Pages

11 August 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೪೦

ಕೋನೋನ್ನತಿಮಾಪಿ ಅಥವ ವಾಟಮಾಪಿ (ನತಿಮಾಪಿ/ನಮನಮಾಪಿ, ಇನ್ ಕ್ಲಿನಾಮೀಟರ್)

ಭೌಗೋಳಿಕ ಉತ್ತರವನ್ನು ಹೇಗೆ ಗುರುತಿಸುವುದು ಎಂಬುದನ್ನು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೩೭ ರಲ್ಲಿ, ಧ್ರುವತಾರೆಯನ್ನು ಗುರುತಿಸುವುದು ಹೇಗೆ ಎಂಬುದನ್ನು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೩೯ ರಲ್ಲಿ ವಿವರಿಸಿದ್ದೇನೆ. ಈ ಚಟುವಟಿಕೆಯಲ್ಲಿ ನಿಮ್ಮ ಊರಿನ ಅಕ್ಷಾಂಶವನ್ನು ಪ್ರಾಯೋಗಿಕವಾಗಿ ಅಂದಾಜಿಸಲು ಅನುಸರಿಸಬಹುದಾದ ವಿಧಾನದ ವಿವರಣೆ ಇದೆ. ಈ ವಿಧಾನದಿಂದ ಯಾವುದೇ ಆಕಾಶಕಾಯದ ಸ್ಥಾನವನ್ನು ಸೂಚಿಸಲೂಬಹುದು.

ಒಂದು ರಟ್ಟಿನ ಮೇಲೆ ಸುಮಾರು ೩೦ ಸೆಂಮೀ ತ್ರಿಜ್ಯ ಉಳ್ಳ ವೃತ್ತ ರಚಿಸಿ, ಅದರ ೧/೪ ಭಾಗವನ್ನು ಮಾತ್ರ ಇಂಕಿನಿಂದ ಚೆನ್ನಾಗಿ ಗುರುತುಮಾಡಿ ಕತ್ತರಿಸಿ ಪ್ರತ್ಯೇಕಿಸಿ.  ಕೋನಮಾಪಕದ ನೆರವಿನಿಂದ ಇದರ ಮೇಲೆ ೦ ಡಿಗ್ರಿ ಇಂದ ೯೦ ಡಿಗ್ರಿ ತನಕ ಕೋನಸೂಚೀ ಗೆರೆಗಳನ್ನು ಎಳೆಯಿರಿ. ಇದನ್ನು ಕೈನಲ್ಲಿ ಹಿಡಿದುಕೊಳ್ಳಲು ಅನುಕೋಲವಾಗುವಂತೆ ಇನ್ನೊಂದು ಯುಕ್ತ ಗಾತ್ರದ ರಟ್ಟಿಗೆ ಅಂಟಿಸಿ. ೯೦ ಡಿಗ್ರಿ ಕೋನಸೂಚೀ ಇರುವ ಬಾಹುವಿನಗುಂಟ ಬಾಲ್ ಪಾಇಂಟ್ ಪೆನ್ನಿನ ಎರಡೂ ಕಡೆ ತೆರೆದಿರುವ ಕೊಳವೆಯೊಂದನ್ನು ಅಂಟುಟೇಪಿನ ನೆರವಿನಿಂದ ನಿಲ್ಲಿಸಿ. ೦ ಡಿಗ್ರಿ ಮತ್ತು ೯೦ ಡಿಗ್ರಿ ಕೋನಸೂಚಕ ಬಾಹುಗಳು ಸಂಧಿಸುವಲ್ಲಿ ಒಂದು ಸಣ್ಣ ರಂಧ್ರ ಮಾಡಿ ಲಂಬಸೂತ್ರವೊಂದನ್ನು ಬೇಳದಂತೆ ಸಿಕ್ಕಿಸಿ. ಇದೇ ಬಹೂಪಯೋಗೀ ಅನ್ನಬಹುದಾದ ಕೋನೋನ್ನತಿಮಾಪಿ ಅಥವ ವಾಟಮಾಪಿ (ನತಿಮಾಪಿ/ನಮನಮಾಪಿ, ಇನ್ ಕ್ಲಿನಾಮೀಟರ್)

ಚಿತ್ರದಲ್ಲಿ ತೋರಿಸಿದಂತೆ ಲಂಬಸೂತ್ರವು ಕ್ಷಿತಿಜತಲಕ್ಕೆ ಲಂಬವಾಗಿರುವಂತೆ ಸಾಧನವನ್ನು ಹಿಡಿದುಕೊಂಡು ಕೊಳವೆಯ ಮೂಲಕ ಧ್ರುವತಾರೆಯನ್ನು ವೀಕ್ಷಿಸಿ. ಇಂತು ವೀಕ್ಷಿಸುತ್ತಿರುವಾಗ ಲಂಬಸೂತ್ರ ತೋರಿಸುವ ಕೋನವನ್ನು ಬರೆದಿಟ್ಟುಕೊಳ್ಳುವಂತೆ ನಿಮ್ಮ ಮಿತ್ರನಿಗೆ ಹೇಳಿ. ಈ ಕೋನವೇ ಧ್ರುವತಾರೆಯ ಕೋನೋನ್ನತಿ, ಅರ್ಥಾತ್ ನೀವಿರುವ ಸ್ಥಳದ ಅಕ್ಷಾಂಶ.

ಈ ಸಾಧನದ ನೆರವಿನಿಂದ ನೀವಿರುವ ಸ್ಥಳದ  ಅಕ್ಷಾಂಶ ತಿಳಿದಿದ್ದರೆ ಧ್ರುವತಾರೆಯನ್ನು ಗುರುತಿಸಬಹುದು, ಧ್ರುವತಾರೆಯನ್ನು ಬರಿಗಣ್ಣಿನಿಂದ ಗುರುತಿಸಲು ತಿಳಿದಿದ್ದರೆ ಅಕ್ಷಾಂಶವನ್ನು ತಿಳಿಯಬಹುದು. ಅಂತೆಯೇ ಯಾವದೇ ಆಕಾಶಕಾಯದ ಕೋನೋನ್ನತಿಯನ್ನು ನಿರ್ಧರಿಸಲೂ, ಕೋನೋನ್ನತಿ ತಿಳಿದಿದದ್ದರೆ ಆಕಾಶಕಾಯವನ್ನು ಗುರುತಿಸಲೂ ಈ ಸಾಧನ ಉಪಯೋಗಿಸಬಹುದು.


No comments: