- ನನಗೆ ಇಷ್ಟವಾದದ್ದನ್ನು ‘ದೇವರು’ ಎಂದು ಪೂಜಿಸುವ ಸ್ವಾತಂತ್ರ್ಯ ಇದೆ. ‘ದೇವರೇ ಇಲ್ಲ’ ಎಂದು ಸಾರ್ವಜನಿಕವಾಗಿ ಘೋಷಿಸುವ ಸ್ವಾತಂತ್ರ್ಯವೂ ಇದೆ.
- ನಾನು ನಂಬಿರುವ ದೇವರನ್ನು ಓಲೈಸುವ ಸಲುವಾಗಿ ನನಗೆ ಇಷ್ಟವಾದ ವಿಧಿವಿಧಾನಗಳನ್ನು ನನಗೆ ಸರಿಕಂಡ ರೀತಿಯಲ್ಲಿ ಆಚರಿಸುವ ಸ್ವಾತಂತ್ರ್ಯ ನನಗೆ ಇದೆ.
- ಸಾರ್ವಜನಿಕವಾಗಿ ದೇವರ ಅಸ್ತಿತ್ವವನ್ನು ಅಲ್ಲಗಳೆಯುತ್ತಾ ಖಾಸಗಿಯಾಗಿ ದೇವರಲ್ಲಿ ನಂಬಿಕೆ ಇಡುವ, ಖಾಸಗಿಯಾಗಿ ದೇವರನ್ನು ನಂಬದಿದ್ದರೂ ಸಾರ್ವಜನಿಕವಾಗಿ ಆಸ್ತಿಕನಂತೆ ನಟಿಸುವ ಸ್ವಾತಂತ್ರ್ಯ ನನಗೆ ಇದೆ.
- ಒಂದು ‘ಪವಿತ್ರ ಗ್ರಂಥ’ಕ್ಕೆ ಜೋತು ಬಿದ್ದು ಅದರಲ್ಲಿ ಹೇಳಿರುವುದೆಲ್ಲವನ್ನೂ ಕುರುಡಾಗಿ ನಂಬುವ ಬದಲು, ವಿಭಿನ್ನ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ನನ್ನದೇ ಆದ ವೈಯಕ್ತಿಕ ಜೀವನ ದರ್ಶನ ರೂಪಿಸಿಕೊಳ್ಳುವ ಸ್ವಾತಂತ್ರ್ಯ ನನಗೆ ಇದೆ.
- ಒಂದು ‘ಪವಿತ್ರ ಗ್ರಂಥ’ ಇಲ್ಲದೇ ಇರುವುದರಿಂದಲೂ ಲಭ್ಯವಿರುವ ಎಲ್ಲ ‘ಪವಿತ್ರ ಗ್ರಂಥ’ಗಳನ್ನು ಆಳವಾಗಿ ಅಧ್ಯಯಿಸಿದವರು ಬಲು ವಿರಳರಾದ್ದರಿಂದಲೂ, ಬಹುತೇಕ ಗ್ರಂಥಗಳು ಬಹುಮಂದಿಗೆ ತಿಳಿಯದ ಭಾಷೆಯಲ್ಲಿ ಇರುವುದರಿಂದಲೂ ನನ್ನ ಅನುಕೂಲಕ್ಕೆ ತಕ್ಕಂತೆ ವಿಭಿನ್ನ ‘ಪವಿತ್ರ ಗ್ರಂಥಗಳನ್ನು’ ಉಲ್ಲೇಖಿಸಿ ನನ್ನ ‘ಬೇಳೆಕಾಳು ಬೇಯಿಸಿಕೊಳ್ಳುವ’ ಸ್ವಾತಂತ್ರ್ಯ ನನಗೆ ಇದೆ.
- ನನ್ನ ವೈಯಕ್ತಿಕ ಇಷ್ಟಾರ್ಥ ಸಿದ್ಧಿಗಾಗಿ - ಅದೇನೇ ಆಗಿರಲಿ - ಯಾವ ದೇವರ ಅನುಗ್ರಹ ಪಡೆಯಬೇಕು, ಪಡೆಯಲು ಏನು ಮಾಡಬೇಕು ಎಂಬುದನ್ನು ಇದಕ್ಕಾಗಿ ನಾನು ವ್ಯಯಿಸಲು ಸಿದ್ಧವಿರುವ ಹಣವನ್ನು ಆಧರಿಸಿ ಕರಾರುವಾಕ್ಕಾಗಿ ಹೇಳಬಲ್ಲ ‘ಜ್ಞಾನಿ’ಗಳೂ, ತತ್ಸಂಬಂಧಿತ ವಿಧಿವಿಧಾನಗಳನ್ನು ಬಹುಮಂದಿಗೆ ಅರ್ಥವಾಗದ ಭಾಷೆಯ ‘ಮಂತ್ರ’ಸಹಿತ ಮಾಡಬಲ್ಲ ‘ಪುರೋಹಿತರೂ’ (ಇತ್ತೀಚೆಗೆ ಇವೆಲ್ಲವನ್ನೂ ನಿಭಾಯಿಸಬಲ್ಲ ಗುತ್ತಿಗೆದಾರರು) ದೊರೆಯುತ್ತಾರೆ.
- ನನ್ನಿಂದಾಗಿರಬಹುದಾದ ತಪ್ಪುಗಳಿಗೂ ಅನಾಚಾರಗಳಿಗೂ - ಅವು ಎಷ್ಟೇ ಗುರುತರವಾವವು ಆಗಿರಲಿ - ಪರಿಹಾರ ಪತ್ತೆಹಚ್ಚಬಲ್ಲ ‘ವಿಶೇಷಜ್ಞ’ರು ದೊರೆಯುತ್ತಾರೆ. ಅಪರಾಧದ ಸ್ವರೂಪಕ್ಕೆ/ತೀವ್ರತೆಗೆ ನೇರ ಅನುಪಾತದಲ್ಲಿ ಇರುತ್ತದೆ, ಇದಕ್ಕಾಗಿ ವ್ಯಯಿಸಬೇಕಾದ ಹಣ.
- ‘ನಾನೊಬ್ಬ ಹಿಂದೂ’ ಎಂದು ಘೋಷಿಸುತ್ತಾ ‘ಹಿಂದೂ’ಗಳಿಗೆ ‘ಪವಿತ್ರವಾದವು’ ಎಂದು ಪರಿಗಣಿಸಿರುವ ವೇದಗಳ/ಉಪನಿಷತ್ತುಗಳ/ ಭಗವದ್ಗೀತೆಯ/ಬ್ರಹ್ಮಸೂತ್ರಗಳ/ ಯಾವುದೇ ಪುರಾಣಗಳ/ ಮಹಾಕಾವ್ಯಗಳ ಕುರಿತು ಏನೇನೂ ಗೊತ್ತಿಲ್ಲದೇ ಇದ್ದರೂ ನನ್ನ ‘ಹಿಂದೂ ಧರ್ಮ’ದ ರಕ್ಷಣೆಗಾಗಿ ಆಜೀವ ಪರ್ಯಂತ ಹೋರಾಡುವ, ಆಂದೋಲನಗಳನ್ನು ಮಾಡುವ ಹಕ್ಕೂ ‘ಹಿಂದೂ ಮತೀಯ ಆಚರಣೆಗಳನ್ನೂ’ ಮೂಢನಂಬಿಕೆಗಳು/ಕಂದಾಚಾರ ಮುಂತಾಗಿ ಠೀಕಿಸುವ ಸ್ವಾತಂತ್ರ್ಯವೂ ಇದೆ.
- ‘ಹಿಂದೂ’ ಪದದ ವ್ಯುತ್ಪತ್ತಿಯ ಕುರಿತಾಗಲೀ, ಪರಕೀಯರು (ಮ್ಲೇಛ್ಛರು, ಯವನರು ----) ಈ ಪದದಿಂದ ಯಾರನ್ನು ಗುರುತಿಸುತ್ತಿದ್ದರೋ ಆ ಭಾರತವರ್ಷವಾಸಿಗಳ ಆಧ್ಯಾತ್ಮಿಕ ಚಿಂತನೆಯ ತಿರುಳನ್ನು ಗ್ರಹಿಸದೆಯೇ ‘ನಾನೊಬ್ಬ ಹಿಂದೂ’ ಎಂದು ಹೇಳಿಕೊಳ್ಳುವ ಸ್ವಾತಂತ್ರ್ಯವೂ ನನಗಿದೆ.
3 April 2011
ನಾನೊಬ್ಬ ಹಿಂದೂ, ಆದ್ದರಿಂದ
ನಾನೊಬ್ಬ ಹಿಂದೂ, ಆದ್ದರಿಂದ
Subscribe to:
Post Comments (Atom)
No comments:
Post a Comment