Pages

9 December 2015

ಸೂಫಿ ಕತೆಗಳು ೫೧-೧೦೦

೫೧. ಬೈರಾಗಿಯ ಬಯಕೆಗಳ ಕತೆ
ಆಲ್ಬೋರ್ಝ್ ಬೆಟ್ಟಗಳಲ್ಲಿ ಒಂದು ತುಂಡು ಬಟ್ಟೆಯನ್ನು ಸುತ್ತಿಕೊಂಡು ಧ್ಯಾನ ಮಾಡಲು ಬೈರಾಗಿ ಝಾರ್ವಂದ್ ತೀರ್ಮಾನಿಸಿದ.‌ ಧರಿಸಿದ ಬಟ್ಟೆಯನ್ನು ಒಗೆದು ಒಣಹಾಕಿದಾಗ ಧರಿಸಿಕೊಳ್ಳಲು ಇನ್ನೊಂದು ತುಂಡು ಬಟ್ಟೆಯ ಅಗತ್ಯವಿದೆ ಅನ್ನುವ ಅರಿವು ಅವನಿಗೆ ಬಲು ಬೇಗನೆ ಉಂಟಾಯಿತು. ಸಮೀಪದ ಹಳ್ಳಿಯ ಜನಕ್ಕೆ ತನ್ನ ಬಯಕೆಯನ್ನು ಆತ ತಿಳಿಸಿದ. ಅವನೊಬ್ಬ ಧರ್ಮಶ್ರದ್ಧೆಯುಳ್ಳವ ಎಂಬುದು ಅವರಿಗೆ ಗೊತ್ತಿದ್ದದ್ದರಿಂದ ಅವನ ಬಯಕೆಯನ್ನು ಅವರು ಪೂರೈಸಿದರು. ಧರಿಸಿದ್ದ ಬಟ್ಟೆಯಲ್ಲದೆ ಇನ್ನೊಂದು ಬಟ್ಟೆಯ ತುಂಡಿನೊಂದಿಗೆ ಆತ ಪುನಃ ಬೆಟ್ವವನ್ನೇರಿದ.
ಕೆಲವೇ ದಿನಗಳಲ್ಲಿ ಇಲಿಯೊಂದು ತಾನು ಧ್ಯಾನ ಮಾಡುತ್ತಿದ್ದಾಗ ಹೆಚ್ಚುವರಿ ಬಟ್ಟೆಯ ತುಂಡನ್ನು ಎಳೆದೊಯ್ಯಲು ಪ್ರಯತ್ನಿಸುತ್ತಿರುವುದು ಅವನ ಗಮನಕ್ಕೆ ಬಂದಿತು. ಆ ಇಲಿಯನು ಹೆದರಿಸಿ ಓಡಿಸುವ ಇರಾದೆ ಅವನಗೆ ಇತ್ತಾದರೂ ಧ್ಯಾನ, ಪ್ರಾರ್ಥನೆಗಳನ್ನು ಬಿಟ್ಟು ಇಲಿಯನ್ನು ಅಟ್ಟಿಕೊಂಡು ಹೋಗುವಂತಿರಲಿಲ್ಲ. ಎಂದೇ, ಆತ ಪುನಃ ಹಳ್ಳಿಗೆ ಹೋಗಿ ತನಗೊಂದು ಬೆಕ್ಕನ್ನು ಕೊಡುವಂತೆ ಹಳ್ಳಿಗರನ್ನು ಕೇಳಿದ.
ಬೆಕ್ಕನ್ನು ಪಡೆದ ಬಳಿಕ ಕೇವಲ ಹಣ್ಣುಗಳನ್ನು ತಿಂದು ಬೆಕ್ಕು ಬದುಕಲಾರದು ಎಂಬ ಅರಿವು ಅವನಿಗೆ ಉಂಟಾಯಿತು. ಅವನು ಧ್ಯಾನ ಮಾಡುತ್ತಿದ್ದ ಸ್ಥಳದಲ್ಲಿ ಬೆಕ್ಕಿಗೆ ಬೇಕಾಗುವಷ್ಟು ಸಂಖ್ಯೆಯಲ್ಲಿ ಇಲಿಗಳೂ ಇರಲಿಲ್ಲ. ಅದಕ್ಕೆ ಹಾಲಿನ ಅವಶ್ಯಕತೆ ಇತ್ತು. ಅವನಿಗೆ ಕುಡಿಯಲು ಹಾಲು ಬೇಕಿರಲಿಲ್ಲ ಎಂಬುದು ಹಳ್ಳಿಗರಿಗೆ ಗೊತ್ತಿದ್ದದ್ದರಿಂದ  ಸ್ವಲ್ಪ ಹಾಲನ್ನೂ ಅವರು ಕೊಟ್ಟರು.
ಆದರೆ ಆ ಹಾಲು ಬಲು ಬೇಗನೆ ಮುಗಿದು ಹೋಯಿತು. ಝಾರ್ವಂದ್ ಚಿಂತಾಕ್ರಾಂತನಾದ. ಏಕೆಂದರೆ ಆಗಿಂದಾಗ್ಯೆ ಅವನು ಹಾಲಿಗಾಗಿ ಬೆಟ್ಟ ಇಳಿದು ಹತ್ತಬೇಕಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಲೋಸುಗ ಅವನು ಒಂದು ಬೆಕ್ಕಿಗೆ ಸಾಲುವಷ್ಟು ಹಾಲು ಕೊಡಬಲ್ಲ ಹಸುವೊಂದನ್ನು ತಾನು ಧ್ಯಾನ ಮಾಡುವಲ್ಲಿಗೆ ಒಯ್ದನು. ತತ್ಪರಿಣಾಮವಾಗಿ ಬೆಕ್ಕಿಗೆ ಹಾಲು ನೀಡುವ ಸಲುವಾಗಿ ಅವನೇ ಹಾಲು ಕರೆಯಬೇಕಾಯಿತು. ಆಗ ಅವನು ಇಂತು ಆಲೋಚಿಸಿದ: ಹಳ್ಳಿಯಲ್ಲಿ ಬಹಳ ಮಂದಿ ಬಡವರು ಇದ್ದಾರೆ. ಅವರ ಪೈಕಿ ಯಾರಾದರೂ ಒಬ್ಬನಿಗೆ ಇಲ್ಲಿಗೆ ಬಂದು ಬೆಕ್ಕಿನ ಸಲುವಾಗಿ ಹಾಲು ಕರೆಯುವಂತೆಯೂ ಉಳಿದ ಹಾಲನ್ನು ಅವನೇ ಕುಡಿಯುವಂತೆಯೂ ಹೇಳುವುದು ಸರಿಯಾದೀತು.
ಹಾಲು ಕುಡಿಯುವ ಆವಶ್ಯಕತೆ ಇದ್ದಂತೆ ಕಾಣುತ್ತಿದ್ದ ಬಡವನೊಬ್ಬನನ್ನು ಬೆಟ್ಟದ ಮೇಲಕ್ಕೆ ಕರೆದೊಯ್ದ ಝಾರ್ವಂದ್‌. ಬೆಟ್ಟದ ಮೇಗಣ ತಾಜಾ ವಾಯುವಿನ ಸೇವನೆ ಹಾಗೂ ಪುಷ್ಟಿದಾಯಕ ಹಾಲು ಕುಡಿಯುವಿಕೆಗಳ ಪರಿಣಾಮವಾಗಿ ಕೆಲವೇ ವಾರಗಳಲ್ಲಿ ಆತ ಆರೋಗ್ಯವಂತನಾದ. ಅವನು ಝಾರ್ವಂದ್‌ನಿಗೆ ಹೇಳಿದ, ನನಗೊಬ್ಬ ಸಂಗಾತಿ ಬೇಕು ಅನ್ನಿಸುತ್ತಿದೆ. ಕುಟುಂಬವೊದನ್ನು ಹುಟ್ಟುಹಾಕುವ ಇರಾದೆಯೂ ಇದೆ.
ಝಾರ್ವಂದ್‌ ಆಲೋಚಿಸಿದ, ಅವನು ಹೇಳುತ್ತಿರುವುದು ಸರಿಯಾಗಿಯೇ ಇದೆ. ಸಂಗಾತಿಯ ಸಾಹಚರ್ಯದಿಂದ ಅವನನ್ನು ವಂಚಿತನಾಗುವಂತೆ ನಾನು ಮಾಡಕೂಡದು.
ಇದೇ ರೀತಿ ಮುಂದುವರಿಯುವ ನೀಳ್ಗತೆಯನ್ನು ಮೊಟಕುಗೊಳಿಸಿ ಹೇಳುವುದಾದರೆ ಎರಡು ತಿಂಗಳುಗಳ ನಂತರ ಇಡೀ ಹಳ್ಳಿಯೇ ಬೆಟ್ಟದ ಮೇಲಕ್ಕೆ ವರ್ಗಾವಣೆ ಆಗಿತ್ತು.

***** 

೫೨. ಒಬ್ಬ ಮಗ ಬೇಕೆನ್ನುತ್ತಿದ್ದ ಫಕೀರನ ಕತೆ
ಶಿರಾಝ್‌ನ ಷೇಖ್ ಸಾದಿಗೆ ಒಬ್ಬ ಫಕೀರನ ಪತ್ನಿ ಗರ್ಭಿಣಿ ಎಂಬ ವಿಷಯ ತಿಳಿದಿತ್ತು. ತನಗೊಬ್ಬ ಮಗ ಹುಟ್ಟಬೇಕೆಂಬುದು ಆ ಫಕೀರನ ಬಯಕೆಯಾಗಿತ್ತು. ಎಂದೇ ಆತ ಇಂತೊಂದು ಪ್ರತಿಜ್ಞೆ ಮಾಡಿ ಪ್ರಾರ್ಥಿಸಿದ: ಓ ದೇವರೇ, ನೀನು ನನಗೆ ಮಗನೊಬ್ಬನನ್ನು ದಯಪಾಲಿಸಿದರೆ ನಾನು ಧರಿಸಿರುವ ಬಟ್ಟೆಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲ ಸಂಪತ್ತನ್ನೂ ನೆರಹೊರೆಯವರಿಗೆ ಕೊಡುತ್ತೇನೆ.
ಕೆಲವು ತಿಂಗಳುಗಳು ಕಳೆದ ನಂತರ ಫಕೀರನ ಹೆಂಡತಿ ಗಂಡು ಮಗುವಿಗೆ ಜನ್ಮವಿತ್ತಳು. ಇಡೀ ಕುಟುಂಬ ಆನಂದಿಸಿತು. ಫಕೀರ ತಾನು ಪ್ರತಿಜ್ಞೆ ಮಾಡಿದ್ದಂತೆ ನಡೆದುಕೊಂಡ.
ಅನೇಕ ವರ್ಷಗಳು ಕಳೆದ ನಂತರ ಸಿರಿಯಾಕ್ಕೆ ಹೋಗಿ ಹಿಂದಿರುಗಿ ಬಂದಿದ್ದ ಷೇಖ್ ಸಾದಿ ಫಕೀರ ವಾಸವಿದ್ದ ಸ್ಥಳದ ಸಮೀಪದಲ್ಲಿ ಹೋಗುತ್ತಿದ್ದ. ಫಕೀರ ಈಗ ಎಲ್ಲಿದ್ದಾನೆ ಎಂಬುದನ್ನು ಆಸುಪಾಸಿನ ನಿವಾಸಿಗಳ ಹತ್ತಿರ ವಿಚಾರಿಸಿದ.
ಅವರು ಬಲು ದುಃಖದಿಂದ ತಲೆಯಲ್ಲಾಡಿಸುತ್ತಾ ಹೇಳಿದರು, ಅವನು ಸ್ಥಳೀಯ ಸೆರೆಮನೆಯೊಳಗೆ ಕುಳಿತಿದ್ದಾನೆ.
ಆಶ್ಚರ್ಯಚಕಿತನಾದ ಷೇಖ್ ಸಾದಿ ಕಾರಣ ಏನೆಂಬುದನ್ನು ವಿಚಾರಿಸಿದ. ಅವರು ಹೇಳಿದರು, ಒಂದು ರಾತ್ರಿ ಫಕೀರನ ಮಗ ಒಬ್ಬನೊಂದಿಗೆ ಏನೋ ಒಂದು ವಿಷಯದ ಕುರಿತಾಗಿ ವಾದ ಮಾಡುತ್ತಿದ್ದ. ಕೊನೆಗೊಮ್ಮೆ ಕೋಪೋದ್ರಿಕ್ತನಾದ ಫಕೀರನ ಮಗ ಅತನನ್ನು ತೀವ್ರವಾಗಿ ಗಾಯಗೊಳಿಸಿ ನಗರ ಬಿಟ್ಟು ಓಡಿಹೋದ. ಅಧಿಕಾರಿಗಳಿಗೆ ಅವನು ಸಿಕ್ಕದೇ ಇದ್ದದ್ದರಿಂದ ಅವನ ಬದಲಿಗೆ ಅವನ ತಂದೆಯನ್ನು ಸೆರೆಮನೆಯೊಳಕ್ಕೆ ತಳ್ಳಲು ತೀರ್ಮಾನಿಸಿದರು.
ಷೇಖ್ ಸಾದಿ ಉದ್ಗರಿಸಿದ, ನನಗೀಗ ನೆನಪಾಯಿತು. ಪ್ರಾರ್ಥನೆ, ಪ್ರತಿಜ್ಞೆಗಳನ್ನು ಮಾಡಿ ಫಕೀರ ಪಡೆದ ಮಗ ಆತ!
ವಿವೇಕೀ ಗೆಳೆಯನೇ! ತಂದೆಯ ಪೋಷಣೆಗೆ ತಯಾರಿಲ್ಲದ ಗಂಡುಮಕ್ಕಳಿಗೆ ಜನ್ಮ ನೀಡುವುದಕ್ಕೆ ಬದಲಾಗಿ ಕಾಳಸರ್ಪಗಳಿಗೆ ಗರ್ಭವತಿಯಾಗಿರುವ ಹೆಂಡತಿ ಜನ್ಮನೀಡುವುದೊಳಿತು - ಅಂದಿದ್ದಾರೆ ವಿವೇಕಿಗಳು

***** 

೫೩. ಮೂರು ಮೀನುಗಳ ಕತೆ
ಒಂದು ಕೆರೆಯಲ್ಲಿ ಮೂರು ಮೀನುಗಳು ವಾಸಿಸುತ್ತಿದ್ದವು - ಒಂದು ಜಾಣ ಮೀನು, ಒಂದು ಅರೆ-ಜಾಣ ಮೀನು, ಒಂದು ಅಷ್ಟೇನೂ ಜಾಣವಲ್ಲದ ಮೀನು. ಎಲ್ಲೆಡೆ ಮೀನುಗಳ ಜೀವನ ಹೇಗಿತ್ತೋ ಅಂತೆಯೇ ಇತ್ತು ಅವುಗಳ ಜೀವನ. ಇಂತಿರುವಾಗ ಒಂದು ದಿನ ನಾಡ್ಡಿ ಎಂಬ ಬೆಸ್ತ ಅವುಗಳು ಇದ್ದ ಕೆರೆಗೆ ಭೇಟಿ ನೀಡಿದ. ಅವನ ಕೈನಲ್ಲಿ ಮೀನು ಹಿಡಿಯುವ ಬಲೆ ಹಾಗು ಒಂದು ಬುಟ್ಟಿ ಇತ್ತು. ಜಾಣ ಮೀನು ಅವನನ್ನು ಕೆರೆಯ ನೀರಿನ ಒಳಗಿನಿಂದ ನೀರಿನ ಮೂಲಕವೇ ನೋಡಿತು. ಹಿಂದಿನ ಅನುಭವಗಳು ಹಾಗು ಕೇಳಿದ್ದ ಕತೆಗಳನ್ನು ಆಧರಿಸಿ ಜಾಣ ಮೀನು ಯುಕ್ತ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತು. ಅಡಗಲು ಈ ಕೆರೆಯಲ್ಲಿ ಹೆಚ್ಚು ಸ್ಥಳಗಳಿಲ್ಲ. ಆದ್ದರಿಂದ ನಾನು ಸತ್ತಂತೆ ನಟಿಸುತ್ತೇನೆ, ಎಂಬುದಾಗಿ ಅದು ಆಲೋಚಿಸಿತು.
ತನ್ನ ಎಲ್ಲ ಶಕ್ತಿಯನ್ನು ಉಪಯೋಗಿಸಿ ಅದು ನೀರಿನಿಂದ ಮೇಲಕ್ಕೆ ಹಾರಿ ನಾಡ್ಡಿಯ ಕಾಲುಗಳ ಹತ್ತಿರ ಬಿದ್ದಿತು. ಇದನ್ನು ನೋಡಿ ಬೆಸ್ತನಿಗೆ ಆಶ್ಚರ್ಯವಾಯಿತು. ಜಾಣ ಮೀನು ಉಸಿರನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡದ್ದು ತಿಳಿಯದ ಬೆಸ್ತ ಆ ಮೀನು ಸತ್ತಿದೆಯೆಂದು ಭಾವಿಸಿ ಅದನೆತ್ತಿ ಕೆರೆಗೆ ಎಸೆದನು. ಜಾಣ ಮೀನು ಒಂದು ಸಣ್ಣ ತೂತಿನೊಳಕ್ಕೆ ವೇಗವಾಗಿ ಹೋಗಿ ಸೇರಿಕೊಂಡಿತು. ನಡೆದದ್ದು ಏನು ಎಂಬುದು ಅರೆ-ಜಾಣ ಮೀನಿಗೆ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ಎಂದೇ ಅದು ಜಾಣ ಮೀನಿನ ಹತ್ತಿರ ಹೋಗಿ ನಡೆದದ್ದರ ಕುರಿತು ಕೇಳಿತು. ಜಾಣ ಮೀನು ಹೇಳಿತು, ಬಲು ಸರಳ. ನಾನು ಸತ್ತಂತೆ ನಟಿಸಿದೆ. ಆದ್ದರಿಂದ ಅವನು ನನ್ನನ್ನು ಹಿಂದಕ್ಕೆ ಕೆರೆಗೇ ಎಸೆದ. ತಕ್ಷಣ ಅರೆ-ಜಾಣ ಮೀನು ಕೂಡ ನೀರಿನಿಂದ ಹಾರಿ ನಾಡ್ಡಿಯ ಕಾಲುಗಳ ಬುಡದಲ್ಲಿ ಬಿದ್ದಿತು. ವಿಚಿತ್ರವಾಗಿದೆ. ಈ ಮೀನುಗಳು ಎಲ್ಲೆಡೆ ಮೇಲಕ್ಕೆ ಹಾರುತ್ತಿವೆ, ಎಂಬುದಾಗಿ ಅಂದುಕೊಂಡ ಆ ಬೆಸ್ತ. ದುರದೃಷ್ಟವಶಾತ್‌ ಅರೆ-ಜಾಣ ಮೀನು ಉಸಿರು ಬಿಗಿ ಹಿಡಿಯುವುದನ್ನು ಮರೆತುಬಿಟ್ಟಿತ್ತು. ಅದು ಜೀವಂತವಾಗಿರುವುದನ್ನು ನೋಡಿದ ಬೆಸ್ತ ಅದನ್ನೆತ್ತಿ ತನ್ನ ಬುಟ್ಟಿಗೆ ಹಾಕಿಕೊಂಡ.
ಮೀನುಗಳು ತನ್ನ ಮುಂದೆ ನೆಲದ ಮೇಲಕ್ಕೆ ಹಾರಿ ಬೀಳುತ್ತಿದ್ದದ್ದನ್ನು ನೋಡಿ ಗೊಂದಲಕ್ಕೊಳಗಾದ ಬೆಸ್ತ ಬುಟ್ಟಿಯ ಮುಚ್ಚಳ ಹಾಕುವುದನ್ನು ಮರೆತು ಕೆರೆಯೊಳಕ್ಕೆ ನೋಡಲೋಸುಗ ಅತ್ತ ತಿರುಗಿದ. ಬುಟ್ಟಿಯ ಮುಚ್ಚಳ ತೆರೆದಿರುವುದನ್ನು ಗಮನಿಸಿದ ಅರೆ-ಜಾಣ ಮೀನು ಹೊರಕ್ಕೆ ಹಾರಿ ಬಲು ಕಷ್ಟದಿಂದ ಕೆರೆಯೊಳಕ್ಕೆ ಪುನಃ ಸೇರಿಕೊಂಡಿತು. ಏದುಸಿರು ಬಿಡುತ್ತಾ ಅದು ಈಜಿ ಮೊದಲನೆಯ ಮೀನಿನ ಜೊತೆ ಸೇರಿಕೊಂಡಿತು.
ಮೊದಲನೇ ಎರಡು ಮೀನುಗಳ ಹಾಗು ಬೆಸ್ತನ ಚಟುವಟಿಕಗಳನ್ನು ನೋಡುತ್ತಿದ್ದ ಅಷ್ಟೇನೂ ಜಾಣವಲ್ಲದ ಮೀನಿಗೆ ಬಹಳ ಗೊಂದಲವಾಯಿತು. ಎರಡೂ ಮೀನುಗಳು ನೀಡಿದ ವಿವರಣೆಗಳನ್ನು ಅದು ಕೇಳಿತು. ಅವೆರಡೂ ಮೀನುಗಳು ತಂತ್ರದ ಪ್ರತೀ ಅಂಶವನ್ನು ಅದಕ್ಕೆ ವಿವರವಾಗಿ ತಿಳಿಸಿದವು. ಸತ್ತಂತೆ ಕಾಣಲೋಸುಗ ಉಸಿರು ಬಿಗಿ ಹಿಡಿಯಬೇಕಾದ್ದರ ಪ್ರಾಮುಖ್ಯವನ್ನು ಒತ್ತಿ ಹೇಳಿದವು. ನಿಮಗೆ ತುಂಬಾ ಧನ್ಯವಾದಗಳು. ನೀವು ಹೇಳಿದ್ದೆಲ್ಲವೂ ನನಗೆ ಅರ್ಥವಾಗಿದೆ, ಎಂಬುದಾಗಿ ಹೇಳಿದ ಅಷ್ಟೇನೂ ಜಾಣವಲ್ಲದ ಮೀನು ನೀರಿನಿಂದ ಹಾರಿ ಬೆಸ್ತನ ಕಾಲುಗಳ ಬುಡದಲ್ಲಿ ಬಿದ್ದಿತು.
ಈಗಾಗಲೇ ಎರಡು ಮೀನುಗಳನ್ನು ಕಳೆದುಕೊಂಡಿದ್ದ ಬೆಸ್ತನು ಮೂರನೆಯದ್ದನ್ನು ಅದು ಉಸಿರಾಡುತ್ತಿದೆಯೋ ಇಲ್ಲವೋ ಎಂಬುದನ್ನೂ ನೋಡದೆ ಎತ್ತಿ ಬುಟ್ಟಿಯೊಳಕ್ಕೆ ಹಾಕಿ ಭದ್ರವಾಗಿ ಮುಚ್ಚಳ ಹಾಕಿದನು. ತದನಂತರ ಅನೇಕ ಸಲ ಕೆರೆಯಲ್ಲಿ ಬಲೆ ಬೀಸಿ ಮೀನು ಹಿಡಿಯಲು ಪ್ರಯತ್ನಿಸಿದನು. ಉಳಿದ ಎರಡು ಮೀನುಗಳು ಅವನ ಬಲೆಗೆ ಸಿಕ್ಕಿ ಬೀಳಲಿಲ್ಲ, ಏಕೆಂದರೆ ಅವು ಸಣ್ಣ ಬಿಲವೊಂದರಲ್ಲಿ ಒತ್ತೊತ್ತಾಗಿ ಅಡಗಿ ಕುಳಿತಿದ್ದವು.
ಸ್ವಲ್ಪ ಸಮಯದ ನಂತರ ನಾಡ್ಡಿ ತನ್ನ ಪ್ರಯತ್ನವನ್ನು ನಿಲ್ಲಿಸಿದ. ಬುಟ್ಟಿಯ ಮುಚ್ಚಳ ತೆಗೆದು ನೋಡಿದ, ಒಳಗಿದ್ದ ಮೀನು ಸತ್ತಿದೆ ಎಂಬುದಾಗಿ ಭಾವಿಸಿದ. ಏಕೆಂದರೆ ಅಷ್ಟೇನೂ ಜಾಣವಲ್ಲದ ಮೀನು ಉಳಿದೆರಡು ಮೀನುಗಳು ಹೇಳಿದಂತೆ ಉಸಿರು ಬಿಗಿಹಿಡಿದು ಸತ್ತಂತೆ ಬಿದ್ದುಕೊಂಡಿತ್ತು. ಆ ಮೀನನ್ನು ಬುಟ್ಟಿಯಲ್ಲಿಯೇ ಇಟ್ಟುಕೊಂಡು ಬೆಸ್ತ ಮನೆಯತ್ತ ನಡೆದ!

***** 

೫೪. ಮಂಗಗಳೂ ಟೊಪ್ಪಿಗಳೂ
ಒಂದಾನೊಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಊರಿಂದೂರಿಗೆ ತಿರುಗುತ್ತಾ  ಟೊಪ್ಪಿಗಳನ್ನು ಮಾರುತ್ತಿದ್ದ ಔರಂಗಝೇಬ್‌ ಎಂಬ ಯುವಕನಿದ್ದ.
ಬೇಸಿಗೆಯ ಒಂದು ಅಪರಾಹ್ನ ವಿಶಾಲವಾದ ಬಯಲಿನಲ್ಲಿ ಪಯಣಿಸಿ ಸುಸ್ತಾಗಿದ್ದ ಔರಂಗಝೇಬನು ಯಾವುದಾದರೂ ತಂಪಾದ ಸ್ಥಳದಲ್ಲಿ ವಿರಮಿಸಿ ಒಂದು ಕಿರುನಿದ್ದೆ ಮಾಡುವ ಆಲೋಚನೆ ಮಾಡಿದ. ಸಮೀಪದಲ್ಲಿಯೇ ಇದ್ದ ಮಾವಿನ ಮರವೊಂದರ ಬುಡದಲ್ಲಿ ತನ್ನ ಚೀಲವನ್ನಿಟ್ಟು ಮಲಗಿ ನಿದ್ದೆ ಮಾಡಿದ. ಕೆಲವೇ ಕ್ಷಣಗಳಲ್ಲಿ ಗಾಢ ನಿದ್ದೆಗೆ ಜಾರಿದ. ಸ್ವಲ್ಪ ಸಮಯದ ನಂತರ ಎಚ್ಚರಗೊಂಡು ನೋಡುವಾಗ ಚೀಲದಲ್ಲಿ ಇದ್ದ ಟೊಪ್ಪಿಗಳೆಲ್ಲವೂ ಮಾಯವಾಗಿದ್ದವು. ಛೇ, ನನ್ನ ಟೊಪ್ಪಿಗಳನ್ನೇ ಕಳ್ಳರು ಏಕೆ ಕದಿಯಬೇಕಿತ್ತು? ಅಂದುಕೊಂಡು ಕೊರಗಿದ.
ಆಕಸ್ಮಿಕವಾಗಿ ತಲೆ ಎತ್ತಿ ನೋಡಿದಾಗ ಮಾವಿನ ಮರದ ತುಂಬ ಬಣ್ಣಬಣ್ಣದ ಟೊಪ್ಪಿಗಳನ್ನು ಧರಿಸಿದ್ದ ಮುದ್ದಾದ ಮಂಗಗಳು ಕಾಣಿಸಿದವು. ಅವನ್ನು ನೋಡಿದ ಆತ ನಡೆದದ್ದು ಏನು ಎಂಬುದನ್ನು ಊಹಿಸಿದ. ಮಂಗಗಳನ್ನು ಹೆದರಿಸಿ ಟೊಪ್ಪಿಗಳನ್ನು ಮರಳಿ ಪಡೆಯಲೋಸುಗ ಅವನು ಜೋರಾಗಿ ಬೊಬ್ಬೆ ಹಾಕಿದ, ಅವೂ ಅಂತೆಯೇ ಬೊಬ್ಬೆ ಹಾಕಿದವು. ಅವುಗಳತ್ತ ನೋಡುತ್ತಾ ಮುಖ ಸೊಟ್ಟದಾಗಿ ಮಾಡಿದ ಅವೂ ಅಂತೆಯೇ ಮಾಡಿದವು. ಅವನು ಅವುಗಳತ್ತ ಕಲ್ಲುಗಳನ್ನು ಎಸೆದ, ಅವು ಅವನತ್ತ ಮಾವಿನಕಾಯಿಗಳನ್ನು ಎಸೆದವು.
ಈ ಮಂಗಗಳಿಂದ ನನ್ನ ಟೊಪ್ಪಿಗಳನ್ನು ಮರಳಿ ಪಡೆಯುವುದು ಹೇಗೆ? ಎಂಬುದರ ಕುರಿತು ಔರಂಗಝೇಬನು ಸ್ವಲ್ಪ ಕಾಲ ಆಲೋಚಿಸಿದ. ಏನೂ ತೋಚದೆ ಹತಾಶನಾಗಿ ತಾನು ಧರಿಸಿದ್ದ ಟೊಪ್ಪಿಯನ್ನು ತೆಗೆದು ನೆಲಕ್ಕೆಸೆದ. ಮಂಗಗಳೂ ತಮ್ಮ ಟೊಪ್ಪಿಗಳನ್ನು ತೆಗೆದು ನೆಲಕ್ಕೆಸೆದದ್ದನ್ನು ಕಂಡು ಆಶ್ಚರ್ಯಚಕಿತನಾದ. ಬೇಗಬೇಗನೆ ಟೊಪ್ಪಿಗಳನ್ನು ಆಯ್ದು ಚೀಲದಲ್ಲಿ ತುಂಬಿಕೊಂಡು ಮುಂದಿನ ಊರಿಗೆ ಪಯಣಿಸಿದ.
೫೦ ವರ್ಷಗಳು ಕಳೆದ ನಂತರ ಔರಂಗಝೇಬನ ಕುಟುಂಬದ ವ್ಯಾಪಾರ ವಹಿವಾಟನ್ನು ಬಲು ಶ್ರಮವಹಿಸಿ ಸುಸ್ಥಿತಿಯಲ್ಲಿ ನಡೆಸುತ್ತಿದ್ದ ಅವನ ಮೊಮ್ಮಗ ಹಬೀಬ್ ಅದೇ ಸ್ಥಳದ ಮೂಲಕ ಎಲ್ಲಗೋ ಹೋಗುತ್ತಿದ್ದ. ಸುದೀರ್ಘ ಕಾಲ ನಡೆದು ದಣಿದಿದ್ದ ಆತ ಅನೇಕ ಕೊಂಬೆಗಳು ಇದ್ದ ಮಾವಿನ ಮರವನ್ನು ನೋಡಿದ. ತುಸು ವಿಶ್ರಾಂತಿ ತೆಗೆದುಕೊಳ್ಳಲು ಆ ಮರದ ನೆರಳಿನಲ್ಲಿ ಕುಳಿತ ಆತ ಗಾಢ ನಿದ್ದೆಗೆ ಜಾರಿದ. ಕೆಲವು ಗಂಟೆಗಳ ನಂತರ ನಿದ್ದೆಯಿಂದ ಎದ್ದು ನೋಡಿದಾಗ ಚೀಲದಲ್ಲಿ ಇದ್ದ ಟೊಪ್ಪಿಗಳು ಮಾಯವಾಗಿದ್ದವು. ಅವುಗಳಿಗಾಗಿ ಹುಡುಕಲಾರಂಭಿಸಿದಾಗ ಮರದ ಮೇಲೆ ಅವನ ಟೊಪ್ಪಿಗಳನ್ನು ಹಾಕಿಕೊಂಡಿದ್ದ ಮಂಗಗಳ ಗುಂಪನ್ನು ನೋಡಿ ಆಶ್ಚರ್ಯಚಕಿತನಾದ. ಏನು ಮಾಡುವುದೆಂದು ತಿಳಿಯದೆ ಹತಾಶನಾದ ಆತನಿಗೆ ಅವನ ಅಜ್ಜ ಹೇಳುತ್ತಿದ್ದ ಕತೆಯೊಂದು ನೆನಪಿಗೆ ಬಂದಿತು. ಆಗ ಅವನು ತನಗೆ ತಾನೇ ಹೇಳಿದ, ಆಹಾ, ಈ ಮಂಗಗಳನ್ನು ಮರುಳುಮಾಡುವುದು ಹೇಗೆಂಬುದು ನನಗೆ ಗೊತ್ತಿದೆ. ಅವು ನನ್ನನ್ನು ಅನುಕರಿಸುವಂತೆ ಮಾಡಿ ನನ್ನ ಟೊಪ್ಪಿಗಳನ್ನು ಮರಳಿ ಪಡೆಯುತ್ತೇನೆ!
ಅವನು ಮಂಗಗಳತ್ತ ನೋಡುತ್ತಾ ಕೈಬೀಸಿದ, ಅವೂ ಅವನತ್ತ ನೋಡುತ್ತಾ ಕೈಬೀಸಿದವು. ಅವನು ತನ್ನ ಮೂಗನ್ನು ಒರೆಸಿಕೊಂಡ, ಅವೂ ಅಂತೆಯೇ ಮಾಡಿದವು. ಅವನು ಕುಣಿದ,ಅವೂ ಕುಣಿದವು. ತನ್ನ ಕಿವಿಗಳನ್ನು ಹಿಡಿದು ಎಳೆದ, ಅವೂ ತಮ್ಮ ಕಿವಿಗಳನ್ನು ಹಿಡಿದೆಳೆದವು. ಅವನು ಕೈಗಳನ್ನು ಮೇಲೆತ್ತಿದ ಅವೂ ತಮ್ಮ ಕೈಗಳನ್ನು ಮೇಲೆತ್ತಿದವು.
ತದನಂತರ ಅವನು ತನ್ನ ಟೊಪ್ಪಿಯನ್ನು ನೆಲದ ಮೇಲಕ್ಕೆಸೆದು ಅವೂ ಅಂತೆಯೇ ಎಸೆಯುವುದನ್ನು ನಿರೀಕ್ಷಿಸತ್ತಾ ನೋಡುತ್ತಿದ್ದ. ಆದರೆ, ಅವು ಹಾಗೆ ಮಾಡಲಿಲ್ಲ. ಬದಲಾಗಿ ಒಂದು ಮಂಗ ಮರದಿಂದ ಕೆಳಕ್ಕೆ ಹಾರಿ ಹಬೀಬನ ಸಮೀಪಕ್ಕೆ ಬಂದು ಅವನ ಭುಜಕ್ಕೆ ತಟ್ಟಿ ಹೇಳಿತು, ನಿನಗೊಬ್ಬನಿಗೆ ಮಾತ್ರ ಅಜ್ಜ ಇರುವುದು ಎಂಬುದಾಗಿ ತಿಳಿದಿರುವೆಯೇನು?

***** 

೫೫. ವ್ಯಾಪಾರಿಯ ಅಸಂಬದ್ಧ ಪ್ರಲಾಪ
೧೫೦ ಒಂಟೆಗಳನ್ನೂ ೪೦ ಮಂದಿ ಸೇವಕರನ್ನೂ ಇಟ್ಟುಕೊಂಡಿದ್ದ ವ್ಯಾಪಾರಿಯೊಬ್ಬನನ್ನು ಕವಿ ಸಾದಿ ಕಿಶ್ ದ್ವೀಪದಲ್ಲಿ ಸಂಧಿಸಿದ. ಅಲ್ಲಿದ್ದಾಗ ಒಂದು ರಾತ್ರಿ ವ್ಯಾಪಾರಿ ಅವನನ್ನು ತನ್ನ ಕೊಠಡಿಗೆ ಕರೆದೊಯ್ದು ಇಡೀ ರಾತ್ರಿ ಸ್ವಪ್ರತಿಷ್ಠೆ ಪ್ರದರ್ಶಿಸಲೋಸುಗವೋ ಎಂಬಂತೆ ಮಾತನಾಡಿದ.
ವ್ಯಾಪಾರಿ ಹೇಳಿದ, ತುರ್ಕಿಸ್ಥಾನದಲ್ಲಿ ನನಗೆ ಅನುರೂಪನಾದ ವ್ಯಾಪಾರಸಂಬಂಧಿಯೊಬ್ಬನಿದ್ದಾನೆ, ಹಿಂದೂಸ್ಥಾನದಲ್ಲಿ ನನ್ನದೊಂದು ದಳ್ಳಾಳಿ ಸಂಸ್ಥೆ ಇದೆ; ಅಂದ ಹಾಗೆ, ಈ ಕಾಗದಪತ್ರ ನೋಡು, ಇದೊಂದು ಬಲು ಬೆಲೆ ಬಾಳುವ ಜಮೀನಿನ ಹಕ್ಕುಪತ್ರ, ಆ ಜಮೀನನ್ನು ಸಂರಕ್ಷಿಸಲು ನಾನು ಖ್ಯಾತನಾಮನೊಬ್ಬನನ್ನು ಕಾವಲುಗಾರನಾಗಿ ನೇಮಿಸಿದ್ದೇನೆ. ಆತ ತನ್ನ ಮಾತನ್ನು ಮುಂದುವರಿಸಿದ, ನಾನು ಹಿತಕರ ಹವಾಮಾನ ಉಳ್ಳ ಅಲೆಕ್ಸಾಂಡ್ರಿಯಾಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ. ಊಹುಂ, ವಾಸ್ತವವಾಗಿ ಪಶ್ಚಿಮ ಸಮುದ್ರ ವಿಪರೀತ ಭೋರ್ಗರೆಯುತ್ತಿದೆ! ಓ ಸಾದಿ! ನಾನು ಇನ್ನೂ ಒಂದು ಪ್ರಯಾಣ ಮಾಡಬೇಕಾಗಿದೆ. ಅದಾದ ನಂತರ ವ್ಯಾಪಾರ ಮಾಡುವ ವೃತ್ತಿಯಿಂದ ನಿವೃತ್ತನಾಗುತ್ತೇನೆ.
ಸಾದಿ ಕೇಳಿದ, ಅದು ಯಾವ ಪ್ರಯಾಣ?
ವ್ಯಾಪಾರಿ ಉತ್ತರಿಸಿದ, ನಾನು ಪರ್ಸಿಯಾದ ಗಂಧಕವನ್ನು ಚೀನಾಕ್ಕೆ ಒಯ್ಯುತ್ತೇನೆ, ಎಕೆಂದರೆ ಅಲ್ಲಿ ಅದಕ್ಕೆ ಅತ್ಯುತ್ತಮ ಬೆಲೆ ಇದೆ ಎಂಬುದಾಗಿ ಕೇಳಿದ್ದೇನೆ. ತದನಂತರ ಚೀನಾದ ಪಿಂಗಾಣಿ ಸಾಮಾನುಗಳನ್ನು ಗ್ರೀಸಿ‌ಗೆ, ಗ್ರೀಸಿನ ಕಿಂಕಾಪುಗಳನ್ನು ಹಿಂದೂಸ್ಥಾನಕ್ಕೆ, ಹಿಂದುಸ್ಥಾನದ ಉಕ್ಕನ್ನು ಅಲೆಪ್ಪೋಗೆ, ಅಲೆಪ್ಪೋದ ಕನ್ನಡಿಗಳನ್ನು ಯೆಮೆನ್ನಿಗೆ, ಯೆಮೆನ್ನಿನ ಪಟ್ಟೆಪಟ್ಟೆ ಬಟ್ಟೆಯನ್ನು ಪರ್ಸಿಯಾಕ್ಕೆ ಒಯ್ಯುತ್ತೇನೆ. ಇಷ್ಟಾದ ನಂತರ ನಾನು ಈ ತೆರನಾದ ವಿನಿಮಯ ವ್ಯಾಪಾರ ನಿಲ್ಲಿಸಿ ಮನೆಯಲ್ಲಿರುವ ನನ್ನ ಅಂಗಡಿಯಲ್ಲಿ ಕುಳಿತುಕೊಳ್ಳುತ್ತೇನೆ.
ಮಾತನಾಡಲೂ ಶಕ್ತಿ ಇಲ್ಲದಾಗುವ ವರೆಗೆ ವ್ಯಾಪಾರಿ ಇದೇ ರೀತಿ ಅಸಂಬದ್ಧವಾಗಿ ಪ್ರಲಾಪಿಸುತ್ತಲೇ ಇದ್ದ. ಕೊನೆಗೊಮ್ಮೆ ಹೇಳಿದ, ಓ ಸಾದಿ, ನೀನೇನು ನೋಡಿರುವೆ ಹಾಗು ಕೇಳಿರುವೆ ಎಂಬುದರ ಕುರಿತಾಗಿ ಈಗ ಏನಾದರೂ ಹೇಳು.
ಸಾದಿ ಉತ್ತರಿಸಿದ, ನಾನು ಮಾತನಾಡಲು ಯಾವುದೇ ಒಂದು ವಿಷಯವನ್ನೂ ನೀನು ಬಿಟ್ಟೇ ಇಲ್ಲವಲ್ಲಾ!
ಮರುಭೂಮಿಯಲ್ಲಿ ತನ್ನ ಒಂಟೆಯಿಂದ ಕೆಳ ಬಿದ್ದಾಗ
ವ್ಯಾಪಾರಿಯೊಬ್ಬ ಕೂಗಿ ಹೇಳಿದ್ದೇನು ಎಂಬುದನ್ನು ನೀನು ಕೇಳಿಲ್ಲವೇ?
ಸಂತುಷ್ಟಿಯಿಂದಲೋ, ಸ್ಮಶಾನದ ತೇವಭರಿತ ನೆಲದಿಂದಲೋ
ಲೌಕಿಕನ ದುರಾಸೆಯ ಕಣ್ಣಿಗೆ ತೃಪ್ತಿಯಾಗಿದೆ.

***** 

೫೬. ನಡುಗುವ ಧ್ವನಿಯ ಕತೆ
ಸುಲ್ತಾನ ಸಂಜರ್‌ ಸಲ್ಜೂಕಿ ಕಟ್ಟಿಸಿದ್ದ ಸಂಜರಿಯಾಹ್‌ನ ಮಸೀದಿಯಲ್ಲಿ ಆಜಾನ್‌ ಪಠಿಸಿ ಜನರನ್ನು ಮಸೀದಿಗೆ ಕರೆಯುತ್ತಿದ್ದ ಒಬ್ಬ ಮುಅಜ್ಜಿನ್‌. ಅವನ ನಡುಗುವ ಧ್ವನಿಯನ್ನು ಕೇಳಿದವರಿಗೆ ಅದನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಏಕೆಂದರೆ ನಾವು ಸಾಮಾನ್ಯವಾಗಿ ಸಂತೋಷಪಡುವ ಶಬ್ದಘೋಷದಲ್ಲಿ ಅದು ಇರುತ್ತಿರಲಿಲ್ಲ.
ಆ ಮಸೀದಿಯ ಮಹಾಪೋಷಕನೂ ಸ್ನೇಹಪ್ರವೃತ್ತಿಯುಳ್ಳವನೂ ಆಗಿದ್ದ ರಾಜಕುಮಾರನೊಬ್ಬ ಮಸೀದಿಗೆ ಬರುತ್ತಿದ್ದವರ ಪರವಾಗಿ ಈ ಸಂಗತಿಗೆ ಸಂಬಂಧಿಸಿದಂತೆ ಯುಕ್ತಕ್ರಮ ತೆಗೆದುಕೊಳ್ಳಲು ಒಪ್ಪಿಕೊಂಡನು.
ಮುಅಜ್ಜಿನ್‌ನ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಬಲು ಮಿದುವಾಗಿ ರಾಜಕುಮಾರ ಹೇಳಿದ, ಮಾನ್ಯರೇ, ವಂಶಪಾರಂಪರ್ಯವಾಗಿ ಮುಅಜ್ಜಿನ್‌ ಕಾರ್ಯ ನಿರ್ವಹಿಸುತ್ತಿರುವವರು ಅನೇಕ ಮಂದಿ ಈ ಮಸೀದಿಯಲ್ಲಿ ಇದ್ದಾರೆ. ಅವರಿಗೆ ತಲಾ ೫ ದಿನಾರ್ ಸಂಭಾವನೆ ಸಿಕ್ಕುತ್ತಿದೆ. ಇನ್ನೊಂದು ಸ್ಥಳಕ್ಕೆ ನೀವು ಹೋಗುವಿರಾದರೆ ನಾನು ನಿಮಗೆ ೧೦ ದಿನಾರ್‌ ಕೊಡುತ್ತೇನೆ. ಮುಅಜ್ಜಿನ್‌ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡು ಆ ನಗರದಿಂದ ಹೋದನು.
ಒಂದು ವಾರದ ನಂತರ, ಆ ಮುಅಜ್ಜಿನ್‌ ಹಿಂದಿರುಗಿ ಬಂದು ಹೇಳಿದ, ಓ ರಾಜಕುಮಾರನೇ, ಈ ಸ್ಥಳದಿಂದ ಹೋಗಲು ಕೇವಲ ೧೦ ದಿನಾರ್‌ಗಳನ್ನು ಕೊಟ್ಟು ನೀವು
ನನಗೆ ಮೋಸ ಮಾಡಿರುವಿರಿ. ನನ್ನನ್ನು ನೀವು ಯಾವ ಸ್ಥಳಕ್ಕೆ ಕಳುಹಿಸಿದಿರೋ ಆ ಸ್ಥಳದವರು ನಾನು ಬೇರೆಡೆಗೆ ಹೋಗುವುದಾದರೆ ೨೦ ದಿನಾರ್‌ ಕೊಡಲು ಸಿದ್ಧರಾಗಿದ್ದಾರೆ. ಆದರೂ ನಾನು ಅದಕ್ಕೆ ಸಮ್ಮತಿಸುವುದಿಲ್ಲ.
ರಾಜಕುಮಾರ ನಕ್ಕು ಹೇಳಿದ, ಹೌದು, ಅವರ ಹಾಲಿ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಬೇಡಿ. ಏಕೆಂದರೆ ಸಧ್ಯಲ್ಲಿಯೇ ಅವರು ನಿಮಗೆ ೫೦ ದಿನಾರ್‌ಗಳನ್ನು ಕೊಡಲು ಒಪ್ಪಿಕೊಳ್ಳುತ್ತಾರೆ!

ಯಾವ ಪಿಕಾಸಿಯೂ ತೆಗೆಯಲಾಗದ ಹಾಗೆ ಕಲ್ಲಿಗಂಟಿದೆ ಆವೆ ಮಣ್ಣು,
ಅಂತೆಯೇ ಇದೆ ಆಂತರ್ಯದಲ್ಲಿ ನರಳುವಂತೆ ಮಾಡುವ ನಿನ್ನ ಕರ್ಕಶ ಧ್ವನಿ

***** 

೫೭. ಒಬ್ಬ ಪೌರಾತ್ಯ ರಾಣಿಯ ಕತೆ
ಒಂದಾನೊಂದು ಕಾಲದಲ್ಲಿ ಪೌರಾತ್ಯ ದೇಶವೊಂದನ್ನು ಲೈಲಾರಾಣಿ ಎಂಬವಳು ಆಳುತ್ತಿದ್ದಳು. ಅವಳು ವಿವೇಕಿಯೂ ಜಾಣೆಯೂ ಆಗಿದ್ದದ್ದರಿಂದ ಅವಳ ರಾಜ್ಯವು ಸಂಪದ್ಭರಿತವಾಗಿದ್ದು ಉಚ್ಛ್ರಾಯಸ್ಥಿತಿಯಲ್ಲಿ ಇತ್ತು.
ಒಂದು ದಿನ ಅವಳ ಮಂತ್ರಿಯೊಬ್ಬ ದುಃಖಸೂಚಕ ಮುಖದೊಂದಿಗೆ ಬಂದು ಹೇಳಿದ, ಓ ಲೈಲಾರಾಣಿ ಮಹಾರಾಣಿಯೇ, ನಮ್ಮ ಭೂಭಾಗದಲ್ಲಿ ಇರುವ ಸ್ತ್ರೀಯರ ಪೈಕಿ ನೀನು ಅತ್ಯಂತ ವಿವೇಕಿಯೂ ಶಕ್ತಿಶಾಲಿಯೂ ಆಗಿರುವ ಮಹಾನ್‌ ಸ್ತ್ರೀ ಆಗಿರುವೆ. ಹೀಗಿದ್ದರೂ ರಾಜ್ಯದಲ್ಲಿ ನಾನು ಅಡ್ಡಾಡುತ್ತಿರುವಾಗ ನಿಮ್ಮ ಕುರಿತು ಕೆಲವು ನೆಮ್ಮದಿಗೆಡಿಸುವ ಮಾತುಗಳನ್ನು ಕೇಳಿದೆ. ನಾನು ಹೋದೆಡಯಲ್ಲೆಲ್ಲ ಬಹುಮಂದಿ ತಮ್ಮನ್ನು ಹೊಗಳುತ್ತಿದ್ದರೂ ಕೆಲವು ಮಂದಿ ತಮ್ಮ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದರು. ತಮ್ಮನ್ನು ಲೇವಡಿ ಮಾಡಿ ಮಾತನಾಡುತ್ತಿದ್ದರು. ತಾವು ಇತ್ತೀಚೆಗೆ ತೆಗೆದುಕೊಂಡ ಕೆಲವು ಉತ್ತಮ ತೀರ್ಮಾನಗಳ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ತಮ್ಮ ಹಾಗು ತಮ್ಮ ಆಳ್ವಿಕೆಯ ವಿರುದ್ಧವಾಗಿ ಕೆಲವರು ಇಂತೇಕೆ ಮಾತನಾಡುತ್ತಾರೆ?
ಮಹಾರಾಣಿ ಲೈಲಾರಾಣಿ ನಸುನಕ್ಕು ಹೇಳಿದಳು, ನನ್ನ ವಿಧೇಯ ಮಂತ್ರಿಯೇ, ನನ್ನ ರಾಜ್ಯದ ಪ್ರತೀ ಪ್ರಜೆಗೂ ತಿಳಿದಿರುವಂತೆ ಪ್ರಜೆಗಳಿಗಾಗಿ ನಾನೇನೇನು ಮಾಡಿರುವೆ ಎಂಬುದು ನಿನಗೂ ತಿಳಿದಿದೆ. ನನ್ನ ನಿಯಂತ್ರಣದಲ್ಲಿ ಅನೇಕ ಪ್ರದೇಶಗಳಿವೆ. ಅವೆಲ್ಲವೂ ಪ್ರಗತಿಯನ್ನು ಸಾಧಿಸಿವೆ, ಉಚ್ಛ್ರಾಯ ಸ್ಥಿತಿಯಲ್ಲಿ ಇವೆ. ನಾನು ನ್ಯಾಯಯುತವಾಗಿ ಆಳ್ವಿಕೆ ನಡೆಸುತ್ತಿರುವುದರಿಂದ ಈ ಪ್ರದೇಶಗಳ ಜನರು ನನ್ನನ್ನು ಪ್ರೀತಿಸುತ್ತಾರೆ. ನೀನು ಹೇಳುವುದು ಸರಿಯಾಗಿಯೇ ಇದೆ. ನಾನು ಅನೇಕ ಕಾರ್ಯಗಳನ್ನು ಮಾಡಬಲ್ಲೆ. ತಕ್ಷಣವೇ ಈ ನಗರದ ಕೋಟೆಯ ದೈತ್ಯಗಾತ್ರದ ಬಾಗಿಲುಗಳನ್ನು ಮುಚ್ಚಿಸಬಲ್ಲೆ. ಹೀಗಿದ್ದರೂ ನಾನು ಮಾಡಲಾಗದ ಕೆಲಸ ಒಂದಿದೆ. ಪ್ರಜೆಗಳು ತಮ್ಮ ಅಭಿಪ್ರಾಯಗಳನ್ನು, ಅವು ಸುಳ್ಳೇ ಆಗಿದ್ದರೂ, ವ್ಯಕ್ತಪಡಿಸುವುದನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ. ನನ್ನ ಕುರಿತು ಕೆಲವರು ಕೆಟ್ಟ ಅಭಿಪ್ರಾಯಗಳನ್ನೂ ಸುಳ್ಳುಗಳನ್ನೂ ಹೇಳುತ್ತಾರೆಯೇ ಎಂಬುದು ಮುಖ್ಯವಲ್ಲ. ಅವರೇನಾದರೂ ಹೇಳಲಿ, ನಾನು ಒಳ್ಳೆಯದನ್ನೇ ಮಾಡುತ್ತಲೇ ಇರಬೇಕಾದದ್ದು ಮುಖ್ಯ.

***** 

೫೮. ದೇವರೊಂದಿಗೆ ಇರುವುದು
ಅಲ್ಲಾನ ಕೃಪೆಯಿಂದ ಸ್ವರ್ಗವನ್ನು ತಲುಪಿದಂತೆ ಒಂದು ರಾತ್ರಿ ಸೂಫಿ ಮುಮುಕ್ಷು ಫರೀದ್‌ನಿಗೆ ಕನಸು ಬಿದ್ದಿತು. ಸ್ವರ್ಗದಲ್ಲಿ ಅಂದು ಏನೋ ಉತ್ಸವ ಇದ್ದಂತಿತ್ತು, ಇಡೀ ಸ್ವರ್ಗವನ್ನು ತಳಿರು ತೋರಣಗಳಿಂದಲೂ ಜಗಮಗಿಸುವ ದೀಪಗಳಿಂದಲೂ ಸಿಂಗರಿಸಲಾಗಿತ್ತು, ಮಧುರ ಸಂಗಿತ ಕೇಳಿ ಬರುತ್ತಿತ್ತು.
ಫರೀದ್‌ ಯಾರನ್ನೋ ವಿಚಾರಿಸಿದ, “ಇಲ್ಲೇನು ನಡೆಯುತ್ತಿದೆ?”
ಅವರು ಹೇಳಿದರು, “ಇವತ್ತು ದೇವರ ಜನ್ಮದಿನ. ಎಂದೇ ನಾವು ಜನ್ಮದಿನೋತ್ಸವವನ್ನು ಆಚರಿಸುತ್ತಿದ್ದೇವೆ. ನೀನು ಸರಿಯಾದ ಸಮಯಕ್ಕೇ ಇಲ್ಲಿಗೆ ಬಂದಿರುವೆ.”
ರಸ್ತೆಯಲ್ಲಿ ಒಂದು ದೊಡ್ಡ ಮೆರವಣಿಗೆ ಹೊರಡಲನುವಾಗುತ್ತಿದ್ದದ್ದರಿಂದ ಏನು ನಡೆಯುತ್ತದೆ ಎಂಬುದನ್ನು ನೋಡಲೋಸುಗ ಫರೀದ್‌ ಅಲ್ಲಿದ್ದ ಒಂದು ಮರದ ಅಡಿಯಲ್ಲಿ ನಿಂತ. ಮೆರವಣಿಗೆಯಲ್ಲಿ ಒಬ್ಬಾತ ಕುದುರೆಯ ಮೇಲೆ ಕುಳಿತುಕೊಂಡಿದ್ದದ್ದು ಅವನಿಗೆ ಕಂಡಿತು.
ಫರೀದ್‌ ಕೇಳಿದ, “ಆ ಮನುಷ್ಯ ಯಾರು?”
ಉತ್ತರ ದೊರೆಯಿತು, “ಅವರು ಯಾರೆಂಬುದು ನಿನಗೆ ತಿಳಿದಿಲ್ಲವೇ? ಅವರೇ ಹಜರತ್‌ ಮೊಹಮ್ಮದ್‌.” ಅವರ ಹಿಂದೆ ಕೋಟಿಗಟ್ಟಲೆ ಜನ ಇದ್ದರು.
ಫರೀದ್‌ ಕೇಳಿದ, “ಅವರೆಲ್ಲ ಯಾರು?”
ಅವರೆಲ್ಲ ಮುಸಲ್ಮಾನರು, ಮೊಹಮ್ಮದ್‌ರ ಹಿಂಬಾಲಕರು,” ಉತ್ತರ ದೊರೆಯಿತು.
ಅದೇ ರೀತಿ, ತದನಂತರ ಏಸು ಕ್ರಿಸ್ತ ಮತ್ತು ಅವನ ಹಿಂಬಾಲಕರು, ಆಮೇಲೆ ಶ್ರೀಕೃಷ್ಣ ಮತ್ತು ಅವನ ಹಿಂಬಾಲಕರು, ಹೀಗೆ ಮನುಕುಲ ದೇವರೆಂದು ಪೂಜಿಸುತ್ತಿದ್ದವರೆಲ್ಲ ಅವರವರ ಹಿಂಬಾಲಕರೊಂದಿಗೆ ಮೆರವಣಿಗೆಯಲ್ಲಿ ಒಬ್ಬರಾದ ನಂತರ ಒಬ್ಬರಂತೆ ಮೆರವಣಿಗೆಯಲ್ಲಿ ಬಂದರು. ಕಟ್ಟಕಡೆಗೆ ಒಬ್ಬ ವೃದ್ಧ ಒಂದು ಮುದಿ ಕತ್ತೆಯ ಮೇಲೆ ಕುಳಿತು ಬರುತ್ತಿದ್ದ, ಅವನ ಹಿಂದೆ ಯಾರೂ ಇರಲಿಲ್ಲ. ಫರೀದ್‌ ಗಟ್ಟಿಯಾಗಿ ನಗಲಾರಂಭಿಸಿದ -- ಅದೊಂದು ನಗೆಯುಕ್ಕಿಸುವ ನೋಟವಾಗಿತ್ತು. ಮುದಿ ಕತ್ತೆಯ ಮೇಲೆ ಒಬ್ಬ ಮುದುಕ, ಹಿಂಬಾಲಕರಿಲ್ಲದ ಒಂಟಿ!
ಫರೀದ್‌ ಅವನನ್ನು ಕೇಳಿದ, “ಸ್ವಾಮೀ, ತಾವು ಯಾರು? ಮೊಹಮ್ಮದ್, ಕ್ರಿಸ್ತ, ಕೃಷ್ಣ, ಮಹಾವೀರ, ಬುದ್ಧ -- ಇವರೆಲ್ಲರನ್ನೂ ಗುರುತಿಸಿದೆ. ಆದರೆ ನೀವು ಯಾರೆಂಬುದು ತಿಳಿಯಲಿಲ್ಲ, ಯಾರು ನೀವು? ಹಿಂಬಾಲಕರೇ ಇಲ್ಲದೇ ಬರುತ್ತಿರುವುದನ್ನು ನೀವು ನೋಡಲು ಬಲು ತಮಾಷೆಯಾಗಿ ಕಾಣುತ್ತಿದೆ!”
 ಆ ವೃದ್ಧ ಬಲು ದುಃಖದಿಂದ ಹೇಳಿದ, ನಾನು ದೇವರು. ಇಂದು ನನ್ನ ಜನ್ಮದಿನ. ನನ್ನ ಹಿಂದೆ ಯಾರೂ ಇಲ್ಲ ಏಕೆಂದರೆ ಜನರ ಪೈಕಿ ಕೆಲವರು ಮುಸಲ್ಮಾನರಾಗಿದ್ದಾರೆ, ಕೆಲವರು ಹಿಂದುಗಳಾಗಿದ್ದಾರೆ, ಕೆಲವರು ಬೌದ್ಧರಾಗಿದ್ದಾರೆ, ಕೆಲವರು ಕ್ರೈಸ್ತರಾಗಿದ್ದಾರೆ, ಹೀಗೆ ಏನೇನೋ ಆಗಿದ್ದಾರೆ. ನನ್ನ ಹತ್ತಿರ ಯಾರೂ ಉಳಿದಿಲ್ಲ!”
ಈ ಆಘಾತದಿಂದ ಫರೀದ್‌ನಿಗೆ ಎಚ್ಚರವಾಯಿತು. ಅವನು ಮಾರನೆಯ ದಿನ ತನ್ನ ಶಿಷ್ಯರಿಗೆ ಹೇಳಿದ, “ನಾನು ಇನ್ನು ಮುಂದೆ ಮುಸಲ್ಮಾನನಲ್ಲ. ಕನಸು ನನಗೊಂದು ಸತ್ಯವನ್ನು ತೋರಿತು. ಯಾವದೇ ಸಂಘಟಿತ ಮತಕ್ಕೆ ನಾನು ಇನ್ನು ಸೇರುವುದಿಲ್ಲ -- ನಾನು ನಾನಾಗಿಯೇ ಇರುತ್ತೇನೆ. ನಾನು ದೇವರೊಂದಿಗೆ ಇರಲು ಇಚ್ಛಿಸುತ್ತೇನೆ, ಕನಿಷ್ಠಪಕ್ಷ ಒಬ್ಬನಾದರೂ ದೇವರ ಹಿಂಬಾಲಕನಿರಬೇಕಲ್ಲವೇ? ಅದು ನಾನಾಗಿರುತ್ತೇನೆ.”

***** 

೫೯. ಕುರುಬನ ಕತೆ
ವಾಸಿಮ್‌ ಎಂಬಾತನಿಗೆ ರಸ್ತೆಯಲ್ಲಿದ್ದ ಕುರುಬನೊಬ್ಬ ಪ್ರಾರ್ಥಿಸುತ್ತಿದ್ದ್ದು ಕೇಳಿಸಿತು, ಓ ದೇವರೇ, ನೀನು ಎಲ್ಲಿರುವೆ? ನಿನ್ನ ಪಾದರಕ್ಷೆಗಳನ್ನು ದುರಸ್ತಿ ಮಾಡಲೂ ನಿನ್ನ ತಲೆಗೂದಲನ್ನು ಬಾಚಲೂ ನಾನು ಸಹಾಯ ಮಾಡಲು ಇಚ್ಛಿಸುತ್ತೇನೆ. ನಿನ್ನ ಬಟ್ಟೆಗಳನ್ನು ಒಗೆಯಲೂ ನಿನಗಾಗಿ ಅಡುಗೆ ಮಾಡಲೂ ನಾನು ಇಚ್ಛಿಸುತ್ತೇನೆ. ನಿನ್ನನ್ನು ಜ್ಞಾಪಿಸಿ-------
ಗೊಂದಲಕ್ಕೀಡಾದ ವಾಸಿಮ್‌ ಕುರುಬನನ್ನು ಕೇಳಿದ, ನೀನು ಯಾರೊಂದಿಗೆ ಮಾತನಾಡುತ್ತಿರುವೆ?
ಕುರುಬ ಉತ್ತರಿಸಿದ, ನಮ್ಮನ್ನೂ ಭೂಮಿಯನ್ನೂ ಆಕಾಶವನ್ನೂ ಮಾಡಿದವನೊಂದಿಗೆ.
ತುಸು ಮನಃಕ್ಷೋಭೆಗೀಡಾದ ವಾಸಿಮ್‌ ಹೇಳಿದ, ದೇವರೊಂದಗೆ ಪಾದರಕ್ಷೆಗಳ, ಕಾಲುಚೀಲಗಳ ಕುರಿತಾಗಿ ಮಾತನಾಡಬೇಡ! ಯಾವುದು ಬೆಳೆಯುತ್ತದೋ ಅದಕ್ಕೆ ಆಹಾರ ಬೇಕು, ಯಾರಿಗೆ ಕಾಲುಗಳು ಇವೆಯೋ ಅವರಿಗೆ ಪಾದರಕ್ಷೆಗಳು ಬೇಕು. ದೇವರಿಗಲ್ಲ! ಮಾತನಾಡುವಾಗ ಸರಿಯಾದ ಪದಗಳನ್ನು ಉಪಯೋಗಿಸು. ನೀನು ಹೇಳುತ್ತಿರುವುದು ನಮಗೆ, ಮನುಷ್ಯರಿಗೆ, ಸರಿಯಾಗಿದೆ. ದೇವರಿಗಲ್ಲ.
ದುಃಖಿತನಾದ ಕುರುಬ ಕ್ಷಮೆ ಕೋರಿ ಮರುಭೂಮಿಯಲ್ಲಿ ಎಲ್ಲಿಗೋ ಹೋದ.
ಆಗ ಇದ್ದಕ್ಕಿದ್ದಂತೆ ವಾಸಿಮ್‌ನಲ್ಲಿ ಅಚ್ಚರಿಯ ಅರಿವೊಂದು ಮೂಡಿತು. ದೇವರ ಧ್ವನಿ ಅವನಿಗೆ ತಿಳಿಸಿತು, ನನ್ನವನೊಬ್ಬನಿಂದ ನೀನು ನನ್ನನ್ನು ಬೇರ್ಪಡಿಸಿರುವೆ. ನೀನು ಇಲ್ಲಿರುವುದು ಒಗ್ಗೂಡಿಸಲೋ ಬೇರ್ಪಡಿಸಲೋ? ನಾನು ಪ್ರತಿಯೊಬ್ಬರಿಗೂ ಅವರದೇ ಆದ ಅದ್ವಿತೀಯ ನೋಡುವ, ತಿಳಿಯುವ, ಹೇಳುವ ವಿಧಾನಗಳನ್ನು ಕೊಟ್ಟಿದ್ದೇನೆ. ತತ್ಪರಿಣಾಮವಾಗಿ ನಿನಗೆ ಯಾವುದು ತಪ್ಪು ಅನ್ನಿಸುತ್ತದೆಯೋ ಅದು ಇನ್ನಬ್ಬನಿಗೆ ಸರಿ ಅನ್ನಿಸುತ್ತದೆ. ನಿನಗೆ ವಿಷವಾದದ್ದು ಇನ್ನೊಬನಿಗೆ ಜೇನಾಗುತ್ತದೆ. ಆರಾಧನೆಯಲ್ಲಿ ಶುದ್ಧ-ಅಶುದ್ಧ, ಶ್ರದ್ಧೆ-ಅಶ್ರದ್ಧೆ ಇವೆಲ್ಲವೂ ನನಗೆ ಅರ್ಥವಿಹೀನ. ಅದೆಲ್ಲದರಿಂದಲೂ ಭಿನ್ನವಾದವ ನಾನು.
ಆರಾಧನೆಯ ವಿಧಾನಗಳನ್ನು ಉತ್ತಮ, ಮಧ್ಯಮ, ಅಧಮ ಎಂದೆಲ್ಲ ಶ್ರೇಣೀಕರಿಸಕೂಡದು. ಆರಾಧನೆಯ ವಿಧಾನಗಳಲ್ಲಿ ಕೆಲವನ್ನು ವೈಭವೀಕರಿಸಿರುವುದು ಆರಾಧಕರೇ ವಿನಾ ನಾನಲ್ಲ, ಅವರು ಹೇಳುವ ಪದಗಳನ್ನು ನಾನು ಕೇಳಿಸಿಕೊಳ್ಳುವುದೇ ಇಲ್ಲ. ಅವರ ಆಂತರ್ಯದಲ್ಲಿ ಇರುವ ನಮ್ರತೆಯನ್ನು ಗಮನಿಸುತ್ತೇನೆ. ನಿಷ್ಕಪಟತೆ ಮುಖ್ಯವೇ ವಿನಾ ಭಾಷೆಯಲ್ಲ. ಪದಾವಳಿಯನ್ನು ಮರೆತುಬಿಡು. ನನಗೆ ಬೇಕಾದದ್ದು ಉತ್ಕಟತೆ. ಉತ್ಕಟತೆಯೊಂದಿಗೆ ಸಖ್ಯ ಬೆಳೆಸು. ನಿನ್ನ ಆಲೋಚನಾ ವಿಧಾನಗಳನ್ನೂ ಮಾತುಗಳಲ್ಲಿ ವ್ಯಕ್ತಪಡಿಸುವ ಶೈಲಿಗಳನ್ನೂ ಸುಟ್ಟು ನಾಶಮಾಡು.
ಅಯ್ಯಾ ವಾಸಿಮ್‌, ನಡೆನುಡಿಯ ವಿಧಾನಗಳಿಗೆ ಗಮನ ನೀಡುವವರದು ಒಂದು ವರ್ಗ, ನನ್ನ ಮೇಲಿನ ಭಕ್ತಿಯ ಉತ್ಕಟತೆಯಿಂದ ಸುಡುತ್ತಿರುವವರದು ಇನ್ನೊಂದು ವರ್ಗ. ಎರಡನೆಯ ವರ್ಗಕ್ಕೆ ಸೇರಿದವರನ್ನು ಗಟ್ಟಿಯಾಗಿ ಗದರಿಸಬೇಡ. ಅವರು ಮಾತನಾಡುವ ತಪ್ಪು ವಿಧಾನ ಇತರರ ನೂರಾರು ಸರಿ ವಿಧಾನಗಳಿಗಿಂತ ಉತ್ತಮವಾಗಿರುತ್ತದೆ. ಭಕ್ತಿ ಪಂಥಕ್ಕೆ ಯಾವದೇ ನಿಯಮಾವಳಿಯ ಅಥವ ಸಿದ್ಧಾಂತದ ಕಟ್ಟುಪಾಡುಗಳು ಅನ್ವಯಿಸುವುದಿಲ್ಲ, ಅವರಿಗೆ ಮುಖ್ಯವಾದದ್ದು ದೇವರು ಮಾತ್ರ.
ಕುರುಬನ ಹೆಜ್ಜೆ ಗುರುತುಗಳ ಜಾಡು ಹಿಡಿದು ವಾಸಿಮ್‌ ಅವನನ್ನು ಹುಡುಕುತ್ತಾ ಓಡಿದ. ಕೊನೆಗೊಮ್ಮೆ ಅವನನ್ನು ಸಮೀಪಿಸಿ ಹೇಳಿದ, ನನ್ನದು ತಪ್ಪಾಯಿತು. ಆರಾಧನೆಗೆ ನಿಯಾಮವಳಿ ಇಲ್ಲ ಎಂಬ ಅರಿವನ್ನು ದೇವರು ನನ್ನಲ್ಲಿ ಮೂಡಿಸಿದ್ದಾನೆ. ಏನನ್ನು ಹೇಗೆ ಹೇಳಬೇಕು ಅನ್ನಿಸುತ್ತದೆಯೋ ಅದನ್ನು ಅಂತೆಯೇ ನೀನು ಹೇಳಬಹುದು. ನಿನ್ನದು ನಿಜವಾದ ಭಕ್ತಿ. ನಿನ್ನ ಮುಖೇನ ಇಡೀ ಪ್ರಪಂಚವೇ ಸಂಪ್ರದಾಯಗಳ ಬಂಧನದಿಂದ ಮುಕ್ತವಾಯಿತು.
ಕುರುಬ ಉತ್ತರಿಸಿದ, ನಾನು ಅದನ್ನೂ ಮೀರಿ ಬೆಳೆದಿದ್ದೇನೆ. ನನ್ನಲ್ಲಿ ಮಾನವನ ಮತ್ತು ದೇವರ ಸಹಜಗುಣಗಳು ಮೇಳೈಸಿವೆ. ನಿನ್ನ ಗದರುವಿಕೆಗೆ ಧನ್ಯವಾದಗಳು. ಅದರಿಂದ ಏನು ಲಾಭವಾಯಿತು ಅನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಾನೀಗ ಇನ್ನೊಂದು ಆಯಾಮವನ್ನೇ ಕಾಣುತ್ತಿದ್ದೇನೆ. ಅದೇನೆಂಬುದನ್ನು ವಿವರಿಸಲು ಸಾಧ್ಯವಿಲ್ಲ.
ನೀವು ಕನ್ನಡಿಯನ್ನು ನೋಡಿದಾಗ ಮೊದಲು ಕಾಣುವುದು ನಿಮ್ಮ ಪ್ರತಿಬಿಂಬವೇ ವಿನಾ ಕನ್ನಡಿಯ ಸ್ಥಿತಿಯಲ್ಲ. ಕೊಳಲನ್ನೂದುವವನು ವಾಯುವನ್ನು ಕೊಳಲಿನೊಳಕ್ಕೆ ಊದುತ್ತಾನೆ. ಸಂಗೀತ ಸೃಷ್ಟಿಸಿದ್ದು ಯಾರು? ಕೊಳಲು ಅಲ್ಲ, ಕೊಳಲು ವಾದಕ!
ನೀವು ಧನ್ಯವಾದಗಳನ್ನು ಅರ್ಪಿಸಿದಾಗಲೆಲ್ಲ ಅದು ಕುರುಬನ ಸರಳತೆಯಂತೆಯೇ ಇರುತ್ತದೆ. ಎಲ್ಲವೂ ನಿಜವಾಗಿ ಹೇಗೆ ಇವೆ ಎಂಬುದನ್ನು ನೀವು ಅಂತಿಮವಾಗಿ ಅವನ್ನು ಆವರಿಸಿರುವ ಮುಸುಕಿನ ಮೂಲಕ ನೋಡಿದಾಗ ನಿಮಗೆ ನೀವೇ ಪುನಃ ಪುನಃ ಇಂತು ಹೇಳಿಕೊಳ್ಳುವುದನ್ನು ಗಮನಿಸುವುದು ಖಚಿತ: “ಇದು ಯಾವುದೂ ನಾವು ಅಂದುಕೊಂಡಂತೆ ಇಲ್ಲ!

***** 

೬೦. ವ್ಯಾಧಿಗ್ರಸ್ತ ರಾಜನ ಕತೆ
ರಾಜನೊಬ್ಬ ಭೀಕರ ಕಾಯಿಲೆಯಿಂದ ನರಳುತ್ತಿದ್ದ. ನಿರ್ದಿಷ್ಟ ಲಕ್ಷಣಗಳುಳ್ಳ ವ್ಯಕ್ತಿಯೊಬ್ಬನ ಪಿತ್ತಕೋಶದಿಂದ ತಯಾರಿಸಬಹುದಾದ ಔಷಧ ಬಿಟ್ಟರೆ ರಾಜ ಅನುಭವಿಸುತ್ತಿದ್ದ ನೋವಿಗೆ ಪರಿಹಾರವೇ ಇಲ್ಲವೆಂಬುದಾಗಿ ವೈದ್ಯರ ತಂಡವೊಂದು ತೀರ್ಮಾನಿಸಿತು. ಅಂಥ ವ್ಯಕ್ತಿಯನ್ನು ಹುಡುಕುವಂತೆ ರಾಜ ತನ್ನ ಸೇವಕರಿಗೆ ಆಜ್ಞಾಪಿಸಿದ. ಪಕ್ಕದ ಹಳ್ಳಿಯಲ್ಲಿಯೇ ಅಗತ್ಯವಾದ ಎಲ್ಲ ಲಕ್ಷಣಗಳೂ ಇದ್ದ ಆದಿಲ್‌ ಎಂಬ ಹುಡುಗನನ್ನು ಅವರು ಪತ್ತೆಹಚ್ಚಿದರು. ರಾಜನು ಅವನ ತಂದೆತಾಯಿಯರನ್ನು ಬರಹೇಳಿ ಅವರನ್ನು ಸಂತೋಷಪಡಿಸಬಲ್ಲ ಅನೇಕ ಉಡುಗೊರೆಗಳನ್ನು ನೀಡಿದ. ಬಲು ಉನ್ನತ ಶ್ರೇಣಿಯ ನ್ಯಾಯಾಧೀಶನೊಬ್ಬ ರಾಜನ ಪ್ರಾಣ ಉಳಿಸಲೋಸುಗ ಪ್ರಜೆಯ ರಕ್ತ ಸುರಿಸುವುದು ನ್ಯಾಯಸಮ್ಮತವಾದದ್ದು ಎಂಬುದಾಗಿ ಘೋಷಿಸಿದ.
ಆದಿಲ್‌ನ ಪಿತ್ತಕೋಶವನ್ನು ತೆಗೆಯಲು ವೈದ್ಯರು ತಯಾರಾಗುತ್ತಿದ್ದಾಗ ಅವನು ಮೇಲೆ ಆಕಾಶದತ್ತ ನೋಡಿ ನಸುನಕ್ಕ. ಆಶ್ಚರ್ಯಚಕಿತನಾದ ರಾಜಕೇಳಿದ, ಇಂಥ ಗಂಭೀರವಾದ ಸನ್ನಿವೇಶದಲ್ಲಿ ನಗಲು ನಿನಗೆ ಹೇಗೆ ಸಾಧ್ಯವಾಯಿತು?
ಆದಿಲ್‌ ಉತ್ತರಿಸಿದ, ಸಾಮಾನ್ಯವಾಗಿ ತಂದೆತಾಯಂದಿರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಪೋಷಿಸುತ್ತಾರೆ. ನ್ಯಾಯಕ್ಕಾಗಿ ಜನ ನ್ಯಾಯಾಧೀಶರ ಮೊರೆ ಹೋಗುತ್ತಾರೆ. ರಾಜರು ತನ್ನ ಪ್ರಜೆಗಳನ್ನು ಅಪಾಯಗಳಿಂದ ರಕ್ಷಿಸುತ್ತಾರೆ. ಆದರೆ ಇಲ್ಲಿ ನನ್ನ ತಂದೆತಾಯಿಯರು ಭೌತಿಕ ಉಡುಗೊರೆಗಳ ಮೇಲಿನ ಆಸೆಯಿಂದ ನನ್ನನ್ನು ಮೃತ್ಯುವಿಗೆ ಒಪ್ಪಿಸಿದ್ದಾರೆ, ನ್ಯಾಯಾಧೀಶರು ನನ್ನ ಮೇಲೆ ಸಾವು ಸಂಭವಿಸಬಹುದಾದ ಶಸ್ತ್ರಕ್ರಿಯೆ ಮಾಡಲು ಅನುಮತಿ ನೀಡಿದ್ದಾರೆ, ರಾಜರಾದರೋ ನನ್ನನ್ನು ನಾಶಮಾಡಿ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಂದ ಮೇಲೆ ನನ್ನನ್ನು ರಕ್ಷಿಸಲು ದೇವರ ಹೊರತಾಗಿ ಬೇರೆ ಯಾರೂ ಇಲ್ಲ.
ಈ ಮಾತುಗಳು ರಾಜನ ಹೃದಯವನ್ನು ಸ್ಪರ್ಶಿಸಿದವು. ಅವನು ಅಳುತ್ತಾ ಹೇಳಿದ, ಅಮಾಯಕನೊಬ್ಬನ ರಕ್ತ ಹರಿಸಿ ಬದುಕುವುದಕ್ಕಿಂತ ಸಾಯುವುದೇ ಉತ್ತಮ. ಆನಂತರ ರಾಜನು ಅನೇಕ ಉಡುಗೊರೆಗಳನ್ನು ಕೊಟ್ಟು ಪ್ರೀತಿಯಿಂದ ಆಲಂಗಿಸಿ ಆದಿಲ್‌ನನ್ನು ಕಳುಹಿಸಿದ. ಆ ವಾರದಲ್ಲಿಯೇ ಪವಾಡ ಸದೃಶ ರೀತಿಯಲ್ಲಿ ರಾಜ ಗುಣಮುಖನಾದ.

***** 

೬೧. ನಿದ್ದೆಹೋಕನ ಕತೆ
ಒಂದಾನೊಂದು ಕಾಲದಲ್ಲಿ ಅಮೈನ್‌ ಎಂಬ ಬಲು ಒಳ್ಳೆಯವನೊಬ್ಬನಿದ್ದ. ಸತ್ತ ನಂತರ ಸ್ವರ್ಗಕ್ಕೆ ಕೊಂಡೊಯ್ಯಬಹುದಾದ ಗುಣಗಳನ್ನು ಅಭ್ಯಾಸಮಾಡುವುದರಲ್ಲಿ ತನ್ನ ಇಡೀ ಜೀವಮಾನವನ್ನು ಅವನು ಕಳೆಯುತ್ತಿದ್ದ. ಬಡವರಿಗೆ ಧಾರಾಳವಾಗಿ ದಾನ ಮಾಡುತ್ತಿದ್ದ. ಎಲ್ಲ ಪ್ರಾಣಿಗಳನ್ನೂ ಪ್ರೀತಿಸುತ್ತಿದ್ದ, ಅವುಗಳನ್ನು ಸಾಧ್ಯವಿರುವಷ್ಟು ಉಪಚರಿಸುತ್ತಿದ್ದ. ತಾಳ್ಮೆಯ ಆವಶ್ಯಕತೆಯನ್ನು ಸದಾ ನೆನಪಿಸಿಕೊಳ್ಳುತ್ತಿದ್ದದ್ದರಿಂದ ಅನಿರೀಕ್ಷಿತ ಕಷ್ಟ ಪರಿಸ್ಥಿತಿಗಳನ್ನು, ಅನೇಕ ಸಲ ಇತರರ ಸಲುವಾಗಿ, ತಾಳ್ಮೆಯಿಂದ ಅನುಭವಿಸುತ್ತಿದ್ದ. ಜ್ಞಾನವನ್ನು ಅರಸುತ್ತಾ ಯಾತ್ರೆಗಳನ್ನು ಮಾಡುತ್ತಿದ್ದ. ಅನುಕರಣಯೋಗ್ಯ ನಡೆನುಡಿಗಳೂ ವಿನಯವೂ ಅವನಲ್ಲಿ ಇದ್ದವು. ಇದರಿಂದಾಗಿ ವಿವೇಕಿ, ಉತ್ತಮ ನಾಗರಿಕ ಎಂದೇ ಅವನು ಖ್ಯಾತನಾಗಿದ್ದ. ಅವನ ಖ್ಯಾತಿಯು ಪೂರ್ವದಿಂದ ಪಶ್ಚಿಮಕ್ಕೂ ಉತ್ತರದಿಂದ ದಕ್ಷಿಣಕ್ಕೂ ಹರಡಿತ್ತು.
ಈ ಒಳ್ಳೆಯ ಗುಣಗಳನ್ನು ಅವನು ತನ್ನ ದೈನಂದಿನ ಜೀವನದಲ್ಲಿ ನೆನಪಾದಾಗಲೆಲ್ಲ ಪ್ರದರ್ಶಿಸುತ್ತಿದ್ದರೂ ಅವನಲ್ಲಿ ಒಂದು ಕೊರತೆ ಇತ್ತು - ಅಜಾಗರೂಕತೆಯಿಂದಿರುವುದು. ಈ ಗುಣ ತೀವ್ರವಾದದ್ದು ಆಗಿರಲಿಲ್ಲ. ತಾನು ರೂಢಿಸಿಕೊಂಡಿದ್ದ ಇತರ ಒಳ್ಳೆಯ ಗುಣಗಳು ಈ ಗುಣದ ಪ್ರಭಾವವನ್ನು ತೊಡೆದು ಹಾಕುತ್ತದೆಂದು ಅವನು ಪರಿಗಣಿಸಿದ್ದ. ಅದೊಂದು ಸಣ್ಣ ದೌರ್ಬಲ್ಯವಾಗಿತ್ತು.
ಅಮೈನ್‌ನಿಗೆ ನಿದ್ದೆ ಮಾಡುವುದು ಬಲು ಪ್ರಿಯವಾದ ಕಾರ್ಯವಾಗಿತ್ತು. ಕೆಲವು ಸಲ ಅವನು ನಿದ್ದೆ ಮಾಡುತ್ತಿದ್ದಾಗ, ಜ್ಞಾನ ಗಳಿಸುವ ಅವಕಾಶಗಳು, ಅಥವ ಜ್ಞಾನವನ್ನು ಮನೋಗತ ಮಾಡಿಕೊಳ್ಳುವ ಅವಕಾಶಗಳು, ನಿಜವಾದ ನಮ್ರತೆಯನ್ನು ಪ್ರದರ್ಶಿಸುವ ಅವಕಾಶಗಳು, ಅಥವ ಈಗಾಗಲೇ ಇದ್ದ ಸದ್ಗುಣಗಳಿಗೆ ಹೊಸದೊಂದನ್ನು ಸೇರಿಸುವ ಅವಕಾಶಗಳು ಬಂದು ಹೋಗುತ್ತಿದ್ದವು. ಅವನಿಗೆ ಅವು ಮತ್ತೊಮ್ಮೆ  ದೊರೆಯುತ್ತಿರಲಿಲ್ಲ. ಅವನಲ್ಲಿದ್ದ ಸದ್ಗುಣಗಳು ಅವನ ಸ್ವಬಿಂಬದ ಮೇಲೆ ಹೇಗೆ ಅಳಿಸಲಾಗದ ಛಾಪನ್ನೊತ್ತಿದ್ದವೋ ಅಂತೆಯೇ ಅಜಾಗರೂಕತೆಯ ಗುಣವೂ ತನ್ನ ಛಾಪನ್ನೊತ್ತಿತ್ತು.
ಕೊನೆಗೊಂದು ದಿನ ಅಮೈನ್ ಸತ್ತನು. ಸಾವಿನ ನಂತರ ಸ್ವರ್ಗದ ಬಾಗಿಲುಗಳತ್ತ ಪಯಣಿಸುತ್ತಿರುವಾಗ ಆತ ಅಂತಃವೀಕ್ಷಣೆ ಮಾಡಿಕೊಂಡನು. ಸ್ವರ್ಗ ಪ್ರವೇಶಿಸುವ ಅವಕಾಶ ತನಗೆ ಲಭಿಸುತ್ತದೆ ಎಂಬುದಾಗಿ ಅವನಿಗೆ ಅನ್ನಿಸಿತು.
ಅವನು ಸ್ವರ್ಗದ ಬಾಗಿಲುಗಳನ್ನು ಸಮೀಪಿಸಿದಾಗ ಅವು ಮುಚ್ಚಿದ್ದವು. ಆಗ ಅವನಿಗೊಂದು ಧ್ವನಿ ಕೇಳಿಸಿತು, ಜಾಗರೂಕನಾಗಿರು. ಸ್ವರ್ಗದ ಬಾಗಿಲುಗಳು ಒಂದುನೂರು ವರ್ಷಗಳಿಗೊಮ್ಮೆ ಮಾತ್ರ ತೆರೆಯುತ್ತವೆ!
ಅಮೈನ್‌ ಬಾಗಿಲುಗಳು ತೆರಯುವ ಕ್ಷಣಕ್ಕಾಗಿ ಕಾಯುತ್ತ ಅಲ್ಲಿಯೇ ಕುಳಿತನು. ಸ್ವರ್ಗವನ್ನು ಪ್ರವೇಶಿಸುವ ಅವಕಾಶ ತನ್ನದಾಗುವ ಕ್ಷಣ ಸಮೀಪಿಸುತ್ತಿದೆ ಎಂಬ ಆಲೋಚನೆಯಿಂದ ಅವನು ಉತ್ತೇಜಿತನಾಗಿದ್ದರೂ ಮನುಕುಲಕ್ಕೆ ಒಳಿತನ್ನು ಮಾಡುವ ಅವಕಾಶಗಳಿಂದ ವಂಚಿತನಾದದ್ದು ಅವನಿಗೆ ತುಸು ಬೇಸರವನ್ನು ಉಂಟು ಮಾಡಿತು. ಅವಧಾನ ಕೇಂದ್ರೀಕರಿಸುವ ಸಾಮರ್ಥ್ಯದ ಕೊರತೆ ತನ್ನಲ್ಲಿ ಇರುವುದರ ಅರಿವೂ ಅವನಿಗಾಯಿತು. ಯುಗಗಳೇ ಕಳೆದವೋ ಏನೋ ಅನ್ನಿಸುವಷ್ಟು ಕಾಲ ಬಾಗಿಲುಗಳನ್ನೇ ನೋಡುತ್ತಾ ಕುಳಿತಿದ್ದ ಅವನು ಅರಿವಿಲ್ಲದೆಯೇ ತೂಕಡಿಸಲು ಆರಂಭಿಸಿದ. ಅವನ ಕಣ್ಣುರೆಪ್ಪೆಗಳು ಮುಚ್ಚಿದ್ದ ಕ್ಷಣವೊಂದರಲ್ಲಿ ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ಅವನು ಪೂರ್ಣವಾಗಿ ಕಣ್ದೆರೆದು ನೋಡುವಷ್ಟರಲ್ಲಿ ಸತ್ತವರನ್ನೂ ಬಡಿದೆಬ್ಬಿಸುವಷ್ಟು ಜೋರಾದ ಸಪ್ಪಳದೊಂದಿಗೆ ಆ ಬಾಗಿಲುಗಳು ಮುಚ್ಚಿಕೊಂಡವು!

***** 

೬೨. ಎರಡು ಬೀದಿಗಳ ಕತೆ

ಒಂದಾನೊಂದು ಕಾಲದಲ್ಲಿ ಪರಸ್ಪರ ಎರಡು ಸಮಾಂತರ ಬೀದಿಗಳು ಇದ್ದ ಪಟ್ಟಣವೊಂದಿತ್ತು. ಒಂದು ದಿನ ಫಕೀರನೊಬ್ಬ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ದಾಟಿದ ಕೂಡಲೇ ಅವನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿಯಲಾರಂಭಿಸಿದ್ದನ್ನು ಜನ ನೋಡಿದರು.
ತಕ್ಷಣವೇ ಪಕ್ಕದ ಬೀದಿಯಲ್ಲಿ ಯಾರೋ ಒಬ್ಬರು ಸತ್ತುಹೋದರಂತೆ ಎಂಬುದಾಗಿ ಒಬ್ಬಾತ ಬೊಬ್ಬೆಹೊಡೆದ. ಕೆಲವೇ ಕ್ಷಣಗಳಲ್ಲಿ ಆಸುಪಾಸಿನಲ್ಲಿದ್ದ ಮಕ್ಕಳು ಒಬ್ಬರ ನಂತರ ಒಬ್ಬರಂತೆ ಬೊಬ್ಬೆಹಾಕಿ ಆ ಸುದ್ದಿಯನ್ನು ಆ ಬೀದಿಯಲ್ಲಿ ಇದ್ದವರಿಗೆಲ್ಲ ತಲುಪಿಸಿದರು.
ವಾಸ್ತವವಾಗಿ ಫಕೀರ ಮೊದಲನೇ ಬೀದಿಗೆ ಬರುವ ಮುನ್ನವೇ ಈರುಳ್ಳಿಗಳನ್ನು ಕತ್ತರಿಸಿದ್ದರಿಂದ ಆತನ ಕಣ್ಣುಗಳಿಂದ ಕಣ್ಣೀರು ಸುರಿಯುತ್ತಿತ್ತು..
ಪಕ್ಕದ ಬೀದಿಯಲ್ಲಿ ಯಾರೋ ಒಬ್ಬರು ಸತ್ತುಹೋದರಂತೆ ಸುದ್ದಿ ಬಾಯಿಯಿಂದ ಬಾಯಿಗೆ ಹರಡುತ್ತಾ ಅತ್ಯಲ್ಪ ಅವಧಿಯಲ್ಲಿ ಮೊದಲನೇ ಬೀದಿಯನ್ನೂ ತಲುಪಿ ಅಲ್ಲಿಯೂ ಹರಡಿತು. ಪರಸ್ಪರ ನಂಟುಳ್ಳವರೇ ಆಗಿದ್ದ ಎರಡೂ ಬೀದಿಗಳ ವಯಸ್ಕರು ಎಷ್ಟು ದುಃಖಿತರೂ ಭಯಗ್ರಸ್ಥರೂ ಆಗಿದ್ದರೆಂದರೆ ಯಾರೊಬ್ಬರೂ ಸುದ್ದಿಯ ನಿಷ್ಕೃಷ್ಟತೆಯನ್ನೇ ಆಗಲಿ ಮೂಲವನ್ನೇ ಆಗಲಿ ವಿಚಾರಿಸುವ ಗೊಡವೆಗೇ ಹೋಗಲಿಲ್ಲ.
ಸತ್ತದ್ದು ಯಾರು ಎಂಬುದನ್ನು ಯಾರೊಬ್ಬರೂ ವಿಚಾರಿಸುತ್ತಿಲ್ಲವೇಕೆ ಎಂಬುದಾಗಿ ವಿವೇಕಿಯೊಬ್ಬ ಎರಡೂ ಬೀದಿಗಳ ಜನರನ್ನು ಕೇಳಲಾರಂಭಿಸಿದ. ತುಂಬ ಗೊಂದಲಗೊಂಡಿದ್ದ ಅವರ ಪೈಕಿ ಒಬ್ಬ ಹೇಳಿದ, ಪಕ್ಕದ ಬೀದಿಯಲ್ಲಿ ಮಾರಣಾಂತಿಕ ಪ್ಲೇಗು ಹರಡಿದೆ ಎಂಬುದು ಮಾತ್ರ ನಮಗೆ ಗೊತ್ತು.
ಈ ಸುದ್ದಿಯೂ ಕಾಳ್ಗಿಚ್ಚಿನಂತೆ ಎರಡೂ ಬೀದಿಗಳಲ್ಲಿ ಹರಡಿತು. ಪ್ರತೀ ಬೀದಿಯ ಪ್ರತೀ ನಿವಾಸಿಯೂ ಈ ಬೀದಿಯಲ್ಲಿ ಇದ್ದರೆ ಉಳಿಗಾಲವಿಲ್ಲ ಎಂಬುದಾಗಿ ನಂಬಿದರು.
ತತ್ಪರಿಣಾಮವಾಗಿ ತಮ್ಮನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಎರಡೂ ಬೀದಿಯ ಜನರು ಆ ಸ್ಥಳದಿಂದ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗಿ ತಾವಿದ್ದ ಪಟ್ಟಣದಿಂದ ಅನತಿ ದೂರದಲ್ಲಿ ಎರಡು ಹಳ್ಳಿಗಳನ್ನೇ ನಿರ್ಮಿಸಿದರು!
ಈ ವಿದ್ಯಮಾನ ಜರಗಿ ಶತಮಾನಗಳೇ ಕಳೆದಿವೆ. ಆ ಪಟ್ಟಣ ಈಗ ಒಂದು ಜನರಿಲ್ಲದ  ಹಾಳೂರು. ವಲಸಿಗರು ಕಟ್ಟಿಕೊಂಡ ಎರಡೂ ಊರುಗಳ ಪೈಕಿ ಪ್ರತೀ ಊರಿನವರು ಒಂದಾನೊಂದು ಕಾಲದಲ್ಲಿ ಅಜ್ಞಾತ ದುಷ್ಟಶಕ್ತಿಯಿಂದ ಅಳಿಯುವುದನ್ನು ತಪ್ಪಿಸಿಕೊಳ್ಳಲು ಹಿಂದೆ ಇದ್ದ ಊರಿನಿಂದ ಓಡಿಬಂದ ರೋಚಕ ಕತೆಯನ್ನೂ ಹಾಲಿ ಇರುವಲ್ಲಿ ಅಂದು ಸ್ಥಾಪಿಸಿದ ಪಾಳೆಯ ಇಂದು ಸುಂದರ ಹಳ್ಳಿಯಾಗಿ ಪರಿವರ್ತನೆಯಾದ ರೋಚಕ ಕತೆಯನ್ನೂತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಹೇಳುತ್ತಾರೆ.

***** 

೬೩. ದಿನಸಿ ವ್ಯಾಪಾರಿಯೂ ಅವನ ಗಿಳಿಯೂ
ಒಂದು ದಿನ ಜಹಾಂಗೀರ್‌ ಎಂಬ ದಿನಸಿ ವ್ಯಾಪರಿಯು ಮಾರಾಟಕ್ಕೆ ಇಟ್ಟಿದ್ದ ಸುಂದರ ಗಿಳಿಯೊಂದನ್ನು ಮಾರುಕಟ್ಟೆಯಲ್ಲಿ ನೋಡಿದ. ಅತ್ಯುತ್ಸಾಹದಿಂದ ಅದನ್ನು ಕೊಂಡುಕೊಂಡ. ತನ್ನ ಅಂಗಡಿಯ ಛತ್ತುವಿನಲ್ಲಿ ಒಂದು ಕೊಕ್ಕೆಯನ್ನು ಕೂರಿಸಿ ಅದಕ್ಕೆ ಆ ಗಿಳಿಯ ಪಂಜರವನ್ನು ನೇತು ಹಾಕಿದ. ಆ ಗಿಣಿಯು ತನ್ನ ವರ್ಣರಂಜಿತ ರೆಕ್ಕೆಪುಕ್ಕಗಳಿಂದಲೂ ಮಾತನಾಡುವ ಸಾಮರ್ಥ್ಯದಿಂದಲೂ ಹೆಚ್ಚು ಗಿರಾಕಿಗಳನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿಂದ ಜಹಾಂಗಿರ್‌ ಪಂಜರವನ್ನು ಹೊರಗಡೆಯಿಂದಲೇ ಕಾಣಿಸುವಂತೆ ಬಾಗಿಲಿಗೆ ಎದುರಾಗಿ ಒಳ್ಳೆಯ ಆಯಕಟ್ಟಿನ ಸ್ಥಳದಲ್ಲಿ ನೇತು ಹಾಕಿದ್ದ. ಇತ್ತೀಚೆಗೆ ಅಷ್ಟೇನೂ ಚೆನ್ನಾಗಿ ನಡೆಯುತ್ತಿರದೇ ಇದ್ದ ವ್ಯಾಪಾರವನ್ನು ಅಭಿವೃದ್ಧಿಪಡಿಸಬಲ್ಲ ಹೂಡಿಕೆ ಎಂಬುದಾಗಿ ಗಿಳಿಯನ್ನು ಅವನು ಪರಿಗಣಿಸಿದ್ದ.
ಅವನ ಆಲೋಚನೆ ಹುಸಿಯಾಗಲಿಲ್ಲ. ಗಿಳಿಯ ಮಾತುಗಳನ್ನು ದಾರಿಯಲ್ಲಿ ಹೋಗುತ್ತಿದ್ದವರು ಕೇಳಿದಾಗ ಕುತೂಹಲದಿಂದ ಅಂಗಡಿಯ ಒಳಬಂದು ಅದರ ಆಸಕ್ತಿ ಮೂಡಿಸುವ ಬಡಬಡಿಸುವಿಕೆಯನ್ನು ಕೇಳಿದ ನಂತರ ಸೌಜನ್ಯಕ್ಕಾಗಿ ಏನೋ ಒಂದು ವಸ್ತುವನ್ನು ಖರೀದಿಸುತ್ತಿದ್ದರು. ಜಹಾಂಗೀರ್‌ನಿಗೆ ಇದರಿಂದ ಬಲು ಖುಷಿಯಾಗಿ ಆ ಗಿಣಿಗೆ ಸಿಹಿನಾಲಿಗೆ ಎಂಬುದಾಗಿ ನಾಮಕರಣ ಮಾಡಿದ.
ಸಿಹಿನಾಲಿಗೆ ಒಂದು ಸಾಮಾನ್ಯ ಗಿಳಿಯಾಗಿರಲಿಲ್ಲ. ಮಾತುಗಳನ್ನು ಯಥಾವತ್ತಾಗಿ ಅನುಕರಿಸುವುದರ ಜೊತೆಗೆ ಅವುಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಂತೆ ಕಾಣುತ್ತಿತ್ತು. ಜಹಾಂಗೀರ್‌ನೊಂದಿಗೆ ಅದು ಸಂಭಾಷಿಸುತ್ತಿತ್ತು. ತತ್ಪರಿಣಾಮವಾಗಿ ಜಹಾಂಗೀರ್‌ ಮತ್ತು ಗಿಳಿ ಬಲು ಬೇಗನೆ ಮಿತ್ರರಾದರು.
ಜಹಾಂಗೀರ್‌ನ ದಿನಸಿ ವ್ಯಾಪಾರ ಬಲುಬೇಗನೆ ಉಚ್ಛ್ರಾಯಸ್ಥಿತಿಯನ್ನು ಪಡೆಯಿತು, ಅವನು ಬೇರೆಡೆ ಇನ್ನೂ ದೊಡ್ಡದಾದ ಅಂಗಡಿ ತೆರೆದನು, ಸರಕು ಸಂಗ್ರಹವನ್ನೂ ವಿಸ್ತರಿಸಿದನು. ಅವನ ವ್ಯಾಪಾರ ದಿನೇದಿನೇ ಬಲುವೇಗವಾಗಿ ಅಭಿವೃದ್ಧಿಯಾಗುತ್ತಿದ್ದದ್ದರಿಂದ ಗಿಡಮೂಲಿಕೆಗಳ ಔಷಧಿಗಳ ವಿಭಾಗವನ್ನೂ ಅಂಗಡಿಗೆ ಸೇರಿಸಿದನು. ಅಂತಿಮವಾಗಿ ಜಹಾಂಗೀರ್‌ ಬಲುದೊಡ್ಡ ಮೊತ್ತದ ಹಣವನ್ನು ಬಂಡವಾಳವಾಗಿ ಹೂಡಿಕೆ ಮಾಡಿದ ನಂತರ ಅಂಗಡಿಯ ಒಂದು ದೊಡ್ಡ ಭಾಗವನ್ನು ಪೂರ್ಣಪ್ರಮಾಣದ ಔಷಧದ ಅಂಗಡಿಯಾಗಿ ಪರಿವರ್ತಿಸಲು ನಿರ್ಧರಿಸಿದ. ತತ್ಪರಿಣಾಮವಾಗಿ ಎಲ್ಲ ತರಹದ ತೈಲಗಳು, ಮುಲಾಮುಗಳು, ದ್ರವ ಔಷಧಗಳು, ಔಷಧ ಷರಬತ್ತುಗಳು ಇರುವ ನೂರಾರು ಸೀಸೆಗಳು ಪ್ರದರ್ಶನ ಕಪಾಡಿನಲ್ಲಿ ರಾರಾಜಿಸಿದವು. ಗಿಳಿಯ ಗುಣವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಜಹಾಂಗೀರ್‌ ತನ್ನ ಪಕ್ಷಿ ಮಿತ್ರನನ್ನು ಬಹುವಾಗಿ ಪ್ರೀತಿಸುತ್ತಿದ್ದ. ಎಂದೇ, ಬಹುಮಾನವಾಗಿ ತನ್ನ ಅಂಗಡಿಯೊಳಗೆ ಇಷ್ಟಬಂದಲ್ಲಿ ಹಾರಾಡುವ ಸ್ವಾತಂತ್ರ್ಯವನ್ನು ಅದಕ್ಕೆ ಕೊಟ್ಟಿದ್ದ.
ಇಂತಿರುವಾಗ ಒಂದು ದಿನ ಬೆಳಗ್ಗೆ ಎಂದಿನಂತೆ ಜಹಾಂಗೀರ್‌ ಅಂಗಡಿಯ ಬಾಗಿಲು ತೆರೆದಾಗ ಸಿಹಿನಾಲಿಗೆ ಮನಬಂದೆಡೆಯೆಲ್ಲ ಹಾರಾಡುತ್ತಿದ್ದದ್ದನ್ನೂ ಎಲ್ಲ ಸೀಸೆಗಳು ಒಡೆದು ಚೂರುಚೂರಾಗಿ ನೆಲದ ಮೇಲೆ ಚಲ್ಲಾಪಿಲ್ಲಿಯಾಗಿ ಹರಡಿರುವುದನ್ನೂ ನೋಡಿದ. ಹಾರಾಡುವಾಗ ಗಿಳಿಗೆ ಸೀಸೆಗಳು ತಗುಲಿ ಅವು ನೆಲಕ್ಕೆ ಬಿದ್ದಿದ್ದವು. ಹಾಕಿದ್ದ ಬಂಡವಾಳದ ಬಹುಪಾಲು ನಷ್ಟವಾಗಿತ್ತು! ಕೋಪೋದ್ರಿಕ್ತನಾದ ಜಹಾಂಗೀರ್‌ ಸಿಹಿನಾಲಿಗೆಯ ಕತ್ತನ್ನು ಹಿಡಿದು ಅದರ ತಲೆಗೆ ಅನೇಕ ಸಲ ಹೊಡೆದ. ಅಷ್ಟೊಂದು ಹೊಡೆತಗಳು ತಲೆಗೆ ಬಿದ್ದರೂ ಬಡಪಾಯಿ ಪಕ್ಷಿ ಸಾಯದೇ ಬದುಕಿ ಉಳಿದದ್ದೇ ಆಶ್ಚರ್ಯದ ಸಂಗತಿ. ಕೊನೆಗೆ ಗಿಳಿಯನ್ನು ಪಂಜರದೊಳಕ್ಕೆ ಎಸೆದು ಒಂದೆಡೆ ಕುಳಿತು ತನ್ನ ದುರದೃಷ್ಟವನ್ನು ಜ್ಞಾಪಿಸಿಕೊಂಡು ಅತ್ತನು. ಅನೇಕ ಗಂಟೆಗಳ ನಂತರ ತಾನು ಗಿಳಿಯ ತಲೆಗೆ ಹೊಡೆದದ್ದರಿಂದ ಅದರ ತಲೆಯ ಗರಿಗಳು ಬಿದ್ದು ಹೋಗಿವೆಯೆಂಬ ಅಂಶ ಅವನ ಅರಿವಿಗೆ ಬಂದಿತು. ಸಂಪೂರ್ಣ ಬೋಳುತಲೆಯ ಬಡಪಾಯಿ ಪಕ್ಷಿ ಪುನಃ ಪಂಜರದೊಳಗೆ ಬಂಧಿಯಾಯಿತು.
ನಿಧಾನವಾಗಿ ಜಹಾಂಗೀರ್‌ನ ವ್ಯಾಪಾರ ಪುನಃ ಚೇತರಿಸಿಕೊಂಡದ್ದರಿಂದ ಆದ ನಷ್ಟವನ್ನು ಸರಿದೂಗಿಸಲು ಅವನಿಗೆ ಸಾಧ್ಯವಾಯಿತು. ಆದರೂ, ದುರಸ್ತಿಮಾಡಲಾಗದ ಹಾನಿಯಂದು ಅಂತೆಯೇ ಉಳಿಯಿತು. ನೋಡಲು ವಿಚಿತ್ರವಾಗಿ ಕಾಣುತ್ತಿದ್ದ ಸಿಹಿನಾಲಗೆ ಮೌನವಾಗಿಯೇ ಉಳಿಯಿತು. ಸಿಹಿನಾಲಗೆಯ ಮಧುರವಾದ ಮಾತುಗಳನ್ನು ಕೇಳಲೋಸುಗವೇ ಅಂಗಡಿಗೆ ಬರುತ್ತಿದ್ದ ಗಿರಾಕಿಗಳ ಸಂಖ್ಯೆ ಕ್ರಮೇಣ ಕಮ್ಮಿಆಯಿತು. ಒಂದು ಕಾಲದಲ್ಲಿ ಜೋರಾಗಿಯೇ ನಡೆಯುತ್ತಿದ್ದ ದಿನಸಿ ವ್ಯಾಪಾರವೂ ಇಳಿಮುಖವಾಗಲು ಆರಂಭಿಸಿತು.
ಗಿಳಿ ಪುನಃ ಮಾತನಾಡುವಂತೆ ಮಾಡಲು ಜಹಾಂಗೀರ್‌ ಅನೇಕ ತಂತ್ರಗಳನ್ನು ಯೋಜಿಸಿದ. ಬಲು ರುಚಿಯಾದ ಬೀಜಗಳ ಪ್ರಲೋಭನೆಯೊಡ್ಡಿದರೂ ಅದು ಆಸಕ್ತಿ ತೋರಲಿಲ್ಲ. ಜಹಾಂಗೀರ್‌ನನ್ನು ಕ್ಷಮಿಸಿ ಪುನಃ ಮಾತನಾಡುವಂತೆ ಸಿಹಿನಾಲಗೆಯ ಮನಸ್ಸನ್ನು ಪರಿವರ್ತಿಸಲು ಅಂಗಡಿಗೆ ಒಬ್ಬ ಸಂಗೀತಗಾರನನ್ನೂ ಕರೆತಂದದ್ದಾಯಿತು. ಆದರೂ ಸಿಹಿನಾಲಗೆ ಮೌನವಾಗಿಯೇ ಇತ್ತು. ಕೊನೆಯ ಪ್ರಯತ್ನವಾಗಿ ಹೆಣ್ಣು ಗಿಳಿಯೊಂದನ್ನು ತಂದು ಸಿಹಿನಾಲಗೆಯ ಪಂಜರದ ಎದುರೇ ಅದರ ಪಂಜರವನ್ನೂ ಜಹಾಂಗೀರ್‌ ಇಟ್ಟನು. ಸಿಹಿನಾಲಗೆ ಪುನಃ ಮಾತನಾಡಿದರೆ ಅಂಗಡಿಯೊಳಗೆ ಹಾರಾಡುವ ಸ್ವಾತಂತ್ರ್ಯವನ್ನು ಎರಡೂ ಪಕ್ಷಿಗಳಿಗೆ ಕೊಡುವುದಾಗಿಯೂ ಹೇಳಿದರೂ ಸಿಹಿನಾಲಿಗೆ ಅವನನ್ನೂ ಹೆಣ್ಣುಗಿಳಿಯನ್ನೂ ನಿರ್ಲಕ್ಷಿಸಿತು.
ಕೊನೆಗೆ ಜಹಾಂಗೀರ್‌ ಪ್ರಯತ್ನಿಸುವದನ್ನೇ ಬಿಟ್ಟುಬಿಟ್ಟನು. ದೇಹಕ್ಕೆ ಆದ ಆಘಾತದಿಂದಾಗಿ ಗಿಳಿ ಮಾತನಾಡುವ ಸಾಮರ್ಥ್ಯವನ್ನೇ ಕಳೆದುಕೊಂಡಿರಬೇಕೆಂದು ಭಾವಿಸಿದ ಜಹಾಂಗೀರ್‌ ಅದನ್ನು ಪಂಜರದಲ್ಲಿಯೇ ನೆಮ್ಮದಿಯಿಂದ ಇರಲು ಬಿಟ್ಟಬಿಟ್ಟನು. ಆದರೂ, ತನ್ನ ಧರ್ಮನಿಷ್ಠೆಯ ಪರಿಣಾಮವಾಗಿ  ಅದು ಮಾತನಾಡಲು ಆರಂಭಿಸೀತು ಎಂಬ ಆಸೆಯಿಂದ ಬಡವರಿಗೆ ತುಸು ಧಾರಾಳವಾಗಿ ದಾನ ಮಾಡಲಾರಂಭಿಸಿದ, ಹೆಚ್ಚಿನ ಶ್ರದ್ಧೆಯಿಂದ ಪ್ರಾರ್ಥನೆಯನ್ನೂ ಮಾಡಲಾರಂಭಿಸಿದ ಜಹಾಂಗೀರ್‌.
ಇಂತಿರುವಾಗ ಒಂದು ದಿನ ಕೈನಲ್ಲಿ ಮರದ ಬಟ್ಟಲನ್ನು ಹಿಡಿದುಕೊಂಡಿದ್ದ ತೇಪೆಹಾಕಿದ ಉಡುಪು ಧರಿಸಿದ್ದ ಅಲೆಮಾರಿ ಫಕೀರನೊಬ್ಬ ಅಂಗಡಿಯನ್ನು ದಾಟಿ ಮುಂದೆ ಹೋಗುತ್ತಿದ್ದ. ಅವನ ತಲೆ ಸಂಪೂರ್ಣ ಬೋಳಾಗಿತ್ತು. ಆಗ ಅಂಗಡಿಯೊಳಗಿನಿಂದ ಹಠಾತ್ತಾಗಿ ಮೂಗಿನಿಂದ ಉಚ್ಚರಿಸಿದಂತಿದ್ದ ಧ್ವನಿಯೊಂದು ಕೇಳಿಸಿತು, ಏಯ್‌, ನೀನು! ನಿನ್ನ ತಲೆ ಏಕೆ ಬೋಳಾಯಿತು? ನೀನೂ ಕೆಲವು ಸೀಸೆಗಳನ್ನು ಒಡೆದು ಹಾಕಿದೆಯಾ?
ತನ್ನನ್ನು ಮಾತನಾಡಿಸಿದವರು ಯಾರು ಎಂಬುದನ್ನು ನೋಡಲೋಸುಗ ಫಕೀರ ಅಂಗಡಿಯತ್ತ ತಿರುಗಿದ. ತನ್ನನ್ನು ಮಾತನಾಡಿಸಿದ್ದು ಒಂದು ಗಿಳಿ ಎಂಬುದನ್ನು ತಿಳಿದು ಆಶ್ಚರ್ಯಚಕಿತನಾದ. ಹಠಾತ್ತಾಗಿ ಒಲಿದು ಬಂದ ಅದೃಷ್ಟದಿಂದ ಉತ್ತೇಜಿತನಾದ ಜಹಾಂಗೀರ್‌ ಆ ಫಕೀರನನ್ನು ಅಂಗಡಿಯೊಳಕ್ಕೆ ಆಹ್ವಾನಿಸಿದ. ಔಷಧದ ಸೀಸೆಗಳನ್ನು ಗಿಳಿ ಒಡೆದ ಕತೆಯನ್ನೂ ಗಿಳಿಯ ತಲೆ ಏಕೆ ಬೋಳಾಯಿತೆಂಬುದನ್ನೂ ಅದು ಮಾತನಾಡುವುದನ್ನು ನಿಲ್ಲಿಸಿದ ಕತೆಯನ್ನೂ ಫಕೀರನಿಗೆ ಜಹಾಂಗೀರ್‌ ಹೇಳಿದ. ಫಕೀರ ಪಂಜರದ ಸಮೀಪಕ್ಕೆ ಹೋಗಿ ಸಿಹಿನಾಲಗೆಗೆ ಹೇಳಿದ, ನಿನಗಾದ ಅನುಭವವನ್ನು ಹೋಲುವ ಅನುಭವ ನನಗೂ ಆದದ್ದು ನನ್ನ ತಲೆ ಬೋಳಾಗಲು ಕಾರಣ ಎಂಬುದಾಗಿ ನೀನು ಆಲೋಚಿಸುತ್ತಿರುವೆಯಲ್ಲವೇ?
ಬೇರೇನು ಆಗಿರಲು ಸಾಧ್ಯ, ಕೇಳಿತು ಸಿಹಿನಾಲಿಗೆ.
ಫಕೀರ ನಸುನಕ್ಕು ಹೇಳಿದ, ಪ್ರಿಯ ಮಿತ್ರನೇ, ನಿನಗೊಂದು ಬುದ್ಧಿಮಾತು ಹೇಳುತ್ತೇನೆ: ಒಂದು ಮರದ ಯಾವುದೇ ಎರಡು ಎಲೆಗಳು ಸಮರೂಪಿಗಳಾಗಿರುವುದಿಲ್ಲ! ಅಂತೆಯೇ ಮೇಲ್ನೋಟಕ್ಕೆ ಒಂದೇ ರೀತಿ ಇರುವಂತೆ ಭಾಸವಾಗುವ ಇಬ್ಬರು ವ್ಯಕ್ತಿಗಳೂ ಸಹ. ಇವರ ಪೈಕಿ ಒಬ್ಬ ತನ್ನ ಜೀವನಾನುಭವಗಳ ಕುರಿತು ಚಿಂತನ ಮಾಡುವವನಾಗಿರಬಹುದು, ಇನ್ನೊಬ್ಬ ತಿಳಿವಳಿಕೆ ಸಾಲದವನಾಗಿರಬಹುದು. ಇಂತಿದ್ದರೂ ಅವರೀರ್ವರೂ ಒಂದೇ ರೀತಿ ಇದ್ದಾರೆ ಅನ್ನುವವರು ಬಹುಮಂದಿ ಇದ್ದಾರೆ. ವಿವೇಕಿಗೂ ವಿವೇಕರಹಿತನಿಗೂ ಇರುವ ವ್ಯತ್ಯಾಸಕ್ಕಿಂತ ಹೆಚ್ಚಿನ ವ್ಯತ್ಯಾಸ ಇರುವುದು ಸಾಧ್ಯವೇ?. ಮೋಸೆಸ್‌ನ ಕೈನಲ್ಲಿದ್ದ ದಂಡಕ್ಕೂ ಏರನ್‌ನ ಕೈನಲ್ಲಿದ್ದ ದಂಡಕ್ಕೂ ನಡುವಿನ ವ್ಯತ್ಯಾಸಕ್ಕೆ ಸಮನಾದ ವ್ಯತ್ಯಾಸ ಇದು - ಒಂದರಲ್ಲಿ ದೈವಿಕ ಶಕ್ತಿ ಉಳ್ಳದ್ದು, ಇನ್ನೊಂದು ಮಾನವ ಶಕ್ತಿ ಉಳ್ಳದ್ದು. ಒಂದು ಪವಾಡಗಳನ್ನು ಮಾಡುತ್ತದೆ, ಇನ್ನೊಂದು ಮೋಡಿ ಮಾಡುತ್ತದೆ. ಮೇಲ್ನೋಟಕ್ಕೆ ಒಂದೇ ತೆರನಾಗಿ ಕಾಣುವ ವಸ್ತುಗಳ ತಿರುಳು ಬೇರೆಬೇರೆ ಆಗಿರುವ ಸಾಧ್ಯತೆ ಇರುವುದರಿಂದ ತೋರ್ಕೆಯನ್ನು ಆಧರಿಸಿ ಅಂಥವುಗಳ ಕುರಿತಾಗಿ ತೀರ್ಮಾನ ಕೈಗೊಳ್ಳುವ ಮಾನವನ ಸ್ವಭಾವಸಿದ್ಧ ಗುಣ ಉಂಟುಮಾಡುವಷ್ಟು ತೊಂದರೆಯನ್ನು ಬೇರೆ ಯಾವುದೂ ಮಾಡಲಾರದು. ಉದಾಹರಣೆಗೆ ಜೇನುನೊಣ, ಹೆಜ್ಜೇನು - ಇವುಗಳನ್ನು ಪರಿಶೀಲಿಸು. ಮೇಲ್ನೋಟಕ್ಕೆ ಎರಡೂ ಒಂದೇ ತೆರನಾಗಿ ಕಂಡರೂ ಒಂದರಿಂದ ನಮಗೆ ಸುಲಭವಾಗಿ ದೊರೆಯವುದು ಜೇನು, ಇನ್ನೊಂದರಿಂದ ನೋವು!
ಫಕೀರನು ಮಾತನಾಡುವುದನ್ನು ನಿಲ್ಲಿಸಿ ಜಹಾಂಗೀರ್‌ನ ಆತ್ಮವನ್ನೇ ವಾಚಿಸುವವನಂತೆ ಅವನತ್ತ ಒಂದು ತೀಕ್ಷ್ಣವಾದ ನೋಟ ಬೀರಿದ. ಸಿಹಿನಾಲಗೆ ತನ್ನ ಪಂಜರದಲ್ಲಿ ಮೌನವಾಗಿ ಕುಳಿತಿತ್ತು, ಜಹಾಂಗೀರ್‌ ದಿಗ್ಭ್ರಾಂತನಾದವನಂತೆ ನಿಂತಿದ್ದ. ಫಕೀರ ನಸುನಕ್ಕು ಹೊರನಡೆದ. ತನಗೆ ಎಂದೂ ಮರೆಯಲಾಗದ ಪಾಠವೊಂದನ್ನು ಫಕೀರ ಕಲಿಸಿದ ಎಂಬುದನ್ನು ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡ ಜಹಾಂಗೀರ್‌ ಅರ್ಥಮಾಡಿಕೊಂಡ. ಫಕೀರನಿಗೆ ಕೃತಜ್ಞತೆಗಳನ್ನು ಅರ್ಪಿಸಲೋಸುಗ ಅವನು ಹೊರಕ್ಕೆ ಓಡಿದನಾದರೂ ಎಲ್ಲಿಯೂ ಫಕೀರನ ಸುಳಿವೇ ಇರಲಿಲ್ಲ. ಬೋಳುತಲೆಯ ಫಕೀರನೊಬ್ಬನನ್ನು ಆ ದಿನ ಪೇಟೆಯಲ್ಲಿ ನೋಡಿದ ನೆನಪೇ ಯಾರಿಗೂ ಇರಲಿಲ್ಲ!

***** 

೬೪. ವಿನಿಗರ್‌ನಲ್ಲಿ ಬೇಯಿಸಿದ ಲೀಮ ಹುರುಳಿಯ ಕತೆ
ತೀವ್ರವಾದ ಹೊಟ್ಟೆನೋವಿನಿಂದ ನರಳುತ್ತಿದ್ದ ಚಮ್ಮಾರನೊಬ್ಬ ಸ್ಥಳೀಯ ವೈದ್ಯರ ಹತ್ತಿರ ಹೋದ. ವೈದ್ಯರು ಚಮ್ಮಾರನನ್ನು ಬಲು ಜಾಗರೂಕತೆಯಿಂದ ಕೂಲಂಕಶವಾಗಿ ತಪಾಸಣೆ ಮಾಡಿದರೂ ಚಮ್ಮಾರನ ಬಾಧೆಯ ಕಾರಣ ತಿಳಿಯದ್ದರಿಂದ ಅವನ ಬಾಧೆಯನ್ನು ನಿವಾರಿಸಬಲ್ಲ ಔಷಧ ಸೂಚಿಸಲು ಸಾಧ್ಯವಾಗಲಿಲ್ಲ. ಚಮ್ಮಾರ ಆತಂಕದಿಂದ ಕೇಳಿದ, ವೈದ್ಯರೇ ನನ್ನ ರೋಗಕ್ಕೆ ಏನಾದರೂ ಚಿಕಿತ್ಸೆ ಇದೆಯೇ?
ವೈದ್ಯರು ಉತ್ತರಿಸಿದರು, ದುರದೃಷ್ಟವಶಾತ್‌ ನಿನ್ನ ರೋಗವನ್ನು ನಿವಾರಿಸಬಲ್ಲ ಯಾವುದೇ ಔಷಧ ನನ್ನ ಹತ್ತಿರ ಇಲ್ಲ. ವಾಸ್ತವವಾಗಿ ನಿನ್ನ ಹೊಟ್ಟೆನೋವಿಗೆ ಕಾರಣವೇನು ಎಂಬುದನ್ನು ನಿಷ್ಕೃಷ್ಟವಾಗಿ ಗುರುತಿಸಲೂ ನನಗೆ ಸಾಧ್ಯವಾಗುತ್ತಿಲ್ಲ
ಚಮ್ಮಾರ ಬಲು ಬೇಸರದಿಂದ ಹೇಳಿದ, ಸರಿ ಹಾಗಾದರೆ, ನೀವು ಮಾಡಬಹುದಾದದ್ದು ಏನೂ ಇಲ್ಲ ಅನ್ನುವುದಾದರೆ ನನ್ದೊಂದು ಅಂತಿಮ ಆಸೆ ಇದೆ. ದೊಡ್ಡದಾದ ತಪ್ಪಲೆಗೆ ಎರಡು ಪೌಂಡ್‌ ಲೀಮ ಹುರುಳಿ ಹಾಗೂ ಒಂದು ಗ್ಯಾಲನ್‌ ವಿನಿಗರ್‌ ಹಾಕಿ ಬೇಯಿಸಬೇಕು. ಅದೇ ನನ್ನ ಅಂತಿಮ ಭೋಜನದ ಭಕ್ಷ್ಯ.
ವೈದ್ಯರು ಹೆಗಲನ್ನು ಕೊಡವುವುದರ ಮುಖೇನ ತನ್ನ ತಿರಸ್ಕಾರವನ್ನು ಪ್ರದರ್ಶಿಸಿ ಹೇಳಿದರು, ಇದೊಂದು ಒಳ್ಳೆಯ ಆಲೋಚನೆ ಎಂಬುದಾಗಿ ನನಗನ್ನಿಸುವುದಿಲ್ಲ. ಆದರೂ ಅದು ಪರಿಣಾಮಕಾರೀ ಔಷಧವಾಗುತ್ತದೆ ಎಂಬುದಾಗಿ ನಿನಗನ್ನಿಸುವುದಾದರೆ, ಪ್ರಯತ್ನಿಸಿ ನೋಡು. ನನ್ನದೇನೂ ಅಭ್ಯಂತರವಿಲ್ಲ.
ಚಮ್ಮಾರನ ಸ್ಥಿತಿ ಬಲು ಗಂಭೀರವಾಗಿದೆ ಎಂಬ ಸುದ್ದಿಯ ಬರುವಿಕೆಯನ್ನು ಇಡೀ ರಾತ್ರಿ ವೈದ್ಯರು ಕಾಯುತ್ತಿದ್ದರು.
ಮರುದಿನ ಬೆಳಗ್ಗೆಯ ವೇಳೆಗೆ ಚಮ್ಮಾರನ ಹೊಟ್ಟೆನೋವು ಮಾಯವಾಗಿ ಆತ ಬಲು ಸಂತೋಷದಿಂದ ಇದ್ದದ್ದನ್ನು ನೋಡಿ ವೈದ್ಯರು ಆಶ್ಚರ್ಯಚಕಿತರಾದರು. ತನ್ನ ದಿನವರದಿಯ ಪುಸ್ತಕದಲ್ಲಿ ಅವರು ಇಂತು ದಾಖಲಿಸಿದರು: ಇಂದು ಚಮ್ಮಾರನೊಬ್ಬ ನನ್ನ ಹತ್ತಿರ ಬಂದಿದ್ದ. ಅವನ ರೋಗ ನಿವಾರಣೆಗೆ ತಕ್ಕ ಚಿಕಿತ್ಸೆ ನನಗೆ ತಿಳಿಯಲಿಲ್ಲ. ಅವನೇ ಸೂಚಿಸಿದ ಎರಡು ಪೌಂಡ್‌ ಲೀಮ ಹುರುಳಿ ಹಾಗೂ ಒಂದು ಗ್ಯಾಲನ್‌ ವಿನಿಗರ್‌ ಅವನನ್ನು ರೋಗಮುಕ್ತನನ್ನಾಗಿಸಿತು.
ಕೆಲವು ದಿನಗಳ ನಂತರ ತೀವ್ರವಾಗಿ ಅಸ್ವಸ್ಥನಾಗಿದ್ದ ಆ ಊರಿನ ದರ್ಜಿಗೆ ವೈದ್ಯಕೀಯ ನೆರವು ನೀಡಲೋಸುಗ ಆ ವೈದ್ಯರು ದರ್ಜಿಯ ಮನೆಗೆ ಹೋಗಬೇಕಾಯಿತು. ದರ್ಜಿಯನ್ನು ಕಾಡುತ್ತಿದ್ದ ರೋಗಕ್ಕೆ ಏನು ಔಷಧ ನೀಡಬೇಕೆಂಬುದು ವೈದ್ಯರಿಗೆ ತಿಳಿಯಲಿಲ್ಲ. ನೋವಿನಿಂದ ನರಳುತ್ತಿದ್ದ ದರ್ಜಿ ಕಿರುಚಿದ, ದಯವಿಟ್ಟು ವೈದ್ಯರೇ, ಯಾವುದೇ ರೀತಿಯ ಒರಿಹಾರವೂ ನಿಮಗೆ ತೋಚುತ್ತಿಲ್ಲವೇ?
ವೈದ್ಯರು ಒಂದು ಕ್ಷಣ ಆಲೋಚಿಸಿ ಹೇಳಿದರು, ಇಲ್ಲ. ಆದರೆ ಇತ್ತೀಚೆಗೆ ಇದೇ ರೀತಿಯ ಹೊಟ್ಟೆನೋವಿನಿಂದ ನರಳುತ್ತಿದ್ದ ಚಮ್ಮಾರನೊಬ್ಬ ನನ್ನ ಹತ್ತಿರ ಬಂದಿದ್ದ. ಎರಡು ಪೌಂಡ್‌ ಲೀಮ ಹುರುಳಿ ಹಾಗೂ ಒಂದು ಗ್ಯಾಲನ್‌ ವಿನಿಗರ್‌ ಅವನನ್ನು ರೋಗಮುಕ್ತನನ್ನಾಗಿಸಿತು.
ಇದೊಂದು ವಿಚಿತ್ರವಾದ ಚಿಕಿತ್ಸೆ ಎಂಬುದಾಗಿ ಅನ್ನಿಸುತ್ತಿದ್ದರೂ ಒಂದು ಬಾರಿ ಪ್ರಯೋಗಿಸಿ ನೋಡುತ್ತೇನೆ, ಎಂಬುದಾಗಿ ಉದ್ಗರಿಸಿದ ದರ್ಜಿ. ವಿನಿಗರ್‌ನೊಂದಿಗೆ ಲೀಮ ಹುರುಳಿ ಸೇವಿಸಿದ ಆ ದರ್ಜಿ. ತತ್ಪರಿಣಾಮವಾಗಿ ಮಾರನೆಯ ದಿನದ ವೇಳೆಗೆ ಅವನ ಹೊಟ್ಟೆನೋವು ಉಲ್ಬಣಿಸಿತು.
ವೈದ್ಯರು ತಮ್ಮ ದಿನವರದಿಯ ಪುಸ್ತಕದಲ್ಲಿ ಅವರು ಇಂತು ದಾಖಲಿಸಿದರು: ನಿನ್ನೆ ಒಬ್ಬ ದರ್ಜಿ ನನ್ನ ಹತ್ತಿರ ಬಂದಿದ್ದ. ಅವನಿಗೆ ನಾನು ಯಾವ ನೆರವೂ ನೀಡಲಾಗಲಿಲ್ಲ. ಅವನು ಲೀಮ ಹುರುಳಿ ಮತ್ತು ವಿನಿಗರ್‌ ಸೇವಿಸಿದ. ತತ್ಪರಿಣಾಮವಾಗಿ ಅವನ ಹೊಟ್ಟೆನೋವು ಉಲ್ಬಣಿಸಿತು. ಚಮ್ಮಾರರಿಗೆ ಯಾವುದರಿಂದ ಒಳ್ಳೆಯದಾಗುತ್ತದೋ ಅದರಿಂದ ದರ್ಜಿಗಳಿಗೆ ಒಳ್ಳೆಯದಾಗುವುದಿಲ್ಲ!

***** 

೬೫. ಕೋಡಂಗಿ
ಒಬ್ಬಾತ ಮನೋವೈದ್ಯರನ್ನು ಭೇಟಿ ಮಾಡಿ ಹೇಳಿದ, ಡಾಕ್ಟರೇ, ನಾನು ಯಾವಾಗಲೂ ಮಂಕಾಗಿರುತ್ತೇನೆ. ನಾನೇನೇ ಮಾಡಿದರೂ ಮಂಕಾಗಿಯೇ ಇರುತ್ತೇನೆ. ಇದಕ್ಕೇನು ಪರಿಹಾರ ಎಂಬುದೇ ತಿಳಿಯುತ್ತಿಲ್ಲ.
ಮನೋವೈದ್ಯರು ಅವನನ್ನು ನೇರವಾಗಿ ನೋಡುತ್ತಾ ಹೇಳಿದರು, ನನ್ನ ಜೊತೆಯಲ್ಲಿ ಕಿಟಕಿಯ ಹತ್ತಿರ ಬಾ.
ಇಬ್ಬರೂ ಕಿಟಕಿಯನ್ನು ಸಮೀಪಿಸಿದಾಗ ಮನೋವೈದ್ಯರು ಹೊರಗೆ ಒಂದು ದಿಕ್ಕಿನತ್ತ ತೋರಿಸುತ್ತಾ ಹೇಳಿದರು, ಅಲ್ಲೊಂದು ಡೇರೆ ಕಾಣುತ್ತಿದೆಯಲ್ಲವೇ?. ಅದೊಂದು ಸರ್ಕಸ್ಸಿನ ಡೇರೆ. ಆ ಸರ್ಕಸ್‌ ನಿಜವಾಗಿಯೂ ಬಲು ಚೆನ್ನಾಗಿದೆ. ಅದರಲ್ಲೊಬ್ಬ ನಿಜವಾಗಿಯೂ ಜನಗಳನ್ನು ನಗಿಸಬಲ್ಲ ಕೋಡಂಗಿಯೊಬ್ಬನಿದ್ದಾನೆ. ತನ್ನ ವಿಲಕ್ಷಣ ಚಟುವಟಿಕೆಗಳಿಂದ ಆತ ನಿನ್ನನ್ನು ಬಿದ್ದುಬಿದ್ದು ನಗುವಂತೆ ಮಾಡಬಲ್ಲ. ಹೋಗಿ ಅವನನ್ನು ಭೇಟಿಮಾಡು. ನಿನ್ನನ್ನು ಕವಿದಿರುವ ಮಂಕು ಮಾಯವಾಗುವುದು ಮಾತ್ರವಲ್ಲ, ಮುಂದೆಂದೂ ನೀನು ಮಾಂಕಾಗುವುದಿಲ್ಲ ಎಂಬುದು ಖಾತರಿ!
ಬಂದಾತ ವಿಷಣ್ಣವದನನಾಗಿ ವೈದ್ಯರತ್ತ ತಿರುಗಿ ಹೇಳಿದ, ಡಾಕ್ಟರೇ, ನಾನೇ ಆ ಕೋಡಂಗಿ!

***** 

೬೬. ಸಾಲಬಾಧೆ
ದಯವಿಟ್ಟು ನಿದ್ದೆ ಮಾಡಿ! ನಾಳೆ ತುಂಬಾ ಕೆಲಸವಿರುವ ದಿನ, ಮುಲುಗಿದಳು ಶಹಾರಾಮನ ಹೆಂಡತಿ ಮೀನಾ, ಪತಿ ಸುದೀರ್ಘಕಾಲದಿಂದ ಅತ್ತಿಂದಿತ್ತ ಹೊರಳಾಡುತ್ತಿದ್ದದ್ದನ್ನು ಗಮನಿಸಿ. ನೀವು ಇಂತು ಹೊರಳಾಡುತ್ತಿದ್ದರೆ ನನಗೂ ನಿದ್ದೆ ಬರುವುದಿಲ್ಲ,ಎಂಬುದಾಗಿಯೂ ಹೇಳಿದಳು.
ಹಂ, ನನಗಿರುವ ಸಮಸ್ಯೆಗಳು ನಿನಗೆ ಇದ್ದಿದ್ದರೆ ತಿಳಿಯುತ್ತಿತ್ತು!ಗೊಣಗಿದ ಶಹಾರಾಮ, ಕೆಲವು ತಿಂಗಳುಗಳಷ್ಟು ಹಿಂದೆ ಸಾಲಪತ್ರ ಬರೆದು ಕೊಟ್ಟು ಸಾಲ ತೆಗೆದುಕೊಂಡಿದ್ದೆ. ನಾಳೆ ವಾಯಿದೆ ಮುಗಿಯುತ್ತದೆ. ನನ್ನ ಹತ್ತಿರ ಬಿಡಿಗಾಸೂ ಇಲ್ಲ ಎಂಬುದು ನಿನಗೆ ತಿಳಿದಿದೆ. ನಾನು ಸಾಲ ತೆಗೆದುಕೊಂಡದ್ದು ನಮ್ಮ ನೆರೆಮನೆಯವನಿಂದ. ಹಣದ ವಿಷಯಕ್ಕೆ ಬಂದಾಗ ಆತ ಚೇಳಿಗಿಂತಲೂ ಹೆಚ್ಚು ವಿಷವುಳ್ಳವನಾಗುತ್ತಾನೆ. ನನ್ನ ಗ್ರಹಚಾರ! ನಾನಾದರೂ ಹೇಗೆ ನಿದ್ದೆ ಮಾಡಲಿ?ಗೊಣಗುತ್ತಾ ತನ್ನ ಹೊರಳಾಟ ಮುಂದುವರಿಸಿದ. ಅವನನ್ನು ಶಾಂತ ಸ್ಥಿತಿಗೆ ತರಲು ಮೀನಾ ಮಾಡಿದ ಪ್ರಯತ್ನಗಳು ವಿಫಲವಾದವು. ಬೆಳಗಾಗಲಿ ನೋಡೋಣ. ಬಹುಶಃ ಹಣ ಹಿಂದಿರುಗಿಸಲು ಸಾಧ್ಯವಾಗಬಹುದಾದ ಉಪಾಯವೊಂದು ಹೊಳೆದೀತು,ಸಮಾಧಾನಿಸಲು ಯತ್ನಿಸಿದಳು ಮೀನಾ.
ಯಾವುದೂ ಪ್ರಯೋಜನವಾಗುವುದಿಲ್ಲ. ನಮ್ಮ ಕತೆ ಮುಗಿದಂತೆಯೇ, ಹಲುಬಿದ ಶಹಾರಾಮ.
ಕೊನೆಗೊಮ್ಮೆ ಮೀನಾ ತಾಳ್ಮೆ ಕಳೆದುಕೊಂಡಳು. ಹಾಸಿಗೆಯಿಂದ ಮೇಲೆದ್ದು ತಾರಸಿಯ ಮೇಲಕ್ಕೆ ಹೋದಳು. ಅಲ್ಲಿಂದ ಗಟ್ಟಿಯಾಗಿ ನೆರೆಮನೆಯವನನ್ನು ಕುರಿತು ಇಂತು ಬೊಬ್ಬೆ ಹೊಡೆದಳು, ಅಯ್ಯಾ ನೆರೆಮನೆಯಾತನೇ, ನನ್ನ ಗಂಡ ನಿನ್ನಿಂದ ಪಡೆದ ಸಾಲದ ಹಣ ಹಿಂದಿರುಗಿಸಬೇಕಾದ ದಿನ ನಾಳೆ ಎಂಬುದು ನಿನಗೆ ತಿಳಿದಿದೆಯಷ್ಟೆ! ನಿನಗೆ ತಿಳಿಯದಿರುವ ವಿಷಯವೊಂದನ್ನು ನಾನೀಗ ಹೇಳಬಯಸುತ್ತೇನೆ. ನನ್ನ ಗಂಡ ನಾಳೆ ಸಾಲದ ಹಣ ಹಿಂದಿರುಗಿಸಲು ಸಾಧ್ಯವಿಲ್ಲ.
ತದನಂತರ ಉತ್ತರಕ್ಕಾಗಿ ಕಾಯದೇ ಮಲಗುವಕೋಣೆಗೆ ಹಿಂದಿರುಗಿ ಓಡಿ ಹೇಳಿದಳು, ನನಗೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲವಾದರೆ ನಮ್ಮ ನೆರೆಮನೆಯಾತನಿಗೂ ಸಾಧ್ಯವಾಗಬಾರದು!ಶಹಾರಾಮ ಮುಸುಕು ಹಾಕಿ ಚಿಂತೆ ಮಾಡುತ್ತಾ ಸದ್ದಿಲ್ಲದೇ ಮಲಗಿದ. ಕೆಲವೇ ಕ್ಷಣಗಳಲ್ಲಿ ಇಬ್ಬರು ಉಸಿರಾಡುವ ಶಬ್ದ ಬಿಟ್ಟರೆ ಅಲ್ಲಿ ಬೇರಾವ ಶಬ್ದವೂ ಕೇಳಿಸುತ್ತಿರಲಿಲ್ಲ.

***** 

೬೭. ಹಕೀಮ ಮಾಡಿದ ರೋಗನಿದಾನ
ತೀವ್ರವಾದ ರೋಗದಿಂದ ಬಳಲುತ್ತಿದ್ದ ಒಬ್ಬಾತ ಹಾಸಿಗೆ ಹಿಡಿದಿದ್ದ. ಅವನನ್ನು ನೋಡಿದವರಿಗೆ ಈತ ಹೆಚ್ಚು ದಿನ ಬದುಕಿರಲಾರ ಅನ್ನಿಸುತ್ತಿತ್ತು. ಆತನ ಭಯಗ್ರಸ್ಥ ಪತ್ನಿ ಸ್ಥಳೀಯ ಹಕೀಮನಿಗೆ ಹೇಳಿಕಳುಹಿಸಿದಳು.
ತಕ್ಷಣವೇ ಅಲ್ಲಿಗೆ ಬಂದ ಹಕೀಮ ರೋಗಿಯ ಬೆನ್ನು ಮತ್ತು ಎದೆಯ ಮೇಲೆ ಅಲ್ಲಲ್ಲಿ ಸುಮಾರು ಅರ್ಧ ತಾಸು ಕಾಲ ಕುಟ್ಟಿ ಆಗುವ ಸದ್ದನ್ನು ತದೇಕಚಿತ್ತದಿಂದ ಕೇಳಿದ. ನಾಡಿ ಪರೀಕ್ಷಿಸಿದ. ರೋಗಿಯ ಎದೆಯ ಮೇಲೆ ಕಿವಿಯಿಟ್ಟು ಆಲಿಸಿದ. ರೋಗಿಯನ್ನು ಕವುಚಿ ಹಾಕಿ ಪರೀಕ್ಷಿಸಿದ. ಕೈ ಕಾಲುಗಳನ್ನು ಒಂದೊಂದಾಗಿ ಎತ್ತಿ ಹಿಡಿದು ಪರೀಕ್ಷಿಸಿದ. ಕಣ್ಣುಗಳನ್ನು ದೊಡ್ಡದಾಗಿ ತೆರೆದು ನೋಡಿದ. ಬಾಯಿ ತೆರೆಯಿಸಿ ಇಣುಕಿದ. ಕೊನೆಗೊಂದು ನಿಶ್ಚಿತಾಭಿಪ್ರಾಯಕ್ಕೆ ಬಂದು ಹೇಳಿದ, ಕ್ಷಮಿಸಿ ಅಮ್ಮಾ. ದುರದೃಷ್ಟವಶಾತ್ ನಿಮಗೊಂದು ಕೆಟ್ಟ ಸುದ್ದಿಯನ್ನು ಹೇಳಲೇ ಬೇಕಾಗಿದೆ. ನಿಮ್ಮ ಪತಿ ಸತ್ತು ಎರಡು ದಿನಗಳಾಗಿವೆ.
ಇದನ್ನು ಕೇಳಿದ ತಕ್ಷಣ ರೋಗಿಗೆ ಆಘಾತವಾಗಿ ಮಲಗಿದಲ್ಲೇ ತಲೆ ಎತ್ತಿ ಗದ್ಗದಿಸಿದ, ಇಲ್ಲ, ಪ್ರಿಯೆ. ನಾನಿನ್ನೂ ಬದುಕಿದ್ದೇನೆ!
ಅವನ ತಲೆಯನ್ನು ತಲೆದಿಂಬಿಗೆ ಒತ್ತಿಹಿಡಿದು ಸಿಟ್ಟಿನಿಂದ ಹೇಳಿದಳು, ಸುಮ್ಮನಿರಿ. ಇವರು ವೈದ್ಯರು, ತಜ್ಞರು. ಅವರಿಗೆ ನಿಜ ತಿಳಿದಿರಲೇ ಬೇಕು!

*****  

೬೮. ವಿವೇಕಿ ಹಕೀಮನ ಕತೆ
ಸುಲ್ತಾನ ಕಮಾಲ್‌ ತನ್ನ ಅತ್ಯುತ್ತಮ ಆಸ್ಥಾನಿಕರೊಂದಿಗೆ ನೌಕೆಯೊಂದರಲ್ಲಿ ಸಮುದ್ರದಲ್ಲಿ ವಿಹರಿಸುತ್ತಿದ್ದ. ಆಸ್ಥಾನಿಕರ ಪೈಕಿ ಒಬ್ಬ ಪರ್ವತ ಪ್ರದೇಶದಿಂದ ಬಂದವನಾಗಿದ್ದ. ಇದು ಅವನ ಮೊದಲನೇ ನೌಕಾಯಾನವಾಗಿತ್ತು. ಇಲ್ಲಿಯ ವರೆಗೆ ಸಮುದ್ರ ತೀರವನ್ನೇ ನೋಡಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ಆತ ನೌಕೆಯ ಮೂಲೆಯೊಂದರಲ್ಲಿ ಕುಳಿತು ಅಳುತ್ತಿದ್ದ. ಒಮ್ಮೊಮ್ಮೆ ಕಿರಿಚುತ್ತಿದ್ದ, ನಡುಗುತ್ತಿದ್ದ, ಗೋಳಾಡುತ್ತಿದ್ದ. ಎಲ್ಲರೂ ಅವನೊಂದಿಗೆ ಮೃದುವಾಗಿಯೇ ವ್ಯವಹರಿಸುತ್ತಿದ್ದರು, ಅವನ ಭಯವನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದರು. ಅವರ ಎಲ್ಲ ಪ್ರಯತ್ನಗಳೂ ಅವನ ಕಿವಿಗಳ ಮೇಲೆ ಬೀಳುತ್ತಿದ್ದವೇ ವಿನಾ ಹೃದಯವನ್ನು ಮುಟ್ಟುತ್ತಿರಲಿಲ್ಲ.
ಕೊನೆಗೊಮ್ಮೆ ಸುಲ್ತಾನನಿಗೆ ಆ ಆಸ್ಥಾನಿಕನ ಗೋಳಾಟ ಅಸಹನೀಯವಾಗತೊಡಗಿತು. ಶುಭ್ರ ನೀಲವರ್ಣದ ಆಕಾಶದ ಕೆಳಗೆ ನೀಲವರ್ಣದ ಜಲರಾಶಿಯ ಮೇಲಿನ ವಿಹಾರದ ಆನಂದ ಸವಿಯುವುದು ಕಷ್ಟವಾಗತೊಡಗಿತು. ಆಗ  ತಂಡದಲ್ಲಿದ್ದ ವಿವೇಕಿ ಹಕೀಮ ಸುಲ್ತಾನನನ್ನು ಸಮೀಪಿಸಿ ಹೇಳಿದ, “ಮಹಾಪ್ರಭುಗಳೇ ನೀವು ಅನುಮತಿ ನೀಡಿದರೆ ಅವನು ಶಾಂತನಾಗುವಂತೆ ನಾನು ಮಾಡುತ್ತೇನೆ.”
ಆ ತಕ್ಷಣವೇ ಸುಲ್ತಾನ ಕಿಂಚಿತ್ತೂ ಯೋಚಿಸದೇ ಅನುಮತಿ ನೀಡಿದ. ಆಸ್ಥಾನಿಕನನ್ನು ಎತ್ತಿ ಸಮುದ್ರಕ್ಕೆ ಎಸೆಯುವಂತೆ ನಾವಿಕರಿಗೆ ಆಜ್ಞಾಪಿಸಿದ ಹಕೀಮ. ಬಲು ಸಂತೋಷದಿಂದ ಅವರು ಅಂತೆಯೇ ಮಾಡಿದರು. ತುಸುಕಾಲ ನೀರಿನಲ್ಲಿ ಅತ್ತಿತ್ತ ಹೊಯ್ದಾಡಿದ ಆಸ್ಥಾನಿಕ ಪುನಃ ತನ್ನನ್ನು ಮೇಲಕ್ಕೆ ಎತ್ತಿಕೊಳ್ಳುವಂತೆ ಗೋಗರೆಯತೊಡಗಿದ. ಹಕೀಮನ ಅನುಮತಿ ಪಡೆದು ನಾವಿಕರು ಅವನನ್ನು ನೀರಿನಿಂದ ಮೇಲೆತ್ತಿದರು. ಆನಂತರ ಆತ ನೌಕೆಯ ಮೂಲೆಯೊಂದರಲ್ಲಿ ಒಂದಿನಿತೂ ಸದ್ದು ಮಾಡದೆ ಕುಳಿತಿದ್ದ. ಅಂದಿನ ನಂತರ ಅವನು ಭಯಭೀತನಾದದ್ದನ್ನು ಯಾರೂ ನೋಡಲೇ ಇಲ್ಲ.
ಆಸ್ಥಾನಿಕನಲ್ಲಿ ಆದ ಬದಲಾವಣೆಯನ್ನು ನೋಡಿ ಆಶ್ಚರ್ಯಚಕಿತನಾದ ಸುಲ್ತಾನ ಹಕೀಮನನ್ನು ಕೇಳಿದ, ನೀನು ಇಂತು ಮಾಡಿದ್ದರ ಹಿಂದಿನ ಮರ್ಮ ಏನು?
ಹಕೀಮ ಉತ್ತರಿಸಿದ, ಅವನಿಗೆ ಸಮುದ್ರದ ಉಪ್ಪುನೀರಿನ ರುಚಿ ಹೇಗಿರುತ್ತದೆಂಬುದು ತಿಳಿದಿರಲೇ ಇಲ್ಲ. ಸಮುದ್ರದ ನೀರಿಗೆ ಬಿದ್ದರೆ ಎದುರಿಸಬೇಕಾದ ಅಪಾಯಗಳ ಅರಿವೂ ಅವನಿಗಿರಲಿಲ್ಲ. ನೌಕೆಯಲ್ಲಿ ಎಷ್ಟು ಸುರಕ್ಷಿತವಾಗಿ ಅವನು ಇದ್ದ ಎಂಬುದರ ಅರಿವೂ ಇರಲಿಲ್ಲ. ಅಪಾಯದ ಅರಿವು ಆದಾಗ ಮಾತ್ರ ಸುರಕ್ಷಿತತೆಯ ಮೌಲ್ಯದ ಅರಿವೂ ಆಗಲು ಸಾಧ್ಯ.”

***** 

೬೯. ಎರಡು ದೀಪಗಳ ಕತೆ
ಒಂದಾನೊಂದು ಕಾಲದಲ್ಲಿ ಬಲು ದೂರದ ದೇಶವೊಂದರಲ್ಲಿ ನೇರು ಎಂಬ ಹೆಸರಿನ ಒಬ್ಬ ಹೆಂಗಸು ಇದ್ದಳು. ಒಂದು ದಿನ ಅವಳು ತನ್ನ ಮನೆಯಿಂದ ಅನೇಕ ಮೈಲುಗಳಷ್ಟು ದೂರದಲ್ಲಿ ಇದ್ದ ಹಳ್ಳಿಯೊಂದರಲ್ಲಿ ಇದ್ದ ಮಹಾ ಜ್ಞಾನಿ ಎಂಬುದಾಗಿ ಖ್ಯಾತನಾಗಿದ್ದ ಸೂಫಿ ಒಬ್ಬನನ್ನು ಭೇಟಿ ಆಗಲೋಸುಗ ಪಯಣಿಸಿದಳು. ಆ ಹಳ್ಳಿಯನ್ನು ಕ್ಷೇಮವಾಗಿ ತಲುಪಿದ ಅವಳಿಗೆ ಸೂಫಿ ಹತ್ತಿರದಲ್ಲಿಯೇ ಇದ್ದ ಪರ್ವತದ ಸಮೀಪದಲ್ಲಿ ಆತ ವಾಸವಾಗಿರುವ ವಿಷಯ ತಿಳಿಯಿತು. ಕತ್ತಲಾಗುತ್ತಿದ್ದರೂ ಪರ್ವತದ ಬುಡದಲ್ಲಿ ಗೋಚರಿಸುತ್ತಿದ್ದ ಪ್ರಕಾಶಮಾನವಾದ ಬೆಳಕಿನತ್ತ ಆಕೆ ಪಯಣಿಸಿದಳು, ಅಲ್ಲಿ ಸೂಫಿ ವಾಸವಾಗಿದ್ದಾನೆ ಎಂಬ ನಂಬಿಕೆಯಿಂದ.
ಬೆಳಕಿನ ಆಕರವನ್ನು ತಲುಪಿದಾಗ ಅಲ್ಲಿ ಹಾತೆಗಳು ಸುತ್ತಲೂ ಹಾರುತ್ತಿದ್ದ ಎಣ್ಣೆಯ ದೀಪವೊಂದನ್ನು ಹೊರತುಪಡಿಸಿ ಬೇರೇನೂ ಇಲ್ಲದ್ದನ್ನು ಕಂಡು ಆಕೆಗೆ ಆಶ್ಚರ್ಯವಾಯಿತು. ಸುತ್ತಣ ಕತ್ತಲೆಗೆ ಆಕೆಯ ಕಣ್ಣುಗಳು ಒಗ್ಗಿದಾಗ ತುಸು ದೂರದಲ್ಲಿ ಮಂದವಾದ ಬೆಳಕು ಗೋಚರಿಸಿತು. ಅದನ್ನು ಸಮೀಪಿಸಿದಾಗ ಒಂದು ಮೋಂಬತ್ತಿಯ ಬೆಳಕಿನಲ್ಲಿ ಪುಸ್ತಕವೊಂದನ್ನು ಓದುತ್ತಿದ್ದ ಸೂಫಿ ಗೋಚರಿಸಿದ.
ನೇರು ಆತನಿಗೆ ನಮಸ್ಕರಿಸಿ ಕೇಳಿದಳು, “ಓ ಅಲ್ಲಿ ಹೆಚ್ಚು ಪ್ರಕಾಶಮಾನವಾದ ದೀಪ ಉರಿಯುತ್ತಿರುವಾಗ ಬಲು ಮಂದವಾದ ಈ ಬೆಳಕಿನ ಸಮೀಪ ಕುಳಿತು ಓದುತ್ತಿರುವುದೇಕೆ?”
ಸೂಫಿ ಉತ್ತರಿಸಿದ, “ಪ್ರಕಾಶಮಾನವಾದ ಆ ಬೆಳಕು ಇರುವುದು ಹಾತೆಗಳಿಗಾಗಿ. ಅದು ಅಲ್ಲಿ ಇರುವುದರಿಂದಲೇ ನಾನು ಈ ಮೋಂಬತ್ತಿಯ ಬೆಳಕಿನಲ್ಲಿ ಏಕಾಗ್ರತೆಯಿಂದ ಓದಲು ಸಾಧ್ಯವಾಗಿರುವುದು.”

***** 

೭೦. ಮೂವರು ಯಾತ್ರಿಕರ ಕತೆ
ಸುದೀರ್ಘವೂ ದಣಿಸಬಲ್ಲದ್ದೂ ಆದ ಯಾತ್ರೆಯ ಅವಧಿಯಲ್ಲಿ ಮೂವರು ಅಪರಿಚಿತರು ಸಂಗಾತಿಗಳಾಗಿ ತಮ್ಮೆಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಸುಖದುಃಖಗಳನ್ನು ಹಂಚಿಕೊಂಡು ಪಯಣಿಸುತ್ತಿದ್ದರು. ಅನೇಕ ದಿನಗಳು ಪಯಣಿಸಿದ ನಂತರ ಒಂದು ದಿನ ತಮ್ಮ ಹತ್ತಿರ ಒಂದು ತುಣುಕು ಬ್ರೆಡ್‌ ಮತ್ತು ಒಂದು ಗುಟುಕು ನೀರು ಮಾತ್ರ ಉಳಿದಿರುವ ಸಂಗತಿ ಅವರ ಗಮನಕ್ಕೆ ಬಂದಿತು. ಈ ಆಹಾರ ಮೂವರ ಪೈಕಿ ಯಾರಿಗೆ ಸೇರಬೇಕೆಂಬುದರ ಕುರಿತು ಅವರು ಜಗಳವಾಡಲು ಆರಂಭಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಉಳಿದಿದ್ದ ಬ್ರೆಡ್‌ ಹಾಗು ನೀರನ್ನು ತಮ್ಮೊಳಗೆ ಪಾಲು ಮಾಡಲು ಪ್ರಯತ್ನಿಸಿದರು, ಸಾಧ್ಯವಾಗಲಿಲ್ಲ.
ಕತ್ತಲಾಗುತ್ತಿದ್ದದ್ದರಿಂದ ಎಲ್ಲರೂ ನಿದ್ದೆ ಮಾಡುವುದು ಒಳಿತೆಂಬುದಾಗಿ ಒಬ್ಬ ಸಲಹೆ ನೀಡಿದ. ಮಾರನೆಯ ದಿನ ಎದ್ದಾಗ ತಮಗೆ ಬಿದ್ದ ಕನಸುಗಳನ್ನು ಜ್ಞಾಪಿಸಿಕೊಂಡು ಮೂವರೂ ಹೇಳಬೇಕೆಂದೂ ಆ ಪೈಕಿ ಹೆಚ್ಚು ಗಮನ ಸೆಳೆಯುವ ಕನಸು ಬಿದ್ದಾತನಿಗೆ ಉಳಿಕೆ ಆಹಾರ ಸೇರತಕ್ಕದ್ದೆಂದೂ ತೀರ್ಮಾನಿಸಿದರು.
ಮಾರನೇ ದಿನ ಬೆಳಗ್ಗೆ ಸೂರ್ಯೋದಯವಾದ ತಕ್ಷಣ ಎದ್ದು ಮೂವರೂ ತಮ್ಮತಮ್ಮ ಕನಸುಗಳನ್ನು ತುಲನೆ ಮಾಡುವ ಕಾರ್ಯ ಆರಂಭಿಸಿದರು.
ಮೊದಲನೆಯವ ಹೇಳಿದ, ನನ್ನ ಕನಸು ಇಂತಿತ್ತು: ವರ್ಣಿಸಲು ಸಾಧ್ಯವಿಲ್ಲದಷ್ಟು ಅದ್ಭುತವಾದ ಪ್ರಶಾಂತ ತಾಣಗಳಿಗೆ ಒಯ್ಯಲ್ಪಟ್ಟೆ. ಅಲ್ಲಿ ನನಗೊಬ್ಬ ವಿವೇಕೀ ಮಹಾಪುರುಷನ ದರ್ಶನವಾಯಿತು. ‘ನೀನು ಆಹಾರ ಪಡೆಯಲು ಅರ್ಹನಾಗಿರುವೆ. ಏಕೆಂದರೆ ನಿನ್ನ ಹಿಂದಿನ ಹಾಗು ಮುಂದಿನ ಜೀವನ ಪ್ರಶಂಸಾರ್ಹವಾದವು ಎಂಬುದಾಗಿ ಆತ ಹೇಳಿದ.”
ಎಂಥ ವಿಚಿತ್ರ,” ಉದ್ಗರಿಸಿದ ಎರಡನೆಯವ. “ಏಕೆಂದರೆ ನನ್ನ ಕನಸಿನಲ್ಲಿ ನನ್ನ ಹಿಂದಿನ ಹಾಗು ಮುಂದಿನ ಜೀವನವನ್ನು ನಾನೇ ನೋಡಿದೆ. ನನ್ನ ಮುಂದಿನ ಜೀವನದಲ್ಲಿ ನನಗೂ ಒಬ್ಬ ವಿವೇಕೀ ಮಹಾಪುರುಷ ಭೇಟಿಯಾಗಿ ಹೇಳಿದ, ‘ಆಹಾರ ಪಡೆಯಲು ನಿನ್ನ ಮಿತ್ರರಿಗಿಂತ ನೀನೇ ಅರ್ಹ. ಏಕೆಂದರೆ ನೀನು ಅವರಿಗಿಂತ ಹೆಚ್ಚು ಕಲಿತವ ಹಾಗು ಸಹನೆಯುಳ್ಳವ. ಮುಂದೆ ನೀನು ಮನುಕುಲಕ್ಕೆ ಮಾರ್ಗದರ್ಶನ ಮಾಡುವವನು. ಆದ್ದರಿಂದ ನಿನ್ನನ್ನು ಚೆನ್ನಾಗಿ ಪೋಷಿಸಬೇಕು’.”
ಮೂರನೆಯವ ಹೇಳಿದ, “ನನ್ನ ಕನಸಿನಲ್ಲಿ ನಾನೇನನ್ನೂ ನೋಡಲಿಲ್ಲ, ಏನನ್ನೂ ಕೇಳಲಿಲ್ಲ, ಏನನ್ನೂ ಹೇಳಲಿಲ್ಲ. ಅದಮ್ಯ ಶಕ್ತಿಯೊಂದು ಬಲವಂತವಾಗಿ ನಾನು ಎದ್ದು ಬ್ರೆಡ್ ಹಾಗು ನೀರು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಅವನ್ನು ಅಲ್ಲಿಯೇ ಆಗಲೇ ಸೇವಿಸುವಂತೆ ಮಾಡಿತು. ನಾನು ಮಾಡಿದ್ದೇ ಅಷ್ಟು.”
ಉಳಿದ ಇಬ್ಬರಿಗೆ ಇದನ್ನು ಕೇಳಿ ಬಲು ಕೋಪ ಬಂದಿತು. ನಿಗೂಢ ಶಕ್ತಿ ಆಹಾರ ಸೇವಿಸುವಂತೆ ಬಲಾತ್ಕರಿಸಿದಾಗ ತಮ್ಮನ್ನು ಏಕೆ ಎಬ್ಬಿಸಲಿಲ್ಲ ಎಂಬುದನ್ನು ಅವರು ತಿಳಿಯಬಯಸಿದರು.
ಅವನು ಉತ್ತರಿಸಿದ, “ನೀವು ಇಲ್ಲಿಂದ ಬಹು ದೂರದಲ್ಲಿ ಇದ್ದಿರಿ! ನಿಮ್ಮಲ್ಲಿ ಒಬ್ಬರು ಬಹು ದೂರದ ತಾಣಕ್ಕೆ ಒಯ್ಯಲ್ಪಟ್ಟಿದ್ದಿರಿ, ಇನ್ನೊಬ್ಬರು ಬೇರೊಂದು ಕಾಲದಲ್ಲಿ ಇದ್ದಿರಿ. ಅಂದ ಮೇಲೆ ನಾನು ಕರೆದರೆ ನಿಮಗೆ ಕೇಳುವುದಾದರೂ ಹೇಗೆ?”

***** 

೭೧. ಮಿಠಾಯಿ ಹರಿವಾಣದ ಕತೆ
ಮೌಲಾನ ರೂಮಿಯ ನಿಷ್ಠಾವಂತ ಅನುಯಾಯಿಯಾಗಿದ್ದ ವ್ಯಾಪಾರಿಯೊಬ್ಬ ಮೆಕ್ಕಾಗೆ ಯಾತ್ರೆ ಹೋದ. ಅವನು ಯಾತ್ರೆಯ ಅಂತಿಮ ಘಟ್ಟ ತಲುಪಿದಾಗ ದೇವರಿಗೆ ಧನ್ಯವಾದ ಅರ್ಪಿಸುವುದರ ಪ್ರತೀಕವಾಗಿ ಬಡವರಿಗೆ ಹಾಗು ಬಂಧುಗಳಿಗೆ ಹಂಚಲೋಸುಗ ಅವನ ಪತ್ನಿ ಕೆಲವು ಮಿಠಾಯಿಗಳನ್ನು ತಯಾರಿಸಿದಳು. ಸ್ವಲ್ಪ ಮಿಠಾಯಿಗಳನ್ನು ರೂಮಿಗೆ ಕಳುಹಿಸಿದಳು. ಆ ಮಿಠಾಯಿಗಳನ್ನು ತನ್ನೊಂದಿಗೆ ಹಂಚಿಕೊಂಡು ತಿನ್ನಲೋಸುಗ ಅವನು ತನ್ನ ಶಿಷ್ಯರನ್ನು ಆಹ್ವಾನಿಸಿದನು. ಅವನ ಶಿಷ್ಯರೆಲ್ಲರೂ ಹೊಟ್ಟೆತುಂಬುವಷ್ಟು ಮಿಠಾಯಿಗಳನ್ನು ತಿಂದರೂ ಅದು ಮುಗಿಯಲಿಲ್ಲ.
ಆಗ ರೂಮಿ ಆ ಮಿಠಾಯಿ ತಟ್ಟೆಯನ್ನು ಆಶ್ರಮದ ತಾರಸಿಯ ಮೇಲಕ್ಕೆ ಒಯ್ದು ಅಲ್ಲಿ ಯಾರೂ ಇಲ್ಲದೇ ಇದ್ದಾಗ್ಯೂ ಗಟ್ಟಿಯಾಗಿ ಹೇಳಿದ, “ನಿನ್ನ ಪಾಲನ್ನು ತೆಗೆದುಕೊ.”
ರೂಮಿ ಪುನಃ ಶಿಷ್ಯರಿದ್ದಲ್ಲಿಗೆ ಬರಿಗೈಯಲ್ಲಿ ಬಂದು ಹೇಳಿದ, “ಮೆಕ್ಕಾದಲ್ಲಿ ಇರುವ ವ್ಯಾಪಾರಿಗೆ ಅವನ ಪಾಲನ್ನು ಕಳುಹಿಸಿದ್ದೇನೆ.” ಆವನ ಈ ಹೇಳಿಕೆ ಶಿಷ್ಯರನ್ನು ತಬ್ಬಿಬ್ಬಾಗಿಸಿತು.
ವ್ಯಾಪಾರಿ ಮನೆಗೆ ಹಿಮ್ಮರಳಿದ ನಂತರ ರೂಮಿಯನ್ನು ಭೇಟಿ ಮಾಡಿ ಗೌರವತೋರಿದ. ಆ ದಿನ ವ್ಯಾಪಾರಿಯ ಪತ್ನಿ ಹಿಮ್ಮರಳಿದ ಪತಿಯ ಗಂಟುಮೂಟೆ ಬಿಚ್ಚಿದಾಗ ಅದರಲ್ಲಿದ್ದ ಮಿಠಾಯಿ ತಟ್ಟೆಯನ್ನು ನೋಡಿ ಆಶ್ಚರ್ಯ ಪಟ್ಟಳು. ಆ ತಟ್ಟೆ ಅವನಿಗೆ ಹೇಗೆ ಸಿಕ್ಕಿತು ಎಂಬುದನ್ನು ವಿಚಾರಿಸಿದಳು.
ಅವನು ಹೇಳಿದ, “ಮೆಕ್ಕಾದ ಹೊರವಲಯದಲ್ಲಿ ಇದ್ದ ಶಿಬಿರದಲ್ಲಿ ನಾನು ಇದ್ದಾಗ ಒಂದು ದಿನ ಈ ಮಿಠಾಯಿ ತಟ್ಟೆಯನ್ನು ಯಾರೋ ನನ್ನ ಗುಡಾರದ ಪರದೆಯ ಅಡಿಯಿಂದ ಒಳತಳ್ಳಿದರು. ತಟ್ಟೆಯನ್ನು ತಳ್ಳಿದ್ದು ಯಾರೆಂಬುದನ್ನು ತಿಳಿಯಲೋಸುಗ ನನ್ನ ಸೇವಕರು ಹೊರಗೋಡಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲವಂತೆ.”
ರೂಮಿಯ ಈ ಪವಾಡ ಸದೃಶ ಕಾರ್ಯಕ್ಕೆ ಬೆರಗಾದ ದಂಪತಿಗಳು ರೂಮಿಯನ್ನು ಭೇಟಿ ಮಾಡಿ ತಮ್ಮ ಗುರುನಿಷ್ಠೆಯನ್ನು ಇನ್ನೊಮ್ಮೆ ಪ್ರಕಟಿಸಿದರು. ತನ್ನ ಮೇಲೆ ಅವರು ಇಟ್ಟಿದ್ದ ನಿಷ್ಠೆಯಿಂದ ಸುಪ್ರೀತನಾದ ದೇವರು ತಾನು ಈ ಕೃತ್ಯವೆಸಗುವಂತೆ ಮಾಡಿದ ಎಂಬುದಾಗಿ ಘೋಷಿಸಿದ ರೂಮಿ.

***** 

೭೨. ಜ್ಞಾನಿಯೊಬ್ಬನ ಕತೆ
ಖ್ಯಾತ ಜ್ಞಾನಿ ಸಾದತ್‌ ಎಂಬಾತ ಮಾನವ ವಸತಿ ಸ್ಥಳಗಳಿಂದ ದೂರದಲ್ಲಿ ವಾಸಿಸುವ ಉದ್ದೇಶದಿಂದ ಹಿಮಾಲಯ ಪರ್ವತ ಶ್ರೇಣಿಯ ಪರ್ವತವೊಂದರಲ್ಲಿ ಬಲು ಎತ್ತರ ತಾಣವೊಂದರಲ್ಲಿ ವಾಸಿಸುತ್ತಿದ್ದ. ಬಲು ಸರಳ ಜೀವಿಯಾದ ಆತ  ಬಹು ಪಾಲು ಸಮಯವನ್ನು ಧ್ಯಾನ ಮಾಡುವುದರಲ್ಲಿ ಕಳೆಯುತ್ತಿದ್ದ. ಇಂತಿದ್ದರೂ ಅವನನ್ನು ಭೇಟಿ ಮಾಡಿ ತಮ್ಮ ಜೀವನಕ್ಕೆ ಅನ್ವಯಿಸಬಹುದಾದ ಸಲಹೆ ಪಡೆಯಲೋಸುಗ ಬಲು ದೂರದ ಊರುಗಳವರೂ ಅನೇಕ ದಿನಗಳ ಕಾಲ ಪಯಣಿಸಿ ಬರುತ್ತಿದ್ದರು.
ಒಮ್ಮೆ ತಮ್ಮ ಸಮಸ್ಯೆಗಳನ್ನು ಸಾದತ್‌ ಅವರಿಗೆ ತಿಳಿಸಿ ಯುಕ್ತ ಸಲಹೆ ಪಡೆಯಲೋಸುಗ ಬಂದ ಗುಂಪೊಂದರ ಸದಸ್ಯರು ಯಾರು ಮೊದಲು ಮಾತನಾಡಬೇಕೆಂಬ ವಿಷಯದ ಕುರಿತು ತಮ್ಮೊಳಗೆ ಜಗಳವಾಡತೊಡಗಿದರು. ಶಾಂತಚಿತ್ತನಾದ ಜ್ಞಾನಿ ಸಾದತ್‌ ತುಸು ಕಾಲ ಈ ಗದ್ದಲವನ್ನು ನೋಡಿ ಕೊನೆಗೊಮ್ಮೆ ಅಬ್ಬರಿಸಿದ, “ಸದ್ದಿಲ್ಲದಿರಿ.”
ಭಯವಿಸ್ಮಿತರಾದ ಜನ ತಕ್ಷಣವೇ ಸುಮ್ಮನಾದರು. ತದನಂತರ ಸಾದತ್‌ ಹೇಳಿದ, “ಈಗ ಎಲ್ಲರೂ ವೃತ್ತಾಕಾರದಲ್ಲಿ ನೆಲದಲ್ಲಿ ಕುಳಿತು ನಾನು ಹಿಮ್ಮರಳುವುದನ್ನು ಎದುರುನೋಡಿ.”
ಕೂಡಲೆ ಸಾದತ್‌ ತನ್ನ ಕುಟೀರದೊಳಕ್ಕೆ ಹೋಗಿ ತುಸು ಸಮಯವಾದ ನಂತರ ಕಾಗದದ ಹಾಳೆಗಳು, ಲೇಖನಿಗಳು, ಒಂದು ಬೆತ್ತದ ಬುಟ್ಟಿ ಹಿಡಿದುಕೊಂಡು ಹಿಮ್ಮರಳಿದ. ಕಾಗದ ಹಾಗು ಲೇಖನಿಗಳನ್ನು ಜನರಿಗೆ ವಿತರಿಸಿದ. ಬುಟ್ಟಿಯನ್ನು ವೃತ್ತದ ಮಧ್ಯದಲ್ಲಿ ಇಟ್ಟ. ಪ್ರತಿಯೊಬ್ಬರೂ ತಮ್ಮನ್ನು ಕಾಡುತ್ತಿರುವ ಅತೀ ಮುಖ್ಯ ಸಮಸ್ಯೆಯನ್ನು ಅದರಲ್ಲಿ ಬರೆದು ಬುಟ್ಟಿಯೊಳಕ್ಕೆ ಹಾಕುವಂತೆ ಹೇಳಿದ. ಎಲ್ಲರೂ ಸೂಚನೆಯಂತೆ ಮಾಡಿ ಆದ ನಂತರ ಕಾಗದಗಳು ಇರುವ ಸ್ಥಳಗಳು ಬದಲಾಗುವಂತೆ ಬುಟ್ಟಿಯನ್ನು ಜೋರಾಗಿ ಕುಲುಕಿ ಹೇಳಿದ, “ಈಗ ಈ ಬುಟ್ಟಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸಿ. ಅಂತು ಮಾಡುವಾಗ ಬುಟ್ಟಿ ತಮ್ಮ ಕೈಗೆ ಬಂದೊಡನೆ ಅತ್ಯಂತ ಮೇಲಿರುವ ಕಾಗದವನ್ನು ತೆಗೆದುಕೊಳ್ಳಿ. ಆ ಕಾಗದದಲ್ಲಿ ಬರೆದಿರುವ ಸಮಸ್ಯೆಯನ್ನು ಓದಿ. ನೀವು ಬರೆದಿದ್ದ ಸಮಸ್ಯೆಗೆ ಬದಲಾಗಿ ಅದೇ ನಿಮ್ಮ ಮುಖ್ಯ ಸಮಸ್ಯೆ ಎಂಬುದಾಗಿ ನೀವು ಭಾವಿಸಿದಲ್ಲಿ ಆ ಕಾಗದವನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ, ಅಂತಿಲ್ಲದೇ ಇದ್ದರೆ ನೀವು ಬರೆದಿದ್ದ ಸಮಸ್ಯೆಯನ್ನೇ ಮರಳಿ ಪಡೆಯಿರಿ.”
ಒಬ್ಬೊಬ್ಬರಾಗಿ ಬುಟ್ಟಿಯಿಂದ ಕಾಗದಗಳನ್ನು ತೆಗೆದುಕೊಂಡು ಬರೆದಿದ್ದ ಸಮಸ್ಯೆಗಳನ್ನು ಓದಿದರು. ಪ್ರತಿಯೊಬ್ಬರಿಗೂ  ಇತರರ ಸಮಸ್ಯೆ ತಮ್ಮ ಸಮಸ್ಯೆಗಿಂತ ದಿಗಿಲುಗೊಳಿಸುವಷ್ಟು ದೊಡ್ಡದು ಅನ್ನಿಸಿತು. ಅಂತಿಮವಾಗಿ ಪ್ರತಿಯೊಬ್ಬರೂ ತಮ್ಮ ಸಮಸ್ಯೆ ಬರೆದಿದ್ದ ಕಾಗದವನ್ನೇ ತೆಗೆದುಕೊಂಡು ಸಮಾಧಾನ ಪಟ್ಟುಕೊಂಡರು. ಸಮಸ್ಯೆಗಳ ಕುರಿತಾಗಿ ಹೊಸ ಅರಿವು ಮೂಡಿಸಿದ್ದಕ್ಕಾಗಿ ಎಲ್ಲರೂ ಸಾದತ್‌ನಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

***** 

೭೩. ಈರುಳ್ಳಿ ಕಳ್ಳನ ಕತೆ
ಬಹು ದೂರದ ನಾಡೊಂದರಲ್ಲಿ ರೇಝಾ ಎಂಬವನೊಬ್ಬನಿದ್ದ. ಈರುಳ್ಳಿ ಕದ್ದು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಒಳ್ಳೆಯ ಲಾಭ ಗಳಿಸಲು ಆತ ಒಂದು ರಾತ್ರಿ ನಿರ್ಧರಿಸಿದ. ಆ ರಾತ್ರಿ ಬೇಸಿಗೆಯ ರಾತ್ರಿಯಾಗಿದ್ದದ್ದರಿಂದ ಚಳಿ ಇರಲಿಲ್ಲ, ಸ್ಪಷ್ಟವಾಗಿ ನೋಡಲು ಸಾಧ್ಯವಾಗುವಷ್ಟು ಬೆಳದಿಂಗಳೂ ಇತ್ತು. ದೊಡ್ಡ ಬುಟ್ಟಿಯೊಂದನ್ನು ತೆಗೆದುಕೊಂಡು ಕುದುರೆಯೊಂದನ್ನೇರಿ ಪಕ್ಕದ ಹಳ್ಳಿಯಲ್ಲಿ ಈರುಳ್ಳಿ ಬೆಳೆಯುತ್ತಿದ್ದ ಮಹಮ್ಮದ್‌ ಎಂಬಾತನ ಹೊಲಕ್ಕೆ ಹೋದ.
ಈರುಳ್ಳಿ ಬೆಳೆಯುತ್ತಿದ್ದ ಹೊಲವನ್ನು ತಲುಪಿದ ನಂತರ ಯಾರೂ ತನ್ನನ್ನು ನೋಡುತ್ತಿಲ್ಲವೆಂಬುದನ್ನು ಖಾತರಿ ಪಡಿಸಿಕೊಂಡು ಈರುಳ್ಳಿಗಳನ್ನು ಸಂಗ್ರಹಿಸಲಾರಂಭಿಸಿದ. ಸುಮಾರು ೧೦೦ ಈರುಳ್ಳಿಗಳನ್ನು ಕಟಾವು ಮಾಡಿದಾಗ ಅವನು ಕೊಂಡೊಯ್ದಿದ್ದ ಬುಟ್ಟಿ ತುಂಬಿತು. ಆಗ ಆತ ಕುದುರೆಯನ್ನೇರಿ ಮನೆಗೆ ಹಿಂದಿರುಗಲು ನಿರ್ಧರಿಸಿದ. ಕುದುರೆಯ ಮೇಲೆ ಭಾರವಾದ ಬುಟ್ಟಿಯನ್ನು ಇಟ್ಟಾಗ ಅದು ದೊಡ್ಡ ಧ್ವನಿಯಲ್ಲಿ ಕೆನೆಯಿತು.
ಹೊಲದಲ್ಲಿಯೇ ಇದ್ದ ಮನೆಯೊಳಗೆ ಮಲಗಿದ್ದ ರೈತನ ಹೆಂಡತಿಗೆ ಎಚ್ಚರವಾಗಿ ಈ ಹೇಷಾರವ ಎಲ್ಲಿಂದ ಕೇಳಿಬರುತ್ತಿದೆ ಎಂಬುದನ್ನು ತಿಳಿಯಲೋಸುಗ ಕಿಟಕಿಯಿಂದ ನೋಡಿದಳು. ಕುದುರೆಯನ್ನೂ ರೇಝಾನನ್ನೂ ಹೊಲದಲ್ಲಿ ಕಂಡ ಕೂಡಲೆ ಆಕೆ ತನ್ನ ಗಂಡನನ್ನೂ ಮಕ್ಕಳನ್ನೂ ಎಬ್ಬಿಸಿದಳು. ರೇಝಾ ಓಡಿ ಹೋಗುವ ಮುನ್ನವೇ . ಅವರೆಲ್ಲರೂ ಓಡಿ ಬಂದು ಅವನನ್ನು ಕುದುರೆ ಮತ್ತು ಈರುಳ್ಳಿ ಸಹಿತ ಹಿಡಿದರು.
ಬೆಳಗ್ಗೆ ಆತನನ್ನು ಅವರು ಹಳ್ಳಿಯ ಮುಖ್ಯಸ್ಥನ ಎದುರು ಹಾಜರು ಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯಸ್ಥ ರೇಝಾ ತಪ್ಪಿತಸ್ಥ ಎಂಬುದಾಗಿ ಘೋಷಿಸಿದ. ಈ ಮುಂದೆ ನಮೂದಿಸಿದ ಮೂರು ತೆರನಾದ ಶಿಕ್ಷೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ರೇಝಾನಿಗೆ ಸೂಚಿಸಿದ: ೧೦೦ ಚಿನ್ನದ ನಾಣ್ಯಗಳನ್ನು ಪಾವತಿಸುವುದು, ಕದ್ದ ೧೦೦ ಈರುಳ್ಳಿಗಳನ್ನು ತಿನ್ನುವುದು, ೧೦೦ ಚಡಿಯೇಟು ಸ್ವೀಕರಿಸುವುದು.
೧೦೦ ಈರುಳ್ಳಿಗಳನ್ನು ತಿನ್ನುವ ಶಿಕ್ಷೆಯನ್ನು ರೇಝಾ ಒಪ್ಪಿಕೊಂಡ. ಈರುಳ್ಳಿ ತಿನ್ನಲಾರಂಭಿಸಿದ ತುಸು ಸಮಯದ ನಂತರ ಆತನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿಯಲಾರಂಭಿಸಿತು, ಅತೀ ಸಂಕಟದ ಸ್ಥಿತಿ ತಲುಪಿದ. ೨೫ ಈರುಳ್ಳಿಗಳನ್ನು ಕಷ್ಟಪಟ್ಟು ತಿಂದು ಮುಗಿಸಿದಾಗ ಇನ್ನೂ ೭೫ ಈರುಳ್ಳಿಗಳನ್ನು ತಿನ್ನುವುದು ಅಸಾಧ್ಯ ಅನ್ನಿಸಿತು. ಅದಕ್ಕೆ ಬದಲಾಗಿ ೧೦೦ ಚಡಿಯೇಟುಗಳ ಶಿಕ್ಷೆ ಸ್ವೀಕರಿಸಲು ನಿರ್ಧರಿಸಿದ.  ಮುಖ್ಯಸ್ಥನೂ ಈ ಬದಲಾವಣೆಗೆ ಸಮ್ಮತಿಸಿದ. ೧೦ ಚಡಿಯೇಟುಗಳನ್ನು ಆಗುತ್ತಿದ್ದ ಹಿಂಸೆ ತಡೆದುಕೊಳ್ಳಲಾಗದೆ ಚಡಿಯೇಟಿನ ಶಿಕ್ಷೆ ನಿಲ್ಲಿಸುವಂತೆ ಅಂಗಲಾಚಿದ. ಅಂತಿಮವಾಗಿ ೧೦೦ ಚಿನ್ನದ ನಾಣ್ಯಗಳನ್ನು ಪಾವತಿಸಲು ಒಪ್ಪಿಕೊಂಡು ಮುಕ್ತನಾದ!

***** 

೭೪. ವಾಚಾಳಿ ಸೌದೆ ಕಡಿಯುವವನ ಕತೆ
ಒಂದು ಊರಿನಲ್ಲಿ ಊರ ಹೊರಗಿದ್ದ ದೊಡ್ಡ ಕಾಡಿನಲ್ಲಿ ಸೌದೆ ಕಡಿದು ತಂದು ಮಾರಿ ಜೀವಿಸುತ್ತಿದ್ದವನೊಬ್ಬನಿದ್ದ. ಸುಮಾರು ಇಪ್ಪತ್ತು ವರ್ಷ ಕಾಲ ಇಂತು ಜೀವಿಸಿದ ನಂತರ ಅವನಿಗೇಕೋ ತನ್ನ ವೃತ್ತಿಯ ಕುರಿತು ಜಿಗುಪ್ಸೆ ಮೂಡಿತು. ಒಂದು ದಿನ ಎಂದಿನಂತೆ ಕಾಡಿಗೆ ಹೋದ ಆತ ಎಲ್ಲ ಮರಗಳಿಗೂ ಕೇಳಲಿ ಎಂಬ ಉದ್ದೇಶದಿಂದ ಸಾಧ್ಯವಿರುವಷ್ಟು ಗಟ್ಟಿಯಾಗಿ ಬೊಬ್ಬೆಹೊಡೆದ, “ಇನ್ನು ಈ ಕೆಲಸ ಮಾಡಲು ನನಗೆ ಇಷ್ಟವಿಲ್ಲ! ಇಂದು ಕೊನೆಯ ಸಲ ಒಂದು ಹೊರೆ ಸೌದೆ ಕಡಿಯುತ್ತೇನೆ. ನಂತರ ನಮಗೆ ಈ ದುಸ್ಥಿತಿ ಬರಲು ಕಾರಣನಾದ ನಮ್ಮ ಆದಿಪುರುಷ ಆದಮ್‌ನ ಮೂಳೆಗಳನ್ನು ಹುಡುಕುತ್ತೇನೆ. ಅವು ದೊರೆತೊಡನೆ ಸುಟ್ಟು ಹಾಕುತ್ತೇನೆ.”
ಆ ಕ್ಷಣದಲ್ಲಿ ದೇವರು ಒಂದು ಹೆಣ್ಣಿನ ರೂಪದಲ್ಲಿ ಒಬ್ಬ ದೇವದೂತನನ್ನು ಅವನ ಹತ್ತಿರಕ್ಕೆ ಕಳುಹಿಸಿದರು. ನೀನೇನು ಮಾಡುತ್ತಿರುವಿ ಎಂಬುದಾಗಿ ಆಕೆ ಕೇಳಿದಾಗ ಸೌದೆ ಕಡಿಯುವವ ಹೇಳಿದ, “ಆದಮ್‌ನ ಮೂಳೆಗಳನ್ನು ನಾನು ಹುಡುಕುತ್ತಿದ್ದೇನೆ. ಅವನಿಂದಾಗಿ ನಮಗಿಂತಹ ದುಸ್ಥಿತಿ ಬಂದಿರುವುದರಿಂದ ಅವನ ಮೂಳೆಗಳನ್ನು ಸುಟ್ಟು ಹಾಕಬೇಕೆಂದುಕೊಂಡಿದ್ದೇನೆ.”
ಆಕೆ ಕೇಳಿದಳು, “ಈ ಬಳಲಿಸುವ ಕಠಿನ ಕಾಯಕದಿಂದ ನಿನ್ನನ್ನು ಯಾರಾದರೂ ಮುಕ್ತಗೊಳಿಸಿದರೆ ಏನು ಮಾಡುವೆ?”
ಬಲು ಆನಂದದಿಂದ ಸೌದೆ ಕಡಿಯುವವ ಉತ್ತರಿಸಿದ, “ಅವರಿಗೆ ನಾನು ಸಾವಿರ ಸಲ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.”
ಹಾಗಾದರೆ ನಾನು ಈಗಲೇ ನಿನ್ನನ್ನು ಉದ್ಯಾನವೊಂದಕ್ಕೆ ರವಾನೆ ಮಾಡುತ್ತೇನೆ. ಅಲ್ಲಿ ನೀನು ಯಾವ ಕೆಲಸವನ್ನೂ ಮಾಡಬೇಕಾಗಿಲ್ಲ. ಆದರೆ ನೀನು ನನಗೊಂದು ವಚನ ಕೊಡಬೇಕು - ಅಲ್ಲಿ ನೀನು ಏನೇ ನೋಡಿದರೂ ಒಂದೇ ಒಂದು ಪದವನ್ನೂ ಉಚ್ಚರಿಸಕೂಡದು.”
ಸೌದೆ ಕಡಿಯುವವ ಈ ಷರತ್ತಿಗೆ ಒಪ್ಪಿಗೆ ಸೂಚಿಸಿದ ಕೂಡಲೆ ಆಕೆ ಜೋರಾಗಿ ಚಪ್ಪಾಳೆ ತಟ್ಟಿದಳು. ತಕ್ಷಣ ಎತ್ತರವಾದ ಮರಗಳೂ ಸ್ಫಟಿಕಶುಭ್ರ ನೀರು ಹರಿಯುತ್ತಿದ್ದ ತೊರೆಗಳೂ ಸ್ವಾದಿಷ್ಟ ಹಣ್ಣುಗಳೂ ಇದ್ದ ಸುಂದರ ಉದ್ಯಾನದಲ್ಲಿ ಸೌದೆಕಡಿಯುವವ ಇದ್ದ.
ತುಸು ಸಮಯದ ನಂತರ ಅಲ್ಲಿ ಒಬ್ಬ ಸೌದೆಗಾಗಿ ಮರ ಕಡಿಯುತ್ತಿದ್ದದ್ದನ್ನು ಸೌದೆಕಡಿಯುವವ ನೋಡಿದ. ಆತ ಒಣಗಿದ ಕೊಂಬೆಗಳನ್ನು ಕಡಿಯುವುದಕ್ಕೆ ಬದಲಾಗಿ ಹಸಿ ಕೊಂಬೆಗಳನ್ನು ಕಡಿಯುತ್ತಿದ್ದ. ತಾನು ಕೊಟ್ಟ ವಚನವನ್ನು ಜ್ಞಾಪಿಸಿಕೊಂಡ ಸೌದೆಕಡಿಯುವವ ಮಾತನಾಡದೆ ಸ್ವಲ್ಪ ಕಾಲ ಸುಮ್ಮನಿದ್ದ. ಕೊನೆಗೆ ತನ್ನನ್ನು ತಾನು ಅಂಕೆಯಲ್ಲಿಟ್ಟುಕೊಳ್ಳಲಾರದೆ ಹೇಳಿದ, “ ಅಯ್ಯಾ, ಕಡಿಯಬೇಕಾದದ್ದು ಒಣಕೊಂಬೆಗಳನ್ನು ಮಾತ್ರ ಹಸಿ ಕೊಂಬೆಗಳನ್ನು ಅಲ್ಲ ಎಂಬುದು ನಿನಗೆ ತಿಳಿದಿಲ್ಲವೇ?”
ಅವನು ಸೌದೆ ಕಡಿಯುವುದನ್ನು ನಿಲ್ಲಿಸಿ ಕೇಳಿದ, “ನೀನು ಇಲ್ಲಿ ಬಹಳ ದಿನಗಳಿಂದ ಇರುವೆಯಾ?”
ಮರು ಕ್ಷಣದಲ್ಲಿಯೇ ಸೌದೆಕಡಿಯುವವ ಕೊಡಲಿ ಸಮೇತ ಅವನ ಹಳ್ಳಿಯಲ್ಲಿ ಇದ್ದ. ಬಲು ದುಃಖದಿಂದ ಆತ ಕೈಗಳಿಂದ ಎದೆಗೆ ಹೊಡೆದುಕೊಳ್ಳುತ್ತಾ ಗೋಳಾಡಲಾರಂಭಿಸಿದ. ಹೆಣ್ಣಿನ ರೂಪದ ದೇವದೂತ ಪುನಃ ಪ್ರತ್ಯಕ್ಷವಾಗಿ ನಡೆದದ್ದೇನು ಎಂಬುದನ್ನು ವಿಚಾರಿಸಿದಳು. ನಡೆದದ್ದು ಏನು ಎಂಬುದನ್ನು ಸೌದೆಕಡಿಯುವವ ವಿವರಿಸಿದಾಗ ಅವಳು ಕೇಳಿದಳು, “ಮಾತನಾಡಕೂಡದೆಂದು ನಾನು ನಿನಗೆ ಹೇಳಿರಲಿಲ್ಲವೇ?”
ಪುನಃ ಅಲ್ಲಿಗೆ ನನ್ನನ್ನು ಒಯ್ದರೆ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಎಂಬುದಾಗಿ ಭರವಸೆ ನೀಡುತ್ತೇನೆ,” ಎಂಬುದಾಗಿ ಆತ ಹೇಳಿದ.
ದೇವದೂತ ಪುನಃ ಚಪ್ಪಾಳೆ ತಟ್ಟಿದ ತಕ್ಷಣವೇ ಆತ ಪುನಃ ದೇವಲೋಕದ ಉದ್ಯಾನದಲ್ಲಿ ಇದ್ದ.
ಸ್ವಲ್ಪ ಸಮಯದ ನಂತರ ಉದ್ಯಾನದಲ್ಲಿ ಜಿಂಕೆಯೊಂದು ಅತ್ತಿಂದಿತ್ತ ಓಡಾಡುತ್ತಿರುವುದನ್ನೂ ಅದನ್ನು ಹಿಡಿಯಲೋಸುಗ ಮುದುಕನೊಬ್ಬ ಕುಂಟಿಕೊಂಡು ಅದರ ಹಿಂದೆ ಹೋಗುತ್ತಿರುವುದನ್ನೂ ನೋಡಿದ. ಹಿಂದುಮುಂದು ಆಲೋಚಿಸದೇ ಸೌದೆಕಡಿಯುವವ ಗಟ್ಟಿಯಾಗಿ ಕೂಗಿ ಹೇಳಿದ, “ಅಜ್ಜ, ಜಿಂಕೆ ಅತ್ತಿಂದಿತ್ತ ನೆಗೆದಾಡುತ್ತಿದೆ. ಅದರ ಹಿಂದೆ ಕುಂಟುತ್ತಾ ಹೋಗಿ ಹಿಡಿಯುವ ಪ್ರಯತ್ನ ಯಾವಾಗ ನಿಲ್ಲಿಸುತ್ತೀರಿ?” ಮುದುಕ ನಿಂತು ಕೇಳಿದ, “ನೀನು ಇಲ್ಲಿ ಬಹಳ ದಿನಗಳಿಂದ ಇರುವೆಯಾ?”
ಮರು ಕ್ಷಣದಲ್ಲಿಯೇ ಸೌದೆಕಡಿಯುವವ ಕೊಡಲಿ ಸಮೇತ ಅವನ ಹಳ್ಳಿಯಲ್ಲಿ ಇದ್ದ. ಪುನಃ ಬಲು ದುಃಖದಿಂದ ಆತ ಕೈಗಳಿಂದ ಎದೆಗೆ ಹೊಡೆದುಕೊಳ್ಳುತ್ತಾ ಗೋಳಾಡಲಾರಂಭಿಸಿದ. ಹೆಣ್ಣಿನ ರೂಪದ ದೇವದೂತ ಪುನಃ ಪ್ರತ್ಯಕ್ಷವಾದ.
ದಯವಿಟ್ಟು ನನಗೆ ಕರುಣೆ ತೋರಿಸಿ. ಇನ್ನೊಂದು ಅವಕಾಶ ನನಗೆ ಕೊಡಿ. ಈ ಬಾರಿಯೂ ಮಾತನಾಡಿದರೆ ನೀವು ನನ್ನನ್ನು ಶಿಕ್ಷಿಸಬಹುದು,” ಎಂಬುದಾಗಿ ಗೋಗರೆದ ಸೌದೆಕಡಿಯುವವ. ಅದಕ್ಕೆ ದೇವದೂತ ಸಮ್ಮತಿಸಿ ಪುನಃ ಚಪ್ಪಾಳೆ ತಟ್ಟಿ ದೇವಲೋಕದ ಉದ್ಯಾನಕ್ಕೆ ಕಳುಹಿಸಿದ.
ತನ್ನ ಹಿಂದಿನ ತಪ್ಪುಗಳ ಅರಿವು ಇದ್ದ್ದರಿಂದ ಸೌದೆಕಡಿಯುವವ ಮೂರು ದಿಗಳನ್ನು ಮೌನವಾಗಿದ್ದುಕೊಂಡೇ ಕಳೆದ. ಗಾಣದ ಅರೆಯುವ ಕಲ್ಲೊಂದನ್ನು ಗಾಣದ ಇನ್ನೊಂದು ಪಾರ್ಶ್ವಕ್ಕೆ ಒಯ್ಯಲು ನಾಲ್ಕು ಮಂದಿ ಹೆಣಗಾಡುತ್ತಿರುವುದನ್ನು ಆನಂತರ ನೋಡಿದ. ಅಷ್ಟೂ ಮಂದಿ ಒಟ್ಟಾಗಿ ಅರೆಯುವ ಕಲ್ಲಿನ ಒಂದು ಪಾರ್ಶ್ವದಲ್ಲಿ ನಿಂತು ಅದನ್ನು ಎತ್ತುತ್ತಿದ್ದರು. ತತ್ಪರಿಣಾಮವಾಗಿ ಅದು ಇನ್ನೊಂದು ಪಾರ್ಶ್ವಕ್ಕೆ ಅಡಿಮೇಲಾಗಿ ಬೀಳುತ್ತಿತ್ತು. ತದನಂತರ ಅವರೆಲ್ಲರೂ ಅರೆಯುವ ಕಲ್ಲಿನ ಇನ್ನೊಂದು ಪಾರ್ಶ್ವಕ್ಕೆ ಹೋಗಿ  ಹಿಂದೆ ಮಾಡಿದಂತೆಯೇ ಪುನಃ ಮಾಡುತ್ತಿದ್ದರು. ಸೌದೆಕಡಿಯುವವ ಮನಸ್ಸಿನಲ್ಲಿಯೇ ಆಲೋಚಿಸಿದ, “ಇವರಿಗೆ ಹೇಳಲೋ? ಬೇಡವೋ? ಇವರು ಅವಿವೇಕಿಗಳು. ಇವರಿಗೆ ನಾನು ಹೇಳಲೇಬೇಕು.” ತದನಂತರ ಗಟ್ಟಿಯಾಗಿ ಕೂಗಿ ಹೇಳಿದ, “ಅಯ್ಯಾ, ನೀವು ಆ ಅರೆಯುವ ಕಲ್ಲನ್ನು ಬೇರೆಡೆಗೆ ಒಯ್ಯಬೇಕಾದರೆ ಅದರ ಸುತ್ತಲೂ ಸಮದೂರಗಳಲ್ಲಿ ಒಬ್ಬೊಬ್ಬರು ನಿಂತು ಏಕಕಾಲದಲ್ಲಿ ಎತ್ತಬೇಕು.”
ಅವರಲ್ಲೊಬ್ಬ ಸೌದೆಕಡಿಯುವವನ ಕಡೆಗೆ ತಿರುಗಿ ಕೇಳಿದ, “ನೀನು ಇಲ್ಲಿ ಬಹಳ ದಿನಗಳಿಂದ ಇರುವೆಯಾ?” ಮರು ಕ್ಷಣದಲ್ಲಿಯೇ ಸೌದೆಕಡಿಯುವವ ಕೊಡಲಿ ಸಮೇತ ಅವನ ಹಳ್ಳಿಯಲ್ಲಿ ಇದ್ದ.
ಆನಂತರ ಬಹಳ ಸಮಯ ಸೌದೆಕಡಿಯುವವ ಗೋಳಾಡುತ್ತಲೇ ಇದ್ದ. ಕೊನೆಗೊಮ್ಮೆ ದೇವದೂತ ಪ್ರತ್ಯಕ್ಷನಾದಾಗ ತನ್ನನ್ನು ಕ್ಷಮಿಸಿ ಪುನಃ ದೇವಲೋಕದ ಉದ್ಯಾನಕ್ಕೆ ಕಳುಹಿಸುವಂತೆ ಅಂಗಲಾಚಿದ.
ನಿನ್ನ ಪೂರ್ವಜ ಆದಮ್‌ ತಪ್ಪು ಮಾಡಿದ್ದು ಒಂದು ಸಲ ಮಾತ್ರ. ನೀನಾದರೋ, ಒಂದೇ ತಪ್ಪನ್ನು ಪದೇಪದೇ ಮಾಡಿರುವೆ. ಅಂದಮೇಲೆ ನೀನು ನಿನ್ನ ಕೊನೆಯ ದಿನದ ವರೆಗೆ ಇಲ್ಲಿಯೇ ಸೌದೆಗಳೊಟ್ಟಿಗೆ ಇರುವುದೇ ಸರಿ.”

***** 

೭೫. ಹೊಸತಾಗಿ ಮತಾಂತರಗೊಂಡವನು
ಒಂದು ಊರಿನಲ್ಲಿ ಒಬ್ಬ ಮುಸಲ್ಮಾನ ಹಾಗು ಒಬ್ಬ ಕ್ರೈಸ್ತಮತೀಯ ಸ್ನೇಹಿತರು ನೆರೆಹೊರೆವಾಸಿಗಳಾಗಿದ್ದರು. ಇವರೀರ್ವರಲ್ಲಿ ಪ್ರತಿಯೊಬ್ಬನಿಗೂ ಇನ್ನೊಬ್ಬನ ಯೋಗಕ್ಷೇಮದ ಕಾಳಜಿ ಇದ್ದದ್ದರಿಂದ ಆರೋಗ್ಯದ ಹಾಗು ಇನ್ನಿತರ ಖಾಸಗಿ ವಿಷಯಗಳ ಕುರಿತು ಆಗಾಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಬಲು ಶ್ರದ್ಧೆಯಿಂದ ಇಸ್ಲಾಂ ಮತಾಚರಣೆಗಳನ್ನು ಮಾಡುತ್ತಿದ್ದ ಮುಸಲ್ಮಾನನು ತನ್ನ ಮತದ ಹಿರಿಮೆಯನ್ನು ಬಹುವಾಗಿ ಹೇಳುತ್ತಿದ್ದದ್ದರ ಪರಿಣಾಮವಾಗಿ ಕ್ರೈಸ್ತಮತೀಯನು ಇಸ್ಲಾಂ ಮತಕ್ಕೆ ಮಾತಾಂತರಗೊಂಡನು.
ಮತಾಂತರಗೊಂಡ ಮಾರನೆಯ ದಿನ ಬೆಳಗಿನ ಜಾವದಲ್ಲಿ ಅವನ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿದ್ದದರಿಂದ ಅರೆನಿದ್ದೆಯಲ್ಲಿದ್ದ ಅವನು ಒಳಗಿನಿಂದಲೇ ಗಟ್ಟಿಯಾಗಿ ಕಿರುಚಿದ, ಯಾರದು?”
ನಾನು ನಿನ್ನ ಮುಸಲ್ಮಾನ ಮಿತ್ರ.”
ಇನ್ನೂ ಸೂರ್ಯೋದಯವೇ ಆಗಿಲ್ಲ. ಇಷ್ಟು ಬೆಳಗ್ಗೆ ನಿನಗೇನು ಬೇಕು?”
ಬೇಗನೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಬಟ್ಟೆ ಧರಿಸಿ ಶುದ್ಧಿಸ್ನಾನ ಮಾಡಿ ಬಾ. ಇಬ್ಬರೂ ಒಟ್ಟಿಗೆ ಮಸೀದಿಗೆ ಹೋಗೋಣ.”
ಜೀವನದಲ್ಲಿ ಮೊದಲ ಸಲ ಶುದ್ಧಿಸ್ನಾನ ಮಾಡಿದ ಹೊಸ ಮುಸಲ್ಮಾನ ತನ್ನ ಸ್ನೇಹಿತನೊಂದಿಗೆ ಮಸೀದಿಗೆ ಹೋದ. ಮೊದಲನೆಯ ಪ್ರಾರ್ಥನೆಗೆ ನಿಗದಿಯಾಗಿದ್ದ ಸಮಯಕ್ಕಿಂತ ಎಷ್ಠೋ ಮೊದಲು ಅವರು ಮಸೀದಿಯನ್ನು ತಲುಪಿದರು. ಮಧ್ಯರಾತ್ರಿಯ ನಂತರ (ಕಡ್ಡಾಯವಲ್ಲದ) ಪ್ರಾರ್ಥನೆ ಮಾಡಬಹುದಾದ ಸಮಯ ಎಂಬುದಾಗಿ ಶಿಫಾರಸ್ಸು ಮಾಡಲಾಗಿದ್ದ ಸಮಯ ಅದಾಗಿತ್ತು. ಬೆಳಗಿನ ಜಾವ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದ ಮೊದಲನೇ ಪ್ರಾರ್ಥನೆಯ ಸಮಯದ ವರೆಗೂ ಅವರೀರ್ವರೂ ಅಲ್ಲಿಯೇ ಪ್ರಾರ್ಥನೆ ಮಾಡುತ್ತಾ ಕಾಲ ಕಳೆದರು. ತದನಂತರ ಮೊದಲನೇ ಪ್ರಾರ್ಥನೆಯ ವಿಧಿವಿಧಾನಗಳು ಹೊಸ ಮುಸಲ್ಮಾನನಿಗೆ ಸ್ಪಷ್ಟವಾಗುವ ವರೆಗೂ ಅವರು ಪ್ರಾರ್ಥಿಸಿದರು. ಪ್ರಾರ್ಥನೆ ಮುಗಿದ ತಕ್ಷಣ ಹೊಸ ಮುಸಲ್ಮಾನ ಮಸೀದಿಯಿಂದ ಹೊರಹೋಗುವ ಬಾಗಿಲಿನತ್ತ ಹೊರಟಾಗ ಅವನ ಮಿತ್ರ ಅವನನ್ನು ತಡೆದು ಕೇಳಿದ, “ನೀನೆಲ್ಲಿಗೆ ಹೋಗುತ್ತಿರುವೆ?”
ನಾನು ಬೆಳಗಿನ ಪ್ರಾರ್ಥನೆ ಮಾಡಿದ್ದಾಗಿದೆ. ಇಲ್ಲಿ ಮಾಡಬೇಕಾದದ್ದು ಏನೂ ಬಾಕಿ ಉಳಿದಿಲ್ಲ. ಎಂದೇ ನಾನೀಗ ಮನೆಗೆ ಹೋಗುತ್ತೇನೆ.”
ಸ್ವಲ್ಪ ನಿಲ್ಲು. ಸೂರ್ಯೋದಯವಾಗುವ ವರೆಗೆ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರೋಣ.”
ಹಾಗೆಯೇ ಆಗಲಿ.”
ಸೂರ್ಯೋದಯವಾಗುವ ವರೆಗೆ ಹೊಸ ಮುಸಲ್ಮಾನ ಮಿತ್ರನ ಸಲಹೆಯಂತೆ ನಡೆದುಕೊಂಡ. ತದನಂತರ ಮನೆಗೆ ಹೊರಟಾಗ ಮಿತ್ರ ಅವನ ಕೈನಲ್ಲಿ ಕುರ್‌ಆನ್‌ ಗ್ರಂಥವನ್ನಿಟ್ಟು ಹೇಳಿದ, “ಆಕಾಶದಲ್ಲಿ ಸೂರ್ಯ ಇನ್ನೂ ಸ್ವಲ್ಪ ಮೇಲೇರುವ ವರೆಗೆ ಇದನ್ನು ಓದು. ಇಂದು ನೀನು ಉಪವಾಸ ಮಾಡುವುದು ಒಳಿತು ಎಂಬುದು ನನ್ನ ಅಭಿಮತ. ಉಪವಾಸ ಮಾಡುವುದರಿಂದ ಆಗುವ ಲಾಭಗಳೇನು ಎಂಬುದು ಎಂಬುದು ನಿನಗೆ ಗೊತ್ತಿದೆಯಲ್ಲವೆ?”
ಹೊಸ ಮುಸಲ್ಮಾನ ಮಧ್ಯಾಹ್ನದ ವರೆಗೂ ಅಂತೆಯೇ ಮಾಡಿದ. ಆಗ ಮಿತ್ರ ಹೇಳಿದ, “ಈಗ ಮಧ್ಯಾಹ್ನದ ವೇಳೆ. ಆದ್ದರಿಂದ ಮಸೀದಿಯಲ್ಲಿಯೇ ಮಧ್ಯಾಹ್ನದ ಪ್ರಾರ್ಥನೆಯನ್ನೂ ಮಾಡೋಣ.” ಇಬ್ಬರೂ ಮಧ್ಯಾಹ್ನಧ ಪ್ರಾರ್ಥನೆಯನ್ನೂ ಮಾಡಿದರು. ಮಿತ್ರ ಪುನಃ ಹೇಳಿದ, “ಇನ್ನು ಸ್ವಲ್ಪ ಕಾಲಾನಂತರ ಅಪರಾಹ್ನದ ಪ್ರಾರ್ಥನೆ ಮಾಡಬೇಕಾಗುತ್ತದೆ. ಅದನ್ನು ಸರಿಯಾದ ವೇಳೆಯಲ್ಲಿಯೇ ಮಾಡಬೇಕು.” ಆ ಪ್ರಾರ್ಥನೆಯನ್ನೂ ಮಾಡಿದ್ದಾಯಿತು. ತದನಂತರಹೆಚ್ಚುಕಮ್ಮಿ ಸಂಜೆಯಾಗಿದೆ,” ಎಂಬುದಾಗಿ ಹೇಳಿದ ಆ ಮಿತ್ರ ಹೊಸ ಮುಸಲ್ಮಾನನನ್ನು ಸಂಜೆಯ ಪ್ರಾರ್ಥನೆಯ ಸಮಯವಾಗುವ ವರೆಗೆ ಅಲ್ಲಿಯೇ ನಿಲ್ಲಿಸಿಕೊಂಡ. ಆ ಪ್ರಾರ್ಥನೆಯನ್ನೂ ಮುಗಿಸಿದ ಹೊಸ ಮುಸಲ್ಮಾನ ಉಪವಾಸವನ್ನು ಮುಗಿಸುವ ಸಲುವಾಗಿ ಮನೆಗೆ ಹೊರಟಾಗ ಮಿತ್ರ ಹೇಳಿದ, “ಇನ್ನೊಂದೇ ಒಂದು ಪ್ರಾರ್ಥನೆ ಮಾಡುವುದಿದೆ. ಅದೇ ಮಲಗುವ ವೇಳೆಯಲ್ಲಿ ಮಲಗುವ ಮುನ್ನ ಮಾಡಬೇಕಾದ ಪ್ರಾರ್ಥನೆ.”  ಅದಕ್ಕಾಗಿ ಅವರು ಅಲ್ಲಿಯೇ ಇನ್ನೂ ಒಂದು ತಾಸು ಕಾದಿದ್ದು ಆ ಪ್ರಾರ್ಥನೆಯನ್ನೂ ಮಾಡಿದರು. ತದನಂತರ ಹೊಸ ಮುಸಲ್ಮಾನ ತನ್ನ ಮನೆಗೆ ಹಿಂದಿರುಗಿದ.
ಮರುದಿನ ರಾತ್ರಿಯೂ ಹಿಂದಿನ ರಾತ್ರಿಯಲ್ಲಿ ಜರಗಿದಂತೆಯೇ ಅದೇ ವೇಳೆಯಲ್ಲಿ ಬಾಗಿಲನ್ನು ತಟ್ಟುವ ಶಬ್ದ ಹೊಸ ಮುಸಲ್ಮಾನನಿಗೆ ಕೇಳಿಸಿತು.
ಯಾರದು?”
ನಾನು ನಿನ್ನ ಮಿತ್ರ. ಬೇಗ ತಯಾರಾಗು. ಒಟ್ಟಿಗೇ ಮಸೀದಿಗೆ ಹೋಗೋಣ.”
ನಾನು ನಿನ್ನೆ ರಾತ್ರಿ ಮಸೀದಿಯಿಂದ ಹಿಂದಿರುಗಿದ ತಕ್ಷಣವೇ ನಿನ್ನ ಇಸ್ಲಾಂ ಮತಕ್ಕೆ ರಾಜೀನಾಮೆ ನೀಡಿದ್ದೇನೆ. ದಯವಿಟ್ಟು ಇಲ್ಲಿಂದ ಹೋಗು, ಮಾಡಲು ಏನೂ ಕೆಲಸವಿಲ್ಲದ ಸೋಮಾರಿಯೊಬ್ಬನನ್ನು ಹುಡುಕು. ಅವನಿಗೆ ಇಡೀ ದಿನ ಮಸೀದಿಯಲ್ಲಿಯೇ ಇರಲು ಸಾಧ್ಯವಾಗಬಹುದು. ನಾನಾದರೋ ಒಬ್ಬ ಬಡವ. ಆಹಾರಕ್ಕಾಗಿ ನನ್ನನ್ನೇ ನಂಬಿರುವ ಹೆಂಡತಿ ಮಕ್ಕಳು ನನಗಿದ್ದಾರೆ. ಆದ್ದರಿಂದ ನಾನು ದುಡಿದು ಸಂಪಾದಿಸಲೋಸುಗ ಸಮಯ ವಿನಿಯೋಗಿಸುವುದೇ ಒಳಿತು.”
ತನ್ನ ಮಿತ್ರರಿಗೆ ಮತ್ತು ಸಂಗಾತಿಗಳಿಗೆ ಈ ಕತೆಯನ್ನು ಹೇಳಿದ ನಂತರ ಇಮಾಮ್‌ ಜಾಫರ್‌ ಸಾದಿಕ್‌ ಅವರಿಗೆ ಇಂತು ಸಲಹೆ ಮಾಡಿದ, “ಈ ರೀತಿ ಇಸ್ಲಾಂನ ನಿಷ್ಠಾವಂತ ಅನುಯಾಯಿಯೊಬ್ಬ ಒಬ್ಬನನ್ನು ಇಸ್ಲಾಂಗೆ ಮತಾಂತರಗೊಳಿಸಿದ ನಂತರ ಅವನು ಅದನ್ನು ಬಿಟ್ಟು ಓಡಿಹೋಗುವಂತೆ ಮಾಡಿದ.  ಮತಾಚರಣೆಯ ಹೆಸರಿನಲ್ಲಿ ಜನರಿಗೆ ಅನಗತ್ಯವಾಗಿ ತೊಂದರೆ ಕೊಡಬಾರದೆಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ. ವ್ಯಕ್ತಿಯೊಬ್ಬನ ಬಲಾಬಲಗಳನ್ನೂ ಸಾಮರ್ಥ್ಯವನ್ನೂ ಅಂದಾಜು ಮಾಡಿದ ನಂತರ ಅವರು ಮತಕ್ಕೆ ಆಕರ್ಷಿತರಾಗಲು ಏನನ್ನು ಎಷ್ಟು ಪ್ರಮಾಣದಲ್ಲಿ ಮಾಡಬೇಕೋ ಅಷ್ಟನ್ನೇ ಮಾಡಬೇಕೇ ವಿನಾ ಅವರು ಅದನ್ನು ತೊರೆದು ಓಡಿಹೋಗುವಂತೆ ಮಾಡಬಾರದು. ಹಿಂಸೆ, ಬಲಾತ್ಕಾರ, ದಬ್ಬಾಳಿಕೆ, ಭಯೋತ್ಪಾದನೆ ಉಮ್ಮಯಾದ್‌ಗಳ ನೀತಿಯೇ ವಿನಾ ನಮ್ಮದಲ್ಲ ಎಂಬುದು ನಿಮಗೆ ತಿಳಿದಿಲ್ಲವೇ? ನಮ್ಮದು ಭ್ರಾತೃತ್ವ, ಮನವೊಲಿಸಿಕೆ, ದಯಾಪರತೆ, ತಾಳ್ಮೆ ಆಧಾರಿತ ನೀತಿ ಎಂಬುದು ನೆನಪಿರಲಿ.”

***** 

೭೬. ಕಳ್ಳನೂ ಕಂಬಳಿಯೂ
ಕಳ್ಳನೊಬ್ಬ ಸದ್ದುಮಾಡದೆ ಸೂಫಿ ಫಕೀರನ ಮನೆಯ ಒಳಹೊಕ್ಕು ಅಲ್ಲಿ ಕದಿಯಬಹುದಾದದ್ದು ಏನೂ ಇಲ್ಲದ್ದರಿಂದ ನಿರಾಸೆಯಿಂದ ಹೊರಬರುತ್ತಿದ್ದ. ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿದ್ದ ಫಕೀರ ಕಳ್ಳ ನಿರಾಶನಾಗಿದ್ದನ್ನು ಗಮನಿಸಿ ಕಳ್ಳ ಬರಿಗೈನಲ್ಲಿ ಹಿಂದಿರುಗಬಾರದೆಂದು ತಾನು ಹೊದ್ದಿದ್ದ ಕಂಬಳಿಯನ್ನು ಅವನ ಮೇಲಕ್ಕೆಸೆದ. 

***** 

೭೭. ದೇವರಲ್ಲಿ ನಂಬಿಕೆ ಇದ್ದರೂ ಒಂಟೆಯನ್ನು ಕಟ್ಟಿಹಾಕು
ಮಾರುಕಟ್ಟೆಯಿಂದ ತನ್ನ ಮನೆಗೆ ಹಿಂದಿರುಗುತ್ತಿದ್ದಾತನೊಬ್ಬ ಅಂದು ತನ್ನ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ಜರಗಿದ್ದಕ್ಕಾಗಿ ದಾರಿಯ ಬದಿಯಲ್ಲಿದ್ದ ಮಸೀದಿಯಲ್ಲಿ ದೇವರಿಗೆ ಧನ್ಯವಾದಗಳನ್ನು ಅರ್ಪಿಸಲು ನಿರ್ಧರಿಸಿದ.
ಆತ ತನ್ನ ಒಂಟೆಯನ್ನು ಹೊರಗೆ ಬಿಟ್ಟು ಮಸೀದಿಯ ಒಳ ಹೋಗಿ ಅಲ್ಲಾನಿಗೆ ಧನ್ಯವಾಗಳನ್ನು ಅರ್ಪಿಸುತ್ತಾ ಅನೇಕ ತಾಸುಗಳನ್ನು ಕಳೆದ. ಇನ್ನು ಮುಂದೆ ತಾನೊಬ್ಬ ಒಳ್ಳೆಯ ಮುಸಲ್ಮಾನನಾಗಿ ಇರುವುದಾಗಿಯೂ ಬಡವರಿಗೆ ಸಹಾಯ ಮಾಡುವುದಾಗಿಯೂ ತನ್ನ ಸಮುದಾಯದ ಆಧಾರಸ್ತಂಭವಾಗಿಯೂ ಇರುವುದಾಗಿ ಭರವಸೆಯನ್ನೂ ನೀಡಿದ.
ಅವನು ಮಸೀದಿಯಿಂದ ಹೊರಬರುವಾಗ ಕತ್ತಲಾಗಿತ್ತು. ಅವನ ಒಂಟೆ ಎಲ್ಲಿಗೋ ಹೊರಟುಹೋಗಿತ್ತು.
ಕೋಪೋದ್ರಿಕ್ತನಾದ ಆತ ಆಕಾಶದತ್ತ ಮುಷ್ಟಿ ತೋರುತ್ತಾ ಅಬ್ಬರಿಸಿದ,, “ಅಲ್ಲಾ, ನೀನೊಬ್ಬ ದ್ರೋಹಿ! ನೀನು ನನಗೆ ಹೀಗೆ ಮಾಡಬಹುದೇ? ನಾನು ನಿನ್ನನ್ನು ಸಂಪೂರ್ಣವಾಗಿ ನಂಬಿದ್ದೆ. ನೀನಾದರೋ ನನಗೆ ಹಿಂದಿನಿಂದ ಇರಿದಿರುವೆ!”
ಸಮೀಪದಲ್ಲಿ ಹೋಗಿತ್ತಿದ್ದ ಸೂಫಿ ಫಕೀರ ಇದನ್ನು ಕೇಳಿ ಲೊಚಗುಟ್ಟುತ್ತಾ ಹೇಳಿದ, “ಇಲ್ಲಿ ಕೇಳು. ದೇವರಲ್ಲಿ ವಿಶ್ವಾಸವಿರಲಿ, ಆದರೆ ನಿನ್ನ ಒಂಟೆಯನ್ನು ಕಟ್ಟಿ ಹಾಕು.”

***** 

೭೮. ಹಾಡುಹಕ್ಕಿ

ಹಿಂದೊಂದು ಕಾಲದಲ್ಲಿ ಯಶಸ್ವೀ ವ್ಯಾಪಾರಿಯೊಬ್ಬನಿದ್ದ. ಅವನ ಹತ್ತಿರ ಎಲ್ಲವೂ - ಸುಂದರಿ ಹೆಂಡತಿ, ಅತ್ಯಂತ ಪ್ರಿಯರಾದ ಮಕ್ಕಳು, ಬಹು ದೊಡ್ಡ ಮನೆ - ಇತ್ತು. ಅವನೂ ಅವನ ಕುಟುಂಬದವರೂ ಬಲು ಆನಂದದಿಂದ ಬಾಳುತ್ತಿದ್ದರು. ವಿದೇಶೀಯ ಹಾಡುಹಕ್ಕಿಯೊಂದು ಅವನ ಅತೀ ಹೆಮ್ಮೆಯ ಸ್ವತ್ತಾಗಿತ್ತು. ಅವನು ಅದಕ್ಕೆ ರುಚಿಯಾದ ತಿನಿಸುಗಳನ್ನು ನೀಡುತ್ತಿದ್ದನಾದರೂ ಯಾವಾಗಲೂ ಅದನ್ನು ಪಂಜರದೊಳಗೇ ಇಡುತ್ತಿದ್ದ. ಅವನ ಅತಿಥಿಗಳನ್ನು ರಂಜಿಸುವುದು ಅದರ ಕಾಯಕವಾಗಿತ್ತು.
ವ್ಯಾಪರಿ ಒಮ್ಮೆ ದಕ್ಷಿಣ ದಿಕ್ಕಿನಲ್ಲಿದ್ದ ದೂರದ ದೇಶಗಳಿಗೆ ಪಯಣಿಸುವ ಸನ್ನಿವೇಶ ಉಂಟಾಯಿತು. ವಿದೇಶಗಳಿಂದ ಯಾರಿಗೆ ಏನೇನು ತರಬೇಕು ಎಂಬುದಾಗಿ ತನ್ನ ಹೆಂಡತಿ ಹಾಗು ಮಕ್ಕಳನ್ನು ಕೇಳಿದ. ಅವರು ರೇಷ್ಮೆಯ ಸುಂದರವಾದ ದಿರಿಸುಗಳು, ಜೇನು, ಕೀಲಿಕೊಡುವ ಆಟಿಕೆಗಳನ್ನು ತರಲು ಹೇಳಿದರು. ತದನಂತರ ಹಾಡುಹಕ್ಕಿಯನ್ನೂ ಅದಕ್ಕೇನು ತರಬೇಕೆಂಬುದಾಗಿ ಕೇಳಿದ.
ಅದು ಉತ್ತರಿಸಿತು, ನನಗೊಂದು ಸಣ್ಣ ಉಪಕಾರ ಮಾಡಬೇಕೆಂಬುದಾಗಿ ವಿನಂತಿಸುತ್ತೇನೆ.”
ಏನು ಬೇಕಾದರೂ ಕೇಳು.”
ನೀನು ಹೋಗುವ ಊರುಗಳಲ್ಲಿ ಮರಗಳ ಮೇಲೆ ನನ್ನ ಸೋದರ ಸಂಬಂಧಿಗಳನ್ನು ನೋಡಿದರೆ ದಯವಿಟ್ಟು ಅವರಿಗೆ ನಾನು ಇಲ್ಲಿ ಯಾವ ಪರಿಸ್ಥಿತಿಯಲ್ಲಿ ಇದ್ದೇನೆಂಬುದನ್ನು ವಿವರಿಸು. ನನಗೆ ಬೇರೇನೂ ಬೇಡ.”
ನಿಜವಾಗಿಯೂ ಅಷ್ಟೇನಾ? ಅನರ್ಘ್ಯಮಣಿಗಳಿರುವ ಸುಂದರವಾದ ಕನ್ನಡಿ ಅಥವ ಉಷ್ಣವಲಯದ ಯಾವುದಾದರೂ ಒಣಹಣ್ಣುಗಳನ್ನು ಬೇಕಾದರೆ ತರಬಲ್ಲೆ.”
ಧನ್ಯವಾದಗಳು. ಅವೇನೂ ಬೇಡ.”
ಹಾಡುಹಕ್ಕಿಯ ಈ ಕೋರಿಕೆಯಿಂದ ತುಸು ವಿಚಲಿತನಾದರೂ ಅದನ್ನು ಈಡೇರಿಸುವ ದೃಢ ನಿಶ್ಚಯದೊಂದಿಗೆ ವ್ಯಾಪರಿಯು ಪಯಣಿಸಿದ.
ಉದ್ದೇಶಿತ ಊರುಗಳಿಗೆಲ್ಲ ಸುರಕ್ಷಿತವಾಗಿ ತಲುಪಿ ವ್ಯಾಪಾರದಿಂದ ತೃಪ್ತಿದಾಯಕ ಲಾಭ ಗಳಿಸಿದ ಆತ ತನ್ನ ಕುಟುಂಬದವರು ಹೇಳಿದ್ದ ವಸ್ತುಗಳನ್ನು ಖರೀದಿಸಲು ಸ್ವಲ್ಪ ಸಮಯವನ್ನು ವಿನಿಯೋಗಿಸಿದ. ಕೊನೆಗೆ ಉದ್ಯಾನವೊಂದಕ್ಕೆ ಹೋದಾಗ ಅಲ್ಲಿದ್ದ ಮರಗಳಲ್ಲಿ ತನ್ನ ಹತ್ತಿರವಿದ್ದ ಹಾಡುಹಕ್ಕಿಯನ್ನೇ ಹೋಲುತ್ತಿದ್ದ ಕೆಲವು ಪಕ್ಷಿಗಳನ್ನು ನೋಡಿದ. ಅವುಗಳ ಪೈಕಿ ಒಂದನ್ನು ಕರೆದು ತನ್ನ ಹತ್ತಿರವಿದ್ದ ಹಾಡುಹಕ್ಕಿ ಎಂತು ಪಂಜರದೊಳಗೆ ವಾಸಿಸುತ್ತಾ ಹಾಡು ಹೇಳಿ ತನ್ನನ್ನು ರಂಜಿಸುತ್ತದೆ ಎಂಬುದನ್ನು ವಿವರಿಸಿದ.
ಅವನು ತನ್ನ ವಿವರಣೆಯನ್ನು ಮುಗಿಸಿದ ತಕ್ಷಣವೇ ಆ ಪಕ್ಷಿಗಳ ಪೈಕಿ ಒಂದು ತಾನು ಕುಳಿತಲ್ಲಿ ನಡುಗಲಾರಂಭಿಸಿತು. ಕೆಲವೇ ಕ್ಷಣಗಳ ನಂತರ ಅದು ನೆಲಕ್ಕೆ ಬಿದ್ದು ನಿಶ್ಚಲವಾಯಿತು. ಇದನ್ನು ನೋಡಿ ವ್ಯಾಪಾರಿಗೆ ಬಲು ದುಃಖವಾಯಿತು. ಅವನ ಪ್ರಯಾಣದ ಯಶಸ್ಸಿನ ಖುಷಿ ತುಸು ಕಮ್ಮಿ ಆಯಿತು.
ಮನೆಗೆ ಹಿಂದಿರುಗಿದ ವ್ಯಾಪಾರಿ ತಂದ ಉಡುಗೊರೆಗಳನ್ನು ನೋಡಿ ಹೆಂಡತಿ ಮಕ್ಕಳು ಬಲು ಸಂತೋಷ ಪಟ್ಟರು. ತಾನು ಹಾಡುಹಕ್ಕಿಗೆ ಹೇಳಬೇಕಾದದ್ದು ಸಂತೋಷದ ವಿಷಯವಲ್ಲದ್ದರಿಂದ ಅವರ ಖುಷಿಯಲ್ಲಿ ಭಾಗಿಯಾಗಲು ಅವನಿಗೆ ಸಾಧ್ಯವಾಗಲಿಲ್ಲ. ಕೊನೆಗೊಮ್ಮೆ ಹೇಳಬೇಕಾದ್ದನ್ನು ಹೇಳುವ ಧೈರ್ಯಮಾಡಿ ಅವನು ಹಾಡುಹಕ್ಕಿಯನ್ನು ಹುಡುಕಿಕೊಂಡು ಮನೆಯ ಉದ್ಯಾನಕ್ಕೆ ಹೋದ.
ಹಾಡುಹಕ್ಕಿ ಕೇಳಿತು, “ನಾನು ಹೇಳಿದ್ದ ವಿಷಯ ಏನಾಯಿತು?” ಏನು ನಡೆಯಿತೆಂಬುದನ್ನು ಆತ ವಿವರಿಸಿದ. ಅದನ್ನು ಗಮನವಿಟ್ಟು ಕೇಳಿದ ನಂತರ ಹಾಡುಹಕ್ಕಿ ತಾನು ಕುಳಿತಲ್ಲೇ ನಡುಗಲಾರಂಭಿಸಿತು. ಕೆಲವೇ ಕ್ಷಣಗಳಲ್ಲಿ ಅದು ಸತ್ತು ಪಂಜರದ ತಳಭಾಗಕ್ಕೆ ಬಿದ್ದಿತು.
ವ್ಯಾಪಾರಿಗೆ ತುಂಬಾ ದುಃಖವೂ ಆಯಿತು, ಗೊಂದಲವೂ ಆಯಿತು. ದೊಡ್ಡ ಧ್ವನಿಯಲ್ಲಿ ಅಳುತ್ತಾ ಅತ ಪಂಜರದ ಬಾಗಿಲನ್ನು ತೆರೆದು ತನ್ನ ಪ್ರೀತಿಯ ಹಾಡುಹಕ್ಕಿಯನ್ನು ಹೊರತೆಗೆದ. ಆ ತಕ್ಷಣವೇ ಹಾಡುಹಕ್ಕಿಗೆ ಜೀವ ಬಂದು ಹಾರಿ ಹೋಗಿ ಹತ್ತಿರದಲ್ಲಿದ್ದ ಮರದ ಕೊಂಬೆಯ ಮೇಲೆ ಕುಳಿತು ಸ್ವತಂತ್ವಾದ ಖುಷಿಯಿಂದ ಬಲು ಜೋರಾಗಿ ಕೀಚುಧ್ವನಿಯಲ್ಲಿ ತನ್ನ ಸಂತೋಷವನ್ನು ಪ್ರಕಟಿಸಿತು.
ವ್ಯಾಪರಿ ತಲೆ ಕೆರೆದುಕೊಳ್ಳುತ್ತಾ ಕೇಳಿದ, “ಸರಿ, ನೀನೇ ಗೆದ್ದೆ. ಆದರೆ ದಯವಿಟ್ಟು ಈ ಕಪಟೋಪಾಯದಲ್ಲಿ ಹುದುಗಿದ್ದ ಸಂದೇಶವೇನೆಂಬುದನ್ನು ತಿಳಿಸು.”
ಹಾಡುಹಕ್ಕಿಅವನಿಗೆ ಹೇಳಿತು, “ನನ್ನ ಸೌಂದರ್ಯ ಮತ್ತು ಹಾಡುಗಾರಿಕೆಯಿಂದಾಗಿ ನಾನು ಪಂಜರದೊಳಗೆ ಬಂಧಿತನಾಗಿದ್ದೇನೆ ಎಂಬುದನ್ನು ಆಫ್ರಿಕಾದ ನನ್ನ ಸೋದರ ಸಂಬಂಧಿ ಈ ರೀತಿಯಲ್ಲಿ ತಿಳಿಸಿದ. ಅವಿಲ್ಲದೇ ಹೋಗಿದ್ದರೆ ಬಲು ಹಿಂದೆಯೇ ನೀನು ನನ್ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದೆ. ನಾನು ಸ್ವತಂತ್ರವಾಗಲೋಸುಗ ಆ ಜೀವನದಿಂದ ಮುಕ್ತಿ ಪಡೆದಂತೆ ನಟಿಸಬೇಕಾಯಿತು.”

***** 

೭೯. ಅತ್ಯಂತ ಪ್ರಿಯವಾದ ಕತ್ತೆ
ಟರ್ಕಿ ದೇಶದವನೊಬ್ಬ ತನಗೆ ಅತ್ಯಂತ ಪ್ರಿಯವಾಗಿಯೂ ಅನೇಕ ವರ್ಷಗಳಿಂದ ವಿಧೇಯ ಸಂಗಾತಿಯೂ ಆಗಿದ್ದ ಕತ್ತೆಯೊಂದಿಗೆ ಎಲ್ಲಿಗೋ ಪಯಣಿಸುತ್ತಿದ್ದ. ದಿನವಿಡೀ ತ್ರಾಸದಾಯಕ ಪ್ರಯಾಣ ಮಾಡುತ್ತಿದ್ದ ಅವನಿಗೆ ಸಂಜೆಯ ವೇಳೆಗೆ ಮಾರ್ಗದ ಬದಿಯಲ್ಲಿದ್ದ ಪ್ರವಾಸಿ ತಂಗುದಾಣವೊಂದು ಗೋಚರಿಸಿತು. ಅಂದಿನ ರಾತ್ರಿಯನ್ನು ಅಲ್ಲಿಯೇ ಕಳೆಯಲು ಅವನು ತೀರ್ಮಾನಿಸಿದ. ಕತ್ತೆಯ ಮೇಲಿಂದ ತಡಿಚೀಲಗಳನ್ನಾತ ತೆಗೆಯುತ್ತಿದ್ದಾಗ ಆ ತಂಗುದಾಣದ ಯುವ ಕೆಲಸಗಾರನೊಬ್ಬ ಓಡಿ ಬಂದು ಅವನನ್ನು ಸ್ವಾಗತಿಸಿದ.
ಸಲಾಂ ಆಲೈಕುಮ್‌, ಮಾನ್ಯರೆ, ನಮ್ಮ ಈ ಸಾಧಾರಣವಾದ ತಂಗುದಾಣಕ್ಕೆ ಸ್ವಾಗತ. ದಯವಿಟ್ಟು ಒಳಗೆ ಬನ್ನಿ. ಬೆಂಕಿಯ ಸಮೀಪದಲ್ಲಿ ಕುಳಿತು ತುಸು ಬಿಸಿ ಸೂಪ್ ಸೇವಿಸಿ.”
ಖಂಡಿತ. ಆದರೆ ಅದಕ್ಕೂ ಮೊದಲು ಈ ನನ್ನ ಕತ್ತೆಯ ಆರೈಕೆ ಸರಿಯಾಗಿ ಆಗುವುದನ್ನು ನಾನು ಖಾತರಿ ಮಾಡಿಕೊಳ್ಳಬೇಕಾಗಿದೆ,” ಎಂಬುದಾಗಿ ತನ್ನ ಕತ್ತೆಯ ಬೆನ್ನನ್ನು ಮೃದುವಾಗಿ ತಟ್ಟುತ್ತಾ ಆತ ಹೇಳಿದ.
ಯುವ ಕೆಲಸಗಾರ ತುಂಬು ಹೃದಯದಿಂದ ನಗುತ್ತಾ ಹೇಳಿದ, “ಮಾನ್ಯರೆ, ಅಂಥ ವಿವರಗಳನ್ನು ಗಮನಿಸುವ ಕೆಲಸವನ್ನು ನೀವು ನನಗೆ ದಯವಿಟ್ಟು ಬಿಟ್ಟುಬಿಡಿ. ನೀವೀಗ ನಮ್ಮ ಗೌರವಾನ್ವಿತ ಅಥಿತಿ.”
ಅದೆಲ್ಲ ಸರಿಯಪ್ಪಾ. ಆದರೆ ಇದೊಂದು ಮುದಿ ಕತ್ತೆ. ಅದಕ್ಕೆ ಮಲಗಲು ಒಣಹುಲ್ಲಿನ ಹಾಸಿಗೆಯ ಅಗತ್ಯವಿದೆ.”
ಮಾನ್ಯರೇ, ಆ ಕುರಿತು ನೀವೇನೂ ಚಿಂತೆ ಮಾಡಬೇಡಿ. ಸಾಧ್ಯವಿರುವಷ್ಟು ಉತ್ತಮ ರೀತಿಯಲ್ಲಿ ಅದರ ಆರೈಕೆ ನಾವು ಮಾಡುತ್ತೇವೆ.”
ಹಾಸಿಗೆ ಸಿದ್ಧಪಡಿಸುವ ಮೊದಲು ನೆಲ ಗುಡಿಸಿ ಅಲ್ಲಿ ಕಲ್ಲುಗಳು ಇಲ್ಲ ಎಂಬುದನ್ನು ಖಾತರಿ ಮಾಡಿಕೊಳ್ಳುತ್ತೀರಲ್ಲವೆ?”
ಮಾನ್ಯರೆ, ನಮ್ಮನ್ನು ನಂಬಿ. ಇಲ್ಲಿ ಕೆಲಸಕ್ಕೆ ಇರುವವರೆಲ್ಲರೂ ತಮ್ಮ ತಮ್ಮ ವೃತ್ತಿಗಳಲ್ಲಿ ಪರಿಣತರು.”
ಅಂದ ಹಾಗೆ ಅದಕ್ಕೆ ತಿನ್ನಲು ಕೊಡುವ ಹುಲ್ಲಿಗೆ ಸ್ವಲ್ಪ ನೀರು ಹಾಕುವಿರಷ್ಟೆ? ಏಕೆಂದರೆ ಈ ಕತ್ತೆಯ ಹಲ್ಲುಗಳು ತುಸು ಅಲುಗಾಡಲಾರಂಭಿಸಿವೆ. ಆರಂಭದಲ್ಲಿ ಅದು ತಾಜಾ ಹುಲ್ಲನ್ನು ತಿನ್ನಲು ಬಯಸುತ್ತದೆ.”
ಮಾನ್ಯರೇ, ನೀವು ನನಗೆ ಮುಜುಗರ ಉಂಟುಮಾಡುತ್ತಿದ್ದೀರಿ.”
ಇನ್ನೊಂದು ವಿಷಯ, ಅದರ ಬೆನ್ನುಹುರಿಯ ಗುಂಟ ತುಸು ಮಾಲೀಸು ಮಾಡಿ. ಅದಕ್ಕೆ ಆ ಮಾಲೀಸು ಮಾಡಿಸಿಕೊಳ್ಳುವುದೆಂದರೆ ಬಲು ಸಂತೋಷ.”
ದಯವಿಟ್ಟು ಎಲ್ಲವನ್ನೂ ನನಗೆ ಬಿಟ್ಟು ನೀವು ನಿಶ್ಚಿಂತರಾಗಿರಿ.”
ಅಂತೂ ಇಂತೂ ಆ ಮನುಷ್ಯ ತಂಗುದಾಣದೊಳಕ್ಕೆ ಹೋಗಿ ಬೆಂಕಿಯ ಪಕ್ಕದಲ್ಲಿ ಕುಳಿತುಕೊಂಡು ಸ್ವಾದಿಷ್ಟ ಭೋಜನವೊಂದನ್ನು ಮಾಡಿ ಆರಾಮದಾಯಕ ಹಾಸಿಗೆಯೊಂದರ ಮೇಲೆ ಮಲಗಿದ. ಏತನ್ಮಧ್ಯೆ ಯುವ ಕೆಲಸಗಾರ ಒಂದೆರಡು ಬಾರಿ ಆಕಳಿಸಿ ಪಕ್ಕದಲ್ಲಿದ್ದ ಜೂಜುಕಟ್ಟೆಗೆ ಇಸ್ಪೀಟು ಆಡಲು ತೆರಳಿದ.
ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದ್ದರೂ ಕತ್ತೆಯ ಮಾಲಿಕನಿಗೆ ಏಕೋ ಸುಲಭವಾಗಿ ನಿದ್ದೆ ಬರಲಿಲ್ಲ. ನಿದ್ದೆಯಲ್ಲಿ ಸರಪಣಿಯಿಂದ ಕಟ್ಟಲ್ಪಟ್ಟಿದ್ದ ಕತ್ತೆ ನೀರು, ಆಹಾರ ಇಲ್ಲದೆ ತಣ್ಣನೆಯ ಚಪ್ಪಡಿ ಕಲ್ಲಿನ ನೆಲದ ಮೇಲೆ ಮಲಗಿದ್ದಂತೆ ಭಯಾನಕ ಕನಸುಗಳು ಆತನಿಗೆ ಬೀಳತೊಡಗಿತು. ಇದರಂದ ಎಚ್ಚರಗೊಂಡ ಆತ ಲಾಯಕ್ಕೆ ಹೋಗಿ ನೋಡಿದ - ಕನಸಿನಲ್ಲಿ ಕಂಡಂತೆಯೇ ಕತ್ತೆ ನೀರು ಆಹಾರವಿಲ್ಲದೆ ಬಳಲಿ ತಣ್ಣನೆಯ ಕಲ್ಲಿನ ಮೇಲೆ ಮಲಗಿತ್ತು!

***** 

೮೦. ತಂದೆ, ಮಗ ಹಾಗು ಕತ್ತೆ
ತಂದೆ ಹಾಗು ಮಗ ತಮ್ಮ ಕತ್ತೆಯೊಂದಿಗೆ ನಡೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಹೋಗುತ್ತಿದ್ದ ಹಳ್ಳಿಯವನೊಬ್ಬ ಹೇಳಿದ, “ನೀವೆಂಥ ಮೂರ್ಖರು. ಕತ್ತೆ ಇರುವುದೇ ಸವಾರಿ ಮಾಡಲೋಸುಗವಲ್ಲವೆ?” ಇದನ್ನು ಕೇಳಿದ ತಂದೆ ಮಗನನ್ನು ಕತ್ತೆಯ ಮೇಲೆ ಕುಳ್ಳಿರಿಸಿದ. ಇಂತು ಅವರು ಪ್ರಯಾಣ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಅವರು ಒಂದು ಗುಂಪಾಗಿ ಹೋಗುತ್ತಿದ್ದ ಕೆಲವರನ್ನು ಸಂಧಿಸಿದರು. ಅವರ ಪೈಕಿ ಒಬ್ಬ ಹೇಳಿದ, “ನೋಡಿ, ನೋಡಿ. ಆ ಯುವಕ ಎಷ್ಟು ಸೋಮಾರಿ! ತನ್ನ ತಂದೆ ನಡೆಯುತ್ತಿರುವಾಗ, ತಾನು ಸವಾರಿ ಮಾಡುತ್ತಿದ್ದಾನೆ.” ಇದನ್ನು ಕೇಳಿದ ತಂದೆ ಮಗನನ್ನು ಕೆಳಕ್ಕ ಇಳಿಸಿ ಅವನಿಗೆ ನಡೆಯುವಂತೆ ಆಜ್ಞಾಪಿಸಿ ತಾನು ಕತ್ತೆಯೇರಿ ಸವಾರಿ ಮಾಡತೊಡಗಿದ. ಇಂತು ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವರು ಈರ್ವರು ಹೆಂಗಸರನ್ನು ಸಂಧಿಸಿದರು. ಅವರ ಪೈಕಿ ಒಬ್ಬಳು ಇನ್ನೊಬ್ಬಳಿಗೆ ಹೇಳಿದಳು, “ತನ್ನ ಮಗ ಕಷ್ಟದಿಂದ ನಡೆಯುತ್ತಿರುವಾಗ ತಾನು ಮಾತ್ರ ನಾಚಿಕೆ ಇಲ್ಲದೆ ಸವಾರಿ ಮಾಡುತ್ತಿರುವ ಸೋಮಾರಿ ಗಮಾರನನ್ನು ನೋಡು!” ಇದನ್ನು ಕೇಳಿದ ತಂದೆಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಕೊನೆಗೆ ಆತ ಕತ್ತೆಯ ಮೇಲೆ ತನ್ನ ಮುಂದೆ ಮಗನನ್ನೂ ಕೂರಿಸಿಕೊಂಡು ಪ್ರಯಾಣ ಮುಂದುವರಿಸಿದ. ಸ್ವಲ್ಪ ಸಮಯದಲ್ಲಿ ಅವರು ಪಟ್ಟಣವನ್ನು ತಲುಪಿದರು. ಅಲ್ಲಿ ಇವರನ್ನು ನೋಡಿದವರೆಲ್ಲರೂ ಮೂದಲಿಸುತ್ತಿದ್ದರು. ತಮ್ಮನ್ನು ಏಕೆ ಮೂದಲಿಸುತ್ತಿರುವಿರಿ ಎಂಬುದಾಗಿ ಒಬ್ಬನನ್ನು ಕೇಳಿದಾಗ ಅವನು ಕೇಳಿದ, “ಬಡಪಾಯಿ ಕತ್ತೆಯ ಮೇಲೆ ನಿಮ್ಮಿಬ್ಬರ ಭಾರವನ್ನೂ ಹೇರಿ ಅದನ್ನು ಹಿಂಸಿಸಲು ನಿಮಗೆ ನಾಚಿಕೆ ಆಗುವುದಿಲ್ಲವೇ?” ಇಬ್ಬರೂ ಕತ್ತೆಯಿಂದ ಕೆಳಕ್ಕಿಳಿದು ಬಹಳ ಹೊತ್ತು ಮುಂದೇನು ಮಾಡಬೇಕೆಂಬುದರ ಕುರಿತು ಆಲೋಚಿಸಿದರು. ಕೊನೆಗೆ ಮರದ ಗಣೆಯೊಂದನ್ನು ಕಡಿದು ತಂದು ಅದಕ್ಕೆ ಕತ್ತೆಯ ಕಾಲುಗಳನ್ನು ಕಟ್ಟಿ ತಾವೇ ಅದನ್ನು ಹೊತ್ತುಕೊಂಡು ನಡೆಯಲಾರಂಭಿಸಿದರು. ಇದನ್ನು ನೋಡಿದ ಎಲ್ಲರೂ ಜೋರಾಗಿ ನಗುತ್ತಿದ್ದರು. ಆದರೂ ಅವರು ಕತ್ತೆಯನ್ನು ಹೊತ್ತುಕೊಂಡು ನಡೆಯುತ್ತಲೇ ಇದ್ದರು. ಇಂತು ಅವರು ಸೇತುವೆಯೊಂದರ ಮೇಲೆ ಹೋಗುತ್ತಿರುವಾಗ ಕತ್ತೆಯ ಒಂದು ಹಿಂಗಾಲುಗಳನ್ನು ಕಟ್ಟಿದ್ದ ಹಗ್ಗದ ಗಂಟು ಸಡಿಲವಾಗಿ ಒಂದು ಕಾಲು ಹೊರಬಂದಿತು. ಕತ್ತೆ ಆ ಕಾಲಿನಿಂದ ಒದೆಯಲಾರಂಭಿಸಿದಾಗ ಮಗನ ಆಯತಪ್ಪಿ  ಆತ ತನ್ನ ತುದಿಯ ಗಣೆಯನ್ನು ಕೆಳಕ್ಕೆ ಹಾಕಿದ. ಈ ಗೊಂದಲದಲ್ಲಿ ಕತ್ತೆ ಗಣೆಯಿಂದ ಜಾರಿ ಉರುಳಿ ನದಿಗೆ ಬಿದ್ದಿತು. ಅದರ ಮುಂಗಾಲುಗಳನ್ನು ಕಟ್ಟಿದ್ದರಿಂದ ಈಜಲಾಗದೆ ಅದು ಮುಳುಗಿ ಸತ್ತು ಹೋಯಿತು. ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದ ವೃದ್ಧನೊಬ್ಬ ಹೇಳಿದ, “ಈ ಅನುಭವ ನಿನಗೊಂದು ಒಳ್ಳೆಯ ಪಾಠ ಕಲಿಸಿತಲ್ಲವೆ? ಎಲ್ಲರನ್ನೂ ತೃಪ್ತಿ ಪಡೆಸಲು ಹೊರಟರೆ ಯಾರನ್ನೂ ತೃಪ್ತಿಪಡಿಸಲಾಗುವುದಿಲ್ಲ.”

***** 

೮೧. ಸತ್ಯದ ನಾಡು
ಜಾಗೃತರಾಗಿರುವಾಗಿನ ಜೀವನ ಎಂಬುದಾಗಿ ಜನರು ಸಾಮಾನ್ಯವಾಗಿ ಯಾವುದನ್ನು ಉಲ್ಲೇಖಿಸುತ್ತಾರೋ ಅದು ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಎಂಬ ನಂಬಿಕೆ ಉಳ್ಳವನೊಬ್ಬನಿದ್ದ. ಆ ಕಾಲದ ನಿಜವಾದ ಗುರುವನ್ನು ಆತ ಹುಡುಕುತ್ತಿದ್ದ. ಅವನು ಅನೇಕ ಪುಸ್ತಕಗಳನ್ನು ಓದಿದ, ಆಧ್ಯಾತ್ಮಿಕ ಚಿಂತಕರ ವಿಭಿನ್ನ ಗುಂಪುಗಳ ಸದಸ್ಯನಾದ, ಒಬ್ಬರಾದ ನಂತರ ಒಬ್ಬರಂತೆ ಅನೇಕ ಬೋಧಕರ ಸಾಧನೆಗಳನ್ನು ವೀಕ್ಷಿಸಿದ. ಆಕರ್ಷಕ ಅನ್ನಿಸಿದ ಅನೇಕ ಆಧ್ಯಾತ್ಮಿಕ ಕಸರತ್ತುಗಳನ್ನು ಮಾಡಿದ, ಆದೇಶಗಳನ್ನು ಪಾಲಿಸಿದ.
ಕೆಲವು ಅನುಭವಗಳಿಂದ ಆತ ಹಿಗ್ಗಿದ. ಕೆಲವು ಸಂದರ್ಭಗಳಲ್ಲಿ ಆತ ಗೊಂದಲಕ್ಕೀಡಾದ. ಆಧ್ಯಾತ್ಮಿಕ ವಿಕಾಸದ ಯಾವ ಹಂತದಲ್ಲಿ ತಾನಿದ್ದೇನೆಂಬುದರ ಕುರಿತು ಆತನಿಗೇನೂ ತಿಳಿದಿರಲಿಲ್ಲ. ತನ್ನ ಅನ್ವೇಷಣೆ ಯಾವಾಗ ಎಲ್ಲಿ ಅಂತ್ಯಗೊಳ್ಳುತ್ತದೆಂಬುದರ ಕುರಿತಾಗಿಯೂ ಅವನಿಗೆ ಏನೇನೂ ತಿಳಿದಿರಲಿಲ್ಲ.
ಒಂದು ದಿನ ಆತ ತನ್ನ ವರ್ತನೆಯನ್ನು ತಾನೇ ಪುನರ್ಪರಿಶೀಲಿಸುತ್ತಾ ಎಲ್ಲಿಗೋ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಅಂದಿನ ಕಾಲದ ಖ್ಯಾತ ಪ್ರಾಜ್ಞನೊಬ್ಬನ ಮನೆಯ ಸಮೀಪದಲ್ಲಿ ತಾನಿರುವುದನ್ನು ಗಮನಿಸಿದ. ಆ ಮನೆಯ ಕೈದೋಟದಲ್ಲಿ ಆತ ಸತ್ಯದತ್ತ ಹೋಗುವ ಸರಿಯಾದ ದಾರಿಯನ್ನು ತೋರಿಸಬಲ್ಲವನಾಗಿದ್ದ ಖಿದ್ರ್‌ನನ್ನು ಸಂಧಿಸಿದ.
ಬಲು ಸಂಕಟಪಡುತ್ತಿದ್ದ ಅನೇಕ ದುಃಖಿತರು ಇದ್ದ ತಾಣವೊಂದಕ್ಕೆ ಅವನನ್ನು ಖಿದ್ರ್ ಕರೆದೊಯ್ದ. ಅವರು ಯಾರು ಎಂಬುದನ್ನು ವಿಚಾರಿಸಿದಾಗ ಅವರು ಹೇಳಿದರು, “ನಾವು ನಿಜವಾದ ಬೋಧನೆಗಳನ್ನು ಅನುಸರಿಸದೇ ಇದ್ದವರು, ನಮ್ಮ ವಚನಗಳಿಗೆ ಬದ್ಧರಾಗಿರದೇ ಇದ್ದವರು, ಸ್ವಘೋಷಿತ ಗುರುಗಳನ್ನು ಗೌರವಿಸಿದವರು.”
ತದನಂತರ ಖಿದ್ರ್ ಅವರನ್ನು ಆಕರ್ಷಕ ರೂಪವಿದ್ದವರೂ ಹರ್ಷಚಿತ್ತರೂ ಇದ್ದ ತಾಣವೊಂದಕ್ಕೆ ಕರೆದೊಯ್ದ. ಅವರು ಯಾರು ಎಂಬುದನ್ನು ವಿಚಾರಿಸಿದಾಗ ಅವರು ಹೇಳಿದರು, ವಿಶ್ವ ನಿಯಂತ್ರಕ ತತ್ವದ ನಿಜವಾದ ಸಂಕೇತಗಳನ್ನು ಅನುಸರಿಸದೇ ಇದ್ದವರು ನಾವು.” ಆತ ಕೇಳಿದ ಅಂದ ಮೇಲೆ ನೀವು ಸಂತೋಷದಿಂದಿರಲು ಹೇಗೆ ಸಾಧ್ಯವಾಯಿತು?” ಆ ಪ್ರಶ್ನೆಗೆ ಅವರು ಇಂತು ಉತ್ತರಿಸಿದರು: “ನಾವು ಸತ್ಯಕ್ಕೆ ಬದಲಾಗಿ ಸಂತೋಷವನ್ನು ಆಯ್ಕೆ ಮಾಡಿಕೊಂಡದ್ದರಿಂದ. ಈಗಷ್ಟೇ ನೀನು ನೋಡಿದವರು ಸ್ವಘೋಷಿತ ಗುರುಗಳನ್ನೂ ದುಃಖವನ್ನೂ ಆಯ್ಕೆ ಮಾಡಿಕೊಂಡಂತೆಯೇ!”
ಆದರೆ ಸಂತೋಷ ಎಂಬುದು ಮಾನವನ ಆದರ್ಶವಾಗಿದೆಯಲ್ಲವೇ?” ಕೇಳಿದನಾತ.
ಅವರು ಹೇಳಿದರು, “ಮಾನವನ ಅಂತಿಮ ಗುರಿ ಸತ್ಯ. ಸತ್ಯವು ಸಂತೋಷಕ್ಕಿಂತ ಶ್ರೇಷ್ಠವಾದದ್ದು. ಸತ್ಯ ದರ್ಶನವಾದವನು ತಾನು ಬಯಸಿದ ಚಿತ್ತಸ್ಥಿತಿಯನ್ನು ಪಡೆಯಬಹುದು ಅಥವ ಏನನ್ನೂ ಪಡೆಯದಿರಲೂಬಹುದು. ಸತ್ಯವೇ ಸಂತೋಷ, ಸಂತೋಷವೇ ಸತ್ಯ ಎಂಬುದಾಗಿ ನಾವು ನಟಿಸಿದೆವು. ಜನರು ಅದನ್ನು ನಂಬಿದರು. ನೀನೂ ಸಹ ಇಲ್ಲಿಯ ವರೆಗೆ ಸಂತೋಷ ಮತ್ತು ಸತ್ಯ ಎರಡೂ ಒಂದೇ ಎಂಬುದಾಗಿ ಕಲ್ಪಿಸಿಕೊಂಡಿದ್ದೆ. ಆದರೆ ಸಂತೋಷವು ನಿನ್ನನ್ನು ದುಃಖದಂತೆಯೇ ಬಂಧಿಯಾಗಿಸುತ್ತದೆ.”
ತದನಂತರ ಅವನು ಹಾಗು ಖಿದ್ರ್ ಇಬ್ಬರೂ ಮೊದಲು ಅವರಿದ್ದ ಕೈತೋಟಕ್ಕೆ ಒಯ್ಯಲ್ಪಟ್ಟರು.
ನಿನ್ನ ಒಂದು ಆಸೆಯನ್ನು ನಾನು ಈಡೇರಿಸುತ್ತೇನೆ,” ಎಂಬುದಾಗಿ ಹೇಳಿದ ಖಿದ್ರ್.
ಅವನ ಕೋರಿಕೆ ಇಂತಿತ್ತು: “ನನ್ನ ಹುಡುಕಾಟದಲ್ಲಿ ನಾನೇಕೆ ಯಶಸ್ವಿಯಾಗಲಿಲ್ಲ ಹಾಗು ಅದರಲ್ಲಿ ಯಶಸ್ವಿಯಾಗುವುದು ಹೇಗೆ ಎಂಬುದನ್ನು ತಿಳಿಯಲಿಚ್ಛಿಸುತ್ತೇನೆ.”
ಖಿದ್ರ್ ಹೇಳಿದ, “ನೀನು ನಿನ್ನ ಜೀವನವನ್ನು ಹೆಚ್ಚುಕಮ್ಮಿ ವ್ಯರ್ಥಮಾಡಿರುವೆ. ಸತ್ಯ ದರ್ಶನ ನಿನ್ನ ನಿಜವಾದ ಗುರಿಯಾಗಿರಲೇ ಇಲ್ಲ, ನಿನ್ನ ಗುರಿ ವೈಯಕ್ತಿಕವಾಗಿ ಆನಂದಭರಿತ ಜೀವನ ಗಳಿಸುವುದಾಗಿತ್ತು.”
ಆತ ಪ್ರತಿಕ್ರಿಯಿಸಿದ, “ಆದರೂ ನಾನು ನಿನ್ನನ್ನು ಕಾಣುವಂತಾಯಿತು. ಎಲ್ಲರಿಗೂ ಇಂತಾಗುವುದಿಲ್ಲ.”
ಖಿದ್ರ್ ಹೇಳಿದ, “ಅದೇಕೆಂದರೆ ಒಂದು ಕ್ಷಣ ಕಾಲ ನೀನು ಪ್ರಾಮಾಣಿಕವಾಗಿ ಬೇರೆ ಯಾವ ಉದ್ದೇಶವೂ ಇಲ್ಲದೆ ನಿಜವಾಗಿಯೂ ಸತ್ಯದರ್ಶನ ಮಾಡಲು ಬಯಸಿದೆ. ಆ ಒಂದು ಕ್ಷಣಕಾಲ ನೀನು ಪ್ರಾಮಾಣಿಕವಾಗಿ ಇದ್ದುದಕ್ಕಾಗಿ ನಾನು ನಿನಗೆ ಗೋಚರಿಸಿದೆ.”
ತಾನು ಅಳಿದರೂ ಪರವಾಗಿಲ್ಲ, ಸತ್ಯದರ್ಶನ ಮಾಡಲೇಬೇಕೆಂಬ ಉತ್ಕಟಾಕಾಂಕ್ಷೆ ಅವನ ಮನಸ್ಸಿನಲ್ಲಿ ಮೂಡಿತು.
ಇಂತಿದ್ದರೂ ಖಿದ್ರ್ ಅವನನ್ನು ಅಲ್ಲಿಯೇ ಬಿಟ್ಟು ಎಲ್ಲಿಗೋ ಹೋಗಲಾರಂಭಿಸಿದ, ಖಿದ್ರ್ನನ್ನು ಹಿಂಬಾಲಿಸಿ ಅವನು ಓಡಲಾರಂಭಿಸಿದ.
ಖಿದ್ರ್ ಅವನನ್ನು ಕುರಿತು ಹೇಳಿದ, “ನೀನು ನನ್ನನ್ನು ಹಿಂಬಾಲಿಸಬೇಡ. ನಾನೀಗ ಸುಳ್ಳುಗಳಿಂದ ತುಂಬಿರುವ ಸಾಧಾರಣ ಲೋಕಕ್ಕೆ ಹೋಗುತ್ತಿದ್ದೇನೆ. ನಾನು ಮಾಡಬೇಕಾದ ಕೆಲಸ ಮಾಡಲು ತಕ್ಕುದಾದ ಸ್ಥಳವೇ ಅದು.”
ಅಚ್ಚರಿಯಿಂದ ಆತ ಸುತ್ತಲೂ ನೋಡಿದ. ಅವನು ಪ್ರಾಜ್ಞ ಖಿದ್ರ್‌ನ ಕೈತೋಟದಲ್ಲಿ ಇರಲೇ ಇಲ್ಲ. ಆತನಿದ್ದದ್ದು ಸತ್ಯದ ನಾಡಿನಲ್ಲಿ!

***** 

೮೨. ಹುಲಿಯೂ ನರಿಯೂ
ತನ್ನ ಮುಂಗಾಲುಗಳನ್ನು ಕಳೆದುಕೊಂಡಿದ್ದ ನರಿಯೊಂದು ಕಾಡಿನಲ್ಲಿ ವಾಸಿಸುತ್ತಿತ್ತು. ಅದು ಹೇಗೆ ಕಾಲುಗಳನ್ನು ಕಳೆದುಕೊಂಡಿತು ಎಂಬುದು ಯಾರಿಗೂ ತಿಳಿದಿರಲಿಲ್ಲ. ಬಹುಶಃ ಕಾಡುಪ್ರಾಣಿಗಳನ್ನು ಹಿಡಿಯಲೋಸುಗ ಯಾರೋ ಇಟ್ಟಿದ್ದ ಸಾಧನದಿಂದ ತಪ್ಪಿಸಿಕೊಳ್ಳುವಾಗ ಇಂತಾಗಿದ್ದಿರಬಹುದು. ಕಾಡಿನ ಅಂಚಿನಲ್ಲಿ ವಾಸಿಸುತ್ತಿದ್ದ ಒಬ್ಬನಿಗೆ ಆಗೊಮ್ಮೆ ಈಗೊಮ್ಮೆ ಈ ನರಿ ಗೋಚರಿಸುತ್ತಿತ್ತು. ಈ ನರಿ ಹೇಗೆ ಆಹಾರ ಸಂಪಾದಿಸುತ್ತದೆ ಎಂಬುದನ್ನು ತಿಳಿಯುವ ಕುತೂಹಲ ಅವನಲ್ಲಿ ಮೂಡಿತು. ಒಂದು ದಿನ ಅನತಿ ದೂರದಲ್ಲಿ ನರಿ ಇದ್ದಾಗ ಅವನಿದ್ದ ತಾಣದ ಸಮೀಪದಲ್ಲಿ ಹುಲಿಯೊಂದು ಹೋಗುತ್ತಿರುವದನ್ನು ಕಂಡು ಬಲು ತುರ್ತಾಗಿ ಅವನು ಅಡಗಿ ಕುಳಿತುಕೊಳ್ಳಬೇಕಾಯಿತು. ಆ ಹುಲಿ ಆಗ ತಾನೇ ಬೇಟೆಯಾಡಿದ ಪ್ರಾಣಿಯೊಂದನ್ನು ಕಚ್ಚಿ ಎಳೆದುಕೊಂಡು ಬರುತ್ತಿತ್ತು. ನರಿಗೆ ಕಾಣಿಸುಂತೆ ಹುಲಿ ಒಂದೆಡೆ ಕುಳಿತು ಹೊಟ್ಟೆ ತುಂಬುವಷ್ಟು ಮಾಂಸ ತಿಂದು ಉಳಿದದ್ದನ್ನು ಅಲ್ಲಿಯೇ ಬಿಟ್ಟು ಹೋಯಿತು. ಇಂತು ಹುಲಿ ಬಿಟ್ಟ ಆಹಾರವನ್ನು ನರಿ ತಿಂದಿತು.
ಮಾರನೆಯ ದಿನವೂ ಇಡೀ ಜಗತ್ತಿಗೆ ಆಹಾರ ಸರಬರಾಜು ಮಾಡುವಾತ ಅದೇ ಹುಲಿಯ ಮೂಲಕ ನರಿಗೆ ಆಹಾರದ ಸರಬರಾಜು ಮಾಡಿದ! ಆಗ ಆತ ಇಂತು ಆಲೋಚಿಸಿದ: “ಈ ನಿಗೂಢ ವಿಧಾನದಲ್ಲಿ ನರಿಯ ಪೋಷಣೆ ಸಾಧ್ಯವಾಗುವುದಾದರೆ, ಅಗೋಚರ ಮಾನವಾತೀತ ಶಕ್ತಿಯೊಂದು ಆಹಾರ ಸರಬರಾಜು ಮಾಡುವುದಾದರೆ ನಾನೇಕೆ ಒಂದು ಮೂಲೆಯಲ್ಲಿ ಆರಾಮವಾಗಿ ಕುಳಿತುಕೊಳ್ಳಬಾರದು ಹಾಗು ಅಲ್ಲಿಯೇ ನನ್ನ ದೈನಂದಿನ ಆಹಾರ ನನಗೆ ಸರಬರಾಜು ಆಗಬಾರದು?”
ಇಂಥದ್ದೊಂದು ಪವಾಡವಾಗುವುದೆಂಬ ದೃಢವಾದ ನಂಬಿಕೆ ಅವನಲ್ಲಿ ಇದ್ದದ್ದರಿಂದ ಆಹಾರಕ್ಕಾಗಿ ಕಾಯುತ್ತಾ ಅಲ್ಲಿಯೇ ಕುಳಿತಿದ್ದ. ದಿನಗಳುರುಳಿದರೂ ಏನೂ ಆಗಲಿಲ್ಲ. ದಿನೇದಿನೇ ಅವನ ತೂಕ ಕಮ್ಮಿಯಾಗುತ್ತಿತ್ತು, ಅವನು ಬಲ ಕ್ಷೀಣಿಸುತ್ತಿತ್ತು, ಕೊನೆಗೊಮ್ಮೆ ಹೆಚ್ಚುಕಮ್ಮಿ ಅಸ್ಥಿಪಂಜರವೇ ಆದ. ಪ್ರಜ್ಞಾಹೀನನಾಗುವ ಸ್ಥಿತಿಯನ್ನು ಅವನು ತಲುಪಿದಾಗ ಅಶರೀರವಾಣಿಯೊಂದು ಆತನಿಗೆ ಕೇಳಿಸಿತು: “ಅಯ್ಯಾ ನೀನು ವಿಶ್ವನಿಯಂತ್ರಕ ತತ್ವವನ್ನು ತಪ್ಪಾಗಿ ಅರ್ಥೈಸಿರುವೆ. ಈಗ ಸತ್ಯ ಏನೆಂಬುದನ್ನು ತಿಳಿ. ವಿಕಲಾಂಗ ನರಿಯನ್ನು ಅನುಕರಿಸುವುದಕ್ಕೆ ಬದಲಾಗಿ ನೀನು ಹುಲಿಯ ವರ್ತನೆಯನ್ನು ಅನುಕರಿಸಬೇಕಿತ್ತು!”

***** 

೮೩. ಸಂಯಮ ತಪ್ಪುವಂತೆ ಉದ್ರೇಕಿಸುವ ಸಾವು
ಹಿಂದೊಮ್ಮೆ ೬೦ ಮಂದಿ ಶಿಷ್ಯಂದಿರಿದ್ದ ಫಕೀರನೊಬ್ಬನಿದ್ದ. ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ತನಗೆ ತಿಳಿದಿದ್ದೆಲ್ಲವನ್ನೂ ಆತ ಶಿಷ್ಯರಿಗೆ ಕಲಿಸಿದ ನಂತರ ಅವರಿಗೆ ಹೊಸ ಅನುಭವಗಳನ್ನು ಒದಗಿಸಬೇಕೆಂದು ಅವನು ತೀರ್ಮಾನಿಸಿದ.  ಎಲ್ಲರೂ ಒಟ್ಟಾಗಿ ಒಂದು ಸುದೀರ್ಘ ಪ್ರಯಾಣ ಮಾಡಬೇಕೆಂಬುದಾಗಿಯೂ ಆ ಅವಧಿಯಲ್ಲಿ ತನಗೂ ತಿಳಿಯದ ಏನಾದರೊಂದು ವಿದ್ಯಮಾನ ಜರಗುವುದಾಗಿಯೂ ಆತ ತನ್ನ ಶಿಷ್ಯರಿಗೆ ಹೇಳಿದ. ವಿದ್ಯಾಭ್ಯಾಸದ ಈ ಹಂತವನ್ನು ತಲುಪಲು ತಾನು ಕಲಿಸಿದ್ದರಲ್ಲಿ ಎಷ್ಟು ಬೇಕೋ ಅಷ್ಟನ್ನು ಮನೋಗತ ಮಾಡಿಕೊಂಡವರು ಮಾತ್ರ ಈ ಪ್ರಯಾಣದಲ್ಲಿ ಕೊನೆಯ ವರೆಗೆ ತನ್ನೊಂದಿಗೆ ಇರಲು ಸಾಧ್ಯ ಎಂಬುದನ್ನೂ ಸ್ಪಷ್ಟಪಡಿಸಿದ.
ಫಕೀರನಿಗೆ ಬದಲಾಗಿ ನಾನು ಸಾಯಲೇ ಬೇಕು ಎಂಬ ವಾಕ್ಯವನ್ನು ಕಂಠಸ್ಥ ಮಾಡಿಕೊಳ್ಳಲು ಅವರಿಗೆ ಹೇಳಿದ. ಅಷ್ಟೇ ಅಲ್ಲದೆ ತಾನು ಎರಡೂ ಕೈಗಳನ್ನು ಮೇಲೆತ್ತಿದಾಗಲೆಲ್ಲ ಗಟ್ಟಿಯಾಗಿ ಅದನ್ನು ಹೇಳಬೇಕೆಂಬುದಾಗಿಯೂ ತಿಳಿಸಿದ. ಇದನ್ನು ಕೇಳಿದ ತಕ್ಷಣ ಶಿಷ್ಯರಿಗೆ ಫಕೀರನ ಉದ್ದೇಶದ ಕುರಿತು ಸಂಶಯ ಮೂಡಿತು. ಅವರು ಈ ಕುರಿತು ಮೆಲುದನಿಯಲ್ಲಿ ಗೊಣಗಲಾರಂಭಿಸಿದರು.
೬೦ ಮಂದಿ ಶಿಷ್ಯರ ಪೈಕಿ ೫೯ ಮಂದಿ ಅವನನ್ನು ಬಿಟ್ಟುಹೋದರು. ಪ್ರಯಾಣದ ಅವಧಿಯಲ್ಲಿ ಎಲ್ಲಿಯೋ ಒಂದೆಡೆ ಫಕೀರ ಗಂಭೀರವಾದ ಗಂಡಾಂತರವೊಂದನ್ನು ಎದುರಿಸಬೇಕಾಗುತ್ತದೆಂದೂ ಆ ಸಂದರ್ಭದಲ್ಲಿ ತನ್ನ ಬದಲು ಶಿಷ್ಯರನ್ನು ಬಲಿ ಕೊಡುವ  ಇರಾದೆ ಅವನದ್ದು ಎಂಬದಾಗಿ ಅವರು ನಂಬಿದ್ದರು. ಅವನು ಕೊಲೆಯಂಥ ಗುರುತರವಾದ ಅಪರಾಧವೊಂದನ್ನು ಮಾಡುವ ಯೋಜನೆ ತಯಾರಿಸುತ್ತಿರಬೇಕೆಂಬುದಾಗಿ ತಾವು ನಂಬಿರುವುದರಿಂದ ಅವನು ಹಾಕಿದ ಷರತ್ತಿಗೆ ಒಳಪಟ್ಟು ಅವನೊಂದಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲವೆಂಬುದಾಗಿಯೂ ಅವನಿಗೆ ಅವರು ಹೇಳಿದರು.
ಉಳಿದಿದ್ದ ಒಬ್ಬ ಶಿಷ್ಯನೊಂದಿಗೆ ಫಕೀರ ಪ್ರಯಾಣ ಆರಂಭಿಸಿದ. ಸಮೀಪದ ನಗರವೊಂದನ್ನು ಅವರು ಪ್ರವೇಶಿಸುವ ಮುನ್ನವೇ ಅದನ್ನು ಒಬ್ಬ ಪ್ರಜಾಪೀಡಕ ದುಷ್ಟ ರಾಜ ತನ್ನ ವಶಕ್ಕೆ ತೆಗೆದುಕೊಂಡಿದ್ದ. ತನ್ನ ಶಕ್ತಿಯನ್ನು ನಾಟಕೀಯವಾಗಿ ಪ್ರದರ್ಶಿಸಿ ನಗರದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸುವ ಉದ್ದೇಶ ಅವನದಾಗಿತ್ತು. ಏಂದೇ ಆತ ಸೈನಿಕರನ್ನು ಕರೆದು ನಗರದ ಮೂಲಕ ಹಾದುಹೋಗುತ್ತಿರುವ ಯಾರಾದರೊಬ್ಬ ಅಮಾಯಕನೊಬ್ಬನನ್ನು ಇವನೊಬ್ಬ ಕಿಡಿಗೇಡಿಎಂಬುದಾಗಿ ಆಪಾದಿಸಿ ಹಿಡಿದು ತರುವಂತೆ ಆಜ್ಞಾಪಿಸಿದ. ಅವನ ಅಣತಿಯಂತೆ ಸೈನಿಕರು ಯುಕ್ತ ದಾರಿಹೋಕನಿಗಾಗಿ ಹುಡುಕಲಾರಂಬಿಸಿದರು.
ಅವರ ಕಣ್ಣಿಗೆ ಬಿದ್ದ ಮೊದಲನೇ ವ್ಯಕ್ತಿಯೇ ಫಕೀರನ ಶಿಷ್ಯ. ಅವನನ್ನು ಅವರು ದಸ್ತಗಿರಿ ಮಾಡಿ ವಧಾಸ್ಥಾನದ ಸಮೀಪದಲ್ಲಿ ಇದ್ದ ರಾಜನ ಸಮ್ಮುಖಕ್ಕೆ ಎಳೆದೊಯ್ದರು. ಯಾರನ್ನಾದರೂ ಗಲ್ಲಿಗೇರಿಸುವ ಮುನ್ನ ಬಾರಿಸುತ್ತದ್ದ ನಗಾರಿಯನ್ನು ಸೈನಿಕರು ಬಾರಿಸತೊಡಗಿದ್ದರಿಂದ ಭಯಭೀತರಾದ ಜನ ವಧಾಸ್ಥಾನದ ಸುತ್ತ ಸೇರಿದರು. ಕಿಡಿಗೇಡಿಗಳನ್ನೇ ಆಗಲಿ, ತನ್ನ ವಿರುದ್ಧ ಸೊಲ್ಲೆತ್ತುವವರನ್ನೇ ಆಗಲಿ, ತನ್ನಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸುವವರನ್ನೇ ಆಗಲಿ ತಾನು ಸಹಿಸಿಕೊಳ್ಳುವುದಿಲ್ಲ ಎಂಬುದಾಗಿ ಘೋಷಿಸಿದ ರಾಜ. ಇದು ಕೇವಲ ಹೆದರಿಸುವ ಘೋಷಣೆಯಲ್ಲ ಎಂಬುದನ್ನು ಸಾಬೀತು ಪಡಿಸಲೋಸುಗ ಫಕೀರನ ಶಿಷ್ಯನಿಗೆ ಗಲ್ಲುಶಿಕ್ಷೆ ವಿಧಿಸಿದ.
ಇದನ್ನು ಕೇಳಿದ ತಕ್ಷಣವೇ ಶಿಷ್ಯನನ್ನು ಹಾದಿಹೋಕನಾಗುವಂತೆ ಪ್ರೇರೇಪಿಸಿದ ತನ್ನ ತಪ್ಪಿಗಾಗಿ ಶಿಷ್ಯನ ಬದಲು ತನ್ನನ್ನೇ ಗಲ್ಲಿಗೇರಿಸುವಂತೆ ರಾಜನನ್ನು ಕೋರಿಕೊಳ್ಳುತ್ತಾ ಫಕೀರ ತನ್ನೆರಡೂ ಕೈಗಳನ್ನು ಮೇಲೆತ್ತಿದ್ದ. ತಕ್ಷಣವೇ ಫಕೀರನಿಗೆ ಬದಲಾಗಿ ತನ್ನನ್ನೇ ಗಲ್ಲಿಗೇರಿಸುವಂತೆ ಶಿಷ್ಯ ರಾಜನಿಗೆ ಕೇಳಿಸುವಂತೆ ಗಟ್ಟಿಯಾಗಿ ಕಿರುಚಿದ.
ಇದನ್ನು ಕೇಳಿದ ರಾಜ ದಿಗ್ಭ್ರಾಂತನಾದ. ಸಾಯಲು ಪೈಪೋಟಿ ನಡೆಸುತ್ತಿರುವ ಫಕೀರ ಹಾಗು ಅವನ ಶಿಷ್ಯ ಯಾವ ರೀತಿಯ ಜನರಾಗಿರಬಹುದು ಎಂಬ ಚಿಂತೆ ಅವನನ್ನು ಕಾಡತೊಡಗಿತು. ಅವರ ವರ್ತನೆಯನ್ನು ಶೌರ್ಯದ ಲಕ್ಷಣ ಎಂಬುದಾಗಿ ಪರಿಗಣಿಸಿ ಜನತೆ ತನಗೆ ವಿರುದ್ಧವಾದರೇನು ಮಾಡುವುದು ಎಂಬ ಚಿಂತೆಯೂ ಅವನನ್ನು ಕಾಡತೊಡಗಿತು. ಮುಂದೇನು ಮಾಡಬೇಕೆಂಬುದರ ಕುರಿತಾಗಿ ಸಲಹೆ ನೀಡುವಂತೆ ತನ್ನ ಆತ ಸಮಾಲೋಚಕರಿಗೆ ಹೇಳಿದ.
ಅವರು ತಮ್ಮತಮ್ಮೊಳಗೆ ಚರ್ಚಿಸಿದರು. ಫಕೀರ ಹಾಗು ಅವನ ಶಿಷ್ಯನ ವರ್ತನೆ ಶೌರ್ಯದ ಸೂಚಕವಾಗಿದ್ದರೆ ಸಾಯಲು ಇಷ್ಟೊಂದು ಕಾತುರವೇಕೆ ಎಂಬುದನ್ನು ಫಕೀರನಿಂದ ತಿಳಿದು ಇನ್ನೂ ಕ್ರೂರವಾಗಿ ಅವರೊಂದಿಗೆ ವ್ಯವಹರಿಸುವುದರ ಮೂಲಕ ಜನರಲ್ಲಿ ಭಯಮೂಡಿಸುವುದರ ಹೊರತಾಗಿ ಬೇರೇನೂ ಮಾಡಲು ಸಾಧ್ಯವಿಲ್ಲವೆಂಬುದಾಗಿ ರಾಜನಿಗೆ ತಿಳಿಸಿದರು.
ಅಂತೆಯೇ ರಾಜ ಕೇಳಿದಾಗ ಆ ಸ್ಥಳದಲ್ಲಿ ಆ ಮುಹೂರ್ತದಲ್ಲಿ ಯಾರು ಸಾವನ್ನಪ್ಪುತ್ತಾರೋ ಅವರು ಪುನಃ ಎದ್ದುಬಂದು ಅಮರರಾಗುತ್ತಾರೆ ಎಂಬ ಭವಿಷ್ಯವಾಣಿ ಇರುವುದೇ ತಮ್ಮ ನಡುವಿನ ಪೈಪೋಟಿಗೆ ಕಾರಣ ಎಂಬುದಾಗಿ ಫಕೀರ ತಿಳಿಸಿದ.
ತಾನು ಅಮರತ್ವ ಗಳಿಸದೇ ಇರುವಾಗ ಬೇರೊಬ್ಬ ಅದನ್ನು ಗಳಿಸಲು ಅವಕಾಶ ಏಕೆ ನೀಡಬೇಕು ಎಂಬುದರ ಕುರಿತು ಕ್ಷಣಕಾಲ ಆಲೋಚಿಸಿದ ರಾಜ ಫಕೀರ ಹಾಗು ಅವನ ಶಿಷ್ಯನಿಗೆ ಬದಲಾಗಿ ತಕ್ಷಣ ತನ್ನನ್ನೇ ಗಲ್ಲಿಗೇರಿಸುವಂತೆ ಆಜ್ಞಾಪಿಸಿದ.
ಆ ಕೂಡಲೆ ರಾಜನ ಸಹಚರರಲ್ಲಿ ಅತ್ಯಂತ ದುಷ್ಟರಾಗಿದ್ದವರೂ ಅಮರತ್ವ ಬಯಸಿ ತಮ್ಮನ್ನು ತಾವೇ ಬಾಕುವಿನಿಂದ ಇರಿದುಕೊಂಡು ಸತ್ತರು. ಅವರಾಗಲೀ ರಾಜನಾಗಲೀ ಪುನಃ ಏಳಲಿಲ್ಲ. ತತ್ಪರಿಣಾಮವಾಗಿ ಉಂಟಾದ ಗೊಂದಲದ ನಡುವೆ ಫಕೀರ ಹಾಗು ಅವನ ಶಿಷ್ಯ ಅಲ್ಲಿಂದ ಸದ್ದಿಲ್ಲದೇ ಹೊರಟು ಹೋದರು.

***** 

೮೪. ನಾಯಿಯೂ ದೊಣ್ಣೆಯೂ ಸೂಫಿಯೂ
ಒಂದು ದಿನ ಸೂಫಿ ಸಂತನಂತೆ ಉಡುಪು ಧರಿಸಿದಾತನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯೊಂದು ಅವನಿಗೆದುರಾಯಿತು. ತನ್ನ ಕೈನಲ್ಲಿದ್ದ ದೊಣ್ಣೆಯಿಂದ ಅವನು ಅದಕ್ಕೆ ಹೊಡೆದ. ನಾಯಿ ತೀವ್ರ ನೋವಿನಿಂದ ಗೋಳಿಡುತ್ತಾ ಮಹಾ ಪ್ರಾಜ್ಞ ಅಬು ಸಯ್ಯದ್‌ನ ಹತ್ತಿರಕ್ಕೆ ಓಡಿ ಅವನ ಕಾಲುಗಳ ಮೇಲೆ ಬಿದ್ದು ತನ್ನ ಗಾಯಗೊಂಡ ಮುಂಗಾಲನ್ನು ತೋರಿಸಿ ತನ್ನೊಂದಿಗೆ ಇಷ್ಟು ಕ್ರೂರವಾಗಿ ವರ್ತಿಸಿದ ಸೂಫಿಗೆ ತಕ್ಕ ಶಿಕ್ಷೆ ವಿಧಿಸಿ ತನಗಾದ ಅನ್ಯಾಯಕ್ಕೆ ತಕ್ಕುದಾದ ನ್ಯಾಯ ಒದಗಿಸಿ ಕೊಡಬೇಕಾಗಿ ಕೋರಿತು.
ಆ ವಿವೇಕಿಯು ಈರ್ವರನ್ನೂ ಒಟ್ಟಿಗೆ ಸೇರಿಸಿ ಸೂಫಿಗೆ ಹೇಳಿದ, “ಓ ಮತಿಹೀನನೇ, ಮೂಕಪ್ರಾಣಿಯೊಂದರ ಜೊತೆ ಇಷ್ಟು ಕ್ರೂರವಾಗಿ ವರ್ತಿಸಲು ನಿನಗೆ ಹೇಗೆ ಸಾಧ್ಯವಾಯಿತು? ನೀನೇನು ಮಾಡಿರುವೆ ಎಂಬುದನ್ನು ಒಮ್ಮೆ ಸರಿಯಾಗಿ ನೋಡು!”
ಸೂಫಿ ಉತ್ತರಿಸಿದ: ಅದು ನನ್ನ ತಪ್ಪಲ್ಲ, ನಾಯಿಯದ್ದೇ ತಪ್ಪು. ನಾನು ಸ್ವಸಂತೋಷಕ್ಕಾಗಿ ನಾಯಿಗೆ ಹೊಡೆಯಲಿಲ್ಲ. ಅದು ನನ್ನ ಬಟ್ಟೆಯನ್ನು ಹೊಲಸು ಮಾಡಿದ್ದಕ್ಕಾಗಿ ಹೊಡೆದೆ.”
ಆದರೂ ನಾಯಿ ತನ್ನ ಪಟ್ಟು ಬಿಡಲಿಲ್ಲ.
ಅದ್ವಿತೀಯ ಪ್ರಾಜ್ಞ ನಾಯಿಯನ್ನು ಉದ್ದೇಶಿಸಿ ಇಂತೆಂದ: “ಅತ್ಯುತ್ತಮ ಪರಿಹಾರ ದೊರೆಯುವ ವರೆಗೆ ಕಾಯುವುದಕ್ಕೆ ಬದಲಾಗಿ ನಿನ್ನ ನೋವಿಗೊಂದು ಪರಿಹಾರ ಒದಗಿಸಲು ನನಗೆ ಅನುಮತಿ ಕೊಡು.”
ನಾಯಿ ಹೇಳಿತು, “ಓ ಮಹಾನ್‌ ವಿವೇಕಿಯೇ, ಈತ ಸೂಫಿಯಂತೆ ಉಡುಪು ಧರಿಸಿದ್ದನ್ನು ನೋಡಿ ನನಗೇನು ಹಾನಿ ಉಂಟು ಮಾಡಲಾರ ಎಂಬ ನಂಬಿಕೆಯಿಂದ ಅವನ ಸನಿಹಕ್ಕೆ ಹೋದೆ. ಅವನೇನಾದರೂ ಬೇರೆ ಉಡುಪು ಧರಿಸಿದ್ದಿದ್ದರೆ ನಾನು ಅವನಿಂದ ಬಹು ದೂರದಲ್ಲಿಯೇ ಇರುತ್ತಿದ್ದೆ. ಹೊರನೋಟಕ್ಕೆ ಸತ್ಯದ ಹಾದಿಯಲ್ಲಿ ಇರುವವರಂತೆ ಗೋಚರಿಸುವವರಿಂದ ಅಪಾಯವಿಲ್ಲ ಎಂಬುದಾಗಿ ನಂಬಿದ್ದೇ ನನ್ನ ತಪ್ಪು. ಅವನಿಗೆ ಶಿಕ್ಷೆ ವಿಧಿಸಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದರೆ ಆಯ್ದ ಕೆಲವರು ಮಾತ್ರ ಧರಿಸಬಹುದಾದ ಆ ಉಡುಪನ್ನು ಅವನಿಂದ ಕಿತ್ತುಕೊಳ್ಳಿ. ಸತ್ಯದ ಮಾರ್ಗದಲ್ಲಿ ನಡೆಯುವವರು ಧರಿಸಬೇಕಾದ ಉಡುಪನ್ನು ಅವನು ಧರಿಸದಂತೆ ಪ್ರತಿಬಂಧಿಸಿ....

***** 

೮೫. ನೂರಿ ಬೆ ಎಂಬಾತನ ಪುರಾತನ ಪೆಠಾರಿ
ಚಿಂತನಶೀಲ ನೂರಿ ಬೆ ಅಲ್ಬೇನಿಯಾದ ಒಬ್ಬ ಗೌರವಾನ್ವಿತ ನಿವಾಸಿ. ತನಗಿಂತ ಬಹಳಷ್ಟು ಚಿಕ್ಕವಳಾಗಿದ್ದವಳೊಬ್ಬಳನ್ನು ಅವನು ಮದುವೆಯಾಗಿದ್ದ. ಒಂದು ದಿನ ಅವನು ಮಾಮೂಲಿಗಿಂತ ಬೇಗನೆ ಮನೆಗೆ ಹಿಂದಿರುಗಿದಾಗ ಅವನ ಅತ್ಯಂತ ವಿಧೇಯ ಸೇವಕನೊಬ್ಬ ಓಡಿ ಬಂದು ಹೇಳಿದ, “ನಿಮ್ಮ ಹೆಂಡತಿ, ಅರ್ಥಾತ್ ನಮ್ಮ ಯಜಮಾನಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಅವರ ಕೊಠಡಿಯಲ್ಲಿ ಒಬ್ಬ ಮನುಷ್ಯ ಹಿಡಿಸಬಹುದಾದಷ್ಟು ದೊಡ್ಡ ಪೆಠಾರಿಯೊಂದಿದೆ. ಅದು ನಿಮ್ಮ ಅಜ್ಜಿಯದ್ದು. ನಿಜವಾಗಿ ಅದರಲ್ಲಿ ಕಸೂತಿ ಕೆಲಸ ಮಾಡಿದ ಪುರಾತನ ವಸ್ತ್ರಗಳಿರಬೇಕು. ಆದರೆ ಅದರಲ್ಲಿ ಇನ್ನೂ ಏನೋ ಹೆಚ್ಚಿನದ್ದು ಇದೆ ಎಂಬುದು ನನ್ನ ನಂಬಿಕೆ. ನಿಮ್ಮ ಅತ್ಯಂತ ಹಳೆಯ ವಿಶ್ವಾಸಾರ್ಹ ಸೇವಕ ನಾನಾಗಿದ್ದರೂ ಯಜಮಾನಿ ಆ ಪೆಠಾರಿಯೊಳಗೆ ಏನಿದೆ ಎಂಬುದನ್ನು ನೋಡಲು ಬಿಡುತ್ತಿಲ್ಲ.”
ನೂರಿ ತನ್ನ ಹೆಂಡತಿಯ ಕೊಠಡಿಗೆ ಹೋಗಿ ನೋಡಿದ. ಬೃಹತ್‌ ಗಾತ್ರದ ಮರದ ಪೆಟ್ಟಿಗೆಯೊಂದರ ಪಕ್ಕದಲ್ಲಿ ಆಕೆ ವಿಷಣ್ಣವದನಳಾಗಿ ಕುಳಿತಿದ್ದಳು. ಅವನು ಕೇಳಿದ, “ಆ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನು ನನಗೆ ತೋರಿಸುವೆಯಾ?”
ಅವಳು ಕೇಳಿದಳು, “ಏಕೆ ತೋರಿಸಬೇಕು? ಒಬ್ಬ ಸೇವಕ ಸಂಶಯ ಪಟ್ಟದ್ದಕ್ಕಾಗಿಯೋ ಅಥವ ನೀನು ನನ್ನನ್ನು ನಂಬದಿರುವುದಕ್ಕಾಗಿಯೋ?”
ಒಳ ಅರ್ಥಗಳ ಅಥವ ಪ್ರಚ್ಛನ್ನ ಭಾವಗಳ ಕುರಿತು ಆಲೋಚಿಸದೆಯೇ ಪೆಟ್ಟಿಗೆಯ ಮುಚ್ಚಳ ತೆರೆದು ತೋರಿಸುವುದು ಸುಲಭವಲ್ಲವೇ?” ಕೇಳಿದ ನೂರಿ.
ಅದು ಸಂಭವನೀಯ ಎಂಬುದಾಗಿ ನನಗನ್ನಿಸುತ್ತಿಲ್ಲ,” ಅವಳು ಹೇಳಿದಳು.
ಅದಕ್ಕೆ ಬೀಗ ಹಾಕಿದೆಯೇ?”
ಹೌದು.”
ಬೀಗದ ಕೈ ಎಲ್ಲಿದೆ?”
ಅದನ್ನು ಅವಳು ಎತ್ತಿ ಹಿಡಿದು ತೋರಿಸುತ್ತಾ ಹೇಳಿದಳೂ, “ಸೇವಕನನ್ನು ಕೆಲಸದಿಂದ ತೆಗೆದು ಹಾಕಿದರೆ ಇದನ್ನು ಕೊಡುತ್ತೇನೆ.”
ಸೇವಕನನ್ನು ಕೆಲಸದಿಂದ ಅವನು ತೆಗೆದು ಹಾಕಿದ. ಹೆಂಡತಿ ಬೀಗದ ಕೈಯನ್ನು ಅವನಿಗೆ ಕೊಟ್ಟು ಹೊರಗೆ ಹೋದಳು. ಅವಳ ಮನಸ್ಸು ಪ್ರಕ್ಷುಬ್ಧವಾಗಿದ್ದದ್ದು ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ನೂರಿ ಬೆ ಸುದೀರ್ಘ ಕಾಲ ಆಲೋಚಿಸುತ್ತಿದ್ದ. ಆ ನಂತರ ಅವನು ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕರೆಯಿಸಿದ. ಅದನ್ನು ತೆರೆಯದೆಯೇ ರಾತ್ರಿಯ ವೇಳೆ ಎಲ್ಲರೂ ಸೇರಿ ಹೊತ್ತೊಯ್ದು ತೋಟದ ಮೂಲೆಯೊಂದರಲ್ಲಿ ಹೂಳಿದರು.
ಆ ವಿಷಯದ ಕುರಿತಾಗಿ ಮುಂದೆಂದೂ ಯಾರೂ ಏನೂ ಹೇಳಲೇ ಇಲ್ಲ.

***** 

೮೬. ಉಯಿಲಿನ ಮೂಲಕ ನೀಡಿದ ಆಸ್ತಿ
ಒಬ್ಬಾತ ತನ್ನ ಮನೆಯಿಂದ ಬಲು ದೂರದ ಊರಿನಲ್ಲಿ ವಿಧಿವಶನಾದ. ಅವನ ಉಯಿಲಿನಲ್ಲಿ ಆಸ್ತಿ ವಿಲೇವಾರಿಗೆ ಸಂಬಂಧಿಸಿದಂತೆ ಇಂತು ಬರೆದಿತ್ತು:
ಜಮೀನು ಇರುವ ಸ್ಥಳದಲ್ಲಿನ ಸಮುದಾಯವು ತಮಗೆ ಇಷ್ಟವಾದದ್ದನ್ನು ತೆಗೆದುಕೊಳ್ಳಲಿ, ಮತ್ತು ತಮಗೆ ಇಷ್ಟವಾದದ್ದನ್ನು ವಿನಯ ಸಂಪನ್ನನಾದ ಆರಿಫ್‌ಗೆ ನೀಡಲಿ.”
ಆ ಸನ್ನಿವೇಶದಲ್ಲಿ ಆರಿಫ್‌ ಬಹಳ ಚಿಕ್ಕ ವಯಸ್ಸಿನವನಾಗಿದ್ದದ್ದರಿಂದ ಪ್ರಭಾವ ಬೀರುವ ವಿಷಯಕ್ಕೆ ಸಂಬಂಧಿಸದಂತೆ ಸಮುದಾಯದಲ್ಲಿ ಕೊನೆಯ ಸ್ಥಾನದಲ್ಲಿದ್ದ. ಆದ್ದರಿಂದ ಹಿರಿಯರು ಜಮೀನಿನಲ್ಲಿ ತಮಗೆ ಇಷ್ಟವಾದ ಭಾಗವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಯಾರಿಗೂ ಬೇಡದ ಕೆಲಸಕ್ಕೆ ಬಾರದ ಭಾಗವನ್ನು ಮಾತ್ರ ಆರಿಫ್‌ಗೆ ಬಿಟ್ಟುಕೊಟ್ಟರು.
ವರ್ಷಗಳು ಉರುಳಿದವು. ಆರಿಫ್‌ ಬೆಳೆದು ದೊಡ್ಡವನಾದ, ಬಲಶಾಲಿಯಾದ, ವಿವೇಕಿಯಾದ. ಸಮುದಾಯದ ಹಿರಿಯರ ಹತ್ತಿರ ಹೋಗಿ ತನ್ನ ಪಾಲಿನ ಪಿತ್ರಾರ್ಜಿತ ಸ್ವತ್ತಿಗೆ ಬೇಡಿಕೆ ಸಲ್ಲಿಸಿದ. “ಉಯಿಲಿನ ಪ್ರಕಾರ ನಿನಗೇನು ಸಲ್ಲಬೇಕೋ ಅದನ್ನು ನಿನಗೆ ಕೊಟ್ಟಿದ್ದೇವೆ,” ಎಂಬುದಾಗಿ ಹೇಳಿದರು ಹಿರಿಯರು. ತಾವು ಅನ್ಯಾಯವಾಗಿ ಏನನನ್ನೂ ತೆಗೆದುಕೊಂಡಿಲ್ಲ ಅನ್ನುವುದು ಅವರ ನಂಬಿಕೆಯಾಗಿತ್ತು. ಏಕೆಂದರೆ ತಮಗೆ ಇಷ್ಟವಾದ್ದನ್ನು ತೆಗೆದುಕೊಳ್ಳಲಿ ಎಂಬುದಾಗಿ ಉಯಿಲಿನಲ್ಲಿ ಹೇಳಿತ್ತು!
ಈ ಕುರಿತಾದ ಚರ್ಚೆ ನಡೆಯುತ್ತಿರುವಾಗ ಗಂಭೀರ ಮುಖ-ಭಾವದ, ಗಮನ ಸೆಳೆಯುವ ವ್ಯಕ್ತಿತ್ವ ಉಳ್ಳ ಅಪರಿಚಿತನೊಬ್ಬ ಅವರ ನಡುವೆ ಕಾಣಿಸಿಕೊಂಡ. ಅವನು ಹೇಳಿದ, “ನೀವು ನಿಮ್ಮದಾಗಿಸಿಕೊಳ್ಳಬೇಕು ಎಂಬುದಾಗಿ ಬಯಸುವಂಥದ್ದನ್ನು ಆರಿಫ್‌ಗೆ ಕೊಡಬೇಕು, ಅವನು ಅದರ ಪೂರ್ಣ ಲಾಭ ಪಡೆಯುವಂತಾಗಬೇಕು - ಇದು ಆ ಉಯಿಲಿನ  ಅರ್ಥ.” ಅತಿಮಾನುಷ ಅನ್ನಬಹುದಾಗಿದ್ದ ಅಪರಿಚಿತ ಇಂತು ವಿವರಿಸಿದ: “ತನ್ನ ಆಸ್ತಿಯನ್ನು ಸಂರಕ್ಷಿಸುವ ಸ್ಥಿತಿಯಲ್ಲಿ ಇಲ್ಲದಿರುವಾಗ ಉಯಿಲುಗಾರ ಸತ್ತ. ಆಗ ಅವನೇನಾದರೂ ಆರಿಫ್‌ ಆಸ್ತಿಯನ್ನು ಪಡೆಯುವವನು ಎಂಬುದಾಗಿ ನೇರವಾಗಿ ಬರೆದಿದ್ದರೆ ಸಮುದಾಯದವರು ಆಸ್ತಿಯನ್ನು ಕಬಳಿಸುವ ಸಾಧ್ಯತೆ ಇತ್ತು. ಕನಿಷ್ಠಪಕ್ಷ ಅದರಿಂದ ಸಮುದಾಯದಲ್ಲಿ ಮತಭೇದ ಅಥವ ಅಂತಃಕಲಹ ಉಂಟಾಗುತ್ತಿತ್ತು. ಆ ಅಸ್ತಿಯನ್ನು ನೀವು ನಿಮ್ಮ ಸ್ವಂತದ್ದು ಎಂಬುದಾಗಿ ಪರಿಗಣಿಸುವಂತಾದರೆ ಅದನ್ನು ನೀವು ಬಹಳ ಜಾಗರೂಕತೆಯಿಂದ ಸಂರಕ್ಷಿಸುವಿರಿ ಎಂಬುದು ಆತನಿಗೆ ತಿಳಿದಿತ್ತು. ಆದ್ದರಿಂದ ಆಸ್ತಿಯ ಸಂರಕ್ಷಣೆಯೂ ಆಗಿ ಯುಕ್ತ ಸಮಯದಲ್ಲಿ ಅದು ನ್ಯಾಯಯುತ ವಾರಸುದಾರನಿಗೆ ಸೇರುವಂತಾಗಲಿ ಎಂಬ ಉದ್ದೇಶದಿಂದ ಆತ ಬಲು ಜಾಗರೂಕತೆಯಿಂದ ಈ ರೀತಿಯಲ್ಲಿ ಉಯಿಲನ್ನು ಬರೆದ. ನ್ಯಾಯಯುತ ವಾರಸುದಾರನಿಗೆ ಆಸ್ತಿ ಸೇರಬೇಕಾದ ಕಾಲ ಈಗ ಬಂದಿದೆ.”
ಸಮುದಾಯದವರಿಗೆ ಉಯಿಲಿನ ನಿಜ ಉದ್ದೇಶದ ಅರಿವು ಇಂತು ಮೂಡಿದ್ದರಿಂದ ಅವರು ಆಸ್ತಿಯನ್ನು ಹಿಂದಿರುಗಿಸಿದರು.

***** 

೮೭. ಫಕೀರನೂ ಹಣವೂ
ಫಕೀರನೊಬ್ಬ ಮೌನವಾಗಿ ಪ್ರಾರ್ಥಿಸುತ್ತಿದ್ದ. ಫಕೀರನ ಭಕ್ತಿ ಹಾಗೂ ಶ್ರದ್ಧೆಯನ್ನು ಗಮನಿಸುತ್ತಿದ್ದ ಶ್ರೀಮಂತ ವ್ಯಾಪಾರಿಯೊಬ್ಬ ಅವನನ್ನು ಬಹುವಾಗಿ ಮೆಚ್ಚಿದ. ಅವನು ಫಕೀರನಿಗೆ ಚಿನ್ನದ ನಾಣ್ಯಗಳಿದ್ದ ಥೈಲಿಯೊಂದನ್ನು ಕೊಡುಗೆಯಾಗಿ ನೀಡಲಿಚ್ಛಿಸಿ ಹೇಳಿದ, “ಇದನ್ನು ದಯವಿಟ್ಟು ಸ್ವೀಕರಿಸಿ. ದೇವರ ಸಲುವಾಗಿ ಇದನ್ನು ವ್ಯಯಿಸುವಿರೆಂಬುದು ನನಗೆ ತಿಳಿದಿದೆ.”
ಫಕೀರ ಉತ್ತರಿಸಿದ, “ಒಂದು ಕ್ಷಣ ತಡೆಯಿರಿ. ನಿಮ್ಮ ಹಣವನ್ನು ತೆಗೆದುಕೊಳ್ಳುವುದು ನ್ಯಾಯಸಮ್ಮತವಾಗುತ್ತದೋ ಇಲ್ಲವೋ ಎಂಬುದರ ಕುರಿತು ನನಗೆ ಸಂಶಯವಿದೆ. ನೀವು ಭಾರೀ ಶ್ರೀಮಂತರೇನು? ನಿಮ್ಮ ಮನೆಯಲ್ಲಿ ತುಂಬಾ ಹಣವಿದೆಯೇನು?”
ಖಂಡಿತ ಇದೆ. ಕನಿಷ್ಠ ಪಕ್ಷ ಒಂದು ಸಾವಿರ ಚಿನ್ನದ ನಾಣ್ಯಗಳು ಮನೆಯಲ್ಲಿದೆ,” ಗರ್ವದಿಂದ ಉತ್ತರಿಸಿದ ವ್ಯಾಪಾರಿ.
ನಿಮಗೆ ಇನ್ನೂ ಒಂದು ಸಾವಿರ ಚಿನ್ನದ ನಾಣ್ಯಗಳು ಬೇಕೇನು?” ಕೇಳಿದ ಫಕೀರ.
ಬೇಡವೆಂದು ಹೇಳಲಾರೆ. ಹೆಚ್ಚುಹೆಚ್ಚು ಹಣ ಸಂಪಾದಿಸಲೋಸುಗ ನಾನು ಪ್ರತೀ ದಿನ ಕಷ್ಟಪಟ್ಟು ಕೆಲಸ ಮಾಡುತ್ತೇನೆ.”
ಮತ್ತೂ ಒಂದು ಸಾವಿರ ಚಿನ್ನದ ನಾಣ್ಯಗಳು ಸಿಕ್ಕಿದರೆ ಆದೀತು ಎಂಬ ಆಸೆಯಿದೆಯೇ?”
ಇದೆ. ನಾನು ಹೆಚ್ಚುಹೆಚ್ಚು ಹಣ ಸಂಪಾದಿಸುವಂತಾಗಲಿ ಎಂಬುದಾಗಿ ಪ್ರತೀ ದಿನ ಪ್ರಾರ್ಥಿಸುತ್ತೇನೆ.”
ಫಕೀರ ಹಣದ ಥೈಲಿಯನ್ನು ವ್ಯಾಪಾರಿಯತ್ತ ಹಿಂದಕ್ಕೆ ತಳ್ಳಿ ಹೇಳಿದ, “ದಯವಿಟ್ಟು ಕ್ಷಮಿಸಿ. ನಿಮ್ಮ ಚಿನ್ನವನ್ನು ನಾನು ಸ್ವೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಶ್ರೀಮಂತನೊಬ್ಬ ಬಡವನಿಂದ ಹಣ ತೆಗೆದುಕೊಳ್ಳ ಕೂಡದು.”
ನಿನ್ನನ್ನು ನೀನು ಶ್ರೀಮಂತ ಎಂಬುದಾಗಿಯೂ ನನ್ನನ್ನು ಬಡವ ಎಂಬುದಾಗಿಯೂ ಹೇಗೆ ಪರಿಗಣಿಸುತ್ತೀ?”
ಫಕೀರ ಉತ್ತರಿಸಿದ, “ದೇವರು ನನ್ನತ್ತ ಏನನ್ನು ಕಳುಹಿಸುತ್ತಾನೋ ಅಷ್ಟರಿಂದಲೇ ನಾನು ತೃಪ್ತನಾಗಿದ್ದೇನೆ. ನೀನು ನಿಜವಾಗಿಯೂ ಬಡವ. ಏಕೆಂದರೆ ನೀನು ಸದಾ ಅತೃಪ್ತ, ಇನ್ನೂ ಹೆಚ್ಚು ಕರುಣಿಸೆಂಬುದಾಗಿ ಯಾವಾಗಲೂ ದೇವರಲ್ಲಿ ಮೊರೆಯಿಡುತ್ತಿರುವೆ.”

***** 

೮೮. ಕ್ಷೌರಿಕನೂ ಬಿಳಿಯ ಕೂದಲುಗಳೂ
ಕ್ಷೌರಿಕನ ಅಂಗಡಿಗೆ ಒಬ್ಬ ಗಡ್ಡಧಾರಿ ಹೋಗಿ ಪ್ರಧಾನ ಕ್ಷೌರಿಕನಿಗೆ ಹೇಳಿದ, “ನಾನು ನನ್ನ ಮನೆಗೆ ಒಬ್ಬ ಹೊಸ ಹೆಂಡತಿಯನ್ನು ಕರೆತರುವವನಿದ್ದೇನೆ. ನನ್ನ ಗಡ್ಡದಲ್ಲಿ ಇರುವ ಬಿಳಿಯ ಕೂದಲುಗಳನ್ನು ನೀನು ಕತ್ತರಿಸಬೇಕು.” ಪ್ರಧಾನ ಕ್ಷೌರಿಕ ಕತ್ತರಿ ತೆಗೆದುಕೊಂಡು ದಾಡಿಯನ್ನು ಪೂರ್ಣವಾಗಿ ಕತ್ತರಿಸಿ ಆ ಮನುಷ್ಯನ ಮುಂದೆ ಇಟ್ಟು ಹೇಳಿದ, “ನನಗೆ ಅದಕ್ಕೆ ಸಮಯವಿಲ್ಲ. ಬಿಳಿಯ ಕೂದಲುಗಳನ್ನು ನೀನೇ ಇದರಿಂದ ಹೆಕ್ಕಿ ತೆಗೆದುಕೊ.”

***** 

೮೯. ಸುಲ್ತಾನನೂ ಷೇಕ್‌ನೂ
ಅನೇಕ ವರ್ಷಗಳ ಹಿಂದೆ ಆಟಮನ್‌ ಸಮ್ರಾಜ್ಯದ ಸುಲ್ತಾನನೊಬ್ಬ ಇಸ್ತಾನ್‌ಬುಲ್‌ನ ವಿಖ್ಯಾತ ಷೇಕ್‌ ಒಬ್ಬನನ್ನು ಭೇಟಿ ಮಾಡಿದ. ಷೇಕ್‌ನ ಪ್ರಾಮಾಣಿಕತೆ ಹಾಗೂ ವಿವೇಕದಿಂದ ಆತ ಪ್ರಭಾವಿತನಾದ. ತತ್ಪರಿಣಾಮವಾಗಿ ಷೇಕ್‌ನ ಸಭೆಗಳಿಗೆ ಏಕರೀತಿಯಲ್ಲಿ ತಪ್ಪದೆ ಬರಲಾರಂಭಿಸಿದ.
ಸ್ವಲ್ಪ ಕಾಲದ ನಂತರ ಸುಲ್ತಾನ ಹೇಳಿದ, “ನಿಮ್ಮನ್ನೂ ನಿಮ್ಮ ಬೋಧನೆಗಳನ್ನೂ ನಾನು ಪ್ರೀತಿಸುತ್ತೇನೆ. ನಿಮಗೆ ಯಾವಾಗಲಾದರೂ ಏನಾದರೂ ಬೇಕಾದರೆ ದಯವಿಟ್ಟು ನನಗೆ ತಿಳಿಸಿ. ನನ್ನಿಂದ ಸಾಧ್ಯವಾಗುವಂತಹುದು ಅದಾಗಿದ್ದರೆ ಖಂಡಿತ ಕೊಡುತ್ತೇನೆ.” ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲೀ ಶ್ರೀಮಂತನೊಬ್ಬ ನೀಡಿದ ಖಾಲಿ ಧನಾದೇಶ ಎಂಬುದಾಗಿ ಪರಿಗಣಿಸಬಹುದಾದ ಆಶ್ವಾಸನೆ ಇದಾಗಿತ್ತು.
ಷೇಕ್‌ ಉತ್ತರಿಸಿದ, “ನನಗಾಗಿ ನೀವು ಮಾಡಬಹುದಾದದ್ದು ಒಂದಿದೆ. ನೀವು ಪುನಃ ಇಲ್ಲಿಗೆ ಬರಬೇಡಿ!”
ಆಶ್ಚರ್ಯಚಕಿತನಾದ ಸುಲ್ತಾನ ಕೇಳಿದ, “ಏಕೆ? ನಾನೇದರೂ ನಿಮ್ಮ ಮನಸ್ಸನ್ನು ನೋಯಿಸಿದ್ದೇನೆಯೇ? ಹಾಗೇನಾದರೂ ಮಾಡಿದ್ದರೆ ದಯವಿಟ್ಟು ನನ್ನ ಕ್ಷಮಾಯಾಚನೆಯನ್ನು ಒಪ್ಪಿಕೊಳ್ಳಿ.”
ಷೇಕ್‌ ಪ್ರತಿಕ್ರಿಯಿಸಿದ, “ಇಲ್ಲ ಇಲ್ಲ. ಸಮಸ್ಯೆ ನೀವಲ್ಲ. ಸಮಸ್ಯೆ ಆಗಿರುವುದು ನನ್ನ ಫಕೀರರು. ನೀವು ಬರುವ ಮುನ್ನ ಅವರು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು, ದೇವರ ನಾಮಸ್ಮರಣೆ ಮಾಡುತ್ತಿದ್ದರು, ದೇವರ ಅನುಗ್ರಹವನ್ನು ಮಾತ್ರ ಬಯಸುತ್ತಿದ್ದರು. ಈಗಲಾದರೋ ನಿಮ್ಮನ್ನು ಸಂತೋಷಪಡಿಸುವುದು ಹೇಗೆ, ನಿಮ್ಮಿಂದ ಬಹುಮಾನಗಳನ್ನು ಪಡೆಯುವುದು ಹೇಗೆ ಎಂಬ ಆಲೋಚನೆಗಳೇ ಅವರ ಮನಸ್ಸಿನಲ್ಲಿ ತುಂಬಿದೆ. ಇಲ್ಲಿ ನಿಮ್ಮ ಇರುವಿಕೆಯನ್ನು ನಿಭಾಯಿಸಬಹುದಾದಷ್ಟು ಆಧ್ಯಾತ್ಮಿಕವಾಗಿ ನಾವು ಪಕ್ವವಾಗಿಲ್ಲ ಎಂಬ ಕಾರಣಕ್ಕಾಗಿ ನೀವು ಪುನಃ ಇಲ್ಲಿಗೆ ಬರಬೇಡಿ ಎಂಬುದಾಗಿ ವಿನಂತಿಸಬೇಕಾಗಿದೆ!”

***** 

೯೦. ಅರಬ್ಬನ ಅಶ್ಲೀಲ ಬಯ್ಗುಳವೂ ದೇವರ ಸಂದೇಶವೂ
ಒಂದು ದಿನ ಪ್ರವಾದಿ ಮೊಹಮ್ಮದ್‌ರು ಮಸೀದಿಯೊಂದರಲ್ಲಿ ಬೆಳಗಿನ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅವರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಪೈಕಿ ಇಸ್ಲಾಂನಲ್ಲಿ ಮೇಲೇರಬಯಸುತ್ತಿದ್ದ ಅರಬ್ಬನೊಬ್ಬನಿದ್ದ. ಆ ದಿನ ಕೊರಾನ್‌ನಲ್ಲಿ ಇರುವ ನಾನೇ ನಿಮ್ಮ ನಿಜವಾದ ದೇವರುಎಂಬ ಅರ್ಥವಿರುವ ಫೆರೋನ ಹೇಳಿಕೆ ಉಳ್ಳ ಶ್ಲೋಕವನ್ನು ಮಹಮ್ಮದ್‌ರು ಪಠಿಸುತ್ತಿದ್ದರು. ಅದನ್ನು ಕೇಳಿದ ಅರಬ್ಬನು ಕೋಪೋದ್ರಿಕ್ತನಾಗಿ ಪ್ರಾರ್ಥನೆಯನ್ನು ನಿಲ್ಲಿಸಿ ಬೊಬ್ಬೆ ಹೊಡೆದ: “ಸೂಳೆಮಗ*, ಬಡಾಯಿಕೋರ!” ಪ್ರವಾದಿಗಳು ತಮ್ಮ ಪ್ರಾರ್ಥನೆ ಮುಗಿಸಿದ ಕೂಡಲೆ ಅವರ ಸಹಚರರು ಅರಬ್ಬನಿಗೆ ಛೀಮಾರಿ ಹಾಕಲಾರಂಭಿಸಿದರು: ನಿನ್ನ ಪ್ರಾರ್ಥನೆ ನಿಷ್ಪ್ರಯೋಜಕವಾದದ್ದು. ನೀನು ಬೇಡದ ಪದಗಳನ್ನು ಹೇಳಿ ಪ್ರಾರ್ಥನೆಯನ್ನು ಮಧ್ಯೆ ನಿಲ್ಲಿಸಿದೆ. ಅಷ್ಟೇ ಅಲ್ಲದೆ ದೇವರ ಪ್ರವಾದಿಯ ಎದುರಿನಲ್ಲಿ ಅಶ್ಲೀಲ ಭಾಷೆಯನ್ನು ಉಪಯೋಗಿಸಿದೆ.” ಅರಬ್ಬನು ಹೆದರಿಕೆಯಿಂದಲೂ ಸಂಕೋಚದಿಂದಲೂ ನಡುಗುತ್ತಾ ನಿಂತಿದ್ದ. ಆಗ ಗೇಬ್ರಿಯಲ್‌ ಪ್ರತ್ಯಕ್ಷನಾಗಿ ಪ್ರವಾದಿಗೆ ಹೇಳಿದ, “ದೇವರು ನಿನಗೆ ತನ್ನ ಸಲಾಮ್‌ ಕಳುಹಿಸಿದ್ದಾನೆ. ಈ ಜನ ಮುಗ್ಧ ಅರಬ್ಬನನ್ನು ದಂಡಿಸುವುದನ್ನು ನಿಲ್ಲಿಸಬೇಕೆಂಬುದು ಅವನ ಇಚ್ಛೆ. ಅವನ ಪ್ರಾಮಾಣಿಕ ಶಪಿಸುವಿಕೆ ಅನೇಕರು ಜಪಮಾಲೆ ಉಪಯೋಗಿಸಿ ಮಾಡುವ ಧಾರ್ಮಿಕಶ್ರದ್ಧೆಯ ಪ್ರಾರ್ಥನೆಗಿಂತ ಹೆಚ್ಚಿನ ಪ್ರಭಾವವನ್ನು ನನ್ನ ಮೇಲೆ ಬೀರಿದೆ!”
(* ಇಂಗ್ಲಿಷ್‌ ಪಾಠದಲ್ಲಿ ಸನ್‌ ಆಫ್‌ ಎ ಬಿಚ್‌ ಎಂಬುದಾಗಿ ಇದೆ)

***** 

೯೧. ಬೀಗ ತಯಾರಕನ ಕತೆ
ಮಾಡದೇ ಇದ್ದ ಅಪರಾಧಗಳನ್ನು ಮಾಡಿರುವುದಾಗಿ ಯಾರೋ ಮಾಡಿದ ಸುಳ್ಳು ಆಪಾದನೆಯಿಂದಾಗಿ ಕತ್ತಲಿನ ಕೂಪವಾಗಿದ್ದ ಸೆರೆಮನೆಯಲ್ಲಿ ಸೆರೆವಾಸ ಅನುಭವಿಸುತ್ತಿದ್ದ  ಬೀಗತಯಾರಕನೊಬ್ಬ ಒಂದಾನೊಂದು ಕಾಲದಲ್ಲಿ ಇದ್ದ. ಅವನನ್ನು ಬಹುವಾಗಿ ಪ್ರೀತಿಸುತ್ತಿದ್ದ ಆತನ ಹೆಂಡತಿ ಸ್ವಲ್ಪ ಕಾಲ ಅವನು ಸೆರೆವಾಸ ಅನುಭವಿಸಿದ ನಂತರ ರಾಜನ ಹತ್ತರ ಹೋಗಿ ದಿನಕ್ಕೆ ಐದು ಬಾರಿ ಮಾಡಬೇಕಾದ ಪ್ರಾರ್ಥನೆಗಳನ್ನು ಸರಿಯಾಗಿ ಮಾಡಲು ಅನುಕೂಲವಾಗುವಂತೆ ಪ್ರಾರ್ಥನಾ ನೆಲಹಾಸೊಂದನ್ನು ಅವನಿಗೆ ಕೊಡಲು ಅನುಮತಿ ನೀಡಬೇಕಾಗಿ ಮೊರೆಯಿಟ್ಟಳು. ಈ ವಿನಂತಿ ನ್ಯಾಯಸಮ್ಮತವಾಗಿದೆ ಎಂಬುದಾಗಿ ತೀರ್ಮಾನಿಸಿದ ರಾಜ ಪ್ರಾರ್ಥನಾ ನೆಲಹಾಸನ್ನು ಅವನಿಗೆ ಕೊಡಲು ಅನುಮತಿ ನೀಡಿದ. ಕೃತಜ್ಞತಾಪೂರ್ವಕವಾಗಿ ಆ ನೆಲಹಾಸನ್ನು ಹೆಂಡತಿಯಿಂದ ಸ್ವೀಕರಿಸಿದ ಬೀಗತಯಾರಕ ಬಲು ಶ್ರದ್ಧೆಯಿಂದ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದ. ಇಂತು ಬಹುಕಾಲ ಸೆರೆವಾಸ ಅನುಭವಿಸಿದ ಬೀಗತಯಾರಕ ಒಂದು ದಿನ ಜೈಲಿನಿಂದ ತಪ್ಪಿಸಿಕೊಂಡ. ತಪ್ಪಿಸಿಕೊಂಡದ್ದು ಹೇಗೆ ಎಂಬುದಾಗಿ ಜನ ಕೇಳಿದಾಗ ಅವನು ಹೇಳಿದ, ‘ಅನೇಕ ವರ್ಷಗಳ ಕಾಲ ಜೈಲಿನಿಂದ ಮುಕ್ತಿ ದೊರೆಯಲಿ ಎಂಬುದಾಗಿ ಪ್ರಾರ್ಥಿಸಿದ ನಂತರ ಅದಕ್ಕಾಗಿ ಮಾಡಬೇಕಾದ್ದೇನು ಎಂಬುದು ಸ್ಪಷ್ಟವಾಗಿ ಕಣ್ಣೆದುರೇ ಗೋಚರಿಸಿತು. ಸೆರೆಮನೆಯ ಬೀಗದ ವಿನ್ಯಾಸವನ್ನು ಪ್ರಾರ್ಥನ ನೆಲಹಾಸುವಿನಲ್ಲಿ ನನ್ನ ಹೆಂಡತಿ ಹೆಣೆದಿದ್ದದ್ದು ಒಂದು ದಿನ ಇದ್ದದ್ದಕ್ಕಿದ್ದಂತೆ ಗೋಚರಿಸಿತು. ಈ ಅರಿವು ಮೂಡಿದಾಕ್ಷಣ ಸೆರೆಮನೆಯಿಂದ ಹೊರಬರಲು ಅಗತ್ಯವಾದ ಎಲ್ಲ ಮಾಹಿತಿ ಈಗಾಗಲೇ ತನ್ನ ಹತ್ತಿರವಿದೆ ಎಂಬುದು ಅರ್ಥವಾಯಿತು. ತದನಂತರ ನಾನು ನನ್ನ ಕಾವಲಿನವರ ಮಿತ್ರತ್ವ ಗಳಿಸಲು ಆರಂಭಿಸಿದೆ. ಸೆರೆಮನೆಯಿಂದ ತಪ್ಪಿಸಿಕೊಳ್ಳಲು ತನಗೆ ಸಹಕರಿಸುವಂತೆ ಅವರ ಮನವೊಲಿಸಿದ್ದಲ್ಲದೆ ತನ್ನೊಂದಿಗೆ ಅವರೂ ಹೊರಬಂದು ಈಗ ನಡೆಸುತ್ತಿರುವುದಕ್ಕಿಂತ ಉತ್ತಮ ಜೀವನ ನಡೆಸಬಹುದು ಎಂಬುದನ್ನೂ ಮನವರಿಕೆ ಮಾಡಿದೆ. ಪಹರೆಯವರಾಗಿದ್ದರೂ ತಾವೂ ಸೆರೆಮನೆಯಲ್ಲಿಯೇ ಜೀವನ ಸವೆಸಬೇಕು ಎಂಬ ಅರಿವು ಅವರಿಗಾದದ್ದರಿಂದ ಅವರು ನನ್ನೊಂದಿಗೆ ಸಹಕರಿಸಲು ಒಪ್ಪಿದರು. ಅವರಿಗೂ ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗುವ ಇಚ್ಛೆ ಇದ್ದರೂ ಹೇಗೆ ಎಂಬುದು ತಿಳಿದಿರಲಿಲ್ಲ. ಬೀಗ ತಯಾರಕ ಹಾಗೂ ಅವನ ಪಹರೆಯವರು ತಯಾರಿಸಿದ ಕಾರ್ಯಯೋಜನೆ ಇಂತಿತ್ತು: ಪಹರೆಯವರು ಲೋಹದ ತುಂಡುಗಳನ್ನು ತರಬೇಕು. ಅವನ್ನು ಉಪಯೋಗಿಸಿ ಮಾರುಕಟ್ಟೆಯಲ್ಲಿ ಮಾರಬಹುದಾದ ವಸ್ತುಗಳನ್ನು ಬೀಗ ತಯಾರಕ ತಯಾರಿಸಬೇಕು. ಇಂತು ಅವರೀರ್ವರೂ ಜೊತೆಗೂಡಿ ತಪ್ಪಿಸಿಕೊಂಡು ಹೋಗಲು ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸಬೇಕು. ಅವರು ಸಂಪಾದಿಸಬಹುದಾದ ಅತ್ಯಂತ ಬಲಯುತವಾದ ಲೋಹದ ತುಂಡಿನಿಂದ ಸೆರೆಮನೆಯ ಬೀಗ ತೆರಯಬಹುದಾದ ಬೀಗದಕೈ ಒಂದನ್ನು ಬೀಗ ತಯಾರಕ ತಯಾರಿಸಬೇಕು.
ಎಲ್ಲವೂ ಯೋಜನೆಯಂತೆ ಜರಗಿ ಬೀಗದಕೈ ಸಿದ್ಧವಾದ ನಂತರ ಒಂದು ರಾತ್ರಿ ಪಹರೆಯವರು ಮತ್ತು ಬೀಗ ತಯಾರಕ ಸೆರೆಮನೆಯ ಬೀಗ ತೆರೆದು ಹೊರನಡೆದರು. ಬೀಗ ತಯಾರಕನ ಹೆಂಡತಿ ಅವನಿಗಾಗಿ ಕಾಯುತ್ತಿದ್ದಳು. ಅವನು ಪ್ರಾರ್ಥನೆಯ ನೆಲಹಾಸನ್ನು ಸೆರೆಮನೆಯಲ್ಲಿಯೇ ಬಿಟ್ಟಿದ್ದನು, ಅದನ್ನು ಅರ್ಥೈಸಬಲ್ಲ ಜಾಣ ಕೈದಿಯೊಬ್ಬನಿಗೆ ಅದು ಮುಂದೆಂದಾದರೂ ನೆರವಾದೀತು ಎಂಬ ನಂಬಿಕೆಯಿಂದ. ಈ ರೀತಿ ಬೀಗ ತಯಾರಕ ಅವನ ಪ್ರೀತಿಯ ಹೆಂಡತಿಯೊಂದಿಗೆ ಸಂತೋಷದಿಂದ  ಪುನಃ ಸೇರಿಕೊಂಡನು. ಮಾಜಿ ಪಹರೆಯವರು ಅವನ ಮಿತ್ರರಾದರು. ಎಲ್ಲರೂ ಸಾಮರಸ್ಯದಿಂದ ಬಾಳಿದರು.

***** 

೯೨. ಮರಳು ಹೇಳಿದ ಕತೆ
ದೂರದ ಪರ್ವತಶ್ರೇಣಿಯೊಂದರಲ್ಲಿ ಹುಟ್ಟಿದ ತೊರೆಯೊಂದು ಎಲ್ಲ ರೀತಿಯ ಗ್ರಾಮಾಂತರ ಪ್ರದೇಶಗಳ ಮೂಲಕ ಹರಿದು ಅಂತಿಮವಾಗಿ ಮರುಭೂಮಿಯೊಂದರ ಮರಳಿನ ರಾಶಿಯನ್ನು ತಲುಪಿತು. ಇತರ ಎಲ್ಲ ಅಡೆತಡೆಗಳನ್ನು ದಾಟಿದ ರೀತಿಯಲ್ಲಿಯೇ ಇದನ್ನೂ ದಾಟಲು ತೊರೆ ಪ್ರಯತ್ನಿಸಿತಾದರೂ ಸಾಧ್ಯವಾಗಲಿಲ್ಲ. ಅದು ಎಷ್ಟು ವೇಗವಾಗಿ ಮರಳನ್ನು ದಾಟಲು ಪ್ರಯತ್ನಿಸುತ್ತಿತ್ತೋ ಅಷ್ಟೇ ವೇಗವಾಗಿ ಅದರ ನೀರು ಮಾಯವಾಗುತ್ತಿತ್ತು. ಮರುಭೂಮಿಯನ್ನು ಅದು ದಾಟಬೇಕೆಂಬುದು ದೈವೇಚ್ಛೆ ಎಂಬುದಾಗಿ ಅದು ನಂಬಿದ್ದರೂ ಹೇಗೆ ಎಂಬುದು ಅದಕ್ಕೆ ತಿಳಿಯಲೇ ಇಲ್ಲ. ಆಗ ಮರುಭೂಮಿಯೊಳಗಿನಿಂದಲೇ ಹೊಮ್ಮಿದ ಗುಪ್ತಧ್ವನಿಯೊಂದು ಪಿಸುಗುಟ್ಟಿತು, “ಗಾಳಿ ಮರುಭೂಮಿಯನ್ನು ದಾಟುತ್ತದೆ, ಅಂತೆಯೇ ತೊರೆಯೂ ಕೂಡ.”
ಈ ಹೇಳಿಕೆಗೆ ತೊರೆ ಇಂತು ಆಕ್ಷೇಪಿಸಿತು: ನಾನು ಎಷ್ಟೇ ವೇಗವಾಗಿ ಮರಳಿಗೆ ಢಿಕ್ಕಿ ಹೊಡೆದರೂ ಮರಳು ನೀರನ್ನೆಲ್ಲ ಹೀರುತ್ತದೆ, ಗಾಳಿಯಾದರೋ ಮರಳಿನ ಮೇಲಿನಿಂದ ಹಾರಬಲ್ಲದ್ದಾದ್ದರಿಂದ ಮರುಭೂಮಿಯನ್ನು ದಾಟುತ್ತದೆ.”
ನಿನಗೆ ರೂಢಿಯಾಗಿರುವಂತೆ ಮರಳಿಗೆ ಢಿಕ್ಕಿ ಹೊಡೆದರೆ ನೀನು ಮರುಭೂಮಿಯನ್ನು ದಾಟಲಾರೆ. ನೀನು ಮಾಯವಾಗುವೆ ಅಥವ ಜೌಗು ಭೂಮಿಯ ಕೆಸರು ಆಗುವೆ. ಗಮ್ಯ ಸ್ಥಾನಕ್ಕೆ ಗಾಳಿ ನಿನ್ನನ್ನು ಒಯ್ಯಲು ಬಿಡು.”
ಅಂತಾಗುವುದು ಹೇಗೆ?”
ನಿನ್ನನ್ನು ಹೀರಲು ಗಾಳಿಗೆ ಅವಕಾಶ ನೀಡು.”
ಈ ಸಲಹೆ ನದಿಗೆ ಒಪ್ಪಿಗೆ ಆಗಲಿಲ್ಲ. ಈ ಹಿಂದೆ ಅದನ್ನು ಯಾರೂ ಹೀರಿರಲಿಲ್ಲ. ತನ್ನ ವೈಯಕ್ತಿಕತೆ ಕಳೆದುಕೊಳ್ಳಲು ಅದಕ್ಕೆ ಇಷ್ಟವೂ ಇರಲಿಲ್ಲ. ಒಮ್ಮೆ ಅದು ಕಳೆದು ಹೋದರೆ ಅದನ್ನು ಪುನಃ ಮರಳಿ ಪಡೆಯಲು ಸಾಧ್ಯವೇ ಎಂಬುದು ಯಾರಿಗೆ ಗೊತ್ತಿದೆ?
ಮರಳು ಹೇಳಿತು, “ಗಾಳಿ ಈ ಕಾರ್ಯವನ್ನು ಬಲು ಹಿಂದಿನಿಂದಲೂ ಮಾಡುತ್ತಿದೆ. ಅದು ನೀರನ್ನು ಹೀರಿ ಮರುಭೂಮಿಯ ಮೇಲಿನಿಂದ ಅದನ್ನು ಒಯ್ದು ಪುನಃ ಕೆಳಕ್ಕೆ ಬೀಳಲು ಬಿಡುತ್ತದೆ. ಮಳೆಯ ರೂಪದಲ್ಲಿ ನೆಲಕ್ಕೆ ಬಿದ್ದ ನೀರು ಪುನಃ ತೊರೆಯಾಗುತ್ತದೆ.”
ನೀನು ಹೇಳುತ್ತಿರುವುದು ನಿಜವೋ ಅಲ್ಲವೋ ಎಂಬುದು ನನಗೆ ತಿಳಿಯುವುದಾದರೂ ಹೇಗೆ?”
ನಾನು ಹೇಳುತ್ತಿರುವುದು ನಿಜ. ನೀನು ಅದನ್ನು ನಂಬದೇ ಇದ್ದರೆ ಜೌಗು ಭೂಮಿಯಲ್ಲಿನ ಕೆಸರಿಗಿಂತ ಭಿನ್ನವಾದದ್ದೇನೂ ಆಗುವುದಿಲ್ಲ. ಅಂತಾಗಲೂ ಬಹಳ, ಬಹಳ ವರ್ಷಗಳು ಬೇಕಾಗುತ್ತವೆ. ಆ ಸ್ಥಿತಿ ನದಿಯದ್ದರಂತೆ ಖಂಡಿತ ಇರುವುದಿಲ್ಲ.”
ಇಂದು ನಾನು ಯಾವ ತೊರೆ ಆಗಿದ್ದೇನೆಯೋ ಆ ತೊರೆಯಂತೂ ಆಗಿರುವುದಿಲ್ಲ.”
ಇಲ್ಲಿಯೇ ಇದ್ದರೂ ಗಾಳಿಯೊಂದಿಗೆ ಹೋದರೂ ನೀನು ಈಗಿನ ತೊರೆಯ ಸ್ಥಿತಿಯಲ್ಲಂತೂ ಇರುವುದಿಲ್ಲ. ನಿನ್ನ ಇಂದಿನ ತೋರಿಕೆಯ ಹಿಂದೆ ಅಡಗಿರುವ ಮೂಲಭೂತ ಸಾರವನ್ನು ಗಾಳಿ ಒಯ್ಯುತ್ತದೆ. ಅದು ಪುನಃ ತೊರೆಯ ರೂಪ ಧರಿಸುತ್ತದೆ. ನಿನ್ನನ್ನು ನೀನು ತೊರೆ ಅಂದುಕೊಳ್ಳುತ್ತಿರುವುದು ಏಕೆಂದರೆ ನಿನ್ನ ಮೂಲಭೂತ ಸಾರ ಏನೆಂಬುದು ನಿನಗೇ ತಿಳಿದಿಲ್ಲ.”

***** 

೯೩. ಅಪಾತ್ರ
ಈ ಲೋಕದಲ್ಲಿ ನಾನು ಬಾಲ್ಯದಿಂದಲೂ ಒಬ್ಬ ಅಪಾತ್ರನಾಗಿದ್ದೇನೆ. ನನ್ನನ್ನು ಯಾರೂ, ನನ್ನ ತಂದೆಯೂ, ಅರ್ಥ ಮಾಡಿಕೊಂಡಿಲ್ಲ ಎಂಬುದು ನನಗೆ ತಿಳಿದಿತ್ತು.
ಒಮ್ಮೆ ನನ್ನ ತಂದೆ ಹೇಳಿದ್ದರು, “ಹುಚ್ಚಾಸ್ಪತ್ರೆಗೆ ದಾಖಲು ಮಾಡುವಷ್ಟು ಹುಚ್ಚ ನೀನಲ್ಲ, ವಿರಕ್ತರ ನಿವಾಸಕ್ಕೆ ದಾಖಲು ಮಾಡಬಹುದಾದ ಸನ್ಯಾಸಿಯೂ ನೀನಲ್ಲ. ನೀನೆಂಬುದು ನನಗೆ ತಿಳಿಯುತ್ತಿಲ್ಲ.”
ನಾನು ಉತ್ತರಿಸಿದ್ದೆ, “ಅಪ್ಪಾ, ಈ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾನು ನಿಮಗೆ ತಿಳಿಸಬಲ್ಲೆ. ಬಾತುಕೋಳಿಯ ಮೊಟ್ಟೆಯೊಂದನ್ನು ಕಾವು ಕೊಟ್ಟು ಮರಿ ಮಾಡಲೋಸುಗ ಒಮ್ಮೆ ಹೇಂಟೆಯ ಅಡಿಯಲ್ಲಿ ಇಡಲಾಯಿತು. ಮೊಟ್ಟೆಯೊಡೆದು ಬಾತುಕೋಳಿಯ ಮರಿ ಹೊರ ಬಂದಾಗ ಅದು ತಾಯಿ ಹೇಂಟೆಯ ಜೊತೆಯಲ್ಲಿ ಕೊಳವೊಂದರ ವರೆಗೆ ನಡೆಯಿತು. ಕೊಳದ ನೀರಿನಲ್ಲಿ ಬಾತುಕೋಳಿಯ ಮರಿ ಬಲು ಖುಷಿಯಿಂದ ಒಂದು ಮುಳುಗು ಹಾಕಿತು. ತಾಯಿ ಹೇಂಟೆಯಾದರೋ ದಡದಲ್ಲಿಯೇ ನಿಂತುಕೊಂಡು ಮರಿಯನ್ನು ಕರೆಯುತ್ತಿತ್ತು. ಅಪ್ಪಾ, ಈಗ ನಾನು ಸಾಗರದಲ್ಲಿ ಮುಳುಗು ಹಾಕಿ ಅದೇ ನನ್ನ ಮನೆ ಎಂಬುದನ್ನು ಕಂಡುಕೊಂಡಿದ್ದೇನೆ. ನೀವು ದಡದಲ್ಲಿಯೇ ನಿಂತುಕೊಂಡಿರಲು ಇಚ್ಛಿಸುವಿರಾದೆ ಅದು ನನ್ನ ತಪ್ಪೇ? ನನ್ನ ಮೇಲೆ ನೀವು ತಪ್ಪು ಹೊರಿಸುವಂತಿಲ್ಲ.”

***** 

೯೪. ಎಲ್ಲವನ್ನೂ ಕಳೆದುಕೊಳ್ಳುವುದು
ನಗರಕ್ಕೆ ಹೋಗುವ ದಾರಿಯಲ್ಲಿ ಹುಬ್ಬು ಗಂಟಿಕ್ಕಿಕೊಂಡು ನಡೆಯುತ್ತಿದ್ದವನೊಬ್ಬನನ್ನು ಒಬ್ಬ ಮೌಲಾ ನೋಡಿದ. “ನಿನ್ನ ಸಮಸ್ಯೆ ಏನು?” ಕೇಳಿದ ಮೌಲಾ. ಆ ಮನುಷ್ಯ ಒಂದು ಹರಕಲು ಚೀಲ ಎತ್ತಿ ತೋರಿಸುತ್ತಾ ಹೇಳಿದ, “ಈ ವಿಶಾಲ ಜಗತ್ತಿನಲ್ಲಿ ನನ್ನದು ಅಂದುಕೊಳ್ಳಬಹುದಾದದ್ದೆಲ್ಲವನನ್ನು ಹಾಕಿದರೂ ಈ ದರಿದ್ರ ಚೀಲ ತುಂಬುವುದಿಲ್ಲ.” ಮೌಲಾ ಛೆ, ಅಯ್ಯೋ ಪಾಪ,” ಅಂದವನೇ ಚೀಲವನ್ನು ಆ ಮನುಷ್ಯನ ಕೈನಿಂದ ಕಸಿದುಕೊಂಡು ನಗರದತ್ತ ರಸ್ತೆಯಲ್ಲಿ ಓಡಿ ಹೋದ. ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ ಆ ಮನುಷ್ಯ ಹಿಂದೆಂದಿಗಿಂತಲೂ ಸಂಕಟಪಡುತ್ತಾ ಬಿಕ್ಕಿಬಿಕ್ಕಿ ಅಳುತ್ತಾ ಪ್ರಯಾಣ ಮುಂದುವರಿಸಿದ. ಚೀಲದೊಂದಿಗೆ ಓಡಿ ಹೋಗಿದ್ದ ಮೌಲಾ ರಸ್ತೆಯಲ್ಲಿದ್ದ ಒಂದು ತಿರುವು ಆದ ನಂತರ ಚೀಲವನ್ನು ರಸ್ತೆಯ ಮಧ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಅದರ ಮಾಲಿಕನಿಗೆ ಕಾಣುವಂತೆ ಇಟ್ಟು ಪೊದೆಯೊಂದರ ಹಿಂದೆ ಅಡಗಿ ಕುಳಿತ. ರಸ್ತೆಯ ಮಧ್ಯದಲ್ಲಿ ಇದ್ದ ತನ್ನ ಚೀಲವನ್ನು ಕಂಡೊಡನೆ ಆ ಮನುಷ್ಯ ಸಂತೋಷದಿಂದ ನಗುತ್ತಾ ಬೊಬ್ಬೆ ಹೊಡೆದ, “ನನ್ನ ಚೀಲ. ನಿನ್ನನ್ನು ನಾನು ಕಳೆದುಕೊಂಡೆ ಎಂಬುದಾಗಿ ಆಲೋಚಿಸಿದ್ದೆ.” ಪೊದೆಯ ಹಿಂದೆ ಅಡಗಿ ಕುಳಿತಿದ್ದ ಮೌಲಾ ಲೊಚಗುಟ್ಟುತ್ತಾ ತನಗೆ ತಾನೇ ಹೇಳಿಕೊಂಡ, “ಒಬ್ಬನನ್ನು ಸಂತೋಷಪಡಿಸುವ ಒಂದು ವಿಧಾನ ಇದು!”

***** 

೯೫. ಮಂಗಗಳನ್ನು ಹಿಡಿಯುವುದು ಹೇಗೆ?
ಒಂದಾನೊಂದು ಕಾಲದಲ್ಲಿ ಚೆರಿ ಹಣ್ಣುಗಳನ್ನು ಬಲು ಇಷ್ಟಪಡುತ್ತಿದ್ದ ಮಂಗವೊಂದಿತ್ತು. ಒಂದು ದಿನ ಅದಕ್ಕೆ ರಸಭರಿತ ಚೆರಿ ಹಣ್ಣೊಂದು ಗೋಚರಿಸಿತು. ಆ ಹಣ್ಣನ್ನು ಪಡೆಯಲೋಸುಗ ಮಂಗ ಮರದಿಂದ ಇಳಿದು ಬಂದಿತು. ಆ ಹಣ್ಣು ಒಂದು ಶುಭ್ರವಾದ ಗಾಜಿನ ಸೀಸೆಯೊಳಗಿತ್ತು.
ವಿವಿಧ ರೀತಿಯಲ್ಲಿ ಪ್ರಯತ್ನಿಸಿದ ನಂತರ ಸೀಸೆಯ ಕತ್ತಿನೊಳಕ್ಕೆ ಕೈತೂರಿಸಿ ಹಣ್ಣನ್ನು ಹಿಡಿಯಬಹುದು ಎಂಬುದನ್ನು ಅದು ಪತ್ತೆಹಚ್ಚಿತು. ಅಂತೆಯೇ ಕೈತೂರಿಸಿ ಹಣ್ಣನ್ನು ಹಿಡಿದುಕೊಂಡಿತಾದರೂ ಮುಷ್ಟಿಯಲ್ಲಿ ಹಣ್ಣನ್ನು ಹಿಡಿದುಕೊಂಡಾಗ ಅದರ ಮುಷ್ಟಿಯ ಗಾತ್ರ ಸೀಸೆಯ ಕತ್ತಿನ ಗಾತ್ರಕ್ಕಿಂತ ಹೆಚ್ಚಾಗುವುದರಿಂದ ಹಣ್ಣುಸಹಿತವಾದ ಮುಷ್ಟಿಯನ್ನು ಸೀಸೆಯಿಂದ ಹೊರಕ್ಕೆಳೆದುಕೊಳ್ಳಲಾಗಲಿಲ್ಲ.
ಚೆರಿ ಹಣ್ಣನ್ನು ಒಬ್ಬ ಮಂಗಗಳ ಬೇಟೆಗಾರ ಉದ್ದೇಶಪೂರ್ವಾಗಿ ಸೀಸೆಯೊಳಗೆ ಇಟ್ಟಿದ್ದ. ಚೆರಿ ಹಣ್ಣನ್ನು ತೆಗೆದುಕೊಳ್ಳಲು ಮಂಗಗಳು ಏನು ಮಾಡುತ್ತವೆ ಎಂಬುದು ಅವನಿಗೆ ತಿಳಿದಿತ್ತು.
ನೋವಿನಿಂದ ಮಂಗ ಹೊರಡಿಸುತ್ತಿದ್ದ ದನಿ ಕೇಳಿದ ಬೇಟೆಗಾರ ಅಲ್ಲಿಗೆ ಬಂದನು. ಅವನನ್ನು ನೋಡಿದ ಮಂಗ ಓಡಿ ಹೋಗಲು ಪ್ರಯತ್ನಿಸಿತಾದರೂ ಅದರ ಪ್ರಕಾರ ಕೈ ಸೀಸೆಯಲ್ಲಿ ಸಿಕ್ಕಿಹಾಕಿಕೊಂಡದ್ದರಿಂದ ವೇಗವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಚೆರಿ ಹಣ್ಣು ತನ್ನ ಕೈನಲ್ಲೇ ಇದೆ ಎಂದು ಅದು ಈ ಪರಿಸ್ಥಿತಿಯಲ್ಲಿಯೂ ಆಲೋಚಿಸುತ್ತಿತ್ತು. ಬೇಟೆಗಾರ ಮಂಗವನ್ನು ಎತ್ತಿ ಹಿಡಿದು ಅದರ ತಲೆಗೆ ಬಲವಾಗಿ ಮೊಟಕಿದ. ತತ್ಪರಿಣಾಮವಾಗಿ ಮಂಗ ಹಣ್ಣು ಹಿಡಿದಿದ್ದ ಮುಷ್ಟಿಯನ್ನು ಸಡಲಿಸಿತು. ತಕ್ಷಣ ಅದು ಕೈಯನ್ನು ಸೀಸೆಯಿಂದ ಹೊರಕ್ಕೆಳೆದುಕೊಂಡಿತು. ಕೈ ಸೀಸೆಯಿಂದ ಹೊರಬಂದಿತಾದರೂ ಮಂಗ ಬಂಧಿಯಾಗಿತ್ತು. ಬೇಟೆಗಾರನಿಗೆ ಮಂಗದೊಂದಿಗೆ ಅವನ ಸೀಸೆಯೂ ಅದರೊಳಗಿದ್ದ ಚೆರಿ ಹಣ್ಣೂ ಸಿಕ್ಕಿತು.

***** 

೯೬. ದೈತ್ಯ ರಾಕ್ಷಸನೂ ಸೂಫಿಯೂ
ಸೂಫಿ ಗುರುವೊಬ್ಬ ನಿರ್ಜನ ಪರ್ವತ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಎದುರಾದ ದೈತ್ಯ ರಾಕ್ಷಸನೊಬ್ಬ ಅವನನ್ನು ನಾಶ ಮಾಡುವುದಾಗಿ ಹೇಳಿದ. ಗುರು ಹೇಳಿದ, “ಬಹಳ ಒಳ್ಳೆಯದು. ನೀನು ಪ್ರಯತ್ನಿಸಲು ನನ್ನದೇನೂ ಆಭ್ಯಂತರವಿಲ್ಲ. ಆದರೆ ನಾನು ನಿನ್ನನ್ನು ಸೋಲಿಸುತ್ತೇನೆ, ಏಕೆಂದರೆ ನೀನು ಆಲೋಚಿಸಿದ್ದಕ್ಕಿಂತ ಅನೇಕ ರೀತಿಯಲ್ಲಿ ನಾನು ಬಲಿಷ್ಠನಾಗಿದ್ದೇನೆ.”
ಹುಚ್ಚುಮಾತು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತನಾದ ಸೂಫಿ ಗುರು ನೀನು. ನಾನು ನನ್ನ ಪಶುಸದೃಶ ಶಕ್ತಿಯನ್ನು ಅವಲಂಬಿಸಿರುವವನು, ಗಾತ್ರದಲ್ಲಿ ನಿನಗಿಂತ ೩೦ ಪಟ್ಟು ದೊಡ್ಡವನು. ಎಂದೇ, ನೀನು ನನ್ನನ್ನು ಸೋಲಿಸಲಾರೆ.”
ಬಲ ಪ್ರದರ್ಶನ ಮಾಡುವ ಇಚ್ಛೆ ನಿನಗಿದ್ದರೆ,” ಸೂಫಿ ಒಂದು ಸಣ್ಣ ಕಲ್ಲನ್ನು ಹೆಕ್ಕಿ ಕೊಡುತ್ತಾ ಹೇಳಿದ, “ಈ ಕಲ್ಲನ್ನು ತೆಗೆದುಕೋ. ಅದನ್ನು ಹಿಸುಕಿ ದ್ರವ ಬರಿಸು ನೋಡೋಣ.”
ಎಷ್ಟು ಬಲ ಪ್ರಯೋಗ ಮಾಡಿದರೂ ದೈತ್ಯ ರಾಕ್ಷಸನಿಗೆ ಅಂತು ಮಾಡಲು ಸಾಧ್ಯವಾಗಲಿಲ್ಲ. “ಅಸಾಧ್ಯ. ಈ ಕಲ್ಲಿನಲ್ಲಿ ಒಂದಿನಿತೂ ನೀರಿಲ್ಲ. ಇದೆ ಎಂದಾದರೆ ನೀನೇ ತೋರಿಸು,” ಅಂದನಾತ.
ಮಬ್ಬು ಬೆಳಕಿನಲ್ಲಿ ಸೂಫಿ ಗುರು ಒಂದು ಮೊಟ್ಟೆಯನ್ನು ತನ್ನ ಕಿಸೆಯಿಂದಲೂ ಕಲ್ಲನ್ನು ದೈತ್ಯನಿಂದಲೂ ತೆಗೆದುಕೊಂಡು ಎರಡನ್ನೂ ದೈತ್ಯನ ಕೈ ಮೇಲೆ ಹಿಡಿದು ಹಿಸುಕಿದ. ಇದರಿಂದ ದೈತ್ಯ ಪ್ರಭಾವಿತನಾದ. ಇದೇ ರೀತಿ ಜನ ಅನೇಕ ಬಾರಿ ತಮಗೆ ಅರ್ಥವಾಗದ್ದರಿಂದ ಪ್ರಭಾವಿತರಾಗುತ್ತಾರೆ, ಅಂಥವುಗಳಿಗೆ ಅಗತ್ಯಕ್ಕಿಂತ ಹೆಚ್ಚು ಬೆಲೆ ಕಟ್ಟುತ್ತಾರೆ, ತಮ್ಮ ನಿಜವಾದ ಹಿತಾಸಕ್ತಿಗೆ ಅದು ವಿರುದ್ಧವಾಗಿದೆ ಎಂಬುದನ್ನು ತಿಳಿಯದೆ.
ದೈತ್ಯ ಹೇಳಿದ, ಈ ವಿದ್ಯಮಾನದ ಕುರಿತು ನಾನು ಆಲೋಚಿಸ ಬೇಕು. ನನ್ನ ಗುಹೆಗೆ ಬನ್ನಿ. ಇಂದು ರಾತ್ರಿ ನಾನು ನಿಮ್ಮನ್ನು ಸತ್ಕರಿಸುತ್ತೇನೆ.”
ದೈತ್ಯನೊಂದಿಗೆ ಸೂಫಿ ಅವನ ಬೃಹತ್ತಾದ ಗುಹೆಗೆ ಹೋದ. ದೈತ್ಯ ಕೊಲೆಮಾಡಿದ ಸಹಸ್ರಾರು ಯಾತ್ರಿಕರ ಸಾಮಾನುಗಳು ಆ ಗುಹೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅದೊಂದು ಅಲ್ಲಾವುದ್ದೀನನ ಗುಹೆಯಂತಿತ್ತು. ಇಲ್ಲಿ ನನ್ನ ಹತ್ತಿರ ಮಲಗಿ ನಿದ್ರಿಸಿ, ಬೆಳಗ್ಗೆ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸೋಣಅಂದವನೇ ಆ ದೈತ್ಯ ಅಲ್ಲಿಯೇ ಮಲಗಿ ತಕ್ಷಣವೇ ಗಾಢ ನಿದ್ದೆಗೆ ಜಾರಿದ.
ನಂಬಿಕೆದ್ರೋಹದ ಸಾಧ್ಯತೆ ಇದೆ ಎಂಬುದಾಗಿ ಒಳದನಿ ಸೂಚಿಸಿದ್ದರಿಂದ ಸೂಫಿ ಎದ್ದು ಹಾಸಿಗೆಯಲ್ಲಿಯೇ ತಾನಿರುವ ಭ್ರಮೆ ಮೂಡಿಸುವ ವ್ಯವಸ್ಥೆ ಮಾಡಿ ತುಸು ದೂರದಲ್ಲಿ ಅಡಗಿ ಕುಳಿತ.
ಸೂಫಿ ಅಡಗಿ ಕುಳಿತ ನಂತರ ಕೆಲವೇ ಕ್ಷಣಗಳಲ್ಲಿ ದೈತ್ಯ ಮೇಲೆದ್ದ. ತನ್ನ ಒಂದು ಕೈನಿಂದ ಮರದ ದೊಡ್ಡ ಕಾಂಡವೊಂದನ್ನು ತೆಗೆದುಕೊಂಡು ಅದರಿಂದ ಸೂಫಿ ಮಲಗಿದ್ದಂತೆ ಕಾಣುತ್ತಿದ್ದಲ್ಲಿಗೆ ಏಳು ಬಾರಿ ಬಲವಾಗಿ ಬಡಿದ. ಆನಂತರ ಪುನಃ ಮಲಗಿ ನಿದ್ದೆ ಮಾಡಿದ. ಸೂಫಿ ಗುರು ತನ್ನ ಹಾಸಿಗೆಯಲ್ಲಿ ಪುನಃ ಮಲಗಿ ದೈತ್ಯನನ್ನು ಎಬ್ಬಿಸಿ ಹೇಳಿದ, “ಓ ದೈತ್ಯನೇ, ನಿನ್ನ ಈ ಗುಹೆ ಆರಾಮದಾಯಕವಾಗಿದೆಯಾದರೂ ಸೊಳ್ಳೆಗಳು ನನಗೆ ಏಳು ಬಾರಿ ಕಚ್ಚಿವೆ. ಈ ಕುರಿತು ನೀನು ಏನಾದರೂ ಮಾಡಲೇಬೇಕು.”
ಇನ್ನೊಂದು ಬಾರಿ ಆಕ್ರಮಣ ಮಾಡಲು ಪ್ರಯತ್ನಿಸದೇ ಇರುವಷ್ಟು ಆಘಾತ ಇದರಿಂದ ದೈತ್ಯನಿಗೆ ಆಯಿತು. ದೈತ್ಯ ರಾಕ್ಷಸನೊಬ್ಬ ಬೃಹತ್‌ ಗಾತ್ರದ ಮರದ ಕಾಂಡದಿಂದ ತನ್ನೆಲ್ಲ ಶಕ್ತಿಯನ್ನೂ ಪ್ರಯೋಗಿಸಿ ಏಳು ಬಾರಿ ಹೊಡೆದರೂ ಸೂಫಿ ಸಾಯಲಿಲ್ಲ ಅನ್ನುವುದಾದರೆ ------.
ಬೆಳಗ್ಗೆ ಎದ್ದ ನಂತರ ಒಂದು ಇಡೀ ಎತ್ತಿನ ಚರ್ಮದಿಂದ ಮಾಡಿದ ಚೀಲವನ್ನು ಸೂಫಿಯತ್ತ ಎಸೆದು ದೈತ್ಯ ಆಜ್ಞಾಪಿಸಿದ, “ಬೆಳಗಿನ ಉಪಾಹಾರಕ್ಕೆ ವಹಾ ಮಾಡಲೋಸುಗ ನೀರು ತೆಗೆದುಕೊಂಡು ಬಾ.”
ಚರ್ಮದ ಚೀಲವನ್ನು ಎತ್ತಿಕೊಳ್ಳುವುದಕ್ಕೆ ಬದಲಾಗಿ (ಬಲು ಭಾರದ ಆ ಚೀಲವನ್ನು ಎತ್ತಲಾಗುತ್ತಿರಲಿಲ್ಲ ಅನ್ನುವುದು ಬೇರೆ ವಿಷಯ) ಸೂಫಿ ಗುರು ಹತ್ತಿರದಲ್ಲಿದ್ದ ತೊರೆಯ ಸಮೀಪಕ್ಕೆ ಹೋಗಿ ಅಲ್ಲಿಂದ ಗುಹೆಯತ್ತ ಒಂದು ಪುಟ್ಟ ಕಾಲುವೆ ತೋಡಲಾರಂಭಿಸಿದ.
ತುಸು ಸಮಯದ ನಂತರ ದಾಹ ಅತಿಯಾದದ್ದರಿಂದ ಕೇಳಿದ, “ನೀನೇಕೆ ನೀರು ತರುತ್ತಿಲ್ಲ?”
ತಾಳ್ಮೆ ಇರಲಿ ಮಿತ್ರಾ, ತಾಳ್ಮೆ. ನಿನ್ನ ಗುಹೆಯ ಪ್ರವೇಶ ದ್ವಾರದಲ್ಲಿ ಸದಾ ತಾಜಾ ನೀರು ಸಿಗುವಂತೆ ಮಾಡಲು ನಾನೊಂದು ಶಾಶ್ವತ ಕಾಲುವೆ ನಿರ್ಮಿಸುತ್ತಿದ್ದೇನೆ. ಮುಂದೆ ನೀನು ಎಂದೆಂದಿಗೂ ಚರ್ಮದ ಚೀಲದಲ್ಲಿ ನೀರು ಹೊರಬೇಕಾಗುವುದೇ ಇಲ್ಲ.”
ದೈತ್ಯನಿಗೆ ವಿಪರೀತ ಬಾಯಾರಿಕೆ ಆಗಿದ್ದದ್ದರಿಂದ ಕಾಯುವಷ್ಟು ತಾಳ್ಮೆ ಇರಲಿಲ್ಲ. ಅವನು ತಾನೇ ಚರ್ಮದ ಚೀಲವನ್ನು ತೆಗದುಕೊಂಡು ತೊರೆಗೆ ಹೋಗಿ ನೀರು ತಂದು ಚಹಾ ಮಾಡಿ ಅನೇಕ ಗ್ಯಾಲನ್‌ಗಳಷ್ಟು ಚಹಾ ಕುಡಿದ. ತತ್ಪರಿಣಾಮವಾಗಿ ಅವನ ಆಲೋಚನಾ ಸಾಮರ್ಥ್ಯ ತುಸು ಸುಧಾರಿಸಿತು. ಎಂದೇ ಆತ ಕೇಳಿದ, ನೀನು ಬಲು ಶಕ್ತಿಶಾಲಿಯಾಗಿರುವುದರಿಂದ -- ನಿನ್ನ ಶಕ್ತಿ ಎಷ್ಟೆಂಬುದನ್ನು ಈಗಾಗಲೇ ತೋರಿಸಿರುವೆ -- ಕಾಲುವೆಯನ್ನು ಅಂಗುಲ ಅಂಗುಲದಷ್ಟೇ ತೋಡುವ ಬದಲು ವೇಗವಾಗಿ ಏಕೆ ತೋಡಬಾರದು?”
ಗುರು ಉತ್ತರಿಸಿದರು, “ಏಕೆಂದರೆ, ನಿಜವಾಗಿ ಮೌಲ್ಯಯುತವಾದದ್ದನ್ನು ಕನಿಷ್ಠ ಶ್ರಮ ಹಾಕದೆ ಸಮರ್ಪಕವಾಗಿ ಮಾಡಲಾಗುವುದಿಲ್ಲ. ಪ್ರತಿಯೊಂದಕ್ಕೂ ಎಷ್ಟು ಕನಿಷ್ಠ ಶ್ರಮ ಹಾಕಬೇಕೆಂಬುದಕ್ಕೆ ಅದರದ್ದೇ ಆದ ಮಿತಿಯೊಂದು ಇರುತ್ತದೆ. ನಾನು ಈ ಕಾಲುವೆ ತೋಡಲು ಎಷ್ಟು ಕನಿಷ್ಠ ಶ್ರಮ ಹಾಕಬೇಕೋ ಅಷ್ಟನ್ನು ಮಾತ್ರ ಹಾಕುತ್ತಿದ್ದೇನೆ. ಅಷ್ಟೇ ಅಲ್ಲದೆ, ನೀನೆಂಥವನು ಅಂದರೆ ಅಭ್ಯಾಸ ಬಲದಿಂದ ಯಾವಾಗಲೂ ಆ ಎತ್ತಿನ ಚರ್ಮದ ಚೀಲವನ್ನೇ ಉಪಯೋಗಿಸುವೆ ಎಂಬುದೂ ನನಗೆ ತಿಳಿದಿದೆ.”

***** 

೯೭. ಪ್ರತಿಜ್ಞೆ
ಮಾನಸಿಕ ಪ್ರಕ್ಷುಬ್ಧತೆಯಿಂದ ಬಳಲುತ್ತಿದ್ದವನೊಬ್ಬ, ನನ್ನ ಎಲ್ಲ ಸಮಸ್ಯೆಗಳು ಪರಿಹಾರವಾದರೆ ನನ್ನ ಮನೆಯನ್ನು ಮಾರಿ ದೊರೆತ ಹಣವನ್ನು ಬಡವರಿಗೆ ಕೊಡುತ್ತೇನೆ,” ಎಂಬುದಾಗಿ ಪ್ರತಿಜ್ಞೆ ಮಾಡಿದ.
ಮುಂದೊಂದು ದಿನ ತನ್ನ ಮಾತು ಉಳಿಸಿಕೊಳ್ಳಬೇಕಾದ ಕಾಲ ಬಂದಿತೆಂಬ ಅರಿವು ಅವನಿಗಾಯಿತು. ಅಷ್ಟೊಂದು ಹಣವನ್ನು ಕೊಡಲು ಅವನಿಗೆ ಇಷ್ಟವಿರಲಿಲ್ಲ. ಈ ಸಂಕಟದಿಂದ ಪಾರಾಗಲು ಅವನೊಂದು ಮಾರ್ಗ ಕಂಡುಕೊಂಡ.
ಹತ್ತು ಸಾವಿರ ಬೆಳ್ಳಿಯ ನಾಣ್ಯ ಕೊಟ್ಟು ಬೆಕ್ಕೊಂದನ್ನು ಖರೀದಿಸುವವರಿಗೆ ಅದರೊಂದಿಗೆ ಒಂದು ಬೆಳ್ಳಿಯ ನಾಣ್ಯಕ್ಕೆ ಮನೆಯನ್ನು ಮಾರಾಟ ಮಾಡುವುದಾಗಿ ಘೋಷಿಸಿದ.
ಯಾರೋ ಒಬ್ಬ ಬೆಕ್ಕನ್ನೂ ಮನೆಯನ್ನೂ ನಿಗದಿತ ಬೆಲೆಗೆ ಕೊಂಡುಕೊಂಡ. ಮಾರಿದಾತ ಒಂದು ಬೆಳ್ಳಿಯ ನಾಣ್ಯವನ್ನು ಅಲ್ಲಿದ್ದ ಒಬ್ಬ ಬಡವನಿಗೆ ಕೊಟ್ಟು ಉಳಿದ ಹತ್ತು ಸಾವಿರ ಬೆಳ್ಳಿಯ ನಾಣ್ಯವನ್ನು ಜೇಬಿಗಿಳಿಸಿದ.

***** 

೯೮. ಯಾರದು?
ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಬಾಗಿಲು ತಟ್ಟಿದ. “ಯಾರದು?” ಒಳಗಿನಿಂದ ಅವಳು ಕೇಳಿದಳು.
ಪ್ರೇಮಿ ಉತ್ತರಿಸಿದ, “ನಾನು.”
ಇಲ್ಲಿಂದ ಹೊರಟು ಹೋಗು. ಈ ಮನೆಯಲ್ಲಿ ನಾನು ಹಾಗೂ ನೀನು ಇಬ್ಬರಿಗೂ ಸ್ಥಳಾವಕಾಶವಿಲ್ಲ,”
ತಿರಸ್ಕೃತ ಪ್ರೇಮಿ ನಿರ್ಜನ ಪ್ರದೇಶಕ್ಕೆ ತೆರಳಿದ. ಅಲ್ಲಿ ಅವನು ಸುದೀರ್ಘ ಕಾಲ ಪ್ರಾರ್ಥನೆ ಮಾಡುವುದರೊಂದಿಗೆ ತನ್ನ ಪ್ರೇಯಸಿ ಹೇಳಿದ ಮಾತುಗಳ ಕುರಿತು ಗಾಢವಾಗಿ ಆಲೋಚನೆ ಮಾಡಿದ. ಕೊನೆಗೊಂದು ದಿನ ಪುನಃ ಪ್ರೇಯಸಿಯ ಮನೆಗೆ ಬಂದು ಬಾಗಿಲು ತಟ್ಟಿದ.
ಯಾರದು?” ಒಳಗಿನಿಂದ ಅವಳು ಕೇಳಿದಳು.
ಪ್ರೇಮಿ ಉತ್ತರಿಸಿದ, “ಅದು ನೀನು.”
ತಕ್ಷಣವೇ ಅವಳು ಬಾಗಿಲು ತೆರೆದಳು.

***** 

೯೯. ದೇವರ ಕೈನಲ್ಲಿ
ಏನೂ ಕೆಲಸ ಮಾಡದೆ ಸುಮ್ಮನೆ ಕುಳಿತುಕೊಂಡಿರುತ್ತಿದ್ದ ಜನರ ಗುಂಪೊಂದನ್ನು ಒಂದು ದಿನ ಕಲೀಫ ಓಮರ್‌ ಭೇಟಿ ಮಾಡಿದ. ಅವರು ಯಾರು ಎಂಬುದನ್ನಾತ ವಿಚಾರಿಸಿದ.
ಅವರು ಉತ್ತರಿಸಿದರು, “ನಾವು ದೇವರನ್ನು ನಂಬುವವರು. ಅವನಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಎಂದೇ ನಾವು ನಮ್ಮ ವ್ಯವಹಾರಗಳನ್ನು ಅವನ ಕೈಗೊಪ್ಪಿಸಿದ್ದೇವೆ.”
ಅದನ್ನು ಕೇಳಿದ ಅವರಿಗೆ ಕಲೀಫ ಮಾತಿನ ಏಟು ನೀಡಿದ, “ನಿಜವಾಗಿ ನಿಮಗೆ ದೇವರಲ್ಲಿ ನಂಬಿಕೆ ಇಲ್ಲ. ನೀವು ಕೇವಲ ಬಿಟ್ಟಿ ಕೂಳು ತಿನ್ನುವವರು, ಇತರರ ಶ್ರಮದ ಫಲವನ್ನು ಭೋಗಿಸುವ ಪರಾವಲಂಬೀ ಜೀವಿಗಳು! ದೇವರನ್ನು ನಿಜವಾಗಿ ನಂಬುವವರು ಮೊದಲು ಶ್ರಮಪಟ್ಟು ಭೂಮಿಯಲ್ಲಿ ಬೀಜ ಬಿತ್ತನೆ ಮಾಡುತ್ತಾರೆ. ತದನಂತರ ಅವರ ವ್ಯವಹಾರವನ್ನು ದೇವರಿಗೆ, ಅರ್ಥಾತ್ ಸಕಲ ಜೀವ ಪೋಷಕನಿಗೊಪ್ಪಿಸಿತ್ತಾರೆ.”

***** 

೧೦೦. ಡ್ರ್ಯಾಗನ್‌  ಕೊಲ್ಲುವವ ಅಂದುಕೊಳ್ಳುತ್ತಿದ್ದವನ ಕತೆ
ತಾನೊಬ್ಬ ಡ್ರ್ಯಾಗನ್‌ ಬೇಟೆಗಾರ ಎಂಬುದಾಗಿ ಹೇಳಿಕೊಳ್ಳುತ್ತಿದ್ದವನೊಬ್ಬ ಡ್ರ್ಯಾಗನ್‌ ಹಿಡಿಯಲೋಸುಗ ಪರ್ವತ ಪ್ರದೇಶಕ್ಕೆ ಹೋದನು. ಪರ್ವತ ಶ್ರೇಣಿಯಲ್ಲೆಲ್ಲ ಡ್ರ್ಯಾಗನ್‌ಗಾಗಿ ಆತ ಹುಡುಕಾಡಿದ. ಕೊನೆಗೆ ಅತ್ಯಂತ ಎತ್ತರದ ಪರ್ವತವೊಂದರ ಅತೀ ಎತ್ತರದಲ್ಲಿದ್ದ ಗುಹೆಯೊಂದರಲ್ಲಿ ಬೃಹತ್ ಗಾತ್ರದ ಡ್ರ್ಯಾಗನ್‌ನ ಘನೀಕೃತ ದೇಹವೊಂದನ್ನು ಆವಿಷ್ಕರಿಸಿದ. ಅದನ್ನು ಆತ ಬಾಗ್ದಾದ್‌ಗೆ ತಂದನು. ಅದನ್ನು ತಾನು ಕೊಂದದ್ದಾಗಿ ಘೋಷಿಸಿ ಅಲ್ಲಿನ ನದಿಯ ದಡದಲ್ಲಿ ಪ್ರದರ್ಶನಕ್ಕೆ ಇಟ್ಟನು. ಡ್ರ್ಯಾಗನ್‌ ಅನ್ನು ನೋಡಲು ನೂರುಗಟ್ಟಲೆ ಸಂಖ್ಯೆಯಲ್ಲಿ ಜನ ಬಂದರು.
ಬಾಗ್ದಾದ್‌ನ ಬಿಸಿ ವಾತಾವರಣ ಡ್ರ್ಯಾಗನ್‌ನ ದೇಹವನ್ನು ನಿಧಾನವಾಗಿ ಬಿಸಿ ಮಾಡಿದ್ದರಿಂದ ಅದು ಅಲುಗಾಡಲಾರಂಭಿಸಿತು, ನಿಧಾನವಾಗಿ ಚಳಿಗಾಲದ ದೀರ್ಘ ನಿದ್ದೆಯಿಂದ ಎದ್ದಿತು. ಜನ ಚೀರುತ್ತಾ ತೋಚಿದತ್ತ ಓಡಲಾರಂಭಿಸಿದರು. ಆ ಗೊಂದಲದಲ್ಲಿ ಅನೇಕರು ಕಾಲ್ತುಳಿತಕ್ಕೆ ಸಿಕ್ಕಿ ಸತ್ತರು. ಡ್ರ್ಯಾಗನ್‌ ಕೊಲ್ಲುವಾತ ಭಯಭೀತನಾಗಿ ಮರಗಟ್ಟಿದವನಂತೆ ಅಲುಗಾಡದೇ ನಿಂತಿದ್ದನು. ಡ್ರ್ಯಾಗನ್‌ ಅವನನ್ನು ಒಂದೇ ಗುಟುಕಿನಲ್ಲಿ ನುಂಗಿತು.
*****  

No comments: