ಯಾವುದೇ ತರಬೇತಿಯ ಪೂರ್ಣ ಲಾಭವನ್ನು ಕೆಲವರು ಬಲು ಸುಲಭವಾಗಿ ಪಡೆಯುತ್ತಾರೆ, ಕೆಲವರು ಪಡೆಯುವುದಿಲ್ಲ. ಏಕೆ? ಉದಾಹರಣೆಗೆ, ಸಂಗೀತದಲ್ಲಿ ಯುಕ್ತ ತರಬೇತಿ ಕೊಟ್ಟರೆ ಕೆಲವರು ಮಾತ್ರ ಬಲು ಬೇಗನೆ ಕಲಿಯುತ್ತಾರೆ, ಎಲ್ಲರೂ ಅಲ್ಲ. ಸಂಗೀತ ಕಲಿಯಲು ಅಗತ್ಯವಾದ ಅಂತಸ್ಥ ಸಾಮರ್ಥ್ಯ ಬೇಗನೆ ಕಲಿತವರಲ್ಲಿ ಇದ್ದಿರಬೇಕಲ್ಲವೇ? ಅವರಿಗೆ ‘ನ್ಯಾಕ್’ ಇದ್ದದ್ದರಿಂದ ಬೇಗನೆ ಕಲಿತರು ಅಂದು ಹೇಳುವುದೂ ಉಂಟು. ಯಾವುದೇ ನಿರ್ದಿಷ್ಟ ಚಟುವಟಿಕೆಯನ್ನು ಕೈಗೊಳ್ಳಲು ಸಹಾಯಕವಾದ ಅಂತಸ್ಥ ಸಾಮರ್ಥ್ಯವೇ ಸಹಜಸಾಮರ್ಥ್ಯ, ಅರ್ಥಾತ್ ಆಡುಭಾಷೆಯಲ್ಲಿ ಉಲ್ಲೇಖಿಸುವ ‘ನ್ಯಾಕ್’. ‘ನಿರ್ದಿಷ್ಟ ಜ್ಞಾನವನ್ನು ಅಥವ ಕುಶಲತೆಯನ್ನು ಯುಕ್ತ ತರಬೇತಿ ದೊರೆತರೆ ಸುಲಭವಾಗಿ ಕಲಿಯಬಲ್ಲ ಸಾಮರ್ಥ್ಯ ಇದೆ ಎಂಬುದನ್ನು ಸೂಚಿಸುವ ವ್ಯಕ್ತಿಲಕ್ಷಣಗಳ ಸಂಯೋಜನೆ’ ಎಂದೂ ಸಹಜ ಸಾಮರ್ಥ್ಯವನ್ನು ವ್ಯಾಖ್ಯಾನಿಸುವುದುಂಟು.
ಸಹಜ ಸಾಮರ್ಥ್ಯ ಇದೆ ಅಂದರೆ ಯುಕ್ತ ಕಲಿಕಾನುಭವಗಳು ದೊರೆತರೆ ಸುಲಭವಾಗಿ ಕಲಿಯಬಲ್ಲ ಸಾಮರ್ಥ್ಯ ಇದೆ ಎಂದು ಅರ್ಥೈಸಬೇಕೇ ವಿನಾ ಕಲಿತಿದ್ದಾರೆ ಎಂದಲ್ಲ. ಉದಾಹರಣೆಗೆ, ಗಣಿತದಲ್ಲಿ ಅಥವ ಸಂಗೀತದಲ್ಲಿ ಸಹಜ ಸಾಮರ್ಥ್ಯ ಇದೆ ಅಂದರೆ ಯುಕ್ತ ಗಣಿತ ಅಥವ ಸಂಗೀತ ಶಿಕ್ಷಣ ದೊರೆತರೆ ಗಣಿತಜ್ಞ ಅಥವ ಸಂಗೀತಗಾರ ಆಗುವ ಸಾಮರ್ಥ್ಯ ಇದೆ ಎಂದು ಅರ್ಥೈಸಬೇಕೇ ವಿನಾ ಗಣಿತಜ್ಞ ಅಥವ ಸಂಗೀತಗಾರ ಆಗಿದ್ದಾರೆ ಎಂದಲ್ಲ. ತರಬೇತಿ ಅಥವ ಶಿಕ್ಷಣದಿಂದ ಲಾಭ ಪಡೆಯಬಲ್ಲರೋ ಇಲ್ಲವೋ ಎಂಬುದನ್ನು ಸಹಜ ಸಾಮರ್ಥ್ಯ ಸೂಚಿಸುತ್ತದೆಯೇ ವಿನಾ ಆ ಕ್ಷೇತ್ರದಲ್ಲಿ ಅವರು ಎಷ್ಟು ಖ್ಯಾತಿ ಗಳಿಸಬಲ್ಲರು ಅಥವ ಎಷ್ಟು ಹಣ ಸಂಪಾದಿಸಬಲ್ಲರು ಎಂಬುದನ್ನಲ್ಲ. ಅರ್ಥಾತ್, ಯಾವುದೇ ಕ್ಷೇತ್ರದಲ್ಲಿ ತಲುಪಬಹುದಾದ ಸಾಧನೆಯ ಮಟ್ಟವನ್ನು (ಲೆವೆಲ್ ಆಫ್ ಅಚೀವ್ ಮೆಂಟ್) ಸಹಜ ಸಾಮರ್ಥ್ಯ ಸೂಚಿಸುವುದಿಲ್ಲ.
ನಾವು ಅಪೇಕ್ಷಿಸುವ ಕ್ಷೇತ್ರದಲ್ಲಿ ಯುಕ್ತ ಅನುಭವಗಳನ್ನು ಒದಗಿಸುವುದರ ಮೂಲಕವೇ ಆಗಲಿ, ಯುಕ್ತ ಪರಿಸರವನ್ನು ಒದಗಿಸುವುದರ ಮೂಲಕವೇ ಆಗಲಿ ಆ ಕ್ಷೇತ್ರದಲ್ಲಿ ಮುಂದುವರಿಯಲು ಅಗತ್ಯವಾದ ಸಹಜ ಸಾಮರ್ಥ್ಯ ವಿಕಸಿಸುವಂತೆ ಮಾಡಬಹುದು ಅನ್ನಲು ಅಗತ್ಯವಾದಷ್ಟು ಪುರಾವೆಗಳು ಇಲ್ಲ. ಲಭ್ಯ ಪುರಾವೆಗಳನ್ನು ಆಧರಿಸಿ ಸಹಜ ಸಾಮರ್ಥ್ಯ ಆನುವಂಶೀಯ ಅನ್ನಲೂ ಸಾಧ್ಯವಿಲ್ಲ. ಬಹುಶಃ, ಅದು ಅನುವಂಶೀಯತೆ, ಪರಿಸರ, ಅನುಭವ, ಶಿಕ್ಷಣ ಇವುಗಳ ಸಂಕೀರ್ಣ ಅನ್ಯೋನ್ಯಕ್ರಿಯೆಯ ಫಲಿತವಾಗಿರಲೂ ಬಹುದು.
ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇರಬಹುದಾದ ಸಹಜ ಸಾಮರ್ಥ್ಯಗಳನ್ನು ಗುರುತಿಸಬಲ್ಲ ಮಾನಕೀಕರಿಸಿದ (ಸ್ಟಾಂಡರ್ಡೈಸ್ಡ್) ಪರೀಕ್ಷೆಗಳು ಇವೆ. ಯುಕ್ತ ವಿದ್ಯಾರ್ಹತೆ ಉಳ್ಳ ಶೈಕ್ಷಣಿಕ ಸಲಹೆಗಾರರು ಇವುಗಳ ನೆರವಿನಿಂದ ವ್ಯಕ್ತಿ ಯಾವ ಕ್ಷೇತ್ರದಲ್ಲಿ ಇತರ ಕ್ಷೇತ್ರಗಳಿಗಿಂತ ಉನ್ನತ ಮಟ್ಟದ ಸಾಧನೆ ತೋರಬಹುದು ಎಂಬುದರ ಕುರಿತು ಸಲಹೆ ನೀಡುತ್ತಾರೆ. ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಜನ್ಮದಾತೃಗಳು ತಾವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಕಲಿಯುವ ಸಾಮರ್ಥ್ಯ ತಮ್ಮ ಮಕ್ಕಳಿಗೆ ಇದೆ ಎಂದು ಭ್ರಮಿಸಿ ಶಿಕ್ಷಣ ಕೊಡಿಸಲು ಯತ್ನಿಸುವುದರಿಂದ ಸಮಸ್ಯೆಗಳು ಉದ್ಭವಿಸುತ್ತಿವೆ. ಇರುವ ಸಹಜ ಸಾಮರ್ಥ್ಯವನ್ನು ಸಾಧ್ಯವಿರುವಷ್ಟು ನಿಖರವಾಗಿ ಗುರುತಿಸಿ ಆ ಕ್ಷೇತ್ರದಲ್ಲಿ ಶಿಕ್ಷಣ ಪಡೆದು ಜೀವನ ಮಾರ್ಗ ಕಂಡುಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಅತ್ಯುತ್ತಮ.
No comments:
Post a Comment