ಸಾಬೂನು ಚಾಲಿತ ದೋಣಿಉಪಯೋಗಿಸಿದ ಅಂಚೆ ಕಾರ್ಡ್ ಅಥವ ಆಹ್ವಾನ ಪತ್ರಿಕೆ ಮುದ್ರಿಸಿದ ಕಾರ್ಡುಗಳಿಂದ ಸರಿಸುಮಾರಾಗಿ ೨x೩ ಸೆಂಮೀ ಅಳತೆಯ ೩ ಪಟ್ಟಿಗಳಿಂದ ಚಿತ್ರದಲ್ಲಿ ತೋರಿಸಿದಂಥ ಮೂರು ಪುಟ್ಟ ಆಕೃತಿಗಳನ್ನು ತಯಾರಿಸಿ. ಮೂರೂ ಆಕೃತಿಗಳಲ್ಲಿ ಇರುವ ಸೀಳುಗಳಲ್ಲಿ ಪಾತ್ರೆ

ತೊಳೆಯುವ ಅಥವ ಬಟ್ಟೆ ಒಗೆಯುವ ಸಾಬೂನಿನ ಚೂರುಗಳನ್ನು ಬೀಳದಂತೆ ಸಿಕ್ಕಿಸಿ. ಇವೇ ಸಾಬೂನು ಚಾಲಿತ ದೋಣಿಗಳು. ಒಂದು ದೊಡ್ಡ ಬೋಗುಣಿಯಲ್ಲಿ ನೀರು ತುಂಬಿಸಿ, ಯಾವುದಾದರೂ ಒಂದು ಸಾಬೂನು ಚಾಲಿತ ದೋಣಿಯನ್ನು ನೀರಿನಲ್ಲಿ ತೇಲಿಬಿಟ್ಟು ಅದು ತಾನಾಗಿಯೇ ಚಲಿಸುವ ವಿದ್ಯಮಾನ ವೀಕ್ಷಿಸಿ. ಅದು ಚಲಿಸುವ ದಿಕ್ಕನ್ನು ಗಮನಿಸಿ. ದೋಣಿ ಚಲಿಸಲು ಕಾರಣ ಊಹಿಸಬಲ್ಲಿರಾ? ಸಾಬೂನು ಮುಟ್ಟಿದ್ದರಿಂದ ನೀರಿನ ಮೇಲ್ಮೈ ಎಳೆತದಲ್ಲಿ ಬದಲಾವಣೆ ಉಂಟಾದದ್ದಕ್ಕೂ ಚಲನೆಗೂ ಏನಾದರೂ ಸಂಬಂಧ ಇರಬಹುದೇ? ತದನಂತರ ಉಳಿದ ಎರಡು ದೋಣಿಗಳನ್ನು ಒಂದಾದ ನಂತರ ಒಂದರಂತೆ ತೇಲಿಸಿ ಅವು ಚಲಿಸುವ ದಿಕ್ಕುಗಳನ್ನು ಗಮನಿಸಿ. ದೋಣಿಯಲ್ಲಿ ಸೀಳು ಇರುವ ಸ್ಥಾನಕ್ಕೂ ದೋಣಿ ಚಲಿಸುವ ದಿಕ್ಕಿಗೂ ಇರುವ ಸಂಬಂಧ ಗಮನಿಸಿ.
ಎರಡು ಜಾದೂ ಪ್ರಯೋಗಗಳುಒಂದು ಲೋಟದಲ್ಲಿ ನೀರು ತುಂಬಿಸಿ. ಕಾಳುಮೆಣಸಿನ ಪುಡಿಯನ್ನು ನೀರಿನ ಮೇಲೆ ದಟ್ಟವಾದ ಪದ ಉಂಟಾಗುವಂತೆ ಚಿಮುಕಿಸಿ. ತೋರುಬೆರಳಿನಿಂದ ನೀರಿನ ಮೇಲೆ ಚಿಮುಕಿಸಿದ ಕಾಳುಮೆಣಸಿನ ಪುಡಿಯ ಮೇಲೆ ಒಂದು ಗೆರೆ ಎಳೆದು ಪುಡಿಯ ಪದರವನ್ನು ಎರಡು

ಭಾಗಗಳಾಗಿ ವಿಭಜಿಸುವಂತೆ ನಿಮ್ಮ ಮಿತ್ರರಿಗೆ ಸವಾಲೆಸೆಯಿರಿ. ಆವರು ಅನೇಕ ಬಾರಿ ಪ್ರಯತ್ನಿಸಿ ಸೋಲು ಒಪ್ಪಿಕೊಂಡಾಗ ನೀವು ನಿಮ್ಮ ಬೆರಳಿನಿಂದ ಪುಡಿಯ ಪದರದ ಮೇಲೆ ಗೆರೆ ಎಳೆದು ಅದನ್ನು ಇಬ್ಭಾಗ ಮಾಡಿ ಅವರನ್ನು ಚಕಿತಗೊಳಿಸಿ. ಅಂದ ಹಾಗೆ, ಅವರಿಗೆ ತಿಳಿಯದಂತೆ ನೀವು ನಿಮ್ಮ ತೋರು ಬೆರಳಿಗೆ ಸಾಬೂನಿನ ಅಥವ ಮಾರ್ಜಕದ ಲೇಪ ಸುಲಭಗೋಚರವಲ್ಲದಂತೆ ಮಾಡಿರಬೇಕು. ನೀರಿನ ಮೇಲ್ಮೈ ಎಳೆತದ ಮೇಲೆ ಸಾಬೂನಿನ ಪರಿಣಾಮ ನಿಮಗೆ ತಿಳಿದಿರುವುದರಿಂದ ಈ ಜಾದೂ (ಪವಾಡ) ನಿಮಗೆ ಮಾಡಲು ಸಾಧ್ಯವಾಯಿತು.
ಒಂದು ಬೋಗುಣಿಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಒಂದು ನಾಣ್ಯ ಮುಳುಗಿಸಿ. ಪಕ್ಕದಲ್ಲಿಯೇ ಸಾಬೂನು, ಯಾವುದಾದರೂ ತೈಲ, ದೊಡ್ಡ ದಪ್ಪನೆಯ ಕರವಸ್ತ್ರ, ಟಾಲ್ಕಮ್ ಪೌಡರ್ ಮುಂತಾದ ಅನೇಕ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಇಟ್ಟಿರಿ. ಇವುಗಳಲ್ಲಿ ರಬ್ಬರ್/ಪ್ಲಾಸ್ಟಿಕ್ ಕೈಚೀಲ ಹಾಕದೆಯೇ ಕೈ ಒದ್ದೆ ಆಗದಂತೆ ನೀರಿನಲ್ಲಿರುವ ನಾಣ್ಯವನ್ನು ಕೈನಿಂದಲೇ ತೆಗೆಯುವಂತೆ ನಿಮ್ಮ ಮಿತ್ರರಿಗೆ ಸವಾಲೆಸೆಯಿರಿ. ಮೇಜಿನ ಮೇಲಿರುವ ಯಾವುದೇ ವಸ್ತುವಿನ ನೆರವು ಪಡೆಯಬಹುದು ಎಂದೂ ತಿಳಿಸಿ. ನೀನೇ ತೆಗೆದು ತೋರಿಸು ಎಂದು ಅವರು ಮರು ಸವಾಲು ಖಂಡಿತವಾಗಿ ಹಾಕುತ್ತಾರೆ. ನೀವು ಮಾಡಬೇಕಾದದ್ದು ಇಷ್ಟು: ನೀರಿನ ಮೇಲೆ

ದಪ್ಪನೆಯ ಪದರ ಆಗುವ ತನಕ ಟಾಲ್ಕಮ್ ಪೌಡರನ್ನು ಚಿಮುಕಿಸಿ. ನಿಮ್ಮ ಕೈಗೂ ಟಾಲ್ಕಮ್ ಪೌಡರ್ ಧಾರಾಳವಾಗಿ ಹಚ್ಚಿಕೊಳ್ಳಿ. ತದನಂತರ ನಿಮ್ಮ ಎರಡು ಬೆರಳುಗಳನ್ನು ಪೌಡರಿನ ಪದರದ ಮೂಲಕ ನೀರಿನೊಳಗೆ ಅದ್ದಿ ನಾಣ್ಯ ಹೊರತೆಗೆಯಿರಿ. ನಿಮ್ಮ ಬೆರಳುಗಳ ಸುತ್ತ ಪೌಡರಿನ ಲೇಪವಾಗಿರುವುದನ್ನೂ ಅವಕ್ಕೆ ನೀರು ಅಂಟಿಕೊಳ್ಳದಿರುವುದನ್ನೂ ಗಮನಿಸಿ.
No comments:
Post a Comment