Pages

17 July 2011

ರಾಹು ಕೇತುಗಳು

ಸಾಮಾನ್ಯವಾಗಿ ರಸ್ತೆಬದಿಯಲ್ಲಿ ಇರುವ ಅರಳಿ ಕಟ್ಟೆಯ ಮೇಲೆ ತಾವು ಪಾಪ ಮಾಡಿದ್ದೇವೆ ಎಂದು ದೃಢವಾಗಿ ನಂಬಿರುವ ಯಾರೋ  ತಮ್ಮ ಪಾಪ ವಿಮೋಚನೆಗಾಗಿ ಅಥವ ಮುಂದೆ ಮಾಡಲಿರುವ ಪಾಪಗಳ ಪರಿಣಾಮಗಳು ತೀವ್ರವಾಗದಿರಲಿ ಎಂಬ ಕಾರಣಕ್ಕಾಗಿ ‘ವಿಮಾ ರೂಪದಲ್ಲಿ’ ಪ್ರತಿಷ್ಠಾಪಿಸಿದ ನವಗ್ರಹಗಳ ಮೂರ್ತಿಗಳಿಗೆ ಶ್ರೀ ವ್ಯಾಸ ಮುಖದಿಂದ ಹೊರಹೊಮ್ಮಿತು ಅನ್ನಲಾದ ಪೀಡಾನಿವಾರಕ ನವಗ್ರಹ ಸ್ತೋತ್ರಗಳನ್ನು ಕಂಠಸ್ಥ ಮಾಡಿಕೊಂಡು ಗುಣುಗುಣಿಸುತ್ತಾ ಪ್ರದಕ್ಷಿಣೆ ಹಾಕುವ ಎಲ್ಲ ನವಗ್ರಹ ಪೀಡೆಯಿಂದ ಮುಕ್ತರಾಗ ಬಯಸುವವರಿಗೆ ಈ ಕೆಳಗಿನ ಎರಡು ಸ್ತೋತ್ರಗಳು ತಿಳಿದೇ ಇರುತ್ತದೆ.

ರಾಹು ಶಾಂತಿ ಸ್ತೋತ್ರ

ಅರ್ಧಕಾಯಮ್ ಮಹಾವೀರಮ್ ಮಹಾವೀರ್ಯಮ್ ಚಂದ್ರಾದಿತ್ಯ ವಿಮರ್ಧನಮ್

ಸಿಂಹಿಕಾ ಗರ್ಭ ಸಂಭೂತಮ್ ತಂ ರಾಹುಮ್ ಪ್ರಣಮಾಮ್ಯಹಮ್

ಕೇತು ಶಾಂತಿ ಸ್ತೋತ್ರ

ಪಲಾಶ ಪುಷ್ಪ ಸಂಕಾಶಮ್ ತಾರಕಾಗ್ರಹ ಮಸ್ತಕಮ್

ರೌದ್ರಮ್ ರೌದ್ರಾತ್ಮಕಮ್ ಘೋರಮ್ ತಂ ಕೇತುಮ್ ಪ್ರಣಮಾಮ್ಯಹಮ್

ಪರಪೀಡೆಯೇ ಪ್ರಧಾನ ವೃತ್ತಿಯಾಗಿಸಿಕೊಂಡಿರುವಂತೆ ಬಿಂಬಿಸಲಾಗಿರುವ ಈ ಎರಡು ‘ಗ್ರಹ’ಗಳು ವಾಸ್ತವವಾಗಿ ಅಸ್ತಿತ್ವದಲ್ಲಿ ಇಲ್ಲ ಎಂಬುದು ತಿಳಿದವರೂ ಈ ಸ್ತೋತ್ರ ಪಠಿಸುವುದು ನನ್ನ ದೃಷ್ಟಿಯಲ್ಲಿ ಬಲು ಅಚ್ಚರಿಯ ವಿದ್ಯಮಾನ. ಇಂಥ ಎರಡು ಗ್ರಹಗಳು ಇಲ್ಲ ಎಂಬುದನ್ನು ಆಧುನಿಕ ಖಗೋಲವಿಜ್ಞಾನ ಸಂಶಯಾತೀತವಾಗಿ ಸಾಬೀತು ಪಡಿಸಿದ ಬಳಿಕವೂ ನಮ್ಮ ಶಾಸ್ತ್ರಗ್ರಂಥಗಳಲ್ಲಿ ಉಲ್ಲೇಖಿಸಿರುವ ರಾಹು ಕೇತುಗಳು ‘ಛಾಯಾ ಗ್ರಹಗಳು (ಷ್ಯಾಡೋ ಪ್ಲ್ಯಾನೆಟ್ಸ್)’ ಎಂದೋ ‘ಅಗೋಚರ ಗ್ರಹಗಳು (ಇನ್ವಿಸಿಬಲ್ ಪ್ಲ್ಯಾನೆಟ್ಸ್)’ ಎಂದೋ ಶಾಸ್ತ್ರವಾಕ್ಯಗಳನ್ನು ಸಮರ್ಥಿಸಿರುವ ‘ಪಂಡಿತ’ರೂ ಇದ್ದಾರೆ. ರಾಹು ಕೇತು ಎಂದು ಜ್ಯೋತಿಷಿಗಳು ಉಲ್ಲೇಖಿಸುವುದು ಏನನ್ನು? ಆಧುನಿಕ ಖಗೋಲವಿಜ್ಞಾನ ಈ ಕುರಿತು ಕೊಡುವ ವಿವರಣೆ ಇಂತಿದೆ -

ಯಾವುದೋ ಒಂದು ಆಕಾಶಕಾಯದ ಕಕ್ಷೆ (ಆರ್ಬಿಟ್) ಅದರ ನಿರ್ದೇಶಕ ತಲಕ್ಕೆ (ಪ್ಲೇನ್ ಆಫ್ ರೆಫರೆನ್ಸ್) ಓರೆಯಾಗಿದೆ ಎಂದು ಕಲ್ಪಿಸಿಕೊಳ್ಳಿ. ಅಂಥ ಸನ್ನಿವೇಶದಲ್ಲಿ ಆ ಕಕ್ಷೆ ನಿರ್ದೇಶಕ ತಲವನ್ನು ಎರಡು ಬಿಂದುಗಳಲ್ಲಿ ಛೇದಿಸಲೇ ಬೇಕಲ್ಲವೇ? ಈ ಬಿಂದುಗಳಿಗೆ ಕಕ್ಷೀಯ ಸಂಪಾತಗಳು (ಆರ್ಬಿಟಲ್ ನೋಡ್ಸ್) ಎಂದು ಹೆಸರು. ನಿರ್ದೇಶಕ ತಲದಲ್ಲಿಯೇ ಇರುವ ಕಕ್ಷೆಗಳು ಆ ತಲವನ್ನು ಛೇದಿಸುವುದು ಸಾಧ್ಯವೇ ಇಲ್ಲ. ಭೂಕೇಂದ್ರಿತ ಕಕ್ಷೆಗಳಿಗೆ ಭೂಮಿಯ ವಿಷುವೀಯ ತಲವನ್ನೂ (ಈಕ್ವಟೋರಿಅಲ ಪ್ಲೇನ್) ಸೂರ್ಯ ಕೇಂದ್ರಿತ ಕಕ್ಷೆಗಳಿಗೆ ಕ್ರಾಂತಿವೃತ್ತ (ಇಕ್ಲಿಪ್ಟಿಕ್, ಸೂರ್ಯನ ವಾರ್ಷಿಕ ಚಲನೆಯ ಕಕ್ಷೆಯನ್ನು ಖಗೋಲದಲ್ಲಿ ಪ್ರತಿನಿಧಿಸುವ ಕಾಲ್ಪನಿಕ ಮಹಾವೃತ್ತ) ಇರುವ ತಲವನ್ನೂ ನಿರ್ದೇಶಕ ತಲವಾಗಿ ಪರಿಗಣಿಸುವುದು ಸರ್ವಮಾನ್ಯ.

ಚಂದ್ರ ಭೂಮಿಯನ್ನು ಪರಿಭ್ರಮಿಸುವ ಕಕ್ಷೆ, ಅರ್ಥಾತ್ ಚಾಂದ್ರ ಕಕ್ಷೆಯು ಕ್ರಾಂತಿವೃತ್ತದ ತಲಕ್ಕೆ ೫ಯಷ್ಟು ಓರೆಯಾಗಿದೆ. ಆದ್ದರಿಂದ ಚಾಂದ್ರ ಕಕ್ಷೆಯು ಕ್ರಾಂತಿ ವೃತ್ತವನ್ನು ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಇವೇ ಚಾಂದ್ರ ಸಂಪಾತಗಳು ಅಥವ ಚಂದ್ರನ ಕಕ್ಷೀಯ ಸಂಪಾತಗಳು. ನಿರ್ದೇಶಕ ತಲದ ಎರಡು ಪಾರ್ಶ್ವಗಳನ್ನು ಯಾವ ಪಾರ್ಶ್ವದಿಂದ ಯಾವ ಪಾರ್ಶ್ವಕ್ಕೆ ಆಕಾಶಕಾಯ ಚಲಿಸುತ್ತದೆ ಎಂಬುದನ್ನು ಯುಕ್ತ ನಿರ್ದೇಶಕ ದಿಕ್ಕುಗಳ (ರೆಫರೆನ್ಸ್ ಡೈರೆಕ್ಷನ್ಸ್) ನೆರವಿನಿಂದ ಸಂಪಾತ ಬಿಂದುಗಳಿಗೆ ನಾಮಕರಣ ಮಾಡುವುದು ವಿಜ್ಞಾನದ ಸಂಪ್ರದಾಯ. ಅಂತೆಯೇ, ಕ್ರಾಂತಿವೃತ್ತದ ತಲದ ಮೂಲಕ ಖಗೋಲದ ಉತ್ತರಾರ್ಧಕ್ಕೆ ಚಂದ್ರ ದಾಟುವ ಸಂಪಾತ ಬಿಂದುವಿಗೆ ಆರೋಹ (ಅಸೆಂಡಿಂಗ್) ಸಂಪಾತ ಅಥವ ಉತ್ತರ ಸಂಪಾತ ಎಂದೂ ದಕ್ಷಿಣಾರ್ಧಕ್ಕೆ ದಾಟುವ ಸಂಪಾತ ಬಿಂದುವಿಗೆ ಅವರೋಹ (ಡಿಸೆಂಡಿಂಗ್) ಸಂಪಾತ ಅಥವ ದಕ್ಷಿಣ ಸಂಪಾತ ಎಂದೂ ನಾಮಕರಣ ಮಾಡಲಾಗಿದೆ. ಇವುಗಳನ್ನು ಅನುಕ್ರಮವಾಗಿ ಮತ್ತುಚಿಹ್ನೆಗಳಿಂದ ಸೂಚಿಸುವುದು ಸಂಪ್ರದಾಯ.

ಸೂರ್ಯ ಅಥವ ಚಂದ್ರ ಗ್ರಹಣಗಳಿಗೂ ಈ ಸಂಪಾತಗಳಿಗೂ ಸಂಬಂಧ ಇರುವುದರಿಂದ ಅವಕ್ಕೆ ವಿಭಿನ್ನ ಸಂಸ್ಕೃತಿಗಳು ತಮ್ಮದೇ ಆದ ರೀತಿಯಲ್ಲಿ ವಿಶೇಷ ಗಮನ ನೀಡಿದ್ದಾರೆ. ಸಂಪಾತವನ್ನು ಚಂದ್ರ ದಾಟುವ ದಿನವೇ ಅಮಾವಾಸ್ಯೆ ಆಗಿದ್ದರೆ ಸೂರ್ಯ ಗ್ರಹಣವೂ ಹುಣ್ಣಿಮೆ ಆಗಿದ್ದರೆ ಚಂದ್ರ ಗ್ರಹಣವೂ ಆಗುತ್ತದೆ. ಈ ಸಂಪಾತಗಳಲ್ಲಿ ಸೂರ್ಯ, ಚಂದ್ರ ಮತ್ತು ಭೂಮಿ ಏಕರೇಖಸ್ಥವಾಗುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಒಂದು ಸಂಪಾತದ ೧೧೩೮` ಖಗೋಲ ರೇಖಾಂಶ ದೂರದ ಒಳಗೆ ಹುಣ್ಣಿಮೆ ಆಗುವಂತಿದ್ದರೆ ಚಂದ್ರ ಗ್ರಹಣವೂ ೧೭೨೫` ಖಗೋಲ ರೇಖಾಂಶ ದೂರದ ಒಳಗೆ ಅಮಾವಾಸ್ಯೆ ಆಗುವಂತಿದ್ದರೆ ಸೂರ್ಯ ಗ್ರಹಣವೂ ಆಗುತ್ತದೆ.



ಈ ಎರಡು ಸಂಪಾತಗಳಿಗೆ ಬೇರೆಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಭಾರತೀಯ ಪುರಾತನರು ಈ ಎರಡು ಸಂಪಾತಗಳಲ್ಲಿ ಅಮಾವಾಸ್ಯೆ ಅಥವ ಹುಣ್ಣಿಮೆ ಆದಂದು ಗ್ರಹಣಗಳು ಆಗುವುದನ್ನು ಗಮನಿಸಿರುವುದರಲ್ಲಿ ಸಂಶಯವಿಲ್ಲ. ಜನರಿಗೆ ಚಿರಪರಿಚಿತವಾಗಿದ್ದ ಭೂಚರ, ಜಲಚರ, ಖಗಚರ ಜೀವಿಗಳ ಹಾಗೂ ವಸ್ತುಗಳ ಮತ್ತು ಪುರಾಣ ಕಥೆಗಳಲ್ಲಿನ ಪಾತ್ರಗಳ ಹೆಸರುಗಳನ್ನು ತಾರೆಗಳಿಗೆ, ರಾಶಿಗಳಿಗೆ ಇಡುವುದು ಅಂದಿನ ಸಂಪ್ರದಾಯ. ಈ ಸಂಪ್ರದಾಯದಂತೆ ರಾಹು ಕೇತುಗಳಿಗೆ ಸೂರ್ಯ ಚಂದ್ರರೊಂದಿಗೆ ವೈರತ್ವ ಇರುವುದನ್ನು ಸಮರ್ಥಿಸುವ ಪೌರಾಣಿಕ ಕಥೆ ಇರುವುದರಿಂದಲೂ ಈ ಮುನ್ನವೇ ಉಲ್ಲೇಖಿಸಿರುವ ಸಂಪಾತಗಳಲ್ಲಿ ಗ್ರಹಣಗಳು ಆಗುವುದರಿಂದಲೂ ಆರೋಹ ಅಥವ ಉತ್ತರ ಸಂಪಾತಕ್ಕೆ ರಾಹು ಎಂದೂ ಅವರೋಹ ಅಥವ ದಕ್ಷಿಣ ಸಂಪಾತಕ್ಕೆ ಕೇತು ಎಂದೂ ಹೆಸರಿಸಿದ್ದಾರೆ. ತಮ್ಮ ವೈರತ್ವವನ್ನು ಆಜೀವ ಪರ್ಯಂತ ಸಂರಕ್ಷಿಸುವ ಸಲುವಾಗಿ ರಾಹು ಕೇತುಗಳು ಸೂರ್ಯಚಂದ್ರರನ್ನು ಆಗಾಗ್ಗ್ಯೆ ನುಂಗಿ ಕೆಲ ಕ್ಷಣಗಳ ನಂತರ ‘ಉಗುಳುತ್ತಾರೆ’! ಈ ರೂಪಕಗಳನ್ನು ನಿಜವೆಂದು ನಂಬಿ ನಂಬಿಕೆಗೆ ತಕ್ಕುದಾದ ಮತೀಯ ಆಚರಣೆಗಳನ್ನು ರೂಪಿಸಿಕೊಂಡಿರುವ ನಾವೆಷ್ಟು ಬುದ್ಧಿವಂತರು?

ಅಂದ ಹಾಗೆ, ಯುರೋಪಿನಲ್ಲಿ ಆರೋಹ ಸಂಪಾತಕ್ಕೆ ಡ್ರ್ಯಾಗನ್ನಿನ (ಬೆಂಕಿ ಕಾರುವ ಮೊಸಳೆ ಅಥವ ಹಾವಿನಂಥರುವ ಭಯಂಕರ ಪೌರಾಣಿಕ ಪ್ರಾಣಿ ಇದು) ತಲೆ ಎಂದೂ ಅವರೋಹ ಸಂಪಾತಕ್ಕೆ ಡ್ರ್ಯಾಗನ್ನಿನ ಬಾಲ ಎಂದೂ ಕರೆಯುತ್ತಾರೆ. ಕಾಪುಟ್ ಡ್ರ್ಯಾಕೋನಿಸ್,  ಕಾಡಾ ಡ್ರ್ಯಾಕೋನಿಸ್ ಅನುಕ್ರಮವಾಗಿ ಲ್ಯಾಟಿನ್ ಹೆಸರುಗಳು. ಹೀಗೆ ಇವಕ್ಕೆ ಅರೇಬಿಯಾ, ಗ್ರೀಸ್ ನಾಗರೀಕತೆಗಳಲ್ಲಿ ಅವರ ಪುರಾಣಗಳಿಗೆ ತಕ್ಕುದಾದ ಹೆಸರುಗಳಿವೆ.

ಕೊನೆಯದಾಗಿ : ಜನಪ್ರಿಯವಾಗಲಿ ಅನ್ನುವ ದೃಷ್ಟಿಯಿಂದ ‘ರಾಹುಕಾಲ’ದಲ್ಲಿಯೇಈ ಲೇಖನವನ್ನು ಬರೆದಿದ್ದೇನೆ.

No comments: