Pages

29 December 2015

ಸೂಫಿ ಕತೆಗಳು ೧೦೧-೧೨೦.

೧೦೧. ನೀರಿನ ಬಟ್ಟಲಿನಲ್ಲಿ ಚಂದ್ರ

ಕೆರ್‌ಮ್ಯಾನ್‌ನ ಕವಿ ಆವ್ಹಾದಿ ಒಂದು ದಿನ ಒಂದು ಬಟ್ಟಲಿನಲ್ಲಿದ್ದ ನೀರನ್ನೇ ತನ್ನ ಮನೆಯ ಮುಖಮಂಟಪದಲ್ಲಿ ಬಗ್ಗಿ ನೋಡುತ್ತಾ ಕುಳಿತಿದ್ದ. ಆ ಮನೆಯ ಮುಂದಿನಿಂದಾಗಿ ಎಲ್ಲಿಗೋ ಹೋಗುತ್ತಿದ್ದ ಶಾಮ್ಸ್ ಎ-ತಬ್ರೀಜಿ ಕೇಳಿದ, “ನೀನೇನು ಮಾಡುತ್ತಿರುವೆ?”
ಬಟ್ಟಲಿನ ನೀರಿನಲ್ಲಿ ಚಂದ್ರನ ಕುರಿತು ಆಳವಾಗಿ ಆಲೋಚಿಸುತ್ತಿದ್ದೇನೆ.”
ನಿನ್ನ ಕುತ್ತಿಗೆ ಮುರಿದಿಲ್ಲವಾದ್ದರಿಂದ ಆಕಾಶದಲ್ಲಿರುವ ಚಂದ್ರನನ್ನೇ ಏಕೆ ನೋಡುವುದಿಲ್ಲ?”

***** 

೧೦೨ ಕತ್ತರಿಯೋ ಸೂಜಿಯೋ?

ಮಹಾನ್‌ ಸೂಫಿ ಮುಮುಕ್ಷು ಫರೀದ್‌ನನ್ನು ನೋಡಲು ಒಬ್ಬ ರಾಜ ಬಂದ. ಫರೀದ್‌ನಿಗಾಗಿ ಅವನೊಂದು ಉಡುಗೊರೆಯನ್ನೂ ತಂದಿದ್ದ: ಬಲು ಸುಂದರವಾದ ವಜ್ರ ಖಚಿತವಾದ ಚಿನ್ನದ ಕತ್ತರಿ - ಅತ್ಯಮೂಲ್ಯವೂ ಅಪರೂಪದ್ದೂ ಅದ್ವಿತೀಯವೂ ಆದ ಕತ್ತರಿ ಅದಾಗಿತ್ತು. ಫರೀದ್‌ನ ಪಾದಗಳಿಗೆ ನಮಿಸಿದ ನಂತರ ರಾಜ ಆ ಕತ್ತರಿಯನ್ನು ಅವನಿಗೆ ಅರ್ಪಿಸಿದ. ಫರೀದ್‌ ಕತ್ತರಿಯನ್ನು ತೆಗೆದುಕೊಂಡು ನೋಡಿ ರಾಜನಿಗೇ ಹಿಂದಿರುಗಿಸಿ ಹೇಳಿದ, “ರಾಜನೇ ನೀನು ಈ ಉಡುಗೊರೆಯನ್ನು ತಂದದ್ದಕ್ಕಾಗಿ ಧನ್ಯವಾದಗಳು. ಅದು ಬಲು ಸುಂದರವಾಗಿದ್ದರೂ ನನಗೆ ಅದು ಸಂಪೂರ್ಣ ಕೆಲಸಕ್ಕೆ ಬಾರದ ವಸ್ತು. ನೀನು ನನಗೊಂದು ಸೂಜಿಯನ್ನು ಕೊಟ್ಟರೆ ಉಪಯೋಗವಾದೀತು. ಕತ್ತರಿ ನನಗೆ ಬೇಡ, ಸೂಜಿಯೇ ಆದೀತು.”
ರಾಜ ಪ್ರತಿಕ್ರಿಯಿಸಿದ, ನನಗೆ ಅರ್ಥವಾಗಲಿಲ್ಲ. ನಿಮಗೆ ಸೂಜಿ ಬೇಕೆಂದಾದರೆ ಕತ್ತರಿಯೂ ಬೇಕಾಗುತ್ತದೆ.”
ಫರೀದ್‌ ಹೇಳಿದ, “ನಾನು ರೂಪಕಗಳ ಪರಿಭಾಷೆಯಲ್ಲಿ ಮಾತನಾಡುತ್ತಿದ್ದೇನೆ. ಕತ್ತರಿ ನನಗೆ ಬೇಡ, ಏಕೆಂದರೆ ಅದು ವಸ್ತುಗಳನ್ನು ಕತ್ತರಿಸಿ ತುಂಡುಗಳನ್ನು ಬೇರ್ಪಡಿಸುತ್ತದೆ. ನನಗೆ ಸೂಜಿ ಬೇಕು, ಏಕೆಂದರೆ ಅದು ವಸ್ತುಗಳನ್ನು ಒಗ್ಗೂಡಿಸುತ್ತದೆ. ನಾನು ಬೋಧಿಸುತ್ತಿರುವುದೇ ಒಲವು ಅಥವ ಅಕ್ಕರೆ ಅಥವ ಮಮತೆಯನ್ನು, ಅರ್ಥಾತ್ ಒಗ್ಗೂಡಿಸುವುದನ್ನು, ಸೌಹಾರ್ದವನ್ನು, ಸಹಭಾಗಿತ್ವವನ್ನು, ಸಹಭೋಗಿತ್ವವನ್ನು. ಕತ್ತರಿ ನಿಷ್ಪ್ರಯೋಜಕ ವಸ್ತು, ಅದು ಕತ್ತರಿಸುತ್ತದೆ, ಸಂಬಂಧಗಳನ್ನು ಮುರಿಯುತ್ತದೆ.  ಆದ್ದರಿಂದ ಮುಂದಿನ ಬಾರಿ ನೀನು ಬರುವಾಗ ಒಂದು ಸಾಧಾರಣ ಸೂಜಿ ತಂದರೆ ಸಾಕು.”

***** 

೧೦೩. ನಿಮಗೇನು ಬೇಕು?

ಒಬ್ಬ ಸೂಫಿ ಮುಮುಕ್ಷು ಜೀವನದಾದ್ಯಂತ ಸಂತೋಷದಿಂದಲೇ ಇದ್ದ. ಅವನು ದುಃಖಿಸಿದ್ದನ್ನು ಯಾರೂ ನೋಡಿರಲೇ ಇಲ್ಲ. ಅವನು ಯಾವಾಗಲೂ ನಗುತ್ತಲೇ ಇರುತ್ತಿದ್ದ. ನಗುವೇ ಅವನ ರೂಪ ಧರಿಸಿದಂತಿತ್ತು, ಅವನ ಇಡೀ ಜೀವನವೇ ಒಂದು ನಗುವಿನ ಉತ್ಸವವಾಗಿತ್ತು. ವೃದ್ಧಾಪ್ಯದಲ್ಲಿ ಸಾವಿನ ಅಂಚಿನಲ್ಲಿದ್ದಾಗಲೂ ಸಾಯುವ ಪ್ರಕ್ರಿಯೆಯನ್ನೂ ಆನಂದದಿಂದ ಅನುಭವಿಸುತ್ತಿದ್ದ, ಆಗಲೂ ಗಹಗಹಿಸಿ ನಗುತ್ತಿದ್ದ.
ಶಿಷ್ಯನೊಬ್ಬ ಕೇಳಿದ, “ನಮಗೆ ನೀವು ಒಂದು ಒಗಟಾಗಿದ್ದೀರಿ. ಈಗ ನೀವು ಸಾಯುತ್ತಿದ್ದೀರಿ, ಆದರೂ ಏಕೆ ಹೀಗೆ ನಗುತ್ತಿದ್ದೀರಿ? ಸಾಯುವುದರಲ್ಲಿ ತಮಾಷೆ ಏನಿದೆ? ನಾವೆಲ್ಲ ದುಃಖಿಸುತ್ತಿದ್ದೇವೆ. ನಿಮ್ಮ ಜೀವನದುದ್ದಕ್ಕೂ ಒಮ್ಮೆಯೂ ನೀವು ದುಃಖಿಸಿದ್ದನ್ನು ನಾವು ನೋಡಿಯೇ ಇಲ್ಲ, ಏಕೆ ಎಂಬುದನ್ನು ನಿಮ್ಮಿಂದ ಕೇಳಿ ತಿಳಿಯಬೇಕೆಂಬುದಾಗಿ ಎಷ್ಟೋ ಸಲ ನಾವು ಅಂದುಕೊಂಡಿದ್ದುಂಟು. ಸಾವಿನೊಂದಿಗೆ ಮುಖಾಮುಖಿಯಾಗಿರುವಾಗ ಯಾರೇ ಆದರೂ ದುಃಖಿಸಬೇಕಲ್ಲವೇ? ನೀವಾದರೋ ಈಗಲೂ ನಗುತ್ತಿರುವುರಿ - ಇದು ನಿಮಗೆ ಹೇಗೆ ಸಾಧ್ಯವಾಗುತ್ತದೆ?”
ವೃದ್ಧ ಸೂಫಿ ಹೇಳಿದ, “ಅದು ಬಹಳ ಸುಲಭ. ನಾನು ನನ್ನ ಗುರುವನ್ನು ಕೇಳಿದ್ದೆ --- ನನಗೆ ೧೭ ವರ್ಷ ವಯಸ್ಸಾಗಿದ್ದಾಗಲೇ ನನ್ನ ಗುರುವಿನ ಹತ್ತಿರ ಹೋಗಿದ್ದೆ. ಆಗಲೇ ನಾನು ಸಂಕಟ ಪಡುತ್ತಿದ್ದೆ. ನನ್ನ ಗುರು ಆಗ ೭೦ ವರ್ಷ ವಯಸ್ಸಿನ ವೃದ್ಧರು. ಒಂದು ಮರದ ಕೆಳಗೆ ಕುಳಿತುಕೊಂಡು ಯಾವ ಕಾರಣವೂ ಇಲ್ಲದೇ ನಗುತ್ತಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ನಗುವಂಥದ್ದು ಏನೂ ಆಗಿರಲಿಲ್ಲ. ಯಾರೂ ನಗೆ ಚಟಾಕಿಯನ್ನೂ ಹಾರಿಸಿರಲಿಲ್ಲ. ಆದರೂ ಹೊಟ್ಟೆಯನ್ನು ಅದುಮಿ ಹಿಡಿದುಕೊಂಡು ನಗುತ್ತಿದ್ದರು. ನಾನವರನ್ನು ಕೇಳಿದೆ, ‘ನಿಮಗೇನಾಗಿದೆ? ಹುಚ್ಚೇನೂ ಹಿಡಿದಿಲ್ಲವಲ್ಲವಷ್ಟೆ?’ ಅವರು ಹೇಳಿದರು, ‘ಹಿಂದೊಮ್ಮೆ ನಾನೂ ನಿನ್ನಂತೆಯೇ ಸಂಕಟ ಪಡುತ್ತಿದ್ದೆ. ಅಗ ನನಗೆ ಇದ್ದಕ್ಕಿದ್ದಂತೆ ಹೊಳೆಯಿತು - ಅದು ನನ್ನ ಆಯ್ಕೆ, ಅದು ನನ್ನ ಜೀವನ ಎಂಬ ಸತ್ಯ. ಅಂದಿನಿಂದ ಪ್ರತೀ ದಿನ ಬೆಳಗ್ಗೆ ಎದ್ದ ತಕ್ಷಣ ಮೊದಲು ನಾನು ತೀರ್ಮಾನಿಸುವುದು --- ಎದ್ದ ನಂತರ ಕಣ್ಣು ತೆರೆಯುವ ಮುನ್ನ ನನಗೆ ನಾನೇ ಹೇಳಿಕೊಳ್ಳುತ್ತೇನೆ, ‘ಅಬ್ದುಲ್ಲ’ – ಅದು ಅವರ ಹೆಸರು -- ‘ನಿನಗೇನು ಬೇಕು? ದುಃಖವೋ? ಆನಂದವೋ? ಇವತ್ತು ಯಾವುದನ್ನು ಆಯ್ಕೆ ಮಾಡುವೆ? ನಾನು ಯಾವಾಗಲೂ ಆನಂದವನ್ನೇ ಆಯ್ಕೆ ಮಾಡುತ್ತೇನೆ.”
ಸೂಫಿ ಮುಮುಕ್ಷು ತನ್ನ ಶಿಷ್ಯರಿಗೆ ಹೇಳಿದರು, “ಯಾವುದೇ ದಿನ ನೀವು ಹೇಗಿರುತ್ತೀರಿ ಎಂಬುದು ನಿಮ್ಮ ಆಯ್ಕೆಯೇ ಆಗಿರುತ್ತದೆ. ಪ್ರಯತ್ನಿಸಿ ನೋಡಿ. ಬೆಳಗ್ಗೆ ಎದ್ದ ತಕ್ಷಣ ಮೊದಲು ನಿಮ್ಮನ್ನು ನೀವೇ ಕೇಳಿಕೊಳ್ಳಿ - ಇನ್ನೊಂದು ದಿನ ಬಂದಿದೆ! ಇವತ್ತು ಎಂಥ ದಿನ ಎಂಬುದಾಗಿ ಯೋಚಿಸುತ್ತಿರುವೆ? ದುಃಖದ್ದೋ ಆನಂದದ್ದೋ? ದುಃಖವನ್ನು ಯಾರು ತಾನೇ ಆಯ್ಕೆ ಮಾಡುತ್ತಾರೆ? ಏಕೆ? ಅದು ಅಸ್ವಾಭಾವಿಕವಾದದ್ದು. ದುಃಖಿಸುವುದರಲ್ಲಿ ಆನಂದ ಪಡುವವರು ಯಾರಾದರೂ ಇದ್ದಾರೆಯೇ? ಇದ್ದರೂ ಅವರು ಅನುಭವಿಸುವುದು ಆನಂದವನ್ನು, ದುಃಖವನ್ನಲ್ಲ.”

***** 

೧೦೪. ನೀವೇಕೆ ಆನಂದವನ್ನು ಹೊರಗಿನ ಜಗತ್ತಿನಲ್ಲಿ ಹುಡುಕುತ್ತಿರುವಿರಿ?
() ಒಂದು ದಿನ ಬೆಳ್ಳಂಬೆಳಗ್ಗೆ ಮಮುಕ್ಷು ಹಸನ್‌ನು ಸೂಫಿ ರಬಿ’ಆ ಅಲ್‌-ಅದವಿಯ್ಯಾಳನ್ನು ನೋಡಲು ಬಂದ. ರಬಿ’ಆ ತನ್ನ ಗುಡಿಸಿಲಿನ ಒಳಗೆ ಕುಳಿತಿದ್ದಳು. ಸೂರ್ಯೋದಯವಾಗುತ್ತಿತ್ತು, ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದವು, ತಂಗಾಳಿಗೆ ಮರಗಿಡಗಳು ನರ್ತಿಸುತ್ತಿದ್ದವು.
ಹಸನ್‌ ಹೊರಗಿನಿಂದಲೇ ಕೇಳಿದ, “ರಬಿ’ಆ ಒಳಗೇನು ಮಾಡುತ್ತಿರುವೆ? ಹೊರಗೆ ಬಾ! ಬಲು ಸುಂದರವಾದ ಮುಂಜಾನೆಗೆ ದೇವರು ಜನ್ಮ ನೀಡಿದ್ದಾನೆ. ನೀನು ಒಳಗೇನು ಮಾಡುತ್ತಿರುವೆ?”
ರಬಿ’ಆ ನಕ್ಕು ಹೇಳಿದಳು, “ಹಸನ್‌, ದೇವರು ಸೃಷ್ಟಿಸಿದ್ದು ಮಾತ್ರ ಹೊರಗಿದೆ, ದೇವರು ಒಳಗೇ ಇದ್ದಾನೆ. ನೀನೇಕೆ ಒಳಕ್ಕೆ ಬರಬಾರದು? ಇದೊಂದು ಸುಂದರವಾದ ಬೆಳಗಿನ ಜಾವ. ಆದರೂ ಈ ಸೌಂದರ್ಯವು ಎಲ್ಲ ಮುಂಜಾನೆಗಳನ್ನು ಸೃಷ್ಟಿಸುವ ದೇವರ ಸೌಂದರ್ಯಕ್ಕೆ ಸಾಟಿಯಾಗುವುದಿಲ್ಲ. ನಿಜ, ಪಕ್ಷಿಗಳು ಬಲು ಚೆನ್ನಾಗಿ ಹಾಡುತ್ತಿವೆ, ಅದರೆ ದೇವರ ಹಾಡಿಗೆ ಅವುಗಳ ಹಾಡು ಸಾಟಿಯಾಗಲಾರದು. ಇವೆಲ್ಲ ಆಗುವುದು ನೀನು ಒಳಗಿದ್ದರೆ ಮಾತ್ರ. ನೀನೇ ಏಕೆ ಒಳಕ್ಕೆ ಬರಬಾರದು? ನಿನ್ನ ಹೊರಗಿನ ಕೆಲಸ ಇನ್ನೂ ನೀನು ಮುಗಿಸಿಲ್ಲವೇ? ನೀನು ಒಳಕ್ಕೆ ಬರಲು ಯಾವಾಗ ಸಾಧ್ಯವಾಗುತ್ತದೆ?
() ಒಂದು ದಿನ ಸಂಜೆ ತನ್ನ ಗುಡಿಸಿಲಿನ ಮುಂದಿನ ರಸ್ತೆಯಲ್ಲಿ ರಬಿ’ಆ ಏನನ್ನೋ ಹುಡುಕುತ್ತಿರುವುದನ್ನು ಜೆಲವು ಮಂದಿ ನೋಡಿದರು.
ಪಾಪ ವೃದ್ಧೆ ಏನನ್ನೋ ಹುಡುಕುತ್ತಿದ್ದಾಳೆ ಅಂದುಕೊಂಡು ಅವರು ಅವಳನ್ನು ಕೇಳಿದರು, “ಏನು ವಿಷಯ? ಏನನ್ನು ಹುಡುಕುತ್ತಿರುವೆ?”
ನನ್ನ ಸೂಜಿ ಕಳೆದುಹೋಗಿದೆ,” ಅಂದಳು ಅವಳು. ಅವರೂ ಅವಳಿಗೆ ಹುಡುಕಲು ನೆರವಾದರು.
ಆ ಸಂದರ್ಭದಲ್ಲಿ ಯಾರೋ ಒಬ್ಬ ಕೇಳಿದ, “ರಬಿ’ಆ ರಸ್ತೆ ಬಲು ದೊಡ್ಡದು, ಕತ್ತಲಾಗುತ್ತಿದೆ, ಇನ್ನು ತುಸು ಸಮಯವಾದ ನಂತರ ಬೆಳಕೂ ಇರುವುದಿಲ್ಲ, ಸೂಜಿಯಾದರೋ ಬಲು ಸಣ್ಣ ವಸ್ತು, ಅದು ಎಲ್ಲಿ ಬಿದ್ದಿತೆಂಬುದನ್ನು ನಿಖರವಾಗಿ ಹೇಳದೇ ಇದ್ದರೆ ಹುಡುಕುವುದು ಬಲು ಕಷ್ಟ.”
ರಬಿ’ಆ ಹೇಳಿದಳು, “ಅದನ್ನು ಕೇಳ ಬೇಡ. ಆ ಪ್ರಶ್ನೆಯನ್ನು ಮಾತ್ರ ಕೇಳಲೇ ಬೇಡ. ನನಗೆ ಸಹಾಯ ಮಾಡುವ ಮನಸ್ಸು ನಿನಗಿದ್ದರೆ ಸಹಾಯ ಮಾಡು, ಇಲ್ಲದಿದ್ದರೆ ಬೇಡ. ಆದರೆ ಆ ಪ್ರಶ್ನೆಯನ್ನು ಮಾತ್ರ ಕೇಳ ಬೇಡ.”
ಹುಡುಕುತ್ತಿದ್ದವರೆಲ್ಲರೂ ಹುಡುಕುವುದನ್ನು ನಿಲ್ಲಿಸಿ ಕೇಳಿದರು, “ಏನಾಗಿದೆ ನಿನಗೆ? ನಾವೇಕೆ ಆ ಪ್ರಶ್ನೆ ಕೇಳಬಾರದು? ಅದು ಎಲ್ಲಿ ಬಿದ್ದಿತೆಂಬುದನ್ನು ನೀನು ಹೇಳದೇ ಇದ್ದರೆ ನಾವು ನಿನಗೆ ಸಹಾಯ ಮಾಡುವುದಾದರೂ ಹೇಗೆ?”
ಅವಳು ಹೇಳಿದಳು, “ಸೂಜಿ ನನ್ನ ಮನೆಯೊಳಗೆ ಬಿದ್ದಿತ್ತು.”
ಅವರು ಕೇಳಿದರು, “ನಿನಗೇನಾದರೂ ಹುಚ್ಚು ಹಿಡಿದಿದೆಯೇ? ಸೂಜಿ ಮನೆಯೊಳಗೆ ಬಿದ್ದಿದ್ದರೆ ಇಲ್ಲಿ ಏಕೆ ಅದನ್ನು ಹುಡುಕುತ್ತಿರುವೆ?”
ಅವಳು ಹೇಳಿದಳು, “ಏಕೆಂದರೆ, ಮನೆಯೊಳಗೆ ಬೆಳಕಿಲ್ಲ.”
ಯಾರೋ ಒಬ್ಬ ಹೇಳಿದ, “ಇಲ್ಲಿ ಬೆಳಕಿದ್ದರೂ ಸೂಜಿ ಇಲ್ಲಿ ಬೀಳಲಿಲ್ಲವಾದರೆ ಅದು ನಮಗೆ ಇಲ್ಲಿ ಸಿಕ್ಕುವುದಾದರೂ ಹೇಗೆ? ಮನೆಯೊಳಗೆ ಬೆಳಕು ತಂದು ಅಲ್ಲಿಯೇ ಸೂಜಿ ಹುಡುಕುವುದು ಸರಿಯಾದ ವಿಧಾನ ಅಲ್ಲವೇ?”
ರಬಿ’ಆ ನಕ್ಕಳು, “ನೀವೆಲ್ಲರೂ ಇಂಥ ಸಣ್ಣ ವಿಷಯಗಳಿಗೆ ಸಂಬಂಧಿಸಿದಂತೆ ಜಾಣರು. ನಿಮ್ಮ ಅಂತರಂಗದ ಬಾಳನ್ನು ಬಾಳಲು ಈ ಬುದ್ಧಿಶಕ್ತಿಯನ್ನು ಯಾವಾಗ ಉಪಯೋಗಿಸುವಿರಿ? ನೀವೆಲ್ಲರೂ ಹೊರಗೆ ಹುಡುಕುವುದನ್ನು ನಾನು ನೋಡಿದ್ದೇನೆ. ಸ್ವಾನುಭವದಿಂದ ನನಗೆ ಬಲು ಚೆನ್ನಾಗಿ ತಿಳಿದಿದೆ, ನೀವೇನನ್ನು ಹೊರಗೆ ಹುಡುಕುತ್ತಿರುವಿರೋ ಅದು ಒಳಗೆ ಕಳೆದುಹೋಗಿದೆ. ಆದರೂ ನೀವು ಅದನ್ನು ಹೊರಗೆ ಹುಡುಕುತ್ತಿರುವಿರಿ. ಏಕೆಂದರೆ ನಿಮ್ಮ ತರ್ಕದ ಪ್ರಕಾರ ಹೊರಗೆ ಬೆಳಕು ಇರುವುದರಿಂದ ಹೊರಗೆ ಇರುವುದನ್ನು ನಿಮ್ಮ ಕಣ್ಣುಗಳು ನೋಡುವುದು ಸಾಧ್ಯ, ಕೈಗಳು ಮುಟ್ಟುವುದು ಸಾಧ್ಯ -- ಆದ್ದರಿಂದ ಹೊರಗೇ ಹುಡುಕುತ್ತಿರುವಿರಿ. ನೀವು ನಿಜವಾಗಿಯೂ ಬುದ್ಧಿವಂತರಾಗಿದ್ದರೆ ನಿಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ಆಲೋಚಿಸಿ. ಆನಂದವನ್ನು, ಸಂತುಷ್ಟಿಯನ್ನು ಹೊರ ಜಗತ್ತಿನಲ್ಲಿ ಏಕೆ ಹುಡುಕುತ್ತಿರುವಿರಿ? ನೀವು ಅದನ್ನು ಕಳೆದುಕೊಂಡದ್ದು ಹೊರಜಗತ್ತಿನಲ್ಲಿಯೋ?”
ಅವರೆಲ್ಲರೂ ದಿಗ್ಭ್ರಾಂತರಾಗಿ ನೋಡುತ್ತಿದ್ದರು, ರಬಿ’ಆ ನಗುತ್ತಾ ಗುಡಿಸಿಲಿನೊಳಕ್ಕೆ ಹೋದಳು.

***** 

೧೦೫. ಭರವಸೆ, ಭಯ, ಜ್ಞಾನ

ಸೂಫಿ ಮುಮುಕ್ಷು ಹಸನ್‌ ಮರಣಶಯ್ಯೆಯಲ್ಲಿದ್ದಾಗ ಯಾರೋ ಒಬ್ಬ ಕೇಳಿದ, “ಹಸನ್‌ ನಿನ್ನ ಗುರು ಯಾರು?”
ನೀನು ತುಂಬ ತಡಮಾಡಿ ಈ ಪ್ರಶ್ನೆ ಕೇಳಿರುವೆ. ಈಗ ಸಮಯವಿಲ್ಲ, ನಾನು ಸಾಯುತ್ತಿದ್ದೇನೆ.”
ನೀನೊಂದು ಹೆಸರು ಮಾತ್ರ ಹೇಳಬೇಕಷ್ಟೆ. ನೀನಿನ್ನೂ ಬದುಕಿರುವೆ, ನೀನಿನ್ನೂ ಉಸಿರಾಡುತ್ತಿರುವೆ, ಆದ್ದರಿಂದ ಸುಲಭವಾಗಿ ನನಗೆ ನಿನ್ನ ಗುರುವಿನ ಹೆಸರು ಹೇಳಬಹುದು.”
ಅದು ಅಷ್ಟು ಸುಲಭವಲ್ಲ. ಏಕೆಂದರೆ ನನಗೆ ಸಹಸ್ರಾರು ಗುರುಗಳಿದ್ದರು. ಅವರ ಹೆಸರುಗಳನ್ನು ಹೇಳಲು ನನಗೆ ಅನೇಕ ತಿಂಗಳುಗಳು, ಅಲ್ಲ, ವರ್ಷಗಳು ಬೇಕು. ಆದರೂ ನಿನಗೆ ಮೂರು ಗುರುಗಳ ಕುರಿತು ಖಂಡಿತ ಹೇಳುತ್ತೇನೆ.
ನನ್ನ ಮೊದಲನೇ ಗುರು ಒಬ್ಬ ಕಳ್ಳನಾಗಿದ್ದ. ಒಮ್ಮೆ ನಾನು ಮರುಭೂಮಿಯಲ್ಲಿ ದಾರಿ ತಪ್ಪಿ ಅಲೆದಲೆದು ಹಳ್ಳಿಯೊಂದನು ತಲುಪಿದಾಗ ಬಲು ತಡವಾಗಿತ್ತು. ಅರ್ಧ ರಾತ್ರಿಯೇ ಕಳೆದುಹೋಗಿತ್ತು. ಅಂಗಡಿಗಳು ಮುಚ್ಚಿದ್ದವು, ಪ್ರಯಾಣಿಕರ ಛತ್ರಗಳೂ ಮುಚ್ಚಿದ್ದವು. ರಸ್ತೆಯಲ್ಲಿ ಒಬ್ಬನೇ ಒಬ್ಬ ಮನುಷ್ಯನೂ ಇರಲಿಲ್ಲ. ಈ ಕುರಿತು ವಿಚಾರಿಸಲೋಸುಗ ಯಾರಾದರೂ ಗೋಚರಿಸಿಯಾರು ಎಂಬ ನಿರೀಕ್ಷೆಯೊಂದಿಗೆ ಹುಡುಕತೊಡಗಿದೆ. ಒಂದು ಮನೆಯ ಗೋಡೆಯಲ್ಲಿ ರಂಧ್ರ ಕೊರೆಯಲು ಪ್ರಯತ್ನಿಸುತ್ತಿದ್ದವನೊಬ್ಬ ಗೋಚರಿಸಿದ. ನಾನೆಲ್ಲಿ ತಂಗಬಹುದು ಎಂಬುದಾಗಿ ಅವನನ್ನು ಕೇಳಿದೆ. ಅವನು ಹೇಳಿದ, ‘ನಾನೊಬ್ಬ ಕಳ್ಳ. ನಿನ್ನ ಉಡುಪು ಮತ್ತು ತೇಜಸ್ಸು ನೋಡಿದರೆ ಒಬ್ಬ ಸೂಫಿ ಮುಮುಕ್ಷುವನಂತೆ ಕಾಣುತ್ತಿರುವೆ. ಈ ಹೊತ್ತಿನಲ್ಲಿ ತಂಗಲು ಯಾವದೇ ಸ್ಥಳ ಸಿಕ್ಕುವುದು ಕಷ್ಟ. ಆದರೂ ನೀನು ನನ್ನ  ಮನೆಗೆ ಬರಬಹುದು, ಅಲ್ಲಿಯೇ ತಂಗಬಹುದು, ಒಬ್ಬ ಕಳ್ಳನ ಜೊತೆ ತಂಗಲು ಅಭ್ಯಂತರ ಇಲ್ಲ ಎಂಬುದಾದರೆ.’ ಒಂದು ಕ್ಷಣ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ಗೊಂದಲಕ್ಕೀಡಾದೆ. ಸೂಫಿಯೊಬ್ಬನಿಗೆ ಒಬ್ಬ ಕಳ್ಳ ಭಯಪಡುತ್ತಿಲ್ಲ ಅನ್ನುವುದಾದರೆ ಸೂಫಿಯೊಬ್ಬ ಕಳ್ಳನಿಗೇಕೆ ಭಯಪಡಬೇಕು? ವಾಸ್ತವವಾಗಿ ಅವನು ನನಗೆ ಭಯಪಡಬೇಕಿತ್ತು. ಆದ್ದರಿಂದ ನಾನು ಅವನೊಂದಿಗೆ ಹೋಗಲು ಒಪ್ಪಿದೆ, ಹೋದೆ ಹಾಗೂ ಆ ಕಳ್ಳನೊಡನೆ ತಂಗಿದೆ. ಅವನ ಆತಿಥ್ಯ ಎಷ್ಟು ಚೆನ್ನಾಗಿತ್ತು ಅಂದರೆ ನಾನು ಅಲ್ಲಿ ಒಂದು ತಿಂಗಳ ಕಾಲ ತಂಗಿದೆ! ಪ್ರತೀ ರಾತ್ರಿ ಅವನು ಹೇಳುತ್ತಿದ್ದ, ‘ನಾನೀಗ ನನ್ನ ಕೆಲಸಕ್ಕೆ ಹೋಗುತ್ತೇನೆ. ನೀವು ವಿಶ್ರಾಂತಿ ತೆಗೆದುಕೊಳ್ಳಿ, ಪ್ರಾರ್ಥಿಸಿ, ನಿಮ್ಮ ಕೆಲಸ ಮಾಡಿ.’ ಅವನು ಹಿಂದಕ್ಕೆ ಬಂದಾಗ ನಾನು ಕೇಳುತ್ತಿದ್ದೆ, ‘ಏನಾದರೂ ಸಿಕ್ಕಿತೇ?’ ಅವನು ಉತ್ತರಿಸುತ್ತಿದ್ದ, ‘ಇಂದು ರಾತ್ರಿ ಏನೂ ಸಿಕ್ಕಲಿಲ್ಲ. ಪರವಾಗಿಲ್ಲ, ನಾಳೆ ಪುನಃ ಪ್ರಯತ್ನಿಸುತ್ತೇನೆ.’ ಅವನನ್ನು ಹತಾಶ ಸ್ಥಿತಿಯಲ್ಲಿ ಎಂದೂ ನೋಡಲಿಲ್ಲ. ಒಂದು ತಿಂಗಳ ಕಾಲ ಅವನು ಪ್ರತೀ ದಿನ ಬರಿಗೈನಲ್ಲಿ ಹಿಂದಿರುಗುತ್ತಿದ್ದನಾದರೂ ಸಂತೋಷವಾಗಿರುತ್ತಿದ್ದ. ಅವನು ಹೇಳುತ್ತಿದ್ದ, ‘ನಾಳೆ ಪುನಃ ಪ್ರಯತ್ನಿಸುತ್ತೇನೆ. ದೈವಕೃಪೆ ಇದ್ದರೆ ನಾಳೆ ಏನಾದರೂ ಸಿಕ್ಕುತ್ತದೆ. ನೀವೂ ನನಗೋಸ್ಕರ ಪ್ರಾರ್ಥಿಸಿ. ಕನಿಷ್ಠಪಕ್ಷ ಈ ಬಡವನಿಗೆ ಸಹಾಯ ಮಾಡು ಎಂಬುದಾಗಿ ನೀವು ದೇವರಿಗೆ ಹೇಳಬಹುದಲ್ಲ.’” ಹಸನ್‌ ತನ್ನ ವಿವರಣೆ ಮುಂದುವರಿಸಿದ, “ನಾನು ಅನೇಕ ವರ್ಷಗಳಿಂದ ಧ್ಯಾನ ಮಾಡುತ್ತಿದ್ದರೂ ಏನೂ ಆಗುತ್ತಿರಲಿಲ್ಲ, ಅನೇಕ ಸಲ ನಾನು ಹತಾಶನಾದದ್ದುಂಟು, ಇವೆಲ್ಲವೂ ನಿಷ್ಪ್ರಯೋಜಕ ಎಂಬುದಾಗಿಯೂ ಆಲೋಚಿಸಿ ಎಲ್ಲವನ್ನೂ ನಿಲ್ಲಿಸಿ ಬಿಡಬೇಕೆಂದು ಆಲೋಚಿಸಿದ್ದೂ ಉಂಟು. ದೇವರು ಎಂಬುದೇ ಇಲ್ಲ, ಈ ಪ್ರಾರ್ಥಿಸುವಿಕೆ ಎಂಬುದೇ ಹುಚ್ಚುತನ, ಧ್ಯಾನ ಎಂಬುದೇ ಸುಳ್ಳು  -- ಇಂತೆಲ್ಲಾ ಆಲೋಚಿಸುವಾಗ ಪ್ರತೀ ದಿನ ರಾತ್ರಿ ನಾಳೆ ಪುನಃ ಪ್ರಯತ್ನಿಸುತ್ತೇನೆ. ದೈವಕೃಪೆ ಇದ್ದರೆ ನಾಳೆ ಏನಾದರೂ ಸಿಕ್ಕುತ್ತದೆ ಎಂಬುದಾಗಿ ಹೇಳುತ್ತಿದ್ದ ಕಳ್ಳನ ನೆನಪಾಗುತ್ತಿತ್ತು. ನಾನು ಇನ್ನೂ ಒಂದು ದಿನ ಪ್ರಯತ್ನಿಸುತ್ತಿದ್ದೆ. ಒಬ್ಬ ಕಳ್ಳನಿಗೇ ಅಷ್ಟೊಂದು ಭರವಸೆ ಇರಬೇಕಾದರೆ, ನಾನೂ ಅಷ್ಟೇ ಭರವಸೆ ಹಾಗೂ ವಿಶ್ವಾಸದಿಂದ ಕನಿಷ್ಠಪಕ್ಷ ಇನ್ನೂ ಒಂದು ದಿನವಾದರೂ ಪ್ರಯತ್ನಿಸಬಾರದೇಕೆ? ಇದು ಅನೇಕ ಬಾರಿ ಪುನರಾವರ್ತನೆ ಆಯಿತು. ಆ ಕಳ್ಳನ ನೆನಪು ಇನ್ನೂ ಒಂದು ದಿನ ಪ್ರಯತ್ನಿಸುವಂತೆ ನನ್ನನ್ನು ಪ್ರೇರೇಪಿಸುತ್ತಿತ್ತು. ಕೊನೆಗೊಂದು ದಿನ ಅದು ಜರಗಿತು, ಅದು ನಿಜವಾಗಿಯೂ ಜರಗಿತು! ನಾನು ಅವನಿಗೆ ಶಿರಬಾಗಿ ನಮಿಸಿದೆ. ನಾನು ಆ ಕಳ್ಳನಿಂದ, ಅವನ ಮನೆಯಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ಆ ದಿಕ್ಕಿನತ್ತ ಶಿರಬಾಗಿ ನಮಿಸಿದೆ. ಅವನೇ ನನ್ನ ಮೊದಲನೇ ಗುರು.
ಒಂದು ನಾಯಿ ನನ್ನ ಎರಡನೇ ಗುರು. ನನಗೆ ಬಲು ಬಾಯಾರಿಕೆ ಆಗಿತ್ತು. ಎಂದೇ ನಾನು ನದಿಯ ಕಡೆಗೆ ಹೋಗುತ್ತಿದ್ದೆ. ಆಗ ಒಂದು ನಾಯಿಯೂ ಅಲ್ಲಿಗೆ ಬಂದಿತು. ಅದಕ್ಕೂ ಬಾಯಾರಿಕೆ ಆಗಿತ್ತು. ಅದು ನದಿಯ ನೀರನ್ನು ನೋಡಿದಾಗ ಅಲ್ಲಿ ಇನ್ನೊಂದು ನಾಯಿ ಕಾಣಿಸಿತು. ಅದು ಅದರದೇ ಪ್ರತಿಬಿಂಬ ಎಂಬುದು ಅದಕ್ಕೆ ತಿಳಿದಿರಲಿಲ್ಲ. ಎಂದೇ ಅದಕ್ಕೆ ಭಯವಾಯಿತು. ಅದು ಬೊಗಳಿತು, ಇನ್ನೊಂದು ನಾಯಿಯೂ ಬೊಗಳಿತು. ಅದಕ್ಕೆ ನೀರು ಕುಡಿಯಲು ಹೆದರಿಕೆ ಆಗಿ ಹಿಂದಕ್ಕೆ ಹೋಗಲಾರಂಭಿಸಿತು. ಬಾಯಾರಿಕೆ ತೀವ್ರವಾಗಿದ್ದದ್ದರಿಂದ ಪುನಃ ನದಿಯ ಹತ್ತಿರ ಬಂದಿತು. ನೀರನ್ನು ನೋಡಿದಾಗ ಇನ್ನೊಂದು ನಾಯಿಯೂ ಕಾಣಿಸಿತು. ಬಲು ಬಾಯಾರಿಕೆ ಆಗಿದ್ದರಿಂದ ಧೈರ್ಯ ಮಾಡಿ ನೀರಿನೊಳಕ್ಕೆ ಹಾರಿತು, ಇನ್ನೊಂದು ನಾಯಿ ಮಾಯವಾದದ್ದನ್ನು ಗಮನಿಸಿತು. ನೀರು ಕುಡಿದ ನಂತರ ಈಜಿ ನದಿಯಿಂದ ಹೊರಬಂದು ಎಲ್ಲಿಗೋ ಹೋಯಿತು. ನಾನು ಇಡೀ ವಿದ್ಯಮಾನವನ್ನು ನೋಡುತ್ತಿದ್ದೆ. ದೇವರಿಂದ ನನಗೊಂದು ಸಂದೇಶ ಈ ಮುಖೇನ ಬಂದಿತೆಂಬುದು ನಾನು ತಿಳಿದೆ. ಎಷ್ಟೇ ಹೆದರಿಕೆ ಇದ್ದರೂ ನೀನು ಅಖಾಡದೊಳಕ್ಕೆ ಹಾರಲೇ ಬೇಕು.
ಅಜ್ಞಾತವಾದದ್ದರೊಳಕ್ಕೆ ಧುಮ್ಮಿಕ್ಕುವ ಮೊದಲು ನನಗೂ ನಾಯಿಯಂತೆ ಹೆದರಿಕೆ ಆಗುತ್ತಿತ್ತು. ಧುಮ್ಮಿಕ್ಕಲೋ ಬೇಡವೋ ಎಂಬ ಶಂಕೆ ಕಾಡಲಾರಂಬಿಸುತ್ತಿತ್ತು. ನಾಯಿಯಂತೆ ನಾನೂ ಹಿಂದಕ್ಕೂ ಮುಂದಕ್ಕೂ ತೊನೆದಾಡುತ್ತಿದ್ದೆ. ಆಗ ನಾಯಿಯ ನೆನಪಾಗುತ್ತಿತ್ತು. ನಾಯಿ ತನ್ನ ಭಯವನ್ನು ನಿಭಾಯಿಸಲು ಸಮರ್ಥವಾಗಿದ್ದರೆ ಅದು ನನಗೇಕೆ ಸಾಧ್ಯವಿಲ್ಲ? ಒಂದು ದಿನ ನಾನು ಅಜ್ಞಾತದೊಳಕ್ಕೆ ಧುಮಿಕಿಯೇ ಬಟ್ಟೆ. ನಾನೇ ಮಾಯವಾದೆ, ಅಜ್ಞಾತವು ಹಿಂದೆ ಉಳಿಯಿತು. ಎಂದೇ ನಾಯಿ ನನ್ನ ಎರಡನೇ ಗುರು.
ಒಂದು ಪುಟ್ಟ ಮಗು ನನ್ನ ಮೂರನೇ ಗುರು. ಒಮ್ಮೆ ನಾನು ಒಂದು ಪಟ್ಟಣವನ್ನು ಪ್ರವೇಶಿಸಿದಾಗ ಮಗುವೊಂದು ಉರಿಯುತ್ತಿರುವ ಮೋಂಬತ್ತಿಯನ್ನು ಅದು ಆರದಂತೆ ಒಂದು ಕೈ ಅಡ್ಡ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿದೆ. ಮಸೀದಿಯಲ್ಲಿ ಇಡಲು ಅದನ್ನು ಆ ಮಗು ಒಯ್ಯುತ್ತಿತ್ತು.
ನಾನು ಮಗುವನ್ನು ಕೇಳಿದೆ, ‘ಈ ಮೋಂಬತ್ತಿಯನ್ನು ನೀನೇ ಉರಿಸಿ ತರುತ್ತಿರುವೆಯಾ?’
ಹೌದು.’
ನಾನು ತಮಾಷೆಗಾಗಿ ಕೇಳಿದೆ, ‘ಈ ಬೆಳಕು ಎಲ್ಲಿಂದ ಬಂದಿತೆಂಬುದನ್ನು ಹೇಳಬಲ್ಲೆಯಾ? ಮೋಂಬತ್ತಿ ಉರಿಯದೇ ಇದ್ದಾಗ ಬೆಳಕು ಇರಲಿಲ್ಲ, ಉರಿಸಿದಾಗ ಬೆಳಕು ಬಂದಿತು. ನೀನೇ ಮೋಂಬತ್ತಿಯನ್ನು ಉರಿಸಿದ್ದರಿಂದ ಬೆಳಕು ಬರುವುದನ್ನು ನೀನು ನೋಡಿರಬೇಕು. ಅಂದ ಮೇಲೆ ಬೆಳಕು ಎಲ್ಲಿಂದ ಬಂದಿತೆಂಬುದನ್ನು ಹೇಳು ನೋಡೋಣ.’
ಮಗು ನಕ್ಕು ಮೋಂಬತ್ತಿಯನ್ನು ಆರಿಸಿ ಹೇಳಿತು, ‘ಮೋಂಬತ್ತಿ ಆರಿಸಿದಾಗ ಬೇಳಕು ಹೋಗುವುದನ್ನು ನೀನು ನೋಡಿದೆಯಲ್ಲವೇ? ಅದು ಎಲ್ಲಿಗೆ ಹೋಯಿತೆಂಬುದನ್ನು ಹೇಳು ನೋಡೋಣ.’
ಆ ಕ್ಷಣದಲ್ಲಿ ನನ್ನ ಅಹಂಕಾರ, ಗರ್ವ, ಯಾವುದನ್ನು ಜ್ಞಾನ ಅಂದುಕೊಂಡಿದ್ದೆನೋ ಅದು ಸಂಪೂರ್ಣವಾಗಿ ನಾಶವಾಯಿತು. ಆ ಕ್ಷಣದಲ್ಲಿ ನನ್ನ ಮೂರ್ಖತನದ ಅರಿವೂ ಆಯಿತು. ಆ ನಂತರ ನನ್ನ ತಿಳಿದಿರುವಿಕೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿದೆ.”

***** 

೧೦೬. ಬಡವನ ಗುಡಿಸಲು

ಒಬ್ಬ ಬಡ, ಬಲು ಬಡ ಸೌದೆ ಕಡಿಯುವವ ಕಾಡಿನ ಅಂಚಿನಲ್ಲಿದ್ದ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದ. ಅವನು ಹಾಗೂ ಅವನ ಹೆಂಡತಿ ಮಲಗಲು ಸಾಕಾಗುವಷ್ಟು ಸ್ಥಳಾವಕಾಶ ಮಾತ್ರವಿದ್ದ ಗುಡಿಸಲು ಅದಾಗಿತ್ತು, ಅಷ್ಟು ಚಿಕ್ಕದಾಗಿತ್ತು ಆ ಗುಡಿಸಲು.
ಒಂದು ದಿನ ಜೋರಾಗಿ ಮಳೆ ಸುರಿಯುತ್ತಿದ್ದ ಕಗ್ಗತ್ತಲಿನ ರಾತ್ರಿ ವೇಳೆಯಲ್ಲಿ ಯಾರೋ ಬಾಗಿಲು ತಟ್ಟಿದರು. ಹೆಂಡತಿ ಬಾಗಿಲಿನ ಸಮೀಪದಲ್ಲಿ ಮಲಗಿದ್ದಳು. ಎಂದೇ, ಗಂಡ ಹೆಂಡತಿಗೆ ಹೇಳಿದ, “ಬಾಗಿಲು ತೆರೆ. ಮಳೆ ಜೋರಾಗಿ ಬರುತ್ತಿರುವುದರಿಂದ ಆ ಮನುಷ್ಯನಿಗೆ ದಾರಿ ತಪ್ಪಿರಬೇಕು. ಕಗ್ಗತ್ತಲ ರಾತ್ರಿ, ಅಪಾಯಕಾರೀ ವನ್ಯಮೃಗಗಳು ಹೆಚ್ಚು ಇರುವ ಸ್ಥಳ ಇದು. ಬೇಗನೆ ಬಾಗಿಲು ತೆರೆ.”
ಇಲ್ಲಿ ಇನ್ನೊಬ್ಬರಿಗೆ ಜಾಗವೇ ಇಲ್ಲವಲ್ಲ
ಯಾವಾಗಲೂ ಜಾಗದ ಕೊರತೆ ಇರುವ ರಾಜನ ಅರಮನೆ ಇದಲ್ಲವಲ್ಲ. ಇದೊಬ್ಬ ಬಡವನ ಗುಡಿಸಲು. ಇಬ್ಬರು ಆರಾಮವಾಗಿ ಮಲಗಬಹುದು, ಮೂವರು ಆರಾಮವಾಗಿ ಕುಳಿತುಕೊಳ್ಳಬಹುದು. ನಾವು ಜಾಗ ಸೃಷ್ಟಿಸೋಣ. ಸುಮ್ಮನೆ ಬಾಗಿಲು ತೆರೆ.” 
ಹೆಂಡತಿ ಬಾಗಿಲು ತೆರೆದಳು. ಹೊರಗಿದ್ದವ ಒಳಬಂದ. ಅವನನ್ನು ಒಳಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದ. ಎಲ್ಲರೂ ಕುಳಿತು ಹರಟೆ ಹೊಡೆದರು, ಕತೆಗಳನ್ನು ಹೇಳಿದರು. ಮಲಗಲು ಸ್ಥಳಾವಕಾಶವಿಲ್ಲದ್ದರಿಂದ ನಿದ್ದೆ ಮಾಡುವಂತಿರಲಿಲ್ಲ, ಆದ್ದರಿಂದ ರಾತ್ರಿಯನ್ನು ಹೇಗಾದರೂ ಸವೆಸಬೇಕಿತ್ತು. ಅಷ್ಟರಲ್ಲಿ ಪುನಃ ಯಾರೋ ಬಾಗಿಲು ತಟ್ಟಿದರು.
ಹೊಸದಾಗಿ ಬಂದವ ಬಾಗಿಲಿನ ಹತ್ತಿರ ಕುಳಿತಿದ್ದ. ಸೌದೆ ಕಡಿಯುವವ ಅವನಿಗೆ ಹೇಳಿದ, “ಬಾಗಿಲು ತೆರೆ ಗೆಳೆಯ. ಯಾರೋ ದಾರಿ ತಪ್ಪಿ ಬಂದಿರುವಂತಿದೆ.”
ಅವನು ಹೇಳಿದ, “ನೀನೊಬ್ಬ ವಿಚಿತ್ರ ಮನುಷ್ಯ. ಇಲ್ಲಿ ಇನ್ನೊಬ್ಬರಿಗೆ ಸ್ಥಳವೇ ಇಲ್ಲವಲ್ಲ.”
ನೀನು ಬಾಗಿಲು ತಟ್ಟಿದಾಗ ಇದೇ ವಾದವನ್ನು ನನ್ನ ಹೆಂಡತಿಯೂ ಮಾಡಿದ್ದಳು. ಅವಳ ವಾದವನ್ನು ನಾನು ಒಪ್ಪಿಕೊಂಡಿದ್ದಿದ್ದರೆ ಕಾಡಿನ ಯಾವುದಾರೂ ಕಾಡುಪ್ರಾಣಿಗೆ ನೀನು ಆಹಾರವಾಗಿರುತ್ತಿದ್ದೆ. ನೀನೇ ಒಬ್ಬ ವಿಚಿತ್ರ ಮನುಷ್ಯ. ಏಕೆಂದರೆ ನಾವೀಗ ಕುಳಿತುಕೋಡು ರಾತ್ರಿ ಸವೆಸುತ್ತಿರುವುದು ನಿನ್ನಿಂದಾಗಿ ಎಂಬುದೇ ನಿನಗೆ ಅರ್ಥವಾದಂತಿಲ್ಲ. ಸುದೀರ್ಘ ದಿನದ ನಂತರ ನನಗೆ ಬಲು ಆಯಾಸವಾಗಿದೆ. ನಾನೊಬ್ಬ ಸೌದೆ ಕಡಿಯುವವ -- ಇಡೀ ದಿನ ನಾನು ಕಾಡಿನಲ್ಲಿ ಸೌದೆ ಕಡಿದು ತಂದು ಅದನ್ನು ಮಾರುಕಟ್ಟೆಯಲ್ಲಿ ಮಾರುತ್ತೇನೆ. ಅದರಿಂದ ಬರುವ ಹಣದಿಂದ ಬಲು ಕಷ್ಟದಿಂದ ಒಪ್ಪೊತ್ತು ಊಟಮಾಡಬಹುದು. ಬಾಗಿಲು ತೆರೆ. ಇದು ನಿನ್ನ ಗುಡಿಸಲು ಅಲ್ಲ. ಮೂರು ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದಾದ ಇಲ್ಲಿ ತುಸು ಒತ್ತೊತ್ತಾಗಿ ಕುಳಿತರೆ ಸ್ವಲ್ಪ ಕಷ್ಟವಾದರೂ ನಾಲ್ಕು ಮಂದಿ ಕುಳಿತುಕೊಳ್ಳಬಹುದು. ನಾವು ಸ್ಥಳಾವಕಾಶ ಸೃಷ್ಟಿಸೋಣ.”
ಇಷ್ಟವಿಲ್ಲದಿದ್ದರೂ ಆತ ಬಾಗಿಲು ತೆರೆಯಲೇ ಬೇಕಾಯಿತು. ಹೊರಗಿದ್ದವನು ಒಳಬಂದು ಕೃತಜ್ಞತೆಗಳನ್ನು ತಿಳಿಸಿದ. ಅವರೆಲ್ಲರೂ ಒತ್ತೊತ್ತಾಗಿ ಕುಳಿತಿದ್ದರು. ಇನ್ನು ಒಂದು ಅಂಗುಲ ಸ್ಥಳವೂ ಖಾಲಿ ಇರಲಿಲ್ಲ. ಆಗ ಇದ್ದಕ್ಕಿದ್ದಂತೆ ಬಾಗಿಲು ಬಡಿದ ಶಬ್ದವಾಯಿತಾದರೂ ಅದು ಮನುಷ್ಯರು ಬಾಗಿಲು ತಟ್ಟುವ ಶಬ್ದದಂತಿರಲಿಲ್ಲ! ಸೌದೆ ಕಡಿಯುವವನನ್ನು ಹೊರತುಪಡಿಸಿ ಉಳಿದ ಮೂವರೂ ಮೌನವಾಗಿದ್ದರಾದರೂ ಬಾಗಿಲು ತೆರೆಯಲು ಸೌದೆಕಡಿಯುವವ ಹೇಳಿಯಾನು ಎಂಬ ಭಯ ಅವರಿಗಿತ್ತು. ಅವನು ಅವರು ಅಂದುಕೊಂಡಂತೆಯೇ ಹೇಳಿದ, “ಬಾಗಿಲು ತೆಗೆಯಿರಿ. ಯಾರು ಬಾಗಿಲು ತಟ್ಟುತ್ತಿರುವುದೆಂಬುದು ನನಗೆ ತಿಳಿದಿದೆ. ಅದು ನನ್ನ ಕತ್ತೆ. ಈ ವಿಶಾಲ ಜಗತ್ತಿನಲ್ಲಿ ಇರುವ ನನ್ನ ಏಕೈಕ ಮಿತ್ರ. ನಾನು ಸೌದೆಯನ್ನು ತರುವುದು ಆ ಕತ್ತೆಯ ನೆರವಿನಿಂದ. ಅದು ಹೊರಗಿರುವುದೇ? ತುಂಬಾ ಮಳೆ ಬರುತ್ತಿದೆ. ಬಾಗಿಲು ತೆರೆಯಿರಿ.”
ಉಳಿದವರೆಲ್ಲರೂ ಇದನ್ನು ವಿರೋಧಿಸಿ ಕೇಳಿದರು, “ಇದು ಅತಿಯಾಯಿತು. ಕತ್ತೆ ಒಳಗೆ ಬಂದರೆ ನಿಲ್ಲುವುದಾದರೂ ಎಲ್ಲಿ?”
ಸೌದೆ ಕಡಿಯುವವ ಹೇಳಿದ, “ನಿಮಗೆ ಅರ್ಥವಾಗುತ್ತಿಲ್ಲ. ಇದು ಒಬ್ಬ ಬಡವನ ಗುಡಿಸಲು. ಎಂದೇ ಇಲ್ಲಿ ಬೇಕಾದಷ್ಟು ಸ್ಥಳಾವಕಾಶವಿದೆ. ಈಗ ನಾವು ಕುಳಿತಿದ್ದೇವೆ. ಕತ್ತೆ ಒಳಗೆ ಬಂದಾಗ ನಾವೆಲ್ಲರೂ ಎದ್ದು ನಿಲ್ಲಬೇಕು. ಕತ್ತೆಯನ್ನು ಮಧ್ಯದಲ್ಲಿ ನಿಲ್ಲಿಸಿ ನಾವೆಲ್ಲರೂ ಅದರ ಸುತ್ತ ನಿಂತರೆ ಅದಕ್ಕೆ ಹಿತಕರ ಅನುಭವವೂ ಆಗುತ್ತದೆ.
ಉಳಿದವರು ಉದ್ಗರಿಸಿದರು, “ನಿನ್ನ ಗುಡಿಸಿಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ಕಾಡಿನಲ್ಲಿ ಕಳೆದುಹೋಗುವದೇ ಒಳ್ಳೆಯದೇನೋ!”
ಮನೆಯ ಮಾಲಿಕನೇ ಬಾಗಿಲು ತರೆಯುವಂತೆ ಹೇಳಿದ್ದರಿಂದ ಬೇರೇನೂ ದಾರಿ ಕಾಣದೆ ಅವರು ಬಾಗಿಲನ್ನು ತೆರೆದರು. ಕತ್ತೆ ಒಳ ಬಂದಿತು. ಅದರ ಮೈನಿಂದ ನೀರು ತೊಟ್ಟಿಕ್ಕುತ್ತಿತ್ತು. ಅದನ್ನು ಮಧ್ಯದಲ್ಲಿ ನಿಲ್ಲಿಸಿ ಎಲ್ಲರೂ ಅದರ ಸುತ್ತ ನಿಲ್ಲುವಂತೆ ಹೇಳಿದ ಸೌದೆ ಕಡಿಯುವವ. ತದನಂತರ ಅವನು ಹೇಳಿದ, “ನಿಮಗೆ ಇದು ಅರ್ಥವಾಗುವುದಿಲ್ಲ. ನನ್ನ ಕತ್ತೆಯದ್ದು ದಾರ್ಶನಿಕ ಮನಸ್ಸು. ನೀವು ಏನು ಬೇಕಾದರೂ ಅದರ ಸಮ್ಮುಖದಲ್ಲಿ ಹೇಳಬಹುದು, ಅದು ಎಂದೂ ಸಮಚಿತ್ತತೆಯನ್ನು ಕಳೆದುಕೊಳ್ಳುವುದೇ ಇಲ್ಲ. ಅದು ಯಾವಾಗಲೂ ನೀವು ಹೇಳುವುದನ್ನೆಲ್ಲ ಮೌನವಾಗಿ ಕೇಳಿಸಿಕೊಳ್ಳುತ್ತದೆ.”

***** 

೧೦೭. ಅವರ್ಣನಿಯ ಜೀವನ ಸಾಗಿಸುತ್ತಿದ್ದವ

ಬಲು ಹಿಂದೆ ಮೋಜುದ್ ಎಂಬ ಹೆಸರಿನ ವ್ಯಕ್ತಿಯೊಬ್ಬನಿದ್ದ. ಅವನು ಒಂದು ಚಿಕ್ಕ ಪಟ್ಟಣದಲ್ಲಿ ಕೆಳಸ್ತರದ ಅಧಿಕಾರಿ ಹುದ್ದೆಯೊಂದನ್ನು ಗಿಟ್ಟಿಸಿಕೊಂಡಿದ್ದ. ತೂಕ ಮತ್ತು ಅಳತೆಗಳ ಪರೀಕ್ಷಾಧಿಕಾರಿಯಾಗಿ ಅವನು ತನ್ನ ವೃತ್ತಿಜೀವನವನ್ನು ಕಳೆಯುವ ಎಲ್ಲ ಲಕ್ಷಣಗಳೂ ನಿಚ್ಚಳವಾಗಿ ಗೋಚರಿಸುತ್ತಿದ್ದವು.
ಒಂದು ದಿನ ಅವನು ತನ್ನ ಮನೆಯ ಸಮೀಪದಲ್ಲಿ ಇದ್ದ ಪುರಾತನ ಕಟ್ಟಡದ ಹೂದೋಟಗಳ ಮೂಲಕ ಎಲ್ಲಿಗೋ ಹೋಗುತ್ತಿದ್ದಾಗ ಮಿರಮಿರನೆ ಹೊಳೆಯುತ್ತಿದ್ದ ನಿಲುವಂಗಿ ಧರಿಸಿದ್ದ ಖಿದೃ, ಸೂಫಿಗಳ ನಿಗೂಢ ಮಾರ್ಗದರ್ಶಿ ಖಿದೃ, ಪ್ರತ್ಯಕ್ಷನಾಗಿ ನೀನು ಉಜ್ವಲ ಭವಿಷ್ಯವಿರುವವ! ನಿನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇನ್ನು ಮೂರು ದಿನಗಳ ನಂತರ ನದೀತಟದಲ್ಲಿ ನನ್ನನ್ನು ಕಾಣು.” ಎಂಬುದಾಗಿ ಹೇಳಿ ಅದೃಶ್ಯನಾದ.
ಮೋಜುದ್‌ ತನ್ನ ಮೇಲಧಿಕಾರಿಯ ಹತ್ತಿರ ಹೋಗಿ ಬಲು ಆವೇಶದಿಂದ ತಾನು ಕೆಲಸ ಬಿಡಲೇಬೇಕಾಗಿದೆ ಎಂಬುದಾಗಿ ಹೇಳಿದ. ಈ ಸುದ್ದಿ ಬಲು ಬೇಗನೆ ಪಟ್ಟಣದಾದ್ಯಂತ ಹರಡಿತು. ಎಲ್ಲರೂ ತಮ್ಮತಮ್ಮೊಳಗೇ ಮಾತನಾಡಿಕೊಂಡರು, “ಪಾಪ ಮೋಜುದ್‌! ಅವನಿಗೆ ಹುಚ್ಚು ಹಿಡಿದಿದೆ.” ಆ ಕೆಲಸ ಮಾಡಲು ಬಹು ಮಂದಿ ಕಾತುರರಾಗಿದ್ದ ಕಾರಣ ಎಲ್ಲರೂ ಬಲು ಬೇಗನೆ ಅವನನ್ನು ಮರೆತೇ ಬಿಟ್ಟರು.
ನಿಗದಿತ ದಿನದಂದು ಮೋಜುದ್‌ ಖಿದೃನನ್ನು ಭೇಟಿಯಾದ. ಅವನು ಹೇಳಿದ, “ನಿನ್ನ ಬಟ್ಟೆಗಳನ್ನು ಹರಿದು ಹಾಕಿ ನದಿಗೆ ಹಾರು. ಪ್ರಾಯಶಃ ಯಾರಾದರೂ ನಿನ್ನನ್ನು ರಕ್ಷಿಸಿಯಾರು.”
ತನಗೆ ಹುಚ್ಚೇನಾದರೂ ಹಿಡಿದಿದೆಯೇ ಎಂಬ ಸಂಶಯ ಕ್ಷಣಕಾಲ ಮೋಜುದ್‌ನ ಮನಸ್ಸಿನಲ್ಲಿ ಮೂಡಿದರೂ ಆತ ಖಿದೃ ಹೇಳಿದಂತೆಯೇ ಮಾಡಿದ. ಅವನು ಈಜು ಬಲ್ಲವನಾದ್ದರಿಂದ ಮುಳುಗಲಿಲ್ಲವಾದರೂ ಬಹು ದೂರ ತೇಲಿಕೊಂಡು ಹೋದ. ಕೊನೆಗೆ ಒಬ್ಬ ಬೆಸ್ತ ಅವನನ್ನು ತನ್ನ ದೋಣಿಯೊಳಕ್ಕೆ ಎಳೆದು ಹಾಕಿಕೊಂಡು ಹೇಳಿದ, “ಮೂರ್ಖ, ನೀರಿನ ಹರಿವಿನ ಸೆಳೆತ ತೀವ್ರವಾಗಿದೆ. ನೀನೇನು ಮಾಡಲು ಪ್ರಯತ್ನಿಸುತ್ತಿರುವೆ?” ನನಗೆ ನಿಜವಾಗಿಯೂ ಗೊತ್ತಿಲ್ಲ,” ಎಂಬುದಾಗಿ ಉತ್ತರಿಸಿದ ಮೋಜುದ್‌. ಬೆಸ್ತ ಹೇಳಿದ, “ನೀನೊಬ್ಬ ಹುಚ್ಚ. ಆದರೂ ಅಲ್ಲಿ ಕಾಣುತ್ತಿರುವ ನನ್ನ ಜೊಂಡಿನ ಗುಡಿಸಲಿಗೆ ನಿನ್ನನ್ನು ಕರೆದೊಯ್ಯುತ್ತೇನೆ. ನಿನಗಾಗಿ ನಾನೇನು ಮಾಡಬಹುದು ಎಂಬುದನ್ನು ಆನಂತರ ಆಲೋಚಿಸೋಣ.
ಮೋಜುದ್‌ ಒಬ್ಬ ವಿದ್ಯಾವಂತ ಎಂಬುದು ಬೆಸ್ತನಿಗೆ ತಿಳಿಯಿತು. ಅವನು ಮೋಜುದ್‌ನಿಂದ ಓದಲೂ ಬರೆಯಲೂ ಕಲಿತನು. ಮೋಜುದ್‌ ಬೆಸ್ತನಿಗೆ ಅವನ ಕೆಲಸದಲ್ಲಿ ನೆರವಾಗುತ್ತಲೂ ಇದ್ದ. ಪ್ರತಿಫಲ ರೂಪದಲ್ಲಿ ಮೋಜುದ್‌ನಿಗೆ ಆಹಾರ ಸಿಕ್ಕುತ್ತಿತ್ತು. ಇಂತು ಕೆಲವು ತಿಂಗಳುಗಳು ಕಳೆದಾಗ  ಹಾಸಿಗೆಯಲ್ಲಿ ಮಲಗಿದ್ದ ಮೋಜುದ್‌ನ ಕಾಲುಗಳ ಸಮೀಪದಲ್ಲಿ ಖಿದೃ ಪ್ರತ್ಯಕ್ಷನಾಗಿ ಹೇಳಿದ, “ಈಗಲೇ ಎದ್ದೇಳು. ಬೆಸ್ತನನ್ನು ಬಿಟ್ಟು ಹೊರಡು. ನಿನಗೆ ಅಗತ್ಯವಾದದ್ದನ್ನೆಲ್ಲ ಒದಗಿಸಲಾಗುತ್ತದೆ.”
ಮೋಜುದ್‌ ತಕ್ಷಣವೇ ಬೆಸ್ತನ ದಿರಿಸಿನಲ್ಲಿಯೇ ಆ ಗುಡಿಸಲನ್ನು ಪರಿತ್ಯಜಿಸಿ ಹೊರಟ. ಅಲ್ಲಿಇಲ್ಲಿ ಸುತ್ತಾಡುತ್ತಾ ಹೆದ್ದಾರಿಯೊಂದಕ್ಕೆ ಬಂದ. ಮುಂಜಾನೆಯ ಸಮಯದಲ್ಲಿ ಕತ್ತೆಯೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ ರೈತನೊಬ್ಬನನ್ನು ನೋಡಿದ. “ನೀನು ಕೆಲಸ ಹುಡುಕುತ್ತಿರುವಿಯೇನು? ಏಕೆ ಕೇಳುತ್ತಿದ್ದೇನೆಂದರೆ ಮಾರುಕಟ್ಟೆಯಿಂದ ಕೆಲವು ಸರಕನ್ನು ತರಲು ಸಹಾಯ ಮಾಡಲು ನನಗೆ ಒಬ್ಬನ ಆವಶ್ಯಕತೆ ಇದೆ,” ಕೇಳಿದ ರೈತ. ಮೋಜುದ್‌ ರೈತನೊಂದಿಗೆ ಹೋದದ್ದಷ್ಟೇ ಅಲ್ಲದೆ, ರೈತನ ಸಹಾಯಕನಾಗಿ ಎರಡು ವರ್ಷ ಕಾಲ ಕೆಲಸ ಮಾಡಿದ. ಆ ಅವಧಿಯಲ್ಲಿ ಬೇಸಾಯದ ಕುರಿತು ಬಹಳಷ್ಟನ್ನು ಕಲಿತನಾದರೂ ಬೇರೇನನ್ನೂ ಕಲಿಯಲಿಲ್ಲ.
ಒಂದು ಅಪರಾಹ್ನ ಮೋಜುದ್‌ ಉಣ್ಣೆಯ ಹೊರೆಗಳನ್ನು ಸಿದ್ಧಪಡಿಸುತ್ತಿದ್ದಾಗ ಖಿದೃ ಪ್ರತ್ಯಕ್ಷನಾಗಿ ಹೇಳಿದ, “ಈ ಕೆಲಸ ಬಿಟ್ಟು ಹೊರಡು. ಮೋಸುಲ್‌ ನಗರಕ್ಕೆ ಹೋಗು. ನಿನ್ನ ಉಳಿತಾಯದ ಹಣ ಹೂಡಿಕೆ ಮಾಡಿ ಚರ್ಮದ ವ್ಯಾಪಾರಿಯಾಗು.”
ಅವನು ಹೇಳಿದಂತೆ ಮಾಡಿದ ಮೋಜುದ್‌.
ಮೋಜುದ್‌ ಮೋಸುಲ್‌ ನಗರದಲ್ಲಿ ಮೂರು ವರ್ಷ ಕಾಲ ಚರ್ಮದ ವ್ಯಾಪಾರಿಯಾಗಿದ್ದ. ಈ ಅವಧಿಯಲ್ಲಿ ಖಿದೃ ಅವನಿಗೆ ಕಾಣಿಸಿಕೊಳ್ಳಲೇ ಇಲ್ಲ. ಈ ವ್ಯಾಪಾರದಿಂದ ಅವನು ಗಣನೀಯ ಪರಿಮಾಣದಲ್ಲಿ ಹಣ ಉಳಿತಾಯ ಮಾಡಿದ್ದ. ಎಂದೇ ಒಂದು ಮನೆ ಕೊಂಡುಕೊಳ್ಳುವ ಕುರಿತು ಆಲೋಚಿಸುತ್ತಿದ್ದ. ಆಗ ಖಿದೃ ಕಾಣಿಸಿಕೊಂಡು ಹೇಳಿದ, “ನಿನ್ನ ಉಳಿತಾಯದ ಹಣ ನನಗೆ ಕೊಟ್ಟು ಈ ನಗರ ಬಿಟ್ಟು ಬಹು ದೂರದಲ್ಲಿರುವ ಸಮರ್‌ಕಂಡ್‌ಗೆ ಹೋಗಿ ಅಲ್ಲಿ ಒಬ್ಬ ದಿನಸಿ ವ್ಯಾಪರಿಯ ಹತ್ತಿರ ಕೆಲಸ ಮಾಡು.”
ಅವನು ಹೇಳಿದಂತೆ ಮಾಡಿದ ಮೋಜುದ್‌.
ಜ್ಞಾನೋದಯವಾದ ಕುರುಹುಗಳು ತದನಂತರ ಅವನಲ್ಲಿ ಸಂಶಯಾತೀತವಾಗಿ ಗೋಚರಿಸಲಾರಂಭಿಸಿದವು. ರೋಗಗಳನ್ನು ಅವನು ವಾಸಿ ಮಾಡುತ್ತಿದ್ದ. ಸಮಯವಿದ್ದಾಗಲೆಲ್ಲ ದಿನಾಸಿ ವ್ಯಾಪರಿಗೆ ಸಹಾಯ ಮಾಡುತ್ತಿದ್ದ. ನಿಸರ್ಗದ ನಿಗೂಢತೆಗಳ ಕುರಿತಾದ ಅವನ ಜ್ಞಾನ ಸಮಯ ಕಳೆದಂತೆಲ್ಲ ಗಾಢವಾಗುತ್ತಿತ್ತು.
ಧರ್ಮಗುರುಗಳೂ ದಾರ್ಶನಿಕರೂ ಇತರರೂ ಅವನನ್ನು ಭೇಟಿ ಮಾಡಲು ಬರಲಾರಂಭಿಸಿದರು. ಒಮ್ಮೆ ಅವರ ಪೈಕಿ ಒಬ್ಬರು ಕೇಳಿದರು, “ನೀವು ಯಾರ ಮಾರ್ಗದರ್ಶನದಲ್ಲಿ ಅಧ್ಯಯಿಸಿದಿರಿ?”  
ಮೋಜುದ್‌ ಉತ್ತರಿಸಿದ, “ಅದನ್ನು ಹೇಳುವುದು ಬಲು ಕಷ್ಟ.”
ಅವನ ಶಿಷ್ಯರು ಕೇಳಿದರು, “ನಿಮ್ಮ ವೃತ್ತಿಜೀವನವನ್ನು ಹೇಗೆ ಆರಂಭಿಸಿದರಿ?”
ಒಬ್ಬ ಕೆಳಸ್ತರದ ಅಧಿಕಾರಿಯಾಗಿ.”
ರಾಗದ್ವೇಷಗಳನ್ನು ಸ್ವತಃ ದಮನ ಮಾಡುವುದಕ್ಕೆ ಸಮಯವನ್ನು ಮೀಸಲಾಗಿಡಲೋಸುಗ ಅದನ್ನು ಬಿಟ್ಟುಬಿಟ್ಟಿರಾ?”
ಹಾಗೇನಿಲ್ಲ. ಅದನ್ನು ಸುಮ್ಮನೆ ಬಿಟ್ಟುಬಿಟ್ಟೆ ಅಷ್ಟೆ.”
ಅವನ ಜೀವನಚರಿತ್ರೆಯನ್ನು ಬರೆಯುವ ಸಲುವಾಗಿ ಕೆಲವು ಮಂದಿ ಅವನನ್ನು ಸಂಪರ್ಕಿಸಿದರು.
ಅವರು ಕೇಳಿದರು, “ನಿಮ್ಮ ಜೀವನದಲ್ಲಿ ಹಿಂದೆ ನೀವೇನಾಗಿದ್ದಿರಿ?”
ನಾನು ಒಂದು ನದಿಗೆ ಹಾರಿದೆ, ಬೆಸ್ತನಾದೆ, ತದನಂತರ ಮಧ್ಯರಾತ್ರಿಯಲ್ಲಿ ಅವನ ಜೊಂಡಿನ ಗುಡಿಸಲಿನಿಂದ ಹೊರನಡೆದೆ. ತದನಂತರ ನಾನೊಬ್ಬ ಕೃಷಿಕಾರ್ಮಿಕನಾದೆ. ಉಣ್ಣೆಯ ಹೊರೆ ಸಿದ್ಧಪಡಿಸುತ್ತಿದ್ದಾಗ ನಾನು ಬದಲಾದೆ, ಮೋಸುಲ್‌ಗೆ ಹೋಗಿ ಚರ್ಮದ ವ್ಯಾಪಾರಿ ಆದೆ. ಅಲ್ಲಿ ನಾನು ಹಣ ಉಳಿತಾಯ ಮಾಡಿದೆನಾದರೂ ಅದನ್ನು ಕೊಟ್ಟುಬಿಟ್ಟೆ. ತದನಂತರ ಸಮರ್‌ಕಂಡ್‌ಗೆ ನಡೆದುಕೊಂಡು ಹೋಗಿ ಒಬ್ಬ ದಿನಸಿ ವ್ಯಾಪಾರಿಯ ಹತ್ತಿರ ಕೆಲಸಮಾಡಿದೆ. ಈಗ ನಾನು ಇಲ್ಲಿ ಹೀಗಿದ್ದೇನೆ.”
ಆದರೆ ನಿಮ್ಮ ಈ ವಿವರಿಸಲಾಗದ ವರ್ತನೆ ನಿಮಗಿರುವ ವಿಶೇಷ ಸಾಮರ್ಥ್ಯದ ಮೇಲಾಗಲೀ ಅದ್ಭುತ ಜ್ಞಾನದ ಮೇಲಾಗಲೀ ಬೆಳಕು ಬೀರುವುದಿಲ್ಲ,” ಅಂದರು ಜೀವನಚರಿತ್ರೆ ಬರೆಯುವವರು.
ಅದು ನಿಜ,” ಒಪ್ಪಿಗೆ ಸೂಚಿಸಿದ ಮೋಜುದ್‌.
ಈ ಪ್ರಕಾರ ಜೀವನಚರಿತ್ರೆಕಾರರು ಮೋಜುದ್‌ನ ಕುರಿತಾಗಿ ಒಂದು ಅದ್ಭುತವಾದ ರೋಮಾಂಚನಕಾರಿಯಾದ ಕತೆ ರಚಿಸಿದರು: ಏಕೆಂದರೆ ಎಲ್ಲ ಸಂತರ ಕುರಿತಾಗಿ ಅವರದೇ ಆದ ವಿಶಿಷ್ಟ ಕತೆ ಇರಬೇಕು, ಅದು ಕೇಳುವವನ ಹಸಿವನ್ನುತಣಿಸುವಂತಿರಬೇಕೇ ವಿನಾ ಜೀವನದ ನೈಜತೆಗಳನ್ನು ಆಧರಿಸಿರಬೇಕೆಂದೇನೂ ಇಲ್ಲ.
ಅಂದಹಾಗೆ, ಖಿದೃನ ಹತ್ತಿರ ನೇರವಾಗಿ ಮಾತನಾಡಲು ಯಾರಿಗೂ ಅವಕಾಶ ನಿಢುವುದಿಲ್ಲ. ಈ ಕಾರಣಕ್ಕಾಗಿ ಈ ಕತೆ ನಿಜವಲ್ಲ ಅನ್ನಲಡ್ಡಿಯಿಲ್ಲ. ಇದು ಜೀವನದ ಒಂದು ನೈಜ ನಿರೂಪಣೆ. ಇದು ಮಹಾನ್ ಸೂಫಿಯೊಬ್ಬನ ನಿಜವಾದ ಜೀವನ.

***** 

೧೦೮. ಮನಸ್ಸಿನ ಪ್ರಮುಖ ಚಮತ್ಕಾರ

ಹಿಂದೊಮ್ಮೆ ಗಾರುಡಿಗ ಕುರುಬನೊಬ್ಬನಿದ್ದ. ಅವನ ಹತ್ತಿರ ಬಹಳ ಕುರಿಗಳಿದ್ದವು. ಅವನು ಬಲು ಶ್ರೀಮಂತನೂ ಆಗಿದ್ದ. ಸಾವಿರಾರು ಕುರಿಗಳಿದ್ದರೂ ಅವನು ಮಹಾ ಜಿಪುಣನಾಗಿದ್ದ. ಎಂದೇ ಅನೇಕ ಕೆಲಸದಾಳುಗಳನ್ನೇ ಆಗಲಿ, ಕಾವಲುಗಾರರನ್ನೇ ಆಗಲಿ ಇಟ್ಟುಕೊಳ್ಳಲು ಅವನಿಗೆ ಇಷ್ಟವಿರಲಿಲ್ಲ. ಯಾರಿಗೂ ಸಂಬಳ ಕೊಡಲು ಅವನು ಸಿದ್ಧನಿರಲಿಲ್ಲ. ಹೀಗಿದ್ದರೂ ಕುರಿಗಳನ್ನು ಕಳೆದುಕೊಳ್ಳಲೂ ತೋಳಗಳು ಕುರಿಗಳನ್ನು ತಿಂದುಹಾಕುವದಕ್ಕೆ ಅವಕಾಶ ನೀಡಲೂ ಅವನಿಗೆ ಇಷ್ಟವಿರಲಿಲ್ಲ. ಅಷ್ಟೂ ಕುರಿಗಳನ್ನು ಜಾಗರೂಕತೆಯಿಂದ ಅವನೊಬ್ಬನೇ ಸಂರಕ್ಷಿಸುವುದೂ ಬಲು ಕಷ್ಟವಾಗುತ್ತಿತ್ತು. 
ಈ ಸಂಕಷ್ಟದಿಂದ ಪಾರಾಗಲು ಅವನೊಂದು ಉಪಾಯ ಮಾಡಿದ. ಅವನೊಬ್ಬ ಗಾರುಡಿಗನೂ ಆಗಿದ್ದದ್ದರಿಂದ ಮೊದಲು ಕುರಿಗಳನ್ನು ಸಂಮೋಹನಗೊಳಿಸಿದ. ತದನಂತರ ಕೆಲವು ಕುರಿಗಳನ್ನು ಒಂದೆಡೆ ಕಲೆಹಾಕಿ ಪ್ರತೀ ಕುರಿಗೂ ಹೇಳಿದ, “ನೀನು ಕುರಿಯಲ್ಲ. ನೀನು ಹುಲಿ ಆದ್ದರಿಂದ ನಿನ್ನನ್ನು ಯಾರೂ ಕೊಲ್ಲುವುದಿಲ್ಲ. ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಬೇಡ. ನೀನು ಕುರಿಯಂತೆ ಭಯಪಡಲೇಬೇಡ.” ಕೆಲವಕ್ಕೆ ಹೇಳಿದ, “ನೀನು ಸಿಂಹ ---- ಇನ್ನು ಕೆಲವಕ್ಕೆ ಹೇಳಿದ, “ನೀನು ಮಾನವ  ----
ಕುರಿಗಳು ಸಂಮೋಹನಕ್ಕೆ ಒಳಗಾಗಿದ್ದದ್ದರಿಂದ ಅದನ್ನು ನಂಬಿದವು. ಪ್ರತೀ ದಿನ ಕುರುಬ ಕೆಲವು ಕುರಿಗಳನ್ನು ಮಾಂಸಕ್ಕಾಗಿ ಕೊಲ್ಲುತ್ತಿದ್ದ. ಅದನ್ನು ನೋಡುತ್ತಿದ್ದ ಇತರ ಕುರಿಗಳು ಆಲೋಚಿಸುತ್ತಿದ್ದವು, “ನಾವು ಕುರಿಗಳಲ್ಲ, ಹುಲಿಗಳು/ಸಿಂಹಗಳು/ಮಾನವರು. ಎಂದೇ ನಮ್ಮನ್ನು ಅವನು ಕೊಲ್ಲುವುದಿಲ್ಲ. ಅವನು ಕೊಲ್ಲುವುದು ಕುರಿಗಳನ್ನು ಮಾತ್ರ, ನಮ್ಮನ್ನಲ್ಲ.” ಪ್ರತೀ ದಿನ ಕೆಲವು ಕುರಿಗಳನ್ನು ಕುರುಬ ಕೊಲ್ಲುವುದು ಕಾಣುತ್ತಿದ್ದರೂ ಎಲ್ಲ ಕುರಿಗಳೂ ಅದನ್ನು ನಿರ್ಲಕ್ಷಿಸಿದವು. ಕುರುಬನ ಕಾಯಕ ನಿರಾತಂಕವಾಗಿ ಮುಂದುವರಿಯಿತು.
(ನಾವೇನಲ್ಲವೋ ಅದೇ ನಾವು ಎಂಬ ಆಲೋಚನೆಯನ್ನು ಬಿತ್ತಿ ತದನಂತರ ನಾವು ಈಗಾಗಲೇ ಅದಾಗಿದ್ದೇವೆ ಎಂಬ ಭ್ರಮೆ ಮೂಡಿಸುವುದು - ಹೇಗಿದೆ ಮನಸ್ಸಿನ ಚಮತ್ಕಾರ?)

***** 

೧೦೯. ಉಂಗುರದ ಕತೆ

ಪರ್ಶಿಯಾದ ರಾಜನೊಬ್ಬ ಹಾಕಿಕೊಳ್ಳುತ್ತಿದ್ದ ಉಂಗುರದಲ್ಲಿ ಅತ್ಯಮೂಲ್ಯವಾದ ಒಂದು ಹರಳು ಇತ್ತು. ಒಂದು ದಿನ ಅವನು ತನಗೆ ಪ್ರಿಯರಾಗಿದ್ದ ಆಸ್ಥಾನಿಕರ ಜೊತೆಯಲ್ಲಿ ಶಿರಾಝ್‌ ಸಮೀಪದಲ್ಲಿ ಇದ್ದ ಮುಸಲ್ಲ ಎಂಬ ಹೆಸರಿನ ಮಸೀದಿಗೆ ಹೋದ. ಆ ಮಸೀದಿಯ ಗುಮ್ಮಟದ ಮೇಲೆ ಆ ವಿಶಿಷ್ಟ ಉಂಗುರವನ್ನು ನೇತು ಹಾಕುವಂತೆ ತನ್ನ ನೌಕರರಿಗೆ ಆಜ್ಞಾಪಿಸಿದ. ಆ ಉಂಗುರದ ಮೂಲಕ ಯಾರು ಬಾಣ ಬಿಟ್ಟು ತೂರಿಸಬಲ್ಲರೋ ಅವರ ಸ್ವತ್ತಾಗುತ್ತದೆ ಅದು, ಎಂಬುದಾಗಿ ತದನಂತರ ಘೋಷಿಸಿದ. ೪೦೦ ಕ್ಕಿಂತ ಹೆಚ್ಚು ಬಿಲ್ಗಾರರು ಉಂಗುರದ ಮೂಲಕ ಬಾಣಬಿಡಲೋಸುಗ ಸಾಲಾಗಿ ನಿಂತರಾದರೂ ಸ್ಪರ್ಧೆಯಲ್ಲಿ ಅವರು ವಿಫಲರಾದರು. ಪಕ್ಕದ ಕಟ್ಟಡದ ಛಾವಣಿಯ ಮೇಲೆ ಒಬ್ಬ ಹುಡುಗ ಬಿಲ್ಗಾರಿಕೆಯ ಕುಶಲತೆಗಳನ್ನು ಅಭ್ಯಾಸ ಮಾಡುತ್ತಿದ್ದ. ಅದೃಷ್ಟವಶಾತ್ ಅವನು ಬಿಟ್ಟ ಒಂದು ಬಾಣ ಉಂಗುರದ ಮೂಲಕ ತೂರಿ ಹೋಯಿತು.
ರಾಜನು ತಾನು ಘೋಷಿಸಿದ್ದಂತೆ ಉಂಗುರವನ್ನು ಹುಡುಗನಿಗೆ ಕೊಟ್ಟನು. ಆಸ್ಥಾನಿಕರೂ ಅವನಿಗೆ ಅನೇಕ ಉಡುಗೊರೆಗಳನ್ನು ಕೊಟ್ಟರು. ಎಲ್ಲ ಉಡುಗೊರೆಗಳನ್ನೂ ಸ್ವೀಕರಿಸಿದ ನಂತರ ಆ ಹುಡುಗ ತನ್ನ ಬಿಲ್ಲುಬಾಣಗಳನ್ನು ಸುಟ್ಟುಹಾಕಿದನು. ಅಂತೇಕೆ ಮಾಡಿದ್ದು ಎಂಬುದನ್ನು ರಾಜನು ವಿಚಾರಿಸಿದಾಗ ಅವನು ಉತ್ತರಿಸಿದ, ಮೊದಲನೆಯ ಗೌರವಯುತ ಖ್ಯಾತಿ ಬದಲಾಗದೇ ಉಳಿಯಲಿ ಎಂಬ ಕಾರಣಕ್ಕಾಗಿ.

***** 

೧೧೦. ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ

ಸೂಫಿ ಮುಮುಕ್ಷು ಜುನ್ನೈದ್‌ನ ಹತ್ತಿರ ಶಿಷ್ಯನಾಗಲೋಸುಗ ಒಬ್ಬ ವ್ಯಕ್ತಿ ಬಂದನು. ಜುನ್ನೈದ್‌ ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿದ. ಪರಿಣಾಮವಾಗಿ ಆ ವ್ಯಕ್ತಿ ತುಸು ಅಸ್ಥಿರಮನಸ್ಕನಾದ: ಜುನ್ನೈದ್‌ ಏಕೆ ಇಷ್ಟು ಹೊತ್ತು ಮೌನವಾಗಿ ತನ್ನನ್ನು ದಿಟ್ಟಿಸಿ ನೋಡುತ್ತಿದ್ದಾನೆ ಎಂಬುದು ಅರ್ಥವಾಗದೆ.
ಕೊನೆಗೊಮ್ಮ ಜುನ್ನೈದ್‌ ಹೇಳಿದ, ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ.”
ಆ ವ್ಯಕ್ತಿ ಹೇಳಿದ, “ಅಂತಾದರೆ ನಾನು ಹಿಂಬಾಲಕನಾಗಿರಲೂ ಸಿದ್ಧನಿದ್ದೇನೆ.”
ಜುನ್ನೈದ್‌ ಹೇಳಿದ, “ಅದು ಇನ್ನೂ ಕಷ್ಟದ ಕೆಲಸ. ಇಲ್ಲಿ ಸುಲಭವಾದದ್ದು ಯಾವುದೆಂದರೆ ಗುರುವಾಗಿರುವುದು.”
ವ್ಯಕ್ತಿ ಹೇಳಿದ, “ಹಾಗಿದ್ದರೆ ನಾನು ಗುರುವಾಗಿರಲೂ ಸಿದ್ಧ.”
ಜುನ್ನೈದ್‌ ಲ್ಲಿದ್ದ ತನ್ನ ಶಿಷ್ಯರಿಗೂ ಹಿಂಬಾಲಕರಿಗೂ ಹೇಳಿದ, ತಿಳಿವಳಿಕೆಯೇ ಇಲ್ಲದಿರುವಿಕೆಗೆ ಇದೊಂದು ನಿದರ್ಶನ. ಸುಲಭ ಅನ್ನುವುದಾದರೆ ವಿದ್ಯಾರ್ಥಿಯಾಗುವ ಮುನ್ನವೇ ಈತ ಗುರುವಾಗಲು ತವಕಿಸುತ್ತಿದ್ದಾನೆ.”

***** 

೧೧೧. ಗುರುಗಳು ನನ್ನ ಹಣೆಗೆ ಮುತ್ತು ಕೊಟ್ಟರು!

ಸೂಫಿ ಮುಮುಕ್ಷು ಜುನ್ನೈದ್‌ನೂ ಹಿಂದೊಮ್ಮೆ ಅನ್ವೇಷಕನೇ ಆಗಿದ್ದ. ಆ ದಿನಗಳ ಅನುಭವಗಳ ಕುರಿತು ಅವನು ತನ್ನ ಶಿಷ್ಯರಿಗೆ ಹೇಳುತ್ತಿದ್ದ, “ನಾನು ನನ್ನ ಗುರುವನ್ನು ಮೊದಲನೇ ಸಲ ಭೇಟಿ ಮಾಡಿದಾಗ ಮೂರು ವರ್ಷ ಕಾಲ ಅವರು ನನ್ನತ್ತ ತಿರುಗಿ ನೋಡಲೇ ಇಲ್ಲ. ಆ ಅವಧಿಯಲ್ಲಿ ನಾನು ಬೆಳಗಿನಿಂದ ಸಂಜೆಯ ವರೆಗೆ ಅವರ ಸಮ್ಮುಖದಲ್ಲಿ ಕುಳಿತಿರುತ್ತಿದ್ದೆ. ಎಷ್ಟೋ ಜನ ಅವರನ್ನು ನೋಡಲೋಸುಗ ಬಂದು ಹೋಗುತ್ತಿದ್ದರು, ಅವರು ಅನೇಕರೊಂದಿಗೆ ಮಾತನಾಡುತ್ತಿದ್ದರು, ನನ್ನತ್ತ ಮಾತ್ರ ತಿರುಗಿಯೂ ನೋಡುತ್ತಿರಲಿಲ್ಲ, ನಾನು ಅಸ್ತಿತ್ವದಲ್ಲಿ ಇರಲೇ ಇಲ್ಲ ಎಂಬಂತೆ ವರ್ತಿಸುತ್ತಿದ್ದರು. ನಾನೂ ಪಟ್ಟುಬಿಡದೆ ಅಲ್ಲಿಯೇ ಇದ್ದೆ, ಏಕೆಂದರೆ ನನ್ನ ಸಮೀಪದಲ್ಲಿಯೇ ಅವರು ಇರುವಂತೆ ನನಗೆ ಭಾಸವಾಗುತ್ತಿತ್ತು, ಅವರ ಸಾನ್ನಿಧ್ಯದ ಸುಖಾನುಭವ ನನಗಾಗುತ್ತಿತ್ತು. ನಾನು ಅಲ್ಲಿಯೇ ಇದ್ದೆ -- ವಾಸ್ತವವಾಗಿ ಅವರು ನನ್ನನ್ನು ಹೆಚ್ಚುಹೆಚ್ಚು ನಿರ್ಲಕ್ಷಿಸಿದಷ್ಟೂ ಇದರಲ್ಲೇನೋ ರಹಸ್ಯವಿದೆ ಎಂಬುದಾಗಿ ನನಗನ್ನಿಸುತ್ತಿತ್ತು.”
ಮೂರು ವರ್ಷಗಳು ಕಳೆದ ನಂತರ ಗುರುಗಳು ಅವನತ್ತ ಮೊದಲ ಸಲ ನೋಡಿದರು. ಅವನೀಗ ವಿದ್ಯಾರ್ಥಿಯಲ್ಲ ಶಿಷ್ಯ ಎಂಬುದನ್ನು ತಿಳಿಸಿದ ವಿಧಾನ ಅದಾಗಿತ್ತು. ವಿದ್ಯಾರ್ಥಿಯಾಗಿದ್ದಿದ್ದರೆ ಮೂರು ವರ್ಷ ಕಾಲ ಗುರುಗಳು ತನ್ನನ್ನು ನೋಡಲಿ ಅನ್ನುವುದಕ್ಕಾಗಿ ಕಾಯುತ್ತಿರಲಿಲ್ಲ.
ತದನಂತರ ಇನ್ನೂ ಮೂರು ವರ್ಷಗಳು ಕಳೆಯಿತು. ಆ ಅವಧಿಯಲ್ಲಿ ಗುರುಗಳು ಪುನಃ ಅವನತ್ತ ನೋಡಲೇ ಇಲ್ಲ. ಮೂರು ವರ್ಷಗಳು ಕಳೆದ ನಂತರ ಗುರುಗಳು ಅವನತ್ತ ನೋಡಿ ಮುಗುಳ್ನಗೆ ಬೀರಿದರು. ಅವರ ಮುಗುಳ್ನಗು ಹೃದಯವನ್ನು ಚುಚ್ಚಿದಂತೆ ಜುನ್ನೈದ್‌ನಿಗೆ ಭಾಸವಾಯಿತು. ಅವರೇಕೆ ಮುಗುಳ್ನಗೆ ಬೀರಿದರು? ಕೇಳಲು ಜುನ್ನೈದ್‌ನಿಗೆ ಅವಕಾಶವನ್ನೇ ನೀಡಲಿಲ್ಲ ಗುರುಗಳು. ತಕ್ಷಣ ಅವರು ಇತರ ಶಿಷ್ಯರೊಂದಿಗೆ ಮಾತನಾಡಲಾರಂಭಿಸಿದರು.
ಇನ್ನೂ ಮೂರು ವರ್ಷಗಳು ಉರುಳಿದವು. ಕೊನೆಗೊಂದು ದಿನ ಗುರುಗಳು ಅವನನ್ನು ತಮ್ಮ ಸಮೀಪಕ್ಕೆ ಬರಲು ಹೇಳಿ ಅವನ ಹಣೆಗೆ ಮುತ್ತು ಕೊಟ್ಟು ಹೇಳಿದರು, “ಮಗೂ, ನೀನೀಗ ಸಿದ್ಧನಾಗಿರುವೆ. ಈಗ ನೀನು ಹೋಗು, ಸಂದೇಶವನ್ನು ಪ್ರಸಾರ ಮಾಡು.”
ಆದರೆ ಅವನಿಗೆ ಯಾವ ಸಂದೇಶವನ್ನೂ ನೇರವಾಗಿ ನೀಡಿಯೇ ಇರಲಿಲ್ಲ.
ಒಂಭತ್ತು ವರ್ಷಗಳ ಕಾಲ ಅವನು ಅಲ್ಲಿ ಇದ್ದ. ಅವರು ನೀಡಿದ ಏಕೈಕ ಸಂದೇಶ - ಒಂದು ಸಲ ಅವನತ್ತ ನೋಡಿದ್ದು, ಒಂದು ಸಲ ನೋಡಿ ಮುಗುಳ್ನಗೆ ಬೀರಿದ್ದು, ಒಂದು ಸಲ ಹಣೆಗೆ ಮುತ್ತು ಕೊಟ್ಟದ್ದು!
ಆದರೂ ಗುರುಗಳು ಅವನು ಸಿದ್ಧನಾಗಿದ್ದಾನೆ ಅಂದ ಮೇಲೆ ಅವನು ಸಿದ್ಧನಾಗಿರಲೇ ಬೇಕು. ಕೃತಜ್ಞತಾಪೂರ್ವಕವಾಗಿ ಗುರುಗಳ ಪಾದ ಮುಟ್ಟಿ ನಮಸ್ಕರಿಸಿ ಅವನು ಅಲ್ಲಿಂದ ಹೊರಟನು.
ಜುನ್ನೈದ್‌ ತನ್ನ ಶಿಷ್ಯರಿಗೆ ಇಂತು ಹೇಳುತ್ತಿದ್ದ: “ನಾನೊಬ್ಬ ವಿಚಿತ್ರ ಮನುಷ್ಯನನ್ನು ಭೇಟಿ ಮಾಡಿದ್ದೆ. ನನ್ನತ್ತ ಸರಿಯಾಗಿ ನೋಡದೆಯೇ ಒಂಭತ್ತು ವರ್ಷಗಳಲ್ಲಿ ಅವನು ನನ್ನನ್ನು ತಯಾರು ಮಾಡಿದ. ನನ್ನಲ್ಲಿ ಒಂದು ಬದಲಾವಣೆ ಆದಾಗ ಆತ ಸಂಕೇತದ ಮೂಲಕ ಸೂಚಿಸುತ್ತಿದ್ದ. ನಾನೊಬ್ಬ ಶಿಷ್ಯ, ಏನೇ ಆದರೂ ನಾನು ಅಲ್ಲಿಯೇ ಇರುತ್ತೇನೆ ಎಂಬುದು ಖಾತರಿ ಆದಾಗ ಆತ ನನ್ನನ್ನು ನೋಡಿದ. ಆ ನೋಟದ ಮೂಲಕ ಆತ ಪ್ರೀತಿಯ ಹೊಳೆಯನ್ನೇ ಹರಿಸಿದ……ಅದಕ್ಕಾಗಿ ನಾನು ಮೂರು ವರ್ಷಗಳಲ್ಲ, ಮೂರು ಜನ್ಮಗಳಷ್ಟು ಬೇಕಾದರೂ ಕಾಯಲು ಸಿದ್ಧನಿದ್ದೆ. ಅವನ ನೋಟದಲ್ಲಿ ಗಾಢವಾದ ಪ್ರೀತಿ, ಅನುಕಂಪ ತುಂಬಿತ್ತು. ಆಗ ನನಗಾದ ಆನಂದ ಅಷ್ಟಿಷ್ಟಲ್ಲ. ಹೊಸ ಅನುಭವದಲ್ಲಿ ಮಿಂದಂತಾಯಿತು. ನನಗೆ ಏನನ್ನೂ ಅವರು ಹೇಳದೇ ಇದ್ದರೂ......ಆ ಮೂರು ವರ್ಷಗಳಲ್ಲಿ ನನ್ನ ಮನಸ್ಸು ಕಾರ್ಯ ಮಾಡುವುದನ್ನೇ ನಿಲ್ಲಿಸಿತ್ತು. ನಾನು ಗುರುವನ್ನು, ಅವರ ಪ್ರತೀ ಅಂಗಸನ್ನೆಗಳನ್ನು ಏಕಾಗ್ರತೆಯಿಂದ ಗಮನಿಸುತ್ತಿದ್ದೆ. ನಿಧಾನವಾಗಿ, ಬಲು ನಿಧಾನವಾಗಿ ನಾನು ಆಲೋಚಿಸಲು ಏನೂ ಇಲ್ಲದಂತಾಯಿತು. ನಾನೇಕೆ ಅಲ್ಲಿ ಕುಳಿತಿದ್ದೇನೆ ಎಂಬುದೂ ನನಗೆ ಮರೆತು ಹೋಯಿತು -- ಆ ದಿನ ಅವರು ನನ್ನನ್ನು ನೋಡಿದರು. ಆ ನೋಟದ ಉದ್ದೇಶ ನನಗೆ ಅರ್ಥವಾಯಿತು, ಬಹುದೊಡ್ಡ ಸಫಲತೆಯ ಅನುಭವವಾಯಿತು. ಮತ್ತೆ ಮೂರು ವರ್ಷಗಳು ಕಳೆದವು. ಆತ ಮುಗುಳ್ನಗೆ ಬೀರಿದಾಗ ಎಲ್ಲವೂ ಮುಗುಳ್ನಗೆ ಸೂಸಿದಂತಾಯಿತು - ಅದರ ಸ್ಪರ್ಷ ಬಲು ಮಿದುವಾಗಿತ್ತು, ಹೃದಯಾಂತರಾಳದಲ್ಲಿ ಅದು ನನ್ನನ್ನು ತಾಕಿತು. ಏನೋ ಬದಲಾವಣೆ ಆಗಿದೆಯೆಂಬುದು ತಿಳಿಯಿತಾದರೂ ಅದೇನೆಂಬುದು ಆಗ ಅರ್ಥವಾಗಿರಲಿಲ್ಲ. ನಾನು ಶಿಷ್ಯತ್ವದಿಂದ ಅನುಯಾಯಿಯ ಸ್ತರಕ್ಕೇರಿದ್ದೆ. ಅವನು ನನ್ನ ಹಣೆಗೆ ಮುತ್ತು ಕೊಟ್ಟ ದಿನ -- ನಾನು ಗುರು ಸ್ಥಾನಕ್ಕೇರಿದ್ದೇನೆ ಎಂಬ ಪ್ರಮಾಣಪತ್ರಕ್ಕೊತ್ತಿದ ಮುದ್ರೆ ಅದಾಗಿತ್ತು. ಆ ಮುತ್ತೇ ಗುರುಗಳ ಅಂತಿಮ ಸಂದೇಶ. ಇದೆಲ್ಲ ನನಗೆ ಅರ್ಥವಾಗಲೂ ಇನ್ನೂ ಅನೇಕ ವರ್ಷಗಳು ಬೇಕಾಯಿತು.”

***** 

೧೧೨. ಗುರುವಿನ ಹುಡುಕಾಟದಲ್ಲಿ

ಒಬ್ಬ ಯುವಕ ಒಳ್ಳೆಯ ಗುರುವನ್ನು ಹುಡುಕಲಾರಂಭಿಸಿದ. ಭೂಮಿಗೆ ಒಂದು ಸುತ್ತು ಹೋಗಬೇಕಾಗಿ ಬಂದರೂ ಸರಿಯೇ ಒಬ್ಬ ಗುರುವನ್ನು, ಒಬ್ಬ ನಿಜವಾದ ಗುರುವನ್ನು, ಒಬ್ಬ ಪರಿಪೂರ್ಣವಾದ ಗುರುವನ್ನು ಹುಡುಕಲು ಆತ ನಿರ್ಧರಿಸಿದ.
ಅವನ ಹಳ್ಳಿಯ ಹೊರವಲಯದಲ್ಲಿ ಮರವೊಂದರ ಕೆಳಗೆ ಕುಳಿತುಕೊಂಡಿದ್ದ ವೃದ್ಧನೊಬ್ಬನನ್ನು, ಅವನು ಒಳ್ಳೆಯವನಂತೆ ಕಾಣುತ್ತಿದ್ದದ್ದರಿಂದ, ಭೇಟಿ ಮಾಡಿ ಕೇಳಿದ, “ನಿಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಈ ವಿಷಯದ ಕುರಿತು ಏನಾದರೂ ಕೇಳಿರುವಿರಾ ---- ಅಂದ ಹಾಗೆ ನೀವೊಬ್ಬ ಅಲೆಮಾರಿಯಂತೆ ಕಾಣುತ್ತಿರುವಿರಿ ------”
ಆ ವೃದ್ಧ ಹೇಳಿದ, “ಹೌದು. ನಾನೊಬ್ಬ ಅಲೆಮಾರಿ. ನಾನು ಜಗತ್ತಿನಾದ್ಯಂತ ಸುತ್ತಾಡಿದ್ದೇನೆ.”
ಹಾಗಿದ್ದರೆ ನೀವೇ ಸರಿಯಾದ ವ್ಯಕ್ತಿ. ನಾನು ಪರಿಪೂರ್ಣವಾದ ಗುರುವೊಬ್ಬನ ಶಿಷ್ಯನಾಗಲು ಇಚ್ಛಿಸುತ್ತೇನೆ. ನಾನು ಎಲ್ಲಿಗೆ ಹೋಗಬೇಕೆಂಬುದರ ಕುರಿತು ನೀವೇನಾದರೂ ಸಲಹೆ ನೀಡಬಲ್ಲಿರಾ?”
ವೃದ್ಧ ಅವನಿಗೆ ಕೆಲವು ವಿಳಾಸಗಳನ್ನು ಕೊಟ್ಟ. ವೃದ್ಧನಿಗೆ ಧನ್ಯವಾದಗಳನ್ನು ಅರ್ಪಿಸಿ ಆತ ಅಲ್ಲಿಂದ ಮುಂದಕ್ಕೆ ಪಯಣಿಸಿದ.
ಮೂವತ್ತು ವರ್ಷ ಕಾಲ ಆತ ಜಗತ್ತಿನಾದ್ಯಂತ ಅಲೆದಾಡಿದರೂ ಅವನ ನಿರೀಕ್ಷೆಗೆ ತಕ್ಕನಾದ ಒಬ್ಬ ವ್ಯಕ್ತಿಯೂ ಅವನಿಗೆ ಗೋಚರಿಸಲಿಲ್ಲ. ಉತ್ಸಾಹ ಕಳೆದುಕೊಂಡು ಬಲು ದುಃಖದಿಂದ ಅವನು ತನ್ನ ಹಳ್ಳಿಗೆ ಹಿಂದಿರುಗುತ್ತಿದ್ದಾಗ ಹೊರವಲಯದಲ್ಲಿ ಮರದ ಕೆಳಗೆ ಕುಳಿತಿದ್ದ ವೃದ್ಧನನ್ನು ನೋಡಿದ. ಅವನು ಈಗ ಹಣ್ಣುಹಣ್ಣು ಮುದುಕನಾಗಿದ್ದ. ಅವನನ್ನು ನೋಡಿದ ತಕ್ಷಣ ಅವನೇ ತನ್ನ ಗುರು ಎಂಬ ಆಲೋಚನೆ ಮನಸ್ಸಿನಲ್ಲಿ ಮೂಡಿತು! ಓಡಿಹೋಗಿ ಅವನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕೇಳಿದ, “ನೀವೇಕೆ ಆಗ ನನಗೆ ನೀವೇ ನನ್ನ ಗುರು ಎಂಬುದನ್ನು ತಿಳಿಸಲಿಲ್ಲ?”
ಆ ವೃದ್ಧ ಹೇಳಿದ, “ಅದು ಅದಕ್ಕೆ ತಕ್ಕ ಸಮಯವಾಗಿರಲಿಲ್ಲ. ನಿನ್ನಿಂದ ನನ್ನನ್ನು ಗುರುತಿಸಲು ಆಗ ಸಾಧ್ಯವಾಗಿರಲಿಲ್ಲ. ನಿನಗೆ ಅನುಭವದ ಆವಶ್ಯಕತೆ ಇತ್ತು. ಜಗತ್ತಿನಾದ್ಯಂತ ಸುತ್ತಾಡಿದ್ದರಿಂದ ನಿನಗೆ ಕೆಲವು ತಿಳಿವಳಿಕೆಗಳು ಲಭ್ಯವಾಗಿವೆ, ನೀನು ಅಪೇಕ್ಷಿತ ಮಟ್ಟಕ್ಕೆ ಪಕ್ವವಾಗಿರುವೆ. ಎಂದೇ ನೀನೀಗ ಸರಿಯಾಗಿ ನೋಡಬಲ್ಲೆ. ಕಳೆದ ಸಲ ನೀನು ನನ್ನನ್ನು ಭೇಟಿ ಮಾಡಿದಾಗ ನೀನು ನನ್ನನ್ನು ನಿಜವಾಗಿ ನೋಡಿರಲಿಲ್ಲ. ನನ್ನನ್ನು ಗುರುತಿಸುವುದರಲ್ಲಿ ನೀನು ವಿಫಲನಾಗಿದ್ದೆ. ನೀನು ಗುರುಗಳ ವಿಳಾಸಗಳನ್ನು ಕೇಳಿದ್ದೆ. ಅದರ ಅರ್ಥ ನೀನು ನನ್ನನ್ನು ಆಗ ಕಂಡಿರಲಿಲ್ಲ, ನನ್ನ ಇರುವಿಕೆಯ ಅನುಭವ ನಿನಗೆ ಆಗಿರಲಿಲ್ಲ, ಗುರುವಿನ ಇರುವಿಕೆಯ ಕಂಪನ್ನು ನೀನು ಗ್ರಹಿಸಲೇ ಇಲ್ಲ. ನೀನಾಗ ಸಂಪೂರ್ಣ ಕುರುಡನಾಗಿದ್ದೆ. ಆದ್ದರಿಂದ ನಾನು ನಿನಗೆ ಅನುಭವ ಆಗಲಿ ಎಂಬುದಕ್ಕೋಸ್ಕರ ಕೆಲವು ನಕಲಿ ವಿಳಾಸಗಳನ್ನು ಕೊಟ್ಟಿದ್ದೆ. ಕೆಲವೊಮ್ಮೆ ಒಬ್ಬನಿಗೆ ತಪ್ಪು ಮಾಹಿತಿ ಕೊಡುವುದೂ ಒಳ್ಳೆಯದೇ, ಏಕೆಂದರೆ ಅದರಿಂದಾಗಿ ಅವನು ಕಲಿಯುತ್ತಾನೆ. ನಾನು ಕಳೆದ ಮೂವತ್ತು ವರ್ಷಗಳಿಂದ ನಿನಗಾಗಿ ಕಾಯುತ್ತಿದ್ದೇನೆ, ಈ ಮರವನ್ನು ಬಿಟ್ಟು ಬೇರೆಡೆಗೆ ಹೋಗಲಿಲ್ಲ.”
ವಾಸ್ತವವಾಗಿ ಅವನೀಗ ಯುವಕನಾಗಿರಲಿಲ್ಲ, ಅವನಿಗೂ ವಯಸ್ಸಾಗಿತ್ತು. ಅಲ್ಲಿದ್ದ ಮರವನ್ನು ನೋಡಿದಾಗ ಅವನಿಗೆ ಆಶ್ಚರ್ಯವಾಯಿತು. ಏಕೆಂದರೆ, ಅವನಿಗೆ ಆ ಮರ ಯಾವಾಗಲೂ ಕನಸಿನಲ್ಲಿ ಕಾಣಿಸುತ್ತಿತ್ತು, ಆ ಮರದ ಕೆಳಗೆ ತನ್ನ ಗುರು ಗೋಚರಿಸುತ್ತಾನೆ ಎಂಬುದಾಗಿ ಅನ್ನಿಸುತ್ತಿತ್ತು. ಹಿಂದಿನ ಸಲ ಅವನು ಆ ಮರವನ್ನು ಗಮನಿಸಿಯೇ ಇರಲಿಲ್ಲ. ಮರ ಅಲ್ಲಿತ್ತು, ಗುರುವೂ ಅಲ್ಲಿದ್ದರು, ಎಲ್ಲವೂ ಸಿದ್ಧವಾಗಿತ್ತಾದರೂ ಅವನೇ ಸಿದ್ಧವಾಗಿರಲಿಲ್ಲ!

***** 

೧೧೩. ಆನಂದದಲ್ಲಿ ಕಳೆದುಹೋಗು

ಒಬ್ಬ ಸೂಫಿ ಮುಮುಕ್ಷುವಿನ ಜೀವನ ಎಷ್ಟು ಒಲವು ಹಾಗು ಆನಂದಭರಿತವಾಗಿತ್ತು ಅಂದರೆ ಆತನ ಇಡೀ ಜೀವನವೇ ನಗು, ಸಂಗೀತ, ನೃತ್ಯ ಇವುಗಳ ಹಿತಕರ ಮಿಶ್ರಣವಾಗಿತ್ತು. ಇಂತಿದ್ದ ಸೂಫಿ ಮುಮುಕ್ಷುವಿನ ಕುರಿತು ದೇವರಿಗೆ ವಿಶೇಷ ಆಸಕ್ತಿ ಮೂಡಿತಂತೆ. ಏಕೆಂದರೆ ಆತ ಎಂದೂ ಏನನ್ನೂ ದೇವರಿಂದ ಕೇಳಿರಲಿಲ್ಲ, ಎಂದೂ ದೇವರಿಗೆ ಪ್ರಾರ್ಥನೆ ಸಲ್ಲಿಸಿರಲೇ ಇಲ್ಲ. ಅವನ ಜೀವನವೇ ಒಂದು ಪ್ರಾರ್ಥನೆಯಂತಿದ್ದದ್ದರಿಂದ ಪ್ರತ್ಯೇಕವಾಗಿ ಪ್ರಾರ್ಥಿಸುವ ಆವಶ್ಯಕತೆಯೇ ಇರಲಿಲ್ಲ. ಅವನು ಎಂದೂ ಮಸೀದಿಗೆ ಹೋಗುತ್ತಿರಲಿಲ್ಲ, ಎಂದೂ ದೇವರ ಹೆಸರನ್ನೂ ಹೇಳುತ್ತಿರಲಿಲ್ಲ; ಏಕೆಂದರೆ ಅವನ ಇರುವಿಕೆಯೇ ದೇವರ ಇರುವಿಕೆಗೆ ಪುರಾವೆಯಂತಿತ್ತು. ದೇವರಿದ್ದಾನೆಯೇ ಇಲ್ಲವೇ ಎಂಬುದಾಗಿ ಯಾರಾದರೂ ಆತನನ್ನು ಕೇಳಿದರೆ ಅವನು ನಕ್ಕುಬಿಡುತ್ತಿದ್ದ -- ಆ ನಗುವು ದೇವರು ಇದ್ದಾನೆ ಎಂಬುದರ ಸೂಚಕವೂ ಆಗಿರಲಿಲ್ಲ, ಇಲ್ಲ ಎಂಬುದರ ಸೂಚಕವೂ ಆಗಿರಲಿಲ್ಲ.
ಈ ವಿಚಿತ್ರ ಮುಮುಕ್ಷುವಿನ ಕುರಿತಾಗಿ ಆಸಕ್ತಿ ಉಂಟಾಗಿ ದೇವರೇ ಅವನ ಹತ್ತಿರ ಬಂದು ಕೇಳಿದ, ನನಗೆ ನಿನ್ನನ್ನು ನೋಡಿ ಬಹಳ ಸಂತೋಷವಾಗಿದೆ, ಏಕೆಂದರೆ ಎಲ್ಲರೂ ನಿನ್ನಂತೆಯೇ ಇರಬೇಕೆಂಬುದು ನನ್ನ ಇಚ್ಛೆ. ಒಂದು ಗಂಟೆ ಕಾಲ ಪ್ರಾರ್ಥನೆ ಮಾಡಿ ತದನಂತರದ ೨೩ ಗಂಟೆ ಕಾಲ ಅದಕ್ಕೆ ವಿರುದ್ಧವಾಗಿ ವರ್ತಿಸಬೇಕೆಂದು ನಾನು ಬಯಸುವುದಿಲ್ಲ, ಮಸೀದಿಯನ್ನು ಪ್ರವೇಶಿಸುವಾಗ ಎಲ್ಲರೂ ಭಕ್ತರೂ ಶ್ರದ್ಧಾವಂತರೂ ಆಗಿ ಅಲ್ಲಿಂದ ಹೊರಬಂದ ತಕ್ಷಣ ಮೊದಲಿನಂತೆಯೇ ಕೋಪಿಷ್ಟರೂ, ಅಸೂಯೆ ಪಡುವವರೂ, ವ್ಯಾಕುಲಿಗಳೂ, ಹಿಂಸಾಪರರೂ ಆಗಬೇಕೆಂಬುದೂ ನನ್ನ ಇಚ್ಛೆಯಲ್ಲ. ನಾನು ನಿನ್ನನ್ನು ಬಹುಕಾಲದಿಂದ ಗಮನಿಸುತ್ತಿದ್ದೇನೆ, ಮೆಚ್ಚಿದ್ದೇನೆ. ಎಲ್ಲರೂ ಇರಬೇಕಾದದ್ದೇ ಹೀಗೆ - ನೀನೇ ಪ್ರಾರ್ಥನೆ ಆಗಿರುವೆ. ಇಲ್ಲಿಯ ವರೆಗೆ ನೀನು ಯಾರೊಂದಿಗೂ ವಾದ ಮಾಡಿಲ್ಲ, ಒಂದು ಸಲವೂ ನನ್ನ ಹೆಸರನ್ನು ಹೇಳಿಲ್ಲ. ವಾಸ್ತವವಾಗಿ ಇವೆಲ್ಲವೂ ಅನವಶ್ಯಕವಾದವು. ನೀನಾದರೋ ನಿಜವಾಗಿ ಜೀವಿಸುತ್ತಿರುವೆ, ಎಲ್ಲರನ್ನೂ ಪ್ರೀತಿಸುತ್ತಿರುವೆ, ನೀನು ಸದಾ ಹರ್ಷಚಿತ್ತನಾಗಿರುವುದರಿಂದ ಬೇರೆ ಭಾಷೆಯೇ ಬೇಕಿಲ್ಲ; ನಿನ್ನ ಇರುವಿಕೆಯೇ ನನ್ನ ಅಸ್ತಿತ್ವಕ್ಕೆ ಪುರಾವೆ. ನಾನು ನಿನ್ನನ್ನು ಆಶೀರ್ವದಿಸಲು ಇಚ್ಛಿಸುತ್ತೇನೆ. ನೀನು ಏನು ಬೇಕಾದರೂ ಕೇಳಬಹುದು.”
ಆದರೆ ನನಗೇನೂ ಬೇಡವಲ್ಲ! ನಾನು ಸಂತೋಷವಾಗಿದ್ದೇನೆ, ಇದಕ್ಕಿಂತ ಹೆಚ್ಚಿನದೇನನ್ನೂ ನನಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಕ್ಷಮಿಸು, ನಾನೇನನ್ನೂ ಕೇಳುವುದಿಲ್ಲ, ಏಕೆಂದರೆ ನನಗೆ ಬೇರೆ ಯಾವುದರ ಆವಶ್ಯಕತೆಯೂ ಇಲ್ಲ. ನೀನು ಉದಾರ ಹೃದಯಿ, ನೀನು ಪ್ರೇಮಮಯಿ, ನೀನು ಕಾರುಣ್ಯಮಯಿ, ಆದರೂ ನಾನು ತುಸು ಹೆಚ್ಚೇ ತುಂಬಿದವನು, ನನ್ನೊಳಗೆ ಇನ್ನೇನನ್ನೂ ತುಂಬಿಸಲು ಸ್ಥಳವೇ ಇಲ್ಲ. ನೀನು ನನ್ನನ್ನು ಕ್ಷಮಿಸಲೇ ಬೇಕು, ನಾನೇನನ್ನೂ ಕೇಳಲಾರೆ.”
ನೀನೇನನ್ನೂ ಕೇಳುವುದಿಲ್ಲ ಎಂಬುದನ್ನು ನಾನು ಊಹಿಸಿದ್ದೆ. ಆದರೆ ನಿನಗಾಗಿ ಏನನ್ನೂ ನೀನು ಕೇಳದೇ ಇದ್ದರೂ ಬೇರೆಯವರಿಗಾಗಿ ನೀನು ಏನನ್ನಾದರೂ ಕೇಳಬಹುದಲ್ಲ? ಸಂಕಷ್ಟದಲ್ಲಿ ಇರುವವರು, ರೋಗಗ್ರಸ್ತರು, ಕೃತಜ್ಞತೆ ಸಲ್ಲಿಸಬಹುದಾದಂಥದ್ದು ಏನೂ ಇಲ್ಲದವರು ಕೋಟಿಗಟ್ಟಲೆ ಮಂದಿ ಇದ್ದಾರಲ್ಲ,
ಅವರಿಗಾಗಿ ಏನನ್ನಾದರೂ ಕೇಳಬಹುದು. ಪವಾಡಗಳನ್ನು ಮಾಡುವ ಸಾಮರ್ಥ್ಯವನ್ನು ನಿನಗೆ ಕೊಡಬಲ್ಲೆ, ಅದರಿಂದ ಆ ಎಲ್ಲರ ಜೀವನವನ್ನೇ ಬದಲಿಸಬಹುದು.”
ನೀನು ಇಷ್ಟು ಒತ್ತಾಯ ಮಾಡುವುದಾದರೆ ನಾನು ನಿನ್ನ ಉಡುಗೊರೆಗಳನ್ನು ಒಂದು ಷರತ್ತಿಗೆ ಒಳಪಟ್ಟು ಸ್ವೀಕರಿಸುತ್ತೇನೆ.”
ಏನು ಷರತ್ತು? ನೀನು ನಿಜವಾಗಿಯೂ ವಿಚಿತ್ರ ಮನುಷ್ಯ. ನಿನ್ನ ಷರತ್ತೇನು?”
ನನ್ನದು ಒಂದೇ ಒಂದು ಷರತ್ತು - ನಿನ್ನಿಂದ ನನ್ನ ಮೂಲಕ ಏನು ನಡೆಯುತ್ತಿದೆ ಎಂಬುದರ ಅರಿವು ನನಗೆ ಆಗಬಾರದು. ಅದು ನನ್ನ ಬೆನ್ನಹಿಂದೆ ಜರಗಬೇಕು. ಅದು ನನ್ನ ನೆರಳಿನ ಮೂಲಕ ಆಗಬೇಕು, ನನ್ನ ಮೂಲಕವಲ್ಲ. ನಾನು ಹೋಗುತ್ತಿರುವಾಗ ನನ್ನ ನೆರಳು ಒಂದು ಒಣ ಮರದ ಮೇಲೆ ಬಿದ್ದರೆ ಅದು ಪುನಃ ಜೀವಂತವಾಗಿ ಫಲಪುಷ್ಪಭರಿತವಾಗಬೇಕು - ಅದರೆ ಅದರ ಅರಿವು ನನಗಾಗಬಾರದು, ಏಕೆಂದರೆ ಈಗ ನಾನಿರುವ ಸ್ತರದಿಂದ ಕೆಳಕ್ಕೆ ಬೀಳಲು ನಾನು ಇಚ್ಛಿಸುವುದಿಲ್ಲ. ಅಕಸ್ಮಾತ್ ಅದು ನನಗೆ ತಿಳಿದರೆ - ಅದು ನಾನು ಅಥವ ದೇವರು ನನ್ನ ಮುಖೇನ ಮಾಡಿದ್ದು ಎಂಬುದು ತಿಳಿದರೆ - ಅದು ಬಲು ಅಪಾಯಕಾರಿ. ಎಂದೇ ಈ ಷರತ್ತು - ಒಬ್ಬ ಕುರುಡನ ಕುರುಡುತನ ಹೋಗಲಿ, ಆದರೆ ಅದು ನನ್ನಿಂದಾದದ್ದು ಎಂಬುದು ಅವನಿಗೂ ತಿಳಿಯಬಾರದು, ನನಗೂ ತಿಳಿಯಬಾರದು. ನನ್ನ ಬೆನ್ನಹಿಂದೆ ನನ್ನ ನೆರಳು ಎಲ್ಲ ಪವಾಡಗಳನ್ನು ಮಾಡಲಿ. ನೀನು ನನ್ನ ಈ ಷರತ್ತನ್ನು ಒಪ್ಪಿಕೊಳ್ಳುವುದಾದರೆ ಮಾತ್ರ, ನೆನಪಿರಲಿ ನನಗೇನೂ ತಿಳಿಯಕೂಡದು -- ಏಕೆಂದರೆ ಈಗ ನಾನು ಸಂತೋಷವಾಗಿದ್ದೇನೆ, ಆನಂದವಾಗಿದ್ದೇನೆ. ಪುನಃ ನನ್ನನ್ನು ಸಂಕಷ್ಟಭರಿತ ಜಗತ್ತಿಗೆ ಎಳೆದು ಹಾಕಬೇಡ. ಪುನಃ ನಾನುಆಗುವಂತೆ ಮಾಡಬೇಡ.”
ದೇವರು ಅವನಿಗೆ ಹೇಳಿದರು, “ನೀನು ವಿಚಿತ್ರ ವ್ಯಕ್ತಿ ಮಾತ್ರವಲ್ಲ, ಅದ್ವಿತೀಯನೂ ಅಪೂರ್ವವಾದವನೂ ಆಗಿರುವೆ. ನೀನು ಇಚ್ಛಿಸುವಂತೆಯೇ ಆಗಲಿ. ನಿನ್ನ ಸುತ್ತಲೂ ನಿನ್ನಿಂದಾಗಿ ಆಗುವ ಒಳಿತುಗಳು ಯಾವುವೂ ನಿನಗೆ ಎಂದಿಗೂ ತಿಳಿಯುವುದಿಲ್ಲ. ನೀನು ಹೋದೆಡೆಯೆಲ್ಲ ಪವಾಡಗಳು ಜರಗುತ್ತವೆ. ಅವು ನಿನ್ನಿಂದಾಗಿ ಆದವುಗಳು ಎಂಬುದು ನಿನಗೇ ಆಗಲಿ ಜನರಿಗೇ ಆಗಲಿ ತಿಳಿಯುವುದಿಲ್ಲ. ನಿನ್ನ ಷರತ್ತನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ.”

***** 

೧೧೪. ನೀನು ನೀನೇ ಆಗಿರಲಿಲ್ಲವೇಕೆ?

ಹಸ್ಸಿದ್‌ನ ಮುಮುಕ್ಷು ಜೂಸಿಯಾ ಮರಣಶಯ್ಯೆಯಲ್ಲಿದ್ದ. ಇದ್ದಕ್ಕಿದ್ದಂತೆ ಆತ ಅಳಲಾರಂಭಿಸಿದ. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು, ಅವನು ನಡುಗುತ್ತಿದ್ದ.
ಯಾರೋ ಕೇಳಿದರು, “ಏನು ವಿಷಯ? ಏಕೆ ನಡುಗುತ್ತಿರುವೆ?”
ಅವನು ವಿವರಿಸಿದ, “ನಾನು ಒಂದು ನಿರ್ದಿಷ್ಟ ಕಾರಣಕ್ಕಾಗಿ ನಡುಗುತ್ತಿದ್ದೇನೆ. ಇದು ನನ್ನ ಜೀವನದ ಅಂತಿಮ ಕ್ಷಣ, ನಾನು ಸಾಯುತ್ತಿದ್ದೇನೆ. ಸಧ್ಯದಲ್ಲಿಯೇ ನಾನು ದೇವರಿಗೆ ಮುಖಾಮುಖಿಯಾಗುತ್ತೇನೆ. ಅವನು ನನ್ನನ್ನು ಖಂಡಿತವಾಗಿ ನೀನೇಕೆ ಮೋಸೆಸ್‌ ಆಗಿರಲಿಲ್ಲ ಎಂಬುದಾಗಿ ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ನಾನು ಹೇಳುತ್ತೇನೆ, ‘ಮಹಾಪ್ರಭು ಏಕೆಂದರೆ ನೀವು ನನಗೆ ಮೋಸೆಸ್‌ನ ಗುಣಲಕ್ಷಣಗಳನ್ನು ಕೊಟ್ಟಿರಲಿಲ್ಲ’; ಏನೂ ಸಮಸ್ಯೆ ಉದ್ಭವಿಸುವುದೇ ಇಲ್ಲ. ಅವನು ನನ್ನನ್ನು ನೀನೇಕೆ ರಬ್ಬಿಅಕಿಬಾ ಆಗಿರಲಿಲ್ಲ ಎಂಬುದಾಗಿಯೂ ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ನಾನು ಹೇಳುತ್ತೇನೆ, ‘ಮಹಾಪ್ರಭು ಏಕೆಂದರೆ ನೀವು ನನಗೆ ರಬ್ಬಿಅಕಿಬಾ ‌ನ ಗುಣಲಕ್ಷಣಗಳನ್ನು ಕೊಟ್ಟಿರಲಿಲ್ಲ.’ ನಾನು ನಡುಗುತ್ತಿರುವುದು ಏಕೆಂದರೆ, ಒಂದು ವೇಳೆ ಅವನು ಜೂಸಿಯಾ ನೀನೇಕೆ ಜೂಸಿಯಾ ಆಗಿರಲಿಲ್ಲ ಎಂಬುದಾಗಿ ಕೇಳಿದರೆ ನನ್ನ ಹತ್ತಿರ ಉತ್ತರವೇ ಇಲ್ಲ. ಆಗ ನಾನು ನಾಚಿಕೆಯಿಂದ ತಲೆ ತಗ್ಗಿಸಲೇ ಬೇಕಾಗುತ್ತದೆ. ಅದಕ್ಕಾಗಿ ನಾನು ನಡುಗುತ್ತಿದ್ದೇನೆ, ಅಳುತ್ತಿದ್ದೇನೆ. ನನ್ನ ಜೀವಿತಾವಧಿಯಲ್ಲಿ ನಾನು ಮೋಸೆಸ್‌ನಂತೆಯೋ ರಬ್ಬಿ ಅಕಿಬಾನಂತೆಯೋ ಬೇರೆ ಯಾರಂತೆಯೋ ಆಗಲು ಪ್ರಯತ್ನಿಸುತ್ತಿದ್ದೆ. ಆದರೆ ದೇವರು ನಾನು ಜೂಸಿಯಾನಂತೆ ಇರಬೇಕೆಂಬುದ್ದಾಗಿ ಇಚ್ಛಿಸಿದ್ದನೇ ವಿನಾ ಇನ್ನಾರಂತೆಯೋ ಅಲ್ಲ. ಈಗ ನನಗೆ ಭಯವಾಗುತ್ತಿದೆ, ಎಂದೇ ನಡುಗುತ್ತಿದ್ದೇನೆ. ದೇವರು ಆ ಪ್ರಶ್ನೆ ಕೇಳಿದರೆ ನಾನೇನು ಉತ್ತರ ಕೊಡಲು ಸಾಧ್ಯ? ನೀನೇಕೆ ಜೂಸಿಯಾ ಆಗಿರಲಿಲ್ಲ? ಜೂಸಿಯಾ ಆಗಿರಲು ಬೇಕಾಗಿದ್ದ ಎಲ್ಲ ಗುಣಲಕ್ಷಣಗಳನ್ನೂ ನಿನಗೆ ಕೊಟ್ಟಿದ್ದೆ. ಅದನ್ನೇಕೆ ನೀನು ಗಮನಿಸಲಿಲ್ಲ?’ ಬೇರೆಯವರನ್ನು ಅನುಕರಿಸುವ ಭರಾಟೆಯಲ್ಲಿ ನಾನು ನಾನಾಗಿರಲು ಸಿಕ್ಕಿದ್ದ ಅವಕಾಶ ಕಳೆದುಕೊಂಡೆ.”

***** 

೧೧೫. ಪಕ್ಷಿಗಳು ಇರುವುದೇ  ಹಾರಾಡುವುದಕ್ಕಾಗಿ

ಒಬ್ಬ ತನ್ನ ಮನೆಯ ಹೊರಗೆ ಪಂಜರದಲ್ಲಿ ಬಂಧಿಸಿ ಇಟ್ಟಿದ್ದ ಅನೇಕ ಪಕ್ಷಿಗಳನ್ನು ಹಸ್ಸಿದ್‌ನ ಮುಮುಕ್ಷು ಜೂಸಿಯಾ ಎಂಬಾತ ಪರ್ವತ ಪ್ರದೇಶದಲ್ಲಿ ಅಡ್ಡಾಡುತ್ತಿದ್ದಾಗ ನೋಡಿದ. ಜೂಸಿಯಾ ಪಂಜರದ ಬಾಗಿಲು ತೆರೆದ -- ಏಕೆಂದರೆ ಪಕ್ಷಿಗಳು ಇರುವುದೇ ಹಾರಾಡುವುದಕ್ಕಾಗಿ -- ಎಲ್ಲ ಪಕ್ಷಿಗಳೂ ಹಾರಿಹೋದವು.
ಪಂಜರದ ಮಾಲಿಕ ತನ್ನ ಮನೆಯಿಂದ ಹೊರಗೋಡಿಬಂದು ಕೇಳಿದ, “ಇದೇನು ಮಾಡಿದೆ ನೀನು?”
ಜೂಸಿಯಾ ಹೇಳಿದ, “ಪಕ್ಷಿಗಳಿರುವುದೇ ಹಾರಾಡುವುದಕ್ಕಾಗಿ. ನೋಡು, ನೋಡು, ಹಾರಾಡುವಾಗ ಅವು ಎಷ್ಟು ಸುಂದರವಾಗಿ ಕಾಣಿಸುತ್ತವೆ?”
ಆದರೆ ಆ ಪಂಜರದ ಮಾಲಿಕನ ಆಲೋಚನೆ ಬೇರೆಯದೇ ಆಗಿತ್ತು. ಅವನು ಜೂಸಿಯಾನಿಗೆ ಚೆನ್ನಾಗಿ ಹೊಡೆದ. ಅವನ ಇಡೀ ದಿನ ನಾಶವಾಗಿತ್ತು, ಆ ದಿನ ಮಾರುಕಟ್ಟೆಗೆ ಹೋಗಿ ಆ ಪಕ್ಷಿಗಳನ್ನು ಮಾರುವ ಯೋಜನೆ ಅವನದಾಗಿತ್ತು, ತದನಂತರ ಮಾಡಬೇಕಾದ ಕೆಲಸಗಳು ಅನೇಕವಿದ್ದವು -- ಈಗ ಜೂಸಿಯಾ ಅವನ ಎಲ್ಲ ಯೋಜನೆಗಳನ್ನೂ ನಾಶ ಮಾಡಿದ್ದ.
ಅವನು ಜೂಸಿಯಾನಿಗೆ ಚೆನ್ನಾಗಿ ಹೊಡೆಯುತ್ತಲೇ ಇದ್ದ,  ಜೂಸಿಯಾ ನಗುತ್ತಲೇ ಇದ್ದ, ಜೂಸಿಯಾ ನಲಿಯುತ್ತಿದ್ದ -- ಆ ಮಾಲಿಕ ಹೊಡೆಯುತ್ತಲೇ ಇದ್ದ! ಜೂಸಿಯಾ ಒಬ್ಬ ಹುಚ್ಚನಿರಬೇಕು ಎಂಬುದಾಗಿ ಆ ಮಾಲಿಕ ತೀರ್ಮಾನಿಸಿದ. ಅವನು ಹೊಡೆಯುವುದನ್ನು ನಿಲ್ಲಿಸಿದಾಗ ಜೂಸಿಯಾ ಕೇಳಿದ, “ ಹೊಡೆಯುವುದು ಮುಗಿಯಿತೋ, ಇಲ್ಲ ಇನ್ನೂ ಬಾಕಿ ಇದೆಯೋ? ಮುಗಿದಿದ್ದರೆ ನಾನು ಹೋಗುತ್ತೇನೆ.” ಮಾಲಿಕನಿಗೆ ಉತ್ತರ ಕೊಡಲು ಆಗಲಿಲ್ಲ. ಉತ್ತರ ಕೊಡಬೇಕೆಂದರೂ ಏನೆಂದು ಕೊಡುವುದು? ಈ ಮನುಷ್ಯ ನಿಜವಾಗಿಯೂ ಹುಚ್ಚನಾಗಿರಲೇ ಬೇಕು! ಜೂಸಿಯಾ ಆನಂದದಿಂದ ಹಾಡಲಾರಂಭಿಸಿದ. ಅವನಿಗೆ ಬಲು ಖುಷಿಯಾಗಿತ್ತು -- ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಿರುವುದನ್ನು ನೋಡಿ ಆನಂದಿಸುತ್ತಿದ್ದ, ಇದರಿಂದಾಗಿ ಆ ಮಾಲಿಕ ಹೊಡೆಯುತ್ತಿದ್ದರೂ ಅವನಿಗೆ ನೋವಾಗಿರಲಿಲ್ಲ, ಇದೂ ಅವನ ಆನಂದಕ್ಕೆ ಕಾರಣವಾಗಿತ್ತು. ಏಟುಗಳನ್ನು ಉಡುಗೊರೆಯಾಗಿ ಸ್ವೀಕರಿಸಲು ಸಾಧ್ಯವಾದದ್ದಕ್ಕೆ ಅವನಿಗೆ ಆನಂದವಾಗಿತ್ತು. ದೇವರಿಗೆ ಕೃತಜ್ಞತೆಗಳನ್ನು ಅರ್ಪಿಸಲು ಪೆಟ್ಟು ತಿಂದ ನಂತರವೂ ಸಾಧ್ಯವಾದದ್ದಕ್ಕೆ ಅವನಿಗೆ ಆನಂದವಾಯಿತು. ಯಾರನ್ನೂ ಅವನು ದೂರುವಂತೆಯೇ ಇರಲಿಲ್ಲ.
ಜೂಸಿಯಾನ ಮನೋಧರ್ಮ ಇಡೀ ಸನ್ನಿವೇಶದಲ್ಲಿ ಭಾರೀ ಬದಲಾವಣೆಯನ್ನೇ ಉಂಟುಮಾಡಿತ್ತು! ಬಂದದ್ದೆಲ್ಲವನ್ನೂ ಅವಿರುವ ಹಾಗೆಯೇ ಸಂತೋದಿಂದ ಸ್ವೀಕರಿಸುವ ಮನೋಧರ್ಮ!!!

***** 

೧೧೬. ಮೂರು ಪ್ರಶ್ನೆಗಳು


ಒಬ್ಬ ಮನುಷ್ಯ ತನ್ನ ಹತ್ತಿರ ಏನೇನು ಸೌಲಭ್ಯಗಳು ಇರಬೇಕೆಂದು ಬಯಸಬಹುದೋ ಅವೆಲ್ಲವೂ ಒಬ್ಬ ಸುಲ್ತಾನನ ಹತ್ತಿರ ಇದ್ದವು. ಆದರೂ ಜೀವನದ ಉದ್ದೇಶ ಏನೆಂಬುದು ಅವನಿಗೆ ತಿಳಿದಿರಲಿಲ್ಲ. ಈ ಮುಂದಿನ ಮೂರು ಪ್ರಶ್ನೆಗಳು ಅವನನ್ನು ಕಾಡಲಾರಂಭಿಸಿದವು:
. ನಾನೇನು ಮಾಡಬೇಕು?
. ನಾನು ಮಾಡಬೇಕೆಂದು ದೇವರು ಹೇಳಿದ್ದನ್ನು ನಾನು ಯಾರೊಂದಿಗೆ ಮಾಡಬೇಕು?
. ಅದನ್ನು ನಾನು ಯಾವಾಗ ಮಾಡಬೇಕು?
ಎಲ್ಲ ರೀತಿಯ ವಿವೇಕಿಗಳನ್ನು ಕರೆಯಿಸಿ ಈ ಕುರಿತಾದ ಸಲಹೆಗಳನ್ನು ನೀಡುವಂತೆ ಸುಲ್ತಾನ ಅವರನ್ನು ಕೇಳುತ್ತಿದ್ದ. ಆ ಸಂದರ್ಭದಲ್ಲಿ ಯಾರೋ ಅವನಿಗೆ ಹೇಳಿದರು - ಬಹು ದೂರದ ಒಂದೂರಿನಲ್ಲಿ ಇರುವ ಚಿಷ್ತಿ ಎಂಬ ಫಕೀರನನ್ನು ಕೇಳಿದರೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆತೀತು. ತಕ್ಷಣವೇ ಆ ಫಕೀರನನ್ನು ಕಾಣಲೋಸುಗ ಸುಲ್ತಾನ ತ್ರಾಸದಾಯಕವಾದ ಸುದೀರ್ಘ ಪ್ರಯಾಣವನ್ನು ಕೈಗೊಂಡ. ಅನೇಕ ವಾರಗಳ ಕಾಲ ಪಯಣಿಸಿ ಸುಲ್ತಾನ ಆ ಫಕೀರನನ್ನು ಭೇಟಿ ಮಾಡಿದ. ತನ್ನ ಸ್ವಂತ ಜಮೀನಿನಲ್ಲಿ ಆ ಫಕೀರ ಉಳುಮೆ ಮಾಡುತ್ತಿದ್ದ. ಅವನೊಬ್ಬ ಬಲು ಸರಳ ವ್ಯಕ್ತಿಯಾಗಿದ್ದನೇ ವಿನಾ ದಡ್ಡನಾಗಿರಲಿಲ್ಲ. ಒಂದು ಪರ್ಷಿಯನ್‌ ಭಾಷೆಯ ಚತುಷ್ಪದಿಯನ್ನು ಪುನಃಪುನಃ ಹಾಡುತ್ತಾ ತನ್ನ ಕೆಲಸ ಮಾಡುತ್ತಿದ್ದ.

ಜ್ಞಾನಕ್ಕೂ ಅತೀತವಾದ ಕೆಲಸವೊಂದಿದೆ, ಅದನ್ನು ಮನಗಾಣು ಹೋಗು!
ಅನರ್ಘ್ಯಮಣಿ ಗಳಿಸಲೋಸುಗ ಶ್ರಮಿಸದಿರು, ಗಣಿಯೇ ನೀನಾಗು ಹೋಗು!
ಹೃದಯವೊಂದು ತಾತ್ಕಾಲಿಕ ನಿವಾಸ, ಅದನ್ನು ತೊರೆದು ಬಾ!
ಆತ್ಮವೇ ಅಂತಿಮ ನಿವಾಸ, ಅದನ್ನು ಮನಗಾಣು ಹೋಗು!’

ಸುಲ್ತಾನನಿಗೆ ಪರ್ಷಿಯನ್‌ ಕವಿತೆಗಳಲ್ಲಿ ಏನೇನೂ ಆಸಕ್ತಿ ಇರಲಿಲ್ಲವಾದ್ದರಿಂದ ಅವನು ತನಗೆ ಉತ್ತರ ಬೇಕಿದ್ದ ಮೂರು ಪ್ರಶ್ನೆಗಳನ್ನು ಫಕೀರನಿಗೆ ಕೇಳಿದ. ಫಕೀರ ಆ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೇ ತನ್ನ ಕೆಲಸವನ್ನು ಮಾಡುತ್ತಲೇ ಇದ್ದ. ಇದರಿಂದ ಸುಲ್ತಾನನಿಗೆ ಕೋಪ ಬಂದು ಹೇಳಿದ, ನಾನು ಯಾರೆಂಬುದು ನಿನಗೆ ತಿಳಿದಿಲ್ಲವೇ? ನಾನು ಸುಲ್ತಾನರುಗಳ ಸುಲ್ತಾನ.” ಇದು ಫಕೀರನ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ, ಅವನು ತನ್ನ ಕೆಲಸವನ್ನು ಮಾಡುತ್ತಲೇ ಇದ್ದ. ಇದ್ದಕ್ಕಿದ್ದಂತೆ ತುಂಬ ದೊಡ್ಡ ಗಾಯವಾಗಿದ್ದವನೊಬ್ಬ ಎಲ್ಲಿಂದಲೋ ಬಂದು ಫಕೀರನ ಎದುರು ನೆಲದಲ್ಲಿ ದೊಪ್ಪನೆ ಬಿದ್ದ. ಫಕೀರ ಸುಲ್ತಾನನಿಗೆ ಹೇಳಿದ, “ಇವನನ್ನು ನನ್ನ ಮನೆಗೆ ಸಾಗಿಸಲು ಸಹಾಯ ಮಾಡು!” ನಾನು ನಿನಗೆ ಸಹಾಯ ಮಾಡುತ್ತೇನೆ. ಆದರೆ ಆನಂತರ ನೀನು ನನ್ನ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು,” ಎಂಬುದಾಗಿ ಹೇಳಿದ ಸುಲ್ತಾನ. ಆಮೇಲೆ,” ಎಂಬುದಾಗಿ ಹೇಳಿದ ಫಕೀರ ಸುಲ್ತಾನ ನೆರವಿನೊಂದಿಗೆ ಗಾಯಾಳುವನ್ನು ತನ್ನ ಗುಡಿಸಲಿಗೆ ಒಯ್ದು ಅವನ ಗಾಯಕ್ಕೆ ಯುಕ್ತ ಚಿಕಿತ್ಸೆ ನೀಡಿ ಮಾಡಿದ.
ತದನಂತರ ಸುಲ್ತಾನ ಹೇಳಿದ, “ಈಗ ನಾನು ನನ್ನ ಪ್ರಶ್ನೆಗಳಿಗೆ ಉತ್ತರ ಪಡೆಯಲಿಚ್ಛಿಸುತ್ತೇನೆ.”
ಫಕೀರ ಸುಲ್ತಾನನಿಗೆ ಹೇಳಿದ, “ನೀನೀಗ ನಿನ್ನ ಅರಮನೆಗೆ ಹಿಂದಿರುಗಿ ಹೋಗು. ಏಕೆಂದರೆ ನಿನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಈಗಾಗಲೇ ಪಡೆದಿರುವೆ. ಏನು ಮಾಡಬೇಕು? - ನಿನ್ನ ಜೀವನ ಪಥದಲ್ಲಿ ಏನು ಎದುರಾಗುತ್ತದೋ ಅದನ್ನು ಮಾಡು. ಯಾರೊಂದಿಗೆ ಮಾಡಬೇಕು? - ಅಲ್ಲಿ ಯಾರಿರುತ್ತಾರೋ ಅವರೊಂದಿಗೆ ಮಾಡು. ಯಾವಾಗ ಮಾಡಬೇಕು? - ಅದು ಎದುರಾದ ತಕ್ಷಣವೇ ಮಾಡು.”

***** 

೧೧೭. ಒಂದು ಮಾತಿನ ಶಕ್ತಿ


ಹಿಂದೊಮ್ಮೆ ಒಂದು ಮಗುವಿನ ರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದ ಒಬ್ಬ ಸೂಫಿ. ಅವನು ಮಗುವನ್ನು ಎತ್ತಿಕೊಂಡು ಕೆಲವು ಪದಗಳನ್ನು ಅನೇಕ ಬಾರಿ ಪುನರುಚ್ಚರಿಸಿದ. ತದನಂತರ ಮಗುವನ್ನು ತಂದೆತಾಯಿಯರಿಗೆ ಒಪ್ಪಿಸಿ ಹೇಳಿದ, “ಈಗ ಮಗು ಗುಣಮುಖವಾಗಿತ್ತದೆ.”
ಅಲ್ಲಿದ್ದ ಅವನ ಎದುರಾಳಿಯೊಬ್ಬ ತಕ್ಷಣ ಹೇಳಿದ, “ಕೆಲವು ಪದಗಳನ್ನು ಪುನರುಚ್ಚರಿಸಿದರೆ, ಕೆಲವು ಮಾತುಗಳಿಂದ ರೋಗ ವಾಸಿಯಾಗಲು ಹೇಗೆ ಸಾಧ್ಯ?”
ಸಾತ್ವಿಕ ಸ್ವಭಾವದ ಸೂಫಿಯೊಬ್ಬನಿಂದ ಸಿಡುಕಿನ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲವಾದರೂ ಈ ಬಾರಿ ಸೂಫಿ ಅವನತ್ತ ತಿರುಗಿ ಹೇಳಿದ, “ನೀನೊಬ್ಬ ಮೂರ್ಖ. ಈ ಕುರಿತು ನಿನಗೇನೂ ಗೊತ್ತಿಲ್ಲ.”
ಇದರಿಂದ ಆ ಎದುರಾಳಿಗೆ ಭಾರೀ ಅವಮಾನವಾಯಿತು. ಅವನ ಮುಖ ಕೋಪದಿಂದ ಕೆಂಪಾಯಿತು. ತಕ್ಷಣವೇ ಸೂಫಿ ಹೇಳಿದ, “ಒಂದು ಮಾತು ನಿನಗಿಷ್ಟು ಕೋಪ ಬರಿಸಬಲ್ಲುದಾದರೆ ಒಂದು ಮಾತಿಗೆ ರೋಗ ನಿವಾರಿಸುವ ಶಕ್ತಿ ಏಕಿರಬಾರದು?”

***** 

೧೧೮. ಗುರುವಾಗಬಯಸಿದವನ ಮೊದಲನೇ ಪಾಠ!

ಬಹಾವುದ್ದೀನ್‌‌ ನಕ್ವ್‌ಶ್‌ಬಂದ್‌ನ ಹತ್ತಿರ ಒಬ್ಬಾತ ಬಂದು ಹೇಳಿದ, ನಾನು ಒಬ್ಬರಾದ ನಂತರ ಒಬ್ಬರಂತೆ ಅನೇಕ ಮಂದಿ ಅಧ್ಯಾಪಕರ ಹತ್ತಿರ ಹೋಗಿದ್ದೇನೆ. ನಾನು ಅನೇಕ ದಾರ್ಶನಿಕ ಪಂಥಗಳ ತತ್ವಗಳನ್ನು ಅಧ್ಯಯಿಸಿದ್ದೇನೆ. ಅವೆಲ್ಲವುಗಳಿಂದ ನನಗೆ ಅನೇಕ ಲಾಭಗಳಾಗಿವೆ, ಅನೇಕ ರೀತಿಯ ಅನುಕೂಲಗಳಾಗಿವೆ. ಈಗ ನಾನು ನಿಮ್ಮ ಶಿಷ್ಯನಾಗಿ ನಿಮ್ಮ ಜ್ಞಾನ ಭಂಡಾರದ ಲಾಭ ಪಡೆದು ತರೀಕಾ ವಿಧಾನದಲ್ಲಿ ಹೆಚ್ಚುಹೆಚ್ಚು ಮುಂದುವರಿಯಬೇಕೆಂದುಕೊಂಡಿದ್ದೇನೆ.”
ಈ ಮಾತಿಗೆ ನೇರವಾಗಿ ಪ್ರತಿಕ್ರಿಯಿಸುವುದಕ್ಕೆ ಬದಲಾಗಿ ಬಹಾವುದ್ದೀನ್‌ ಈ ಅತಿಥಿಗೆ ಭೋಜನ ಬಡಿಸಲು ಸೇವಕರಿಗೆ ಹೇಳಿದ. ಅನ್ನ ಮತ್ತು ಮಾಂಸದ ಸಾರನ್ನು ಅವರು ತಂದಾಗ ಒಂದು ತಟ್ಟೆ ತುಂಬ ತಿನಿಸನ್ನು ಅತಿಥಿಯ ಮುಂದಿಟ್ಟು, ಅವನು ಅದನ್ನು ತಿಂದ ತಕ್ಷಣ ಇನ್ನೊಂದಷ್ಟನ್ನು ತಟ್ಟೆಗೆ ಬಡಿಸಿದ. ಇಂತು ಅನೇಕ ಬಾರಿ ಮಾಡಿದ ನಂತರ ಹಣ್ಣುಗಳನ್ನೂ ಪಿಷ್ಟ ಭಕ್ಷ್ಯಗಳನ್ನೂ ರಸಾಯನಗಳನ್ನೂ ಮಿಠಾಯಿಗಳನ್ನೂ ಬಡಿಸಿ ತಿನ್ನುವಂತೆ ಒತ್ತಾಯಿಸುತ್ತಲೇ ಇದ್ದ.
ಬಹಾವುದ್ದೀನ್‌ ತನ್ನನ್ನು ವಿಶೇಷವಾಗಿ ಸತ್ಕರಿಸುತ್ತಿರುವುದು ಆತನಿಗೆ ಬಲು ಸಂತೋಷ ಉಂಟುಮಾಡಿತು. ತಾನು ತಿನ್ನುವುದನ್ನು ನೋಡಿ ಬಹಾವುದ್ದೀನ್‌ ಖುಷಿ ಪಡುತ್ತಿದ್ದದ್ದರಿಂದ ಸಾಧ್ಯವಿರುವಷ್ಟನ್ನೂ ತಿಂದ. ತಿನ್ನುವಿಕೆಯ ವೇಗ ಕಮ್ಮಿ ಆದಾಗ ಬಹಾವುದ್ದೀನನಿಗೆ ಸಿಟ್ಟು ಬಂದಂತೆ ತೋರುತ್ತಿದ್ದದ್ದರಿಂದ ಆತ ಹೆಚ್ಚು ಕಮ್ಮಿ ಮತ್ತೂ ಒಂದು ಪೂರ್ಣ ಪ್ರಮಾಣದ ಭೋಜನವನ್ನೇ ಕಷ್ಟಪಟ್ಟು ತಿಂದು ಮುಗಿಸಿದ. ಇನ್ನೊಂದು ತುತ್ತನ್ನೂ ತಿನ್ನಲು ಸಾಧ್ಯವಿಲ್ಲದಾದಾಗ ತುಸು ನರಳುತ್ತಾ ಪಕ್ಕದಲ್ಲಿ ಇದ್ದ ಮೆತ್ತೆಯ ಮೇಲೆ ಉರುಳಿದ.
ಆಗ ಬಹಾವುದ್ದೀನ್ ಅವನಿಗೆ ಇಂತೆಂದ: “ಈಗ ನಿನ್ನ ಹೊಟ್ಟೆಯಲ್ಲಿ ವಿಭಿನ್ನ ರೀತಿಯ ಜೀರ್ಣವಾಗದ ಆಹಾರ ಹೇಗೆ ತುಂಬಿಕೊಂಡಿದೆಯೋ ಅಂತೆಯೇ ಮನೋಗತವಾಗದ ವಿಭಿನ್ನ ರೀತಿಯ ಬೋಧನೆಗಳು ನೀನು ನನ್ನನ್ನು ನೋಡಲು ಬಂದಾಗ ನಿನ್ನ ಮನಸ್ಸಿನಲ್ಲಿ ತುಂಬಿಕೊಂಡಿದ್ದವು. ಆಹಾರ ಜೀರ್ಣವಾಗದಿರುವಾಗ ಉಂಟಾಗುವ ಅಸೌಖ್ಯವನ್ನು ನೀನು ಗುರುತಿಸಬಲ್ಲೆಯಾದರೂ ಬೋಧನೆಗಳು ಮನೋಗತವಾಗದಿರುವಾಗ ಉಂಟಾಗುವ ಅಸೌಖ್ಯವನ್ನು ಗುರುತಿಸಲಾರೆ. ಆಗಿನ ಅಸೌಖ್ಯವನ್ನು ನೀನು ಹೆಚ್ಚಿನ ಜ್ಞಾನಕ್ಕಾಗಿ ಇರುವ ಹಸಿವು ಎಂಬುದಾಗಿ ತಪ್ಪಾಗಿ ಅರ್ಥೈಸಿದೆ. ವಾಸ್ತವವಾಗಿ ಅಜೀರ್ಣವೇ ನಿನ್ನ ನಿಜವಾದ ಸಮಸ್ಯೆ. ನಾನು ನಿನಗೆ ಬೋಧಿಸಬಲ್ಲೆ, ನೀನು ನಾನು ಹೇಳುವಷ್ಟು ಕಾಲ ಇಲ್ಲಿಯೇ ನಿಂತು ನನ್ನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬಲ್ಲೆಯಾದರೆ. ನಿನಗೆ ಅಸಂಗತ ಎಂಬುದಾಗಿ ಅನ್ನಿಸಬಹುದಾದರೂ ಯುಕ್ತ ಚಟುವಟಿಕೆಗಳ ಮುಖೇನ ಕಲಿತದ್ದನ್ನು ಜೀರ್ಣಿಸಿಕೊಳ್ಳುವಂತೆ, ಅರ್ಥಾತ್ ಮನೋಗತ ಮಾಡಿಕೊಳ್ಳುವಂತೆ ನಾನು ಮಾಡಬಲ್ಲೆ. ತತ್ಪರಿಣಾಮವಾಗಿ ತಿಂದ ಆಹಾರ ಕೇವಲ ತೂಕವಾಗುವುದಕ್ಕೆ ಬದಲಾಗಿ ಜೀರ್ಣವಾಗಿ ಹೇಗೆ ಪೋಷಕಾಂಶವಾಗುತ್ತದೋ ಅದೇ ರೀತಿ ಕಲಿತದ್ದು ಅನೇಕ ಜ್ಞಾನಾಂಶಗಳ ಮೂಟೆಯಾಗುವುದಕ್ಕೆ ಬದಲಾಗಿ ಮನೋಗತವಾಗಿ ನಿಜವಾದ ಜ್ಞಾನವಾಗುತ್ತದೆ.”
ಬಂದಾತ ಅದಕ್ಕೊಪ್ಪಿದ. ಅವನು ಮುಂದೆ ಖ್ಯಾತ ಬೋಧಕ ಎಂಬುದಾಗಿ ಗುರುತಿಸಲ್ಪಟ್ಟ ಖಲೀಲ್ ಅಶ್ರಫ್‌ಜಾದಾ. ಅನೇಕ ದಶಕಗಳ ನಂತರ ಅವನು ತನ್ನ ಶಿಷ್ಯರಿಗೆ ಈ ಕತೆಯನ್ನು ಹೇಳುತ್ತಿದ್ದ.

***** 

೧೧೯. ಶಿಷ್ಯ ಸಿದ್ಧನಾದಾಗ

ಪರಿಪೂರ್ಣ ಗುರುವನ್ನು ಹುಡುಕಲು ಒಬ್ಬಾತ ನಿರ್ಧರಿಸಿದ. ಆ ಕುರಿತಾದ ಅನೇಕ ಪುಸ್ತಕಗಳನ್ನು ಓದಿದ. ಅನೇಕ ಜ್ಞಾನಿಗಳನ್ನು ಭೇಟಿ ಮಾಡಿದ, ಚರ್ಚಿಸಿದ ಹಾಗೂ ಅಭ್ಯಾಸ ಮಾಡಿದ. ಇಷ್ಟಾದರೂ ಏನೋ ಸಂಶಯ, ಏನೋ ಅನಿಶ್ಚಿತತೆ ಅವನನ್ನು ಕಾಡುತ್ತಿತ್ತು. ಇಪ್ಪತ್ತು ವರ್ಷಗಳು ಕಳೆದ ನಂತರ ಅವನು ಸತ್ಯವೆಂದು ಯಾವುದನ್ನು ತಿಳಿದಿದ್ದನೋ ಅದರ ಸಂಪೂರ್ಣ ಸಾಕ್ಷಾತ್ಕಾರವದವನ ನಡೆ-ನುಡಿಗಳನ್ನು ಪರಿಪೂರ್ಣವಾಗಿ ಹೋಲುತ್ತಿದ್ದ ವ್ಯಕ್ತಿಯೊಬ್ಬನನ್ನು ಸಂಧಿಸಿದ. ತಕ್ಷಣವೇ ಆತ ಹೇಳಿದ, “ಮಹಾಶಯರೇ, ತಾವೊಬ್ಬ ಪರಿಪೂರ್ಣ ಗುರುವಿನಂತೆ ನನಗೆ ಕಾಣುತ್ತಿದ್ದೀರಿ. ಇದು ನಿಜವಾಗಿದ್ದರೆ ನನ್ನ ಹುಡುಕಾಟದ ಪಯಣ ಇಂದು ಕೊನೆಗೊಳ್ಳುತ್ತದೆ.”
ಆ ವ್ಯಕ್ತಿ ಉತ್ತರಿಸಿದ, “ಹೌದು, ಎಲ್ಲರೂ ನನ್ನನ್ನು ಹಾಗೆಂದೇ ಗುರುತಿಸುತ್ತಾರೆ.”
ಅಂದ ಮೇಲೆ ದಯವಿಟ್ಟು ನಿಮ್ಮ ಶಿಷ್ಯನಾಗಿ ನನ್ನನ್ನು ಸ್ವೀಕರಿಸಬೇಕಾಗಿ ಬೇಡಿಕೊಳ್ಳುತ್ತೇನೆ,” ಎಂಬುದಾಗಿ ಗೋಗರೆದ ಪರಿಪೂರ್ಣ ಗುರುವಿನ ಹುಡುಕಾಟದಲ್ಲಿದ್ದವ.
ಗುರುಗಳು ಹೇಳಿದರು, “ಆ ಕೆಲಸ ನಾನು ಮಾಡುವುದಿಲ್ಲ. ನೀನು ಪರಿಪೂರ್ಣ ಗುರು ಬೇಕೆಂದು ಬಯಸುತ್ತಿರಬಹುದು. ಆದರೆ, ಪರಿಪೂರ್ಣ ಗುರು ಒಬ್ಬ ಪರಿಪೂರ್ಣ ಶಿಷ್ಯನನ್ನು ಪಡೆಯಲು ಇಚ್ಛಿಸುತ್ತಾನೆ.”

***** 

೧೨೦. ವಿದ್ವಾಂಸನೂ ಸೂಫಿಯೂ


ಒಬ್ಬ ವಿದ್ವಾಂಸ ಸೂಫಿಯೊಬ್ಬನಿಗೆ ಹೇಳಿದ, “ನಮ್ಮ ತಾರ್ಕಿಕ ಪ್ರಶ್ನೆಗಳು ನಿಮಗೆ ಅರ್ಥವೇ ಆಗುವುದಿಲ್ಲವೆಂಬುದಾಗಿ ನೀವು ಸೂಫಿಗಳು ಹೇಳುತ್ತೀರಿ. ಅಂಥ ಒಂದು ಪ್ರಶ್ನೆಯನ್ನು ನೀವು ಉದಾಹರಿಸಬಲ್ಲಿರಾ?”

ಸೂಫಿ ಹೇಳಿದ, “ಖಂಡಿತ. ಅದಕ್ಕೊಂದು ಉದಾಹರಣೆ ನನ್ನ ಹತ್ತಿರ ಇದೆ. ನಾನೊಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದೆ. ಆ ರೈಲು ಏಳು ಸುರಂಗಗಳ ಮೂಲಕ ಹಾದುಹೋಯಿತು. ಆ ವರೆಗೆ ರೈಲಿನಲ್ಲಿ ಪಯಣಿಸದೇ ಇದ್ದ ಹಳ್ಳಿಗಾಡಿನವನೊಬ್ಬ ನನ್ನ ಎದುರು ಕುಳಿತಿದ್ದ. ರೈಲು ಏಳು ಸುರಂಗಗಳನ್ನು ದಾಟಿದ ನಂತರ ಅವನು ನನ್ನ ಭುಜ ತಟ್ಟಿ ಹೇಳಿದ, ‘ಈ ರೈಲು ಪ್ರಯಾಣ ಬಲು ಸಂಕೀರ್ಣವಾದದ್ದು. ನನ್ನ ಕತ್ತೆಯ ಮೇಲೆ ಕುಳಿತು ಪ್ರಯಾಣ ಮಾಡಿದರೆ ನಾನು ಒಂದೇ ದಿನದಲ್ಲಿ ನನ್ನೂರನ್ನು ತಲುಪುತ್ತೇನೆ. ಈ ರೈಲು ನನ್ನ ಕತ್ತೆಗಿಂತ ವೇಗವಾಗಿ ಚಲಿಸುತ್ತಿರುವಂತೆ ಕಾಣುತ್ತಿದೆಯಾದರೂ ಸೂರ್ಯ ಏಳು ಬಾರಿ ಮುಳುಗಿ ಏಳು ಬಾರಿ ಹುಟ್ಟಿದರೂ ನಾನಿನ್ನೂ ನನ್ನ ಮನೆ ಸೇರಿಲ್ಲವೇಕೆ?”

No comments: