Pages

23 March 2013

ನನ್ನ ಜೀವನ ದರ್ಶನ - ೧೪

ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲೋಸುಗ ಮಾಡುವ ನಿತ್ಯಪೂಜೆ, ವಿಶೇಷಪೂಜೆ, ವ್ರತ, ಹೋಮ, ದೇವಾಲಯಗಳಲ್ಲಿ ಸೇವೆ, ಅಂತ್ಯೇಷ್ಟಿ ಇವೇ ಮೊದಲಾದ ಯಾವುದೇ ಸಂಪ್ರದಾಯಬದ್ಧ ಮತೀಯ ಆಚರಣೆಗಳಲ್ಲಿ ನನಗೆ ನಂಬಿಕೆ ಇಲ್ಲ. ಅಂದ ಮಾತ್ರಕ್ಕೆ ನಾನು ನಾಸ್ತಿಕನೂ ಅಲ್ಲ! ನನ್ನದೇ ಕಲ್ಪನೆಯ ‘ದೇವರು’ ತತ್ವದಲ್ಲಿ ನನಗೆ ನಂಬಿಕೆ ಇದೆ. ಈ ಕುರಿತು ಈಗಾಗಲೇ ಎರಡು ಪ್ರತ್ಯೇಕ ಲೇಖನಗಳನ್ನು ಬರೆದಿದ್ದೇನೆ. (ನೋಡಿ: ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಮತ್ತು ದೇವರು, ಧರ್ಮ ಮತ್ತು ಮತ) ನನ್ನ ಕಲ್ಪನೆಯ ‘ದೇವರು’ ತತ್ವದಲ್ಲಿ ಅಂತಸ್ಥವಾಗಿರುವ ನಿಯಮಗಳಿಗನುಸಾರವಾಗಿ, ಅರ್ಥಾತ್ ಧರ್ಮಸಮ್ಮತ ರೀತಿಯಲ್ಲಿ (ನೋಡಿ: ನನ್ನ ಜೀವನ ದರ್ಶನ – ೩) ಜೀವನ ನಡೆಸುವ ಪ್ರಯತ್ನ ನನ್ನದು. ಎಷ್ಟು ಯಶಸ್ವಿಯಾಗಿದ್ದೇನೋ ತಿಳಿಯದು. ಒಂದು ವೇಳೆ ನಿಯಮೋಲ್ಲಂಘನೆ ಮಾಡಿದ್ದರೆ ಅದರ ಪರಿಣಾಮಗಳಿಂದ ತಪ್ಪಸಿಕೊಳ್ಳಲು ಸಾಧ್ಯವಿಲ್ಲ (ನೋಡಿ: ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ) ಎಂಬ ಅರಿವೂ ಇರುವುದರಿಂದ ಪರಿಣಾಮಗಳನ್ನು, ಅವು ಏನೇ ಆಗಿದ್ದರೂ ಸ್ವೀಕರಿಸಲು ಮಾನಸಿಕವಾಗಿ ಸಿದ್ಧವಾಗಿದ್ದೇನೆ.

ನನ್ನ ನಿಲುವು ಇಂತಿದ್ದರೂ, ನನ್ನ ಮನೆಯಲ್ಲಿಯೂ ದೇವಸ್ಥಾನಗಳಲ್ಲಿಯೂ ಮತೀಯ ಆಚರಣೆಗಳನ್ನು (ಪೂಜೆ, ಹೋಮ ಇತ್ಯಾದಿ) ನಾನೇ ಕತೃವಾಗಿ ನಿಂತು ಮಾಡಿಸಿದ್ದುಂಟು. ಏಕೆ ಎಂಬುದಕ್ಕೆ ನನ್ನ ುತ್ತರ ಇಂತಿದೆ. ಮತೀಯ ಆಚರಣೆಗಳಲ್ಲಿ ನನಗೆ ನಂಬಿಕೆ ಇಲ್ಲ ಅಂದ ಮಾತ್ರಕ್ಕೆ ನಂಬಿಕೆ ಇರುವವರ ನಂಬಿಕೆಯನ್ನು (ಅದು ಮೂಢನಂಬಿಕೆಯೇ ಆಗಿದ್ದರೂ) ಅಪಹಾಸ್ಯ ಮಾಡಿ ಅವರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಇರಾದೆ ನನಗಿಲ್ಲ. ನನ್ನ ಕುಟುಂಬದಲ್ಲಿಯೇ ನನ್ನ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ಉಳ್ಳವರು ಮತ್ತು ಅನಿಶ್ಚಿತಮತಿಗಳು ಬಹುಸಂಖ್ಯಾತರು. ಎಂದೇ, ಸ್ವಪ್ರತಿಷ್ಠೆಗೆ ಜೋತುಬಿದ್ದು ಗೃಹಶಾಂತಿ ಮತ್ತು ಕೌಟುಂಬಿಕ ಶಾಂತಿಗೆ ಭಂಗ ಉಂಟುಮಾಡುವ ಇರಾದೆಯೂ ನನಗಿಲ್ಲ. ಎಂದೇ, ಪೂಜೆ, ಹೋಮ ಇತ್ಯಾದಿಗಳನ್ನು ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾದಗಲೆಲ್ಲ ‘ಶಾಸ್ತ್ರೋಕ್ತ’ವಾಗಿಯೇ (ಪುರೋಹಿತೋಕ್ತ=ಶಾಸ್ತ್ರೋಕ್ತ ಅಲ್ಲವೇ? ಏಕೆಂದರೆ ನಾವು ಆ ಶಾಸ್ತ್ರಗಳನ್ನು ಅಧ್ಯಯಿಸಿಲ್ಲ) ನಿರ್ಲಿಪ್ತ ಮನೋಭಾವದಿಂದ ಮಾಡಿಸಿದ್ದೇನೆ. ತತ್ಪರಿಣಾಮವಾಗಿ, ಅನೇಕರಿಗೆ ಮನಃಶ್ಶಾಂತಿ ಲಭಿಸಿದ್ದೂ ಸುಳ್ಳಲ್ಲ. ಉಳಿದಂತೆ, ಆದದ್ದೆಲ್ಲವೂ ಕಾಕತಾಳೀಯ ಎಂಬ ನನ್ನ ಅಂಬೋಣವನ್ನು ಇವರು ಯಾರೂ ಒಪ್ಪಲು ತಯಾರಿಲ್ಲ. ಅಂದಹಾಗೆ ಇವುಗಳಲ್ಲಿ ಪುರೋಹಿತರು ಹೇಳುವ ಅನೇಕ ಮಂತ್ರಗಳ ಅರ್ಥವೂ ಕತೃ ಮಾಡಬೇಕಾದ ತತ್ಸಂಬಂಧಿತ ಕ್ರಿಯಾಭಾಗವನ್ನೂ ನಾನು ಕುತೂಹಲಕ್ಕಾಗಿ ಅಧ್ಯಯಿಸಿದ್ದೇನೆ, ಈ ವಿಧಿವಿಧಾನಗಳು ಪುರೋಹಿತಷಾಹಿ ವರ್ಗದ ಸೃಷ್ಟಿ ಎಂಬ ನನ್ನ ನಿಲುವನ್ನು ಬದಲಿಸುವಂಥದ್ದೇನೂ ಈ ಅಧ್ಯಯನಗಳು ನೀಡಿಲ್ಲ. ಹೆಚ್ಚು ಹೆಚ್ಚು ಪೂಜೆ ಇತ್ಯಾದಿಗಳನ್ನು ನೋಡಿದಾಗಲೆಲ್ಲ ಈ ನಿಲುವು ಗಟ್ಟಿಯಾಗಲು ಅಗತ್ಯವಾದ ಸಾಕ್ಷ್ಯಾಧಾರಗಳು ದೊರೆಯುತ್ತಲೇ ಇರುತ್ತವೆ. ಉದಾಹರಣೆಗೆ: ಪೂಜೆ ಮಾಡಿಸುವ ಪುರೋಹಿತರು ಮಂತ್ರೋಚ್ಛಾರಣೆಯಲ್ಲಿ ಮಾಡುವ ಅಸಂಖ್ಯ ತಪ್ಪುಗಳು ಅವರಲ್ಲಿ ಏಕಾಗ್ರತೆಯ ಕೊರತೆಯನ್ನು ಸೂಚಿಸುತ್ತವೆ. ಕತೃವಿಗೆ ಇವು ಏನೇನೂ ಅರ್ಥವಾಗದಿರುವುದರಿಂದ ಹೊಸದಾಗಿ ಪೂಜಾಸ್ಥಳಕ್ಕೆ ಬರುವ ಅತಿಥಿಗಳನ್ನು ಮುಗುಳ್ನಗೆಯಿಂದ ಸ್ವಾಗತಿಸುತ್ತಾ ಪುರೋಹಿತರು ಹೇಳಿದ್ದನ್ನು ‘ಇಂತು ತಮ್ಮ ವಿಧೇಯ’ ಎಂಬ ಮನೊಧೋರಣೆಯಿಂದ ಮಾಡಿ ‘ಶ್ರದ್ಧಾಭಕ್ತಿಯುತವಾಗಿ’ ಪೂಜೆ ಮಾಡಿಸಿದ್ದೇನೆ ಎಂಬ ಭ್ರಮೆಯಿಂದ ಸಂತೋಷಿಸುವುದು ‘ಶಕ್ತ್ಯಾನುಸಾರ’ ಎಂಬ ಶಾಸ್ತ್ರೋಕ್ತಿ ಇದ್ದರೂ ಪುರೋಹಿತರೊಡನೆ ಮೊದಲೇ ಚರ್ಚಿಸಿ ಕ್ರಿಯಾದಕ್ಷಿಣೆ ನಿಗದಿ ಪಡಿಸುವುದು. ಇತ್ತೀಚೆಗೆ ನಗರಗಳಲ್ಲಿ ‘ಪೂಜೆ’ಯ ಗುತ್ತಿಗೆ ತೆಗೆದುಕೊಂಡು ‘ದಾನ’ವಾಗಿ ನೀಡಬೇಕಾದವೂ ಸೇರಿದಂತೆ ಸಕಲ ಪೂಜಾಸಾಮಗ್ರಿಗಳೊಡನೆ ವಾಹನದಲ್ಲಿ ಆಗಮಿಸಿ ಪೂರ್ವನಿಗದಿತ ಅವಧಿಯೊಳಗೆ ‘ಶಾಸ್ತ್ರೋಕ್ತವಾಗಿ’ ಮಾಡಬೇಕಾದ್ದನ್ನು (ಮಧ್ಯೇಮಧ್ಯೇ ತಮ್ಮ ಚರವಾಣಿ ಸಂಭಾಷಣೆಯೊಂದಿಗೆ) ಮಾಡಿಸುವ ‘ವೃತ್ತಿಪರ ಪುರೋಹಿತರು’ ಇರುವುದರಿಂದ ಕತೃವೂ ಅತಿಥಿಗಳಂತೆ ಆಗಮಿಸಿ ಕುಳಿತಿರುವುದು. ಆಗಿರಬಹುದಾದ (ಆಗಿರುವುದು ಖಾತರಿ) ‘ಮಂತ್ರತಂತ್ರ’ ದೋಷ ಪರಿಹಾರಕ್ಕೆ ‘ನಾಮತ್ರಯ’ ಜಪಮಾಡಿ ಸಮಾಧಾನ ಪಡುವುದು - ಇಂತು ಪಟ್ಟಿ ಮಾಡುತ್ತಾ ಹೋದರೆ ಬಲು ಉದ್ದನೆಯ ಪಟ್ಟಿ ತಯಾರಿಸಬಹುದು.

ಆಧ್ಯಾತ್ಮಿಕ ಪಥದಲ್ಲಿ ಮುಂದುವರಿಯುವ ಇರಾದೆ ಇರುವವರಿಗೆ ಕೆಲವು ಪ್ರತೀಕಗಳ ಮತ್ತು ಸಾಂಕೇತಿಕ ಕ್ರಿಯೆಗಳ ಆವಶ್ಯಕತೆ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ನಾನೂ ನನ್ನದೇ ಆದ ಪ್ರತೀಕಗಳನ್ನೂ ಸಾಕೇತಿಕ ಕ್ರಿಯೆಗಳನ್ನೂ ಉಪಯೋಗಿಸುತ್ತೇನೆ. ಇವು ನಾವು ಹಾದಿ ತಪ್ಪದಿರಲು ನೆರವು ನೀಡುತ್ತವೆ. ಇವುಗಳ ಮೂಲ ಉದ್ದೇಶವನ್ನು ತಿಳಿಯದೇ ಅಥವ ಮರೆತು ಯಾಂತ್ರಿಕವಾಗಿ ಕುರುಡು ನಂಬಿಕೆಯಿಂದ ಅಥವ ವೈಭವೋಪೇತವಾಗಿ ನಮ್ಮ ದೈವಭಕ್ತಿಯನ್ನು ಜಗಜ್ಜಾಹೀರು ಮಾಡಲೋಸುಗ ಇವನ್ನು ಮಾಡುವುದು ನಿಷ್ರಯೋಜಕ ಎಂಬುದು ನನ್ನ ಖಚಿತವಾದ ನಿಲುವು. ಇವನ್ನು ಮಾಡಿದ ನಂತರವೂ ಮಾಡಿದವರು ಆಧ್ಯಾತ್ಮಿಕ ಪಥದಲ್ಲಿ ಮುಂದುವರಿದಿರುವ ಯಾವ ಸುಳಿವೂ ದೊರೆಯದಿದ್ದರೆ ಬೇರೆ ಇನ್ನೇನು ತಾನೇ ಹೇಳಲು ಸಾಧ್ಯ?

‘ದೇವರನ್ನು’ ಒಲಿಸಿಕೊಳ್ಳಲು ಮಾಡಬೇಕಾದ ‘ಶಾಸ್ತ್ರೋಕ್ತ’ ವಿಧಿವಿಧಾನಗಳಲ್ಲಿ ನಂಬಿಕೆ ಇರುವವರಿಗೆ ಮತ್ತು ಅನಿಶ್ಚಿತಮತಿಗಳಿಗೆ ಈ ವರೆಗೆ ನಾನು ಪ್ರತಿಪಾದಿಸಿದ ಅಂಶಗಳಿಗೆ ಹೊರತಾಗಿ ಒಂದು ಕಿವಿಮಾತು - ನೀವು ಏನು ಮಾಡಬೇಕೆಂದು ಸಂಕಲ್ಪಿಸುತ್ತೀರೋ ಅಂತೆಯೇ ಮಾಡಿ - ಇಲ್ಲದಿದ್ದರೆ ‘ಕೊಟ್ಟಮಾತಿನಂತೆ’ ನಡೆಯದಿರುವ ದೋಷ (ಇದು ಪುರೋಹಿತರು ಹೇಳುವ ದೈವಕೋಪ ಅಲ್ಲ) ನಿಮ್ಮ ಕರ್ಮಸಂಚಿಯನ್ನು ಸೇರಿಕೊಳ್ಳುತ್ತದೆ. (ನೋಡಿ: ನನ್ನ ಜೀವನ ದರ್ಶನ – ೧೩ ಮತ್ತು ನನ್ನ ಜೀವನ ದರ್ಶನ – ೧೨)



ವಿ ಸೂ: ಈ ಮಾಲಿಕೆಯಲ್ಲಿ ಇದು ಕೊನೆಯ ಲೇಖನ. ಬಹಿರಂಗವಾಗಿ ಹೇಳಿಕೊಳ್ಳುವ ಧೈರ್ಯವಿಲ್ಲದೇ ಇದ್ದರೂ ಪ್ರತಿಯೊಬ್ಬರೂ ಅವರದ್ದೇ ಆದ ಜೀವನದರ್ಶನವೊಂದನ್ನು (ಪರ್ಸನಲ್ ಫಿಲಾಸಫಿ ಆಫ್ ಲೈಫ್) ರೂಪಿಸಿಕೊಂಡಿರುತ್ತಾರೆ ಮತ್ತು ತಮ್ಮ ಜೀವನವನ್ನು ಅದರಂತೆ ನಡೆಸುತ್ತಾರೆ ಅನ್ನುವುದನ್ನು ಈ ತನಕ ನಡೆದಿರುವ ಎಲ್ಲ ಮನೋವೈಜ್ಞಾನಿಕ ಅಧ್ಯಯನಗಳೂ ಸಾಬೀತು ಪಡಿಸಿವೆ. ಈ ಲೇಖನದಲ್ಲಿ ಪ್ರಸ್ತುತ ಪಡಿಸಿರುವುದು ನನ್ನ ವೈಯಕ್ತಿಕ ಜೀವನದರ್ಶನ. ಇದನ್ನು ಒಪ್ಪುವ ತಿರಸ್ಕರಿಸುವ ಸ್ವಾತಂತ್ರ್ಯ ನಿಮಗಿದೆಯೇ ವಿನಾ ನ್ನೊಡನೆ ವಾಗ್ಯುದ್ಧ ನಡೆಸುವ ಸ್ವಾತಂತ್ರ್ಯ ಇಲ್ಲ.

No comments: