Pages

17 March 2012

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೬೯

ಬಲೂನಿನೊಂದಿಗೆ  ಮನರಂಜನೆ - ೨

ಗಾಳಿ ತುಂಬಿಸಿದ ಬಲೂನಿಗೆ ಸೂಜಿ ಚುಚ್ಚಿದರೆ ಏನಾಗುತ್ತದೆ? ಇದೆಂಥ ಪ್ರಶ್ನೆ ‘ಒಡೆದು ಹೋಗುತ್ತದೆ’ ಎಂದು ಎಲ್ಲರಿಗೂ ತಿಳಿದಿದೆ ಅನ್ನುತ್ತೀರಾ? ಒಡೆದು ಹೋಗದಂತೆ ಸೂಜಿ ಚುಚ್ಚುವ ತಂತ್ರವೊಂದಿದೆ. ಆ ತಂತ್ರ ಪ್ರಯೋಗಿಸಿದರೆ ಬಲೂನು ಒಡೆದು ಹೋಗುವುದಿಲ್ಲ. ಬಲು, ಬಲು ನಿಧಾನವಾಗಿ ಗಾಳಿ ಹೊರಹೋಗುತ್ತದೆ. ರಬ್ಬರಿನ ಅಣುಗಳ ಬಂಧದ ಕುರಿತಾದ ಮಾಹಿತಿ ಇದ್ದವರು ಈ ತಂತ್ರದ ಯಶಸ್ಸಿಗೆ ವೈಜ್ಞಾನಿಕ ವಿವರಣೆ ನೀಡಬಹುದು.


ಗಾಳಿ ತುಂಬಿದ ಮಧ್ಯಮ ಅಥವ ದೊಡ್ಡ ಗಾತ್ರದ ಬಲೂನು ತೆಗೆದುಕೊಳ್ಳಿ (ಚಿತ್ರ ೧).


ಸಪುರವಾದ ಉದ್ದನೆಯ ಸೂಜಿ (ಸ್ವೆಟ್ಟರ್ ಹೆಣೆಯಲು ಉಪಯೋಗಿಸುವಂಥದ್ದು ಸಂಗ್ರಹಿಸಿ). ತೆಂಗಿನ ಗರಿಯ ಕಡ್ಡಿಯಿಂದ ಮಾಡಿದ ಪೊರಕೆಯ ನಯವಾದ ಮೊನಚಾದ ಕಡ್ಡಿಯೂ ಆದೀತು (ಚಿತ್ರ ೨)-ನಾನು ಉಪಯೋಗಿಸಿವುದು ಇದನ್ನೇ.


ಗಾಳಿ ತುಂಬಿದ ಬಲೂನಿನ ಗಂಟು ಹಾಕಿದ ಮೂತಿಯ ಬಳಿ ಕಡ್ಡಿಯ ಮೊನಚು ತುದಿಯನ್ನು ಇಟ್ಟು ಎಡಕ್ಕೂಬಲಕ್ಕೂ ಕಡ್ಡಿಯನ್ನು ತಿರುಗಿಸುತ್ತಾ ಬಲು ಜಾಗರೂಕತೆಯಿಂದ ನಿಧಾನವಾಗಿ ಒತ್ತಿದರೆ ಬಲೂನನ್ನು ಒಡೆಯದೇ ಸೂಕ್ಷ್ಮ ರಂಧ್ರ ಮಾಡಿಕೊಂಡು ಕಡ್ಡಿ ಒಳಹೋಗುತ್ತದೆ (ಚಿತ್ರ ೩).


ತದನಂತರ ನಿಧಾನವಾಗಿ ಕಡ್ಡಿಯನ್ನು ತಿರುಗಿಸುತ್ತಾ ಮೊನಚು ತುದಿ ಬಲೂನಿನ ಇನ್ನೊಂದು ತುದಿಯನ್ನು ತಲಪುವ ತನಕ ನಿಧಾನವಾಗಿ ಒಳ ತಳ್ಳಿ. ಮೊನಚು ತುದಿ ಇನ್ನೊಂದು ತುದಿಯನ್ನು ತಲುಪಿದಾಗ ಆ ತಾಣದ ಆಚೆಈಚೆ ಬೆರಳುಗಳನ್ನು ಇಟ್ಟು ಬಲೂನು ಹಿಡಿದುಕೊಂಡು ಎಡಕ್ಕೂಬಲಕ್ಕೂ ಕಡ್ಡಿಯನ್ನು ತಿರುಗಿಸುತ್ತಾ ಬಲು ಜಾಗರೂಕತೆಯಿಂದ ನಿಧಾನವಾಗಿ ಒತ್ತಿದರೆ ಬಲೂನನ್ನು ಒಡೆಯದೇ ಸೂಕ್ಷ್ಮ ರಂಧ್ರ ಮಾಡಿಕೊಂಡು ಕಡ್ಡಿ ಹೊರಬರುತ್ತದೆ (ಚಿತ್ರ ೪).


ಅಂತಿಮವಾಗಿ ನೋಡುಗನಿಗೆ ಅಚ್ಚರಿಯಾಗುವ ರೀತಿಯಲ್ಲಿ ಕಡ್ಡಿಗೆ ಬಲೂನು ಪೋಣಿಸಿದಂತೆ ಗೋಚರಿಸುತ್ತದೆ (ಚಿತ್ರ ೫).


ಬಲೂನಿನ ಗಂಟು ಹಾಕಿದ ಮೂತಿಯ ಬಳಿ ಇರುವ ಬಿಂದುಗಳಲ್ಲಿ ಮತ್ತು ಗಂಟು ಹಾಕಿದ ಮೂತಿಯ ನೇರ ವಿರುದ್ದವಾಗಿರುವ ತಾಣದ ಬಿಂದುಗಳಲ್ಲಿ ಮಾತ್ರ ಈ ತಂತ್ರ ಯಶಸ್ವಿಯಾಗುತ್ತದೆ. ಬೇರೆಡೆ ಈ ರೀತಿಯಲ್ಲಿ ಚುಚ್ಚಿದರೂ ಬಲೂನು ಒಡೆದು ಹೋಗುತ್ತದೆ. ಬೇರಡೆ ಇರುವ ಬಿಂದುಗಳಲ್ಲಿ ಬಲೂನು ಒಡೆಯದಂತೆ ಸೂಜಿ ಚುಚ್ಚಲು ಪ್ರಯೋಗಿಸಬೇಕಾದ ತಂತ್ರ ಇಂತಿದೆ - ಗಾಳಿ ತುಂಬಿದ ಮಧ್ಯಮ ಅಥವ ದೊಡ್ಡ ಗಾತ್ರದ ಬಲೂನಿನ ಮೇಲೆ ಎಲ್ಲಿ ಸೂಜಿ ಚುಚ್ಚಬೇಕಾಗಿದೆಯೋ ಅಲ್ಲಿ ಸೆಲಫೇನ್ ಟೇಪಿನ ತುಂಡೊಂದನ್ನು ಅಂಟಿಸಿ. ಇದು ಪಾರಕವಾಗಿರುವುದರಿಂದ ಅಂಟಿಸಿದ್ದು ಸುಲಭವಾಗಿ ಗೋಚರಿಸುವುದಿಲ್ಲ (ಚಿತ್ರ ೬- ಕಪ್ಪು ಗೆರೆಯಿಂದ ಗುರುತಿಸಿದ ಭಾಗದಲ್ಲಿ ಅಂಟಿಸಿದೆ).


ತದನಂತರ ಯುಕ್ತ ಗಾತ್ರದ ಸೂಜಿಯನ್ನು ಚುಚ್ಚಬೇಕಾದ ತಾಣದಿಂದ ತುಸು ದೂರದಲ್ಲಿ ಹಿಡಿದು (ಚಿತ್ರ ೭)


ಒಂದೇ ಸಲಕ್ಕೆ ಬಲೂನ್ ಒಳಕ್ಕೆ ಹೋಗುವಂತೆ ಸೆಲಫೇನ್ ಟೇಪಿನ ಮೂಲಕ ವೇಗವಾಗಿ ಜೋರಾಗಿ ಚುಚ್ಚಿ (ಚಿತ್ರ ೮, ೯).



ಹಿಂದೆ ಮಾಡಿದಂತೆ ನಿಧಾನವಾಗಿ ಚುಚ್ಚಿದರೆ ಬಲೂನು ಒಡೆಯುತ್ತದೆ. ಈ ಎರಡೂ ಚಟುವಟಿಕೆಗಳಲ್ಲಿ ಬಲೂನಿನಲ್ಲಿ ರಂಧ್ರವಾಗುವುದರಿಂದ ನಿಧಾನವಾಗಿ ಗಾಳಿ ಹೊರಹೋಗುತ್ತದಾದರೂ ಬಲೂನು ‘ಠಪ್’ ಎಂದು ಒಮ್ಮೆಲೇ ಒಡೆಯುವುದಿಲ್ಲ. ಆದ್ದರಿಂದ ಈ ಬಲೂನುಗಳನ್ನು ಪುನಃ ಉಪಯೋಗಿಸಲು ಸಾಧ್ಯವಿಲ್ಲ.

(ವಿ ಸೂ: ಅಭ್ಯಾಸವಿಲ್ಲದವರು ಮಾಡುವ ಮೊದಲ ಪ್ರಯತ್ನಗಳು ಯಶಸ್ವಿಯಾಗದೇ ಇರುವ ಸಾಧ್ಯತೆ ಇದೆ. ಎಂದೇ ೬-೭ ಬಲೂನುಗಳನ್ನು ಗಾಳಿ ತುಂಬಿಸಿ ಇಟ್ಟುಕೊಂಡಿರಿ. ಒಮ್ಮೆ ಅಭ್ಯಾಸವಾದರೆ ಬಳಿಕ ಈ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು)

No comments: