Pages

20 June 2011

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೧೮

ಕಾರ್ಟೀಸಿಯನ್ ಮುಳುಕ (ಡೈವರ್)

ನಿಮ್ಮನ್ನು ನಿಶಿತಮತಿಯಾಗಿಸಬಲ್ಲ ಪ್ರಯೋಗ ಇದು. ಬಾಲ್ ಪಾಇಂಟ್ ಪೆನ್ನಿನ ಕ್ಯಾಪ್ (ವೀಕ್ಷಣೆಯನ್ನು ಅನುಕೂಲಿಸುವ ಪಾರದರ್ಶಕ ಕ್ಯಾಪ್ ಆಗಿದ್ದರೆ ಒಳ್ಳೆಯದು), ೧ ಲೀ ಧಾರಣ ಸಾಮರ್ಥ್ಯ ಉಳ್ಳ ಒಂದು ಗಾಜಿನ ಅಥವ ಪ್ಲಾಸ್ಟಿಕ್ ಬಾಟಲ್, ಒಂದು ಬೆಲೂನ್ ಅಥವಾ ಬಾಟಲಿನ ಬಾಯಿಯನ್ನು ಸಂಪೂರ್ಣವಾಗಿ ಆವರಿಸಿ ಮುಚ್ಚಬಲ್ಲ ರಬ್ಬರ್ ನ ತೆಳುವಾದ ಹಾಳೆಯ ತುಂಡು, ಒಂದು ದೊಡ್ಡ ಚೆಂಬು ತುಂಬಾ ನೀರು, ಅರಗು ಅಥವ ಜೇನು ಮೇಣ, ಒಂದು ಕ್ಯಾಂಡಲ್ - ಇವಿಷ್ಟನ್ನು ಸಂಗ್ರಹಿಸಿ.

ಕ್ಯಾಪ್ ನ ಕೆಳತುದಿಯಲ್ಲಿ ಜೇನು ಮೇಣ ಅಥವ ಅರಗು ಮೆತ್ತಿ. ಒಂದು ಚೆಂಬು ನೀರಿನಲ್ಲಿ ಕ್ಯಾಪ್ ತೇಲಿಸಿ ಅದು ಲಂಬವಾಗಿ ತೇಲುವುದನ್ನು ಖಾತರಿ ಪಡಿಸಿಕೊಳ್ಳಿ. ತದನಂತರ ಇನ್ನೂ ಸ್ವಲ್ಪ ಜೇನು ಮೇಣ ಅಥವ ಅರಗು ಮೆತ್ತಿ ಕ್ಯಾಪ್ ನ ತೂಕ ಹೆಚ್ಚಿಸಿ ಅದನ್ನು ನೀರಿನಲ್ಲಿ ತೇಲಿಸಿ ನೋಡಿ. ಇನ್ನೊಂದು ಸಾಸಿವೆ ಕಾಳಿನಷ್ಟು ಜೇನು ಮೇಣ ಅಥವ ಅರಗು ಮೆತ್ತಿದರೂ ಕ್ಯಾಪ್ ಮುಳುಗುತ್ತದೆ ಅನ್ನುವಷ್ಟರ ಮಟ್ಟಿಗೆ ಕ್ಯಾಪ್ ನ ತೂಕ ಇರುವಂತೆ ಮಾಡಿ. (ಇಂಕ್ ಫಿಲ್ಲರ್, ಬಾಲ್ ಪಾಇಂಟ್ ಪೆನ್ನಿನ ಹಿಂತುದಿಯಿಂದ ಅಗತ್ಯವಿರುವಷ್ಟು ಉದ್ದ ಇರುವಂತೆ ಕತ್ತರಿಸಿದ ತುಂಡು - ಇಂಥ ಅನೇಕವನ್ನು ಉಪಯೋಗಿಸಿಯೂ ಈ ಪ್ರಯೋಗ ಮಾಡಬಹುದು)

ಇಷ್ಟು ಸಿದ್ಧತೆ ಮಾಡಿಕೊಂಡ ಬಳಿಕ ಬಾಟಲಿನಲ್ಲಿ ನೀರು ತುಂಬಿಸಿ. ೩-೪ ಚಮಚೆ ನೋರು ಹಿಡಿಯುವಷ್ಟು ಜಾಗ ಖಾಲಿ ಇರಲಿ. ಮೊದಲೇ ಸಿದ್ಧಪಡಿಸಿದ ಕ್ಯಾಪ್ ಅನ್ನು ಬಾಟಲಿನ ನೀರಿನಲ್ಲಿ ತೇಲಿಬಿಡಿ. ಬಾಟಲಿನ ಬಾಯಿಯನ್ನು ಸಂಪೂರ್ಣವಾಗಿ ಆವರಿಸುವಂತೆ ಬೆಲೂನ್ ಅಥವ ರಬ್ಬರ್ ಹಾಳೆಯನ್ನು ಬಿಗಿಯಾಗಿ ಎಳೆದು ಕಟ್ಟಿ.  ಅದನ್ನು ಬೆರಳಿನಿಂದ ತುಸು ಒತ್ತಿದರೆ ಕ್ಯಾಪ್ ನೀರಿನಲ್ಲಿ ಮುಳುಗುವುದನ್ನೂ ಒತ್ತುವುದನ್ನು ನಿಲ್ಲಿಸಿದರೆ ಕ್ಯಾಪ್ ಮೇಲೇರುವುದನ್ನೂ ಗಮನಿಸಿ. ಕ್ಯಾಪ್ ಮುಳುಗುವ ವೇಗ ಮತ್ತು ಆಳ ರಬ್ಬರ್ ಹಾಳೆಯ ಮೇಲೆ ಹಾಕುವ ೊತ್ತಡವನ್ನು ಆಧರಿಸಿರುವುದನ್ನು ಗಮನಿಸಿ. ಬೆರಳಿನಿಂದ ರಬ್ಬರ್ ಹಾಳೆ ಒತ್ತಿದಾಗ ಕ್ಯಾಪ್ ನ ಬಾಯಿಯ ಒಳಗೆ ಇರುವ ನೀರಿನ ಮಟ್ಟದಲ್ಲಿ ಆಗುವ ವ್ಯತ್ಯಾಸ ಗಮನಿಸಿ (ಈ ವೀಕ್ಷಣೆಗೆ ಕ್ಯಾಪ್ ಪಾರದರ್ಶಕವಾಗಿರಬೇಕು), ಕಾರಣ ತರ್ಕಿಸಿ. ಒತ್ತಡ ಹಾಕಿದಾಗ ಕ್ಯಾಪ್ ಮುಳುಗಲು ಕಾರಣ ಏನು? ನೀವೇ ತರ್ಕಿಸಿ

No comments: