Pages

6 August 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೩೯

ಧ್ರುವ ತಾರೆಯನ್ನು ಗುರುತಿಸುವುದು ಹೇಗೆ?

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೩೭ ರಲ್ಲಿ ನೀವು ಇರುವ ಸ್ಥಳದ ದಕ್ಷಿಣ-ಉತ್ತರ ಅಕ್ಷ ಮತ್ತು ಉತ್ತರ ದಿಗ್ಬಿಂದು ಗುರುತಿಸಿದ್ದೀರಷ್ಟೆ. ಈ ಚಟುವಟಿಕೆಯಲ್ಲಿ ಧ್ರುವ ತಾರೆಯನ್ನು ಗುರುತಿಸಲು ಏನು ಮಾಡಬೇಕು ಎಂಬುದರ ವಿವರಣೆ ಇದೆ. ಈ ಕುರಿತಾದ ತಿಳಿವಳಿಕೆ ಉಳ್ಳವರು ಮಾರ್ಗದರ್ಶಕರಾಗಿ ದೊರೆತರೆ ನಿಮ್ಮ ಸೌಭಾಗ್ಯ. ಉತ್ತಮ ಗುಣಮಟ್ಟದ ‘ಅಟ್ಲಾಸ್’ ನೆರವಿನಿಂದ ನಿಮ್ಮ ಊರಿನ ಅಕ್ಷಾಂಶವನ್ನು ಸರಿಸುಮಾರಾಗಿ ಅಂದಾಜಿಸಿ. ಅಮಾವಾಸ್ಯೆಯ ರಾತ್ರಿ ಸುತ್ತಮುತ್ತಣ ಬೆಳಕು ವೀಕ್ಷಣೆಗೆ ಅಡ್ಡಿಮಾಡದ ದಿಗಂತ ಸ್ಪಷ್ಟವಾಗಿ ಗೋಚರಿಸುವ ಎತ್ತರದ ಪ್ರದೇಶದಲ್ಲಿ ಉತ್ತರಾಭಿಮುಖವಾಗಿ ನಿಂತುಕೊಳ್ಳಿ. ಆಕಾಶದಲ್ಲಿ ಈಶಾನ್ಯದಿಂದ ವಾಯವ್ಯದ ತನಕ ಕಣ್ಣು ಹಾಯಿಸಿ. ಸಪ್ತರ್ಷಿಮಂಡಲ (ಅರ್ಸ ಮೇಜರ್), ಕುಂತೀ (ಕ್ಯಾಸಿಓಪಿಯಾ) - ಈ ನಕ್ಷತ್ರ ಪುಂಜಗಳನ್ನು (ಕನಿಷ್ಠ ಪಕ್ಷ ಇವುಗಳ ಪೈಕಿ ಒಂದನ್ನಾದರೂ) ಗುರುತಿಸಿ. ಇದಕ್ಕೆ ನೆರವು ನೀಡುವ ಮಾಹಿತಿಯನ್ನೂ ಚಿತ್ರಗಳನ್ನೂ ಈ ಲೇಖನದ ಅಂತ್ಯದಲ್ಲಿ ಕೊಟ್ಟಿದೆ. ಕುಂತೀ ಪುಂಜ ಸರಿಸುಮಾರಾಗಿ ಇಂಗ್ಲಿಷ್    M ಅಕ್ಷರವನ್ನು ಹೋಲುತ್ತದೆ. ಇದರ ಮೇಲಿನ ೩ ಶೃಂಗಬಿಂದುಗಳ ಪೈಕಿ ಮಧ್ಯದ ಶೃಂಗಬಿಂದುವಿನಲ್ಲಿ ಇರುವ ಕೋನದ ಸಮದ್ವಿಭಾಜಕ ರೇಖೆಯಗುಂಟ ಉತ್ತರ ದಿಕ್ಕಿಗೆ ದೃಷ್ಟಿ ಹಾಯಿಸಿ. ಈ ರೇಖೆಯ ಮೇಲೆ ಉತ್ತರ ದಿಗ್ಬಿಂದುವಿನಿಂದ ನೀವು ಅಂದಾಜಿಸಿದ ಅಕ್ಷಾಂಶದಷ್ಟು ಕೋನೋನ್ನತಿಯ ಆಸುಪಾಸಿನಲ್ಲಿ ಬಲು ಮಸುಕಾಗಿ ಕಾಣುವ ಒಂಟಿ ತಾರೆಯೇ ಧ್ರುವ ತಾರೆ. ಇದರ ಆಸುಪಾಸಿನಲ್ಲಿ ಬೇರೆ ತಾರೆಗಳು ಗೋಚರಿಸುವುದಿಲ್ಲ. ಸಪ್ತರ್ಷಿಮಂಡಲ ಒಂದು ಸೌಟಿನ ಆಕಾರವನ್ನು (ಅಥವ ಗಾಳಿಪಟದ) ಹೋಲುತ್ತದೆ. ಇದರ ಹಿಡಿಕೆಯ ವಿರುದ್ಧ ದಿಕ್ಕಿನಲ್ಲಿ ಇರುವ ಎರಡು ತಾರೆಗಳನ್ನು ಜೋಡಿಸುವ ಸರಳರೇಖೆಯಗುಂಟ ಉತ್ತರ ದಿಕ್ಕಿನಲ್ಲಿ ಉತ್ತರ ದಿಗ್ಬಿಂದುವಿನಿಂದ ನೀವು ಅಂದಾಜಿಸಿದ ಅಕ್ಷಾಂಶದಷ್ಟು ಕೋನೋನ್ನತಿಯ ಆಸುಪಾಸಿನಲ್ಲಿ ಬಲು ಮಸುಕಾಗಿ ಕಾಣುವ ಒಂಟಿ ತಾರೆಯೇ ಧ್ರುವ ತಾರೆ.

ಪೂರಕ ಮಾಹಿತಿ ಮತ್ತು ಚಿತ್ರಗಳು

ಒಂದು ಕೈಯನ್ನು ಭೂತಲಕ್ಕೆ ಸಮಾಂತರವಾಗಿ ಚಾಚಿ, ಅಂದಾಜಿನ ಮೇಲೆ ಅಕ್ಷಾಂಶಕ್ಕೆ ಸಮನಾದಷ್ಟು ಡಿಗ್ರಿ ಕೋನದಷ್ಟು ಕೈಯನ್ನು ಮೇಲಕ್ಕೆ ಎತ್ತಿ ಹಿಡಿದ ನೇರ ಕೋನೋನ್ನತಿಯನ್ನು ಸೂಚಿಸುತ್ತದೆ.

ಫೆಬ್ರವರಿ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ಈಶಾನ್ಯ ಆಕಾಶದಲ್ಲಿ ಕಾಣಿಸಿಕೊಳ್ಳುವ ಸಪ್ತರ್ಷಿಮಂಡಲ ತದನಂತರ ಅನುಕ್ರಮವಾಗಿ ಮಾರ್ಚ್, ಏಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಆಯಾ ತಿಂಗಳುಗಳ ೧೫ ರಂದು ರಾತ್ರ ೮ ಗಂಟೆಗೆ ನೋಡಿದರೆ ಹಿಂದಿನ ತಿಂಗಳಿಗಿಂತ ಹೆಚ್ಚು ವಾಯವ್ಯದತ್ತ ಸರಿದಿರುವಂತೆ ಭಾಸವಾಗುತ್ತದೆ.

ಸೆಪ್ಟೆಂಬರ್ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ಈಶಾನ್ಯ ಆಕಾಶದಲ್ಲಿ ಕಾಣಿಸಿಕೊಳ್ಳುವ ಕುಂತೀ ಪುಂಜ ತದನಂತರ ಅನುಕ್ರಮವಾಗಿ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಆಯಾ ತಿಂಗಳುಗಳ ೧೫ ರಂದು ರಾತ್ರ ೮ ಗಂಟೆಗೆ ನೋಡಿದರೆ ಹಿಂದಿನ ತಿಂಗಳಿಗಿಂತ ಹೆಚ್ಚು ವಾಯವ್ಯದತ್ತ ಸರಿದಿರುವಂತೆ ಭಾಸವಾಗುತ್ತದೆ.




1 comment:

apkrishna said...

ತುಂಬ ಚೆನ್ನಾಗಿದೆ. ಸವಿವರ ಮಾಹಿತಿಗಳು. ಸಪ್ತರ್ಷಿಮಂಡಲದ ದಿಶೆಯಲ್ಲಿ ೨೧ಮಿಲಿಯ ಜ್ಯೋತಿರ್ವರ್ಷ ದೂರದಲ್ಲಿರುವ ಬ್ರಹ್ಮಾಡವೊಂದರಲ್ಲಿ ಸೂಪರ್ನೋವಾಸ್ಫೋಟನೆ ನಡೆದಿದೆಯಂತೆ.
ರಾಧಾಕೃಷ್ಣ