆಂದು ಅನಿಸಿತು. ಆ ಕಾಲದಲ್ಲಿ ಮಕ್ಕಳ ಮತ್ತು ಹೆತ್ತವರ ಮಧ್ಯದಲ್ಲಿ ತುಂಬಾ ಅಂತರವಿತ್ತು, ಹಾಗಾಗಿ ಬಹುಶಃ ಇಂತಹ ಸನ್ನಿವೇಶಗಳು ಜರಗುತಿತ್ತು.
ಶೈಲಜ
Post a Comment