೪.೧ ಮೂಲಭೂತ ಪರಿಕಲ್ಪನೆಗಳು
ಖಗೋಳ
(ಸಿಲೆಸ್ಟಿಅಲ್ ಸ್ಪಿಅರ್) ಎಂಬುದು ಭೂಮಿಯನ್ನು ಕೇಂದ್ರವಾಗಿ ಉಳ್ಳ ಅಪರಿಮಿತ ಹರವು ಉಳ್ಳ ಕಲ್ಪಿತ
ಗೋಳ, ಅದು ತನ್ನನ್ನು ಅತಿ ದೂರದಲ್ಲಿ ಹಾಗೂ ಅತಿ ಎತ್ತರದಲ್ಲಿ ಸುತ್ತುವರಿದ
ಗುಮ್ಮಟದಂತೆ ಖಗೋಳಾರ್ಧ ವೀಕ್ಷಕನಿಗೆ ಗೋಚರಿಸುತ್ತದೆ, ಈ
ಗುಮ್ಮಟದ ಒಳಮೈಗೆ ನಕ್ಷತ್ರಗಳು, ಗ್ರಹಗಳು ಇವೇ ಮೊದಲಾದ ಆಕಾಶಕಾಯಗಳು ಅಂಟಿಕೊಂಡಿರುವಂತೆ ಭಾಸವಾಗುತ್ತದೆ ಎಂಬ
ವಿಷಯ ನಿಮಗೆ ತಿಳಿದಿದೆ. ಗೋಚರ ಖಗೋಳಾರ್ಧವನ್ನೇ ಖಗೋಳ ಎಂದು ಉಲ್ಲೇಖಿಸುವುದೂ ಉಂಟು.
ಭೂಮಿಯ ಸಮಭಾಜಕ ವೃತ್ತ ಎಂದರೇನು ಎಂಬುದು ನಿಮಗೆ ತಿಳಿದಿದೆ. ಖಗೋಳವನ್ನು ಛೇದಿಸುವ ತನಕ ಈ ವೃತ್ತವನ್ನು ವಿಸ್ತರಿಸಿದರೆ ಅದು
ಖಗೋಳವನ್ನು ಛೇದಿಸುವಲ್ಲಿ ಒಂದು ಮಹಾವೃತ್ತ ಉಂಟಾಗುತ್ತದೆ. ಇದೇ ಖಗೋಳ
ಸಮಭಾಜಕ ವೃತ್ತ ಅಥವ ವಿಷುವದ್ವೃತ್ತ (ಸಿಲೆಸ್ಟಿಅಲ್ ಇಕ್ವೇಟರ್). ಭೂಮಿಯ ಉತ್ತರ-ದಕ್ಷಿಣ
ಧ್ರುವಗಳನ್ನು ಜೋಡಿಸುವ ರೇಖೆಯನ್ನು ಎರಡೂ ಪಾರ್ಶ್ವಗಳಲ್ಲಿ ವಿಸ್ತರಿಸಿದರೆ ಅದು ಖಗೋಳವನ್ನು
ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಭೂಮಿಯ ಉತ್ತರ ಧ್ರುವಕ್ಕೆ ಅಭಿಮುಖವಾಗಿ ಇರುವ ಛೇದನ ಬಿಂದು ಖಾಗೋಳಿಕ
ಉತ್ತರ ಧ್ರುವ (ಸಿಲೆಸ್ಟಿಅಲ್ ನಾರ್ತ್ ಪೋಲ್), ದಕ್ಷಿಣ
ಧ್ರುವಕ್ಕೆ ಅಭಿಮುಖವಾಗಿ ಇರುದು ಖಾಗೋಳಿಕ ದಕ್ಷಿಣ ಧ್ರುವ (ಸಿಲೆಸ್ಟಿಅಲ್ ಸೌತ್ ಪೋಲ್).
ಖಾಗೋಳಿಕ ಉತ್ತರ ಧ್ರುವ ಬಿಂದುವಿನಲ್ಲಿ ಹಾಲಿ ಧ್ರುವ ತಾರೆ ಇದೆ.
ವೀಕ್ಷಕನ ನೆತ್ತಿಯ ನೇರದಲ್ಲಿ ಖಗೋಳದಲ್ಲಿ ಇರುವ ಬಿಂದು ಖಮಧ್ಯ, ಬಾನೂ ಭುವಿಯೂ ಸಂಗಮಿಸುವಂತೆ ಭಾಸವಾಗುವ ವೀಕ್ಷಕ ಕೇಂದ್ರಿತ ಮಹಾವೃತ್ತವೇ
ದಿಗಂತ (ಹಾರಿಜ, ಕ್ಷಿತಿಜ ಬಾನಂಚು, ಹರೈಸ್ನ್) ಈ ಅಂಶಗಳು ನಿಮಗೆ ತಿಳಿದಿದೆ.
ಖಮಧ್ಯ ಮತ್ತು ಖಾಗೋಳಿಕ ಉತ್ತರ ಅಥವ ಧ್ರುವ ತಾರೆಯನ್ನು ಜೋಡಿಸುವ
ಕಾಲ್ಪನಿಕ ವೃತ್ತಕಂಸವನ್ನು ಉಭಯ ಪಾರ್ಶ್ವಗಳಲ್ಲಿಯೂ ವಿಸ್ತರಿಸಿದರೆ ಅದು ದಿಗಂತವನ್ನು ಎರಡು
ಬಿಂದುಗಳಲ್ಲಿ ಸಂಧಿಸುತ್ತದೆ. ಧ್ರುವ ತಾರೆಯ ಕೆಳಗಿನ ಸಂಧಿಬಿಂದುವೇ ಉತ್ತರ ದಿಗ್ಬಿಂದು.
ಇದರ ನೇರ ಇದಿರು ಇರುವ ಸಂಧಿಬಿಂದುವೇ ದಕ್ಷಿಣ ದಿಗ್ಬಿಂದು. ಉತ್ತರ ದಿಗ್ಬಿಂದುವಿಗೆ
ಅಭಿಮುಖವಾಗಿ ನಿಂತು ಬಲಕ್ಕೆ ೯೦೦ ತಿರುಗಿದರೆ
ಪೂರ್ವ ದಿಗ್ಬಿಂದುವಿಗೆ ಅಭಿಮುಖವಾಗಿಯೂ ಎಡಕ್ಕೆ ೯೦೦ ತಿರುಗಿದರೆ ಪಶ್ಚಿಮ ದಿಗ್ಬಿಂದುವಿಗೆ ಅಭಿಮುಖವಾಗಿಯೂ
ನಿಂತಿರುತ್ತೇವೆ. ಉತ್ತರ-ದಕ್ಷಿಣ ದಿಗ್ಬಿಂದುಗಳನ್ನೂ ಖಮಧ್ಯ ಮತ್ತು ಧ್ರುವತಾರೆಯನ್ನೂ ಜೋಡಿಸುವ
ವೃತ್ತಕಂಸವೇ ಯಾಮ್ಯೋತ್ತರ ಎಂದು ನಿಮಗೆ ತಿಳಿದಿದೆ. ಈ ಕಂಸದಗುಂಟ ಉತ್ತರ
ದಿಗ್ಬಿಂದುವಿನಿಂದ ಧ್ರುವತಾರೆಯ ಕೋನೋನ್ನತಿಯೇ ವೀಕ್ಷಕ ಇರುವ ಸ್ಥಳದ ಅಕ್ಷಾಂಶ ಎಂಬುದೂ ನಿಮಗೆ
ತಿಳಿದಿದೆ. ಕ್ಷಿತಿಜೀಯ ಪದ್ಧತಿಯಲ್ಲಿ ಯಾವುದೇ ತಾರೆಯ ಸ್ಥಾನವನ್ನು ಗುರುತಿಸಲು
ಉಪಯೋಗಿಸುವ ದಿಗಂಶ ಅಥವಾ ಕ್ಷಿತಿಜಾಂಶ
(ಆಸಿಮತ್) ಮತ್ತು ಉನ್ನತಿ (ಆಲ್ಟಿಟ್ಯೂಡ್) ಎಂಬ ಎರಡು ಸ್ಥಾನನಿರ್ದೇಶಕಗಳ ಅರ್ಥವೂ
ನಿಮಗೆ ತಿಳಿದಿದೆ. ಉತ್ತರ ದಿಗ್ಬಿಂದುವಿನಿಂದ ಧ್ರುವ ತಾರೆಯ ಉನ್ನತಿಯೇ ಸ್ಥಳದ ಅಕ್ಷಾಂಶ ಅಂದ
ಮೇಲೆ ಭೂಮಿಯ ಸಮಭಾಜಕ ವೃತ್ತದ ಮೇಲೆ ಮತ್ತು ಸಮಭಾಜಕ ವೃತ್ತದ ದಕ್ಷಿಣಕ್ಕೆ ಇರುವ ಪ್ರದೇಶಗಳಲ್ಲಿ
ಧ್ರುವ ತಾರೆ ಎಲ್ಲಿ ಇರುತ್ತದೆ? ಅದು ಅನುಕ್ರಮವಾಗಿ ಕ್ಷಿತಿಜ ಮಹಾವೃತ್ತದ ಮೇಲೆಯೇ ಮತ್ತು ಕೆಳಗೇ
ಇರಬೇಕಷ್ಟೆ? ಎಂದೇ ಆ ಪ್ರದೇಶವಾಸಿಗಳಿಗೆ ಧ್ರುವತಾರೆಯ ದರ್ಶನ ಭಾಗ್ಯವಿಲ್ಲ. ಉತ್ತರ ದಿಗ್ಬಿಂದುವನ್ನು
ಗುರುತಿಸಲು ನೆರವು ನೀಡುವ ಧ್ರುವತಾರೆಗೆ ಸಮನಾದ ತಾರೆಯೊಂದು ದಕ್ಷಿಣ ದಿಗ್ಬಿಂದುವಿನ ಮೇಲೆ
ಇಲ್ಲ.
ಖಾಗೋಳಿಕ ವಿಷುವದ್ವೃತ್ತವು ದಿಗಂತವನ್ನು ಪೂರ್ವ ಮತ್ತು ಪಶ್ಚಿಮ
ದಿಗ್ಬಿಂದುಗಳಲ್ಲಿ ಛೇದಿಸುತ್ತದೆ. ಖಾಗೋಳಿಕ ವಿಷುವದ್ವೃತ್ತದ ಸಮತಲ ಮತ್ತು ದಿಗಂತದ ಸಮತಲ ಇವೆರಡೂ ಭೂಮಿಯ
ಸಮಭಾಜಕ ವೃತ್ತದ ಮೇಲಿರುವ ಸ್ಥಳಗಳಲ್ಲಿ ಮಾತ್ರ ಒಂದೇ ಆಗಿರುತ್ತದೆ. ತತ್ಪರಿಣಾಮವಾಗಿ ಭೂಮಿಯ ಸಮಭಾಜಕ ವೃತ್ತದ ಮೇಲಿರುವ ಸ್ಥಳಗಳಲ್ಲಿ
ನಿಂತವರಿಗೆ ಖಾಗೋಲಿಕ ಸಮಭಾಜಕ ವೃತ್ತವು ಅವರವರ ನೆತ್ತಿಯ ಮೇಲೆ, ಅರ್ಥಾತ್ ಖಮಧ್ಯದ ಮೂಲಕ
ಹಾದುಹೋಗುತ್ತದೆ. ಬೇರೆಡೆಗಳಲ್ಲಿ ಇವೆರಡರ ನಡುವೆ ಕೋನ ಏರ್ಪಡುತ್ತದೆ, ಅರ್ಥಾತ್ ಇವೆರಡೂ ಒಂದೇ ಆಗಿರುವುದಿಲ್ಲ. ಎಂದೇ ಆ ಸ್ಥಳಗಳಲ್ಲಿ ಖಾಗೋಲಿಕ ಸಮಭಾಜಕ ವೃತ್ತವು ಖಮಧ್ಯದ ಮೂಲಕ
ಹಾದುಹೋಗುವುದಿಲ್ಲ. ದಿಗಂತ ಮತ್ತು ಖಾಗೋಲಿಕ ಸಮಭಾಜಕ ವೃತ್ತಗಳ ನಡುವಣ ಕೋನಕ್ಕೂ ಸ್ಥಳದ
ಅಕ್ಷಾಂಶಕ್ಕೂ ಇರುವ ಸಂಬಂಧವನ್ನು ಚಿತ್ರದಲ್ಲಿ ಗಮನಿಸಿ.
ಅಕ್ಷಾಂಶ ೦೦ ಇರುವ (ಭೂಮಿಯ ಸಮಭಾಜಕ ವೃತ್ತದ ಮೇಲಿನ ಸ್ಥಳಗಳು) ಮತ್ತು ೯೦೦ ಇರುವ
(ಊತ್ತರ/ದಕ್ಷಿಣ ಧ್ರುವಗಳು) ಸ್ಥಳಗಳಲ್ಲಿ ನಿಂತ ವೀಕ್ಷಕರಿಗೆ ಖಾಗೋಲಿಕ ಸಮಭಾಜಕ ವೃತ್ತಕ್ಕೂ
ದಿಗಂತಕ್ಕೂ ನಡುವಣ ಕೋನ ಎಷ್ಟು ಇರುವಂತೆ ಭಾಸವಾಗುತ್ತದೆ ಎಂಬುದನ್ನು ನೀವೇ ಪತ್ತೆಹಚ್ಚಿ.
ಖಾಗೋಳಿಕ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಜೋಡಿಸುವ ಕಾಲ್ಪನಿಕ
ರೇಖೆಯನ್ನು ಆವರ್ತನ ಅಕ್ಷವಾಗಿಸಿಕೊಂಡು ಇಡೀ ಖಗೋಳವೇ ೨೪ ಗಂಟೆಗಳಿಗೊಮ್ಮೆ ಆವರ್ತಿಸುತ್ತಿರುವಂತೆ
ಭಾಸವಾಗುತ್ತದೆ. ಇದೇ ಖಗೋಳದ ದೈನಂದಿನ ಚಲನೆ (ಡೈಅರ್ನಲ್ ಮೋಷನ್). ಭೂಮಿ ತನ್ನ
ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಜೋಡಿಸುವ ಹಾಗೂ ತನ್ನ ಕೇಂದ್ರದ ಮೂಲಕ ಹಾಯ್ದು ಹೋಗುವ ಕಾಲ್ಪನಿಕ ರೇಖೆಯನ್ನು ಅಕ್ಷವಾಗಿಸಿಕೊಂಡು ಪಶ್ಚಿಮದಿಂದ
ಪೂರ್ವಾಭಿಮುಖವಾಗಿ ೨೪ ಗಂಟೆಗಳಿಗೊಮ್ಮೆ ಆವರ್ತಿಸುತ್ತಿರುವುದು
ಈ ವಿದ್ಯಮಾನಕ್ಕೆ ಕಾರಣ ಎಂದು ನಿಮಗೆ ತಿಳಿದಿದೆ. ತಾರಾಪುಂಜಗಳ
ಸಾಪೇಕ್ಷ ಸ್ಥಾನಗಳು ಬದಲಾಗದಿರುವುದನ್ನೂ. ಧ್ರುವ
ಬಿಂದುಗಳ ಸಮೀಪವಿರುವ ಪುಂಜಗಳು ಖಮಧ್ಯದ ಸಮೀಪದವುಗಳಿಗಿಂತ ನಿಧಾನವಾಗಿ ಆವರ್ತಿಸುತ್ತಿರುವಂತೆ
ಭಾಸವಾಗುವುದನ್ನು ಗಮನಿಸಿ. ವಾಸ್ತವವಾಗಿ, ತಾರೆಗಳ
ಸಾಪೇಕ್ಷ ಸ್ಥಾನಗಳೂ ಬದಲಾಗುತ್ತವೆಯಾದರೂ ಅದನ್ನು ಗುರುತಿಸಲು ಬೇಕಾಗುವಷ್ಟು ಕಾಲ ನಾವು
ಬದುಕಿರುವುದಿಲ್ಲ. ಏತನ್ಮಧ್ಯೆ, ತಾರಾಪುಂಜಗಳಿಗೆ
ಸಾಪೇಕ್ಷವಾಗಿ ವೇಗವಾಗಿ ಸಾಗುವ ಆಕಾಶಕಾಯಗಳನ್ನೂ ನಾವು ಖಗೋಳದಲ್ಲಿ ಕಾಣುತ್ತೇವೆ. ‘ಅಲೆಮಾರಿಗಳು’ ಎಂದೇ ಪುರಾತನ ಖಗೋಳವಿಜ್ಞಾನಿಗಳು ಪರಿಗಣಿಸುತ್ತಿದ್ದ ಇವು ನಮ್ಮ
ಸೌರಮಂಡಲದ ಸದಸ್ಯರು.
ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ
ಎಂದು ನಿಮಗೆ ತಿಳಿದಿದೆ. ಒಂದು ಪರಿಭ್ರಮಣೆ ಮುಗಿಸಲು ಭೂಮಿಗೆ ಬೇಕಾಗುವ ಅವಧಿ ೩೬೫.೨೪೨೨ ದಿನಗಳು. ಒಂದು ವರ್ಷಕಾಲ ಪೂರ್ವಸಿದ್ಧತೆ ವಿಭಾಗದಲ್ಲಿ ತಿಳಿಸಿದಂತೆ ಮಾಡಿದರೆ ಈ
ಪರಿಭ್ರಮಣೆಯ ಪರಿಣಾಮವಾಗಿ ಸೂರ್ಯ ನಿಧಾನವಾಗಿ ಪಶ್ಚಿಮದಿಂದ -ಪೂರ್ವಕ್ಕೆ
ಚಲಿಸುತ್ತಿರುವಂತೆ ಭಾಸವಾಗುತ್ತದೆ. ಖಗೋಳದಲ್ಲಿ
ಸೂರ್ಯನ ತೋರಿಕೆಯ ವಾರ್ಷಿಕ ಚಲನೆಯ ಕಕ್ಷೆಯನ್ನು ಪ್ರತಿನಿಧಿಸುವ ಕಾಲ್ಪನಿಕ ಮಹಾವೃತ್ತಕ್ಕೆ ಕ್ರಾಂತಿವೃತ್ತ
(ಇಕ್ಲಿಪ್ಟಿಕ್) ಎಂದು ಹೆಸರು. ಭೂಮಿಯ
ಆವರ್ತನಾಕ್ಷವು ಕ್ರಾಂತಿವೃತ್ತದ ಸಮತಲಕ್ಕೆ ಲಂಬವಾಗಿರದೆ ೨೩.೫೦ ಅಷ್ಟು ಓರೆಯಾಗಿದೆ. ಈ
ಬಾಗಿರುವಿಕೆ ಋತುಗಳು ಬದಲಾಗುವಿಕೆಗೆ ಪ್ರಮುಖ ಕಾರಣ (ಪರಿಭ್ರಮಣಾವಧಿಯಲ್ಲಿ
ಸೂರ್ಯ ಮತ್ತು ಭೂಮಿಗಳ ನಡುವಣ ಅಂತರ ಬದಲಾಗುತ್ತಿರುವುದು ಇನ್ನೊಂದು ಕಾರಣ). ಈ ಬಾಗಿರುವಿಕೆಯ ಇನ್ನೊಂದು ಪರಿಣಾಮ –
ಕ್ರಾಂತಿವೃತ್ತದ ಸಮತಲವು ಖಗೋಳ ವಿಷುವದ್ವೃತ್ತದ ಸಮತಲಕ್ಕೆ ೨೩.೫೦ ಅಷ್ಟು ಓರೆಯಾಗಿರುತ್ತದೆ. ಖಗೋಳ
ವಿಷುವದ್ವೃತ್ತವನ್ನು ಕ್ರಾಂತಿವೃತ್ತ ಎರಡು ಬಿಂದುಗಳಲ್ಲಿ ಛೇದಿಸುತ್ತದೆ.
ಈ ಬಿಂದುಗಳೇ ವಿಷುವದ್ಬಿಂದುಗಳು (ಈಕ್ವಿನಾಕ್ಸಸ್). ಸೂರ್ಯ ತನ್ನ
ತೋರಿಕೆಯ ಪರಿಭ್ರಮಣಾವಧಿಯಲ್ಲಿ ವಿಷುವದ್ವೃತ್ತವನ್ನು ದಾಟುವ, ಅರ್ಥಾತ್
ಸಂಕ್ರಮಿಸುವ ಬಿಂದುಗಳು ಇವು. ಈ ಘಟನೆ ವರ್ಷದಲ್ಲಿ ಎರಡು ಬಾರಿ ಮಾತ್ರ ಘಟಿಸುತ್ತದೆ. ಸಧ್ಯಕ್ಕೆ
ಮೊದಲನೆಯದು ಮಾರ್ಚ್ ೨೦ ರಂದು, ಎರಡನೆಯದು ಸೆಪ್ಟೆಂಬರ್ ೨೨/೨೩ ರಂದು ಫಟಿಸುತ್ತಿದೆ. ಮೊದಲನೆಯದಕ್ಕೆ
ವಸಂತ ವಿಷುವ (ಸ್ಪ್ರಿಂಗ್ ಈಕ್ವಿನಾಕ್ಸ್) ಎಂದೂ ಎರಡನೆಯದಕ್ಕೆ ಶರದ್ವಿಷುವ
(ಆಟಮ್ ಈಕ್ವಿನಾಕ್ಸ್) ಎಂದೂ ಹೆಸರು. ಸೂರ್ಯ ಈ ದಿವಸಗಳಂದು ಮಾತ್ರ ಪೂರ್ವ ದಿಗ್ಬಿಂದುವಿನಲ್ಲಿ
ಮೂಡಿ ಪಶ್ಚಿಮ ದಿಗ್ಬಿಂದುವಿನಲ್ಲಿ ಅಸ್ತವಾಗುತ್ತದೆ. ಎಂದೇ, ಈ
ದಿನಗಳಂದು ಹಗಲು ರಾತ್ರಿಗಳ ಅವಧಿಗಳು ಸಮವಾಗಿರುತ್ತವೆ. ವಸಂತ ವಿಷುವದಂದು ಸೂರ್ಯ
ವಿಷುವದ್ವೃತ್ತವನ್ನು ದಕ್ಷಿಣದಿಂದ ಉತ್ತರಕ್ಕೂ ಶರದ್ವಿಷುವದಂದು ಉತ್ತರದಿಂದ ದಕ್ಷಿಣಕ್ಕೂ
ದಾಟುತ್ತದೆ. ಈ ವಿದ್ಯಮಾನಗಳು ಸೂರ್ಯನ ದೈನಂದಿನ ಚಲನೆಯನ್ನು ಪ್ರಭಾವಿಸುತ್ತವೆ.
ಮಾರ್ಚ್ ೨೦ ರ ನಂತರ ದಿನದಿಂದ ದಿನಕ್ಕೆ ಸೂರ್ಯ ಮೂಡುವ ಬಿಂದು ಉತ್ತರಕ್ಕೆ ಸರಿದಂತೆ
ಗೋಚರಿಸುತ್ತದೆ. ಜೂನ್ ೨೦/೨೧ ರಂದು ಸೂರ್ಯೋದಯದ ಬಿಂದು ಪೂರ್ವ ದಿಗ್ಬಿಂದುವಿನಿಂದ ಉತ್ತರಕ್ಕೆ ಗರಿಷ್ಠ
ದೂರದಲ್ಲಿ ಇರುತ್ತದೆ. ಹಗಲಿನ ಅವಧಿ ತನ್ನ ಗರಿಷ್ಠ ಮಿತಿಯನ್ನೂ ರಾತ್ರಿಯ ಅವಧಿ ತನ್ನ ಕನಿಷ್ಠ
ಮಿತಿಯನ್ನೂ ತಲಪಿರುತ್ತದೆ. ಸೆಪ್ಟೆಂಬರ್ ೨೨/೨೩ ರ ನಂತರ ದಿನದಿಂದ ದಿನಕ್ಕೆ ಸೂರ್ಯ ಮೂಡುವ ಬಿಂದು ದಕ್ಷಿಣಕ್ಕೆ ಸರಿದಂತೆ
ಗೋಚರಿಸುತ್ತದೆ. ಡಿಸೆಂಬರ್
೨೧/೨೨ ರಂದು ಸೂರ್ಯೋದಯದ ಬಿಂದು ಪೂರ್ವ ದಿಗ್ಬಿಂದುವಿನಿಂದ ದಕ್ಷಿಣಕ್ಕೆ
ಗರಿಷ್ಠ ದೂರದಲ್ಲಿ ಇರುತ್ತದೆ. ಹಗಲಿನ ಅವಧಿ ತನ್ನ ಕನಿಷ್ಠ ಮಿತಿಯನ್ನೂ ರಾತ್ರಿಯ ಅವಧಿ ತನ್ನ ಗರಿಷ್ಠ
ಮಿತಿಯನ್ನೂ ತಲಪಿರುತ್ತದೆ. ಜೂನ್ ೨೦/೨೧ ರ
ನಂತರ ಸೂರ್ಯೋದಯದ ಬಿಂದುವಿನ ಸರಿಯುವಿಕೆಯ ದಿಸೆ ದಕ್ಷಿಣಾಭಿಮುಖವಾಗುತ್ತದೆ. ಡಿಸೆಂಬರ್ ೨೧/೨೨ ನಂತರ
ಸೂರ್ಯೋದಯದ ಬಿಂದುವಿನ ಸರಿಯುವಿಕೆಯ ದಿಸೆ ಉತ್ತರಾಭಿಮುಖವಾಗುತ್ತದೆ. ಹೀಗೆ ದಿಶಾ ವ್ಯತ್ಯಯವಾಗುವ ಎರಡು ಬಿಂದುಗಳಿಗೆ ಅಯನಬಿಂದುಗಳು
(ಸಾಲ್‌ಸ್ಟಿಸ್ ಪಾಇಂಟ್ಸ್) ಎಂದು ಹೆಸರು. ಡಿಸೆಂಬರ್ ೨೧/೨೨ ರಿಂದ ಜೂನ್ ೨೦/೨೧ ರ ತನಕ ಉತ್ತರಾಯಣ, ಜೂನ್ ೨೦/೨೧ ರಿಂದ ಡಿಸೆಂಬರ್ ೨೧/೨೨ ರ ತನಕ ದಕ್ಷಿಣಾಯನ. ಸೂರ್ಯ
ಮೂಡುವ ಮತ್ತು ಕಂತುವ ಬಿಂದುಗಳಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಅದರ ದೈನಂದಿನ
ಚಲನಕಕ್ಷೆಯೂ ಬದಲಾಗುತ್ತದೆ ಮತ್ತು ಕ್ರಾಂತಿವೃತ್ತ ಹಾಗೂ ಸೂರ್ಯನ ದೈನಂದಿನ ಚಲನಕಕ್ಷೆ ಒಂದೇ
ಆಗಿರುವುದಿಲ್ಲ ಎಂಬ ತಥ್ಯಗಳನ್ನು ನೀವು ’ಪೂರ್ವಸಿದ್ಧತೆ’ ವಿಭಾಗದಲ್ಲಿ ಗಮನಿಸಿದ್ದೀರಿ
೪.೨ ತಾರೆಗಳ ನಾಮಕರಣ
ತಾರೆಗಳು ಎಂದರೇನು ಎಂಬುದು ನಿಮಗೆ ತಿಳಿದಿದೆ. ಇವುಗಳನ್ನು ಗುರುತಿಸಲು ನೆರವಾಗುವಂತೆ ಹೆಸರಿಸುವುದು ಹೇಗೆ? ವರ್ಗೀಕರಿಸಲು ಸಾಧ್ಯವೇ? ದೃಗ್ಗೋಚರ
ತಾರೆಗಳ ಪೈಕಿ ಸಾಪೇಕ್ಷವಾಗಿ ಉಜ್ವಲವಾದವುಗಳಿಗೆ ಚಾರಿತ್ರಿಕ ಅಥವ ಪೌರಾಣಿಕ ಮಹತ್ವ ಉಳ್ಳ
ಹೆಸರುಗಳನ್ನು ಬೇರೆ ಬೇರೆ ಸಂಸ್ಸೃತಿಗಳ ಪುರಾತನರು ಇಟ್ಟಿದ್ದಾರೆ. ತತ್ಪರಿಣಾಮವಾಗಿ ಕೆಲವು
ತಾರೆಗಳಿಗೆ ಒಂದಕ್ಕಿಂತ ಹೆಚ್ಚು ಹೆಸರುಗಳು ಇವೆ. ಈ
ಹೆಸರುಗಳು ಜನಪ್ರಿಯವಾದವು ಆಗಿದ್ದರೂ ಗೊಂದಲಕಾರಿ ಎಂಬ ಕಾರಣಕ್ಕಾಗಿ ತಾರೆಗಳಿಗೆ ಹೆಸರಿಡಲು
ವಿಶಿಷ್ಟ ಪದ್ಧತಿಗಳನ್ನು ರೂಪಿಸಿದ್ದಾರೆ. ಅವುಗಳ
ಪೈಕಿ ಜನಪ್ರಿಯವಾಗಿರುವ ಎರಡನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.ಜರ್ಮನಿಯ ವಕೀಲ ಹಾಗೂ
ಖಗೋಳಜ್ಞ ಜೊಹಾನ್ ಬೇಯರ್ (೧೫೭೨-೧೬೨೫) ರೂಪಿಸಿದ
ಬೇಯರ್ ಪದ್ಧತಿ ಇವುಗಳ ಪೈಕಿ ಒಂದು. ಒಂದು
ರಾಶಿಯ ತಾರೆಗಳನ್ನು ಸರಿಸುಮಾರಾಗಿ ಅವುಗಳ ಉಜ್ವಲತೆಯ ಇಳಿಕೆಯ ಕ್ರಮದಲ್ಲಿ ಗುರುತಿಸಿ ತದನಂತರ
ಅವಕ್ಕೆ ರಾಶಿ ಹೆಸರಿನ ಹಿಂದೆ ಗ್ರೀಕ್
ವರ್ಣಮಾಲೆಯ ಅಕ್ಷರಗಳನ್ನು ಅನುಕ್ರಮವಾಗಿ ಲಗತ್ತಿಸಿ ಹೆಸರಿಸುವುದು ಈ ಪದ್ಧತಿಯ ವೈಶಿಷ್ಟ್ಯ. ಈ ಪುಸ್ತಕದ ಎರಡನೇ ವಿಭಾಗದಲ್ಲಿ ನೀಡಿರುವ ಬಹುತೇಕ ತಾರಾನಾಮಗಳು ಈ
ಪದ್ಧತಿಯವು. ಗ್ರೀಕ್ ವರ್ಣಮಾಲೆಯ ಅಕ್ಷರಗಳ ಸಂಖ್ಯೆಗೆ ಮಿತಿ ಇರುವುದರಿಂದ ಎಲ್ಲ
ತಾರೆಗಳನ್ನು ಈ ಪದ್ಧತಿಯಲ್ಲಿ ಹೆಸರಿಸುವುದು ಸಾಧ್ಯವಿಲ್ಲ ಹಾಗೂ ಅವುಗಳನ್ನು ಉಜ್ವಲತೆಯ ಇಳಿಕೆ
ಕ್ರಮದಲ್ಲಿ ಪಟ್ಟಿಮಾಡುವುದೂ ಕಷ್ಟ. ಈ
ಕಾರಣಕ್ಕಾಗಿ ಬ್ರಿಟಿಷ್ ಖಗೋಳಜ್ಞ ಜಾನ್ ಫ್ಲೇಮ್‌ಸ್ಟೀಡ್ (೧೬೪೬-೧೭೧೯) ಫ್ಲೇಮ್‌ಸ್ಟೀಡ್ ಪದ್ಧತಿಯನ್ನು ರೂಪಿಸಿದ. ಒಂದು ರಾಶಿಯ ತಾರೆಗಳನ್ನು ಅವು ಆ ರಾಶಿಯ ಪಶ್ಚಿಮ ಅಂಚಿನಿಂದ ಇರುವ
ದೂರಕ್ಕೆ ಅನುಗುಣವಾಗಿ ರಾಶಿ ಹೆಸರಿನ ಹಿಂದೆ ಅಂಕಿಗಳನ್ನು ಅನುಕ್ರಮವಾಗಿ ಲಗತ್ತಿಸಿ
ಹೆಸರಿಸುವುದು ಈ ಪದ್ಧತಿಯ ವೈಶಿಷ್ಟ್ಯ. ಉದಾಹರಣೆ, ೧ ರಾಜಹಂಸ ತಾರೆಯು ೨ ರಾಜಹಂಸಕ್ಕಿಂತ ಆ ರಾಶಿಯ ಪಶ್ಚಿಮ ಅಂಚಿನ ಸಮೀಪದಲ್ಲಿ ಇರುತ್ತದೆ.
೪.೩ ತಾರೆಗಳ ವರ್ಗೀಕರಣ
ತಾರೆಗಳ ದೃಗ್ಗೋಚರ ಹೊರಪದರದ ತಾಪ ಮತ್ತು ತತ್ಸಂಬಂಧಿತ ರೋಹಿತದ
ಲಕ್ಷಣಗಳನ್ನು ಆಧರಿಸಿ ಅವನ್ನು ಏಳು ವರ್ಗಗಳಾಗಿ ವರ್ಗೀಕರಿಸಿದೆ. ತಾಪದ ಅವರೋಹಣ ಕ್ರಮದಲ್ಲಿ ಸಂಘಟಿಸಿರುವ ಅವುಗಳ ವಿವರ ಇಂತಿದೆ:
ವರ್ಗ
|
ತಾಪ
(ಡಿಗ್ರಿ ಕೆಲ್ವಿನ್‌ಗಳಲ್ಲಿ)
|
ಬಣ್ಣ
|
O
|
೩೦,೦೦೦-೬೦,೦೦೦
|
ನೀಲಿ
|
B
|
೧೦,೦೦೦-೩೦,೦೦೦
|
ನೀಲಿ-ನೀಲಿ
ಮಿಶ್ರಿತ ಬಿಳಿ
|
A
|
೭,೫೦೦-೧೦,೦೦೦
|
ಬಿಳಿ
|
F
|
೬,೦೦೦-೭,೫೦೦
|
ಹಳದಿ
ಮಿಶ್ರಿತ ಬಿಳಿ-ಬಿಳಿ
|
G
|
೫,೦೦೦-೬,೦೦೦
|
ಹಳದಿ-
ಹಳದಿ ಮಿಶ್ರಿತ ಬಿಳಿ
|
K
|
೩,೫೦೦-೫,೦೦೦
|
ಕಿತ್ತಳೆ-ಹಳದಿ
ಮಿಶ್ರಿತ ಕಿತ್ತಳೆ
|
M
|
೨,೦೦೦-೩,೦೦೦
|
ಕೆಂಪು-ಕಿತ್ತಳೆ
ಮಿಶ್ರಿತ ಕೆಂಪು
|
ಒ ಬಿ ಎ ಫೈನ್ ಗರ್ಲ್, ಕಿಸ್ ಮಿ ಇದು ಈ ವರ್ಗಗಳನ್ನು ಅನುಕ್ರಮವಾಗಿ ನನೆಪಿನಲ್ಲಿ
ಇಟ್ಟುಕೊಳ್ಳಲು ಹೆಣೆದಿರುವ ಇಂಗ್ಲಿಷ್ ಸ್ಮರಣೆಯ ಸೂತ್ರ.
|
ಮೊದಲನೇ ಎರಡು ವರ್ಗಗಳ ತಾರೆಗಳು ಬಲು ಉಜ್ವಲವಾದರೂ ಅವುಗಳ ಸಂಖ್ಯೆ ಬಲು
ಕಮ್ಮಿ. ಕೊನೆಯ ವರ್ಗದ ತಾರೆಗಳು ಬಲು ಮಸುಕಾದರೂ ಅವುಗಳ ಸಂಖ್ಯೆ ಹೆಚ್ಚು.
ಭೂಸ್ಥಿತ ವೀಕ್ಷಕನಿಗೆ ತಾರೆಗಳು ಎಷ್ಟು ಉಜ್ವಲವಾಗಿ ಗೋಚರಿಸುತ್ತವೆ
ಎಂಬುದನ್ನು ಆಧರಿಸಿದ ಜನಪ್ರಿಯ ವರ್ಗೀಕರಣ ಪದ್ಧತಿಯೂ ಇದೆ. ಗ್ರೀಕ್
ಮೂಲದ ಈ ಪದ್ದತಿಯಲ್ಲಿ ಉಜ್ವಲತೆಯನ್ನು ಪರಿಮಾಣೀಕರಿಸುವ ಮಾನಕ ಉಜ್ವಲತಾಂಕ ಅಥವ ಕಾಂತಿಮಾನ
(ಮ್ಯಾಗ್ನಿಟ್ಯೂಡ್) ಎಂದು ನಿಮಗೆ ತಿಳಿದಿದೆ. ವಾಯುಮಂಡಲ ಇಲ್ಲದೇ ಇರುತ್ತಿದ್ದರೆ ತಾರೆ ಎಷ್ಟು
ಉಜ್ವಲವಾಗಿ ಬರಿಗಣ್ಣಿಗೆ ಗೋಚರಿಸುತ್ತಿತ್ತು ಎಂಬುದನ್ನು ತೋರಿಕೆಯ ಉಜ್ವಲತಾಂಕ
(ಅಪ್ಯಾರನ್ಟ್ ಮ್ಯಾಗ್ನಿಟ್ಯೂಡ್) ಸೂಚಿಸುತ್ತದೆ. ಸುಮಾರು ೨೦೦೦ ವರ್ಷಗಳ ಹಿಂದೆ ಗ್ರೀಕ್ ಖಗೋಳಜ್ಞ ಹಿಪ್ಪಾರ್ಕಸ್ ರೂಪಿಸಿದ್ದ ಆರು
ವರ್ಗಗಳಿರುವ ಈ ಪದ್ಧತಿಯಲ್ಲಿ ಬರಿಗಣ್ಣಿಗೆ ಗೋಚರಿಸುತ್ತಿದ್ದ ತಾರೆಗಳ ಪೈಕಿ ಅತ್ಯಂತ
ಉಜ್ವಲವಾದದ್ದರ ತೋರಿಕೆಯ ಉಜ್ವಲತಾಂಕ ೧, ಅತ್ಯಂತ
ಮಸುಕಾದದ್ದರದ್ದು ೬. ದೂರದರ್ಶಕದ
ನೆರವಿನಿಂದ ನೋಡಬಹುದಾದ ತಾರೆಗಳನ್ನೂ ಸೂರ್ಯ, ಚಂದ್ರ
ಇವೇ ಮೊದಲಾದ ಅತ್ಯುಜ್ವಲ ಆಕಾಶಕಾಯಗಳನ್ನೂ ಈ ಪದ್ಧತಿಗೆ ಅಳವಡಿಸುವ ಸಲುವಾಗಿ ಪದ್ಧತಿಯನ್ನು ಪರಷ್ಕರಿಸಲಾಗಿದೆ. ಈ ಪದ್ಧತಿಯಲ್ಲಿ ತೋರಿಕೆಯ ಉಜ್ವಲತಾಂಕದ ಮೌಲ್ಯ ಹೆಚ್ಚಿದಂತೆ ಗೋಚರ
ಉಜ್ವಲತೆ ಕಮ್ಮಿ ಆಗುತ್ತದೆ ಎಂಬುದು ಗಮನಾರ್ಹ ಅಂಶ. ಉಜ್ವಲತಾಂಕ
೧ ಇರುವ ತಾರೆ ಉಜ್ವಲತಾಂಕ ೨ ಇರುವ ತಾರೆಗಿಂತ ೨.೫೧೨ ಪಟ್ಟು ಹೆಚ್ಚು ಉಜ್ವಲವಾಗಿ ಗೋಚರಿಸುತ್ತದೆ. ಪರಿಷ್ಕೃತ ಪದ್ಧತಿಯಲ್ಲಿ ಅಭಿಜಿತ್ (ವೆಗ) ತಾರೆಯ ತೋರಿಕೆಯ ಉಜ್ವಲತಾಂಕವನ್ನು ದದ೦ ಎಂದು ನಿಗದಿ ಪಡಿಸಿ ಅದಕ್ಕಿಂತ
ಉಜ್ವಲವಾದ ಕಾಯಗಳಿಗೆ ಋಣ ಉಜ್ವಲತಾಂಕಗಳನ್ನೂ ದೂರದರ್ಶಕದ ನೆರವಿನಿಂದ ನೋಡಬಹುದಾದ ತಾರೆಗಳಿಗೆ
ಆರಕ್ಕಿಂತ ಹೆಚ್ಚು ಮೌಲ್ಯದ ಉಜ್ವಲತಾಂಕಗಳನ್ನೂ ನೀಡಲಾಗಿದೆ. ತೋರಿಕೆಯ
ಉಜ್ವಲತಾಂಕ ೧.೫ ಮತ್ತು ೨.೫ ಗಳ ನಡುವಿನ ತಾರೆಗಳನ್ನು ಎರಡನೇ ವರ್ಗದ ಕಾಂತಿಮಾನದವು ಎಂದೂ ೧.೫ ಕ್ಕಿಂತ ಕಮ್ಮಿ ಉಜ್ವಲತಾಂಕ ಉಳ್ಳವುಗಳನ್ನು ಒಂದನೇ ವರ್ಗದ ಕಾಂತಿಮಾನದವು
ಎಂದೂ ಪರಿಗಣಿಸಲಾಗುತ್ತಿದೆ. ತೋರಿಕೆಯ ಉಜ್ವಲತಾಂಕ ಸೂಚಿಸುವ ಉಜ್ವಲತೆಗೂ ಸಂಬಂಧಿಸಿದ ತಾರೆ ಭೂಮಿಯಿಂದ
ಎಷ್ಟು ದೂರದಲ್ಲಿದೆ ಎಂಬುದಕ್ಕೂ ಸಂಬಂಧವಿಲ್ಲ. ಬಹು
ದೂರದಲ್ಲಿ ಇರುವ ಬಲು ಉಜ್ವಲವಾದ ತಾರೆ ಬಲು ಮಸುಕಾಗಿಯೂ ಸಾಪೇಕ್ಷವಾಗಿ ಸಮೀಪದಲ್ಲಿ ಇರುವ ಕ್ಷೀಣ
ತಾರೆ ಉಜ್ವಲವಾಗಿಯೂ ಗೋಚರಿಸುವುದರಿಂದ ತೋರಿಕೆಯ ಉಜ್ವಲತಾಂಕಗಳನ್ನು ಆಧರಿಸಿ ತಾರೆಗಳ ನೈಜ
ಉಜ್ವಲತೆಯನ್ನು ತುಲನೆ ಮಾಡಲು ಸಾಧ್ಯವಿಲ್ಲ. ಈ
ಸಮಸ್ಯೆಯನ್ನು ಪರಿಹರಿಸಲೋಸುಗ ರೂಪಿಸಿದ ಪರಿಕಲ್ಪನೆ ನಿರಪೇಕ್ಷ ಉಜ್ವಲತಾಂಕ
(ಆಬ್ಸಲ್ಯೂಟ್ ಮ್ಯಾಗ್ನಿಟ್ಯೂಡ್). ೩೨.೬ ಜ್ಯೋತಿರ್ವರ್ಷ ಅಥವ ೧೦ ಪಾರ್ಸೆಕ್ ದೂರದಲ್ಲಿ ತಾರೆ ಇದ್ದಿದ್ದರೆ ಅದರ ತೋರಿಕೆಯ ಉಜ್ವಲತಾಂಕ
ಎಷ್ಟು ಇರುತ್ತಿತ್ತೋ ಅದೇ ಅದರ ನಿರಪೇಕ್ಷ ಉಜ್ವಲತಾಂಕ.
೪.೪ ಖಗೋಳ ವಿಜ್ಞಾನದಲ್ಲಿ ದೂರದ ಅಳತೆಯ ಏಕಮಾನ
ತಾರಾಲೋಕದ ಅನೂಹ್ಯ ದೂರಗಳನ್ನು ಮಾಮೂಲಿ ಕಿಲೋಮೀಟರ್‌ಗಳಲ್ಲಿ ಬರೆಯುವುದೂ
ಬರೆದದ್ದನ್ನು ಓದುವುದೂ ತ್ರಾಸದಾಯಕ ಕಾರ್ಯ. ಉದಾಹರಣೆಗೆ, ಲುಬ್ಧಕ ತಾರೆಯು ಭೂಮಿಯಿಂದ ೮೦೪೧೬೨೦೯೦೧೬೯೩೬೮೦೦ ಕಿಮೀ ದೂರದಲ್ಲಿ ಇದೆ. ಎಂದೇ, ಜ್ಯೋತಿರ್ವರ್ಷ
(ಲೈಟ್ ಯಿಅರ್), ಖಗೋಳಮಾನ (ಆಸ್ಟ್ರನಾಮಿಕಲ್ ಯೂನಿಟ್), ಪಾರ್ಸೆಕ್ ಈ ಮೂರು
ಏಕಮಾನಗಳ ಪೈಕಿ ಒಂದನ್ನು ಖಗೋಳಜ್ಞರು
ಸಂದರ್ಭೋಚಿತವಾಗಿ ಉಪಯೋಗಿಸುತ್ತಾರೆ.
ನಿರ್ದವ್ಯತೆಯಲ್ಲಿ ಸೆಕೆಂಡಿಗೆ ೨೯೯,೭೯೨,೪೫೮ ಮೀ ವೇಗದಲ್ಲಿ ಚಲಿಸುವ
ಬೆಳಕು ಒಂದು ಜೂಲಿಯನ್ ವರ್ಷದಲ್ಲಿ (೩೬೫.೨೫ ದಿವಸಗಳು. ಗ್ರಿಗೋರಿಅನ್
ವರ್ಷದಲ್ಲಿ ೩೬೫.೨೪೨೫ ದಿವಸಗಳಿರುತ್ತವೆ) ಚಲಿಸುವ
ದೂರವೇ ಒಂದು ಜ್ಯೋತಿರ್ವರ್ಷ. ಇದು ಬಹುಜನ ಪ್ರಿಯ ಏಕಮಾನ. ಸೂರ್ಯನಿಂದ
ಭೂಮಿಯ ಮಾಧ್ಯ ದೂರವೇ ಒಂದು ಖಗೋಳಮಾನ. ೧೪೯,೫೯೭,೮೭೦,೬೯೧,೭೦೦
ಮೀ ಒಂದು ಖಗೋಳಮಾನಕ್ಕೆ ಸಮ ಎಂದು ಇಂದಿನ ಖಗೋಳವಿಜ್ಞಾನಿಗಳ ಅಂಬೋಣ. ಸೌರಮಂಡಲದ ಸದಸ್ಯರ ನಡುವಣ ದೂರಗಳನ್ನು ಸೂಚಿಸಲು ಉಪಯೋಗಿಸುವ ಏಕಮಾನ ಇದು. ಒಂದು ಖಗೋಳಮಾನ ಅಂತರದಲ್ಲಿ ಇರುವ ಎರಡು ಬಿಂದುಗಳಿಂದ ನೋಡಿದಾಗ ಒಂದು ಕಂಸ-ಸೆಕೆಂಡ್ ಲಂಬನಕೋನದಷ್ಟು ಚಲಿಸಿದಂತೆ ತೋರುವ ಅಕಾಶಕಾಯಕ್ಕೆ ಇರುವ ದೂರವೇ
ಒಂದು ಪಾರ್ಸೆಕ್. ಇದು ವಿಜ್ಞಾನಿಗಳಿಗೆ ಪ್ರಿಯವಾದ ಏಕಮಾನ. ೧ ಜ್ಯೋವ = ೯,೪೬೦,೭೩೦,೪೭೨,೫೮೦.೮ ಕಿಮೀ. = ಸರಿಸುಮಾರು ೬೩,೨೪೧ ಖಗೋಳಮಾನಗಳು = ಸರಿಸುಮಾರು
೦.೩೦೬೬ ಪಾರ್ಸೆಕ್‌ಗಳು. 1
ಪಾರ್ಸೆಕ್ = ಸರಿಸುಮಾರು ೩.೩ ಜ್ಯೋವ.
೪.೫ ಖಗೋಳವಿಜ್ಞಾನದಲ್ಲಿ ಕಾಲದ ಅಳತೆ
ದೈನಂದಿನ ಜೀವನದಲ್ಲಿ ನಾವು ಸೂರ್ಯನ ತೋರಿಕೆಯ ದೈನಂದಿನ ಚಲನೆಯನ್ನು
ಆಧರಿಸಿದ ಕಾಲಮಾಪನ ಪದ್ಧತಿಯನ್ನು ಉಪಯೋಗಿಸುತ್ತಿದ್ದೇವೆ. ದೃಗೋಚರ
ಖಗೋಳದ ತನ್ನ ಪಥದ ಅತ್ಯುನ್ನತ ಬಿಂದುವಿನಿಂದ ಹೊರಟು ಮರುದಿನ ಪುನಃ ಅದೇ ಬಿಂದುವನ್ನು ತಲಪಲು
ಬೇಕಾಗುವ ಸರಾಸರಿ ಅವಧಿಯನ್ನು ೨೪ ಗಂಟೆಗಳು ಅಥವ ಒಂದು ದಿವಸ ಎಂದು ಪರಿಗಣಿಸಿ ರೂಪಿಸಿದ ಪದ್ಧತಿ ಇದು. ಖಗೋಳಜ್ಞರು ಇದನ್ನು ಸೌರದಿವಸ (ಸೋಲರ್ ಡೇ) ಎನ್ನುತ್ತಾರೆ. ಭೂಮಿಯ
ಆವರ್ತನಾವಧಿ ಸರಾಸರಿ ೨೪ ಗಂಟೆಗಳಾಗಿದ್ದರೂ ಈ ಅವಧಿಯಲ್ಲಿ
ಅದು ಸೂರ್ಯನನ್ನು ಪರಿಭ್ರಮಿಸುತ್ತ ಸರಿಸುಮಾರು ೧°
ಯಷ್ಟು ಕೋನೀಯದೂರ ಕ್ರಮಿಸಿರುತ್ತದೆ. ತತ್ಪರಿಣಾಮವಾಗಿ ಹಿಂದಿನ ದಿನ ತಾನಿದ್ದ ಬಿಂದುವನ್ನು ಪುನಃ
ತಲಪಲು ಸೂರ್ಯನಿಗೆ ಸರಿಸುಮಾರು ನಾಲ್ಕು ಹೆಚ್ಚು ನಿಮಿಷಗಳು ಬೇಕು. ಖಗೋಳದ ಯಾವುದೇ ಬಿಂದು ಅಥವ ತಾರೆ ಒಂದು ಸ್ಥಳದ ಮಧ್ಯಾಹ್ನ ವೃತ್ತವನ್ನು, ಅರ್ಥಾತ್ ಯಾಮ್ಯೋತ್ತರವನ್ನು ಒಂದು ಸಲ ಹಾದು ಹೋಗುವುದಕ್ಕೂ
ಮತ್ತೊಂದು ಸಲ ಹಾದು ಹೋಗುವುದಕ್ಕೂ ನಡುವಿನ ಅವಧಿಯೇ ಒಂದು ತಾರಾದಿವಸ (ಸೈಡ್‌ರಿಅಲ್
ಡೇ). ಅಂದಮೇಲೆ ಸ್ಥಿರ ತಾರೆಯ ಹಿನ್ನೆಲೆಯಲ್ಲಿ ಭೂಮಿ ತನ್ನ ಅಕ್ಷದ ಸುತ್ತ ಒಂದು ಬಾರಿ
ಆವರ್ತಿಸಲು ನಿಜವಾಗಿ ತೆಗೆದುಕೊಳ್ಳವ ಅವಧಿ ಒಂದು ತಾರಾದಿವಸ . ಒಂದು ತಾರಾದಿವಸದ ಅವಧಿ
ಸರಿಸುಮಾರು ೨೩ ಗಂ ೫೬ ನಿ. ಹೀಗೆ ತಾರೆಗಳ ದೈನಂದಿನ ಚಲನೆಯನ್ನು ಆಧರಿಸಿ ಅಳೆಯವ ಕಾಲ ತಾರಾಕಾಲ
(ಸೈಡ್‌ರಿಅಲ್ ಟೈಮ್). ಸ್ಥಿರ ತಾರೆಯ ಹಿನ್ನೆಲೆಯಲ್ಲಿ ಭೂಮಿಯು ಸೂರ್ಯನನ್ನು ಒಂದು ಬಾರಿ
ಪರಿಭ್ರಮಿಸಲು ತೆಗೆದುಕೊಳ್ಳುವ ಕಾಲ ತಾರಾವರ್ಷ (ಸೈಡ್‌ರಿಅಲ್ ಯಿಅರ್). ಇದು
ಸೌರವರ್ಷಕ್ಕಿಂತ ಸರಿಸುಮಾರು ೨೦ ನಿ ೨೩ ಸೆ ದೀರ್ಘ. ಖಗೋಳಜ್ಞರು
ಉಪಯೋಗಿಸುವುದು ತಾರಾಸಮಯವನ್ನು.
೪.೬ ಸ್ಥಾನನಿರ್ದೇಶಕ ವ್ಯವಸ್ಥೆಗಳು
ತಾರೆಗಳ ಸ್ಥಾನವನ್ನು ಖಗೋಳದಲ್ಲಿ ಗುರುತಿಸಲು ಬಲು ಸುಲಭವಾದ ಕ್ಷಿತಿಜೀಯ
ಸ್ಥಾನನಿರ್ದೇಶಕ ವ್ಯವಸ್ಥೆಯನ್ನು (ಹರೈಸ್ನ್ ಕೋಆರ್ಡಿನಟ್ ಸಿಸ್ಟಮ್) ಉಪಯೋಗಿಸುವುದು ಹೇಗೆ
ಎಂಬುದು ನಿಮಗೆ ತಿಳಿದಿದೆ. ಈ ವ್ಯವಸ್ಥೆಯು ವೀಕ್ಷಕನಿಷ್ಠ. ಎಂದೇ, ವೀಕ್ಷಕ ತನ್ನ ವೀಕ್ಷಣೆಗಳನ್ನು ಇತರರಿಗೆ ತಿಳಿಸಲು ಉಪಯುಕ್ತವಲ್ಲ. ಎಂದೇ, ವಿಷುವದ್ವೃತ್ತೀಯ ಸ್ಥಾನನಿರ್ದೇಶಕ ವ್ಯವಸ್ಥೆಯ (ಎಕ್ವಟೋರಿಅಲ್ ಕೋಆರ್ಡಿನಟ್ ಸಿಸ್ಟಮ್) ಬಗ್ಗೆ ತಿಳಿದಿರುವುದು ಉತ್ತಮ.
ಸಮಭಾಜಕ ವೃತ್ತ ಆಧಾರಿತ ಅಕ್ಷಾಂಶಗಳ ನೆರವಿನಿಂದಲೂ ಗ್ರೀನ್‌ವಿಚ್ ಮಧ್ಯಾಹ್ನ ವೃತ್ತ ಆಧಾರಿತ
ರೇಖಾಂಶಗಳ ನೆರವಿನಿಂದಲೂ ಭೂಮಿಯ ಮೇಲಿನ ಸ್ಥಳಗಳನ್ನು ನಿರ್ದೇಶಿಸುತ್ತೇವೆ. ಅದೇ ರೀತಿ ಖಗೋಳ
ವಿಷುವದ್ವೃತ್ತ ಆಧಾರಿತ ಕ್ರಾಂತಿ ಅಥವ ಘಂಟಾವೃತ್ತಾಂಶ ಅಥವ ಖಾಗೋಳಿಕ
ಅಕ್ಷಾಂಶ (ಡೆಕ್ಲಿನೇಷನ್) ಮತ್ತು ವಿಷುವದ್ಬಿಂದು ಮಧ್ಯಾಹ್ನ ವೃತ್ತ ಅಧಾರಿತ ವಿಷುವದಂಶ ಅಥವ ವಿಷುವಾಂಶ (ರೈಟ್ ಅಸೆನ್ಷನ್) ಅಥವ ಖಾಗೋಳಿಕ
ರೇಖಾಂಶಗಳ ನೆರವಿನಿಂದ ಆಕಾಶಕಾಯಗಳ ಸ್ಥಾನ ನಿರ್ದೇಶಿಸಬಹುದು. ಸ್ಥಾನ ನಿರ್ದೇಶಿಸಬೇಕಾದ
ಆಕಾಶಕಾಯ, ಖಾಗೋಳಿಕ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೂಲಕ ಹಾದುಹೋಗುವ ಮಧ್ಯಾಹ್ನ ವೃತ್ತದಗುಂಟ
ವಿಷುವದ್ವೃತ್ತದಿಂದ ಆಕಾಶಕಾಯಕ್ಕೆ ಇರುವ ಕೊನೀಯ ದೂರವೇ ಅದರ ಕ್ರಾಂತಿ. ಉತ್ತರ ಖಗೋಳಾರ್ಧದ
ಕ್ರಾಂತಿಯನ್ನು ‘+’ ಚಿಹ್ನೆಯಿಂದಲೂ ದಕ್ಷಿಣಾರ್ಧದ ಕ್ರಾಂತಿಯನ್ನು ‘–‘ ಚಿಹ್ನೆಯಿಂದಲೂ ಸೂಚಿಸುವುದು ವಾಡಿಕೆ. ಈ ಮಧ್ಯಾಹ್ನ ವೃತ್ತ ವಿಷುವದ್ವೃತ್ತವನ್ನು ಸಂಧಿಸುವ
ಬಿಂದುವಿಗೆ ವಸಂತ ವಿಷುವದ್ಬಿಂದುವಿನಿಂದ ಇರುವ ಕೋನೀಯ ದೂರವೇ ಆ ಕಾಯದ ವಿಷುವಾಂಶ. ಇವೆರಡೂ
ಕೋನೀಯ ಅಳತೆಗಳಾದ್ದರಿಂದ ಅಳತೆಯ ಏಕಮಾನ ‘ಡಿಗ್ರಿ’. ವಿಷುವಾಂಶವನ್ನು ವಸಂತ ವಿಷುವದ್ಬಿಂದುವಿನಿಂದ ಪೂರ್ವಾಭಿಮುಖವಾಗಿ
ಅಳೆಯಬೇಕು. ವಿಷುವಾಂಶವನ್ನು ಇಂತಿಷ್ಟು ಡಿಗ್ರಿ ಎಂದು ಸೂಚಿಸುವ ಬದಲು ಇಂತಿಷ್ಟು
ಗಂಟೆ-ನಿಮಿಷ-ಸೆಕೆಂಡ್ ಎಂದು ಸೂಚಿಸುವುದು ವಾಡಿಕೆ. ವಿಷುವದ್ವೃತ್ತೀಯ ಸ್ಥಾನನಿರ್ದೇಶಕ
ವ್ಯವಸ್ಥೆಗೂ ತಾರಾಕಾಲ (ಸೈಡಿಅರಿಅಲ್ ಟೈಮ್) ಮತ್ತು ಗಂಟಾಕೋನ (ಔಅರ್
ಆಂಗಲ್)ಗಳಿಗೂ ನಿಕಟ ಸಂಬಂಧ ಇರುವುದೇ ಇದಕ್ಕೆ ಕಾರಣ ಎಂಬುದು ಸಧ್ಯಕ್ಕೆ ಆರಂಭಿಕ ಹವ್ಯಾಸಿಗಳಿಗೆ
ತಿಳಿದಿದ್ದರೆ ಸಾಕು. ೨೪ ಗಂಟೆಗಳು
೩೬೦೦ ಡಿಗ್ರಿಗಳುಳ್ಳ ಪೂರ್ಣ ವೃತ್ತಕ್ಕೆ ಸಮ. ಅಂದ ಮೇಲೆ, ೧ ಗಂಟೆ ವಿಷುವಾಂಶವು ವ್ರತ್ತ ಕಂಸದ ೧೫೦ ಗಳಿಗೂ ೧ ನಿಮಿಷ ವಿಷುವಾಂಶವು ವ್ರತ್ತ ಕಂಸದ ೧೫ ನಿಮಿಷಗಳಿಗೂ ೧ ಸೆಕೆಂಡ್ ವಿಷುವಾಂಶವು ವೃತ್ತ ಕಂಸದ ೧೫ ಸೆಕಂಡ್‌ಗಳಿಗೂ ಸಮ. ವಿಷುವಾಂಶದ
ನೆರವಿನಿಂದ ತಾರೆಯ ಸ್ಥಾನ ನಿರ್ಧರಿಸುವುದರ ಜೊತೆಗೆ ಅದು ಖಗೋಳದಲ್ಲಿ ನಿರ್ದಿಷ್ಟ ಸ್ಥಾನ ತಲಪಲು
ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನೂ ನಿರ್ಧರಿಸಬಹುದು. ಉದಾಹರಣೆಗೆ, ನೀವಿರುವ
ಸ್ಥಳದ ಯಾಮ್ಯೋತ್ತರದ ಮೇಲಿರುವ ಒಂದು ತಾರೆಯ ವಿಷುವಾಂಶ ೦೧:೩೦:೦೦ ಆಗಿರಲಿ. ವಿಷುವಾಂಶ ೨೦:೦೦:೦೦ ಇರುವ ತಾರೆ ಯಾಮ್ಯೋತ್ತರವನ್ನು ಹೆಚ್ಚುಕಮ್ಮಿ ೧೮.೫ ಗಂಟೆಗಳ ತರುವಾಯ ಯಾಮ್ಯೋತ್ತರದ ಮೇಲಿರುತ್ತದೆ. ಮುಂದೆ ಇರುವ ಮೊದಲನೇ ಚಿತ್ರದಲ್ಲಿ ವಿಷುವದ್ವೃತ್ತೀಯ ಸ್ಥಾನನಿರ್ದೇಶಕ ವ್ಯವಸ್ಥೆಯನ್ನೂ
ಎರಡನೇ ಚಿತ್ರದಲ್ಲಿ ವಿಷುವದ್ವೃತ್ತೀಯ ಸ್ಥಾನನಿರ್ದೇಶಕ ವ್ಯವಸ್ಥೆ ಮತ್ತು ಕ್ಷಿತಿಜೀಯ ಸ್ಥಾನ
ನಿರ್ದೇಶಕ ವ್ಯವಸ್ಥೆಗಳೆರಡನ್ನೂ ತೋರಿಸಿದೆ.
ಸೌರಮಂಡಲದ ಸದಸ್ಯ ಕಾಯಗಳ ಸ್ಥಾನ ನಿರ್ದೇಶಿಸಲು ಕ್ರಾಂತಿವೃತ್ತೀಯ
ಸ್ಥಾನನಿರ್ದೇಶಕ ವ್ಯವಸ್ಥೆಯನ್ನು (ಇಕ್ಲಿಪ್ಟಿಕಲ್ ಕೋಆರ್ಡಿನಟ್ ಸಿಸ್ಟಮ್) ಉಪಯೋಗಿಸುವುದೂ
ಉಂಟು. ಸ್ಥಾನ ನಿರ್ದೇಶನಕ್ಕೆ ವಿಷುವದ್ವೃತ್ತಕ್ಕೆ ಬದಲಾಗಿ ಕ್ರಾಂತಿವೃತ್ತವನ್ನು ಆಧಾರವಾಗಿ
ಉಪಯೋಗಿಸುವ ವ್ಯವಸ್ಥೆ ಇದು. ಕ್ರಾಂತಿವೃತ್ತೀಯ ಅಕ್ಷಾಂಶ ಮತ್ತು ಕ್ರಾಂತಿವೃತ್ತೀಯ ರೇಖಾಂಶ ಇವು
ಎರಡು ಸ್ಥಾನ ನಿರ್ದೇಶಕಗಳು. ಕ್ರಾಂತಿವೃತ್ತದ ಸಮತಲಕ್ಕೆ ಎಳೆದ ಲಂಬವು ಖಗೋಳವನ್ನು ಸಂಧಿಸುವ
ಬಿಂದುಗಳೇ ಕ್ರಾಂತಿವೃತ್ತೀಯ ಧ್ರುವಗಳು. ಸಧ್ಯಕ್ಕೆ ಕ್ರಾಂತಿವೃತ್ತೀಯ ಉತ್ತರ ಧ್ರುವವು ಸುಯೋಧನ
ರಾಶಿಯಲ್ಲಿಯೂ ದಕ್ಷಿಣ ಧ್ರುವವು ಮತ್ಸ್ಯರಾಶಿಯಲ್ಲಿಯೂ ಇದೆ. ಕ್ರಾಂತಿವೃತ್ತೀಯ ಅಕ್ಷಾಂಶ ಮತ್ತು
ರೇಖಾಂಶಗಳನ್ನು ಕ್ರಾತಿವೃತ್ತವನ್ನು ಆಧರಿಸಿ ಕ್ರಾಂತಿ ಮತ್ತು ವಿಷುವಾಂಶಗಳನ್ನು ಅಳೆದಂತೆಯೇ
ಅಳೆಯಬೇಕು.
ಗೆಲಕ್ಸಿಗಳ ಅಧ್ಯಯನಗಳಲ್ಲಿ ಗೆಲಕ್ಸೀಯ ಸ್ಥಾನನಿದೇರ್ಶಕ ವ್ಯವಸ್ಥೆ ಮತ್ತು
ಅಧಿಗೆಲಕ್ಸೀಯ ಸ್ಥಾನನಿದೇರ್ಶಕ ವ್ಯವಸ್ಥೆಗಳನ್ನು ಉಪಯೋಗಿಸುವುದೂ ಉಂಟು.
4.7 ಬರಿಗಣ್ಣಿನಿಂದ ವೀಕ್ಷಿಸಬಹುದಾದ ಗ್ರಹಗಳು
ಬುಧ, ಶುಕ್ರ, ಕುಜ, ಗುರು ಮತ್ತು ಶನಿ ಇವು ಬರಿಗಣ್ಣಿನಿಂದ ವೀಕ್ಷಿಸಬಹುದಾದ ಸೌರವ್ಯೂಹದ
ಸದಸ್ಯ ಗ್ರಹಗಳು.
ಸೌರಮಂಡಲದ ಗ್ರಹಗಳ ಪೈಕಿ ಅತ್ಯಂತ ಚಿಕ್ಕದೂ ಸೂರ್ಯನಿಗೆ ಅತ್ಯಂತ
ಸಮೀಪದಲ್ಲಿ ಇರುವುದೂ ಬುಧ (ಮರ್ಕ್ಯುರಿ). ೮೭.೯೭ ಭೂದಿನಗಳಿಗೆ ಒಂದು ಬಾರಿ ಸೂರ್ಯನನ್ನು ಪರಿಭ್ರಮಿಸುವ ಬುಧನ ತೋರಿಕೆಯ
ಉಜ್ವಲತಾಂಕ -೨.೦ ಇಂದ ೫.೫. ಸೂರ್ಯನಿಂದ ಗರಿಷ್ಠ ೨೮.೩೦ ಕೋನೀಯ ದೂರ ಚಲಿಸುವ ಈ ಗ್ರಹವನ್ನು ವೀಕ್ಷಿಸಲು ಬಲು ಶ್ರಮಿಸಬೇಕು.
ಮುಂಜಾನೆ ಮತ್ತು ಮುಸ್ಸಂಜೆ ವೇಳೆಯಲ್ಲಿ ಸೂರ್ಯ ಕ್ಷಿತಿಜದ ಕೆಳಕ್ಕೆ ಸರಿದ ಕೂಡಲೆ ತುಸು
ಅವಧಿಯೊಳಗೆ ಇರುವ ಮಂದಪ್ರಕಾಶದಲ್ಲಿ ಕ್ಷಿತಿಜಕ್ಕಿಂತ ಕೆಲವೇ ಕೆಲ ಡಿಗ್ರಿಗಳಷ್ಟು ಮೇಲೆ ಇದನ್ನು
ವೀಕ್ಷಿಸಲು ಪ್ರಯತಿಸಬಹುದು.
ಚಂದ್ರನನ್ನು ಹೊರತುಪಡಿಸಿದರೆ ರಾತ್ರಿಯ ಆಕಾಶದಲ್ಲಿ ನೋಡಬಹುದಾದ
ಅತ್ಯುಜ್ವಲ ಕಾಯ ಶುಕ್ರ (ವೀನಸ್) ಗ್ರಹ. ೨೨೪.೭ ಭೂದಿವಸಗಳಿಗೆ ಒಮ್ಮೆ ಸೂರ್ಯನನ್ನು ಪರಿಭ್ರಮಿಸುವ ಈ ಗ್ರಹದ
ಗರಿಷ್ಠ ತೋರಿಕೆಯ ಉಜ್ವಲತಾಂಕ -೩.೭. ‘ಒಳ ಗ್ರಹ’ಗಳ ಪೈಕಿ
ಒಂದಾಗಿರುವ ಶುಕ್ರನನ್ನು ಎಂದಿಗೂ ಸೂರ್ಯನಿಂದ ೪೭.೮೦ ಗಿಂತ ಹೆಚ್ಚು ದೂರದಲ್ಲಿ ನೋಡಲು
ಸಾರ್ಧಯವಿಲ್ಲ. ಸುರ್ಯೋದಯಕ್ಕಿಂತ ತುಸು ಮೊದಲು ಅಥವ ಸೂರ್ಯಾಸ್ತದ ತುಸು ನಂತರ ಅತ್ಯುಜ್ವಲವಾಗಿ
ಹೊಳೆಯುವುದರಿಂದ ಬೆಳ್ಳಿ ಅಥವ ಪ್ರಾತಃತಾರೆ ಹಾಗೂ ಸಂಧ್ಯಾತಾರೆ ಎಂಬ ಹೆಸರುಗಳಿಂದ
ಜನಪ್ರಿಯವಾಗಿದೆ.
೬೮೭ ಭೂದಿವಸಗಳಿಗೆ ಒಮ್ಮೆ ಸೂರ್ಯನನ್ನು ಪರಿಭ್ರಮಿಸುವ ಮೊದಲನೇ ‘ಹೊರ ಗ್ರಹ’ ಕುಜ
ಅಥವ ಮಂಗಳದ (ಮಾರ್ಸ್) ಗರಿಷ್ಠ ತೋರಿಕೆಯ ಉಜ್ವಲತಾಂಕ -೩.೦. ಯಾವ ರಾಶಿಯಲ್ಲಿ ಇದೆ ಎಂಬುದು ತಿಳಿದಿದ್ದರೆ ನಸುಗೆಂಪು ಬಣ್ಣದ ತಾರೆಯಂತೆ
ಗೋಚರಿಸುವ ಇದನ್ನು ಸುಲಭವಾಗಿ ಗುರುತಿಸಬಹುದು.
೧೧.೮೬ ಭೂವರ್ಷಗಳಿಗೆ ಒಮ್ಮೆ ಸೂರ್ಯನನ್ನು ಪರಿಭ್ರಮಿಸುವ ಎರಡನೇ ‘ಹೊರ ಗ್ರಹ’ ಗುರು
ಅಥವ ಬೃಹಸ್ಪತಿಯ (ಜೂಪಿಟರ್) ಗರಿಷ್ಠ ತೋರಿಕೆಯ ಉಜ್ವಲತಾಂಕ -೨.೮. ಯಾವ ರಾಶಿಯಲ್ಲಿ ಇದೆ ಎಂಬುದು ತಿಳಿದಿದ್ದರೆ ಕುಜ ಗ್ರಹಕ್ಕಿಂತ
ಉಜ್ವಲವಾಗಿ ಗೋಚರಿಸುವ ಇದನ್ನು ಸುಲಭವಾಗಿ ಗುರುತಿಸಬಹುದು.
೨೯.೪೬
ಭೂವರ್ಷಗಳಿಗೆ ಒಮ್ಮೆ ಸೂರ್ಯನನ್ನು ಪರಿಭ್ರಮಿಸುವ ಮೂರನೇ ‘ಹೊರ
ಗ್ರಹ’ ಶನಿಯ (ಸ್ಯಾಟರ್ನ್) ಗರಿಷ್ಠ
ತೋರಿಕೆಯ ಉಜ್ವಲತಾಂಕ -೦.೨೪. ಯಾವ
ರಾಶಿಯಲ್ಲಿ ಇದೆ ಎಂಬುದು ತಿಳಿದಿದ್ದರೆ ಬೆಳ್ಳಿಯಂತೆ ಹೊಳೆಯುವ ಇದನ್ನು ಸುಲಭವಾಗಿ
ಗುರುತಿಸಬಹುದು.
೪.೮ ಚಂದ್ರನ ವ್ಶೆಚಿತ್ರ್ಯಗಳು
ನಮ್ಮ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ. ಪೂರ್ಣಚಂದ್ರನ ತೋರಿಕೆಯ ಉಜ್ವಲತಾಂಕ -೧೨.೬. ಎಂದೇ, ರಾತ್ರಿಯ ಆಕಾಶದಲ್ಲಿ ಗೋಚರಿಸುವ ಅತ್ಯುಜ್ವಲ ಕಾಯ. ದೀರ್ಘವೃತ್ತೀಯ ಕಕ್ಷೆಯಲ್ಲಿ ಭೂಮಿಯನ್ನು ಒಂದು ಬಾರಿ ಪರಿಭ್ರಮಿಸಲು
ತೆಗೆದುಕೊಳ್ಳುವ ತಾರಾಕಾಲ ೨೭.೩೨೧೬೬೧ ದಿವಸಗಳು. ಅರ್ಥಾತ್
ಚಂದ್ರನ ಒಂದು ತಾರಾಮಾಸದಲ್ಲಿ (ಸೈಡ್‌ರಿಅಲ್ ಮಂತ್) ೨೭.೩೨೧೬೬೧ ದಿವಸಗಳು. ಚಂದ್ರನ ಪರಿಭ್ರಮಣ ಕಕ್ಷೆಯು ಭೂಮಿಯ ಸಮಭಾಜಕ ವೃತ್ತದ ಸಮತಲಕ್ಕೆ ಬದಲಾಗಿ
ಕ್ರಾಂತಿವೃತ್ತದ ಸಮತಲಕ್ಕೆ ಸಮೀಪದಲ್ಲಿ ಇರುವುದು ಒಂದು ವೈಶಿಷ್ಟ್ಯ. ಕ್ರಾಂತಿವೃತ್ತದ ಸಮತಲ ಮತ್ತು ಚಂದ್ರನ ಪರಿಭ್ರಮಣ ಕಕ್ಷೆಯ ಸಮತಲಗಳ ನಡುವಣ
ಕೋನ ೫.೧೪೫೦.
ಚಂದ್ರನ ಆವರ್ತನಾಕ್ಷವು ಕ್ರಾಂತಿವೃತ್ತದ ಸಮತಲಕ್ಕೆ ಕೇವಲ ೧.೫೪೩೦ ಓರೆಯಾಗಿದೆ. ಚಂದ್ರನ ಆವರ್ತಾವಧಿಯೂ
ಪರಿಭ್ರಮಣಾವಧಿಯೂ ಹೆಚ್ಚುಕಮ್ಮಿ ಒಂದೇ ಆಗಿರುವುದರಿಂದ ಅದರ ಒಂದು ನಿರ್ದಿಷ್ಟ ಭಾಗ ಮಾತ್ರ ಸದಾ
ಭೂಮಿಯ ಕಡೆಗೆ ಇರುತ್ತದೆ. ಆದ್ದರಿಂದ ಚಂದ್ರನ ಒಂದು ಭಾಗ ಮಾತ್ರ ನಮಗೆ ಗೋಚರಿಸುತ್ತದೆ. ತನ್ನ
ಮೇಲೆ ಬಿದ್ದ ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಚಂದ್ರ ಉಜ್ವಲವಾಗಿ ಗೋಚರಿಸುತ್ತದೆ
ಎಂಬುದು ನಿಮಗೆ ತಿಳಿದಿದೆ. ಭೂಮಿಯಲ್ಲಿ ಆಗುವಂತೆಯೇ ಸೂರ್ಯನಿಗೆ ಎದುರಾಗಿರುವ ಚಂದ್ರನ ಭಾಗದಲ್ಲಿ
ಬೆಳಕೂ ಉಳಿದ ಭಾಗದಲ್ಲಿ ಕತ್ತಲೂ ಇರುತ್ತದೆ. ಚಂದ್ರ ಭೂಮಿಯನ್ನು ಪರಿಭ್ರಮಿಸುವಾಗ ನಮಗೆ ಗೋಚರಿಸುವ ಬೆಳಕಿನ ಭಾಗದ ಪ್ರಮಾಣದಲ್ಲಿ
ವ್ಯತ್ಯಾಸ ಆಗುತ್ತಲೇ ಇರುತ್ತದೆ. ತತ್ಪರಿಣಾಮವಾಗಿ ದಿನದಿಂದ ದಿನಕ್ಕೆ ಚಂದ್ರನ ಆಕಾರವೇ
ಬದಲಾಗುತ್ತಿರುವಂತೆ ಭಾಸವಾಗುತ್ತದೆ. ನಮಗೆ ಗೋಚರಿಸುವ ಚಂದ್ರನ ಬದಲಾಗುತ್ತಿರುವ ಉಜ್ವಲ ಭಾಗದ
ಆಕಾರಗಳಿಗೆ ಕಲೆಗಳು (ಫೇಸಸ್) ಎಂದು ಹೆಸರು. ಚಂದ್ರ, ಭೂಮಿ
ಮತ್ತು ಸೂರ್ಯ ಇವುಗಳ ಸಾಪೇಕ್ಷ ಸ್ಥಾನವನ್ನು ಚಂದ್ರನ ಕಲೆ ಅವಲಂಬಿಸಿದೆ. ಚಂದ್ರನ ಪ್ರಮುಖ
ಕಲೆಗಳು ಇವು: ಸೂರ್ಯರಶ್ಮಿ ಪ್ರಕಾಶಿತ ಪ್ರದೇಶದ ೦% ಗೋಚರಿಸುವ ಅಮಾವಾಸ್ಯೆ, ೨೫% ಗೋಚರಿಸುವ ಬಾಲಚಂದ್ರ, ೫೦%
ಗೋಚರಿಸುವ ಅರ್ಧಚಂದ್ರ, ೭೫% ಗೋಚರಿಸುವ ಅರ್ಧಾಧಿಕ ಚಂದ್ರ, ೧೦೦%
ಗೋಚರಿಸುವ ಪೂರ್ಣಚಂದ್ರ ಅಥವ ಹುಣ್ಣಿಮೆ. ಎರಡು
ಅನುಕ್ರಮ ಅಮಾವಾಸ್ಯೆಗಳ ನಡುವೆ ಪೂರ್ಣಚಂದ್ರ ಒಂದು ಬಾರಿ, ಉಳಿದವು
ತಲಾ ಎರಡು ಬಾರಿ ಗೋಚರಿಸಿದರೂ ಅವು ಪ್ರಕಾಶಿತ ಪ್ರದೇಶದ ವಿರುದ್ಧ ಭಾಗಗಳಾಗಿರುತ್ತವೆ.
ಎಂದೇ, ಎರಡು ಅನುಕ್ರಮ ಅಮಾವಾಸ್ಯೆಗಳ ನಡುವಣ ಎಲ್ಲ ಕಲೆಗಳನ್ನು ಒಟ್ಟಾಗಿ ಕಲೆಗಳ
ಒಂದು ಆವರ್ತ ಎಂದು ಪರಿಗಣಿಸಬೇಕು. ಎರಡು ಅನುಕ್ರಮ ಅಮಾವಾಸ್ಯೆಗಳ ಅಥವ ಹುಣ್ಣಿಮೆಗಳ ನಡುವಿನ ಅವಧಿ ೨೯.೫೩೦೫೮೯
ದಿವಸಗಳು. ಸರಿಸುಮಾರು ೨೯.೫ ದಿವಸಗಳ ಅವಧಿಯ ಇದು ಚಂದ್ರನ ಯುತಿಮಾಸ
(ಸಿನಾಡಿಕ್ ಮಂತ್). ಒಂದು ತಾರಾ ಮಾಸದ ಅವಧಿಯಲ್ಲಿ ಭೂಮಿ-ಚಂದ್ರ ಜೋಡಿ ಸೂರ್ಯನನ್ನು
ಪರಿಭ್ರಮಿಸುತ್ತ ತುಸು ದೂರ ಕ್ರಮಿಸುವುದರಿಂದ ಚಂದ್ರನ ತಾರಾ ಮತ್ತು ಯುತಿ ಮಾಸಗಳ ಅವಧಿಯಲ್ಲಿ
ವ್ಯತ್ಯಾಸ ಉಂಟಾಗುತ್ತದೆ. ಹುಣ್ಣಿಮೆ ಅಮಾವಾಸ್ಯೆಗಳೂ ಚಂದ್ರನ ಕಲೆಗಳು. ಅಮಾವಾಸ್ಯೆಯಂದು ಚಂದ್ರನ
ಅಪ್ರಕಾಶಿತ ಪ್ರದೇಶ ಭೂಮಿಗೆ ಎದುರಾಗಿ ಇರುವುದರಿಂದ ಚಂದ್ರ ಗೋಚರಿಸುವುದಿಲ್ಲ. ಹುಣ್ಣಿಮೆಯಂದು
ಚಂದ್ರನ ಪ್ರಕಾಶಿತ ಪ್ರದೇಶ ಪೂರ್ಣವಾಗಿ ಭೂಮಿಗೆ ಎದುರಾಗಿ ಇರುವುದರಿಂದ ಸಂಪೂರ್ಣ ವ್ರತ್ತಾಕಾರದ
ಚಂದ್ರ ಗೋಚರಿಸುತ್ತದೆ. ವ್ಶೆಜ್ಞಾನಿಕ ಪರಿಭಾಷೆಯಲ್ಲಿ, ಅಮಾವಾಸ್ಯೆಯಂದು
ಸೂರ್ಯ ಮತ್ತು ಚಂದ್ರಗಳ ಭೂಕೇಂದ್ರಿತ ತೋರಿಕೆಯ ರೇಖಾಂಶಗಳ ನಡುವಿನ ಕೋನ ಹೆಚ್ಚುಕಮ್ಮಿ ೦೦ ಯೂ ಹುಣ್ಣಿಮೆಯಂದು ೧೮೦೦ ಯೂ ಆಗಿರುತ್ತದೆ. ಅಮಾವಾಸ್ಯೆಯಂದು
ಚಂದ್ರ ಸೂರ್ಯನೊಂದಿಗೆ ಮೂಡಿ ಸೂರ್ಯನೊಂದಿಗೆ ಕಂತುತ್ತದೆ. ಮರುಸಂಜೆ
ಚಂದ್ರ ಸೂರ್ಯನಿಗಿಂತ ತುಸುವೇ ಪೂರ್ವಕ್ಕೆ ಸರಿದಿರುತ್ತದೆ. ಸೂರ್ಯ
ಮೂಡುವ ತುಸುವೇ ಮೊದಲು ಮೂಡಿ ಸೂರ್ಯ ಕಂತಿದ ತುಸುವೇ ಸಮಯಾನಂತರ ಕಂತುತ್ತದೆ. ಅಮಾವಾಸ್ಯೆ ಕಳೆದ ಎರಡನೇ ದಿನ ಚಂದ್ರ ಸೂರ್ಯನಿಂದ ಇನ್ನೂ ಕೊಂಚ
ಪೂರ್ವಕ್ಕೆ ಸರಿದಿರುತ್ತದೆ. ತತ್ಪರಿಣಾಮವಾಗಿ ಎರಡು ಕಾಯಗಳು ಮೂಡುವ ಸಮಯಗಳ ಮತ್ತು ಕಂತುವ ಸಮಯಗಳ ಅಂತರ
ಇನ್ನೂ ಕೊಂಚ ಹೆಚ್ಚಾಗಿರುತ್ತದೆ. ಇದೇ ರೀತಿ ಮುಂದುವರಿದು ಹುಣ್ಣಿಮೆಯಂದು ಸೂರ್ಯ ಕಂತುವಾಗ ಚಂದ್ರ
ಮೂಡುತ್ತದೆ. ಅಮಾವಾಸ್ಯೆಯಿಂದ ಹುಣ್ಣಿಮೆಯ ತನಕದ ಈ ಅವಧಿ ಶುಕ್ಲಪಕ್ಷ. ಶುಕ್ಲಪಕ್ಷದಲ್ಲಿ ದಿನದಿಂದ ದಿನಕ್ಕೆ ಚಂದ್ರ ತಡವಾಗಿ ಕಂತುತ್ತದೆ. ಕಲೆ ಚಂದ್ರನ ಪಶ್ಚಿಮ ದಿಕ್ಕಿನಿಂದ ಗೋಚರಿಸತೊಡಗಿ ಪೂರ್ವಾಭಿಮುಖವಾಗಿ
ವಿಸ್ತರಿಸುತ್ತ ೧೪ ಅಥವ ೧೫ ದಿನಗಳ ಬಳಿಕ ಹುಣ್ಣಿಮೆಯಂದು ಪೂರ್ತಿ ಬಿಂಬವನ್ನು ಆವರಿಸಿರುತ್ತದೆ. ಹುಣ್ಣಿಮೆಯಿಂದ ಅಮಾವಾಸ್ಯೆಯ ತನಕದ ಅವಧಿ ಕೃಷ್ಣಪಕ್ಷ. ಈಗಲೂ ಸೂರ್ಯನಿಂದ ಪೂರ್ವಕ್ಕೆ ಸರಿಯುವಿಕೆ ಮುಂದುವರಿಯುತ್ತದೆ. ದಿನದಿಂದ ದಿನಕ್ಕೆ ಚಂದ್ರ ಬೇಗನೆ ಕಂತುತ್ತದೆ. ಕಲೆಯ ಕತ್ತಲೆಯ ಪ್ರದೇಶ ಪಶ್ಚಿಮ ಅಂಚಿನಿಂದ ಆರಂಭವಾಗಿ ದಿನದಿಂದ ದಿನಕ್ಕೆ
ಪೂರ್ವಾಭಿಮುಖವಾಗಿ ವಿಸ್ತರಿಸತೊಡಗುತ್ತದೆ. ೧೪ ಅಥವ ೧೫ ದಿನಗಳ ಬಳಿಕ ಚಂದ್ರ ಸೂರ್ಯನಿಂದ ಸುಮಾರು ೩೬೦೦ ಪೂರ್ವಕ್ಕೆ ಸರಿದು ಸೂರ್ಯನಿಗೆ
ಸಾಪೇಕ್ಷವಾಗಿ ಮೊದಲು ಇದ್ದಲ್ಲಿಗೇ ತಲಪಿರುತ್ತದೆ. ಕಲೆಯ
ಕತ್ತಲೆಯ ಪ್ರದೇಶ ಪೂರ್ತಿಬಿಂಬವನ್ನು ಆವರಿಸುತ್ತದೆ, ಅನುಕ್ರಮವಾಗಿ
ಮುಂದಿನ ಅಮಾವಾಸ್ಯೆ ಆಗುತ್ತದೆ.
ಹುಣ್ಣಿಮೆಗೆ ಸಂಬಂಧಿಸಿದಂತೆ ಇಂಗ್ಲಿಷ್‌ನಲ್ಲಿ ‘ಒನ್ಸ್ ಇನ್ ಎ ಬ್ಲೂ ಮೂನ್’
ಎಂಬ ನುಡಿಗಟ್ಟು ಒಂದಿದೆ. ‘ನೀಲ
ಚಂದ್ರ ಗೋಚರಿಸಿದಾಗ’ ಎಂದು ಇದರ ಭಾವಾರ್ಥ. ಎಲ್ಲೋ
ಒಮ್ಮೊಮ್ಮೆ ನಡೆಯುವ ವಿದ್ಯಮಾನವನ್ನು ಉಲ್ಲೇಖಿಸುವ ನುಡಿಗಟ್ಟು ಇದು. ಸಾಮಾನ್ಯವಾಗಿ ಒಂದು
ಸೌರವರ್ಷದಲ್ಲಿ ಸರಿಸುಮಾರಾಗಿ ತಿಂಗಳಿಗೆ ಒಂದರಂತೆ ೧೨ ಹುಣ್ಣಿಮೆಗಳು ಇರುತ್ತವಾದರೂ ವಾಸ್ತವವಾಗಿ ೧೨ ಪೂರ್ಣ ಚಾಂದ್ರ ಆವರ್ತಗಳು ಘಟಿಸಲು ಬೇಕಾಗುವ ಅವಧಿ ಮತ್ತು ಹೆಚ್ಚುಕಮ್ಮಿ
ಇನ್ನೂ ೧೧ ದಿವಸಗಳು ಇರುತ್ತವೆ. ಪ್ರತೀ
ವರ್ಷ ಈ ಹೆಚ್ಚುವರಿ ದಿವಸಗಳು ಒಟ್ಟುಗೂಡಿ ೨.೭೨
ವರ್ಷಗಳಿಗೊಮ್ಮೆ ೧೩ ಹುಣ್ಣಿಮೆಗಳು ಆಗುತ್ತವೆ. ಈ ಹೆಚ್ಚುವರಿ ಹುಣ್ಣಿಮೆಯೇ ನೀಲಚಂದ್ರ.
೪.೯ ಗ್ರಹಣಗಳು
ಕೆಲವೊಮ್ಮೆ ಒಂದೇ ಗುರುತ್ವವ್ಯವಸ್ಥೆಯ ಮೂರು ಅಥವ ಹೆಚ್ಚು ಆಕಾಶಕಾಯಗಳು
ಏಕರೇಖಸ್ಥವಾಗುವುದುಂಟು. ಏಕರೇಖಸ್ಥವಾಗಿರುವ ಮೂರು ಆಕಾಶಕಾಯಗಳ ಪೈಕಿ ಎರಡು ಇನ್ನೊಂದರ ಒಂದೇ
ಪಾರ್ಶ್ವದಲ್ಲಿ ಇದ್ದರೆ ಅವು ಅದರೊಂದಿಗೆ ಯುತಿಯಲ್ಲಿ (ಕಂಜಂಕ್ಷನ್) ಇವೆ ಎಂದೂ ವಿರುದ್ಧ
ಪಾರ್ಶ್ವಗಳಲ್ಲಿ ಇದ್ದರೆ ವಿಯುತಿಯಲ್ಲಿ (ಆಪಸಿಷನ್) ಇವೆ ಎಂದೂ ಹೇಳುವುದು ಪದ್ಧತಿ. ಇಂಥ
ವಿದ್ಯಮಾನಗಳಿಗೆ ಒಟ್ಟಾರೆಯಾಗಿ ಯುತಿವಿಯುತಿ (ಸಿಸಿಜಿ)ಎಂದು ಹೆಸರು. ಯುತಿವಿಯುತಿಯ
ಮೂರು ಪರಿಣಾಮಗಳ ಪೈಕಿ ಒಂದು ನಾವು ಗ್ರಹಣ (ಇಕ್ಲಿಪ್ಸ್) ಎಂದು ಕರೆಯುವ ವಿದ್ಯಮಾನ. ಸಂಕ್ರಮ
(ಟ್ರ್ಯಾನ್‌ಸಿಟ್) ಮತ್ತು ಗುಪ್ತಿ (ಆಕಲ್ಟೇಷನ್) ಇವು ಉಳಿದ ಎರಡು ಪರಿಣಾಮಗಳು. ಗ್ರಹಣಾವಧಿಯಲ್ಲಿ ಒಂದು ಆಕಾಶಕಾಯ ಇನ್ನೊಂದರ ನೆರಳಿನೊಳಕ್ಕೆ ಪ್ರವೇಶಿಸುವ
ವಿದ್ಯಮಾನ ಗ್ರಹಣ. ಒಂದು ಆಕಾಶಕಾಯ ಇನ್ನೊಂದನ್ನು ಮರೆಮಾಡುವ ವಿದ್ಯಮಾನ ಗುಪ್ತಿ, ದೂರದಲ್ಲಿ ಇರುವ ಆಕಾಶಕಾಯದ ಎದುರಿನಿಂದ ಸಮೀಪದಲ್ಲಿ ಇರುವ ಆಕಾಶಕಾಯ
ದಾಟುವಾಗ ಬಲು ಚಿಕ್ಕದಾಗಿರುವಂತೆ ಕಾಣುವ ವಿದ್ಯಮಾನ ಸಂಕ್ರಮ.
ನಮಗೆ ಚಿರಪರಿಚಿತವಾಗಿರುವ ಸೂರ್ಯ ಮತ್ತು ಚಂದ್ರ ಗ್ರಹಣಗಳು ಹೇಗೆ
ಆಗುತ್ತವೆ ಎಂಬುದನ್ನು ಈಗ ಪರಿಶೀಲಿಸೋಣ. ಚಂದ್ರ
ಭೂಮಿಯನ್ನು ಪರಿಭ್ರಮಿಸುವ ಕಕ್ಷೆಯ ಸಮತಲ ಕ್ರಾಂತಿವೃತ್ತಕ್ಕೆ ಸರಿಸುಮಾರು ೫೦ ಗಳಷ್ಟು ಓರೆಯಾಗಿದೆ ಎಂಬುದು ನಿಮಗೆ ತಿಳಿದಿದೆ. ಅದು ಕ್ರಾಂತಿವೃತ್ತವನ್ನು ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಭೂಮಿಯನ್ನು ಪಶ್ಚಿಮ-ಪೂರ್ವ
ದಿಶೆಯಲ್ಲಿ ಪರಿಭ್ರಮಿಸುತ್ತಿರುವ ಚಂದ್ರ ಕ್ರಾಂತಿವೃತ್ತವನ್ನು ಉತ್ತರ ಖಗೋಳಾರ್ಧದಿಂದ ದಕ್ಷಿಣ
ಖಗೋಳಾರ್ಧಕ್ಕೆ ದಾಟುವ ಛೇದನ ಬಿಂದುವಿಗೆ ಅವರೋಹ ಸಂಪಾತ (ಡಿಸೆಂಡಿಂಗ್
ನೋಡ್) ಎಂದೂ ಇದಕ್ಕೆ ವಿರುದ್ಧ ದಿಶೆಯಲ್ಲಿ ದಾಟುವ ಬಿಂದುವಿಗೆ ಆರೋಹ ಸಂಪಾತ (ಅಸೆಂಡಿಂಗ್ ನೋಡ್) ಎಂದೂ ಹೆಸರು. ಭೂಮಿ ಮತ್ತು ಈ ಎರಡು
ಬಿಂದುಗಳು ಏಕರೇಖಸ್ಥವಾಗಿವೆ. ಎಂದೇ, ಚಂದ್ರ ಈ ಬಿಂದುಗಳ ಆಸುಪಾಸಿನಲ್ಲಿ ಇದ್ದಾಗ ಮಾತ್ರ
ಗ್ರಹಣಗಳಾಗುತ್ತವೆ.
ಈ ಬಿಂದುಗಳನ್ನು ನಮ್ಮ ಪುರಾತನರು ಅನುಕ್ರಮವಾಗಿ ಕೇತು ಮತ್ತು ರಾಹು ಎಂದು
ಕರೆದದ್ದು ಅನೇಕ ದಂತಕಥೆಗಳ ಹುಟ್ಟಿಗೆ ಕಾರಣವಾಯಿತು. ರಾಹು
ಕೇತುಗಳು ಕ್ರಾಂತಿವೃತ್ತದ ಮೇಲಿನ ಎರಡು ಬಿಂದುಗಳೇ ವಿನಾ ಗ್ರಹ ಮೊದಲಾದ ಯಾವುದೇ ಆಕಾಶಕಾಯಗಳಲ್ಲ.
ಚಂದ್ರಗ್ರಹಣ ಆಗಬೇಕಾದರೆ ಭೂಮಿಯ ನೆರಳಿನೊಳಕ್ಕೆ ಚಂದ್ರ ಪ್ರವೇಶಿಸಬೇಕು. ಅರ್ಥಾತ್ ಸೂರ್ಯ ಮತ್ತು ಚಂದ್ರ, ನಡುವೆ
ಭೂಮಿ ಏಕರೇಖಸ್ಥವಾಗಬೇಕು. ಸಂಪಾತ ಬಿಂದುಗಳಿಗೆ ಸಾಪೆಕ್ಷವಾಗಿ ಚಂದ್ರನ ಸ್ಥಾನವು ಗ್ರಹಣದ ವಿಧ ಮತ್ತು
ಅವಧಿಯನ್ನು ನಿರ್ಧರಿಸುತ್ತದೆ. ಚಂದ್ರ
ಸಂಪೂರ್ಣವಾಗಿ ಭೂಮಿಯ ಪೂರ್ಣಛಾಯಾ (ಅಂಬ್ರ) ಪ್ರದೇಶದಲ್ಲಿ ಇದ್ದಾಗ ಪೂರ್ಣ
(ಟೋಟಲ್) ಚಂದ್ರಗ್ರಹಣವೂ, ಭಾಗಶಃ ಇದ್ದಾಗ ಖಂಡ (ಪಾರ್ಷಲ್) ಗ್ರಹಣವೂ ಆಗುತ್ತದೆ.
ಹುಣ್ಣಿಮೆಗಳಂದು ಸೂರ್ಯ ಚಂದ್ರರ ನಡುವೆ ಭೂಮಿ ಬಂದರೂ ಭೂಮಿ ಮತ್ತು ಸೂರ್ಯಗಳನ್ನು ಜೋಡಿಸುವ
ರೇಖೆಯ ತುಸು ದಕ್ಷಿಣದಲ್ಲಿ ಅಥವ ಉತ್ತರದಲ್ಲಿ ಚಂದ್ರ ಇರುತ್ತದೆ. ಅರ್ಥಾತ್, ಮೂರು ಕಾಯಗಳು ಏಕರೇಖಸ್ಥವಾಗಿರುವುದಿಲ್ಲ. ಆದ್ದರಿಂದ ಎಲ್ಲ
ಹುಣ್ಣಿಮೆಗಳಂದು ಚಂದ್ರಗ್ರಹಣ ಆಗುವುದಿಲ್ಲ. ಭೂಮಿಯ ಖಂಡಛಾಯಾ (ಪೆನಂಬ್ರ) ಪ್ರದೇಶದಲ್ಲಿ
ಚಂದ್ರ ಇದ್ದಾಗ ಅದರ ಪ್ರಕಾಶಿತ ಭಾಗ ಮಸುಕಾಗುತ್ತದೆಯೇ ವಿನಾ ಮರೆಯಾಗುವುದಿಲ್ಲ. ಖಗೋಳಜ್ಞರು
ತಾಂತ್ರಿಕವಾಗಿ ಇದನ್ನೂ ಒಂದು ಬಗೆಯ ಗ್ರಹಣ ಎಂದು ಪರಿಗಣಿಸುತ್ತಾರೆ.
ಸೂರ್ಯಗ್ರಹಣ ಆಗಬೇಕಾದರೆ ಚಂದ್ರನ ನೆರಳು ಭೂಮಿಯ ಮೇಲೆ ಬೀಳಬೇಕು.
ಅರ್ಥಾತ್ ಸೂರ್ಯ ಮತ್ತು ಭೂಮಿ, ನಡುವೆ ಚಂದ್ರ ಏಕರೇಖಸ್ಥವಾಗಬೇಕು. ಸಂಪಾತ ಬಿಂದುಗಳಿಗೆ ಸಾಪೆಕ್ಷವಾಗಿ
ಚಂದ್ರನ ಸ್ಥಾನವು ಗ್ರಹಣದ ವಿಧ ಮತ್ತು ಅವಧಿಯನ್ನು ನಿರ್ಧರಿಸುತ್ತದೆ.
ಚಂದ್ರ ಸೂರ್ಯಬಿಂಬವನ್ನು ಪ್ರರ್ತಿಯಾಗಿ ಮರೆಮಾಡಿದರೆ ಪೂರ್ಣಗ್ರಹಣ, ಭಾಗಶಃ ಮರೆಮಾಡಿದರೆ ಖಂಡಗ್ರಹಣ, ಸೂರ್ಯಬಿಂಬದ
ಮಧ್ಯಬಾಗ ಮರೆಯಾಗಿ ಉಂಗುರದಂತೆ ಗೋಚರಿಸಿದರೆ ಕಂಕಣಗ್ರಹಣ.
ಅಮಾವಾಸ್ಯೆಗಳಂದು ಭೂಮಿ ಸೂರ್ಯರ ನಡುವೆ ಚಂದ್ರ ಬಂದರೂ ಭೂಮಿ ಮತ್ತು
ಸೂರ್ಯಗಳನ್ನು ಜೋಡಿಸುವ ರೇಖೆಯ ತುಸು ದಕ್ಷಿಣದಲ್ಲಿ ಅಥವ ಉತ್ತರದಲ್ಲಿ ಚಂದ್ರ ಇರುತ್ತದೆ.
ಅರ್ಥಾತ್, ಮೂರು ಕಾಯಗಳು ಏಕರೇಖಸ್ಥವಾಗಿರುವುದಿಲ್ಲ. ಆದ್ದರಿಂದ ಎಲ್ಲ
ಅಮಾವಾಸ್ಯೆಗಳಂದು ಸೂರ್ಯಗ್ರಹಣ ಆಗುವುದಿಲ್ಲ. ಒಂದು
ಭೂಪ್ರದೇಶದಲ್ಲಿ ಯಾವ ಬಗೆಯ ಸೂರ್ಯಗ್ರಹಣ ಗೋಚರಿಸುತ್ತದೆ ಎಂಬುದು ಅದು ಚಂದ್ರನ ನೆರಳಿನ
ಯಾವ ಭಾಗದಲ್ಲಿ ಇದೆ ಎಂಬುದನ್ನು ಅವಲಂಬಿಸಿರುತ್ತದೆ. ಚಂದ್ರನ ಪೂರ್ಣಛಾಯೆ ಬೀಳುವ
ಭೂಪ್ರದೇಶಗಳಲ್ಲಿ ಪೂರ್ಣಗ್ರಹಣ. ಪೂರ್ಣಗ್ರಹಣದ ದರ್ಶನಭಾಗ್ಯ ಬಲು ಅಗಲಕಿರಿದಾದ ಪಥದಂತೆ ಇರುವ
ಭೂಪ್ರದೇಶವಾಸಿಗಳಿಗೆ ಕೆಲವೇ ನಿಮಿಷಗಳ ಕಾಲ
ಮಾತ್ರ ಲಭ್ಯ. ಚಂದ್ರನ ಖಂಡಛಾಯೆ ಬೀಳುವ ಭೂಪ್ರದೇಶಗಳಲ್ಲಿ ಖಂಡಗ್ರಹಣ. ಚಂದ್ರನ ಪೂರ್ಣಛಾಯೆಯ
ನೇರದಲ್ಲಿ ಇದ್ದರೂ ಅದರ ತುದಿ ಸ್ಪರ್ಷದಿಂದ ‘ಕೂದಲೆಳೆಯಷ್ಟರಲ್ಲಿ’ ವಂಚಿತವಾಗಿ ಪ್ರತಿಪೂರ್ಣಛಾಯೆ (ಆಂಟ್‌ಅಂಬ್ರ) ಎಂಬ ಹೆಸರಿನ
ಖಂಡಛಾಯೆ ಬೀಳುವ ಭೂಪ್ರದೇಶದಲ್ಲಿ ಕಂಕಣ (ಆನ್ಯುಲರ್) ಗ್ರಹಣ. ಚಾಂದ್ರಕಕ್ಷೆ ದೀರ್ಘವೃತ್ತಾಕೃತಿಯಲ್ಲಿ (ಎಲಿಪ್ಸ್) ಇರುವುದರಿಂದ ಚಂದ್ರನ ತೋರಿಕೆಯ
ಗಾತ್ರ ಬದಲಾಗುತ್ತಿರುತ್ತಿರುವುದು ಈ ವಿದ್ಯಮಾನಕ್ಕೆ ಕಾರಣ. ಯಾವುದೇ ಬಗೆಯ
ಗ್ರಹಣವನ್ನು ಬರಿಗಣ್ಣಿನಿಂದ ನೇರವಾಗಿ ವೀಕ್ಷಿಸಕೂಡದು.
ಗ್ರಹಣಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ. ಗ್ರಹಣಗಳ
ಕೃತಕ ಚಲನಚಿತ್ರ ವೀಕ್ಷಿಸಲು ಮುಂದೆ ಕೊಟ್ಟಿರುವ ೫ ಕೊಂಡಿಗಳನ್ನು ಅನುಕ್ರಮವಾಗಿ ಕ್ಲಿಕ್ಕಿಸಿ:
ಡಿಗಳ ಕೊಂಡಿ
೧, ಅಥವ ಕೊಂಡಿ
೨, ಕೊಂಡಿ ೩, ಕೊಂಡಿ
೪ , ಕೊಂಡಿ
೬ . ಹಿಂದೆ ಆಗಿದ್ದ ಮತ್ತು ಮುಂದೆ ಆಗಲಿರುವ ಸೂರ್ಯ ಗ್ರಹಣಗಳ ಕುರಿತಾದ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ. ಹಿಂದೆ
ಆಗಿದ್ದ ಮತ್ತು ಮುಂದೆ ಆಗಲಿರುವ ಚಂದ್ರ ಗ್ರಹಣಗಳ ಕುರಿತಾದ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
No comments:
Post a Comment