Pages

17 July 2013

ತಂತಾನೇ ಮೂಡುವ ಋಣಾತ್ಮಕ ಆಲೋಚನೆಗಳು - ನಮ್ಮನ್ನು ನಾಶ ಮಾಡಬಲ್ಲ ‘ಗೆದ್ದಲುಹುಳು’ಗಳು

ನನ್ನ ಅದೃಷ್ಟವೇ ಚೆನ್ನಾಗಿಲ್ಲ. ಯಾಕೋ ಗೊತ್ತಿಲ್ಲ, ನಾನು ಕೈಹಾಕಿದ ಯಾವ ಕೆಲಸವೂ ಒಂದೇ ಬಾರಿಗೆ ಸರಿಯಾದದ್ದಿಲ್ಲ’, ‘ಅದಾ, ಅದು ನನ್ನ ಕೈಲಾಗೋ ಕೆಲಸ ಅಲ್ಲ ಅಂತ ನನಗೆ ಗೊತ್ತು’, ‘ಅಷ್ಟು ಬುದ್ಧಿವಂತ ನಾನಲ್ಲ’, ‘ನಾನು ಏನೇ ಮಾಡಿದರೂ ಈ ಬೊಜ್ಜು ಕರಗೋದಿಲ್ಲ’, ‘ನನ್ನ ಮಾತನ್ನು ನೀವು ಕೇಳ್ಸಿಕೊಳ್ಳೊದೇ ಇಲ್ಲ’, ‘ನನ್ನ ಕಷ್ಟಕಾಲದಲ್ಲಿ ನನ್ನ ಬೆಂಬಲಕ್ಕೆ ನಿಲ್ಲುವವರು ಯಾರೂ ಇಲ್ಲ’, ‘ಛೆ, ನಾನು ಹಾಗೆ ಮಾಡಬಾರದಿತ್ತು. ನನ್ನನ್ನು ನಾನೇ ಕ್ಷಮಿಸೋದಕ್ಕೆ ಆಗೋದಿಲ್ಲ’, ‘ಅವರಿಗೆ ನನ್ನ ಕಂಡರೆ ಆಗೋದಿಲ್ಲ’, ‘ಈ ವೃತ್ತಿಯಲ್ಲಿ ಹುಡುಕಿದರೂ ಒಂದು ಒಳ್ಳೆಯ ಅಂಶ ಸಿಕ್ಕೋದಿಲ್ಲ’, ‘ನಾನು ಜನ್ಮತಃ ಮುಂಗೋಪಿ’, ‘ಬಹುಶಃ ನಾನು ಇಲ್ಲಿಗೆ ಬರಬಾರದಿತ್ತೋ ಏನೋ. ಅದಕ್ಕೇ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ’, ‘ನಾನು ಯಾವಾಗಲೂ ಒಂಟಿ’, ‘ನಾನು ಎಂದೂ ಯಾವ ಕಾರ್ಯವನ್ನೂ ಸರಿಯಾಗಿ ಮಾಡಲಾಗಿಲ್ಲ’, ‘ಮೇಲಧಿಕಾರಿಗಳು ನನಗೆ ಅನೇಕ ತಪ್ಪುಗಳಿದ್ದರೂ ಮೊದಲ ಪ್ರಯತ್ನವಾದ್ದರಿಂದ ಕ್ಷಮ್ಯಅಂದರು. ಇದರ ಅರ್ಥ ಅವರಿಗೆ ನಾನು ನಿಷ್ಪ್ರಯೋಜಕ ಅಂದನ್ನಿಸಿದೆ’, ‘ನಿಗದಿತ ಸಮಯದಲ್ಲಿ ಈ ಕೆಲಸ ಮಾಡುವುದು ಕಷ್ಟವಾದ್ದರಿಂದ ಆರಂಭಿಸದಿರುವುದೇ ಉತ್ತಮ’, ‘ಅವರು ನನ್ನನ್ನು ಕಂಡಾಗ ಮುಗುಳ್ನಗಲೂ ಇಲ್ಲ. ಬಹುಶಃ ಅವರಿಗೆ ನನ್ನನ್ನು ಕಂಡರೆ ಆಗುವುದಿಲ್ಲ’, ‘ಇತರರು ನನ್ನನ್ನು ನೋಡಿ ನಗಬಹುದು. ಆದ್ದರಿಂದ ಸುಮ್ಮನಿರುವುದು ಒಳ್ಳೆಯದು’, ‘ನಾನು ಇರುವುದೇ ಹೀಗೆ, ನಾನು ಬದಲಾಗಲು ಸಾಧ್ಯವೇ ಇಲ್ಲ’  – ನಿಮ್ಮ ಕುರಿತಾದ ಇಂಥ ಋಣಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಪದೇಪದೇ ತಂತಾನೇ ಮೂಡಿ ನಿಮ್ಮನ್ನು ಕಾಡುತ್ತವೆಯೇ? ನಿಮ್ಮ ಉತ್ತರ ಹೌದುಎಂದಾಗಿದ್ದರೆ ತಡಮಾಡದೆ ಅವು ನಿಮ್ಮನ್ನು ಕಾಡದಂತೆ ಯುಕ್ತ ಕ್ರಮ ಕೈಗೊಳ್ಳಿ. ಇಲ್ಲದೇ ಇದ್ದರೆ ಗೆದ್ದಲು ಹುಳು ಮರವನ್ನು ಒಳಗಿನಿಂದಲೇ ತಿಂದು ನಾಶಮಾಡುವಂತೆ ಈ ಋಣಾತ್ಮಕ ಆಲೋಚನೆಗಳು ಖಿನ್ನತೆ ಮಾತ್ತು ಮಾನಸಿಕ ತುಯ್ತಕ್ಕೆ ಕಾರಣವಾಗುವುದರಿಂದ ನಿಮ್ಮ ಮನಃ ಸ್ವಾಸ್ಥ್ಯವನ್ನೂ ದೈಹಿಕ ಸ್ವಾಸ್ಥ್ಯವನ್ನೂ ನಿಧಾನವಾಗಿ ನಾಶಮಾಡುತ್ತವೆ. ಇಂತಾಗುವುದರಿಂದ ತಪ್ಪಿಸಿಕೊಳ್ಳುವುದು ಹೇಗೆ?
೧. ನಿಮ್ಮ ಆಲೋಚನೆಗಳ ಪೈಕಿ ಋಣಾತ್ಮಕವಾದವನ್ನು ಗುರುತಿಸಲು ಕಲಿಯಿರಿ. ನಿಮ್ಮ ಆಲೋಚನೆಗಳನ್ನು ಅರ್ಥಾತ್, ನಿಮ್ಮ ಒಳಧ್ವನಿ ಏನು ಹೇಳುತ್ತಿದೆ ಎಂಬುದನ್ನು ಗಮನಿಸಲು ಆರಂಭಿಸಿ. ಬಹಳಷ್ಟು ಸಂದರ್ಭಗಳಲ್ಲಿ ಇವು ಋಣಾತ್ಮಕವಾಗಿರುತ್ತವೆಯೇ ಅಥವ ಧನಾತ್ಮಕವಾಗಿರುತ್ತವೆಯೇ ಎಂಬುದನ್ನು ನೀವೇ ನಿರ್ಧರಿಸಿ. ಈ ಕಾರ್ಯಕ್ಕೆ ನೆರವು ನೀಡುವ ಮಾಹಿತಿ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಚೌಕಟ್ಟಿನೊಳಗಿದೆ, ಪರಿಶೀಲಿಸಿ.
೨. ಋಣಾತ್ಮಕ ಆಲೋಚನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಧನಾತ್ಮಕವಾಗಿ ಬದಲಾಗುವ ಪಣ ತೊಡಿ. ಕನ್ನಡಿಯ ಮುಂದೆ ನಿಂತು ನಿಮ್ಮ ಕಣ್ಣಿನ ಬಿಂಬವನ್ನೇ ದಿಟ್ಟಿಸಿ ನೋಡುತ್ತಾ ಇಂತು ಮಾಡುವುದು ಬಲು ಒಳ್ಳೆಯದು. ಋಣಾತ್ಮಕ ಆಲೋಚನೆಗಳು ಮೂಡದೇ ಇರುವ ಸ್ಥಿತಿ ಅತ್ಯುತ್ತಮವಾದದ್ದಾದರೂ ಅದನ್ನು ಸಾಧಿಸುವುದು ಬಲು ಕಷ್ಟ. ಎಷ್ಟೇ ಪ್ರಯತ್ನಿಸಿದರೂ ಆಗೊಮ್ಮೆ ಈಗೊಮ್ಮೆ ಋಣಾತ್ಮಕ ಆಲೋಚನೆ ಮೂಡಬಹುದು. ಅಂತಾದಾಗ ಅದನ್ನು ನಿರ್ಲಕ್ಷಿಸಿ ಮುಂದುವರಿಯುವುದನ್ನು ಎಲ್ಲರೂ ಅಭ್ಯಸಿಸಬಹುದು
೩. ಋಣಾತ್ಮಕ ಆಲೋಚನೆ ಮೂಡುವಾಗ ಅದನ್ನು ನಿರೋಧಿಸುವ ನಿರರ್ಥಕ ಪ್ರಯತ್ನ ಮಾಡಬೇಡಿ. ಅದನ್ನು ಎಷ್ಟು ಪ್ರಬಲವಾಗಿ ನಿರೋಧಿಸಲು ಪ್ರಯತ್ನಿಸುತ್ತೀರೋ ಅಷ್ಟು ಹೆಚ್ಚುಹೆಚ್ಚು ಕಾಡತೊಡಗುತ್ತದೆ. ಇದಕ್ಕೆ ಬದಲಾಗಿ ಋಣಾತ್ಮಕ ಆಲೋಚನೆ ಮೂಡಿದಾಗ ಅದನ್ನು ಭಾವನಾತ್ಮಕವಾಗಿ ಅನುಭವಿಸದೆಯೇ ಇದೊಂದು ಒಪ್ಪಿಕೊಳ್ಳಲಾಗದ ಋಣಾತ್ಮಕ ಆಲೋಚನೆಎಂದು ಅದನ್ನು ಗುರುತಿಸಿ. ಆ ಆಲೋಚನೆಯನ್ನು ನಿರ್ಲಕ್ಷಿಸಿ. ಅದರ ಗುಣಾವಗುಣಗಳ ವಿಮರ್ಶೆ ಮಾಡುವ ಗೊಡವೆಗೂ ಹೋಗಬೇಡಿ. ಇಂತು ಮಾಡುವುದು ಆರಂಭದಲ್ಲಿ ತುಸು ಕಷ್ಟವಾಗಬಹುದು. ಅಂಥ ಸಂದರ್ಭದಲ್ಲಿ ಆ ಅಲೋಚನೆಯನ್ನು ಒಂದು ಕಾಗದದಲ್ಲಿ ಬರೆದು ಬಿಸಾಕಿದಂತೆ ಕಲ್ಪಿಸಿಕೊಳ್ಳಿ ಅಥವ ನಿಜವಾಗಿ ಬರೆದು ಇದೊಂದು ಬೇಡದ ಕಸಅಂದುಕೊಂಡು ಬಿಸಾಡಿ. ಆರಂಭದಲ್ಲಿ ಇದೊಂದು ಹಾಸ್ಯಾಸ್ಪದ ಕ್ರಿಯೆ ಅನ್ನಿಸಬಹುದು. ಆದರೂ ಮಾಡಿ. ಛಲ ಬಿಡದೆ ತಾಳ್ಮೆಯಿಂದ ಇಂತು ಮಾಡುತ್ತಿದ್ದರೆ ಕ್ರಮೇಣ ಋಣಾತ್ಮಕ ಆಲೋಚನೆ ಮೂಡಿದ ತಕ್ಷಣ ಅದನ್ನು ಗುರುತಿಸಿ  ಮಾನಸಿಕವಾಗಿಯೇ ನಿರ್ಲಕ್ಷಿಸುವ ಕುಶಲತೆ ಸಿದ್ಧಿಸುತ್ತದೆ. ಗಮನಿಸಿ: ಋಣಾತ್ಮಕ ಆಲೋಚನೆ ಮೂಡಿದ ತಕ್ಷಣವೇ ಭಾವನಾತ್ಮಕವಾಗಿ ಅದರಲ್ಲಿ ತಲ್ಲೀನರಾಗದೆಯೆ ಅದನ್ನು ಗುರುತಿಸಬೇಕಾದದ್ದು ಬಲು ಮುಖ್ಯ. ಇಂತು ಮಾಡದೇ ಇದ್ದರೆ ಆ ಆಲೋಚನೆಯೇ ನಿಮ್ಮ ಮುಂದಿನ ವರ್ತನೆಯನ್ನು ನಿರ್ಧರಿಸುತ್ತದೆ.
೪. ಋಣಾತ್ಮಕ ಆಲೋಚನೆಯನ್ನು ಗುರುತಿಸಿ ನಿರ್ಲಕ್ಷಿಸಿದ ನಂತರ ಅದರ ಸ್ಥಾನದಲ್ಲಿ ಯುಕ್ತ ಧನಾತ್ಮಕ ಆಲೋಚನೆಯೊಂದನ್ನು ಸ್ಥಾಪಿಸಿ. ಅದರ ಮೇಲೆ ಅವಧಾನವನ್ನು ಕೇಂದ್ರೀಕರಿಸಿ. ಯಾವುದು ಯುಕ್ತಅನ್ನುವುದು ವ್ಯಕ್ತಿನಿಷ್ಠ ವಿಷಯ. ಯಾವುದು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ ಹಿತಕರ ಭಾವನೆಯನ್ನು ಉದ್ದೀಪಿಸುತ್ತದೆಯೋ ಅದೇ ಯುಕ್ತ ಧನಾತ್ಮಕ ಆಲೋಚನೆ. ವಾಸ್ತವವಾಗಿ ಮೂಡಿರುವ ಋಣಾತ್ಮಕ ಆಲೋಚನೆಯನ್ನು ಮನಸ್ಸಿನಿಂದ ಸಂಪೂರ್ಣವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ.  ಅದರ ಮೇಲೆ ಗಮನ ಕೇಂದ್ರೀಕರಿಸುವುದಕ್ಕೆ ಬದಲಾಗಿ ನಾವೇ ಸೃಷ್ಟಿಸಿದ ಧನಾತ್ಮಕ ಆಲೋಚನೆಯ ಮೇಲೆ ಗಮನ ಕೇಂದ್ರೀಕರಿಸುವುದರ ಮುಖೇನ ಋಣಾತ್ಮಕ ಆಲೋಚನೆಯು ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರದಂತೆ ಮಾಡುವ ತಂತ್ರ ಇದು. ಉದಾಹರಣೆಗೆ, “ಅಯ್ಯೋ ದೇವರೆ, ಈ ಸಮಸ್ಯೆಯನ್ನು ಪರಿಹರಿಸಲು ನನ್ನಿಂದಾಗದಿದ್ದರೆ ನೋವು ಅನುಭವಿಸುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯಅಂದುಕೊಂಡು ನರಳುವುದಕ್ಕೆ ಬದಲಾಗಿ ಈ ಕಠಿನ ಸಮಸ್ಯೆ ಎದುರಾದದ್ದರಿಂದ ನಾನು ಮಾನಸಿಕವಾಗಿ ಇನ್ನೂ ಗಟ್ಟಿಯಾಗುವುದರೊಂದಿಗೆ ಹೊಸತನ್ನು ಕಲಿಯುವಂತಾಯಿತುಅಂದುಕೊಂಡು ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿ ತಲ್ಲೀನರಾಗಬಹುದಲ್ಲವೆ? ಧನಾತ್ಮಕ ಆಲೋಚನೆಗಳನ್ನು ಸೃಷ್ಟಿಸಲು ನೆರವು ನೀಡಬಲ್ಲ ಮಾಹಿತಿ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಚೌಕಟ್ಟಿನೊಳಗಿದೆ, ಪರಿಶೀಲಿಸಿ. ಧನಾತ್ಮಕ ಆಲೋಚನೆಗಳನ್ನು ಸೃಷ್ಟಿಸಲು ದಿನಕ್ಕೊಂದು ಸ್ಫೂರ್ತಿದಾಯಕ ಉಕ್ತಿಗಳನ್ನು (ಇನ್ಸ್ಪಿರೇಷನಲ್ ಕ್ವೋಟ್ಸ್) ಓದಿ ಮೆಲುಕು ಹಾಕುವ ಅಭ್ಯಾಸವೂ ನೆರವಾಗುತ್ತದೆ.
೫. ಕೆಲವು ಸನ್ನಿವೇಶಗಳಲ್ಲಿ ಋಣಾತ್ಮಕ ಆಲೋಚನೆಯನ್ನು ನಿರ್ಲಕ್ಷಿಸುವುದು ಮತ್ತು ಧನಾತ್ಮಕ ಆಲೋಚನೆಯನ್ನು ಸೃಷ್ಟಿಸುವುದು ಬಲು ಕಷ್ಟವಾಗಬಹುದು. ಅಂತಹ ಸನ್ನಿವೇಶಗಳಲ್ಲಿ ನಿಮ್ಮದೇ ಆದ ವಿಧಾನಗಳನ್ನು ಪ್ರಯೋಗಿಸಿ ಋಣಾತ್ಮಕ ಆಲೋಚನೆಯಿಂದ ಗಮನವನ್ನು ಬೇರೆ ಯಾವುದಕ್ಕಾದರೂ ಹರಿಸಿ. ಕೆಲವು ಸಂದರ್ಭಗಳಲ್ಲಿ ಯುಕ್ತ ಧನಾತ್ಮಕ ಆಲೋಚನೆಗಳನ್ನು ಸೃಷ್ಟಿಸುವುದಕ್ಕಿಂತ ಇದೇ ಸುಲಭವಾಗುತ್ತದೆ. ಇಂತು ಮಾಡುವಾಗಲೂ ಋಣಾತ್ಮಕ ಆಲೋಚನೆಯನ್ನು ನಿರೋಧಿಸುವ, ಪ್ರತಿರೋಧಿಸುವ ಪ್ರಯತ್ನ ಮಾಡುವುದಿಲ್ಲ. ಋಣಾತ್ಮಕ ಆಲೋಚನೆ ಸೃಷ್ಟಿಸಿದ ಮನಃಕ್ಷೋಭೆ ಮಾಯವಾದ ಬಳಿಕ ೪ ರಲ್ಲಿ ವಿವರಿಸಿದಂತೆ ಯುಕ್ತ ಧನಾತ್ಮಕ ಆಲೋಚನೆಯೊದನ್ನು ಸೃಷ್ಟಿಸಿ.
೬. ಅಂತಿಮವಾಗಿ, ಧನಾತ್ಮಕ ಆಲೋಚನೆಯೊಂದಿಗೆ ಸಮಸ್ಯೆ ಪರಿಹರಿಸಲು ಕಾರ್ಯೋನ್ಮುಖರಾಗಿ. ಪ್ರತೀ ಸಮಸ್ಯೆಗೆ ಒಂದು ಪರಿಹಾರ ಇದ್ದೇ ಇರುತ್ತದೆ. ಬಹುಮಂದಿ ಸಮಸ್ಯೆಯನ್ನು ಪರಿಹರಿಸುವ ಕುರಿತು ಆಲೋಚಿಸುವ ಬದಲು ಸಮಸ್ಯೆಯ ತೀವ್ರತೆ, ಅಗಾಧತೆ ಇವೇ ಮೊದಲಾದವುಗಳ ಕುರಿತು ಆಲೋಚಿಸುತ್ತಾರೆ. ಇಂತು ಮಾಡಿದಾಗಲೇ ಋಣಾತ್ಮಕ ಆಲೋಚನೆಗಳು ಬರಲಾರಂಭಿಸುತ್ತವೆ. ಅರ್ಥಾತ್, ನಿಮ್ಮ ಅವಧಾನವನ್ನು ಪರಿಹಾರೋಪಾಯಗಳ ಮೇಲೆ ನಾಭಿಸ್ಥಗೊಳಿಸಿ, ಸಮಸ್ಯೆಯ ಮೇಲೆ ಅಲ್ಲ. ಸಮಸ್ಯೆಗಳು ಉದ್ಭವಿಸಲು ಕಾರಣರು ನಾವಲ್ಲ ಎಂಬುದೇ ಬಹುಮಂದಿಯ ನಂಬಿಕೆ. ತತ್ಪರಿಣಾಮವಾಗಿ, ಸಮಸ್ಯೆಗೆ ಏಕೆ, ಹೇಗೆ, ಯಾರು ಕಾರಣರು ಎಂಬುದೇ ಅವಧಾನದ ನಾಭಿ ಆಗುವುದರಿಂದ ಋಣಾತ್ಮಕ ಆಲೋಚನೆಗಳು ಮೂಡುತ್ತವೆ. ತತ್ಪರಿಣಾಮವಾಗಿ ಸಮಸ್ಯೆಯನ್ನು ಪರಿಹರಿಸುವ ಸಾಧ್ಯತೆ ಕ್ಷೀಣಿಸುತ್ತದೆ. ಈ ಸಮಸ್ಯೆಯ ಸೃಷ್ಟಿಕರ್ತ ನಾನೇಎಂಬುದನ್ನೇ ಆಧಾರವಾಕ್ಯವಾಗಿ ಇರಿಸಿಕೊಳ್ಳಿ. ಇದನ್ನು ನಾನು ಪರಿಹರಿಸಬಲ್ಲೆಎಂಬ ನಂಬಿಕೆಯೊಂದಿಗೆ ಕಾರ್ಯೋನ್ಮುಖರಾಗಿ, ಪರಿಹಾರ ಸಿಕ್ಕುತ್ತದೆ.
೭. ನಿಮ್ಮ ಸುತ್ತಲಿನ ಪ್ರಪಂಚದಲ್ಲಿ ಧನಾತ್ಮಕವಾದದ್ದನ್ನು ಹೆಚ್ಚು ವೀಕ್ಷಿಸಿ. ಅವುಗಳ ಕುರಿತು ಮನಸ್ಸಿನಲ್ಲಿಯೇ ಮೆಲುಕು ಹಾಕಿ. ಋಣಾತ್ಮಕವಾದದ್ದು ಗೋಚರಿಸಿದಾಗ ಅದನ್ನು ನಿರ್ಲಕ್ಷಿಸ ಬೇಕು ಅಥವ (ನಿಮ್ಮಿಂದ ಸಾಧ್ಯವಾಗುವಂತಿದ್ದರೆ) ಅದನ್ನು ನಿವಾರಿಸುವುದು ಹೇಗೆಂಬುದರ ಕುರಿತು ಆಲೋಚಿಸಿ, ಅದರ ಕುರಿತು ಭಾವನಾತ್ಮಕವಾಗಿ ಆಲೋಚಿಸದಿರಿ.
೮. ನಿರಾಶಾವಾದಿಗಳು, ಎಲ್ಲದರಲ್ಲಿಯೂ ದೋಷವನ್ನೇ ಕಾಣುವವರು, ಸದಾ ಋಣಾತ್ಮಕವಾಗಿಯೇ ಆಲೋಚಿಸುವವರು ಇವರೇ ಮೊದಲಾದವರಿಂದ ಸಾಧ್ಯವಿರುವಷ್ಟೂ ದೂರವಿರಿ.
೯. ಸಮಸ್ಯೆಗಳು ಎದುರಾದಾಗ ಇತರರ ನೆರವು ಅಗತ್ಯವಿದ್ದರೆ ಧನಾತ್ಮಕ ವ್ಯಕ್ತಿಗಳ ಅಥವ ಆಶಾವಾದಿಗಳ ನೆರವನ್ನೇ ಪಡೆಯಲು ಪ್ರಯತ್ನಿಸಿ. ದಿನಕ್ಕೊಂದು ಸ್ಫೂರ್ತಿದಾಯಕ ಉಕ್ತಿಗಳನ್ನು (ಇನ್ಸ್ಪಿರೇಷನಲ್ ಕ್ವೋಟ್ಸ್) ಓದಿ ಮೆಲುಕು ಹಾಕಲು ಮರೆಯದಿರಿ
[ಗಮನಿಸಿ: ಅಪರೂಪಕ್ಕೊಮ್ಮೆ ಋಣಾತ್ಮಕ ಅಲೋಚನೆ ಬರುವುದು ಸ್ವಾಭಾವಿಕ. ಅದು ನಮ್ಮ ವರ್ತನೆಯನ್ನು ಪ್ರಭಾವಿಸದಂತೆ ಎಚ್ಚರವಹಿಸಿದರೆ ಸಾಕು. ಈ ಲೇಖನ ಪದೇಪದೇ ತಂತಾನೇ ಮೂಡುವ ನಮ್ಮ ಕುರಿತಾದ ಋಣಾತ್ಮಕ ಆಲೋಚನೆಗಳ ಕುರಿತಾದದ್ದು]
ಋಣಾತ್ಮಕ ಆಲೋಚನೆಗಳನ್ನು ಗುರುತಿಸಲು ನೆರವಾಗುವ ಮಾಹಿತಿ
ಒಂದು ತಪ್ಪು ಮಾಡಿದರೆ ಯಾವಾಗಲೂ ತಪ್ಪು ಮಾಡುತ್ತೇನೆ ಅಂದುಕೊಳ್ಳುವುದು. ಋಣಾತ್ಮಕ ಹೇಳಿಕೆಗಳಲ್ಲಿ ಯಾವಾಗಲೂ’, ‘ಎಂದೆಂದಿಗೂ’, ‘ಪ್ರತೀ ಸಲ’, ‘ಪ್ರತಿಯೊಬ್ಬರೂ’ – ಈ ಪದಗಳನ್ನು ಪ್ರಯೋಗಿಸುವುದು. ವಿದ್ಯಮಾನಗಳಲ್ಲಿ ಇರುವ ಧನಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ ಋಣಾತ್ಮಕ ಅಂಶಗಳನ್ನೇ ಮಾನಸಿಕವಾಗಿ ಮೆಲುಕು ಹಾಕುವುದು. ಭಾವನಾತ್ಮಕವಾಗಿ ಆಲೋಚಿಸುವುದು ಅಥವ ಆಲೋಚಿಸುವಾಗ ಭಾವನೆಗಳಿಗೆ ಪ್ರಾಧಾನ್ಯ ನೀಡುವುದು, ‘ಮಾಡಲೇ ಬೇಕಿತ್ತು, ಹೋಗಲೇ ಬೇಕಿತ್ತು, ಹೇಳಲೇ ಬೇಕಿತ್ತು’ – ಇಂಥ ಪದ ಪ್ರಯೋಗಗಳು (ಇವು ತಪ್ಪಿತಸ್ಥ ಪ್ರಜ್ಞೆ ಹುಟ್ಟುಹಾಕುತ್ತವೆ). ಸೋಮಾರಿ, ಅದೃಷ್ಟಹೀನ, ಚಂಚಲಚಿತ್ತ’ – ಇಂಥ ಹಣೆಪಟ್ಟಿಗಳಿಂದ ತನ್ನನ್ನು ತಾನೇ ಗುರುತಿಸಿಕೊಳ್ಳುವುದು. ಋಣಾತ್ಮಕ ಭವಿಷ್ಯವಾಣಿಗಳನ್ನೇ ಹೇಳುವುದು. ಇತರರು ತಮ್ಮ ಕುರಿತು ಋಣಾತ್ಮಕವಾಗಿ ಆಲೋಚಿಸುತ್ತಿದ್ದಾರೆ ಅಂದುಕೊಳ್ಳುವುದು. ತಾವು ಬಯಸಿದಂತೆ ಆಗದೇ ಇದ್ದಾಗ ಇತರರನ್ನು ದೂಷಿಸುವುದು/ಇತರರ ಮೇಲೆ ದೋಷಾರೋಪಣೆ ಮಾಡುವುದು.
ಧನಾತ್ಮಕ ಆಲೋಚನೆಗಳನ್ನು ಸೃಷ್ಟಿಸಲು ನೆರವು ನೀಡಬಲ್ಲ ಮಾಹಿತಿ
ಒಮ್ಮೆ ಮಾಡಿದ ತಪ್ಪನ್ನು ಇನ್ನೊಮ್ಮೆ ಮಾಡುವುದಿಲ್ಲ ಅಂದುಕೊಳ್ಳುವುದು, ‘ಯಾವಾಗಲೂ’, ‘ಎಂದೆಂದಿಗೂ’, ‘ಪ್ರತೀ ಸಲ’. ‘ಪ್ರತಿಯೊಬ್ಬರೂಇವೇ ಮೊದಲಾದ ಅತೀ ಸಾರ್ವತ್ರೀಕರಿಸಿದ ಪದಗಳನ್ನು ಪ್ರಯೋಗಿಸದೇ ಇರುವುದು. ವಿದ್ಯಮಾನಗಳಲ್ಲಿ ಇರುವ ಧನಾತ್ಮಕ (ಮತ್ತು ವಿನೋದಜನಕ) ಅಂಶಗಳನ್ನು  ಮೊದಲು ಗಮನಿಸಿ ಆನಂದಿಸುವುದು. ತರ್ಕಬದ್ಧವಾಗಿ ಆಲೋಚಿಸುವುದು (ಭಾವನೆಗಳಿಗೆ ಪ್ರಾಧಾನ್ಯ ನೀಡದಿರುವುದು). ಮಾಡಿದ ತಪ್ಪನ್ನು ಒಪ್ಪಿಕೊಂಡು ಅದನ್ನು ಸಾಧ್ಯವಿರುವಷ್ಟರ ಮಟ್ಟಿಗೆ ಸರಿಪಡಿಸುವುದು/ಅದರ ಪರಿಣಾಮಗಳನ್ನು ಸ್ವೀಕರಿಸುವುದು-ಇವೇ ಮೊದಲಾದ ಯುಕ್ತ ಕ್ರಮ ಕೈಗೊಂಡು ತಪ್ಪಿತಸ್ಥ ಪ್ರಜ್ಞೆ ಕಾಡದಂತೆ ನೋಡಿಕೊಳ್ಳುವುದು. ಋಣಾತ್ಮಕ ಭಾವನೆಗಳನ್ನು ಉದ್ದೀಪಿಸುವ ಹಣೆಪಟ್ಟಿಗಳಿಗೆ ಬದಲಾಗಿ ಯುಕ್ತ ಧನಾತ್ಮಕ ಭಾವನೆಗಳನ್ನು ಉದ್ದೀಪಿಸುವ ಹಣೆಪಟ್ಟಿಗಳನ್ನು ತನಗೆ ತಾನೇ ಅಂಟಿಸಿಕೊಳ್ಳುವುದು. ಮುಂದೆ ಏನಾಗುತ್ತದೆ ಎಂಬುದರ ಕುರಿತು ಕಾಲ್ಪನಿಕ ಭವಿಷ್ಯ ಊಹಿಸುವ ಗೊಡವೆಗೇ ಹೋಗದಿರುವುದು. ಇತರರು ತಮ್ಮ ಕುರಿತು ಏನೋ ಆಲೋಚಿಸುತ್ತಿದ್ದಾರೆ ಅನ್ನುವ ಕಲ್ಪನೆಯನ್ನು ಕಿತ್ತೊಗೆಯುವುದು. ತಾವು ಬಯಸಿದಂತೆ ಆಗದೇ ಇದ್ದಾಗ ಇತರರನ್ನು ದೂಷಿಸುವುದು/ಇತರರ ಮೇಲೆ ದೋಷಾರೋಪಣೆ ಮಾಡುವುದಕ್ಕೆ ಬದಲಾಗಿ ತಾವು ಎಲ್ಲಿ ಎಡವಿದ್ದೇವೆ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವುದು.


No comments: