Pages

7 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೨೭

ಕನ್ನಡಿಯೊಳಗಿನ ಬಿಂಬ

ದಿನಕ್ಕೊಮ್ಮೆಯಾದರೂ ಕನ್ನಡಿಯಲ್ಲಿ ನಿಮ್ಮ ಮುಖದ ಬಿಂಬ ನೋಡಿಕೊಳ್ಳುತ್ತೀರಲ್ಲವೆ? ಕನ್ನಡಿಯಲ್ಲಿ ಉಂಟಾಗುವ ಬಿಂಬದ ಲಕ್ಷಣಗಳನ್ನು ಮಾಡಲೋಸುಗ ಈ ಪ್ರಯೋಗಗಳನ್ನು ಮಾಡಿ. ಮನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಚೌಕಟ್ಟು ಇರುವ ಕನ್ನಡಿಗಳನ್ನು ಉಪಯೋಗಿಸಿ ಈ ಪ್ರಯೋಗಗಳನ್ನು ಮಾಡಬಹುದಾದರೂ ಚೌಕಟ್ಟು ಇಲ್ಲದ ೆರಡು ಕನ್ನಡಿ ಗಳು ಇದ್ದರೆ ಉತ್ತಮ.

ಕನ್ನಡಿಯನ್ನು ಒಂದು ಮರದ ಘನಾಕೃತಿಯ ತುಂಡಿಗೆ ಅಥವ ಯಾವುದಾದರೂ ಚಿಕ್ಕ ಡಬ್ಬಿಗೆ ಅಂಟು ಟೇಪಿನ ನೆರವಿನಿಂದ ಬಂಧಿಸಿ ಅದು ಮೇಜಿನ ಮೇಲ್ಮೈಗೆ ಲಂಬವಾಗಿ ನಿಲ್ಲುವಂತೆ ಮಾಡಿ. ಯಾವುದಾದರೂ ವಾರ್ತಾಪತ್ರಿಕೆಯ ಚಿತ್ರಗಳು ಇರುವ ಹಾಳೆಯನ್ನು ಮೇಜಿನ ಮೇಲೆ ಹರಡಿ ಅದರ ಮೇಲೆ ಲಂಬವಾಗಿ ನಿಲ್ಲುವಂತೆ ಮಾಡಿದ ಕನ್ನಡಿ ವ್ಯವಸ್ಥೆಯನ್ನು ಇಟ್ಟು ಮುಂದೆ ಪಟ್ಟಿ ಮಾಡಿರುವ ಅಂಶಗಳನ್ನು ವೀಕ್ಷಿಸಿ. ಕನ್ನಡಿಯ ಮುಂದಿರುವ ಎಲ್ಲ ಮುದ್ರಿತ ಸಾಲುಗಳು ಮತ್ತು ಚಿತ್ರಗಳ ಬಿಂಬ ಕಾಣಿಸುತ್ತಿದೆಯೇ? ಬಿಂಬದಲ್ಲಿ ಗೋಚರಿಸುತ್ತಿರುವ ಸಾಲುಗಳು, ಅಕ್ಷರಗಳು, ಚಿತ್ರಗಳು ಮುಂತಾದವುಗಳ ಗಾತ್ರ, ಾಕಾರ ಇತ್ಯಾದಿಗಳು ವಾರ್ತಾಪತ್ರಿಕೆಯ ಹಾಳೆಯಲ್ಲಿ ಇರುವಂತೆಯೇ ಇವೆಯೇ? ಬೀಬದಲ್ಲಿ ಗೋಚರಿಸುತ್ತಿರುವ ವಾಕ್ಯಗಳನ್ನು ಸುಲಭವಾಗಿ ಓದಬಹುದೆ? ಇಲ್ಲ ಎಂದಾದರೆ ಏಕೆ? ಕಾಗದದ ಮೇಲೆ ಬಿಂಬದಲ್ಲಿ ಕಾಣುತ್ತಿರುವಂತೆ ಕೆಲವು ಅಕ್ಷರಗಳನ್ನು ಬಿಳಿ ಕಾಗದದ ಮೇಲೆ ಬರೆಯಿರಿ. ಹಾಗೆ ಬರೆದದ್ದರ ಬಿಂಬವನ್ನು ನೋಡಿ, ಓದಿ. ಕನ್ನಡಿಯ ಮುಂದೆ ಇರುವ ಹಾಳೆಯ ಏನಾದರೊಂದು ಚಿಕ್ಕ ವಸ್ತುವನ್ನು ಇಟ್ಟು ಅದು ಯಾವ ಸಾಲಿನ ಮೇಲೆ ಇದೆ ಎಂಬುದನ್ನು ಗಮನಿಸಿ. ಅದರ ಬಿಂಬ ಆ ಮುದ್ರಿತ ಸಾಲಿನ ಬಿಂಬದ ಮೇಲಿದೆಯೇ? ವಸ್ತು ಕನ್ನಡಿಯ ಮುಂದೆ ಎಷ್ಟು ದೂರದಲ್ಲಿ ಇದೆಯೋ ಅಷ್ಟೇ ದೂರದಲ್ಲಿ ಕನ್ನಡಿಯ ಹಿಂದೆ ಬಿಂಬ ಇರುವಂತೆ ಭಾಸವಾಗುತ್ತದೆಯೇ? ಕನ್ನಡಿಯಲ್ಲಿ ನಿಮ್ಮ ಮುಖದ ಬಿಂಬವನ್ನು ನೋಡಿ. ನಿಮ್ಮ ಮುಖದ ಎಡ ಭಾಗದ ಕಿವಿ, ಕಣ್ಣು ಇವೇ ಮೊದಲಾದ ಅಂಗಗಳು ಬಿಂಬದ ಬಲ ಭಾಗದ ಕಿವಿ, ಕಣ್ಣುಗಳಂತೆಯೂ ನಿಮ್ಮ ಮುಖದ ಬಲ ಭಾಗದ ಕಿವಿ, ಕಣ್ಣು ಇವೇ ಮೊದಲಾದ ಅಂಗಗಳು ಬಿಂಬದ ಎಡ ಭಾಗದ ಕಿವಿ, ಕಣ್ಣುಗಳಂತೆಯೂ ಭಾಸವಾಗುತ್ತದೆಯೆ? ವಸ್ತುವಿನ ಎಡಬಲಗಳು ಬಿಂಬದಲ್ಲಿ ಅದಲುಬದಲಾಗಿರುವುದನ್ನು ಬಿಟ್ಟರೆ ಬಿಂಬವು ವಸ್ತುವಿನ ಯಥಾವತ್ತಾದ ಪ್ರತಿರೂಪವೇ?

No comments: