ಸಾಬೂನು ನೀರಿನಿಂದ ಪುಂಖಾನುಪುಂಖವಾಗಿ ಗುಳ್ಳೆಗಳನ್ನು ಹಾರಿಸುವ ಆಟಿಕೆಗಳನ್ನು ನೀವು ಜಾತ್ರೆಗಳಲ್ಲಿ, ವಸ್ತುಪ್ರದರ್ಶನಗಳಲ್ಲಿ ನೋಡಿರಬಹುದು, ಕೆಲವರು ಕೊಂಡುಕೊಂಡಿರಲೂ ಬಹುದು. ಆ ರೀತಿಯಲ್ಲಿ ಗುಳ್ಳೆಗಳನ್ನು ಉತ್ಪಾದಿಸಬಲ್ಲ ಸಾಬೂನು ನೀರನ್ನು ತಯಾರಿಸುವುದನ್ನು ಕಲಿತರೆ ಅಂಥ ಅಟಿಕೆಗಳನ್ನಷ್ಟೇ ಅಲ್ಲದೆ ಇನ್ನೂ ಹೆಚ್ಚು ಮನರಂಜನೆ ನೀಡುವ ಚಟುವಟಿಕೆಗಳನ್ನು ಮಾಡಬಹುದು.
ಸಾಬೂನು ನೀರು ತಯಾರಿಸುವ ವಿಧಾನ:
ಪಾತ್ರೆ ತೊಳೆಯಲು ಉಪಯೋಗಿಸುವ ದ್ರವ ಮಾರ್ಜಕ (ಲಿಕ್ವಿಡ್ ಡಿಟರ್ಜೆಂಟ್) ಅಥವ ತಲೆ ಕೂದಲು ತೊಳೆಯಲು ಬಳಸುವ ದ್ರವ ಸಾಬೂನು (ಷ್ಯಾಂಪೂ) ಮತ್ತು ಮಿದು ನೀರು (ಸಾಫ್ಟ್ ವಾಟರ್), ಗ್ಲಿಸರಿನ್ (ಔಷಧಿ ಅಂಗಡಿಗಳಲ್ಲಿ ದೊರೆಯುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಲೂ ಪ್ರಯತ್ನಿಸಬಹುದು) - ಇವಿಷ್ಟು ಸಾಬೂನು ನೀರು ತಯಾರಿಸಲು ಬೇಕಾಗುವ ಸಾಮಗ್ರಿಗಳು.
ದ್ರವ ಮಾರ್ಜಕ ಮತ್ತು ನೀರಿನ ಲಕ್ಷಣಗಳನ್ನು ಆಧರಿಸಿ ಅವನ್ನು ಯಾವ ಅನುಪಾತದಲ್ಲಿ ಬೆರೆಸಬೇಕು ಎಂಬುದನ್ನು ನಿರ್ಧರಿಸಬೇಕು. ಆದ್ದರಿಂದ ಈ ಅನುಪಾತವನ್ನು ನೀವೇ ಪತ್ತೆಹಚ್ಚಬೇಕು. ಮೊದಲು ಒಂದು ಭಾಗ ದ್ರವ ಮಾರ್ಜಕಕ್ಕೆ ಮೂರು ಭಾಗ ನೀರು ಸೇರಿಸಿ ಪರೀಕ್ಷಿಸಿ. ಅಗತ್ಯವಾದರೆ ಇನ್ನೂ ಒಂದು ಭಾಗದಷ್ಟು ನೀರಿನ ಪ್ರಮಾಣ ಹೆಚ್ಚಿಸಿ ಪುನಃ ಪರೀಕ್ಷಿಸಿ. ಅಪೇಕ್ಷಿತ ಲಕ್ಷಣ ಇರುವ ಸಾಬೂನು ನೀರು ದೊರೆಯುವ ತನಕ ಈ ಪ್ರಕ್ರಿಯೆ ಮುಂದುವರಿಸಿ. ನೀವು ತಯಾರಿಸಿದ ಸಾಬೂನು ದ್ರಾವಣಕ್ಕೆ (೧ ಲೀಟರ್ ದ್ರಾವಣಕ್ಕೆ ಸುಮಾರು ೧-೨ ಚಮಚೆಯಷ್ಟು) ಗ್ಲಿಸರಿನ್ ಸೇರಿಸಿ. ಇದು ಗುಳ್ಳೆಗಳ ಪೊರೆಗೆ ಬಲ ತುಂಬುತ್ತದೆ. ( ಗ್ಲಿಸರಿನ್ ಬದಲು ತುಸು ಸಕ್ಕರೆಯನ್ನು ಲೀನಿಸಲೂ ಬಹುದು. ಸಕ್ಕರೆ ಮಿಶ್ರಿತ ಸಾಬೂನು ನೀರನ್ನು ಸಂರಕ್ಷಿಸಿ ಇಡುವುದು ಕಷ್ಟ) ಮಿಶ್ರಣವನ್ನು ಚೆನ್ನಾಗಿ ಕದಡಿ ೨೪ ಗಂಟೆ ಕಾಲ ಕಳೆದ ಬಳಿಕ ುಪಯೋಗಿಸಿದರೆ ಉತ್ತಮ ಫಲ ದೊರೆಯುತ್ತದೆ.
ಬಾಲ್ ಪಾಇಂಟ್ ಪೆನ್ನಿನ ಎರಡೂ ಕಡೆ ತೆರೆದಿರುವ ಕೊಳವೆ ಅಥವ ಜೆಲ್ ಬಾಲ್ ಪಾಇಂಟ್ ಪೆನ್ನಿನ ಖಾಲಿ ರೀಫಿಲ್ ಅನ್ನು ಗುಳ್ಳೆ ಊದುವ ಕೊಳವೆಯಾಗಿ ಉಪಯೋಗಿಸಿ. ಅದರ ತುದಿಯನ್ನು ಸಾಬೂನು ನೀರಿನಲ್ಲಿ ಅದ್ದಿ ತೆಗೆದು ಗುಳ್ಳೆಗಳನ್ನು ಊದಿ ಆನಂದಿಸಿ. ಒಂದು ದೊಡ್ಡ ಗುಳ್ಳೆ ಊದುವುದನ್ನು ಅಭ್ಯಾಸ ಮಾಡಿದ ಬಳಿಕ ‘ದೊಡ್ಡ ಗುಳ್ಳೆ ಊದುವ ಸ್ಪರ್ಧೆ’ಗೆ ನಮ್ಮ ಮಿತ್ರರನ್ನು ಆಹ್ವಾನಿಸಿ.
ಒಂದು ತಟ್ಟೆಯನ್ನು ಒದ್ದೆ ಮಾಡಿ ನಿಮಗೆ ಅನುಕೂಲವಾದಷ್ಟು ಎತ್ತರದಲ್ಲಿ ಇಡಿ. ಸಾಬೂನು ನೀರಿನಲ್ಲಿ ಮುಳುಗಿಸಿದ ಊದುಗೊಳವೆಯ ತುದಿಯನ್ನು ತಟ್ಟೆಯ ಒದ್ದೆ ಮೈನ ಸಮೀಪ ಹಿಡಿದು ಗುಳ್ಳೆಯು ತಟ್ಟೆಯಲ್ಲಿ ವಿರಮಿಸುವಂತೆ ಊದಿದರೆ ಅರ್ಧ ಗೋಲಾಕೃತಿಯ ಗುಳ್ಳೆ ಉತ್ಪತ್ತಿ ಆಗುತ್ತದೆ. ‘ಅರ್ಧ ಗೋಲಾಕೃತಿಯ ದೊಡ್ಡ ಗುಳ್ಳೆ ಊದುವ ಸ್ಪರ್ಧೆ’ ಸಂಘಟಿಸಿ.
ಕಬ್ಬಿಣದ ತಂತಿಯಿಂದ ಚಿತ್ರದಲ್ಲಿ ತೋರಿಸಿದ ಆಕೃತಿಗಳನ್ನು ರಚಿಸಿ ಅವನ್ನು ಸಾಬೂನು ನೀರಿನಲ್ಲಿ ಮುಳುಗಿಸಿ ಎತ್ತಿ ಹಿಡಿದಾಗ ಸಾಬೂನು ನೀರಿನ ಪೊರೆ ನಿರ್ಮಿಸುವ ಆಕೃತಿಗಳನ್ನು ಪರಿಶೀಲಿಸಿ.
ನಾನು ೫ ಮಿಲೀ ನೈಲ್ ಶ್ಯಾಂಪೂ ೧೫ ಮಿಲೀ ನೀರು ಮತ್ತು ಕೆಲವು ಹನಿ ಗ್ಲಿಸರಿನ್ ಉಪಯೋಗಿಸಿ ತಯಾರಿಸಿದ ದ್ರಾವಣದಿಂದ ಉತ್ಪತ್ತಿ ಮಾಡಿದ ದೊಡ್ಡ ಗುಳ್ಳೆಗಳ ಛಾಯಾಚಿತ್ರಗಳು:-
No comments:
Post a Comment