Pages

23 December 2011

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯ ಇಲ್ಲವೇ?

ಇಲ್ಲ ಎಂದು ಬಹುಮಂದಿ ನಂಬಿರುವುದರಿಂದ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹಿಂಜರಿಯುವ ಜನ್ಮದಾತೃಗಳ ಸಂಖ್ಯೆ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳು, ವಿಶೇಷತಃ ಸರ್ಕಾರೀ ಶಾಲೆಗಳು ದುಸ್ಥಿತಿಯಲ್ಲಿವೆ. ಈ ಪರಿಸ್ಥಿತಿಗೆ ಕಾರಣ?

ನಾನು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಯಲ್ಲಿ ಓದಿದವನು. ಪಿ ಯು ಸಿ ಮತ್ತು ಆನಂತರದ ಶಿಕ್ಷಣ ಪಡೆದದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಆಗ ಕೊಡಗಿನಲ್ಲಿ ಎಲ್ಲರೂ ಶಿಕ್ಷಣ ಪಡೆಯುತ್ತಿದ್ದದ್ದೇ ಹೀಗೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲವೇ ಆಗಲಿ, ಖಾಸಗಿ ಶಾಲೆಗಳು ಸರ್ಕಾರೀ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತವೆ ಎಂಬ ನಂಬಿಕೆಯೇ ಆಗಲಿ ಅಂದಿನ ಜನ್ಮದಾತೃಗಳಿಗೆ ಇರಲಿಲ್ಲ. ವಾಸ್ತವವಾಗಿ, ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮ, ಪಿ ಯು ಸಿ ಮತ್ತು ಆನಂತರದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಆಗ ಅಲ್ಲಿ ಇರಲೇ ಇಲ್ಲ. (ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಮೈಸೂರು, ಮಂಗಳೂರು, ಬೆಂಗಳೂರುಗಳಂಥ ದೊಡ್ಡ ನಗರಗಳಲ್ಲಿ ಲಭ್ಯವಿತ್ತಂತೆ) ನನಗೆ ತಿಳಿದ ಮಟ್ಟಿಗೆ ಕೊಡಗಿನಲ್ಲಿ ಆಗ ಇದ್ದದ್ದು ಎರಡೋ ಮೂರೋ ಕ್ರಿಶ್ಚಿಯನ್ ಆಡಳಿತದ ಖಾಸಗಿ ಪ್ರೌಢಶಲೆಗಳು. ಖಾಸಗಿ ಕಾಲೇಜುಗಳು ಇರಲೇ ಇಲ್ಲ.  ಈ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಏನಾಗ ಬಯಸಿದ್ದೆನೋ ಅದೇ ಆದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರು ಎಂಜಿನಿಯರುಗಳೂ ಡಾಕ್ಟರುಗಳೂ ಆಗುತ್ತಿದ್ದರು. ಎಂದೇ, ೧ ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಆವಶ್ಯಕತೆ ಇದೆ ಎಂದು ಯಾರೂ ತಿಳಿದಿರಲಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರಿಂದ ಯಾರ ಭವಿಷ್ಯವೂ ಅಂದು ಹಾಳಾದದ್ದು ನನಗೆ ತಿಳಿದಿಲ್ಲ. ಆಗ ಏಕೆ ಹಾಗಿತ್ತು?

ಎಸ್ ಎಸ್ ಎಲ್ ಸಿ ಪಾಸಾಗುವುದರ ಒಳಗೆ ಅನಕೃ, ತರಾಸು, ಶಿವರಾಮ ಕಾರಂತರು, ಮಾಸ್ತಿಯವರು ಇವರೇ ಮೊದಲಾದವರ ಕೆಲವು ಕಾದಂಬರಿಗಳನ್ನು ನಾನು ಓದಿದ್ದೆ. ಇದಕ್ಕೆ ಕಾರಣ ನಮಗೆ ಕನ್ನಡ ಬೋಧಿಸುತ್ತಿದ್ದ ಶಿಕ್ಷಕರು. ಚಾರ್ಲ್ಸ್ ಡಿಕ್ಕನ್ಸ್ ವಿರಚಿತ ‘ನಿಕೋಲಸ್ ನಿಕ್ಲೆಬೈ’ ಕಾದಂಬರಿಯ ಸಂಕ್ಷಿಪ್ತ ರೂಪವನ್ನೂ ಮತ್ತು ಶೇಕ್ಸ್ಪಿಯರ್ ವಿರಚಿತ ‘ಮರ್ಚೆಂಟ್ ಆಫ್ ವೆನಿಸ್’ ನಾಟಕದ ಕಥಾರೂಪವನ್ನೂ ಜೊನಾದನ್ ಸ್ವಿಫ್ಟ್ ವಿರಚಿತ ‘ಗಲಿವರ್ಸ್ ಟ್ರಾವಲ್ಸ್’ ನ ಮೊದಲನೇ ಭಾಗದ ಸಂಕ್ಷಿಪ್ತ ರೂಪವನ್ನೂ ‘ನಾನ್ ಡಿಟೇಯ್ಲ್ಡ್ ಟೆಕ್ಸ್ಟ್’ ಆಗಿ ಇಂಗ್ಲಿಷಿನಲ್ಲಿಯೇ ಅಭ್ಯಸಿಸಿದ್ದು ಇನ್ನೂ ಮರೆತಿಲ್ಲ. ಬಹುಶ: ಅಂದಿನ ಅನುಭವಗಳ ಪರಿಣಾಮವೋ ಏನೋ ಮುಂದೆಯೂ ಅನೇಕ ಕನ್ನಡ ಮತ್ತು ಇಂಗ್ಲಿಷ್ ಕಾದಂಬರಿಗಳನ್ನು ಓದಿದ್ದೇನೆ. ಸ್ವತಂತ್ರವಾಗಿ ಪುಟ್ಟ ಪ್ರಬಂಧಗಳನ್ನು ಬರೆಯುವ ಅಭ್ಯಾಸವಾದದ್ದು ಈ ಶಾಲೆಗಳ ಬೋಧನಾಪದ್ಧತಿಯಿಂದ. ವಾರಕ್ಕೆ ಕನಿಷ್ಠ ಒಂದಾದರೂ ಪಠ್ಯಾಧಾರಿತವಲ್ಲದ ಸ್ವತಂತ್ರ ಪತ್ರ/ಪ್ರಬಂಧವನ್ನು ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ಈ ಎರಡೂ ಭಾಷೆಗಳಲ್ಲಿ ಬರೆಯಬೇಕಿತ್ತು. ವಾರದಲ್ಲಿ ಒಂದು ದಿನ ತರಗತಿ ಮಟ್ಟದಲ್ಲಿ ಚರ್ಚಾಗೋಷ್ಠಿ ನಡೆಯುತಿತ್ತು. ಸರದಿಯ ಪ್ರಕಾರ ಎಲ್ಲರೂ ಇದರಲ್ಲಿ ಭಾಗವಹಿಸಲೇ ಬೇಕಿತ್ತು. ಕನ್ನಡ ವ್ಯಾಕರಣವನ್ನು ಸಾಂಪ್ರದಾಯಿಕವಾಗಿ ಕಲಿಸುತ್ತಿದ್ದರು. ಇಂಗ್ಲಿಷ್ ವ್ಯಾಕರಣವನ್ನೂ ಇದೇ ರೀತಿ ಕಲಿಸುತ್ತಿದ್ದರು. ರೆನ್ ಅಂಡ್ ಮಾರ್ಟಿನ್ ಹೈಸ್ಕೂಲ್ ಇಂಗ್ಲಿಷ್ ಗ್ರಾಮರ್ ಅಂಡ್ ಕಾಂಪೋಸಿಷನ್ ಎಂಬ ವ್ಯಾಕರಣ ಪುಸ್ತಕದ ಬಹುಬಾಗವನ್ನು ಆ ಹಂತದಲ್ಲಿಯೇ ನಾವು ಕಲಿತಿದ್ದೆವು. ಪರಿಣಾಮ - ಹೆಚ್ಚುಕಮ್ಮಿ ತಪ್ಪಿಲ್ಲದೆ ಕನ್ನಡದಲ್ಲಿ ‘ಓದುವ, ಬರೆಯುವ ಮತ್ತು ಮಾತನಾಡುವ’ ಸಾಮರ್ಥ್ಯವನ್ನೂ ಇಂಗ್ಲಿಷಿನಲ್ಲಿ ‘ಓದುವ ಮತ್ತು ಬರೆಯುವ’ ಹೆಚ್ಚುಕಮ್ಮಿ ಎಲ್ಲರೂ ಗಳಿಸಿರುತ್ತಿದ್ದರು. ತತ್ಪರಿಣಾಮವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಇರುತ್ತಿದ್ದ ಉನ್ನತ ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಒಂದು ಸಮಸ್ಯೆಯೇ ಆಗಿರಲಿಲ್ಲ. ಇಂಗ್ಲಿಷ್ ಮಾಧ್ಯಮದ ತರಗತಿ ಪಾಠಗಳು ಅರ್ಥವಾಗುತ್ತಿದ್ದವಾದರೂ ಉಪನ್ಯಾಸಕರೊಂದಿಗೆ ಇಂಗ್ಲಿಷಿನಲ್ಲಿ ಒಂದು ವಾಕ್ಯ ಮಾತನಾಡಲೂ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತಿತ್ತು. ಅದೂ ಐದಾರು ತಿಂಗಳ ಕಾಲ ಮಾತ್ರ. ಇದರರ್ಥ ಇಷ್ಟು- ಎಸ್ ಎಸ್ ಎಲ್ ಸಿ ಪಾಸಾದವರು ಹೆಚ್ಚುಕಮ್ಮಿ ತಪ್ಪಿಲ್ಲದೆ ಕನ್ನಡದಲ್ಲಿ ‘ಓದುವ, ಬರೆಯುವ ಮತ್ತು ಮಾತನಾಡುವ’ ಸಾಮರ್ಥ್ಯವನ್ನೂ ಇಂಗ್ಲಿಷಿನಲ್ಲಿ ‘ಓದುವ ಮತ್ತು ಬರೆಯುವ’ ಹೆಚ್ಚುಕಮ್ಮಿ ಎಲ್ಲರೂ ಗಳಿಸಿದರೆ ಮಾಧ್ಯಮ ಒಂದು ಸಮಸ್ಯೆ ಆಗುವುದಿಲ್ಲ.

ದುರದೃಷ್ಟವಶಾತ್, ಪರಿಸ್ಥಿತಿ ಹೀಗೆಯೇ ಮುಂದುವರಿಯಲಿಲ್ಲ. ಕ್ರಮೇಣ ಭಾಷಾ ಬೋಧನೆ-ಕಲಿಕೆ ದುರ್ಬಲವಾಯಿತು. ಕನ್ನಡ ಕಲಿಕೆಯೂ ಶಿಥಿಲವಾಯಿತು, ಇಂಗ್ಲಿಷ್ ಕಲಿಕೆ ಹೆಚ್ಚು ಕಮ್ಮಿ ಜರಗಲೇ ಇಲ್ಲ ಅನ್ನಬಹುದಾದಷ್ಟು ದುರ್ಬಲವಾಯಿತು. (ಇದಕ್ಕೆ ಸಾಕ್ಷ್ಯಾಧಾರಗಳು ನಿಮ್ಮ ಆಸುಪಾಸಿನಲ್ಲಿ ಹೇರಳವಾಗಿ ದೊರೆಯುತ್ತವೆ) ತತ್ಪರಿಣಾಮವಾಗಿ ಉನ್ನತ ಶಿಕ್ಷಣದಲ್ಲಿ, ವಿಶೇಷತಃ ವೃತ್ತಿಪರ ಶಿಕ್ಷಣದಲ್ಲಿ ನಗರಗಳಿಗೆ ಸೀಮಿತವಾಗಿದ್ದ ಬೆರಳೆಣಿಕೆಯಷ್ಟಿದ್ದ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತು ಬಂದವರ ಪ್ರಾಬಲ್ಯ ಹೆಚ್ಚಾಗತೊಡಗಿತು. ಉನ್ನತ ಶಿಕ್ಷಣದಲ್ಲಿ ಯಶಸ್ಸು ಗಳಿಸಬೇಕಾದರೆ ಆರಂಭದಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಅಭ್ಯಸಿಸಬೇಕು ಎಂಬ ಭಾವನೆ ಮೂಡಲು ಕಾರಣವಾದದಷ್ಟೇ ಅಲ್ಲ, ಇಂದು ಸಾರ್ವತ್ರಿಕವಾಗಿ ಹಬ್ಬಿರುವ ಇಂಗ್ಲಿಷ್ ಮಾದ್ಯಮದ ವ್ಯಾಮೋಹವನ್ನು ಹುಟ್ಟುಹಾಕಿತು. ಇದಕ್ಕೆ ಪುಷ್ಟಿ ಕೊಟ್ಟಿತು ಕನ್ನಡ ಕುರಿತಾದ ಸರ್ಕಾರದ ನೀತಿ ನಿಯಮಾವಳಿ, ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ತಳೆದಿರುವ ನಿರಭಿಮಾನ.

ಅಂದ ಮೇಲೆ, ಕನ್ನಡ ಮಾಧ್ಯಮ ಶಾಲೆಗಳ ಪ್ರಾಬಲ್ಯ ಪುನಃ ಹೆಚ್ಚಬೇಕಾದರೆ ಆ ಶಾಲೆಗಳಲ್ಲಿ ಜರಗುತ್ತಿರುವ ಇಂಗ್ಲಿಷ್ ಬೋಧನೆ-ಕಲಿಕೆಯ ಪ್ರಕ್ರಿಯೆಯ ಬಲವರ್ಧಿಸುವ ಕಾರ್ಯ ಮೊದಲು ಆಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರೂ ಇಂಗ್ಲಿಷ್ ಅನ್ನು ಸಮರ್ಪಕವಾಗಿ ಓದಿ ಅರ್ಥೈಸಿಕೊಳ್ಳಬಲ್ಲವರಾದರೆ ಸರಳ ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ಬರೆಯಬಲ್ಲವರಾದರೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಉನ್ನತ ಶಿಕ್ಷಣದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗುವುದಿಲ್ಲ.

‘ದೈನಂದಿನ ವ್ಯವಹಾರಕ್ಕೆ ಅನುಕೂಲವಾಗುವಷ್ಟರ ಮಟ್ಟಿಗಾದರೂ ಪ್ರಭುತ್ವ ಸಾಧಿಸಲು ಅಗತ್ಯವಾದಷ್ಟು ಕನ್ನಡ, ಮಾಹಿತಿ ಸಂಗ್ರಹಣೆಗೆ ಮತ್ತು ಸರಳ ಅಭಿವ್ಯಕ್ತಿಗೆ ಅಗತ್ಯವಾದಷ್ಟು ಇಂಗ್ಲಿಷ್’ ಕಲಿಸುವುದು ಕಡ್ಡಾಯ ಸಾರ್ವತ್ರಿಕ ಶಿಕ್ಷಣ ನೀಡುವ ಶಾಲೆಗಳಿಂದ ಸಾಧ್ಯವಾದರೆ ಭಾಷಾಮಾಧ್ಯಮದ ವಿವಾದ ತಣ್ಣಗಾದೀತು. ಇಲ್ಲವಾದರೆ, ‘ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತಿದ್ದರೂ’ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇರಬೇಕು ಎಂದು ‘ಉಗ್ರ’ವಾಗಿ ಹೋರಾಡುವವರೂ ಬುದ್ಧಿಜೀವಿಗಳೂ ಸದಾ ಸುದ್ದಿಯಲ್ಲಿರುವುದು ಸಾಧ್ಯವಾಗುತ್ತದೆ.

No comments: