‘ಶ್ರೀಮತಿ ಕೇಸರ್ ಬಾಯಿ ಕಿಲಾಚಂದ್ ಕಿವುಡರ ಶಾಲೆ’ - ಇದು ಗುಜರಾತ್ ರಾಜ್ಯದ ಮೆಹ್ಸಾನ ನಗರದಲ್ಲಿ ಇರುವ. ಅನಾಥ ಕಿವುಡ-ಮೂಕ ಹೆಣ್ಣುಮಕ್ಕಳಿಗೆ ಆದ್ಯತೆ ನೀಡುವ ವಸತಿ ಶಾಲೆ ಅದೊಂದು ದಿನ ಆ ಶಾಲೆಯಲ್ಲಿ ದಾಖಲಾಗಿದ್ದ ೧೧ ಮಂದಿ ಅನಾಥ ಹೆಣ್ಣುಮಕ್ಕಳು ಯಾರ ಬರುವಿಕೆಯನ್ನೋ ಕಾತರದಿಂದ ಎದುರು ನೋಡುತ್ತಿದ್ದರು. ಕೊನೆಗೂ ಅವರು ನಿರೀಕ್ಷಿಸುತ್ತಿದ್ದ ವ್ಯಕ್ತಿ ಒಂದು ಕೈನಲ್ಲಿ ಚೀಲ ಇನ್ನೊಂದು ಕೈನಲ್ಲಿ ಊರುಗೋಲು ಹಿಡಿದು ಶಾಲೆಯ ಗೇಟಿನೊಳಕ್ಕೆ ಬರುತ್ತಿದ್ದದ್ದು ಗೋಚರಿಸಿತು. ಎಷ್ಟೋ ದಿನಗಳಿಂದ ಎಣ್ಣೆ ಕಾಣದ ಕೆದರಿದ ತಲೆ, ಎಂದೂ ಒಗೆಯದ ಹರಕಲು ಬಟ್ಟೆ - ಇದು ಆತನ ವರ್ಣನೆ.
ಯಾರಾತ?
ಆತ ಬೇರಾರೂ ಅಲ್ಲ, ಮೆಹ್ಸಾನ ನಗರದ ಸಿಮಂಧರ್ ಸ್ವಾಮಿ ಜೈನ ದೇವಾಲಯದ ಹೊರಗೆ ಮತ್ತು ಹನುಮಾನ್ ದೇವಾಲಯದ ಹೊರಗೆ ಸುಮಾರು ಹತ್ತು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ಖಿಮ್ಜಿಭಾಯಿ ಪ್ರಜಾಪತಿ (ವಯಸ್ಸು ; ೬೪).
ಆ ಹೆಣ್ಣು ಮಕ್ಕಳು ಕಾತರದಿಂದ ಅವನನ್ನು ನಿರೀಕ್ಷಿಸುತ್ತಿದ್ದದ್ದು ಏಕೆ?
ಶಾಲೆಗೆ ಬಂದವನೇ ಆ ಹೆಣ್ಣುಮಕ್ಕಳಿಗೆ ಹೊಚ್ಚಹೊಸತಾದ ಉಡುಪುಗಳನ್ನು ನೀಡಿದ. ಆ ಮಕ್ಕಳ ಆನಂದ ಹೇಳತೀರದು.
ಈ ದೃಶ್ಯವನ್ನು ಮೂಕವಿಸ್ಮಿತರಾಗಿ ನೋಡುತ್ತಿದ್ದವರ ಕಣ್ಣುಗಳು ಒದ್ದೆಯಾದದ್ದು ಸುಳ್ಳಲ್ಲ.
ತಾನು ಭಿಕ್ಷೆಬೇಡಲಾರಂಭಿಸಿದ ಬಳಿಕದ ಹತ್ತು ವರ್ಷಗಳಲ್ಲಿ ಉಳಿಸಿದ್ದ ಹಣದಲ್ಲಿ ರೂ ೩೦೦೦ ವ್ಯಯಿಸಿ ಖಿಮ್ಜಿಭಾಯಿ ಪ್ರಜಾಪತಿ ಆ ಹೆಣ್ಣುಮಕ್ಕಳಿಗೆ ಉಡುಪುಗಳನ್ನು ದಾನ ಮಾಡಿದ್ದ.
ದಾನ ಮಾಡಿದ್ದೇಕೆ?
ಖಿಮ್ಜಿಭಾಯಿ ಉವಾಚ - “ ಎರಡು ಹೊತ್ತು ಊಟ, ರಾಜಕೋಟೆಯಲ್ಲಿ ಇರುವ ನನ್ನ ಹೆಂಡತಿಯ ಜಠರದಲ್ಲಿನ ಹುಣ್ಣು ಮತ್ತು ಶ್ವಾಸಕೋಶಕ್ಕೆ ತಗುಲಿದ ಸೋಂಕಿಗೆ ಚಿಕಿತ್ಸೆ ಮಾಡಲು ಅಗತ್ಯವಾದ ಸ್ವಲ್ಪ ಹಣ ಇವಿಷ್ಟೇ ನನ್ನ ಆವಶ್ಯಕತೆಗಳು. ಮಿಕ್ಕ ಹಣವನ್ನು ಹಸಿದವರಿಗೆ ಆಹಾರ ಒದಗಿಸಲು ವಿನಿಯೋಗಿಸುತ್ತೇನೆ. ಈ ಮಕ್ಕಳಿಗೆ ಏನಾದರೂ ಮಾಡಬೇಕೆಂಬುದು ನನ್ನ ಬಹುದಿನದ ಬಯಕೆಯಾಗಿತ್ತು, ಅದು ಇಂದು ಈಡೇರಿದ್ದಕ್ಕೆ ಬಹಳ ಸಂತೋಷವಾಗಿದೆ. ಶ್ರೀಮಂತರೇ ಆಗಿರಲಿ, ಬಡವರೇ ಆಗಿರಲಿ ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡಬೇಕಾದದ್ದು ಕರ್ತವ್ಯ ತಾನೇ?”
ಈ ಶಾಲೆಯ ವಿಶ್ವಸ್ಥಮಂಡಲಿಯ ಭರತ್ ಷಾ ಉವಾಚ - “ನನ್ನ ವೃತ್ತಿಜೀವನದ ೩೫ ವರ್ಷಗಳಲ್ಲಿ ಇಂಥ ಮಾನವಪ್ರೇಮಿಯನ್ನು ನೋಡಿಯೇ ಇರಲಿಲ್ಲ. ‘ತನ್ನಲ್ಲಿರುವ ಒಂದೇ ಒಂದು ರೊಟ್ಟಿಯಲ್ಲಿ ಅರ್ಧವನ್ನು ಹಸಿದವನಿಗೆ ಕೊಡುವವನೇ ನಿಜವಾದ ದಾನಿ’ ಎಂಬ ಹೇಳಿಕೆ ಹುಟ್ಟಿಕೊಳ್ಳಲು ಇಂಥವರೇ ಕಾರಣ”
ಖಿಮ್ಜಿಭಾಯಿಯ ಈ ದಾನ ಅವನ ಸಹವರ್ತಿಗಳಿಗೆ ಅಚ್ಚರಿ ಉಂಟು ಮಾಡಲಿಲ್ಲ. ಕೆಲಸಮಯದ ಹಿಂದೆ ಅನಾಥ ಹೆಣ್ಣುಮಗಳೊಬ್ಬಳ ಮದುವೆಗೆ ಆತ ನೆರವು ನೀಡಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.
ಖಿಮ್ಜಿಭಾಯಿ, ತಿರುಪತಿ ತಿಮ್ಮಪ್ಪನಿಗೆ ಅದೆಷ್ಟೋ ಕೋಟಿ ರೂಪಾಯಿ ಬೆಲೆಬಾಳುವ ವಜ್ರದ ಕಿರೀಟ ಮೊದಲಾದವನ್ನು ನೀಡುವವರು, ಹತ್ತು ತಲೆಮಾರಿಗಾಗುವಷ್ಟು ಕೂಡಿ ಹಾಕಿದ ಸಂಪತ್ತಿನಿಂದ ೧೦, ೧೦೦, ೧೦೦೦ --- ಕೊಟ್ಟು ಶಿಲಾಶಾಸನ ಕೆತ್ತಿಸಿಕೊಳ್ಳುವ ಅಥವ ಮಾಧ್ಯಮಗಳಲ್ಲಿ ಜಾಹೀರು ಮಾಡಿಕೊಳ್ಳುವವರು - ಈ ಪೈಕಿ ಪ್ರಾತಃಸ್ಮರಣೀಯರು ಯಾರು?
No comments:
Post a Comment