Pages

15 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೩೨

ಆವರ್ತಿಸುತ್ತಿದ್ದರೂ ನಿಶ್ಚಲವಾಗಿರುವಂತೆ ಕಾಣುವ ಚಕ್ರ

ತನ್ನ ಅಕ್ಷದ ಸುತ್ತ ಭ್ರಮಿಸುತ್ತಿರುವ ಅಥವ ಆವರ್ತಿಸುತ್ತಿರುವ ವಸ್ತುವಿನ ಮೇಲೆ ಕ್ಲಪ್ತ ಅವಧಿಗಳಲ್ಲಿ ಬೆಳಕು ಬೀರಿದಾಗ ಅದು ಸ್ಥಾಯಿಯಾಗಿ, ಅರ್ಥಾತ್ ನಿಶ್ಚಲವಾಗಿ ಇರುವಂತೆ ಕಾಣುವುದಕ್ಕೆ ಸ್ಟ್ರೋಬೋಸ್ಕೋಪಿಕ್ ಪರಿಣಾಮ ಎಂದು ಹೆಸರು. ಚಲನಚಿತ್ರಗಳಲ್ಲಿ ಅಥವ ದೂರದರ್ಶನದಲ್ಲಿ ವೇಗವಾಗಿ ಚಲಿಸುತ್ತಿರುವ ವಾಹನದ ಚಕ್ರಗಳು ನಿಶ್ಚಲವಾಗಿರುವಂತೆಯೋ ಹಿಮ್ಮುಖವಾಗಿ ಭ್ರಮಿಸುತ್ತಿರುವಂತೆಯೋ ಕಾಣುವುದನ್ನು ನೀವು ಗಮನಿಸಿರಬಹುದು. ಈ ವಿದ್ಯಮಾನವನ್ನು ಸಮರ್ಥವಾಗಿ ಪ್ರದರ್ಶಿಸಬಲ್ಲ ಆಟಿಕೆಯೊಂದನ್ನು ನೀವೇ ತಯಾರಿಸಬಹುದು.

ಆಟಿಕೆ ತಯಾರಿಕೆಯ ಹಂತಗಳು ಇಂತಿವೆ: (ಸೂ: ಹಂತದ ಕ್ರಮಸಂಖ್ಯೆಯೇ ಸಂಬಂಧಿಸಿದ ಚಿತ್ರ ಸಂಖ್ಯೆಯೂ ಆಗಿದೆ)

೧. ದಪ್ಪ ರಟ್ಟಿನಿಂದ ೬ ಇಂಚು ವ್ಯಾಸ ಉಳ್ಳ ವೃತ್ತಾಕಾರದ ಬಿಲ್ಲೆ ತಯಾರಿಸಿ ಇಟ್ಟುಕೊಳ್ಳಿ.

೨. ಬಿಳಿ ಕಾಗದದ ಹಾಳೆಯ ಮೇಲೆ ೩ ಇಂಚು ತ್ರಿಜ್ಯ ಉಳ್ಳ ವೃತ್ತ ರಚಿಸಿ. ಪೆನ್ಸಿಲಿನಿಂದ ವಿಭಾಜಕ ರೇಖೆಗಳನ್ನು ಎಳೆದು ಅದನ್ನು ೨೦ ಸಮ ಖಂಡಗಳಾಗಿ ವಿಭಜಿಸಿ. ೨ ಅನುಕ್ರಮ ವಿಭಾಜಕ ರೇಖೆಗಳ ನಡುವಣ ಕೋನ ೧೮ ಇರುತ್ತದೆ.



೩. ಮೊದಲಿನ ವೃತ್ತದ ಕೇಂದ್ರವನ್ನೇ ಪುನಃ ಕೇಂದ್ರವಾಗಿ ಇಟ್ಟುಕೊಂಡು ೨ ಇಂಚು ತ್ರಿಜ್ಯ ಇರುವ ಇನ್ನೊಂದು ವೃತ್ತ ರಚಿಸಿ.

೪. ಈ ವೃತ್ತದ ಪರಿಧಿಯ ಒಳಗೆ ಇರುವ ಹಿಂದೆ ಎಳೆದಿದ್ದ ಖಂಡ ವಿಭಾಜಕ ರೇಖೆಗಳನ್ನು ಅಳಿಸಿ ಹಾಕಿ.



೫. ಈ ವೃತ್ತವನ್ನು ೮ ಸಮ ಖಂಡಗಳಾಗಿ ವಿಭಜಿಸಿ. ೨ ಅನುಕ್ರಮ ವಿಭಾಜಕಗಳ ನಡುವಣ ಕೋನ ೪೫.

೬. ಮೊದಲಿನ ೨ ವೃತ್ತಗಳ ಕೇಂದ್ರವನ್ನೇ ಪುನಃ ಕೇಂದ್ರವಾಗಿ ಇಟ್ಟುಕೊಂಡು ೧ ಇಂಚು ತ್ರಿಜ್ಯ ಇರುವ ಮೂರನೇ ವೃತ್ತ ರಚಿಸಿ.



೭. ಈ ವೃತ್ತದ ಪರಿಧಿಯ ಒಳಗೆ ಇರುವ ೨ನೇ ವೃತ್ತದ ಖಂಡ ವಿಭಾಜಕ ರೇಖೆಗಳನ್ನು ಅಳಿಸಿ ಹಾಕಿ.

೮. ಮೂರನೇ ವೃತ್ತವನ್ನು ೬ ಸಮ ಖಂಡಗಳಾಗಿ ವಿಭಜಿಸಿ. ೨ ಅನುಕ್ರಮ ವಿಭಾಜಕಗಳ ನಡುವಣ ಕೋನ ೬೦. ಅಂತಿಮವಾಗಿ ೨೦ ಸಮ ಖಂಡಗಳು ಇರುವ ಹೊರ ವಲಯ, ೮ ಸಮ ಖಂಡಗಳು ಇರುವ ಮಧ್ಯ ವಲಯ ಮತ್ತು ೬ ಸಮ ಖಂಡಗಳು ಇರುವ ಒಳ ವಲಯ - ಇಂತು ಮೂರು ವಲಯಗಳಿರುವ ಸಂಕೀರ್ಣ ವೃತ್ತ ಇದಾಗಿರುತ್ತದೆ.



೯. ಪ್ರತೀ ವಲಯದಲ್ಲಿ ಇರುವ ಖಂಡಗಳ ಪೈಕಿ ಪರ್ಯಾಯ (ಒಂದು ಬಿಟ್ಟು ಇನ್ನೊಂದು) ಖಂಡಗಳಿಗೆ ಕಪ್ಪು ಬಣ್ಣ ತುಂಬಿ

೧೦. ತದನಂತರ ವೃತ್ತವನ್ನು ಅಚ್ಚುಕಟ್ಟಾಗಿ ಕತ್ತರಿಸಿ ಮೊದಲೇ ತಯಾರಿಸಿ ಇಟ್ಟುಕೊಂಡಿದ್ದ ರಟ್ಟಿನ ಬಿಲ್ಲೆಗೆ ಜಾಗರೂಕತೆಯಿಂದ ಅಂಟಿಸಿ. ಬಿಲ್ಲೆಯ ಕೇಂದ್ರದ ಮೂಲಕ ಸ್ತಂಭಾಕೃತಿಯ ಒಂದು ನಿರುಪಯುಕ್ತ ಬಾಲ್ ಪಾಇಂಟ್ ಪೆನ್ನನ್ನು ತೂರಿಸಿ. ಪಾಇಂಟಿನ ಭಾಗ ಮಾತ್ರ ಬಿಲ್ಲೆಯ ಕೆಳಗೂ ಉಳಿದ ಬಹುಭಾಗ ಬಿಲ್ಲೆಯ ಮೇಲೂ (ಚಿತ್ರ ಅಂಟಿಸಿದ ಭಾಗ) ಇರಬೇಕು.

೧೧. ಈ ಒಟ್ಟಾರೆ ಸಂರಚನೆಯು ಬುಗುರಿಯಂತೆ ಆವರ್ತಿಸಲು ಎಷ್ಟು ಭಾಗ ಬಿಲ್ಲೆಯ ಮೇಲೆ ಇರಬೇಕೋ ಅಷ್ಟನ್ನು ಇಟ್ಟುಕೊಂಡು ಉಳಿದ ಭಾಗವನ್ನು ಕತ್ತರಿಸಿ ಹಾಕಿ.



ಈ ವಿಶಿಷ್ಟ ಬುಗುರಿಯನ್ನು ಟ್ಯೂಬ್ ಲೈಟ್ ಬೆಳಕಿನಲ್ಲಿ ಆವರ್ತಿಸುವಂತೆ ಮಾಡಿ. ವಲಯಗಳು ಯಾವ ದಿಕ್ಕಿನಲ್ಲಿ ಆವರ್ತಿಸುವಂತೆ ಗೋಚರಿಸುತ್ತದೆ ಎಂಬುದನ್ನು ಗಮನಿಸಿ. ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ವಲಯ ಬುಗುರಿ ತಿರುಗುತ್ತಿರುವ ದಿಕ್ಕಿನಲ್ಲಿಯೂ ಒಂದು ವಲಯ ಅದಕ್ಕೆ ವಿರುದ್ಧ ದಿಕ್ಕಿನಲ್ಲಿಯೂ ಒಂದು ವಲಯ ನಿಶ್ಚಲವಾಗಿರುವಂತೆಯೂ ಗೋಚರಿಸುವ ವೈಚಿತ್ರ್ಯ ಗಮನಿಸಿ.

No comments: