ಗ್ರಹಿಕೆಗಳು, ಅಭಿಲಾಷೆಗಳು, ಅಭಿಪ್ರಾಯಗಳು, ಮೌಲ್ಯಗಳು ಇವೇ ಮೊದಲಾದವುಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳ ನಡುವೆ - ಅವರು ಆತ್ಮೀಯ ಸ್ನೇಹಿತರು, ಕುಟುಂಬದ ಸದಸ್ಯರು, ಸಹೋದ್ಯೋಗಿಗಳು, ಸಹಪಾಠಿಗಳು ಮೊದಲ್ಗೊಂಡು ಯಾರೇ ಆಗಿರಲಿ - ಅಭಿಪ್ರಾಯಭೇದ ಉಂಟಾದಾಗ ಸಂಘರ್ಷ ಆಗುವುದೂ ಮನಸ್ತಾಪ ಉದ್ಭವಿಸುವುದೂ ಸ್ವಾಭಾವಿಕ. ಕೆಲವರು ತಮಗೆ ಎಷ್ಟೇ ತೊಂದರೆ ಆದರೂ ಇಂಥ ಸಂಘರ್ಷಗಳೇ ಆಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ, ಕೆಲವರು ಅಭಿಪ್ರಾಯಭೇದವನ್ನು ತಮ್ಮ ಮೇಲಿನ ಧಾಳಿ ಎಂದು ಪರಿಗಣಿಸುತ್ತಾರೆ, ಕೆಲವರು ಮಾನಸಿಕ ಸಮತೋಲವನ್ನು ಕಳೆದುಕೊಂಡು ಭಾವೋದ್ರೇಕಕ್ಕೆ ತುತ್ತಾಗುತ್ತಾರೆ, ಕೆಲವರು ಮೌನಕ್ಕೆ ಶರಣಾಗುತ್ತಾರೆ, ಕೆಲವರು ‘ಹೇಗಾದರೂ ಮಾಡಿ ಎದುರಾಳಿ’ ತಮ್ಮ ಅಭಿಪ್ರಾಯವನ್ನು ಒಪ್ಪುವಂತೆ ಮಾಡಲು ಪ್ರಯತ್ನಿಸುತ್ತಾರೆ, ಕೆಲವರು ತಮ್ಮ ನೋವನ್ನು ನುಂಗಿಕೊಂಡು ಮನಸ್ಸಿನಾಳದಲ್ಲಿ ‘ದೂರು’ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಈ ಎಲ್ಲ ತಂತ್ರಗಳೂ ಅಭಿಪ್ರಾಯಭೇದವನ್ನು ಪರಿಣಾಮಕಾರಿಯಾಗಿ ನಿವಾರಿಸುವುದಕ್ಕೆ ಬದಲಾಗಿ ಸಂಬಂಧಿಸಿದ ಎಲ್ಲ ವ್ಯಕ್ತಿಗಳ ಮನಃಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡತ್ತವೆ. ವಿಶೇಷತಃ ಕೊನೆಯದ್ದು ಬಲು ಅಪಾಯಕಾರಿ (ನೋಡಿ: ಮನಸ್ಸಿನ ಮಲಿನಕಾರಿಗಳು). ಕುಟುಂಬದ ಸದಸ್ಯರ ಪೈಕಿ ಯಾರಾದರೂ ಇಂತು ಮಾಡಿದರೆ ಕುಟುಂಬದೊಳಗಿನ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ (ನೋಡಿ: ನಮ್ಮ ಜೀವಂತಿಕೆಯ ಚೈತನ್ಯದ ಪ್ರಮುಖ ಆಕರ – ನಮ್ಮ ಕುಟುಂಬ). ಇವಕ್ಕೆ ಬದಲಾಗಿ ‘ನ್ಯಾಯ ಸಮ್ಮತವಾಗಿ ಜಗಳ ಆಡುವುದು’ ಒಳ್ಳೆಯದು. ‘ನ್ಯಾಯ ಸಮ್ಮತವಾಗಿ ಜಗಳ ಆಡುವುದು’ ಅಂದರೆ ಭಾವೋದ್ರೇಕಕ್ಕೆ ಅವಕಾಶ ನೀಡದೆ ‘ನೇರವಾಗಿ ಚರ್ಚೆ’ ಮಾಡುವುದು ಅಥವ ‘ಮಾತುಕತೆ ನಡೆಸುವುದು’ ಎಂದರ್ಥ. ಈ ತಂತ್ರದಿಂದ ಪರಿಣಾಮಕಾರಿಯಾಗಿ ಮನಸ್ತಾಪಗಳನ್ನು ಬಗೆಹರಿಸಬಹುದು ಮತ್ತು ತತ್ಸಂಬಂಧಿತ ಭಾವನೆಗಳನ್ನು ನಿಭಾಯಿಸಬಹುದು. ಮನಸ್ತಾಪಗಳನ್ನು ಅವು ಉದ್ಭವಿಸಿದಾಗಲೇ ಬಗೆಹರಿಸದಿದ್ದರೆ ಅವು ಮನದಾಳದಲ್ಲಿ ಬೇರೂರಿ ಬೆಳೆದು ಬಾಂಧವ್ಯಗಳು ಹಳಸುವಂತೆಯೂ ಮಾಡುತ್ತವೆಯಾದ್ದರಿಂದ ‘ನ್ಯಾಯ ಸಮ್ಮತವಾಗಿ ಜಗಳ ಆಡುವುದು’ ತಂತ್ರದ ಮುಖೇನ ಅವು ಉದ್ಭವಿಸಿದ ತಕ್ಷಣವೇ ಬಗೆಹರಿಸಬೇಕು. ಈ ತಂತ್ರದಲ್ಲಿ ಪ್ರಭುತ್ವ ಸಾಧಿಸಲೋಸುಗ ಮುಂದೆ ಪಟ್ಟಿ ಮಾಡಿರುವ ಮೂಲ ಸೂತ್ರಗಳನ್ನು (ಗ್ರೌಂಡ್ ರೂಲ್ಸ್) ಮನನ ಮಾಡಿಕೊಳ್ಳಿ. ಇನ್ನೊಬ್ಬರ ಅಭಿಪ್ರಾಯವು ನಿಮಗೆ ತರ್ಕಬಾಹಿರ, ಅಸಂಗತ, ಅಸಮಂಜಸ, ವಿವೇಕರಹಿತವಾದದ್ದು, ನ್ಯಾಯಸಮ್ಮತವಲ್ಲದ್ದು ಅನ್ನಿಸಿದರೆ ಈ ಮೂಲಸೂತ್ರಗಳನ್ನು ಅನುಷ್ಠಾನಗೊಳಿಸಲು ಆರಂಭದಲ್ಲಿ ಕಷ್ಟವಾಗುತ್ತದೆ. ಆ ಇನ್ನೊಬ್ಬರ ಸ್ಥಿತಿಯೂ ಇಂತೆಯೇ ಇರುತ್ತದೆ ಅನ್ನುವ ತಥ್ಯವನ್ನು ನೆನಪಿಸಿಕೊಂಡು ಪ್ರಯತ್ನಿಸಿ.
‘ನ್ಯಾಯ ಸಮ್ಮತವಾಗಿ ಜಗಳ ಆಡುವುದು’ - ಮೂಲ ಸೂತ್ರಗಳು ಇಂತಿವೆ:
೧. ಪ್ರಶಾಂತತೆಯನ್ನು ಕಾಯ್ದುಕೊಳ್ಳಬೇಕು. ವಾದ ಮಾಡುವಾಗ ಭಾವೋದ್ರೇಕಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಆವಶ್ಯಕತೆಗಿಂತ ಹೆಚ್ಚು ಪ್ರತಿಕ್ರಿಯಿಸಲೂ ಕೂಡದು. ಇನ್ನೊಬ್ಬರು ಹೇಳುವುದನ್ನು ಗಮನವಿಟ್ಟು ನೀವು ತಾಳ್ಮೆಯಿಂದ ಕೇಳಿದರೆ ಇತರರೂ ನಿಮ್ಮ ಅಭಿಪ್ರಾಯದ ಕುರಿತು ಪರ್ಯಾಲೋಚಿಸುವ ಸಾಧ್ಯತೆ ಹೆಚ್ಚು. ಪ್ರತಿಕ್ರಿಯಿಸುವ ಮುನ್ನ ತುಸು ಆಲೋಚಿಸಿ - ‘ಇನ್ನೊಬ್ಬರಿಂದ ನಾನು ನಿರೀಕ್ಷಿಸುತ್ತಿರುವುದು ಏನು? ನಿಜವಾಗಿ ನನ್ನನ್ನು ಕಾಡುತ್ತಿರುವುದೇನು? ನನ್ನ ಭಾವನೆಗಳು ವಿವಾದಾಂಶಕ್ಕೆ ತಕ್ಕುದಾಗಿವೆಯೇ?’. ಅನೇಕ ಸನ್ನಿವೇಶಗಳಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾದ ವಿವಾದಾಂಶದ ಪ್ರಾಮುಖ್ಯಕ್ಕಿಂತ ಸ್ವಪ್ರತಿಷ್ಠೆಯನ್ನು ಕಾಯ್ದುಕೊಳ್ಳುವುದೇ ಪ್ರಮುಖವಾಗಿರುತ್ತದೆ. ‘ಪ್ರಜಾಪ್ರಭುತ್ವ’ ಅನ್ನುವ ಪರಿಕಲ್ಪನೆಯೇ ಪರಕೀಯವಾಗಿರುವ ಭಾರತೀಯ ಕುಟುಂಬಗಳಲ್ಲಿ, ಜಾತ್ಯಾಧಾರಿತ ಶ್ರೇಣೀಕೃತ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವಪ್ರತಿಷ್ಠೆಯನ್ನು ಮೆಟ್ಟಿ ನಿಲ್ಲುವುದು ಸುಲಭವಲ್ಲ ಅನ್ನುವ ಅರಿವು ಸದಾ ಜಾಗೃತವಾಗಿರಲಿ. ಸಂಬಂಧಿಸಿದ ಎಲ್ಲರಿಗೂ ತೃಪ್ತಿನೀಡುವ ರೀತಿಯಲ್ಲಿ ಮನಸ್ತಾಪ ಬಗೆಹರಿಸುವುದು ಗುರಿಯಾಗಿರಬೇಕೇ ವಿನಾ ‘ನಾನು ಗೆಲ್ಲಲೇ ಬೇಕು’ ಅಲ್ಲ.
೨. ಭಾವನೆಗಳ ಅಭಿವ್ಯಕ್ತಿಗೆ ಪದಗಳನ್ನೇ ಉಪಯೋಗಿಸಬೇಕು, ದೇಹಭಾಷೆಯನ್ನಲ್ಲ. ಅನೇಕ ಸಂದರ್ಭಗಳಲ್ಲಿ ದೈಹಿಕವಾಗಿ ಆಕ್ರಮಣ ಮಾಡಿಬಿಡೋಣ ಅನ್ನುವಷ್ಟು ಸಿಟ್ಟು ಬರಬಹುದು. ಆ ಸಿಟ್ಟು ದೇಹಭಾಷೆಯ ಮುಖೇನ ಪ್ರಕಟವಾಗುವುದು ಖಚಿತ. ತತ್ಪರಿಣಾಮವಾಗಿ ಉಳಿದವರು ಸ್ವರಕ್ಷಣೆಯ ನಿಲುವು ತಳೆಯುವುದರಿಂದ ಮನಸ್ತಾಪ ಬಗೆಹರಿಯುವ ಸಾಧ್ಯತೆ ಕಡಿಮೆ.. ಇಂಥ ಸನ್ನಿವೇಶಗಳಲ್ಲಿ ಬೇರೆ ಏನನ್ನಾದರೂ ಮಾಡುವುದರ ಮುಖೇನ ಪ್ರಶಾಂತ ಸ್ಥಿತಿಗೆ ಮರಳಿದ ಬಳಿಕವೇ ಮುಂದಿನ ಹೆಜ್ಜೆ ಇಡಬೇಕು. ಭಾವನೆಗಳನ್ನು ಪ್ರಕಟಿಸಲೇ ಬೇಕೆಂದಿದ್ದರೆ ‘ನನಗೆ ಕೋಪ ಬರಲು ನೀನೇ ಕಾರಣ’, ‘ನೀನು ಇಂತು ಮಾಡಿದಾಗಲೆಲಲ್ಲ ನನಗೆ ನೋವಾಗುತ್ತದೆ’ ಇವೇ ಮೊದಲಾದ ‘ನೀನೇ ಕಾರಣ’ ಪ್ರಧಾನವಾದ ಹೇಳಿಕೆಗಳ ಬದಲು ‘ಇಂತಾದಾಗ ನನಗೆ ಕೋಪ ಬರುತ್ತದೆ/ನೋವಾಗುತ್ತದೆ ಇವೇ ಮೊದಲಾದ ‘ನಾನು/ನನಗೆ’ ಪ್ರಧಾನವಾದ ಹೇಳಿಕೆಗಳನ್ನು ಪ್ರಯೋಗಿಸಿ.
೩. ನೀವೇಕೆ ‘ತಲೆ ಬಿಸಿ’ ಮಾಡಿಕೊಂಡಿದ್ದೀರಿ ಎಂಬುದನ್ನು ನಿಷ್ಕೃಷ್ಟವಾಗಿ ಹೇಳಿ. ಅಸ್ಪಷ್ಟ ಹೇಳಿಕೆಗಳೂ ದೂರುಗಳೂ ‘ಮಾತಿಗೆ ಮಾತು’ ಬೆಳೆಯಲು ಕಾರಣವಾಗಿ ಪರಿಸ್ಥಿತಿ ಇನ್ನೂ ಬಿಗಡಾಯಿಸುವಂತೆ ಮಾಡುತ್ತವೆ. ವಾದ ಮಾಡಿ ಕನಿಷ್ಠ ಪಕ್ಷ ಏನು ಸಾಧಿಸಬೇಕೆಂದುಕೊಂಡಿದ್ದೀರಿ ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರಬೇಕು. ನಿಮ್ಮ ಸಮಸ್ಯೆ ಏನು ಎಂಬುದನ್ನು ಹೇಳುವಾಗ ತಥ್ಯಗಳನ್ನು ಮಾತ್ರ ಹೇಳಬೇಕು. ಇಂತಿದ್ದರೆ ಮಾತ್ರ ಸರ್ವಸಮ್ಮತ ಒಮ್ಮತಕ್ಕೆ ಬರಲು ಸಾಧ್ಯ
೪. ಒಂದು ಸರ್ತಿಗೆ ಒಂದು ವಿವಾದಾಂಶದ ಕುರಿತು ಮಾತ್ರ ವಾದ ಮಾಡಬೇಕು. ಏಕಕಾಲದಲ್ಲಿ ಅನೇಕ ವಿವಾದಾಂಶಗಳನ್ನೇ ಆಗಲಿ ‘ದೂರು’ಗಳನ್ನೇ ಆಗಲಿ ಬಗೆಹರಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯಕೂಡದು. ಬಹುಮಂದಿ ತಮ್ಮ ವಾದವೇ ಸರಿ ಎಂಬುದನ್ನು ಸಾಬೀತು ಪಡಿಸುವ ಭರದಲ್ಲಿ ವಿಭಿನ್ನ ವಿವಾದಾಂಶಗಳನ್ನೂ ಪ್ರತಿವಾದಿಯ ಕುರಿತು ಅನೇಕ ದೂರುಗಳನ್ನೂ ಏಕಕಾಲದಲ್ಲಿ ಉಲ್ಲೇಖಿಸುವುದರಿಂದ ‘ಮಾತು ಎಲ್ಲಿಂದ ಎಲ್ಲಿಗೋ ಹೋಗಿ’ ಒಟ್ಟಾರೆ ‘ಮಾತುಕತೆ’ ಮುರಿದು ಬೀಳುತ್ತದೆ.
೫. ‘ಎದುರಾಳಿಯ’ ಮನಸ್ಸಿಗೆ ಘಾಸಿ ಉಂಟು ಮಾಡಬಾರದು. ಚರ್ಚೆಯ ಅವಧಿಯಲ್ಲಿ ವೈಯಕ್ತಿಕ ದೌರ್ಬಲ್ಯಗಳನ್ನು ಉಲ್ಲೇಖಿಸಿ ಹಿಯ್ಯಾಳಿಸುವುದು (ಉದಾ: ಈ ಕೆಲಸ ನಿನ್ನಂಥ ಹೇಡಿಗಳಿಂದ ಸಾಧ್ಯವಿಲ್ಲ), ಸಾರ್ವತ್ರೀಕರಿಸುವುದು ಅಥವ ಉತ್ಪ್ರೇಕ್ಷಿಸುವುದು (ಉದಾ: ಎಂದೆಂದಿಗೂ ಇಲ್ಲ, ಯಾವತ್ತೂ ಆಗಲಾರದು ಇವೇ ಮೊದಲಾದ ಪದಗಳನ್ನುಳ್ಳ ಹೇಳಿಕೆಗಳು), ಇದ್ದಕ್ಕಿದ್ದಂತೆ ಮುನಿಸಿಕೊಂಡು ಮೌನಿಯಾಗುವುದು, ಇನ್ನೊಬ್ಬರನ್ನು ದೂಷಿಸುವುದು ಿವೇ ಮೊದಲಾದವು ‘ಎದುರಾಳಿ’ಯ ಮನಸ್ಸನ್ನು ನೋಯಿಸುತ್ತವೆ. ಆದ್ದರಿಂದ ಇವು ‘ಮಾತುಕತೆ’ ವಿಫಲವಾಗುವಂತೆ ಮಾಡುತ್ತವೆ.
೬. ಚರ್ಚೆಯ ಅವಧಿಯಲ್ಲಿ ಅನುಸರಿಸಲೇ ಬೇಕಾದ ಮೂಲ ನಿಯಮಗಳನ್ನು ವಾದಿ-ಪ್ರತಿವಾದಿಗಳು ಮೊದಲೇ ನಿರ್ಧರಿಸಿರಬೇಕು. ಇಡೀ ಕಸರತ್ತಿನ ಪ್ರಧಾನ ಉದ್ದೇಶ ‘ಮನಸ್ತಾಪ’ವನ್ನು ಬಗೆಹರಿಸುವುದು ಆಗಿರುವುದರಿಂದ ‘ಮಾತುಕತೆ’ ಮುರಿದು ಬೀಳುವುದನ್ನು ಇದು ತಡೆಗಟ್ಟುತ್ತದೆ. ‘
ಗಮನಿಸಿ: ವಾದಿ-ಪ್ರತಿವಾದಿ’ಗಳು ‘ಒಪ್ಪಂದ’ ಮಾಡಿಕೊಳ್ಳಲು ಸಿದ್ಧರಿದ್ದರೆ ಮಾತ್ರ ಈ ಕಸರತ್ತು ಅಪೇಕ್ಷಿತ ಫಲ ನೀಡುತ್ತದೆ
No comments:
Post a Comment