Pages

18 June 2011

ಒಳ್ಳೆಯ ಶಾಲೆಗಳು, ಕಾಲೇಜುಗಳು - ಅಂದು, ಇಂದು

‘ದೆಹಲಿಯ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಈ ವರ್ಷದ ಪ್ರಥಮ ಪಿ ಯು ಸಿ ಪ್ರವೇಶಪಟ್ಟಿಯ ಮೊದಲನೇ ಕಂತಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡವರೆಲ್ಲರೂ ೧೦೦% ಅಂಕ ತೆಗೆದವರು’. ‘ಎಸ್ ಎಸ್ ಎಲ್ ಸಿ ನಲ್ಲಿ ೯೭.೫% ಗಿಂತ ಕಡಿಮೆ ಅಂಕ ತೆಗೆದವರಿಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರಥಮ ಪಿ ಯು ಸಿ ತರಗತಿಗೆ ಮೊದಲ ಕಂತಿನಲ್ಲಿ ಪ್ರವೇಶಾವಕಾಶ ಇಲ್ಲ’ - ಇಂಥ. ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದಾಗ ಅಥವ ಇತರರಿಂದ ಕೇಳಿದಾಗ ನನ್ನ ಮನಸ್ಸಿಗೆ ತೋಚಿದ್ದು:-

ಅಂದು: ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ (೬೦% ಅಥವ ಹೆಚ್ಚು ಅಂಕ) ಅದೇ ದೊಡ್ಡ ವಿಶೇಷ. ಎಸ್ ಎಸ್ ಎಲ್ ಸಿ ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ ಸಾಕು - ಎಲ್ಲ ಕಾಲೇಜುಗಳಲ್ಲಿಯೂ ಪೂರ್ಣಕುಂಭ ಸ್ವಾಗತ ಗ್ಯಾರಂಟಿ. ಪಿ ಯು ಸಿ ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರಿಗೆ ಅಂದು ಜನಪ್ರಿಯವಾಗಿದ್ದ ಮೆಡಿಕಲ್ ಅಥವ ಎಂಜಿನಿಯರಿಂಗ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ಸೀಟು ಗ್ಯಾರಂಟಿ. ಎರಡನೇ ದರ್ಜೆಯ ಮೇಲಿನ ಸ್ತರದಲ್ಲಿ ತೇರ್ಗಡೆಯಾದವರಿಗೂ ಎಂಜಿನಿಯರಿಂಗ್ ಸೀಟು ಸಿಕ್ಕುತ್ತಿತ್ತು.

ಇಂದು: ಎಸ್ ಎಸ್ ಎಲ್ ಸಿ ನಲ್ಲಿ ೯೫% ಗಿಂತ ಕಮ್ಮಿ ಅಂಕ ತೆಗೆದವರು ಸಿರಿವಂತರಾಗಿದ್ದರೆ ಮಾತ್ರ ಪ್ರತಿಷ್ಠಿತ ಪಿ ಯು ಸಿ ಕಾಲೇಜುಗಳಿಗೆ ಸೇರುವ ಕನಸು ಕಾಣಬಹುದು. ಪಿ ಯು ಸಿ ನಲ್ಲಿ ೯೦% ಹೆಚ್ಚು ಅಂಕ ತೆಗೆಯುವುದರೊಂದಿಗೆ ಸಿ ಇ ಟಿ ನಲ್ಲಿಯೂ ಹೆಚ್ಚು ಕಮ್ಮಿ ಅಷ್ಟೇ ಅಂಕ  ತೆಗದರೆ ಮೆಡಿಕಲ್ ಸೀಟಿನ ಕನಸು ಕಾಣಬಹುದು, ಅಪೇಕ್ಷಿತ ಕಾಲೇಜಿನಲ್ಲಿಯೇ ಸಿಕ್ಕುವುದು ಖಾತರಿ ಇಲ್ಲ.  ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಸುಲಭವಾಗಬೇಕಾದರೆ ೮೦% ಗಿಂತ ಕಮ್ಮಿ ಅಂಕ ಇರಬಾರದು.

ಅಂದು: ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗದಿರುವುದನ್ನು ಅವಮಾನ ಎಂದು ಯಾರೂ ಪರಿಗಣಿಸುತ್ತಿರಲಿಲ್ಲ. ನಪಾಸಾದವರನ್ನೂ ಕೀಳಾಗಿಯೂ ಕಾಣುತ್ತಿರಲಿಲ್ಲ.

ಇಂದು: ೯೦% ಅಂಕ ಗೌರವಾನ್ವಿತವಾದದ್ದು.  ೮೦% ಗಿಂತ ಕಮ್ಮಿ ಅಂಕ ತೆಗಯುವುದು ಅವಮಾನದ ವಿಷಯ. ನಪಾಸಾದವರು ‘ಯಾಕೂ ಬೇಡದವರು’

ಅಂದು: ವಿದ್ಯಾರ್ಥಿಯ ಸಾಧನೆ ಆಧರಿಸಿ ಮುಂದೇನು ಮಾಡಬೇಕು ಎಂದು ತೀರ್ಮಾನಿಸುತ್ತುದ್ದ ತಂದೆತಾಯಿಯರು

ಇಂದು: ಎಮ್ ಬಿ ಬಿ ಎಸ್  ಅಥವ ಬಿ ಇ (ಅನುಕ್ರಮವಾಗಿ ಕಂಪ್ಯೂಟರ್ ಸೈನ್ಸ್, ಎಲೆಕಟ್ರಾನಿಕ್ಸ್, ಮೆಕ್ಯಾನಿಕಲ್ - ಇವಕ್ಕೆ ಆದ್ಯತೆ) ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳು ಅಗತ್ಯವಾದಷ್ಟು ಅಂಕ ಹೇಗಾದರೂ ಗಳಿಸಿಕೊಳ್ಳುವುದಕ್ಕೆ ಒತ್ತು. ಅದಕ್ಕೆ ಒಂದನೇ ತರಗತಿಯಿಂದಲೇ ಸಿದ್ಧತೆ.

ಅಂದು: ‘ಕೋಚಿಂಗ್ ಸೆಂಟರ್’, ‘ಟ್ಯುಟೋರಿಯಲ್ಸ್’ ಇರಲೇ ಇಲ್ಲ. ಅತೀ ದಡ್ಡರು ಎಂದು ಹೇಳಲಾಗುತ್ತಿದ್ದ (ತಕ್ಕ ಮಟ್ಟಿಗಾದರೂ) ಆರ್ಥಿಕ ಸಬಲರ ಮಕ್ಕಳು ಮಾತ್ರ ‘ಮನೆ ಪಾಠ’ಕ್ಕೆ ಹೋಗುತ್ತಿದ್ದರು. ‘ಮನೆಪಾಠ’ದ ಒಂದು ತರಗತಿಯಲ್ಲಿ ೨ ಮಕ್ಕಳಿದ್ದರೆ ಅದೇ ಹೆಚ್ಚು ಅನ್ನಲಾಗುತ್ತಿತ್ತು. ಮನೆಪಾಠಕ್ಕೆ ಹೋಗುವುದು ಅವಮಾನದ ಸಂಗತಿಯಾಗಿತ್ತು.

ಇಂದು: ಶಾಲಾ ಕಾಲೇಜುಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಜನಪ್ರಿಯ. ಅನಿವಾರ್ಯ ಎಂದು ಇವು ಪರಿಗಣಿತವಾಗಿವೆ. ಅಗತ್ಯವಿರಲಿ ಇಲ್ಲದಿರಲಿ ‘ಕೋಚಿಂಗ್ ಸೆಂಟರ್’, ‘ಟ್ಯುಟೋರಿಯಲ್ಸ್’ಗಳಿಗೆ ಹೋಗುವುದು ಪ್ರತಿಷ್ಠೆಯ ವಿಷಯ. ಶುಲ್ಕ ಜಾಸ್ತಿ ಇದ್ದಷ್ಟೂ ಪ್ರತಿಷ್ಠೆ ಹೆಚ್ಚು.

ಅಂದು: ಶಾಲಾ ಕಾಲೇಜುಗಳಲ್ಲಿ ಪಾಠಗಳನ್ನು ಶ್ರದ್ಧೆಯಿಂದ ಕೇಳಿದರೆ, ಯೋಜಿತ ಅಭ್ಯಾಸ ಮಾಡಿದರೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಬಹುದಿತ್ತು.

ಇಂದು: ಶಾಲಾ ಕಾಲೇಜುಗಳಿಗೆ ಹಾಜರಾತಿ ಕಡ್ಡಾಯ ಎಂಬ ಕಾರಣಕ್ಕಾಗಿ ಹೋಗಬೇಕಾಗಿದೆ. ಕಲಿಯುವುದು ಖಾಸಗಿ ‘ಕೋಚಿಂಗ್ ಸೆಂಟರ್’, ‘ಟ್ಯುಟೋರಿಯಲ್ಸ್’ಗಳಲ್ಲಿ. ಕೆಲವು ಶಾಲೆಗಳಲ್ಲಿ ಪಾಠ ಕಲಿಯುವುದಕ್ಕಿಂತ ಹೆಚ್ಚು ‘ಹೋಮ್ ವರ್ಕ್’ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುವ ವಿಚಿತ್ರ ವಿದ್ಯಮಾನವನ್ನೂ ನೋಡಬಹುದು.

ಅಂದು: ಶಿಕ್ಷಕರ ಗುಣಮಟ್ಟವನ್ನು ಆಧರಿಸಿ ಶಾಲಾಕಾಲೇಜುಗಳ ಗುಣಮಟ್ಟವನ್ನು ಪೋಷಕರು ನಿರ್ಧರಿಸುತ್ತಿದ್ದರು

ಇಂದು: ಅಂತಿಮ ಪರೀಕ್ಷೆ ತೆಗೆದುಕೊಂಡವರ ಪೈಕಿ ಎಷ್ಟು ಮಂದಿ ಉತ್ತೀರ್ಣರಾಗಿದ್ದಾರೆ, ಎಷ್ಟು ಮಂದಿ ‘ಡಿಸ್ಟಿಂಕ್ಷನ್’ ಗಳಿಸಿದ್ದಾರೆ ಇವೇ ಮೊದಲಾದವನ್ನು ಆಧರಿಸಿ ಶಾಲಾಕಾಲೇಜುಗಳ ಗುಣಮಟ್ಟವನ್ನು ಪೋಷಕರು ನಿರ್ಧರಿಸುತ್ತಿದ್ದಾರೆ.

ಅಂದು: ಸರ್ಕಾರೀ ಶಾಲಾಕಾಲೇಜುಗಳಿಗೆ ಪ್ರವೇಶಪಡೆಯುವುದೇ ಬಹುಮಂದಿಯ ಆದ್ಯತೆ ಆಗಿತ್ತು

ಇಂದು: ಆರ್ಥಿಕವಾಗಿ ದುರ್ಬಲರಾದವರು ಮಾತ್ರ ಸರ್ಕಾರಿ ಶಾಲಾಕಾಲೇಜುಗಳಿಗೆ ಹೋಗುತ್ತಾರೆ.

ಅಂದು: ಎಲ್ಲ ಶಿಕ್ಷಕರೂ ನಿಷ್ಠೆಯಿಂದ ಬೋಧಿಸುತ್ತಿದ್ದರು

ಇಂದು: ಬೋಧಿಸುವ ಸಾಮರ್ಥ್ಯ ಇರುವ ಶಿಕ್ಷಕರ ಪೈಕಿ ಬಹುಮಂದಿ ‘ಮನೆಪಾಠ’ಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಮೊದಲನೇ ತಿಂಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ, ತದನಂತರ ‘ಸಿಲೆಬಸ್’ ಮುಗಿಸುವ ಶಾಸ್ತ್ರ ಮಾಡುತ್ತಾರೆ

ಅಂದು: ಪರೀಕ್ಷೆಗಳಲ್ಲಿ ನಕಲು ಮಾಡಲು ವಿದ್ಯಾರ್ಥಿಗಳು ಹೆದರುತ್ತಿದ್ದರು. ಸಿಕ್ಕಿಹಾಕಿಕೊಂಡರೆ ಅವಮಾನ. ಶಿಕ್ಷೆ ಖಚಿತ ಎಂಬ ಕಾರಣಕ್ಕಾಗಿ.

ಇಂದು: ಬಹುಮಂದಿ ಶಿಕ್ಷಕರೇ ನಕಲು ಮಾಡುವುದನ್ನು ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಾರೆ. ‘ಮೊಬೈಲ್ ಚೆಕ್ಕಿಂಗ್ ಸ್ಕ್ವಾಡ್’ನ ಆಗಮನವನ್ನು ಮೊದಲೇ ಪತ್ತೆಹಚ್ಚಿ ಅವರು ಇರುವ ತನಕ ಪರೀಕ್ಷಾಕೇಂದ್ರ ‘ಕ್ಲೀನ್’ ಆಗಿರುವಂತೆ ಮಾಡುವ ತಾಂತ್ರಿಕತೆಯನ್ನು ಕೇಂದ್ರದ ಸಿಬ್ಬಂದಿ ರೂಪಿಸಿದೆ.

ಅಂದು: ೧ ನೇ ತರಗತಿಗೆ ಸೇರ್ಪಡೆಯಾಗುವ ತನಕ ಮನೆಯೇ ಪಾಠಶಾಲೆ. ಬಾಲ್ಯದ ಉಲ್ಲಾಸದಾಯಕ ಅನುಭವಗಳ ಮುಖೇನ ಕಲಿಕೆ.

ಇಂದು: ೨-೨.೫ ವರ್ಷ ವಯಸ್ಸಾದಂದಿನಿಂದ ಶಿಕ್ಷಣಾರಂಭ. ೧ನೇ ತರಗತಿಗೆ ಬರುವ ಮುನ್ನವೇ ವರ್ಣಮಾಲೆಯ ಜ್ಞಾನ, ಸಂಖ್ಯೆಗಳ ಜ್ಞಾನ ಇವೇ ಮೊದಲಾದವುಗಳ ಕಲಿಕೆ. ‘ಡೇ ಕೇರ್ ಸೆಂಟರ್’, ಒಂದು ಕೊಠಡಿ, ಒಂದು ಜಾರುಗುಪ್ಪೆ, ಒಂದು ಹತ್ತುವ ಚೌಕಟ್ಟು ಇರುವ ‘ಪ್ಲೇ ಹೋಮ್’, ಸಮವಸ್ತ್ರಧಾರಿಗಳಾಗಿ ಬೆನ್ನ ಮೇಲೆ ಮೂಟೆ ಹೊತ್ತು ಹೋಗಬೇಕಾದ ‘ಎಲ್ ಕೆ ಜಿ, ಯು ಕೆ ಜಿ ತರಗತಿಗಳಿರುವ ಪ್ರಿ ಸ್ಕೂಲ್/ನರ್ಸರಿ ಸ್ಕೂಲ್/ಕಿಂಡರ್ ಗಾಟನ್/ಮಾಂಟೆಸೋರಿ’ಗೆ ದಾಖಲಾಗ ಬೇಕಾದ ಅನಿವಾರ್ಯತೆ.

ಅಂದು: ಶಾಲೆಗೆ/ನರ್ಸರಿ ಗೆ ಸೇರಲು ತಂದೆ ತಾಯಿ ಮಗುವಿನ ‘ಇಂಟರ್ವ್ಯೂ’ ಇರಲಿಲ್ಲ.

ಇಂದು: ಶಾಲೆಗೆ/ನರ್ಸರಿಗೆ ಸೇರಲು ತಂದೆ ತಾಯಿ ಮಗುವಿನ ‘ಇಂಟರ್ವ್ಯೂ’ ಕಡ್ಡಾಯ ಅನ್ನುವ ಅಲಿಖಿತ ಅನಧಿಕೃತ ಪದ್ಧತಿ

ಅಂದು: ಮಗು ಉತ್ತೀರ್ಣವಾದದ್ದು ಒಳ್ಳೆಯ ಶಿಕ್ಷಕರಿದ್ದದ್ದರಿಂದ, ಅನುತ್ತೀರ್ಣವಾದದ್ದು ಅದರಲ್ಲಿ ಪ್ರತಿಭೆ/ಸಾಮರ್ಥ್ಯ ಇಲ್ಲದ್ದರಿಂದ ಅನ್ನುವ ನಂಬಿಕೆ

ಇಂದು: ಮಗು ಉತ್ತೀರ್ಣವಾದದ್ದು ಅದರಲ್ಲಿ ಪ್ರತಿಭೆ/ಸಾಮರ್ಥ್ಯ ಇದ್ದದ್ದರಿಂದ, ಅನುತ್ತೀರ್ಣವಾದದ್ದು ಶಾಲೆಯ/ಶಿಕ್ಷಕರ ದೋಷದಿಂದ ಅನ್ನುವ ನಂಬಿಕೆ.

ಅಂದು: ಮಗು ಉತ್ತೀರ್ಣವಾದದ್ದು ಒಳ್ಳೆಯ ಶಿಕ್ಷಕರಿದ್ದದ್ದರಿಂದ, ಅನುತ್ತೀರ್ಣವಾದದ್ದು ಅದರಲ್ಲಿ ಪ್ರತಿಭೆ/ಸಾಮರ್ಥ್ಯ ಇಲ್ಲದ್ದರಿಂದ ಅನ್ನುವ ನಂಬಿಕೆ

ಇಂದು: ಮಗು ಉತ್ತೀರ್ಣವಾದದ್ದು ಅದರಲ್ಲಿ ಪ್ರತಿಭೆ/ಸಾಮರ್ಥ್ಯ ಇದ್ದದ್ದರಿಂದ, ಅನುತ್ತೀರ್ಣವಾದದ್ದು ಶಾಲೆಯ/ಶಿಕ್ಷಕರ ದೋಷದಿಂದ ಅನ್ನುವ ನಂಬಿಕೆ.

ಅಂದು: ಹೆಚ್ಚುಕಮ್ಮಿ ಎಲ್ಲ ಊರುಗಳಲ್ಲಿ ಎಸ್ ಎಸ್ ಎಲ್ ಸಿ ತನಕ ಕನ್ನಡ ಮಾಧ್ಯಮ (ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಕೆ) ತದನಂತರ ಇಂಗ್ಲಿಷ್ ಮಾಧ್ಯಮ. ಎಸ್ ಎಸ್ ಎಲ್ ಸಿ ಆದವರಿಗೆ ಇಂಗ್ಲಿಷ್ ನಲ್ಲಿ ಲೇಖನ, ವಾಚನ ಸಾಮರ್ಥ್ಯವಿರುತ್ತಿತ್ತು. ಕಾಲೇಜಿಗೆ ಹೋದ ಬಳಿಕ ನಿಧಾನವಾಗಿ ಮಾತನಾಡುವ ಸಾಮರ್ಥ್ಯವೂ ಸಿದ್ಧಿಸುತ್ತಿತ್ತು.

ಇಂದು: ಆರ್ಥಿಕವಾಗಿ ಸುಮಾರಾಗಿರುವವರೂ ಪೂರ್ವಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು (ಒಂದು ಭಾಷೆಯಾಗಿ ಕನ್ನಡ ಕಲಿಕೆ) ಅಪೇಕ್ಷಿಸುತ್ತಾರೆ. ಹೋಬಳಿ ಮಟ್ಟದಲ್ಲಿಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಿವೆ. ಈಗ ಕನ್ನಡ ಮಾಧ್ಯಮ ಶಾಲೆಗಳಿರುವುದು ಅತೀ ಬಡವರಿಗೆ ಎಂಬಂತಾಗಿದೆ. ಎಸ್ ಎಸ್ ಎಲ್ ಸಿ ಆದವರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯೂ ದುರ್ಬಲವಾಗಿರುವುದು ಪ್ರಸಾಮಾನ್ಯ.

ಅಂದು: ಸಿ ಬಿ ಎಸ್ ಸಿ --- ಇತ್ಯಾದಿ ಪದ್ಧತಿಗಳ ಶಾಲೆಗಳು ಅತೀ ವಿರಳ

ಇಂದು: ಇಂದು ಹೆಚ್ಚು ಕಮ್ಮಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಸಿ ಬಿ ಎಸ್ ಸಿ ಶಾಲೆಗಳಿವೆ.

ಅಂದು: ಶಾಲಾ ಬಸ್ ಪರಿಕಲ್ಪನೆಯೇ ಇರಲಿಲ್ಲ

ಇಂದು: ಇಂದು ಹೆಚ್ಚು ಕಮ್ಮಿ ಎಲ್ಲ ಖಾಸಗಿ ಶಾಲೆಗಳಿಗೂ ತಮ್ಮದೇ ಆದ ಬಸ್ ಗಳು ಇವೆ.

ಹೀಗೆ ಇನ್ನೂ ಏನೇನೋ ಬದಲಾವಣೆಗಳಾಗಿವೆ. ಆಗಿರುವುದೆಲ್ಲವೂ ಒಳ್ಳೆಯದಕ್ಕೆ ಅನ್ನಬಹುದೇ?

2 comments:

my pen from shrishaila said...

ಬದಲಾವಣೆಗಳಾಗಿರುವುದೆಲ್ಲವೂ ಒಳ್ಳೆಯದಕ್ಕೆ ಅಲ್ಲ. ಇಂದಿನ ಅನಿವಾರ್ಯ ಬದಲಾವಣೆಗಳಷ್ಟೇ.! ಎಸ್ ಎಸ್ ಎಲ್ ಸಿ ಆದವರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯೂ ದುರ್ಬಲವಾಗಿರುವುದು ಸಾಮಾನ್ಯ. ಜಾಸ್ತಿ ಶುಲ್ಕ ತಂದೆತಾಯಿಯರಿಗೆ ಪ್ರತಿಷ್ಠೆ !
shailaja

rukminimala said...

ಅಂದು: ನಪಾಸಾದವರು ಪುನಃ ಪರಿಕ್ಷೆಗೆ ಕೂತು ಬರೆದು ಪಾಸಾಗುತ್ತಾರೆ.
ಇಂದು: ಅವಮಾನಿತರಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ