Pages

8 August 2011

ಅವ್ಯವಸ್ಥೆಯಲ್ಲಿ ಸುವ್ಯವಸ್ಥೆ ಕಾಣುವ ಪ್ರವೃತ್ತಿ

‘ಅವ್ಯವಸ್ಥೆಯಲ್ಲಿ ಸುವ್ಯವಸ್ಥೆ  ಕಾಣುವ ಪ್ರವೃತ್ತಿ’ - ಇದು ಎಲ್ಲ ಮಾನವರ ಸ್ವಭಾವಸಿದ್ಧ ಪ್ರವೃತ್ತಿ. ಅವ್ಯವಸ್ಥೆಯನ್ನು ಗ್ರಹಿಸಲು ನಮ್ಮ ಮಿದುಳು ನಿರಾಕರಿಸುತ್ತದೆ. ಅವ್ಯವಸ್ಥೆಯಲ್ಲಿ ಏನಾದರೊಂದು ಸುವ್ಯವಸ್ಥೆಯನ್ನು ಹುಡುಕಿ ಅರ್ಥೈಸಲು ಅದು ಪ್ರಯತ್ನಿಸುತ್ತದೆ. ಅವ್ಯವಸ್ಥಿತ ಯಥಾರ್ಥತೆಯಲ್ಲಿ ಸಾಧ್ಯವಾದಷ್ಟು ಸರಳವಾದ ಪ್ರರೂಪವನ್ನು ಕಾಣಲು ಪ್ರಯತ್ನಿಸುವುದು ಈ ಪ್ರವೃತ್ತಿಯ ವಿಶಿಷ್ಟತೆ. ಪುರಾವೆ ಬೇಕೇ? ಇಲ್ಲಿದೆ ನೋಡಿ-



ಚಿತ್ರ ೧ ರಲ್ಲಿ ಏನು ಗೋಚರಿಸುತ್ತಿದೆ? ಹೆಚ್ಚು ಆಲೋಚಿಸದೆ ಥಟ್ಟನೆ ಹೇಳಿ. ಒಂದಕ್ಕೊಂದು ಜೋಡಣೆ ಆಗಿರುವ ಉಂಗುರಗಳೇ ಅಥವ ಸಂಕೀರ್ಣ ಆಕೃತಿಯೇ? ಬಹುಸಂಖ್ಯಾತರ ಉತ್ತರ - ಒಂದಕ್ಕೊಂದು ಜೋಡಣೆ ಆಗಿರುವ ಉಂಗುರಗಳು. ವಾಸ್ತವವಾಗಿ ಅದನ್ನು ಅನೇಕ ವೃತ್ತಗಳನ್ನು ಬಿಡಿಸಿ ರಚಿಸಲಾಗಿದೆ. ನೋಡುಗರಿಗೆ ಅದು ಗೊತ್ತಾದರೂ ಅದನ್ನು ಉಂಗುರಗಳ ಜೋಡಣೆ ಎಂದೇ ಅರ್ಥೈಸುವುದು ಅಸ್ವಾಭಾವಿಕವೇನಲ್ಲ.

ದೃಶ್ಯಕ್ಷೇತ್ರದಲ್ಲಿ ಇರುವ ಅನೇಕ ವಸ್ತುಗಳನ್ನು ನಿರ್ದಿಷ್ಟ ಪ್ರರೂಪಗಳಾಗಿ (ಪ್ಯಾಟರ್ನ್) ಅಥವ ಗುಂಪುಗಳಾಗಿ ಸಂಘಟಿಸಿ ಗ್ರಹಿಸಲು ಯತ್ನಿಸುವದು ಮಾನವನ ಸ್ವಭಾವಸಿದ್ಧ ಗುಣ. ಈ ಗುಣದಿಂದಾಗಿಯೇ ಪ್ರತೀ ವ್ಯಕ್ತಿ ತನ್ನ ಅವ್ಯವಸ್ಥಿತ ಗ್ರಾಹ್ಯಕ್ಷೇತ್ರದ ಮೇಲೆ ತನ್ನದೇ ಆದ ರೀತಿಯಲ್ಲಿ ಸುವ್ಯವಸ್ಥೆಯನ್ನು ಆರೋಪಿಸಿ ಗ್ರಹಿಸುತ್ತಾನೆ. ಈ ಪ್ರಕ್ರಿಯೆ ಹೇಗೆ ಜರಗುತ್ತದೆ ಎಂಬುದನ್ನು ಈ ಮುಂದಿನ ಉದಾಹರಣೆಗಳ ನೆರವಿನಿಂದ ತಿಳಿಯಬಹುದು

ಉದಾ ೧: ಚಿತ್ರ ೨ಅ ನೋಡಿ. ಆಯತಾಕೃತಿಗಳ ನೀಟಸಾಲುಗಳು ಮತ್ತು ವೃತ್ತಾಕೃತಿಗಳ ನೀಟಸಾಲುಗಳು ಪರ್ಯಾಯವಾಗಿ ಇವೆಯಲ್ಲವೆ?  ಚಿತ್ರ ೨ಆ ನೋಡಿ. ತುಸು ಸಮಯ ಪರಿಶೀಲಿಸಿದರೆ ಶಿರೋಬಿಂದು ಮೇಲೆ ಇರುವ ಕಪ್ಪು ಚುಕ್ಕೆಗಳ ಒಂದು ತ್ರಿಭುಜ ಮತ್ತು ಶಿರೋಬಿಂದು ಕೆಳಗೆ ಇರುವ ಚಿಕ್ಕ ವೃತ್ತಗಳ ಒಂದು ತ್ರಿಭುಜ ಗೋಚರಿಸುತ್ತದಲ್ಲವೆ? ನಮ್ಮ ಗ್ರಾಹ್ಯಕ್ಷೇತ್ರದಲ್ಲಿ ಇರುವ ಸಮಾನರೂಪದ ವಸ್ತುಗಳನ್ನು ಒಗ್ಗೂಡಿಸಿ ಸಂಘಟಿಸಿ ಗ್ರಹಿಸುವ ಪ್ರವೃತ್ತಿ ನಮ್ಮಲ್ಲಿ ಇರುವುದರಿಂದ ಹೀಗಾಗಿದೆ.

ಉದಾ ೨: ಚಿತ್ರ ೩ಅ ದಲ್ಲಿ ಎರಡೆರಡು ಗೆರೆಗಳ ಮೂರು ಗುಂಪುಗಳು ಗೋಚರಿಸುತ್ತಿದೆ ಎಂದು ಹೇಳುವ ಸಾಧ್ಯತೆ ಹೆಚ್ಚು. ೬ ಗೆರೆಗಳಿವೆ ಅನ್ನುವ ಸಾಧ್ಯತೆ ಕಮ್ಮಿ. ಚಿತ್ರ ೩ಆ ದಲ್ಲಿ ಎಡಭಾಗದಲ್ಲಿ ತಲಾ ಮೂರು ಕಪ್ಪುಚುಕ್ಕಿಗಳ ಎರಡು ನೀಟಸಾಲುಗಳೂ ಬಲಭಾಗದಲ್ಲಿ ತಲಾ ಮೂರು ಕಪ್ಪುಚುಕ್ಕಿಗಳ ಎರಡು ಅಡ್ಡಸಾಲುಗಳೂ ಗೋಚರಿಸುತ್ತಿವೆಯಲ್ಲವೇ? ಪರಸ್ಪರ ಸಮೀಪದಲ್ಲಿ ಇರುವ ವಸ್ತುಗಳನ್ನು ಒಗ್ಗೂಡಿಸಿ ಸಂಘಟಿಸಿ ಗ್ರಹಿಸುವ ಪ್ರವೃತ್ತಿಯೇ ಇದಕ್ಕೆ ಕಾರಣ.

ಉದಾ ೩:ಚಿತ್ರ ೪ಅ ಅನ್ನು ತುಸು ಸಮಯ ಪರಿಶೀಲಿಸಿದರೆ ೬ ಶೃಂಗಗಳಿರುವ ತಾರೆಯ ಆಕಾರದಲ್ಲಿ ಕಪ್ಪು ಮತ್ತು ಬಿಳುಪು ವೃತ್ತಾಕಾರದ ಬಿಲ್ಲೆಗಳನ್ನು ಜೋಡಿಸಿದಂತೆ ಭಾಸವಾಗುತ್ತದೆಯಲ್ಲವೇ? ಚಿತ್ರ ೪ಆ ದಲ್ಲಿ ಕಪ್ಪುಬಣ್ಣದ ಆಕೃತಿಗಳು ನಮ್ಮ ಗಮನವನ್ನು ತಮ್ಮತ್ತ ಸೆಳೆಯುತ್ತವಲ್ಲವೇ? ವಸ್ತುಗಳನ್ನು ಸಮ್ಮಿತೀಯ ಅಥವ ಸಮಪಾರ್ಶ್ವತೆ ಉಳ್ಳ (ಸಿಮೆಟ್ರಿ) ಪ್ರರೂಪಗಳಾಗಿ ಸಂಘಟಿಸಿ ಗ್ರಹಿಸುವ, ಸಮ್ಮಿತೀಯ ಆಕೃತಿಗಳತ್ತ ಮೊದಲು ಗಮನ ಹರಿಸುವ ಪ್ರವೃತ್ತಿಯೇ ಇದಕ್ಕೆ ಕಾರಣ.

ಉದಾ ೪: ಚಿತ್ರ ೫ಅ ದಲ್ಲಿ ಇಂಗ್ಲಿಷ್ ನಲ್ಲಿ ಇರುವ ಐಬಿಎಮ್ ಕಂಪೆನಿಯ ಅಧಿಕೃತ ಚಿಹ್ನೆಯೂ ಚಿತ್ರ ೫ಆ ದಲ್ಲಿ ಕನ್ನಡದ ‘ರ’ ಅಕ್ಷರವೂ ಇದೆಯಲ್ಲವೇ? ಇನ್ನೊಮ್ಮೆ ಅವನ್ನು ಸೂಕ್ಷ್ಮವಾಗಿ ಅವಲೋಕಿಸಿ. ಅಕ್ಷರಗಳನ್ನು ಬರೆಯಬೇಕಾದ ರೀತಿಯಲ್ಲಿ ಬರೆಯದಿದ್ದರೂ ಅವು ಗೋಚರಿಸಿದ್ದು ಏಕೆ? ಇರುವ ಅಂಶಗಳನ್ನು ಹೆಚ್ಚು ಅರ್ಥಪೂರ್ಣ ವಸ್ತುವಾಗಿ ಸಂಘಟಿಸಲೋಸುಗ ಖಾಲಿ ಇರುವ ಸ್ಥಳಗಳನ್ನು ಮಾನಸಿಕವಾಗಿ ಭರ್ತಿ ಮಾಡಿ ಗ್ರಹಿಸುವ ಪ್ರವೃತ್ತಿ ಈ ವಿದ್ಯಮಾನಕ್ಕೆ ಕಾರಣ. [ವಾಕ್ಯಗಳಲ್ಲಿ ಇರುವ ಕೆಲವು ಕಾಗುಣಿತ ದೋಷಗಳನ್ನು ಗಮನಿಸದೆಯೆ ಸರಿಯಾಗಿ ಓದುವುದಕ್ಕೂ ಇದೇ ಕಾರಣ]

ಉದಾ ೫: ಚಿತ್ರ ೬ಅ ದಲ್ಲಿ ತೋರಿಸಿದ ಬಿಲ್ಲೆಗಳ ಜೋಡಣೆಯು ಚಿತ್ರ ೬ಆ ದಲ್ಲಿ ೩ ಗುಂಪುಗಳ ಸಂಯೋಜನೆಯಂತೆ ಗೋಚರಿಸಲು ಕಾರಣ ಏನು? ಯಾವುದೇ ರೇಖೆಯಗುಂಟ ಕಣ್ಣು ಹಾಯಿಸಿದಾಗ ಆ ರೇಖೆ ಕಡಿದಾದ ತಿರುವುಗಳು ಇಲ್ಲದೆ ಸರಾಗವಾಗಿ ಮುಂದುವರಿಯುವುದನ್ನು ಅಪೇಕ್ಷಿಸುವ ಪ್ರವೃತ್ತಿ ಇದಕ್ಕೆ ಕಾರಣ.



ಸುವ್ಯವಸ್ಥಿತವಾಗಿ ಸಂಘಟಿಸಿದ ವಸ್ತುಗಳನ್ನು ಗ್ರಹಿಸುವುದು ಸುಲಭ. ಎಂದೇ, ವಸ್ತುಗಳ ಅವ್ಯವಸ್ಥಿತ ಜೋಡಣೆಯಲ್ಲಿ ನಮ್ಮ ಹಿಂದಿನ ಕಲಿಕೆಯ ವ್ಯಾಪ್ತಿಯಲ್ಲಿ ಇರುವ ಯಾವುದಾದರೂ ಒಂದು ಅಥವ ಹೆಚ್ಚು ಸುವ್ಯವಸ್ಥೆಯನ್ನು ಆರೋಪಿಸಿ ಅದನ್ನು ಗ್ರಹಿಸುತ್ತೇವೆ. ಮಕ್ಕಳಿಗೆ ನಾವು ಒದಗಿಸುವ ಕಲಿಕೆಯ ಅನುಭವಗಳು ಸುವ್ಯವಸ್ಥಿತವಾಗಿ ಇದ್ದರೆ ಅವನ್ನು ಸುಲಭವಾಗಿ ಗ್ರಹಿಸುತ್ತಾರೆ.

ಕೊನೆಯದಾಗಿ, ಚಿತ್ರ ೭ ರಲ್ಲಿ ಏನೇನು ಕಾಣುತ್ತಿದೆ?

3 comments:

sukhesh said...

ಇಂತಹ ವಿಷಯಗಳ ಬಗ್ಗೆ ಬರೆಯುವವರು ಕಡಿಮೆ. ಓಳ್ಳೆಯ ಲೇಖನ.

M Sadashiva Rao said...

ಉತ್ತಮ ಲೇಖನ ಹಾಗು ಮಾನವನ ಸ್ವಾಭಾವಿಕ ಪ್ರತಿಕ್ರಿಯೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿದ್ದಾರೆ. ಇದರ ಬಗ್ಗೆ ಇಂದು ಇರುವ ಮಾಹಿತಿಯ ಕೊರತೆಯನ್ನು ಲೇಖಕರು ನೀಗಿಸಿದ್ದಾರೆ

ಕಾಸು ಕುಡಿಕೆ said...

ಈ ವಿಶಯದ ಬಗ್ಗೆ ಇನ್ನಷ್ಟು ಜಾಸ್ತಿ ಬರೆಯಿರಿ...ಕನ್ನಡ ಶಬ್ದಗಳ ಬಳಕೆ ಕಠಿಣವಾಗಿತ್ತು.