Pages

10 December 2011

ಎಳೆ ವಯಸ್ಸಿನಲ್ಲಿ ಆತ್ಮಹತ್ಯೆ

‘ಶಾಲೆಯಲ್ಲಿ ಚರ ದೂರವಾಣಿ ಉಪಯೋಗಿಸಿದ್ದಕ್ಕೆ ಶಿಕ್ಷಕರು ಬಯ್ದರೆಂಬ ಕಾರಣಕ್ಕೆ ವಿದ್ಯಾರ್ಥಿನಿಯ ಆತ್ಮಹತ್ಯೆ’, ‘ಆಧುನಿಕ ಕುಣಿತದ ಸ್ಫರ್ಧೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೋರುವ ಆಸಕ್ತಿಗಿಂತ ಹೆಚ್ಚು ಆಸಕ್ತಿ ಓದಿನಲ್ಲಿ ತೋರಿಸು ಎಂದು ತಂದೆತಾಯಿಯರು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಶಾಲಾ ವಿದ್ಯಾರ್ಥಿನಿ’, ‘ಮುಂಬಯಿನಲ್ಲಿನ ಚಲನಚಿತ್ರ ಗೀತೆ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ತಂದೆತಾಯಿಯರು ಅನುಮತಿ ನೀಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಕಕಾಲೇಜು ವಿದ್ಯಾರ್ಥಿ’, ‘ಎಂಜಿನಿಯರಿಂಗ್ ಕಾಲೇಜಿನಲ್ಲಿ ೬ ನೇ ಸೆಮೆಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು, ಕಾರಣ ಇನ್ನೂ ತಿಳಿದಿಲ್ಲ’, ‘೨ ನೇ ಸೆಮೆಸ್ಟರ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು’,  ‘ಪರೀಕ್ಷೆಯಲ್ಲಿ ಕಮ್ಮಿ ಅಂಕ ಬರಬಹುದೆಂದು ಊಹಿಸಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು’, ‘೧ ನೇ ಪಿಯುಸಿ ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತರ ಬರೆಯಲಾಗದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ’, ತನಗೆ ಇಷ್ಟವಿಲ್ಲದಿದ್ದ ೪ ವರ್ಷದ ಬಿಎಸ್ ಸಿ ಎಡ್ ಕೋರ್ಸಿಗೆ ತಂದೆತಾಯಿಯರು ಬಲವಂತದಿಂದ ಸೇರಿಸಿದ್ದರಿಂದ ನೊಂದುಕೊಡಿದ್ದ ವಿದ್ಯಾರ್ಥಿನಿ ಹಾಸ್ಟೆಲ್ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ’, ‘ಪರೀಕ್ಷೆಯಲ್ಲಿ ಉತ್ತಮ ಅಂಕ ಲಭಿಸದೇ ಇದ್ದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ’, ‘ಪ್ರೇಮವಿವಾಹಕ್ಕೆ ಅನುಮತಿ ದೊರೆಯದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು’ - ಇಂಥ ಸುದ್ದಿಗಳ ಸಂಖ್ಯೆ ಹೆಚ್ಚುತ್ತಿರುವದನ್ನು ನೀವು ಗಮನಿಸಿರಬಹುದು. ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ, ವಿಶೇಷತಃ ಚಿಕ್ಕವಯಸ್ಸಿನವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವಂತಿದೆ. ಆತ್ಮಹತ್ಯೆಯನ್ನು ವೈಯಕ್ತಿಕ ಸಮಸ್ಯೆ ಪರಿಹರಿಸಿಕೊಳ್ಳುವ ಒಂದು ವಿಧಾನವಾಗಿ ಇವರೆಲ್ಲ ಒಪ್ಪಿಕೊಳ್ಳಲು ಕಾರಣವೇನು?

ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಅಗತ್ಯವಾದ ಜ್ಞಾನಾಂಶಗಳು ಮತ್ತು ಕುಶಲತೆಗಳ ಗಳಿಕೆಗೆ ಆವಶ್ಯಕತೆಗಿಂತ ಹೆಚ್ಚು ಒತ್ತು ನೀಡುವ ಭರಾಟೆಯಲ್ಲಿ ಇಂದಿನ ತೀವ್ರ ಸ್ಪರ್ಧಾಯುಗದಲ್ಲಿ ಬದುಕಲು ಅತ್ಯಗತ್ಯವಾಗಿ ಕಲಿಯಲೇಬೇಕಾದದ್ದರ ಪೈಕಿ ಸಮಸ್ಯೆ ಪರಿಹರಿಸುವ (ಪ್ರಾಬ್ಲೆಮ್ ಸಾಲ್ವಿಂಗ್), ತೀರ್ಮಾನ ಕೈಗೊಳ್ಳುವ (ಡೆಸಿಷನ್ ಮೇಕಿಂಗ್), ಸ್ವಯಂ ಕಲಿಯುವ (ಸೆಲ್ಫ್ ಲರ್ನಿಂಗ್) ಕುಶಲತೆಗಳನ್ನು ಕಲಿಸುವ ಪ್ರಯತ್ನವನ್ನು ನಮ್ಮ ಶಾಲೆಗಳಲ್ಲಿಯೇ ಆಗಲಿ ಮನೆಯಲ್ಲಿಯೇ ಆಗಲಿ ಇಂದು ಮಾಡದೇ ಇರುವುದೇ ಇದಕ್ಕೆ ಪ್ರಧಾನ ಕಾರಣ ಎಂಬುದು ನನ್ನ ಅಭಿಮತ. ಮಕ್ಕಳು ಈ ಕುಶಲತೆಗಳನ್ನು ಹದಿಹರೆಯವನ್ನು ಪ್ರವೇಶಿಸುವ ಮುನ್ನ ತಕ್ಕಮಟ್ಟಿಗೆ ಕರಗತ ಮಾಡಿಕೊಂಡಿದ್ದರೆ ಅನೇಕ ವರ್ತನ ಸಂಬಂಧಿತ ಸಮಸ್ಯೆಗಳು ಉದ್ಭವಿಸುವುದೇ ಇಲ್ಲ. ಅವುಗಳನ್ನು ಕಲಿಯಬೇಕಾದ್ದರ ಪ್ರಾಮುಖ್ಯ ಮನವರಿಕೆ ಮಾಡುವ ಪ್ರಯತ್ನ ಈ ಲೇಖನದಲ್ಲಿ ಅವನ್ನು ಮಾಡಿದ್ದೇನೆ, ಕಲಿಸುವ ವಿಧಾನವನ್ನು ಅಲ್ಲ. ಅವನ್ನು ಕಲಿಸುವ ವಿಧಾನ/ತಂತ್ರಗಳ ಕುರಿತು ವಿಪುಲ ಸಾಹಿತ್ಯ ಇಂಗ್ಲಿಷಿನಲ್ಲಿ ಲಭ್ಯವಿದೆ. ನನ್ನ ಅಭಿಪ್ರಾಯ ಸರಿಯೇ ತಪ್ಪೇ, ನೀವೇ ನಿರ್ಧರಿಸಿ.

ನಮ್ಮ ಮಕ್ಕಳ ಬಾಲ್ಯ ಒಂದು ಸುಂದರ ಸುಖಾನುಭವವಾಗಿರಲಿ ಎಂಬ ಕಾರಣಕ್ಕಾಗಿ ಅವರಿಗೆ ಯಾವ ಸಮಸ್ಯೆಗಳೂ ಎದುರಾಗದಂತೆ ನೋಡಿಕೊಳ್ಳುವುದೂ ಅವರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ಮುಂದಾಗಿಯೇ ಊಹಿಸಿ ಅವರ ಪರವಾಗಿ ಅವುಗಳನ್ನು ನಾವೇ ನಿಭಾಯಿಸುವುದೂ ಅಥವ ನಿಭಾಯಿಸುವ ತಂತ್ರಗಳ ಹೆಜ್ಜೆಗಳನ್ನು ಅವರು ಯಾಂತ್ರಿಕವಾಗಿ ಇಡುವಂತೆ ಮಾಡುವುದು ಸರಿಯೇ? ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದದ್ದು ಅನಿವಾರ್ಯ, ನಮ್ಮ ಅನೇಕ ಸಮಸ್ಯೆಗಳಿಗೆ ಸಿದ್ಧಪಡಿಸಿದ ಪರಿಹಾರಗಳು ಇರುವುದಿಲ್ಲ, ಅನೇಕ ಸಂದರ್ಭಗಳಲ್ಲಿ ನಮಗೆ ಇತರರ ನೆರವು ದೊರೆಯುವ ಸಂಭವನೀಯತೆ ಬಲು ಕಮ್ಮಿ, ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನಾವೇ ಆವಿಷ್ಕರಿಸಬೇಕು, ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೇ ಇರಬಹುದು. ಅಂಥ ಸನ್ನಿವೇಶಗಳಲ್ಲಿ ಅವನ್ನು ನಿಭಾಯಿಸುವ, ಅವುಗಳ ದುಷ್ಪರಿಣಾಮದ ತೀವ್ರತೆಯನ್ನು ಕಮ್ಮಿ ಮಾಡಬಲ್ಲ ತಂತ್ರಗಳನ್ನು ರೂಪಿಸಿಕೊಳ್ಳ ಬೇಕಾಗುತ್ತದೆ ಎಂಬ ಅರಿವು ಮೂಡಿಸುವ ಪ್ರಯತ್ನ ನಡೆದಿದೆಯೇ? ಈ ಅರಿವು ತಂತಾನೇ ಮೂಡುವುದಾದರೂ ಹೇಗೆ?

ಶಾಲೆಗಳಲ್ಲಿ ಯಾವ ಪ್ರಶ್ನೆಗೆ ಯಾವ ಉತ್ತರ ಬರೆಯಬೇಕು ಎಂಬುದನ್ನು ಹೇಳಿಕೊಡುವ ಪರಿಪಾಠ ಇದೆ. ‘ಹೋಮ್ ವರ್ಕ್’ ಹೆಸರಿನಲ್ಲಿ ಕೊಡುವ ಬಹುತೇಕ ಪ್ರಶ್ನೆಗಳಿಗೆ ಉತ್ತರ ಪಠ್ಯಪುಸ್ತಕದಲ್ಲಿಯೇ ಇರುತ್ತದೆ. ಅವನ್ನು ಹುಡುಕಿ ತೆಗೆಯಲು ಪೋಷಕರು ನೆರವು ನೀಡುತ್ತಾರೆ. ಸುದೀರ್ಘ ಕಾಲ ಜರಗುವ ಈ ಪ್ರಕ್ರಿಯೆಯಿಂದಾಗಿ, ಯಾವುದೇ ಪ್ರಶ್ನೆಗೆ ನಾವು ಉತ್ತರ ಆವಿಷ್ಕರಿಸಬೇಕಿಲ್ಲ, ಎಲ್ಲಿಯೋ ಒಂದೆಡೆ ಇರುವ ಸಿದ್ಧಪಡಿಸಿದ ಉತ್ತರವನ್ನು ಹುಡುಕಿ ತೆಗೆಯ ಬೇಕಾದದ್ದಷ್ಟೇ ನಮ್ಮ ಕೆಲಸ ಎಂಬ ಭಾವನೆ ಬೇರೂರುವುದಿಲ್ಲವೇ?

ಕೆಲವು ಸಂದರ್ಭಗಳಲ್ಲಿ ನಮ್ಮ ಸಮಸ್ಯೆಗೆ ಕಾರಣ ನಮ್ಮಲ್ಲಿಯೇ ಇರುತ್ತದೆ. ನಮ್ಮ ಸಾಮರ್ಥ್ಯಗಳನ್ನೂ ಆರ್ಥಿಕ ಸ್ಥಿತಿಗತಿಗಳನ್ನೂ, ನಮ್ಮ ಸಮುದಾಯದ ಕಟ್ಟುಪಾಡುಗಳನ್ನೂ ಸಾಮಾಜಿಕ ಪರಿಸರವನ್ನೂ ಗಣನೆಗೆ ತೆಗೆದುಕೊಳ್ಳದೆಯೇ ಗುರಿಯನ್ನೇ ಆಗಲಿ ಗುರಿಸಾಧನೆಯ ವಿಧಾನವನ್ನೇ ಆಗಲಿ ಆಯ್ಕೆ ಮಾಡಿದ್ದರೆ ಸೋಲು ಖಾತರಿ. ಇಂಥ ಸಂದರ್ಭಗಳಲ್ಲಿ ಗುರಿ ಸಾಧಿಸುವುದು ಹೇಗೆ ಎಂಬ ಸಮಸ್ಯೆಗೆ ಎಷ್ಡು ಕಾಲ ಹುಡುಕಿದರೂ ಉತ್ತರವೇ ಸಿಕ್ಕುವುದಿಲ್ಲ. ಇಂಥ ಸಂದರ್ಭಗಳಲ್ಲಿ ಗುರಿಯನ್ನು ಅಥವ ಗುರಿಸಾಧನೆಯ ವಿಧಾನವನ್ನು ಬದಲಿಸುವುದು ಜಾಣತನವಲ್ಲವೆ? ಯಾವುದೇ ತೀರ್ಮಾನ ಕೈಗೊಳ್ಳಲು ಅನುಸರಿಸ ಬೇಕಾದ ಪ್ರಕ್ರಿಯೆಯನ್ನೇ ಆಗಲಿ, ಕೈಗೊಂಡ ತೀರ್ಮಾನ ತಪ್ಪು ಎಂಬ ಅರಿವು ಮೂಡಿದಾಗ ಮಾಡಬೇಕಾದ್ದೇನು ಇವೇ ಮೊದಲಾದವುಗಳ ಕುರಿತಾದ ಶಿಕ್ಷಣ ಶಾಲೆಗಳಲ್ಲಿಯೇ ಆಗಲಿ ಮನೆಯಲ್ಲಿಯೇ ಆಗಲಿ ದೊರೆಯುತ್ತಿದೆಯೇ?

ಪರಿಸ್ಥಿತಿ ಇಂತಿರುವಾಗ ಅನುಭವ, ಜ್ಞಾನ ಮತ್ತು ಕುಶಲತೆಗಳ ಕೊರತೆಯಿಂದಾಗಿ ಆತ್ಮಹತ್ಯೆಯನ್ನು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಒಂದು ವಿಧಾನವಾಗಿ ಕೆಲವು ಎಳೆಯರು ಆಯ್ಕೆ ಮಾಡಿಕೊಂಡದ್ದು ನನಗೆ ಅಚ್ಚರಿಯ ಸಂಗತಿ ಅಲ್ಲ.

ಅದೇನೇ ಇರಲಿ, ಆತ್ಮಹತ್ಯೆ ನಿಜವಾಗಿ ಸಮಸ್ಯೆಯನ್ನು ಪರಿಹರಿಸುತ್ತದೆಯೇ? ‘ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆತ್ಮ ಎಂಬುದು ಮಾನವ ಕಲ್ಪನೆಯ ಸೃಷ್ಟಿಯೇ ವಿನಾ ನಿಜವಾಗಿ ಅಸ್ತಿತ್ವದಲ್ಲಿ ಇಲ್ಲದ್ದು’ ಎಂದು ನಂಬಿರುವವರಿಗೆ ವೈಯಕ್ತಿಕ ಸಮಸ್ಯೆ ಪರಿಹರಿಸುವ ಒಂದು ವಿಧಾನವಾಗಿ ಆತ್ಮಹತ್ಯೆ ಗೋಚರಿಸುವುದರಲ್ಲಿ ಆಶ್ಚರ್ಯವಿಲ್ಲ, ಸಾವಿನ ನಂತರ ಏನು ಎಂಬ ಪ್ರಶ್ನೆ ಇಂಥವರಿಗೆ ಅರ್ಥವಿಹೀನ ಪ್ರಶ್ನೆ ಆಗಿರುವುದರಿಂದ. ‘ಆತ್ಮಹತ್ಯೆ ಒಂದು ಧರ್ಮವಿರೋಧೀ ಪಾಪಕಾರ್ಯ’ ಎಂದು ಇಂಥವರಿಗೆ ಬೋಧಿಸುವುದರಿಂದ ಪ್ರಯೋಜನವಾಗುತ್ತದೆ ಎಂದು ನನಗನ್ನಿಸುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಮಾಡಿಕೊಂಡವರ ಆಪ್ತೇಷ್ಟರು, ತನ್ನಿಂದ ಭವಿಷ್ಯದಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಬಂಧುಗಳೂ (ಅರ್ಥಾತ್ ತಂದೆ ತಾಯಿ/ಜೀವನ ಸಂಗಾತಿ/ಮಕ್ಕಳು ಮೊದಲಾವರು) ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದಾದ್ದರಿಂದ ಅದು ಸಮಸ್ಯೆ ಪರಿಹಾರದ ಒಂದು ವಿಧಾನವೇ ಅಲ್ಲ ಎಂಬ ಅಂಶ ಮನದಾಳದಲ್ಲಿ ಎಳೆವಯಸ್ಸಿನಲ್ಲೇ ಬೇರೂರುವಂತೆ ಮಾಡುವುದು ಉತ್ತಮ ಎಂಬುದು ನನ್ನ ಅಭಿಮತ.

‘ಆತ್ಮದ ಅಸ್ತಿತ್ವ’, ‘ಕರ್ಮಸಿದ್ಧಾಂತಾಧಾರಿತ ಪುನರ್ಜನ್ಮ’ ಇವೇ ಮೊದಲಾದವುಗಳಲ್ಲಿ ನಂಬಿಕೆ ಇರುವವರಿಗೆ ಆತ್ಮಹತ್ಯೆಯ ಪರಿಣಾಮವನ್ನು ಇಂತು ವಿವರಿಸುವುದು ಉತ್ತಮ - ‘ಇಂದು ಸೃಷ್ಟಿಯಾಗಿರುವ ಸನ್ನಿವೇಶಗಳು ಬಹುಮಟ್ಟಿಗೆ ನಮ್ಮ ಹಿಂದಿನ ಯಾವುದೋ ಕರ್ಮದ ಪರಿಣಾಮ. ಈ ಸನ್ನಿವೇಶದಲ್ಲಿ ನಾವು ಕಲಿಯಬೇಕಾದದ್ದು ಏನೋ ಇರುತ್ತದೆ. ಕಲಿಯಬೇಕಾದದ್ದನ್ನು ಕಲಿತಿದ್ದೇವೆಯೇ ಇಲ್ಲವೇ ಎಂಬುದನ್ನು ಸೂಚಿಸುತ್ತದೆ ಆ ಸನ್ನಿವೇಶದಲ್ಲಿ ನಾವೇನು ಮಾಡುತ್ತೇವೆ ಎಂಬುದು. ಕಲಿಯುವ ಈ ಅವಕಾಶದ ಸದುಪಯೋಗ ಮಾಡಿಕೊಳ್ಳುವುದಕ್ಕೆ ಬದಲಾಗಿ ಸನ್ನಿವೇಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡರೆ ಮುಂದೊಂದು ಜನ್ಮದಲ್ಲಿ ಪುನ: ಅಂತಹುದೇ ಸನ್ನಿವೇಶ ಮರುಕಳಿಸುವುದು ಖಚಿತ. ಆದ್ದರಿಂದ ಯಾವುದೇ ಸನ್ನಿವೇಶವನ್ನು ಧೈರ್ಯದಿಂದ, ಸಮಚಿತ್ತದಿಂದ ಎದುರಿಸಬೇಕೇ ವಿನಾ ಆತ್ಮಹತ್ಯೆಯ ಮುಖೇನ ತಪ್ಪಿಸಿಕೊಳ್ಳುವ ಯತ್ನ ಮಾಡುವುದು ಮೂರ್ಖತನ’

ಯಾವುದೇ ಸಮಸ್ಯಾ ಸನ್ನಿವೇಶ ಎದುರಿಸಲು ಈ ಎರಡೂ ವರ್ಗದ ಜನರ ನೆರವಿಗೆ ಬರುವ ಕುಶಲತೆಗಳೇ ಸಮಸ್ಯೆ ಪರಿಹರಿಸುವ (ಪ್ರಾಬ್ಲೆಮ್ ಸಾಲ್ವಿಂಗ್), ತೀರ್ಮಾನ ಕೈಗೊಳ್ಳುವ (ಡೆಸಿಷನ್ ಮೇಕಿಂಗ್), ಸ್ವಯಂ ಕಲಿಯುವ (ಸೆಲ್ಫ್ ಲರ್ನಿಂಗ್) ಕುಶಲತೆಗಳು. ಎಂದೇ, ಇವನ್ನು ಶಾಲೆಯಲ್ಲಿಯೇ ಆಗಲಿ ಮನೆಯಲ್ಲಿಯೇ ಆಗಲಿ ಕಲಿಸಬೇಕು. ಈ ಶಿಕ್ಷಣ ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮುನ್ನವೇ ಹೆಚ್ಚುಕಮ್ಮಿ ಪೂರ್ಣಗೊಂಡಿರಬೇಕು.

No comments: