Pages

21 January 2014

ತಾರಾವಲೋಕನ ೪ - ವೀಕ್ಷಣಾ ಮಾರ್ಗದರ್ಶಿ, ಫೆಬ್ರವರಿ

.ಫೆಬ್ರವರಿ
ತಾರಾ ಪಟ ೧. ವಾಸ್ತವಿಕ

ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ

ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ

ತಾರಾ ಪಟ ೪. ರಾಶಿಚಕ್ರ


ವೀಕ್ಷಣಾ ಮಾರ್ಗದರ್ಶಿ

ಫೆಬ್ರವರಿ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಖಮಧ್ಯದ ಸಮೀಪದಲ್ಲಿ ವಿಶಿಷ್ಟ, ವಿಚಿತ್ರ ಜ್ಯಾಮಿತೀಯ ಆಕಾರದಿಂದಲೂ ಸದಸ್ಯ ತಾರೆಗಳ ಉಜ್ವಲ ಪ್ರಭೆಯಿಂದಲೂ ರಾರಾಜಿಸುತ್ತಿರುವ ಮೂರು ಏಕರೇಖಾಗತ ಸಮೋಜ್ವಲ ತಾರೆಗಳು ನಿಮ್ಮ ಗಮನ ಸೆಳೆಯುತ್ತದೆ. ಇವು ಮಹಾವ್ಯಾಧ ರಾಶಿಯ ಸದಸ್ಯ ತಾರೆಗಳು. ಇವನ್ನು ಗುರುತಿಸಿದ ಬಳಿಕ ಈ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ವೀಕ್ಷಣೆ ಮುಂದುವರಿಸಿ.

ಹಂತ : ಜನವರಿ ತಿಂಗಳಿನ ಮಾರ್ಗದರ್ಶಿಯಲ್ಲಿ ಹಂತ ರಲ್ಲಿ ವಿವರಿಸಿದಂತೆ ಮಹಾವ್ಯಾಧ, ಮಿಥುನ, ವೃಷಭ, ವೈತರಿಣೀ, ಶಶ ಮತ್ತು ಏಕಶೃಂಗಿ ರಾಶಿಗಳನ್ನು ವೀಕ್ಷಿಸಿ.

ಹಂತ : ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೨ ರಲ್ಲಿ ವಿವರಿಸಿದಂತೆ ಮಹಾಶ್ವಾನ ಮತ್ತು ಕಪೋತ ರಾಶಿಗಳನ್ನು ವೀಕ್ಷಿಸಿ. ಮಹಾಶ್ವಾನ ರಾಶಿಯನ್ನು ಸುತ್ತುವರಿದ ರಾಶಿಗಳ ಪೈಕಿ ಅಂದು ಭಾಗಶ: ಉದಯವಾಗಿದ್ದ ನೌಕಾಪೃಷ್ಠ ರಾಶಿ ಈಗ ಪೂರ್ಣವಾಗಿ ಉದಯಿಸಿದೆ. ಎಂದೇ, ಅದನ್ನು ಈಗ ವೀಕ್ಷಿಸಿ.

ಮಹಾಶ್ವಾನ ರಾಶಿಯ ದಕ್ಷಿಣ ಗಡಿಗೂ  ಕಪೋತದ ಪೂರ್ವ ಗಡಿಗೂ ತಾಗಿಕೊಂಡು ನೌಕಾಪೃಷ್ಠ ರಾಶಿ ಇದೆ (೪೨. ಪಪಿಸ್, ವಿಸ್ತೀರ್ಣ ೬೭೩.೪೩೪ ಚ ಡಿಗ್ರಿ). ಈ ಭಾಗದಲ್ಲಿ ದಿಗಂತದಗುಂಟ ಆಗ್ನೇಯದಿಂದ ದಕ್ಷಿಣ ದಿಗ್ಬಿಂದುವಿನತ್ತ ದೃಷ್ಟಿ ಹಾಯಿಸಿದರೆ ಅತಿ ಉಜ್ವಲ ತಾರೆಯೊಂದು ಗೋಚರಿಸುತ್ತದೆ. ಇದು ಉದಯಿಸುತ್ತಿರುವ ದೇವನೌಕಾ ರಾಶಿಯ (ಕರೈನ) ಪ್ರಧಾನ ತಾರೆ ಅಗಸ್ತ್ಯ. ಈ ರಾಶಿಯನ್ನು ಸಧ್ಯಕ್ಕೆ ನಿರ್ಲಕ್ಷಿಸಿ. ಅಗಸ್ತ್ಯದ ತುಸು ಪೂರ್ವಕ್ಕೆ ನೌಕಾಪೃಷ್ಠ ರಾಶಿಯ ಅತ್ಯಂತ ಉಜ್ವಲ ತಾರೆ (೧) ζ ನೌಕಾಪೃಷ್ಠ (ತೋಉ ೨.೨೨, ದೂರ ೧೩೬೫ ಜ್ಯೋವ) ಇದೆ. ರೇಖಾಚಿತ್ರದ ನೆರವಿನಿಂದ ಮೊದಲು ಅದನ್ನು ತದನಂತರ ಉಳಿದವನ್ನು ಗುರುತಿಸಲು ಪ್ರಯತ್ನಿಸಿ. ಉಳಿದವು ಇಂತಿವೆ:
(೨) π ನೌಕಾಪೃಷ್ಠ (ತೋಉ ೨.೭೧, ದೂರ ೧೧೧೩ ಜ್ಯೋವ), (೩) ρ ನೌಕಾಪೃಷ್ಠ (ತೋಉ ೨.೮೨, ದೂರ ೬೪ ಜ್ಯೋವ), (೪) τ ನೌಕಾಪೃಷ್ಠ (ತೋಉ ೨.೯೩, ದೂರ ೧೮೩ ಜ್ಯೋವ), (೫) ν ನೌಕಾಪೃಷ್ಠ (ತೋಉ ೩.೧೭, ದೂರ ೪೧೪ ಜ್ಯೋವ), (೬) σ ನೌಕಾಪೃಷ್ಠ (ತೋಉ ೩.೨೬, ದೂರ ೧೮೪ ಜ್ಯೋವ), (೭) ξ ನೌಕಾಪೃಷ್ಠ (ತೋಉ ೩.೩೩, ದೂರ ೧೫೧೦ ಜ್ಯೋವ).

ಮಹಾಶ್ವಾನ, ಕಪೋತ, ಚಿತ್ರಫಲಕ, ದೇವನೌಕಾ, ನೌಕಾಪಟ, ದಿಕ್ಸೂಚಿ, ಅಜಗರ, ಏಕಶೃಂಗಿ ಇವು ನೌಕಾಪೃಷ್ಠವನ್ನು ಸುತ್ತುವರಿದಿರುವ ರಾಶಿಗಳು.

ಹಂತ ೩: ಜನವರಿ ತಿಂಗಳಿನ ಮಾರ್ಗದರ್ಶಿಯ ಹಂತ ೩ ರಲ್ಲಿ ವಿವರಿಸಿದಂತೆ ಮಾರ್ಜಾಲ, ವಿಜಯಸಾರಥಿ, ಲಘುಶ್ವಾನ ಮತ್ತು ಕರ್ಕಾಟಕ ರಾಶಿಗಳನ್ನೂ ಹಂತ ೪ ರಲ್ಲಿ ವಿವರಿಸಿದಂತೆ ಪಾರ್ಥ, ಮೇಷ ಮತ್ತು ತಿಮಿಂಗಿಲ ರಾಶಿಗಳನ್ನೂ ಹಂತ ೫ ರಲ್ಲಿ ವಿವರಿಸಿದಂತೆ ಭಾಗಶಃ ಅಸ್ತವಾಗಿರುವ ಚಕೋರ ರಾಶಿಯನ್ನು ಹೊರತುಪಡಿಸಿ ಮಿಕ್ಕ ಎಲ್ಲ ರಾಶಿಗಳನ್ನು, ಅರ್ಥಾತ್ ಅಗ್ನಿಕುಂಡ, ಹೋರಾಸೂಚೀ ಮತ್ತು ವ್ರಶ್ಚನ ರಾಶಿಗಳನ್ನೂ ಹಂತ ೬ ರಲ್ಲಿ ವಿವರಿಸಿದಂತೆ ದೀರ್ಘಕಂಠ ರಾಶಿಯನ್ನೂ ಹಂತ ೭ ರಲ್ಲಿ ವಿವರಿಸಿದಂತೆ ಕುಂತೀ ಮತ್ತು ತ್ರಿಕೋಣಿ ರಾಶಿಗಳನ್ನೂ ಹಂತ ೮ ರಲ್ಲಿ ವಿವರಿಸಿದಂತೆ ಮೀನ, ನಕುಲ ಮತ್ತು ದ್ರೌಪದಿ ರಾಶಿಗಳನ್ನೂ ಹಂತ ೧೦ ರಲ್ಲಿ ವಿವರಿಸಿದ ಚಿತ್ರಫಲಕ, ಮತ್ಸ್ಯ, ಜಾಲ ರಾಶಿಗಳನ್ನೂ ವೀಕ್ಷಿಸಿ.

ಹಂತ ೪: ಮಹಾಶ್ವಾನ, ಕಪೋತ, ಚಿತ್ರಫಲಕ, ದೇವನೌಕಾ, ನೌಕಾಪಟ, ದಿಕ್ಸೂಚಿ, ಅಜಗರ, ಏಕಶೃಂಗಿ ಇವು ನೌಕಾಪೃಷ್ಠವನ್ನು ಸುತ್ತುವರಿದಿರುವ ರಾಶಿಗಳು ಎಂದು ನಿಮಗೆ ತಿಳಿದಿದೆ. ಇವುಗಳ ಪೈಕಿ ಮೊದಲನೇ ಮೂರು ರಾಶಿಗಳನ್ನು ಈಗಾಗಲೇ ಗುರುತಿಸಿದ್ದೀರಿ.

ನೌಕಾಪೃಷ್ಠ ರಾಶಿಗೆ ಪೂರ್ವದಲ್ಲಿ ತಾಗಿಕೊಂಡಿರುವ ರಾಶಿ ದಿಕ್ಸೂಚಿ (೩೨. ಪಿಕ್ಸಿಸ್, ವಿಸ್ತೀರ್ಣ ೨೨೦.೮೩೩ ಚ ಡಿಗ್ರಿ). ಉಜ್ವಲ ತಾರೆಗಳು ಇಲ್ಲ. ಎಂದೇ ಗುರುತಿಸುವುದು ಕಷ್ಟ. α ದಿಕ್ಸೂಚಿ (ತೋಉ ೩.೬೮, ದೂರ ೮೨೬ ಜ್ಯೋವ), β ದಿಕ್ಸೂಚಿ (ತೋ ಉ ೩.೯೬, ದೂರ ೩೭೫ ಜ್ಯೋವ), γ ದಿಕ್ಸೂಚಿ (ತೋಉ ೪.೦೧, ದೂರ ೨೦೯ ಜ್ಯೋವ) ಇವು ಅನುಕ್ರಮವಾಗಿ ಇರುವ ಮೂರು ಪ್ರಮುಖ ತಾರೆಗಳು.


ಅಜಗರ, ನೌಕಾಪೃಷ್ಠ, ನೌಕಾಪಟ, ರೇಚಕ ಇವು ದಿಕ್ಸೂಚಿಯನ್ನು ಸುತ್ತುವರಿದಿರುವ ರಾಶಿಗಳು.

ಈ ತಿಂಗಳಿನಲ್ಲಿ ಪೂರ್ಣವಾಗಿ ಉದಯಿಸಿರುವ ರಾಶಿಗಳನ್ನು ಈಗ ಗುರುತಿಸಲು ಆರಂಭಿಸಿ. ಅವು ಇಂತಿವೆ: ಸಿಂಹ, ಲಘುಸಿಂಹ, ಸಪ್ತರ್ಷಿಮಂಡಲ ಮತ್ತು ಲಘುಸಿಂಹ.

ಹಂತ ೫: ಕರ್ಕಾಟಕ ರಾಶಿಯನ್ನು ಕೈಕಂಬವಾಗಿಸಿ. ಕರ್ಕಾಟಕದ ಸುತ್ತಣ ರಾಶಿಗಳು ಇವು: ಮಾರ್ಜಾಲ, ಮಿಥುನ, ಲಘುಶ್ವಾನ, ಅಜಗರ, ಸಿಂಹ, ಲಘುಸಿಂಹ. ಇವುಗಳ ಪೈಕಿ ಸಿಂಹ ಮತ್ತು ಲಘುಸಿಂಹ ಉದಯಿಸಿವೆ.

ಮೊದಲು ಕಟಕ ರಾಶಿಯ ಪೂರ್ವದತ್ತ ಗಮನ ಕೇಂದ್ರೀಕರಿಸಿ. ಪೂರ್ವ ದಿಗ್ಬಿಂದುವಿನಲ್ಲಿ ಉದಯವಾಗುತ್ತಿರುವ ಸಿಂಹ ರಾಶಿಯ (೮೪. ಲೀಓ, ವಿಸ್ತೀರ್ಣ ೯೪೬.೯೬೪ ಚ ಡಿಗ್ರಿ) ಉಜ್ವಲ ತಾರೆ (೧) α ಸಿಂಹ (ರೆಗ್ಯುಲಸ್, ತೋಉ ೧.೩೯, ದೂರ ೭೮ ಜ್ಯೋವ) ಗೋಚರಿಸುತ್ತದೆ. ಭಾರತೀಯ ಜ್ಯೋತಿಷ್ಚಕ್ರದ ಮಖಾ ನಕ್ಷತ್ರ ಇದು. ಇದರ ಪೂರ್ವಕ್ಕೆ ಬಾನಂಚಿನಲ್ಲಿ ಇನ್ನೊಂದು ಉಜ್ವಲ ತಾರೆ (೨) β ಸಿಂಹ (ಡೆನೆಬೊಲ, ತೋಉ ೨.೧೨, ದೂರ ೩೬ ಜ್ಯೋವ) ಗೋಚರಿಸುತ್ತದೆ. ನೀವು ವೀಕ್ಷಿಸುತ್ತಿರುವ ಸಮಯದಲ್ಲಿ ಇದು ಗೋಚರಿಸದಿದ್ದರೆ ಇನ್ನೂ ಒಂದೆರಡು ತಾಸು ಕಳೆದ ಬಳಿಕ ನೋಡಿ. ತದನಂತರ ಉಳಿದ ತಾರೆಗಳನ್ನು, ಅರ್ಥಾತ್ (೩)  γ1 ಸಿಂಹ (ತೋಉ ೨.೧೨, ದೂರ ೧೨೬ ಜ್ಯೋವ), (೪) δ ಸಿಂಹ (ಸೋಸ್ಮಾ, ತೋಉ ೨.೫೫, ದೂರ ೫೮ ಜ್ಯೋವ), (೫) ε ಸಿಂಹ (ತೋಉ ೨.೯೬, ದೂರ ೨೬೧ ಜ್ಯೋವ), (೬) θ ಸಿಂಹ (ತೋಉ ೩.೩೧, ದೂರ ೧೭೧ ಜ್ಯೋವ), (೭) ρ ಸಿಂಹ (ತೋಉ ೩.೮೫, ದೂರ ೪೪೦೮ ಜ್ಯೋವ), (೮) η ಸಿಂಹ (ತೋಉ ೩.೫೧, ದೂರ ೧೮೩೨ ಜ್ಯೋವ), (೯) ο ಸಿಂಹ (ತೋಉ ೩.೫೨, ದೂರ ೧೩೪ ಜ್ಯೋವ), (೧೦) μ ಸಿಂಹ (ತೋಉ ೩.೮೮, ದೂರ ೧೩೩ ಜ್ಯೋವ), (೧೧) υ ಸಿಂಹ (ತೋಉ ೪.೩೦, ದೂರ ೧೭೮ ಜ್ಯೋವ), (೧೨) ೯೩ ಸಿಂಹ (ತೋಉ  ೪.೫೩, ದೂರ ೨೨೭ ಜ್ಯೋವ), (೧೩) κ ಸಿಂಹ (ತೋಉ ೪.೪೬, ದೂರ ೨೧೨ ಜ್ಯೋವ), (೧೪) λ ಸಿಂಹ (ತೋಉ ೪.೩೦, ದೂರ ೩೧೫ ಜ್ಯೋವ), (೧೫) ζ ಸಿಂಹ (ತೋಉ ೩.೪೩, ದೂರ ೨೬೪ ಜ್ಯೋವ), (೧೬) ೬೦ ಸಿಂಹ (ತೋಉ ೪.೪೦, ದೂರ ೧೨೪ ಜ್ಯೋವ), (೧೭) ι ಸಿಂಹ (ತೋಉ ೩.೯೭, ದೂರ ೮೦ ಜ್ಯೋವ), (೧೮) σ ಸಿಂಹ (ತೋಉ ೪.೦೪, ದೂರ ೨೨೧ ಜ್ಯೋವ)  ಈ ತಾರೆಗಳನ್ನು ಗುರುತಿಸಲು ಪ್ರಯತ್ನಿಸಿ. ಇವುಗಳ ಪೈಕಿ δ ಸಿಂಹ (ಸೋಸ್ಮಾ) ಹಾಗೂ θ ಸಿಂಹ ತಾರೆಗಳು ಭಾರತೀಯ ಜ್ಯೋತಿಷ್ಚಕ್ರದ ಹುಬ್ಬ ನಕ್ಷತ್ರ ಮತ್ತು ಸುಲಭ ಗೋಚರವಲ್ಲದ ಹಾಗೂ β ಸಿಂಹ (ಡೆನೆಬೊಲ) ತಾರೆಗಳು ಭಾರತೀಯ ಜ್ಯೋತಿಷ್ಚಕ್ರದ ಉತ್ತರಾ ನಕ್ಷತ್ರ ಎಂದೂ ಹೇಳಲಾಗಿದೆ. (ಸಿಂಹ ರಾಶಿಯ ದಕ್ಷಿಣ  ಅಂಚಿನಲ್ಲಿದೆ ಚಂದ್ರ)

ಸಿಂಹವನ್ನು ಸುತ್ತುವರಿದಿರುವ ರಾಶಿಗಳು ಇವು: ಸಪ್ತರ್ಷಿಮಂಡಲ, ಲಘುಸಿಂಹ, ಮಾರ್ಜಾಲ (ಮೂಲೆ), ಕಟಕ, ಅಜಗರ, ಷಷ್ಟಕ, ಕಂದರ, ಕನ್ಯಾ, ಕೃಷ್ಣವೇಣಿ.

ಸಿಂಹ ರಾಶಿಯ ವಾಯವ್ಯ ಮೂಲೆಗೆ ಈ ಹಿಂದೆ ಗುರುತಿಸಿದ್ದ ಮಾರ್ಜಾಲ ರಾಶಿ ತಾಗಿಕೊಂಡಿದೆ. ಪುನಃ ಸಿಂಹ ರಾಶಿಯನ್ನು ಗಮನಿಸಿ. ಅದರ ಉತ್ತರದ ಸೀಮಾರೇಖೆಗೆ ತಾಗಿಕೊಂಡಿರುವ ರಾಶಿ ಲಘುಸಿಂಹ (೬೨. ಲೀಓ ಮೈನರ್, ವಿಸ್ತೀರ್ಣ ೨೩೧.೯೫೬ ಚ ಡಿಗ್ರಿ). (೧) o ಲಘುಸಿಂಹ ಅಥವ 46 ಲಘುಸಿಂಹ (ತೋಉ ೩.೭೯, ದೂರ ೯೮ ಜ್ಯೋವ),  (೨) β ಲಘುಸಿಂಹ (ತೋಉ ೪.೨೦, ದೂರ ೧೪೫ ಜ್ಯೋವ) ಈ ಎರಡೂ ಪ್ರಮುಖ  ತಾರೆಗಳನ್ನು ಗುರುತಿಸುವುದು ಕಷ್ಟ.

ಸಪ್ತರ್ಷಿಮಂಡಲ, ಮಾರ್ಜಾಲ, ಕಟಕ (ಮೂಲೆ), ಸಿಂಹ ರಾಶಿಗಳು ಲಘುಸಿಂಹವನ್ನು ಸುತ್ತುವರಿದಿವೆ.

ಹಂತ ೬: ಈಗ ಸಿಂಹ ರಾಶಿ ನಿಮ್ಮ ದಿಕ್ಸೂಚಿಯಾಗಲಿ. ಸಪ್ತರ್ಷಿಮಂಡಲ, ಲಘುಸಿಂಹ, ಮಾರ್ಜಾಲ (ಮೂಲೆ), ಕಟಕ, ಅಜಗರ, ಷಷ್ಟಕ, ಕಂದರ, ಕನ್ಯಾ, ಕೃಷ್ಣವೇಣಿ ರಾಶಿಗಳು ಸಿಂಹವನ್ನು ಸುತ್ತುವರಿದಿವೆ ಎಂಬುದು ನಿಮಗೆ ತಿಳಿದಿದೆ. ಇವುಗಳ ಪೈಕಿ ಸಪ್ತರ್ಷಿಮಂಡಲ ಮತ್ತು ಷಷ್ಟಕ ಪೂರ್ಣವಾಗಿ ಉದಯಿಸಿವೆ.

ಸಿಂಹ ರಾಶಿಯ ಉತ್ತರ ದಿಕ್ಕಿನ ಆಕಾಶವನ್ನು ವೀಕ್ಷಿಸಿ. ಬಾನಂಚಿನಲ್ಲಿ ಉದಯಿಸುತ್ತಿರುವ ಸಪ್ತರ್ಷಿಮಂಡಲ ರಾಶಿ (೭೯. ಅರ್ಸ ಮೇಜರ್, ವಿಸ್ತೀರ್ಣ ೧೨೭೯.೬೬೦ ಚ ಡಿಗ್ರಿ) ನಿಮ್ಮನ್ನು (ಚಿತ್ರದಲ್ಲಿ ಕೆಂಪು ರೇಖೆಗಳಿಂದ ರಚಿಸಿದ ಆಕೃತಿ) ಆಕರ್ಷಿಸುತ್ತದೆ. (೧) ε ಸಪ್ತರ್ಷಿಮಂಡಲ (ಆಲಿಆತ್, ಆಂಗೀರಸ್ಸು, ತೋಉ ೧.೭೫, ದೂರ ೮೨ ಜ್ಯೋವ), (೨) α ಸಪ್ತರ್ಷಿಮಂಡಲ (ಡಬಿ, ಕ್ರತು, ತೋಉ ೧.೯೫, ದೂರ ೧೨೫ ಜ್ಯೋವ), (೩) η ಸಪ್ತರ್ಷಿಮಂಡಲ (ಅಲ್‌ಕೈಆಡ್, ಮರೀಚಿ, ತೋಉ ೧.೮೬, ದೂರ ೧೦೨ ಜ್ಯೋವ), (೪) ζ ಸಪ್ತರ್ಷಿಮಂಡಲ (ಮೈಜಾರ್, ವಸಿಷ್ಠ, ತೋಉ ೨.೨೧, ದೂರ ೭೮ ಜ್ಯೋವ), (೫) β ಸಪ್ತರ್ಷಿಮಂಡಲ (ಮಿರಾಕ್, ಪುಲಹ, ತೋಉ ೨.೩೪, ದೂರ ೮೦ ಜ್ಯೋವ), (೬) γ ಸಪ್ತರ್ಷಿಮಂಡಲ (ಫೀಕ್ಡ, ಪುಲಸ್ತ್ಯ, ತೋಉ ೨.೪೧, ದೂರ ೮೫ ಜ್ಯೋವ), (೭) δ ಸಪ್ತರ್ಷಿಮಂಡಲ (ಮೆಗ್ರೆಸ್, ಅತ್ರಿ, ತೋಉ ೩.೩೦, ದೂರ ೮೨ ಜ್ಯೋವ) ಇವು ಈ ಪುಂಜದ ಏಳು ಪ್ರಮುಖ ನಕ್ಷತ್ರಗಳು. ಯಾವ ತಾರೆಗೆ ಯಾವ ಋಷಿಯ ಹೆಸರು ಎಂಬುದರ ಕುರಿತು ಗೊಂದಲ ಇದೆ ಎಂಬುದು ನೆನಪಿನಲ್ಲಿ ಇರಲಿ. ಇವುಗಳ ಪೈಕಿ ζ ಸಪ್ತರ್ಷಿಮಂಡಲ ಅಥವ ವಸಿಷ್ಠ ಒಂದು ದೃಗ್ಗೋಚರ ದ್ವಿತಾರಾ ವ್ಯವಸ್ಥೆ. ಸೂಕ್ಷ್ಮದೃಷ್ಟಿ ಉಳ್ಳವರಿಗೆ ವಸಿಷ್ಠ ತಾರೆಯ ಸಮೀಪದಲ್ಲಿ ಇನ್ನೊಂದು ಕ್ಷೀಣ ಬೆಳಕಿನ ತಾರೆ ಗೋಚರಿಸುತ್ತದೆ. ಈ ತಾರೆಯನ್ನು ಭಾರತೀಯ ಪುರೋಹಿತರು ಅರುಂಧತಿ ತಾರೆ ಎಂದು ತೋರಿಸುತ್ತಾರೆ. ಸಪ್ತರ್ಷಿಮಂಡಲದಲ್ಲಿ ನಮೂದಿಸಿದ ಏಳು ತಾರೆಗಳಿಗಿಂತ ಹೆಚ್ಚು ತಾರೆಗಳಿವೆ ಎಂಬುದು ಚಿತ್ರದಿಂದ ಸ್ಪಷ್ಟವಾಗುತ್ತದೆ. ಆ ಎಲ್ಲ ತಾರೆಗಳ ಮಾಹಿತಿಯೂ ಲಭ್ಯವಿದೆ. ಆರಂಭಿಕ ಹವ್ಯಾಸಿಗಳಿಗೆ ಅನಗತ್ಯ ಎಂದು ಇಲ್ಲಿ ಅವನ್ನು ನೀಡಿಲ್ಲ.

ಸುಯೋಧನ, ದೀರ್ಘಕಂಠ, ಮಾರ್ಜಾಲ, ಲಘುಸಿಂಹ, ಸಿಂಹ, ಕೄಷ್ಣವೇಣಿ, ಕಾಳಭೈರವ, ಸಹದೇವ ಇವು ಸಪ್ತರ್ಷಿಮಂಡಲದ ಸುತ್ತಣ ರಾಶಿಗಳು.

ಧ್ರುವತಾರೆಯನ್ನು ಪತ್ತೆಹಚ್ಚಲು ಬಲು ಉಪಯುಕ್ತ ಎಂಬ ಕಾರಣಕ್ಕಾಗಿ ಜನ ಮಾನಸದಲ್ಲಿ ಈ ಪುಂಜಕ್ಕೆ ವಿಶೇಷ ಪ್ರಾಧಾನ್ಯ. β ಸಪ್ತರ್ಷಿಮಂಡಲ (ಪುಲಹ) ಮತ್ತು α ಸಪ್ತರ್ಷಿಮಂಡಲ (ಕ್ರತು) ತಾರೆಗಳನ್ನು ಜೋಡಿಸುವ ರೇಖೆಯ ಉತ್ತರಾಭಿಮುಖ ವಿಸ್ತರಣೆ ಧ್ರುವ ತಾರೆಯನ್ನು ಸಂಧಿಸುತ್ತದೆ.

ಸಿಂಹ ರಾಶಿಗೆ ದಕ್ಷಿಣದಲ್ಲಿ ತಾಗಿಕೊಂಡು ಇರುವ ರಾಶಿ ಷಷ್ಠಕ (೭೮. ಸೆಕ್ಸ್‌ಟನ್ಜ್, ವಿಸ್ತೀರ್ಣ೩೧೩.೫೧೫ ಚ ಡಿಗ್ರಿ). ಇದನ್ನು ಸಿಂಹ, ಅಜಗರ, ಕಂದರ ರಾಶಿಗಳು ಸುತ್ತುವರಿದಿವೆ.
             
ಉಜ್ವಲ ತಾರೆಗಳು ಇಲ್ಲದ್ದರಿಂದ ವಲಯ ಗುರುತಿಸಬಹುದು, ಪುಂಜ ಗುರುತಿಸುವುದು ಕಷ್ಟ. ಇದರ ಪ್ರಮುಖ ತಾರೆಗಳು ಅನುಕ್ರಮವಾಗಿ ಇಂತಿವೆ: (೧) α  ಷಷ್ಠಕ (ತೋಉ ೪.೪೭, ದೂರ ೨೮೫ ಜ್ಯೋವ), (೨) γ  ಷಷ್ಠಕ (ತೋಉ ೫.೦೮, ದೂರ ೨೬೦ ಜ್ಯೋತಿರ್ವರ್ಷ), (೩) β ಷಷ್ಠಕ (ತೋಉ ೫.೦೬, ದೂರ ೩೪೮ ಜ್ಯೋವ), (೪) δ  ಷಷ್ಠಕ (ತೋಉ ೫.೧೮, ದೂರ ೩೦೯ ಜ್ಯೋತಿರ್ವರ್ಷ).

ಸಿಂಹಾವಲೋಕನ

ಫೆಬ್ರವರಿ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ೩೩ ರಾಶಿಗಳನ್ನೂ, ೧೦ ಉಜ್ವಲ ತಾರೆಗಳನ್ನೂ ೧೪ ನಕ್ಷತ್ರಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.

No comments: