Pages

12 March 2012

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೬೬

ಲೋಮನಾಳ ಕ್ರಿಯೆ (ಕಪಿಲರಿ ಅಕ್ಷನ್) ಆಧಾರಿತ ವಿದ್ಯಮಾನ

ಬೇಕಾಗುವ ಸಾಮಗ್ರಿಗಳು: ಸಮ ಗಾತ್ರದ ೨ ಗಾಜಿನ ಬಾಟಲ್ ಅಥವ ಲೋಟಗಳು, ಒಂದು ದೊಡ್ಡ ಕರವಸ್ತ್ರ ಅಥವ ತತ್ಸಮನಾದ ಬಟ್ಟೆ, ಒಂದು ಬಾಟಲ್ ನಲ್ಲಿ ನೀರು ತುಂಬಿರಲಿ (ಚಿತ್ರ ೧).



ಮಾಡಬೇಕಾದದ್ದು ಏನು?

೧. ಕರವಸ್ತ್ರವನ್ನು ಸ್ತಂಭಾಕೃತಿಯ ಸುರುಳಿಯಾಗಿ ಸುತ್ತಿ (ಚಿತ್ರ ೨).



೨. ನೀರು ತುಂಬಿದ ಬಾಟಲ್ ಮತ್ತು ಖಾಲಿ ಬಾಟಲ್ಲಗಳನ್ನು ಅಕ್ಕಪಕ್ಕದಲ್ಲಿ ಇಡಿ. ಕರವಸ್ತ್ರದ ಸುರುಳಿಯ ಒಂದು ತುದಿ ನೀರು ತುಂಬಿದ ಬಾಟಲಿನ ಒಳಗೆ ತಳದ ಸಮೀಪ ಇರುವಂತೆಯೂ ಇನ್ನೊಂದು ತುದಿ ಖಾಲಿ ಬಾಟಲಿನ ಒಳಗೆ ತಳದ ಸಮೀಪ ಇರುವಂತೆಯೂ ಸಜ್ಜುಗೊಳಿಸಿ (ಚಿತ್ರ ೩).



೩. ತದನಂತರ ನಿಮ್ಮ ದೈನಂದಿನ ಮಾಮೂಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ೧-೨ ಗಂಟೆಗೊಮ್ಮೆ ಬಾಟಲ್ ಗಳಲ್ಲಿ ನೀರಿನ ಮಟ್ಟ ಗಮನಿಸುತ್ತಿರಿ. ಬಲು ನಿಧಾನವಾಗಿ ನೀರು ತುಂಬಿದ ಬಾಟಲಿನಲ್ಲಿ ನೀರಿನ ಮಟ್ಟ ಕಮ್ಮಿ ಆಗುತ್ತಿರುವುದೂ ಖಾಲಿ ಬಾಟಲಿನಲ್ಲಿ ನೀರು ತುಂಬುವುದೂ ಗೋಚರಿಸುತ್ತದೆ. ಖಾಲಿ ಬಾಟಲಿನ ಒಳಗಿನ ಕರವಸ್ತ್ರದ ತುದಿ ಮುಳುಗುವ ಮುನ್ನ ಆ ತುದಿಯಿಂದ ನೀರು ತೊಟ್ಟಿಕ್ಕುವುದನ್ನು ನೋಟಬಹುದು. ಎರಡೂ ಬಾಟಲ್ ಗಳಲ್ಲಿ ನೀರಿನ ಮಟ್ಟ ಸಮವಾದ ಬಳಿಕ ನೀರಿನ ವರ್ಗಾವಣೆ ನಿಲ್ಲುವುದನ್ನೂ ಗಮನಿಸಿ (ಚಿತ್ರ ೪).











ನೀವೇ ಆಲೋಚಿಸಿ:

೧. ಮೊದಲು ಬಟ್ಟೆಯಗುಂಟ ನೀರು ಮೇಲೇರಿ ತದನಂತರ ಖಾಲಿ ಬಾಟಲಿನ ಒಳಕ್ಕೆ ಇಳಿದಿರಬೇಕಲ್ಲವೇ? ನೀರು ತಂತಾನೇ ಮೇಲೇರಲು ಕಾರಣವಾದ ಲೋಮನಾಳ ಕ್ರಿಯೆ ಎಂದರೇನು ಎಂಬುದನ್ನು ಕೇಳಿ/ಓದಿ ತಿಳಿಯಿರಿ.

೨. ಒಮ್ಮೆ ಮೇಲೇರಿದ ನೀರು ಖಾಲಿ ಬಾಟಲಿನೊಳಕ್ಕೆ ಕೆಳಗಿಳಿದದ್ದು ಏಕೆ? ತದನಂತರ ಎರಡೂ ಬಾಟಲುಗಳಲ್ಲಿ ನೀರಿನ ಮಟ್ಟಗಳು ಸಮವಾದಾಗ ನೀರು ಹರಿಯುವಿಕೆ ನಿಂತದ್ದೇಕೆ? (ನೋಡಿ: ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೧೨ )

೩. ಮಣ್ಣು ಮಿಶ್ರಿತ ನೀರಿನಿಂದ ಮಣ್ಣನ್ನು ಬೇರ್ಪಡಿಸಲು ಈ ತಂತ್ರ ಪ್ರಯೋಗಿಸಬಹುದೇ?

No comments: