Pages

7 October 2018

ಗುರು ವಂದನೆ

[ನಾನು ಸೇವೆ ಸಲ್ಲಿಸಿದ ಬಿ ಎಡ್‌ ವಿದ್ಯಾಲಯದ ಸುಮಾರು ೧೦೦ ಮಂದಿ ಹಿರಿಯ ವಿದ್ಯಾರ್ಥಿಗಳು ದಿನಾಂಕ ೨೩-೯-೨೦೧೮ ರಂದು ನಾನು ಹಾಗು ನನ್ನ ನಂತರ ನಿವೃತ್ತರಾದ ೪ ಮಂದಿ ಅಧ್ಯಾಪಕರಿಗೆ ಖಾಸಗಿಯಾಗಿ ಗುರುವಂದನ ಕಾರ್ಯಕ್ರಮ ಆಯೋಜಿಸಿದ್ದರು. ಅವರ ಪೈಕಿ ನಿವೃತ್ತಿಯ ಅಂಚಿನಲ್ಲಿ ಇದ್ದವರೂ ಸೇವೆಯಿಂದ ನಿವೃತ್ತರಾದವರೂ ಇದ್ದರು. (ನಾನು ನಿವೃತ್ತನಾಗಿ ೧೮ ವರ್ಷಗಳು ಕಳೆದಿವೆ)ಆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ನಾನು ಮಾಡಿದ ಕಿರು ಭಾಷಣ ಮುಂದೆ ಇದೆ.]


ಪ್ರೌಢಶಾಲಾ ಹಂತದಿಂದ ಮೊದಲ್ಗೊಂಡು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಂತದ ವರೆಗೆ ಸುಮಾರು ೩೭ ವರ್ಷಗಳ ಕಾಲ ಬೋಧನೆ ಹಾಗು ಆಡಳಿತದ ವಿಭಿನ್ನ ಸ್ತರಗಳಲ್ಲಿ ಕಾರ್ಯನಿರ್ವಹಿಸಿ ತದನಂತರ ನಗರದಲ್ಲಿಯೇ ಒಂದು ರೀತಿಯ ವಾನಪ್ರಸ್ತಾಶ್ರಮವಾಸಿಯಾಗಿ ಜೀವನದಾಟ ಮುಂದುವರಿಸುತ್ತಿದ್ದೇನೆ. ಈ ಅವಧಿಯಲ್ಲಿ ನನಗೆ ಈವರೆಗೆ ಆದ ಮರೆಯಲಾಗದ ಸುಖಾನುಭವಗಳ ಪಟ್ಟಿಗೆ ಇನ್ನೊಂದು ಅನುಭವವನ್ನು ಸೇರಿಸಿಕೊಳ್ಳಲು ಕಾರಣರಾದ ನಿಮಗೆಲ್ಲರಿಗೆ, ವಿಶೇಷತಃ ಇಂಥದ್ದೊಂದು ಕಾರ್ಯಕ್ರಮದ ಪರಿಕಲ್ಪನೆಯನ್ನು ರೂಪಿಸಿದವರಿಗೆ, ಕಾರ್ಯಕ್ರಮ ಆಯೋಜಿಸಲು ಶ್ರಮಿಸಿದವರಿಗೆ, ಅವರಿಗೆ ಅಗತ್ಯವಾದ ನೆರವು ನೀಡಿದವರಿಗೆ ಹೃದಯಾಂತರಾಳದಿಂದ ಅನಂತ ಧನ್ಯವಾದಗಳನ್ನು ಮೊಟ್ಟ ಮೊದಲಿಗೆ ಅರ್ಪಿಸುತ್ತೇನೆ. ಸರಕಾರೀ ಪ್ರಾಯೋಜಿತ ಶಿಕ್ಷಕರ ದಿನಾಚರಣೆಯ ಆಸುಪಾಸಿನಲ್ಲಿ ಸಾಮಾನ್ಯವಾಗಿ ಜರಗುವ ‘ಗುರುವಂದನ’ ಕಾರ್ಯಕ್ರಮಗಳು ಶಿಕ್ಷಣ ಇಲಾಖೆ ಅಥವ ಯಾವುದೋ ಶಿಕ್ಷಣ ಸಂಸ್ಥೆ ಅಥವ ಸ್ವಯಂಸೇವಾ ಸಂಘಟನೆ ಅಥವ ಹಿರಿಯ ವಿದ್ಯಾರ್ಥಿಗಳ ಔಪಚಾರಿಕ ಸಂಘದಿಂದ ಪ್ರಾಯೋಜಿಸಲ್ಪಟ್ಟಿರುತ್ತವೆ. ರಾಜಕೀಯ ಕ್ಷೇತ್ರದಲ್ಲಿ ಗಳಿಸಿರುವ ಸ್ಥಾನಬಲದಿಂದಲೋ ಅಧಿಕಾರಷಾಹಿ ವ್ಯವಸ್ಥೆಯಲ್ಲಿ ಇರುವ ಹುದ್ದೆಯ ಬಲದಿಂದಲೋ ಗಣ್ಯಾತಿಗಣ್ಯ ಅನ್ನಿಸಿಕೊಳ್ಳುವವರ ಅಧ್ಯಕ್ಷತೆಯಲ್ಲಿ, ವೇದಿಕೆಯ ತುಂಬ ಉಪಸ್ಥಿತರಾಗಿರುವ ಗಣ್ಯರ ಸಮ್ಮುಖದಲ್ಲಿ ಯಾಂತ್ರಿಕವಾಗಿ ಇವು ಜರಗುತ್ತವೆ.  ಈ ಕಾರ್ಯಕ್ರಮಗಳಿಗೆ ಪ್ರಚಾರ ಮೌಲ್ಯ, ತಾರಾಮೌಲ್ಯ, ಇರುತ್ತದೆಯೇ ವಿನಃ ನಿಜವಾದ ಗಾಂಭೀರ್ಯವಾಗಲೀ, ಆತ್ಮೀಯತೆಯಾಗಲೀ, ಸಹಜತೆಯಾಗಲೀ ಇರುವುದೇ ಇಲ್ಲ. ಔಪಚಾರಿಕ ಸಭೆಯ ನಂತರ ಗಣ್ಯಾತಿಗಣ್ಯರಿಂದ ಹಾಗು ಉಪಸ್ಥಿತ ಗಣ್ಯರಿಂದ, ಬಹುತೇಕ ಸಂದರ್ಭಗಳಲ್ಲಿ ಪ್ರಮುಖ ಆಯೋಜಕರಿಂದಲೂ ಸನ್ಮಾನಿತರು ನಿರ್ಲಕ್ಷ್ಯಕ್ಕೆ ಈಡಾಗುವುದು ಸರ್ವೇಸಾಮಾನ್ಯ. ಆಯೋಜಕರ ಪರವಾಗಿ ನಿಯೋಜಿತರಾದವರೊಬ್ಬರು ಸನ್ಮಾನಿತರನ್ನು ಅವರಿಗೆ ನೀಡಲಾಗಿದ್ದ ಫಲಪುಷ್ಪ ಇತ್ಯಾದಿಗಳೊಂದಿಗೆ ಯಾವುದೋ ಒಂದು ರೀತಿಯಲ್ಲಿ ಅವರ ಸ್ವಸ್ಥಾನದತ್ತ ರವಾನಿಸುವುದರೊಂದಿಗೆ ಈ ಪ್ರಹಸನ ಮುಗಿಯುತ್ತದೆ. ಈ ಸಮಾರಂಭ ಇದಕ್ಕೆ ವ್ಯತಿರಿಕ್ತವಾಗಿ ಜರಗುತ್ತಿದೆ. ಸುದೀರ್ಘಕಾಲದಿಂದ ಉದ್ಯೋಗಸ್ಥರಾಗಿರುವ ನೀವು, ನಿಮ್ಮದೇ ಆದ ಜೀವನಜಂಜಾಟಗಳನ್ನು ನಿಭಾಯಿಸುತ್ತಿರುವ ನೀವು, ಹಿಂದೆಂದೋ ಸುಮಾರು ೧೦ ತಿಂಗಳು ಮಾತ್ರ ನಿಮಗೆ ಮಾರ್ಗದರ್ಶನ ಮಾಡಿದ ನಮ್ಮನ್ನು,  ಸೇವೆಯಿಂದ ನಿವೃತ್ತಿಯಾದ ಅನೇಕ ವರ್ಷಗಳ ನಂತರ, ನಮ್ಮಿಂದ ಯಾವ ಯಾವ ಲೌಕಿಕ ಲಾಭ ಇಲ್ಲದೇ ಇದ್ದರೂ ನೆನಪಿಸಿಕೊಂಡಿದ್ದೀರಿ, ಗೌರವಿಸುತ್ತಿದ್ದೀರಿ. ಹೆಚ್ಚು ಆಡಂಬರವಿಲ್ಲದೆ ಗಣ್ಯಾತಿಗಣ್ಯರ ಕೃತಕತೆ ಇಲ್ಲದೆ, ಸುದೀರ್ಘಕಾಲ ಸಹೋದ್ಯೋಗಿಗಳಾಗಿದ್ದವರೊಂದಿಗೆ ಸ್ನೇಹಕೂಟದ ರೂಪದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೀರಿ. ನಾನು ಈ ಕಾರ್ಯಕ್ರಮವನ್ನು ಮರೆಯಲಾಗದ ಸುಖಾನುಭವಗಳ ಪಟ್ಟಿಗೆ ಸೇರಿಸಲು ಇದೇ ಕಾರಣ.
ಇಂಥ ಸುಖಾನುಭವ ಪಡೆಯುವ ಅರ್ಹತೆ ನನಗೆ ಲಭಿಸಲು, ನಾನು ಇಂದು ಏನಾಗಿದ್ದೇನೆಯೋ ಅದು ಆಗಿರಲು, ನೀವು ನನ್ನಲ್ಲಿ ಕಂಡಿರಬಹುದಾದ ಅನುಕರಣಯೋಗ್ಯವಾದವುಗಳು ನನ್ನಲ್ಲಿ ನೆಲೆಗೊಳ್ಳಲು ಪ್ರಾಥಮಿಕ ಹಂತದಿಂದ ಮೊದಲ್ಗೊಂಡು ಸ್ನಾತಕೋತ್ತರ ಹಂತದ ವರೆಗೂ ಮಾರ್ಗದರ್ಶನ ಮಾಡಿದ ಅಧ್ಯಾಪಕರೇ ಕಾರಣ. ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರ ಹೆಸರುಗಳು ಹಾಗು ನನ್ನ ಮೇಲೆ ಗಾಢ ಪ್ರಭಾವ ಬೀರಿದ ಅವರ ನಡೆನುಡಿಗಳನ್ನು ನಾನು ಇಂದೂ ವರ್ಣಿಸಬಲ್ಲೆ. ನನ್ನ ಯಶಸ್ಸಿಗೂ, ಈ ವರೆಗೆ ಸಂದಿರುವ, ಈಗ ಸಲ್ಲುತ್ತಿರುವ ಎಲ್ಲ ಗೌರವಗಳಿಗೂ ಅವರೇ ಕಾರಣರಾದ್ದರಿಂದ ನನ್ನ ಮಟ್ಟಿಗೆ ಅವರು ಪ್ರಾತಃಸ್ಮರಣೀಯರು. ಎಂದೇ ಈ ಸಂದರ್ಭದಲ್ಲಿ ಅವರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಲು ಬಯಸುತ್ತೇನೆ.
ಅವರೆಲ್ಲರೂ ಸ್ವ-ಇಚ್ಛೆಯಿಂದ ಶಿಕ್ಷಕ ವೃತ್ತಿಗೆ ಬಂದವರಾಗಿದ್ದರು, ಜೀವನೋಪಾಯಕ್ಕೆ ಬೇರೆದಾರಿ ಕಾಣದೆ ಬಂದವರಾಗಿರಲಿಲ್ಲ. ಅರ್ಥಾತ್ ಮನೋಧರ್ಮದಿಂದ, ಪ್ರವೃತ್ತಿಯಿಂದ ಅಧ್ಯಾಪಕರಾಗಿದ್ದವರು. ತಿಳಿದೂ ತಿಳಿದೂ ಬಡತನವನ್ನು ಆಲಂಗಿಸಿದವರು. ತಮ್ಮ ಆಯ್ಕೆಯ ವಿಷಯವನ್ನು ಬೋಧಿಸುವುದೇ ಅವರ ಜೀವನದ ಗುರಿಯಾಗಿತ್ತು, ಅವರಿಗೆ ಅದೊಂದು ಹಣ ಮಾಡುವ ದಂಧೆಯಾಗಿರಲಿಲ್ಲ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರ ಪೈಕಿ ಒಬ್ಬರಿಗೋ ಇಬ್ಬರಿಗೋ ಅವರು ಖಾಸಗಿ ಪಾಠ ಮಾಡುತ್ತಿದ್ದರೇ ವಿನಾ ಹಾಲಿ ಇದ್ದ ವಿದ್ಯಾರ್ಥಿಗಳಿಗೆ ಅಲ್ಲ. ಕಲಿಕೆಯಲ್ಲಿ ಹಿಂದುಳಿಯುತ್ತಿದ್ದವರಿಗೆ ಮಾತ್ರ ಅವರು ಶಾಲೆಯಲ್ಲಿಯೇ ಉಚಿತವಾಗಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರೇ ವಿನಾ ‘ಪೋರ್ಷನ್‌’ ಮುಗಿಸಲೋಸುಗ ಅಲ್ಲ. ಅವರು ತಮ್ಮ ವಿದ್ಯಾರ್ಥಿಗಳನ್ನು ಕೆಲವೊಮ್ಮೆ ತೀಕ್ಷ್ಣವಾಗಿ ಶಿಕ್ಷಿಸುತ್ತಿದ್ದರಾದರೂ ಯಾವ ವಿದ್ಯಾರ್ಥಿಯೂ ಅವರನ್ನು ದ್ವೇಷಿಸುತ್ತಿರಲಿಲ್ಲ. ಕಾರಣ – ಅವರು ಶಿಕ್ಷಿಸುತ್ತಿದ್ದದ್ದು ತಪ್ಪು ನಡೆವಳಿಕೆಗಾಗಿಯೇ ವಿನಾ ವೈಯಕ್ತಿಕ ಕಾರಣಗಳಿಗಾಗಿ ಅಲ್ಲ ಎಂಬುದೂ ಆವಶ್ಯಕತೆ ಇದ್ದಾಗ ತಮ್ಮನ್ನು ಅವರು ಬೆಂಬಲಿಸುತ್ತಾರೆ, ರಕ್ಷಿಸುತ್ತಾರೆ ಎಂಬುದೂ ತಮ್ಮಿಂದಲೇ ತಪ್ಪಾಗಿದ್ದರೆ ಅದನ್ನು ಬಹಿರಂಗವಾಗಿಯೇ ಒಪ್ಪಿಕೊಂಡು ಕ್ಷಮೆಕೋರುವ ದೊಡ್ಡತನ ಅವರದಾಗಿತ್ತು ಎಂಬುದೂ ಎಲ್ಲರಿಗೂ ತಿಳಿದಿತ್ತು. ಅಂದ ಮಾತ್ರಕ್ಕೆ ಅವರು ಪರಿಪೂರ್ಣ ವ್ಯಕ್ತಿಗಳಾಗಿದ್ದರು, ನೂರಕ್ಕೆ ನೂರರಷ್ಟು ಅನುಕರಣಯೋಗ್ಯರಾಗಿದ್ದರು ಎಂಬುದಾಗಿ ಅರ್ಥೈಸಕೂಡದು. ಅವರು ತಮ್ಮ ಇತಿಮಿತಿಗಳನ್ನು ಅರಿತು ಅದಕ್ಕೆ ತಕ್ಕುದಾದ ರೀತಿಯಲ್ಲಿ ವ್ಯವಹರಿಸುತ್ತಿದ್ದರು, ಮಾರ್ಗದರ್ಶನ ಮಾಡುತ್ತಿದ್ದರು. ಎಂದೇ ಅಚ್ಚ ಭಾರತೀಯ ಪರಿಕಲ್ಪನೆಯಾಗಿರುವ ‘ಗುರು’ ಎಂಬ ಸ್ಥಾನಕ್ಕೇರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದವರಾಗಿದ್ದರು ಅವರು ಎಂಬುದು ನನ್ನ ಅನಿಸಿಕೆ.
ನನ್ನ ಅಧ್ಯಾಪಕರು ಅಂದು ನನಗೆ ಕಲಿಸಿದ್ದ ವಿಷಯಗಳ ಬಹುಭಾಗವನ್ನು ನಾನು ಮರೆತಿದ್ದೇನೆ. ಪಠ್ಯಕ್ರಮದಲ್ಲಿ ಇದ್ದ ಬಹಳಷ್ಟು ವಸ್ತುಗಳು ಜೀವನ ನಿರ್ವಹಣೆಯ ದೃಷ್ಟಿಯಿಂದ ನಿರುಪಯುಕ್ತವಾಗಿದ್ದದ್ದು ಇದಕ್ಕೆ ಕಾರಣವೇ ವಿನಾ ಬೇರೆ ಇನ್ನೇನೂ ಅಲ್ಲ. ಆದಾಗ್ಯೂ ಅವರನ್ನು ನೋಡಿ ಕಲಿತ ಮೌಲ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅವುಗಳಲ್ಲಿ ಪ್ರಮುಖವಾದವು ಇಂತಿವೆ: ‘ಶಿಸ್ತಿನಿಂದ ಕೂಡಿದ ಜೀವನ ಶೈಲಿ’, ‘ನೇರನಡೆನುಡಿ’  ‘ಒಪ್ಪಿಕೊಂಡ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿಷ್ಠೆಯಿಂದ ಮಾಡುವುದು’, ‘ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು’, ‘ಪ್ರಾಮಾಣಿಕ ಪ್ರಯತ್ನ ಮಾಡಿಯೂ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಾಗದೇ ಇದ್ದರೆ ತಕ್ಷಣವೇ ಕ್ಷಮೆ ಯಾಚಿಸುವುದು’, ‘ವಿದ್ಯಾರ್ಥಿಗಳು ನಡೆಯಬೇಕಾದ ಹಾದಿಯಲ್ಲಿ ನಾವೇ ನಡೆದು ತೋರಿಸುವುದು’. ಇಂಥ ಮೌಲ್ಯಗಳನ್ನು ಕಲಿಸುವ ಅತ್ಯಂತ ಸರಳ ವಿಧಾನ – ‘ಅಧ್ಯಾಪಕನೇ ಅನುಕರಣಯೋಗ್ಯ ಜೀವಂತ ಮಾದರಿ ಆಗಲು ಪ್ರಾಮಾಣಿಕ ಪ್ರಯತ್ನ ಮಾಡುವುದು’ ಎಂಬ ತಥ್ಯ ನನ್ನ ಮನಸ್ಸಿನಲ್ಲಿ ಬೇರೂರಲು ಕಾರಣವೇ ಅವರು.
ನಾನು ಮಾತನಾಡುವ, ಬರೆಯುವ ಭಾಷೆಯೂ ನನ್ನ ಅಧ್ಯಾಪಕರ ಕೊಡುಗೆಯೇ ಆಗಿದೆ. ಅವರ ವ್ಯಾಕರಣಶುದ್ಧ ಸರಳ ಭಾಷೆ, ಅಗತ್ಯವಿದ್ದಾಗ ಹಿತಮಿತವಾಗಿ ಬೆರೆಸುತ್ತಿದ್ದ ಆಡುಮಾತು ಮುಂತಾದವುಗಳ ಪ್ರಭಾವವೇ ನನ್ನ ವ್ಯಾವಹಾರಿಕ ಭಾಷೆ ಇಂತಾಗಲು ಕಾರಣ. ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ ಟಿಪ್ಪಣಿ (ನೋಟ್ಸ್)ಯನ್ನೇ ಆಗಲಿ, ಅಭ್ಯಾಸ ಪ್ರಶ್ನೆಗಳಿಗೆ ಉತ್ತರಗಳನ್ನೇ ಆಗಲಿ ಬರೆಸುತ್ತಿದ್ದ ಅಧ್ಯಾಪಕರ ಸಂಖ್ಯೆ ಸೊನ್ನೆ ಅನ್ನಬಹುದಾದಷ್ಟು ಕಡಿಮೆ ಇತ್ತು. ‘ಮನೆಗೆಲಸ’ ಎಂಬ ಹೆಸರಿನಲ್ಲಿ ನೀಡುತ್ತಿದ್ದ ಪ್ರಶ್ನೆಗಳಿಗೆ ನಾವೇ ಉತ್ತರ ಪತ್ತೆಹಚ್ಚಿ ಬರೆಯಬೇಕಿತ್ತು. ಪ್ರತೀ ವಾರ ಪಠ್ಯೇತರ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ತಲಾ ಒಂದೊಂದು ಪ್ರಬಂಧ/ಪತ್ರ ಬರೆಯಬೇಕಿತ್ತು. ತತ್ಪರಿಣಾಮವಾಗಿ ಸ್ವಾಧ್ಯಯನಕ್ಕೆ ಅಗತ್ಯವಾದ ಆದರ್ಶ-ಅಭ್ಯಾಸಗಳು ಕರಗತವಾಯಿತು. ಆ ಎಲ್ಲ ಅಧ್ಯಾಪಕರ ವಿಭಿನ್ನ ಬೋಧನ ಶೈಲಿಯ ಚಿತ್ತಾಕರ್ಷಕ ಅಂಶಗಳು ನನ್ನ ಬೋಧನಶೈಲಿಯನ್ನು ನನಗರಿವಿಲ್ಲದೆಯೇ ರೂಪಿಸಿದವು. ಈ ಎಲ್ಲ ಕಾರಣಗಳಿಂದಾಗಿ, ಇಂದು ನೀವು ನನಗೆ ನೀಡಿರುವ, ನೀಡುತ್ತಿರುವ ಸಮಸ್ತ ಗೌರವಾದರಗಳನ್ನು ಈ ನುಡಿನಮನ ಮುಖೇನ ಅವರಿಗೆ ಸಮರ್ಪಿಸುತ್ತಿದ್ದೇನೆ.
ನನ್ನ ಭಾಷಣ ಮುಗಿಸುವ ಮುನ್ನ ನಿಮಗೆ ನಾಲ್ಕು ಕಿವಿಮಾತುಗಳನ್ನು ಸೂಚ್ಯವಾಗಿ ಹೇಳಬಯಸುತ್ತೇನೆ.
೧. ನೀವು ಕಲಿಸಲು ಉದ್ದೇಶಿಸಿರುವ ವಿಷಯದ ಮೇಲೆ ಪ್ರಭುತ್ವ ಸಾಧಿಸಿ. ಪ್ರಭುತ್ವವಿಲ್ಲದ ವಿಷಯದ ಕುರಿತು ಮಾತನಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾದರೆ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡೇ ಮಾತನಾಡಿ.
೨. ಬೋಧನ ತಂತ್ರಗಳನ್ನು ಯಾಂತ್ರಿಕವಾಗಿ ಪ್ರಯೋಗಿಸುವುದಕ್ಕೆ ಬದಲಾಗಿ ಅವುಗಳ ಸತ್ವವನ್ನು ಮನೋಗತ ಮಾಡಿಕೊಂಡು ಸಂದರ್ಭೋಚಿತವಾಗಿ ಹಿತಮಿತವಾಗಿ ಬೆರೆಸಿ ಪ್ರಯೋಗಿಸಿ. ವಿದ್ಯಾರ್ಥಿಗೆ ವಿಷಯ ಅರ್ಥವಾಗಲಿಲ್ಲ ಅಂದರೆ ಅವನಿಗೆ ಅರ್ಥವಾಗುವಂತೆ ತಿಳಿಸುವ ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂಬುದಾಗಿಯೇ ಅರ್ಥೈಸಿ.
೩. ಕಲಿಸುವ ಪ್ರಕ್ರಿಯೆಯನ್ನು ನೀವು ಪ್ರೀತಿಸುತ್ತಿದ್ದರೆ ಮಾತ್ರ ಈಗಷ್ಠೇ ಹೇಳಿದ ಜ್ಞಾನ-ಕುಶಲತೆಗಳೊಂದಿಗೆ ವೃತ್ತಿನಿಷ್ಠೆ, ಬದ್ಧತೆಗಳೂ ಸೇರಿ ನೀವು ಯಶಸ್ವೀ ಅಧ್ಯಾಪಕರಾಗುತ್ತೀರಿ.
೪. ಇಂದಿನ ಆರ್ಥಿಕಮೌಲ್ಯಾಧಾರಿತ ಜಗತ್ತಿನಲ್ಲಿ ಈ ಮೂರು ಗುಣಗಳೂ ನಿಮ್ಮ ವ್ಯಕ್ತಿತ್ವದ ಅವಿಭಾಜ್ಯ ಘಟಕಗಳಾಗಿದ್ದರೆ ಸಾಲದು, ಸದಾಕಾಲವೂ ನಿಮ್ಮ ಆಂತಃಪ್ರಜ್ಞೆಯನ್ನು ಮಾತ್ರ ನಿಮ್ಮ ಮಾರ್ಗದರ್ಶಿಯಾಗಿ ಸ್ವೀಕರಿಸುವುದನ್ನು ರೂಢಿಸಿಕೊಂಡಿರಬೇಕು, ಇತರರು ನಿಮ್ಮ ಕುರಿತಾಗಿ ತಳೆದಿರುವ ಅಭಿಪ್ರಾಯಗಳನ್ನೇ ಆಗಲೀ ಸಲಹೆ ಸೂಚನೆಗಳನ್ನೇ ಆಗಲೀ ಅಲ್ಲ.
ಅಂತಿಮವಾಗಿ, ಜೀವನದ ಸಂಧ್ಯಾಕಾಲದಲ್ಲಿ ಇರುವ ನಮಗೆ ಇಂಥದ್ದೊಂದು ಕಾರ್ಯಕ್ರಮ ಸಂಘಟಿಸಿ ನಮ್ಮೆಲ್ಲರ ಆರೋಗ್ಯ ಹಾಗು ಆಯುಷ್ಯವರ್ಧನೆಗೆ ನೆರವಾದುದಕ್ಕೆ ನಿಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು.

No comments: