Pages

14 December 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೫೨

ದ್ವಿನೇತ್ರ ದೃಷ್ಟಿ

ನಮಗೆ ಎರಡು ಕಣ್ಣುಗಳು ಇರುವುದರಿಂದ ವಿಶೇಷ ಲಾಭವಿದೆಯೇ? ಈ ಮುಂದೆ ವರ್ಣಿಸಿರುವ ಪ್ರಯೋಗಗಳನ್ನು ಮಾಡಿ ನೀವೇ ತೀರ್ಮಾನಿಸಿ.

೧. ಅಗಲ ಕಿರಿದಾದ ಬಾಯಿ ಉಳ್ಳ ಬಾಟಲ್ ಮತ್ತು ಅದರೊಳಗೆ ಸರಾಗವಾಗಿ ಹಾಕಬಹುದಾದ ೧೦ ಕಲ್ಲು ಅಥವ ಕಾಳುಗಳನ್ನು ಸಂಗ್ರಹಿಸಿ. ಮೇಜಿನ ಮೇಲೆ ಬಾಟಲನ್ನು ಇಡಿ. ಅದರಿಂದ ಸುಮಾರು ೩೦ ಸೆಂಮೀಗಿಂತ ಹೆಚ್ಚು ದೂರದಲ್ಲಿ ಕುಳಿತುಕೊಳ್ಳುವಂತೆ ನಿಮ್ಮ ಮಿತ್ರನಿಗೆ ಹೇಳಿ. ಕೈನಲ್ಲಿ ಒಂದು ಕಲ್ಲು ಅಥವ ಕಾಳು ತೆಗೆದುಕೊಂಡು ಬಾಟಲಿನ ಬಾಯಿಯ ಮೇಲೆ ಅದರಿಂದ ಸುಮಾರು ೫ ಸೆಂಮೀ ಎತ್ತರದಲ್ಲಿ ಹಿಡಿದುಕೊಳ್ಳಲು ಹೇಳಿ. ತದನಂತರ ಮೇಜಿನ ಮೇಲ್ಮೈಗೆ ಸಮಾಂತರವಾಗಿ ಸರಿಸುಮಾರಾದ ವೃತ್ತಾಕಾರದಲ್ಲಿ ಕೈಯನ್ನು ತಿರುಗಿಸುತ್ತಿರುವಂತೆಯೂ ‘ಹಾಕು’ ಎಂದು ನೀವು ಹೇಳಿದೊಡನೆ ಕಲ್ಲನ್ನು ಬಾಟಲಿನೊಳಕ್ಕೆ ಹಾಕುವಂತೆ ತಿಳಿಸಿ. ಪ್ರಯೋಗವನ್ನು ೯ ಬಾರಿ ಪುನರಾವರ್ತಿಸಿ. ೧೦ ಕಲ್ಲುಗಳ ಪೈಕಿ ಎಷ್ಟು ಬಾಟಲಿನೊಳಕ್ಕೆ ಬಿದ್ದವು ಎಂಬುದನ್ನು ದಾಖಲಿಸಿ. ತದನಂತರ ಎಡಗಣ್ಣನ್ನು ಮುಚ್ಚಿಕೊಂಡು ೧೦ ಬಾರಿಯೂ ಬಲಗಣ್ಣನ್ನು ಮುಚ್ಚಿಕೊಂಡು ೧೦ ಬಾರಿಯೂ ಪ್ರಯೋಗ ಪುನರಾವರ್ತಿಸುವಂತೆ ಹೇಳಿ. ಮೂರೂ ಪ್ರಯೋಗಗಳ ಫಲಿತಾಶಗಳನ್ನು ಆಧರಿಸಿ ಎರಡು ಕಣ್ಣುಗಳು ಇರುವುದರ ಉಪಯುಕ್ತತೆಯ ಕುರಿತು ತೀರ್ಮಾನಿಸಿ.

೨. ಒಂದು ಪೆನ್ಸಿಲನ್ನು ಭೂತಲಕ್ಕೆ ಲಂಬವಾಗಿ ಮುಂದಕ್ಕೆ ಚಾಚಿದ ಬಲಗೈನಲ್ಲಿ ಹಿಡಿದುಕೊಳ್ಳಿ. ಎರಡೂ ಕಣ್ಣುಗಳು ತೆರೆದಿರಲಿ. ದೂರದಲ್ಲಿ ಇರುವ ಯಾವುದಾದರೂ ಕಂಬ ಅಥವ ಕಿಟಕಿ/ಬಾಗಿಲಿನ ಚೌಕಟ್ಟಿನ ನೇರದಲ್ಲಿ ಪೆನ್ಸಿಲ್ ಇರುವಂತೆ ಕೈಅನ್ನು ಚಲಿಸಿ. ಆ ಕೈಅನ್ನು ಅಲುಗಾಡಿಸದೆಯೇ ಎಡಗಣ್ಣನ್ನು ಮುಚ್ಚಿ ಬಲಗಣ್ಣಿನಿಂದ ನೋಡಿದಾಗ, ತದನಂತರ ಬಲಗಣ್ಣನ್ನು ಮುಚ್ಚಿ ಎಡಗಣ್ಣಿನಿಂದ ನೋಡಿದಾಗ ಪೆನ್ಸಿಲ್ ಮೊದಲಿನಂತೆಯೇ ದೂರದ ವಸ್ತುವಿನ ನೇರದಲ್ಲಿಯೇ ಇರುವಂತೆ ಗೋಚರಿಸುತ್ತದೆಯೇ? ಎಡಗೈನಲ್ಲಿ ಪೆನ್ಸಿಲ್ ಹಿಡಿದುಕೊಂಡು ಇಡೀ ಪ್ರಯೋಗವನ್ನು ಪುನರಾವರ್ತಿಸಿ. ಈ ಪ್ರಯೋಗಗಳನ್ನು ಆಧರಿಸಿ ಎರಡು ಕಣ್ಣುಗಳು ಇರುವುದರ ಉಪಯುಕ್ತತೆಯ ಕುರಿತು ತೀರ್ಮಾನಿಸಿ. (ನಿಮ್ಮ ಎರಡು ಕಣ್ಣುಗಳ ಕ್ಷಮತೆ ನೂರಕ್ಕೆ ನೂರರಷ್ಟು ಸಮವಾಗಿರುವುದಿಲ್ಲ.  ಎರಡೂ ಕಣ್ಣುಗಳನ್ನು ತೆರೆದಿದ್ದಾಗ ವಸ್ತುಗಳನ್ನು ಏಕರೇಖಸ್ಥವಾಗಿಸುವಾಗ ಎರಡು ಕಣ್ಣುಗಳ ಪೈಕಿ ಯಾವ ಕಣ್ಣು ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ತರ್ಕಿಸಿ ನಿಮ್ಮ ಮಟ್ಟಿಗೆ ಯಾವುದು ಪ್ರಧಾನ ಕಣ್ಣು ಎಂಬುದನ್ನೂ ತರ್ಕಿಸಿ.)

No comments: