Pages

12 March 2019

"ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ." - ಖಲೀಲ್‌ ಗಿಬ್ರಾನ್‌ನ ಕವಿತೆಯೊಂದರ ಭಾವಾನುವಾದ

“ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.
ಜೀವ ತನಗಾಗಿಯೇ ಹಾತೊರೆಯುತ್ತಿರುವುದರ ಮಕ್ಕಳು ಅವರು.
ಅವರು ನಿಮ್ಮ ಮೂಲಕ ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ.
ಅವರು ನಿಮ್ಮೊಂದಿಗೇ ಇದ್ದರೂ ನಿಮ್ಮ ಒಡೆತನಕ್ಕೆ ಒಳಪಟ್ಟವರಲ್ಲ.
ನಿಮ್ಮ ಒಲವನ್ನು ಅವರಿಗೆ ನೀವು ನೀಡಬಹುದು, ಆಲೋಚನೆಗಳನ್ನಲ್ಲ,
ಅವರಿಗಿದೆ ಅವರದೇ ಆದ ಆಲೋಚನೆಗಳು.
ಅವರ ದೇಹಗಳಿಗೆ ನೀವು ಆಶ್ರಯ ನೀಡಬಹುದು, ಆತ್ಮಗಳಿಗಲ್ಲ,
ಏಕೆಂದರೆ ನೀವು ಕನಸಿನಲ್ಲಿಯೂ ಹೋಗಲಾಗದ ನಾಳೆಯ ಮನೆಗಳಲ್ಲಿ ಅವು ವಾಸಿಸುತ್ತವೆ.
ನೀವು ಅವರಂತಾಗಲು ಶ್ರಮಿಸಬಹುದು, ಅವರನ್ನು ನಿಮ್ಮಂತಾಗಿಸಲು ಅಲ್ಲ.
ಜೀವ ಹಿಂದಕ್ಕೆ ಹೋಗುವುದೂಇಲ್ಲ, ನಿನ್ನೆ ಮರಳಿಬರಲೆಂದು ಕಾಯುವುದೂ ಇಲ್ಲವಾದ್ದರಿಂದ.
ನಿಮ್ಮ ಮಕ್ಕಳೆಂಬ ಜೀವಂತ ಬಾಣಗಳನ್ನು ಬಿಡಲು ಉಪಯೋಗಿಸಿದ ಬಿಲ್ಲುಗಳು ನೀವು.
ಬಿಲ್ಗಾರ ತನ್ನೆಲ್ಲ ಬಲ ಪ್ರಯೋಗಿಸಿ ನಿಮ್ಮನ್ನು ಬಾಗಿಸಿರುತ್ತಾನೆ ತನ್ನ ಬಾಣಗಳು ಬಲು ವೇಗವಾಗಿ ಬಲು ದೂರ ಸಾಗಲೆಂದು, ತನ್ನ ಬಾಣಗಳು ಅನಂತತೆಯ ಪಥದಲ್ಲಿ ಸಾಗುವುದನ್ನವನು ನೋಡುತ್ತಿರುತ್ತಾನೆ.
ಬಿಲ್ಗಾರನ ಕೈನಲ್ಲಿ ನಿಮ್ಮ ಬಾಗುವಿಕೆಯು ಸಂತೋಷದಾಯಕವಾಗಿರಲಿ.
ಹಾರುವ ಬಾಣವನ್ನು ಪ್ರೀತಿಸುವಷ್ಟೇ ಸದೃಢವಾದ ಬಿಲ್ಲನ್ನೂ ಅವನು ಪ್ರೀತಿಸುತ್ತಾನೆ.”
– ಖಲೀಲ್‌ ಗಿಬ್ರಾನ್

No comments: