Pages

6 January 2012

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು - ೫೭

ಮೋಜಿನ ಸವಾಲುಗಳು ೧. ಎರಡು ಬೆಂಕಿಪೆಟ್ಟಿಗೆಗಳು ಮತ್ತು ಯಾವುದಾದರೂ ನಾಣ್ಯ ಇವಿಷ್ಟು ಇದ್ದರೆ ಈ ಚಟುವಟಿಕೆ ಮಾಡಬಹುದು. ನಾಣ್ಯದ ಮೇಲೆ ಒಂದು ಬೆಂಕಿಕಡ್ಡಿಯನ್ನು ಬೆಂಕಿಪೆಟ್ಟಿಗೆಗೆ ಸಿಕ್ಕಿಸಿದ ಇನ್ನೊಂದು ಬೆಂಕಿಕಡ್ಡಿಯ ನೆರವಿನಿಂದ ಚಿತ್ರ ೧ ರಲ್ಲಿ ತೋರಿಸಿದಂತೆ ನಿಲ್ಲಿಸಿ. ಬೆಂಕಿಕಡ್ಡಿಗಳ ಉರಿಯುವ ಮದ್ದಿನ ಭಾಗ ಒಂದಕ್ಕೊಂದು ತಾಗಿಕೊಂಡಿರುವುದನ್ನು ಗಮನಿಸಿ. ನಾಣ್ಯದ ಮೇಲಿರುವ ಬೆಂಕಿಕಡ್ಡಿಯನ್ನು ಮುಟ್ಟದೆ ಮತ್ತು ಬೀಳಿಸದೆ ಗಾಳಿ, ನೀರು ಮತ್ತು ಬೆಂಕಿ ಈ ಮೂರರ ಪೈಕಿ ಯಾವುದಾದರೂ ಒಂದರ ನೆರವಿನಿಂದ ನಾಣ್ಯವನ್ನು ಎಳೆದು ತೆಗಯಿರಿ.   ೨. ಚಿತ್ರ ೨ ರಲ್ಲಿ ತೋರಿಸಿದಂತೆ ಕಾಗದದ ಒಂದು ಚಿಕ್ಕ ಪಟ್ಟಿಯನ್ನು ಮಡಚಿ ಅದರಲ್ಲಿ ತೋರಿಸಿದಂತೆ ‘ಪೇಪರ್ ಕ್ಲಿಪ್’ಗಳನ್ನು ಹಾಕಿ. ಪಟ್ಟಿಯ ಎರಡೂ ತುದಿಗಳನ್ನು ಬಾಣದ ಗುರುತಿನಿಂದ ತೋರಿಸಿದತ್ತ, ಅರ್ಥಾತ್ ವಿರುದ್ಧ ದಿಕ್ಕುಗಳತ್ತ ಬಲು ನಿಧಾನವಾಗಿ ಎಳೆಯಿರಿ. ನೀವು ಕಾಗದದ ತುದಿಗಳನ್ನು ಎಳೆಯುತ್ತಿರುವಾಗ ‘ಪೇಪರ್ ಕ್ಲಿಪ್’ಗಳು ಒಂದನ್ನೊಂದು ಸಮೀಪಿಸುವುದನ್ನು ಗಮನಿಸಿ. ‘ಪೇಪರ್ ಕ್ಲಿಪ್’ಗಳು ಒಂದನ್ನೊಂದು ಸ್ಪರ್ಶಿಸುವ ತನಕ ಎಳೆಯುತ್ತಿರಿ. ಈ ಪ್ರಕ್ರಿಯೆಯಲ್ಲಿ ಅವು ಓರೆಯಾಗದಂತೆಯೂ ಜಾರಿ ಬಿದ್ದು ಹೋಗದಂತೆಯೂ ಎಚ್ಚರಿಕೆ ವಹಿಸಿ, ‘ಕ್ಲಿಪ್’ಗಳು ಒಂದನ್ನೊಂದು ಸ್ಪರ್ಶಿಸಿದ ನಂತರ ಕಾಗದದ ತುದಿಗಳನ್ನು ಬಲು ಜೋರಾಗಿ ಎಳೆದರೆ ಅವು ಕಾಗದದಿಂದ ಜಾರಿ ಎಷ್ಟು ದೂರ ಹಾರಬಹುದು ಎಂಬುದನ್ನು ಊಹಿಸಿ. ನಿಮ್ಮ ಊಹೆ ಸರಿಯೇ ಎಂಬುದನ್ನು ಪ್ರಯೋಗ ಮಾಡಿ ಪರೀಕ್ಷಿಸಿ. ನೀವು ಊಹಿಸದೇ ಇದ್ದ ವೈಚತ್ರ್ಯವೊಂದನ್ನು ನೋಡುವಿರಿ.



೩. ಈ ಚಟುವಟಿಕೆಯನ್ನು ನಿಮ್ಮ ಮಿತ್ರನೊಬ್ಬನ ಜೊತೆಗೂಡಿಯೇ ಮಾಡಬೇಕು. ಚಿತ್ರ ೩ ರಲ್ಲಿ ತೋರಿಸಿದಂತೆ ನಿಮ್ಮ ಎರಡೂ ಕೈಗಳಿಗೆ ಕೈಕೋಳದೋಪಾದಿಯಲ್ಲಿ ಹಗ್ಗವೊಂದನ್ನು ಕಟ್ಟಿಕೊಳ್ಳಿ. ನಿಮ್ಮ ಮಿತ್ರನ ಕೈಗಳಿಗೂ ಇದೇ ರೀತಿಯಲ್ಲಿ ಹಗ್ಗದ ಕೈಕೋ: ತೊಡಿಸಬೇಕು. ತೊಡಿಸುವಾಗ ಆತನ ಒಂದು ಕೈಕೋಳದಿಂದ ಆರಂಭವಾದ ಹಗ್ಗ ನಿಮ್ಮ ಎರಡೂ ಕೈಕೋಳಗಳ ನಡುವಿನ ಹಗ್ಗದೊಳಕ್ಕಾಗಿ ಹಾಯ್ದು ಹೋಗಬೇಕು. ಯಾರದಾದರೂ ಒಬ್ಬರ ಕೈಕೋಳವನ್ನು ಬಿಚ್ಚದೆಯೇ ನೀವಿಬ್ಬರೂ ಬೇರೆಬೇರೆ ಆಗಲು ಸಾಧ್ಯವಿಲ್ಲದಂತೆ ಮಾಡಿದ ತಂತ್ರ ಇದು. ಯಾರೊಬ್ಬರ ಕೈಕೋಳವನ್ನು ಬಿಚ್ಚದೆಯೇ ಅಥವ ಕೈಗಳಿಂದ ಜಾರಿಸದೆಯೇ ಮತ್ತು  ಯಾರ ಹಗ್ಗವನ್ನೂ ತುಂಡರಿಸದೆಯೇ ಇಬ್ಬರೂ ಬೇರೆಬೇರೆ ಆಗುವ ತಂತ್ರ ರೂಪಿಸಬಲ್ಲಿರಾ?



೪. ಒಂದು ಬೆಲೂನಿಗೆ ಗಾಳಿ ತುಂಬಿಸಿ ಬೆಲೂನು ಒಡೆಯದಂತೆ ಸೂಜಿಯಿಂದ ಚುಚ್ಚಬಲ್ಲಿರಾ? ಹೀಗೆ ಚುಚ್ಚಲು ಸಾಧ್ಯ. ಚುಚ್ಚಿದ ಸೂಜಿಯನ್ನು ಬೆಲೂನಿನಿಂದ ಹೊರಗೆಳೆಯದಿದ್ದರಾಯಿತು ಅಂದರೆ ನಂಬುವಿರಾ? ನಂಬಲೇ ಬೇಕು? ಇದು ಹೇಗೆ ಸಾಧ್ಯ ಆಲೋಚಿಸಿ.

ಮಾಡುವುದು ಹೇಗೆ?

೧. ಇನ್ನೊಂದು ಉರಿಯುತ್ತಿರುವ ಕಡ್ಡಿಯಿಂದ ಬೆಂಕಿಕಡ್ಡಿಗಳ ಉರಿಯುವ ಮದ್ದಿನ ಭಾಗ ಒಂದಕ್ಕೊಂದು ತಾಗಿಕೊಂಡಿರುವ ಭಾಗವನ್ನು ಉರಿಸಿ ಅದು ಪೂರ್ತಿ ಉರಿದು ಭಸ್ಮವಾಗುವುದರೊಳಗೆ ಗಾಳಿ ಊದಿ ನಂದಿಸಿ.



೨. ಸರಿಯಾಗಿ ಮಾಡಿದರೆ ಎರಡು ಕ್ಲಿಪ್ಗಳು ಒಂದಕ್ಕೊಂದು ಹೆಣೆದುಕೊಂಡು ಒಂದೇ 'ಕ್ಲಿಪ್'ನಂತೆ ಹಾರುತ್ತದೆ. ಇದೇ ವೈಚಿತ್ರ್ಯ.

೩. ಈ ಮುಂದಿನ ಚಿತ್ರಗಳು ಸುಳಿವು ನಿಡುತ್ತವೆ, ಅವನ್ನು ಅಭ್ಯಸಿಸಿ ಪ್ರಯೋಗ ಮಾಡಿ.



೪. ಬೆಲೂನಿನ ಮೇಲ್ಮೈನ ಮೇಲೆ ಪಾರಕ  ಅಂಟುಟೇಪಿನ (ಸೆಲಫೇನ್) ಚಿಕ್ಕ ತುಂಡೊಂದನ್ನ ಅಂಟಿಸಿ ಅದು ಇರುವ ಸ್ಥಳದಲ್ಲಿ ಜೋರಾಗಿ ಸೂಜಿ ಚುಚ್ಚಿ ರಂಧ್ರ ಮಾಡಿ ಸೂಜಿಯನ್ನು ರಂಧ್ರದಲ್ಲಿಯೇ ಬಿಡಿ. ಸೂಜಿಯನ್ನು ತುಸು ಎತ್ತರದಲ್ಲಿ ಹಿಡಿದು ಮೊದಲನೇ ಸಲವೇ ರಂಧ್ರವಾಗುವಂತೆ ವೇಗವಾಗಿ ಚುಚ್ಚಬೇಕು.

No comments: