Pages

20 January 2012

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೬೦

ಉತ್ತರಾಯಣ ಪುಣ್ಯಕಾಲಾರಂಭ ಎಂದು?

ಪಂಚಾಂಗಗಳ ಪ್ರಕಾರ ಉತ್ತರಾಯಣ ಪುಣ್ಯಕಾಲಾರಂಭವಾಗುವುದು ಮಕರ ಸಂಕ್ರಾಂತಿಯಂದು. ವಾಸ್ತವವಾಗಿ ಉತ್ತರಾಯಣ ಸುಮಾರು ಡಿಸೆಂಬರ್ ೨೧/೨೨ ರಂದೇ ಆರಂಭವಾಗುತ್ತದೆ ಅನ್ನುತ್ತಾರೆ ಖಗೋಲಶಾಸ್ತ್ರಜ್ಞರು. ಯಾವುದು ಸರಿ?  ಇದನ್ನು ಬಲು ಸುಲಭವಾಗಿ ನೀವೇ ಪತ್ತೆಹಚ್ಚಬಹುದು. ೧ ವರ್ಷ  ಕಾಲ ನೀವು ಸೂರ್ಯೋದಯಕ್ಕೆ ಮುನ್ನ ಎದ್ದು ಸೂರ್ಯೋದಯವನ್ನು ವೀಕ್ಷಿಸಲು ಸಿದ್ಧರಿದ್ದರೆ.

ಪೂರ್ವಸಿದ್ಧತೆ:

ಪ್ರತೀದಿನ ಸೂರ್ಯೋದಯ ವೀಕ್ಷಿಸುವ ಸ್ಥಳ ನಿಗದಿಪಡಿಸಿ. ಆ ಸ್ಥಳವನ್ನು ಮತ್ತು ಆ ಸ್ಥಳದ ಭೌಗೋಲಿಕ ದಿಗ್ಬಿಂದುಗಳನ್ನು (ಅರ್ಥಾತ್, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ)  ಕನಿಷ್ಠ ಒಂದು ವರ್ಷ ಕಾಲ ಅಳಿಸಿ ಹೋಗದಂತೆ ಗುರುತಿಸಿ. ನಿಮ್ಮ ಮನೆಯ ತಾರಸಿಯ ಮೇಲಾದರೆ ಇವನ್ನು ಸೂಚಿಸುವ ಬಿಂದುಗಳನ್ನು ಇನ್ಯಾಮಲ್ ಬಣ್ಣದಿಂದ ಗುರುತಿಸಬಹುದು (ಚಿತ್ರ ೧).



ಮನೆಯ ಅಂಗಳವಾಗಿದ್ದರೆ ಕಬ್ಬಿಣ ಅಥವ ಕಲ್ಲಿನ ಗೂಟಗಳ ನೆರವಿನಿಂದ ಗುರುತಿಸಬಹುದು (ಯಾರೂ ಎಡವಿ ಬೀಳದಂತೆ). ದಿಕ್ಸೂಚಿಯ ನೆರವಿನಿಂದ ನೀವು ಕಾಂತೀಯ ದಿಗ್ಬಿಂದುಗಳನ್ನು ಗುರುತಿಸಬಹುದೇ ವಿನಾ ಭೌಗೋಲಿಕ ದಿಗ್ಬಿಂದುಗಳನ್ನಲ್ಲ. ಇವೆರಡೂ ಒಂದೇ ಆಗಿರುವುದಿಲ್ಲ. ಭೌಗೋಲಿಕ ದಿಗ್ಬಿಂದುಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ತಿಳಿಯಲು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೩೭ ನೋಡಿ. ಕ್ಷಿತಿಜದ (ದಿಗಂತ, ಬಾನಂಚು, ಹಾರಿಜ, ಹರೈಸ್ ನ್) ಯಾವ ಬಿಂದುವಿನಲ್ಲಿ ಸೂರ್ಯೋದಯವಾಗುತ್ತದೆ ಎಂಬುದನ್ನು ಪ್ರತೀದಿನ ವೀಕ್ಷಿಸಿದ ನಂತರ ಅದನ್ನು ದಾಖಲಿಸಲು ಅನುಕೂಲವಾಗುವಂತೆ ಕಾಗದದ ದೊಡ್ಡ ಹಾಳೆಯಲ್ಲಿ (ಡ್ರಾಇಂಗ್ ಷೀಟ್) ಕ್ಷಿತಿಜವನ್ನು ಪ್ರತಿನಿಧಿಸುವ ವೃತ್ತ ರಚಿಸಿ, ಅದರಲ್ಲಿ ದಿಗ್ಬಿಂದುಗಳನ್ನು ಗುರುತಿಸಿ ಇಟ್ಟುಕೊಳ್ಳಿ. ವೀಕ್ಷಣಾ ಸ್ಥಲವನ್ನು ಈ ವೃತ್ತದ ಕೇಂದ್ರವು ಪ್ರತಿನಿಧಿಸುತ್ತದೆ (ಚಿತ್ರ ೨). ೧ ಕೋನಮಾಪಕ ಮತ್ತು ಸುಮಾರು ೧ ಮೀ ಉದ್ದದ ಬಳುಕದ ಸಪುರ ಕಡ್ಡಿಗಳನ್ನು (ಮರದ್ದು ಅಥವ ಲೋಹದ್ದು)  ಸಂಗ್ರಹಿಸಿ ಇಟ್ಟುಕೊಳ್ಳಿ.



ಮಾಡಬೇಕಾದದ್ದೇನು?

ಅನೇಕ ದಿನ ಪತ್ರಿಕೆಗಳಲ್ಲಿ ಮತ್ತು ಎಲ್ಲ ಪಂಚಾಂಗಗಳಲ್ಲಿ ಪ್ರತೀ ದಿನದ ಸೂರ್ಯೋದಯ ಮತ್ತು ಸೂರ್ಯಾಸ್ತ ಎಷ್ಟು ಗಂಟೆಗ ಘಟಿಸುತ್ತವೆ ಎಂಬುದನ್ನು ನಮೂದಿಸಿರುತ್ತಾರೆ. ಅದರ ನೆರವಿನಿಂದ ಪ್ರತೀದಿನ ಬೆಳಗ್ಗೆ ಸೂರ್ಯೋದಕ್ಕೆ ಮುನ್ನ ಏಳಿ. ಸೂರ್ಯೋದಯ ವೀಕ್ಷಣೆಗೆಂದು ನಿಗದಿ ಪಡಿಸಿದ ಸ್ಥಳದಲ್ಲಿ ಆ ಸ್ಥಳ ಮತ್ತು ಪೂರ್ವ ದಿಗ್ಬಿಂದುಗಳನ್ನು ಜೋಡಿಸುವ ಕಾಲ್ಪನಿಕ ನೇರರೇಖೆಯ ಮೇಲೆ ಒಂದು ಕಡ್ಡಿಯನ್ನು ಅದರ ಒಂದು ತುದಿ ನಿರ್ಧಾರಿತ ಸ್ಥಳವನ್ನು ಸ್ಪರ್ಷಿಸುವಂತೆ ಇಡಿ. ಸೂರ್ಯೋದಯವಾಗುವಾಗ ವೀಕ್ಷಣಾ ಸ್ಥಳ ಮತ್ತು ಕ್ಷಿತಿಜದಲ್ಲಿ ಸೂರ್ಯೋದಯವಾಗುತ್ತಿರುವ ಬಿಂದುಗಳನ್ನು ಜೋಡಿಸುವ ಕಾಲ್ಪನಿಕ ನೇರರೇಖೆಯ ಮೇಲೆ ಇನ್ನೊಂದು ಕಡ್ಡಿಯನ್ನು ಅದರ ಒಂದು ತುದಿ ನಿರ್ಧಾರಿತ ಸ್ಥಳವನ್ನು ಸ್ಪರ್ಷಿಸುವಂತೆ ಇಡಿ (ಚಿತ್ರ ೩).



ತದನಂತರ ಈ ಎರಡು ಕಡ್ಡಿಗಳ ನಡುವಿನ ಕೋನವನ್ನು ಕೋನಮಾಪಕದ ನೆರವಿನಿಂದ ಅಳತೆ ಮಾಡಿ ಗುರುತಿಸಿಕೊಳ್ಳಿ. ಈ ಮುನ್ನವೇ ನೀವು ಸಿದ್ಧಪಡಿಸಿದ್ದ ನಕಾಶೆಯಲ್ಲಿ ಈ ಅಳತೆಯ ನೆರವಿನಿಂದ ಕ್ಷಿತಿಜದಲ್ಲಿ ಸೂರ್ಯೋದಯವಾದ ಬಿಂದುವನ್ನು ಗುರುತಿಸಿ (ಚಿತ್ರ ೪). ಆ ದಿನದ ದಿನಾಂಕವನ್ನೂ, ಸೂರ್ಯೋದಯದ ಮತ್ತು ಸೂರ್ಯಾಸ್ತದ ಗಂಟೆಗಳನ್ನೂ ಬರೆದಿಡಿ.



ಈ ಪ್ರಕ್ರಿಯೆಯನ್ನು ಒಂದು ವರ್ಷ ಕಾಲ ಮಾಡಿದರೆ ಈ ಕೆಳಗಿನ ತಥ್ಯಗಳನ್ನು ನೀವು ಗ್ರಹಿಸುವಿರಿ.

೧. ಕ್ಷಿತಿಜದ ಮೇಲಿನ ಒಂದೇ ಬಿಂದುವಿನಲ್ಲಿ ಸೂರ್ಯ ಪ್ರತೀದಿನ ಪೂರ್ವ ದಿಗ್ಬಿಂದುವಿನಲ್ಲಿ ಉದಯಿಸುವುದಿಲ್ಲ. ಸೂರ್ಯೋದಯದ ಬಿಂದು ಚಿತ್ರ ೪ ರಲ್ಲಿ ಕೆಂಪು ಬಾಣದ ಗುರುತಿನಿಂದ ಸೂಚಿಸಿದಂತೆ ಉತ್ತರದಿಂದ ದಕ್ಷಿಣಕ್ಕೆ ಅಥವ ನೀಲಿ ಬಾಣದ ಗುರುತಿನಿಂದ ಸೂಚಿಸದಂತೆ ದಕ್ಷಿಣದಿಂದ ಉತ್ತರಕ್ಕೆ ನಿಧಾನವಾಗಿ ಸರಿಯುತ್ತಿರುವುದನ್ನು ನೀವು ಗಮನಿಸುತ್ತೀರಿ, ಸರಿಯುತ್ತಿರುವ ದಿಕ್ಕು ನೀವು ಸೂರ್ಯೋದಯ ವೀಕ್ಷಿಸುತ್ತಿರುವ ತಿಂಗಳನ್ನು ಅವಲಂಬಿಸಿರುತ್ತದೆ.

೨. ನೀವು ವೀಕ್ಷಿಸಲು ಆರಂಭಿಸಿದ ನಂತರದ ದಿನಗಳಲ್ಲಿ ಸೂರ್ಯೋದಯದ ಬಿಂದು ಉತ್ತರದಿಂದ ದಕ್ಷಿಣಕ್ಕೆ ಸರಿಯುತ್ತಿದ್ದರೆ ಕ್ಷಿತಿಜದ ಪೂರ್ವ ಮತ್ತು ದಕ್ಷಿಣ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ದಿಕ್ಕು ಬದಲಿಸಿ ಉತ್ತರಾಭಿಮುಖವಾಗಿ ಸರಿಯಲಾರಂಭಿಸುತ್ತದೆ. ನೀವು ವೀಕ್ಷಿಸಲು ಆರಂಭಿಸಿದ ನಂತರದ ದಿನಗಳಲ್ಲಿ ಸೂರ್ಯೋದಯದ ಬಿಂದು ದಕ್ಷಿಣದಿಂದ ಉತ್ತರಕ್ಕೆ ಸರಿಯುತ್ತಿದ್ದರೆ ಕ್ಷಿತಿಜದ ಪೂರ್ವ ಮತ್ತು ಉತ್ತರ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ದಿಕ್ಕು ಬದಲಿಸಿ ದಕ್ಷಿಣಾಭಿಮುಖವಾಗಿ ಸರಿಯಲಾರಂಭಿಸುತ್ತದೆ. ಸೂರ್ಯೋದಯದ ಬಿಂದು ಉತ್ತರದಿಂದ ದಕ್ಷಿಣಕ್ಕೆ ಸರಿಯುತ್ತಿರುವ ಅವಧಿಯೇ ದಕ್ಷಿಣಾಯನ, ದಕ್ಷಿಣದಿಂದ ಉತ್ತರಕ್ಕೆ ಸರಿಯುತ್ತಿರುವ ಅವಧಿಯೇ ಉತ್ತರಾಯಣ.

೩.  ದಕ್ಷಿಣಾಯನದ ಅವಧಿಯಲ್ಲಿ ನಿಧಾನವಾಗಿ ಹಗಲಿನ ಅವಧಿ ಕಮ್ಮಿ ಆಗುತ್ತಿರುತ್ತದೆ, ರಾತ್ರಿಯ ಅವಧಿ ಹೆಚ್ಚು ಆಗುತ್ತಿರುತ್ತದೆ. ಉತ್ತರಾಯಣದ ಅವಧಿಯಲ್ಲಿ ನಿಧಾನವಾಗಿ ಹಗಲಿನ ಅವಧಿ ಹೆಚ್ಚು ಆಗುತ್ತಿರುತ್ತದೆ, ರಾತ್ರಿಯ ಅವಧಿ ಕಮ್ಮಿ ಆಗುತ್ತಿರುತ್ತದೆ.

೪. ಉತ್ತರಾಯಣದ ಅವಧಿಯಲ್ಲಿ ಒಂದು ದಿನ, ದಕ್ಷಿಣಾಯನದ ಅವಧಿಯಲ್ಲಿ ಒಂದು ದಿನ - ಇಂತು ವರ್ಷದಲ್ಲಿ ಎರಡು ದಿನ ಮಾತ್ರ ಸೂರ್ಯ ಪೂರ್ವ ದಿಗ್ಬಿಂದುವಿನಲ್ಲಿ ಉದಯಿಸಿ ಪಶ್ಚಿಮ ದಿಗ್ಬಿಂದುವಿನಲ್ಲಿ ಅಸ್ತಮಿಸುತ್ತದೆ. ಆ ಎರಡು ದಿನಗಳಲ್ಲಿ ಮಾತ್ರ ಹಗಲು ಮತ್ತು ರಾತ್ರಿಯ ಅವಧಿಗಳು ಸಮವಾಗಿರುತ್ತವೆ. ಉತ್ತರಾಯಣದಲ್ಲಿ ಇರುವ ಇಂಥ ದಿನಕ್ಕೆ ವಸಂತ ವಿಷುವ (ಸ್ಪ್ರಿಂಗ್ ಈಕ್ವಿನಾಕ್ಸ್) ಎಂದೂ ದಕ್ಷಿಣಾಯನದ್ದಕ್ಕೆ ಶರದ್ವಿಷುವ (ಆಟಮ್ ಈಕ್ವಿನಾಕ್ಸ್) ಎಂದೂ ಹೆಸರು.

೫. ದಕ್ಷಿಣಾಯನದ ಅಂತ್ಯದಲ್ಲಿ ಕ್ಷಿತಿಜದ ಪೂರ್ವ ಮತ್ತು ದಕ್ಷಿಣ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ಸೂರ್ಯೋದಯದ ಬಿಂದು ದಿಕ್ಕು ಬದಲಿಸಿ ಉತ್ತರಾಭಿಮುಖವಾಗಿ ಸರಿಯಲಾರಂಭಿಸುತ್ತದೆ ಎಂದೂ ಈ ಹಿಂದೆಯೇ ಹೇಳಿದೆಯಷ್ಟೆ. ಉತ್ತರಾಯಣದ ಅಂತ್ಯದಲ್ಲಿ ಕ್ಷಿತಿಜದ ಪೂರ್ವ ಮತ್ತು ಉತ್ತರ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ಸೂರ್ಯೋದಯದ ಬಿಂದು ದಿಕ್ಕು ಬದಲಿಸಿ ದಕ್ಷಿಣಾಭಿಮುಖವಾಗಿ ಸರಿಯಲಾರಂಭಿಸುತ್ತದೆ ಎಂದೂ ಈ ಹಿಂದೆಯೇ ಹೇಳಿದೆಯಷ್ಟೆ. ಹೀಗೆ ದಿಶಾವ್ಯತ್ಯಯವಾಗುವ ಎರಡು ಬಿಂದುಗಳಿಗೆ ಆಯನ ಬಿಂದುಗಳು (ಸಾಲ್ ಸ್ಟಿಸ್ ಪಾಇಂಟ್ಸ್) ಎಂದು ಹೆಸರು. ಉತ್ತರಾಯಣದ ಅಂತ್ಯದಲ್ಲಿರುವ ಅಯನ ಬಿಂದುವಿನಲ್ಲಿ ಸೂರ್ಯೋದಯವಾದಂದು ಅತೀ ದೀರ್ಘಾವಧಿಯ ಹಗಲೂ ಅತೀ ಹ್ರಸ್ವಾವಧಿಯ ರಾತ್ರಿಯೂ ಇರುತ್ತದೆ, ದಕ್ಷಿಣಾಯನದ ಅಂತ್ಯದಲ್ಲಿರುವ ಅಯನ ಬಿಂದುವಿನಲ್ಲಿ ಸೂರ್ಯೋದಯವಾದಂದು ಅತೀ ದೀರ್ಘಾವಧಿಯ ರಾತ್ರಿಯೂ ಅತೀ ಹ್ರಸ್ವಾವಧಿಯ ಹಗಲೂ ಇರುತ್ತದೆ,

ವೀಕ್ಷಣೆಯಿಂದ ನೀವೇ ಪತ್ತೆಹಚ್ಚಬೇಕಾದ ದಿನಾಂಕಗಳು:

ಉತ್ತರಾಯಣ ಆರಂಭ, ದಕ್ಷಿಣಾಯನ ಆರಂಭ, ವಸಂತ ವಿಷುವ, ಶರದ್ವಿಷುವ. (ಸುಳಿವು- ಇವು ಅನುಕ್ರಮವಾಗಿ ಡಿಸೆಂಬರ್, ಜೂನ್, ಮಾರ್ಚ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಘಟಿಸುತ್ತವೆ)

ಅಂದ ಹಾಗೆ ಉತ್ತರಾಯಣ ಪುಣ್ಯಕಾಲಾರಂಭವಾಗುವುದು ಮಕರ ಸಂಕ್ರಾಂತಿಯಂದು ಅಲ್ಲ ಎಂಬ ಸತ್ಯವನ್ನು ನೀವೇ ಆವಿಷ್ಕರಿಸುವಿರಿ.

[ಈ ಚಟುವಟಿಕೆಯನ್ನು ಯಶಸ್ವಿಯಾಗಿ ಪೂರೈಸುವವರು ಕನಿಷ್ಠಪಕ್ಷ ಹವ್ಯಾಸೀ ಖಗೋಲವಿಜ್ಞಾನಿಗಳಾಗುವ ಗುರಿ ಇಟ್ಟುಕೊಂಡು ಯುಕ್ತ ಅಧ್ಯಯನಗಳನ್ನು ಮಾಡಲಾರಂಭಿಸಿ]

No comments: