Pages

8 July 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೨೮

ಕನ್ನಡಿಯೊಳಗಿನ ಬಿಂಬಗಳು

ಚೌಕಟ್ಟು ಇಲ್ಲದ ೨ ಕನ್ನಡಿಗಳು, ಒಂದು ನಾಣ್ಯ, ಕನ್ನಡಿ ಮೇಜಿನ ಮೇಲ್ಮೈಗೆ ಲಂಬವಾಗಿ ನಿಲ್ಲುವಂತೆ ಮಾಡಲು ಮರದ ೨ ಆಯಾಕಾರದ ಘನಗಳು, ಅಂಟು ಟೇಪ್ - ಇವಿಷ್ಟನ್ನು ಸಂಗ್ರಹಿಸಿ. ಪ್ರತೀ ಕನ್ನಡಿಯನ್ನು ಅಂಟು ಟೇಪಿನ ನೆರವಿನಿಂದ ಮರದ ತುಂಡಿಗೆ ಬಂಧಿಸಿ ಮೇಜಿನ ಮೇಲ್ಮೈಗೆ ಲಂಬವಾಗಿ ನಿಲ್ಲುವಂತೆ ಮಾಡಿ. (ಚೌಕಟ್ಟು ಇರುವ ಕನ್ನಡಿಗಳು ಮತ್ತು ಯುಕ್ತ ಗಾತ್ರದ ಪುಸ್ತಕಗಳನ್ನು ಉಪಯೋಗಿಸಲೂ ಬಹುದು). ಇಷ್ಟಾದ ಬಳಿಕ ಕನ್ನಡಿಗಳು ಮೇಜಿನ ಮೇಲ್ಮೈಗೆ ಲಂಬವಾಗಿಯೂ, ಸುಮಾರು ೯೦ ಕೋನದಲ್ಲಿ ಪರಸ್ಪರ ತಗುಲಿಕೊಂಡು ಇರುವಂತೆಯೂ ನಿಲ್ಲಿಸಿ. ಎರಡು ಕನ್ನಡಿ ಪರಸ್ಪರ ತಾಗಿಕೊಂಡು ಉಂಟಾಗಿರುವ ಮೂಲೆಯ ನೇರದಲ್ಲಿ ತುಸು ದೂರದಲ್ಲಿ ನಾಣ್ಯ (ಅಥವ ಯಾವುದೇ ಪುಟ್ಟ ವಸ್ತು) ಇಡಿ. ಕನ್ನಡಿಯೊಳಗಿನ ನಾಣ್ಯಗಳನ್ನೂ ಸೇರಿಸಿದರೆ ನಿಮ್ಮ ಹತ್ತಿರ ಒಟ್ಟು ಎಷ್ಟು ನಾಣ್ಯಗಳಿವೆ ಲೆಕ್ಕಿಸಿ. ನೀವು ಇಟ್ಟ ನಾಣ್ಯದ ಎಷ್ಟು ಬಿಂಬಗಳು ಗೋಚರಿಸುತ್ತಿವೆ? ಕನ್ನಡಿಗಳ ನಡುವಣ ಕೋನ ಬದಲಿಸಿ ಬಿಂಬಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆ ವೀಕ್ಷಿಸಿ. ಕೋನ ಹೆಚ್ಚಾದಂತೆ ಬಿಂಬಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆ ವೀಕ್ಷಿಸಿ. ಕೋನ ಹೆಚ್ಚಾದರೆ ಬಿಂಬಗಳ ಸಂಖ್ಯೆ ಹೆಚ್ಚುತ್ತದೆಯೇ? ಕಮ್ಮಿ ಆಗುತ್ತದೆಯೇ? ನಿಮ್ಮ ಮುಂದೆ ಒಂದು ಮತ್ತು ಹಿಂದೆ ಒಂದು ಇಟ್ಟರೆ ನಿಮ್ಮ ಎಷ್ಟು ಬಿಂಬಗಳು ಗೋಚರಿಸಬಹುದು - ಆವಿಷ್ಕರಿಸಿ. ಕ್ಷೌರಿಕನ ಅಂಗಡಿಯಲ್ಲಿ ಗ್ರಾಹಕನ ಎದುರು ಮತ್ತು ಹಿಂದೆ ಒಂದೊಂದು ಕನ್ನಡಿ ಏಕೆ ಇಡುತ್ತಾರೆ?

ಕನ್ನಡಿಯಲ್ಲಿ ತಲೆಕೆಳಗಾದ ಬಿಂಬ!

ಕನ್ನಡಿಯಲ್ಲಿ ನಿಮ್ಮ ತಲೆಕೆಳಗಾದ ಬಿಂಬ ನೋಡಬೇಕೆ? ಎರಡು ಚೌಕಟ್ಟು ಇಲ್ಲದ ಕನ್ನಡಿಗಳು ಮತ್ತು ಅವುಗಳನ್ನು ಒಳಗೆ ಯಾವುದಾದರೊಂದು ಮೈಗೆ ಲಂಬವಾಗಿ ಇಡಬಹುದಾದಷ್ಟು ದೊಡ್ಡ ರಟ್ಟಿನ ಡಬ್ಬಿ ಸಂಗ್ರಹಿಸಿ. ಚಿತ್ರದಲ್ಲಿ ತೋರಿಸಿದಂತೆ ಕನ್ನಡಿಗಳು ಒಂದನ್ನೊಂದು ೯೦ ಕೋನದಲ್ಲಿ ಪರಸ್ಪರ ತಗುಲಿಕೊಂಡು ಅಲುಗಾಡದೆ ಇರುವಂತೆಯೂ ನಿಲ್ಲಿಸಿ. ಕನ್ನಡಿಗಳು ಅಲುಗಾಡದಂತೆ ನಿಲ್ಲಿಸುವುದು ಹೇಗೆ ಎಂಬುದನ್ನು ನೀವೇ ಆವಿಷ್ಕರಿಸಿ. ಕನ್ನಡಿಯುತ ಪೆಟ್ಟಿಗೆಯನ್ನು ಚಿತ್ರದಲ್ಲಿ ತೋರಿಸಿದಂತೆ ಮೇಜಿನ ಮೇಲೆ ಇಟ್ಟು  ಕನ್ನಡಿಗಳು ಸಂಧಿಸುವಲ್ಲಿ ಉಂಟಾದ ರೇಖೆಯ ನೇರದಲ್ಲಿ ನಿಮ್ಮ ಮುಖ ಇರುವಂತೆ ನಿಂತು ನಿಮ್ಮ ತಲೆಕೆಳಗಾದ ಬಿಂಬ ನೋಡಿ! ಹೀಗಾಗಲು ಕಾರಣ ನೀವೇ ಪತ್ತೆ ಹಚ್ಚಿ.

No comments: