ಮೇಜಿನ ಮೇಲೆ ಚಿಕ್ಕ ಬಟ್ಟಲು ಅಥವ ಚಹಾ ಕುಡಿಯುವ ಚಿಕ್ಕ ಕಪ್ ಇಡಿ (ಗಾಜಿನದ್ದು ಅಲ್ಲ). ಅದರ ತಳದಲ್ಲಿ ಒಂದು ನಾಣ್ಯ (ನೀರಿನಲ್ಲಿ ಲೀನವಾಗದ ಬೇರೆ ಯಾವುದಾದರೂ ಚಿಕ್ಕ ವಸ್ತುವೂ ಆಗಬಹುದು) ಇಡಿ (ಚಿತ್ರ ೧). ತುಸು ಮುಂದಕ್ಕೆ ಬಗ್ಗಿದರೆ ಅದು ಗೋಚರಿಸುವಂಥ ಆದರೆ ಬಗ್ಗದೆ ನೆಟ್ಟಗೆ ನಿಂತಾಗ ಗೋಚರಿಸದೇ ಇರುವಂಥ ಸ್ಥಳದಲ್ಲಿ ನಿಲ್ಲಿ (ಚಿತ್ರ ೨). ನಾಣ್ಯ ಅಲುಗಾಡದಂತೆ ಬಟ್ಟಲಿಗೆ ನಿಧಾನವಾಗಿ ನೀರು ಸುರಿಯಲು ನಿಮ್ಮ ಮಿತ್ರನಿಗೆ ಹೇಳಿ. ನೀರು ಒಂದು ನಿರ್ದಿಷ್ಟ ಮಟ್ಟ ತಲುಪಿದಾಗ ನೆಟ್ಟಗೆ ನಿಂತಿರುವ ನಿಮಗೆ ಮೊದಲು ಅಗೋಚರವಾಗಿದ್ದ ನಾಣ್ಯ ಗೋಚರಿಸುವ ವೈಚಿತ್ರ್ಯ ವೀಕ್ಷಿಸಿ (ಚಿತ್ರ ೩, ೪). ನಾಣ್ಯದ ಸ್ಥಾನ ಬದಲಿಸದಿದ್ದರೂ ಇದು ಸಾಧ್ಯವಾದದ್ದು ಏಕೆ? ಬೆಳಕಿನ ಕಿರಣಗಳು ನೀರಿನಿಂದ ವಾಯುವನ್ನು ಪ್ರವೇಶಿಸಿಸುವಾಗ ಬಾಗಿರಬಹುದೇ? ಆಲೋಚಿಸಿ.
ಒಂದು ನಾಣ್ಯವನ್ನು ಮೇಜಿನ ಮೇಲೆ ಇಟ್ಟು ಅದರ ಮೇಲೆ ಒಂದು ಗಾಜಿನ ಲೋಟ ಇಡಿ (ಚಿತ್ರ ೫). ಲೋಟದ ಪಕ್ಕದಿಂದ ನೋಡಿದಾಗ ನಾಣ್ಯ ಕಾಣುತ್ತದಲ್ಲವೇ? (ಚಿತ್ರ ೬) ಲೋಟದಲ್ಲಿ ತುಸು ನೀರು ತುಂಬಿಸಿ ಪಕ್ಕದಿಂದ ನೋಡಿ. ಮೊದಲು ಗೋಚರಿಸುತ್ತಿದ್ದ ನಾಣ್ಯ ಈಗ ಗೋಚರಿಸುವುದಿಲ್ಲ, ಏಕೆ? (ಚಿತ್ರ ೭) ಮೊದಲು ನಾಣ್ಯದಿಂದ ಹೊರಟ ಬೆಳಕು ವಾಯುವಿನಿಂದ ಗಾಜಿನ ಮೂಲಕವಾಗಿ ಪುನಃ ವಾಯುವನ್ನು ಪ್ರವೇಶಿಸಿ ನಿಮ್ಮನ್ನು ತಲುಪುತ್ತಿತ್ತು. ನೀರು ತುಂಬಿಸಿದ ಬಳಿಕ ಏನಾಗಿರಬಹುದು, ನೀವೇ ಆಲೋಚಿಸಿ.
ಒಂದು ಗಾಜಿನ ಅಗಲಬಾಯಿಯ ಬಾಟಲಿನಲ್ಲಿ ನೀರು ತುಂಬಿಸಿ. ಬಾಟಲಿನ ನೀರಿನಲ್ಲಿ ಒಂದು ಯಾವುದಾದರೂ ನೇರವಾಗಿರುವ ಕಡ್ಡಿ ಅಥವ ಪೆನ್ ಅನ್ನು ಲಂಬ ನೇರದಲ್ಲಿ ಅದ್ದಿ ನೋಡಿ. (ಚಿತ್ರ ೮) ತದನಂತರ ಅದನ್ನು ಓರೆಯಾಗಿ ಅದ್ದಿ ನೋಡಿ. ಎರಡನೇ ಬಾರಿ ಅದು ನೀರನ್ನು ಪ್ರವೇಶಿಸುವಲ್ಲಿ ತುಸು ಬಾಗಿದಂತೆ ಕಾಣುತ್ತಿದೆಯೇ? (ಚತ್ರ ೯)
ನೀರು ತುಂಬಿದ ಬಾಟಲನ್ನು ವಾರ್ತಾಪತ್ರಿಕೆಯ ಹಾಳೆಯ ಮೇಲಿಡಿ. ಮೇಲಿನಿಂದ ನೇರವಾಗಿ ಬಾಟಲಿನಲ್ಲಿರುವ ನೀರಿನ ಮೂಲಕ ವಾರ್ತಾಪತ್ರಿಕೆಯನ್ನು ನೋಡಿ. ಅಕ್ಷರಗಳು ತುಸು ಮೇಲಿರುವಂತೆ ಭಾಸವಾಗುತ್ತದೆಯೇ? ವಾರ್ತಾಪತ್ರಿಕೆಯನ್ನು ನೀರು ತುಂಬಿದ ಬಾಟಲಿನ ಹಿಂದೆ ಹಿಡಿದು ನೀರಿನ ಮೂಲಕ ನೋಡಿದಾಗ ಅಕ್ಷರಗಳು ದೊಡ್ಡದಾಗಿ ಗೋಚರಿಸುತ್ತವೆಯೇ? (ಚಿತ್ರ ೧೦)
ಬಾಟಲಿನ ನೀರಿನಲ್ಲಿ ನಿಮ್ಮ ಬೆರಳನ್ನು ಹಾಕಿ ಹೊರಗಿನಿಂದ ನೋಡಿದಾಗ ನೀರೊಳಗಿರುವ ಬೆರಳಿನ ಭಾಗ ದೊಡ್ಡದಾಗಿರುವಂತೆ ಗೋಚರಿಸುತ್ತದೆಯೇ? ಈ ವಿದ್ಯಮಾನಗಳು ಬೆಳಕು ಒಂದು ಪಾರದರ್ಶಕ ಮಾಧ್ಯಮದಿಂದ ಇನ್ನೊಂದಕ್ಕೆ ದಾಟುವಾಗ ಬಾಗುವುದರ ಪರಿಣಾಮಗಳೇ? ನೀವೇ ಆಲೋಚಿಸಿ
No comments:
Post a Comment