Pages

26 November 2015

ಲಾವೊ ಟ್ಸು ವಿರಚಿತ ಟಾವೋ ಟೆ ಚಿಂಗ್ ಅರ್ಥಾತ್ ಋಜು ವಿಧಾನದ ಮಹಾಗ್ರಂಥದ ಭಾವಾನುವಾದ

ಸಂಕಿಪ್ತ ಪರಿಚಯ
ಟಾವೋ ಟೆ ಚಿಂಗ್‌ ಇದು ಲಾವೊ ಟ್ಸು ಎಂಬ ಚೀನೀ ತಪಸ್ವಿ ಕ್ರಿ ಪೂ ೬ ನೇ ಶತಮಾನದಲ್ಲಿ ಬರೆದದ್ದು ಎಂದು ನಂಬಲಾಗಿರುವ ಅಭಿಜಾತ ಕೃತಿ. ಟಾವೋ ಪಂಥದ ಬುನಾದಿಯೇ ಈ ಕೃತಿ. ವಿಶ್ವದ ಹೆಸರಿಸಲಾಗದ ಮೂಲಭೂತ ಪ್ರಕ್ರಿಯೆ ಅರ್ಥಾತ್‌ ವಿಶ್ವದ ಆಗುಹೋಗುಗಳ ನಿರ್ಧಾರಕ ಅಥವ ನಿಯಂತ್ರಕ ತತ್ವ - ಇದು ಟಾವೋ ಅನ್ನುವ ಪದದ ಇಂಗಿತಾರ್ಥ. ‘ವಿಧಾನ’ ಎಂಬ ಪದವನ್ನು ಈ ಪದದ ಸಮಾನಾರ್ಥಕವಾಗಿ ಉಪಯೋಗಿಸುವುದೂ ಉಂಟು. ಸದ್ಗುಣ, ವೈಯಕ್ತಿಕ ಚಾರಿತ್ರ್ಯ, ಋಜುತ್ವ ಇಂತೆಲ್ಲ ಅರ್ಥೈಸಬಹುದಾದ ಪದ ಟೆ, ಚಿಂಗ್‌ ಪದವನ್ನು ಮಹಾಗ್ರಂಥ ಎಂಬುದಾಗಿ ಅರ್ಥೈಸಬಹುದು. ಎಂದೇ, ‘ಋಜು ವಿಧಾನದ ಮಹಾಗ್ರಂಥ’ ಟಾವೋ ಟೆ ಚಿಂಗ್. ದೇವರು’ ಅನ್ನುವ ಪದಪ್ರಯೋಗ ಇಲ್ಲದ ಪುಸ್ತಕ ಇದು.
ಇಂಗ್ಲಿಷ್‌ ಭಾಷೆಯಲ್ಲಿ ಈ ಕೃತಿಯ ಅನೇಕ ಭಾವಾನುವಾದಗಳು ಇವೆ. ಈ ಕೃತಿಯಲ್ಲಿ ಶಿರೋನಾಮೆ ಇಲ್ಲದ ೮೧ ಪುಟ್ಟಪುಟ್ಟ ಅಧ್ಯಾಯಗಳು ಇವೆ. ಪ್ರತೀ ಅಧ್ಯಾಯದಲ್ಲಿ ಒಂದು ವಿಷಯದ ಕುರಿತಾದ ವಿಶಿಷ್ಟ ಶೈಲಿಯಲ್ಲಿ ರಚಿಸಿದ ಒಂದು ಪುಟ್ಟ ಸಾಹಿತ್ಯ ಕೃತಿ ಇದೆ. ಮನವೊಪ್ಪಿಸುವುದಕ್ಕಾಗಿ ಯಾ ಭಾವೋತ್ತೇಜನಕ್ಕಾಗಿ ವಿಶಿಷ್ಟ ಶೈಲಿಯಲ್ಲಿ ಎರಡು ತಂತ್ರಗಳನ್ನು ಅಳವಡಿಸಿದೆ - ಪುಟ್ಟ ಘೋಷಣಾತ್ಮಕ ವಾಕ್ಯಗಳು, ಉದ್ದೇಶಪೂರ್ವಕ ವಿರೋಧೋಕ್ತಿಗಳು. ವಾಚಕನೇ ವಿರೋಧೋಕ್ತಿಗಳಲ್ಲಿ ಇರುವ ವೈರುಧ್ಯಗಳನ್ನು ಚಿಂತನೆಯ ಮುಖೇನ ಹೋಗಲಾಡಿಸಿಕೊಳ್ಳಬೇಕೆಂಬುದು ಕೃತಿಕಾರನ ಉದ್ದೇಶ. ಇವುಗಳಲ್ಲಿರುವ ವಿಷಯ ಚಿಂತನಯೋಗ್ಯವಾದವು ಎಂಬುದು ನನ್ನ ಅಭಿಪ್ರಾಯ. ಎಂದೇ, ಈ ಕೃತಿಯ ಕೆಲವು ಇಂಗ್ಲಿಷ್‌ ಭಾವಾನುವಾದಗಳನ್ನು ಪರಿಶೀಲಿಸಿ ನಾನು ಅರ್ಥಮಾಡಿಕೊಂಡದ್ದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ನಾನು ಸಾಹಿತಿ ಅಲ್ಲವಾದ್ದರಿಂದ ಪ್ರಕಟಿಸಿದ ತುಣುಕುಗಳಲ್ಲಿ ಹುದುಗಿರುವ ಭಾವ ಮತ್ತು ಅದರ ಉದ್ದೇಶಗಳಿಗೆ ವಾಚಕರು ಒತ್ತು ಕೊಡಬೇಕೇ ವಿನಾ ರಚನಾ ಶೈಲಿಗಲ್ಲ ಎಂಬುದಾಗಿ ವಿನಂತಿ.
ಎ ವಿ ಗೋವಿಂದ ರಾವ್

೧.
ವರ್ಣಿಸಬಹುದಾದ ‘ಅದು’ ಎಂದೆಂದಿಗೂ ಇರುವ ‘ಅದು’ ಅಲ್ಲ:
‘ಅದನ್ನು’ ಉಲ್ಲೇಖಿಸಲು ನಾವು ಬಳಸುವ ಹೆಸರು ‘ಅದರ’ ಹೆಸರೇ ಅಲ್ಲ,

ಹೆಸರಿಲ್ಲದ್ದೇ ಸಮಸ್ತ ಲೋಕಗಳ ಉಗಮ ಸ್ಥಾನ;
ನಾವು ಹೆಸರಿಸಿರುವ ಹೆಸರಿಲ್ಲದ್ದೇ ಅಸಂಖ್ಯಾತ ವಸ್ತುಗಳ ಜನನಿ.
ಸದಾ ಬಯಕೆರಹಿತರಿಗೆ ಗೋಚರ ಅದರ ಅವ್ಯಕ್ತ ತಿರುಳು,
ಸದಾ ಬಯಕೆಯುತರಿಗೆ ಗೋಚರ ಅದರ ವ್ಯಕ್ತ ರೂಪಗಳು.

ವ್ಯಕ್ತ ಅವ್ಯಕ್ತಗಳ ಮೂಲವೊಂದೇ,
ಮೂಲ ವಿಕಸಿಸಿ ಬಹುವಾದಾಗ ನಾಮವೂ ಬಹುವಾಗುತ್ತದೆ.
ಈ ಎರಡೂ ಒಗ್ಗೂಡಿರುವುದೇ ರಹಸ್ಯ,
ರಹಸ್ಯದಾಳದಲ್ಲಿದೆ ಸೂಕ್ಷ್ಮಾದ್ಭುತಗಳನ್ನು ತೋರಿಸಬಲ್ಲ ಮಹಾದ್ವಾರ.

೨.
ಸೌಂದರ್ಯವನ್ನು ಆಸ್ವಾದಿಸುವುದೆಂದರೆ
ವಿಕಾರತೆಯ ಇರುವಿಕೆಯನ್ನು ಒಪ್ಪಿಕೊಂಡಂತೆ;
 ಒಳ್ಳೆಯದನ್ನು ಮೆಚ್ಚುವುದೆಂದರೆ
ಕೆಟ್ಟದ್ದರ ಇರುವಿಕೆಯನ್ನು ಒಪ್ಪಿಕೊಂಡಂತೆ.

ಅಸ್ತಿತ್ವದಲ್ಲಿ ಇರುವುದು ಇಲ್ಲದಿರುವುದು,
ಕಷ್ಟವಾದದ್ದು ಸುಲಭವಾದದ್ದು,
ಉದ್ದನೆಯದ್ದು ಗಿಡ್ಡವಾದದ್ದು,
ಎತ್ತರವಾದದ್ದು ತಗ್ಗಾದದ್ದು,
ಇಂಪಾದ ಹಾಡು ಮಾತು,
ನಂತರದ್ದು ಮುಂಚಿನದ್ದು,
ಇಂತೆಲ್ಲ ಪ್ರತ್ಯೇಕಿಸುತ್ತೇವೆ ನಿಸರ್ಗವನು.

ಜ್ಞಾನಿಯು ಇವನ್ನು ಇರುವಂತೆಯೇ ಅನುಭವಿಸುತ್ತಾನೆ,
ಕರ್ಮ ಮಾಡದೆಯೇ ಮಾಡಬೇಕಾದ್ದನ್ನು ಮಾಡುತ್ತಾನೆ;
ಪರಿಸ್ಥಿತಿಗಳ ಹರಿವಿನ ಏರಿಳಿತಗಳನ್ನು ಅಂತೆಯೇ ಅಂಗೀಕರಿಸುತ್ತಾನೆ,
ಎಲ್ಲವನ್ನೂ ಪೋಷಿಸುತ್ತಾನೆ, ಆದರೆ ಸ್ವಂತದ್ದಾಗಿಸಿಕೊಳ್ಳುವುದಿಲ್ಲ
ಜೀವಿಸುತ್ತಾನೆ, ಆದರೆ ನೆಲಸುವುದಿಲ್ಲ.
೩.
ಕರುಬುವಿಕೆ ತಡೆಗಟ್ಟಲು ವೈಭವೀಕರಿಸದಿರಿ ಸಾಧಕರನು,
ಕಳ್ಳತನ ತಡೆಗಟ್ಟಲು ಕಿಮ್ಮತ್ತು ನೀಡದಿರಿ ಅಮೂಲ್ಯ ವಸ್ತುಗಳಿಗೆ,
ಕಾಮನೆಗಳನು ತಡೆಗಟ್ಟಲು ತೋರದಿರಿ ಉದ್ರೇಕಕಾರಿಗಳನು,
ಇದೇ ವಿವೇಕಿಗಳು ಅನುಸರಿಸುವ ವಿಧಾನ.

ಬಯಕೆ ರಹಿತ ಮನಸ್ಸು, ತುಂಬಿದ ಹೊಟ್ಟೆ,
ಸದೃಢ ದೇಹ, ಮಹತ್ವಾಕಾಂಕ್ಷೆರಹಿತತೆ,
ಇಂಥ ಜನ ಬೇಕು ಪ್ರಾಜ್ಞರ ಪ್ರಭುತ್ವಕ್ಕೆ.

ಏನೂ ತಿಳಿಯದವರು, ಆಸೆ ಇಲ್ಲದವರು,
ಮಾಡುವುದಿಲ್ಲ ಕರ್ಮ.
ಕಲಿತವರು ಕರ್ಮ ಮಾಡದೆಯೇ ಕಾರ್ಯ ಮಾಡಿದರೆ
ಸಾಮರಸ್ಯ ಸುವ್ಯವಸ್ಥೆ ಆಗುವುದು ಮೇಲುಗೈ.
೪.
‘ಅದು’ ನೋಡಲು ಒಂದು ಖಾಲಿ ಪಾತ್ರೆ,
ಆದರೆ ಎಂದೂ ಬರಿದಾಗದ ಅಕ್ಷಯ ಪಾತ್ರೆ.
ಎಲ್ಲವೂ ಬಂದದ್ದು ಅದರಿಂದಲೇ ಆದರೂ
ಇಡೀ ವಿಶ್ವ ಒಳ ಹೋದರೂ ತುಂಬದ ಖಾಲಿ ಪಾತ್ರೆ.
ಅದನ್ನು ವಿಭಜಿಸಲೂ ಬಂಧಿಸಲೂ ನಿಸ್ತೇಜಗೊಳಿಸಲೂ
ನಿಶ್ಚಲವಾಗಿಸಲೂ ಸಾಧ್ಯವಿಲ್ಲ;
ಅದರ ಆಳವೋ ನಿಗೂಢ, ಅದಿಲ್ಲದ ಸ್ಥಳವೇ ಇಲ್ಲ,
ಅದು ಅಳಿವೇ ಇಲ್ಲದ್ದು;
ಅದೆಲ್ಲಿಂದ ಬಂದಿತೋ ನನಗೆ ತಿಳಿಯದು;
ತಿಳಿದಿರುವ ನಿಸರ್ಗಕ್ಕಿಂತ ಹಿಂದಿನದು ಅದು.
೫.
ದಯಾಮಯ ನಿಸರ್ಗ ಅನ್ನಲಾಗದು;
ಎಲ್ಲದರೊಂದಿಗೂ ಅದು ನಿಷ್ಪಕ್ಷಪಾತವಾಗಿ ವ್ಯವಹರಿಸುತ್ತದೆ.
ದಯಾಮಯ ಜ್ಞಾನಿ ಅನ್ನಲಾಗದು,
ಎಲ್ಲರೊಂದಿಗೂ ಅವನು ನಿಷ್ಪಕ್ಷಪಾತವಾಗಿ ವ್ಯವಹರಿಸುತ್ತಾನೆ.
ನಿಸರ್ಗ ತಿದಿ ಇದ್ದಂತೆ,
ಖಾಲಿ, ಆದರೂ ವಾಯು ಪೂರೈಕೆಯನ್ನು ನಿಲ್ಲಿಸುವದಿಲ್ಲ.
ಚಲನೆ ಹೆಚ್ಚಿದರೆ ಉತ್ಪಾದನೆಯೂ ಹೆಚ್ಚುತ್ತದೆ;
ಅಂತೆಯೇ ಎಂದೂ ಖಾಲಿ ಆಗದು ಜ್ಞಾನಿಯ ಅನುಭವದ ಸಂಚಿ,
ಅದರಿಂದ ಅವನು ಸದಾ ಲಾಭ ಪಡೆಯುತ್ತಲೇ ಇರುತ್ತಾನೆ.
೬.
ಸಾವಿಲ್ಲದ ಅಪ್ರಾಕೃತ ಶಕ್ತಿಯ ತೊರೆ,
ಆಧ್ಯಾತ್ಮಿಕಾರ್ಥದಲ್ಲಿ ಜನನಿ,
ಇದರ ಮೂಲ ನಿಗೂಢ,
ಸಮಸ್ತ ಲೋಕಗಳ ಉಗಮ ಸ್ಥಾನವೇ
ಇದರ ಪ್ರವೇಶ ದ್ವಾರ.
ಇದರ ಹರಿವು ನಿರಂತರ,
ಎಷ್ಟು ಉಪಯೋಗಿಸಿದರೂ ಬರಿದಾಗದು ಇದು.
೭.
ತನಗಾಗಿ ತಾನೇನನ್ನೂ ಮಾಡುವುದಿಲ್ಲ ನಿಸರ್ಗ,
ಎಂದೇ ಅದು ಪರಿಪೂರ್ಣ, ನಿತ್ಯನೂತನ, ಚಿರಂತನ.
ಎಲ್ಲರಿಗಿಂತ ಹಿಂದೆ ನಿಂತರೂ ಮುಂದಕ್ಕೇ ತಲಪುತ್ತಾನೆ,
ತನ್ನ ಬಯಕೆಗಳನ್ನು ನಿರ್ಲಕ್ಷಿಸಿದರೂ ತೃಪ್ತನಾಗಿರುತ್ತಾನೆ ಜ್ಞಾನಿ.
ತನಗಾಗಿ ತಾನೇನನ್ನೂ ಮಾಡುವುದಿಲ್ಲ ಅವನು
ಎಂದೇ ಅವನೂ ಪರಿಪೂರ್ಣ, ನಿತ್ಯನೂತನ, ಚಿರಂತನ.
೮.
ಸರ್ವೋತ್ಕೃಷ್ಟ ಒಳ್ಳೆಯತನ ನೀರಿನಂತೆ,
ಎಲ್ಲವಕ್ಕೂ ಒಳ್ಳೆಯದನ್ನೇ ಮಾಡುತ್ತದೆ,
ಯಾವುದರೊಂದಿಗೂ ಪೈಪೋಟಿಗಿಳಿಯುವುದಿಲ್ಲ,
ಇತರರು ಹೋಗಬಯಸದ ತಾಣಗಳಿಗೂ ಹರಿಯುತ್ತದೆ,
ಎಂದೇ ಅದು ವಿಶ್ವ ನಿಯಾಮಕ ತತ್ವ ಸಮಾನ.

ಪ್ರಾಜ್ಞನೂ ಅಂತೆಯೇ,
ನಿಸರ್ಗದ ಮಡಿಲಿನಲ್ಲಿ ವಾಸಿಸುತ್ತಾನೆ,
ಮನಸ್ಸಿನಾಳದಲ್ಲಿ ಆಲೋಚಿಸುತ್ತಾನೆ,
ಸರ್ವರಿಗೂ ಪ್ರೀತಿಯಿಂದ ನೀಡುತ್ತಾನೆ,
ಪ್ರಾಮಾಣಿಕವಾಗಿ ಮಾತಾಡುತ್ತಾನೆ,
ಧರ್ಮಸಮ್ಮತವಾಗಿ ಆಳ್ವಿಕೆ ಮಾಡುತ್ತಾನೆ,
ಸಾಮರ್ಥ್ಯಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತಾನೆ,
ಅವಕಾಶಗಳ ಸದುಪಯೋಗ ಮಾಡುತ್ತಾನೆ,
ಅವನು ಯಾರೊಂದಿಗೂ ಸ್ಪರ್ಧಿಸುವುದಿಲ್ಲ,
ಎಂದೇ ಅವನೊಂದಿಗೆ ಯಾರೂ ಸ್ಪರ್ಧಿಸುವುದಿಲ್ಲ.
೯.
ಬಟ್ಟಲಿನ ಅಂಚಿನ ವರೆಗೂ ತುಂಬಿಸಿದರೆ,
ತುಳುಕಿ ಚೆಲ್ಲುವ ಸಾಧ್ಯತೆ ಹೆಚ್ಚು.
ಅತೀ ಗಡುಸಾಗುವ ವರೆಗೆ ಹದ ಮಾಡಿದರೆ,
ಖಡ್ಗ ಮುರಿಯುವ ಸಾಧ್ಯತೆ ಹೆಚ್ಚು.
ಅತೀ ಹೆಚ್ಚು ಸಂಪತ್ತಿನ ಸಂಗ್ರಹ,
ಕಳುವಾಗುವ ಸಾಧ್ಯತೆ ಹೆಚ್ಚು.
ಕೀರ್ತಿ ಪ್ರಶಂಶೆಗಳನ್ನು ಬಯಸಿ ಗಳಿಸಿದರೆ,
ಕ್ಷಿಪ್ರ ಅಧಃಪತನದ ಸಾಧ್ಯತೆ ಹೆಚ್ಚು.
ಗುರಿ ಸಾಧಿಸಿದ ನಂತರ
ನಿವೃತ್ತಿಯಾಗುವುದು ಒಳಿತು.
೧೦.
ನೀನು ‘ಅದನ್ನು’ ಅಪ್ಪಿಕೊ, ‘ಅದೂ’ ನಿನ್ನನ್ನು ಅಪ್ಪಿಕೊಳ್ಳುತ್ತದೆ;
ಸಾವಧಾನವಾಗಿ ಸದ್ದಿಲ್ಲದೇ ಉಸಿರಾಡು, ನವಜಾತ ಶಿಶುವಾಗುವೆ;
ಮನಸ್ಸನ್ನು ಸ್ವಚ್ಛಗೊಳಿಸು, ಸ್ಫಟಿಕಶುಭ್ರ ನೀನಾಗುವೆ;
ಇತರರನ್ನು ಮಕ್ಕಳಂತೆ ಪೋಷಿಸು, ಸಮದರ್ಶಿ ನೀನಾಗುವೆ;
ತೆರೆದ ಹೃದಯಿಯಾಗು, ಸ್ವೀಕಾರಯೋಗ್ಯ ನೀನಾಗುವೆ;
ಲೋಕವನ್ನು ನೀನು ಒಪ್ಪಿಕೊ, ಅದು ನಿನ್ನನ್ನು ಒಪ್ಪಿಕೊಳ್ಳುತ್ತದೆ.

ಉತ್ಪಾದಿಸು, ಪೋಷಿಸು,
ಸೃಷ್ಟಿಸು, ಆದರೂ ಸ್ವಾಮ್ಯ ಬೇಡ,
ಏನನ್ನೂ ಅಪೇಕ್ಷಿಸದೇ ನೀಡುತ್ತಿರು,
ಇದೇ ಸಾಮರಸ್ಯ.
೧೧.
ಮೂವತ್ತು ಅರೆಗಳು ಸಂಧಿಸುತ್ತವೆ ಚಕ್ರದ ಗುಂಬದಲ್ಲಿ;
ಮಧ್ಯದಲ್ಲಿ ರಂಧ್ರ ಇರುವುದರಿಂದ ನಮಗದು ಉಪಯುಕ್ತ.
ಜೇಡಿ ಮಣ್ಣಿನಿಂದ ತಯಾರಾಗುತ್ತದೆ ಮಡಕೆ;
ಮಧ್ಯದಲ್ಲಿ ಟೊಳ್ಳಾಗಿರುವುದರಿಂದ ನಮಗದು ಪಾತ್ರೆ.
ಖಾಲಿ ಸ್ಥಳದ ಸುತ್ತ ಕಟ್ಟುತ್ತೇವೆ ಗೋಡೆಗಳನ್ನು;
ಕಿಟಕಿ ಬಾಗಿಲುಗಳೆಂಬ ರಂಧ್ರಗಳಿದ್ದರೆ ಅದು ಮನೆ.
ಅಸ್ತಿತ್ವದಲ್ಲಿ ಇರುವುದರಿಂದ ಬರುತ್ತದೆ ಪರಿಕರ;
ಪರಿಕರದಲ್ಲಿ ಏನೂ ಇಲ್ಲದ ತಾಣದಿಂದಾಗಿ ಉಪಯೋಗ!
೧೨.
ಬಣ್ಣಗಳು ಅತಿಯಾದರೆ ಕಣ್ಣು ಕುರುಡು,
ಸಂಗೀತ ಅತಿಯಾದರೆ ಕಿವಿ ಕಿವುಡು,
ರುಚಿ ಅತಿಯಾದರೆ ಅಂಗುಳು ನಿಷ್ಕ್ರಿಯ,
ಆಟ ಅತಿಯಾದರೆ ಮನಃಕ್ಷೋಭೆ,
ಆಸೆ ಅತಿಯಾದರೆ ಹೃದಯಾಘಾತ.
ಎಂದೇ, ಜ್ಞಾನಿಗಳೂ ಋಷಿಗಳೂ
ಆಹಾರ ಪೂರೈಸುತ್ತಾರೆ
ಹೊಟ್ಟೆಗೆ, ಇಂದ್ರಿಯಗಳಿಗಲ್ಲ;
ಆಸ್ವಾದಿಸುತ್ತಾರೆ
ತಿರುಳನ್ನು, ಸಿಪ್ಪೆಯನ್ನಲ್ಲ.
೧೩.
ಹೊಗಳಿಕೆ ತೆಗಳಿಕೆಗಳು ಚಿಂತೆಯನ್ನು ಉಂಟು ಮಾಡುತ್ತವೆ,
ಮನದಲ್ಲಿ ನಿರೀಕ್ಷೆ ಮತ್ತು ಭಯ ಮೂಡಲು ಕಾರಣವಾಗುವುದರಿಂದ.
ನಿರೀಕ್ಷೆ ಮತ್ತು ಭಯ ಪ್ರಭಾವಿಸುವುದು ‘ಅಹಂ’ಅನ್ನು,
‘ಅಹಂ’ ಇಲ್ಲದಿದ್ದರೆ ಸೌಭಾಗ್ಯ ದೌರ್ಭಾಗ್ಯಗಳು ಆಗುವುದಾದರೂ ಯಾರಿಗೆ?
ತಾನು ಮೂರ್ತ ಜಗತ್ತಿನ ಭಾಗವಲ್ಲ ಅನ್ನುವವ ಜಗದೊಡೆಯನಾಗಬಲ್ಲ,
ತನ್ನನ್ನು ತಾನೇ ಮೂರ್ತ ಜಗತ್ತು ಅಂದುಕೊಳ್ಳುವವ ಜಗತ್ಪಾಲಕನಾಗಬಲ್ಲ.
೧೪.
ನೋಡಲು ಪ್ರಯತ್ನಿಸಿ, ಅದು ಗೋಚರಿಸುವುದಿಲ್ಲ, ಎಂದೇ ಅದು ಅಗೋಚರ.
ಆಲಿಸಲು ಪ್ರಯತ್ನಿಸಿ, ಅದನ್ನು ಆಲಿಸಲಾಗುವುದಿಲ್ಲ, ಎಂದೇ ಅದು ಶ್ರವಣಾತೀತ.
ಮುಟ್ಟಲು ಪ್ರಯತ್ನಿಸಿ, ಅದನ್ನು ಮುಟ್ಟಲಾಗುವುದಿಲ್ಲ, ಎಂದೇ ಅದು ಸ್ಪರ್ಶಾತೀತ.
ಅರಿವಿಗೆ ನಿಲುಕದವು, ಪರೀಕ್ಷಿಸಲಾಗದವು, ಮೇಳವಿಸಿ ಆಗಿದೆ ಒಂದು ನಿಗೂಢತೆ.
ಅದು ಉದಯಿಸಿದರೆ ಬೆಳಕಾಗುವುದೂ ಇಲ್ಲ, ಅದು ಅಸ್ತಮಿಸಿದರೆ ಕತ್ತಲಾಗುವುದೂ ಇಲ್ಲ,
ಅಸ್ತಿತ್ವದಲ್ಲಿ ಇಲ್ಲದ್ದನ್ನು ಗುರುತಿಸುವ, ವರ್ಣನಾತೀತ  ಅವಿಚ್ಛಿನ್ನ ದಾರ,
ಆಕಾರರಹಿತತೆಯೇ ಅದರ ಆಕಾರ, ಬಿಂಬರಹಿತತೆಯೇ ಅದರ ಬಿಂಬ, ನಿಶ್ಶಬ್ದವೇ ಅದರ ಹೆಸರು.
ಹಿಂದಿನಿಂದ ಅನುಸರಿಸಲು ಅದಕ್ಕೆ ಹಿಂಬದಿಯೇ ಇಲ್ಲ, ಭೇಟಿಯಾಗಲು ಅದಕ್ಕೆ ಮುಖವೇ ಇಲ್ಲ.
ಭೂತಕಾಲದ್ದನ್ನು ನಿಭಾಯಿಸಲು ವರ್ತಮಾನದ್ದರೊಂದಿಗೆ ವ್ಯವಹರಿಸಿ;
ವಿಶ್ವ ಪ್ರಕ್ರಿಯೆಗಳ ನಿರ್ಧಾರಕ ತತ್ವದ ಅಖಂಡತೆಯನ್ನು ಇಂತು ಗ್ರಹಿಸಿ,
ಇದೇ ಅದರ ತಿರುಳು.
೧೫.
ಜ್ಞಾನಿಗಳ ಜ್ಞಾನದ ಗಹನತೆಯಾದರೋ
ನಮ್ಮ ತಿಳಿವಳಿಕೆಗೆ ಮೀರಿದ್ದು,
ಎಂದೇ, ಅವರ ಹೊರಲಕ್ಷಣಗಳನ್ನು ಮಾತ್ರ
ನಾನು ವಿವರಿಸಬಲ್ಲೆ:
ಬರ್ಫದ ತೆಳು ಹಾಳೆಯನ್ನು ದಾಟುತ್ತಿರುವವನಂತೆ ಜಾಗರೂಕ,
ಗಂಡಾಂತರಕಾರಕಗಳು ಸುತ್ತುವರಿದಾತನಂತೆ ಅನಿಶ್ಚಿತಮತಿ,
ಅತಿಥಿಯಂತೆ ವಿನೀತ,
ದ್ರವಿಸುತ್ತಿರುವ ಬರ್ಫದಂತೆ ಅಪಾರ,
ಕಚ್ಚಾ ಒಣಮರದಂತೆ ತಾಜಾ,
ಕಣಿವೆಯಂತೆ ವಿಶಾಲ,
ರಾಡಿ ನೀರಿನಂತೆ ಅಂಚುರಹಿತ.
ರಾಡಿ ತಳಕ್ಕಿಳಿದು ನಿಲ್ಲುವಂತೆ ಮಾಡಲು ಕದಡಿದ ನೀರನ್ನು ನಿಶ್ಚಲವಾಗಿಸಬಲ್ಲ,
ಪಯಣ ಮುಂದುವರಿಸಲೋಸುಗ ವಿರಮಿಸಲು ಯತ್ನಿಸುವವ,
ಲಭ್ಯವಿರುವದಕ್ಕಿಂತ ಕಮ್ಮಿಯಾದುದನ್ನೇ ಬಯಸುವವ,
ದೇಹ ಕ್ಷಯಿಸಿದರೂ ಪುನರುಜ್ಜೀವನಗೊಳಿಸಲಿಚ್ಛಿಸದವ.
೧೬.
ಸ್ವಹಿತಾಸಕ್ತಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದು;
ಪರಿಪೂರ್ಣ ಶಾಂತಿಯನ್ನು ಅಪ್ಪಿಕೊಂಡಂತೆ.
ಜಗತ್ತಿನಲ್ಲಿ ಇರುವ ಎಲ್ಲವೂ ಚಲನಶೀಲವಾದವು;
ಆದರೂ ವಿಶ್ರಾಂತ ಸ್ಥಿತಿಗೆ ಹಿಂದಿರುಗುವುದನ್ನು ಗಮನಿಸಿ.
ಉಚ್ಛ್ರಾಯಸ್ಥಿತಿಯಲ್ಲಿ ಇರುವವೂ ತಾವು ಉದ್ಭವಿಸಿದಲ್ಲಿಗೇ ಹಿಮ್ಮರಳುತ್ತವೆ.
ಇದು ಶಾಂತಿಯುತ ಹಿಮ್ಮರಳುವಿಕೆ; ಇದುವೇ ನಿಸರ್ಗದ ಹರಿವು,
ಎಂದೆಂದಿಗೂ ಜರಗುವ ಕ್ಷಯಿಸುವಿಕೆ ನವೀಕರಿಸುವಿಕೆ.
ಇದನ್ನು ಒಪ್ಪಿಕೊಂಡರೆ ಜ್ಞಾನೋದಯ, ನಿರ್ಲಕ್ಷಿಸಿದರೆ ಸಂಕಟ. 
ನಿಸರ್ಗದ ಹರಿವನ್ನು ಒಪ್ಪಿಕೊಳ್ಳುವವರು ಸಕಲವನ್ನೂ ಪ್ರೀತಿಸುವವರಾಗುತ್ತಾರೆ,
ಸಕಲವನ್ನೂ ಪ್ರೀತಿಸುವವರು ನಿಷ್ಪಕ್ಷಪಾತಿಗಳಾಗುತ್ತಾರೆ;
ನಿಷ್ಪಕ್ಷಪಾತಿಗಳಾದವರು ಉದಾರ ಹೃದಯಿಗಳಾಗುತ್ತಾರೆ;
ಉದಾರಹೃದಯಿಗಳಾದವರು ‘ಅದರೊಂದಿಗೆ’ ಒಂದಾಗುತ್ತಾರೆ;
‘ಅದರೊಂದಿಗೆ’ ಒಂದಾದವರು ಅಮರರಾಗುತ್ತಾರೆ:
ಅವರ ದೇಹ ಶಿಥಿಲವಾದರೂ ‘ಅದು’ ಶಿಥಿಲವಾಗುವುದಿಲ್ಲ.
೧೭.
ಅತ್ಯುತ್ತಮವಾದ ಆಳುವವರನ್ನು ಅವರ ಪ್ರಜೆಗಳು ಹೆಚ್ಚುಕಮ್ಮಿ ತಿಳಿದೇ ಇರುವುದಿಲ್ಲ;
ತದನಂತರದ ಸ್ತರದ ಆಳುವವರನ್ನು ಪ್ರಜೆಗಳು ಹೊಗಳುತ್ತಾರೆ, ಪ್ರೀತಿಸುತ್ತಾರೆ;
ತದನಂತರದ ಸ್ತರದ ಆಳುವವರಿಗೆ ಹೆದರುತ್ತಾರೆ;
ತದನಂತರದ ಸ್ತರದ ಆಳುವವರನ್ನು ದ್ವೇಷಿಸುತ್ತಾರೆ:
ಅವರಿಗೆ ತಮ್ಮ ಪ್ರಜೆಗಳ ಮೇಲೆ ನಂಬಿಕೆಯೇ ಇರುವುದಿಲ್ಲ,
ಪ್ರಜೆಗಳೂ ಅವರಿಗೆ ಅವಿಧೇಯರಾಗಿರುತ್ತಾರೆ.
ಅತ್ಯುತ್ತಮವಾದ ಆಳುವವರು ತಮ್ಮ ಗುರಿ ಸಾಧಿಸಿದಾಗ
ಪ್ರಜೆಗಳು ಆ ಸಾಧನೆಯನ್ನು ತಮ್ಮದೇ ಸಾಧನೆ ಅನ್ನುತ್ತಾರೆ.
೧೮.
‘ಅದನ್ನು’ ಮರೆತಾಗ
ಕರ್ತವ್ಯ ಹಾಗು ನ್ಯಾಯವಾದ ವರ್ತನೆ ಕಾಣಿಸಿಕೊಳ್ಳುತ್ತವೆ;
ಆನಂತರ ಹುಟ್ಟುತ್ತವೆ ಜ್ಞಾನ ಹಾಗು ವಿವೇಕ
ಆಷಾಢಭೂತೀತನದೊಂದಿಗೆ.
ಸಮರಸ ಸಂಬಂಧಗಳು ಕಾಣದಾದಾಗ
ಗೌರವ ಹಾಗು ಧರ್ಮನಿಷ್ಠೆ ಉದಯಿಸುತ್ತವೆ;
ರಾಷ್ಟ್ರವೊಂದು ಅವ್ಯವಸ್ಥೆಯ ಆಗರವಾದಾಗ
ದೇಶನಿಷ್ಠೆ ಹಾಗು ದೇಶಪ್ರೇಮ ಉದಯಿಸುತ್ತವೆ.
೧೯.
ಜ್ಞಾನವನ್ನೂ ವಿವೇಕವನ್ನೂ ತ್ಯಜಿಸಬಲ್ಲೆವಾದರೆ
ಜನರಿಗಾಗುತ್ತದೆ ನೂರುಪಟ್ಟು ಲಾಭ;
ಕರ್ತವ್ಯವನ್ನೂ ನ್ಯಾಯಶೀಲ ವರ್ತನೆಯನ್ನೂ ತ್ಯಜಿಸಬಲ್ಲೆವಾದರೆ
ರೂಪುಗೊಳ್ಳುತ್ತವೆ ಸಮರಸವಾದ ಸಂಬಂಧಗಳು;
ಸಾಧನೋಪಾಯಗಳನ್ನೂ ಲಾಭವನ್ನೂ ತ್ಯಜಿಸಬಲ್ಲೆವಾದರೆ
ವ್ಯರ್ಥವಾಗುವುದೂ ಕಳ್ಳತನವೂ ಮಾಯವಾಗುತ್ತವೆ.
ಕೇವಲ ರೋಗಲಕ್ಷಣಗಳನ್ನು ನಿವಾರಿಸುತ್ತವೆ ಈ ಪರಿಹಾರೋಪಾಯಗಳು
ಎಂದೇ ಅವು ಅಸಮರ್ಪಕ.
ಜನತೆಗೆ ಬೇಕು ವೈಯಕ್ತಿಕ ಪರಿಹಾರೋಪಾಯಗಳು:
ನಿಮ್ಮ ನೈಜ ವ್ಯಕ್ತಿತ್ವವನ್ನು ಪ್ರದರ್ಶಿಸಿ, ನಿಮ್ಮ ಮೂಲ ಸ್ವರೂಪವನ್ನು ಅಪ್ಪಿಕೊಳ್ಳಿ;
ಸ್ವಹಿತಾಸಕ್ತಿಯನ್ನು ಕಟ್ಟಿಹಾಕಿ, ಮಹತ್ವಾಕಾಂಕ್ಷೆಯನ್ನು ನಿಯಂತ್ರಿಸಿ;
ನಿಮ್ಮ ಚಾಳಿಗಳನ್ನು ಮರೆಯಿರಿ, ವ್ಯವಹಾರಗಳನ್ನು ಸರಳೀಕರಿಸಿ.
೨೦.
ಸಮ್ಮತಿ, ಅಸಮ್ಮತಿಗಳ ನಡುವಣ ವ್ಯತ್ಯಾಸವೇನು?
ಸುರೂಪ, ಕುರೂಪಗಳ ನಡುವಣ ವ್ಯತ್ಯಾಸವೇನು?
ಭೀತ, ಭೀಕರಗಳ ನಡುವಣ ವ್ಯತ್ಯಾಸವೇನು?
ವಸಂತಕಾಲದಲ್ಲಿ ಉಪವನದಲ್ಲಿ ಆಡುತ್ತಿರುವಂತೆ
ಅಥವ ಸಂತೋಷಕೂಟದಲ್ಲಿ ಇರುವಂತೆ ನಲಿದಾಡುತ್ತಿರುವರು ಜನ,
ನಾನಾದರೋ ಮುಗುಳ್ನಗಲು ಕಲಿಯುವ ಮುನ್ನಿನ ನವಜಾತ ಶಿಶುವಿನಂತೆ
ನಿರಾಕುಲನಾಗಿ ಅಲೆದಾಡುತ್ತಿರುವೆ ಒಂಟಿಯಾಗಿ,
ನಿಜವಾದ ಮನೆ ಎಂಬುದೇ ಇಲ್ಲದೆ.
ಜನರ ಬಳಿ ಸಾಕಷ್ಟಿದೆ, ಅವರಿಗಾಗಿ ಮಿಗುವಷ್ಟಿದೆ,
ನನ್ನ ಬಳಿಯಾದರೋ ಏನೂ ಇಲ್ಲ,
ನನ್ನ ಹೃದಯವಾದರೋ ಅವಿವೇಕಿಯ ಹೃದಯದಂತೆ
ಗಲಿಬಿಲಿಗೊಂಡಿದೆ, ಮಂಕಾಗಿದೆ.
ತೀಕ್ಷ್ಣಮತಿಗಳು, ನಿಸ್ಸಂದೇಹಿಗಳು ಜನರು,
ನಾನಾದರೋ ಮಂದಮತಿ, ದಿಕ್ಕುತೋಚದವ;
ಜಾಣರು, ವಿವೇಕಿಗಳು ಜನರು,
ನಾನಾದರೋ ದಡ್ಡ, ಏನೂ ತಿಳಿಯದವ;
ಯಾವುದಕ್ಕೂ ಅಂಟಿಕೊಳ್ಳದೆ ಅನಿಶ್ಚಿತವಾಗಿ ಸಾಗುತ್ತಿರುವ ಸಾಗರದ ಅಲೆಯಂತೆ
ನಿಶ್ಚಿತ ಗುರಿ ಇಲ್ಲದವ.
೨೧.
‘ಅದನ್ನು’ ಅನುಸರಿಸಿದರೆ ಮಾತ್ರ ಸಾಮರಸ್ಯ ಸಾಧ್ಯ.
‘ಅದಕ್ಕೆ’ ಆಕಾರವೂ ಇಲ್ಲ, ವಿಶಿಷ್ಟ ಗುಣಗಳೂ ಇಲ್ಲ,
ಆದರೂ ಎಲ್ಲ ಆಕಾರಗಳನ್ನೂ ವಿಶಿಷ್ಟ ಗುಣಗಳನ್ನೂ ತೋರಿಸುತ್ತದೆ;
ಅನುಮಾನಿಸಬಹುದಾದ ‘ಅದು’ ಅಗೋಚರ,
ಆದರೂ ನಿಸರ್ಗದ ಎಲ್ಲವನ್ನೂ ವ್ಯಕ್ತಗೊಳಿಸುತ್ತದೆ;
‘ಅದು’ ಬದಲಾಗುವುದಿಲ್ಲ,
ಆದರೂ ಎಲ್ಲ ಚಲನೆಯನ್ನೂ ವ್ಯಕ್ತಗೊಳಿಸುತ್ತದೆ.
೨೨.
ವಶವಾಗು, ಪೂರ್ಣವಾಗುವೆ,
ಬಾಗು, ನೆಟ್ಟಗಾಗುವೆ,
ಖಾಲಿ ಮಾಡು, ಭರ್ತಿಯಾಗುವೆ,
ನಶಿಸುವಂತೆ ಮಾಡು, ನವೀಕರಿಸಿಕೊಳ್ಳುವೆ,
ಕಡಿಮೆ ಮಾಡು, ಗಳಿಸುವೆ,
ಎಲ್ಲವನ್ನೂ ಈಡೇರಿಸು, ದಿಕ್ಕು ತೋಚದಂತಾಗುವೆ.
ವಿಶ್ವನಿಯಂತ್ರಕ ತತ್ವವನ್ನು ಲೋಕವು ಸ್ವೀಕರಿಸಿದಂತೆ
ಮಹಾಜ್ಞಾನಿ ಲೋಕವನ್ನು ಸ್ವೀಕರಿಸುತ್ತಾನೆ;
ಅವನು ತನ್ನನ್ನು ಮೆರೆಸುವುದಿಲ್ಲ, ಎಂದೇ ಸ್ಪಷ್ಟವಾಗಿ ಕಾಣಿಸುತ್ತಾನೆ,
ತನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ, ಎಂದೇ ಗುರುತಿಸಲ್ಪಡುತ್ತಾನೆ,
ಜಂಬಕೊಚ್ಚಿಕೊಳ್ಳುವುದಿಲ್ಲ, ಎಂದೇ ಗೌರವಿಸಲ್ಪಡುತ್ತಾನೆ,
ಅಹಂಕಾರಿಯಲ್ಲ, ಎಂದೇ ಸಹನೀಯ,
ವಾದಿಸುವುದಿಲ್ಲ, ಎಂದೇ ಅವನೊಂದಿಗೆ ವಾದಿಸುವವರಿಲ್ಲ.
ಬಲ್ಲಿದರು ಹೇಳಿದರು, “ವಶವಾಗು, ಪೂರ್ಣವಾಗುವೆ.”
ಪೂರ್ಣವಾದಾಗ ಲೋಕವೇ ನಿನ್ನ ಮನೆಯಂತಾಗುತ್ತದೆ.
 ೨೩.
 ಕೆಲವೇ ಮಾತುಗಳನ್ನು ಹೇಳುತ್ತದೆ ನಿಸರ್ಗ:
ದೀರ್ಘಕಾಲವಿರುವುದಿಲ್ಲ ವೇಗವಾಗಿ ಬೀಸುವ ಗಾಳಿ,
ಅಂತೆಯೇ ಭಾರೀ ಮಳೆಯೂ.
ನಿಸರ್ಗದ ಮಾತುಗಳೇ ದೀರ್ಘಕಾಲ ಉಳಿಯುವುದಿಲ್ಲ
ಅಂದ ಮೇಲೆ ಮಾನವನ್ನದ್ದೇಕೆ ಉಳಿಯಬೇಕು?
ಸಾಮರಸ್ಯವನ್ನು ಒಪ್ಪಿಕೊಳ್ಳುವವನಾಗುತ್ತಾನೆ ಸಮರಸ ಮಾನವ.
ಕಳೆದುಕೊಳ್ಳುವುದನ್ನು ಒಪ್ಪಿಕೊಳ್ಳುವವ ಕಳೆದು ಹೋಗುತ್ತಾನೆ.
ಸಾಮರಸ್ಯವನ್ನು ಒಪ್ಪಿಕೊಳ್ಳುವವನೊಂದಿಗೆ ‘ಅದು’ ಸಾಮರಸ್ಯ ಸ್ಥಾಪಿಸುತ್ತದೆ,
ಕಳೆದುಕೊಳ್ಳುವುದನ್ನು ಒಪ್ಪಿಕೊಳ್ಳುವವ ‘ಅದಕ್ಕೆ’ ಗೋಚರಿಸುವುದೇ ಇಲ್ಲ.
೨೪.
ತುದಿಗಾಲಲ್ಲಿ ಅಲುಗಾಡದೆ ನಿಲ್ಲುವುದಸಾಧ್ಯ;
ಕಿಸಿಗಾಲು ಹಾಕಿಕೊಂಡು ವೇಗವಾಗಿ ನಡೆಯುವುದಸಾಧ್ಯ;
ಜಂಬದಿಂದ ಮೆರೆದರೆ ಪ್ರಕಾಶಿಸುವುದಸಾಧ್ಯ;
ಆತ್ಮಸ್ತುತಿ ಮಾಡಿದರೆ ಗೌರವಿಸಲ್ಪಡುವುದಸಾಧ್ಯ;
ಬಡಾಯಿಕೊಚ್ಚಿದರೆ ನಂಬಲ್ಪಡುವುದಸಾಧ್ಯ;
ತಾನೊಬ್ಬನೇ ಧರ್ಮಪರ ಅಂದರೆ ಮನ್ನಣೆ ಗಳಿಸುವುದಸಾಧ್ಯ.
ಈ ವರ್ತನೆಗಳು ನಿರರ್ಥಕ, ಸ್ವೇಚ್ಛಾತೃಪ್ತಿಯ ಸಾಧನಗಳು,
ಎಂದೇ, ಆಕರ್ಷಿಸುತ್ತದೆ ‘ಅದರ’ ಅವಕೃಪೆಯನ್ನು;
ದೂರವಾಗುತ್ತದೆ ಸಾಮರಸ್ಯ.
೨೫.
ಭೂಮ್ಯಾಕಾಶಗಳು ಹುಟ್ಟುವ ಮೊದಲೇ
ನಿರಾಕಾರ, ನಿರ್ವಚನೀಯ,
ಅಪರಿವರ್ತನೀಯ, ಏಕಮಾತ್ರ,
ನೀರವ, ನಿಶ್ಚಲ,
ಪರಿಶುದ್ಧ, ಗಹನ,
ಪರಿಪೂರ್ಣ, ಅಕ್ಷಯ
ಆದ ಏನೋ ಒಂದಿತ್ತು.
ಅದೇ ವಿಶ್ವದ ಜನನಿ.
ಅದರ ಹೆಸರ ನಾನರಿಯೆ,
ಎಂದೇ ನಾನದರ ಕರೆಯುವೆ
‘ವಿಶ್ವನಿಯಂತ್ರಕ ತತ್ವ’, ‘ಅದು’.
ಬೇರೇನೂ ತೋಚದ್ದರಿಂದ
ಹೇಳುವೆ -‘ಅದು’ ಮಹಾನ್.
ಮಹಾನ್‌ ಎಂದರೆ ನಿರಂತರ ಹರಿವು
ನಿರಂತರ ಹರಿವೆಂದರೆ ದೂರಗಾಮಿಯಾಗುವುದು
ದೂರಗಾಮಿಯಾಗುವುದೆಂದರೆ ವಾಪಾಸಾಗುವುದು.
ಇಂತು ‘ಅದು’ ಮಹಾನ್‌.
ಆಕಾಶವು ಮಹಾನ್‌,
ಭೂಮಿಯು ಮಹಾನ್,
ರಾಜನೂ ಮಹಾನ್‌.
ವಿಶ್ವದಲ್ಲಿರುವುದೇ ನಾಲ್ಕು ಮಹಾನ್‌ಗಳು,
ಅವುಗಳ ಪೈಕಿ ರಾಜನೂ ಒಂದು.
ಮಾನವನನ್ನಾಳುತ್ತದೆ ಭೂಮಿ,
ಭೂಮಿಯನ್ನಾಳುತ್ತದೆ ಆಕಾಶ,
ಆಕಾಶವನ್ನಾಳುತ್ತದೆ ‘ಅದು’,
‘ಅದನ್ನು’ ‘ಅದೇ’ ಆಳಿಕೊಳ್ಳುತ್ತದೆ.
೨೬.
 ಗುರುತ್ವವೇ ಲಘುತ್ವದ ಬೇರು
ಸಮಾಧಾನ ಸ್ಥಿತಿಯೇ ಆತುರದ ಒಡೆಯ
ದಿನವಿಡೀ ಪಯಣಿಸುತ್ತಿದ್ದರೂ ಸದಾ ಗಮನಿಸುತ್ತಿರುತ್ತಾನೆ
ಒಂಟಿ ಪಯಣಿಗ ತನ್ನ ಸಾಮಾನು ಸರಂಜಾಮುಗಳನ್ನು ,
ಗಮನ ತಗ್ಗಿಸುತ್ತಾನೆ,ಸುರಕ್ಷಿತ ತಂಗುದಾಣದೊಳಗೆ
ವಿರಮಿಸುವಾಗ ಮಾತ್ರ.
ಅಂತೆಯೇ ದೊಡ್ಡ ನಾವೆಯ ಕಪ್ತಾನನೂ
ಲಘುವಾಗಿ ಆತುರವಾಗಿ ಕೆಲಸ ಮಾಡಬಾರದು.
ಲಘುವಾಗಿದ್ದರೆ ಸಿಗುವುದಿಲ್ಲ ಲೋಕದ ನೋಟ
ಆತುರವಾಗಿದ್ದರೆ ಇಲ್ಲವಾಗುತ್ತದೆ ತನ್ನ ಮೇಲಿನ ಹಿಡಿತ.
ಕಾಣಬಾರದು ತನ್ನ ದೊಡ್ಡನಾವೆಯನ್ನು ಪುಟ್ಟನಾವೆಯಂತೆ;
ಹೊಳೆಯುವ ಬದಲು ರತ್ನದಂತೆ
ಆತ ನಿಲ್ಲಬೇಕು ಬಂಡೆಯಂತೆ.
೨೭.
 ಪರಿಪೂರ್ಣ ಯಾತ್ರಿಕ ಉಳಿಸುವುದಿಲ್ಲ ಅನುಸರಿಸಬಹುದಾದ ಜಾಡು;
ಪರಿಪೂರ್ಣ ವಕ್ತಾರ ಉಳಿಸುವುದಿಲ್ಲ ಉತ್ತರಿಸಬೇಕಾದ ಪ್ರಶ್ನೆಗಳನ್ನು;
ಪರಿಪೂರ್ಣ ಕರಣಿಕ ಉಳಿಸುವುದಿಲ್ಲ ಲೆಕ್ಕಿಸಬೇಕಾದುದೇನನ್ನೂ;
ಪರಿಪೂರ್ಣ ಪೆಟ್ಟಿಗೆಗಿರುವುದಿಲ್ಲ ಹಾಕಬೇಕಾದ ಬೀಗ;
ಪರಿಪೂರ್ಣ ಗಂಟಿನಲ್ಲಿರುವುದಿಲ್ಲ ಬಿಚ್ಚಬಹುದಾದ ದಾರದ ತುದಿಗಳು.
ಹಾಗೆಯೇ, ಜ್ಞಾನಿ ಎಲ್ಲರನ್ನೂ ಪೋಷಿಸುತ್ತಾನೆ
ಯಾರನ್ನೂ ತ್ಯಜಿಸುವುದಿಲ್ಲ.
ಅವನೆಲ್ಲವನ್ನೂ ಸ್ವೀಕರಿಸುತ್ತಾನೆ
ಏನನ್ನೂ ತಿರಸ್ಕರಿಸುವುದಿಲ್ಲ.
ಅತೀ ಸಣ್ಣ ವಿವರಗಳನ್ನೂ ಆತ ಗಮನಿಸುತ್ತಾನೆ.
ಬಲವಾದವರು ದುರ್ಬಲರಿಗೆ ದಾರಿ ತೋರಿಸಬೇಕು;
ಬಲವಾದವರಿಗೆ ದುರ್ಬಲರೇ ಕಚ್ಚಾ ವಸ್ತು.
ದಾರಿ ತೋರಿಸುವವರನ್ನು ಗೌರವಿಸದಿದ್ದರೆ,
ಕಚ್ಚಾವಸ್ತುವಿನ ಆರೈಕೆ ಮಾಡದಿದ್ದರೆ,
ಯಾರು ಎಷ್ಟೇ ಚತುರನಾಗಿದ್ದರೂ ಗೊಂದಲ ಉಂಟಾಗುತ್ತದೆ.
ಇದೇ ಪರಿಪೂರ್ಣತೆಯ ಗುಟ್ಟು:
ಕಚ್ಚಾ ಮರವನ್ನು ಕೆತ್ತಿದರೆ ಆಗುತ್ತದೆ ಉಪಯುಕ್ತ ಸಾಧನ;
ಕೆಲಸದಲ್ಲಿ ತೊಡಗಿಸಿದರೆ ಉಪಯುಕ್ತನಾಗುತ್ತಾನೆ ಮಾನವ;
ಪರಿಪೂರ್ಣ ಬಡಗಿ ಯಾವ ಮರವನ್ನೂ ಕೆತ್ತದೇ ಬಿಡುವುದಿಲ್ಲ.
೨೮.
 ಪುರುಷತ್ವದ ಬಲ ಸ್ತ್ರೀತ್ವದ ಅಂತಃಕರಣ ಮೇಳೈಸಿ
ಲೋಕದ ಪ್ರವೇಶದ್ವಾರವಾಗಿ
ಸಾಮರಸ್ಯವನ್ನಪ್ಪಿ
ನವಜಾತ ಶಿಶುವಿನಂತಾಗು.
ಬಲಾಬಲಗಳು ಮೇಳೈಸಿ
ಲೋಕದ ಬೇರಾಗಿ
ಸಾಮರಸ್ಯವನ್ನು ಪೂರ್ಣಗೊಳಿಸಿ
ಕೆತ್ತಿ ಆಕಾರ ಕೊಡದ ಕಾಷ್ಠದಂತಾಗು.
ಬೆಳಕು ನೆರಳುಗಳು ಮೇಳೈಸಿ
ಲೋಕವೇ ಆಗಿ
ಸಾಮರಸ್ಯವನ್ನು ಪರಿಪೂರ್ಣವಾಗಿಸಿ
‘ಅದಕ್ಕೆ’ ಹಿಂದಿರುಗು.
೨೯.
ಲೋಕವನು ಬದಲಿಸಬಯಸುತ್ತೀರಾ
ನಿಮ್ಮ ಇಚ್ಛಾನುಸಾರ?
ಸಾಧ್ಯವಾಗದು ನಿಮ್ಮಿಂದ.
ಲೊಕವನು ರೂಪಿಸುವುದು
’ಅದು’, ನೀವಲ್ಲ.
ಬದಲಿಸಲು ಯತ್ನಿಸಿದರೆ ನೀವು ಮಾಡುವಿರಿ ಹಾನಿ,
ನೀವದನು ಕಳೆದುಕೊಳ್ಳುವಿರಿ ಒಡೆತನ ಪಡೆಯಬಯಸಿದರೆ.
ದಾರಿ ತೋರಿಸುವರು ಕೆಲಮಂದಿ, ಅನುಸರಿಸುವರು ಇತರರು.
ಹುರಿದುಂಬಿಸುವರು ಕೆಲಮಂದಿ, ನಿರುತ್ಸಾಹಿಗಳು ಇತರರು.
ಬಲಶಾಲಿಗಳು ಕೆಲಮಂದಿ, ದುರ್ಬಲರು ಇತರರು.
ಗುರಿ ಮುಟ್ಟುವರು ಕೆಲಮಂದಿ,
ಅರೆದಾರಿಯಲ್ಲಿ ನಿಲ್ಲುವರು ಇತರರು.
ಎಂದೇ, ಜ್ಞಾನಿಗಳು
ವಿವೇಕದ ಎಲ್ಲೆ ಮೀರುವುದೂ ಇಲ್ಲ, ಭಾವಾವೇಶದಿಂದ ಬಲಪ್ರಯೋಗಿಸುವುದೂ ಇಲ್ಲ.
೩೦.
ದೌರ್ಜನ್ಯಕ್ಕೆ ಹಿಮ್ಮರಳುವ ಅಭ್ಯಾಸವಿರುವುದರಿಂದ
ಬಲಿಷ್ಠರು ದೌರ್ಜನ್ಯವೆಸಗದಿರುವುದೊಳಿತು;
ಮುಳ್ಳು ಗಿಡಗಂಟಿಗಳು ಬೆಳೆಯುವುವು ಸೇನೆ ಹೋದೆಡೆಯೆಲ್ಲ,
ಬರಗಾಲ ಬರುವುದು ಯುದ್ಧವನು ಅನುಸರಿಸಿ.
ಆದೇಶ ಮೀರಿ ಸಾಧಿಸದಿರುವುದೊಳಿತು,
ಜಯದಿಂದ ಸ್ವಪ್ರಯೋಜನ ಪಡೆಯದಿರುವುದೊಳಿತು,
ಬಡಾಯಿ, ಗರ್ವ, ಪ್ರತಿಷ್ಠೆಗಳಿಂದ ದೂರವಿರುವುದೊಳಿತು,
ಅವಶ್ಯವಾದದ್ದನ್ನು ಮಾಡುವುದೊಳಿತು, ಸಾಧ್ಯವಿರುವುದನ್ನಲ್ಲ,
ಎಂಬುದನು ಮರೆಯದಿರಬೇಕು ಸೇನಾನಿ.
ಮಹಾಬಲಶಾಲಿಗಳೂ ದುರ್ಬಲರಾಗುತ್ತಾರೆ ಸಮಯ ಕಳೆದಂತೆ,
ಕೊಲ್ಲಲೋಸುಗ ಹಿಮ್ಮರಳುತ್ತದೆ ಮುನ್ನ ಮಾಡಿದ ದೌರ್ಜನ್ಯ.
೩೧.
 ಸೈನ್ಯಗಳು ದೌರ್ಜನ್ಯದ ಹತ್ಯಾರುಗಳು;
ಮಾನವರಲ್ಲಿ ಭಯ ದ್ವೇಷಗಳು ಹುಟ್ಟಲು ಕಾರಣಗಳು.
ಎಂದೇ, ಜ್ಞಾನಿ ಅವುಗಳ ಜೊತೆ ಸೇರುವುದಿಲ್ಲ.
ಸೃಷ್ಟಿ ಅವನ ಉದ್ದೇಶ;
ವಿನಾಶ ಅವುಗಳ ಉದ್ದೇಶ.
ಆಯುಧಗಳು ದೌರ್ಜನ್ಯದ ಸಾಧನಗಳು, ಜ್ಞಾನಿಯದಲ್ಲ;
ಬೇರೆ ದಾರಿ ಕಾಣದಿರೆ ಉಪಯೋಗಿಸುವನು ಅವನು ಅವನ್ನು,
ಅದೂ ಶಾಂತ ಮನಸ್ಕನಾಗಿ ಸಮಯೋಚಿತ ಜಾಣತನದಿಂದ,
ಅವುಗಳಲ್ಲಿ ಸೌಂದರ್ಯವೇನೂ ಅವನಿಗೆ ಗೋಚರಿಸದಿರುವುದರಿಂದ.
ಆಯುಧಗಳಲಿ ಸೌಂದರ್ಯ ಕಾಣುವವ
ಆನಂದಿಸುವನು ಇತರರನು ಸಂಹರಿಸಿ;
ಮಾನವರ ಸಂಹಾರದಲಿ ಆನಂದ ಕಾಣುವವ
ಗಳಿಸಲಾರ ಅಂತರಂಗದ ಶಾಂತಿ.
ಎಂದೇ, ಶೋಕಿಸಬೇಕು ಯುದ್ಧಗಳು ನಡೆದಾಗ
ಸಂಭ್ರಮಿಸಬೇಕು ಜಯವನ್ನು ಅಂತ್ಯಸಂಸ್ಕಾರದ ವಿಧಿವಿಧಾನಗಳಿಂದ.
೩೨.
 ‘ಅದಕ್ಕೆ’ ನಿಜವಾದ ರೂಪವೇ ಇಲ್ಲ,
ಎಂದೇ ಅದನ್ಯಾರೂ ನಿಯಂತ್ರಿಸಲಾರರು.
ಯಾರಾದರೂ ‘ಅದನ್ನು’ ನಿಯಂತ್ರಿಸಬಲ್ಲರಾದರೆ
ಎಲ್ಲವೂ ಜರಗುವುದು
ಅವರಿಚ್ಛೆಗನುಸಾರ,
ಸಿಹಿಯಾದ ಮಳೆ ಬೀಳುವುದು,
ಎಲ್ಲರ ದಾಹವಿಂಗಿಸುತ ಶ್ರಮವಿಲ್ಲದೆ.
ಉಪಯೋಗಿಸಲು ತಕ್ಕುದಾದ ರೂಪ ತಾಳುತ್ತದೆ ‘ಅದು’
ಆದರಾಗ ಕಳೆದು ಹೋಗುತ್ತದೆ ‘ಅದರ’ ನಿಜರೂಪ.
ಗಟ್ಟಿಯಾಗಿ ಹಿಡಿಯದಿರಿ ರೂಪಗಳನು
ನದಿಯು ಹರಿವಂತೆ ಸಾಗರದತ್ತ
ಹರಿಯಲಿ ‘ಅದರ’ ಸಂವೇದನೆ ಲೊಕದೊಳಕ್ಕೆ.
೩೩.
 ಲೋಕವನ್ನರಿತವನು ವಿದ್ವಾಂಸ;
ತನ್ನನ್ನೇ ಅರಿತವನು ಜ್ಞಾನೋದಯವಾದವ.
ಲೋಕವನ್ನು ಗೆಲ್ಲಬಲ್ಲವನು ಬಲಶಾಲಿ;
ತನ್ನನ್ನೇ ಗೆಲ್ಲಬಲ್ಲವನು ಸಾಮರಸ್ಯವುಳ್ಳವ;
ದೃಢಸಂಕಲ್ಪ ಮಾಡಿದವ ನಿಶ್ಚಿತ ಗುರಿಯುಳ್ಳವ.
ಸಂತೃಪ್ತನಾದವ ಸಿರಿವಂತ;
ತನ್ನ ಮನೆಯನ್ನು ಸಂರಕ್ಷಿಸುವವ ಬಹುಕಾಲ ಉಳಿದಿರುತ್ತಾನೆ;
ತನ್ನ ಮನೆಯನ್ನು ತ್ಯಜಿಸುವವನು ಅದು ಅಳಿದ ನಂತರವೂ ಇರುತ್ತಾನೆ!
೩೪.
 ‘ಅದು’ ಸರ್ವವ್ಯಾಪಿ, ‘ಅದೇ’ ಸೃಷ್ಟಿಕರ್ತೃ, ‘ಅದೇ’ ಲಯಕರ್ತೃ,
ಲೋಕ ವ್ಯವಹಾರಗಳ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ಕಾರ್ಯಗತಗೊಳಿಸುತ್ತದೆ,
ಪ್ರತಿಫಲಾಪೇಕ್ಷೆಯಿಲ್ಲದೆ.
‘ಅದು’ ಯಾವುದನ್ನೂ ನಿಯಂತ್ರಿಸುವುದಿಲ್ಲ,
ಆದರೂ ಪೋಷಿಸುತ್ತದೆಲ್ಲವನೂ;
ಯಾವ ಆಶಯವೂ ಅದಕ್ಕಿಲ್ಲ,
ಎಂದೇ ಅಮುಖ್ಯ ಅನ್ನಿಸುತ್ತದನೇಕರಿಗೆ.
ಎಲ್ಲದರ ತಿರುಳೇ ‘ಅದು’;
ಆದರೂ ನಿಯಂತ್ರಿಸುವುದಿಲ್ಲವೇನನ್ನೂ;
ಅಪವಾದವೇ ಇಲ್ಲ ಇದಕೆ,
ಎಂದೇ ‘ಅದು’ ಅತೀ ಮುಖ್ಯ ಅನಿಸುತ್ತದನೇಕರಿಗೆ.
ಜ್ಞಾನಿಯೂ ನಿಯಂತ್ರಿಸುವುದಿಲ್ಲ ಲೋಕವನು;
ಸಾಮರಸ್ಯವಿರುತ್ತದೆ ಅದರೊಂದಿಗವನಿಗೆ.
೩೫.
‘ಅದರೊಂದಿಗೆ’ ಸಮರಸದಿಂದಿದ್ದರೆ
ಲೋಕವೇ ಹಿಂಬಾಲಿಸುತ್ತದೆ ನಿಮ್ಮನ್ನು
ಯಾವ ತೊಂದರೆಯೂ ಇಲ್ಲದೆಯೆ, ತೃಪ್ತಿಯಿಂದ, ಶಾಂತಿಯಿಂದ.
ಆಹಾರ ಸಂಗೀತಗಳು ಪಯಣಿಗನನ್ನು ಸೆಳೆಯುತ್ತವೆ.
‘ಅದರ’ ಕುರಿತಾಡಿದ ಮಾತುಗಳಾದರೋ ನೀರಸ ಮಾಧುರ್ಯರಹಿತ.
ನೋಡೋಣವೆಂದರೆ ‘ಅದು’ ಗೋಚರಿಸುವುದಿಲ್ಲ,
ಕೇಳೋಣವೆಂದರೆ ‘ಅದು’ ಕೇಳಿಸುವುದಿಲ್ಲ.
ಎಷ್ಟು ಉಪಯೋಗಿಸಿದರೂ ‘ಅದು’ ಮುಗಿಯುವುದಿಲ್ಲ!
 ೩೬.
ಒಬ್ಬರ ಪ್ರಭಾವ ತಗ್ಗಿಸಬೇಕಾದರೆ ಮೊದಲು ಅದನ್ನು ಹೆಚ್ಚಿಸಿ;
ಒಬ್ಬರ ಬಲ ಕ್ಷೀಣಿಸುವಂತೆ ಮಾಡಬೇಕಾದರೆ ಮೊದಲು ಅದನ್ನು ಹೆಚ್ಚಿಸಿ;
ಒಬ್ಬರನ್ನು ಅಧಿಕಾರದಿಂದ ಉರುಳಿಸಬೇಕಾದರೆ ಮೊದಲು ಔನ್ನತ್ಯಕ್ಕೇರಿಸಿ;
ಒಬ್ಬರಿಂದ ತೆಗೆದುಕೊಳ್ಳಬೇಕಾದರೆ ಮೊದಲು ಕೊಡಿ.
ದುರ್ಬಲರು ಬಲಯುತರನ್ನು ಜಯಿಸಬಲ್ಲ ಜಾಣತನವಿದು:
ಮೀನುಗಳು ಹೊರಬರಬಾರದು ನೀರಿನಿಂದ
ಖಡ್ಗಗಳು ಹೊರಬರಬಾರದು ಒರೆಗಳಿಂದ.
೩೭.
‘ಅದು’ ಕರ್ಮ ಮಾಡುವುದಿಲ್ಲವಾದರೂ ಯಾವುದನ್ನೂ ಮಾಡದೆಯೇ ಬಾಕಿ ಉಳಿಸುವುದಿಲ್ಲ.
ನೀವು ಇದನ್ನು ಒಪ್ಪಿಕೊಂಡರೆ
ಲೋಕದಭ್ಯುದಯ
ನಿಸರ್ಗದೊಂದಿಗೆ ಸಮರಸವಾಗಿ.
ನಿಸರ್ಗಕ್ಕೆ ಯಾವುದೇ ಬಯಕೆ ಇಲ್ಲ;
ಬಯಕೆ ಇಲ್ಲದಾಗ ಹೃದಯವಾಗುತ್ತದೆ ಅಕ್ಷುಬ್ಧ;
ಇಂತಾಗುತ್ತದೆ ಇಡೀ ಲೋಕ ನಿರಾಕುಲ.
೩೮.
ಸುಸ್ಥಾಪಿತ ಶ್ರೇಣೀಕೃತ ವ್ಯವಸ್ಥೆಗಳನ್ನು ಕಿತ್ತೆಸೆಯುವುದು ಸುಲಭವಲ್ಲ;
ಬೇರೂರಿದ ನಂಬಿಕೆಗಳನ್ನು ಕಿತ್ತೊಗೆಯುವುದು ಸುಲಭವಲ್ಲ;
ಎಂದೇ ತಲೆಮಾರುಗಳು ದಾಸರಾಗಿವೆ ಪರಂಪರಾಗತ ಆಚರಣೆಗಳಿಗೆ.
ಸಾಮರಸ್ಯಕ್ಕಿಲ್ಲ ಸಾಮರಸ್ಯದ ಕಾಳಜಿ, ಎಂದೇ ಸಹಜವಾಗಿ ಅದನ್ನು ಸಾಧಿಸಬಹುದು;
ಪರಂಪರಾಗತ ಆಚರಣೆಗಳಿಗಿದೆ ಸಾಮರಸ್ಯದ ಆಶಯ, ಎಂದೇ ಅದನ್ನು ಪಡೆಯುವುದಿಲ್ಲ.
ಸಾಮರಸ್ಯ ಕೆಲಸ ಮಾಡುವುದೂ ಇಲ್ಲ ಸಮರ್ಥನೆ ನೀಡುವುದೂ ಇಲ್ಲ;
ಪ್ರೀತಿ ಕೆಲಸ ಮಾಡುತ್ತದಾದರೂ ಸಮರ್ಥನೆ ನೀಡುವುದಿಲ್ಲ; 
ಸಮರ್ಥಿಸಲೋಸುಗ ಕೆಲಸ ಮಾಡುತ್ತದೆ ನ್ಯಾಯಶೀಲ ವರ್ತನೆ;
ಪರಂಪರಾಗತ ಆಚರಣೆ ಕೆಲಸ ಮಾಡುತ್ತದೆ ಸಮರ್ಥನೆಯನ್ನು ಹೇರಲೋಸುಗ.
‘ಅದನ್ನು’ ಮರೆತರೂ ಉಳಿದಿರುತ್ತದೆ ಸಾಮರಸ್ಯ;
ಸಾಮರಸ್ಯವನ್ನು ಮರೆತರೂ ಉಳಿದಿರುತ್ತದೆ ಪ್ರೀತಿ;
ಪ್ರೀತಿಯನ್ನು ಮರೆತರೂ ಉಳಿದಿರುತ್ತದೆ ನ್ಯಾಯಶೀಲ ವರ್ತನೆ;
ನ್ಯಾಯಶೀಲ ವರ್ತನೆಯನ್ನು ಮರೆತರೂ ಉಳಿದಿರುತ್ತದೆ ಪರಂಪರಾಗತ ಆಚರಣೆ.
ಪರಂಪರಾಗತ ಆಚರಣೆಗಳೆಂದರೆ ಕರುಣೆ ಹಾಗು ಸತ್ಯಪರತೆಗಳ ಅಂತ್ಯ,
ಗೊಂದಲದ ಆರಂಭ;
ವರ್ಣರಂಜಿತ ನಿರೀಕ್ಷೆ ಅಥವ ಭಯವೇ ನಂಬಿಕೆ,
ಅವಿವೇಕದ ಆರಂಭ.
ಜ್ಞಾನಿಯ ವರ್ತನೆಯ ಮಾರ್ಗದರ್ಶಿ ಸಾಮರಸ್ಯ, ನಿರೀಕ್ಷೆಯಲ್ಲ;
ಅವನು ಫಲದ ಮೇಲೆ ಗಮನವಿಡುತ್ತಾನೆ, ಹೂವಿನ ಮೇಲಲ್ಲ;
ಅವನು ತಿರುಳನ್ನು ಸ್ವೀಕರಿಸುತ್ತಾನೆ, ಕಲ್ಪನೆಯನ್ನು ಕಡೆಗಣಿಸುತ್ತಾನೆ.
೩೯.
ಪುರಾಣ ಕಾಲದಲ್ಲಿ ಎಲ್ಲವೂ ಪೂರ್ಣವಾಗಿತ್ತು:
ಇಡೀ ಆಗಸ ನಿರ್ಮಲವಾಗಿತ್ತು,
ಇಡೀ ಭೂಮಿ ಸುಭದ್ರವಾಗಿತ್ತು,
 ಎಲ್ಲ ಪರ್ವತಗಳು ಸ್ಥಿರವಾಗಿದ್ದವು,
ಎಲ್ಲ ನದೀಪಾತ್ರಗಳು ಸಮೃದ್ಧವಾಗಿದ್ದವು
ನಿಸರ್ಗವೆಲ್ಲವೂ ಫಲವತ್ತಾಗಿತ್ತು,
ಎಲ್ಲ ಆಳುವವರಿಗೂ ಬೆಂಬಲವಿತ್ತು.
ಮೋಡರಹಿತತೆ ಕಳೆದುಕೊಂಡು ಆಗಸ ಛಿದ್ರವಾಯಿತು;
ಭದ್ರತೆ ಕಳೆದುಕೊಂಡು ಭೂಮಿ ಬಿರಿಯಿತು;
ಸ್ಥಿರತೆಯನ್ನು ಕಳೆದುಕೊಂಡು ಪರ್ವತಗಳು ಕುಸಿದವು;
ನೀರನ್ನು ಕಳೆದುಕೊಂಡು ನದೀಪಾತ್ರಗಳು ಬಿರುಕು ಬಿಟ್ಟವು;
ಫಲವತ್ತತೆ ಕಳೆದುಕೊಂಡು ನಿಸರ್ಗ ಮಾಯವಾಯಿತು;
ಬೆಂಬಲವನ್ನು ಕಳೆದುಕೊಂಡು ಆಳುವವರು ಪತನವಾದರು.
ಆಳುವವರು ಪ್ರಜೆಗಳನ್ನು ಅವಲಂಬಿಸಿರುತ್ತಾರೆ,
ಸಿರಿವಂತರು ದೀನರನ್ನು ಅವಲಂಬಿಸಿರುತ್ತಾರೆ;
ಆಳುವವರು ಘೋಷಿಸುತ್ತಾರೆ ತಮ್ಮನ್ನು ಒಂಟಿಗಳು, ಹಸಿದವರು, ಅನಾಥರು ಎಂಬುದಾಗಿ
ಜನತೆಯ ಬೆಂಬಲ ಪಡೆಯಲೋಸುಗ.
ಎಂದೇ ಕಲ್ಲಿನಂತೆ ಗೋಚರಿಸಲು ಶ್ರಮಿಸು,
ಪಚ್ಚೆಹರಳಿನ ಹೊಳಪು ಗಳಿಸಲು ಅಲ್ಲ.
 ೪೦.
 ಹಿಂದಿರುಗುವಿಕೆಯೇ ‘ಅದರ’ ಚಲನೆ;
ಸ್ವೀಕರಿಸುವಿಕೆಯೇ ‘ಅದರ’ ಉಪಯೋಗ;
ಎಲ್ಲವೂ ಬಂದಿದೆ ‘ಅದರಿಂದ’,
‘ಅದು’ ಬಂದದ್ದು ಶೂನ್ಯತೆಯಿಂದ.
೪೧.
ಮಹಾಪುರುಷ ‘ಅದರ’ ಕುರಿತು ತಿಳಿದಾಗ ಹಿಂಬಾಲಿಸುತ್ತಾನೆ ಶ್ರದ್ಧೆಯಿಂದ;
ಸಾಮಾನ್ಯನು ‘ಅದರ’ ಕುರಿತು ತಿಳಿದಾಗ ಹಿಂಬಾಲಿಸುತ್ತಾನೆ ಆಗೊಮ್ಮೆ ಈಗೊಮ್ಮೆ;
ಅಲ್ಪನೊಬ್ಬ ‘ಅದರ’ ಕುರಿತು ತಿಳಿದಾಗ ನಗುತ್ತಾನೆ ಗಟ್ಟಿಯಾಗಿ;
 ‘ಅದರ’ ಕುರಿತು ಕೇಳಿದಾಗ ನಗೆಯೂ ಬಾರದಿರುವವರಿಗೆ ‘ಅದು’ ತಿಳಿದೇ ಇಲ್ಲ.
ಎಂದೇ, ಬಲ್ಲಿದರು ಹೇಳುತ್ತಾರೆ;
‘ಅದನ್ನು’ ನಿಜವಾಗಿಯೂ ತಿಳಿದವರು ಕಾಣುತ್ತಾರೆ ಮೂರ್ಖರಂತೆ;
‘ಅದನ್ನು’ ತಿಳಿಯುವ ಹಾದಿಯಲ್ಲಿ ಇರುವವರು ಕಾಣುತ್ತಾರೆ ಸೋಲುವವರಂತೆ;
‘ಅದನ್ನು’ ಹಿಂಬಾಲಿಸುತ್ತಿರುವವರು ಕಾಣುತ್ತಾರೆ ಅಲೆಮಾರಿಗಳಂತೆ.
ಶ್ರೇಷ್ಠ ಸಾಮರಸ್ಯ ಕಾಣುತ್ತದೆ ಸರಳ;
ಉಜ್ವಲ ಸತ್ಯ ಕಾಣುತ್ತದೆ ಮಂಕಾಗಿರುವಂತೆ;
ಶ್ರೀಮಂತ ಚಾರಿತ್ರ್ಯ ಕಾಣುತ್ತದೆ ಅಪರಿಪೂರ್ಣ;
ಬಲು ಧೀರ ಕಾಣಿಸುತ್ತಾನೆ ಸಾಧುವಿನಂತೆ;
ಬಲು ಸರಳವಾದ ನಿಸರ್ಗ ಕಾಣುತ್ತದೆ ಅಸ್ಥಿರವಾಗಿರುವಂತೆ.
ಪರಿಪೂರ್ಣವಾದ ಚಚ್ಚೌಕಕ್ಕೆ ಮೂಲೆಗಳಿಲ್ಲ;
ಪರಿಪೂರ್ಣವಾದ ಸಂಗೀತಕ್ಕೆ ಮಾಧುರ್ಯವಿಲ್ಲ;
ಪರಿಪೂರ್ಣವಾದ ಪ್ರೇಮಕ್ಕೆ ಪರಾಕಾಷ್ಠೆ ಇಲ್ಲ;
ಪರಿಪೂರ್ಣವಾದ ಕಲೆಗೆ ಅರ್ಥವಿಲ್ಲ.
‘ಅದನ್ನು’ ಗ್ರಹಿಸಲೂ ಸಾಧ್ಯವಿಲ್ಲ ತಿಳಿಯಲೂ ಸಾಧ್ಯವಿಲ್ಲ:
ಅದು ದುರ್ಗ್ರಾಹ್ಯವಾದರೂ ರವಾನಿಸುತ್ತದೆ ಅನುಭೂತಿ.   
 ೪೨.
 ಅನುಭೂತಿಯಿಂದ ಉಂಟಾಗುತ್ತದೆ ನೆನಪು,
ಅನುಭೂತಿ ಹಾಗು ನೆನಪುಗಳಿಂದ ಉಂಟಾಗುತ್ತದೆ ಅಮೂರ್ತೀಕರಣ,
ಅಮೂರ್ತೀಕರಣದಿಂದ ಉಂಟಾಗುತ್ತದೆ ವಿಶ್ವ;
ವಿಶ್ವದ ಪ್ರತಿಯೊಂದರಿಂದಲೂ ಉಂಟಾಗುತ್ತದೆ ಇಂದ್ರಿಯಾನುಭವ ಹಾಗು ಕ್ರಿಯೆ,
ತೃಪ್ತ ಮನಸ್ಸು, ‘ಅದರೊಂದಿಗೆ’ ಸಾಮರಸ್ಯ.
ಇತರರು ಬೋಧಿಸಿದಂತೆ ನಾನೂ ಬೋಧಿಸುತ್ತೇನೆ,
“ಸಾಮರಸ್ಯವನ್ನು ಕಳೆದುಕೊಳ್ಳುವವರು ನಿಸರ್ಗವನ್ನು ವಿರೋಧಿಸುತ್ತಾರೆ”,
ಇದೇ ನನ್ನ ಬೋಧನೆಯ ಬೇರು.
 ೪೩.
ನೀರು ಮಣಿಸುತ್ತದೆ ಕಲ್ಲನ್ನು;
ದೃಢತೆ ಇಲ್ಲದ್ದಕ್ಕೆ ಒಳಹೊಗಲು ಕಂಡಿಯೇ ಬೇಡ;
ಏನೂ ಕಾರ್ಯವೆಸಗದಿರುವುದರ ಲಾಭವೇ ಇದು.
ಅತ್ಯಲ್ಪ ಮಂದಿ ಅಭ್ಯಸಿಸುತ್ತಾರೆ:
ಕೆಲಸ ಮಾಡದೆಯೆ ಲಾಭ ಗಳಿಸುವುದನ್ನು
ಅಮೂರ್ತೀಕರಿಸದೆಯೆ ಅನುಭವಿಸುವುದನ್ನು.
೪೪.
ಆರೋಗ್ಯ- ಖ್ಯಾತಿ:  ಪ್ರಿಯವಾದದ್ದು ಯಾವುದು?
ಆರೋಗ್ಯ - ಸಿರಿಸಂಪತ್ತು: ಪ್ರಿಯವಾದದ್ದು ಯಾವುದು?
ಲಾಭ - ನಷ್ಟ: ಪ್ರಿಯವಾದದ್ದು ಯಾವುದು?
ಅತೀ ಆಸೆ ಇದ್ದರೆ ತೆರಬೇಕಾಗುತ್ತದೆ ಭಾರೀ ಬೆಲೆ,
ಅತೀ ಸಿರಿಸಂಪತ್ತು ಅತೀ ಭಯದ ಮೂಲ,
ತೃಪ್ತಿಯಾದರೋ ಲಭಿಸುತ್ತದೆ ಏನೂ ವೆಚ್ಚ ಮಾಡದೆಯೆ.
ಯಾವಾಗ ನಿಲ್ಲಿಸಬೇಕೆಂಬುದನ್ನು ತಿಳಿದಾತನಿಗೆ
ಯಾವುದೇ ಅಪಾಯ ಎದುರಾಗುವುದಿಲ್ಲ,
ಎಂದೇ, ಬಹುಕಾಲ ಬಾಳುತ್ತಾನೆ.
 ೪೫.
ಅಪೂರ್ಣವೆಂಬಂತೆ ಭಾಸವಾಗುತ್ತದೆ ಅಸಾಧಾರಣ ಪರಿಪೂರ್ಣತೆ,
ಆದರೂ ನಶಿಸುವುದಿಲ್ಲ;
ಖಾಲಿ ಎಂಬಂತೆ ಭಾಸವಾಗುತ್ತದೆ ಆಸಾಧಾರಣ ಸಮೃದ್ಧಿ,
ಆದರೂ ವಿಫಲವಾಗುವುದಿಲ್ಲ.

ಅಸಂಗತವೆಂಬಂತೆ ಭಾಸವಾಗುತ್ತದೆ ಶ್ರೇಷ್ಠ ಸತ್ಯ;
ದಡ್ಡತನದಂತೆ ಭಾಸವಾಗುತ್ತದೆ ಮಹಾನ್‌ ಜಾಣತನ;
ನಯನಾಜೂಕು ಇಲ್ಲದು ಎಂಬಂತೆ ಭಾಸವಾಗುತ್ತದೆ ಶ್ರೇಷ್ಠ ವಾಕ್ಚಾತುರ್ಯ.

ಚಳಿಯನ್ನು ವಸಂತಕಾಲ ಮಣಿಸುವಂತೆ,
ಸೆಕೆಯನ್ನು ಶರತ್ಕಾಲ ಮಣಿಸುವಂತೆ,
ಲೋಕವನ್ನೇ ಮಣಿಸುತ್ತದೆ ನೀರವತೆ ಹಾಗು ಪ್ರಶಾಂತತೆ.
೪೬.
 ‘ಅದನ್ನು’ ರಾಷ್ಟ್ರವು ಅನುಸರಿಸಿದಾಗ,
ಕುದುರೆಗಳು ಹೊಲಗದ್ದೆಗಳಲ್ಲಿ ಗೊಬ್ಬರ ಹೊರುತ್ತಿರುತ್ತವೆ;
‘ಅದನ್ನು’ ರಾಷ್ಟ್ರವು ನಿರ್ಲಕ್ಷಿಸಿದರೆ,
ಕುದುರೆಗಳು ರಸ್ತೆಗಳಲ್ಲಿ ಸೈನಿಕರನ್ನು ಹೊರುತ್ತಿರುತ್ತವೆ.

ಆಸೆಯ ಬೆಂಬತ್ತಿ ಹೋಗುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ;
ತೃಪ್ತಿಯನ್ನು ಮರೆಯುವುದಕ್ಕಿಂತ ದೊಡ್ಡ ಅನಾಹುತ ಇನ್ನೊಂದಿಲ್ಲ;
ಅತಿಯಾಸೆಗಿಂತ ದೊಡ್ಡ ರೋಗ ಇನ್ನೊಂದಿಲ್ಲ;
ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ತೃಪ್ತಿ ಪಡೆಯುವವನಾದರೋ
ತೃಪ್ತಿ ಬಹುಕಾಲ ಉಳಿಯುತ್ತದೆಂಬುದನ್ನು ಕಂಡುಕೊಳ್ಳುತ್ತಾನೆ.
 ೪೭.
 ಮನೆಯ ಹೊರಗೆ ಕಾಲಿಡದಿದ್ದರೂ
ಇಡೀ ಲೋಕವೇ ನಿಮಗೆ ತಿಳಿದಿದೆ;
ಕಿಟಕಿಯಿಂದ ಹೊರಗೆ ಇಣುಕದಿದ್ದರೂ
ಆಕಾಶದ ಬಣ್ಣ ನಿಮಗೆ ತಿಳಿದಿದೆ.

ಹೆಚ್ಚು ಅನುಭವಿಸಿದರೆ
ತಿಳಿದಿರುವಿಕೆ ಕಮ್ಮಿಯಾಗುತ್ತದೆ.
ತಿಳಿಯದಿದ್ದರೂ ಅಲೆದಾಡುತ್ತಿರುತ್ತಾನೆ ಪ್ರಾಜ್ಞ,
ನೋಡದೆ ವೀಕ್ಷಿಸುತ್ತಾನೆ,
ಕಾರ್ಯಮಾಡದೆ ಸಾಧಿಸುತ್ತಾನೆ.
೪೮.

ಜ್ಞಾನದಾಹ ಉಳ್ಳವರು ಪ್ರತೀದಿನ ಎಷ್ಟು ಹೆಚ್ಚು ಸಾಧ್ಯವೋ ಅಷ್ಟನ್ನು ಕಲಿಯುತ್ತಾರೆ;
‘ಅದರ’ ಅನುಯಾಯಿಗಳಾದರೋ ಪ್ರತೀದಿನ ಎಷ್ಟು ಹೆಚ್ಚು ಸಾಧ್ಯವೋ ಅಷ್ಟನ್ನು ಮರೆಯುತ್ತಾರೆ.

ಮರೆತು ಮರೆತು ಕೊನೆಗೊಂದು ದಿನ ನಿಷ್ಕ್ರಿಯತೆಯ ಸ್ಥಿತಿ ತಲಪುತ್ತಾರೆ,
ಆ ಸ್ಥಿತಿಯಲ್ಲಿ ಅವರೇನನ್ನೂ ಮಾಡುವುದಿಲ್ಲವಾದರೂ ಮಾಡದೇ ಏನೂ ಬಾಕಿ ಉಳಿದಿರುವುದಿಲ್ಲ.

ಲೋಕವನ್ನು ಗೆಲ್ಲಬೇಕಾದರೆ, ಏನನ್ನೂ ಸಾಧಿಸಬೇಡಿ;
ಏನನ್ನಾದರೂ ಸಾಧಿಸಲೇಬೇಕೆಂದಾದರೆ,
ಲೋಕ ಗೆಲ್ಲುವಿಕೆ ನಿಮಗೆ ಅಸಾಧ್ಯ.
 ೪೯.
 ತಾನು ಬೇರೆ ಲೋಕ ಬೇರೆ ಎಂಬುದಾಗಿ ಬಾವಿಸುವುದಿಲ್ಲ ಜ್ಞಾನಿ;
ಇತರರ ಆವಶ್ಯಕತೆಗಳನ್ನೇ ತನ್ನವು ಎಂಬುದಾಗಿ ಭಾವಿಸುತ್ತಾನೆ.

ಒಳ್ಳೆಯವರಿಗೆ ಅವನು ಒಳ್ಳೆಯವನು;
ಒಳ್ಳೆಯವರಲ್ಲದವರಿಗೂ ಅವನು ಒಳ್ಳೆಯವನು,
ಎಂದೇ ಅವನು ಒಳ್ಳೆಯವನು.

ವಿಶ್ವಾಸಾರ್ಹರನ್ನು ಅವನು ನಂಬುತ್ತಾನೆ;
ವಿಶ್ವಾಸಾರ್ಹರಲ್ಲದವರನ್ನೂ ಅವನು ನಂಬುತ್ತಾನೆ,
ಎಂದೇ ಅವನು ವಿಶ್ವಾಸಾರ್ಹ.

ಲೋಕದೊಂದಿಗೆ ಸಮರಸವಾದ ಬಾಳ್ವಿಕೆ ಅವನದು,
ಅವನ ಮನಸ್ಸೇ ಲೋಕದ ಮನಸ್ಸು.
ಮಕ್ಕಳನ್ನು ತಾಯಿ ಪೋಷಿಸುವಂತೆ
ಪೋಷಿಸುತ್ತಾನೆ ಅವನು ಇತರರ ಲೋಕಗಳನ್ನು.
 ೫೦.
ಮಾನವರು ಜೀವನದೊಳಕ್ಕೆ ಪ್ರವಹಿಸುತ್ತಾರೆ, ಸಾವಿನೊಳಕ್ಕೆ ಸರಿಯುತ್ತಾರೆ.

ಪ್ರತೀ ಹತ್ತರಲ್ಲಿ ಮೂರು ಮಂದಿ ಜೀವಂತಿಕೆಯ ಪ್ರತಿನಿಧಿಗಳು;
ಮೂರುಮಂದಿ ಸಾವಿನ ಪ್ರತಿನಿಧಿಗಳು.
ಬದುಕುವ ಬಯಕೆಯಿಂದ ಪ್ರತೀ ಹತ್ತರಲ್ಲಿ ಮೂರು ಮಂದಿ ಇಡುವ ಹೆಜ್ಜೆಗಳು ಅವರನ್ನು ಸಾವಿನತ್ತ ಒಯ್ಯುತ್ತವೆ,
ಜೀವನವನ್ನು ಚಿರಸ್ಮರಣೀಯವಾಗಿಸಲೋಸುಗ ಅವರು ಮಾಡುವ ಯತ್ನಗಳಿಂದಾಗಿ.

ತನ್ನ ಜೀವನವನ್ನು ನಿಭಾಯಿಸುವುದರಲ್ಲಿ ಕುಶಲಿಯಾಗಿರುವವ
ಹುಲಿಗಳಿಂದ, ಗಂಡಕಗಳಿಂದ, ತೊಗಲುಗವಚಗಳಿಂದ,
ಹರಿತವಾದ ಖಡ್ಗಗಳಿಂದ ತಪ್ಪಿಸಿಕೊಳ್ಳಲು ಯತ್ನಿಸದೇ
ಕೆಲಕಾಲ ಪಯಣಿಸಬಲ್ಲ ಎಂಬುದಾಗಿ ಕೇಳಿದ್ದೇನೆ.

ಕೊಂಬಿನಿಂದ ಚುಚ್ಚಬಹುದಾದ ಯಾವ ತಾಣವೂ ಅವನಲ್ಲಿ ಗಂಡಕಕ್ಕೆ ಕಾಣುವುದಿಲ್ಲವಂತೆ,
ಪಂಜದಿಂದ ಘಾಸಿಗೊಳಿಸಬಹುದಾದ ಯಾವ ತಾಣವೂ ಅವನಲ್ಲಿ ಹುಲಿಗೆ ಕಾಣುವುದಿಲ್ಲವಂತೆ,
ಒಳ ನುಗ್ಗಬಹುದಾದ ಯಾವ ತಾಣವೂ ಅವನಲ್ಲಿ ಖಡ್ಗದ ಮೊನೆಗೆ ಸಿಕ್ಕುವುದಿಲ್ಲವಂತೆ.
ಕಾರಣ?
ಸಾವಿಗೆ ಅವನನ್ನು ಕಬಳಿಸಲು ಸಾಧ್ಯವೇ ಇಲ್ಲ.
೫೧.
 ‘ಅದು’ ಎಲ್ಲವನ್ನೂ ಹಡೆಯುತ್ತದೆ;
ಸಾಮರಸ್ಯ ಅವನ್ನು ಪೋಷಿಸುತ್ತದೆ;
ನಿಸರ್ಗ ಅವನ್ನು ರೂಪಿಸುತ್ತದೆ;
ಉಪಯೋಗ ಅವನ್ನು ಪರಿಪೂರ್ಣವಾಗಿಸುತ್ತದೆ.

ಪ್ರತಿಯೊಂದೂ ‘ಅದನ್ನು’ ಅನುಸರಿಸುತ್ತದೆ, ಸಾಮರಸ್ಯವನ್ನು ಗೌರವಿಸುತ್ತದೆ,
ಬಾಹ್ಯ ನಿಯಮದ ಪರಿಣಾಮವಾಗಿ ಅಲ್ಲ,
ಅವುಗಳ ಸಹಜಗುಣದ ಪರಿಣಾಮವಾಗಿ.

‘ಅದು’ ಹಡೆಯುತ್ತದೆ, ಪೋಷಿಸುತ್ತದೆ, ರೂಪಿಸುತ್ತದೆ, ಪರಿಪೂರ್ಣವಾಗಿಸುತ್ತದೆ,
ರಕ್ಷಿಸುತ್ತದೆ, ತುಷ್ಟಿ ನೀಡುತ್ತದೆ, ನೆಲೆಯೊದಗಿಸುತ್ತದೆ.

ಹಡೆಯುತ್ತದಾದರೂ ಸ್ವಾಧೀನದಲ್ಲಿ ಇಟ್ಟುಕೊಳ್ಳುವುದಿಲ್ಲ,
ಪೋಷಿಸುತ್ತದಾದರೂ ಪಳಗಿಸುವುದಿಲ್ಲ,
ರೂಪಿಸುತ್ತದಾದರೂ ಬಲಾತ್ಕರಿಸುವುದಿಲ್ಲ,
ಇದೇ ಸಾಮರಸ್ಯ.
೫೨.
ಜಗತ್ತಿನ ಹುಟ್ಟು ಅದರ ತಾಯಿಯಲ್ಲಿ;
ತಾಯಿಯನ್ನು ಅರ್ಥಮಾಡಿಕೊಳ್ಳಿ, ಮಗುವೂ ಅರ್ಥವಾಗುತ್ತದೆ;
ಮಗುವನ್ನು ಅಪ್ಪಿಕೊಳ್ಳಿ, ತಾಯಿಯನ್ನು ಅಪ್ಪಿಕೊಂಡಂತಾಗುತ್ತದೆ;
ನೀವು ಸತ್ತಾಗ ತಾಯಿ ಮಗು ಅಳಿದುಹೋಗುವುದಿಲ್ಲ.

ನಿಮ್ಮ ತೀರ್ಮಾನಗಳ ಹಾಗು ಮಾತುಗಳ ಮೇಲೆ ಹಿಡಿತವಿರಲಿ
ನಿಮ್ಮ ಪ್ರಭಾವವನ್ನು ಉಳಿಸಿಕೊಳ್ಳುವಿರಿ;
ಮನಬಂದಂತೆ ಮಾತನಾಡಿದರೆ, ಯಾವುದೋ ಪಕ್ಷ ವಹಿಸಿದರೆ
ನಿಮ್ಮನ್ನು ಯಾವುದೂ ರಕ್ಷಿಸಲಾರದು.

ವಿವರಗಳ ವೀಕ್ಷಣೆಯೇ ಸ್ಪಷ್ಟತೆ,
ನಮ್ಯತೆಯನ್ನು ಉಳಿಸಿಕೊಳ್ಳುವಿಕೆಯೇ ಶಕ್ತಿ;
ಬೆಳಕು ಉಪಯೋಗಿಸಿ, ಬೀರದಿರಿ,
ನಿಮಗೆ ನೀವೇ ಹಾನಿ ಮಾಡದಿರಲೋಸುಗ,
ಇದೇ ಸನಾತನದ ಅನುಸರಣೆಯ ವಿಧಾನ.
೫೩.
ತುಸು ತಿಳಿವಳಿಕೆಯೊಂದಿಗೆ
‘ಅದನ್ನು’ ಅನುಸರಿಸಬಹುದು ಹೆದ್ದಾರಿಯಲ್ಲಿ ನಡೆಯುವಂತೆ,
ಆ ದಾರಿಯನ್ನು ಬಿಡುವುದಾದರೆ ಮಾತ್ರ ಭಯಪಡಬೇಕು;
ಹೆದ್ದಾರಿಯಲ್ಲಿ ನಡೆಯುವುದು ಸುಲಭ,
ಆದರೂ ಮಂದಿ ನಲಿಯುತ್ತಾರೆ ತ್ರಾಸದಾಯಕ ಹಾದಿಗಳಲ್ಲಿ.

ಅರಮನೆಗಳನ್ನು ಸುಸ್ಥಿತಿಯಲ್ಲಿಟ್ಟಾಗ
ಹೊಲಗದ್ದೆಗಳಲ್ಲಿ ಇರುತ್ತದೆ ಕಳೆ
ಕಣಜಗಳು ಖಾಲಿಯಾಗಿರುತ್ತವೆ;
ಸೊಗಸಾದ ಉಡುಪು ಧರಿಸಿ,
ಹರಿತವಾದ ಖಡ್ಗಧಾರಿಯಾಗಿ,
ಹೊಟ್ಟೆಬಿರಿಯುವಷ್ಟು ತಿಂದು ಕುಡಿದು,
ಸಿರಿಸಂಪತ್ತನ್ನು ಗುಪ್ತವಾಗಿ ಸಂಚಯಿಸುತ್ತಾ -
ಇವೆಲ್ಲ ‘ಅದರ’ ಹೆದ್ದಾರಿಯಿಂದ
ಬಲು ದೂರದಲ್ಲಿರುವ ಕಳ್ಳರ ಹಾದಿಗಳು.
೫೪. ಸಾಮರಸ್ಯವನ್ನು ಪೋಷಿಸುವುದು
ಪೋಷಿಸು ಸಾಮರಸ್ಯವನು ನಿನ್ನಂತರಂಗದಲಿ, ಸಾಮರಸ್ಯವು ಅಸ್ತಿತ್ವಕ್ಕೆ ಬರುತ್ತದೆ;
ಪೋಷಿಸು ಸಾಮರಸ್ಯವನು ನಿನ್ನ ಕುಟುಂಬದಲಿ, ಸಾಮರಸ್ಯವು ಫಲಪ್ರದವಾಗುತ್ತದೆ;
ಪೋಷಿಸು ಸಾಮರಸ್ಯವನು ನಿನ್ನ ಸಮುದಾಯದಲಿ, ಸಾಮರಸ್ಯವು ವಿಪುಲವಾಗುತ್ತದೆ;
ಪೋಷಿಸು ಸಾಮರಸ್ಯವನು ನಿನ್ನ ಸಂಸ್ಕೃತಿಯಲಿ, ಸಾಮರಸ್ಯವು ಬಹುಕಾಲ ಉಳಿಯುತ್ತದೆ;
 ಪೋಷಿಸು ಸಾಮರಸ್ಯವನು ಲೋಕದಲಿ, ಸಾಮರಸ್ಯವು ಸರ್ವಾಂತರ್ಯಾಮಿಯಾಗುತ್ತದೆ.

ವ್ಯಕ್ತಿಯೊಬ್ಬನನ್ನರಿಯಲು ಬಾಳು ಆ ವ್ಯಕ್ತಿಯೊಂದಿಗೆ;
ಕುಟುಂಬವೊಂದನ್ನರಿಯಲು ಬಾಳು ಆ ಕುಟುಂಬದಲ್ಲಿ;
ಸಮುದಾಯವೊಂದನ್ನರಿಯಲು ಬಾಳು ಆ ಸಮುದಾಯದಲ್ಲಿ;
ಸಂಸ್ಕೃತಿಯೊಂದನ್ನರಿಯಲು ಬಾಳು ಆ ಸಂಸ್ಕೃತಿಯಲ್ಲಿ;
ಲೋಕವನ್ನರಿಯಲು ಬಾಳು ಲೋಕದಲ್ಲಿ.

ಲೋಕದಲ್ಲಿ ನಾನೆಂತು ಬಾಳಲಿ?
ಅದನ್ನು ಅದಿರುವಂತೆಯೇ ಸ್ವೀಕರಿಸಿ.
೫೫.
ಸಾಮರಸ್ಯದ ಮೂರ್ತ ರೂಪವೋ ಎಂಬಂತಿರುವಾತ ನವಜಾತ ಶಿಶುವಿನಂತೆ.
ಅವನನ್ನು ಹಾವುಗಳು ಕಣಜಗಳು ಕಡಿಯುವುದಿಲ್ಲ;
ಗಿಡುಗಗಳು ಹುಲಿಗಳು ಪರಚುವುದಿಲ್ಲ.

ಅವನ ಎಲುಬುಗಳು ಮಿದು, ಆದರೂ ಅವನ ಹಿಡಿತ ಬಲು ಭದ್ರ,
ಮಾಂಸಖಂಡಗಳು ಬಲು ನಮ್ಯವಾಗಿರುವುದರಿಂದ;
ಅವನ ಹಾಡು ಬಲು ದೊಡ್ಡದು, ಆದರೂ ಅವನ ಧ್ವನಿ ಅತಿ ಮಧುರ,
ನಿಷ್ಕಳಂಕ ಗಾಯನ ಶೈಲಿಯಿಂದಾಗಿ.
ಅವನದು ಬಲು ಮುಗ್ಧ ಮನಸ್ಸು, ಆದರೂ ಅವನ ದೇಹ ಚೈತನ್ಯಪೂರ್ಣ,
ಕಸುವು ವಿಪುಲವಾಗಿರುವುದರಿಂದ.

ಸಾಮರಸ್ಯದ ಕುರಿತಾದ ತಿಳಿವಳಿಕೆ ಸೃಷ್ಟಿಸುತ್ತದೆ ಅಮೂರ್ತತೆಯನ್ನು,
ಅಮೂರ್ತತೆಯ ಅನುಸರಣೆ ಸೃಷ್ಟಿಸುತ್ತದೆ ಯಾಂತ್ರಿಕ ಕ್ರಿಯಾಚರಣೆಯನ್ನು,
ನಿಸರ್ಗದ ಇತಿಮಿತಿಗಳ ಅತಿಕ್ರಮಣ ಸೃಷ್ಟಿಸುತ್ತದೆ ಅನಾಹುತವನ್ನು,
ನಿಸರ್ಗವನ್ನು ನಿಯಂತ್ರಿಸುವುದು ಸೃಷ್ಟಿಸುತ್ತದೆ ಹಿಂಸಾಚಾರವನ್ನು.
೫೬.

ತಿಳಿದವ ಉಪದೇಶಿಸುವುದಿಲ್ಲ;
ಉಪದೇಶಿಸುವವನಿಗೆ ತಿಳಿದಿರುವುದಿಲ್ಲ.

ನಿಮ್ಮ ತೀರ್ಪುಗಳನ್ನು ಕಾಯ್ದಿರಿಸಿ, ಸಂಯಮವಿರಲಿ ಪದಗಳ ಬಳಕೆಯಲಿ;
ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ, ಅಸಮ್ಮತಿಸುವಿಕೆಯನ್ನು ಮನ್ನಿಸಿ;
ವಾಕ್ಚಾತುರ್ಯವನ್ನು ತಗ್ಗಿಸಿ, ಉದ್ದೇಶವನ್ನು ಸರಳೀಕರಿಸಿ;
ಲೋಕವನ್ನು ಅದಿರುವಂತೆಯೇ ಸ್ವೀಕರಿಸಿ.

ನೀವಿಂತು ಮಾಡಿದರೆ,
ಮಿತ್ರತ್ವ ಶತ್ರುತ್ವಗಳು,
ಕೀರ್ತಿ ಅಪಕೀರ್ತಿಗಳು,
ಪ್ರಭಾವಿಸುವುದಿಲ್ಲ ನಿಮ್ಮನ್ನು;
ಲೋಕ ಒಪ್ಪಿಕೊಳ್ಳುತ್ತದೆ ನಿಮ್ಮನ್ನು.
೫೭.
 ಜನರನ್ನು ಕಾನೂನುಗಳಿಂದ ನಿಯಂತ್ರಿಸಬೇಡಿ,
ಹಿಂಸೆಯಿಂದಲೂ ಬೇಡ ಬೇಹುಗಾರಿಕೆಯಿಂದಲೂ ಬೇಡ,
ಅವರನ್ನು ನಿಷ್ಕ್ರಿಯತೆಯಿಂದ ಜಯಿಸಿ.

ನೀತಿಬೋಧೆ ನಿಷೇಧಗಳು ಹೆಚ್ಚಾದಷ್ಟೂ,
ಜನತೆಯನ್ನು ಹೆಚ್ಚ್ಚು ಪೀಡಿಸುತ್ತದೆ ನಿರ್ದಯತೆ;
ಕತ್ತಿ ಕೋವಿಗಳು ಹೆಚ್ಚಾದಷ್ಟೂ,
ಜನತೆಯಲ್ಲಿ ಒಳಗುಂಪುಗಳು ಹೆಚ್ಚುತ್ತವೆ;
ಕಲಾ ಕುಶಲತೆಗಳು ಹೆಚ್ಚಾದಷ್ಟೂ,
ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದ
ಹಳೆಯ ಕಂದಾಚಾರದ ಮಂದಿಯ ಸಂಖ್ಯೆ ಹೆಚ್ಚುತ್ತದೆ;
ಕಾನೂನುಗಳು ತೆರಿಗೆಗಳು ಹೆಚ್ಚಿದಷ್ಟೂ,
ಕಳ್ಳತನ ಹೆಚ್ಚಿ ಜನರು ಭ್ರಷ್ಟರಾಗುತ್ತಾರೆ.

ಜನರೇ ಒಬ್ಬರನ್ನೊಬ್ಬರು ಪೋಷಿಸುತ್ತಾರೆ ನೀವೇನೂ ಮಾಡದಿದ್ದರೆ;
ಜನರು ನ್ಯಾಯಸಮ್ತವಾಗಿ ತಮ್ಮತಮ್ಮೊಳಗೆ ವ್ಯವಹರಿಸುತ್ತಾರೆ ಕಾನೂನು ಮಾಡದಿದ್ದರೆ;
ಜನರು ಪರಸ್ಪರ ಸಹಕರಿಸುತ್ತಾರೆ ನೀವು ಆಸಕ್ತಿ ತೋರದಿದ್ದರೆ;
ಜನರು ತಮ್ಮೊಳಗೆ ಸಾಮರಸ್ಯ ಸಾಧಿಸುತ್ತಾರೆ ನೀವು ನಿಮ್ಮಿಷ್ಟ ಪ್ರಕಟಿಸದಿದ್ದರೆ.
೫೮.
ಸರ್ಕಾರ ಸೋಮಾರಿಯೂ ಕಟ್ಟುನಿಟ್ಟಿಲ್ಲದ್ದೂ ಆಗಿದ್ದರೆ
ಜನರು ಮೃದುಸ್ವಭಾವದವರೂ ಸತ್ಯವಂತರೂ ಆಗಿರುತ್ತಾರೆ;
ಸರ್ಕಾರ ದಕ್ಷವೂ ಕಟ್ಟುನಿಟ್ಟಿನದೂ ಆಗಿದ್ದರೆ
ಜನರು ಅತೃಪ್ತರೂ ಕಪಟಿಗಳೂ ಆಗಿರುತ್ತಾರೆ.

ಅನಾಹುತವನ್ನು ಹಿಂಬಾಲಿಸುತ್ತದೆ ಒಳ್ಳೆಯ ಅದೃಷ್ಟ;
ಒಳ್ಳೆಯ ಅದೃಷ್ಟದೊಳಗೇ ಹೊಂಚುಹಾಕುತ್ತಿರುತ್ತದೆ ಅನಾಹುತ;
ಯಾವುದು ಹೇಗೆ ಅಂತ್ಯಗೊಳ್ಳುತ್ತದೆಂದು ಯಾರು ಹೇಳಳಬಲ್ಲರು?
ಬಹುಶಃ ಅಂತ್ಯವೇ ಇಲ್ಲ.

ಪ್ರಾಮಾಣಿಕತೆಯನ್ನು ಯಾವಾಗಲೂ ಹಾದಿತಪ್ಪಿಸಲಾಗುತ್ತದೆ;
ದಯೆಯನ್ನು ಯಾವಾಗಲೂ ತಪ್ಪುದಾರಿಗೆಳೆಯಲಾಗುತ್ತದೆ;
ಬಹುಕಾಲದಿಂದಲೂ ಮಾನವರು ಇಂತೆಯೇ ಇದ್ದಾರೆ.

ಎಂದೇ ಜ್ಞಾನಿಯು
ಹರಿತವಾಗಿರುತ್ತಾನಾದರೂ ಕತ್ತರಿಸುವುದಿಲ್ಲ,
ಮೊನಚಾಗಿರುತ್ತಾನಾದರೂ ಇರಿಯುವುದಿಲ್ಲ,
ನೇರವಾಗಿರುತ್ತಾನಾದರೂ ಅನಮ್ಯವಾಗಿರುವುದಿಲ್ಲ,
ಉಜ್ವಲನಾಗಿರುತ್ತಾನಾದರೂ ಕಣ್ಣುಕಾಣದಂತೆ ಮಾಡುವುದಿಲ್ಲ.
 ೫೯.
ಮಿದುವಾದ ಮೀನನ್ನು ಬೇಯಿಸಿದಷ್ಟೇ ನಾಜೂಕಾಗಿ ಮಹಾನ್‌ ರಾಷ್ಟ್ರದ ಆಡಳಿತ ನಡೆಸಿ.

ಜನರ ಸ್ವಭಾವಕ್ಕೆ ಹೊಂದಾಣಿಕೆಯಾಗುವಂತೆ ಆಡಳಿತ ನಡೆಸಲು
ಸಂಯಮದಿಂದಿರುವುದು ಅತ್ಯುತ್ತಮ;

ಸಂಯಮವಿದ್ದರೆ ಒಮ್ಮತ ಸಾಧಿಸುವುದು ಸುಲಭ;
ಸುಲಭ ಸಾಧಿತ ಒಮ್ಮತ ಸಮರಸ ಸಂಬಂಧಗಳನ್ನು ರೂಪಿಸುತ್ತದೆ;
ಉತ್ತಮ ಸಾಮರಸ್ಯವಿದ್ದರೆ ಪ್ರತಿರೋಧ ಹುಟ್ಟುವುದೇ ಇಲ್ಲ
ಪ್ರತಿರೋಧವೇ ಇಲ್ಲದಿದ್ದಾಗ ರಾಷ್ಟ್ರದ ಹೃದಯದ ಒಡೆಯರಾಗುತ್ತೀರಿ,
ರಾಷ್ಟ್ರದ ಹೃದಯ ನಿಮ್ಮದಾದಾಗ:
ಆಳವಾಗಿ ಬೇರೂರಿ ದೃಢವಾಗಿ ನೆಲೆಸಿ
ಉಳಿಯುತ್ತದೆ ನಿಮ್ಮ ಪ್ರಭಾವ ಸುದೀರ್ಘಕಾಲ.
೬೦.
ಲೋಕ ಜಯಿಸಲು ನೀವು ‘ಅದನ್ನು’ಪಯೋಗಿಸಿದರೆ,
ಹಾನಿ ಮಾಡುವ ಶಕ್ತಿ ಕಳೆದುಕೊಳ್ಳುವರು ನಿಮ್ಮೊಳಗಿನ ರಕ್ಕಸರು.
ನಿಜವಾಗಿ ಶಕ್ತಿ ಕಳೆದುಕೊಳ್ಳುವುದಿಲ್ಲವಾದರೂ ಅವರು ಇತರರಿಗೆ ಹಾನಿ ಮಾಡುವುದಿಲ್ಲ,
ನೀವೂ ಜನತೆಗೆ ಮಾಡುವುದಿಲ್ಲ ಹಾನಿ;
ನೀವಾಗಲೀ ನಿಮ್ಮೊಳಗಿನ ರಕ್ಕಸರಾಗಲೀ ಹಾನಿ ಮಾಡದಿರುವಾಗ,
ಸರ್ವತ್ರ ಇರುತ್ತದೆ ಸಾಮರಸ್ಯ, ಶಾಂತಿ.
೬೧.
ರಾಷ್ಟ್ರ ಎಂಬುದು ಶ್ರೇಣೀಕೃತ ವ್ಯವಸ್ಥೆಯಂತೆ, ಮಾರುಕಟ್ಟೆಯಂತೆ, ಕನ್ಯೆಯಂತೆ.
ಪುರುಷನ ಅನುನಯಕ್ಕೆ ಮಣಿದು ಪತಿಯನ್ನು ಪಡೆಯುತ್ತಾಳೆ ಕನ್ಯೆ;
ಮಣಿಯುವಿಕೆ ಎಂದರೆ ಸೇರಿಕೆ.

ದೊಡ್ಡ ರಾಷ್ಟ್ರವೊಂದು ಪುಟ್ಟ ರಾಷ್ಟ್ರಕ್ಕೆ ಮಣಿದಾಗ
ಅದು ಪುಟ್ಟ ರಾಷ್ಟ್ರದ ಜವಾಬ್ದಾರಿ ವಹಿಸಿಕೊಳ್ಳುತ್ತದೆ;
ಪುಟ್ಟ ರಾಷ್ಟ್ರವೊಂದು ದೊಡ್ಡ ರಾಷ್ಟ್ರಕ್ಕೆ ಮಣಿದಾಗ
ಅದರ ಜವಾಬ್ದಾರಿ ವಹಿಸಿಕೊಳ್ಳುತ್ತದೆ ದೊಡ್ಡ ರಾಷ್ಟ್ರ;
ಒಂದು ಮಣಿಯುತ್ತದೆ, ಜವಾಬ್ದಾರಿ ವಹಿಸಿಕೊಳ್ಳುತ್ತದೆ;
ಇನ್ನೊಂದು ಮಣಿಯುತ್ತದೆ, ಜವಾಬ್ದಾರಿ ಒಪ್ಪಿಸುತ್ತದೆ.

ಒಗ್ಗೂಡಿ ಸೇವೆ ಗಳಿಸಿಕೊಳ್ಳುವುದು ದೊಡ್ಡ ರಾಷ್ಟ್ರಕ್ಕೆ ಲಾಭದಾಯಕ,
ಒಗ್ಗೂಡಿ ಸಹಾಯ ಪಡೆಯುವುದು ಪುಟ್ಟ ರಾಷ್ಟ್ರಕ್ಕೆ ಲಾಭದಾಯಕ;
ಲಾಭದಾಯಕವಾಗುತ್ತದೆಂದಾದರೆ,
ಎರಡೂ ಮಣಿಯಬೇಕು.
೬೨.
‘ಅದು’ ಮಾನವರ ವಿಧಿ, ಅದೃಷ್ಟ,
ಜ್ಞಾನಿಯ ನಿಧಿ,
ದುಷ್ಕರ್ಮಿಯ ರಕ್ಷಣಾ ತಾಣ!

ಅನೇಕ ಸಲ ಹಿತಕರವಾದ ಪದಗಳು ಎರವಲು ಪಡೆದವಾಗಿರುತ್ತವೆ,
ಮಹತ್ಸಾಧನೆಗಳು ಸ್ವಾಧೀನಪಡಿಸಿಕೊಂಡವಾಗಿರುತ್ತವೆ;
ಎಂದೇ ಒಬ್ಬ ಮನುಷ್ಯ ಬಿದ್ದಾಗ ಅವನನ್ನು ತೊರೆಯಬೇಡ,
ಒಬ್ಬ ಅಧಿಕಾರ, ಪ್ರಭಾವ ಗಳಿಸಿದಾಗ ಅವನನ್ನು ಗೌರವಿಸಬೇಡ;
ಯಾವಾಗಲೂ ನಿಷ್ಪಕ್ಷಪಾತಿಯಾಗಿರು, ಅವನಿಗೆ ‘ಅದನ್ನು’ ತಲುಪುವ ದಾರಿ ತೋರಿಸು.

ಯಾರೇ ಆಗಲಿ, ‘ಅದನ್ನು’ ಏಕೆ ಶ್ಲಾಘಿಸಬೇಕು?
ಪುರಾತನರು ಹೇಳಿದರು, “ಹುಡುಕುವವರಿಗೆ ಸುಲಭವಾಗಿ ಸಿಕ್ಕುವುದು,
ಪಶ್ಚಾತ್ತಾಪ ಪಡುವವರು ದೋಷಮುಕ್ತರಾಗುವುದು ‘ಅದು’ ಇರುವುದರಿಂದ”
ಎಂದೇ ‘ಅದು’ ನಿಸರ್ಗದತ್ತ ಅತ್ಯಮೂಲ್ಯ ವರ.
೬೩.
ಕರ್ಮ ಮಾಡದಿರುವುದನ್ನು ಅಭ್ಯಸಿಸು;
ಏನೂ ಮಾಡದಿರುವುದರಲ್ಲಿ ತೊಡಗಿಸಿಕೊ;
ರುಚಿರಹಿತವಾದದ್ದರ ರುಚಿ ನೋಡು;
ಚಿಕ್ಕದನ್ನು ಉತ್ಪ್ರೇಕ್ಷಿಸು;
ಅತ್ಯಲ್ಪವಿರುವುದನ್ನು ಹೆಚ್ಚಿಸು;
ದ್ವೇಷಕ್ಕೆ ಪ್ರತಿಯಾಗಿ ಪ್ರೀತಿಯನ್ನು ಹಿಂದಿರುಗಿಸು.

ಕ್ಲಿಷ್ಟವಾಗಿರುವುದನ್ನು ಅದು ಇನ್ನೂ ಸುಲಭದ್ದಾಗಿದ್ದಾಗಲೇ ನಿಭಾಯಿಸು;
ದೊಡ್ಡದರೊಂದಿಗೆ ಅದು ಇನ್ನೂ ಚಿಕ್ಕದಾಗಿದ್ದಾಗಲೇ ವ್ಯವಹರಿಸು;

ಸುಲಭವಾಗಿದ್ದದ್ದರಿಂದ ಕ್ಲಿಷ್ಟವಾದದ್ದು ಸಹಜವಾಗಿ ವಿಕಸಿಸುತ್ತದೆ,
ಅಂತೆಯೇ ಚಿಕ್ಕದಾಗಿರುವುದರಿಂದ ದೊಡ್ಡದು;
ಇದೇ ರೀತಿ ಜ್ಞಾನಿ, ಚಿಕ್ಕದರೊಂದಿಗೆ ವ್ಯವಹರಿಸಿ,
ದೊಡ್ಡದನ್ನು ಸಾಧಿಸುತ್ತಾನೆ.

ಸುಲಭವಾಗಿ ಭರವಸೆಗಳನ್ನೀಯುವವರನ್ನು ನಂಬುವುದು ಕಷ್ಟ;
ಎಲ್ಲವನ್ನೂ ಹಗುರವಾಗಿ ಪರಿಗಣಿಸುವವರಿಗೆ ಎಲ್ಲವೂ ಕ್ಲಿಷ್ಟವಾಗಿರುವಂತೆ ಗೋಚರಿಸುತ್ತವೆ;
ಜ್ಞಾನಿಯಾದರೋ ಕಷ್ಟವಾದದ್ದನ್ನು ಗುರುತಿಸುತ್ತಾನೆ, ಎಂದೇ ಅವನಿಗೆ ಯಾವುದೂ ಕಷ್ಟವಲ್ಲ.
೬೪.
ನಿಶ್ಚಲವಾಗಿರುವುದನ್ನು ಹಿಡಿಯುವುದು ಸುಲಭ;
ಬಲು ಮುಂದಾಗಬಹುದಾದ್ದನ್ನು ನಿರೀಕ್ಷಿಸುವುದು ಸುಲಭ;
ಗಡಸಾಗಿರುವುದನ್ನು ಪುಡಿ ಮಾಡುವುದು ಸುಲಭ;
ಚಿಕ್ಕದಾಗಿರುವುದನ್ನು ಚೆದರಿಸುವುದು ಸುಲಭ.

ಆದರೂ ಒಬ್ಬ ಅಪ್ಪಿಕೊಳ್ಳಲಾಗದಷ್ಟು ದೊಡ್ಡ ಮರ ಹುಟ್ಟುವುದು ಅತೀ ಪುಟ್ಟ ಚಿಗುರಾಗಿ;
ನದಿಯೊಂದು ಉಕ್ಕಿ ಹರಿಯಲಾಗದಷ್ಟು ದೊಡ್ಡದಾದ ಅಣೆಕಟ್ಟು ಮೂಡಿದ್ದು ಮಣ್ಣಿನ ಹೆಂಟೆಯಿಂದ;
ಸಹಸ್ರ ಮೈಲಿಗಳ ಪಯಣ ಆರಂಭವಾಗುವುದು ಮೊದಲ ಹೆಜ್ಜೆ ಇಟ್ಟ ತಾಣದಿಂದ.

ಎಂದೇ, ವಿದ್ಯಮಾನಗಳು ಜರಗುವುದಕ್ಕೆ ಮುನ್ನವೇ ನಿಭಾಯಿಸು;
ಗೊಂದಲ ಉಂಟಾಗುವ ಮುನ್ನವೇ ಸುವ್ಯವಸ್ಥೆ ಸೃಷ್ಟಿಸು.
೬೫.
ಜನರನ್ನು ತಮ್ಮ ಪಾಂಡಿತ್ಯದ ನೆರವಿನಿಂದಾಳಲು ಪ್ರಯತ್ನಿಸಲಿಲ್ಲ ಪುರಾತನರು,
ಜನರು ನೈಜವಾಗಿರಲು ನೆರವು ನೀಡುತ್ತಿದ್ದರು ಅವರು.
ಪಂಡಿತರಿಗೆ ನೈಜವಾಗಿರುವುದು ಬಲು ಕಷ್ಟ.

ದುರ್ಬಲವಾಗುತ್ತದೆ ರಾಷ್ತ್ರ ನಿಯಂತ್ರಿಸಲು ಕಾನೂನನ್ನು ಉಪಯೋಗಿಸಿದರೆ.
ಬಲಯುತವಾಗುತ್ತದೆ ರಾಷ್ಟ್ರ ನಿಯಂತ್ರಿಸಲು ನಿಸರ್ಗದತ್ತ ಸಹಜಗುಣ ಉಪಯೋಗಿಸಿದರೆ.

ಈ ಎರಡು ಹಾದಿಗಳನ್ನು ತಿಳಿಯುವುದೆಂದರೆ ನಿಸರ್ಗದ ಸೂಕ್ಷ್ಮತೆಯನ್ನು ತಿಳಿಯುವುದು;
ಇದರ ಆಳ ಹರವುಗಳು ಅಪಾರ,
ಹೋಗಲಾಡಿಸುತ್ತದೆ ಗೊಂದಲವನು, ಕಾಪಾಡುತ್ತದೆ ಶಾಂತಿಯನು.
೬೬.
 ಮಣ್ಣಿನ ಮೇಲ್ಪದರದ ಕೆಳಗೆ ಹರಿದು ಕಣಿವೆಯನ್ನು ಕೊರೆಯುತ್ತದೆ ನದಿ.
ತತ್ಫಲವಾಗಿ ನದಿ ಆಗುತ್ತದೆ ಕಣಿವೆಯ ಯಜಮಾನ.

ಜನರ ಮೇಲೆ ಪ್ರಭುತ್ವ ಸಾಧಿಸಲು
ಅವರ ಸೇವಕರೊಂದಿಗೆ ಮಾತನಾಡಬೇಕು;
ಜನರನ್ನು ಮುನ್ನಡೆಸಬೇಕಾದರೆ
ಅವರನ್ನು ಹಿಂಬಾಲಿಸಬೇಕು.

ಇಂತು ಜನರಿಗಿಂತ ಮೇಲಿನ ಸ್ತರಕ್ಕೇರುತ್ತಾನೆ ಜ್ಞಾನಿ,
ಆದರೂ ತಾವು ತುಳಿತಕ್ಕೊಳಗಾಗಿದ್ದೇವೆ ಅಂದನ್ನಿಸುವುದಿಲ್ಲ ಜನರಿಗೆ;
ಜ್ಞಾನಿ ಜನರ ಮುಂದೆ ನಿಂತಾಗ,
ತಮ್ಮನ್ನವನು ಬಾಧಿಸುತ್ತಿದ್ದಾನೆಂದು ಭಾವಿಸುವುದಿಲ್ಲ.

ಎಂದೇ ಜ್ಞಾನಿಯ ಜನಪ್ರಿಯತೆ ಕಮ್ಮಿ ಆಗುವುದೇ ಇಲ್ಲ,
ಅವನು ಯಾರೊಂದಿಗೂ ಸ್ಪರ್ಧಿಸುವುದಿಲ್ಲ, ಯಾರೂ ಅವನೊಂದಿಗೆ ಸ್ಪರ್ಧಿಸುವುದೂ ಇಲ್ಲ.
೬೭.
 ಲೋಕದಲ್ಲಿರುವವರೆಲ್ಲರೂ ಹೇಳುತ್ತಾರೆ,
“ನಾನೊಬ್ಬ ಪ್ರಮುಖ ವ್ಯಕ್ತಿ;
ನಾನು ಲೋಕದಿಂದ ಭಿನ್ನವಾದವನು.
ನಾನು ಭಿನ್ನವಾಗಿರುವುದರಿಂದಲೇ ನಾನೊಬ್ಬ ಪ್ರಮುಖ ವ್ಯಕ್ತಿ,
ನಾನೂ ಎಲ್ಲರಂತಿದ್ದಿದ್ದರೆ ಎಂದಿಗೂ ಪ್ರಮುಖ ವ್ಯಕ್ತಿಯಾಗುತ್ತಿರಲಿಲ್ಲ.”

ಆದರೂ ನಾನು ನೆಚ್ಚಿಕೊಂಡಿರುವ, ನಿಮಗೂ ಶಿಫಾರಸು ಮಾಡುವ
ಮೂರು ನಿಧಿಗಳಿವೆ:
ಮೊದಲನೆಯದು ಸಹಾನುಭೂತಿ,
ಇದು ಧೈರ್ಯವರ್ಧಕ.
ಎರಡನೆಯದು ಸಂಯಮ,
ಇದು ಶಕ್ತಿವರ್ಧಕ.
ಮೂರನೆಯದು ಅಮುಖ್ಯನಾಗಿರುವುದು,
ಇದು ಪ್ರಭಾವವರ್ಧಕ.

ನಿರ್ಭೀತರಾಗಿದ್ದೂ ಸಹಾನುಭೂತಿ ಇಲ್ಲದವರು,
ಶಕ್ತಿಶಾಲಿಗಳಾಗಿದ್ದೂ ಸಂಯಮವಿಲ್ಲದವರು,
ಪ್ರಭಾವಿಗಳಾಗಿದ್ದೂ ಪ್ರಮಖ ವ್ಯಕ್ತಿಗಳಾಗಿರುವವರು,
ಬಹುಕಾಲ ಉಳಿಯುವುದಿಲ್ಲ.
 ೬೮.
 ಆಕ್ರಮಣದ ಉತ್ಕೃಷ್ಟ ಆಯುಧ ಕಾರುಣ್ಯ,  ಸ್ವರಕ್ಷಣೆಯ ಅತ್ಯುತ್ತಮ ಸಾಧನ ಕಾರುಣ್ಯ.
ನೀವು ಸಾಮರಸ್ಯವನು ಸ್ಥಾಪಿಸಬಯಸುವಿರಾದರೆ,
ಕೋಟೆಯಂತೆ ನಿಮ್ಮನ್ನು ಸುತ್ತುವರಿದಿರಬೇಕು ಕಾರುಣ್ಯ.

ಆದ್ದರಿಂದ,
ಒಳ್ಳೆಯ ಸೈನಿಕ ಭಯ ಉಂಟುಮಾಡುವುದಿಲ್ಲ;
ಉತ್ತಮ ಯೋಧ ತಾನಾಗಿ ಆಕ್ರಮಣ ಮಾಡುವುದಿಲ್ಲ;
ಸದಾ ವಿಜಯಿಯಾಗುವವ ತಾನಾಗಿ ಯುದ್ಧ ಮಾಡುವುದಿಲ್ಲ;
ಉತ್ತಮ ನಾಯಕ ಅಧಿಕಾರ ಚಲಾಯಿಸುವುದಿಲ್ಲ.

ಅಮುಖ್ಯನಾಗಿರುವುದರ ಮೌಲ್ಯವೇ ಇದು;
ಇತರರ ಸಹಕಾರ ಗಳಿಸುವ ವಿಧಾನವಿದು;
ನಿಸರ್ಗದಲ್ಲಿ ಸಹಜವಾಗಿರುವ ಸಾಮರಸ್ಯವನ್ನು ಸ್ಥಾಪಿಸುವ ವಿಧಾನವಿದು.
೬೯.
 ಯೋಧರು ಹೇಳುತ್ತಾರೆ:
ಅತಿಥೇಯನಂತೆ ಇರುವ ಧೈರ್ಯ ಮಾಡುವ ಬದಲಾಗಿ,
ಅತಿಥಿಯಂತಿರಲು ಬಯಸುತ್ತೇನೆ.
ಒಂದು ಅಂಗುಲ ಮುಂದುವರಿಯುವ ಧೈರ್ಯ ಮಾಡುವ ಬದಲಾಗಿ,
ಒಂದು ಅಡಿ ಹಿಮ್ಮೆಟ್ಟಲು ಬಯಸುತ್ತೇನೆ.

ಮುನ್ನಡೆಯದೆಯೇ ಮುನ್ನಡೆಯುವುದೆಂದರೆ,
ಶಸ್ತ್ರಾಸ್ತ್ರಗಳಿಲ್ಲದೆಯೇ ಕಸಿದುಕೊಳ್ಳುವಿಕೆ ಅಂದರೆ,
ಶತ್ರುಗಳಿಲ್ಲದಿದ್ದರೂ ದಾಳಿ ಮಾಡುವದೆಂದರೆ,
ಆಯುಧಗಳಿಲ್ಲದೆಯೇ ವಶಪಡಿಸಿಕೊಳ್ಳುವುದೆಂದರೆ
 ಇದೇ ಆಗಿದೆ.

ಶತ್ರುಗಳನು ಕೀಳಂದಾಜು ಮಾಡುವುದಕ್ಕಿಂತ ಹೆಚ್ಚಿನ ದೌರ್ಭಾಗ್ಯ ಇನ್ನೊಂದಿಲ್ಲ.
ಶತ್ರುಗಳನು ಕೀಳಂದಾಜು ಮಾಡಿದರೆ,
ನನ್ನ ಸಂಪತ್ತನ್ನು ಕಳೆದುಕೊಳ್ಳುವ ಸಂಭವವಿದೆ.
ಎಂದೇ ಎರಡು ಸಮ ಸಾಮರ್ಥ್ಯದ ಸೈನ್ಯಗಳು ಪರಸ್ಪರ ವಿರೋಧಿಸಿದಾಗ,
ಗೆಲ್ಲುತ್ತಾನೆ ಅನುಕಂಪಭರಿತ ಸೇನಾನಿ.
 ೭೦.
ನನ್ನ ಮಾತುಗಳನ್ನು ತಿಳಿದುಕೊಳ್ಳುವುದು ಸುಲಭ
ನಾನು ಮಾಡುವ ಕೆಲಸಗಳನ್ನು ಮಾಡುವುದೂ ಸುಲಭ
ಆದರೂ ಬೇರೆ ಯಾರೂ ಅವನ್ನು ತಿಳಿದುಕೊಳ್ಳಲಾರರು ಅಥವ ಮಾಡಲಾರರು.

ನನ್ನ ಮಾತುಗಳಿಗೆ ಖಚಿತವಾದ ಅರ್ಥವಿದೆ; ನನ್ನ ಕೆಲಸಗಳಿಗೆ ಖಚಿತವಾದ ಕಾರಣವೂ ಇದೆ;
ಆದರೂ ಅವನ್ನು ತಿಳಿಯಲು ಸಾಧ್ಯವಿಲ್ಲ, ನನ್ನನ್ನು ತಿಳಿಯಲೂ ಸಾಧ್ಯವಿಲ್ಲ.

ನಾವು ಪ್ರತಿಯೊಬ್ಬರೂ ಅದ್ವಿತೀಯರು, ಎಂದೇ ಅಮೂಲ್ಯರು;
ಜ್ಞಾನಿ ಧರಿಸುವುದು ಒರಟು ಬಟ್ಟೆಗಳನ್ನಾದರೂ ಅವನ ಹೃದಯವೊಂದು ಪಚ್ಚೆ ಹರಳು.
೭೧.
ತನ್ನ ಇತಿಮಿತಿಗಳನು ಗುರುತಿಸುವವ ನಿರೋಗಿ;
ತನ್ನ ಇತಿಮಿತಿಗಳನು ಕಡೆಗಣಿಸುವವ ರೋಗಿ.
ಈ ರೋಗವನು ಇತಿಮಿತಿಯೆಂದು ಗುರುತಿಸತ್ತಾನೆ ಜ್ಞಾನಿ.
ಎಂದೇ ಅವನಾಗುತ್ತಾನೆ ಪ್ರತಿರಕ್ಷಿತ.
 ೭೨.
ಕ್ರಾಂತಿಯಾಗುತ್ತದೆ, ಜನತೆಯ ಹತ್ತಿರ
ಕಳೆದುಕೊಳ್ಳಲು ಬಾಕಿ ಏನೂ ಉಳಿದಿಲ್ಲದಾಗ.

ಅವರ ಭೂಮಿ ಕಸಿಯದಿರಿ,
ನಾಶಮಾಡದಿರಿ ಅವರ ಜೀವನೋಪಾಯಗಳನು;
ಹೊರೆ ಅತೀ ಭಾರ ಆಗದಿದ್ದರೆ ತಪ್ಪಿಸಿಕೊಳ್ಳುವುದಿಲ್ಲ ಅವರು.

ತನ್ನನ್ನು ಜ್ಞಾನಿ ಪೋಷಿಸಿಕೊಳ್ಳುತ್ತಾನಾದರೂ ಪಡೆಯುವುದಿಲ್ಲ ಕಪ್ಪಕಾಣಿಕೆ,
ತನ್ನನ್ನು ತಾನೇ ಮೆಚ್ಚಿಕೊಳ್ಳುತ್ತಾನಾದರೂ ಬಯಸುವುದಿಲ್ಲ ಮನ್ನಣೆಯನು;
ತಿರುಳನ್ನು ಸ್ವೀಕರಿಸುತ್ತಾನೆ, ಅವಾಸ್ತವಿಕ ಭಾವನೆಗಳನ್ನಲ್ಲ.
 ೭೩.
ಕೆಚ್ಚೆದೆಯವರು ಮೊಂಡಧೈರ್ಯ ತೋರಿದರೆ ನಾಶವಾಗುವರು;
ಚಾತುರ್ಯ ತೋರಿದರೆ ಲಾಭ ಪಡೆಯುವರು.
ವಿಧಿ ಗೌರವಿಸುವುದಿಲ್ಲ ಮೊಂಡಧೈರ್ಯವನು
ಎಂದೇ ಚತುರರು ಉಳಿಯುವರು, ಮೊಂಡಧೈರ್ಯದವರು ಅಳಿಯುವರು.
ವಿಧಯನ್ನು ಕೆಣಕುವ ಧೈರ್ಯ ಜ್ಞಾನಿಯೂ ಮಾಡುವುದಿಲ್ಲ.

ವಿಧಿ ಎಂದಿಗೂ ಆಕ್ರಮಣ ಮಾಡುವುದಿಲ್ಲ, ಆದರೂ ಜಯಿಸುತ್ತದೆ ಅದು ಎಲ್ಲವನ್ನೂ;
ಅದು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ, ಆದರೂ ಅದಕ್ಕೆ ಉತ್ತರಿಸುತ್ತವೆ ಎಲ್ಲವೂ;
ಅದು ಯಾರನ್ನೂ ಕರೆಯುವುದಿಲ್ಲ, ಆದರೂ ಅದನ್ನು ಭೇಟಿ ಮಾಡುತ್ತವೆ ಎಲ್ಲವೂ;
ಅದು ಏನನ್ನೂ ಯೋಜಿಸುವುದಿಲ್ಲ, ಆದರೂ ನಿರ್ಧರಿಸುತ್ತದೆ ಎಲ್ಲವನ್ನೂ.

ವಿಧಿಯ ಬಲೆ ಬಲು ವಿಸ್ತಾರವಾದದ್ದು, ಜಾಲರಂಧ್ರಗಳು ದೊಡ್ಡವು,
ಆದರೂ ತಪ್ಪಿಸಿಕೊಳ್ಳಲಾರರು ಯಾರೂ ಅದರಿಂದ.
೭೪.
ಜನ ಸಾವಿಗಂಜದವರಾದರೆ,
ಗಲ್ಲಿಗೇರಿಸುವವನ ಆವಶ್ಯಕತೆಯಾದರೂ ಏನು?

ಸಾವಿಗೆ ಮಾತ್ರ ಜನ ಅಂಜುವವರಾದರೆ,
ವಿಧೇಯರಲ್ಲದವರೆಲ್ಲರನೂ ನೀವು ಗಲ್ಲಿಗೇರಿಸಿದರೆ,
ನಿಮಗೆ ಯಾರೂ ಅವಿಧೇಯರಾಗಿರುವುದಿಲ್ಲ.
ಇಂತಾದಾಗಲೂ ಗಲ್ಲಿಗೇರಿಸುವವನ ಆವಶ್ಯಕತೆಯಾದರೂ ಏನು?

ಜನ ಹೆದರುವರು ಸಾವಿಗೆ, ವಿಧಿಯ ಹತ್ಯಾರು ಅದಾಗಿರುವುದರಿಂದ.
ವಿಧಿಯ ಬದಲು ನಾವೇ ಜನರನ್ನು ಕೊಲ್ಲುವುದು,
ಬಡಗಿಯ ಬದಲು ನಾವೇ ಮರವನ್ನು ಕೆತ್ತಿದಂತೆ.
ಬಡಗಿಯ ಬದಲು ತಾವೇ ಮರ ಕೆತ್ತುವವರು
ತಮ್ಮ ಕೈಗಳನ್ನು ತಾವೇ ಘಾಸಿಗೊಳಿಸಿಕೊಳ್ಳುವರು ಪದೇಪದೇ.
 ೭೫.
 ತಾವು ಭೂರಿಭೋಜನ ಮಾಡಲೋಸುಗ ಆಳುವವರು ತೆರಿಗೆ ರೂಪದಲ್ಲಿ ಧಾನ್ಯಗಳನ್ನು ಪಡೆದಾಗ
ಜನತೆ ಹಸಿವಿನಿಂದ ಕಂಗಾಲಾಗುತ್ತಾರೆ;
ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲೋಸುಗ ಆಳುವವರು ಕ್ರಮ ಕೈಗೊಳ್ಳುವಾಗ
ಜನತೆ ದಂಗೆ ಏಳುತ್ತಾರೆ;
ತಮ್ಮ ಪ್ರಾಣ ಉಳಿಸಿಕೊಳ್ಳಲೋಸುಗ ಆಳುವವರು ಇತರರ ಪ್ರಾಣ ತೆಗೆಯುವಾಗ
ಜನತೆ ಸಾವಿಗಂಜುವುದೇ ಇಲ್ಲ.

ತಮ್ಮ ಜೀವದ ಹಂಗು ತೊರೆದು ಜನ ಕಾರ್ಯವೆಸಗುವಾಗ
ತಮ್ಮ ಪ್ರಾಣ ಮಾತ್ರ ಅಮೂಲ್ಯ ಅನ್ನುವವರನ್ನು ಮಣಿಸುತ್ತಾರೆ.
೭೬.
ಮಿದು ಹಾಗು ನಮ್ಯವಾಗಿರುತ್ತದೆ ನವಜಾತ ಶಿಶು,
ಹಣ್ಣುಹಣ್ಣು ಮುದಿಜೀವವಾದರೋ ಪೆಡಸು ಹಾಗು ಅನಮ್ಯ.
ಸಸ್ಯಗಳೂ ಪ್ರಾಣಿಗಳೂ ಜೀವಿಸಿರುವಾಗ ನಮ್ಯ ಹಾಗು ರಸಭರಿತ;
ಒಣಗಿ ಸುರುಟಿಕೊಳ್ಳುತ್ತವೆ ಸತ್ತ ನಂತರ.
ಎಂದೇ, ಮಿದುತ್ವ ನಮ್ಯತೆಗಳು ಜೀವಂತಿಕೆಯ ಗುಣವಿಶೇಷಗಳು,
ಪೆಡಸುತನ ಅನಮ್ಯತೆಗಳು ನಿರ್ಜೀವದ್ದು.

ಮರದೆಸರು ಕಳೆದ ಮರ ಸೀಳಿ ಕ್ಷಯಿಸುವಂತೆ
ಅನಮ್ಯ ಬಲ ಸೋಲುವುದು ಖಚಿತ;
ಕಠಿನವಾದವರೂ ಬಲಶಾಲಿಗಳೂ ಮಲಗಿರುತ್ತಾರೆ ನೆಲದಡಿಯಲ್ಲಿ
ಕೋಮಲವಾದವರೂ ದುರ್ಬಲರೂ ಮೇಲೆ ನಸುಗಾಳಿಯಲಿ ಕುಣಿಯುತ್ತಿರುವಾಗ.
 ೭೭.
 ಬಿಲ್ಲಿನ ಹೆದೆಯೇರಿಸುವಿಕೆಯಂತೆ ಇರುತ್ತದಲ್ಲವೇ ನಿಸರ್ಗದ ಕಾರ್ಯವಿಧಾನಗಳು?
ಮೇಲಿದ್ದದ್ದನ್ನುಕೆಳಕ್ಕೆಳೆಯುವುದು, ಕೆಳಗಿದ್ದದ್ದನ್ನು ಮೇಲೆತ್ತುವುದು;
ಉದ್ದವಾದದ್ದನ್ನು ಮೋಟಾಗಿಸುವುದು, ಸಪುರವಾದದ್ದನ್ನು ಅಗಲವಾಗಿಸುವುದು;
ಅಗತ್ಯಕ್ಕಿಂತ ಹೆಚ್ಚು ಉಳ್ಳವರನ್ನು ಕಮ್ಮಿ ಮಾಡುವುದು
ಇರುವುದಕ್ಕಿಂತ ಹೆಚ್ಚು ಅಗತ್ಯ ಉಳ್ಳವರನ್ನು ಹೆಚ್ಚು ಮಾಡುವುದು ನಿಸರ್ಗದ ಚಲನೆ.

ಮಾನವನಾದರೋ ಅಂತಲ್ಲ.
ಇರುವುದಕ್ಕಿಂತ ಹೆಚ್ಚು ಅಗತ್ಯ ಉಳ್ಳವರನ್ನು ಕಮ್ಮಿ ಮಾಡುತ್ತಾನೆ
ಅಗತ್ಯಕ್ಕಿಂತ ಹೆಚ್ಚು ಉಳ್ಳವರನ್ನು ಹೆಚ್ಚು ಮಾಡುತ್ತಾನೆ.

ನಿಮಗೆ ಅಗತ್ಯವಿಲ್ಲದ್ದನ್ನು ಕೊಟ್ಟುಬಿಡುವುದು ‘ಅದರ’ ಅನುಸರಣೆ.
ಎಂದೇ, ಜ್ಞಾನಿ ಕೊಡುತ್ತಾನೆ ಫಲಾಪೇಕ್ಷೆ ಇಲ್ಲದೆ,
ಸಾಧಿಸುತ್ತಾನೆ ಅದರ ಕೀರ್ತಿಯನ್ನು ಅಪೇಕ್ಷಿಸದೆ,
ಆಡಂಬರದ ಪ್ರದರ್ಶನದ ಬಯಕೆಯಂತೂ ಅವನಿಗಿಲ್ಲವೇ ಇಲ್ಲ.
೭೮.
ನೀರಿನಷ್ಟು ಮೆದು ಹಾಗು ನಮ್ಯವಾದದ್ದು ಲೋಕದಲ್ಲಿ ಬೇರೆ ಯಾವುದೂ ಇಲ್ಲ,
ಆದರೂ ಗಟ್ಟಿ ಮತ್ತು ಗಡುಸಾದದ್ದನ್ನು ಅದರಷ್ಟು ಚೆನ್ನಾಗಿ ಬೇರೆ ಯಾವುದೂ ಜಯಿಸಲಾರದು,
ಏಕೆಂದರೆ ಅದಿಲ್ಲದೆ ಅವು ಇರಲೂ ಸಾಧ್ಯವಿಲ್ಲ ಅದನ್ನವು ನಿಯಂತ್ರಿಸಲೂ ಸಾಧ್ಯವಿಲ್ಲ.

ಗಟ್ಟಿಯಾದದ್ದನ್ನು ಜಯಿಸುತ್ತದೆ ಮಿದುವಾದದ್ದು,
ಗಡುಸಾದದ್ದನ್ನು ಜಯಿಸುತ್ತದೆ ನಮ್ಯವಾದದ್ದು;
ಪ್ರತಿಯೊಬ್ಬರಿಗೂ ಇದು ತಿಳಿದಿದ್ದರೂ,
ಯಾರೂ ಇದನ್ನು ಕಾರ್ಯಗತಗೊಳಿಸುವುದಿಲ್ಲ.

ಭೂಮಿಯನ್ನೂ ದವಸಧಾನ್ಯಗಳನ್ನೂ ನಿಯಂತ್ರಿಸುತ್ತಿರುವವರಿಗೆ ಸೇವೆ ಸಲ್ಲಿಸುತ್ತಿರುವವರು ಯಾರು;
ಇಡೀ ಲೋಕವನ್ನು ನಿಯಂತ್ರಿಸುತ್ತಿರುವವರಿಗೆ ಸೇವೆ ಸಲ್ಲಿಸುತ್ತಿರುವವರು ಯಾರು;
ವಾಗ್ವೈಖರಿಯಿಂದ ಸತ್ಯವನ್ನು ಸುಲಭವಾಗಿ ಅಡಗಿಸಬಹುದು.
 ೭೯.
ವ್ಯಾಜ್ಯ ಪರಿಹರಿಸಿದರೂ ಉಳಿದಿರುತ್ತದೆ ಕಹಿ ಭಾವನೆಗಳು;
ಇದು ಬಲು ಅಪಾಯಕಾರಿ.

ಜ್ಞಾನಿ ಸ್ವೀಕರಿಸುತ್ತಾನೆ ತನಗೆ ಸಲ್ಲತಕ್ಕದ್ದಕ್ಕಿಂತ ಕಮ್ಮಿಯಾದುದನ್ನು
ಕಾರಣರಾದವರನ್ನು ತೆಗಳದೆ, ಶಿಕ್ಷಿಸದೆ;
ಏಕೆಂದರೆ ಒಡಂಬಡಿಕೆಯನ್ನು ಅಪೇಕ್ಷಿಸುತ್ತದೆ ಸಾಮರಸ್ಯ
ನ್ಯಾಯಶೀಲ ವರ್ತನೆಯಾದರೋ ತಕ್ಕುದಾದ ಪ್ರತಿಫಲವನ್ನು.

ಪುರಾತನರು ಹೇಳಿದರು: “ನಿಸರ್ಗ ನಿಷ್ಪಕ್ಷಪಾತಿ;
ಎಂದೇ ಎಲ್ಲರಿಗೂ ಸೇವೆ ಸಲ್ಲಿಸುವವರಿಗೆ ಅದು ಸೇವೆ ಸಲ್ಲಿಸುತ್ತದೆ.”
೮೦.
ನಿನ್ನ ಸಮುದಾಯ ಕೆಲವೇ ಕೆಲವು ಮಂದಿಯಿರುವ ಪುಟ್ಟ ಸಮುದಾಯವಾಗಿರಲಿ;
ಅಧಿಕ ಸಲಕರಣೆಗಳನ್ನು ಇಟ್ಟುಕೊ, ಅವುಗಳ ಮೇಲೆ ಅವಲಂಬಿತನಾಗಿರಬೇಡ;
ನಿನ್ನ ಜೀವನವನ್ನು ಆಸ್ವಾದಿಸು, ನಿನ್ನ ಮನೆಯಲ್ಲಿ ತೃಪ್ತನಾಗಿರು;
ದೋಣಿಯಲ್ಲಿ ಪಯಣಿಸು ಕುದುರೆ ಸವಾರಿ ಮಾಡು, ಆದರೆ ಬಹುದೂರ ಹೋಗಬೇಡ; 
ಆಯುಧಗಳನ್ನೂ ರಕ್ಷಾಕವಚಗಳನ್ನೂ ಇಟ್ಟುಕೊ, ಆದರೆ ಅವನ್ನು ಉಪಯೋಗಿಸಬೇಡ;
ಪ್ರತಿಯೊಬ್ಬರೂ ಓದಲಿ, ಬರೆಯಲಿ,
ಚೆನ್ನಾಗಿ ತಿನ್ನು, ಸುಂದರ ವಸ್ತುಗಳನ್ನು ತಯಾರಿಸು.

ಶಾಂತಿಯುತ ಬಾಳ್ವೆ ನಡೆಸು, ನಿನ್ನ ಸಮುದಾಯದಲ್ಲಿ ಸಂತೋಷದಿಂದಿರು;
ನಿನ್ನ ನೆರೆಹೊರೆಯವರ ಕೋಳಿಗಳ ಕೂಗು ಕೇಳಿಸುವ ದೂರದಲ್ಲಿ ವಾಸಿಸು,
ಆದರೆ ನೀನು ನಿನ್ನ ಸ್ವಾತಂತ್ರ್ಯವನ್ನು ಸಂರಕ್ಷಿಸಿಕೊ.
 ೮೧.
ಪ್ರಾಮಾಣಿಕರು ಬಣ್ಣದ ಮಾತುಗಳನ್ನಾಡುವುದಿಲ್ಲ;
ಬಣ್ಣದ ಮಾತುಗಳು ಪ್ರಾಮಾಣಿಕವಾದವುಗಳಲ್ಲ.
ಜ್ಞಾನೋದಯವಾದವರು ಸುಸಂಕೃತರಾಗಿರುವುದಿಲ್ಲ;
ಸುಸಂಸ್ಕೃತಿ ಜ್ಞಾನೋದಯವಲ್ಲ.
ತೃಪ್ತರು ಶ್ರೀಮಂತರಲ್ಲ;
ಸಿರಿಸಂಪತ್ತು ತೃಪ್ತಿದಾಯಕವಾದುದಲ್ಲ.

ಎಂದೇ, ಜ್ಞಾನಿ ತನಗಾಗಿ ಏನನ್ನೂ ಮಾಡುವುದಿಲ್ಲ;
ಇತರರಿಗಾಗಿ ಅವನು ಹೆಚ್ಚು ಮಾಡಿದರೆ ಅವನ ತೃಪ್ತಿಯ ಮಟ್ಟವೂ ಮೇಲೇರುತ್ತದೆ;
ಅವನೆಷ್ಟು ಹೆಚ್ಚು ಕೊಡುತ್ತಾನೋ ಅಷ್ಟು ಹೆಚ್ಚು ಪಡೆಯುತ್ತಾನೆ.
ಯಾರಿಗೂ ಹಾನಿ ಉಂಟುಮಾಡದೆಯೆ ಬಲಿಷ್ಠವಾಗುತ್ತದೆ ನಿಸರ್ಗ;
ಅಂತೆಯೇ ಜ್ಞಾನಿ ಎಲ್ಲರಿಗೂ ಒಳಿತನ್ನು ಮಾಡುತ್ತಾನೆ, ಯಾರೊಂದಿಗೂ ಸ್ಪರ್ಧಿಸುವುದಿಲ್ಲ.


ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಬಹುದಾದ ವಿ ಪುಸ್ತಕ ರೂಪದಲ್ಲಿ ಬೇಕಾದರೆ:

No comments: