ಮತೀಯ (ರಿಲಿಜಸ್) ಆಚರಣೆಗಳಲ್ಲಿಯೂ ವಿವಿಧತೆ ಉಳ್ಳ ದೇಶ ನಮ್ಮ ಭಾರತ. ತತ್ಸಂಬಂಧದ ಊಟೋಪಚಾರಗಳ ವಿಷಯದಲ್ಲಿಯೂ ಅಷ್ಟೇ. ೧/೧೧/೧೦ ರಂದು ಬೆಂಗಳೂರಿನಲ್ಲಿ ನಾನು ಹೋಗಿದ್ದ ಒಂದು ಮದುವೆಯ ಊಟದಲ್ಲಿ ಭಕ್ಷ್ಯಭೋಜ್ಯಗಳನ್ನು ಬಡಿಸಿದ ಪರಿ ನಾನು ಈ ತನಕ ನೋಡಿದ್ದಕ್ಕಿಂತ ಭಿನ್ನವಾಗಿತ್ತು. ಎಂದೇ, ಆ ಅನುಭವವನ್ನು ದಾಖಲಿಸುತ್ತಿದ್ದೇನೆ.
ಕಲ್ಯಾಣಮಂಟಪದಲ್ಲಿ ನಡೆದ ಮದುವೆ. ಹವ್ಯಕ ವರ, ಅಯ್ಯಂಗಾರ್ ವಧು. ಆದ್ದರಿಂದ ಮದುವೆಯ ವಿಧಿವಿಧಾನಗಳಲ್ಲಿ ಎರಡೂ ಸಂಪ್ರದಾಯಗಳ ಮಿಶ್ರಣ. ಪೂರ್ವಾರ್ಧದಲ್ಲಿ ನಾಮಧಾರಿ ಅಯ್ಯಂಗಾರ್ ಪುರೋಹಿತರ ಪ್ರಾಬಲ್ಯ, ಉತ್ತರಾರ್ಧದಲ್ಲಿ ಹವ್ಯಕ ಪುರೋಹಿತರ ಪ್ರಾಬಲ್ಯ. ಮುಹೂರ್ತ ಬೆಳಿಗ್ಗೆ ೧೦.೩೦ಕ್ಕೆ. ಇಂದಿನ ಪದ್ಧತಿಯಂತೆ ಸುಮಾರು ೧೨ ಗಂಟೆಯಿಂದ ಬಹುತೇಕ ಆಮಂತ್ರಿತರ ಆಗಮನ. ಏತನ್ಮಧ್ಯೆ, ಆಹಾರ ಸರಬರಾಜುದಾರರಿಂದ ಬಿಸಿ ಪಾನೀಯ ಬಯಸುವವರಿಗೆ ಕಾಫಿ, ‘ಕೂಲ್ ಡ್ರಿಂಕ್ಸ್’ ಪ್ರಿಯರಿಗೆ ಜೀರಿಗೆ ಮಿಶ್ರಿತ ಪೆಪ್ಸಿಯ ಧಾರಾಳ ವಿತರಣೆ. ಸಾಮಾನ್ಯವಾಗಿ ಇಂಥ ಸಮಾರಂಭಗಳಲ್ಲಿ ಮಾತ್ರ ಭೇಟಿಯಾಗುವ ಬಂಧು ಮಿತ್ರರನ್ನು ಪತ್ತೆಹಚ್ಚಿ ಹರಟಿದ್ದೂ ಆಯಿತು. ಸಮಯ ೧೨.೩೦ ಆದರೂ ವಿಧಿವಿಧಾನಗಳು ಮುಗಿಯುವ ಲಕ್ಷಣ ಕಾಣದ್ದರಿಂದ ಆಮಂತ್ರಿತರಲ್ಲಿ ಕೊಂಚ ಚಡಪಡಿಕೆ (ಇವರ ಪೈಕಿ ನಾನೂ ಒಬ್ಬ. ೩ ಗಂಟೆಯ ಬೆಂಗಳೂರು-ಮೈಸೂರು ಟಿಪ್ಪು ಎಕ್ಸ್ ಪ್ರೆಸ್ ನಲ್ಲಿ ಸ್ಥಳ ಕಾಯ್ದಿರಿಸಿದ್ದೆ. ಬೆಂಗಳೂರಿನ ಟ್ರಾಫಿಕ್ ಗೊಂದಲದಲ್ಲಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವೇ ಎಂಬ ಭಯದಿಂದ). ಕೆಲವು ಆಹ್ವಾನಿತರು ಯಾವ ಮುಜುಗರವೂ ಇಲ್ಲದೇ ವೇದಿಕೆಯನ್ನೇರಿ ಹಿಂದಿನಿಂದ ವಧುವಿನ/ವರನ ಬೆನ್ನು ತಟ್ಟಿ ತಾವು ತಂದಿದ್ದ ಉಡುಗೊರೆಯನ್ನಿತ್ತು ತಮ್ಮ ತುರ್ತು ಪರಿಸ್ಥಿತಿಯನ್ನು ವಿವರಿಸಿ ಭೋಜನಶಾಲೆಯತ್ತ ಧಾವಿಸುತ್ತಿದ್ದುದನ್ನು ಗಮನಿಸಿ ಅವರನ್ನು ಅನುಕರಿಸುವ ಆಲೋಚನೆಯಲ್ಲಿ ಇದ್ದಾಗ, ವಧೂ ವರರನ್ನು ಅಲ್ಲಿಯೇ ಇದ್ದ ಎರಡು ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಪ್ರತಿಷ್ಠಾಪಿಸಿದ್ದನ್ನು ಕಂಡು ಬಲು ಆನಂದದಿಂದ ಪತ್ನೀಸಮೇತನಾಗಿ ಮುನ್ನುಗ್ಗಿ ವರನಿಗೆ ನಾವು ಯಾರೆಂಬುದು ತಿಳಿದಿದೆ ಎಂಬುದನ್ನು ಖಾತರಿ ಪಡಿಸಿಕೊಂಡು (ವರನ ಕಡೆಯ ಆಮಂತ್ರಿತ ನಾನಾಗಿದ್ದರೂ ಈ ಕುರಿತು ನನಗೆ ಸಂಶಯವಿತ್ತು) ನಮ್ಮ ಉಡುಗೊರೆಯನ್ನಿತ್ತು (ಗುಡ್ ಬೈ ಮಂತ್ರಾಕ್ಷತೆ ಸಂಪ್ರದಾಯ) ಅತ್ತಿತ್ತ ನೋಡದೆ ಭೋಜನಶಾಲೆಗೆ ಧಾವಿಸಿ’ಸೀಟು’ ಹಿಡಿದು ಸಮಯಕ್ಕೆ ಸರಿಯಾಗಿ ರೈಲ್ವೇ ನಿಲ್ದಾಣಕ್ಕೆ ತಲುಪಬಹುದು ಎಂಬ ಖುಷಿಯಿಂದ ವಿವಾಹಭೋಜನ ಮಾಡಲು ಸಿದ್ಧನಾದೆ.
ಎಲೆ ಹಾಕಿದ ತಕ್ಷಣ ಆರಂಭದಲ್ಲಿಯೇ ಗೋಣಿಚೀಲಗಳಲ್ಲಿ ತುಂಬಿ ಎಳೆಯುತ್ತ ತಂದ ‘ಫಲ ತಾಂಬೂಲ (ಅರ್ಥಾತ್ ಒಂದು ತೆಂಗಿನಕಾಯಿ, ಎರಡು ವೀಳ್ಯದೆಲೆ, ಅಡಿಕೆ ಚೂರು)’ ಇರುವ ಬಟ್ಟೆಯ ಸುಂದರ ಕೈಚೀಲಗಳ ವಿತರಣೆ ಆಯಿತು. ಕೈಚೀಲದ ಮೇಲೆ ‘Thank you for coming’ ಎಂದು ಮುದ್ರಿಸಿದ್ದರು. ನಾವು ಆಮಂತ್ರಣದ ಕರೆಗೆ ಓಗೊಟ್ಟು ಹೋದದ್ದಕ್ಕೆ ಧನ್ಯವಾದ ಅರ್ಪಿಸುವ ಈ ನೂತನ ವಿಧಾನ ಮೆಚ್ಚುವಂಥದ್ದು. ತದನಂತರ ಬಡಿಸಿದ್ದು ಅನ್ನ, ತೊವ್ವೆ. ನನಗೆ ಪ್ರಿಯವಾದ ಎಲೆ ತುದಿಯ ಪಾಯಸ ಏಕಿರಲಿಲ್ಲವೋ ಗೊತ್ತಿಲ್ಲ. ತದನಂತರ ಬಡಿಸಿದರು, ಪಲ್ಯಗಳು, ಹಪ್ಪಳ ಸಂಡಿಗೆ. ಆ ನಂತರ ಬಂದದ್ದು ನಮ್ಮ ‘ಮಜ್ಜಿಗೆಹುಳಿ (ತಮಿಳಿನ ಮೋರ್ ಕೊಳಂಬು)’. ಅದನ್ನು ಸವಿಯುತ್ತಿದ್ದಾಗ ಉಪ್ಪು-ಉಪ್ಪಿನಕಾಯಿ - ನಮ್ಮ ಬಾಳಕದ ಮೆಣಸು ಸರಬರಾಜಾಯಿತು. ತದನಂತರ ಬಡಿಸಿದ್ದು ಅನ್ನ- ಸಾಂಬಾರ್. ಅದನ್ನು ತಿನ್ನುತ್ತಿರುವಾಗ ಸರಬರಾಜಾಯಿತು ಎಲ್ಲರಿಗೂ ಒಂದೊಂದು ಬಣ್ಣದ ರಟ್ಟಿನ ಡಬ್ಬಿ. ಅದರೊಳಗೆ ಎನೋ ವಿಶೇಷವಾದ ಸಿಹಿ ತಿನಿಸು ಇರಬೇಕೆಂದು ಊಹಿಸಿದ್ದೆ. (ಮನೆಯಲ್ಲಿ ನೋಡಿದಾಗ ಊಹೆ ಸರಿಯಾಗಿತ್ತು-೪ ತುಂಡು ಮೈಸೂರು ಪಾಕು ಮತ್ತು ಒಂದು ಪುಟ್ಟ ಪ್ಯಾಕೆಟ್ ಚೌಚೌ), ಅದರ ಬೆನ್ನ ಹಿಂದೆಯೇ ಬಂದಿತು ಒಂದು ಚಿಕ್ಕ ಪ್ಲಾಸ್ಟಿಕ್ ಕಪ್. ಇದೇಕಿರಬಹುದೆಂದು ನಾವು ಕೆಲವರು ಚರ್ಚಿಸುತ್ತಿರುವಾಗಲೇ ಅದರೊಳಕ್ಕೆ ಬಡಿಸಿದರು ತಿಳಿಸಾರು. ತಿಳಿಸಾರನ್ನು ಕುಡಿಯಬಯಸುವವರಿಗೂ ಅನ್ನದೊಂದಿಗೆ ಕಲಸಿ ತಿನ್ನಬಯಸುವವರಿಗೂ ಉಪಯುಕ್ತವಾದ ಈ ಕ್ರಮವನ್ನು ಆವಿಷ್ಕರಿಸಿದವರು ಅಭಿನಂದನಾರ್ಹರು. ತದನಂತರ ಬಂದದ್ದು ಮುಂದೆ ಬರಲಿದೆ ಫೇಣಿ ಎಂಬುದರ ಸೂಚಕವಾದ ಒಂದು ಪ್ಲಾಸ್ಟಿಕ್ ತಟ್ಟೆ. ‘ಒಂದು ಬಗೆಯ ಸಿಹಿ ಭಕ್ಷ್ಯ’ ಎಂದು ಅರ್ಥಕೋಶ ಹೇಳಿದರೂ ಅದನ್ನೇಕೆ ಸಿಹಿಭಕ್ಷ್ಯ ಎಂದು ಕರೆಯುತ್ತಾರೆ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ. ಸಕ್ಕರೆಯ ಪುಡಿ ಧಾರಾಳವಾಗಿ ಸುರಿದು ಬಾದಾಮಿಹಾಲಿನಲ್ಲಿ ಕಲೆಸಿ ತಿಂದರೆ ಮಾತ್ರ ಸಿಹಿಯೇ ವಿನಾ ಹಾಗೆಯೇ ತಿಂದರೆ ಯಾವ ರುಚಿಯೂ ಇಲ್ಲದ ದುಬಾರಿ ತಿನಿಸು ಅದು ಅನ್ನುವುದು ನನ್ನ ಅಭಿಮತ. ತಟ್ಟೆ ಇಟ್ಟಕೂಡಲೇ ಬಡಿಸಿದ್ದು ಸುಮಾರು ೧ ಅಂಗುಲ ಉದ್ದದ ೧/೪ ಅಂಗುಲ ವ್ಯಾಸದ ಸ್ತಂಭಾಕೃತಿಯ ಬರ್ಫಿ ಎಂಬ ಹೆಸರಿನ ಸಿಹಿ ತಿಂಡಿ ಹಾಗೂ ೨-೩ ಖಾರದ ಗೋಡಂಬಿ. ಇದಕ್ಕೇಕೆ ತಟ್ಟೆ ಎಂದು ಆಲೋಚಿಸುತ್ತಿರುವಾಗ ಬಂದಿತು ಫೇಣಿ ಮತ್ತು ಅದಕ್ಕೆ ರುಚಿ ನೀಡುವ ಸಾಮಗ್ರಿಗಳು. ಬೆನ್ನ ಹಿಂದೆಯೇ ಬಡಿಸಿದರು ಆಂಬೊಡೆ, ಖಾರದ ಬೂಂದಿ. ತದನಂತರ ಪುಳಿಯೋಗರೆ, ಅನ್ನ ಮಜ್ಜಿಗೆ.ಬೋಜನಾಲಯದಲ್ಲಿದ್ದವರ ಪೈಕಿ ಬಹು ಮಂದಿ ಪುಳಿಯೋಗರೆ ತಿಂದು ಎದ್ದಾಗಿತ್ತು. ಮುಂದಿನ ಪಂಕ್ತಿಯಲ್ಲಿ ಭೋಜನಮಾಡಬೇಕಾದ ಅನಿವಾರ್ಯತೆಗೆ ಸಿಕ್ಕಿಹಾಕಿಕೊಂಡವರು ಅದಾಗಲೇ ಭೋಜನಾಲಯದಲ್ಲಿ ಜಮಾಯಿಸಿ ಬೇಗ ಊಟ ಮುಗಿಸುವಂತೆ ಊಟಮಾಡುತ್ತಿದ್ದವರ ಮೇಲೆ ಮೌನವಾಗಿಯೇ ಮಾನಸಿಕ ಒತ್ತಡ ಹೇರಲಾರಂಭಿಸಿದ್ದರು. ಎಂದೇ ಮಜ್ಜಿಗೆ ಅನ್ನ ತಿಂದ ಶಾಸ್ತ್ರ ಮಾಡಿ ಕೈತೊಳೆದು ಭೋಜನಾಲಯದಿಂದ ಹೊರಬರುವಾಗ ವಿಶೇಷ ಪೇಟಧಾರಿ ‘ವೃತ್ತಿಪರ ಪಾನ್ ವಾಲಾ’ ತಾಜಾ ತಾಂಬೂಲ ತಯಾರಿಸಿ ವಿತರಿಸುವಂತೆ ವ್ಯವಸ್ಥೆ ಇತ್ತು. ‘ಪಾನ್ ಬೀಡಾ’ ತಿನ್ನದವರಿಗೆ ಬಣ್ಣಬಣ್ಣದ ಜೀರಿಗೆ ಮಿಠಾಯಿ, ಸ್ಪೆಷಲ್ ಸೋಂಪಿನ ಪೂರೈಕೆಯೂ ಇತ್ತು ಜೊತೆಗೆ ಬಾಳೆಹಣ್ಣು. ಮನೆಗೆ ಕೊಂಡೊಯ್ಯಬೇಕಾದ ಫಲತಾಂಬೂಲ ವಿತರಣೆಯೊಂದಿಗೆ ಆರಂಭವಾದ ಭೋಜನ ಅಲ್ಲಿಯೇ ತಿನ್ನಬೇಕಾದ ಫಲತಾಂಬೂಲ ವಿತರಣೆಯೊಂದಿಗೆ ಮುಕ್ತಾಯವಾಯಿತು.
ತದನಂತರ, ನಮ್ಮನ್ನು ಆಹ್ವಾನಿಸಿದ್ದ ವರನ ತಂದೆತಾಯಿಯರಿಗೆ ‘ಬಾಯ್’ ಹೇಳಿ ರೈಲ್ವೇ ನಿಲ್ದಾಣಕ್ಕೆ ದೌಡಾಯಿಸಿದೆವು.
No comments:
Post a Comment