Pages

18 February 2018

ಎಚ್ಚರ, ನಿಮ್ಮೆಲ್ಲ ಚಟುವಟಿಕೆಗಳನ್ನೂ ದಾಖಲಿಸುತ್ತಿದ್ದಾನೆ, ಚಿತ್ರಗುಪ್ತ!!!



ಹೌದು, ಬಲುಹಿಂದೆ ಕತೆಗಳಲ್ಲಿ ವರ್ಣಿಸುತ್ತಿದ್ದಂತೆ ಪ್ರತೀಕ್ಷಣವೂ ಮನಸ್ಸಿನಲ್ಲಿಯೇ ಆಲೋಚಿಸುವುದೂ ಸೇರಿದಂತೆ ನಿಮ್ಮ ಎಲ್ಲ ಕ್ರಿಯೆಗಳನ್ನೂ ವಿಷಯನಿಷ್ಠವಾಗಿ ದಾಖಲಿಸುತ್ತಿದ್ದಾನೆ, ಚಿತ್ರಗುಪ್ತ. ಅಷ್ಟೇ ಅಲ್ಲದೆ, ಆವಶ್ಯಕತೆ ಇದ್ದಾಗ ಆ ಸಂಚಯದಿಂದ ಸುಸಂಗತ ದಾಖಲೆಗಳನ್ನು ಹೆಕ್ಕಿ ತೆಗೆದು ಒದಗಿಸುತ್ತಾನೆ.!!!

ಯಾರು ಈ ಚಿತ್ರಗುಪ್ತ? ಅವನು ಇರುವುದಾದರೂ ಎಲ್ಲಿ? ದಾಖಲಿಸುವುದಾದರೂ ಎಲ್ಲಿ? ಚಿತ್ರಗುಪ್ತನಿಗಾಗಿ ಎಲ್ಲೆಲ್ಲೋ ಹುಡುಕಬೇಕಾದ ಆವಶ್ಯಕತೆಯೇ ಇಲ್ಲ. ಏಕೆಂದರೆ, ಅವನುನಿಮ್ಮೊಳಗೇ ಇದ್ದಾನೆ, ಅರ್ಥಾತ್‌ ನಿಮ್ಮ ಅಂತರಾತ್ಮವೇ ಅವನು’. ಎಂದೇ, ಅವನಿಗೆ ತಿಳಿಯದಂತೆ ನೀವೇನನ್ನೂ ಮಾಡಲೂ ಸಾಧ್ಯವಿಲ್ಲ, ಅಷ್ಟೇ ಏಕೆ, ಆಲೋಚಿಸಲೂ ಸಾಧ್ಯವಿಲ್ಲ. ನಿಮ್ಮೆಲ್ಲ ಕ್ರಿಯೆಗಳನ್ನೂ, ತತ್ಸಂಬಂಧಿತ ಭಾವನೆಗಳ ಸಹಿತ ಆತ ನಿಮಗೆ ತಿಳಿಯದೆಯೇ ಸದ್ದಿಲ್ಲದೇ ನಿಮ್ಮ ಸುಪ್ತಮನಸ್ಸಿನಲ್ಲಿ ದಾಖಲಿಸುತ್ತಿರುತ್ತಾನೆ. ಅರ್ಥಾತ್, ನಿಮ್ಮ ಭವಿಷ್ಯವನ್ನು ಪ್ರಭಾವಿಸುವ ಸಮಸ್ತ ಹಾಲಿ ಅನುಭವಗಳು ನಿಮ್ಮ ಮನಸ್ಸಿನಲ್ಲಿ ದಾಖಲಿಸಲ್ಪಡುತ್ತವೆ.ತೀವ್ರವಾದ ಭಾವನೆಗಳನ್ನು (ಉದಾ: ಕೋಪ, ಅಸಹನೆ, ಪ್ರೀತಿ, ಆನಂದ, ದ್ವೇಷ, ಭಯ ಇತ್ಯಾದಿ) ಉದ್ದೀಪಿಸಿದ ಅನುಭವಗಳು ಆಯಲ್ಪಟ್ಟು ಅತ್ಮಕ್ಕೆ ಸ್ವತಂತ್ರ ಅಸ್ತಿತ್ವ ಇರುವ ವರೆಗೂ ಉಳಿಯುವಂತೆ ಸುಪ್ತಮನಸ್ಸಿನ ಉಗ್ರಾಣಕ್ಕೆ ರವಾನಿಸಲ್ಪಡುತ್ತವೆ ಉಳಿದವು ಕ್ರಮೇಣ ನಶಿಸಿ ಹೋಗುತ್ತವೆ, ಹೊಸ ದಾಖಲಾತಿಯ ಪ್ರಕ್ರಿಯೆ ಸುಗಮವಾಗಿ ಜರಗುವ ಸಲುವಾಗಿ. ಕಾಲ ಕಳೆದಂತೆ, ಹಳೆಯ ದಾಖಲಾತಿಗಳು ಸುಪ್ತಮನಸ್ಸಿನ ಉಗ್ರಾಣದಲ್ಲಿ ಆಳಕ್ಕೆ ಸರಿಯುತ್ತವೆ, ಹೊಸ ದಾಖಲಾತಿಗಳಿಗೆ ಸ್ಥಳಾವಕಾಶ ಒದಗಿಸುವ ಸಲುವಾಗಿ. ಇದು ಅನುಲ್ಲಂಘನೀಯ ನಿಸರ್ಗ ನಿಯಮ. ಸುಪ್ತಮನಸ್ಸಿನ ಈ ಉಗ್ರಾಣದ ದಾಸ್ತಾನು ಸಾಮರ್ಥ್ಯಕ್ಕೆ ಮಿತಿ ಇಲ್ಲದಿರುವುದು ನಿಸರ್ಗದ ವೈಚಿತ್ರ್ಯಗಳ ಪೈಕಿ ಒಂದು. ಆತ್ಮ ಅನ್ನುವುದು ನಿಸರ್ಗದಲ್ಲಿ ಅಸ್ತಿತ್ವದಲ್ಲಿ ಇರುವ ಹಾಗು ಜ್ಞಾನೇಂದ್ರಿಯಗ್ರಾಹ್ಯ ಅಲ್ಲವಾದದ್ದರಿಂದ ಸಂಪೂರ್ಣವಾಗಿ ನಮಗೆ ಅರ್ಥವಾಗದೇ ಇರುವ ವಿಶಿಷ್ಟ ಚೇತನಕ್ಕೆ ನಾವು ನೀಡಿರುವ ಹೆಸರು. ತಂತಾನೇ ಜರಗುವ ಈ ದಾಖಲಾತಿ ಪ್ರಕ್ರಿಯೆ ಅಮೂರ್ತವಾದದ್ದು ಆಗಿರುವುದರಿಂದಲೂ ಅಮೂರ್ತವಾದದ್ದನ್ನು ಗ್ರಹಿಸಿ ಅರ್ಥಮಾಡಿಕೊಳ್ಳುವುದು ಕಷ್ಟವಾದದ್ದರಿಂದಲೂ ಅಮೂರ್ತಕ್ಕೆ ಕಾಲ್ಪನಿಕ ಮೂರ್ತರೂಪ ಕೊಡುವ ಪ್ರಯತ್ನಗಳೇ ಚಿತ್ರಗುಪ್ತ’, ‘ಚಿತ್ರಗುಪ್ತನ ಕಡತಇವೇ ಮೊದಲಾದ  ಹಾಗು ತತ್ಸಂಬಂಧಿತ ಪರಿಕಲ್ಪನೆಗಳು.

ಇಂತು ನಮ್ಮ ಸುಪ್ತಮನಸ್ಸಿನಾಳದಲ್ಲಿ ಹುದುಗಿರುವ, ಆದಾಗ್ಯೂ ಮರೆತಿದ್ದೇವೆ ಎಂಬುದಾಗಿ ನಾವು ತಿಳಿದಿರುವ ಈ ದಾಖಲಾತಿಗಳುನಮ್ಮ ಹಾಲಿ ದೃಗ್ಗೋಚರ ವರ್ತನೆಯನ್ನೂ ಇತರರಿಗೆ ಗೋಚರಿಸದ ಆಲೋಚಿಸುವಿಕೆಯಂಥ ಆಂತರಿಕ ವರ್ತನೆಗಳನ್ನೂ ನಿಯಂತ್ರಿಸುತ್ತಿರುತ್ತವೆ, ನಮಗರಿವಿಲ್ಲದೆ. ಈ ದಾಖಲೆಗಳು ಆತ್ಮ ಹಾಗು ತತ್ಸಂಬಂಧಿತ ಮನಸ್ಸು ಅಸ್ತಿತ್ವದಲ್ಲಿ ಇರುವ ವರೆಗೂ ಅಸ್ತಿತ್ವದಲ್ಲಿ ಇರುತ್ತವೆ. ಮನೋವೈದ್ಯರು ಹಾಗು ಮನೋವಿಶ್ಲೇಷಕರು ವಿಶಿಷ್ಟತಂತ್ರಗಳ ಪ್ರಯೋಗ ಮುಖೇನ ಈ ನೆನಪುಗಳು ಪುನಃ ಮನಸ್ಸಿನ ಜಾಗೃತ ಭಾಗಕ್ಕೆ ಬರುವಂತೆ ಮಾಡಬಲ್ಲರು. ವಿಶೇಷಜ್ಞರ ಮಾರ್ಗದರ್ಶನದಲ್ಲಿ ವಿಶಿಷ್ಟ ವಿಧಾನಗಳನ್ನು ನಾವು ಸುದೀರ್ಘ ಕಾಲ ಅನುಸರಿಸಿ ಇವನ್ನು ಪುನಃ ಮನಃಪಟಲದ ಮೇಲೆ ಮೂಡಿಸಿಕೊಳ್ಳಲೂ ಬಹುದು.

ಅಂದ ಹಾಗೆ, ೨೦ನೇ ಶತಮಾನದ ಆದಿ ಭಾಗದಲ್ಲಿ ಇದ್ದ ಎಡ್ಗರ್‌ ಕೇಸೀ ಎಂಬಾತ ಸ್ವಸಮ್ಮೋಹನ ಸ್ಥಿತಿಯಲ್ಲಿ ಇತರರ ಮನಸ್ಸಿನಲ್ಲಿ ಹುದುಗಿದ್ದ ಈ ದಾಖಲೆಗಳನ್ನು ಓದಬಲ್ಲವನಾಗಿದ್ದ!!!

No comments: