ಆಕಾಶದಲ್ಲಿ ಹಾರುತ್ತಿರುವ ವಿಮಾನವನ್ನು ಕೆಳಮುಖಿ ಅಥವ ಮೇಲ್ಮುಖಿ ಆಗಿಸುವುದೆಂತು? ಅದನ್ನು ಎಡಕ್ಕೆ ಅಥವ ಬಲಕ್ಕೆ ತಿರುಗಿಸುವುದೆಂತು? ತಿಳಿಯಲು ಈ ಮುಂದಿನ ಪ್ರಯೋಗಗಳನ್ನು ಮಾಡಿ.
ಉಪಯೋಗಿಸಿದ ೩ ಅಂಚೆ ಕಾರ್ಡುಗಳನ್ನೂ ರಬ್ಬರ್ ಬಿರಡೆ ಇರುವ ಒಂದು ಪುಟ್ಟ ಬಾಟಲನ್ನೂ (ಹಿಂದಿನ ಚಟುವಟಿಕೆಗಳಲ್ಲಿ ಉಪಯೋಗಿಸಿದಂಥದ್ದು) ಒಂದು ಉದ್ದನೆಯ ಸೂಜಿಯನ್ನೂ ಕೆಲವು 'ಜೆಮ್' ಕ್ಲಿಪ್ಪುಗಳನ್ನೂ ಸಂಗ್ರಹಿಸಿ. ಚಿತ್ರದಲ್ಲಿ ತೋರಿಸಿದಂಥ ಆಕೃತಿಗಳನ್ನು ಸರಿಸುಮಾರಾಗಿ ಅಂಚೆ ಕಾರ್ಡುಗಳಿಂದ ತಯಾರಿಸಿ. ಒಂದು ಕಾರ್ಡಿನ ಹಿಂಪಾರ್ಶ್ವದ ಸ್ವಲ್ಪ ಭಾಗವನ್ನು ಚಿತ್ರದಲ್ಲಿ ತೋರಿಸಿದಂತೆ ಮೇಲ್ಮುಖವಾಗಿ ಮಡಿಸಿ. ಈ ಭಾಗ ಉಳಿದ ಭಾಗದ ಸಮತಲಕ್ಕೆ ಲಂಬವಾಗಿರಲಿ. ಬಾಟಲಿನ ಬಿರಡೆಗೆ ಸೂಜಿಯನ್ನು ಲಂಬವಾಗಿ ಚುಚ್ಚಿ ಅದರ ಮೇಲ್ತುದಿಯಲ್ಲಿ ಈ ಕಾರ್ಡನ್ನು ಚಿತ್ರದಲ್ಲಿ ತೋರಿಸಿದಂತೆ ಚುಚ್ಚಿ ನಿಲ್ಲಿಸಿ. ಆಕೃತಿ ಭೂತಲಕ್ಕೆ ಸಮಾಂತರವಾಗಿರಲಿ. ಕಾರ್ಡಿನ ಮುಂಬದಿಯಿಂದ ಮೇಲ್ಮೈಗೆ ಸಮಾಂತರವಾಗಿ ಗಾಳಿ ಊದಿ, ಕಾರ್ಡಿನ ಮುಂಬದಿ ಎತ್ತ ತಿರುಗುತ್ತದೆ ಎಂಬುದನ್ನುವೀಕ್ಷಿಸಿ. ಕಾರಣ ೂಹಿಸಿ. ಮೇಲಕ್ಕೆ ಮಡಚಿದ ಅಂಚನ್ನು ಕೆಳಕ್ಕೆ ಮಡಚಿ ಪ್ರಯೋಗ ಪುನರಾವರ್ತಿಸಿ. ವಿಮಾನದ ಬಾಲದ ಬಳಿ ಮೇಲಕ್ಕೂ ಕೆಳಕ್ಕೂ ಬಾಗಬಲ್ಲ ಎಲಿವೇಟರ್ ಎಂಬ ಸಾಧನವಿರುತ್ತದೆ. ಚಾಲಕ ಇದನ್ನು ಮೇಲಕ್ಕೆ ಅಥವ ಕೆಳಕ್ಕೆ ಎಷ್ಟು ಬೇಕೋ ಅಷ್ಟು ಬಾಗಿಸುವುದರ ಮೂಲಕ ವಿಮಾನದ ಹಾರಾಟದ ಎತ್ತರವನ್ನು ನಿಯಂತ್ರಿಸುತ್ತಾನೆ.
ಉಳಿದ ೨ ಕಾರ್ಡುಗಳ ಹಿಂಭಾಗದಲ್ಲಿ ಯುಕ್ತ ಸ್ಥಳದಲ್ಲಿ ಯುಕ್ತ ರೀತಿಯಲ್ಲಿ ಕತ್ತರಿಸಿ ಮಡಚಿ ಚಿತ್ರದಲ್ಲಿ ತೋರಿಸಿದಂಥ ಸಾಧನಗಳನ್ನು ತಯಾರಿಸಿ. ಹಿಂದಿನ ಪ್ರಯೋಗದಲ್ಲಿ ಮಾಡಿದಂತೆ ಬಾಟಲಿನ ಬಿರಡೆಗೆ ಸೂಜಿಯೊಂದನ್ನು ಲಂಬವಾಗಿ ಚುಚ್ಚಿ ಅದರ ಮೇಲತುದಿಯಲ್ಲಿ ಯಾವುದಾದರೊಂದು ಸಾಧನವನ್ನು ಚುಚ್ಚಿ. ಆಕೃತಿ ಭೂತಲಕ್ಕೆ ಸಮಾಂತರವಾಗಿರಲಿ. ಕಾರ್ಡಿನ ಮುಂಬದಿಯಿಂದ ಮೇಲ್ಮೈಗೆ ಸಮಾಂತರವಾಗಿ ಗಾಳಿ ಊದಿ ಕಾರ್ಡಿನ ಮುಂಬದಿ ಯಾವ ಕಡೆಗೆ ತಿರುಗುತ್ತದೆ ಎಂಬುದನ್ನು ವೀಕ್ಷಿಸಿ. ಇನ್ನೊಂದು ಸಾಧನವನ್ನು ಉಪಯೋಗಿಸಿ ಪ್ರಯೋಗ ಪುನರಾವರ್ತಿಸಿ ವೀಕ್ಷಿಸಿ. ಈ ತಿರುಗುವಿಕೆಗಳಿಗೆ ಕಾರಣ ತರ್ಕಿಸಿ. ವಿಮಾನದ ಹಿಂಭಾಗದಲ್ಲಿ ಇರುವ ರಡ್ಡರ್ ಎಂಬ ಭಾಗ ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ. (ಬಾಟಲ್ ಲಭ್ಯವಿಲ್ಲದಿದ್ದರೂ ಈ ಮೇಲಿನ ಪ್ರಯೋಗಗಳನ್ನು ಮಾಡಬಹುದು. ಹೇಗೆ ಎಂಬುದನ್ನು ನೀವೇ ಆವಿಷ್ಕರಿಸಿ)
ಹಾರುತ್ತಿರುವ ವಿಮಾನಗಳು ಎಡಕ್ಕೆ ಅಥವ ಬಲಕ್ಕೆ ತಿರುಗುವಾಗ ತಮ್ಮ ರೇಖಾಂಶ ಅಥವ ಉದ್ದದಗುಂಟ ಮಧ್ಯದಲ್ಲಿ ಇರುವ ಅಕ್ಷದ ಸುತ್ತ ತುಸು ಉರುಳುತ್ತವೆ (ರೋಲ್). ತಿರುಗಿದ ಬಳಿಕ ಮೊದಲಿನ ಸ್ಥಿತಿಗೆ ಮರಳುತ್ತವೆ. ಉರುಳುವಿಕೆಯ ಪರಿಮಾಣ (ಬ್ಯಾಂಕಿಂಗ್ ಕೋನ) ವಿಮಾನ ತಿರುಗಬೇಕಾದ ಕೋನವನ್ನು ಆಧರಿಸಿ ಇರುತ್ತದೆ. ಅಪೇಕ್ಷಿತ ಪರಿಮಾಣದ ಉರುಳುವಿಕೆ ಸಾಧಿಸುವ ಸಾಧನದ ಕಾರ್ಯತತ್ವ ತಿಳಿಯಲು ಈ ಮುಂದಿನ ಪ್ರಯೋಗ ಮಾಡಿ.
೧೪ ಸೆಂಮೀ ಉದ್ದ, ೩ ಸೆಂಮೀ ಅಗಲ ಇರುವ ಕಾಗದದ ಪಟ್ಟಿ ತಯಾರಿಸಿ. ಚಿತ್ರದಲ್ಲಿ ತೋರಿಸಿದಂತೆ ಸೂಚಿತ ಅಂತರಗಳಲ್ಲಿ ಅದರ ಮೇಲೆ ರೇಖೆಗಳನ್ನು ಎಳೆದು ಗುರು ತುಮಾಡಿ. ಚುಕ್ಕಿಚುಕ್ಕಿ ಗೆರೆಯಗುಂಟ ಅದರ ಉದ್ದದಷ್ಟು ಭಾಗವನ್ನು ಮಾತ್ರ ಕತ್ತರಿಸಿ. ಕತ್ತರಿಸಿದ ಭಾಗಗಳನ್ನು ಚಿತ್ರದಲ್ಲಿ ತೋರಿಸಿದಂತೆ ಮಡಚಿ ವಿಶಿಷ್ಠ T ಆಕೃತಿ ತಯಾರಿಸಿ. ಮದಚಿದ್ದರಿಂದ T ಆಕೃತಿಯ ಲಂಬ ಬಾಹುವಿನಲ್ಲಿ ುಂಟಾದ ೩ ಪದರಗಳನ್ನು ಒಂದೆರಡು ‘ಜೆಮ್’ ಕ್ಲಿಪ್ಪುಗಳ ನೆರವಿಂದ ಬಂಧಿಸಿ. ಶಿರೋಬಾಹುವಿನಲ್ಲಿ ಉಂಟಾದ ಎರಡು ರೆಕ್ಕೆಗಳನ್ನು ವಿರುದ್ಧ ದಿಕ್ಕುಗಳಿಗೆ ಬಾಗಿಸಿ. ‘ಜೆಮ್’ ಕ್ಲಿಪ್ ಕೆಳಗೆ ಇರುವಂತೆ ಈ ಸಾಧನದ ರೆಕ್ಕೆಗಳ ಸಮೀಪ ಹಿಡಿದು ಸುಮಾರು ೨ ಮೀ ಎತ್ತರದಿಂದ ಬೀಳಲು ಬಿಡಿ. ಅದು ತನ್ನ ಅಕ್ಷದ ಸುತ್ತ ಭ್ರಮಿಸುತ್ತಾ ಕೆಳಕ್ಕೆ ಬೀಳುವುದನ್ನು ಗಮನಿಸಿ. ಭ್ರಮಣೆಯ ದಿಕ್ಕನ್ನು ವೀಕ್ಷಿಸಿ. ಎರಡೂ ರೆಕ್ಕೆಗಳನ್ನು ಈಗ ಇದ್ದದ್ದರ ವಿರುದ್ಧ ದಿಕ್ಕಿಗೆ ಬಾಗಿಸಿ ಮೊದಲಿನಂತೆಯೇ ಕೆಳಕ್ಕೆ ಬೀಳಲು ಬಿಟ್ಟಾಗ ಭ್ರಮಣೆಯ ದಿಕ್ಕು ಬದಲಾಗುವುದನ್ನೂ ಗಮನಿಸಿ. ಈ ಸಾಧನ ತನ್ನ ಅಕ್ಷದ ಸುತ್ತ ಭ್ರಮಿಸುತ್ತಾ ಕೆಳಕ್ಕೆ ಬೀಳುವಂತೆ ಮಾಡಿದ ಬಲಗಳು ಯಾವುವು ಎಂಬುದನ್ನು ನೀವೇ ತರ್ಕಿಸಿ. ವಿಮಾನದ ರೆಕ್ಕೆಯ ಹಿಂಭಾಗದಲ್ಲಿ ಇರುವ ಏಲರಾನ್ ಎಂಬ ಚಿಕ್ಕ ಮಡಚುರೆಕ್ಕೆಗಳ ನೆರವಿನಿಂದ ವಿಮಾನದ ಉರುಳುವಿಕೆಯ ಕೋನ ಅಪೇಕ್ಷಿತ ಪರಿಮಾಣದಲ್ಲಿ ಇರುವಂತೆ ಚಾಲಕ ನಿಯಂತ್ರಿಸುತ್ತಾನೆ.
No comments:
Post a Comment