ಭೌಗೋಳಿಕ ಉತ್ತರ ದಿಗ್ಬಿಂದುಭೂಮಿಯ ಭೌಗೋಳಿಕ ಉತ್ತರ ದಿಗ್ಬಿಂದು ಮತ್ತು ಕಾಂತೀಯ ಉತ್ತರ ದಿಗ್ಬಿಂದು - ಇವೆರಡೂ ಒಂದೇ ಅಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆ. ಕಾಂತೀಯ ಉತ್ತರ ದಿಗ್ಬಿಂದುವನ್ನು ದಿಕ್ಸೂಚಿಯ ನೆರವಿನಿಂದ ಪತ್ತೆ ಹಚ್ಚಬಹುದು. ಭೌಗೋಲಿಕ ಉತ್ತರ ದಿಗ್ಬಿಂದುವನ್ನು ಪತ್ತೆಹಚ್ಚುವುದು ಹೇಗೆ? ಧ್ರುವ ತಾರೆಯನ್ನು ಗುರುತಿಸಬಲ್ಲ ಭೂಮಿಯ ಉತ್ತರಾರ್ಧ ಗೋಳವಾಸಿಗಳು ರಾತ್ರಿಯ ವೇಳೆಯಲ್ಲಿ ಅದನ್ನು ಗುರುತಿಸುವುದರ ಮೂಲಕ ಭೌಗೋಳಿಕ ಉತ್ತರ ದಿಗ್ಬಿಂದುವನ್ನು ಗುರುತಿಸಬಹುದು. ಮಿಕ್ಕವರು?
ಬೇಸಗೆ ಕಾಲದಲ್ಲಿ, ವಿಶೇಷತಃ ಮಾರ್ಚ್-ಮೇ ತಿಂಗಳುಗಳಲ್ಲಿ ಭೌಗೋಳಿಕ ಉತ್ತರ ದಿಗ್ಬಿಂದುವನ್ನೂ ತನ್ಮೂಲಕ ಉಳಿದ ದಿಗ್ಬಿಂದುಗಳನ್ನೂ ಗುರುತಿಸುವ ಸರಳ ವಿಧಾನ ಇಂತಿದೆ:
ಮನೆಯ ಹೊರಗೆ ಸಮತಟ್ಟಾದ ಪ್ರದೇಶದಲ್ಲಿ ನೇರವಾಗಿರುವ ಸುಮಾರು ೪ ಮೀ ಎತ್ತರದ ಗೂಟವನ್ನು ಭೂತಲಕ್ಕೆ ಲಂಬವಾಗಿಅಲುಗಾಡದಂತೆ ನಿಲ್ಲಿಸಿ. ಚಿಕ್ಕ ಗುಂಡಿ ಮಾಡಿ ನೆಲದ ಮೇಲೆ ಕನಿಷ್ಠ ೩ ಮೀ ಇರುವಂತೆ ನೆಡುವುದು ಉತ್ತಮ. ಲಂಬಸೂತ್ರದ (ಇದನ್ನು ನೀವೇ ತಯಾರಿಸಿಕೊಳ್ಳಬಹುದು) ನೆರವಿನಿಂದ ಗೂಟ ಭೂತಲಕ್ಕೆ ಲಂಬವಾಗಿರುವುದನ್ನು ಖಾತರಿ ಪಡಿಸಿಕೊಳ್ಳಿ. ಬೆಳಗ್ಗೆ ಸಾಧ್ಯವಾದಷ್ಟು ಬೇಗನೆ ಗೂಟದ ಬುಡದಲ್ಲಿ ನೆರಳು ಆರಂಭವಾಗುವಲ್ಲಿ

ಒಂದು ದೊಡ್ಡ ಮೊಳೆ, ನೆರಳಿನ ತುದಿಯಲ್ಲಿ ಒಂದು ದೊಡ್ಡ ಮೊಳೆ - ಹೀಗೆ ಎರಡು ಮೊಳೆಗಳನ್ನು ನೆಲಕ್ಕೆ ಹೊಡೆದು ಅವಕ್ಕೆ ದಾರವೊಂದನ್ನು ಬಿಗಿಯಾಗಿ ಎಳೆದು ಕಟ್ಟಿ ಗೂಟದ ನೆರಳಿನ ಉದ್ದವನ್ನು ಗುರುತಿಸಿ. ಮಧ್ಯಾಹ್ನದ ತನಕ ಸಮಯ ಕಳೆದಂತೆ ನೆರಳಿನ ಉದ್ದ ಕಮ್ಮಿ ಆಗುವುದನ್ನೂ ತದನಂತರ ಉದ್ದ ಆಗುವುದನ್ನೂ ಗಮನಿಸಿ. ಮಧ್ಯಾಹ್ನದ ನಂತರ ಗೂಟದ ನೆರಳಿನ ಉದ್ದ ನಿಖರವಾಗಿ ಬೆಳಗ್ಗೆ ಗುರುತಿಸಿದಷ್ಟೇ ಆದಾಗ ಅದರ ಸ್ಥಾನವನ್ನೂ ಮೊದಲಿನಂತೆಯೇ ಗುರುತಿಸಿ. ಗೂಟದ ಬುಡದಲ್ಲಿ ಬೆಳಗ್ಗೆ ಹೊಡೆದಿದ್ದ ಮೊಳೆಗೆ ಮೊದಲಿನ ನೆರಳಿನ ಉದ್ದವನ್ನು ಪ್ರತಿನಿಧಿಸುವಷ್ಟೇ ಉದ್ದದ ದಾರವನ್ನು ಕಟ್ಟಿ ಅದರ ನೆರವಿನಿಂದ ೀ ಕಾರ್ಯ ಸುಲಭವಾಗಿ ಮಾಡಬಹುದು. ಬೆಳಗ್ಗೆ ಮತ್ತು ಸಂಜೆ ನೆರಳಿನ ತುದಿಗಳನ್ನು ಸೂಚಿಸುವ ಮೊಳೆಗಳನ್ನು ಜೋಡಿಸುವ ಸರಳರೇಖೆಯ ಮಧ್ಯಬಿಂದುವನ್ನು ಗುರುತಿಸಿ ಅಲ್ಲಿ ಒಂದು ಮೊಳೆ ಹೊಡೆಯಿರಿ. ಎರಡೂ ಮೊಳೆಗಳಿಗೆ ದಾರವೊಂದನ್ನು ಬಿಗಿಯಾಗಿ ಎಳೆದು ಕಟ್ಟಿದರೆ ಈ ಕಾರ್ಯ ಸುಲಭವಾಗುತ್ತದೆ. ತದನಂತರ ಗೂಟದ ಬುಡದ ಮೊಳೆಯಿಂದ ಮಧ್ಯಬಿಂದು ಸೂಚೀ ಮೊಳೆಗೆ ಒಂದು ದಾರವನ್ನು ಎಳೆದು ಕಟ್ಟಿ. ಈ ದಾರ ಆ ಸ್ಥಳದ ದಕ್ಷಿಣ-ಉತ್ತರ ಅಕ್ಷವನ್ನೂ ನೆರಳುಗಳ ತುದಿಯನ್ನು ಜೋಡಿಸುವ ರೇಖೆಯತ್ತ ಇರುವ ತುದಿ ಉತ್ತರ ದಿಗ್ಬಿಂದುವನ್ನೂ ಸೂಚಿಸುತ್ತದೆ.
No comments:
Post a Comment