ಈ ತಿಂಗಳ ಆರಂಭದಲ್ಲಿ ಒಂದು ಮದುವೆಯ ಆರತಕ್ಷತೆಗೆ (ಇಂಥ ‘ಆರತಿ’-‘ಅಕ್ಷತೆ’ ಎರಡೂ ಇಲ್ಲದ, ಮದುವೆಗೆ ಮೊದಲೇ ಜರಗುವ ಕಾರ್ಯಕ್ರಮದ ಕುರಿತು ಒಂದು ಬ್ಲಾಗ್ ಬರೆದಿದ್ದೆ) ಹೋಗಲೇ ಬೇಕಿತ್ತು, ಹೋಗಿದ್ದೆ. ಭವ್ಯವಾದ ಭವನ, ದಸರಾ ವೈಭವ ನೆನಪಿಸುವ ದೀಪಾಲಂಕಾರ ಇತ್ಯಾದಿ ಇತ್ಯಾದಿ. ಮೈಸೂರಿನ ಜನಸಂಖ್ಯೆಯ ಅರ್ಧದಷ್ಟು ಆಹ್ವಾನಿತರೋ ಎಂಬ ಸಂಶಯ ಮೂಡಿಸುವಷ್ಟು ಜನಸಂದಣಿ, ಯಾರಿಗೂ ಢಿಕ್ಕಿ ಹೊಡೆಯದೇ ಸಭಾಂಗಣದೊಳಗೆ ನಡೆಯುವುದೇ ಕಷ್ಟವಾಗಿದ್ದ ಪರಿಸ್ಥಿತಿಯಲ್ಲಿ ಭವನದೊಳಕ್ಕೆ ನುಸುಳಿದ್ದಾಯಿತು. ಭೋಜನಾಲಯ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದ್ದಾಯಿತು. ನನ್ನನ್ನು ಆಮಂತ್ರಿಸಿದ್ದು ವರನ ತಂದೆಯಾದ್ದರಿಂದ ಅವರು ಎಲ್ಲಿದ್ದಾರೆ ಎಂಬುದನ್ನೂ ಗಮನಿಸಿದ್ದಾಯಿತು (ಅವರೂ ಸಮಾರಂಭದ ಘನತೆಗೆ ತಕ್ಕಂತೆ ಸೂಟುಬೂಟುಧಾರಿಯಾಗಿ -ನಾನು ಅವರನ್ನು ಕಳೆದ ೩೦ ವರ್ಷಗಳಿಂದ ನೋಡುತ್ತಿದ್ದರೂ ಸೂಟುಬೂಟುಧಾರಿಯಾಗಿದ್ದದ್ದನ್ನು ನೋಡಿದ್ದು ಇದೇ ಮೊದಲು - ವರನ ಪಕ್ಕದಲ್ಲಿ ವೇದಿಕೆಯ ಮೇಲೆಯೇ ಇದ್ದರಿಂದ ಇದು ಕಷ್ಟವಾಗಲಿಲ್ಲ. ವಧುವಿನ ಪಕ್ಕದಲ್ಲಿ ಆಕೆಯ ಸರ್ವಾಲಂಕಾರ ಭೂಷಿತಾ ಮಾತಾಪಿತೃಗಳಿದ್ದರು). ಇಂಥ ಸಮಾರಂಭಗಳಲ್ಲಿ ನಮ್ಮ ಪ್ರಧಾನ ಕರ್ತವ್ಯಗಳು ಎರಡು: ೧.ಸರತಿ ಸಾಲಿನಲ್ಲಿ ನಿಂತು ವೇದಿಕೆಯನ್ನು ತಲುಪಿ ವಧೂವರರಿಗೆ ಶುಭಹಾರೈಸಿ ಉಡುಗೊರೆಯನ್ನು ಹಸ್ತಾಂತರಿಸಿ ವಿಡಿಯೋದಲ್ಲಿ ನಮ್ಮ ಹಾಜರಾತಿ ದಾಖಲಿಸುವುದು (ಇತ್ತೀಚೆಗೆ ‘ಆಶೀರ್ವದಿಸುವ’ ಕ್ರಮ ಇಲ್ಲ. ಯಾರ ಕಡೆಯವರು ನಮ್ಮನ್ನು ಆಮಂತ್ರಿಸಿದ್ದಾರೆ ಎಂಬುದನ್ನು ಆಧರಿಸಿ ವರನಿಗೆ ಅಥವ ವಧುವಿಗೆ ಶುಭ ಹಾರೈಸಿದರೆ ಸಾಕು. ಏಕೆಂದರೆ, ನಿಮ್ಮನ್ನು ಆಮಂತ್ರಿಸದವರು ನಿಮ್ಮನ್ನು ಗಮನಿಸುವುದೇ ಇಲ್ಲ) ೨. ಭೋಜನಾಲಯದತ್ತ ಧಾವಿಸಿ ‘ಬುಫೆ ಊಟ’ದ ಸರತಿ ಸಾಲಿನಲ್ಲಿ ನಿಂತು ಊಟಮಾಡುವುದು. ಅಂದ ಹಾಗೆ ಈ ‘ಆರತಕ್ಷತೆ’ಯಲ್ಲಿ ವಿಡಿಯೋಗ್ರಾಫರ್ ಒಂದೆಡೆ ಕುಳಿತು ಯಾರಿಗೂ ತೊಂದರೆಯಾಗದಂತೆ ಎತ್ತರದಲ್ಲಿ ಕ್ಯಾಮೆರಸಹಿತ ಚಲಿಸಬಲ್ಲ ಯಾಂತ್ರಿಕ ಕೈಯನ್ನು ಬೇಕಾದ ಕೋನಕ್ಕೆ ತಿರುಗಿಸಿ ವಿಡಿಯೋ ತೆಗೆಯುವ ವ್ಯವಸ್ಥೆಯೂ ಇತ್ತು. ಆದ್ದರಿಂದ ಸರತಿ ಸಾಲಿನಲ್ಲಿ ನಿಂತಿದ್ದವರನ್ನೂ ಸಭಾಂಗಣದೊಳಕ್ಕೆ ಬರುತ್ತಿದ್ದವರನ್ನೂ ಒಳಗೆ ಕುಳಿತಿದ್ದವರನ್ನೂ ಬಲು ಸುಲಭವಾಗಿ ವಿಡಿಯೋದಲ್ಲಿ ದಾಖಲಿಸುತ್ತಿದ್ದರು. ಬಹುಶ: ಇದಕ್ಕೆ ವೆಚ್ಚವಾದ ಹಣದಲ್ಲಿ ನನ್ನ ಮದುವೆಯಂಥ ಹತ್ತೋ ಇಪ್ಪತ್ತೋ ಮದುವೆಗಳನ್ನು ಮಾಡಬಹುದೇನೋ. ಮದುವೆಗಳಲ್ಲಿ ಇಂಥ ವ್ಯವಸ್ಥೆ ಮಾಡಿದ್ದನ್ನು ನಾನು ನೋಡಿದ್ದು ಇದೇ ಮೊದಲು. ಅದೇನೇ ಇರಲಿ ಮೊದಲನೇ ಕರ್ತವ್ಯವನ್ನು ಯಶಸ್ವಿಯಾಗಿ ಮಾಡಿದ್ದಾಯಿತು. ಎರಡನೇ ಕರ್ತವ್ಯ ಪಾಲನೆಗಾಗಿ ಭೋಜನಾಲಯದತ್ತ ಧಾವಿಸಿದಾಗ ಅಚ್ಚರಿಯೊಂದು ಕಾದಿತ್ತು. ಪ್ರವೇಶದ್ವಾರದ ಬಳಿ ಇದ್ದ ಕಂಬಕ್ಕೆ ಭೋಜನಕ್ಕೆ ಲಭ್ಯವಿದ್ದ ವಿಶೇಷ ಖಾದ್ಯಗಳ ಪಟ್ಟಿ ಇದ್ದ ಬ್ಯಾನರ್ ನೇತುಹಾಕಿದ್ದರು. ಪಾನಿಪುರಿ, ಭೇಲ್ ಪುರಿ, ಮಸಾಲೆ ಪುರಿ, ಬೇಬಿ ಖಾನ್ ಮಂಚೂರಿ (ಕ್ಷಮಿಸಿ, ಅಲ್ಲಿ ಬರೆದದ್ದು ಹಾಗೆ), ರಸಮಲೈ, ಮಸಾಲೆ ದೋಸೆ, ಟೊಮೇಟೊ ದೋಸೆ, ರವೆ ಇಡ್ಲಿ. ಇಲ್ಲಿಯೂ ಜನಸಂದಣಿ. ನಾಲ್ಕು ದಿಕ್ಕುಗಳಲ್ಲಿಯೂ ‘ಸರ್ವಿಂಗ್ ಪಾಇಂಟ್’ ಇದ್ದಂತಿತ್ತು. ಈ ಪಾಇಂಟ್ ಗಳ ಮೇಜುಗಳಾಗಲೀ ಪಾತ್ರೆಗಳಾಗಲೀ ಗೋಚರಿಸದಿದ್ದರೂ ಜನದಟ್ಟಣೆ ಮತ್ತು ಉದ್ದನೆಯ ಬಿಳಿ ಟೋಪಿಗಳ ಸಾಲಿನಿಂದ ಅವುಗಳ ಇರುವಿಕೆಯನ್ನು ಅಂದಾಜಿಸಬಹುದಿತ್ತು. (ಈ ತೆರನಾದ ಟೋಪಿಧಾರಿಗಳನ್ನು ಅಡಿಗೆಯವ ಅಥವ ಬಡಿಸುವವ ಎಂದು ಅವಮಾನ ಮಾಡುವಂತಿಲ್ಲ. ಷೆಫ್ ಅಥವ ಬಟ್ಲರ್ ಎಂದು ಉಲ್ಲೇಖಿಸಬೇಕು) ತಟ್ಟೆ ಹಿಡಿದು ಸರತಿ ಸಾಲಿನಲ್ಲಿ ಹೋಗಿ (ಭವತಿ ಭಿಕ್ಷಾಂ ದೇಹಿ) ತಿನ್ನುವಷ್ಟನ್ನು ಹಾಕಿಸಿಕೊಳ್ಳಬೇಕಾದದ್ದು ಬುಫೆ ಊಟದ ಕ್ರಮವಾದ್ದರಿಂದ ತಟ್ಟೆ ಎಲ್ಲಿದೆಯೆಂದು ಬಡಿಸುವ ವ್ಯವಸ್ಥೆ ಇದ್ದ ಒಂದು ಪಾಇಂಟ್ ಹತ್ತಿರ ಹೋಗಿ ಇಣಿಕಿದೆ. ಅಲ್ಲೆಲ್ಲೂ ತಟ್ಟೆಗಳು ಇರಲಿಲ್ಲವಾದರೂ ಸರತಿ ಸಾಲಿನಲ್ಲಿ ನಿಂತ ಎಲ್ಲರ ಕೈನಲ್ಲಿ ತಟ್ಟೆಗಳಿದ್ದವು. ಹಾಗಿದ್ದರೆ ತಟ್ಟೆಗಳೆಲ್ಲಿ? ಹುಡುಕಿದೆ. ಸಿಕ್ಕಿಯೇ ಬಿಟ್ಟಿತು ‘ಡಿಸ್ ಪೋಸೆಬಲ್ ತಟ್ಟೆಗಳ ರಾಶಿ, ಭೋಜನಾಲಯದ ಮಧ್ಯದಲ್ಲಿ ಇದ್ದ ಮೇಜಿನ ಮೇಲೆ. ಪಕ್ಕದಲ್ಲಿಯೇ, ಒಂದು ಮೇಜಿನ ಮೇಲೆ ಬೃಹದಾಕಾರದ ಟ್ರೇನಲ್ಲಿ ಹರಡಿತ್ತು ಈರುಳ್ಳಿ, ಸೌತೆಕಾಯಿ, ಕ್ಯಾರೆಟ್, ಲೆಟ್ಯೂಸಿನ ಚೂರುಗಳ ರಾಶಿ. ಸಾಲದ್ದಕ್ಕೆ ಅಲ್ಲಿಯೇ ಕೈಗೆಟುಕದಷ್ಟು ದೂರದಲ್ಲಿತ್ತು ಕೆಲವು ‘ತರಕಾರಿ’ ಕೆತ್ತಿ ತಯಾರಿಸಿದ ಕಲಾಕೃತಿಗಳು ಮತ್ತು ಅವುಗಳ ಶಿಲ್ಪಿಗಳ ಹೆಸರು ಹೊತ್ತ ಚೀಟಿಗಳು! ತಟ್ಟೆ ತೆಗೆದುಕೊಂಡು ನಾನು ತಿನ್ನುವ ತರಕಾರಿ ಚೂರು ಹಾಕಿಕೊಂಡು ಮೆಲ್ಲುತ್ತಾ ಸರತಿಸಾಲಿನಲ್ಲಿ ನಿಂತೆ. ಮೊದಲನೇ (ಬಿಳಿಸಮವಸ್ತ್ರ, ವಿಶೀಷ್ಟ ಟೊಪ್ಪಿ, ಕೈಗವಸುಧಾರೀ) ಬಟ್ಲರ್ ಬಳಿ ತಲುಪುವ ಹೊತ್ತಿಗೆ ತರಕಾರಿ ಚೂರುಗಳು ಖಾಲಿಯಾಗಿತ್ತು. ತರಕಾರಿ ಚೂರುಗಳು ಇದ್ದದ್ದರಿಂದ ಸಾಲಿನಲ್ಲಿ ನಿಂತಾಗ ‘ಬೋರ್’ ಆಗಲಿಲಲ್ಲ. ಮೊದಲು ಇದ್ದದ್ದು ದೋಸೆಗಳು ಮತ್ತು ಇಡ್ಲಿ ಹಾಗೂ ತತ್ಸಂಬಂಧದ ಚಟ್ನಿಗಳು ಮತ್ತು ‘ಕೂರ್ಮ’. ತದನಂತರ ಇದ್ದದ್ದು ಘೀ ರೈಸ್ ಮತ್ತು ಸಂಬಂಧಿತ ‘ಮೊಸರು ಗೊಜ್ಜು’. ಆನಂತರದ ಸರದಿ ಬಜ್ಜಿ, ಎರಡು ವಿಧದ ಬರ್ಫಿಗಳು ಮತ್ತು ರಸಮಲೈ. ಅಷ್ಟೂ ವ್ಯಂಜನಗಳ ‘ಸ್ಯಾಂಪಲ್’ ರುಚಿ ನೋಡಿದ ಬಳಿಕ (ಈ ಕಲೆ ನನಗೆ ಕರಗತವಾಗಿದೆ) ಪುನಃ ಸರತಿಸಾಲಿನಲ್ಲಿ ನಿಂತು ಹಾಕಿಸಿಕೊಂಡದ್ದು ಬಿಸಿಬೇಳೆ ಬಾತ್ ಹಾಗೂ ಅದರ ಮೇಲೆ ‘ಉದುರಿಸುವ’ ಖಾರಾ ಬೂಂದಿ. ಮುಗಿಯಿತೇ? ಇಲ್ಲ, ಇನ್ನೂ ವೈಟ್ ರೈಸ್ (ಅನ್ನ ಎಂದು ನಾವು ಸುಸಂಕೃತರು ಹೇಳಕೂಡದು), ರಸಂ (ನೆನಪಿರಲಿ ತಿಳಿಸಾರು ಅಲ್ಲ!) ಮತ್ತು ಕರ್ಡ್ ರೈಸ್. ಎಲ್ಲವನ್ನೂ ಶಕ್ತ್ಯಾನುಸಾರ (ಭಯ ಪಡಬೇಡಿ, ಅಲ್ಪ ಶಕ್ತಿಯವ ನಾನು) ತಿಂದು ತಟ್ಟೆಯನ್ನು ಅಲ್ಲಲ್ಲಿ ಇಟ್ಟಿದ್ದ ಡಬ್ಬಿಗಳ ಪೈಕಿ ಒಂದರಲ್ಲಿ ಡಿಸ್ ಪೋಸ್ ಮಾಡಿ ಅತ್ತಿತ್ತ ನೋಡಿದರೆ ಕೆಲವರ ಕೈನಲ್ಲಿ ನಾನಾ ಬಗೆಯ ಹಣ್ಣಿನ ಚೂರುಗಳಿದ್ದ ತಟ್ಟೆ ಕಾಣಿಸಿತು. ನಾಲ್ಕು ಪಾಇಂಟ್ ಗಳ ಪೈಕಿ ಒಂದು ಇದಕ್ಕಾಗಿಯೇ ಮೀಸಲಿದ್ದದ್ದನ್ನು ಆವಿಷ್ಕರಿಸಿ ಅಲ್ಲಿಯೇ ಇಟ್ಟಿದ್ದ ಚಿಕ್ಕ ಡಿಸ್ ಪೋಸೆಬಲ್ ತಟ್ಟೆಯೊಂದಿಗೆ ಸರತಿಸಾಲಿನಲ್ಲಿ (ಭವತಿ ಭಿಕ್ಷಾಂ ದೇಹಿ) ನಿಂತೆ. ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಅನಾನಸ್, ಸೇಬು, ಮರಸೇಬು, ಸಪೋಟ (ಇನ್ನೂ ಒಂದು ನನಗೆ ತಿಳಿಯದ ಹಣ್ಣೂ ಇತ್ತು) ಹಣ್ಣುಗಳ ಚೂರುಗಳು ತಟ್ಟೆಗೆ ಬಿದ್ದವು. ಅಲ್ಲಿಯೇ ಡಿಸ್ ಪೋಸೇಬಲ್ ಫೋರ್ಕ್ ಗಳ ರಾಶಿಯೂ ಇತ್ತು. ಅಂದ ಹಾಗೆ, ಇಂಥ ವ್ಯವಸ್ಥೆಯಲ್ಲಿ ದೋಸೆ ಇತ್ಯಾದಿಗಳನ್ನು ಕೈನಿಂದಲೂ ರೈಸ್ ಇತ್ಯಾದಿಗಳನ್ನು ಎಂಜಲು ಕೈನಲ್ಲಿ ಹಿಡಿದ ಚಮಚೆಗಳ ನೆರವಿನಿಂದಲೇ ತಿನ್ನಬೇಕಾದದ್ದು ನಾಗರೀಕತೆಯ ಲಕ್ಷಣ. ಫಲಭಕ್ಷಣೆ ಮಾಡಿ ತಟ್ಟೆ ಡಿಸ್ಪೋಸ್ ಮಾಡಿದೆ. ಆಗ ನೆನಪಿಗೆ ಬಂತು, ಪಾನಿಪುರಿ ಇತ್ಯಾದಿಗಳ ಹೆಸರುಗಳು ಬಾಗಿಲಲ್ಲಿ ನೇತುಹಾಕಿದ್ದ ಪಟ್ಟಿಯಲ್ಲಿ ಇದ್ದದ್ದು. ಅವುಗಳನ್ನು ನಾನು ತಿನ್ನುವುದು ಅಪರೂಪವಾದರೂ ಇದು ವಿಶೇಷ ಸಂದರ್ಭ ತಾನೇ? ಒಂದು ಕೈ ನೋಡಿಯೇ ಬಿಡೋಣ ಎಂದು ಅವು ಲಭ್ಯವಿದ್ದ ಪಾಇಂಟ್ ಪತ್ತೆಹಚ್ಚಿದೆ. ಸರತಿಸಾಲು ಉದ್ದವಿದ್ದದ್ದರಿಂದ ಅವನ್ನು ತಿನ್ನುವುದು ಬೇಡವೆಂದು ನಿರ್ಧರಿಸಿ, ‘ಎಕ್ಸ್ ಕ್ಯೂಸ್ ಮಿ’ ಮತ್ತು ನನ್ನ ಅಚ್ಚಬಿಳಿಗೂದಲಿನ ತಲೆಯ ನೆರವಿನಿಂದ ಸಾಲಿನಲ್ಲಿ ನಿಂತಿದ್ದವರ ನಡುವೆ ಕೈತೂರಿಸಿ ಡಿಸ್ ಪೋಸೆಬಲ್ ಕಪ್ ಗಳಲ್ಲಿ ತುಂಬಿಟ್ಟಿದ್ದ ಒಂದು ಕಪ್ ‘ಪಾನಿ’ ಗಿಟ್ಟಿಸಿಕೊಂಡು ಕುಡಿದೆ. ಮುಗಿಯಿತು ಅಂದುಕೊಂಡು ಮುಂದೆ ನಡೆದಾಗ ಕಣ್ಣಿಗೆ ಬಿತ್ತು ಅದೇ ಪಾಇಂಟ್ ನಲ್ಲಿದ್ದ ತಲಾ ಎರಡು ಸುಟ್ಟ ಬ್ರೆಡ್ ಚೂರುಗಳು ತೇಲುತ್ತಿದ್ದ ‘ಸೂಪ್’ ತುಂಬಿದ್ದ ಪುಟ್ಟಪುಟ್ಟ ಡಿಸ್ ಪೋಸೆಬಲ್ ಕಪ್ ಗಳ ಸಾಲು. (ವಿಶೇಷ ಖಾದ್ಯಗಳ ಪಟ್ಟಿಯಲ್ಲಿ ನಮೂದಿಸದೇ ಇದ್ದ ಇವೆಲ್ಲ ಬಹುಶಃ ಸಾಮಾನ್ಯ ‘ಐಟಮ್’ಗಳು). ಭೋಜನಕ್ಕೆ ಮೊದಲೇ ಆದರೇನು, ಭೋಜನಾನಂತರವಾದರೇನು? ಸೇರುವುದು ಹೊಟ್ಟೆಗೇ ತಾನೇ? ಅದನ್ನೂ ಕುಡಿದೆ. (ಬುಫೆ ಊಟದಲ್ಲಿ ಐಟಂಗಳನ್ನು ನಮಗೆ ಇಷ್ಟವಾದ ಕ್ರಮದಲ್ಲಿ ತಿನ್ನಬಹುದು). ಅಲ್ಲಿಯೇ ಅನತಿ ದೂರದಲ್ಲಿ ಕೆಲವರು ಐಸ್ ಕ್ರೀಂ ಭಕ್ಷಣೆಯಲ್ಲಿ ನಿರತರಾಗಿದ್ದದ್ದನ್ನು ಗಮನಿಸಿದ ನಾನು ಆ ಡಿಸರ್ಟ್ (ಊಟವಾದ ಮೇಲೆ ತಿನ್ನಬೇಕಾದದ್ದು) ರುಚಿ ನೋಡದಿದ್ದರೆ ಈ ಅದ್ದೂರಿ ವ್ಯವಸ್ಥೆ ಮಾಡಿದವರಿಗೆ ಬೇಸರವಾದೀತು ಎಂದು ಅದನ್ನು ಪೂರೈಸುವ ಪಾಇಂಟ್ ಅನ್ನು ತಲಾಷು ಮಾಡಿದೆ. ಡಿಸರ್ಟ್ ರೂಪದಲ್ಲಿ ಲಭ್ಯವಿದ್ದ ಐಸ್ ಕ್ರೀಂ ಮತ್ತು ಕ್ಯಾರೆಟ್ ಹಲ್ವಗಳನ್ನು ಇನ್ನೊಂದು ಡಿಸ್ ಪೋಸೆಬಲ್ ತಟ್ಟೆಯಲ್ಲಿ ಪಡೆದು ವಧುವಿನ ಮನೆಯವರು ಪಟ್ಟ ಶ್ರಮ, ವ್ಯಯಿಸಿದ್ದ ಅನೂಹ್ಯ ಮೊತ್ತದ ಹಣಕ್ಕೆ ಅನ್ಯಾಯ ಆಗದಂತೆ ನೋಡಿಕೊಂಡೆ. ಹೊರಹೋಗುವ ಬಾಗಿಲಿನ ಬಳಿ ನಿಂತಿದ್ದ ಸಮವಸ್ತ್ರಧಾರೀ ತರುಣಿಯರಿಂದ ಫಲತಾಂಬೂಲದ ಸಂಚಿಯನ್ನು (ಇಂಥ ಪ್ರತೀ ಸಂಚಿಗೆ ರೂ ೧೦ ವೆಚ್ಚವಾಗುತ್ತದಂತೆ) ಪಡೆದು ಮನೆ ಸೇರಿ ಗಡದ್ದಾಗಿ ನಿದ್ದೆ ಮಾಡಿದೆ.
ಅಂದ ಹಾಗೇ ಈ ತೆರನಾದ ಆಡಂಬರ ಮತ್ತು ವೆಚ್ಚ ಅಗತ್ಯವೇ? ನೀವೇ ಆಲೋಚಿಸಿ.
3 comments:
TODAY I READ YOUR EXPERIENCE IN A FUNCTION.I COMPLETELY AGREE WITH YOU THAT THERE IS NO NEED FOR SPENDING SO MUCH OF MONEY AND TIME TO MAKE A FUNCTION A GRAND SUCCESS.SIMPLICITY IS THE NEED OF THE HOUR.REGARDING THE LANGUAGE AND THE STYLE OF YOUR WRITING IT RESEMBLES THE ONE OF G.T.N. CONGRATULATIONS.
Thank You
In addition to the above experience in one of the wedding I have attended a leaflet (pamphlet) was distributed before the lunch with all the food items listed (starting from salt to Mosaranna everything was listed in order).
Post a Comment