Pages

24 December 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೫೩

ಪ್ರತಿಕ್ರಿಯಾ ಕಾಲ  

೩೦ ಸೆಂಮೀ ಉದ್ದದ ಅಳತೆಪಟ್ಟಿಯನ್ನು ತೆಗೆದುಕೊಳ್ಳಿ. ಎರಡು ಬೆರಳುಗಳಿಂದ ೩೦ ಸೆಂಮೀ ಗುರುತಿನ ಹತ್ತಿರ ಅದು ಕೆಳಕ್ಕೆ ಲಂಬವಾಗಿ ನೇತಾಡುವಂತೆ ಹಿಡಿದುಕೊಳ್ಳಿ. ನೀವು ಅದನ್ನು ಬೀಳಲು ಬಿಟ್ಟಾಗ ಎರಡು ಬೆರಳುಗಳಿಂದ ಅದನ್ನು ೦ ಸೆಂಮೀ ಗುರುತಿನ ಹತ್ತಿರ ಹಿಡಿಯಲು ಸಿದ್ಧವಾಗಿರುವಂತೆ ನಿಮ್ಮ ಮಿತ್ರನಿಗೆ ಹೇಳಿ. ಅಳತೆಪಟ್ಟಿಯನ್ನು ಕ್ಷಣ ಮಾತ್ರದಲ್ಲಿ ಹಿಡಿಯಲು ಅನುಕೂಲವಾಗುವಂತೆ ಬೆರಳುಗಳನ್ನು ಅದರ ಎರಡು ಪಾರ್ಶ್ವಗಳಲ್ಲಿ  ಯುಕ್ತ ಸ್ಥಳದಲ್ಲಿ ಸಿದ್ಧವಾಗಿ ಇಟ್ಟುಕೊಂಡಿರಬಹುದೇ ಹೊರತು ಅದನ್ನು ಸ್ಪರ್ಶಿಸಿರಕೂಡದು. ‘ಗಮನವಿಟ್ಟು ನೋಡುತ್ತಿದ್ದು ನಾನು ಅಳತೆಪಟ್ಟಿಯನ್ನು ಬಿಟ್ಟ ತಕ್ಷಣವೇ ಅದನ್ನು ನೀನು ಹಿಡಿಯಬೇಕು’ ಎಂದು ನಿಮ್ಮ ಮಿತ್ರನಿಗೆ ಹೇಳಿ. ಆತ ಸಿದ್ಧನಾದ ಬಳಿಕ ಯಾವ ಮುನ್ಸೂಚನೆಯನ್ನೂ ನೀಡದೆ ಅಳತೆಪಟ್ಟಿಯನ್ನು ಬಿಡಿ. ಅದನ್ನು ಆತ ಎಷ್ಟನೇ ಸೆಂಮೀ ಗುರುತಿನ ಬಳಿ ಹಿಡಿದ ಎಂಬುದನ್ನು ದಾಖಲಿಸಿ. ಅಳತೆಪಟ್ಟಿಯನ್ನು ಬಿಡುವ ದೃಶ್ಯ ಉದ್ದೀಪನೆಗೆ ಪ್ರತಿಕ್ರಿಯೆ ತೋರುವ ಮುನ್ನ ಅಳತೆಪಟ್ಟಿ ಸರಿಸುಮಾರಾಗಿ ಎಷ್ಟು ಕೆಳಕ್ಕೆ ಬಿದ್ದಿದೆ ಎಂಬುದನ್ನು ಇದು ಸೂಚಿಸುತ್ತದೆ. ಪ್ರಯೋಗವನ್ನು ಕನಿಷ್ಠ ೬ ಬಾರಿ ಪುನರಾವರ್ತಿಇಸಿ ಸರಾಸರಿ ದೂರ ಲೆಕ್ಕಿಸಿ. ದೃಶ್ಯ ಉದ್ದೀಪನೆಗೆ ಪ್ರತಿಕ್ರಿಯೆ ತೋರಲು ನಿಮ್ಮ ಮಿತ್ರ ತೆಗೆದುಕೊಳ್ಳುವ ಕಾಲದ ಸೂಚಿ ಇದು.

ನಿಮ್ಮ ಮಿತ್ರನ ಪಾತ್ರವನ್ನು ನೀವೂ ನಿಮ್ಮ ಪಾತ್ರವನ್ನು ನಿಮ್ಮ ಮಿತ್ರನೂ ಪುನರಾವರ್ತಿಸಿ ದೃಶ್ಯ ುದ್ದೀಪನೆಗೆ ಪ್ರತಿಕ್ರಿಯೆ ತೋರಲು ನೀವು ತೆಗೆದುಕೊಳ್ಳುವ ಕಾಲದ ಸೂಚಿಯನ್ನೂ ಪತ್ತೆ ಹಚ್ಚಿ. ಪ್ರಯೋಗವನ್ನು ನಿಮ್ಮ ಮಿತ್ರವೃಂದದ ಇತರ ಸದಸ್ಯರಿಗೂ ವಿಸ್ತರಿಸಿ.

No comments: