ವಾಯು ಒಳ ನುಸುಳದಷ್ಟು ಬಿಗಿಯಾದ ರಬ್ಬರ್ ಬಿರಡೆ ಇರುವ ಔಷಧದ ಚಿಕ್ಕ ಖಾಲಿ ಬಾಟಲ್ ಒಂದನ್ನು ಸಂಗ್ರಹಿಸಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಆಸ್ಪತ್ರೆಗಳಲ್ಲಿ ಇದು ಸುಲಭಲಭ್ಯ. ಬಾಲ್ ಪಾಇಂಟ್ ಪೆನ್ನಿನ ಖಾಲಿ ರೀಫಿಲ್ ಒಂದನ್ನು ಸಂಗ್ರಹಿಸಿ ಅದರ ಬಾಲ್ ಕಿತ್ತು ಹಾಕಿ. ಅಕಸ್ಮಾತ್ ಅಲ್ಲಲ್ಲಿ ಇಂಕ್ ಅಂಟಿಕೊಂಡಿದ್ದರೆ ಸಾಬೂನಿನ ಪ್ರಬಲ ದ್ರಾವಣ ಅಥವ ಗ್ಲಿಸರಿನ್ನಿನಿಂದ ತೊಳೆದು ತೆಗೆಯಿರಿ. ಅಪಾರ ತಾಳ್ಮೆ ಅಗತ್ಯವಿರುವ ಕಾರ್ಯ ಇದು. ಒಂದು ದಪ್ಪನೆಯ ಸೂಜಿಯನ್ನು ರಬ್ಬರ್ ಬಿರಡೆಯ ಮಧ್ಯದಲ್ಲಿ ತೂರಿಸಿ ತೆಗೆಯಿರಿ. ಸೂಜಿ ತೆಗೆದೊಡನೆ ಮಾಡಿದ ರಂಧ್ರ ಸುಲಭವಾಗಿ ಗೋಚರಿಸುವುದಿಲ್ಲ. ಈ ರಂಧ್ರದ ಮೂಲಕ ರೀಫಿಲ್ ತೂರಿಸಿ.

ಬಾಟಲಿನ ತುಂಬ ನೀರು ತುಂಬಿಸಿ ರೀಫಿಲ್ ನಳಿಕೆಯುಕ್ತ ಬಿರಡೆ ಹಾಕಿ. ನಳಿಕೆಯಲ್ಲಿ ನೀರಿನ ಮಟ್ಟವನ್ನು ಗುರುತಿಸಿ. ಬಾಟಲನ್ನು ಇಕ್ಕುಳದಿಂದ ಹಿಡಿದುಕೊಂಡು ಕಾಯಿಸಿ. ನಳಿಕೆಯಲ್ಲಿ ನೀರಿನ ಮಟ್ಟ ಮೇಲೇರುವುದನ್ನು ಗಮನಿಸಿ. ಬಾಟಲನ್ನು ಕಾಯಿಸಲು ತಕ್ಕುದಾಸ ಸ್ಪಿರಿಟ್ ದೀಪ ಇಲ್ಲದಿದ್ದರೆ ಮೋಂಬತ್ತಿಯಿಂದ ಬಿಸಿ ಮಾಡಬಹುದಾದರೂ ಬಾಟಲಿಗೆ ಮಸಿ ಹಿಡಿಯುತ್ತದೆ. ಬೇರೆ ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿನಲ್ಲಿ ಬಾಟಲನ್ನು ಅದರ ಕುತ್ತಿಗೆಯ ತನಕ ಮುಳುಗಿಸಿ ಹಿಡಿಯಲೂಬಹುದು.
ಬಿಸಿ ಮಾಡಿದಾಗ ವಾಯುವಿನ ಗಾತ್ರದಲ್ಲಿ ಹೆಚ್ಚಳವಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ಪ್ರಯೋಗ ಈಗಾಗಲೇ ನೀವು ಮಾಡಿದ್ದೀರಿ. ಬಿಸಿ ಮಾಡಿದರೆ ನೀರಿನ ಗಾತ್ರವೂ ಹೆಚ್ಚುತ್ತದೆ ಎಂಬುದನ್ನು ಈ ಪ್ರಯೋಗ ಸಾಬೀತು ಪಡಿಸಿದೆ. ಅಂದ ಮೇಲೆ ಉಷ್ಣದ ಪೂರೈಕೆಯಾದರೆ ಅನಿಲಗಳ ಮತ್ತು ದ್ರವಗಳ ಗಾತ್ರ ಹೆಚ್ಚುತ್ತದೆ ಎಂದು ಸಾರ್ವತ್ರೀಕರಿಸಬಹುದೇ? ಆಲೋಚಿಸಿ.
No comments:
Post a Comment