Pages

23 June 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೧೯

ವಾಯು  ಎಲ್ಲಿಂದ ಬಂದಿತು?

ಒಂದು ಅಗಲ ಕಿರಿದಾದ ಬಾಯಿ ಉಳ್ಳ ಬಾಟಲ್, ಅದರ ಬಾಯಿಯನ್ನು ವಾಯು ಅಭೇದ್ಯವಾಗಿ ಮುಚ್ಚಲು ಬೇಕಾಗುವಷ್ಟು ಜಿಗುಟಾದ ಜೇಡಿಮಣ್ಣು (ರೊಟ್ಟಿ ಹಟ್ಟಿನ ಹದಕ್ಕೆ ನಾದಿದ ಮೈದಾ ಅಥವ ಮಾಡೆಲಿಂಗ್ ಕ್ಲೇ ಉತ್ತಮ), ಸಾಪೇಕ್ಷವಾಗಿ ದಪ್ಪನೆಯ ಉದ್ದವಾದ ತೊಟ್ಟು ಇರುವ ದೊಡ್ಡ ಎಲೆ, ಒಂದು ಹೀರುಗೊಳವೆ - ಇವಿಷ್ಟನ್ನು ಸಂಗ್ರಹಿಸಿ. ಬಾಟಲಿನಲ್ಲಿ ನೀರು ತುಂಬಿಸಿ ತೊಟ್ಟಿನ ಮೇಲ್ಭಾಗಕ್ಕೆ ಸುತ್ತಲೂ ಜೇಡಿಮಣ್ಣಿನ ಮುದ್ದೆ ಮಾಡಿ ಬಾಟಲಿಗೆ ಬಿರಡೆ ಆಗುವಷ್ಟು ದಪ್ಪಕ್ಕೆ ಮೆತ್ತಿ.  ಎಲೆ ಸಹಿತವಾದ ಮಣ್ಣಿನ ಮುದ್ದೆಯ ಬಿರಡೆಯನ್ನು ಬಾಟಲಿಗೆ ಹಾಕಿ. ತೊಟ್ಟಿನ ಕೆಳತುದಿ ನೀರಿನಲ್ಲಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರಬೇಕು. ತದನಂತರ ಹೀರುಗೊಳವೆಯನ್ನು ಮಣ್ಣಿನ ಬಿರಡೆಯ ಮೂಲಕ ಬಾಟಲಿನ ಒಳಕ್ಕೆ ತೂರಿಸಿ. ಬಾಟಲಿನ ಒಳಗಿರುವ ಹೀರುಗೊಳವೆಯ ತುದಿ ನೀರಿನಲ್ಲಿ ಮುಳುಗಿರಬಾರದು. ಅರ್ಥಾತ್, ನೀರಿನ ಮಟ್ಟಕ್ಕಿಂತ ಮೇಲೆ ಇರಬೇಕು. ಇಷ್ಠಾದ ಬಳಿಕ ಬಾಟಲಿನ ಬಾಯಿಯ ಸುತ್ತ, ಹೀರುಗೊಳವೆಯನ್ನು ತೂರಿಸಿದ ಸ್ಥಳದಲ್ಲಿ ಇನ್ನಷ್ಟು ಜೇಡಿಮಣ್ಣು ಮೆತ್ತಿ ಬಾಟಲ್ ವಾಯು ಅಭೇದ್ಯವಾಗಿರುವುದನ್ನು ಖಾತರಿ ಮಾಡಿಕೊಳ್ಳಿ. (ಬಾಟಲ್ ಸಂಪೂರ್ಣವಾಗಿ ವಾಯು ಅಭೇದ್ಯವಾಗಿದ್ದರೆ ಮಾತ್ರ ಈ ಪ್ರಯೋಗ ಯಶಸ್ವಿ ಆಗುತ್ತದೆ.)  ತದನಂತರ ಹೀರುಗೊಳವೆಯ ಮೂಲಕ ಬಾಟಲಿನ ಒಳಗಿದ್ದ ವಾಯುವನ್ನು ಹೊರಕ್ಕೆಳೆಯಿರಿ. ತೊಟ್ಟಿನ ತುದಿಯಲ್ಲಿ ಗುಳ್ಳೆಗಳು ಉದ್ಭವಿಸಿ ನೀರಿನಲ್ಲಿ ಮೇಲೇರುವುದನ್ನು ಗಮನಿಸಿ. ಬಾಟಲಿನೊಳಕ್ಕೆ ವಾಯು ಎಲ್ಲಿಂದ ಯಾವುದರ ಮೂಲಕ ಏಕೆ ಬಂದಿತೆಂಬುದನ್ನು ತರ್ಕಿಸಿ.

No comments: