Pages

29 February 2012

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೬೪

ಹೀಗೊಂದು ಆಟ

ಬಯಲಿನಲ್ಲಿ ಒಂದೆಡೆ ನೆಲದ ಮೇಲೆ ಏನಾದರೊಂದು ಗುರುತು ಮಾಡಿ ಅದರ ಮೇಲೆ ನಿಂತುಕೊಳ್ಳಿ. ನಾಣ್ಯವೊಂದನ್ನು ಮೇಲಕ್ಕೆ ಚಿಮ್ಮಿ  ಕೆಳಗೆ ಬಿದ್ದ ನಾಣ್ಯದ ಮೇಲ್ಮುಖ  ‘ತಲೆ’ಯೋ ‘ಬಾಲ’ವೋ ಎಂಬುದನ್ನು ನೋಡಿ ತಿಳಿಸುವಂತೆ ನಿಮ್ಮ ಮಿತ್ರನಿಗೆ ಹೇಳಿ. ‘ತಲೆ’ ಆಗಿದ್ದರೆ ಬಲಕ್ಕೆ, ‘ಬಾಲ’ ಆಗಿದ್ದರೆ ಎಡಕ್ಕೆ ಸರಿಯಾಗಿ ೯೦ ಡಿಗ್ರಿ ತಿರುಗಿ ೨ ಅಡಿ ಮುಂದಕ್ಕೆ ಚಲಿಸಿ ನಿಂತುಕೊಳ್ಳಿ. ಆ ಸ್ಥಳದಲ್ಲಿ ನೀವು ನಿಂತುಕೊಂಡ ಬಳಿಕ ಪುನಃ ನಾಣ್ಯವನ್ನು ಮೇಲಕ್ಕೆ ಚಿಮ್ಮಿ  ಕೆಳಗೆ ಬಿದ್ದ ನಾಣ್ಯದ ಮೇಲ್ಮುಖ ‘ತಲೆ’ಯೋ ‘ಬಾಲ’ವೋ ಎಂಬುದನ್ನು ನೋಡಿ ತಿಳಿಸುವಂತೆ ನಿಮ್ಮ ಮಿತ್ರನಿಗೆ ಹೇಳಿ. ‘ತಲೆ’ ಆಗಿದ್ದರೆ ಬಲಕ್ಕೆ, ‘ಬಾಲ’ ಆಗಿದ್ದರೆ ಎಡಕ್ಕೆ ಸರಿಯಾಗಿ ೯೦ ಡಿಗ್ರಿ ತಿರುಗಿ ೨ ಅಡಿ ಮುಂದಕ್ಕೆ ಚಲಿಸಿ ನಿಂತುಕೊಳ್ಳಿ. ಇದೇ ರೀತಿ ಒಟ್ಟು ೧೦೦ ಬಾರಿ ಮಾಡಿ. ತದನಂತರ ನೀವು ಇರುವ ಸ್ಥಳಕ್ಕೂ ಆರಂಭದಲ್ಲಿ ಇದ್ದ ಸ್ಥಳಕ್ಕೂ ನಡುವಣ ನೇರ ಅಂತರ ಅಳೆದು ದಾಖಲಿಸಿ. ಇಷ್ಟಾದ ಬಳಿಕ ನಾಣ್ಯ ಚಿಮ್ಮುವ ಕಾರ್ಯವನ್ನು ನೀವೂ ಚಲಿಸುವ ಪಾತ್ರವನ್ನು ನಿಮ್ಮ ಮಿತ್ರನೂ ನಿರ್ವಹಿಸಿ ಫಲಿತಾಶ ದಾಖಲಿಸಿ. ನಿಮ್ಮ ಇತರ ಕೆಲವು ಮಿತ್ರರನ್ನು ಹೀಗೆಯೇ ಮಾಡುವಂತೆ ಪ್ರೇರೇಪಿಸಿ ಫಲಿತಾಶಗಳನ್ನು ದಾಖಲಿಸಿ. (ಭಾಗವಹಿಸಿದವರ ಸಂಖ್ಯೆ ಹೆಚ್ಚಿದ್ದಷ್ಟೂ ಒಳ್ಳೆಯದು. ೧೦೦ ಫಲಿತಾಶಗಳು ಇದ್ದರೆ ಉತ್ತಮ). ಎಲ್ಲ ಫಲಿತಾಂಶಗಳನ್ನು ಆಧರಿಸಿ ಇನ್ನೊಮ್ಮೆ ಇದೇ ಆಟವನ್ನು ಯಾರಾದರೂ ಆಡಿದರೆ ದೊರೆಯಬಹುದಾದ ಫಲಿತಾಂಶ ಊಹಿಸಿ. ನಿಮ್ಮ ಊಹೆ ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂಬುದನ್ನು ಸಾಧ್ಯವಿರುವಷ್ಟು ಹೆಚ್ಚು ಬಾರಿ ಪ್ರಯೋಗ ಮಾಡಿ ಪರೀಕ್ಷಿಸಿ, ನಿಮಗೇ ಅಚ್ಚರಿಯಾಗುವಷ್ಟು ಬಾರಿ ನಿಮ್ಮ ಊಹೆ ಸರಿಯಾಗಿರುತ್ತದೆ. ಪ್ರಕ್ರಿಯೆಗಳು ಸಂಪೂರ್ಣವಾಗಿ ಯಾದೃಚ್ಛಿಕವಾಗಿ ಜರಗುವ ಸನ್ನಿವೇಶಗಳಲ್ಲಿ ‘ಸರಿಸುಮಾರಾಗಿ ಭವಿಷ್ಯ ನುಡಿಯಲು’ ಅತಿಮಾನಷ ಶಕ್ತಿಯ ಅಗತ್ಯವಿಲ್ಲ ಎಂಬುದನ್ನು ಇದು ಸಾಬೀತು ಪಡಿಸುತ್ತದೆ.

No comments: